Beginning
22 ಬಹು ಧನಕ್ಕಿಂತಲೂ ಒಳ್ಳೆಯ ಹೆಸರೇ ಉತ್ತಮ. ಬೆಳ್ಳಿಬಂಗಾರಗಳಿಗಿಂತಲೂ ಸನ್ಮಾನಿತರಾಗಿರುವುದೇ ಅಮೂಲ್ಯ.
2 ಐಶ್ವರ್ಯವಂತರಿಗೂ ಬಡವರಿಗೂ ಯಾವ ವ್ಯತ್ಯಾಸವಿಲ್ಲ. ಯಾಕೆಂದರೆ ಎಲ್ಲರನ್ನು ನಿರ್ಮಿಸಿದಾತನು ಯೆಹೋವನೇ.
3 ಜ್ಞಾನಿಗಳು ಕೇಡನ್ನು ಕಂಡು ದೂರವಾಗುತ್ತಾರೆ. ಮೂಢರಾದರೋ ನೇರವಾಗಿ ಹೋಗಿ ಆಪತ್ತಿಗೀಡಾಗುವರು.
4 ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದು ದೀನತೆಯಿಂದಿರು; ಆಗ ನೀನು ಐಶ್ವರ್ಯ, ಸನ್ಮಾನ ಮತ್ತು ನಿಜಜೀವವನ್ನು ಹೊಂದಿಕೊಳ್ಳುವೆ.
5 ವಕ್ರಬುದ್ಧಿಯುಳ್ಳವರು ಅನೇಕ ಆಪತ್ತುಗಳಿಗೆ ಸಿಕ್ಕಿಕ್ಕೊಂಡಿದ್ದಾರೆ. ಆದರೆ ತನ್ನ ಆತ್ಮದ ಬಗ್ಗೆ ಚಿಂತಿಸುವವನು ಆ ಆಪತ್ತುಗಳಿಂದ ದೂರವಿರುವನು.
6 ಮಗನಿಗೆ ಬಾಲ್ಯದಲ್ಲಿಯೇ ಒಳ್ಳೆಯ ಮಾರ್ಗವನ್ನು ಉಪದೇಶಿಸು. ಅವನು ಬೆಳೆದು ದೊಡ್ಡವನಾದಾಗ ಅದೇ ರೀತಿಯಲ್ಲಿ ಜೀವಿಸುವನು.
7 ಬಡವನು ಐಶ್ವರ್ಯವಂತನಿಗೆ ಗುಲಾಮನಾಗಿದ್ದಾನೆ. ಸಾಲ ತೆಗೆದುಕೊಳ್ಳುವವನು ಸಾಲಕೊಡುವವನಿಗೆ ಸೇವಕನಾಗಿದ್ದಾನೆ.
8 ಕೇಡನ್ನು ಬಿತ್ತುವವನು ಕೇಡನ್ನು ಕೊಯ್ಯುವನು. ಅವನ ದುಷ್ಟಶಕ್ತಿಯು ನಾಶವಾಗುವುದು.
9 ಉದಾರಿಯು ತನ್ನ ಆಹಾರವನ್ನು ಬಡವರೊಂದಿಗೆ ಹಂಚಿಕೊಳ್ಳುವುದರಿಂದ ಆಶೀರ್ವಾದ ಹೊಂದುವನು.
10 ದುರಾಭಿಮಾನಿಯನ್ನು ಬಲವಂತವಾಗಿ ಹೊರಗಟ್ಟಿ. ಆಗ ಜಗಳವಾಗಲಿ ವಾದಗಳಾಗಲಿ ಅವಮಾನಗಳಾಗಲಿ ಇರುವುದಿಲ್ಲ.
11 ನೀನು ಶುದ್ಧಹೃದಯವನ್ನೂ ಸವಿಮಾತುಗಳನ್ನೂ ಪ್ರೀತಿಸಿದರೆ ರಾಜನು ನಿನಗೆ ಸ್ನೇಹಿತನಾಗುವನು.
12 ಯೆಹೋವನು ಜ್ಞಾನಿಗಳ ಮೇಲೆ ಲಕ್ಷ್ಯವಿಟ್ಟು ಕಾಪಾಡುವನು; ವಂಚಕರ ಮಾತುಗಳನ್ನಾದರೋ ನಾಶಪಡಿಸುವನು.
13 “ನಾನು ಕೆಲಸಕ್ಕೆ ಹೋಗಲಾರೆ. ಹೊರಗಡೆ ಸಿಂಹವಿದೆ. ಅದು ನನ್ನನ್ನು ಕೊಲ್ಲುತ್ತದೆ” ಎನ್ನುತ್ತಾನೆ ಸೋಮಾರಿ.
14 ಕಾಮುಕಿಯ ಬಾಯಿ ಆಳವಾದ ಗುಂಡಿಯಂತಿದೆ. ಯೆಹೋವನಿಂದ ಶಪಿಸಲ್ಪಟ್ಟವರು ಆ ಗುಂಡಿಯೊಳಗೆ ಬೀಳುವರು.
15 ಮಕ್ಕಳು ಮೂಢಕಾರ್ಯಗಳನ್ನು ಮಾಡುವರು. ನೀವು ಅವರನ್ನು ಶಿಕ್ಷಿಸಿದರೆ, ಅವುಗಳನ್ನು ಮಾಡಬಾರದೆಂದು ಅವರಿಗೆ ಗೊತ್ತಾಗುವುದು.
16 ಐಶ್ವರ್ಯವಂತರಾಗಲು ಬಡವರನ್ನು ಹಿಂಸಿಸುವವರಿಗೂ ಐಶ್ವರ್ಯವಂತರಿಗೆ ಉಡುಗೊರೆಗಳನ್ನು ಕೊಡುವವರಿಗೂ ಕೊರತೆಯೇ ಗತಿ.
ಮೂವತ್ತು ಜ್ಞಾನೋಕ್ತಿಗಳು
17 ನನ್ನ ಉಪದೇಶಗಳಿಗೆ ಕಿವಿಗೊಡು. ಜ್ಞಾನಿಗಳ ಉಪದೇಶವನ್ನೇ ನಾನು ನಿನಗೆ ಉಪದೇಶಿಸುವೆನು. ಈ ಉಪದೇಶಗಳಿಂದ ಕಲಿತುಕೊ. 18 ನೀನು ಈ ಉಪದೇಶಗಳನ್ನು ಜ್ಞಾಪಕದಲ್ಲಿಟ್ಟುಕೊಂಡರೆ ನಿನಗೆ ಒಳ್ಳೆಯದಾಗುವುದು. ನೀನು ಈ ಉಪದೇಶಗಳನ್ನು ಹೇಳಬಲ್ಲವನಾದರೆ ನಿನಗೆ ಅನುಕೂಲವಾಗುವುದು. 19 ಆ ಜ್ಞಾನೋಕ್ತಿಗಳನ್ನು ನಾನೀಗ ಉಪದೇಶಿಸುವೆನು, ನೀನು ಯೆಹೋವನಲ್ಲಿ ಭರವಸೆ ಇಡಬೇಕೆಂಬುದೇ ನನ್ನ ಅಪೇಕ್ಷೆ. 20 ನಾನು ನಿನಗೋಸ್ಕರ ಮೂವತ್ತು ನುಡಿಗಳನ್ನು ಬರೆದಿರುವೆ. ಇವು ಬುದ್ಧಿವಾದದ ಮತ್ತು ವಿವೇಕದ ನುಡಿಗಳಾಗಿವೆ. 21 ಈ ನುಡಿಗಳು ನಿನಗೆ ಸತ್ಯವನ್ನೂ ಮುಖ್ಯವಾದವುಗಳನ್ನೂ ಉಪದೇಶಿಸುತ್ತವೆ. ಆಗ ನೀನು ನಿನ್ನನ್ನು ಕಳುಹಿಸಿದವನಿಗೆ ಒಳ್ಳೆಯ ಉತ್ತರಗಳನ್ನು ಕೊಡಬಲ್ಲವನಾಗುವೆ.[a]
—1—
22 ಅಸಹಾಯಕರಾದ ಬಡವರಿಂದ ಕದ್ದುಕೊಳ್ಳಬೇಡ; ನ್ಯಾಯಾಲಯದಲ್ಲಿ ಅವರಿಗೆ ಅನ್ಯಾಯಮಾಡಬೇಡ. 23 ಯಾಕೆಂದರೆ ಯೆಹೋವನು ಅವರ ಪರವಾಗಿ ವಾದಿಸುವನು; ಅವರನ್ನು ದರೋಡೆ ಮಾಡಬೇಕೆಂದಿರುವವರ ಪ್ರಾಣಗಳನ್ನು ತೆಗೆದುಹಾಕುವನು.
—2—
24 ಮುಂಗೋಪಿಯ ಸ್ನೇಹಿತನಾಗಿರಬೇಡ. ತಟ್ಟನೆ ಸಿಟ್ಟುಗೊಳ್ಳುವವನ ಸಮೀಪಕ್ಕೆ ಹೋಗಬೇಡ. 25 ಇಲ್ಲವಾದರೆ, ನೀನೂ ಅವನಂತಾಗುವೆ. ಆಗ ಅವನಿಗಿರುವ ತೊಂದರೆಗಳು ನಿನಗೂ ಬರುತ್ತವೆ.
—3—
26 ಬೇರೊಬ್ಬನ ಸಾಲಗಳಿಗೆ ಜಾಮೀನಾಗಬೇಡ. 27 ನೀನು ಅವನ ಸಾಲವನ್ನು ತೀರಿಸಲಾಗದಿದ್ದರೆ, ನಿನ್ನಲ್ಲಿರುವ ಪ್ರತಿಯೊಂದನ್ನು ಕಳೆದುಕೊಳ್ಳುವೆ. ನಿನ್ನ ಹಾಸಿಗೆಯನ್ನು ನೀನೇಕೆ ಕಳೆದುಕೊಳ್ಳಬೇಕು.
—4—
28 ಬಹುಕಾಲದ ಹಿಂದೆ ನಿನ್ನ ಪೂರ್ವಿಕರು ಜಮೀನಿಗೆ ಹಾಕಿದ ಮೇರೆಗಲ್ಲನ್ನು ಎಂದಿಗೂ ಜರುಗಿಸಬೇಡ.
—5—
29 ಚತುರ ಕೆಲಸಗಾರನು ರಾಜರ ಸೇವೆಗೆ ಯೋಗ್ಯನಾಗಿದ್ದಾನೆ. ಅವನು ಸಾಮಾನ್ಯರ ಸೇವೆ ಮಾಡಬೇಕಿಲ್ಲ.
—6—
23 ಅಧಿಪತಿಯೊಂದಿಗೆ ಕುಳಿತುಕೊಂಡು ಊಟಮಾಡುವಾಗ, ನೀನು ಯಾರೊಂದಿಗಿರುವೆ ಎಂಬುದನ್ನು ಜ್ಞಾಪಿಸಿಕೊ. 2 ನೀನು ತುಂಬ ಹಸಿವೆಗೊಂಡಿದ್ದರೂ ಅತಿಯಾಗಿ ತಿನ್ನಬೇಡ. 3 ಅವನು ಬಡಿಸುವ ಒಳ್ಳೆಯ ಆಹಾರವನ್ನು ಅತಿಯಾಗಿ ತಿನ್ನಬೇಡ. ಅದು ನಿನ್ನನ್ನು ಮೋಸಗೊಳಿಸುವ ಆಹಾರ.
—7—
4 ಐಶ್ವರ್ಯವಂತನಾಗಬೇಕೆಂಬ ಪ್ರಯತ್ನದಲ್ಲಿ ನಿನ್ನ ಆರೋಗ್ಯವನ್ನು ಕಳೆದುಕೊಳ್ಳಬೇಡ. ನೀನು ಜ್ಞಾನಿಯಾಗಿದ್ದರೆ ತಾಳ್ಮೆಯಿಂದಿರುವೆ. 5 ಪಕ್ಷಿಯಂತೆ ಹಾರಿಹೋಗುತ್ತದೋ ಎಂಬಂತೆ ಹಣವು ಬಹುಬೇಗನೆ ಇಲ್ಲವಾಗುವುದು.
—8—
6 ಸ್ವಾರ್ಥಿಯೊಂದಿಗೆ ಊಟಮಾಡಬೇಡ. ಅವನು ಇಷ್ಟಪಡುವ ಮೃಷ್ಠಾನ್ನದಿಂದ ದೂರವಿರು. 7 ಅವನು ವೆಚ್ಚದ ಬಗ್ಗೆ ಯೋಚಿಸುವಂಥವನು. ಅವನು ನಿನಗೆ, “ತಿನ್ನು, ಕುಡಿ” ಎಂದು ಹೇಳಿದರೂ ಅವನ ಉದ್ದೇಶವೇ ಬೇರೆ. 8 ನೀನು ಅವನ ಆಹಾರವನ್ನು ತಿಂದರೆ ವಾಂತಿಮಾಡುವೆ; ಆಗ ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವಾಗುವುದು.
—9—
9 ಮೂಢನಿಗೆ ಉಪದೇಶಿಸಲು ಪ್ರಯತ್ನಿಸಬೇಡ. ಅವನು ನಿನ್ನ ಜ್ಞಾನದ ಮಾತುಗಳನ್ನು ಗೇಲಿಮಾಡುವನು.
—10—
10 ಜಮೀನಿನ ಮೇರೆಯನ್ನು ಎಂದಿಗೂ ಒತ್ತಬೇಡ. ಅನಾಥರಿಗೆ ಸೇರಿದ ಭೂಮಿಯನ್ನು ಎಂದಿಗೂ ಕಸಿದುಕೊಳ್ಳಬೇಡ. 11 ಇಲ್ಲವಾದರೆ ಯೆಹೋವನು ನಿನಗೆ ವಿರೋಧವಾಗುವನು; ಯೆಹೋವನು ಬಲಿಷ್ಠನೂ ಅನಾಥರ ಪರವಾಗಿ ವಾದಿಸುವವನೂ ಆಗಿದ್ದಾನೆ.
—11—
12 ನಿನ್ನ ಉಪದೇಶಕರಿಗೆ ಕಿವಿಗೊಟ್ಟು ನಿನ್ನಿಂದ ಸಾಧ್ಯವಾದಷ್ಟು ಕಲಿತುಕೊ.
—12—
13 ಅಗತ್ಯವೆನಿಸಿದರೆ ಮಗನನ್ನು ಬಾಲ್ಯದಲ್ಲಿಯೇ ದಂಡಿಸು. ನಿನ್ನ ಹೊಡೆತದಿಂದ ಅವನೇನೂ ಸಾಯುವುದಿಲ್ಲ. 14 ನಿನ್ನ ಹೊಡೆತವು ಅವನ ಜೀವವನ್ನು ಕಾಪಾಡಬಲ್ಲದು.
—13—
15 ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ, ನನಗೆ ಬಹು ಸಂತೋಷ. 16 ನೀನು ಒಳ್ಳೆಯದನ್ನೇ ಹೇಳುವುದನ್ನು ಕೇಳುವಾಗ ನನ್ನ ಹೃದಯಕ್ಕೆ ಸಂತೋಷವಾಗುವುದು.
—14—
17 ಕೆಡುಕರ ಬಗ್ಗೆ ಹೊಟ್ಟೆಕಿಚ್ಚುಪಡಬೇಡ. ಆದರೆ ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿನ್ನಿಂದಾದಷ್ಟು ಪ್ರಯತ್ನಿಸು. 18 ಆಗ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
—15—
19 ನನ್ನ ಮಗನೇ, ಕಿವಿಗೊಟ್ಟು ಕೇಳಿ ಜ್ಞಾನಿಯಾಗಿರು. ಯಾವಾಗಲೂ ಎಚ್ಚರಿಕೆಯಿಂದಿದ್ದು ನೀತಿಮಾರ್ಗದಲ್ಲಿ ಜೀವಿಸು. 20 ಕುಡುಕರ ಮತ್ತು ಹೊಟ್ಟೆಬಾಕರ ಸ್ನೇಹಿತನಾಗಿರಬೇಡ. 21 ಕುಡುಕರೂ ಹೊಟ್ಟೆಬಾಕರೂ ಬಡವರಾಗುವರು. ತಿಂದು ಕುಡಿದು ನಿದ್ರಿಸುವುದೇ ಅವರ ಕಾರ್ಯಗಳು. ಅವರು ಬಹು ಬೇಗನೆ ಬಡವರಾಗುವರು.
—16—
22 ನಿನ್ನ ತಂದೆಗೆ ಕಿವಿಗೊಡು. ಯಾಕೆಂದರೆ ನೀನು ಅವನ ಮಗನು. ಅವನು ನಿನ್ನ ತಂದೆ. ನಿನ್ನ ತಾಯಿ ವೃದ್ಧಳಾಗಿರುವಾಗಲೂ ಆಕೆಯನ್ನು ಗೌರವಿಸು. 23 ಸತ್ಯವನ್ನು ಕೊಂಡುಕೊ; ಅದನ್ನು ಮಾರಬೇಡ. ಜ್ಞಾನ, ಸುಶಿಕ್ಷೆ ಮತ್ತು ವಿವೇಕವನ್ನು ಕೊಂಡುಕೊ. ಇವು ಖರೀದಿಗೆ ಯೋಗ್ಯವಾದವುಗಳೂ ಮಾರಲಾಗದಷ್ಟು ಅಮೂಲ್ಯವಾದವುಗಳೂ ಆಗಿವೆ. 24 ಒಳ್ಳೆಯವನ ತಂದೆಗೆ ಬಹು ಸಂತೋಷ. ಜ್ಞಾನಿಯಾದ ಮಗನಿಂದ ಆನಂದ. 25 ನಿನ್ನ ತಂದೆತಾಯಿಗಳು ನಿನ್ನೊಂದಿಗೆ ಸಂತೋಷದಿಂದಿರಲಿ; ನಿನ್ನ ತಾಯಿಯು ಆನಂದಿಸಲಿ.
—17—
26 ನನ್ನ ಮಗನೇ, ನನ್ನ ಉಪದೇಶವನ್ನು ಗಮನವಿಟ್ಟು ಕೇಳು. ನನ್ನ ಜೀವಿತವು ನಿನಗೆ ಮಾದರಿಯಾಗಿರಲಿ. 27 ಸೂಳೆಯರು ಮತ್ತು ಕೆಟ್ಟಹೆಂಗಸರು ಬಲೆಯಂತಿದ್ದಾರೆ; ಮೇಲೇರಿ ಬರಲಾಗದ ಆಳವಾದ ಬಾವಿಯಂತಿದ್ದಾರೆ. 28 ಕೆಟ್ಟಹೆಂಗಸು ಕಳ್ಳನಂತೆ ನಿನಗಾಗಿ ಕಾದಿರುವಳು. ಅನೇಕ ಗಂಡಸರ ಪಾಪಕ್ಕೆ ಅವಳೇ ಕಾರಣ.
—18—
29 ಯಾರಿಗೆ ಆಪತ್ತಿದೆ? ಯಾರಿಗೆ ಯಾತನೆಯಿದೆ? ಯಾರಿಗೆ ಜಗಳಗಳಿವೆ? ಯಾರಿಗೆ ಉದ್ವೇಗವಿದೆ? ಯಾರಿಗೆ ನಿಷ್ಕಾರಣವಾದ ಬಾಸುಂಡೆಗಳಿವೆ? ಯಾರಿಗೆ ಕೆಂಪೇರಿದ ಕಣ್ಣುಗಳಿವೆ? 30 ಮದ್ಯವನ್ನು ಅತಿಯಾಗಿ ಕುಡಿಯುವವರಿಗೆ ಮತ್ತು ಮಿಶ್ರಣಗೊಂಡ ನಾನಾಬಗೆಯ ಮದ್ಯಗಳನ್ನು ಕುಡಿಯುವವರಿಗೆ!
31 ಆದ್ದರಿಂದ ಮದ್ಯದ ಬಗ್ಗೆ ಎಚ್ಚರಿಕೆಯಾಗಿರು. ಅದು ಅಂದವಾಗಿದ್ದು ಕೆಂಪಗೆ ಥಳಥಳಿಸುತ್ತದೆ. ನೀನು ಅದನ್ನು ಕುಡಿದಾಗ, ನಯವಾಗಿ ಇಳಿದುಹೋಗುತ್ತದೆ. 32 ಆದರೆ ಕೊನೆಯಲ್ಲಿ ಅದು ವಿಷದ ಹಲ್ಲುಳ್ಳ ಹಾವಿನಂತೆ ಕಚ್ಚುವುದು.
33 ಮದ್ಯವು ನಿನಗೆ ವಿಚಿತ್ರವಾದವುಗಳನ್ನು ಕಾಣಮಾಡುತ್ತದೆ. ನಿನ್ನ ಮನಸ್ಸನ್ನು ಗಲಿಬಿಲಿ ಮಾಡುತ್ತದೆ. 34 ನೀನು ಮಲಗಿಕೊಂಡಾಗ ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮೇಲಿರುವಂತೆಯೂ ಹಡಗಿನ ಮೇಲೆ ಮಲಗಿಕೊಂಡಿರುವಂತೆಯೂ ನಿನಗನ್ನಿಸುವುದು. 35 “ಅವರು ನನಗೆ ಬಡಿದರೂ ಗೊತ್ತಾಗಲಿಲ್ಲ; ಅವರು ನನಗೆ ಹೊಡೆದರೂ ನನಗೆ ಬಡಿದರೂ ಅರಿವಾಗಲಿಲ್ಲ. ಈಗ ನಾನು ಎಚ್ಚರಗೊಳ್ಳಲಾರೆ. ನನಗೆ ಮತ್ತಷ್ಟು ದ್ರಾಕ್ಷಾರಸಬೇಕು” ಎಂದು ನೀನು ಹೇಳುವೆ.
Kannada Holy Bible: Easy-to-Read Version. All rights reserved. © 1997 Bible League International