Beginning
ಯೆಹೋವನನ್ನು ಸ್ಮರಿಸಿರಿ
11 “ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿರಿ. ಆತನು ಹೇಳಿದವುಗಳನ್ನೆಲ್ಲ ಮಾಡಿರಿ. ನೀವು ಕಟ್ಟಳೆಗಳಿಗೆ, ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಯಾವಾಗಲೂ ವಿಧೇಯರಾಗಿರಬೇಕು. 2 ನಿಮಗೆ ಉಪದೇಶ ಮಾಡುವುದಕ್ಕಾಗಿ ನಿಮ್ಮ ದೇವರಾದ ಯೆಹೋವನು ಮಾಡಿದ ಮಹತ್ಕಾರ್ಯಗಳನ್ನು ನೆನಪುಮಾಡಿರಿ. ಆತನ ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಆತನು ಎಂಥಾ ಶಕ್ತಿಶಾಲಿ ಎಂದು ನೀವು ತಿಳಿದಿದ್ದೀರಿ. 3 ಆ ಮಹತ್ಕಾರ್ಯಗಳನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಈಜಿಪ್ಟಿನಲ್ಲಿ ಫರೋಹನಿಗೂ ಅವನ ಸಮಸ್ತ ಪ್ರಜೆಗಳಿಗೂ ಮಾಡಿದ್ದನ್ನು ನೀವು ನೋಡಿದ್ದೀರಿ. 4 ಯೆಹೋವನು ಈಜಿಪ್ಟಿನ ಸೈನಿಕರಿಗೂ ಅವರ ಕುದುರೆ ರಥಗಳಿಗೂ ಮಾಡಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. ಅವರು ನಿಮ್ಮನ್ನು ಓಡಿಸಿಕೊಂಡು ಬರುತ್ತಿದ್ದರು. ಆದರೆ ಯೆಹೋವನು ಅವರನ್ನು ಸಮುದ್ರದ ನೀರಿನಲ್ಲಿ ಮುಳುಗಿಹೋಗುವಂತೆ ಮಾಡಿದುದ್ದನ್ನು ನೋಡಿದ್ದೀರಿ ಮತ್ತು ಅವರು ಸಂಪೂರ್ಣವಾಗಿ ನಾಶವಾಗುವುದನ್ನು ನೋಡಿದ್ದೀರಿ. 5 ನೀವು ಈ ಸ್ಥಳಕ್ಕೆ ಬರುವತನಕ ನಿಮ್ಮ ದೇವರಾದ ಯೆಹೋವನು ನಿಮಗೋಸ್ಕರ ಮರುಭೂಮಿಯಲ್ಲಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳನ್ನು ನೋಡಿದವರು, ನೀವೇ ಹೊರತು ನಿಮ್ಮ ಮಕ್ಕಳಲ್ಲ. 6 ರೂಬೇನ್ ಕುಲದ ಎಲೀಯಾಬನ ಮಕ್ಕಳಾದ ದಾತಾನನಿಗೆ ಮತ್ತು ಅಬೀರಾಮನಿಗೆ ಯೆಹೋವನು ಮಾಡಿದ್ದನ್ನು ನೀವೇ ನೋಡಿದ್ದೀರಿ. ನಿಮ್ಮ ಕಣ್ಣಮುಂದೆಯೇ ಭೂಮಿಯು ಬಾಯಿ ತೆರೆದು ಅವರನ್ನು, ಅವರ ಹೆಂಡತಿಮಕ್ಕಳನ್ನು, ಅವರ ಗುಡಾರವನ್ನು, ಸೇವಕರನ್ನು, ಅವರ ಪಶುಗಳನ್ನು ನುಂಗಿದ್ದನ್ನು ನೋಡಿದವರು ನೀವೇ ಹೊರತು ನಿಮ್ಮ ಮಕ್ಕಳಲ್ಲ. 7 ಆತನು ಮಾಡಿದ ಎಲ್ಲಾ ಮಹಾಕೃತ್ಯಗಳನ್ನು ನೋಡಿದವರು ನೀವೇ.
8 “ಆದ್ದರಿಂದ ನಾನು ನಿಮಗೆ ನೀವು ಎಲ್ಲಾ ಕಟ್ಟಳೆಗಳಿಗೆ ವಿಧೇಯರಾಗಿ ನಡೆಯಬೇಕು; ಆಗ ನೀವು ಬಲವನ್ನು ಹೊಂದುವಿರಿ; ಜೋರ್ಡನ್ ನದಿಯನ್ನು ದಾಟಿ ದೇವರು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ. 9 ಆ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ. ಆ ದೇಶವು ಎಲ್ಲಾ ಒಳ್ಳೆಯ ವಸ್ತುಗಳಿಂದ ತುಂಬಿದೆ. ಆ ದೇಶವನ್ನು ನಿಮ್ಮ ಪೂರ್ವಿಕರಿಗೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದಾನೆ. 10 ನಿಮಗೆ ದೊರಕಲಿರುವ ದೇಶವು ನೀವು ಹೊರಟುಬಂದ ಈಜಿಪ್ಟ್ ದೇಶದಂತಿಲ್ಲ. ಈಜಿಪ್ಟಿನಲ್ಲಿ ನೀವು ಬಿತ್ತನೆ ಮಾಡಿದ ಮೇಲೆ ನೀರನ್ನು ಹಾಯಿಸಲು ನಿಮ್ಮ ಕಾಲುಗಳನ್ನು ಬಳಸುತ್ತಿದ್ದಿರಿ. ನಿಮ್ಮ ತರಕಾರಿ ತೋಟಗಳಿಗೆ ನೀರು ಹಾಯಿಸುವಂತೆಯೇ ನಿಮ್ಮ ಗದ್ದೆಗಳಿಗೂ ನೀರನ್ನು ಹಾಯಿಸುತ್ತಿದ್ದಿರಿ. 11 ನಿಮಗೆ ಶೀಘ್ರದಲ್ಲಿಯೇ ದೊರಕಲಿರುವ ಭೂಮಿ ಅಂಥದ್ದಲ್ಲ. ಅದು ಬೆಟ್ಟತಗ್ಗುಗಳ ಪ್ರಾಂತ್ಯ; ಮಳೆಯ ನೀರು ಭೂಮಿಯನ್ನು ತೊಯಿಸುತ್ತದೆ. 12 ನಿಮ್ಮ ದೇವರಾದ ಯೆಹೋವನು ಆ ಭೂಮಿಯನ್ನು ಕಾಯುತ್ತಾನೆ. ಆ ದೇಶವನ್ನು ವರ್ಷದ ಪ್ರಾರಂಭದಿಂದ ಕೊನೆಯ ತನಕ ಪರಿಪಾಲಿಸುತ್ತಾನೆ.
13 “ಯೆಹೋವನು ಹೀಗೆನ್ನುತ್ತಾನೆ: ‘ಇಂದು ನಾನು ನಿಮಗೆ ಕೊಟ್ಟ ಆಜ್ಞೆಗಳನ್ನೆಲ್ಲ ಗಮನವಿಟ್ಟು ಕೇಳಿರಿ: ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕು. ಹೀಗೆ ಮಾಡಿದರೆ 14 ಕಾಲಕಾಲಕ್ಕೆ ಸರಿಯಾಗಿ ನಿಮ್ಮ ದೇಶಕ್ಕೆ ನಾನು ಮಳೆಯನ್ನು ಕಳುಹಿಸುತ್ತೇನೆ. ಹಿಂಗಾರು, ಮುಂಗಾರು ಮಳೆ ತಕ್ಕ ಸಮಯದಲ್ಲಿ ಬೀಳುವುದು. ಆಗ ನೀವು ನಿಮ್ಮ ಧಾನ್ಯಗಳನ್ನು, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಗಳನ್ನು ಶೇಖರಿಸುವಿರಿ. 15 ನಿಮ್ಮ ಹೊಲಗಳಲ್ಲಿ ಮತ್ತು ನಿಮ್ಮ ಪಶುಗಳಿಗೆ ಹುಲ್ಲು ಹುಲುಸಾಗಿ ಬೆಳೆಯುವಂತೆ ಮಾಡುವೆನು. ನಿಮಗೆ ಆಹಾರವು ಸಮೃದ್ಧಿಕರವಾಗಿರುವುದು.’
16 “ಆದ್ದರಿಂದ ಜಾಗರೂಕರಾಗಿರಿ. ಬೇರೆ ದೇವರುಗಳನ್ನು ಸೇವೆಮಾಡಿ ಆರಾಧಿಸಬೇಡಿ. 17 ಇಲ್ಲವಾದರೆ, ಯೆಹೋವನು ನಿಮ್ಮ ಮೇಲೆ ಬಹಳ ಕೋಪಗೊಳ್ಳುವನು; ಆಕಾಶವನ್ನು ಮುಚ್ಚಿ ಮಳೆಬೀಳದಂತೆ ಮಾಡುವನು. ಆಗ ಹೊಲದಲ್ಲಿ ಧಾನ್ಯ ಬೆಳೆಯುವುದಿಲ್ಲ. ಆಗ ಆತನು ಕೊಡುವ ಒಳ್ಳೆಯ ದೇಶದಲ್ಲಿಯೇ ಊಟಕ್ಕಿಲ್ಲದೆ ಸಾಯುವಿರಿ.
18 “ನಾನು ಹೇಳಿದ ಆಜ್ಞೆಗಳನ್ನು ಯಾವಾಗಲೂ ಜ್ಞಾಪಕದಲ್ಲಿಡಿರಿ. ಅದನ್ನು ನಿಮ್ಮ ಹೃದಯದಲ್ಲಿಡಿರಿ. ಅವುಗಳನ್ನು ಬರೆದು ಕೈಗಳಲ್ಲಿ ಮತ್ತು ಹಣೆಯ ಮೇಲೆ ಕಟ್ಟಿರಿ. ಇದು ನಿಮಗೆ ಜ್ಞಾಪಕ ಕೊಡುವುದು. 19 ಈ ಕಟ್ಟಳೆಗಳನ್ನು ನಿಮ್ಮ ಮಕ್ಕಳಿಗೆ ಬೋಧಿಸಿರಿ. ಅವುಗಳ ವಿಷಯವಾಗಿ ನೀವು ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ದಾರಿಯಲ್ಲಿ ನಡೆಯುತ್ತಿರುವಾಗ, ಮಲಗುವಾಗ, ಏಳುವಾಗ ನೀವು ಮಾತನಾಡುತ್ತಾ ಇರಬೇಕು. 20 ಈ ಕಟ್ಟಳೆಗಳನ್ನು ನಿಮ್ಮ ಮನೆಯ ಬಾಗಿಲುಗಳ ಮತ್ತು ನಿಲುವುಗಳ ಮತ್ತು ಹೆಬ್ಬಾಗಿಲುಗಳ ಮೇಲೆ ಬರೆಯಿರಿ. 21 ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಲ್ಪಟ್ಟ ದೇಶದಲ್ಲಿ ಆಗ ನೀವು ಮತ್ತು ನಿಮ್ಮ ಮಕ್ಕಳು ಬಹುಕಾಲ ಬಾಳುವಿರಿ. ಆಕಾಶವು ಭೂಮಿಯ ಮೇಲೆ ಎಷ್ಟು ಕಾಲವಿರುವುದೋ ಅಷ್ಟುಕಾಲ ನೀವು ಬದುಕುವಿರಿ.
22 “ಅನುಸರಿಸಬೇಕೆಂದು ಹೇಳುವ ಪ್ರತಿಯೊಂದು ಕಟ್ಟಳೆಗಳಿಗೆ ವಿಧೇಯರಾಗಿರಿ. ನಿಮ್ಮ ಯೆಹೋವನನ್ನು ಪ್ರೀತಿಸಿ ಆತನ ಮಾರ್ಗದಲ್ಲಿ ನಡೆದು ಆತನಿಗೆ ನಂಬಿಗಸ್ತರಾಗಿರಿ. 23 ಆಗ ನೀವು ಹೋಗುವ ದೇಶದಲ್ಲಿ ವಾಸಿಸುವ ಜನರನ್ನು ಯೆಹೋವನಾದ ನಾನು ಹೊಡೆದೋಡಿಸುವೆನು. ಆ ಜನಾಂಗ ನಿಮಗಿಂತಲೂ ದೊಡ್ಡದು ಮತ್ತು ಬಲಿಷ್ಠವಾದದ್ದು. 24 ನೀವು ಹೆಜ್ಜೆಯಿಡುವ ಭೂಮಿಯೆಲ್ಲಾ ನಿಮ್ಮದಾಗುವುದು. ದಕ್ಷಿಣದ ಮರುಭೂಮಿಯಿಂದ ಹಿಡಿದು ಉತ್ತರದ ಲೆಬನೋನಿನ ತನಕ, ಪೂರ್ವದಲ್ಲಿರುವ ಯೂಫ್ರೇಟೀಸ್ ನದಿಯಿಂದ ಪಶ್ಟಿಮದ ಭೂಮಧ್ಯಸಮುದ್ರ ತೀರದ ತನಕ ವಿಸ್ತಾರವಾಗಿದೆ. 25 ನಿಮ್ಮ ವಿರುದ್ಧವಾಗಿ ಯಾರೂ ನಿಂತುಕೊಳ್ಳಲಾರರು. ನೀವು ಆಕ್ರಮಿಸಿಕೊಳ್ಳುವ ಪ್ರದೇಶದಲ್ಲೆಲ್ಲಾ ಯೆಹೋವನು ಅಲ್ಲಿಯ ಜನರು ನಿಮಗೆ ಭಯಪಡುವಂತೆ ಮಾಡುವನು. ಯೆಹೋವನು ಈ ವಾಗ್ದಾನವನ್ನು ನಿಮಗೆ ಮೊದಲೇ ಕೊಟ್ಟಿದ್ದಾನೆ.
ಆಶೀರ್ವಾದ ಅಥವಾ ಶಾಪ: ಇಸ್ರೇಲರ ಆರಿಸುವಿಕೆ
26 “ಈ ಹೊತ್ತು ನೀವು ಆಶೀರ್ವಾದವನ್ನಾಗಲಿ ಶಾಪವನ್ನಾಗಲಿ ಆರಿಸಬೇಕು. 27 ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾದರೆ ಆತನಿಂದ ಆಶೀರ್ವಾದ ಹೊಂದುವಿರಿ. 28 ಆದರೆ ನೀವು ವಿಧೇಯರಾಗದಿದ್ದರೆ ಶಾಪವನ್ನು ಹೊಂದುವಿರಿ. ನಾನು ನಿಮಗೆ ಕೊಡುವ ಯೆಹೋವನ ನಿಯಮಗಳನ್ನು ಅನುಸರಿಸುವುದನ್ನು ನಿಲ್ಲಿಸಬೇಡಿರಿ. ಅನ್ಯದೇವತೆಗಳನ್ನು ಪೂಜಿಸಬೇಡಿರಿ. ನಾನು ನಿಮಗೆ ಬೋಧಿಸುತ್ತಿರುವುದು ಯೆಹೋವನ ಮಾರ್ಗದ ಕುರಿತೇ ಹೊರತು ಬೇರೆ ದೇವರುಗಳ ಕುರಿತಲ್ಲ.
29 “ದೇವರಾದ ಯೆಹೋವನು ನಿಮ್ಮನ್ನು ನಿಮ್ಮ ದೇಶಕ್ಕೆ ನಡೆಸುವನು. ನೀವು ಬೇಗನೆ ಅದನ್ನು ಸ್ವಾಧೀನ ಮಾಡಿಕೊಳ್ಳುವಿರಿ. ಆ ಸಮಯದಲ್ಲಿ ನೀವು ಗೆರಿಜ್ಜೀಮ್ ಬೆಟ್ಟದ ತುದಿಗೇರಿ ಅಲ್ಲಿಂದ ಆಶೀರ್ವಾದ ವಚನಗಳನ್ನು ನುಡಿಯಿರಿ. ಅನಂತರ ನೀವು ಎಬಾಲ್ ಬೆಟ್ಟದ ಮೇಲೇರಿ ಅಲ್ಲಿಂದ ಜನರಿಗೆ ಶಾಪವಚನಗಳನ್ನು ನುಡಿಯಿರಿ. 30 ಈ ಬೆಟ್ಟಗಳು ಜೋರ್ಡನ್ ನದಿಯ ಆಚೆ ದಡದಲ್ಲಿವೆ. ಇವು ಜೋರ್ಡನ್ ಕಣಿವೆಯಲ್ಲಿ ವಾಸವಾಗಿರುವ ಕಾನಾನ್ಯರ ಪ್ರದೇಶದಲ್ಲಿವೆ. ಈ ಬೆಟ್ಟಗಳು ಪಶ್ಚಿಮ ದಿಕ್ಕಿನಲ್ಲಿವೆ. ಗಿಲ್ಗಾಲ್ ಊರಿನ ಸಮೀಪದಲ್ಲಿರುವ ಓಕ್ ಮರಗಳಿಗೆ ಇವು ದೂರವೇನೂ ಇಲ್ಲ. 31 ನೀವು ಜೋರ್ಡನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ. ಈ ದೇಶವು ನಿಮ್ಮದೇ. 32 ಈ ದೇಶದಲ್ಲಿ ನೀವು ವಾಸಿಸುವಾಗ ನಾನು ಈ ಹೊತ್ತು ನಿಮಗೆ ಕೊಡುವ ಕಟ್ಟಳೆಗಳನ್ನೂ ವಿಧಿನಿಯಮಗಳನ್ನೂ ತಪ್ಪದೆ ಪರಿಪಾಲಿಸಬೇಕು.
ಯೆಹೋವನನ್ನು ಆರಾಧಿಸುವ ಸ್ಥಳ
12 “ನಿಮಗೆ ಸಿಗುವ ಹೊಸ ದೇಶದಲ್ಲಿ ಈ ಕಟ್ಟಳೆಗಳನ್ನು ನೀವು ಅನುಸರಿಸಬೇಕು. ನೀವು ಭೂಮಿಯ ಮೇಲೆ ಜೀವಿಸುವವರೆಗೆ ಆ ಕಟ್ಟಳೆಗಳನ್ನು ತಪ್ಪದೇ ಅನುಸರಿಸಬೇಕು. ನಮ್ಮ ಯೆಹೋವನು ನಮ್ಮ ಪೂರ್ವಿಕರ ದೇವರಾಗಿದ್ದಾನೆ. ಆತನೇ ಈ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. 2 ಈಗ ಆ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಜನರಿಂದ ತೆಗೆದುಕೊಂಡು ನಿಮಗೆ ಅದನ್ನು ಕೊಡುತ್ತಾನೆ. ಅಲ್ಲಿ ನೀವು ಹೋದಾಗ ಆ ಜನರ ವಿಗ್ರಹಾರಾಧನೆಯ ಸ್ಥಳಗಳನ್ನು ಸಂಪೂರ್ಣವಾಗಿ ಹಾಳುಮಾಡಬೇಕು. ಅವರ ಪೂಜಾಸ್ಥಳಗಳು ಎತ್ತರವಾದ ಬೆಟ್ಟಗುಡ್ಡಗಳ ಮೇಲೆಯೂ ಹಸುರಾಗಿರುವ ಮರಗಳ ಕೆಳಗೂ ಇರುತ್ತವೆ. 3 ನೀವು ಅವರ ಯಜ್ಞವೇದಿಕೆಗಳನ್ನು ಪುಡಿಪುಡಿಮಾಡಿ, ಅವರ ಸ್ಮಾರಕ ಕಲ್ಲುಗಳನ್ನು ಕೆಡವಬೇಕು. ಅವರ ಅಶೇರ ಕಂಬಗಳನ್ನು ಸುಟ್ಟುಬಿಡಬೇಕು ಮತ್ತು ದೇವರುಗಳ ವಿಗ್ರಹಗಳನ್ನು ಕತ್ತರಿಸಿಹಾಕಬೇಕು. ಹೀಗೆ ನೀವು ಅವುಗಳ ಹೆಸರನ್ನು ಆ ಸ್ಥಳದಿಂದ ನಿರ್ಮೂಲ ಮಾಡಬೇಕು.
4 “ಆ ಜನರು ತಮ್ಮ ದೇವರುಗಳನ್ನು ಆರಾಧಿಸುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಾರದು. 5 ನಿಮ್ಮ ದೇವರಾದ ಯೆಹೋವನು ನಿಮ್ಮ ಕುಲದವರ ಪ್ರಾಂತ್ಯಗಳಿಂದ ಒಂದು ವಿಶೇಷ ಸ್ಥಳವನ್ನು ಆರಿಸಿಕೊಂಡು ಅದಕ್ಕೆ ತನ್ನ ಹೆಸರಿಡುವನು. ಅಲ್ಲಿ ಆತನ ಆಲಯ ಕಟ್ಟಲ್ಪಡುವುದು. ಆತನನ್ನು ಆರಾಧಿಸಲು ನೀವು ಅಲ್ಲಿಗೆ ಹೋಗಬೇಕು. 6 ಅಲ್ಲಿಗೆ ನೀವು ನಿಮ್ಮ ಸರ್ವಾಂಗಹೋಮಗಳನ್ನು, ಯಜ್ಞಗಳನ್ನು, ನಿಮ್ಮ ಬೆಳೆಗಳಲ್ಲಿ ಮತ್ತು ಪಶುಗಳಲ್ಲಿ ದಶಾಂಶವನ್ನು, ನಿಮ್ಮ ವಿಶೇಷ ಕಾಣಿಕೆಗಳನ್ನು, ಯೆಹೋವನಿಗೆ ನೀವು ಹರಕೆ ಹೊತ್ತುಕೊಂಡ ಯಾವುದೇ ಕಾಣಿಕೆಗಳನ್ನು, ನೀವು ಕೊಡಲಿಚ್ಛಿಸುವ ಯಾವುದೇ ವಿಶೇಷ ಕಾಣಿಕೆಗಳನ್ನು, ನಿಮ್ಮ ಮಂದೆ ಮತ್ತು ಹಿಂಡುಗಳ ಚೊಚ್ಚಲುಮರಿಗಳನ್ನು ತರಬೇಕು. 7 ನೀವೂ ಮತ್ತು ನಿಮ್ಮ ಕುಟುಂಬಗಳವರೂ ಅಲ್ಲಿ ಒಟ್ಟಿಗೆ ಊಟ ಮಾಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮೊಂದಿಗಿರುವನು. ನೀವು ದುಡಿದು ಸಂಪಾದಿಸಿದ ಎಲ್ಲಾ ವಸ್ತುಗಳನ್ನು ಇತರರೊಂದಿಗೆ ಹಂಚಿಕೊಂಡು ಆ ಸ್ಥಳದಲ್ಲಿ ಆನಂದಿಸುವಿರಿ. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ಆ ಎಲ್ಲಾ ಒಳ್ಳೆಯವುಗಳನ್ನು ನಿಮಗೆ ಕೊಟ್ಟನೆಂದು ನೀವು ಜ್ಞಾಪಿಸಿಕೊಳ್ಳುವಿರಿ.
8-9 “ನೀವು ಇನ್ನೂ ವಾಗ್ದಾನದ ದೇಶವನ್ನು ಪ್ರವೇಶಿಸಲಿಲ್ಲದ ಕಾರಣ ನೀವು ಯೆಹೋವನಿಗೆ ನಿಮ್ಮ ಇಷ್ಟಾನುಸಾರವಾಗಿ ಆರಾಧನೆ ಮಾಡುತ್ತಿದ್ದೀರಿ. ಆದರೆ ಇದನ್ನೇ ಮುಂದುವರಿಸಬೇಡಿ. 10 ನೀವು ಜೋರ್ಡನ್ ನದಿಯನ್ನು ದಾಟಿ, ಯೆಹೋವನು ನಿಮಗೆ ಕೊಡುವ ದೇಶದಲ್ಲಿ ವಾಸಿಸುವಿರಿ. ನಿಮ್ಮ ಎಲ್ಲಾ ವೈರಿಗಳಿಂದ ತಪ್ಪಿಸಿ ದೇವರು ನಿಮಗೆ ಸಮಾಧಾನವನ್ನು ಅನುಗ್ರಹಿಸುವನು; ನೀವು ಅಲ್ಲಿ ಸುರಕ್ಷಿತವಾಗಿರುವಿರಿ. 11 ಆಗ ನಿಮ್ಮ ಯೆಹೋವನು ತನ್ನ ಹೆಸರಿಗಾಗಿ ಒಂದು ಸ್ಥಳವನ್ನು ಆರಿಸಿಕೊಳ್ಳುವನು. ಆ ಸ್ಥಳಕ್ಕೆ ನೀವು ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ಯಜ್ಞಾದಿಗಳನ್ನು ಸಮರ್ಪಿಸಬೇಕು; ನಿಮ್ಮ ಹರಕೆಯ ಕಾಣಿಕೆಗಳನ್ನು, ಚೊಚ್ಚಲ ಪಶುಗಳನ್ನು, ದಶಾಂಶವನ್ನು ಸಲ್ಲಿಸಬೇಕು. 12 ಅಲ್ಲಿಗೆ ನಿಮ್ಮ ಹೆಂಡತಿ ಮಕ್ಕಳೊಂದಿಗೆ, ನಿಮ್ಮ ಸೇವಕರೊಂದಿಗೆ ಮತ್ತು ನಿಮ್ಮ ಪಟ್ಟಣದಲ್ಲಿ ಸ್ವಾಸ್ತ್ಯವನ್ನು ಹೊಂದದೆ ಇರುವ ಲೇವಿಯರೊಂದಿಗೆ ಹೋಗಿ ಯೆಹೋವನ ಸಮಕ್ಷಮದಲ್ಲಿ ಸಂತೋಷಪಡಬೇಕು. 13 ನಿಮಗೆ ಇಷ್ಟಬಂದ ಸ್ಥಳಗಳಲ್ಲಿ ನೀವು ಬಲಿಯನ್ನು ಅರ್ಪಿಸಬೇಡಿ. 14 ಯೆಹೋವನು ತನ್ನ ವಿಶೇಷವಾದ ಸ್ಥಳವನ್ನು ನಿಮ್ಮ ಕುಲಗಳವರ ಮಧ್ಯದಿಂದ ಆರಿಸಿಕೊಳ್ಳುವನು. ನಿಮ್ಮ ಸರ್ವಾಂಗಹೋಮಗಳನ್ನು ಮತ್ತು ನಾನು ನಿಮಗೆ ಹೇಳಿದವುಗಳೆಲ್ಲವನ್ನು ಅದೇ ಸ್ಥಳದಲ್ಲಿ ಮಾಡಿರಿ.
15 “ನೀವು ನಿಮ್ಮ ಸ್ಥಳಗಳಲ್ಲಿ ವಾಸಿಸುವಾಗ ಅಲ್ಲಿರುವ ಜಿಂಕೆ, ಟಗರು ಇತ್ಯಾದಿ ಶುದ್ಧ ಪ್ರಾಣಿಗಳನ್ನು ಕೊಂದು ತಿನ್ನಬಹುದು. ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವಷ್ಟು ಮಾಂಸದಲ್ಲಿ ಎಷ್ಟುಬೇಕಾದರೂ ತಿನ್ನಿರಿ. ಶುದ್ಧರೂ ಅಶುದ್ಧರೂ ಯಾರು ಬೇಕಾದರೂ ಆ ಮಾಂಸವನ್ನು ತಿನ್ನಬಹುದು. 16 ಆದರೆ ಅದರ ರಕ್ತವನ್ನು ಮಾತ್ರ ತಿನ್ನಬಾರದು. ಅದರ ರಕ್ತವನ್ನು ನೀರಿನಂತೆ ನೆಲದ ಮೇಲೆ ಚೆಲ್ಲಿಬಿಡಬೇಕು.
17 “ನೀವು ವಾಸಿಸುವ ಆ ಸ್ಥಳದಲ್ಲಿ ಕೆಲವನ್ನು ತಿನ್ನಕೂಡದು. ಅವು ಯಾವುವೆಂದರೆ: ದೇವರಿಗೆ ಮೀಸಲಿಟ್ಟ ಧಾನ್ಯ, ಹೊಸ ದ್ರಾಕ್ಷಾರಸ ಮತ್ತು ಎಣ್ಣೆಯ ಪಾಲು; ದೇವರಿಗೆ ಸಮರ್ಪಿಸಲು ಇಟ್ಟಿರುವ ಚೊಚ್ಚಲ ಪಶುಗಳು ಮತ್ತು ಹಿಂಡಿನ ಮರಿಗಳು, ನೀವು ಹರಕೆ ಹೊತ್ತುಕೊಂಡ ಕಾಣಿಕೆಗಳು ಮತ್ತು ದೇವರಿಗಾಗಿ ಮೀಸಲಿಟ್ಟಿದ್ದ ವಸ್ತುಗಳು. 18 ನಿಮ್ಮ ದೇವರಾದ ಯೆಹೋವನು ಆರಿಸಿಕೊಂಡಿರುವ ಮತ್ತು ಆತನು ನಿಮ್ಮೊಂದಿಗಿರುವ ಆ ವಿಶೇಷ ಸ್ಥಳದಲ್ಲಿಯೇ ನೀವು ಆ ಕಾಣಿಕೆಗಳನ್ನು ತಿನ್ನಬೇಕು. ನೀವು ಅಲ್ಲಿಗೆ ನಿಮ್ಮ ಗಂಡುಹೆಣ್ಣು ಮಕ್ಕಳೊಂದಿಗೆ, ನಿಮ್ಮ ಎಲ್ಲಾ ಸೇವಕರೊಂದಿಗೆ ಮತ್ತು ನಿಮ್ಮ ಊರುಗಳಲ್ಲಿ ವಾಸವಾಗಿರುವ ಲೇವಿಯರೊಂದಿಗೆ ಹೋಗಿ ನಿಮ್ಮ ದೇವರಾದ ಯೆಹೋವನೊಂದಿಗೆ ಆನಂದಿಸಿರಿ; ನೀವು ದುಡಿದು ಸಂಪಾದಿಸಿದವುಗಳನ್ನು ಅನುಭವಿಸಿರಿ. 19 ಆದರೆ ಯಾವಾಗಲೂ ಈ ಊಟವನ್ನು ಲೇವಿಯರೊಂದಿಗೆ ಹಂಚಿಕೊಂಡು ತಿನ್ನಬೇಕೆಂಬುದನ್ನು ಜ್ಞಾಪಕದಲ್ಲಿಡಿರಿ. ನೀವು ನಿಮ್ಮ ದೇಶದಲ್ಲಿ ವಾಸಿಸುವಷ್ಟು ಕಾಲ ಹೀಗೆ ಮಾಡಿರಿ.
20-21 “ನಿಮ್ಮ ದೇವರಾದ ಯೆಹೋವನು ನಿಮ್ಮ ದೇಶವನ್ನು ವಿಸ್ತಾರ ಮಾಡುವನು. ಆ ಸಮಯದಲ್ಲಿ ನೀವು ಇರುವ ಸ್ಥಳಗಳು ಆತನು ತನ್ನ ಹೆಸರಿಗಾಗಿ ಆರಿಸಿದ ಸ್ಥಳದಿಂದ ತುಂಬಾ ದೂರವಿರಬಹುದು. ಆಗ ನಿಮಗೆ ಮಾಂಸ ಊಟಮಾಡಲು ಆಸೆಯಾದರೆ ನಿಮ್ಮ ಹಿಂಡಿನಿಂದಾಗಲಿ ಹಟ್ಟಿಯಿಂದಾಗಲಿ ಪ್ರಾಣಿಯನ್ನು ಕೊಂದು ತಿನ್ನಬಹುದು. ನಾನು ತಿಳಿಸುವ ರೀತಿಯಲ್ಲಿ ತಿನ್ನಿರಿ. ನಿಮಗೆ ಬೇಕಾದಾಗಲೆಲ್ಲಾ ಹೀಗೆ ಮಾಡಿರಿ. 22 ಜಿಂಕೆಯನ್ನಾಗಲಿ ಸಾರಂಗವನ್ನಾಗಲಿ ತಿನ್ನುವಂತೆ ನೀವು ಈ ಮಾಂಸವನ್ನು ತಿನ್ನಬಹುದು. ಶುದ್ಧರಾಗಿರುವವರೂ ಅಶುದ್ಧರಾಗಿರುವವರೂ ಈ ಮಾಂಸವನ್ನು ತಿನ್ನಬಹುದು. 23 ಆದರೆ ರಕ್ತವನ್ನು ಮಾತ್ರ ತಿನ್ನಬಾರದು. ಯಾಕೆಂದರೆ ರಕ್ತವು ಪ್ರಾಣಕ್ಕೆ ಆಧಾರ. ಮಾಂಸದಲ್ಲಿ ಇನ್ನೂ ಜೀವಕಣಗಳು ಇರುವುದರಿಂದ ರಕ್ತದೊಂದಿಗೆ ಮಾಂಸವನ್ನು ತಿನ್ನಬೇಡಿರಿ. 24 ರಕ್ತವನ್ನು ನೀರಿನಂತೆ ನೆಲದಲ್ಲಿ ಚೆಲ್ಲಿಬಿಡಬೇಕು. 25 ಆದ್ದರಿಂದ ನೀವು ಅದನ್ನು ತಿನ್ನದೆ ಯೆಹೋವನು ನಿಮಗೆ ತಿಳಿಸಿದಂತೆ ಮಾಡಿರಿ. ಆಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.
26 “ನೀವು ನಿಮ್ಮ ದೇವರಿಗೆ ವಿಶೇಷ ಕಾಣಿಕೆಗಳನ್ನು ಸಮರ್ಪಿಸಲು ಇಷ್ಟಪಟ್ಟರೆ ಆಗ ನೀವು ದೇವರು ಆರಿಸಿರುವ ಸ್ಥಳಕ್ಕೆ ಹೋಗಿ ಅಲ್ಲಿ ಅದನ್ನು ಸಮರ್ಪಿಸಿರಿ. ನಿಮ್ಮ ಸರ್ವಾಂಗಹೋಮವನ್ನೂ ಆ ಸ್ಥಳದಲ್ಲಿಯೇ ಸಮರ್ಪಿಸಬೇಕು. 27 ನಿಮ್ಮ ದೇವರಾದ ಯೆಹೋವನ ಯಜ್ಞವೇದಿಕೆಯ ಮೇಲೆ ನಿಮ್ಮ ಸರ್ವಾಂಗಹೋಮದ ಪಶುವಿನ ಮಾಂಸವನ್ನು ಮತ್ತು ರಕ್ತವನ್ನು ಸಮರ್ಪಿಸಬೇಕು. ನಿಮ್ಮ ಯಜ್ಞಗಳಲ್ಲಿ ರಕ್ತವನ್ನು ಬಲಿಪೀಠದಲ್ಲಿ ಸುರಿದು ಮಾಂಸವನ್ನು ನೀವು ತಿನ್ನಬಹುದು. 28 ಯೆಹೋವನು ಕೊಡುವ ಕಟ್ಟಳೆಗಳನ್ನು ನೀವು ಅನುಸರಿಸಿರಿ. ನಿಮ್ಮ ದೇವರಾದ ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡುವಾಗ ನಿಮಗೂ ನಿಮ್ಮ ಸಂತತಿಯವರಿಗೂ ಶುಭ ಉಂಟಾಗುವುದು.
29 “ನೀವು ಬೇರೆಯವರ ದೇಶವನ್ನು ವಶಪಡಿಸಿಕೊಳ್ಳಲು ಹೋಗುತ್ತಿದ್ದೀರಿ. ನಿಮ್ಮ ದೇವರಾದ ಯೆಹೋವನು ಆ ಜನರನ್ನು ನಿಮಗಾಗಿ ನಾಶಮಾಡುವನು. ಆ ಜನರನ್ನು ಅಲ್ಲಿಂದ ಹೊಡೆದೋಡಿಸಿ ಅವರ ಸ್ಥಳದಲ್ಲಿ ನೀವು ವಾಸಿಸುವಿರಿ. 30 ಅಲ್ಲಿ ವಾಸಿಸುವ ಅನ್ಯಜನರನ್ನು ನೀವು ನಾಶಮಾಡಬೇಕು. ಇಲ್ಲದಿದ್ದಲ್ಲಿ ಅವರು ನಿಮಗೆ ಉರುಲಾಗುವರು; ಅವರ ವಿಗ್ರಹಗಳನ್ನು ಪೂಜಿಸದಂತೆ ಎಚ್ಚರಿಕೆಯಿಂದಿರಿ. ಆ ಸುಳ್ಳುದೇವರುಗಳಿಗೆ ಪ್ರಾರ್ಥಿಸಬೇಡಿ. ‘ಆ ಜನರು ಆ ಸುಳ್ಳುದೇವರುಗಳನ್ನು ಪೂಜಿಸಿದ ಹಾಗೆ ನಾನೂ ಪೂಜಿಸುವೆನು’ ಎಂದು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳಬೇಡಿ! 31 ನಿಮ್ಮ ದೇವರಾದ ಯೆಹೋವನಿಗೆ ನೀವು ಆ ರೀತಿ ಮಾಡಬಾರದು. ಆ ರೀತಿಯಾಗಿ ಆತನನ್ನು ಆರಾಧಿಸಬಾರದು. ಯಾಕೆಂದರೆ ಅವರು ತಮ್ಮ ದೇವರೆದುರಿನಲ್ಲಿ ಅಸಹ್ಯವಾದ ಕಾರ್ಯಗಳನ್ನು ಮಾಡುತ್ತಾರೆ. ಅದನ್ನು ನಮ್ಮ ದೇವರಾದ ಯೆಹೋವನು ದ್ವೇಷಿಸುತ್ತಾನೆ. ಅವರು ತಮ್ಮ ಮಕ್ಕಳನ್ನೇ ದೇವರಿಗೆ ಬಲಿ ಅರ್ಪಿಸುತ್ತಾರೆ.
32 “ನಾನು ಆಜ್ಞಾಪಿಸಿದ ಪ್ರಕಾರವೇ ನೀವು ಮಾಡಿರಿ. ಅದಕ್ಕೆ ಏನೂ ಕೂಡಿಸಬಾರದು; ಅದರಿಂದ ಏನೂ ತೆಗೆಯಬಾರದು.
ಸುಳ್ಳು ಪ್ರವಾದಿಗಳು
13 “ಒಬ್ಬ ಪ್ರವಾದಿಯಾಗಲಿ ಕನಸಿನ ಅರ್ಥ ಹೇಳುವವನಾಗಲಿ ನಿಮ್ಮ ಬಳಿಗೆ ಬಂದು ನಿಮಗೊಂದು ಸೂಚಕಕಾರ್ಯವನ್ನಾಗಲಿ ಅದ್ಭುತಕಾರ್ಯವನ್ನಾಗಲಿ ಮಾಡಿತೋರಿಸುತ್ತೇನೆ ಎಂದು ಹೇಳಿದರೂ ಹೇಳಬಹುದು. 2 ಅವನು ಅದ್ಭುತಕಾರ್ಯಗಳನ್ನು ಮಾಡಿತೋರಿಸಬಹುದು. ಆಮೇಲೆ ಅವನು ನಿಮಗೆ ಗೊತ್ತಿಲ್ಲದ ದೇವರನ್ನು ಅನುಸರಿಸಲು ನಿಮಗೆ ಹೇಳಬಹುದು. 3 ಅಂಥ ಮನುಷ್ಯನಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತೀರೋ ಇಲ್ಲವೋ ಎಂದು ನಿಮ್ಮನ್ನು ಪರೀಕ್ಷಿಸುವನು. 4 ನೀವು ನಿಮ್ಮ ದೇವರಾದ ಯೆಹೋವನನ್ನು ಅನುಸರಿಸಬೇಕು, ಗೌರವಿಸಬೇಕು, ಆತನ ಆಜ್ಞೆಗಳಿಗೆ ವಿಧೇಯರಾಗಬೇಕು. ಆತನು ಹೇಳಿದಂತೆ ನಡೆಯಬೇಕು ಮತ್ತು ಆತನನ್ನು ತೊರೆದುಬಿಡದೆ ಸೇವಿಸಬೇಕು. 5 ಅಂಥ ಪ್ರವಾದಿ ಅಥವಾ ಕನಸಿನ ಅರ್ಥ ಹೇಳುವವನನ್ನು ಕೊಂದು ಹಾಕಬೇಕು. ಯಾಕೆಂದರೆ ಅವನು ಯೆಹೋವನನ್ನು ತೊರೆಯಲು ಪ್ರೇರೇಪಿಸಿದನಲ್ಲಾ? ದೇವರಾದ ಯೆಹೋವನೇ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿದವನು. ಆತನು ನಿಮಗೆ ಹೇಳಿದ ನಿಯಮಗಳಿಗೆ ವಿರುದ್ಧವಾಗಿ ನಡೆಯಲು ಪ್ರೇರೇಪಿಸುವವನನ್ನು ಕೊಲ್ಲಬೇಕು; ನಿಮ್ಮ ಮಧ್ಯದಿಂದ ಅಂಥ ದುಷ್ಟತನವನ್ನು ತೆಗೆದುಹಾಕಬೇಕು.
6 “ನಿಮ್ಮ ಹತ್ತಿರದ ಸಂಬಂಧಿಕರಲ್ಲಿ ಯಾರಾದರೂ ಇತರ ದೇವರುಗಳನ್ನು ಅನುಸರಿಸಲು ನಿಮ್ಮನ್ನು ಗುಪ್ತವಾಗಿ ಒತ್ತಾಯ ಮಾಡಬಹುದು. ಅವರು ನಿಮ್ಮ ಸ್ವಂತ ಸಹೋದರನಾಗಿರಬಹುದು, ನಿಮ್ಮ ಮಕ್ಕಳಾಗಿರಬಹುದು, ನಿಮ್ಮ ಹೆಂಡತಿಯಾಗಿರಬಹುದು, ಅಥವಾ ಆಪ್ತಗೆಳೆಯನಾಗಿರಬಹುದು. ಅವರು ಬಂದು, ‘ಬಾ, ನಾವು ಬೇರೆ ದೇವರನ್ನು ಹಿಂಬಾಲಿಸೋಣ’ (ಈ ದೇವರನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ತಿಳಿದಿರಲಿಲ್ಲ. 7 ಅವು ನಿಮ್ಮ ಸುತ್ತಮುತ್ತಲಿರುವ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರ ದೇವರುಗಳು, ಅವುಗಳಲ್ಲಿ ಕೆಲವು ಹತ್ತಿರದವುಗಳಾಗಿವೆ; ಕೆಲವು ದೂರದವುಗಳಾಗಿವೆ.) 8 ಎಂದರೆ ಆ ವ್ಯಕ್ತಿಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿ; ಅವನಿಗೆ ಕನಿಕರತೋರಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ. 9-10 ನೀವು ಅವನನ್ನು ಕೊಂದುಹಾಕಬೇಕು. ನೀವು ಕಲ್ಲೆಸೆದು ಅವನನ್ನು ಸಾಯಿಸಬೇಕು. ನೀವು ಅವನ ಮೇಲೆ ಮೊದಲನೆ ಕಲ್ಲನ್ನು ಎಸೆಯಬೇಕು. ಈಜಿಪ್ಟಿನ ದಾಸತ್ವದಿಂದ ನಿಮ್ಮನ್ನು ಬಿಡಿಸಿಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸಿದವನು ಅವನೇ ಅಲ್ಲವೇ? 11 ಆಗ ಇಸ್ರೇಲಿನ ಎಲ್ಲಾ ಜನರಲ್ಲಿ ಭಯವುಂಟಾಗಿ ಅಂಥಾ ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ.
12 “ನಿಮ್ಮ ದೇವರಾದ ಯೆಹೋವನು ನಿಮ್ಮ ವಾಸಕ್ಕಾಗಿ ನಿಮಗೆ ಪಟ್ಟಣಗಳನ್ನು ಕೊಟ್ಟಿದ್ದಾನೆ. ಒಂದುವೇಳೆ, ಆ ಪಟ್ಟಣಗಳಲ್ಲಿ ಯಾವುದಾದರೊಂದರ ಬಗ್ಗೆ ನೀವು ಕೆಟ್ಟ ಸುದ್ದಿಯನ್ನು ಕೇಳಬಹುದು. 13 ನಿಮ್ಮ ಸ್ವಂತ ದೇಶದಲ್ಲಿರುವ ಕೆಲವು ಕೆಟ್ಟ ಜನರು ಕೆಟ್ಟದ್ದನ್ನು ಮಾಡಲು ತಮ್ಮ ಪಟ್ಟಣದ ಜನರನ್ನು ಒತ್ತಾಯಪಡಿಸುತ್ತಿದ್ದಾರೆಂದು ನೀವು ಕೇಳಬಹುದು. ಅವರು ತಮ್ಮ ಪಟ್ಟಣದ ಜನರಿಗೆ, ‘ನಾವು ಹೋಗಿ ಬೇರೆ ದೇವರುಗಳ ಸೇವೆಮಾಡೋಣ’ ಎಂದು ಹೇಳಬಹುದು. (ಈ ದೇವರುಗಳನ್ನು ನೀವು ಹಿಂದೆಂದೂ ತಿಳಿದಿಲ್ಲ.) 14 ನೀವು ಇಂಥ ಸುದ್ದಿಯನ್ನು ಕೇಳಿದರೆ, ಅದು ಸತ್ಯವೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮಿಂದಾದಷ್ಟು ಪ್ರಯತ್ನಿಸಬೇಕು. ಅದು ಸತ್ಯವೆಂಬುದು ನಿಮಗೆ ತಿಳಿದುಬಂದರೆ ಮತ್ತು ಅಂಥ ಭಯಂಕರ ಸಂಗತಿಯು ನಿಜವಾಗಿಯೂ ಸಂಭವಿಸಿತೆಂದು ನೀವು ರುಜುವಾತುಪಡಿಸಲು ಶಕ್ತರಾಗಿದ್ದರೆ, 15 ನೀವು ಆ ಪಟ್ಟಣದ ಜನರನ್ನು ದಂಡಿಸಬೇಕು; ಅವರೆಲ್ಲರನ್ನೂ ಕೊಲ್ಲಬೇಕು; ಅವರ ಎಲ್ಲಾ ಪಶುಗಳನ್ನು ಸಹ ಕೊಲ್ಲಬೇಕು. ಆ ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕು. 16 ನೀವು ಆ ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವರಾದ ಯೆಹೋವನಿಗೆ ಸರ್ವಾಂಗಹೋಮವಾಗುವುದು. ಆ ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಆ ಪಟ್ಟಣವನ್ನು ಮತ್ತೆ ಕಟ್ಟಬಾರದು. 17 ಆ ಪಟ್ಟಣದಲ್ಲಿರುವ ಪ್ರತಿಯೊಂದು ವಸ್ತು ನಾಶವಾಗಬೇಕು. ಅದರಲ್ಲಿ ಯಾವುದನ್ನಾದರೂ ನೀವು ನಿಮ್ಮ ಉಪಯೋಗಕ್ಕೆ ಇಟ್ಟುಕೊಳ್ಳಬಾರದು. ನೀವು ಹೀಗೆ ಮಾಡಿದರೆ ಯೆಹೋವನು ನಿಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಆತನು ನಿಮ್ಮ ಮೇಲೆ ದಯೆತೋರಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರಕಾರ ನಿಮ್ಮ ದೇಶವನ್ನು ವಿಸ್ತಾರ ಮಾಡುವನು. 18 ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಟ್ಟರೆ, ನಾನು ನಿಮಗೆ ಕೊಡುವ ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾದರೆ ಇದು ಸಂಭವಿಸುವುದು. ನಿಮ್ಮ ದೇವರಾದ ಯೆಹೋವನು ಸರಿಯೆಂದು ಹೇಳುವ ಕಾರ್ಯಗಳನ್ನೇ ನೀವು ಮಾಡಬೇಕು.
Kannada Holy Bible: Easy-to-Read Version. All rights reserved. © 1997 Bible League International