Beginning
ಶೆಬದ ರಾಣಿಯು ಸೊಲೊಮೋನನನ್ನು ಸಂದರ್ಶಿಸಿದಳು
10 ಶೆಬದ ರಾಣಿ ಸೊಲೊಮೋನನ ಬಗ್ಗೆ ಕೇಳಿದಳು. ಅವಳು ಒಗಟುಗಳಿಂದ ಅವನನ್ನು ಪರೀಕ್ಷಿಸಲು 2 ತನ್ನ ಸೇವಕರ ದೊಡ್ಡ ಗುಂಪಿನೊಡನೆ ಜೆರುಸಲೇಮಿಗೆ ಬಂದಳು. ಅನೇಕ ಒಂಟೆಗಳ ಮೇಲೆ ಸಾಂಬಾರ ಪದಾರ್ಥಗಳನ್ನು, ಮುತ್ತುಗಳನ್ನು ಮತ್ತು ಬಹಳ ಬಂಗಾರವನ್ನು ಹೇರಿಸಿಕೊಂಡು ಬಂದಳು. ಅವಳು ಸೊಲೊಮೋನನನ್ನು ಸಂಧಿಸಿ, ತನ್ನ ಮನಸ್ಸಿನಲ್ಲಿದ್ದ ಎಲ್ಲ ಪ್ರಶ್ನೆಗಳನ್ನು ಅವನಿಗೆ ಕೇಳಿದಳು. 3 ಸೊಲೊಮೋನನು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದನು. ಅವಳ ಯಾವ ಪ್ರಶ್ನೆಗಳೂ ಅವನಿಗೆ ಹೆಚ್ಚು ಕಠಿಣವೆನಿಸಲಿಲ್ಲ. 4 ಸೊಲೊಮೋನನು ಬಹು ಜ್ಞಾನಿಯೆಂಬುದು ಶೆಬದ ರಾಣಿಗೆ ತಿಳಿಯಿತು. ಅವನು ನಿರ್ಮಿಸಿದ್ದ ಸುಂದರವಾದ ಅರಮನೆಯನ್ನೂ 5 ರಾಜನ ಮೇಜಿನ ಮೇಲಿದ್ದ ಆಹಾರವನ್ನೂ ಒಟ್ಟಾಗಿ ಸೇರಿಬರುತ್ತಿದ್ದ ಅವನ ಅಧಿಕಾರಿಗಳನ್ನೂ ಅರಮನೆಯಲ್ಲಿದ್ದ ಸೇವಕರನ್ನೂ ಮತ್ತು ಅವರು ಧರಿಸಿದ್ದ ಉತ್ತಮ ಬಟ್ಟೆಗಳನ್ನೂ ಅವಳು ನೋಡಿದಳು. ಅವನ ಔತಣಕೂಟಗಳನ್ನೂ ಅವನು ಆಲಯದಲ್ಲಿ ಅರ್ಪಿಸುತ್ತಿದ್ದ ಯಜ್ಞಗಳನ್ನೂ ಅವಳು ನೋಡಿದಳು. ಇವುಗಳಿಂದ ಅವಳಿಗೆ ನಿಜವಾಗಿಯೂ “ಉಸಿರುಕಟ್ಟಿಸುವಂತಹ” ವಿಸ್ಮಯವಾಯಿತು.
6 ಆದ್ದರಿಂದ ರಾಣಿಯು ರಾಜನಿಗೆ, “ನಿನ್ನ ಜ್ಞಾನದ ಬಗ್ಗೆ ಮತ್ತು ನೀನು ಮಾಡುವ ಕಾರ್ಯಗಳ ಬಗ್ಗೆ ಅನೇಕ ಸಂಗತಿಗಳನ್ನು ನಾನು ನನ್ನ ದೇಶದಲ್ಲಿ ಕೇಳಿದ್ದೇನೆ. ಆ ಸಂಗತಿಗಳೆಲ್ಲ ನಿಜ! 7 ನಾನೇ ಬಂದು, ನನ್ನ ಸ್ವಂತ ಕಣ್ಣುಗಳಿಂದ ಆ ಸಂಗತಿಗಳನ್ನು ನೋಡುವವರೆಗೆ ನಾನು ನಂಬಲೇ ಇಲ್ಲ. ಆದರೆ ನಾನು ಕೇಳಿದುದಕ್ಕಿಂತಲೂ ಮಹತ್ವವಾದ ಸಂಗತಿಗಳನ್ನು ಈಗ ನೋಡುತ್ತಿದ್ದೇನೆ. ಜನರು ಹೇಳಿದುದಕ್ಕಿಂತ ಅತ್ಯಂತ ಹೆಚ್ಚಿನ ಜ್ಞಾನವೂ ಐಶ್ವರ್ಯವೂ ನಿನ್ನಲ್ಲಿದೆ. 8 ನಿನ್ನ ಪತ್ನಿಯರೂ[a] ಅಧಿಕಾರಿಗಳೂ ಧನ್ಯರೇ ಸರಿ! ಯಾಕೆಂದರೆ ಅವರು ನಿನ್ನ ಸೇವೆ ಮಾಡುತ್ತಾ ನಿನ್ನ ಜ್ಞಾನವಾಕ್ಯಗಳನ್ನು ಕೇಳಬಹುದು! 9 ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ನಿನ್ನನ್ನು ಇಸ್ರೇಲಿನ ರಾಜನಾಗಿ ಮಾಡಲು ಆತನು ಸಂತೋಷಪಟ್ಟಿರಬೇಕು. ದೇವರಾದ ಯೆಹೋವನು ಇಸ್ರೇಲನ್ನು ಸದಾ ಪ್ರೀತಿಸುತ್ತಾನೆ. ಆದ್ದರಿಂದಲೇ ಆತನು ನಿನ್ನನ್ನು ರಾಜನನ್ನಾಗಿ ನೇಮಿಸಿದನು. ನೀನು ಕಟ್ಟಳೆಗಳನ್ನು ಅನುಸರಿಸುತ್ತಿರುವೆ ಮತ್ತು ಜನರಿಗೆ ನ್ಯಾಯ ದೊರಕಿಸುತ್ತಿರುವೆ” ಎಂದು ಹೇಳಿದಳು.
10 ನಂತರ ಶೆಬದ ರಾಣಿಯು ರಾಜನಿಗೆ ನಾಲ್ಕು ಸಾವಿರದ ಎಂಭತ್ತು ಕಿಲೋಗ್ರಾಂ ಬಂಗಾರವನ್ನು ಕೊಟ್ಟಳು. ಅವಳು ಅವನಿಗೆ ಅನೇಕ ಸಾಂಬಾರ ಪದಾರ್ಥಗಳನ್ನು ಮತ್ತು ರತ್ನಗಳನ್ನು ಕೊಟ್ಟಳು. ಹಿಂದೆಂದೂ ಯಾರೂ ಇಸ್ರೇಲಿಗೆ ತೆಗೆದುಕೊಂಡು ಬಂದಿಲ್ಲದಷ್ಟು ಸಾಂಬಾರ ಪದಾರ್ಥಗಳನ್ನು ಶೆಬದ ರಾಣಿಯು ಸೊಲೊಮೋನನಿಗೆ ಕೊಟ್ಟಳು.
11 ಹೀರಾಮನ ಹಡಗುಗಳು ಓಫೀರಿನಿಂದ ಬಂಗಾರವನ್ನು ತೆಗೆದುಕೊಂಡು ಬಂದವು. ಆ ಹಡಗುಗಳು ಮರಗಳನ್ನು ಮತ್ತು ರತ್ನಗಳನ್ನು ರಾಶಿರಾಶಿಯಾಗಿ ತಂದವು. 12 ಸೊಲೊಮೋನನು ಮರವನ್ನು ಆಲಯದ ಮತ್ತು ಅರಮನೆಯ ಆಧಾರಕಂಬಗಳಿಗಾಗಿ ಬಳಸಿದನು. ಅವನು ಹಾಡುಗಾರರಿಗೆ ಬೇಕಾದ ಹಾರ್ಪ್ ವಾದ್ಯಗಳನ್ನು ಮತ್ತು ಲೈರ್ ವಾದ್ಯಗಳನ್ನು ತಯಾರಿಸಲು ಆ ಮರವನ್ನು ಉಪಯೋಗಿಸಿದನು. ಹಿಂದೆಂದೂ ಯಾವ ವ್ಯಕ್ತಿಯೂ ಅಂತಹ ಮರವನ್ನು ಇಸ್ರೇಲಿಗೆ ತಂದಿರಲಿಲ್ಲ ಮತ್ತು ಅಲ್ಲಿಯವರೆಗೆ ಇಸ್ರೇಲಿನ ಯಾವ ವ್ಯಕ್ತಿಯೂ ಅಂತಹ ಮರವನ್ನು ನೋಡಿರಲಿಲ್ಲ.
13 ಆಗ ರಾಜನಾದ ಸೊಲೊಮೋನನು ಇತರ ದೇಶದ ರಾಜರಿಗೆ ಮರ್ಯಾದೆಗಾಗಿ ನೀಡುವ ಕಾಣಿಕೆಗಳನ್ನು ಶೆಬದ ರಾಣಿಗೂ ಕೊಟ್ಟನು. ಆಕೆಯು ಕೇಳಿದ್ದೆಲ್ಲವನ್ನೂ ಅವನು ನೀಡಿದನು. ಅನಂತರ ರಾಣಿಯು ಸೇವಕರೊಡನೆ ತನ್ನ ದೇಶಕ್ಕೆ ಹಿಂದಿರುಗಿದಳು.
14 ರಾಜನಾದ ಸೊಲೊಮೋನನು ಪ್ರತಿವರ್ಷವೂ ಇಪ್ಪತ್ತೆರಡು ಸಾವಿರದ ಆರುನೂರ ನಲವತ್ನಾಲ್ಕು ಕಿಲೋಗ್ರಾಂ ಬಂಗಾರವನ್ನು ಪಡೆಯುತ್ತಿದ್ದನು. 15 ಹಡಗುಗಳಿಂದ ಸಿಗುತ್ತಿದ್ದ ಬಂಗಾರವಲ್ಲದೆ ವ್ಯಾಪಾರಿಗಳಿಂದಲೂ ಅರೇಬಿಯಾದ ರಾಜರಿಂದಲೂ ರಾಜ್ಯಪಾಲರುಗಳಿಂದಲೂ ಬಂಗಾರವನ್ನು ಅವನು ಪಡೆಯುತ್ತಿದ್ದನು.
16 ರಾಜನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ದೊಡ್ಡ ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಯಲ್ಲಿ ಏಳು ಕಿಲೋಗ್ರಾಂ ಬಂಗಾರವಿತ್ತು. 17 ಅವನು ಬಂಗಾರದ ತಗಡಿನಿಂದ ಮುನ್ನೂರು ಚಿಕ್ಕ ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಯಲ್ಲಿ ನಾಲ್ಕು ಪೌಂಡುಗಳಷ್ಟು ಬಂಗಾರವಿತ್ತು. ರಾಜನು ಅವುಗಳನ್ನು “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿಟ್ಟನು.
18 ರಾಜನಾದ ಸೊಲೊಮೋನನು ವಿಶಾಲವಾದ ದಂತದ ಸಿಂಹಾಸನವನ್ನು ಸಹ ಮಾಡಿಸಿದನು. ಅವನು ಅಪ್ಪಟ ಚಿನ್ನದ ತಗಡನ್ನು ಅದಕ್ಕೆ ಹೊದಿಸಿದನು. 19 ಸಿಂಹಾಸನದ ಮೇಲಕ್ಕೆ ಹತ್ತಲು ಅದರಲ್ಲಿ ಆರು ಮೆಟ್ಟಿಲುಗಳಿದ್ದವು. ಸಿಂಹಾಸನದ ಮೇಲ್ಭಾಗವು ವೃತ್ತಾಕಾರವಾಗಿತ್ತು. ಆ ಸಿಂಹಾಸನದ ಎರಡು ಕಡೆಗಳಲ್ಲಿ ಎರಡು ತೋಳುಗಳಿದ್ದವು. ಆ ಸಿಂಹಾಸನದ ತೋಳುಗಳ ಕೆಳಭಾಗದಲ್ಲಿ ಸಿಂಹದ ಚಿತ್ರಗಳಿದ್ದವು. 20 ಆರು ಮೆಟ್ಟಿಲುಗಳ ಪ್ರತಿಯೊಂದು ಮೆಟ್ಟಿಲಿನಲ್ಲಿ ಎರಡು ಸಿಂಹಗಳಿದ್ದವು. ಪ್ರತಿಯೊಂದು ಕೊನೆಯಲ್ಲಿ ಒಂದು ಸಿಂಹವಿತ್ತು. ಬೇರೆ ಯಾವ ರಾಜ್ಯದಲ್ಲೂ ಇಂತಹ ಸಿಂಹಾಸನ ಇರಲಿಲ್ಲ.
21 ಸೊಲೊಮೋನನ ಬಟ್ಟಲುಗಳು ಮತ್ತು ಲೋಟಗಳು ಬಂಗಾರದಿಂದ ತಯಾರಿಸಲಾಗಿದ್ದವು. “ಲೆಬನೋನಿನ ಅರಣ್ಯ” ಎಂದು ಕರೆಯುವ ಕಟ್ಟಡದಲ್ಲಿದ್ದ ಎಲ್ಲಾ ಆಯುಧಗಳನ್ನು ಅಪ್ಪಟ ಚಿನ್ನದಿಂದ ಮಾಡಿದ್ದರು. ಅರಮನೆಯ ಯಾವ ವಸ್ತುವನ್ನೂ ಬೆಳ್ಳಿಯಿಂದ ಮಾಡಿರಲಿಲ್ಲ. ಜನರು ಬೆಳ್ಳಿಯನ್ನು ಅಮೂಲ್ಯವೆಂದು ಯೋಚಿಸದಷ್ಟು ಬಂಗಾರವು ಸೊಲೊಮೋನನ ಕಾಲದಲ್ಲಿತ್ತು!
22 ರಾಜನಾದ ಸೊಲೊಮೋನನ ಹತ್ತಿರ ಅನೇಕ ಸರಕು ಸಾಗಣಿಕೆಯ ಹಡಗುಗಳಿದ್ದವು. ಅವನು ಅವುಗಳನ್ನು ಇತರ ದೇಶಗಳಲ್ಲಿನ ವ್ಯಾಪಾರಕ್ಕಾಗಿ ಕಳುಹಿಸುತ್ತಿದ್ದನು. ಇವು ಹೀರಾಮನ ಹಡಗುಗಳು. ಈ ಹಡಗುಗಳು ಬಂಗಾರ, ಬೆಳ್ಳಿ, ದಂತ ಮತ್ತು ಪ್ರಾಣಿಗಳನ್ನು ಹೊಸದಾಗಿ ತುಂಬಿಕೊಂಡು ಮೂರು ವರ್ಷಕ್ಕೊಮ್ಮೆ ಹಿಂದಿರುಗುತ್ತಿದ್ದವು.
23 ಸೊಲೊಮೋನನು ಭೂಲೋಕದ ರಾಜರುಗಳಲ್ಲೆಲ್ಲಾ ಅತ್ಯಂತ ಬಲಿಷ್ಠನಾಗಿದ್ದನು. ಅವನು ರಾಜರುಗಳಲ್ಲೆಲ್ಲಾ ಹೆಚ್ಚು ಶ್ರೀಮಂತನೂ ಜ್ಞಾನಿಯೂ ಆಗಿದ್ದನು. 24 ಭೂಲೋಕದವರೆಲ್ಲರೂ ರಾಜನಾದ ಸೊಲೊಮೋನನನ್ನು ನೋಡುವುದಕ್ಕೂ ದೇವರು ಸೊಲೊಮೋನನಿಗೆ ದಯಪಾಲಿಸಿರುವ ಜ್ಞಾನವಾಕ್ಯಗಳನ್ನು ಕೇಳುವುದಕ್ಕೂ ಅಪೇಕ್ಷಿಸುತ್ತಿದ್ದರು. 25 ಪ್ರತಿವರ್ಷವೂ ರಾಜನನ್ನು ನೋಡಲು ಜನರು ಬರುತ್ತಿದ್ದರು. ಪ್ರತಿಯೊಬ್ಬನೂ ಕಾಣಿಕೆಯನ್ನು ತರುತ್ತಿದ್ದನು. ಅವರು ಬೆಳ್ಳಿಬಂಗಾರದಿಂದ ಮಾಡಿದ ವಸ್ತುಗಳನ್ನು, ಆಯುಧಗಳನ್ನು, ಉಡುಪುಗಳನ್ನು, ಸಾಂಬಾರ ಪದಾರ್ಥಗಳನ್ನು, ಕುದುರೆಗಳನ್ನು ಮತ್ತು ಹೇಸರಕತ್ತೆಗಳನ್ನು ತರುತ್ತಿದ್ದರು.
26 ಆದ್ದರಿಂದ ಅಸಂಖ್ಯವಾದ ರಥಗಳೂ ಕುದುರೆಗಳೂ ಸೊಲೊಮೋನನಲ್ಲಿದ್ದವು. ಅವನಲ್ಲಿ ಒಂದು ಸಾವಿರದ ನಾನೂರು ರಥಗಳು ಮತ್ತು ಹನ್ನೆರಡು ಸಾವಿರ ಕುದುರೆಗಳಿದ್ದವು. ಸೊಲೊಮೋನನು ಈ ರಥಗಳಿಗಾಗಿ ವಿಶೇಷವಾದ ನಗರಗಳನ್ನು ಕಟ್ಟಿಸಿದನು. ಆ ನಗರಗಳಲ್ಲಿ ರಥಗಳನ್ನು ಇರಿಸಿದನು. ರಾಜನಾದ ಸೊಲೊಮೋನನು ಕೆಲವು ರಥಗಳನ್ನು ಜೆರುಸಲೇಮಿನಲ್ಲಿ ತನ್ನ ಹತ್ತಿರ ಇಟ್ಟುಕೊಂಡನು. 27 ರಾಜನು ಇಸ್ರೇಲನ್ನು ಬಹಳ ಶ್ರೀಮಂತವಾಗಿರಿಸಿದನು. ಜೆರುಸಲೇಮಿನಲ್ಲಿ ಬೆಳ್ಳಿಯು ಕಲ್ಲುಗಳಂತೆಯೂ ದೇವದಾರುಮರಗಳು ಬೆಟ್ಟದ ಮೇಲೆ ಬೆಳೆಯುವ ಅನೇಕ ಅಂಜೂರದ ಗಿಡಗಳಂತೆಯೂ ಹೇರಳವಾಗಿದ್ದವು. 28 ಸೊಲೊಮೋನನು ಈಜಿಪ್ಟ್ ಮತ್ತು ಕ್ಯೂ ಪ್ರದೇಶಗಳಿಂದ ಕುದುರೆಗಳನ್ನು ಖರೀದಿಸಿ ಆಮದು ಮಾಡಿಕೊಂಡನು. ಅವನ ವ್ಯಾಪಾರಿಗಳು ಅವುಗಳನ್ನು ಕ್ಯೂ ಪ್ರಾಂತ್ಯದಿಂದ ಇಸ್ರೇಲಿಗೆ ತರುತ್ತಿದ್ದರು. 29 ಈಜಿಪ್ಟಿನ ಒಂದು ರಥದ ಬೆಲೆಯು ಏಳು ಕಿಲೋಗ್ರಾಂ ಆದರೆ ಒಂದು ಕುದುರೆಯ ಬೆಲೆಯು ಎರಡು ಕಿಲೋಗ್ರಾಂ ಬೆಳ್ಳಿಯಾಗಿತ್ತು. ಸೊಲೊಮೋನನು ಹಿತ್ತಿಯ ಮತ್ತು ಅರಾಮ್ಯ ರಾಜರುಗಳಿಗೆ ಕುದುರೆಗಳನ್ನೂ ರಥಗಳನ್ನೂ ಮಾರಿದನು.
ಸೊಲೊಮೋನನು ಮತ್ತು ಅವನ ಅನೇಕ ಪತ್ನಿಯರು
11 ರಾಜನಾದ ಸೊಲೊಮೋನನು ಸ್ತ್ರೀಯರನ್ನು ಪ್ರೀತಿಸಿದನು! ಅವನು ಇಸ್ರೇಲರಲ್ಲದ ಅನೇಕ ಸ್ತ್ರೀಯರನ್ನು ಪ್ರೀತಿಸಿದನು. ಇವರಲ್ಲಿ ಫರೋಹನ ಮಗಳು, ಮೋವಾಬ್ಯ, ಅಮ್ಮೋನಿಯ, ಎದೋಮ್ಯ ಚೀದೋನ್ಯ ಮತ್ತು ಹಿತ್ತಿಯ ಸ್ತ್ರೀಯರು ಸೇರಿದ್ದರು. 2 ಯೆಹೋವನು ಮೊದಲೇ ಇಸ್ರೇಲಿನ ಜನರಿಗೆ, “ಅನ್ಯದೇಶದ ಸ್ತ್ರೀಯರನ್ನು ನೀವು ಮದುವೆಯಾಗಲೇಬಾರದು. ನೀವು ಅವರನ್ನು ಮದುವೆಯಾದರೆ, ತಮ್ಮ ದೇವರುಗಳನ್ನು ಅನುಸರಿಸುವಂತೆ ಅವರು ನಿಮ್ಮನ್ನು ಪ್ರೇರೇಪಿಸುತ್ತಾರೆ” ಎಂದು ಹೇಳಿದ್ದನು. ಆದರೆ ಸೊಲೊಮೋನನು ಈ ಸ್ತ್ರೀಯರನ್ನು ಪ್ರೀತಿಸತೊಡಗಿದನು. 3 ಸೊಲೊಮೋನನಿಗೆ ಏಳುನೂರು ಮಂದಿ ಪತ್ನಿಯರಿದ್ದರು. (ಈ ಸ್ತ್ರೀಯರು ಅನ್ಯದೇಶಗಳ ನಾಯಕರ ಹೆಣ್ಣುಮಕ್ಕಳು) ಅವನಿಗೆ ಪತ್ನಿಯರಂತಿರುವ ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದೇವರಿಗೆ ವಿಮುಖನನ್ನಾಗಿ ಮಾಡಿದರು. 4 ಸೊಲೊಮೋನನು ವೃದ್ಧನಾದಾಗ, ತನ್ನ ಪತ್ನಿಯರ ದೆಸೆಯಿಂದಾಗಿ ಅನ್ಯದೇವತೆಗಳನ್ನು ಅನುಸರಿಸಿದನು. ತನ್ನ ತಂದೆಯಾದ ದಾವೀದನು ಯೆಹೋವನನ್ನು ಅನುಸರಿಸಿದಂತೆ ಸೊಲೊಮೋನನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಲಿಲ್ಲ. 5 ಸೊಲೊಮೋನನು ಅಷ್ಟೋರೆತ್ ದೇವತೆಯನ್ನು ಪೂಜಿಸಿದನು. ಇದು ಚೀದೋನ್ಯರ ದೇವತೆ. ಸೊಲೊಮೋನನು ಮಿಲ್ಕೋಮನನ್ನು ಆರಾಧಿಸಿದನು. ಇದು ಅಮ್ಮೋನಿಯರ ಭಯಂಕರ ವಿಗ್ರಹ. 6 ಹೀಗೆ ಸೊಲೊಮೋನನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿದ್ದ ಕಾರ್ಯಗಳನ್ನು ಮಾಡಿದನು; ತನ್ನ ತಂದೆಯಾದ ದಾವೀದನು ಪೂರ್ಣಮನಸ್ಸಿನಿಂದ ಯೆಹೋವನನ್ನು ಅನುಸರಿಸಿದಂತೆ ಅನುಸರಿಸಲಿಲ್ಲ.
7 ಸೊಲೊಮೋನನು ಕೆಮೋಷನನ್ನು ಆರಾಧಿಸಲು ಒಂದು ಸ್ಥಳವನ್ನು ನಿರ್ಮಿಸಿದನು. ಮೋವಾಬ್ಯರ ಭಯಂಕರ ವಿಗ್ರಹವೇ ಕೆಮೋಷ್. ಜೆರುಸಲೇಮಿನ ಪಕ್ಕದಲ್ಲಿದ್ದ ಬೆಟ್ಟದ ಮೇಲೆ ಸೊಲೊಮೋನನು ಆರಾಧನೆಯ ಸ್ಥಳವನ್ನು ನಿರ್ಮಿಸಿದನು. ಆ ಬೆಟ್ಟದ ಮೇಲೆಯೇ ಸೊಲೊಮೋನನು ಮೋಲೆಕ್ ದೇವತೆಯ ಪೂಜಾಸ್ಥಳವನ್ನು ನಿರ್ಮಿಸಿದನು. ಅಮ್ಮೋನಿಯರ ಭಯಂಕರ ವಿಗ್ರಹವೇ ಮೋಲೆಕ್. 8 ಸೊಲೊಮೋನನು ಅನ್ಯದೇಶಗಳ ತನ್ನ ಪತ್ನಿಯರಿಗೆಲ್ಲ ಇದೇ ರೀತಿ ಮಾಡಿದನು. ಅವನ ಪತ್ನಿಯರು ತಮ್ಮ ದೇವರುಗಳಿಗೆ ಧೂಪಹಾಕಿದರು ಮತ್ತು ಯಜ್ಞಗಳನ್ನು ಅರ್ಪಿಸಿದರು.
9 ಸೊಲೊಮೋನನು ಇಸ್ರೇಲಿನ ದೇವರಾದ ಯೆಹೋವನನ್ನು ಅನುಸರಿಸದೆ ಬೇರೆ ಕಡೆಗೆ ತಿರುಗಿಕೊಂಡನು. ಆದ್ದರಿಂದ ಯೆಹೋವನು ಸೊಲೊಮೋನನ ಮೇಲೆ ಕೋಪಗೊಂಡನು. ಯೆಹೋವನು ಎರಡು ಸಲ ಸೊಲೊಮೋನನಿಗೆ ದರ್ಶನವನ್ನು ನೀಡಿದ್ದನು. 10 ಅನ್ಯದೇವತೆಗಳನ್ನು ಅನುಸರಿಸಬಾರದೆಂದು ಯೆಹೋವನು ಸೊಲೊಮೋನನಿಗೆ ಹೇಳಿದನು. ಆದರೆ ಸೊಲೊಮೋನನು ಯೆಹೋವನ ಆಜ್ಞೆಯನ್ನು ಅನುಸರಿಸಲಿಲ್ಲ. 11 ಆದ್ದರಿಂದ ಯೆಹೋವನು ಸೊಲೊಮೋನನಿಗೆ, “ನಮ್ಮಿಬ್ಬರ ನಡುವೆಯಿದ್ದ ಒಡಂಬಡಿಕೆಯನ್ನು ಮೀರಿಬಿಟ್ಟೆ. ನೀನು ನನ್ನ ಆಜ್ಞೆಗಳನ್ನು ಅನುಸರಿಸಲಿಲ್ಲ. ಆದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕರಲ್ಲಿ ಒಬ್ಬನಿಗೆ ಅದನ್ನು ಕೊಡುವುದಾಗಿ ನಾನು ಪ್ರಮಾಣ ಮಾಡುತ್ತೇನೆ. 12 ಆದರೆ ನಿನ್ನ ತಂದೆಯಾದ ದಾವೀದನನ್ನು ನಾನು ಪ್ರೀತಿಸಿದ್ದರಿಂದ ನೀನು ಜೀವಂತವಾಗಿರುವಾಗಲೇ ನಿನ್ನ ರಾಜ್ಯವನ್ನು ನಿನ್ನಿಂದ ನಾನು ತೆಗೆದುಕೊಳ್ಳುವುದಿಲ್ಲ. ನಿನ್ನ ಮಗನು ರಾಜನಾಗುವವರೆಗೆ ನಾನು ಕಾಯುತ್ತೇನೆ. ನಂತರ ನಾನು ಅದನ್ನು ಅವನಿಂದ ತೆಗೆದುಕೊಳ್ಳುತ್ತೇನೆ. 13 ಆದರೂ ನಿನ್ನ ಮಗನಿಂದ ರಾಜ್ಯವನ್ನೆಲ್ಲ ನಾನು ಕಿತ್ತುಕೊಳ್ಳುವುದಿಲ್ಲ. ನಾನು ಅವನಿಗೆ ಒಂದು ಕುಲವನ್ನು ಆಳಲು ಬಿಡುತ್ತೇನೆ. ನಾನು ದಾವೀದನಿಗಾಗಿ ಹೀಗೆ ಮಾಡುತ್ತೇನೆ. ಅವನು ನನಗೆ ಒಬ್ಬ ಒಳ್ಳೆಯ ಸೇವಕನಾಗಿದ್ದನು. ನಾನು ಇದನ್ನು ಜೆರುಸಲೇಮಿನ ಏಳಿಗೆಗಾಗಿ ಮಾಡುತ್ತೇನೆ. ನಾನೇ ಆ ನಗರವನ್ನು ಆರಿಸಿಕೊಂಡೆನು” ಎಂದು ಹೇಳಿದನು.
ಸೊಲೊಮೋನನ ಶತ್ರುಗಳು
14 ಆ ಸಮಯದಲ್ಲಿ ಸೊಲೊಮೋನನಿಗೆ ಶತ್ರುವಾಗುವಂತೆ ಎದೋಮ್ಯನಾದ ಹದದನನ್ನು ಯೆಹೋವನು ಪ್ರೇರೇಪಿಸಿದನು. ಹದದನು ರಾಜನಾದ ಎದೋಮ್ಯನ ವಂಶದವನು. 15 ಅದು ಹೀಗೆ ಸಂಭವಿಸಿತು: ದಾವೀದನು ಮೊದಲು ಎದೋಮ್ಯರನ್ನು ಸೋಲಿಸಿದ್ದನು, ದಾವೀದನ ಸೈನ್ಯಕ್ಕೆ ಯೋವಾಬನು ಸೇನಾಪತಿಯಾಗಿದ್ದನು. ಸತ್ತ ಜನರನ್ನು ಸಮಾಧಿ ಮಾಡಲು ಯೋವಾಬನು ಎದೋಮಿಗೆ ಹೋದನು. ಅಲ್ಲಿ ಇನ್ನೂ ವಾಸವಾಗಿದ್ದ ಗಂಡಸರನ್ನೆಲ್ಲ ಯೋವಾಬನು ಕೊಂದುಹಾಕಿದನು. 16 ಯೋವಾಬನು ಮತ್ತು ಇಸ್ರೇಲರು ಎದೋಮಿನಲ್ಲಿ ಆರು ತಿಂಗಳ ಕಾಲ ನೆಲೆಸಿದ್ದರು. ಆ ಸಂದರ್ಭದಲ್ಲಿ ಅವರು ಎದೋಮಿನ ಗಂಡಸರನ್ನೆಲ್ಲ ಕೊಂದುಹಾಕಿದರು. 17 ಆದರೆ ಆ ಕಾಲಕ್ಕೆ ಹದದನಿನ್ನೂ ಚಿಕ್ಕ ಬಾಲಕನಾಗಿದ್ದನು. ಆದ್ದರಿಂದ ಹದದನು ಈಜಿಪ್ಟಿಗೆ ಓಡಿಹೋದನು. ಅವನ ತಂದೆಯ ಕೆಲವು ಜನ ಸೇವಕರೂ ಅವನೊಡನೆ ಹೋದರು. 18 ಅವರು ಮಿದ್ಯಾನನ್ನು ಬಿಟ್ಟು ಪಾರಾನಿಗೆ ಹೋದರು. ಇತರ ಕೆಲವು ಜನರು ಪಾರಾನಿನಲ್ಲಿ ಅವರೊಂದಿಗೆ ಸೇರಿಕೊಂಡರು. ನಂತರ ಇವರೆಲ್ಲಾ ಒಟ್ಟಿಗೆ ಈಜಿಪ್ಟಿಗೆ ಹೋದರು. ಅವರು ಈಜಿಪ್ಟಿನ ರಾಜನಾದ ಫರೋಹನ ಬಳಿಗೆ ಹೋಗಿ, ಅವನ ಸಹಾಯವನ್ನು ಕೇಳಿದರು. ಫರೋಹನು ಹದದನಿಗೆ ಒಂದು ಮನೆಯನ್ನು ಮತ್ತು ಸ್ವಲ್ಪ ಭೂಮಿಯನ್ನು ಕೊಟ್ಟನು. ಫರೋಹನು ಅವನ ಊಟಕ್ಕಾಗಿ ಪ್ರತಿ ತಿಂಗಳು ಆಹಾರವನ್ನು ಕೊಟ್ಟನು.
19 ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ನಾದಿನಿಯನ್ನೇ ಹದದನಿಗೆ ಪತ್ನಿಯನ್ನಾಗಿ ಕೊಟ್ಟನು. (ರಾಣಿಯಾದ ತಖ್ಪೆನೇಸಳು ಫರೋಹನ ಪತ್ನಿ.) 20 ತಖ್ಪೆನೇಸಳ ಸೋದರಿಯನ್ನು ಹದದನು ಮದುವೆಯಾದನು. ಅವರಿಗೆ ಗೆನುಬತ್ ಎಂಬ ಹೆಸರಿನ ಮಗನಿದ್ದನು. ಫರೋಹನ ಮನೆಯಲ್ಲಿಯೇ ಅವನ ಮಕ್ಕಳೊಂದಿಗೆ ಗೆನುಬತನೂ ಬೆಳೆಯಲು ರಾಣಿಯಾದ ತಖ್ಪೆನೇಸಳು ಅವಕಾಶಮಾಡಿದಳು.
21 ದಾವೀದನು ಸತ್ತುಹೋದನೆಂಬುದು ಹದದನಿಗೆ ಈಜಿಪ್ಟಿನಲ್ಲಿ ತಿಳಿಯಿತು. ಸೈನ್ಯದ ಸೇನಾಪತಿಯಾದ ಯೋವಾಬನು ಸತ್ತನೆಂಬುದೂ ಅವನಿಗೆ ತಿಳಿಯಿತು. ಆದ್ದರಿಂದ ಹದದನು ಫರೋಹನಿಗೆ, “ಸ್ವದೇಶದ ನನ್ನ ಮನೆಗೆ ನನಗೆ ಹೋಗಲು ಬಿಡು” ಎಂದು ಹೇಳಿದನು.
22 ಆದರೆ ಫರೋಹನು “ನಿನಗೆ ಬೇಕಾದುದ್ದೆಲ್ಲವನ್ನು ನಾನು ಇಲ್ಲಿ ನಿನಗೆ ಕೊಟ್ಟಿದ್ದೇನೆ! ನೀನು ಸ್ವದೇಶಕ್ಕೆ ಹಿಂದಿರುಗಿ ಹೋಗಲು ಅಪೇಕ್ಷಿಸುತ್ತಿರುವುದಾದರೂ ಏಕೆ?” ಎಂದು ಕೇಳಿದನು.
ಹದದನು, “ದಯವಿಟ್ಟು ನನ್ನ ಮನೆಗೆ ನಾನು ಹೋಗಲು ಬಿಡು” ಎಂದನು.
23 ಸೊಲೊಮೋನನಿಗೆ ವಿರುದ್ಧವಾಗಿ ಶತ್ರುವಾಗುವಂತೆ ಇನ್ನೊಬ್ಬ ಮನುಷ್ಯನನ್ನೂ ದೇವರು ಪ್ರೇರೇಪಿಸಿದನು. ಈ ಮನುಷ್ಯನು ಎಲ್ಯಾದಾವನ ಮಗನಾದ ರೆಜೋನ್ ಎಂಬವನು. ರೆಜೋನನು ತನ್ನ ಒಡೆಯನ ಹತ್ತಿರದಿಂದ ಓಡಿಹೋಗಿದ್ದನು. ಚೋಬದ ರಾಜನಾದ ಹದದೆಜೆರನು ಅವನ ಒಡೆಯ. 24 ದಾವೀದನು ಚೋಬದ ಸೈನ್ಯವನ್ನು ಸೋಲಿಸಿದ ಬಳಿಕ, ರೆಜೋನನು ಕೆಲವು ಜನರನ್ನು ಒಟ್ಟುಗೂಡಿಸಿಕೊಂಡು, ಆ ಕಿರುಸೇನೆಗೆ ತಾನೇ ನಾಯಕನಾದನು. ರೆಜೋನನು ದಮಸ್ಕಕ್ಕೆ ಹೋಗಿ ಅಲ್ಲಿಯೇ ನೆಲೆಸಿದನು. ರೆಜೋನನು ದಮಸ್ಕದ ರಾಜನಾದನು. 25 ರೆಜೋನನು ಅರಾಮನ್ನು ಆಳಿದನು. ರೆಜೋನನು ಇಸ್ರೇಲಿನ ದ್ವೇಷಿಯಾದ್ದರಿಂದ, ಸೊಲೊಮೋನನ ಜೀವಮಾನದಲ್ಲೆಲ್ಲಾ ಅವನು ಇಸ್ರೇಲಿನ ಶತ್ರುವಾಗಿಯೇ ಮುಂದುವರಿದನು. ರೆಜೋನ್ ಮತ್ತು ಹದದನು ಇಸ್ರೇಲಿಗೆ ಹೆಚ್ಚು ತೊಂದರೆಯನ್ನು ಉಂಟುಮಾಡಿದರು.
26 ಸೊಲೊಮೋನನ ಸೇವಕರಲ್ಲಿ ನೆಬಾಟನ ಮಗನಾದ ಯಾರೊಬ್ಬಾಮನೂ ಒಬ್ಬನಾಗಿದ್ದನು. ಯಾರೊಬ್ಬಾಮನು ಎಫ್ರಾಯೀಮ್ ಕುಲದವನು, ಅವನು ಚರೇದ ಪಟ್ಟಣದವನು. ಯಾರೊಬ್ಬಾಮನ ತಾಯಿಯ ಹೆಸರು ಜೆರೂಗ, ಆಕೆ ವಿಧವೆಯಾಗಿದ್ದಳು. ಯಾರೊಬ್ಬಾಮನು ರಾಜನ ವಿರುದ್ಧ ತಿರುಗಿಬಿದ್ದನು.
27 ಯಾರೊಬ್ಬಾಮನು ರಾಜನ ವಿರುದ್ಧ ಏಕೆ ತಿರುಗಿ ಬಿದ್ದನೆಂಬ ಕಥೆಯು ಹೀಗಿದೆ: ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟುತ್ತಿದ್ದನು ಮತ್ತು ತನ್ನ ತಂದೆಯಾದ ದಾವೀದನ ನಗರದ ಗೋಡೆಯನ್ನು ಭದ್ರಪಡಿಸುತ್ತಿದ್ದನು. 28 ಯಾರೊಬ್ಬಾಮನು ಸಮರ್ಥನಾದ ಮನುಷ್ಯನಾಗಿದ್ದನು. ಈ ಯುವಕನು ಒಳ್ಳೆಯ ಕೆಲಸಗಾರನೆಂಬುದು ಸೊಲೊಮೋನನಿಗೆ ತಿಳಿಯಿತು. ಆದ್ದರಿಂದ ಸೊಲೊಮೋನನು ಯೋಸೇಫ್ ಕುಲದ ಕೆಲಸಗಾರರೆಲ್ಲರಿಗೂ ಮೇಲ್ವಿಚಾರಕನನ್ನಾಗಿ ಅವನನ್ನು ನೇಮಿಸಿದನು. 29 ಒಂದು ದಿನ ಯಾರೊಬ್ಬಾಮನು ಜೆರುಸಲೇಮಿನ ಹೊರಗೆ ಹೋಗುತ್ತಿದ್ದನು. ಶೀಲೋವಿನ ಪ್ರವಾದಿಯಾದ ಅಹೀಯನು ಅವನನ್ನು ರಸ್ತೆಯಲ್ಲಿ ಸಂಧಿಸಿದನು. ಅಹೀಯನು ಹೊಸ ಅಂಗಿಯನ್ನು ಧರಿಸಿದ್ದನು. ನಿರ್ಜನವಾಗಿದ್ದ ಆ ದೇಶದಲ್ಲಿ ಇವರಿಬ್ಬರೇ ಇದ್ದರು.
30 ಅಹೀಯನು ತನ್ನ ಹೊಸ ಅಂಗಿಯನ್ನು ತೆಗೆದು, ಅದನ್ನು ಹನ್ನೆರಡು ತುಂಡುಗಳನ್ನಾಗಿ ಹರಿದನು. 31 ಬಳಿಕ ಅಹೀಯನು ಯಾರೊಬ್ಬಾಮನಿಗೆ, “ಈ ಅಂಗಿಯ ಹತ್ತು ತುಂಡುಗಳನ್ನು ನಿನಗೋಸ್ಕರವಾಗಿ ತೆಗೆದುಕೋ. ಇಸ್ರೇಲರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ಸೊಲೊಮೋನನ ರಾಜ್ಯವನ್ನು ನಾನು ಹರಿದು ತುಂಡುಗಳನ್ನಾಗಿ ಮಾಡುತ್ತೇನೆ. ನಾನು ಹತ್ತು ಕುಲಗಳನ್ನು ನಿನಗೆ ಒಪ್ಪಿಸುತ್ತೇನೆ. 32 ಒಂದು ಕುಲವನ್ನು ಮಾತ್ರ ದಾವೀದನ ವಂಶದ ಅಧೀನದಲ್ಲಿ ಬಿಡುತ್ತೇನೆ. ಅವರು ಈ ಕುಲವನ್ನು ಉಳಿಸಿಕೊಳ್ಳಲು ನಾನು ಅವಕಾಶ ಮಾಡಿಕೊಡುತ್ತೇನೆ. ನನ್ನ ಸೇವಕನಾದ ದಾವೀದನಿಗಾಗಿ ಮತ್ತು ಜೆರುಸಲೇಮಿಗಾಗಿ ನಾನು ಇದನ್ನು ಮಾಡುತ್ತೇನೆ. ಇಸ್ರೇಲಿನ ಎಲ್ಲಾ ಕುಲಗಳಿಂದಲೂ ನಾನು ಜೆರುಸಲೇಮ್ ನಗರವನ್ನು ಆರಿಸಿಕೊಂಡಿದ್ದೇನೆ. 33 ಸೊಲೊಮೋನನು ನನ್ನನ್ನು ಅನುಸರಿಸುವುದನ್ನು ನಿಲ್ಲಿಸಿದ ಕಾರಣ ನಾನು ಅವನ ರಾಜ್ಯವನ್ನು ಅವನಿಂದ ತೆಗೆದುಕೊಳ್ಳುವೆನು. ಅವನು ಚೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ ಮೋವಾಬ್ಯರ ದೇವರಾದ ಕೆಮೋಷನನ್ನೂ ಅಮ್ಮೋನಿಯರ ದೇವರಾದ ಮಿಲ್ಕೋಮನನ್ನೂ ಪೂಜಿಸಿದನು. ಸೊಲೊಮೋನನು ತಾನು ಮಾಡುತ್ತಿದ್ದ ಸರಿಯಾದ ಮತ್ತು ಉತ್ತಮವಾದ ಕಾರ್ಯಗಳನ್ನು ನಿಲ್ಲಿಸಿದನು. ಅವನು ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಲಿಲ್ಲ. ತನ್ನ ತಂದೆಯಾದ ದಾವೀದನು ಜೀವಿಸಿದಂತೆ ಅವನು ಜೀವಿಸುತ್ತಿಲ್ಲ. 34 ಆದ್ದರಿಂದ ನಾನು ಸೊಲೊಮೋನನ ಕುಟುಂಬದಿಂದ ರಾಜ್ಯವನ್ನು ತೆಗೆದುಕೊಳ್ಳುತ್ತೇನೆ. ಆದರೆ ಸೊಲೊಮೋನನು ತನ್ನ ಜೀವಮಾನವೆಲ್ಲಾ ಆಳುವಂತೆ ನಾನು ಅವನಿಗೆ ಅವಕಾಶ ಕೊಡುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗಾಗಿ ಇದನ್ನು ಮಾಡುತ್ತೇನೆ. ನಾನು ದಾವೀದನನ್ನು ಆರಿಸಿಕೊಂಡೆನು; ಏಕೆಂದರೆ ಅವನು ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಅನುಸರಿಸಿದನು. 35 ಆದರೆ ನಾನು ರಾಜ್ಯವನ್ನು ಅವನ ಮಗನಿಂದ ಕಿತ್ತುಕೊಂಡು ನಿನಗೆ ಹತ್ತು ಕುಲಗಳನ್ನು ಕೊಡುತ್ತೇನೆ. 36 ಸೊಲೊಮೋನನ ಮಗನಿಗೆ ಒಂದು ಕುಲವನ್ನು ಮಾತ್ರ ಕೊಡುತ್ತೇನೆ. ಜೆರುಸಲೇಮಿನ ನನ್ನ ಸನ್ನಿಧಿಯಲ್ಲಿ ಆಳಲು ನನ್ನ ಸೇವಕನಾದ ದಾವೀದನು ಯಾವಾಗಲೂ ತನ್ನ ಸಂತತಿಯವರಲ್ಲಿ ಒಬ್ಬನನ್ನು ಹೊಂದಿರಲೆಂದು ನಾನು ಇದನ್ನು ಮಾಡುತ್ತೇನೆ. ಜೆರುಸಲೇಮ್ ನಗರವನ್ನು ನಾನು ನನ್ನ ಸ್ವಂತದ್ದೆಂದು ಆರಿಸಿಕೊಂಡೆನು. 37 ನಾನು ನಿನ್ನನ್ನು ಇಡೀ ಇಸ್ರೇಲಿಗೆ ರಾಜನನ್ನಾಗಿ ಮಾಡುತ್ತೇನೆ. ನೀನು ನಿನ್ನ ಇಷ್ಟಾನುಸಾರವಾಗಿ ಪ್ರತಿಯೊಂದರ ಮೇಲೆ ದೊರೆತನ ಮಾಡುವಂತೆ ಮಾಡುತ್ತೇನೆ. 38 ನೀನು ಸರಿಯಾದ ಮಾರ್ಗದಲ್ಲಿ ಜೀವಿಸುತ್ತಾ, ನನ್ನ ಆಜ್ಞೆಗಳನ್ನು ಅನುಸರಿಸಿದರೆ, ನಾನು ಈ ಕಾರ್ಯಗಳೆನ್ನೆಲ್ಲ ನಿನಗೆ ಮಾಡುವೆನು. ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀನು ದಾವೀದನಂತೆ ಅನುಸರಿಸಿದರೆ ನಾನು ನಿನ್ನೊಂದಿಗೆ ಇರುತ್ತೇನೆ. ನಾನು ನಿನ್ನ ಕುಟುಂಬವನ್ನು ದಾವೀದನ ಕುಟುಂಬದಂತೆ ರಾಜರುಗಳ ಕುಟುಂಬವನ್ನಾಗಿ ಮಾಡುತ್ತೇನೆ. ನಾನು ನಿನಗೆ ಇಸ್ರೇಲನ್ನು ಕೊಡುತ್ತೇನೆ. 39 ಸೊಲೊಮೋನನು ಮಾಡಿದ ಕಾರ್ಯಗಳ ನಿಮಿತ್ತ ನಾನು ದಾವೀದನ ಮಕ್ಕಳನ್ನು ದಂಡಿಸುತ್ತೇನೆ. ಆದರೆ ನನ್ನ ದಂಡನೆಯು ಅವರ ಮೇಲೆ ಶಾಶ್ವತವಾಗಿರುವುದಿಲ್ಲ” ಎಂದು ಹೇಳಿದನು.
ಸೊಲೊಮೋನನ ಮರಣ
40 ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಪ್ರಯತ್ನಿಸಿದನು. ಆದರೆ ಯಾರೊಬ್ಬಾಮನು ಈಜಿಪ್ಟಿಗೆ ಓಡಿಹೋದನು. ಅವನು ಈಜಿಪ್ಟಿನ ರಾಜನಾದ ಶೀಶಕನ ಬಳಿಗೆ ಹೋದನು. ಸೊಲೊಮೋನನು ಸಾಯುವವರೆಗೆ ಯಾರೊಬ್ಬಾಮನು ಅಲ್ಲಿಯೇ ನೆಲೆಸಿದನು.
41 ಸೊಲೊಮೋನನು ತಾನು ಆಳುತ್ತಿದ್ದಾಗ ಅನೇಕ ಮಹಾಕಾರ್ಯಗಳನ್ನೂ ಜ್ಞಾನದ ಕಾರ್ಯಗಳನ್ನೂ ಮಾಡಿದನು. ಈ ಕಾರ್ಯಗಳನ್ನೆಲ್ಲ ಸೊಲೊಮೋನನ ಚರಿತ್ರೆ ಎಂಬ ಪುಸ್ತಕದಲ್ಲಿ ಬರೆಯಲಾಗಿದೆ. 42 ಸಮಸ್ತ ಇಸ್ರೇಲನ್ನು ಸೊಲೊಮೋನನು ಜೆರುಸಲೇಮಿನಲ್ಲಿ ನಲವತ್ತು ವರ್ಷಗಳ ಕಾಲ ಆಳಿದನು. 43 ಬಳಿಕ ಸೊಲೊಮೋನನು ಸತ್ತನು. ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಅವನನ್ನು ಅವನ ತಂದೆಯಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಸೊಲೊಮೋನನ ಮಗನಾದ ರೆಹಬ್ಬಾಮನು ಸೊಲೊಮೋನನ ಬಳಿಕ ರಾಜನಾದನು.
Kannada Holy Bible: Easy-to-Read Version. All rights reserved. © 1997 Bible League International