Beginning
ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು
28 ತರುವಾಯ, ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದರು. ಆಕೀಷನು, “ನೀನು ಮತ್ತು ನಿನ್ನ ಜನರು ಇಸ್ರೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೊತೆಗೂಡಬೇಕೆಂಬುದನ್ನು ನೀನು ಅರ್ಥಮಾಡಿಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು.
2 ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು.
ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು.
ಸೌಲನು ಮತ್ತು ಏಂದೋರಿನ ಯಕ್ಷಿಣಿ
3 ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು.
ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು.
4 ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು. 5 ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು. 6 ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲಿಲ್ಲ. 7 ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು.
ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು.
8 ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಆ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು.
9 ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು.
10 ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು.
11 ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು.
ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು.
12 ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು.
13 ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು.
ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ[a] ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು.
14 ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು.
ಆ ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು.
ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗನಮಸ್ಕಾರ ಮಾಡಿದನು. 15 ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು.
ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲೀ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು.
16 ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ? 17 ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ಆ ನೆರೆಯವನು. 18 ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದ್ದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ. 19 ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು.
20 ಆ ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುವೇಲನು ಹೇಳಿದ ಮಾತುಗಳನ್ನು ಕೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗಲು ಮತ್ತು ರಾತ್ರಿ ಏನನ್ನೂ ತಿಂದಿರಲಿಲ್ಲ; ಆದ್ದರಿಂದ ಅವನು ಬಹಳ ಬಲಹೀನನಾಗಿದ್ದನು.
21 ಆ ಹೆಂಗಸು ಸೌಲನ ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವುದನ್ನು ಅವಳು ನೋಡಿ, “ಇಲ್ಲಿ ನೋಡು, ನಾನು ನಿನ್ನ ಸೇವಕಿ. ನಾನು ನಿನಗೆ ವಿಧೇಯಳಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಣಿಸಿ ನೀನು ಹೇಳಿದ್ದನ್ನು ಮಾಡಿದೆ. 22 ಈಗ ದಯವಿಟ್ಟು ನನ್ನ ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಕೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಿರುವುದು” ಎಂದು ಹೇಳಿದಳು.
23 ಆದರೆ ಸೌಲನು ನಿರಾಕರಿಸಿ, “ನಾನು ತಿನ್ನುವುದಿಲ್ಲ” ಅಂದನು.
ಊಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಮಂಚದ ಮೇಲೆ ಕುಳಿತನು. 24 ಆ ಹೆಂಗಸಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯ್ದಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ನಾದಿದಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು. 25 ಆ ಹೆಂಗಸು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳು ಊಟಮಾಡಿದರು. ನಂತರ ಆ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು.
ಫಿಲಿಷ್ಟಿಯರ ಅಧಿಪತಿಗಳು ದಾವೀದನ ಸಹಾಯವನ್ನು ನಿರಾಕರಿಸಿದರು
29 ಫಿಲಿಷ್ಟಿಯರ ಸೈನಿಕರೆಲ್ಲಾ ಅಫೇಕಿನಲ್ಲಿ ಒಟ್ಟುಗೂಡಿದರು. ಇಸ್ರೇಲರು ಇಜ್ರೇಲ್ ಬಳಿಯಿರುವ ಚಿಲುಮೆಯ ಹತ್ತಿರ ಪಾಳೆಯಮಾಡಿಕೊಂಡರು. 2 ಫಿಲಿಷ್ಟಿಯರ ಅಧಿಪತಿಗಳು ನೂರು ಜನರ ಗುಂಪುಗಳಾಗಿಯೂ ಒಂದು ಸಾವಿರ ಜನರ ಗುಂಪುಗಳಾಗಿಯೂ ಬರುತ್ತಿದ್ದರು. ದಾವೀದನು ಮತ್ತು ಅವನ ಜನರು ಆಕೀಷನ ಹಿಂದೆ ಬರುತ್ತಿದ್ದರು.
3 ಫಿಲಿಷ್ಟಿಯರ ಅಧಿಪತಿಗಳು, “ಈ ಇಬ್ರಿಯರು ಇಲ್ಲಿ ಮಾಡುತ್ತಿರುವುದೇನು?” ಎಂದು ಆಕೀಷನನ್ನು ಕೇಳಿದರು.
ಆಕೀಷನು ಫಿಲಿಷ್ಟಿಯರ ಸೇನಾಧಿಪತಿಗಳಿಗೆ, “ಇವನು ದಾವೀದ. ದಾವೀದನು ಸೌಲನ ಅಧಿಕಾರಿಗಳಲ್ಲಿ ಒಬ್ಬನು. ದಾವೀದನು ಬಹಳ ಕಾಲದಿಂದ ನನ್ನೊಡನೆ ಇದ್ದಾನೆ. ದಾವೀದನು ಸೌಲನನ್ನು ತೊರೆದು ನನ್ನ ಬಳಿಗೆ ಬಂದಾಗಿನಿಂದ ನಾನು ಅವನಲ್ಲಿ ಯಾವ ತಪ್ಪುನ್ನೂ ಗುರುತಿಸಿಲ್ಲ” ಎಂದನು.
4 ಆದರೆ ಫಿಲಿಷ್ಟಿಯರ ಅಧಿಪತಿಗಳು ಆಕೀಷನ ಮೇಲೆ ಬಹಳ ಕೋಪಗೊಂಡು, “ದಾವೀದನನ್ನು ಹಿಂದಕ್ಕೆ ಕಳುಹಿಸು! ನೀನು ಕೊಟ್ಟಿರುವ ನಗರಕ್ಕೆ ದಾವೀದನು ಹಿಂದಿರುಗಿ ಹೋಗಲೇಬೇಕು. ಅವನು ನಮ್ಮೊಡನೆ ಯುದ್ಧಕ್ಕೆ ಬರುವಂತಿಲ್ಲ. ಅವನು ನಮ್ಮ ಜೊತೆಯಲ್ಲಿದ್ದರೆ, ಆಗ ನಮ್ಮ ಪಾಳೆಯದಲ್ಲಿ ಒಬ್ಬ ಶತ್ರುವಿದ್ದಂತಾಗುತ್ತದೆ. ಅವನು ನಮ್ಮ ಜನರನ್ನು ಕೊಲ್ಲುವುದರ ಮೂಲಕ ತನ್ನ ರಾಜನ ಮೆಚ್ಚಿಕೆಯನ್ನು ಗಳಿಸುತ್ತಾನೆ. 5 ದಾವೀದನೆಂಬ ಈ ವ್ಯಕ್ತಿಯನ್ನು ಕುರಿತು, ಇಸ್ರೇಲರು ಕುಣಿಯುತ್ತಾ ಹಾಡುವ ಹಾಡು ಹೀಗಿದೆ:
‘ಸೌಲನು ಸಾವಿರಗಟ್ಟಲೆ ಶತ್ರುಗಳನ್ನು ಕೊಂದನು.
ದಾವೀದನು ಲಕ್ಷಾಂತರಗಟ್ಟಲೆ ಶತ್ರುಗಳನ್ನು ಕೊಂದನು!’”
ಎಂದು ಹೇಳಿದರು.
6 ಆದ್ದರಿಂದ ಆಕೀಷನು ದಾವೀದನನ್ನು ಕರೆದು, “ಯೆಹೋವನಾಣೆ, ನೀನು ನನಗೆ ಯಥಾರ್ಥನಾಗಿರುವೆ. ನೀನು ನನ್ನ ಸೈನ್ಯದಲ್ಲಿ ಸೇವೆ ಮಾಡುವುದೂ ನನಗೆ ಇಷ್ಟ. ನೀನು ನನ್ನ ಹತ್ತಿರಕ್ಕೆ ಬಂದಾಗಿನಿಂದ ನಾನು ನಿನ್ನಲ್ಲಿ ಯಾವ ತಪ್ಪನ್ನೂ ಗುರುತಿಸಿಲ್ಲ. ನೀನು ಒಳ್ಳೆಯವನೆಂದು ಫಿಲಿಷ್ಟಿಯರ ಅಧಿಪತಿಗಳು[b] ಸಹ ಯೋಚಿಸಿದ್ದಾರೆ. 7 ಆದ್ದರಿಂದ ಸಮಾಧಾನದಿಂದ ಹಿಂದಿರುಗಿ ಹೋಗು. ಫಿಲಿಷ್ಟಿಯರ ಅಧಿಪತಿಗಳ ವಿರುದ್ಧ ಏನನ್ನೂ ಮಾಡಬೇಡ” ಎಂದು ಹೇಳಿದನು.
8 ದಾವೀದನು, “ನಾನು ಮಾಡಿರುವ ತಪ್ಪಾದರೂ ಏನು? ನಾನು ನಿನ್ನ ಹತ್ತಿರಕ್ಕೆ ಬಂದಾಗಿನಿಂದ ಈಗಿನವರೆಗೆ ನನ್ನಲ್ಲಿ ನೀನು ಗುರುತಿಸಿರುವ ದುಷ್ಟತನವಾದರೂ ಏನು? ರಾಜನಾದ ನನ್ನ ಒಡೆಯನ ಶತ್ರುಗಳ ವಿರುದ್ಧ ಹೋರಾಡಲು ನನ್ನನ್ನು ಬಿಡುವುದಿಲ್ಲವೇಕೆ?” ಎಂದು ಹೇಳಿದನು.
9 ಆಕೀಷನು, “ನೀನು ಒಳ್ಳೆಯವನೆಂದು ನಾನು ನಂಬುತ್ತೇನೆ. ನೀನು ದೇವದೂತನಂತಿರುವೆ. ಆದರೆ ಫಿಲಿಷ್ಟಿಯ ಸೇನಾಧಿಪತಿಗಳು, ‘ದಾವೀದನು ನಮ್ಮ ಜೊತೆ ಯುದ್ಧಕ್ಕೆ ಬರುವಂತಿಲ್ಲ’ ಎಂದು ಈಗಲೂ ಹೇಳುತ್ತಿದ್ದಾರೆ. 10 ನೀನು ಮತ್ತು ನಿನ್ನ ಜನರು ಮುಂಜಾನೆಯಲ್ಲಿಯೇ ಹಿಂದಿರುಗಿ ಹೋಗಿ. ನಾನು ನಿನಗೆ ಕೊಟ್ಟಿರುವ ನಗರಕ್ಕೆ ಹಿಂದಿರುಗು. ಅಧಿಪತಿಗಳು ನಿನ್ನ ಬಗ್ಗೆ ಹೇಳುತ್ತಿರುವ ಕೆಟ್ಟ ಮಾತುಗಳಿಗೆ ಗಮನ ನೀಡಬೇಡ. ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ಸೂರ್ಯನು ಮೇಲೇರುವಷ್ಟರಲ್ಲಿ ನೀನು ನಮ್ಮನ್ನು ಬಿಟ್ಟುಹೋಗು” ಎಂದು ಹೇಳಿದನು.
11 ಆದ್ದರಿಂದ ದಾವೀದನು ಮತ್ತು ಅವನ ಜನರು ಮಾರನೆಯ ದಿನ ಬೆಳಿಗ್ಗೆ ಬೇಗನೆ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿ ಹೋದರು. ಫಿಲಿಷ್ಟಿಯರು ಇಜ್ರೇಲಿಗೆ ಹೋದರು.
ಚಿಕ್ಲಗಿಗೆ ಅಮಾಲೇಕ್ಯರ ಆಕ್ರಮಣ
30 ಮೂರನೆಯ ದಿನ ದಾವೀದನು ಮತ್ತು ಅವನ ಜನರು ಚಿಕ್ಲಗ್ ಊರಿಗೆ ಬಂದರು. ಅಮಾಲೇಕ್ಯರು ಚಿಕ್ಲಗನ್ನು ಆಕ್ರಮಣ ಮಾಡಿರುವುದನ್ನು ಅವರು ನೋಡಿದರು. ಅಮಾಲೇಕ್ಯರು ನೆಗೆವ್ ಪ್ರದೇಶದ ಮೇಲೆ ದಾಳಿ ಮಾಡಿದರು. ಅವರು ಚಿಕ್ಲಗನ್ನು ಆಕ್ರಮಿಸಿದ್ದರು ಮತ್ತು ಆ ನಗರವನ್ನು ಸುಟ್ಟುಹಾಕಿದ್ದರು. 2 ಅವರು ಚಿಕ್ಲಗಿನ ಸ್ತ್ರೀಯರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಎಲ್ಲರನ್ನೂ ಬಂಧಿಗಳನ್ನಾಗಿ ಎಳೆದುಕೊಂಡು ಹೋಗಿದ್ದರು; ಅವರು ಯಾರನ್ನೂ ಕೊಂದಿರಲಿಲ್ಲ, ಆದರೆ ಎಲ್ಲರನ್ನೂ ಎಳೆದುಕೊಂಡು ಹೋಗಿದ್ದರು.
3 ದಾವೀದನು ಮತ್ತು ಅವನ ಜನರು ಚಿಕ್ಲಗಿಗೆ ಬಂದರು. ನಗರವು ಸುಡುತ್ತಿರುವುದನ್ನು ಅವರು ನೋಡಿದರು. ಅವರ ಹೆಂಡತಿಯರಾಗಲಿ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಅಲ್ಲಿರಲಿಲ್ಲ. ಅಮಾಲೇಕ್ಯರು ಅವರನ್ನು ಎಳೆದುಕೊಂಡು ಹೋಗಿದ್ದರು. 4 ದಾವೀದ ಮತ್ತು ಅವನ ಸೈನ್ಯದ ಇತರರು ಶಕ್ತಿಮೀರಿ ಜೋರಾಗಿ ಅತ್ತರು. 5 ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನ ಅಹೀನೋವಮಳನ್ನೂ ಕರ್ಮೆಲಿನ ನಾಬಾಲನ ವಿಧವೆಯಾದ ಅಬೀಗೈಲಳನ್ನೂ ಅಮಾಲೇಕ್ಯರು ಎಳೆದುಕೊಂಡು ಹೋಗಿದ್ದರು.
6 ಸೈನ್ಯದಲ್ಲಿದ್ದ ಎಲ್ಲರೂ ದುಃಖತಪ್ತರಾಗಿದ್ದರು ಮತ್ತು ಕೋಪಗೊಂಡಿದ್ದರು; ಯಾಕೆಂದರೆ ಅವರ ಗಂಡು ಮತ್ತು ಹೆಣ್ಣುಮಕ್ಕಳೆಲ್ಲ ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದರು. ದಾವೀದನನ್ನು ಕಲ್ಲುಗಳಿಂದ ಕೊಲ್ಲಬೇಕೆಂದು ಅವರು ಮಾತಾಡಿಕೊಳ್ಳುತ್ತಿದ್ದರು. ದಾವೀದನು ಇದರಿಂದ ತಳಮಳಗೊಂಡರೂ ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು. 7 ದಾವೀದನು ಯಾಜಕನಾದ ಎಬ್ಯಾತಾರನಿಗೆ, “ಏಫೋದನ್ನು ತೆಗೆದುಕೊಂಡು ಬಾ” ಎಂದನು. ಅವನು ಎಫೋದನ್ನು ತಂದನು.
8 ನಂತರ ದಾವೀದನು ಯೆಹೋವನಲ್ಲಿ, “ನಮ್ಮ ಕುಟುಂಬಗಳನ್ನು ಅಪಹರಿಸಿದ ಜನರನ್ನು ನಾನು ಅಟ್ಟಿಸಿಕೊಂಡು ಹೋಗಬೇಕೇ? ನಾನು ಅವರನ್ನು ಸೆರೆಹಿಡಿಯುವೆನೇ?” ಎಂದು ಪ್ರಾರ್ಥಿಸಿದನು.
ಯೆಹೋವನು, “ಅವರನ್ನು ಅಟ್ಟಿಸಿಕೊಂಡು ಹೋಗು. ಅವರನ್ನು ನೀನು ಸೆರೆಹಿಡಿಯಬಹುದು. ನಿಮ್ಮ ಕುಟುಂಬಗಳನ್ನು ನೀವು ರಕ್ಷಿಸಬಹುದು” ಎಂದು ಉತ್ತರಿಸಿದನು.
ದಾವೀದ ಮತ್ತು ಅವನ ಜನರು ಈಜಿಪ್ಟಿನ ಗುಲಾಮನನ್ನು ಕಂಡರು
9-10 ದಾವೀದನು ತನ್ನ ಆರುನೂರು ಜನರೊಂದಿಗೆ ಬೆಸೋರ್ ಹಳ್ಳಕ್ಕೆ ಹೋದನು. ಸುಮಾರು ಇನ್ನೂರು ಜನರು ಬಹಳ ಆಯಾಸಗೊಂಡು ಬಲಹೀನರಾಗಿದ್ದುದರಿಂದ ಅಲ್ಲಿಯೇ ಉಳಿದರು. ಆದ್ದರಿಂದ ದಾವೀದನು ಮತ್ತು ಅವನ ನಾನೂರು ಜನರು ಅಮಾಲೇಕ್ಯರನ್ನು ಅಟ್ಟಿಸಿಕೊಂಡು ಹೋದರು.
11 ಈಜಿಪ್ಟಿನವನೊಬ್ಬನು ಹೊಲದಲ್ಲಿ ಬಿದ್ದಿರುವುದನ್ನು ದಾವೀದನ ಜನರು ಕಂಡರು. ಅವರು ಈಜಿಪ್ಟಿನವನನ್ನು ದಾವೀದನ ಹತ್ತಿರಕ್ಕೆ ತಂದರು. ಅವರು ಈಜಿಪ್ಟಿನವನಿಗೆ ಕುಡಿಯಲು ನೀರನ್ನು ಮತ್ತು ತಿನ್ನಲು ಆಹಾರವನ್ನು ಕೊಟ್ಟರು. 12 ಅವರು ಈಜಿಪ್ಟಿನವನಿಗೆ ಅಂಜೂರದ ಹಣ್ಣಿನ ಉಂಡೆಯನ್ನೂ ಎರಡು ಗೊಂಚಲು ಒಣ ದ್ರಾಕ್ಷಿಯನ್ನೂ ಕೊಟ್ಟರು. ಅವನು ತಿಂದನಂತರ ಚೇತರಿಸಿಕೊಂಡನು. ಅವನು ಮೂರು ದಿವಸ ಹಗಲಿರುಳು ಆಹಾರವನ್ನೇನೂ ತಿಂದಿರಲಿಲ್ಲ; ನೀರನ್ನೂ ಕುಡಿದಿರಲಿಲ್ಲ.
13 ದಾವೀದನು ಈಜಿಪ್ಟಿನವನನ್ನು, “ನಿಮ್ಮ ಒಡೆಯನು ಯಾರು? ನೀನು ಬಂದಿರುವುದು ಎಲ್ಲಿಂದ?” ಎಂದು ಕೇಳಿದನು.
ಈಜಿಪ್ಟಿನವನು, “ನಾನು ಒಬ್ಬ ಈಜಿಪ್ಟಿನವನು ನಾನು ಒಬ್ಬ ಅಮಾಲೇಕ್ಯನ ಗುಲಾಮನು. ಮೂರು ದಿನಗಳ ಹಿಂದೆ ನಾನು ಅಸ್ವಸ್ಥನಾಗಿದ್ದರಿಂದ ನಮ್ಮ ಒಡೆಯನು ನನ್ನನ್ನು ಬಿಟ್ಟುಹೋದನು. 14 ಕೆರೇತ್ಯರು ವಾಸಿಸುವ ನೆಗೆವ್ ಮೇಲೆ ನಾವು ಆಕ್ರಮಣ ಮಾಡಿದೆವು. ನಾವು ಯೆಹೂದ ದೇಶದ ಮೇಲೆ ಮತ್ತು ಕಾಲೇಬ್ಯರು ವಾಸಿಸುವ ನೆಗೆವ್ ಪ್ರಾಂತ್ಯಗಳ ಮೇಲೆ ಆಕ್ರಮಣ ಮಾಡಿದೆವು. ನಾವು ಚಿಕ್ಲಗನ್ನು ಸುಟ್ಟುಹಾಕಿದೆವು” ಎಂದು ಹೇಳಿದನು.
15 ದಾವೀದನು ಈಜಿಪ್ಟಿನವನನ್ನು, “ನಮ್ಮ ಕುಟುಂಬಗಳನ್ನು ಅಪಹರಿಸಿರುವ ಜನರ ಹತ್ತಿರಕ್ಕೆ ನಮ್ಮನ್ನು ಕರೆದುಕೊಂಡು ಹೋಗುವೆಯಾ?” ಎಂದು ಕೇಳಿದನು.
ಈಜಿಪ್ಟಿನವನು, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಇಲ್ಲವೆ ನನ್ನ ಒಡೆಯನಿಗೆ ಮರಳಿ ಒಪ್ಪಿಸುವುದಿಲ್ಲವೆಂದು ದೇವರ ಮುಂದೆ ಪ್ರಮಾಣ ಮಾಡಿರಿ. ಆಗ ನಾನು ನಿಮ್ಮವರನ್ನು ಕಂಡು ಹಿಡಿಯಲು ಸಹಾಯ ಮಾಡುತ್ತೇನೆ” ಎಂದು ಹೇಳಿದನು.
ದಾವೀದನು ಅಮಾಲೇಕ್ಯರನ್ನು ಸೋಲಿಸುವನು
16 ಈಜಿಪ್ಟಿನವನು ದಾವೀದನನ್ನು ಅಮಾಲೇಕ್ಯರ ಬಳಿಗೆ ಕರೆದುಕೊಂಡು ಹೋದನು. ಅವರು ತಿನ್ನುತ್ತಾ ಕುಡಿಯುತ್ತಾ ಸುತ್ತುವರಿದು ನೆಲದ ಮೇಲೆ ಬಿದ್ದಿದ್ದರು. ಫಿಲಿಷ್ಟಿಯರ ಮತ್ತು ಯೆಹೂದ್ಯರ ದೇಶದಿಂದ ಸೂರೆಮಾಡಿದ ವಸ್ತುಗಳಿಂದ ಸಂಭ್ರಮವನ್ನು ಆಚರಿಸುತ್ತಿದ್ದರು. 17 ದಾವೀದನು ಅವರನ್ನು ಸೋಲಿಸಿ ಅವರನ್ನು ಕೊಂದನು. ಅವರು ಹೊತ್ತಾರೆಯಿಂದ ಮಾರನೆಯ ದಿನದ ಸಂಜೆಯವರೆಗೆ ಹೋರಾಡಿದರು. ನಾನೂರು ಮಂದಿ ಯುವಕರು ತಮ್ಮ ಒಂಟೆಗಳ ಮೇಲೇರಿ ಓಡಿಹೋದದ್ದನ್ನು ಬಿಟ್ಟರೆ, ಉಳಿದ ಅಮಾಲೇಕ್ಯರಲ್ಲಿ ಯಾರೂ ತಪ್ಪಿಸಿಕೊಳ್ಳಲಾಗಲಿಲ್ಲ.
18 ದಾವೀದನು ತನ್ನ ಇಬ್ಬರು ಹೆಂಡತಿಯರನ್ನು ಮರಳಿ ಪಡೆದನು. ಅಮಾಲೇಕ್ಯರು ಸೂರೆಮಾಡಿದ್ದೆಲ್ಲವನ್ನೂ ದಾವೀದನು ಮತ್ತೆ ಹಿಂದಕ್ಕೆ ಪಡೆದನು. 19 ಏನೂ ಕಳೆದು ಹೋಗಿರಲಿಲ್ಲ. ಅವರು ತಮ್ಮ ಎಲ್ಲ ಮಕ್ಕಳನ್ನೂ ಮುದುಕರನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಮತ್ತೆ ಪಡೆದುಕೊಂಡರು. ಅವರು ತಮ್ಮ ಬೆಲೆಬಾಳುವ ವಸ್ತುಗಳನ್ನೂ ಅಮಾಲೇಕ್ಯರು ತೆಗೆದುಕೊಂಡು ಹೋಗಿದ್ದ ಎಲ್ಲವನ್ನೂ ಮತ್ತೆ ಪಡೆದುಕೊಂಡರು. ಹೀಗೆ ದಾವೀದನು ಎಲ್ಲವನ್ನೂ ತೆಗೆದುಕೊಂಡು ಬಂದನು. 20 ದಾವೀದನು ಎಲ್ಲ ಕುರಿಗಳನ್ನು ಮತ್ತು ದನಗಳನ್ನು ತೆಗೆದುಕೊಂಡನು. ಈ ಪಶುಗಳು ಮುಂದೆ ಹೋಗುವಂತೆ ದಾವೀದನ ಜನರು ಮಾಡಿದರು. ದಾವೀದನ ಜನರು, “ಅವು ದಾವೀದನ ಕೊಡುಗೆಗಳು” ಎಂದು ಹೇಳಿದರು.
ಎಲ್ಲರೂ ಸಮಾನವಾಗಿ ಹಂಚಿಕೊಂಡರು
21 ದಾವೀದನು ತನ್ನ ಇನ್ನೂರು ಮಂದಿ ಉಳಿದುಕೊಂಡಿದ್ದ ಬೆಸೋರ್ ಹಳ್ಳಕ್ಕೆ ಬಂದನು. ತಮ್ಮ ಅತಿಯಾದ ಆಯಾಸದಿಂದಲೂ ಬಲಹೀನತೆಯಿಂದಲೂ ದಾವೀದನನ್ನು ಹಿಂಬಾಲಿಸಲಾಗದ ಜನರೇ ಇವರು. ದಾವೀದನನ್ನು ಮತ್ತು ಅವನೊಡನೆ ಹೋಗಿದ್ದ ಸೈನಿಕರನ್ನು ಸಂಧಿಸಲು ಇವರು ಹೊರಗೆ ಬಂದರು. ದಾವೀದ ಮತ್ತು ಅವನ ಸೈನ್ಯವು ಸಮೀಪಿಸಿದಾಗ, ಬೆಸೋರ್ ಹಳ್ಳದಲ್ಲಿದ್ದ ಜನರು ಅವರನ್ನು ವಂದಿಸಿದರು. ದಾವೀದನು ಸಹ ಅವರನ್ನು ಸಂಧಿಸಿ ಅವರ ಯೋಗಕ್ಷೇಮವನ್ನು ವಿಚಾರಿಸಿದನು. 22 ಆದರೆ ದಾವೀದನ ಜೊತೆಯಲ್ಲಿ ಹೋಗಿದ್ದ ಜನರ ಗುಂಪಿನಲ್ಲಿ ಕೆಟ್ಟ ಜನರೂ ಕಿಡಿಗೇಡಿಗಳೂ ಇದ್ದರು. ಆ ಕೀಡಿಗೇಡಿಗಳು, “ಈ ಇನ್ನೂರು ಜನರು ನಮ್ಮೊಡನೆ ಬರಲಿಲ್ಲ. ಆದ್ದರಿಂದ ನಾವು ವಶಪಡಿಸಿಕೊಂಡ ವಸ್ತುಗಳಲ್ಲಿ ಯಾವುದನ್ನೂ ಇವರಿಗೆ ಕೊಡುವುದಿಲ್ಲ. ಇವರು ತಮ್ಮ ಹೆಂಡತಿಯರನ್ನು ಮತ್ತು ಮಕ್ಕಳನ್ನು ಮಾತ್ರ ತೆಗೆದುಕೊಳ್ಳಬಹುದು” ಎಂದು ಹೇಳಿದರು.
23 ದಾವೀದನು, “ನನ್ನ ಸಹೋದರರೇ, ಆ ರೀತಿ ಮಾಡಬೇಡಿ! ಯೆಹೋವನು ನಮಗೆ ದಯಪಾಲಿಸಿರುವುದನ್ನು ಕುರಿತು ಯೋಚಿಸಿ! ನಮ್ಮ ಮೇಲೆ ಧಾಳಿಮಾಡಿದ ಶತ್ರುಗಳನ್ನು ಸೋಲಿಸಲು ಯೆಹೋವನು ನಮ್ಮನ್ನು ನೇಮಿಸಿದನು. 24 ನೀವು ಹೇಳುವುದನ್ನು ಯಾರೂ ಕೇಳುವುದಿಲ್ಲ! ಯುದ್ಧಮಾಡುವವನಿಗೆ ಸಿಗುವ ಪಾಲು ಮತ್ತು ಯುದ್ಧ ಸಾಮಾಗ್ರಿಗಳನ್ನು ಕಾಯುವವನಿಗೆ ಸಿಗುವ ಪಾಲು ಒಂದೇ ಸಮನಾಗಿರಬೇಕು. ಪ್ರತಿಯೊಬ್ಬರ ಪಾಲೂ ಒಂದೇ ಸಮವಾಗಿರಬೇಕು” ಎಂದು ಉತ್ತರಿಸಿದನು. 25 ಇಸ್ರೇಲಿಗೆ ದಾವೀದನು ಇದನ್ನು ಆಜ್ಞೆಯನ್ನಾಗಿ ಮತ್ತು ನಿಯಮವನ್ನಾಗಿ ಮಾಡಿದನು. ಈ ನಿಯಮವು ಇವತ್ತಿಗೂ ಮುಂದುವರಿಯುತ್ತಿದೆ.
26 ದಾವೀದನು ಚಿಕ್ಲಗಿಗೆ ಆಗಮಿಸಿದನು. ನಂತರ ಅವನು ಅಮಾಲೇಕ್ಯರಿಂದ ವಶಪಡಿಸಿಕೊಂಡಿದ್ದ ಕೆಲವು ವಸ್ತುಗಳನ್ನು ಯೆಹೂದದ ಅವನ ಗೆಳೆಯರಿಗೂ ನಾಯಕರಿಗೂ ಕಳುಹಿಸಿದನು. ದಾವೀದನು, “ಯೆಹೋವನ ಶತ್ರುಗಳಿಂದ ನಾವು ವಶಪಡಿಸಿಕೊಂಡ ವಸ್ತುಗಳ ಕೊಡುಗೆಯು ನಿಮಗಾಗಿ ಇಲ್ಲಿದೆ” ಎಂದು ಹೇಳಿದನು.
27 ದಾವೀದನು ಅಮಾಲೇಕ್ಯರಿಂದ ವಶಪಡಿಸಿಕೊಂಡ ಕೆಲವು ವಸ್ತುಗಳನ್ನು ಬೇತೇಲಿನವರಿಗೆ, ನೆಗೆವಿನ ರಾಮೋತಿನವರಿಗೆ, ಯತ್ತೀರಿನವರಿಗೆ, 28 ಅರೋಯೇರಿನವರಿಗೆ, ಸಿಪ್ಮೋತಿನವರಿಗೆ, ಎಷ್ಟೆಮೋವದವರಿಗೆ, 29 ರಾಕಾಲಿನವರಿಗೆ, ಎರಹ್ಮೇಲ್ಯರ ಮತ್ತು ಕೇನ್ಯರ ಪಟ್ಟಣಗಳಿಗೆ, 30 ಹೊರ್ಮದವರಿಗೆ, ಬೋರಾಷಾನಿನವರಿಗೆ, ಅತಾಕಿನವರಿಗೆ 31 ಮತ್ತು ಹೆಬ್ರೋನಿನವರಿಗೆ ಕಳುಹಿಸಿಕೊಟ್ಟನು ಮತ್ತು ತನ್ನ ಜನರು ಹೋಗಿದ್ದ ಇತರ ಸ್ಥಳಗಳ ನಾಯಕರಿಗೂ ಆ ವಸ್ತುಗಳಲ್ಲಿ ಕೆಲವನ್ನು ಕಳುಹಿಸಿದನು.
ಸೌಲನ ಮರಣ
31 ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಿದರು. ಇಸ್ರೇಲರು ಫಿಲಿಷ್ಟಿಯರಿಂದ ಸೋತು ಓಡಿಹೋದರು. ಬಹಳ ಜನ ಇಸ್ರೇಲರು ಗಿಲ್ಬೋವ ಶಿಖರದಲ್ಲಿ ಹತರಾದರು. 2 ಫಿಲಿಷ್ಟಿಯರು ಸೌಲ ಮತ್ತು ಅವನ ಮಕ್ಕಳೊಂದಿಗೆ ಭೀಕರವಾಗಿ ಹೋರಾಡಿದರು. ಸೌಲನ ಮಕ್ಕಳಾದ ಯೋನಾತಾನ, ಅಬೀನಾದಾಬ ಮತ್ತು ಮಲ್ಕೀಷೂವ ಎಂಬವರನ್ನು ಫಿಲಿಷ್ಟಿಯರು ಕೊಂದರು.
3 ಸೌಲನ ವಿರುದ್ಧವಾದ ಈ ಯುದ್ಧವು ಬಹಳ ಘೋರವಾಗಿತ್ತು. ಬಿಲ್ಲುಗಾರರು ಸೌಲನ ಮೇಲೆ ಬಾಣಗಳನ್ನು ಬಿಟ್ಟಿದ್ದರಿಂದ ಸೌಲನು ಬಹಳವಾಗಿ ಗಾಯಗೊಂಡನು. 4 ಸೌಲನು ತನ್ನ ಅಯುಧವಾಹಕನಿಗೆ, “ನಿನ್ನ ಖಡ್ಗದಿಂದ ಇರಿದು ನನ್ನನ್ನು ಕೊಂದುಬಿಡು. ಆಗ, ಈ ಪರದೇಶೀಯರು ನನ್ನನ್ನು ಗಾಯಗೊಳಿಸುವುದಕ್ಕಾಗಲಿ ಅಪಹಾಸ್ಯ ಮಾಡುವುದಕ್ಕಾಗಲಿ ಸಾಧ್ಯವಾಗುವುದಿಲ್ಲ” ಎಂದನು. ಆದರೆ ಸೌಲನ ಆಯುಧವಾಹಕನು ನಿರಾಕರಿಸಿದನು. ಸೌಲನ ಸಹಾಯಕನು ಬಹಳ ಭಯಗೊಂಡಿದ್ದನು. ಆದ್ದರಿಂದ ಸೌಲನು ತನ್ನ ಸ್ವಂತ ಖಡ್ಗದಿಂದಲೇ ಇರಿದು ಆತ್ಮಹತ್ಯೆ ಮಾಡಿಕೊಂಡನು.
5 ಸೌಲನು ಸತ್ತುಹೋದದ್ದನ್ನು ಕಂಡ ಆಯುಧವಾಹಕನೂ ತನ್ನ ಖಡ್ಗದಿಂದ ತಾನೂ ಆತ್ಮಹತ್ಯೆ ಮಾಡಿಕೊಂಡನು. ಅವನು ಸೌಲನೊಂದಿಗೆ ಅಲ್ಲಿಯೇ ಸತ್ತುಹೋದನು. 6 ಹೀಗೆ ಸೌಲನು ಮತ್ತು ಅವನ ಮೂವರು ಗಂಡುಮಕ್ಕಳೂ ಮತ್ತು ಸೌಲನ ಆಯುಧವಾಹಕನೂ ಅದೇ ದಿನ ಸತ್ತುಹೋದರು.
ಸೌಲನ ದೇಹವು ಫಿಲಿಷ್ಟಿಯರಿಗೆ ಸಿಕ್ಕಿತು
7 ಇಸ್ರೇಲರ ಸೈನ್ಯವು ಓಡಿಹೋಗುತ್ತಿರುವುದನ್ನು ಕಣಿವೆಯ ಮತ್ತೊಂದು ಪಕ್ಕದಲ್ಲಿ ವಾಸಮಾಡುತ್ತಿದ್ದ ಇಸ್ರೇಲರು ನೋಡಿದರು. ಸೌಲನು ಮತ್ತು ಅವನ ಮಕ್ಕಳು ಸತ್ತದ್ದನ್ನೂ ಅವರು ನೋಡಿದರು. ಆದ್ದರಿಂದ ಆ ಇಸ್ರೇಲರು ತಮ್ಮ ನಗರಗಳನ್ನು ಬಿಟ್ಟು ಓಡಿಹೋದರು. ನಂತರ ಫಿಲಿಷ್ಟಿಯರು ಬಂದು ಆ ನಗರಗಳನ್ನು ವಶಪಡಿಸಿಕೊಂಡು ನೆಲೆಸಿದರು.
8 ಮಾರನೆಯ ದಿನ, ಸತ್ತದೇಹಗಳಿಂದ ವಸ್ತುಗಳನ್ನು ದೋಚಲು ಫಿಲಿಷ್ಟಿಯರು ಬಂದರು. ಸೌಲನು ಮತ್ತು ಅವನ ಮೂರು ಜನ ಮಕ್ಕಳು ಗಿಲ್ಬೋವ ಶಿಖರದಲ್ಲಿ ಸತ್ತಿರುವುದನ್ನು ಅವರು ನೋಡಿದರು. 9 ಸೌಲನ ತಲೆಯನ್ನು ಫಿಲಿಷ್ಟಿಯರು ಕಡಿದುಹಾಕಿದರು. ಮತ್ತು ಅವನ ಆಯುಧಗಳನ್ನು ತೆಗೆದುಕೊಂಡರು. ಫಿಲಿಷ್ಟಿಯ ಜನರಿಗೆ ಮತ್ತು ಅವರ ವಿಗ್ರಹಗಳ ಗುಡಿಗೆ ಈ ವಿಜಯದ ವಾರ್ತೆಯನ್ನು ಕಳುಹಿಸಿದರು. 10 ಅಷ್ಟೋರೆತಳ ದೇವಾಲಯದಲ್ಲಿ ಅವರು ಸೌಲನ ಆಯುಧಗಳನ್ನು ಇಟ್ಟರು. ಫಿಲಿಷ್ಟಿಯರು ಸೌಲನ ದೇಹವನ್ನು ಬೇತ್‌ಷೆಯಾನಿನ ಗೋಡೆಗೆ ನೇತುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬುದನ್ನು ಯಾಬೆಷ್‌ಗಿಲ್ಯಾದಿನಲ್ಲಿ ವಾಸಿಸುತ್ತಿದ್ದ ಜನರೆಲ್ಲ ತಿಳಿದುಕೊಂಡರು. 12 ಆದ್ದರಿಂದ ಯಾಬೆಷಿನ ಸೈನಿಕರೆಲ್ಲ ಬೇತ್‌ಷೆಯಾನಿಗೆ ಹೋದರು. ಅವರು ರಾತ್ರಿಯೆಲ್ಲಾ ನಡೆದರು! ನಂತರ ಅವರು ಬೇತ್‌ಷೆಯಾನಿನ ಗೋಡೆಯಲ್ಲಿದ್ದ ಸೌಲನ ದೇಹವನ್ನು ಇಳಿಸಿದರು. ನಂತರ ಅವರು ಸೌಲನ ಗಂಡುಮಕ್ಕಳ ದೇಹಗಳನ್ನೂ ಇಳಿಸಿದರು. ನಂತರ ಅವರು ಆ ದೇಹಗಳನ್ನು ಯಾಬೇಷಿಗೆ ತೆಗೆದುಕೊಂಡು ಹೋದರು. ಸೌಲ ಮತ್ತು ಅವನ ಮೂವರು ಗಂಡುಮಕ್ಕಳ ದೇಹಗಳನ್ನು ಯಾಬೇಷಿನ ಜನರು ಅಲ್ಲಿ ದಹಿಸಿಬಿಟ್ಟರು. 13 ನಂತರ ಈ ಜನರು ಸೌಲ ಮತ್ತು ಅವನ ಮೂರು ಮಕ್ಕಳ ಮೂಳೆಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನ ಪಿಚುಲ ಮರದ ಕೆಳಗೆ ಸಮಾಧಿಮಾಡಿದರು. ನಂತರ ಯಾಬೇಷಿನ ಜನರು ದುಃಖದಿಂದ ಏಳು ದಿನಗಳ ಕಾಲ ಉಪವಾಸ ಮಾಡಿದರು.[c]
Kannada Holy Bible: Easy-to-Read Version. All rights reserved. © 1997 Bible League International