Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 1-3

ಭೂಲೋಕದ ಸೃಷ್ಟಿ

ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು. ಭೂಮಿಯು ಅಸ್ತವ್ಯಸ್ತವಾಗಿಯೂ ಬರಿದಾಗಿಯೂ ಇತ್ತು. ಭೂಮಿಯ ಮೇಲೆ ಏನೂ ಇರಲಿಲ್ಲ. ಸಾಗರದ ಮೇಲೆ ಕತ್ತಲು ಕವಿದಿತ್ತು. ದೇವರಾತ್ಮನು ಜಲಸಮೂಹಗಳ ಮೇಲೆ ಚಲಿಸುತ್ತಿದ್ದನು.[a]

ಮೊದಲನೆ ದಿನ—ಬೆಳಕು

ಆಗ ದೇವರು, “ಬೆಳಕಾಗಲಿ” ಅನ್ನಲು ಬೆಳಕಾಯಿತು. ದೇವರಿಗೆ ಬೆಳಕು ಒಳ್ಳೆಯದಾಗಿ ಕಂಡಿತು. ಬಳಿಕ ದೇವರು ಕತ್ತಲೆಯಿಂದ ಬೆಳಕನ್ನು ಬೇರ್ಪಡಿಸಿದನು. ದೇವರು ಬೆಳಕಿಗೆ ಹಗಲೆಂದೂ ಕತ್ತಲೆಗೆ ರಾತ್ರಿಯೆಂದೂ ಹೆಸರಿಟ್ಟನು.

ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೊದಲನೆ ದಿನವಾಯಿತು.

ಎರಡನೆ ದಿನ—ಆಕಾಶ

ಬಳಿಕ ದೇವರು, “ಜಲಸಮೂಹಗಳ ನಡುವೆ ಗುಮಟ[b] ಉಂಟಾಗಲಿ. ಅದು ಕೆಳಭಾಗದ ನೀರುಗಳನ್ನು ಮೇಲ್ಭಾಗದ ನೀರುಗಳಿಂದ ಬೇರ್ಪಡಿಸಲಿ” ಅಂದನು. ಹೀಗೆ ದೇವರು ಗುಮಟವನ್ನು ಉಂಟುಮಾಡಿ ಅದರ ಕೆಳಭಾಗದ ನೀರುಗಳನ್ನು ಅದರ ಮೇಲ್ಭಾಗದ ನೀರುಗಳಿಂದ ಬೇರ್ಪಡಿಸಿದನು. ದೇವರು ಆ ಗುಮಟಕ್ಕೆ ಆಕಾಶವೆಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಎರಡನೆ ದಿನವಾಯಿತು.

ಮೂರನೆ ದಿನ—ಒಣನೆಲ ಮತ್ತು ಸಸ್ಯಗಳು

ಬಳಿಕ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಟ್ಟಿಗೆ ಸೇರಿಕೊಂಡು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. 10 ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟಿಗೆ ಸೇರಿಕೊಂಡಿದ್ದ ನೀರಿಗೆ ಸಮುದ್ರವೆಂದೂ ಹೆಸರಿಟ್ಟನು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.

11 ಬಳಿಕ ದೇವರು, “ಭೂಮಿಯು ಸಸ್ಯರಾಶಿಯನ್ನು ಬೆಳೆಸಲಿ; ಬೀಜಗಳನ್ನು ಫಲಿಸುವ ಸಸ್ಯಗಳು ಬೆಳೆಯಲಿ; ತನ್ನತನ್ನ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಹಣ್ಣಿನ ಮರಗಳು ಭೂಮಿಯ ಮೇಲೆ ಬೆಳೆಯಲಿ” ಅಂದನು. ಹಾಗೆಯೇ ಆಯಿತು. 12 ಸಸಿಗಳು ಭೂಮಿಯ ಮೇಲೆ ಬೆಳೆದವು. ಅವುಗಳಲ್ಲಿ ಬೀಜ ಫಲಿಸುವ ಗಿಡಗಳೂ ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಮರಗಳೂ ಇದ್ದವು. ಪ್ರತಿಯೊಂದು ಸಸಿಯು ತನ್ನದೇ ಆದ ರೀತಿಯ ಬೀಜವನ್ನು ಫಲಿಸಿತು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.

13 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೂರನೆ ದಿನವಾಯಿತು.

ನಾಲ್ಕನೆ ದಿನ—ಸೂರ್ಯ, ಚಂದ್ರ ಮತ್ತು ನಕ್ಷತ್ರ

14 ಬಳಿಕ ದೇವರು, “ಆಕಾಶದಲ್ಲಿ ಬೆಳಕುಗಳು ಉಂಟಾಗಲಿ. ಈ ಬೆಳಕುಗಳು ಹಗಲುರಾತ್ರಿಗಳನ್ನು ಬೇರ್ಪಡಿಸಲಿ. ಈ ಬೆಳಕುಗಳು ವಿಶೇಷವಾದ ಗುರುತುಗಳಾಗಿದ್ದು, ವಿಶೇಷವಾದ ಸಮಯಗಳನ್ನೂ ದಿನಗಳನ್ನೂ ವರ್ಷಗಳನ್ನೂ ತೋರಿಸಲಿ. 15 ಈ ಬೆಳಕುಗಳು ಆಕಾಶದಲ್ಲಿದ್ದು ಭೂಮಿಯ ಮೇಲೆ ಬೆಳಕನ್ನು ಪ್ರಕಾಶಿಸಲಿ” ಅಂದನು. ಹಾಗೆಯೇ ಆಯಿತು.

16 ಆದ್ದರಿಂದ ದೇವರು ಎರಡು ದೊಡ್ಡಬೆಳಕುಗಳನ್ನು ಸೃಷ್ಟಿಸಿದನು. ಹಗಲನ್ನಾಳುವುದಕ್ಕಾಗಿ ದೊಡ್ಡಬೆಳಕನ್ನೂ ರಾತ್ರಿಯನ್ನಾಳುವುದಕ್ಕಾಗಿ ಅದಕ್ಕಿಂತ ಚಿಕ್ಕಬೆಳಕನ್ನೂ ಸೃಷ್ಟಿಸಿದನು. ಆತನು ನಕ್ಷತ್ರಗಳನ್ನು ಸಹ ಸೃಷ್ಟಿಸಿದನು. 17 ಈ ಬೆಳಕುಗಳು ಭೂಮಿಯ ಮೇಲೆ ಪ್ರಕಾಶಿಸಲೆಂದು ದೇವರು ಅವುಗಳನ್ನು ಆಕಾಶದಲ್ಲಿರಿಸಿದನು. 18 ಹಗಲನ್ನು ಮತ್ತು ರಾತ್ರಿಯನ್ನು ಆಳಲೆಂದು ದೇವರು ಈ ಬೆಳಕುಗಳನ್ನು ಆಕಾಶದಲ್ಲಿರಿಸಿದನು. ಇವು ಬೆಳಕನ್ನು ಕತ್ತಲೆಯಿಂದ ಬೇರ್ಪಡಿಸಿದವು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.

19 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ನಾಲ್ಕನೆ ದಿನವಾಯಿತು.

ಐದನೆ ದಿನ—ಮೀನುಗಳು ಮತ್ತು ಪಕ್ಷಿಗಳು

20 ಬಳಿಕ ದೇವರು, “ನೀರಿನಲ್ಲಿ ಅನೇಕ ಜಲಚರಗಳು ತುಂಬಿಕೊಳ್ಳಲಿ. ಭೂಮಿಯ ಮೇಲೆ ಆಕಾಶದಲ್ಲಿ ಪಕ್ಷಿಗಳು ಹಾರಾಡಲಿ” ಅಂದನು. 21 ಹೀಗೆ ದೇವರು ಸಮುದ್ರದ ಬೃಹದಾಕಾರದ ಪ್ರಾಣಿಗಳನ್ನು, ಸಮುದ್ರದಲ್ಲಿ ಚಲಿಸುವ ಪ್ರತಿಯೊಂದು ಬಗೆಯ ಜೀವಿಗಳನ್ನು ಮತ್ತು ರೆಕ್ಕೆಗಳುಳ್ಳ ಪ್ರತಿಯೊಂದು ಬಗೆಯ ಪಕ್ಷಿಗಳನ್ನು ಸೃಷ್ಟಿಸಿದನು. ಆತನಿಗೆ ಇವು ಒಳ್ಳೆಯದಾಗಿ ಕಂಡವು.

22 ಇದಲ್ಲದೆ ದೇವರು, “ಜಲಚರಗಳು ಅಸಂಖ್ಯಾತವಾಗಿ ಸಮುದ್ರಗಳನ್ನು ತುಂಬಿಕೊಳ್ಳಲಿ; ಪಕ್ಷಿಗಳು ಅಸಂಖ್ಯಾತವಾಗಿ ಭೂಮಿಯಲ್ಲೆಲ್ಲಾ ಹರಡಿಕೊಳ್ಳಲಿ” ಎಂದು ಹೇಳಿ ಆಶೀರ್ವದಿಸಿದನು.

23 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಐದನೆ ದಿನವಾಯಿತು.

ಆರನೆ ದಿನ—ನೆಲಪ್ರಾಣಿಗಳು ಮತ್ತು ಮನುಷ್ಯರು

24 ಬಳಿಕ ದೇವರು, “ಭೂಮಿಯು ಅನೇಕ ಬಗೆಯ ಪ್ರಾಣಿಗಳನ್ನು ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ. ಪ್ರತಿಯೊಂದು ಬಗೆಯ ದೊಡ್ಡ ಪ್ರಾಣಿಗಳು ಮತ್ತು ಹರಿದಾಡುವ ಚಿಕ್ಕ ಪ್ರಾಣಿಗಳು ಹುಟ್ಟಿಕೊಂಡು ಅಭಿವೃದ್ಧಿಯಾಗಲಿ” ಅಂದನು. ಹಾಗೆಯೇ ಆಯಿತು.

25 ಹೀಗೆ ದೇವರು ಪ್ರತಿಯೊಂದು ಬಗೆಯ ಕಾಡುಪ್ರಾಣಿಗಳನ್ನು, ಸಾಕುಪ್ರಾಣಿಗಳನ್ನು ಮತ್ತು ಹರಿದಾಡುವ ಎಲ್ಲಾ ಕ್ರಿಮಿಗಳನ್ನು ಸೃಷ್ಟಿಸಿದನು. ಆತನಿಗೆ ಇವು ಒಳ್ಳೆಯದಾಗಿ ಕಂಡವು.

26 ಬಳಿಕ ದೇವರು, “ಈಗ ನಾವು ಮನುಷ್ಯನನ್ನು ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ನಿರ್ಮಿಸೋಣ. ಅವರು ಸಮುದ್ರದಲ್ಲಿರುವ ಎಲ್ಲಾ ಮೀನುಗಳ ಮೇಲೆ, ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳ ಮೇಲೆ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳ ಮೇಲೆ ದೊರೆತನ ಮಾಡಲಿ” ಅಂದನು.

27 ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾಗಿ ಸೃಷ್ಟಿಸಿದನು. ಆತನು ಅವರನ್ನು ಗಂಡು ಮತ್ತು ಹೆಣ್ಣುಗಳಾಗಿ ರೂಪಿಸಿದನು. 28 ದೇವರು ಅವರನ್ನು ಆಶೀರ್ವದಿಸಿ, “ನೀವು ಅನೇಕ ಮಕ್ಕಳನ್ನು ಪಡೆದು ಭೂಮಿಯಲ್ಲೆಲ್ಲಾ ಹರಡಿಕೊಂಡು ಅದನ್ನು ಸ್ವಾಧೀನಪಡಿಸಿಕೊಳ್ಳಿರಿ. ಸಮುದ್ರದಲ್ಲಿರುವ ಮೀನುಗಳ ಮೇಲೆ, ಆಕಾಶದಲ್ಲಿರುವ ಪಕ್ಷಿಗಳ ಮೇಲೆ ಮತ್ತು ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆ ದೊರೆತನ ಮಾಡಿರಿ” ಅಂದನು.

29 ಇದಲ್ಲದೆ ದೇವರು ಅವರಿಗೆ, “ಬೀಜಫಲಿಸುವ ಎಲ್ಲಾ ಸಸಿಗಳನ್ನು ಮತ್ತು ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಎಲ್ಲಾ ಮರಗಳನ್ನು ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. 30 ಭೂಮಿಯ ಮೇಲಿರುವ ಪ್ರಾಣಿಗಳಿಗೆಲ್ಲಾ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆಲ್ಲಾ ಭೂಮಿಯ ಮೇಲೆ ಹರಿದಾಡುವ ಕ್ರಿಮಿಕೀಟಗಳಿಗೆಲ್ಲಾ ಆಹಾರಕ್ಕಾಗಿ ಸಸ್ಯರಾಶಿಯನ್ನು ಕೊಟ್ಟಿದ್ದೇನೆ” ಅಂದನು. ಹಾಗೆಯೇ ಆಯಿತು.

31 ದೇವರು ತಾನು ಸೃಷ್ಟಿಸಿದ್ದನ್ನೆಲ್ಲಾ ನೋಡಿದಾಗ, ಅವು ಆತನಿಗೆ ಒಳ್ಳೆಯದಾಗಿ ಕಂಡವು.

ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಆರನೆ ದಿನವಾಯಿತು.

ಏಳನೆ ದಿನ—ವಿಶ್ರಾಂತಿ

ಹೀಗೆ ಭೂಮಿಯೂ ಆಕಾಶವೂ ಅವುಗಳಲ್ಲಿರುವ ಪ್ರತಿಯೊಂದೂ ನಿರ್ಮಿತವಾದವು. ದೇವರು ತನ್ನ ಸೃಷ್ಟಿಕಾರ್ಯವನ್ನು ಮುಕ್ತಾಯಗೊಳಿಸಿ ಏಳನೆ ದಿನದಲ್ಲಿ ವಿಶ್ರಮಿಸಿಕೊಂಡನು. ದೇವರು ತನ್ನ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆ ದಿನದಲ್ಲಿ ವಿಶ್ರಮಿಸಿಕೊಂಡದ್ದರಿಂದ ಆ ದಿನವು “ಪರಿಶುದ್ಧ ದಿನವಾಗಿರಲಿ” ಎಂದು ಆಶೀರ್ವದಿಸಿದನು.

ಮಾನವನ ಪ್ರಾರಂಭ

ಇದು ಆಕಾಶದ ಮತ್ತು ಭೂಮಿಯ ಚರಿತ್ರೆ. ದೇವರು ಭೂಮಿಯನ್ನು ಮತ್ತು ಆಕಾಶವನ್ನು ಸೃಷ್ಟಿಸಿದಾಗ ನಡೆದ ಸಂಗತಿಗಳೇ ಈ ಚರಿತ್ರೆ. ಆಗ ಭೂಮಿಯ ಮೇಲೆ ಯಾವ ಮರಗಿಡಗಳೂ ಇರಲಿಲ್ಲ. ಭೂಮಿಯ ಮೇಲೆ ಯಾವ ಸಸಿಯೂ ಬೆಳೆಯುತ್ತಿರಲಿಲ್ಲ; ಯಾಕೆಂದರೆ ಯೆಹೋವನು ಭೂಮಿಯ ಮೇಲೆ ಇನ್ನೂ ಮಳೆಯನ್ನು ಸುರಿಸಿರಲಿಲ್ಲ; ಭೂಮಿಯನ್ನು ವ್ಯವಸಾಯ ಮಾಡಲು ಯಾರೂ ಇರಲಿಲ್ಲ.

ಭೂಮಿಯಿಂದ ನೀರು[c] ಚಿಮ್ಮಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು. ಹೀಗಿರಲು ದೇವರಾದ ಯೆಹೋವನು ನೆಲದಿಂದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಸಜೀವಿಯಾದನು. ದೇವರಾದ ಯೆಹೋವನು ಪೂರ್ವ ದಿಕ್ಕಿನಲ್ಲಿದ್ದ ಏದೆನ್ ಸೀಮೆಯಲ್ಲಿ ಒಂದು ತೋಟವನ್ನು ಮಾಡಿ ತಾನು ಸೃಷ್ಟಿಸಿದ ಮನುಷ್ಯನನ್ನು ಆ ತೋಟದಲ್ಲಿರಿಸಿದನು. ದೇವರಾದ ಯೆಹೋವನು ಆ ತೋಟದಲ್ಲಿ ಸುಂದರವಾದ ಪ್ರತಿಯೊಂದು ಮರವನ್ನು ಮತ್ತು ಊಟಕ್ಕೆ ಬೇಕಾದ ಒಳ್ಳೆಯ ಹಣ್ಣುಗಳನ್ನು ಬಿಡುವ ಪ್ರತಿಯೊಂದು ಮರವನ್ನು ಬೆಳೆಸಿದನು. ಇದಲ್ಲದೆ ತೋಟದ ಮಧ್ಯಭಾಗದಲ್ಲಿ ಜೀವದಾಯಕ ಮರವನ್ನೂ ಅಲ್ಲದೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರವನ್ನೂ ಬೆಳೆಸಿದನು.

10 ಏದೆನಿನಿಂದ ಹರಿದುಬರುತ್ತಿದ್ದ ನದಿಯು ತೋಟಕ್ಕೆ ಬೇಕಾದ ನೀರನ್ನು ಒದಗಿಸುತ್ತಿತ್ತು. ಬಳಿಕ ಅದೇ ನದಿಯು ಶಾಖೆಗಳಾಗಿ ಒಡೆದು ನಾಲ್ಕು ಉಪನದಿಗಳಾಯಿತು. 11 ಮೊದಲನೆ ನದಿಯ ಹೆಸರು ಪೀಶೋನ್. ಹವೀಲ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 12 ಈ ದೇಶದಲ್ಲಿ ಒಳ್ಳೆಯ ಬಂಗಾರ ದೊರೆಯುತ್ತಿತ್ತು. ಅಲ್ಲದೆ ಗುಗ್ಗುಲ ಮತ್ತು ಗೋಮೇಧಿಕ ರತ್ನ ಸಹ ದೊರಕುತ್ತಿದ್ದವು. 13 ಎರಡನೆ ನದಿಯ ಹೆಸರು ಗೀಹೋನ್. ಇಥಿಯೋಪಿಯ ದೇಶದಲ್ಲೆಲ್ಲಾ ಹರಿಯುತ್ತಿದ್ದ ನದಿ ಇದೇ. 14 ಮೂರನೆ ನದಿಯ ಹೆಸರು ಟೈಗ್ರಿಸ್. ದಕ್ಷಿಣ ಅಸ್ಸೀರಿಯ ದೇಶದಲ್ಲಿ ಹರಿಯುತ್ತಿದ್ದ ನದಿ ಇದೇ. ನಾಲ್ಕನೆ ನದಿಯ ಹೆಸರು ಯೂಫ್ರೇಟೀಸ್.

15 ದೇವರಾದ ಯೆಹೋವನು ಆ ಮನುಷ್ಯನನ್ನು ಏದೆನ್ ತೋಟಕ್ಕೆ ಕರೆದೊಯ್ದು ವ್ಯವಸಾಯ ಮಾಡುವುದಕ್ಕಾಗಿಯೂ ಅದನ್ನು ನೋಡಿಕೊಳ್ಳುವುದಕ್ಕೂ ಅದರಲ್ಲಿರಿಸಿದನು. 16 ದೇವರಾದ ಯೆಹೋವನು ಆ ಮನುಷ್ಯನಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನು ಬೇಕಾದರೂ ನೀನು ತಿನ್ನಬಹುದು. 17 ಆದರೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಕೊಡುವ ಮರದ ಹಣ್ಣನ್ನು ಮಾತ್ರ ನೀನು ತಿನ್ನಕೂಡದು. ಒಂದುವೇಳೆ ಆ ಮರದ ಹಣ್ಣನ್ನು ತಿಂದರೆ ನೀನು ಸಾಯುವೆ!” ಎಂದು ಆಜ್ಞಾಪಿಸಿದನು.

ಮೊದಲನೆ ಸ್ತ್ರೀ

18 ಬಳಿಕ ದೇವರಾದ ಯೆಹೋವನು, “ಮನುಷ್ಯನು ಒಬ್ಬಂಟಿಗನಾಗಿರುವುದು ಒಳ್ಳೆಯದಲ್ಲವೆಂದು ನನಗೆ ತೋರುತ್ತದೆ. ಅವನಿಗೆ ಸರಿಹೊಂದುವ ಸಹಕಾರಿಣಿಯನ್ನು ಉಂಟುಮಾಡುವೆನು” ಎಂದುಕೊಂಡನು.

19 ದೇವರಾದ ಯೆಹೋವನು ನೆಲದ ಮಣ್ಣಿನಿಂದ ಭೂಮಿಯ ಮೇಲಿರುವ ಪ್ರತಿಯೊಂದು ಪಶುವನ್ನೂ ಆಕಾಶದಲ್ಲಿರುವ ಪ್ರತಿಯೊಂದು ಪಕ್ಷಿಯನ್ನೂ ನಿರ್ಮಿಸಿ ಮನುಷ್ಯನ ಬಳಿಗೆ ಬರಮಾಡಿದನು. ಅವುಗಳಿಗೆಲ್ಲಾ ಮನುಷ್ಯನು ಹೆಸರಿಟ್ಟನು. 20 ಭೂಮಿಯ ಮೇಲಿನ ಎಲ್ಲಾ ಪಶುಗಳಿಗೂ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೂ ಮತ್ತು ಕಾಡಿನಲ್ಲಿರುವ ಎಲ್ಲಾ ಕ್ರೂರಪ್ರಾಣಿಗಳಿಗೂ ಮನುಷ್ಯನು ಹೆಸರಿಟ್ಟನು. ಮನುಷ್ಯನು ಅನೇಕಾನೇಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ನೋಡಿದನು. ಆದರೆ ಅವುಗಳಲ್ಲಿ ತನಗೆ ಸರಿಹೊಂದುವ ಸಹಕಾರಿಣಿಯನ್ನು ಅವನು ಕಾಣಲಿಲ್ಲ. 21 ಆದ್ದರಿಂದ ದೇವರಾದ ಯೆಹೋವನು ಮನುಷ್ಯನಿಗೆ ಗಾಢವಾದ ನಿದ್ರೆಯನ್ನು ಬರಮಾಡಿ ಅವನ ದೇಹದ ಪಕ್ಕೆಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಆ ಪಕ್ಕೆಲುಬಿನ ಸ್ಥಳವನ್ನು ಮಾಂಸದಿಂದ ಮುಚ್ಚಿದನು. 22 ಆತನು ಮನುಷ್ಯನ ಪಕ್ಕೆಲುಬಿನಿಂದ ಸ್ತ್ರೀಯನ್ನು ಸೃಷ್ಟಿಸಿ ಆಕೆಯನ್ನು ಮನುಷ್ಯನ ಬಳಿಗೆ ಕರೆದುಕೊಂಡು ಬಂದನು. 23 ಆಗ ಅವನು ಆಕೆಯನ್ನು ನೋಡಿ,

“ಈಗ ಸರಿ, ಈಕೆ ನನ್ನಂತೆಯೇ ಇದ್ದಾಳೆ.
    ಈಕೆಯ ಎಲುಬುಗಳು ನನ್ನ ಎಲುಬುಗಳಿಂದ ಬಂದಿವೆ.
    ಈಕೆಯ ದೇಹವು ನನ್ನ ದೇಹದಿಂದ ಬಂದಿದೆ.
ಈಕೆ ಮನುಷ್ಯನಿಂದ ಉತ್ಪತ್ತಿಯಾದವಳು.
    ಆದ್ದರಿಂದ ಈಕೆಗೆ ನಾನು ‘ಸ್ತ್ರೀ’ ಎಂದು ಹೆಸರಿಡುವೆ” ಎಂದನು.

24 ಆದ್ದರಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗುವರು.

25 ಆ ಪುರುಷನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ಪಾಪದ ಪ್ರಾರಂಭ

ದೇವರಾದ ಯೆಹೋವನು ಸೃಷ್ಟಿಸಿದ ಎಲ್ಲ ಭೂಜಂತುಗಳಲ್ಲಿ ಸರ್ಪವು ಅತಿ ಯುಕ್ತಿಯುಳ್ಳದ್ದಾಗಿತ್ತು. ಸರ್ಪವು ಸ್ತ್ರೀಯನ್ನು ಮೋಸಗೊಳಿಸಲು ಅವಳ ಬಳಿಗೆ ಬಂದು, “ಏನಮ್ಮಾ, ಈ ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಕೂಡದೆಂದು ದೇವರು ನಿಮಗೆ ಹೇಳಿರುವುದು ನಿಜವೇ?” ಎಂದು ಕೇಳಿತು.

ಸ್ತ್ರೀಯು ಸರ್ಪಕ್ಕೆ, “ಇಲ್ಲ! ದೇವರು ಹಾಗೆ ಹೇಳಲಿಲ್ಲ! ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು. ಆದರೆ ಒಂದು ಮರದ ಹಣ್ಣನ್ನು ಮಾತ್ರ ನಾವು ತಿನ್ನಕೂಡದು. ದೇವರು ನಮಗೆ, ‘ತೋಟದ ಮಧ್ಯದಲ್ಲಿರುವ ಮರದ ಹಣ್ಣನ್ನು ನೀವು ತಿನ್ನಕೂಡದು; ಆ ಮರವನ್ನು ಮುಟ್ಟಕೂಡದು, ಇಲ್ಲವಾದರೆ ನೀವು ಸಾಯುವಿರಿ’ ಎಂದು ಹೇಳಿದ್ದಾನೆ” ಎಂಬುದಾಗಿ ಉತ್ತರಕೊಟ್ಟಳು.

ಅದಕ್ಕೆ ಸರ್ಪವು ಸ್ತ್ರೀಗೆ, “ನೀವು ಸಾಯುವುದಿಲ್ಲ. ನೀವು ಆ ಮರದ ಹಣ್ಣನ್ನು ತಿಂದರೆ ನಿಮಗೆ ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ಜ್ಞಾನ ಬರುತ್ತದೆಯೆಂದು ದೇವರಿಗೆ ಗೊತ್ತಿದೆ. ಅಲ್ಲದೆ ನೀವು ದೇವರಿಗೆ ಸರಿಸಮಾನರಾಗುವಿರಿ” ಎಂದು ಹೇಳಿತು.

ಸ್ತ್ರೀಗೆ ಆ ಮರ ಸುಂದರವಾಗಿ ಕಂಡಿತು. ಅದರ ಹಣ್ಣು ಆಕೆಗೆ ತಿನ್ನಲು ಯೋಗ್ಯವಾಗಿ ಕಂಡಿತು. ಆ ಮರ ತನ್ನನ್ನು ಜ್ಞಾನಿಯನ್ನಾಗಿ ಮಾಡುತ್ತದೆಯೆಂದು ಆಕೆ ಉತ್ಸಾಹಗೊಂಡಳು. ಆದ್ದರಿಂದ ಸ್ತ್ರೀಯು ಆ ಮರದ ಹಣ್ಣನ್ನು ಕಿತ್ತುಕೊಂಡು ತಿಂದಳು; ತನ್ನೊಂದಿಗಿದ್ದ ಗಂಡನಿಗೂ ಸ್ವಲ್ಪ ಹಣ್ಣನ್ನು ಕೊಟ್ಟಳು. ಅವನು ಸಹ ಅದನ್ನು ತಿಂದನು.

ಕೂಡಲೇ ಪುರುಷನಲ್ಲಿಯೂ ಸ್ತ್ರೀಯಲ್ಲಿಯೂ ಬದಲಾವಣೆಗಳಾದವು. ಅವರ ಕಣ್ಣುಗಳು ತೆರೆದವು. ಅವರಿಗೆ ಎಲ್ಲವೂ ವಿಚಿತ್ರವಾಗಿ ಕಂಡವು. ತಾವು ಬೆತ್ತಲೆಯಿಂದಿರುವುದನ್ನು ಕಂಡು ಅಂಜೂರದ ಎಲೆಗಳನ್ನು ಕಿತ್ತು ಒಂದಕ್ಕೊಂದು ಜೋಡಿಸಿ ಸುತ್ತಿಕೊಂಡರು.

ಅಂದು ಸಂಜೆ ತಂಗಾಳಿ ಬೀಸುತ್ತಿರಲು ದೇವರಾದ ಯೆಹೋವನು ತೋಟದಲ್ಲಿ ತಿರುಗಾಡುತ್ತಿದ್ದನು. ಆತನ ಸಪ್ಪಳವನ್ನು ಕೇಳಿದ ಪುರುಷನು ಮತ್ತು ಅವನ ಹೆಂಡತಿಯು ತೋಟದ ಮರಗಳ ಮರೆಯಲ್ಲಿ ಅಡಗಿಕೊಂಡರು. ದೇವರಾದ ಯೆಹೋವನು ಪುರುಷನಿಗೆ, “ನೀನು ಎಲ್ಲಿರುವೆ?” ಎಂದು ಕೂಗಿ ಕೇಳಿದನು.

10 ಅದಕ್ಕೆ ಪುರುಷನು, “ನೀನು ತೋಟದಲ್ಲಿ ತಿರುಗಾಡುತ್ತಿರುವ ಸಪ್ಪಳವನ್ನು ನಾನು ಕೇಳಿದೆನು. ಆದರೆ ನಾನು ಬೆತ್ತಲೆಯಾಗಿದ್ದರಿಂದ ಭಯದಿಂದ ಅಡಗಿಕೊಂಡೆನು” ಎಂದು ಹೇಳಿದನು.

11 ದೇವರು ಪುರುಷನಿಗೆ, “ನೀನು ಬೆತ್ತಲೆಯಾಗಿರುವೆ ಎಂದು ನಿನಗೆ ಹೇಳಿದವರು ಯಾರು? ವಿಶೇಷವಾದ ಆ ಮರದ ಹಣ್ಣನ್ನು ನೀನು ತಿಂದೆಯಾ? ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆನಲ್ಲಾ!” ಎಂದು ಹೇಳಿದನು.

12 ಅದಕ್ಕೆ ಪುರುಷನು, “ನೀನು ನನಗಾಗಿ ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ಆದ್ದರಿಂದ ನಾನು ತಿಂದೆ” ಅಂದನು.

13 ಆಗ ದೇವರಾದ ಯೆಹೋವನು ಸ್ತ್ರೀಗೆ, “ನೀನು ಮಾಡಿದ್ದೇನು?” ಎಂದು ಕೇಳಿದನು.

ಅದಕ್ಕೆ ಸ್ತ್ರೀಯು, “ಆ ಹಾವಿನ ಮೋಸಕ್ಕೆ ಒಳಗಾಗಿ ನಾನು ಆ ಹಣ್ಣನ್ನು ತಿಂದೆ” ಅಂದಳು.

14 ಆಗ ದೇವರಾದ ಯೆಹೋವನು ಹಾವಿಗೆ,

“ನೀನು ಮಾಡಿದ ಈ ಕೆಟ್ಟಕಾರ್ಯದಿಂದ
    ನಿನಗೂ ಕೇಡುಗಳಾಗುತ್ತವೆ.[d]
ಬೇರೆಲ್ಲಾ ಪ್ರಾಣಿಗಳಿಗಿಂತಲೂ
    ನಿನಗೆ ಹೀನಸ್ಥಿತಿ ಉಂಟಾಗುವುದು.
ನೀನು ಹೊಟ್ಟೆಯಿಂದಲೇ ತೆವಳಿಕೊಂಡು
    ನಿನ್ನ ಜೀವಮಾನವೆಲ್ಲಾ ಮಣ್ಣನ್ನೇ ತಿನ್ನುವೆ.
15 ನೀನು ಮತ್ತು ಸ್ತ್ರೀಯು ಒಬ್ಬರಿಗೊಬ್ಬರು ವೈರಿಗಳಾಗಿರುವಂತೆ ಮಾಡುವೆನು.
    ನಿನ್ನ ಮಕ್ಕಳು ಮತ್ತು ಅವಳ ಮಕ್ಕಳು[e] ಒಬ್ಬರಿಗೊಬ್ಬರು ವೈರಿಗಳಾಗಿರುವರು.
ನೀನು ಆಕೆಯ ಮಗನ ಪಾದವನ್ನು ಕಚ್ಚುವೆ.
    ಆದರೆ ಅವನು ನಿನ್ನ ತಲೆಯನ್ನು ಜಜ್ಜಿ ಹಾಕುವನು” ಎಂದನು.

16 ಬಳಿಕ ದೇವರಾದ ಯೆಹೋವನು ಸ್ತ್ರೀಗೆ,

“ನೀನು ಗರ್ಭಿಣಿಯಾಗಿರುವಾಗ
    ಬಹು ಸಂಕಟಪಡುವೆ.
ನೀನು ಮಕ್ಕಳನ್ನು ಹೆರುವಾಗ
    ಬಹಳ ವೇದನೆಪಡುವೆ.
ನೀನು ಗಂಡನನ್ನು ಬಹಳವಾಗಿ ಇಷ್ಟಪಡುವೆ;
    ಆದರೆ ಅವನು ನಿನ್ನನ್ನು ಆಳುವನು” ಎಂದನು.

17 ಆಮೇಲೆ ದೇವರಾದ ಯೆಹೋವನು ಪುರುಷನಿಗೆ,

“ವಿಶೇಷವಾದ ಆ ಮರದ ಹಣ್ಣನ್ನು ತಿನ್ನಕೂಡದೆಂದು ನಾನು ನಿನಗೆ ಆಜ್ಞಾಪಿಸಿದ್ದೆ.
    ಆದರೆ ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ಆ ಮರದ ಹಣ್ಣನ್ನು ತಿಂದೆ.
ನಿನ್ನ ದೆಸೆಯಿಂದ ನಾನು ಭೂಮಿಯನ್ನು ಶಪಿಸುವೆನು.
    ಭೂಮಿಯು ಫಲಿಸುವ ಆಹಾರಕ್ಕಾಗಿ ನೀನು ನಿನ್ನ ಜೀವಮಾನದ ದಿನಗಳಲ್ಲೆಲ್ಲಾ ಕಷ್ಟಪಟ್ಟು ದುಡಿಯಲೇಬೇಕು.
18 ಭೂಮಿಯು ನಿನಗೋಸ್ಕರ ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸುವುದು.
    ಹೊಲದಲ್ಲಿ ಬೆಳೆಯುವ ಬೆಳೆಯನ್ನು ನೀನು ತಿನ್ನುವೆ.[f]
19 ನಿನ್ನ ಮುಖದಲ್ಲಿ ಬೆವರು ಹರಿಯುವ ತನಕ
    ನೀನು ಆಹಾರಕ್ಕಾಗಿ ಕಷ್ಟಪಟ್ಟು ದುಡಿಯುವೆ.
ನೀನು ಸಾಯುವ ದಿನದವರೆಗೆ ಕಷ್ಟಪಟ್ಟು ಕೆಲಸ ಮಾಡುವೆ.
    ಆಮೇಲೆ ನೀನು ಮಣ್ಣಾಗುವೆ.
ನಾನು ನಿನ್ನನ್ನು ನಿರ್ಮಿಸಲು ಮಣ್ಣನ್ನು ಉಪಯೋಗಿಸಿದೆ.
    ನೀನು ಸತ್ತಾಗ ಮತ್ತೆ ಮಣ್ಣೇ ಆಗುವೆ” ಎಂದನು.

20 ಆದಾಮನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಆದಾಮನು ಹವ್ವ ಎಂದು ಹೆಸರಿಡಲು ಕಾರಣವೇನೆಂದರೆ ಈ ಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಆಕೆಯೇ ಮೂಲ ತಾಯಿ.

21 ದೇವರಾದ ಯೆಹೋವನು ಪ್ರಾಣಿಯ ಚರ್ಮದಿಂದ ಉಡುಪುಗಳನ್ನು ಮಾಡಿ ಆದಾಮನಿಗೆ ಮತ್ತು ಅವನ ಹೆಂಡತಿಗೆ ತೊಡಿಸಿದನು.

22 ದೇವರಾದ ಯೆಹೋವನು, “ಮನುಷ್ಯನು ಒಳ್ಳೆಯದರ ಮತ್ತು ಕೆಟ್ಟದ್ದರ ಬಗ್ಗೆ ತಿಳಿದುಕೊಂಡು ನಮ್ಮಂತಾದನು. ಈಗ ಮನುಷ್ಯನು ಜೀವದಾಯಕ ಮರದ ಹಣ್ಣನ್ನೇನಾದರೂ ತೆಗೆದುಕೊಂಡು ತಿಂದರೆ ಅವನು ಸದಾಕಾಲ ಬದುಕುವನು” ಅಂದುಕೊಂಡನು.

23 ಆದ್ದರಿಂದ ಆತನು ಆದಾಮನನ್ನು ಅವನು ಉತ್ಪತ್ತಿಗೊಂಡಿದ್ದ ನೆಲದಲ್ಲಿ ವ್ಯವಸಾಯ ಮಾಡಲು ಬಲವಂತವಾಗಿ ಏದೆನ್ ತೋಟದಿಂದ ಹೊರಡಿಸಿಬಿಟ್ಟನು. 24 ಅಲ್ಲದೆ ಏದೆನ್ ತೋಟವನ್ನು ಸಂರಕ್ಷಿಸುವುದಕ್ಕಾಗಿ ಆತನು ಕೆರೂಬಿದೂತರನ್ನು ತೋಟದ ಪೂರ್ವಭಾಗದಲ್ಲಿ ಇರಿಸಿದನು. ಇದಲ್ಲದೆ ಆತನು ಬೆಂಕಿಯ ಖಡ್ಗವನ್ನು ಅಲ್ಲಿಟ್ಟನು. ಈ ಖಡ್ಗವು ಎಲ್ಲಾ ದಿಕ್ಕುಗಳತ್ತ ತಿರುಗುತ್ತಾ ಧಗಧಗನೆ ಪ್ರಜ್ವಲಿಸುತ್ತಾ ಜೀವದಾಯಕ ಮರದ ಮಾರ್ಗವನ್ನು ಕಾಯುತ್ತಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International