Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 18-20

ಯಾಜಕರ ಮತ್ತು ಲೇವಿಯರ ಕಾರ್ಯಗಳು

18 ಆಗ ಯೆಹೋವನು ಆರೋನನಿಗೆ, “ಪವಿತ್ರ ವಸ್ತುಗಳ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನೂ ನಿನ್ನ ಗಂಡುಮಕ್ಕಳೂ ನಿನ್ನ ಕುಲದವರೆಲ್ಲರೂ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನು ಮತ್ತು ನಿನ್ನ ಗಂಡುಮಕ್ಕಳು ಮಾತ್ರ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ನಿನ್ನ ತಂದೆಯ ಕುಲದವರೂ ನಿನ್ನ ರಕ್ತಸಂಬಂಧಿಗಳೂ ಆಗಿರುವ ಲೇವಿಕುಲದವರನ್ನು ನಿನ್ನೊಡನೆ ಸೇರಿಸಿಕೊ; ನೀನು ಮತ್ತು ನಿನ್ನ ಗಂಡುಮಕ್ಕಳು ಒಡಂಬಡಿಕೆಯ ಮುಂದೆ ಇರುವಾಗ ಅವರು ನಿನ್ನೊಂದಿಗಿದ್ದು ನಿನಗೆ ಸಹಾಯ ಮಾಡುವರು. ಆ ಲೇವಿಯರು ನಿನಗೆ ಕಾವಲುಗಾರರಾಗಿರಬೇಕು ಅಂದರೆ ಇಡೀ ಗುಡಾರವನ್ನು ಕಾಯಬೇಕು. ಆದರೆ ಅವರು ಪವಿತ್ರವಾದ ಪಾತ್ರೆಯನ್ನಾಗಲಿ ಯಜ್ಞವೇದಿಕೆಯನ್ನಾಗಲಿ ಮುಟ್ಟಬಾರದು; ಮುಟ್ಟಿದರೆ ಅವರೂ ಸಾಯುವರು ಮತ್ತು ನೀವೂ ಸಾಯುವಿರಿ. ಅವರು ದೇವದರ್ಶನಗುಡಾರವನ್ನು ಕಾಯಬೇಕು ಮತ್ತು ಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಬೇಕು. ಬೇರೆ ಯಾರೂ ನಿನ್ನೊಂದಿಗೆ ಭಾಗಿಗಳಾಗಿರಬಾರದು.

“ನಾನು ಮತ್ತೆ ಕೋಪಗೊಂಡು ಇಸ್ರೇಲರನ್ನು ದಂಡಿಸದಂತೆ ನೀವು ಪವಿತ್ರಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕಾಯಬೇಕು. ಎಲ್ಲಾ ಇಸ್ರೇಲರಿಂದ ನಾನೇ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನಿನಗೆ ಕೊಡಲ್ಪಟ್ಟ ಬಹುಮಾನವಾಗಿದ್ದಾರೆ. ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಲು ಅವರು ಯೆಹೋವನಿಗೆ ಪ್ರತಿಷ್ಠಿತರಾಗಿದ್ದಾರೆ. ಆದರೆ ಆರೋನನೇ, ನೀನೂ ನಿನ್ನ ಪುತ್ರರೂ ನಿಮ್ಮ ಯಾಜಕತ್ವವನ್ನು ಕಾಪಾಡಿಕೊಳ್ಳಬೇಕು. ಅಯೋಗ್ಯನಾದ ಯಾವನೂ ಯಜ್ಞವೇದಿಕೆಯ ಬಳಿ ಕೆಲಸ ಮಾಡುವುದಕ್ಕಾಗಲೀ ತೆರೆಯ ಆಚೆಯಿರುವ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವುದಕ್ಕಾಗಲೀ ನೀವು ಬಿಡಕೂಡದು. ನಾನು ನಿಮಗೆ ಅಮೂಲ್ಯವಾದ ಯಾಜಕತ್ವವನ್ನು ಕೊಟ್ಟಿದ್ದೇನೆ. ಆದರೆ ಅಯೋಗ್ಯನಾದ ಯಾವನಾದರೂ ಯಾಜಕತ್ವದ ಈ ಕರ್ತವ್ಯಗಳನ್ನು ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡುವನು.”

ಆಗ ಯೆಹೋವನು ಆರೋನನಿಗೆ ಹೀಗೆ ಹೇಳಿದನು: “ನನಗೆ ಬರಬೇಕಾಗಿರುವ ಕೊಡುಗೆಗಳನ್ನು ಮತ್ತು ಇಸ್ರೇಲರ ಪವಿತ್ರವಾದ ಎಲ್ಲಾ ಕಾಣಿಕೆಗಳನ್ನು ಕಾಯುವ ಜವಾಬ್ದಾರಿಕೆಯನ್ನು ನಾನೇ ನಿನಗೆ ವಹಿಸಿದ್ದೇನೆ. ಅವುಗಳನ್ನು ನಿನಗೂ ನಿನ್ನ ಸಂತತಿಯವರಿಗೂ ಪಾಲಾಗಿ ಕೊಟ್ಟಿದ್ದೇನೆ. ಅವು ಯಾವಾಗಲೂ ನಿಮ್ಮವೇ. ಯಜ್ಞವೇದಿಕೆಯ ಬೆಂಕಿಯಲ್ಲಿ ಹೋಮಮಾಡದೆ ಉಳಿಸಿರುವ ಮಹಾಪರಿಶುದ್ಧ ಪದಾರ್ಥಗಳಲ್ಲಿ ನಿಮಗೆ ದೊರೆಯಬೇಕಾದವುಗಳು ಯಾವುವೆಂದರೆ: ಅವರು ನನಗೆ ಕೊಡಲಿರುವ ಯಜ್ಞಗಳು, ಧಾನ್ಯಾರ್ಪಣೆಗಳು, ಪಾಪಪರಿಹಾರಕ ಯಜ್ಞಗಳು, ದೋಷಪರಿಹಾರಕ ಯಜ್ಞಗಳು ಮತ್ತು ಅಂತಹ ಪ್ರತಿಯೊಂದು ಅರ್ಪಣೆಗಳು ನಿನಗೂ ನಿನ್ನ ಗಂಡುಮಕ್ಕಳಿಗೂ ಮಹಾಪವಿತ್ರವಾಗಿವೆ. 10 ನೀವು ಮಹಾ ಪವಿತ್ರವಾದ ಸ್ಥಳದಲ್ಲಿ ಅದನ್ನು ಊಟಮಾಡಬೇಕು. ನಿಮ್ಮಲ್ಲಿರುವ ಪುರುಷರೆಲ್ಲರೂ ಅವುಗಳನ್ನು ತಿನ್ನಬಹುದು; ಅವು ಮಹಾ ಪವಿತ್ರವಾದವುಗಳೆಂದು ನೀವು ಪರಿಗಣಿಸಬೇಕು.

11 “ಅದಲ್ಲದೆ, ಅವರ ಪ್ರತಿಷ್ಠಿತಾ ಕಾಣಿಕೆಗಳು ಮತ್ತು ಇಸ್ರೇಲರ ನಿವಾಳಿಸಲ್ಪಟ್ಟ ಕಾಣಿಕೆಗಳು ನಿಮಗೆ ಸೇರಿವೆ. ಅವುಗಳನ್ನು ನಾನು ನಿನಗೂ ನಿನ್ನ ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಶಾಶ್ವತವಾದ ಪಾಲಾಗಿ ಕೊಡುವೆನು.

12 “ಇದಲ್ಲದೆ, ಇಸ್ರೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲದ ಪದಾರ್ಥಗಳಲ್ಲಿ ಅಂದರೆ ಉತ್ತಮವಾದ ಎಣ್ಣೆ, ಹೊಸ ದ್ರಾಕ್ಷಾರಸ, ಧಾನ್ಯ ಇವುಗಳನ್ನೆಲ್ಲ ನಾನು ನಿಮಗೆ ಕೊಡುತ್ತೇನೆ. 13 ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲವು ನಿಮಗೆ ಸಲ್ಲಬೇಕು. ನಿಮ್ಮ ಕುಟುಂಬಗಳಲ್ಲಿ ಶುದ್ಧರಾಗಿರುವವರೆಲ್ಲರೂ ಅವುಗಳನ್ನು ಊಟಮಾಡಬಹುದು.

14 “ಇಸ್ರೇಲರು ಯೆಹೋವನಿಗೆ ಹರಕೆ ಹೊತ್ತುಕೊಂಡು ಕೊಡುವ ಪ್ರತಿಯೊಂದೂ ನಿಮ್ಮದಾಗಿದೆ.

15 “ಮನುಷ್ಯರಲ್ಲಾಗಲಿ ಪ್ರಾಣಿಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಳ್ಳಬೇಕು. 16 ಒಂದು ತಿಂಗಳಿನ ಪ್ರಾಯಕ್ಕೆ ಬಂದಿರುವ ಎಲ್ಲರಿಂದಲೂ ನಿಗದಿಪಡಿಸಿದ ಐದು ಶೆಕೆಲ್‌ಗಳನ್ನು ಈಡಾಗಿ ತೆಗೆದುಕೊಳ್ಳಬೇಕು.

17 “ಆದರೆ ಚೊಚ್ಚಲು ಆಕಳಿಗಾಗಲಿ ಕುರಿಗಾಗಲಿ ಆಡಿಗಾಗಲಿ ಈಡನ್ನು ಕೊಡಕೂಡದು. ಆ ಪಶುಗಳು ಪವಿತ್ರವಾಗಿವೆ. ಅವುಗಳ ರಕ್ತವನ್ನು ವೇದಿಕೆಯ ಮೇಲೆ ಚೆಲ್ಲಿ ಅವುಗಳ ಕೊಬ್ಬನ್ನು ಯೆಹೋವನಿಗೆ ಮೆಚ್ಚಿಗೆಕರವಾದ ಸುಗಂಧ ವಾಸನೆಯ ತ್ಯಾಗಮಯವಾದ ಕಾಣಿಕೆಯನ್ನಾಗಿ ಹೋಮಮಾಡಿರಿ. 18 ಆದರೆ ಅವುಗಳ ಮಾಂಸದಲ್ಲಿ ನಿವಾಳಿಸಲ್ಪಡುವ ಕಾಣಿಕೆಯಂತೆ ಎದೆಯ ಭಾಗ ಮತ್ತು ಬಲತೊಡೆ ನಿಮ್ಮದಾಗಿವೆ. 19 ಇಸ್ರೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲವನ್ನು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತವಾದ ಪಾಲಾಗಿ ಅನುಗ್ರಹಿಸಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ ನಿನ್ನ ನಂತರದ ಸಂತತಿಯವರೊಡನೆಯೂ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”

20 ಇದಲ್ಲದೆ ಯೆಹೋವನು ಆರೋನನಿಗೆ, “ಅವರ ಭೂಮಿಯಲ್ಲಿ ನಿನಗೆ ಯಾವ ಪಾಲೂ ದೊರೆಯುವುದಿಲ್ಲ. ಅವರ ಮಧ್ಯದಲ್ಲಿ ನೀನು ಭೂಮಿಯ ಯಾವ ಭಾಗವನ್ನೂ ಹೊಂದಿರುವುದಿಲ್ಲ. ಇಸ್ರೇಲರ ಮಧ್ಯದಲ್ಲಿ ಯೆಹೋವನಾದ ನಾನೇ ನಿನ್ನ ಪಾಲೂ ಭಾಗವೂ ಆಗಿದ್ದೇನೆ.

21 “ಲೇವಿಯರು ದೇವದರ್ಶನಗುಡಾರಕ್ಕೋಸ್ಕರ ಮಾಡುವ ಭಾರವಾದ ಕೆಲಸಕ್ಕೆ ಪ್ರತಿಫಲವಾಗಿ ಪ್ರತಿಯೊಬ್ಬ ಇಸ್ರೇಲನ ದಶಾಂಶವನ್ನು ನಾನು ಲೇವಿಯರಿಗೆ ಅವರ ಪಾಲಾಗಿ ಕೊಡುತ್ತಿದ್ದೇನೆ. 22 ಈಗಿನಿಂದ ಇಸ್ರೇಲರು ದೇವದರ್ಶನಗುಡಾರದೊಳಗೆ ಅತಿಕ್ರಮಿಸಿ ಬರಕೂಡದು; ಬಂದರೆ ತಮ್ಮ ಮೇಲೆ ದಂಡನೆಯನ್ನು ಬರಮಾಡಿಕೊಂಡು ಸಾಯುವರು. 23 ದೇವದರ್ಶನಗುಡಾರಕ್ಕೋಸ್ಕರ ಲೇವಿಯರು ಮಾತ್ರ ಕೆಲಸ ಮಾಡಬೇಕು. ದೇವದರ್ಶನಗುಡಾರದಲ್ಲಿ ಏನಾದರೂ ಅತಿಕ್ರಮಣ ನಡೆದರೆ ಇಸ್ರೇಲರ ದಂಡನೆಯನ್ನು ಅವರೇ ಪಡೆಯುವರು. ಈಗಿನಿಂದ ಇದೇ ಶಾಶ್ವತ ಕಟ್ಟಳೆ. ಇತರ ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ಭೂಮಿಯಲ್ಲಿ ಲೇವಿಯರಿಗೆ ಯಾವ ಪಾಲೂ ದೊರೆಯುವುದಿಲ್ಲ. 24 ಇಸ್ರೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಪಾಲನ್ನು ಲೇವಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. ಇವರಿಗೆ ಇಸ್ರೇಲರೊಂದಿಗೆ ಪಾಲು ದೊರೆಯುವುದಿಲ್ಲವೆಂದು ನಾನು ಲೇವಿಯರ ಕುರಿತು ಹೇಳಿದ ಮಾತಿಗೆ ಇದೇ ಕಾರಣ” ಎಂದು ಹೇಳಿದನು.

25 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 26 “ನೀನು ಲೇವಿಯರಿಗೆ ಇದನ್ನು ತಿಳಿಸಬೇಕು: ಇಸ್ರೇಲರು ತಮ್ಮ ಆದಾಯದಲ್ಲಿ ಕೊಡುವ ದಶಾಂಶವನ್ನು ನಿಮ್ಮ ಪಾಲೆಂದು ನಾನು ನಿಗದಿಪಡಿಸಿದ್ದೇನೆ. ಇಸ್ರೇಲರು ದಶಾಂಶ ಕೊಟ್ಟಾಗ ನೀವು ಆ ದಶಾಂಶದಲ್ಲಿ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಸಲ್ಲಿಸಬೇಕು. 27 ನೀವು ಹೀಗೆ ಸಮರ್ಪಿಸಿದ ಹತ್ತನೆಯ ಪಾಲು ಕಣದಲ್ಲಿನ ದವಸವನ್ನೂ ದ್ರಾಕ್ಷಿಆಲೆಯಿಂದ ರಸವನ್ನೂ ಕೊಟ್ಟಂತೆ ನಿಮ್ಮ ಲೆಕ್ಕದಲ್ಲಿ ಎಣಿಸಲ್ಪಡುವುದು. 28 ಇಸ್ರೇಲರಿಂದ ನಿಮಗೆ ಸಲ್ಲುವ ಹತ್ತನೆಯ ಪಾಲಿನಲ್ಲಿ ನೀವು ಯೆಹೋವನಿಗೋಸ್ಕರ ಹತ್ತನೆಯ ಭಾಗವನ್ನು ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು. 29 ಇಸ್ರೇಲರು ನಿಮಗೆ ಕೊಡುವ ಸಕಲ ಪದಾರ್ಥಗಳಿಂದ ನೀವು ಯೆಹೋವನಿಗೆ ಕೊಡಬೇಕಾಗಿರುವ ಪಾಲನ್ನು ಮತ್ತು ಪ್ರತಿಷ್ಠಿಸಲ್ಪಟ್ಟಿರುವ ಉತ್ತಮ ಭಾಗವನ್ನು ನೀವು ಪ್ರತ್ಯೇಕವಾಗಿಡಬೇಕು.

30 “ಮೋಶೆಯೇ, ಲೇವಿಯರಿಗೆ ಹೀಗೆ ಹೇಳು: ಆ ಕಾಣಿಕೆಗಳಲ್ಲಿ ಉತ್ತಮವಾದ ಭಾಗವನ್ನು ನೀವು ಯೆಹೋವನಿಗೆ ಕೊಡುವಾಗ, ಲೇವಿಯರಾದ ನಿಮಗೆ ಅದು ಕಣದ ಉತ್ಪಾದನೆಯಂತೆಯೂ ದ್ರಾಕ್ಷಿಆಲೆಯ ಉತ್ಪಾದನೆಯಂತೆಯೂ ಪರಿಗಣಿಸಲ್ಪಡುವುದು. 31 ಉಳಿದದ್ದನ್ನು ನೀವು ಮತ್ತು ನಿಮ್ಮ ಕುಟುಂಬದವರು ಎಲ್ಲಿ ಬೇಕಾದರೂ ತಿನ್ನಬಹುದು. ನೀವು ದೇವದರ್ಶನಗುಡಾರದಲ್ಲಿ ಮಾಡುವ ಕೆಲಸಕ್ಕೆ ಇದು ನಿಮಗೆ ಪ್ರತಿಫಲವಾಗಿದೆ. 32 ನೀವು ಯಾವಾಗಲೂ ಉತ್ತಮ ಭಾಗವನ್ನು ಯೆಹೋವನಿಗೆ ಕೊಟ್ಟರೆ, ಸಂಕಟದ ದಂಡನೆಯಿಂದ ತಪ್ಪಿಸಿಕೊಳ್ಳುವಿರಿ. ಇಸ್ರೇಲರು ಕೊಟ್ಟ ಪವಿತ್ರವಾದ ಕಾಣಿಕೆಗಳಿಗೆ ನೀವು ಅಪಮಾನ ಮಾಡುವುದಿಲ್ಲ ಮತ್ತು ನೀವು ಸಾಯುವುದಿಲ್ಲ.”

ಕೆಂಪು ಹಸುವಿನ ಬೂದಿ

19 ಯೆಹೋವನು ಮೋಶೆ ಮತ್ತು ಆರೋನರೊಡನೆ ಮಾತಾಡಿ ಹೀಗೆಂದನು: “ಯೆಹೋವನು ಆಜ್ಞಾಪಿಸಿದ ಸಂಪ್ರದಾಯದ ನಿಯಮವಿದು. ಯಾವ ದೋಷವಿಲ್ಲದ ಕೆಂಪು ಹಸುವನ್ನು ನಿನಗೆ ತಂದುಕೊಡುವಂತೆ ಇಸ್ರೇಲರಿಗೆ ಹೇಳು. ಆ ಹಸುವಿನಲ್ಲಿ ಯಾವ ಗಾಯಗಳಿರಬಾರದು ಮತ್ತು ಆ ಹಸುವು ಎಂದಿಗೂ ನೊಗವನ್ನು ಹೊತ್ತಿರಬಾರದು. ಅದನ್ನು ಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿರಿ. ಅವನು ಅದನ್ನು ಪಾಳೆಯದ ಹೊರಗೆ ಹೊಡಿಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆ ಮಾಡಿಸಬೇಕು. ಬಳಿಕ ಅವನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿಮಿಕಿಸಬೇಕು. ಬಳಿಕ ಅವನು ಆ ಹಸುವನ್ನು ಚರ್ಮ, ಮಾಂಸ, ರಕ್ತ ಮತ್ತು ಕಲ್ಮಶಗಳ ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಬೇಕು. ಯಾಜಕನು ದೇವದಾರು ಮರದ ಕಟ್ಟಿಗೆಯನ್ನೂ ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನೂ ಕೆಂಪು ದಾರವನ್ನೂ ತೆಗೆದುಕೊಂಡು, ಉರಿಯುತ್ತಿರುವ ಆ ಹಸುವಿನ ಮೇಲೆ ಎಸೆಯಬೇಕು. ಆ ಯಾಜಕನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿದ ನಂತರ ಪಾಳೆಯದೊಳಗೆ ಬರಬಹುದು. ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರುವನು. ಆ ಹಸುವನ್ನು ಸುಟ್ಟು ಹಾಕಿದವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಿಕೊಳ್ಳಬೇಕು; ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಆಗ ಶುದ್ಧನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಇಸ್ರೇಲರ ಶುದ್ಧೀಕರಣದ ನೀರನ್ನು ಸಿದ್ಧಪಡಿಸುವುದಕ್ಕಾಗಿ ಆ ಬೂದಿಯನ್ನು ಉಪಯೋಗಿಸಬೇಕು. ಅದು ದೋಷಪರಿಹಾರಕವಾದದ್ದು.

10 “ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಇದು ಇಸ್ರೇಲರಿಗೂ ಅವರ ಮಧ್ಯದಲ್ಲಿ ಇಳಿದುಕೊಂಡಿರುವ ಪರದೇಶಸ್ಥರಿಗೂ ಶಾಶ್ವತ ನಿಯಮ. 11 ಯಾವನಾದರೂ ಮನುಷ್ಯನ ಶವವನ್ನು ಮುಟ್ಟಿದರೆ, ಏಳು ದಿನಗಳವರೆಗೆ ಅಶುದ್ಧನಾಗಿರುವನು. 12 ಅವನು ಶುದ್ಧೀಕರಣದ ನೀರಿನಿಂದ ಮೂರನೆಯ ದಿನದಲ್ಲಿ ಮತ್ತು ತಿರುಗಿ ಏಳನೆಯ ದಿನದಲ್ಲಿ ತನ್ನನ್ನು ಶುದ್ಧೀಕರಿಸಿಕೊಳ್ಳಬೇಕು. ಆಗ ಅವನು ಶುದ್ಧನಾಗಿರುವನು. 13 ಒಬ್ಬನು ಮನುಷ್ಯನ ಶವವನ್ನು ಮುಟ್ಟಿ ತನ್ನನ್ನು ಶುದ್ಧೀಕರಿಸಿಕೊಳ್ಳದೆ ಹೋದರೆ ಅವನು ಯೆಹೋವನ ಪವಿತ್ರ ಗುಡಾರವನ್ನು ಅಶುದ್ಧಮಾಡುತ್ತಾನೆ. ಆದ್ದರಿಂದ ಆ ವ್ಯಕ್ತಿಯನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧೀಕರಣದ ವಿಶೇಷ ನೀರು ಅವನ ಮೇಲೆ ಚಿಮಿಕಿಸಲ್ಪಡದ ಕಾರಣ ಅವನು ಅಶುದ್ಧನಾಗಿಯೇ ಇರುವನು. ಅವನ ಅಶುದ್ಧತ್ವ ಅವನಲ್ಲಿ ನೆಲೆಸುವುದು. ಅವನು ಅಶುದ್ಧನಾಗಿಯೇ ಇರುವನು.

14 “ಯಾವನಾದರೂ ಗುಡಾರದಲ್ಲಿ ಸತ್ತರೆ ಅನುಸರಿಸಬೇಕಾದ ನಿಯಮವಿದು: ಒಬ್ಬನು ಗುಡಾರದಲ್ಲಿ ಸತ್ತರೆ, ಆ ಗುಡಾರವನ್ನು ಪ್ರವೇಶಿಸುವ ಪ್ರತಿಯೊಬ್ಬನು ಮತ್ತು ಆ ಗುಡಾರದಲ್ಲಿರುವ ಪ್ರತಿಯೊಬ್ಬನು ಅಶುದ್ಧನಾಗುವನು. ಅವರು ಏಳು ದಿನಗಳವರೆಗೆ ಅಶುದ್ಧರಾಗಿರುವರು. 15 ಮತ್ತು ಮುಚ್ಚಳವಿಲ್ಲದಿರುವ ಪ್ರತಿಯೊಂದು ಪಾತ್ರೆಯೂ ಅಶುದ್ಧವಾಗಿರುವುದು. 16 ಹೊರಗೆ ಹೋಗಿರುವವನು ಯುದ್ಧದಲ್ಲಿ ಸತ್ತವನ ಶವವನ್ನಾಗಲಿ ಸಹಜವಾಗಿ ಸತ್ತವನ ಶವವನ್ನಾಗಲಿ ಮನುಷ್ಯನ ಮೂಳೆಯನ್ನಾಗಲಿ ಅಥವಾ ಸಮಾಧಿಯನ್ನಾಗಲಿ ಮುಟ್ಟಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರವನು.

17 “ಆದ್ದರಿಂದ ಅಶುದ್ಧ ವ್ಯಕ್ತಿಯನ್ನು ಶುದ್ಧೀಕರಿಸುವುದಕ್ಕಾಗಿ ಶುದ್ಧೀಕರಣ ಯಜ್ಞದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ತೆಗೆದುಕೊಂಡು ಹರಿಯುವ ನೀರನ್ನು ಅದರ ಮೇಲೆ ಸುರಿಯಬೇಕು. 18 ಆಗ ಶುದ್ಧನಾಗಿರುವ ಒಬ್ಬನು ಹಿಸ್ಸೋಪ್ ಗಿಡದ ಎಳೆಕೊಂಬೆಯನ್ನು ಆ ನೀರಿನಲ್ಲಿ ಅದ್ದಿ ಗುಡಾರದ ಮೇಲೆಯೂ ಪಾತ್ರೆಗಳ ಮೇಲೆಯೂ ಮತ್ತು ಅದರೊಳಗಿದ್ದ ವ್ಯಕ್ತಿಗಳ ಮೇಲೆಯೂ ಚಿಮಿಕಿಸಬೇಕು. ಸತ್ತವನ ದೇಹವನ್ನು ಮುಟ್ಟಿದವನಿಗೂ ಯುದ್ಧದಲ್ಲಿ ಕೊಲ್ಲಲ್ಪಟ್ಟವನ ದೇಹವನ್ನು ಮುಟ್ಟಿದವನಿಗೂ ಸತ್ತವನ ಮೂಳೆಗಳನ್ನು ಮುಟ್ಟಿದವನಿಗೂ ನೀವು ಹೀಗೆ ಮಾಡಲೇಬೇಕು.

19 “ಶುದ್ಧನಾಗಿರುವವನು ಮೂರನೆಯ ದಿನದಲ್ಲಿಯೂ ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಚಿಮಿಕಿಸಬೇಕು. ಹೀಗೆ ಅವನು ಏಳನೆಯ ದಿನದಲ್ಲಿ ಶುದ್ಧನಾಗುವನು. ಬಳಿಕ ಅಶುದ್ಧನಾದವನು ತನ್ನ ಬಟ್ಟೆಯನ್ನು ತೊಳೆದುಕೊಳ್ಳಬೇಕು.

20 “ಅಶುದ್ಧನಾಗಿದ್ದರೂ ತನ್ನನ್ನು ಶುದ್ಧಮಾಡಿಕೊಳ್ಳದವನು ಯೆಹೋವನ ಗುಡಾರವನ್ನು ಅಶುದ್ಧಮಾಡಿದವನಾಗಿರುತ್ತಾನೆ. ಆದ್ದರಿಂದ ಅವನನ್ನು ಇಸ್ರೇಲರಿಂದ ಬಹಿಷ್ಕರಿಸಬೇಕು. ಶುದ್ಧಪಡಿಸಿಕೊಳ್ಳುವ ನೀರನ್ನು ಚಿಮಿಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ. 21 ಇದು ನಿಮಗೆ ಶಾಶ್ವತನಿಯಮ. ಶುದ್ಧಪಡಿಸುವ ಆ ನೀರನ್ನು ಚಿಮಿಕಿಸಿದವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಮತ್ತು ಆ ನೀರನ್ನು ಯಾವನಾದರೂ ಮುಟ್ಟಿದರೆ, ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು. 22 ಅಶುದ್ಧನಾದವನು ಮುಟ್ಟುವುದೆಲ್ಲಾ ಅಶುದ್ಧವಾಗುತ್ತದೆ. ಅಲ್ಲದೆ ಅವನನ್ನು ಮಟ್ಟುವವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.”

ಮಿರ್ಯಾಮಳ ಮರಣ

20 ಮೊದಲನೆಯ ತಿಂಗಳಲ್ಲಿ ಇಡೀ ಇಸ್ರೇಲ್ ಸಮುದಾಯವು ಚಿನ್ ಮರುಭೂಮಿಗೆ ಬಂದಿತು. ಅವರು ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ಸತ್ತಳು. ಆಕೆಯ ಶವವನ್ನು ಅಲ್ಲಿ ಸಮಾಧಿ ಮಾಡಲಾಯಿತು.

ಮೋಶೆಯ ತಪ್ಪು

ಅಲ್ಲಿ ನೀರಿಲ್ಲದಿದ್ದ ಕಾರಣ ಅವರು ಮೋಶೆ ಆರೋನರ ವಿರುದ್ಧವಾಗಿ ಸೇರಿಬಂದರು. ಜನರು ಮೋಶೆಯ ಸಂಗಡ ವಾದಮಾಡಿ, “ನಮ್ಮ ಸಹೋದರರು ಯೆಹೋವನ ಸನ್ನಿಧಿಯಲ್ಲಿ ಸತ್ತಾಗ ನಾವೂ ಸತ್ತುಹೋಗಿದ್ದರೆ ಎಷ್ಟೋ ಮೇಲಾಗಿತ್ತು. ಯೆಹೋವನ ಜನರನ್ನು ಈ ಮರುಭೂಮಿಗೆ ಯಾಕೆ ಕರೆದುಕೊಂಡು ಬಂದೆ? ನಾವು ಮತ್ತು ನಮ್ಮ ಪ್ರಾಣಿಗಳು ಇಲ್ಲಿ ಸಾಯಬೇಕೆಂದು ನೀನು ಇಚ್ಛಿಸುತ್ತೀಯೋ? ಈಜಿಪ್ಟಿನಿಂದ ನಮ್ಮನ್ನು ಇಲ್ಲಿಗೆ ಯಾಕೆ ಕರೆತಂದೆ? ಈ ಕೆಟ್ಟ ಸ್ಥಳಕ್ಕೆ ನಮ್ಮನ್ನು ಯಾಕೆ ಕರೆದುಕೊಂಡು ಬಂದೆ? ಇಲ್ಲಿ ಧಾನ್ಯವಾಗಲಿ ಅಂಜೂರವಾಗಲಿ ದ್ರಾಕ್ಷಿಯಾಗಲಿ ದಾಳಿಂಬೆಯಾಗಲಿ ಇಲ್ಲ, ಕುಡಿಯುವುದಕ್ಕೆ ನೀರೂ ಇಲ್ಲ” ಎಂದು ಹೇಳಿದರು.

ಮೋಶೆ ಆರೋನರು ಜನಸಮೂಹದ ಎದುರಿನಿಂದ ದೇವದರ್ಶನಗುಡಾರದ ಪ್ರವೇಶದ್ವಾರಕ್ಕೆ ಹೋಗಿ ಅಡ್ಡಬಿದ್ದರು. ಆಗ ಯೆಹೋವನ ಮಹಿಮೆಯು ಅವರಿಗೆ ಪ್ರತ್ಯಕ್ಷವಾಯಿತು.

ಆಗ ಯೆಹೋವನು ಮೋಶೆಯೊಡನೆ ಮಾತಾಡಿ, “ಬಳಿಕ ನೀನು ಮತ್ತು ನಿನ್ನ ಸಹೋದರನಾದ ಆರೋನನು ಜನರನ್ನು ಬಂಡೆಯ ಮುಂದೆ ಸಭೆಸೇರಿಸಿ, ಜನರ ಮುಂದೆ ಆ ಬಂಡೆಗೆ ಮಾತಾಡು. ಆಗ ನೀರು ಬಂಡೆಯಿಂದ ಹರಿಯುವುದು ಮತ್ತು ನೀರನ್ನು ಜನರಿಗೂ ಅವರ ಪಶುಗಳಿಗೂ ಕೊಡು” ಎಂದು ಹೇಳಿದನು.

ಕೋಲು ಪವಿತ್ರಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿತ್ತು. ಯೆಹೋವನು ಹೇಳಿದಂತೆ ಮೋಶೆ ಕೋಲನ್ನು ತೆಗೆದುಕೊಂಡನು. 10 ಜನರು ಬಂಡೆಯ ಮುಂದೆ ಒಟ್ಟಾಗಿ ಸೇರಿಬರಬೇಕೆಂದು ಮೋಶೆ ಆರೋನರು ಹೇಳಿದರು. ಆಗ ಮೋಶೆ, “ದ್ರೋಹಿಗಳೇ, ಈಗ ನನಗೆ ಕಿವಿಗೊಡಿರಿ. ನಿಮಗೋಸ್ಕರವಾಗಿ ಈ ಬಂಡೆಯಿಂದ ನೀರು ಹರಿಯುವಂತೆ ನಾವು ಮಾಡಬೇಕೋ?” ಎಂದು ಹೇಳಿ, 11 ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಎರಡು ಸಾರಿ ಬಂಡೆಯನ್ನು ಹೊಡೆದನು. ಬಂಡೆಯಿಂದ ನೀರು ಹರಿಯತೊಡಗಿತು. ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ನೀರು ದೊರೆಯಿತು.

12 ಆದರೆ ಯೆಹೋವನು ಮೋಶೆ ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರೇಲರ ಎದುರಿನಲ್ಲಿ ನನ್ನ ಪವಿತ್ರತೆಯನ್ನು ತೋರಿಸದೆ ಹೋದದ್ದರಿಂದ ಈ ಸಮುದಾಯದವರಿಗೆ ಕೊಡಲಿರುವ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗುವುದಿಲ್ಲ.” ಎಂದು ಹೇಳಿದನು.

13 ಇಸ್ರೇಲರು ಅಲ್ಲಿ ಯೆಹೋವನೊಡನೆ ವಾದ ಮಾಡಿದ್ದರಿಂದ ಆ ಸ್ಥಳವು “ಮೆರೀಬಾ ಬುಗ್ಗೆ” ಎಂದು ಕರೆಯಲ್ಪಟ್ಟಿತು. ಅದಲ್ಲದೆ ಯೆಹೋವನು ತಾನು ಪರಿಶುದ್ಧನು ಎಂಬುದನ್ನು ಅವರಿಗೆ ತೋರಿಸಿದ ಸ್ಥಳವು ಇದೇ.

ಎದೋಮ್ಯರು ಇಸ್ರೇಲರನ್ನು ದಾಟಿಹೋಗಲು ಬಿಡುವುದಿಲ್ಲ

14 ಮೋಶೆಯು ಕಾದೇಶಿನಲ್ಲಿದ್ದಾಗ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ,

“ನಿಮ್ಮ ಸಂಬಂಧಿಕರವಾದ ಇಸ್ರೇಲರು ಕೇಳಿಕೊಳ್ಳುವುದೇನೆಂದರೆ: ನಮಗೆ ಸಂಭವಿಸಿದ ಎಲ್ಲಾ ಕಷ್ಟಗಳು ನಿಮಗೆ ಗೊತ್ತಿದೆ. 15 ನಮ್ಮ ಪೂರ್ವಿಕರು ಈಜಿಪ್ಟ್ ದೇಶಕ್ಕೆ ಇಳಿದುಹೋದದ್ದೂ ನಾವು ಅಲ್ಲಿ ಬಹುಕಾಲ ವಾಸವಾಗಿದ್ದದ್ದೂ ಈಜಿಪ್ಟಿನವರು ನಮಗೂ ನಮ್ಮ ಪೂರ್ವಿಕರಿಗೂ ಕ್ರೂರರಾಗಿದ್ದದ್ದೂ ನಿಮಗೆ ತಿಳಿದದೆ. 16 ನಾವು ಯೆಹೋವನಿಗೆ ಮೊರೆಯಿಡಲಾಗಿ ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಈಜಿಪ್ಟಿನಿಂದ ಬಿಡಿಸಿದ್ದನ್ನು ನೀವು ಬಲ್ಲಿರಿ.

“ಈಗ ನಾವು ನಿಮ್ಮ ಪ್ರದೇಶದ ಗಡಿಯಲ್ಲಿರುವ ಕಾದೇಶೆಂಬ ಊರಲ್ಲಿದ್ದೇವೆ. 17 ನಿಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲಗಳಲ್ಲಿಯಾಗಲಿ ದ್ರಾಕ್ಷಿತೋಟಗಳಲ್ಲಿಯಾಗಲಿ ಹಾದುಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ತಮ್ಮ ದೇಶದ ಮೇರೆಗಳನ್ನು ದಾಟುವ ತನಕ ಎಡಕ್ಕಾಗಲಿ ಬಲಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು.

18 ಆದರೆ ಎದೋಮಿನ ಅರಸನು, “ನಮ್ಮ ದೇಶವನ್ನು ನೀವು ದಾಟಿಹೋಗಕೂಡದು. ದಾಟುವುದಾದರೆ, ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರಕೊಟ್ಟನು.

19 ಅದಕ್ಕೆ ಇಸ್ರೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದಕ್ಕೆ ಬೆಲೆ ಕೊಡುವೆವು. ನಮಗೆ ಕೇವಲ ನಡೆದುಕೊಂಡು ಹೋಗಲು ಅನುಮತಿ ಕೊಡಿ. ಇದೊಂದೇ ನಮ್ಮ ಚಿಕ್ಕ ಬೇಡಿಕೆ” ಎಂದು ಹೇಳಿದರು.

20 ಆದರೆ ಮತ್ತೆ ಎದೋಮ್ಯರು, “ನೀವು ನಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಾವು ಬಿಡುವುದಿಲ್ಲ” ಎಂದು ಉತ್ತರಿಸಿದರು.

ಬಳಿಕ ಎದೋಮ್ಯರ ಅರಸನು ಬಲಿಷ್ಠವಾದ ದೊಡ್ಡ ಸೈನ್ಯವನ್ನು ಕೂಡಿಸಿಕೊಂಡು ಇಸ್ರೇಲರ ವಿರುದ್ಧ ಯುದ್ಧಮಾಡಲು ಹೊರಟನು. 21 ಇಸ್ರೇಲರು ಅವನ ದೇಶವನ್ನು ಹಾದು ಹೋಗಲು ಎದೋಮ್ಯರ ಅರಸನು ಬಿಡಲಿಲ್ಲ. ಆಗ ಇಸ್ರೇಲರು ಬೇರೊಂದು ದಿಕ್ಕಿನಲ್ಲಿ ಹೋದರು.

ಆರೋನನ ಮರಣ

22 ಇಸ್ರೇಲರೆಲ್ಲರೂ ಕಾದೇಶಿನಿಂದ ಹೊರಟು ಹೋರ್ ಬೆಟ್ಟಕ್ಕೆ ಹೋದರು. 23 ಹೋರ್ ಬೆಟ್ಟವು ಎದೋಮ್ಯರ ಗಡಿಯ ಬಳಿಯಲ್ಲಿ ಇತ್ತು. ಯೆಹೋವನು ಮೋಶೆ ಆರೋನರಿಗೆ, 24 “ಆರೋನನು ಸತ್ತು ಪೂರ್ವಿಕರ ಬಳಿ ಸೇರುವ ಸಮಯ ಬಂದಿದೆ. ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ದೇಶದೊಳಗೆ ಆರೋನನು ಪ್ರವೇಶಿಸುವುದಿಲ್ಲ. ಯಾಕೆಂದರೆ ನೀವಿಬ್ಬರೂ ಮೆರೀಬಾ ಬುಗ್ಗೆಯ ಕುರಿತಾಗಿ ನಾನು ಕೊಟ್ಟ ಆಜ್ಞೆಗೆ ವಿಧೇಯರಾಗದಿದ್ದುದರಿಂದ ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ.

25 “ಈಗ ನೀನು ಆರೋನನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ. 26 ಆರೋನನ ಪ್ರತಿಷ್ಠಿತ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕು. ಆರೋನನು ಅಲ್ಲಿ ಬೆಟ್ಟದ ಮೇಲೆ ಸತ್ತು ಪೂರ್ವಿಕರ ಬಳಿ ಸೇರುವನು” ಎಂದು ಹೇಳಿದನು.

27 ಮೋಶೆಯು ಯೆಹೋವನ ಅಪ್ಪಣೆಗೆ ವಿಧೇಯನಾದನು. ಮೋಶೆ, ಆರೋನ ಮತ್ತು ಎಲ್ಲಾಜಾರ ಇವರು ಹೋರ್ ಬೆಟ್ಟವನ್ನು ಹತ್ತಿದರು. ಅವರು ಹೋಗುತ್ತಿರುವುದನ್ನು ಇಸ್ರೇಲರೆಲ್ಲರೂ ನೋಡಿದರು. 28 ಮೋಶೆಯು ಆರೋನನ ಪ್ರತಿಷ್ಠಿತಾ ವಸ್ತ್ರಗಳನ್ನು ಅವನಿಂದ ತೆಗೆದು ಅವನ ಮಗನಾದ ಎಲ್ಲಾಜಾರನ ಮೇಲೆ ಹಾಕಿದನು. ಬಳಿಕ ಆರೋನನು ಬೆಟ್ಟದ ಮೇಲೆ ಸತ್ತನು. ಮೋಶೆ ಮತ್ತು ಎಲ್ಲಾಜಾರನು ಬೆಟ್ಟದಿಂದ ಇಳಿದುಬಂದರು. 29 ಆರೋನನು ಸತ್ತನೆಂದು ಇಸ್ರೇಲರೆಲ್ಲರಿಗೆ ತಿಳಿಯಿತು. ಆದ್ದರಿಂದ ಇಸ್ರೇಲಿನಲ್ಲಿ ಪ್ರತಿಯೊಬ್ಬನೂ ಆರೋನನಿಗಾಗಿ ಮೂವತ್ತು ದಿನಗಳವರೆಗೆ ಶೋಕಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International