Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಪ್ರಕಟನೆ 1-3

ಪೀಠಿಕೆ

ಇದು ಯೇಸು ಕ್ರಿಸ್ತನ ಪ್ರಕಟನೆ. ದೇವರು ಬೇಗನೆ ಸಂಭವಿಸಲಿರುವುದನ್ನು ತನ್ನ ಸೇವಕರಿಗೆ ತೋರ್ಪಡಿಸುವುದಕ್ಕಾಗಿ ಯೇಸುವಿಗೆ ಇವುಗಳನ್ನು ಪ್ರಕಟಿಸಿದನು. ಕ್ರಿಸ್ತನು ತನ್ನ ಸೇವಕನಾದ ಯೋಹಾನನಿಗೆ ಇವುಗಳನ್ನು ತೋರಿಸಲು ತನ್ನ ದೂತನನ್ನು ಕಳುಹಿಸಿದನು. ಯೋಹಾನನು ತಾನು ಕಂಡದ್ದೆಲ್ಲವನ್ನು ತಿಳಿಸಿದನು. ಇದು ಯೇಸು ಕ್ರಿಸ್ತನು ಅವನಿಗೆ ಹೇಳಿದ ಸತ್ಯ. ಇದು ದೇವರಿಂದ ಬಂದ ಸಂದೇಶ. ದೇವರಿಂದ ಬಂದ ಈ ಸಂದೇಶದ ವಾಕ್ಯಗಳನ್ನು ಓದುವವರೂ ಈ ಸಂದೇಶವನ್ನು ಕೇಳಿ ಅದನ್ನು ಕೈಕೊಂಡು ನಡೆಯುವವರೂ ಭಾಗ್ಯವಂತರಾಗಿದ್ದಾರೆ. ಏಕೆಂದರೆ ನೆರವೇರುವ ಕಾಲವು ಸಮೀಪವಾಗಿದೆ.

ಯೋಹಾನನು ಸಭೆಗಳಿಗೆ ಬರೆದ ಯೇಸುವಿನ ಸಂದೇಶ

ಏಷ್ಯಾ[a] ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ:

ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ.

ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್.

ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು[b] ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್.

ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ[c] ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.”

ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. 10 ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. 11 ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು.

12 ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. 13 ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ[d] ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. 14 ಆತನ ತಲೆಕೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; 15 ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. 16 ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು.

17 ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. 18 ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ. 19 ಆದ್ದರಿಂದ ನೀನು ನೋಡಿದ ಸಂಗತಿಗಳನ್ನು ಬರೆ. ಈಗ ಸಂಭವಿಸುವ ಸಂಗತಿಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗತಿಗಳನ್ನು ಬರೆ. 20 ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಮತ್ತು ನೀನು ಕಂಡ ಏಳು ಬಂಗಾರದ ದೀಪಸ್ತಂಭಗಳ ಗೂಢಾರ್ಥವು ಹೀಗಿದೆ: ಏಳು ನಕ್ಷತ್ರಗಳೆಂದರೆ ಏಳು ಸಭೆಗಳ ದೂತರು. ಏಳು ದೀಪಸ್ತಂಭಗಳೆಂದರೆ ಏಳು ಸಭೆಗಳು.” ಎಂದು ಹೇಳಿದನು.

ಎಫೆಸದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಎಫೆಸದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿರುವಾತನು ಮತ್ತು ಏಳು ದೀಪಸ್ತಂಭಗಳ ನಡುವೆ ತಿರುಗಾಡುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.

“ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಕಷ್ಟಪಟ್ಟು ಕೆಲಸಮಾಡುತ್ತಾ ತಾಳ್ಮೆಯಿಂದಿರುವೆ. ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಅಪೊಸ್ತಲರಾಗಿಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ. ನೀನು ತಾಳ್ಮೆಯಿಂದ ಸತತವಾಗಿ ಪ್ರಯತ್ನಿಸುತ್ತಿರುವೆ; ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಬೇಸರಪಡದೆ ಸಹಿಸಿಕೊಂಡೆ.

“ಆದರೆ ನಿನ್ನ ವಿರುದ್ಧವಾಗಿ ನಾನು ಹೇಳುವುದೇನೆಂದರೆ: ನಿನ್ನ ಮೊದಲಿನ ಪ್ರೀತಿಯನ್ನು ತೊರೆದುಬಿಟ್ಟಿರುವೆ. ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀ ಎಂಬುದನ್ನು ನೆನಪು ಮಾಡಿಕೊ; ಮನಸ್ಸನ್ನು ಪರಿವರ್ತಿಸಿಕೊ. ನೀನು ಮೊದಲು ಮಾಡಿದ ಕಾರ್ಯಗಳನ್ನು ಮಾಡು. ನೀನು ಪರಿವರ್ತನೆಗೊಳ್ಳದಿದ್ದರೆ ನಾನು ನಿನ್ನಲ್ಲಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಬಿಡುತ್ತೇನೆ. ಆದರೆ ನೀನು ಯೋಗ್ಯವಾದ ಒಂದನ್ನು ಮಾಡುತ್ತಿರುವೆ. ಅದೇನೆಂದರೆ, ನಿಕೊಲಾಯಿತರು[e] ಮಾಡುವ ಕಾರ್ಯಗಳನ್ನು ನೀನು ದ್ವೇಷಿಸುತ್ತಿ. ನಾನು ಸಹ ಅವರ ಕಾರ್ಯಗಳನ್ನು ದ್ವೇಷಿಸುತ್ತೇನೆ.

“ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿಸುತ್ತಾನೋ ಅವನಿಗೆ ತಿನ್ನಲು ಜೀವದಾಯಕ ಮರದ ಹಣ್ಣನ್ನು ಕೊಡುತ್ತೇನೆ. ಈ ಮರವು ದೇವರ ತೋಟದಲ್ಲಿದೆ.

ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.

“ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.

11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.

ಪೆರ್ಗಮದಲ್ಲಿರುವ ಸಭೆಗೆ ಯೇಸುವಿನ ಪತ್ರ

12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಹರಿತವಾದ ಇಬ್ಬಾಯಿಖಡ್ಗವನ್ನು ಹೊಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.

13 “ನೀನು ಎಲ್ಲಿ ವಾಸಮಾಡುತ್ತಿರುವೆ ಎಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನ ವಿರುವ ಕಡೆಯಲ್ಲಿ ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಸ್ತನಾಗಿರುವೆ. ಅಂತಿಪನ ಕಾಲದಲ್ಲಿಯೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ತಿಳಿಸಲು ನಿರಾಕರಿಸಲಿಲ್ಲ. ನಿನ್ನ ಪಟ್ಟಣದಲ್ಲಿ ಕೊಲ್ಲಲ್ಪಟ್ಟ ಅಂತಿಪನು ನನ್ನ ನಂಬಿಗಸ್ತ ಸಾಕ್ಷಿಯಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.

14 “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭೆಯಲ್ಲಿ ಬಿಳಾಮನ ದುರ್ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಪಾಪಕ್ಕೆ ಒಳಗಾಗುವಂತೆ ಮಾಡಬೇಕೆಂಬುದನ್ನು ಬಿಳಾಮನು ಬಾಲಾಕನಿಗೆ ದುರ್ಬೋಧನೆ ಮಾಡಿದನು. ಆದ್ದರಿಂದ ಇಸ್ರೇಲರು ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವುದರ ಮೂಲಕವಾಗಿಯೂ ಲೈಂಗಿಕ ಪಾಪಗಳನ್ನು ಮಾಡುವುದರ ಮೂಲಕವಾಗಿಯೂ ಪಾಪ ಮಾಡಿದರು. 15 ನಿನ್ನ ಸಭೆಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೊಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. 16 ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಲ್ಲವಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೊರಗೆ ಬರುವ ಖಡ್ಗದಿಂದ ಆ ಜನರ ವಿರುದ್ಧ ಹೋರಾಡುತ್ತೇನೆ.

17 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಅಡಗಿಸಿಟ್ಟಿರುವ ಮನ್ನವನ್ನು[f] ಕೊಡುತ್ತೇನೆ. ಅವನಿಗೆ ನಾನು ಬಿಳುಪಾದ ಕಲ್ಲನ್ನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಹೊಸ ಹೆಸರನ್ನು ಕೆತ್ತಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲ್ಲನ್ನು ಪಡೆದುಕೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.

ಥುವತೈರದಲ್ಲಿರುವ ಸಭೆಗೆ ಯೇಸುವಿನ ಪತ್ರ

18 “ಥುವತೈರದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ದೇವಕುಮಾರನು ಈ ಸಂಗತಿಗಳನ್ನು ಹೇಳುತ್ತಾನೆ. ಬೆಂಕಿಯ ಉರಿಯಂತೆ ಪ್ರಜ್ವಲಿಸುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳೂ ಇರುವಾತನು, ನಿನಗೆ ಇವುಗಳನ್ನು ಹೇಳುತ್ತಾನೆ.

19 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಪ್ರೀತಿ, ನಂಬಿಕೆ, ಸೇವೆ ಮತ್ತು ತಾಳ್ಮೆಗಳು ನನಗೆ ತಿಳಿದಿವೆ. ಈಗ ನೀನು ಮೊದಲಿಗಿಂತ ಹೆಚ್ಚಿಗೆ ಮಾಡುತ್ತಿರುವುದನ್ನೂ ಬಲ್ಲೆನು. 20 ಆದರೆ ನಿನ್ನ ವಿರುದ್ಧವಾಗಿ ಇವುಗಳನ್ನು ಹೇಳಬೇಕಾಗಿದೆ. ಯೆಜೆಬೇಲ್ ಎಂಬ ಸ್ತ್ರೀಯು ತನ್ನ ಇಷ್ಟದಂತೆ ಮಾಡಲು ಅವಕಾಶಕೊಟ್ಟಿರುವೆ. ಆಕೆಯು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರ ಸೆಳೆಯುತ್ತಿದ್ದಾಳೆ. ಲೈಂಗಿಕ ಪಾಪಗಳನ್ನು ಮಾಡುವಂತೆಯೂ ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವಂತೆಯೂ ಆಕೆಯು ನನ್ನ ಜನರನ್ನು ಪ್ರೇರೇಪಿಸುತ್ತಿದ್ದಾಳೆ.[g] 21 ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ಪಾಪಗಳಿಂದ ದೂರ ಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇಷ್ಟವಿಲ್ಲ.

22 “ಆದ್ದರಿಂದ ಆಕೆಯು ಮಹಾಸಂಕಟಪಡುತ್ತಾ ಹಾಸಿಗೆಯ ಮೇಲೆ ಬಿದ್ದಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ಪಾಪ ಮಾಡುವ ಜನರೆಲ್ಲರೂ ಮಹಾಸಂಕಟವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖರಾಗದಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ. 23 ನಾನು ಅವಳ ಹಿಂಬಾಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನೂ ಅವರ ಆಲೋಚನೆಗಳನ್ನೂ ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಭೆಗಳವರು ತಿಳಿದುಕೊಳ್ಳುವರು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.

24 “ಆದರೆ ಥುವತೈರದಲ್ಲಿರುವ ಇನ್ನಿತರರಿಗೆ ನಾನು ಹೇಳುವುದೇನೆಂದರೆ, ನೀವು ಆಕೆಯ ಬೋಧನೆಗಳನ್ನು ಅನುಸರಿಸಲಿಲ್ಲ, ‘ಸೈತಾನನ ಅಗಾಧವಾದ ರಹಸ್ಯಗಳು’ ಎಂದು ಅವರು ಹೇಳುವ ಸಂಗತಿಗಳನ್ನು ನೀವು ಕಲಿತುಕೊಂಡಿಲ್ಲ. ಆದ್ದರಿಂದ ನಾನು ಬೇರೊಂದು ಹೊರೆಯನ್ನು ನಿಮ್ಮ ಮೇಲೆ ಹೊರಿಸುವುದಿಲ್ಲ. 25 ನಾನು ಬರುವ ತನಕ ಈಗ ನೀವಿರುವಂತೆಯೇ ಇರಿ.

26 “ಜಯಗಳಿಸುವವನಿಗೆ ಮತ್ತು ನಾನು ಅಪೇಕ್ಷಿಸುವುದನ್ನು ಕೊನೆಯವರೆಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ: 27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’[h] 28 ನಾನು ನನ್ನ ತಂದೆಯಿಂದ ಪಡೆದುಕೊಂಡ ಶಕ್ತಿ ಇದೇ. ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ನೀಡುತ್ತೇನೆ. 29 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

ಸಾರ್ದಿಸ್‌ನಲ್ಲಿರುವ ಸಭೆಗೆ ಯೇಸುವಿನ ಪತ್ರ

“ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಏಳು ಆತ್ಮಗಳು ಮತ್ತು ಏಳು ನಕ್ಷತ್ರಗಳನ್ನು ಹೊಂದಿರುವಾತನು ಹೇಳುವುದೇನೆಂದರೆ: ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಜೀವವುಳ್ಳವನೆಂದು ಜನರು ಹೇಳುತ್ತಾರೆ. ಆದರೆ ನೀನು ನಿಜವಾಗಿಯೂ ಸತ್ತು ಹೋಗಿರುವೆ. ಎದ್ದೇಳು! ಸಾಯುವ ಸ್ಥಿತಿಯಲ್ಲಿರುವಂಥವುಗಳನ್ನು ಬಲಪಡಿಸು. ನೀನು ಮಾಡಿರುವ ಕಾರ್ಯಗಳನ್ನು ನನ್ನ ದೇವರ ದೃಷ್ಟಿಯಲ್ಲಿ ನಿಷ್ಕಳಂಕವಾಗಿರುವುದನ್ನು ನಾನು ಕಾಣಲಿಲ್ಲ. ಆದ್ದರಿಂದ ನೀನು ಸ್ವೀಕರಿಸಿಕೊಂಡ ಮತ್ತು ಕೇಳಿದ ಉಪದೇಶವನ್ನು ಮರೆಯದೆ ಅದಕ್ಕೆ ವಿಧೇಯನಾಗಿರು. ನಿನ್ನ ಹೃದಯವನ್ನೂ ಜೀವಿತವನ್ನೂ ಪರಿವರ್ತಿಸಿಕೊ! ಎಚ್ಚರಗೊಳ್ಳು! ಇಲ್ಲವಾದರೆ, ನಾನು ಕಳ್ಳನಂತೆ ನಿನ್ನ ಬಳಿಗೆ ಬಂದು ಆಶ್ಚರ್ಯಗೊಳಿಸುತ್ತೇನೆ. ನಾನು ಯಾವಾಗ ಬರುತ್ತೇನೆ ಎಂಬುದು ನಿನಗೆ ಗೊತ್ತಿರುವುದಿಲ್ಲ.

“ನಿಮ್ಮ ಸಭೆಗೆ ಸೇರಿದ ಸಾರ್ದಿಸಿನ ಕೆಲವರು ಇನ್ನೂ ಪರಿಶುದ್ಧರಾಗಿದ್ದಾರೆ. ಅವರು ತಮ್ಮ ಬಟ್ಟೆಗಳನ್ನು ಕೊಳಕು ಮಾಡಿಕೊಂಡಿಲ್ಲ. ಅವರು ನನ್ನೊಂದಿಗೆ ನಡೆಯುವರು. ಅವರು ಯೋಗ್ಯರಾಗಿರುವುದರಿಂದ ಬಿಳಿವಸ್ತ್ರಗಳನ್ನು ಧರಿಸುತ್ತಾರೆ. ಜಯಗಳಿಸುವ ಪ್ರತಿಯೊಬ್ಬನೂ ಈ ಜನರಂತೆ ಬಿಳಿಯ ವಸ್ತ್ರಗಳನ್ನು ಧರಿಸುತ್ತಾನೆ. ಆ ವ್ಯಕ್ತಿಯ ಹೆಸರನ್ನು ನಾನು ಜೀವಭಾದ್ಯರ ಪುಸ್ತಕದಿಂದ ತೆಗೆದು ಹಾಕುವುದಿಲ್ಲ. ಅವನು ನನಗೆ ಸೇರಿದವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಹೇಳುತ್ತೇನೆ. ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

ಫಿಲದೆಲ್ಫಿಯದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಪವಿತ್ರನೂ ಸತ್ಯವಂತನೂ ಆಗಿರುವಾತನು ನೀಡುವ ಸಂದೇಶವಿದು: ದಾವೀದನ ಬೀಗದ ಕೈ ನನ್ನಲ್ಲಿದೆ. ನಾನು ತೆರೆದದ್ದನ್ನು ಯಾರೂ ಮುಚ್ಚಲಾರರು;(A) ಮುಚ್ಚಿದ್ದನ್ನು ಯಾರೂ ತೆರೆಯಲಾರರು.

“ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಮುಂದೆ ತೆರೆದ ಬಾಗಿಲನ್ನು ಇಟ್ಟಿದ್ದೇನೆ. ಅದನ್ನು ಯಾರೂ ಮುಚ್ಚಲಾರರು. ನೀನು ದುರ್ಬಲನೆಂಬುದು ನನಗೆ ತಿಳಿದಿದೆ. ಆದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜರಿಯಲಿಲ್ಲ. ಆಲಿಸು! ಅಲ್ಲಿ ಸೈತಾನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅದು ಸುಳ್ಳು. ಅವರು ನಿಜವಾದ ಯೆಹೂದ್ಯರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತೆ ಮಾಡುತ್ತೇನೆ. ನಾನು ಪ್ರೀತಿಸಿದ ಜನರು ನೀವೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ. 10 ನೀನು ನನ್ನ ಆಜ್ಞೆಯನ್ನು ಸಹನೆಯಿಂದ ಮತ್ತು ತಾಳ್ಮೆಯಿಂದ ಅನುಸರಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲಾ ಉಂಟಾಗುವ ಕಡುಶೋಧನೆಯಿಂದ ನಾನು ನಿನ್ನನ್ನು ತಪ್ಪಿಸುತ್ತೇನೆ. ಭೂನಿವಾಸಿಗಳೆಲ್ಲರನ್ನು ಈ ಶೋಧನೆಯು ಪರಿಶೋಧಿಸುತ್ತದೆ.

11 “ನಾನು ಬೇಗನೆ ಬರುತ್ತೇನೆ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿನ್ನ ಕಿರೀಟವನ್ನು ಕಸಿದುಕೊಳ್ಳಲಾರರು. 12 ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಆಧಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೆಸರನ್ನೂ ನನ್ನ ದೇವರ ಪಟ್ಟಣದ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. ಹೊಸ ಜೆರುಸಲೇಮೇ ಆ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದುಬರುತ್ತದೆ. ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುತ್ತೇನೆ. 13 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

ಲವೊದಿಕೀಯದ ಸಭೆಗೆ ಯೇಸುವಿನ ಪತ್ರ

14 “ಲವೊದಿಕೀಯದ ಸಭೆಗೆ ಈ ಪತ್ರವನ್ನು ಬರೆ:

“ಆಮೆನ್[i] ಎಂಬಾತನು ಅಂದರೆ ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಅಧಿಪತಿಯೂ ಆಗಿರುವಾತನು ಹೇಳುವುದೇನೆಂದರೆ:

15 “ನೀನು ಮಾಡುವುದೆಲ್ಲಾ ನನಗೆ ತಿಳಿದದೆ. ನೀನು ಬಿಸಿಯೂ ಇಲ್ಲ, ತಣ್ಣಗೂ ಇಲ್ಲ! ನೀನು ಬಿಸಿಯಾದರೂ ಇರಬೇಕಿತ್ತು ಅಥವಾ ತಣ್ಣಗಾದರೂ ಇರಬೇಕಿತ್ತು! 16 ಆದರೆ ನೀನು ಬಿಸಿಯೂ ಇಲ್ಲದೆ ತಣ್ಣಗೂ ಇಲ್ಲದೆ ಬೆಚ್ಚಗಿರುವುದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿ ಬಿಡುವೆನು. 17 ನೀನು ನಿನ್ನನ್ನು ಐಶ್ವರ್ಯವಂತನೆಂದು ಹೇಳಿಕೊಳ್ಳುತ್ತಿರುವೆ. ನೀನು ಐಶ್ವರ್ಯವಂತನಾಗಿರುವುದರಿಂದ ನಿನಗೇನೂ ಕೊರತೆ ಇಲ್ಲವೆಂದು ನೀನು ಯೋಚಿಸಿಕೊಂಡಿರುವೆ. ಆದರೆ ನಿಜವಾಗಿಯೂ ನೀನು ದುರವಸ್ಥೆಗೆ ಒಳಗಾದವನಾಗಿರುವೆ, ದೌರ್ಭಾಗ್ಯನಾಗಿರುವೆ, ದರಿದ್ರನಾಗಿರುವೆ, ಕುರುಡನಾಗಿರುವೆ ಮತ್ತು ಬೆತ್ತಲಾಗಿರುವೆ. ಆದರೂ ಇದು ನಿನಗೆ ತಿಳಿದೇ ಇಲ್ಲ. 18 ಬೆಂಕಿಯಲ್ಲಿ ಪುಟಹಾಕಿದ ಅಪ್ಪಟ ಚಿನ್ನವನ್ನು ನೀನು ನನ್ನಿಂದ ಕೊಂಡುಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ. ಆಗ ನೀನು ನಿಜವಾಗಿಯೂ ಶ್ರೀಮಂತನಾಗಲು ಸಾಧ್ಯ. ನಾನು ನಿನಗೆ ಹೇಳುವುದೇನೆಂದರೆ: ಬಿಳಿವಸ್ತ್ರಗಳನ್ನು ಕೊಂಡುಕೊ. ಆಗ ನೀನು ನಾಚಿಕೆಕರವಾದ ನಿನ್ನ ಬೆತ್ತಲೆಯನ್ನು ಮುಚ್ಚಿಕೊಳ್ಳಲು ಸಾಧ್ಯವಾಗುವುದು. ನೀನು ನಿನ್ನ ಕಣ್ಣುಗಳಿಗೆ ಹಚ್ಚಲು ಔಷಧಿಯನ್ನು ಕೊಂಡುಕೊಳ್ಳಬೇಕೆಂತಲೂ ನಾನು ನಿನಗೆ ಹೇಳುತ್ತೇನೆ. ಆಗ ನಿನಗೆ ನಿಜವಾಗಿಯೂ ದೃಷ್ಟಿ ಬರುವುದು.

19 “ನಾನು ಪ್ರೀತಿಸುವ ಜನರನ್ನೇ ನಾನು ತಿದ್ದುತ್ತೇನೆ ಮತ್ತು ಶಿಕ್ಷಿಸುತ್ತೇನೆ. ಆದ್ದರಿಂದ ನೀವು ಆಸಕ್ತಿಯಿಂದಿರಿ! ದೇವರ ಕಡೆಗೆ ತಿರುಗಿಕೊಳ್ಳಿರಿ. 20 ಇಗೋ, ನಾನು ಬಾಗಿಲ ಬಳಿ ನಿಂತುಕೊಂಡು ತಟ್ಟುತ್ತಿದ್ದೇನೆ. ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಒಳಗೆ ಬಂದು ಅವನೊಂದಿಗೆ ಊಟ ಮಾಡುತ್ತೇನೆ ಮತ್ತು ಅವನು ನನ್ನೊಂದಿಗೆ ಊಟ ಮಾಡುತ್ತಾನೆ.

21 “ನಾನು ಜಯಗಳಿಸಿ ನನ್ನ ತಂದೆಯೊಡನೆ ಆತನ ಸಿಂಹಾಸನದ ಮೇಲೆ ಕುಳಿತುಕೊಂಡೆನು. ಅಂತೆಯೇ ಜಯಗಳಿಸುವ ಪ್ರತಿಯೊಬ್ಬನೂ ನನ್ನ ಸಂಗಡ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು. 22 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International