Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 18-21

ಅನ್ಯಜನಾಂಗಗಳ ಮೇಲೆ ದಾವೀದನ ಜಯ

18 ಅನಂತರ ದಾವೀದನು ಫಿಲಿಷ್ಟಿಯರ ಮೇಲೆ ಯುದ್ಧಕ್ಕೆ ಹೋದನು. ಅವರನ್ನು ಸೋಲಿಸಿ ಗತ್ ಪಟ್ಟಣ ಮತ್ತು ಅದರ ಸುತ್ತಮುತ್ತಲಿದ್ದ ಊರುಗಳನ್ನು ವಶಪಡಿಸಿಕೊಂಡನು.

ಅನಂತರ ದಾವೀದನು ಮೋವಾಬ್ಯರ ಸಂಗಡ ಯುದ್ಧಮಾಡಿ ಸೋಲಿಸಿದನು. ಅವರು ದಾವೀದನ ಸೇವಕರಾಗಿ ಕಪ್ಪ ಕೊಡಬೇಕಾಯಿತು.

ದಾವೀದನು ಚೋಬದ ಅರಸನಾದ ಹದದೆಜರನ ಸೈನ್ಯದೊಡನೆ ಕಾದಾಡಿ ಅವರನ್ನು ಹಮಾತಿನ ತನಕ ಹಿಂದಟ್ಟಿದನು. ಹದದೆಜರನು ತನ್ನ ರಾಜ್ಯವನ್ನು ಯೂಫ್ರೇಟೀಸ್ ನದಿಯ ತನಕ ವಿಸ್ತರಿಸಲು ಪ್ರಯತ್ನಿಸುತ್ತಿದ್ದನು. ಹದದೆಜರನಿಂದ ದಾವೀದನು ಒಂದು ಸಾವಿರ ರಥಗಳನ್ನೂ ಏಳು ಸಾವಿರ ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು ಹದದೆಜರನ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ಆ ಕುದುರೆಗಳು ರಥಗಳನ್ನು ಎಳೆಯದಂತೆ ಮಾಡಿದನು. ಆದರೆ ನೂರು ರಥಗಳನ್ನು ಎಳೆಯಲು ಬೇಕಾಗುವಷ್ಟು ಕುದುರೆಗಳನ್ನು ಉಳಿಸಿದನು.

ಹದದೆಜರನಿಗೆ ದಮಸ್ಕದಲ್ಲಿರುವ ಅರಾಮ್ಯರು ಸಹಾಯಕ್ಕೆ ಬಂದರು. ಆದರೆ ದಾವೀದನು ಅರಾಮ್ಯರ ಸೈನ್ಯವನ್ನು ಸೋಲಿಸಿ ಅವರ ಇಪ್ಪತ್ತೆರಡು ಸಾವಿರ ಮಂದಿ ಸೈನಿಕರನ್ನು ಕೊಂದನು. ನಂತರ ಅರಾಮ್ಯರ ದಮಸ್ಕದಲ್ಲಿ ತನ್ನ ಕೋಟೆಯನ್ನು ಸ್ಥಾಪಿಸಿದನು. ಅರಾಮ್ಯರು ದಾವೀದನ ಸೇವಕರಾಗಿ ಅವನಿಗೆ ಕಪ್ಪಕಾಣಿಕೆಯನ್ನು ತಂದೊಪ್ಪಿಸುತ್ತಿದ್ದರು. ಹೀಗೆ ದಾವೀದನು ಹೋದ ಕಡೆಯಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.

ಹದದೆಜರನ ಸೇನಾಧಿಪತಿಗಳು ಉಪಯೋಗಿಸುತ್ತಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಜೆರುಸಲೇಮಿಗೆ ತಂದನು. ಅಲ್ಲದೆ ಟಿಭತ್ ಮತ್ತು ಕೂನ್ ಪಟ್ಟಣಗಳಿಂದ ಬಹಳ ತಾಮ್ರವನ್ನು ತೆಗೆದುಕೊಂಡನು. ಇವುಗಳಿಂದ ಸೊಲೊಮೋನನು ತಾಮ್ರದ ತೊಟ್ಟಿ, ತಾಮ್ರದ ಕಂಬ ಮತ್ತು ದೇವಾಲಯದ ಬೇರೆ ಸಾಮಾಗ್ರಿಗಳನ್ನು ಮಾಡಿಸಿದನು.

ದಾವೀದನು ಹದದೆಜರನನ್ನು ಸದೆಬಡಿದನೆಂದು ತಿಳಿದ ಹಮಾತಿನ ಅರಸನಾದ ತೋವನು 10 ತನ್ನ ಮಗನಾದ ಹದೋರಾಮನನ್ನು ದಾವೀದನ ಬಳಿಗೆ ಸಮಾಧಾನಕ್ಕಾಗಿಯೂ ಆಶೀರ್ವದಿಸುವುದಕ್ಕಾಗಿಯೂ ಕಳುಹಿಸಿದನು; ಯಾಕೆಂದರೆ ದಾವೀದನು ಹದದೆಜರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದನು. ಹದದೆಜರನು ತೋವನೊಂದಿಗೆ ಯುದ್ಧ ಮಾಡಿದ್ದನು. ಹದೋರಾಮನು ಬೆಳ್ಳಿಬಂಗಾರಗಳ ಮತ್ತು ತಾಮ್ರಗಳ ವಸ್ತುಗಳನ್ನು ದಾವೀದನಿಗೆ ಕೊಟ್ಟನು. 11 ದಾವೀದ ರಾಜನು ಅವುಗಳನ್ನು ಶುದ್ಧೀಕರಿಸಿ ಯೆಹೋವನಿಗೆ ಪ್ರತಿಷ್ಠಿಸಿದನು. ಅದೇ ರೀತಿಯಾಗಿ ಎದೋಮ್ಯರಿಂದ, ಮೋವಾಬ್ಯರಿಂದ, ಫಿಲಿಷ್ಟಿಯರಿಂದ, ಅಮಾಲೇಕ್ಯರಿಂದ ಮತ್ತು ಅಮ್ಮೋನಿಯರಿಂದ ತೆಗೆದುಕೊಂಡಿದ್ದ ಬೆಳ್ಳಿಬಂಗಾರದ ವಸ್ತುಗಳನ್ನು ಶುದ್ಧಿಮಾಡಿ ದೇವರಿಗೆ ಪ್ರತಿಷ್ಠಿಸಿದನು.

12 ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಒಮ್ಮೆ ಹದಿನೆಂಟು ಸಾವಿರ ಮಂದಿ ಎದೋಮ್ಯರನ್ನು ಕೊಂದುಹಾಕಿದನು. 13 ಅಬ್ಷೈಯು ಎದೋಮಿನಲ್ಲಿ ಕೋಟೆಯನ್ನು ಕಟ್ಟಿ ಎದೋಮ್ಯರೆಲ್ಲರನ್ನು ದಾವೀದನ ಸೇವಕರನ್ನಾಗಿ ಮಾಡಿದನು. ದಾವೀದನು ಹೋದಕಡೆಗಳಲ್ಲೆಲ್ಲಾ ಯೆಹೋವನು ಅವನಿಗೆ ಜಯವನ್ನು ಕೊಟ್ಟನು.

ದಾವೀದನ ಮುಖ್ಯಾಧಿಕಾರಿಗಳು

14 ಇಸ್ರೇಲರೆಲ್ಲರಿಗೆ ಅರಸನಾಗಿದ್ದ ದಾವೀದನು ಪಕ್ಷಪಾತವಿಲ್ಲದೆ ನ್ಯಾಯತೀರಿಸುತ್ತಿದ್ದನು. 15 ಚೆರೂಯಳ ಮಗನಾದ ಯೋವಾಬನು ಅವನ ಪ್ರಧಾನ ಸೇನಾಪತಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಲೇಖಕನಾಗಿದ್ದು ದಾವೀದನ ಚರಿತ್ರೆಯನ್ನು ಬರೆದಿಟ್ಟನು. 16 ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಬೀಮೆಲೆಕನೂ ಯಾಜಕರಾಗಿದ್ದರು. ಶವ್ಷನು ಲೇಖಕನಾಗಿದ್ದನು. 17 ಕೆರೇತ್ಯ ಮತ್ತು ಪೆಲೇತ್ಯ ಎಂಬ ಕಾವಲುದಂಡುಗಳಿಗೆ ಬೆನಾಯನು ಅಧಿಕಾರಿಯಾಗಿದ್ದನು. ಬೆನಾಯನು ಯೆಹೋಯಾದನ ಮಗ. ದಾವೀದನ ಗಂಡುಮಕ್ಕಳು ಮುಖ್ಯ ಸ್ಥಾನಗಳಲ್ಲಿದ್ದು ದಾವೀದನ ಸೇವೆಮಾಡುತ್ತಿದ್ದರು.

ಅಮ್ಮೋನಿಯರು ದಾವೀದನ ಜನರನ್ನು ಅವಮಾನಪಡಿಸಿದ್ದು

19 ನಾಹಾಷನು ಅಮ್ಮೋನಿಯರ ಅರಸನಾಗಿದ್ದನು. ಅವನು ಸತ್ತ ಬಳಿಕ ಅವನ ಮಗನು ಪಟ್ಟಕ್ಕೆ ಬಂದನು. ದಾವೀದನು, “ನಾಹಾಷನು ನನಗೆ ದಯೆ ತೋರಿಸಿದ್ದನು. ಅವನ ಮಗನಾದ ಹಾನೂನನಿಗೆ ನಾನೂ ದಯೆತೋರುವೆನು” ಎಂದು ಹೇಳಿ ಹಾನೂನನನ್ನು ಸಂತೈಸಲು ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನ್ ದೇಶಕ್ಕೆ ಹೋಗಿ ದುಃಖದಲ್ಲಿದ್ದ ಹಾನೂನನನ್ನು ಸಂತೈಸಿದರು.

ಆದರೆ ಅಮ್ಮೋನಿಯರ ನಾಯಕರು ಹಾನೂನನಿಗೆ, “ಮೋಸ ಹೋಗಬೇಡ, ದಾವೀದನು ನಿನ್ನ ತಂದೆಯನ್ನು ಗೌರವಿಸಿ ನಿನ್ನನ್ನು ಸಂತೈಸಲು ಸೇವಕರನ್ನು ಕಳುಹಿಸಿದನೆಂದು ಭಾವಿಸಿಕೊಂಡಿರುವೆಯಾ? ಇಲ್ಲ, ಅವನು ನಿನ್ನ ರಾಜ್ಯದಲ್ಲಿ ಹೊಂಚುಹಾಕಲೂ ವಿಷಯಗಳನ್ನು ಸಂಗ್ರಹಿಸಲೂ ಕಳುಹಿಸಿದ್ದಾನೆ” ಎಂದು ಹೇಳಿದರು. ಆಗ ಹಾನೂನನು ದಾವೀದನ ಸೇವಕರನ್ನು ಬಂಧಿಸಿ ಅವರ ಗಡ್ಡಗಳನ್ನು ಬೋಳಿಸಿ ಅವರ ವಸ್ತ್ರಗಳನ್ನು ಸೊಂಟದಿಂದ ಕೆಳಭಾಗದವರೆಗೆ ಕತ್ತರಿಸಿಬಿಟ್ಟು ಅವರನ್ನು ಹಿಂದಕ್ಕೆ ಕಳುಹಿಸಿದನು.

ದಾವೀದನ ಸೇವಕರು ತಮ್ಮ ಮನೆಗೆ ಹಿಂದಿರುಗಲು ನಾಚಿಕೆಪಟ್ಟರು. ಇದನ್ನು ಅರಿತ ಕೆಲವರು ದಾವೀದನ ಬಳಿಗೆ ಹೋಗಿ ನಡೆದದ್ದನ್ನು ತಿಳಿಸಿದರು. ಆಗ ದಾವೀದನು, “ನೀವು ನಿಮ್ಮ ಗಡ್ಡ ಬೆಳೆಯುವ ತನಕ ಜೆರಿಕೊ ಪಟ್ಟಣದಲ್ಲಿಯೇ ಇರಿ. ಅನಂತರ ನೀವು ಮನೆಗೆ ಬರಬಹುದು” ಎಂದು ತನ್ನ ಸೇವಕರಿಗೆ ಹೇಳಿಕಳುಹಿಸಿದನು.

ದಾವೀದನು ತಮಗೆ ಶತ್ರುವಾದನೆಂದು ಅಮ್ಮೋನಿಯರಿಗೆ ತಿಳಿದಾಗ ಹಾನೂನನು ಮೂವತ್ನಾಲ್ಕು ಸಾವಿರ ಕಿಲೋಗ್ರಾಂ ತೂಕದ ಬೆಳ್ಳಿಯನ್ನು ಕೊಟ್ಟು ಮೆಸೊಪೊಟೆಮಿಯಾದಿಂದ ರಥಗಳನ್ನೂ ರಾಹುತರನ್ನೂ ಕೊಂಡುಕೊಂಡನು. ಅಲ್ಲದೆ ಅರಾಮದ ಮಾಕ ಮತ್ತು ಚೋಬಾ ಪಟ್ಟಣಗಳಿಂದ ರಥಗಳನ್ನು ಮತ್ತು ರಾಹುತರನ್ನು ಕೊಂಡುಕೊಂಡನು. ಹೀಗೆ ಅಮ್ಮೋನಿಯರು ಮೂವತ್ತೆರಡು ಸಾವಿರ ರಥಗಳಿಂದ ಯುದ್ಧಕ್ಕೆ ಸಜ್ಜಾದರು. ಅಲ್ಲದೆ ಮಾಕಾದ ಅರಸನಿಗೆ ಹಣವನ್ನು ಕೊಟ್ಟು ಅವನ ಸೈನ್ಯವನ್ನೂ ತಮ್ಮ ಸಹಾಯಕ್ಕೆ ಬರಮಾಡಿದರು. ಮಾಕದ ಅರಸನೂ ಅವನ ಸೈನಿಕರೂ ಬಂದು ಮೇದೆಬ ಪಟ್ಟಣದ ಬಳಿ ಪಾಳೆಯ ಮಾಡಿಕೊಂಡರು. ಇತ್ತ ಅಮ್ಮೋನಿಯರೂ ಯುದ್ಧಸನ್ನದ್ಧರಾದರು.

ಇದನ್ನು ಕೇಳಿದ ದಾವೀದನು ಯೋವಾಬನನ್ನೂ ತನ್ನ ಸಮಸ್ತ ಸೈನ್ಯವನ್ನೂ ಅವರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಅಮ್ಮೋನಿಯರು ತಮ್ಮ ಪಟ್ಟಣದಿಂದ ಹೊರಬಂದರು. ಅವರ ಸಹಾಯಕ್ಕಾಗಿ ಬಂದಿದ್ದ ಅರಸರು ಪ್ರತ್ಯೇಕವಾಗಿಯೇ ಇದ್ದರು.

10 ಯೋವಾಬನು ರಣರಂಗವನ್ನು ವೀಕ್ಷಿಸಿದಾಗ ಎರಡು ಗುಂಪಿನ ಸೈನ್ಯಗಳಿದ್ದದ್ದನ್ನು ಕಂಡನು. ಒಂದು ಗುಂಪು ಅವನ ಮುಂಭಾಗದಲ್ಲಿಯೂ ಇನ್ನೊಂದು ಗುಂಪು ಅವನ ಹಿಂಭಾಗದಲ್ಲಿಯೂ ಇದ್ದವು. ಆಗ ಯೋವಾಬನು ತನ್ನಲ್ಲಿದ್ದ ರಣವೀರರನ್ನು ಆರಿಸಿ ಅರಾಮ್ಯರ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. 11 ಉಳಿದ ಸೈನಿಕರನ್ನು ಅಬ್ಷೈಯನ ನಾಯಕತ್ವದಲ್ಲಿ ಇರಿಸಿದನು. ಅಬ್ಷೈಯು ಯೋವಾಬನ ತಮ್ಮನು. ಈ ಸೈನಿಕರು ಅಮ್ಮೋನಿಯರ ವಿರುದ್ಧವಾಗಿ ಯುದ್ಧಕ್ಕೆ ಹೊರಟರು. 12 ಯೋವಾಬನು ಅಬ್ಷೈಗೆ, “ಅರಾಮ್ಯರ ಸೈನ್ಯವು ನನಗಿಂತ ಬಲಿಷ್ಠವಾಗಿದ್ದರೆ, ನೀನು ನನ್ನ ಸಹಾಯಕ್ಕೆ ಬರಬೇಕು. ಅಮ್ಮೋನಿಯರ ಸೈನ್ಯವು ನಿನಗಿಂತ ಬಲಿಷ್ಠವಾಗಿದ್ದರೆ ನಾನು ನಿನ್ನ ಸಹಾಯಕ್ಕೆ ಬರುವೆನು. 13 ನಾವು ಧೈರ್ಯಶಾಲಿಗಳಾಗಿದ್ದು ಅಂಜದೆ ನಮ್ಮ ಜನರಿಗಾಗಿಯೂ ನಮ್ಮ ದೇವರ ಪಟ್ಟಣಗಳಿಗಾಗಿಯೂ ಯುದ್ಧಮಾಡೋಣ. ಯೆಹೋವನು ತನ್ನ ಚಿತ್ತದಂತೆ ನಮ್ಮನ್ನು ನಡೆಸಲಿ” ಎಂದು ಹೇಳಿದನು.

14 ಯೋವಾಬನು ತನ್ನ ಸೈನ್ಯದೊಡನೆ ಅರಾಮ್ಯರ ಸೈನ್ಯದ ಮೇಲೆ ದಾಳಿ ಮಾಡಿದನು. ಅರಾಮ್ಯರ ಸೈನ್ಯವು ಅವನೆದುರಿನಿಂದ ಓಡಿಹೋಯಿತು. 15 ಅರಾಮ್ಯರ ಸೈನ್ಯವು ಓಡಿಹೋಗುವುದನ್ನು ನೋಡಿದ ಅಮ್ಮೋನಿಯರು ಸಹ ಇಸ್ರೇಲರ ಎದುರಿನಿಂದ ಹಿಂತಿರಿಗಿ ಓಡಿದರು. ಅಬ್ಷೈ ಮತ್ತು ಅವನ ಸೈನಿಕರಿಂದ ಅವರು ಪಲಾಯನಗೈದು ತಮ್ಮ ಪಟ್ಟಣದೊಳಗೆ ಸೇರಿಕೊಂಡರು. ಯೋವಾಬನು ಜೆರುಸಲೇಮಿಗೆ ಹೋದನು.

16 ಅರಾಮ್ಯರು ತಾವು ಇಸ್ರೇಲರಿಂದ ಸೋತುಹೋದದ್ದನ್ನು ನೋಡಿ ಯೂಫ್ರೇಟೀಸ್ ನದಿಯ ಪೂರ್ವದಲ್ಲಿದ್ದ ಅರಾಮ್ಯರನ್ನು ಸಹಾಯಕ್ಕಾಗಿ ಕರೆಯಿಸಿದರು. ಶೋಫಕನು ಹದದೆಜರನ ಸೇನಾಧಿಪತಿಯಾಗಿದ್ದನು.

17 ಅರಾಮ್ಯರು ಯುದ್ಧಕ್ಕೆ ಜನಕೂಡಿಸುತ್ತಾರೆಂಬ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರೇಲ್ ಸೈನ್ಯವನ್ನು ಒಟ್ಟುಗೂಡಿಸಿ ಜೋರ್ಡನ್ ನದಿಯನ್ನು ದಾಟಿ ಅರಾಮ್ಯರೊಂದಿಗೆ ಯುದ್ಧಮಾಡಿದನು. ಯುದ್ಧಸನ್ನದ್ಧರಾಗಿ ಕಾಳಗವನ್ನು ಆರಂಭಿಸಿಯೇ ಬಿಟ್ಟರು. 18 ಅರಾಮ್ಯರು ಇಸ್ರೇಲರ ಎದುರು ನಿಲ್ಲಲಾರದೆ ಬೆನ್ನುಹಾಕಿ ಓಡಿದರು. ಆ ದಿವಸ ದಾವೀದನೂ ಅವನ ಸೈನಿಕರೂ ಅರಾಮ್ಯರ ಏಳು ಸಾವಿರ ಮಂದಿ ರಾಹುತರನ್ನೂ ನಲವತ್ತು ಸಾವಿರ ಮಂದಿ ಕಾಲಾಳುಗಳನ್ನೂ ಕೊಂದರು. ಇವರಲ್ಲಿ ಅರಾಮ್ಯರ ಸೇನಾಪತಿಯಾದ ಶೋಫಕನೂ ಕೊಲ್ಲಲ್ಪಟ್ಟನು.

19 ಹದದೆಜರನು ತಾನು ದಾವೀದನ ಸೈನ್ಯದಿಂದ ಸೋಲಿಸಲ್ಪಟ್ಟನೆಂದು ಗೊತ್ತಾದಾಗ ದಾವೀದನೊಂದಿಗೆ ಸಂಧಾನ ಮಾಡಿ ಅವನ ಸೇವಕನಾದನು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯ ಮಾಡುವುದನ್ನು ನಿರಾಕರಿಸಿದರು.

ಅಮ್ಮೋನಿಯರನ್ನು ಯೋವಾಬನು ನಾಶಮಾಡಿದ್ದು

20 ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋವಾಬನೂ ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಇಸ್ರೇಲಿನ ಸೈನ್ಯವು ಅಮ್ಮೋನ್ ದೇಶದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆಮೇಲೆ ರಬ್ಬ ಪಟ್ಟಣಕ್ಕೆ ಮುತ್ತಿಗೆಹಾಕಿ ಸಂಪೂರ್ಣವಾಗಿ ನಾಶಮಾಡಿದರು.

ಅದರ ಅರಸನ ಕಿರೀಟವನ್ನು ದಾವೀದನು ತೆಗೆದುಕೊಂಡನು. ಅದು ಎಪ್ಪತ್ತೈದು ಪೌಂಡು ಭಾರವುಳ್ಳದ್ದಾಗಿತ್ತು ಮತ್ತು ಅಮೂಲ್ಯವಾದ ರತ್ನಗಳಿಂದ ಮಾಡಿದ್ದಾಗಿತ್ತು. ಆ ಕಿರೀಟವನ್ನು ದಾವೀದನು ತನ್ನ ತಲೆಯ ಮೇಲೆ ಇಟ್ಟುಕೊಂಡನು. ಆ ಪಟ್ಟಣದಿಂದ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ದಾವೀದನು ರಬ್ಬದ ಜನರನ್ನು ಸೆರೆಹಿಡಿದುಕೊಂಡು ಬಂದು ಅವರನ್ನು ಮರಕಡಿಯುವುದಕ್ಕೂ ಕೊಡಲಿ ಮತ್ತು ಹಾರೆಗಳಿಂದ ಕೆಲಸ ಮಾಡುವದಕ್ಕೂ ನೇಮಿಸಿದನು. ಇದೇ ಪ್ರಕಾರ ದಾವೀದನು ಅಮ್ಮೋನಿಯರ ಎಲ್ಲಾ ಪಟ್ಟಣಗಳಲ್ಲಿಯೂ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂತಿರುಗಿ ಬಂದನು.

ಫಿಲಿಷ್ಟಿಯರ ದೈತ್ಯರನ್ನು ಕೊಂದದ್ದು

ಇದಾದ ಬಳಿಕ ಇಸ್ರೇಲರು ಗೆಜೆರಿನಲ್ಲಿ ಫಿಲಿಷ್ಟಿಯರ ಜೊತೆಯಲ್ಲಿ ಯುದ್ಧಮಾಡಿದರು. ಹುಷಯದವನಾದ ಸಿಬ್ಬೆಕೈ ಎಂಬವನು, ದೈತ್ಯನ ಮಗನಾದ ಸಿಪ್ಪೈ ಎಂಬವನನ್ನು ಕೊಂದನು. ಇದರಿಂದಾಗಿ ಫಿಲಿಷ್ಟಿಯರು ಇಸ್ರೇಲರಿಗೆ ಸೇವೆಮಾಡುವವರಾದರು.

ಇನ್ನೊಂದು ಸಾರಿ, ಇಸ್ರೇಲರು ಫಿಲಿಷ್ಟಿಯರೊಂದಿಗೆ ತಿರುಗಿ ಯುದ್ಧಮಾಡುವಾಗ ಯಾಯೀರನ ಮಗನಾದ ಎಲ್ಹಾನಾನನು ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಗೊಲ್ಯಾತನು ಗತ್ ಪಟ್ಟಣದವನಾಗಿದ್ದನು. ಲಹ್ಮೀಯ ಈಟಿಯು ಬಹು ಭಾರವಾಗಿತ್ತು. ಕೈಮಗ್ಗದ ದೊಡ್ಡ ಕುಂಟೆಯಷ್ಟಿತ್ತು.

ಇದಾದನಂತರ ಇನ್ನೊಂದು ಯುದ್ಧವನ್ನು ಇಸ್ರೇಲರು ಫಿಲಿಷ್ಟಿಯರೊಂದಿಗೆ ಗತ್ ಊರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನಾಗಿದ್ದನು. ಇವನು ಇಸ್ರೇಲರನ್ನು ಪರಿಹಾಸ್ಯ ಮಾಡಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.

ಗತ್ ಊರಿನ ರೆಫಾಯರನ್ನು ದಾವೀದನೂ ಅವನ ಜನರೂ ಕೊಂದುಹಾಕಿದರು.

ಇಸ್ರೇಲರನ್ನು ಲೆಕ್ಕಿಸಿ ದಾವೀದನು ಪಾಪಮಾಡಿದನು

21 ಸೈತಾನನು ಇಸ್ರೇಲರಿಗೆ ವಿರುದ್ಧವಾಗಿದ್ದನು. ಅವನು ಇಸ್ರೇಲರನ್ನು ಲೆಕ್ಕಿಸುವಂತೆ ದಾವೀದನನ್ನು ಪ್ರೇರೇಪಿಸಿದನು. ದಾವೀದನು ಯೋವಾಬನನ್ನೂ ಇಸ್ರೇಲರ ಇತರ ಅಧಿಪತಿಗಳನ್ನೂ ಕರೆದು ಅವರಿಗೆ, “ದೇಶದೊಳಕ್ಕೆ ಹೋಗಿ ಇಸ್ರೇಲರೆಲ್ಲರನ್ನು ಲೆಕ್ಕಿಸಿರಿ. ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣ ತನಕ ಎಲ್ಲಾ ಊರುಗಳನ್ನು ಸಂಚರಿಸಿ ಜನರನ್ನು ಲೆಕ್ಕಿಸಿರಿ. ಆಗ ನನಗೆ ನನ್ನ ರಾಜ್ಯದ ಜನಸಂಖ್ಯೆಯು ತಿಳಿಯುವದು” ಅಂದನು.

ಅದಕ್ಕೆ ಉತ್ತರವಾಗಿ ಯೋವಾಬನು, “ಯೆಹೋವನು ತನ್ನ ಜನಾಂಗವನ್ನು ನೂರುಪಟ್ಟು ಅಭಿವೃದ್ಧಿಪಡಿಸಲಿ. ಅರಸನೇ, ನೀನು ಈ ಕಾರ್ಯವನ್ನು ಯಾಕೆ ಮಾಡಿಸಬೇಕು? ಹೀಗೆ ಮಾಡಿದರೆ ನೀನು ಎಲ್ಲಾ ಇಸ್ರೇಲರನ್ನು ಪಾಪದಲ್ಲಿ ಬೀಳುವಂತೆ ಮಾಡುತ್ತಿರುವೆ” ಎಂದು ಹೇಳಿದನು.

ಆದರೆ ಅರಸನಾದ ದಾವೀದನು ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ದಾವೀದನು ಹೇಳಿದಂತೆಯೇ ಯೋವಾಬನು ಮಾಡಬೇಕಾಯಿತು. ಯೋವಾಬನು ದೇಶದ ಎಲ್ಲಾ ಕಡೆಗಳಿಗೆ ಹೋಗಿ ಜನರನ್ನು ಲೆಕ್ಕಿಸಿ ಜೆರುಸಲೇಮಿಗೆ ಬಂದನು. ಅರಸನಿಗೆ ಜನಗಣತಿಯ ಲೆಕ್ಕ ಒಪ್ಪಿಸಿದನು. ಇಸ್ರೇಲಿನಲ್ಲಿ ಒಟ್ಟು ಹನ್ನೊಂದು ಲಕ್ಷ ಮಂದಿ ಖಡ್ಗ ಉಪಯೋಗಿಸುವವರು ಇದ್ದರು. ಯೆಹೂದದಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ ಮಂದಿ ಖಡ್ಗ ಉಪಯೋಗಿಸುವವರಿದ್ದರು. ಯೋವಾಬನು ಲೇವಿ ಕುಲದವರನ್ನು ಮತ್ತು ಬೆನ್ಯಾಮೀನನ ಕುಲದವರನ್ನು ಜನಗಣತಿಯಲ್ಲಿ ಸೇರಿಸಲಿಲ್ಲ; ಯಾಕೆಂದರೆ ದಾವೀದನ ಆಜ್ಞೆಯು ಅವನಿಗೆ ಸರಿಕಾಣಲಿಲ್ಲ; ದೇವರ ದೃಷ್ಟಿಯಲ್ಲಿ ದಾವೀದನು ದೊಡ್ಡ ತಪ್ಪು ಕೆಲಸವನ್ನು ಮಾಡಿದನು. ಆದ್ದರಿಂದ ದೇವರು ಇಸ್ರೇಲನ್ನು ಶಿಕ್ಷಿಸಿದನು.

ಇಸ್ರೇಲಿಗೆ ದೇವರ ದಂಡನೆ

ದಾವೀದನು ದೇವರಿಗೆ, “ನಾನು ಕೇವಲ ಹುಚ್ಚು ಕೆಲಸ ಮಾಡಿದೆನು. ಇಸ್ರೇಲರ ಜನಗಣತಿ ಮಾಡಿ ಪಾಪಮಾಡಿದೆನು. ಈಗ ನಿನ್ನ ಸೇವಕನಾದ ನನ್ನ ಪಾಪವನ್ನು ನಿರ್ಮೂಲ ಮಾಡು” ಎಂದು ಬೇಡಿಕೊಂಡನು.

9-10 ಗಾದನು ದಾವೀದನ ಪ್ರವಾದಿಯಾಗಿದ್ದನು. ಯೆಹೋವನು ಗಾದನಿಗೆ, “ನೀನು ದಾವೀದನಿಗೆ ಹೀಗೆ ಹೇಳು: ‘ಇದು ಯೆಹೋವನ ನುಡಿ. ನಾನು ನಿನಗೆ ಕೊಡಲಿರುವ ಮೂರು ಶಿಕ್ಷೆಯಲ್ಲಿ ಒಂದನ್ನು ಆರಿಸಿಕೊಳ್ಳಬೇಕು. ನೀನು ಆರಿಸಿಕೊಂಡ ಪ್ರಕಾರವೇ ನಾನು ನಿನ್ನನ್ನು ಶಿಕ್ಷಿಸುವೆನು’” ಅಂದನು.

11-12 ಗಾದನು ದಾವೀದನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ: ‘ನೀನು ಸಹಿಸಿಕೊಳ್ಳಬಲ್ಲ ಶಿಕ್ಷೆಯನ್ನು ಆರಿಸಿಕೊ. ಮೂರು ವರ್ಷಗಳ ಬರಗಾಲ; ಅಥವಾ ನಿನ್ನ ವೈರಿಗಳಿಗೆ ಮೂರು ತಿಂಗಳು ಶರಣಾಗುವಿಕೆ; ಅಥವಾ ಮೂರು ದಿವಸ ಕಾಲ ಭಯಂಕರ ಕಾಯಿಲೆಯು ನಿನ್ನ ರಾಜ್ಯವೆಲ್ಲಾ ಹಬ್ಬುವದು; ಯೆಹೋವನ ದೂತನು ಇಡೀ ಇಸ್ರೇಲನ್ನು ದಾಟಿ ಸಿಕ್ಕಿದವರನ್ನೆಲ್ಲಾ ಹತಿಸಿಬಿಡುವನು.’ ದಾವೀದನೇ, ನನ್ನನ್ನು ನಿನ್ನ ಬಳಿಗೆ ದೇವರೇ ಕಳುಹಿಸಿರುತ್ತಾನೆ. ನೀನು ಯಾವ ಶಿಕ್ಷೆಯನ್ನು ಆರಿಸಿಕೊಳ್ಳುವಿ ಎಂಬುದನ್ನು ನನಗೆ ತಿಳಿಸು.”

13 ಆಗ ಗಾದನಿಗೆ ದಾವೀದನು, “ನಾನು ಈಗ ಕಷ್ಟದಲ್ಲಿ ಬಿದ್ದಿದ್ದೇನೆ! ನನ್ನ ಶಿಕ್ಷೆಯನ್ನು ಮನುಷ್ಯನು ನಿರ್ಧರಿಸಬಾರದು. ಯೆಹೋವನು ಕರುಣೆಯುಳ್ಳವನು. ಆದ್ದರಿಂದ ಆತನೇ ನಿರ್ಧರಿಸಲಿ.”

14 ಆಗ ಯೆಹೋವನು ಇಸ್ರೇಲರ ಮೇಲೆ ಬಹು ಘೋರವಾದ ವ್ಯಾಧಿಯನ್ನು ಕಳುಹಿಸಿದ್ದರಿಂದ ಎಪ್ಪತ್ತು ಸಾವಿರ ಜನರು ಸತ್ತುಹೋದರು. 15 ದೇವರು ಜೆರುಸಲೇಮಿನ ಜನರನ್ನು ನಾಶನ ಮಾಡುವುದಕ್ಕೆ ದೂತನನ್ನು ಕಳುಹಿಸಿದನು. ಯೆಹೋವನು ಅದನ್ನು ನೋಡಿ ದುಃಖಗೊಂಡು ಜನರನ್ನು ನಾಶಮಾಡಲು ಬಂದಿದ್ದ ದೂತನಿಗೆ, “ಸಾಕು, ಇನ್ನು ನಿಲ್ಲಿಸು” ಅಂದನು. ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತುಕೊಂಡಿದ್ದನು.

16 ದಾವೀದನು ಮೇಲಕ್ಕೆ ನೋಡಿದಾಗ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವುದನ್ನು ಕಂಡನು. ದೇವದೂತನು ತನ್ನ ಖಡ್ಗವನ್ನು ಜೆರುಸಲೇಮಿನ ಮೇಲೆ ಚಾಚಿದ್ದನು. ಆಗ ದಾವೀದನೂ ಅವನೊಂದಿಗಿದ್ದ ಹಿರಿಯರೂ ಬಗ್ಗಿ ನೆಲದ ಮೇಲೆ ಮುಖಗಳನ್ನಿಟ್ಟು ನಮಸ್ಕರಿಸಿದರು. ಅವರು ಶೋಕವಸ್ತ್ರಗಳನ್ನು ಧರಿಸಿದ್ದರು. 17 ದಾವೀದನು ದೇವರಿಗೆ, “ಪಾಪಮಾಡಿದವನು ನಾನು. ಜನಗಣತಿಯನ್ನು ಮಾಡಲು ಆಜ್ಞಾಪಿಸಿದವನು ನಾನೇ. ನಾನು ತಪ್ಪು ಮಾಡಿದೆ! ಆದರೆ ಇಸ್ರೇಲರು ಏನೂ ತಪ್ಪು ಮಾಡಲಿಲ್ಲ. ದೇವರಾದ ಯೆಹೋವನೇ, ನನ್ನನ್ನೂ ನನ್ನ ಪರಿವಾರದವರನ್ನೂ ಶಿಕ್ಷಿಸು. ನಿನ್ನ ಜನರನ್ನು ಸಾಯಿಸುವ ವ್ಯಾಧಿಯನ್ನು ನಿಲ್ಲಿಸು” ಎಂದು ಬೇಡಿಕೊಂಡನು.

18 ಆಗ ಯೆಹೋವನ ದೂತನು ಗಾದನೊಂದಿಗೆ ಮಾತನಾಡಿ, “ದಾವೀದನು ಒಂದು ಯಜ್ಞವೇದಿಕೆಯನ್ನು ಯೆಬೂಸಿಯನಾದ ಒರ್ನಾನನ ಕಣದ ಬಳಿಯಲ್ಲಿ ಕಟ್ಟಿ ಯೆಹೋವನನ್ನು ಆರಾಧಿಸಲಿ” ಎಂದು ಹೇಳಿದನು. 19 ಗಾದನು ದಾವೀದನಿಗೆ ಇದನ್ನು ತಿಳಿಸಿದ ಕೂಡಲೇ ಅವನು ಒರ್ನಾನನ ಕಣಕ್ಕೆ ಹೋದನು.

20 ಒರ್ನಾನನು ಗೋಧಿಯನ್ನು ತನ್ನ ಕಣದಲ್ಲಿ ಬಡಿಯುತ್ತಾ ತಿರುಗಿನೋಡಿದಾಗ ದೇವದೂತನನ್ನು ಕಂಡನು. ಅವನ ನಾಲ್ಕು ಮಂದಿ ಗಂಡುಮಕ್ಕಳು ಓಡಿಹೋಗಿ ಅವಿತುಕೊಂಡರು. 21 ದಾವೀದನು ಒರ್ನಾನನ ಬಳಿಗೆ ಬೆಟ್ಟ ಹತ್ತಿಕೊಂಡು ಬರುತ್ತಿರುವುದನ್ನು ಒರ್ನಾನನು ಕಂಡು ಅವನನ್ನು ಎದುರುಗೊಂಡು ಬಗ್ಗಿ ನಮಸ್ಕರಿಸಿದನು.

22 ದಾವೀದನು ಒರ್ನಾನನಿಗೆ, “ನಿನ್ನ ಕಣವನ್ನು ನನಗೆ ಕ್ರಯಕ್ಕೆ ಮಾರಿಬಿಡು. ನಾನು ಇಲ್ಲಿ ಯಜ್ಞವೇದಿಕೆಯನ್ನು ಕಟ್ಟಿ ದೇವರನ್ನು ಆರಾಧಿಸಬೇಕು. ಆಗ ಈ ಭಯಂಕರ ವ್ಯಾಧಿಯು ನಿಂತುಹೋಗುವುದು” ಅಂದನು.

23 ಆಗ ಒರ್ನಾನನು, “ನೀನು ನನ್ನ ಒಡೆಯನೂ ಅರಸನೂ ಆಗಿರುವಿ. ಈ ಕಣವನ್ನು ನೀನೇ ತೆಗೆದುಕೋ. ನೀನು ಏನು ಬೇಕಾದರೂ ಮಾಡು. ಸರ್ವಾಂಗಹೋಮಕ್ಕೆ ಬೇಕಾದ ಕಟ್ಟಿಗೆಗಾಗಿ ನೇಗಿಲುಗಳನ್ನೂ ಧಾನ್ಯಾರ್ಪಣೆಗೆ ಬೇಕಾದ ಗೋಧಿಯನ್ನೂ ಪಶುವನ್ನೂ ನಾನು ಕೊಡುತ್ತೇನೆ” ಅಂದನು.

24 ಅದಕ್ಕೆ ದಾವೀದನು, “ನೋಡು, ನಾನು ಅವಕ್ಕೆಲ್ಲಾ ಪೂರ್ಣಕ್ರಯ ಕೊಡುತ್ತೇನೆ. ನಿನ್ನಿಂದ ನಾನು ಪುಕ್ಕಟೆಯಾಗಿ ತೆಗೆದುಕೊಂಡದ್ದನ್ನು ದೇವರಿಗೆ ಸಮರ್ಪಿಸುವುದಿಲ್ಲ. ಧರ್ಮಾರ್ಥವಾಗಿ ದೊರೆತದ್ದನ್ನು ದೇವರಿಗೆ ಕಾಣಿಕೆಯಾಗಿ ಕೊಡುವದಿಲ್ಲ” ಎಂದನು.

25 ದಾವೀದನು ಒರ್ನಾನನಿಗೆ ಹದಿನೈದು ಪೌಂಡ್ ಬಂಗಾರವನ್ನು ಕೊಟ್ಟು ಆ ಸ್ಥಳವನ್ನು ಕೊಂಡುಕೊಂಡನು. 26 ಅಲ್ಲಿ ದೇವರನ್ನು ಆರಾಧಿಸಲು ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ದಾವೀದನು ಅದರ ಮೇಲೆ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿದನು. ದಾವೀದನು ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಪರಲೋಕದಿಂದ ಬೆಂಕಿಯನ್ನು ಕಳುಹಿಸುವುದರ ಮೂಲಕ ದಾವೀದನಿಗೆ ಉತ್ತರಿಸಿದನು. ಸರ್ವಾಂಗಹೋಮಗಳ ಯಜ್ಞವೇದಿಕೆಯ ಮೇಲೆ ಬೆಂಕಿಯು ಇಳಿದುಬಂದಿತು. 27 ಆಗ ದೇವರು ತನ್ನ ದೂತನಿಗೆ ಖಡ್ಗವನ್ನು ಒರೆಯಲ್ಲಿ ಹಾಕಲು ಆಜ್ಞಾಪಿಸಿದನು.

28 ದೇವರು ತನ್ನ ಪ್ರಾರ್ಥನೆಯನ್ನು ಕೇಳಿ ಉತ್ತರ ಕೊಟ್ಟದ್ದನ್ನು ಕಂಡು ದಾವೀದನು ಆತನಿಗೆ ಯಜ್ಞಗಳನ್ನು ಸಮರ್ಪಿಸಿದನು. 29 ಆಗ ಪವಿತ್ರ ಗುಡಾರವು ಮತ್ತು ಯಜ್ಞವೇದಿಕೆಯು ಗಿಬ್ಯೋನ್ ಪಟ್ಟಣದ ಎತ್ತರದ ಪ್ರದೇಶದಲ್ಲಿತ್ತು. ಇಸ್ರೇಲರು ಅರಣ್ಯದಲ್ಲಿ ಪ್ರಯಾಣ ಮಾಡುತ್ತಿರುವಾಗ ಮೋಶೆಯು ಆ ಗುಡಾರವನ್ನು ಮಾಡಿಸಿದ್ದನು. 30 ದಾವೀದನು ದೇವರ ಸಂಗಡ ಮಾತನಾಡಲು ಭಯಪಟ್ಟದ್ದರಿಂದ ದೇವದರ್ಶನ ಗುಡಾರಕ್ಕೆ ಹೋಗಲಿಲ್ಲ. ಅವನು ಖಡ್ಗಧಾರಿಯಾಗಿದ್ದ ದೇವದೂತನಿಗೂ ಭಯಪಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International