Beginning
1 ಆಮೋಚನ ಮಗನಾದ ಯೆಶಾಯನಿಗೆ ಆದ ದೈವದರ್ಶನ. ಯೆಹೂದ ಮತ್ತು ಜೆರುಸಲೇಮಿನಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ದೇವರು ಯೆಶಾಯನಿಗೆ ಈ ದರ್ಶನ ನೀಡಿದನು; ಯೆಹೂದದ ಅರಸರಾದ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯರ ಕಾಲದಲ್ಲಿ ಯೆಶಾಯನಿಗೆ ಈ ದರ್ಶನವಾಯಿತು.
ಸ್ವಜನರ ವಿರುದ್ಧವಾಗಿ ದೇವರ ದೂರು
2 ಭೂಮ್ಯಾಕಾಶಗಳೇ, ಯೆಹೋವನ ಮಾತನ್ನು ಆಲಿಸಿರಿ! ಯೆಹೋವನು ಹೇಳುತ್ತಿದ್ದಾನೆ:
“ನಾನು ಸಾಕಿ ಸಲಹಿದ ಮಕ್ಕಳೇ
ನನಗೆ ದ್ರೋಹಮಾಡಿದ್ದಾರೆ.
3 ಎತ್ತು ತನ್ನ ದಣಿಯನ್ನು ತಿಳಿದದೆ;
ಕತ್ತೆಯು ತನ್ನ ದಣಿಯ ಕೊಟ್ಟಿಗೆಯನ್ನು ತಿಳಿದದೆ.
ಆದರೆ ಇಸ್ರೇಲರು ನನ್ನನ್ನು ತಿಳಿದೇ ಇಲ್ಲ.
ನನ್ನ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ.”
4 ಇಸ್ರೇಲ್ ದೇಶವು ಪಾಪದಿಂದ ತುಂಬಿಹೋಗಿದೆ; ಅವರ ಪಾಪವೇ ಅವರಿಗೆ ಭಾರವಾದ ಹೊರೆಯಾಗಿದೆ; ಅವರು ದುಷ್ಟಕುಟುಂಬಗಳ ಕೆಟ್ಟಮಕ್ಕಳಂತಿದ್ದಾರೆ. ಅವರು ಯೆಹೋವನನ್ನು ತ್ಯಜಿಸಿದ್ದಾರೆ; ಇಸ್ರೇಲಿನ ಪರಿಶುದ್ಧ ದೇವರನ್ನು ಅವಮಾನಪಡಿಸಿದ್ದಾರೆ; ಅವರು ಆತನನ್ನು ತೊರೆದು ಅಪರಿಚಿತನೋ ಎಂಬಂತೆ ಪರಿಗಣಿಸಿದ್ದಾರೆ.
5 ನಾನು ನಿಮ್ಮನ್ನು ಯಾಕೆ ಶಿಕ್ಷಿಸುತ್ತಲೇ ಇರಬೇಕು? ನಾನು ನಿಮ್ಮನ್ನು ಶಿಕ್ಷಿಸಿದೆನು, ಆದರೆ ನೀವು ಬದಲಾಗಲಿಲ್ಲ. ನೀವು ನನಗೆ ವಿರುದ್ಧವಾಗಿ ಏಳುತ್ತಲೇ ಇದ್ದೀರಿ. ಈಗ ಪ್ರತಿಯೊಂದು ತಲೆಯೂ ಪ್ರತಿಯೊಂದು ಹೃದಯವೂ ರೋಗಕ್ಕೆ ಬಲಿಯಾಗಿದೆ. 6 ನಿಮ್ಮ ಅಂಗಾಲಿನಿಂದ ಹಿಡಿದು ನಡುನೆತ್ತಿಯವರೆಗೂ ನಿಮ್ಮ ದೇಹದಲ್ಲೆಲ್ಲಾ ಗಾಯಗಳೂ ಬಾಸುಂಡೆಗಳೂ ಹುಣ್ಣುಗಳೂ ತುಂಬಿಕೊಂಡಿವೆ. ಆದರೆ ಆ ಹುಣ್ಣುಗಳಿಗೆ ನೀವು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ; ಅವುಗಳನ್ನು ಒರೆಸಲಿಲ್ಲ, ಕಟ್ಟಲಿಲ್ಲ.
7 ನಿಮ್ಮ ದೇಶವು ಹಾಳಾಗಿದೆ; ನಿಮ್ಮ ನಗರಗಳು ಬೆಂಕಿಯಿಂದ ಸುಡಲ್ಪಟ್ಟಿವೆ. ನಿಮ್ಮ ಶತ್ರುಗಳು ನಿಮ್ಮ ದೇಶವನ್ನು ವಶಪಡಿಸಿಕೊಂಡಿದ್ದಾರೆ; ಅನ್ಯದೇಶವು ಶತ್ರುಸೈನ್ಯದಿಂದ ಹಾಳಾಗುವಂತೆಯೇ, ನಿಮ್ಮ ದೇಶವೂ ಹಾಳಾಗಿದೆ.
ಜೆರುಸಲೇಮಿಗೆ ಎಚ್ಚರಿಕೆ
8 ಚೀಯೋನ್ ನಗರಿಯು ದ್ರಾಕ್ಷಿತೋಟದಲ್ಲಿರುವ ಜನಶೂನ್ಯವಾದ ಡೇರೆಯಂತಿದೆ; ಸೌತೆಯ ಹೊಲದಲ್ಲಿ ಪಾಳುಬಿದ್ದಿರುವ ಮನೆಯಂತಿದೆ; ಶತ್ರುಗಳಿಗೆ ಸೋತುಹೋದ ನಗರದಂತಿದೆ. 9 ಆದರೆ ಸರ್ವಶಕ್ತನಾದ ಯೆಹೋವನು ಸ್ವಲ್ಪ ಮಂದಿಯನ್ನಾದರೂ ಉಳಿಸಿ ಅಲ್ಲಿ ವಾಸಿಸುವಂತೆ ಮಾಡಿದ್ದಾನೆ. ನಾವು ಸೊದೋಮ್ ಗೊಮೋರ ಪಟ್ಟಣಗಳಂತೆ ಸಂಪೂರ್ಣವಾಗಿ ನಾಶವಾಗಲಿಲ್ಲ.
10 ಸೊದೋಮಿನ ಅಧಿಪತಿಗಳೇ, ಯೆಹೋವನ ಸಂದೇಶವನ್ನು ಕೇಳಿರಿ. ಗೊಮೋರದ ಜನರೇ, ಆತನ ಉಪದೇಶವನ್ನು ಕೇಳಿರಿ. 11 ಯೆಹೋವನು ಹೇಳುವುದೇನೆಂದರೆ, “ಈ ಯಜ್ಞಗಳನ್ನೆಲ್ಲ ನೀವು ನನಗೆ ಕೊಡುತ್ತಲೇ ಇರುವುದೇಕೆ? ನಿಮ್ಮ ಆಡುಗಳ ಯಜ್ಞಗಳೂ, ಹೋರಿಗಳ, ಕುರಿಗಳ, ಆಡುಗಳ ಕೊಬ್ಬೂ ನನಗೆ ಬೇಕಿಲ್ಲ. ಅವುಗಳ ರಕ್ತಕ್ಕೆ ನಾನು ಪ್ರಸನ್ನನಾಗುವುದಿಲ್ಲ. 12 ನೀವು ನನ್ನನ್ನು ಸಂಧಿಸಲು ಬರುವಾಗ, ನನ್ನ ಪ್ರಾಕಾರಗಳನ್ನು ತುಳಿದುಹಾಕುವಿರಿ. ಹಾಗೆ ಮಾಡಲು ನಿಮಗೆ ಹೇಳಿದವರು ಯಾರು?
13 “ನಿಮ್ಮ ಅಯೋಗ್ಯವಾದ ಯಜ್ಞಗಳನ್ನು ನನ್ನ ಬಳಿಗೆ ತರಬೇಡಿ; ನಿಮ್ಮ ಧೂಪವು ನನಗೆ ಅಸಹ್ಯ; ನಿಮ್ಮ ಅಮಾವಾಸ್ಯೆಯನ್ನಾಗಲಿ ಹಬ್ಬವನ್ನಾಗಲಿ ಸಬ್ಬತ್ತನ್ನಾಗಲಿ ನಾನು ಸಹಿಸಲಾರೆ. ನಿಮ್ಮ ಪವಿತ್ರಕೂಟಗಳಲ್ಲಿ ನೀವು ಮಾಡುವ ದುಷ್ಟತನವನ್ನು ನಾನು ಸಹಿಸಲಾರೆ. 14 ನಿಮ್ಮ ಮಾಸಿಕಕೂಟಗಳನ್ನೂ ಸಭಾಕೂಟಗಳನ್ನೂ ನಾನು ದ್ವೇಷಿಸುತ್ತೇನೆ. ಇವು ನನಗೆ ಭಾರವಾಗಿವೆ. ಈ ಭಾರದಿಂದ ನಾನು ಬೇಸತ್ತು ಹೋಗಿದ್ದೇನೆ.
15 “ನೀವು ನನಗೆ ಪ್ರಾರ್ಥಿಸುವಾಗ ನಿಮ್ಮ ಕೈಗಳನ್ನೆತ್ತುವಿರಿ, ಆದರೆ ನಾನು ನಿಮ್ಮ ಕಡೆಗೆ ನೋಡುವುದಿಲ್ಲ. ನೀವು ಹೆಚ್ಚೆಚ್ಚಾಗಿ ಪ್ರಾರ್ಥಿಸುವಿರಿ, ಆದರೂ ನಾನು ನಿಮಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಿಮ್ಮ ಕೈಗಳು ರಕ್ತದಿಂದ ತುಂಬಿವೆ.
16 “ನಿಮ್ಮನ್ನು ಶುದ್ಧಿಮಾಡಿಕೊಳ್ಳಿರಿ; ಶುಚಿಪಡಿಸಿಕೊಳ್ಳಿರಿ. ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ; ಅವುಗಳನ್ನು ನೋಡಲು ನನಗೆ ಮನಸ್ಸಿಲ್ಲ. ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಿರಿ; 17 ಒಳ್ಳೆಯದನ್ನೇ ಮಾಡಲು ಅಭ್ಯಾಸಮಾಡಿಕೊಳ್ಳಿರಿ. ಬೇರೆಯವರೊಂದಿಗೆ ನ್ಯಾಯವಂತರಾಗಿರಿ; ಕೆಡುಕರಿಗೆ ದಂಡನೆ ವಿಧಿಸಿರಿ; ಅನಾಥರಿಗೆ ಸಹಾಯಮಾಡಿರಿ; ವಿಧವೆಯರಿಗೂ ಸಹಾಯಮಾಡಿರಿ.”
18 ಯೆಹೋವನು ಹೀಗೆನ್ನುತ್ತಾನೆ: “ಬನ್ನಿರಿ, ನಾವು ಚರ್ಚೆ ಮಾಡೋಣ. ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಅವುಗಳನ್ನು ತೊಳೆದಾಗ ನೀವು ಹಿಮದಂತೆ ಬಿಳುಪಾಗುವಿರಿ. ನಿಮ್ಮ ಪಾಪಗಳು ಕಿರಮಂಜಿಬಣ್ಣವಾಗಿದ್ದರೂ ನೀವು ಉಣ್ಣೆಯಂತೆ ಬೆಳ್ಳಗಾಗುವಿರಿ.
19 “ನೀವು ನನ್ನ ಮಾತನ್ನು ಕೇಳಿದರೆ ನಿಮ್ಮ ದೇಶದ ಉತ್ತಮ ಫಸಲುಗಳಿಂದ ಆನಂದಿಸುವಿರಿ. 20 ನನ್ನ ಮಾತುಗಳನ್ನು ಕೇಳದೆ ಹೋದರೆ ನೀವು ನನಗೆ ವಿರೋಧಿಗಳಾಗಿದ್ದೀರಿ. ನಿಮ್ಮ ವೈರಿಯು ನಿಮ್ಮನ್ನು ನಾಶಮಾಡುವನು.”
ಯೋಹೋವನೇ ಇವುಗಳನ್ನು ನುಡಿದಿದ್ದಾನೆ.
ಜೆರುಸಲೇಮು ದೇವರಿಗೆ ದ್ರೋಹಮಾಡಿದೆ
21 ದೇವರು ಹೇಳುವುದೇನೆಂದರೆ: “ಜೆರುಸಲೇಮಿನ ಕಡೆಗೆ ನೋಡಿರಿ. ಆಕೆ ನನ್ನ ಮೇಲೆ ನಂಬಿಕೆ ಇಟ್ಟು ಹಿಂಬಾಲಿಸಿದಂಥ ನಗರಿಯಾಗಿದ್ದಳು. ಆದರೆ ಈಗ ಆಕೆ ಸೂಳೆಯಾಗಲು ಕಾರಣವೇನು? ಈಗ ಆಕೆ ನನ್ನನ್ನು ಹಿಂಬಾಲಿಸುತ್ತಿಲ್ಲ. ಜೆರುಸಲೇಮು ನ್ಯಾಯನೀತಿಗಳಿಂದ ತುಂಬಿರಬೇಕಿತ್ತು. ಅಲ್ಲಿ ವಾಸಿಸುವ ಜನರು ದೇವರ ಇಚ್ಛೆಯಂತೆ ನಡೆಯಬೇಕಿತ್ತು. ಆದರೆ ಈಗ ಕೊಲೆಗಡುಕರು ಅಲ್ಲಿ ವಾಸಿಸುತ್ತಿದ್ದಾರೆ.
22 “ಒಳ್ಳೆಯತನವು ಬೆಳ್ಳಿಯಂತಿದೆ. ಆದರೆ ನಿಮ್ಮ ಬೆಳ್ಳಿಯು ಬೆಲೆಯಿಲ್ಲದ್ದಾಗಿದೆ. ನಿಮ್ಮ ದ್ರಾಕ್ಷಾರಸ (ಒಳ್ಳೆಯತನ) ನೀರಿನೊಂದಿಗೆ ಬೆರತಿದೆ. ಅದು ತೆಳ್ಳಗಾಗಿದೆ. 23 ನಿಮ್ಮನ್ನಾಳುವವರು ದಂಗೆಕೋರರಾಗಿದ್ದಾರೆ; ಕಳ್ಳರ ಮಿತ್ರರಾಗಿದ್ದಾರೆ; ಲಂಚಕೋರರಾಗಿದ್ದಾರೆ; ಹಣಕ್ಕಾಗಿ ಕೆಟ್ಟದ್ದನ್ನು ಮಾಡುತ್ತಾರೆ; ಹಣಕ್ಕಾಗಿ ಮೋಸ ಮಾಡುತ್ತಾರೆ. ಅನಾಥರಿಗೆ ಸಹಾಯ ಮಾಡದವರಾಗಿದ್ದಾರೆ; ವಿಧವೆಯರ ಅಗತ್ಯತೆಗಳಿಗೆ ಲಕ್ಷ್ಯ ಕೊಡದವರಾಗಿದ್ದಾರೆ.”
24 ಇವೆಲ್ಲವುಗಳ ಕುರಿತಾಗಿ ಒಡೆಯನೂ ಇಸ್ರೇಲಿನ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನನ್ನ ಶತ್ರುಗಳೇ, ನಾನು ನಿಮ್ಮನ್ನು ಶಿಕ್ಷಿಸುವೆನು. ಇನ್ನು ಮುಂದೆ ನೀವು ನನಗೆ ಯಾವ ಕೇಡನ್ನೂ ಮಾಡುವುದಿಲ್ಲ. 25 ಜನರು ಬೆಳ್ಳಿಯನ್ನು ಶುದ್ಧಮಾಡುವದಕ್ಕೆ ದ್ರವವನ್ನು[a] ಉಪಯೋಗಿಸುವರು. ಅದೇರೀತಿಯಲ್ಲಿ ನಿಮ್ಮ ತಪ್ಪುಗಳನ್ನೆಲ್ಲ ನಾನು ಶುದ್ಧಮಾಡುವೆನು. ನಿಮ್ಮಲ್ಲಿರುವ ಎಲ್ಲಾ ಅಯೋಗ್ಯವಾದವುಗಳನ್ನು ತೆಗೆದುಬಿಡುವೆನು. 26 ಆರಂಭದಲ್ಲಿ ನಿಮಗಿದ್ದಂತಹ ನ್ಯಾಯಾಧೀಶರನ್ನು ನಾನು ತಿರುಗಿ ಬರಮಾಡುವೆನು. ನಿಮ್ಮ ಸಲಹೆಗಾರರು ಹಿಂದಿನ ಕಾಲದ ಸಲಹೆಗಾರರಂತೆ ಇರುವರು. ಆಗ ನೀನು ‘ನ್ಯಾಯವಾದ ಮತ್ತು ನಂಬಿಗಸ್ತಿಕೆಯುಳ್ಳ ಪಟ್ಟಣ’ವೆಂದು ಕರೆಯಲ್ಪಡುವೆ.”
27 ದೇವರು ಒಳ್ಳೆಯವನು; ನ್ಯಾಯವನ್ನೇ ಮಾಡುವವನು; ಆತನು ಚೀಯೋನನ್ನೂ ತನ್ನ ಬಳಿಗೆ ಬರುವ ಜನರನ್ನೂ ರಕ್ಷಿಸಿ ಕಾಪಾಡುವನು. 28 ಆದರೆ ಎಲ್ಲಾ ಕೊಲೆಗಾರರೂ ದುಷ್ಟರೂ ನಾಶಮಾಡಲ್ಪಡುವರು. ಅವರು ಯೆಹೋವನನ್ನು ಹಿಂಬಾಲಿಸುವವರಲ್ಲ.
29 ಮುಂದಿನ ದಿವಸಗಳಲ್ಲಿ ಜನರು ತಾವು ಆರಾಧಿಸಲು ಆರಿಸಿಕೊಳ್ಳುವ ಓಕ್ ಮರಗಳಲ್ಲಿಯೂ ವಿಶೇಷವಾದ ಉದ್ಯಾನವನಗಳಲ್ಲಿಯೂ ನಾಚಿಕೆಪಡುವರು. 30 ಎಲೆ ಒಣಗಿಹೋದ ಏಲಾ ಮರಗಳಂತೆ ನೀವು ಇದ್ದೀರಿ. ನೀರಿಲ್ಲದೆ ಸಾಯುತ್ತಿರುವ ಉದ್ಯಾನವನದಂತೆ ನೀವು ಇದ್ದೀರಿ. 31 ಬಲಿಷ್ಠರು ಸಣ್ಣಗಿರುವ ಒಣಮರದ ತುಂಡಿನಂತಿರುವರು. ಆ ಜನರು ಮಾಡುವ ಕಾರ್ಯಗಳು ಬೆಂಕಿಯನ್ನು ಪ್ರಾರಂಭಿಸುವ ಕಿಡಿಯಂತಿರುವವು. ಅವರ ಕಾರ್ಯಗಳೆಲ್ಲಾ ಸುಟ್ಟುಹೋಗುವವು; ಆ ಬೆಂಕಿಯನ್ನು ಯಾರೂ ನಿಲ್ಲಿಸಲಾರರು.
ಯೆಹೂದ ಮತ್ತು ಜೆರುಸಲೇಮಿಗೆ ದೈವಸಂದೇಶ
2 ಆಮೋಚನ ಮಗನಾದ ಯೆಶಾಯನು ಯೆಹೂದ ಮತ್ತು ಜೆರುಸಲೇಮಿನ ಬಗ್ಗೆ ನೋಡಿದ ದರ್ಶನ.
2 ಕೊನೆಯ ದಿನಗಳಲ್ಲಿ ಯೆಹೋವನಾಲಯದ ಪರ್ವತವು
ಎಲ್ಲಾ ಬೆಟ್ಟಗಳಿಗಿಂತಲೂ ಮಹೋನ್ನತವಾದ ಪರ್ವತವಾಗಿರುವುದು.
3 ಅಲ್ಲಿಗೆ ಎಲ್ಲಾ ದೇಶಗಳಿಂದ ಜನರು ಸತತವಾಗಿ ತೊರೆಗಳಂತೆ ಬರುವರು.
ಹೊರಟುಬಂದ ಆ ಜನರು, “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ.
ಯಾಕೋಬನ ದೇವರ ಆಲಯಕ್ಕೆ ಹೋಗೋಣ.
ಆತನು ನಮಗೆ ಜೀವಮಾರ್ಗವನ್ನು ಅಲ್ಲಿ ಬೋಧಿಸುವನು.
ನಾವು ಆತನನ್ನು ಹಿಂಬಾಲಿಸೋಣ” ಎಂದು ಹೇಳುವರು.
ಯೆಹೋವನ ಸಂದೇಶ, ಬೋಧನೆಗಳು ಜೆರುಸಲೇಮಿನಲ್ಲಿರುವ
ಚೀಯೋನ್ ಪರ್ವತದಿಂದ ಪ್ರಾರಂಭವಾಗಿ ಇಡೀ ಪ್ರಪಂಚಕ್ಕೆ ಹರಡುವದು.
4 ಈಗ ಎಲ್ಲಾ ದೇಶಗಳಿಗೆ ದೇವರೇ ನ್ಯಾಯಾಧೀಶನಾಗಿರುವನು.
ಅನೇಕ ಜನರ ತರ್ಕಗಳನ್ನು ದೇವರು ಕೊನೆಗಾಣಿಸುವನು.
ಆ ಜನರು ಯುದ್ಧಕ್ಕಾಗಿ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು;
ತಮ್ಮ ಖಡ್ಗಗಳಿಂದ ಅವರು ನೇಗಿಲುಗಳನ್ನು ತಯಾರಿಸುವರು;
ತಮ್ಮ ಬರ್ಜಿಗಳಿಂದ ಸಸಿಗಳನ್ನು ಕೊಯ್ಯುವ ಕುಡುಗೋಲುಗಳನ್ನು ಮಾಡುವರು.
ಪರಸ್ಪರ ಹೊಡೆದಾಡಿಕೊಳ್ಳುವದನ್ನು ಜನಾಂಗಗಳು ನಿಲ್ಲಿಸುವರು.
ಇನ್ನೆಂದಿಗೂ ಜನಾಂಗಗಳು ಯುದ್ಧಾಭ್ಯಾಸ ತರಬೇತಿಯನ್ನು ಹೊಂದುವುದಿಲ್ಲ.
5 ಯಾಕೋಬನ ಮನೆತನದವರೇ, ನೀವು ಯೆಹೋವನ ಬೆಳಕನ್ನು ಹಿಂಬಾಲಿಸುವವರಾಗಬೇಕು.
6 ನೀವು ನಿಮ್ಮ ಜನರನ್ನು ತೊರೆದದ್ದರಿಂದ ನಾನು ನಿಮಗೆ ಹೀಗೆ ಹೇಳಿದೆನು. ಪೂರ್ವದೇಶದ ಜನರಿಗಿರುವ ತಪ್ಪು ತಿಳುವಳಿಕೆಯು ನಿಮ್ಮ ಜನರಲ್ಲಿ ತುಂಬಿಹೋಯಿತು. ಫಿಲಿಷ್ಟಿಯರಂತೆ ನಿಮ್ಮ ಜನರು ಭವಿಷ್ಯ ಹೇಳಲು ಪ್ರಯತ್ನಿಸಿ ಆ ತಪ್ಪು ತಿಳುವಳಿಕೆಗೆ ಮಾರುಹೋದರು. 7 ನಿಮ್ಮ ದೇಶವು ಬೆಳ್ಳಿಬಂಗಾರಗಳಿಂದಲೂ ಮಿತಿಯಿಲ್ಲದ ನಿಕ್ಷೇಪಗಳಿಂದಲೂ ಕುದುರೆಗಳಿಂದಲೂ ಅಸಂಖ್ಯಾತವಾದ ರಥಗಳಿಂದಲೂ ತುಂಬಿಹೋಯಿತು. 8 ನಿಮ್ಮ ದೇಶವು ಕೈಯಿಂದ ಮಾಡಿದ ವಿಗ್ರಹಗಳಿಂದ ತುಂಬಿದ್ದು ಜನರು ಅವುಗಳನ್ನು ಆರಾಧಿಸುತ್ತಾರೆ. 9 ಜನರು ಕೆಟ್ಟದಾರಿಯಲ್ಲಿ ಹೋಗುತ್ತಿದ್ದಾರೆ; ಹೀನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ. ದೇವರೇ, ನೀನು ಅವರನ್ನು ಖಂಡಿತವಾಗಿಯೂ ಕ್ಷಮಿಸಬೇಡ.
10 ಬಂಡೆಗಳ ಹಿಂಬದಿಯಲ್ಲಿಯೂ ಹೊಲಸಿನಲ್ಲಿಯೂ ಅವಿತುಕೊಳ್ಳಿರಿ. ನೀವು ಯೆಹೋವನಿಗೆ ಭಯಪಟ್ಟು ಆತನ ಮಹಾಶಕ್ತಿಗೆ ಮರೆಯಾಗಿ ಅವಿತುಕೊಳ್ಳಬೇಕು.
11 ಗರ್ವಿಷ್ಠರ ಗರ್ವವು ಕುಗ್ಗಿಸಲ್ಪಡುವುದು; ಅಹಂಕಾರಿಗಳ ಅಹಂಕಾರವು ತಗ್ಗಿಸಲ್ಪಡುವುದು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು.
12 ಸರ್ವಶಕ್ತನಾದ ಯೆಹೋವನು ಒಂದು ವಿಶೇಷ ದಿನವನ್ನು ಯೋಜಿಸಿರುತ್ತಾನೆ. ಆ ದಿನದಲ್ಲಿ ಯೆಹೋವನು ಅಹಂಕಾರಿಗಳನ್ನೂ ಜಂಬಕೊಚ್ಚಿಕೊಳ್ಳುವವರನ್ನೂ ಶಿಕ್ಷಿಸುವನು. ಆಗ ಆ ಅಹಂಕಾರಿಗಳನ್ನು ಜನರು ದೊಡ್ಡಜನರೆಂದು ಪರಿಗಣಿಸುವುದಿಲ್ಲ. 13 ಆ ಅಹಂಕಾರದ ಜನರು ಲೆಬನೋನಿನ ದೇವದಾರು ಮರಗಳಂತಿರುವರು. ಬಾಷಾನಿನ ಮಹಾದೇವದಾರು ಮರಗಳಂತಿರುವರು. ಆದರೆ ಯೆಹೋವನು ಅವರನ್ನು ಶಿಕ್ಷಿಸುವನು. 14 ಆ ಅಹಂಕಾರಿಗಳು ಉನ್ನತವಾದ ಪರ್ವತಗಳಂತೆಯೂ, ಎತ್ತರವಾದ ಬೆಟ್ಟಗಳಂತೆಯೂ ಇದ್ದಾರೆ. 15 ಅವರು ಎತ್ತರವಾದ ಬುರುಜುಗಳಂತೆಯೂ ಬಲಿಷ್ಠವಾದ ಕೋಟೆಗೋಡೆಯಂತೆಯೂ ಇರುವರು. ಆದರೆ ದೇವರು ಅವರನ್ನು ಶಿಕ್ಷಿಸುವನು. 16 ಆ ಅಹಂಕಾರಿಗಳು ತಾರ್ಷೀಷಿನ ದೊಡ್ಡ ಹಡಗುಗಳಂತಿದ್ದಾರೆ. ಈ ಹಡಗುಗಳಲ್ಲಿ ಶ್ರೇಷ್ಠವಾದ ವಸ್ತುಗಳು ತುಂಬಿವೆ. ಆದರೆ ದೇವರು ಆ ಅಹಂಕಾರಿಗಳನ್ನು ಶಿಕ್ಷಿಸುವನು.
17 ಆ ಸಮಯದಲ್ಲಿ ಜನರು ತಮ್ಮ ಅಹಂಕಾರವನ್ನು ತೋರಿಸುವುದಿಲ್ಲ. ಈಗ ಅಹಂಕಾರಿಗಳಾಗಿರುವವರು ನೆಲದತನಕ ಬಗ್ಗಿಹೋಗುವರು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು. 18 ಎಲ್ಲಾ ವಿಗ್ರಹಗಳು ಇಲ್ಲವಾಗುವವು. 19 ಜನರು ಬಂಡೆಗಳ ಸಂದುಗಳಲ್ಲಿಯೂ ನೆಲದ ಬಿರುಕುಗಳಲ್ಲಿಯೂ ಅಡಗಿಕೊಳ್ಳುವರು. ಜನರು ಯೆಹೋವನಿಗೂ ಆತನ ಪರಾಕ್ರಮಕ್ಕೂ ಭಯಪಡುವರು. ಯೆಹೋವನು ಎದ್ದು ಈ ಪ್ರಪಂಚವನ್ನು ಅಲುಗಾಡಿಸುವಾಗ ಇವೆಲ್ಲಾ ಸಂಭವಿಸುವವು.
20 ಆ ಸಮಯದಲ್ಲಿ ಜನರು ತಮ್ಮ ಬೆಳ್ಳಿಬಂಗಾರಗಳ ವಿಗ್ರಹಗಳನ್ನೆತ್ತಿ ಬಿಸಾಡಿಬಿಡುವರು. ಈ ವಿಗ್ರಹಗಳನ್ನು ಜನರು ಪೂಜಿಸುವದಕ್ಕಾಗಿ ಮಾಡಿಕೊಂಡರು. ಬಾವಲಿಗಳೂ, ಇಲಿಗಳೂ ವಾಸಿಸುವ ಸಂದುಗಳಲ್ಲಿ ಈ ವಿಗ್ರಹಗಳನ್ನು 21 ಜನರು ಬಿಸಾಡಿ, ಸಂದುಗೊಂದುಗಳಲ್ಲಿ ಅಡಗಿಕೊಳ್ಳುವರು. ಯೆಹೋವನಿಗೂ ಆತನ ಮಹಾಶಕ್ತಿಗೂ ಹೆದರಿ ಅವರು ಹಾಗೆ ಮಾಡುವರು. ಯೆಹೋವನು ಎದ್ದು ಭೂಮಿಯನ್ನು ಅಲುಗಾಡಿಸುವ ಸಮಯದಲ್ಲಿ ಇವೆಲ್ಲಾ ಸಂಭವಿಸುವವು.
22 ನಿಮ್ಮ ರಕ್ಷಣೆಗಾಗಿ ನೀವು ಇತರರ ಮೇಲೆ ನಂಬಿಕೆ ಇಡಕೂಡದು. ಅವರು ಕೇವಲ ಸಾಯುವ ಮನುಷ್ಯರಷ್ಟೇ. ಆದ್ದರಿಂದ ಅವರನ್ನು ನೀವು ದೇವರಂತೆ ಬಲಿಷ್ಠರೆಂದು ನೆನಸಬಾರದು.
3 ನಾನು ಹೇಳುವದನ್ನೆಲ್ಲಾ ಮನದಟ್ಟುಮಾಡಿಕೊಳ್ಳಿರಿ: ನಮ್ಮ ಒಡೆಯನೂ ಸರ್ವಶಕ್ತನೂ ಆದ ಯೆಹೋವನು ಯೆಹೂದ ಮತ್ತು ಇಸ್ರೇಲಿನ ಆಧಾರಗಳನ್ನೆಲ್ಲಾ ತೆಗೆದುಬಿಡುವನು. ಆತನು ಅವರ ಅನ್ನಪಾನಗಳನ್ನೆಲ್ಲಾ ತೆಗೆದುಬಿಡುವನು. 2 ಆತನು ಎಲ್ಲಾ ವೀರರನ್ನೂ ಮಹಾಸೈನಿಕರನ್ನೂ ತೆಗೆದುಬಿಡುವನು. ದೇವರು ಎಲ್ಲಾ ನ್ಯಾಯಾಧೀಶರನ್ನೂ ಪ್ರವಾದಿಗಳನ್ನೂ ಹಿರಿಯರನ್ನೂ ಇಂದ್ರಜಾಲಗಾರರನ್ನು ತೆಗೆದುಬಿಡುವನು. 3 ದೇವರು ಸೇನಾಪತಿಗಳನ್ನೂ ಸರ್ಕಾರದ ಅಧಿಪತಿಗಳನ್ನೂ ತೆಗೆದುಬಿಡುವನು. ಆತನು ಉತ್ತಮ ಸಲಹೆಗಾರರನ್ನೂ ಮಾಂತ್ರಿಕರನ್ನೂ ಭವಿಷ್ಯ ಹೇಳುವವರನ್ನೂ ತೊಲಗಿಸುವನು.
4 ಯೆಹೋವನು ಹೇಳುವುದೇನೆಂದರೆ: “ನಾನು ಬಾಲಕರನ್ನು ನಿಮ್ಮ ನಾಯಕರನ್ನಾಗಿ ಮಾಡುವೆನು. 5 ಪ್ರಜೆಗಳು ಒಬ್ಬರಿಗೊಬ್ಬರು ವಿರೋಧಿಗಳಾಗುವರು; ಬಾಲಕರು ಹಿರಿಯರನ್ನು ಗೌರವಿಸರು. ಸಾಮಾನ್ಯರು ಗಣ್ಯವ್ಯಕ್ತಿಗಳನ್ನು ಸನ್ಮಾನಿಸರು.”
6 ಆ ಸಮಯದಲ್ಲಿ ಒಬ್ಬನು ತನ್ನ ಸ್ವಂತ ಕುಟುಂಬದ ಸಹೋದರನನ್ನು ಹಿಡಿದು, “ನಿನಗೆ ನಿಲುವಂಗಿಯದೆ. ಆದ್ದರಿಂದ ನೀನು ನಮಗೆ ನಾಯಕನಾಗು. ಈ ಅವಶೇಷಗಳೆಲ್ಲಾ ನಿನಗೆ ಅಧೀನವಾಗಿರಲಿ” ಎಂದು ಹೇಳುವರು.
7 ಆದರೆ ಆ ಸಹೋದರನು ಎದ್ದುನಿಂತು, “ನನ್ನಿಂದ ಆಗುವುದಿಲ್ಲ, ನನ್ನ ಮನೆಯಲ್ಲಿ ಸಾಕಷ್ಟು ಧಾನ್ಯವಾಗಲಿ ಬಟ್ಟೆಯಾಗಲಿ ಇಲ್ಲ. ನನ್ನನ್ನು ನಾಯಕನನ್ನಾಗಿ ಮಾಡಬೇಡಿ” ಎಂದು ಹೇಳುವನು.
8 ಜೆರುಸಲೇಮ್ ಮುಗ್ಗರಿಸಿಬಿದ್ದು ಕೆಟ್ಟಕಾರ್ಯಗಳನ್ನು ಮಾಡಿದ್ದರಿಂದ ಹೀಗಾಗುವದು. ಯೆಹೂದವು ಪಾಪದಲ್ಲಿ ಬಿದ್ದು ದೇವರನ್ನು ಹಿಂಬಾಲಿಸುವುದನ್ನು ನಿಲ್ಲಿಸಿಯದೆ. ಅವರಾಡುವ ಮಾತುಗಳು, ಮಾಡುವ ಕ್ರಿಯೆಗಳು ಯೆಹೋವನಿಗೆ ವಿರುದ್ಧವಾಗಿವೆ. ಯೆಹೋವನ ಮಹಿಮಾಶಕ್ತಿಯಿಂದ ಕೂಡಿದ ಕಣ್ಣುಗಳು ಇವೆಲ್ಲವನ್ನು ನೋಡುವವು.
9 ಜನರ ಮುಖಭಾವವೇ ಅವರ ದುಷ್ಕೃತ್ಯಗಳನ್ನು ಎತ್ತಿತೋರಿಸುವವು. ಅವರು ತಮ್ಮ ಪಾಪಗಳಿಗಾಗಿ ಹೆಚ್ಚಳಪಡುವರು. ಅವರು ಸೊದೋಮಿನ ಜನರಂತಿದ್ದಾರೆ. ತಮ್ಮ ಪಾಪಗಳನ್ನು ಯಾರು ನೋಡಿದರೂ ಅವರಿಗೆ ಚಿಂತೆಯಿಲ್ಲ. ಇದು ನಿಜವಾಗಿಯೂ ಭಯಂಕರವಾದದ್ದು. ಅವರು ತಮಗೆ ಬಹಳ ಸಂಕಟಗಳನ್ನು ಬರಮಾಡಿಕೊಂಡಿದ್ದಾರೆ.
10 ಒಳ್ಳೆಯವರಿಗೆ ಒಳ್ಳೆಯವುಗಳೇ ಸಂಭವಿಸುತ್ತವೆ ಎಂಬುದಾಗಿ ತಿಳಿಸು. ಅವರು ಮಾಡುವ ಒಳ್ಳೆಯ ಕಾರ್ಯಗಳಿಗಾಗಿ ಅವರಿಗೆ ಬಹುಮಾನ ದೊರೆಯುವುದು. 11 ಆದರೆ ದುಷ್ಟರ ಗತಿಯನ್ನು ಏನು ಹೇಳಲಿ. ದುಷ್ಟರಿಗೆ ಕೆಡುಕು ಸಂಭವಿಸುವದು. ಅವರಿಗೆ ಬಹಳ ಸಂಕಟಗಳು ಬಂದೊದಗುವವು. ಅವರು ಮಾಡಿರುವ ಎಲ್ಲಾ ದುಷ್ಟಕ್ರಿಯೆಗಳಿಗೆ ಶಿಕ್ಷೆ ಕೊಡಲ್ಪಡುವದು. 12 ಮಕ್ಕಳು ನನ್ನ ಜನರನ್ನು ಸೋಲಿಸಿಬಿಡುವರು. ಸ್ತ್ರೀಯರು ನನ್ನ ಜನರನ್ನು ಆಳುವರು.
ನನ್ನ ಜನರೇ, ನಿಮ್ಮ ಮಾರ್ಗದರ್ಶಕರು ನಿಮ್ಮನ್ನು ತಪ್ಪುದಾರಿಯಲ್ಲಿ ನಡಿಸುವರು; ಸರಿಯಾದ ದಾರಿಯಿಂದ ನಿಮ್ಮನ್ನು ಅಡ್ಡದಾರಿಗೆ ನಡಿಸುವರು.
ದೇವರು ತನ್ನ ಜನರ ಬಗ್ಗೆ ಮಾಡಿದ ತೀರ್ಮಾನ
13 ಯೆಹೋವನು ತನ್ನ ಜನರಿಗೆ ನ್ಯಾಯತೀರಿಸಲು ಎದ್ದುನಿಂತಿದ್ದಾನೆ. 14 ನಾಯಕರಿಗೂ ಹಿರಿಯರಿಗೂ ಅವರು ಮಾಡಿದ ಕಾರ್ಯಗಳ ವಿರುದ್ಧವಾಗಿ ಆತನು ನ್ಯಾಯತೀರಿಸುವನು.
ಯೆಹೋವನು ಹೇಳುವುದೇನೆಂದರೆ: “ನೀವು ದಾಕ್ಷಾತೋಟವನ್ನು (ಯೆಹೂದವನ್ನು) ಸುಟ್ಟುಹಾಕಿದ್ದೀರಿ; ಬಡಜನರಿಂದ ನೀವು ಕಿತ್ತುಕೊಂಡ ವಸ್ತುಗಳನ್ನು ಈಗಲೂ ನಿಮ್ಮ ಮನೆಗಳಲ್ಲಿ ಇಟ್ಟುಕೊಂಡಿದ್ದೀರಿ. 15 ನನ್ನ ಜನರನ್ನು ಕುಗ್ಗಿಸಲು ನಿಮಗೆ ಯಾವ ಅಧಿಕಾರವಿದೆ? ಬಡಜನರ ಮುಖವನ್ನು ಧೂಳಿನಲ್ಲಿ ಹಾಕಿ ಉಜ್ಜಲು ನಿಮಗೆ ಯಾವ ಅಧಿಕಾರವಿದೆ?” ಇದು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನ ನುಡಿಗಳು.
16 ಯೆಹೋವನು ಹೇಳುವುದೇನೆಂದರೆ: “ಚೀಯೋನಿನ ಸ್ತ್ರೀಯರು ವಯ್ಯಾರದಿಂದ ತಲೆಯಾಡಿಸುತ್ತಾ, ಕುಡಿನೋಟ ಬೀರುತ್ತಾ, ಕುಲುಕಿ ಹೆಜ್ಜೆಯಿಡುತ್ತಾ, ಕಾಲುಗೆಜ್ಜೆಯನ್ನು ಝಣಝಣಿಸುತ್ತಾ ನಡೆಯುತ್ತಾರೆ.”
17 ನನ್ನ ಒಡೆಯನಾದ ಯೆಹೋವನು ಚೀಯೋನಿನ ಸ್ತ್ರೀಯರ ತಲೆಯ ಮೇಲೆ ಹುಣ್ಣುಗಳನ್ನು ಬರಮಾಡಿ ಅವರ ತಲೆಕೂದಲು ಉದುರಿ ತಲೆಬೋಳಾಗುವಂತೆ ಮಾಡುವನು. 18 ಆ ಸಮಯದಲ್ಲಿ ಆತನು ಅವರ ಎಲ್ಲಾ ವಸ್ತುಗಳನ್ನು ಅವರಿಂದ ತೆಗೆದುಬಿಡುವನು. ಅವರ ಕಾಲುಸರಗಳನ್ನು, ಸೂರ್ಯಚಂದ್ರಾಕಾರದ ಕೊರಳಿನ ಸರಗಳನ್ನು, 19 ಕಿವಿಯೋಲೆಗಳನ್ನು, ಕೈಬಳೆಗಳನ್ನು, ಸೆರಗುವಸ್ತ್ರಗಳನ್ನು, 20 ರುಮಾಲುಗಳನ್ನು, ಸೊಂಟಪಟ್ಟಿಯನ್ನು, ಪರಿಮಳದ್ರವ್ಯವನ್ನು, ತಾಯಿತಿಗಳನ್ನು, 21 ಮುದ್ರೆಯುಂಗುರವನ್ನು ಮತ್ತು ಮೂಗುತಿಗಳನ್ನು ತೆಗೆದುಬಿಡುವನು. 22 ಅವರ ನಯವಾದ ಮೇಲಂಗಿಗಳನ್ನು, ಮೇಲ್ಹೊದಿಕೆಗಳನ್ನು, ಶಾಲುಗಳನ್ನು, ಕೈಚೀಲಗಳನ್ನು, 23 ಕೈಗನ್ನಡಿಗಳನ್ನು, ಪೋಷಾಕುಗಳನ್ನು, ಮುಂಡಾಸಗಳನ್ನು ಮತ್ತು ಉದ್ದವಾದ ಶಾಲುಗಳನ್ನು ಅವರಿಂದ ತೆಗೆದುಬಿಡುವನು.
24 ಆ ಸಮಯದಲ್ಲಿ ಸ್ತ್ರೀಯರ ಪರಿಮಳದ್ರವ್ಯವು ಕೊಳೆತ ವಾಸನೆಯಿಂದ ಕೂಡಿರುವುದು. ಅವರು ಸೊಂಟಪಟ್ಟಿಯ ಬದಲಿಗೆ ಹಗ್ಗ ಕಟ್ಟಿಕೊಳ್ಳುವರು; ತಲೆಕೂದಲನ್ನು ಅಂದವಾಗಿ ಹೆಣೆದುಕೊಳ್ಳುವ ಬದಲು ಬೋಳಿಸಿಕೊಳ್ಳುವರು. ಈಗ ಅವರಿಗೆ ಆಧುನಿಕ ವಸ್ತ್ರಗಳಿರುವವು; ಆದರೆ ಆಗ ಅವರು ಶೋಕವಸ್ತ್ರಗಳನ್ನೇ ಧರಿಸುವರು. ಈಗ ಅವರು ಮುಖಗಳಿಗೆ ಸೌಂದರ್ಯದ ಬೊಟ್ಟುಗಳನ್ನು ಇಟ್ಟುಕೊಳ್ಳುವರು; ಆದರೆ ಆಗ ಅವರ ಚರ್ಮದಲ್ಲಿ ಸುಟ್ಟಕಲೆಗಳೇ ಇರುವವು.
25 ಆ ಸಮಯದಲ್ಲಿ ನಿಮ್ಮ ಗಂಡಸರೆಲ್ಲಾ ಖಡ್ಗದಿಂದ ಹತರಾಗುವರು. ನಿಮ್ಮ ವೀರರೆಲ್ಲರೂ ಯುದ್ಧದಲ್ಲಿ ಮಡಿಯುವರು. 26 ನಗರದ ಹೆಬ್ಬಾಗಿಲ ಬಳಿಯಲ್ಲಿ ಜನರು ಸೇರಿ ಬರುವಾಗ ರೋಧನವೂ ಶೋಕವೂ ಇರುತ್ತವೆ. ಇದ್ದುದನ್ನೆಲ್ಲಾ ಕಳೆದುಕೊಂಡ ಸ್ತ್ರೀಯಂತೆ ಜೆರುಸಲೇಮು ಸರ್ವವನ್ನೂ ಕಳೆದುಕೊಂಡು ನೆಲದ ಮೇಲೆ ಕುಳಿತು ರೋಧಿಸುವಳು.
4 ಆ ಸಮಯದಲ್ಲಿ ಏಳು ಮಂದಿ ಹೆಂಗಸರು ಒಬ್ಬ ಗಂಡಸನ್ನು ಹಿಡಿದುಕೊಂಡು, “ನಮ್ಮ ಆಹಾರವನ್ನು ನಾವೇ ಸಂಪಾದಿಸಿಕೊಳ್ಳುತ್ತೇವೆ. ನಮ್ಮ ಬಟ್ಟೆಬರೆಗಳನ್ನು ನಾವೇ ಮಾಡಿಕೊಳ್ಳುತ್ತೇವೆ, ನಮ್ಮ ಕೆಲಸಗಳನ್ನೆಲ್ಲಾ ನಾವೇ ಮಾಡಿಕೊಳ್ಳುತ್ತೇವೆ. ನೀನು ನಮ್ಮನ್ನು ಮದುವೆಯಾಗು, ನಿನ್ನ ಹೆಸರನ್ನು ನಾವು ಇಟ್ಟುಕೊಳ್ಳುವಂತೆ ಮಾಡು. ದಯಮಾಡಿ ನಮ್ಮ ನಾಚಿಕೆಯನ್ನು ನಮ್ಮಿಂದ ತೊಲಗಿಸು” ಎಂದು ಹೇಳುವರು.
2 ಆ ಸಮಯದಲ್ಲಿ ಯೆಹೋವನ ಸಸಿ (ಯೆಹೂದವು) ಬಹಳ ಚಂದವಾಗಿಯೂ ದೊಡ್ಡದಾಗಿಯೂ ಇರುವುದು. ಆ ಸಮಯದಲ್ಲಿ, ಚೀಯೋನಿನಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ವಾಸಿಸುತ್ತಿರುವ ಜನರು ತಮ್ಮ ದೇಶದಲ್ಲಿ ಬೆಳೆಯುವ ಫಲಗಳಿಗಾಗಿ ತುಂಬಾ ಹೆಚ್ಚಳಪಡುವರು. 3 ಜೀವಬಾಧ್ಯರ ಪಟ್ಟಿಯಲ್ಲಿ ಹೆಸರು ಬರೆಯಲ್ಪಟ್ಟು ಚೀಯೋನಿನಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವವರು ಪರಿಶುದ್ಧರೆಂದು ಕರೆಯಲ್ಪಡುವರು. ಅವರೆಲ್ಲರೂ ಅಲ್ಲಿಯೇ ನೆಲೆಸುವರು.
4 ಚೀಯೋನಿನ ಸ್ತ್ರೀಯರ ಕಲ್ಮಷವನ್ನು ಯೆಹೋವನು ತೊಳೆದುಬಿಡುವನು. ಆತನು ಜೆರುಸಲೇಮಿನ ಮಧ್ಯದಲ್ಲಿರುವ ರಕ್ತವನ್ನು ತೊಳೆದುಬಿಡುವನು. ಆತನು ನ್ಯಾಯನೀತಿಗಳಿಂದ ತೀರ್ಪುನೀಡುವನು; ದಹಿಸುವ ಆತ್ಮನಿಂದ ಎಲ್ಲವನ್ನು ಶುದ್ಧಗೊಳಿಸುವನು. 5 ಆ ಸಮಯದಲ್ಲಿ ತಾನು ತನ್ನ ಜನರೊಂದಿಗೆ ಇರುವುದಾಗಿ ಹೀಗೆ ಯೆಹೋವನು ರುಜುವಾತುಪಡಿಸುವನು. ಹಗಲಲ್ಲಿ ಆತನು ಧೂಮಮೇಘವನ್ನೂ ಇರುಳಲ್ಲಿ ಪ್ರಜ್ವಲಿಸುವ ಅಗ್ನಿಯ ಪ್ರಕಾಶವನ್ನೂ ಉಂಟುಮಾಡುವನು. ಈ ಗುರುತುಗಳು ಚೀಯೋನ್ ಪರ್ವತದ ಮೇಲಿರುವ ಪ್ರತಿಯೊಂದು ಜನರ ಸಭೆಯ ಮೇಲೆ ಆಕಾಶದಲ್ಲಿ ಕಾಣುವುದು. ಪ್ರತಿಯೊಬ್ಬನ ಮೇಲೆಯೂ ಕಾಪಾಡಿಕೊಳ್ಳುವುದಕ್ಕಾಗಿ ಹೊದಿಕೆ ಇರುವುದು. 6 ಈ ಹೊದಿಕೆಯು ಸುರಕ್ಷಿತ ಸ್ಥಳದಂತಿರುವದು. ಅದು ಸೂರ್ಯನ ಶಾಖದಿಂದ ಅವರನ್ನು ರಕ್ಷಿಸುವದು. ಅದೇ ಸಮಯದಲ್ಲಿ ಸಣ್ಣ ದೊಡ್ಡ ಮಳೆಗಳಿಂದಲೂ ಆ ಹೊದಿಕೆಯು ರಕ್ಷಿಸುವದು.
Kannada Holy Bible: Easy-to-Read Version. All rights reserved. © 1997 Bible League International