Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಬನು 29-31

ಯೋಬನು ಮುಂದುವರಿಸಿದ ಮಾತು

29 ಯೋಬನು ಮಾತನ್ನು ಮುಂದುವರಿಸಿ ಹೀಗೆಂದನು:

“ನನ್ನ ಜೀವಿತವು ಕೆಲವು ತಿಂಗಳುಗಳ ಮುಂಚೆ ಇದ್ದಂತೆ ಈಗಲೂ ಇದ್ದಿದ್ದರೆ ಎಷ್ಟೋ ಒಳ್ಳೆಯದಿತ್ತು.
    ಆ ದಿನಗಳಲ್ಲಿ ದೇವರು ನನ್ನನ್ನು ಕಾಯುತ್ತಾ ಪರಿಪಾಲಿಸುತ್ತಿದ್ದನು.
ಆ ದಿನಗಳಲ್ಲಿ ದೇವರ ದೀಪವು ನನ್ನ ಮೇಲೆ ಪ್ರಕಾಶಿಸುತ್ತಿದ್ದ ಕಾರಣ
    ನಾನು ಕಾರ್ಗತ್ತಲೆಯಲ್ಲೂ ಸಂಚರಿಸುತ್ತಿದ್ದೆನು.
ಆ ದಿನಗಳು ನನ್ನ ಜೀವಿತದ ಸುಗ್ಗಿಕಾಲವಾಗಿದ್ದವು;
    ಆ ದಿನಗಳಲ್ಲಿ ದೇವರ ಸ್ನೇಹವು ನನ್ನೊಂದಿಗೂ ನನ್ನ ಮನೆಯವರೊಂದಿಗೂ ಇತ್ತು.
ಆ ದಿನಗಳಲ್ಲಿ ಸರ್ವಶಕ್ತನಾದ ದೇವರು ಇನ್ನೂ ನನ್ನೊಂದಿಗಿದ್ದನು;
    ನನ್ನ ಮಕ್ಕಳು ನನ್ನ ಸುತ್ತಲೂ ಇದ್ದರು.
ಆ ದಿನಗಳಲ್ಲಿ ನನ್ನ ಜೀವಿತವು ತುಂಬ ಚೆನ್ನಾಗಿತ್ತು.
    ನನ್ನ ಮಾರ್ಗಗಳು ಕೆನೆಯಿಂದ ತುಂಬಿರುವಂತೆಯೂ
    ಬಂಡೆಗಳು ನನಗಾಗಿ ಆಲೀವ್ ಎಣ್ಣೆಯ ನದಿಗಳನ್ನೇ ಹರಿಸುತ್ತಿರುವಂತೆಯೂ ನನ್ನ ಜೀವಿತವಿತ್ತು.

“ಆ ದಿನಗಳಲ್ಲಿ ನಾನು ನಗರದ ಹೆಬ್ಬಾಗಿಲಿನ ಬಳಿಗೆ ಹೋಗಿ,
    ಸಾರ್ವಜನಿಕ ಸಭಾಸ್ಥಳದಲ್ಲಿ ಪಟ್ಟಣದ ಹಿರಿಯರೊಂದಿಗೆ ಕುಳಿತುಕೊಳ್ಳುತ್ತಿದ್ದೆನು.
ಅಲ್ಲಿದ್ದ ಜನರೆಲ್ಲರೂ ನನ್ನನ್ನು ಗೌರವಿಸುತ್ತಿದ್ದರು;
    ಯೌವನಸ್ಥರು ನನ್ನನ್ನು ಕಂಡು ಹಿಂದಕ್ಕೆ ಸರಿದು ದಾರಿಮಾಡಿಕೊಡುತ್ತಿದ್ದರು;
    ವೃದ್ಧರು ಗೌರವದಿಂದ ಎದ್ದುನಿಂತುಕೊಳ್ಳುತ್ತಿದ್ದರು.
ಮಾತಾಡುತ್ತಿದ್ದ ಜನನಾಯಕರು
    ತಮ್ಮ ಬಾಯಿ ಮೇಲೆ ಕೈಯಿಟ್ಟುಕೊಂಡು ಮೌನವಾಗುತ್ತಿದ್ದರು.
10 ಪ್ರಮುಖನಾಯಕರುಗಳು ಸಹ ನಾಲಿಗೆಯು ಸಿಕ್ಕಿಕೊಂಡಂತೆ
    ತಮ್ಮ ಧ್ವನಿಯನ್ನು ಕಡಿಮೆಮಾಡುತ್ತಿದ್ದರು.
11 ನನ್ನ ಮಾತನ್ನು ಕೇಳಿದವರೆಲ್ಲರೂ ನನ್ನನ್ನು ಪ್ರಶಂಸಿಸುತ್ತಿದ್ದರು;
    ನಾನು ಮಾಡಿದ್ದನ್ನು ಕಂಡವರೆಲ್ಲರೂ ನನ್ನನ್ನು ಹೊಗಳುತ್ತಿದ್ದರು.
12 ಯಾಕೆಂದರೆ ಬೇಡಿಕೊಂಡ ಬಡವರಿಗೆ ಸಹಾಯ ಮಾಡಿದೆನು;
    ಗತಿಯಿಲ್ಲದ ಅನಾಥರನ್ನು ರಕ್ಷಿಸಿದೆನು.
13 ಜನರು ತಮ್ಮ ಸಾವಿನ ಗಳಿಗೆಯಲ್ಲೂ ನನ್ನನ್ನು ಆಶೀರ್ವದಿಸಿದರು.
    ಕಷ್ಟದಲ್ಲಿದ್ದ ವಿಧವೆಯರಿಗೆ ನನ್ನಿಂದ ಆನಂದವಾಯಿತು.
14 ನೀತಿಯೇ ನನ್ನ ಉಡುಪಾಗಿತ್ತು; ಅದೇ ನನ್ನ ನಿಲುವಂಗಿಯಾಗಿತ್ತು.
    ನ್ಯಾಯವು ನನಗೆ ನಿಲುವಂಗಿಯೂ ಪೇಟವಾಗಿಯೂ ಇತ್ತು.
15 ನಾನು ಕುರುಡನಿಗೆ ಕಣ್ಣಾಗಿಯೂ
    ಕುಂಟನಿಗೆ ಕಾಲಾಗಿಯೂ ಇದ್ದೆನು.
16 ನಾನು ಬಡವರಿಗೆ ತಂದೆಯಂತಿದ್ದೆನು.
    ತೊಂದರೆಯಲ್ಲಿದ್ದ ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು.
17 ನಾನು ದುಷ್ಟರ ಕೋರೆಗಳನ್ನು ಮುರಿದು
    ಅವರ ಬಾಯೊಳಗಿಂದ ಬೇಟೆಗಳನ್ನು ಕಿತ್ತು ತರುತ್ತಿದ್ದೆನು.

18 “ನನ್ನ ಬಗ್ಗೆ ಆಲೋಚಿಸುತ್ತಾ, ‘ನನ್ನ ದಿನಗಳು ಮರಳಿನ ಕಣಗಳಷ್ಟು ಅಸಂಖ್ಯಾತವಾಗಿವೆ;
    ನಾನು ನನ್ನ ಸ್ವಂತ ಮನೆಯಲ್ಲಿ ಮರಣಹೊಂದುವೆನು.
19 ನನ್ನ ಬೇರುಗಳು ನೀರಿನವರೆಗೂ ವ್ಯಾಪಿಸಿಕೊಂಡಿರುತ್ತವೆ;
    ನನ್ನ ಕೊಂಬೆಗಳು ಇಬ್ಬನಿಯಿಂದ ಹಸಿಯಾಗಿರುತ್ತವೆ;
20 ಜನರು ನನ್ನನ್ನು ಹೊಗಳುತ್ತಲೇ ಇರುವರು;
    ಕೈಯಲ್ಲಿ ಹೊಸಬಿಲ್ಲು ಇರುವಂತೆ ನಾನು ಬಲಿಷ್ಠನಾಗಿದ್ದೇನೆ’ ಎಂದುಕೊಂಡೆನು.

21 “ಆ ದಿನಗಳಲ್ಲಿ ಜನರು ನನಗೆ ಕಿವಿಗೊಡುತ್ತಿದ್ದರು;
    ನನ್ನ ಆಲೋಚನೆಯನ್ನು ಕೇಳಲು ಮೌನದಿಂದ ಕಾದುಕೊಂಡಿರುತ್ತಿದ್ದರು.
22 ನನ್ನ ಮಾತುಗಳು ಪರಿಪೂರ್ಣವಾಗಿದ್ದ ಕಾರಣ ಅದಕ್ಕೆ ಬೇರೇನೂ ಸೇರಿಸಲು ಅವರಿಗೆ ಸಾಧ್ಯವಿರಲಿಲ್ಲ.
    ನನ್ನ ಮಾತುಗಳು ಅವರ ಕಿವಿಗಳಿಗೆ ಕೋಮಲವಾಗಿದ್ದವು.
23 ಮಳೆಗಾಗಿಯೋ ಎಂಬಂತೆ ಅವರು ನನ್ನ ಮಾತುಗಳಿಗಾಗಿ ಎದುರುನೋಡುತ್ತಿದ್ದರು.
    ವಸಂತ ಕಾಲದಲ್ಲಿ ಬೀಳುವ ಮಳೆಯ ನೀರನ್ನೋ ಎಂಬಂತೆ ಅವರು ನನ್ನ ಮಾತುಗಳನ್ನು ಕುಡಿಯುತ್ತಿದ್ದರು.
24 ನಾನು ಅವರನ್ನು ಕಂಡು ಮುಗುಳ್ನಗೆ ಬೀರಿದಾಗ ಅವರಿಗೆ ನಂಬುವುದಕ್ಕೇ ಆಗುತ್ತಿರಲಿಲ್ಲ.
    ನನ್ನ ಸಂತೋಷದ ಮುಖವು ಅವರನ್ನು ಪ್ರೋತ್ಸಾಹಗೊಳಿಸಿತು.
25 ನಾನು ನಾಯಕನಾಗಿದ್ದರೂ ಅವರೊಂದಿಗೇ ಇರುತ್ತಿದ್ದೆನು;
    ಪಾಳೆಯದಲ್ಲಿ ಸೈನ್ಯಗಳೊಂದಿಗಿರುವ ರಾಜನಂತೆ ನಾನು ದುಃಖಿತರನ್ನು ಆದರಿಸುತ್ತಿದ್ದೆನು.
30 “ಈಗಲಾದರೋ, ನನಗಿಂತ ಚಿಕ್ಕವರೂ ನನ್ನನ್ನು ಗೇಲಿ ಮಾಡುತ್ತಾರೆ.
    ಅವರ ತಂದೆಗಳನ್ನು ನನ್ನ ಕುರಿಕಾಯುವ ನಾಯಿಗಳಿಗೂ ಯೋಗ್ಯರಲ್ಲವೆಂದು ತಳ್ಳಿಬಿಟ್ಟಿದ್ದೆನು.
ಆ ಯೌವನಸ್ಥರ ತಂದೆಗಳಿಗೆ ನನ್ನಲ್ಲಿ ಕೆಲಸ ಮಾಡುವಷ್ಟು ಬಲವಿರಲಿಲ್ಲ.
    ಅವರು ಮುದುಕರಾಗಿದ್ದರು; ತ್ರಾಣವಿಲ್ಲದವರಾಗಿದ್ದರು.
ಆ ಮನುಷ್ಯರು ಬಡಕಲಾಗಿದ್ದರು; ತಿನ್ನಲಿಕ್ಕಿಲ್ಲದೆ ಹಸಿವೆಯಿಂದಿದ್ದರು;
    ಅಡವಿಯ ಒಣಧೂಳನ್ನು ತಿನ್ನುತ್ತಿದ್ದರು.
ಅವರು ಮರುಭೂಮಿಯಲ್ಲಿ ಉಪ್ಪುಸಸಿಗಳನ್ನು ಕೀಳುತ್ತಿದ್ದರು;
    ಕುರುಚಲು ಮರದ ಬೇರುಗಳನ್ನು ತಿನ್ನುತ್ತಿದ್ದರು.
ಅವರನ್ನು ಬೇರೆಯವರು ಬಲವಂತದಿಂದ ಹೊರಗಟ್ಟುತ್ತಿದ್ದರು.
    ಕಳ್ಳರನ್ನೋ ಎಂಬಂತೆ ಜನರು ಅವರನ್ನು ಕಂಡು ಕೂಗಿಕೊಳ್ಳುತ್ತಿದ್ದರು.
ಆ ಮುದುಕರು ನದಿಯ ದಂಡೆಗಳಲ್ಲಿಯೂ ನೆಲದ ಕುಳಿಗಳಲ್ಲಿಯೂ
    ಗುಹೆಗಳಲ್ಲಿಯೂ ವಾಸಿಸುತ್ತಿದ್ದರು.
ಅವರು ಪೊದೆಗಳಲ್ಲಿ ಕಾಡುಕತ್ತೆಗಳಂತೆ ಅರಚುತ್ತಿದ್ದರು;
    ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
ಅಯೋಗ್ಯರಾಗಿದ್ದ ಈ ಗುಂಪಿನವರು
    ದೇಶಭ್ರಷ್ಟರಾಗಿದ್ದರು.

“ಈಗಲಾದರೋ ಅವರ ಗಂಡುಮಕ್ಕಳು ನನ್ನ ಮೇಲೆ ಗೇಲಿ ಹಾಡುಗಳನ್ನು ಕಟ್ಟುವರು;
    ನನ್ನ ಹೆಸರು ಅವರಿಗೆ ಹಾಸ್ಯವಾಯಿತು.
10 ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ.
    ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!
11 ದೇವರು ನನ್ನ ಬಿಲ್ಲಿನ ತಂತಿಯನ್ನು ಕಿತ್ತು ನನ್ನನ್ನು ಬಲಹೀನಗೊಳಿಸಿದ್ದಾನೆ.
    ಆ ಯೌವನಸ್ಥರು ಕಡಿವಾಣವಿಲ್ಲದವರಾಗಿ ಕೋಪದಿಂದ ನನಗೆ ವಿರೋಧವಾಗಿ ಎದ್ದಿದ್ದಾರೆ.
12 ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ
    ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
13 ನಾನು ತಪ್ಪಿಸಿಕೊಂಡು ಹೋಗುವ ದಾರಿಯನ್ನು ಆ ಯೌವನಸ್ಥರು ಕಾಯುತ್ತಿದ್ದಾರೆ.
    ನನ್ನನ್ನು ನಾಶಮಾಡುವುದರಲ್ಲಿ ಅವರು ಯಶಸ್ವಿಯಾಗುವರು.
    ಅವರಿಗೆ ವಿರುದ್ಧವಾಗಿ ನನಗೆ ಸಹಾಯಮಾಡಲು ಯಾರೂ ಇಲ್ಲ.
14 ಅವರು ಗೋಡೆಯನ್ನು ಒಡೆದು ನುಗ್ಗಿಬರಲು
    ಕಲ್ಲುಗಳು ನನ್ನ ಮೇಲೆ ಬೀಳುವವು.
15 ನಾನು ಭಯದಿಂದ ನಡುಗುತ್ತಿರುವೆ.
    ಗಾಳಿಯು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಆ ಯೌವನಸ್ಥರು ನನ್ನ ಮಾನವನ್ನು ಅಟ್ಟಿಬಿಡುವರು.
    ನನ್ನ ಸುರಕ್ಷತೆಯು ಮೋಡದಂತೆ ಕಾಣದೆಹೋಗುವುದು.

16 “ಈಗ ನನ್ನ ಜೀವಿತವು ಕೊನೆಗೊಂಡಿದೆ; ಸಾವು ಸಮೀಪವಾಗಿದೆ.
    ಸಂಕಟದ ದಿನಗಳು ನನ್ನನ್ನು ಹಿಡಿದುಕೊಂಡಿವೆ.
17 ರಾತ್ರಿಯಲ್ಲಿ ನನ್ನ ಎಲುಬುಗಳೆಲ್ಲಾ ನೋಯುತ್ತವೆ.
    ನನ್ನನ್ನು ಕಚ್ಚುತ್ತಿರುವ ನೋವು ನಿಲ್ಲುವುದೇ ಇಲ್ಲ.
18 ದೇವರು ನನ್ನ ಮೇಲಂಗಿಯ ಕೊರಳಪಟ್ಟಿಯನ್ನು ಹಿಡಿದು
    ನನ್ನ ಬಟ್ಟೆಯನ್ನು ತಿರುವಿಬಿಟ್ಟಿದ್ದಾನೆ.
19 ದೇವರು ನನ್ನನ್ನು ಮಣ್ಣಿಗೆ ಎಸೆದುಬಿಟ್ಟಿದ್ದಾನೆ,
    ನಾನು ಧೂಳಿನಂತೆಯೂ ಬೂದಿಯಂತೆಯೂ ಆಗಿದ್ದೇನೆ.

20 “ದೇವರೇ, ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ.
    ನಾನು ಎದ್ದುನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ.
21 ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ.
    ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ.
22 ದೇವರೆ, ನನ್ನನ್ನು ಎತ್ತಿಕೊಂಡು ಹೋಗಲು ನೀನು ಬಿರುಗಾಳಿಗೆ ಅವಕಾಶಕೊಟ್ಟೆ;
    ನೀನು ನನ್ನನ್ನು ಎತ್ತಿ ಬಿರುಗಾಳಿಗೆ ಎಸೆದುಬಿಟ್ಟೆ.
23 ನೀನು ನನ್ನನ್ನು ಮರಣಕ್ಕೀಡು ಮಾಡಿರುವುದು ನನಗೆ ಗೊತ್ತಿದೆ.
    ಜೀವಿಸಿರುವ ಪ್ರತಿಯೊಬ್ಬನೂ ಸಾಯಲೇಬೇಕು.

24 “ಆದರೆ ಈಗಾಗಲೇ ನಾಶವಾಗಿ ಸಹಾಯಕ್ಕಾಗಿ ಕೂಗಿಕೊಳ್ಳುವವನಿಗೆ
    ಯಾರೂ ಕೇಡುಮಾಡುವುದಿಲ್ಲ.
25 ದೇವರೇ, ಕಷ್ಟದಲ್ಲಿರುವವರಿಗಾಗಿ ನಾನು ಅತ್ತದ್ದು ನಿನಗೆ ಗೊತ್ತಿದೆ.
    ಬಡವರಿಗೋಸ್ಕರ ನನ್ನ ಹೃದಯವು ಬಹು ದುಃಖಗೊಂಡದ್ದು ನಿನಗೆ ತಿಳಿದಿದೆ.
26 ಆದರೆ ನಾನು ಒಳ್ಳೆಯವುಗಳನ್ನು ನಿರೀಕ್ಷಿಸುತ್ತಿದ್ದಾಗ ನನಗೆ ಕೇಡುಗಳೇ ಆದವು.
    ನಾನು ಬೆಳಕಿಗಾಗಿ ಎದುರುನೋಡುತ್ತಿದ್ದಾಗ ನನಗೆ ಕತ್ತಲಾಯಿತು.
27 ನನ್ನ ಅಂತರಂಗವು ಕುದಿಯುತ್ತಿದೆ; ಸಂಕಟವು ನಿಲ್ಲುತ್ತಲೇ ಇಲ್ಲ.
    ಸಂಕಟವು ಈಗ ತಾನೆ ಆರಂಭಗೊಂಡಿದೆ.
28 ನಾನು ದುಃಖಿತನೂ ಕುಂದಿಹೋದವನೂ ಆಗಿರುವೆ; ನನಗೆ ಉಪಶಮನವೇ ಇಲ್ಲ.
    ನಾನು ಸಭೆಯಲ್ಲಿ ನಿಂತುಕೊಂಡು ಸಹಾಯಕ್ಕಾಗಿ ಕೂಗುತ್ತಿರುವೆ.
29 ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ
    ಒಬ್ಬಂಟಿಗನಾಗಿರುವೆ.
30 ನನ್ನ ಚರ್ಮವು ಕಡುಕಪ್ಪಾಗಿದೆ.
    ನನ್ನ ದೇಹವು ಜ್ವರದಿಂದ ಬಿಸಿಯಾಗಿದೆ.
31 ಶೋಕಗೀತೆಗಳನ್ನು ನುಡಿಸಲು ನನ್ನ ಹಾರ್ಪ್ ವಾದ್ಯವನ್ನು ಶೃತಿ ಮಾಡಲಾಗಿದೆ.
    ನನ್ನ ಕೊಳಲು ಅಳುವವರಿಗೆ ತಕ್ಕಂತೆ ನುಡಿಯುತ್ತದೆ.
31 “ಯುವತಿಯನ್ನು ಕಾಮದಾಶೆಯಿಂದ ನೋಡುವುದಿಲ್ಲವೆಂದು
    ನನ್ನ ಕಣ್ಣುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ.
ಸರ್ವಶಕ್ತನಾದ ದೇವರು ಜನರಿಗೆ ಏನು ಮಾಡುವನು?
    ದೇವರು ತನ್ನ ಉನ್ನತವಾದ ಪರಲೋಕದಿಂದ ಜನರಿಗೆ ಹೇಗೆ ಪ್ರತಿಫಲವನ್ನು ಕೊಡುವನು?
ಆತನು ದುಷ್ಟರಿಗೆ ತೊಂದರೆಯನ್ನೂ ನಾಶನವನ್ನೂ
    ತಪ್ಪಿತಸ್ಥರಿಗೆ ವಿಪತ್ತನ್ನೂ ಕಳುಹಿಸುವನು.
ನಾನು ಮಾಡುವ ಪ್ರತಿಯೊಂದು ದೇವರಿಗೆ ಗೊತ್ತು
    ಮತ್ತು ನಾನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಆತನು ಗಮನಿಸುವನು.

“ನಾನು ಸುಳ್ಳು ಹೇಳಲಿಲ್ಲ;
    ಜನರಿಗೆ ಮೋಸಮಾಡಲು ಪ್ರಯತ್ನಿಸಲೂ ಇಲ್ಲ.
ದೇವರು ನ್ಯಾಯವಾದ ಅಳತೆಮಾನಗಳಿಂದ ನನ್ನನ್ನು ತೂಗಿದರೆ,
    ನಾನು ನಿರಪರಾಧಿಯೆಂದು ಆತನಿಗೆ ಗೊತ್ತಾಗುವುದು.
ನಾನು ನೀತಿಮಾರ್ಗವನ್ನು ಬಿಟ್ಟುಹೋಗಿದ್ದರೆ,
    ನನ್ನ ಕಣ್ಣುಗಳು ನನ್ನ ಹೃದಯವನ್ನು ಕೆಟ್ಟದ್ದಕ್ಕೆ ನಡೆಸಿದ್ದರೆ,
    ನನ್ನ ಕೈಗಳು ಪಾಪದಿಂದ ಕೊಳಕಾಗಿದ್ದರೆ,
ನಾನು ಬಿತ್ತಿ ಬೆಳೆಸಿದ ಬೆಳೆಗಳನ್ನು ಬೇರೆಯವರು ತಿನ್ನಲಿ;
    ನಾನು ಬೆಳೆಸಿದ ಸಸಿಗಳು ಕೀಳಲ್ಪಡಲಿ.

“ಒಂದುವೇಳೆ ನಾನು ಪರಸ್ತ್ರೀಯಲ್ಲಿ ಮರುಳುಗೊಂಡಿದ್ದರೆ,
    ನನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಲು ಅವನ ಮನೆಯ ಬಾಗಿಲಲ್ಲಿ ಕಾದುಕೊಂಡಿದ್ದರೆ,
10 ನನ್ನ ಹೆಂಡತಿಯು ಬೇರೊಬ್ಬನಿಗೆ ಸೇವಕಿಯಾಗಲಿ;
    ಬೇರೆಯವರು ಆಕೆಯೊಂದಿಗೆ ಮಲಗಿಕೊಳ್ಳಲಿ.
11 ಯಾಕೆಂದರೆ ವ್ಯಭಿಚಾರ ಅವಮಾನಕರ.
    ಆ ಪಾಪಕ್ಕೆ ದಂಡನೆಯಾಗಲೇಬೇಕು.
12 ವ್ಯಭಿಚಾರವು ಸುಟ್ಟು ನಾಶಮಾಡುವ ಬೆಂಕಿಯಂತಿದೆ.
    ನಾನು ಹೊಂದಿರುವ ಪ್ರತಿಯೊಂದನ್ನು ಅದು ನಾಶಮಾಡಿಬಿಡುತ್ತಿತ್ತು.

13 “ನನ್ನ ಸೇವಕಸೇವಕಿಯರು ನನಗೆ ವಿರೋಧವಾಗಿ ದೂರನ್ನು ಹೊಂದಿದ್ದಾಗ
    ನಾನು ಅವರಿಗೆ ನ್ಯಾಯವನ್ನು ದೊರಕಿಸಿಲ್ಲದಿದ್ದರೆ
14 ದೇವರು ನನ್ನನ್ನು ಮುಖಾಮುಖಿಯಾಗಿ ಸಂಧಿಸುವಾಗ ನಾನೇನು ಮಾಡಲಿ?
    ನಾನು ಮಾಡಿದ್ದಕ್ಕೆ ವಿವರಣೆ ಕೊಡುವಂತೆ ದೇವರು ನನ್ನನ್ನು ಕರೆಯುವಾಗ ನಾನೇನು ಉತ್ತರ ಕೊಡಲಿ?
15 ದೇವರು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿ ನಿರ್ಮಿಸಿದನು.
    ದೇವರು ನನ್ನ ಸೇವಕಸೇವಕಿಯರನ್ನೂ ನಿರ್ಮಿಸಿದನು.
    ದೇವರು ನಮ್ಮೆಲ್ಲರನ್ನು ನಮ್ಮ ತಾಯಂದಿರ ಗರ್ಭಗಳಲ್ಲಿ ರೂಪಿಸಿದನು.

16 “ಬಡಜನರಿಗೆ ಸಹಾಯಮಾಡಲು ನಾನೆಂದೂ ನಿರಾಕರಿಸಲಿಲ್ಲ;
    ವಿಧವೆಯರಿಗೆ ಬೇಕಾದದ್ದನ್ನೆಲ್ಲ ನಾನು ಒದಗಿಸಿಕೊಟ್ಟೆನು.
17 ನಾನು ಸ್ವಾರ್ಥದಿಂದ ನನ್ನ ಆಹಾರವನ್ನು ಎಂದೂ ಇಟ್ಟುಕೊಳ್ಳಲಿಲ್ಲ.
    ಅನಾಥರು ಹಸಿವೆಯಿಂದಿರಲು ನಾನೆಂದೂ ಅವಕಾಶ ಕೊಟ್ಟಿಲ್ಲ.
18 ನಾನು ನನ್ನ ಜೀವಮಾನವೆಲ್ಲಾ, ಅನಾಥರಿಗೆ ತಂದೆಯಂತಿದ್ದೆನು;
    ವಿಧವೆಯರನ್ನು ಪರಿಪಾಲಿಸಿದೆನು.
19 ಬಟ್ಟೆಯಿಲ್ಲದೆ ಸಂಕಟಪಡುತ್ತಿರುವವರನ್ನೂ
    ಮೇಲಂಗಿಯಿಲ್ಲದ ಬಡವರನ್ನೂ ನಾನು ಕಂಡಾಗಲೆಲ್ಲಾ
20 ಅವರಿಗೆ ಬಟ್ಟೆಗಳನ್ನು ಕೊಟ್ಟೆನು.
    ನನ್ನ ಕುರಿಗಳ ಉಣ್ಣೆಯಿಂದ ಅವರ ಮೈಯನ್ನು ಬೆಚ್ಚಗೆ ಮಾಡಿದೆನು.
    ಅವರು ನನ್ನನ್ನು ಪೂರ್ಣಹೃದಯದಿಂದ ಆಶೀರ್ವದಿಸಿದರು.
21 ನನಗೆ ನ್ಯಾಯಸ್ಥಾನದಲ್ಲಿ ಬೆಂಬಲವಿದ್ದರೂ
    ಅನಾಥರನ್ನು ಕಂಡು ನಾನೆಂದೂ ಅವರ ಮೇಲೆ ಕೈ ಮಾಡಲಿಲ್ಲ.
22 ನಾನು ಹಾಗೆ ಮಾಡಿದ್ದರೆ,
    ನನ್ನ ತೋಳು ಕೀಲುತಪ್ಪಿ ಭುಜದಿಂದ ಮುರಿದುಬೀಳಲಿ.
23 ನಾನು ಆ ಕೆಟ್ಟಕಾರ್ಯಗಳಲ್ಲಿ ಯಾವುದನ್ನೂ ಮಾಡಲಿಲ್ಲ.
    ಯಾಕೆಂದರೆ ನಾನು ದೇವರ ಶಿಕ್ಷೆಗೆ ಹೆದರಿಕೊಂಡಿದ್ದೆ.
    ಆತನ ವೈಭವದ ಎದುರಿನಲ್ಲಿ ನಿಂತುಕೊಳ್ಳಲು ನನಗಾಗಲಿಲ್ಲ.

24 “ನಾನು ನನ್ನ ಐಶ್ವರ್ಯಗಳಲ್ಲಿ ಎಂದೂ ಭರವಸವಿಡಲಿಲ್ಲ.
    ನಾನು ಬಂಗಾರಕ್ಕೆ ‘ನೀನೇ ನನ್ನ ನಿರೀಕ್ಷೆ’ ಎಂದು ಹೇಳಲೇ ಇಲ್ಲ.
25 ನನ್ನ ಐಶ್ವರ್ಯದಿಂದಲೂ ನಾನು ಗರ್ವಿಷ್ಠನಾಗಲಿಲ್ಲ.
    ನಾನು ಗಳಿಸಿದ ಅಪಾರ ಹಣವೂ ನನ್ನನ್ನು ಉಲ್ಲಾಸಪಡಿಸಲಿಲ್ಲ.
26 ಪ್ರಕಾಶಮಾನವಾದ ಸೂರ್ಯನನ್ನಾಗಲಿ
    ಸುಂದರವಾದ ಚಂದ್ರನನ್ನಾಗಲಿ ನಾನೆಂದೂ ಪೂಜಿಸಲಿಲ್ಲ.
27 ನಾನು ಮರುಳುಗೊಂಡು
    ನನ್ನ ಕೈಗೆ ಮುದ್ದಿಡುವುದರ ಮೂಲಕ ಸೂರ್ಯಚಂದ್ರರನ್ನು ಪೂಜಿಸಲಿಲ್ಲ.
28 ನಾನು ಅವುಗಳಲ್ಲಿ ಯಾವುದನ್ನೇ ಮಾಡಿದ್ದರೂ ನನಗೆ ಶಿಕ್ಷೆಯಾಗುತ್ತಿತ್ತು.
    ಯಾಕೆಂದರೆ ಆಗ ನಾನು ಸರ್ವಶಕ್ತನಾದ ದೇವರಿಗೆ ಅಪನಂಬಿಗಸ್ತನಾಗುತ್ತಿದ್ದೆನು.

29 “ನನ್ನ ವೈರಿಗಳು ನಾಶವಾದಾಗ
    ನಾನೆಂದೂ ಸಂತೋಷಪಡಲಿಲ್ಲ.
ನನ್ನ ವೈರಿಗಳಿಗೆ ಕೇಡಾದಾಗ
    ನಾನೆಂದೂ ನಗಲಿಲ್ಲ.
30 ನನ್ನ ವೈರಿಗಳನ್ನು ಶಪಿಸಿ, ಅವರಿಗೆ ಸಾವನ್ನು ಕೋರಲು
    ನಾನೆಂದೂ ನನ್ನ ಬಾಯಿಗೆ ಅವಕಾಶ ಕೊಡಲಿಲ್ಲ.
31 ನಾನು ಅಪರಿಚಿತರಿಗೆ ಯಾವಾಗಲೂ ಊಟ ಕೊಟ್ಟದ್ದು
    ನನ್ನ ಮನೆಯಲ್ಲಿರುವ ಎಲ್ಲರಿಗೂ ಗೊತ್ತಿದೆ.
32 ನಾನು ಅಪರಿಚಿತರನ್ನು ನನ್ನ ಮನೆಗೆ ಯಾವಾಗಲೂ ಆಹ್ವಾನಿಸುತ್ತಿದ್ದೆನು.
    ಆದ್ದರಿಂದ ರಾತ್ರಿಯಲ್ಲಿ ಅವರು ಬೀದಿಗಳಲ್ಲಿ ಮಲಗಿಕೊಳ್ಳಬೇಕಾಗಿರಲಿಲ್ಲ.
33 ಬೇರೆಯವರು ತಮ್ಮ ಪಾಪಗಳನ್ನು ಮರೆಮಾಡಲು ಪ್ರಯತ್ನಿಸಬಹುದು.
    ಆದರೆ ನಾನು ನನ್ನ ಯಾವ ಪಾಪವನ್ನೂ ಮರೆಮಾಡಲಿಲ್ಲ.
34 ಜನರ ಮಾತಿಗೆ ನಾನೆಂದೂ ಭಯಗೊಂಡಿರಲಿಲ್ಲ; ಯಾವ ಕುಟುಂಬದ ಅಸಮ್ಮತಿಗೂ ನಾನೆಂದೂ ಹೆದರಿಕೊಂಡಿರಲಿಲ್ಲ; ಅಂಥ ಯಾವ ಭಯವೂ ನನ್ನನ್ನು ಮೌನಗೊಳಿಸಿ ಮನೆಯೊಳಗಿರಿಸಲಿಲ್ಲ.
    ಯಾಕೆಂದರೆ ನನ್ನ ಮೇಲೆ ಜನರಿಗಿರುವ ದ್ವೇಷಕ್ಕೆ ನಾನು ಹೆದರಿಕೊಂಡಿರಲಿಲ್ಲ.

35 “ಅಯ್ಯೋ, ನನಗೆ ಕಿವಿಗೊಡುವುದಕ್ಕೆ ಯಾರಾದರೊಬ್ಬರು ಇರಬೇಕಿತ್ತು!
    ನಾನು ಸತ್ಯವನ್ನೇ ಹೇಳಿದೆನೆಂಬುದಕ್ಕೆ ಇದೋ, ಇಲ್ಲಿದೆ ನನ್ನ ಸಹಿ!
ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ.
    ನನ್ನ ಮೇಲೆ ಅಪವಾದ ಹೊರಿಸುವವನು, ಆಪಾದನೆಯ ಪತ್ರವನ್ನು ಕೊಡಲಿ!
36 ಖಂಡಿತವಾಗಿಯೂ ನಾನು ಆ ಪತ್ರವನ್ನು ನನ್ನ ಹೆಗಲ ಮೇಲೆ ಇಟ್ಟುಕೊಳ್ಳುವೆನು.
    ಅದನ್ನು ಕಿರೀಟವನ್ನಾಗಿ ಧರಿಸಿಕೊಳ್ಳುವೆನು.
37 ನಾನು ಮಾಡಿರುವ ಪ್ರತಿಯೊಂದನ್ನು ದೇವರಿಗೆ ವಿವರಿಸುವೆನು.
    ನಾನು ಅಧಿಪತಿಯಂತೆ ತಲೆಯೆತ್ತಿಕೊಂಡು ಆತನ ಸಮೀಪಕ್ಕೆ ಬರುವೆನು.

38 “ನನ್ನ ಹೊಲವನ್ನು ಬೇರೆಯವರಿಂದ ಕಿತ್ತುಕೊಳ್ಳಲಿಲ್ಲ;
    ಈ ವಿಷಯದಲ್ಲಿ ಯಾರೂ ನನ್ನ ಮೇಲೆ ಅಪವಾದ ಹೊರಿಸಲಾರರು.
39 ನಾನು ರೈತರಿಗೆ ಬೆಳೆಯಲ್ಲಿ ಪಾಲು ಕೊಟ್ಟೆನು;
    ಯಾರೂ ಹಸಿವೆಯಿಂದ ಇರಲು ಬಿಡಲಿಲ್ಲ.
40 ಇವುಗಳಲ್ಲಿ ನಾನು ಯಾವುದನ್ನಾದರೂ ಮಾಡಿದ್ದರೆ,
    ಗೋಧಿ ಮತ್ತು ಬಾರ್ಲಿಗಳ ಬದಲಾಗಿ ನನ್ನ ಹೊಲಗಳಲ್ಲಿ ಮುಳ್ಳುಗಳೂ ಕಳೆಗಳೂ ಬೆಳೆಯಲಿ.”

ಹೀಗೆ ಯೋಬನ ಮಾತುಗಳು ಮುಗಿದವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International