Beginning
5 ಭೂಮಿಯ ಮೇಲೆ ನಾವು ವಾಸವಾಗಿರುವ ಈ ಗುಡಾರವು ಅಂದರೆ ಈ ದೇಹವು ನಾಶವಾಗುವುದೆಂದು ನಮಗೆ ಗೊತ್ತಿದೆ. ಆದರೆ ಅದು ಸಂಭವಿಸಿದಾಗ, ನಮ್ಮ ವಾಸಕ್ಕಾಗಿ ದೇವರು ನಮಗೊಂದು ಮನೆಯನ್ನು ಕೊಡುವನು. ಅದು ಮನುಷ್ಯರಿಂದ ನಿರ್ಮಿತವಾದ ಮನೆಯಲ್ಲ. ಅದು ಪರಲೋಕದಲ್ಲಿರುವ ಶಾಶ್ವತವಾದ ಮನೆಯಾಗಿದೆ. 2 ಆದರೆ ಈಗ ನಾವು ಈ ದೇಹದಲ್ಲಿ ಬಳಲಿ ಹೋಗಿದ್ದೇವೆ. ಪರಲೋಕದಲ್ಲಿರುವ ನಮ್ಮ ಮನೆಯನ್ನು ದೇವರು ನಮಗೆ ಯಾವಾಗ ಕೊಡುವನೊ ಎಂದು ಹಾತೊರೆಯುತ್ತಿದ್ದೇವೆ. 3 ನಾವು ಅದನ್ನು ಧರಿಸಿಕೊಂಡಾಗ ಬೆತ್ತಲೆಯಾಗಿರುವುದಿಲ್ಲ. 4 ಈ ಗುಡಾರದಲ್ಲಿರುವ ತನಕ ನಮಗೆ ಭಾರವಾದ ಹೊರೆಗಳಿವೆ ಮತ್ತು ನಾವು ನರಳುತ್ತೇವೆ. ಬೆತ್ತಲೆಯಾಗಿರಲು ನಾವು ಇಷ್ಟಪಡದೆ ಪರಲೋಕದ ಮನೆಯನ್ನು ಧರಿಸಿಕೊಳ್ಳಲು ಇಷ್ಟಪಡುತ್ತೇವೆ. ಸತ್ತುಹೋಗುವ ಈ ದೇಹವನ್ನು ಜೀವವು ಪೂರ್ಣವಾಗಿ ಆವರಿಸಿಕೊಳ್ಳುವುದು. 5 ಇದಕ್ಕೋಸ್ಕರವಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾನೆ ಮತ್ತು ಇದನ್ನು ಖಚಿತಪಡಿಸಲು ಪವಿತ್ರಾತ್ಮನನ್ನೇ ನಮಗೆ ಅನುಗ್ರಹಿಸಿದ್ದಾನೆ.
6 ಆದ್ದರಿಂದ ಯಾವಾಗಲೂ ಧೈರ್ಯದಿಂದಿದ್ದೇವೆ. ಈ ದೇಹದಲ್ಲಿ ವಾಸವಾಗಿರುವ ತನಕ ಪ್ರಭುವಿನಿಂದ ದೂರವಾಗಿರುತ್ತೇವೆಂಬುದು ನಮಗೆ ತಿಳಿದಿದೆ. 7 ನಾವು ಯಾವುದನ್ನು ನೋಡುತ್ತಿದ್ದೇವೋ ಅದರಿಂದ ಜೀವಿಸುತ್ತಿಲ್ಲ. ಆದರೆ ಯಾವುದನ್ನು ನಂಬಿದ್ದೇವೋ ಅದರಿಂದ ಜೀವಿಸುತ್ತಿದ್ದೇವೆ. 8 ಆದ್ದರಿಂದ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಪ್ರಭುವಿನೊಂದಿಗೆ ವಾಸಿಸುವುದನ್ನೇ ನಿಜವಾಗಿಯೂ ಅಪೇಕ್ಷಿಸುತ್ತೇವೆ. 9 ದೇವರನ್ನು ಮೆಚ್ಚಿಸಬೇಕೆಂಬುದೊಂದೇ ನಮಗಿರುವ ಉದ್ದೇಶವಾಗಿದೆ. ನಾವು ನಮ್ಮ ದೇಹದಲ್ಲಿ ಇಲ್ಲಿ ವಾಸವಾಗಿರುವಾಗಲೂ ಪ್ರಭುವಿನೊಂದಿಗೆ ಅಲ್ಲಿ ವಾಸವಾಗಿರುವಾಗಲೂ ಆತನನ್ನು ಮೆಚ್ಚಿಸಬೇಕೆಂಬುದೊಂದೇ ನಮ್ಮ ಬಯಕೆಯಾಗಿದೆ. 10 ನಾವೆಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತನ ಮುಂದೆ ನಿಂತುಕೊಳ್ಳಲೇಬೇಕು. ಪ್ರತಿಯೊಬ್ಬನು ಇಹಲೋಕದ ದೇಹದಲ್ಲಿ ವಾಸವಾಗಿದ್ದಾಗ ಮಾಡಿದ ಒಳ್ಳೆಯದಕ್ಕಾಗಲಿ ಕೆಟ್ಟದಕ್ಕಾಗಲಿ ಪ್ರತಿಫಲವನ್ನು ಹೊಂದುವನು.
ಜನರನ್ನು ದೇವರ ಸ್ನೇಹಿತರನ್ನಾಗಿಸಲು ಮಾಡತಕ್ಕ ಸಹಾಯ
11 ಪ್ರಭುವಿನ ಭಯ ಎಂದರೇನೆಂಬುದು ನಮಗೆ ತಿಳಿದಿದೆ. ಆದ್ದರಿಂದ ಸತ್ಯವನ್ನು ಸ್ವೀಕರಿಸಿಕೊಳ್ಳುವಂತೆ ಜನರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲನು. ನೀವು ಸಹ ನಿಮ್ಮ ಹೃದಯಗಳಲ್ಲಿ ನಮ್ಮನ್ನು ತಿಳಿದುಕೊಂಡಿದ್ದೀರೆಂದು ನಂಬುತ್ತೇವೆ. 12 ನಾವು ನಮ್ಮನ್ನು ನಿಮ್ಮ ಮುಂದೆ ಮತ್ತೊಮ್ಮೆ ನಿರೂಪಿಸಿಕೊಳ್ಳುತ್ತಿಲ್ಲ. ಆದರೆ ನಮ್ಮ ಬಗ್ಗೆ ನಿಮಗೆ ಹೇಳುತ್ತಿದ್ದೇವೆಯಷ್ಟೆ. ನೀವು ನಮ್ಮ ವಿಷಯದಲ್ಲಿ ಹೆಮ್ಮೆಪಡುವುದಕ್ಕೆ ನಿಮಗೆ ಕಾರಣಗಳನ್ನು ಕೊಡುತ್ತಿದ್ದೇವೆ. ಆಗ, ಕಣ್ಣಿಗೆ ಕಾಣುವ ಸಂಗತಿಗಳ ಬಗ್ಗೆ ಹೆಮ್ಮೆಪಡುವ ಜನರಿಗೆ ಕೊಡತಕ್ಕ ಉತ್ತರವು ನಿಮ್ಮಲಿರುವುದು. ಆ ಜನರು ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿಯ ಬಗ್ಗೆ ಚಿಂತಿಸುವುದಿಲ್ಲ. 13 ನಾವು ಹುಚ್ಚರಾಗಿದ್ದರೆ ಅದು ದೇವರಿಗೋಸ್ಕರವಾಗಿಯೇ. ನಮಗೆ ಸ್ವಸ್ಥಬುದ್ಧಿಯಿದ್ದರೆ ಅದು ನಿಮಗೋಸ್ಕರವಾಗಿಯೇ. 14 ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಿಸುತ್ತದೆ. ಏಕೆಂದರೆ, ಎಲ್ಲಾ ಜನರಿಗೋಸ್ಕರವಾಗಿ ಆತನು ಸತ್ತನೆಂಬುದು ನಮಗೆ ಗೊತ್ತಿದೆ. ಆದ್ದರಿಂದ ಎಲ್ಲರೂ ಸತ್ತುಹೋದರು. 15 ಜೀವಿಸುವವರು ಇನ್ನು ಮೇಲೆ ತಮಗೋಸ್ಕರ ಜೀವಿಸಬಾರದೆಂದು ಕ್ರಿಸ್ತನು ಎಲ್ಲಾ ಜನರಿಗಾಗಿ ಸತ್ತನು. ಆ ಜನರು ತನಗೋಸ್ಕರ ಜೀವಿಸಲೆಂದು ಆತನು ಅವರಿಗೋಸ್ಕರ ಸತ್ತನು ಮತ್ತು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನು.
16 ಹೀಗಿರಲಾಗಿ, ಲೋಕವು ಜನರ ವಿಷಯವಾಗಿ ಯೋಚಿಸುವಂತೆ ಇಂದಿನಿಂದ ನಾವು ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಲೋಕವು ಯೋಚಿಸುವಂತೆ ಹಿಂದಿನ ಕಾಲದಲ್ಲಿ ನಾವು ಕ್ರಿಸ್ತನ ಬಗ್ಗೆ ಯೋಚಿಸಿಕೊಂಡಿದ್ದೆವು. ಆದರೆ ಈಗ ನಾವು ಆ ರೀತಿಯಲ್ಲಿ ಯೋಚಿಸುವುದಿಲ್ಲ. 17 ಯಾವನಾದರೂ ಕ್ರಿಸ್ತನಲ್ಲಿದ್ದರೆ, ಅವನು ಹೊಸ ಸೃಷ್ಟಿಯಾಗಿದ್ದಾನೆ. ಹಳೆಯ ಸಂಗತಿಗಳೆಲ್ಲಾ ಅಳಿದು ಹೋದವು; ಪ್ರತಿಯೊಂದೂ ಹೊಸದಾಯಿತು. 18 ಇದೆಲ್ಲಾ ದೇವರಿಂದಲೇ ಆಯಿತು. ಕ್ರಿಸ್ತನ ಮೂಲಕವಾಗಿ ದೇವರು ನಮ್ಮನ್ನು ತನ್ನೊಂದಿಗೆ ಸಮಾಧಾನ ಪಡಿಸಿಕೊಂಡಿದ್ದಾನೆ. ಇದಲ್ಲದೆ ಇತರರನ್ನು ಈ ಸಮಾಧಾನಕ್ಕೆ ಕರೆದುಕೊಂಡು ಬರುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 19 ಅಂದರೆ, ದೇವರು ಕ್ರಿಸ್ತನಲ್ಲಿ ಇಡೀ ಜಗತ್ತನ್ನೇ ತನ್ನೊಂದಿಗೆ ಸಮಾಧಾನಪಡಿಸಿಕೊಳ್ಳುತ್ತಿದ್ದನು. ದೇವರು ಕ್ರಿಸ್ತನಲ್ಲಿ ಜನರ ಅಪರಾಧಗಳನ್ನು ಪರಿಗಣಿಸುವುದಿಲ್ಲ. ಈ ಸಮಾಧಾನದ ಸಂದೇಶವನ್ನು ಜನರಿಗೆ ತಿಳಿಸುವ ಕೆಲಸವನ್ನು ದೇವರು ನಮಗೆ ಕೊಟ್ಟಿದ್ದಾನೆ. 20 ಆದ್ದರಿಂದ ಕ್ರಿಸ್ತನ ಪರವಾಗಿ ಮಾತಾಡಲು ನಮ್ಮನ್ನು ಕಳುಹಿಸಲಾಗಿದೆ. ಇದು, ದೇವರು ನಮ್ಮ ಮೂಲಕವಾಗಿ ಜನರನ್ನು ಕರೆಯುವಂತಿದೆ. ದೇವರೊಂದಿಗೆ ಸಮಾಧಾನವಾಗಿರಿ ಎಂದು ನಾವು ನಿಮ್ಮನ್ನು ಬೇಡಿಕೊಳ್ಳುವಾಗ ಕ್ರಿಸ್ತನ ಪರವಾಗಿ ಮಾತಾಡುವವರಾಗಿದ್ದೇವೆ. 21 ಕ್ರಿಸ್ತನಲ್ಲಿ ಪಾಪವಿರಲಿಲ್ಲ. ಆದರೆ ನಾವು ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಆತನನ್ನು ಪಾಪಸ್ವರೂಪಿಯನ್ನಾಗಿ ಮಾಡಿದನು.
6 ನಾವು ದೇವರ ಜೊತೆಕೆಲಸದವರಾಗಿದ್ದೇವೆ. ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನೀವು ದೇವರಿಂದ ಹೊಂದಿಕೊಂಡ ಕೃಪೆಯು ವ್ಯರ್ಥವಾಗದಂತೆ ನೋಡಿಕೊಳ್ಳಿ. 2 ದೇವರು ಹೀಗೆನ್ನುತ್ತಾನೆ:
“ಸುಪ್ರಸನ್ನತೆಯ ಕಾಲದಲ್ಲಿ ನಾನು ನಿನಗೆ ಕಿವಿಗೊಟ್ಟೆನು,
ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯ ಮಾಡಿದೆನು.”(A)
ಇದೇ ಆ “ಸುಪ್ರಸನ್ನತೆಯ ಕಾಲ.” ಇದೇ ಆ “ರಕ್ಷಣೆಯ ದಿನ.”
3 ನಮ್ಮ ಸೇವೆಯು ನಿಂದೆಗೆ ಒಳಗಾಗಬಾರದೆಂದು ನಾವು ಯಾರಿಗೂ ತೊಂದರೆ ಮಾಡುವುದಿಲ್ಲ. 4 ಆದರೆ ಪ್ರತಿಯೊಂದು ವಿಷಯದಲ್ಲಿಯೂ ನಾವು ದೇವರ ಸೇವಕರೆಂಬುದನ್ನು ತೋರ್ಪಡಿಸುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ 5 ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರುತ್ತೇವೆ. 6 ನಾವು ದೇವರ ಸೇವಕರೆಂಬುದನ್ನು ನಮ್ಮ ತಿಳುವಳಿಕೆಯಿಂದಲೂ ತಾಳ್ಮೆಯಿಂದಲೂ ಕನಿಕರದಿಂದಲೂ ಮತ್ತು ಪರಿಶುದ್ಧ ಜೀವಿತದಿಂದಲೂ ತೋರ್ಪಡಿಸಿದ್ದೇವೆ. ನಾವು ಇದನ್ನು ಪವಿತ್ರಾತ್ಮನಿಂದಲೂ ನಿಜವಾದ ಪ್ರೀತಿಯಿಂದಲೂ 7 ಸತ್ಯವನ್ನು ಹೇಳುವುದರಿಂದಲೂ ದೇವರ ಶಕ್ತಿಯಿಂದಲೂ ತೋರ್ಪಡಿಸುತ್ತೇವೆ. ಪ್ರತಿಯೊಂದರ ವಿರೋಧವಾಗಿ ನಮ್ಮನ್ನು ಸಂರಕ್ಷಿಸಿಕೊಳ್ಳಲು ನಮ್ಮ ಒಳ್ಳೆಯ ಜೀವಿತವನ್ನೇ ಉಪಯೋಗಿಸುತ್ತೇವೆ.
8 ಕೆಲವರು ನಮ್ಮನ್ನು ಸನ್ಮಾನಿಸುತ್ತಾರೆ; ಇನ್ನು ಕೆಲವರು ನಮಗೆ ಅವಮಾನ ಮಾಡುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಹೇಳುತ್ತಾರೆ; ಇನ್ನು ಕೆಲವರು ನಮ್ಮ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುತ್ತಾರೆ. ಕೆಲವರು ನಮ್ಮನ್ನು ಸುಳ್ಳುಗಾರರೆನ್ನುತ್ತಾರೆ, ಆದರೆ ನಾವು ಸತ್ಯವನ್ನೇ ಹೇಳುತ್ತೇವೆ. 9 ನಾವು ಪ್ರಸಿದ್ಧರಾಗಿದ್ದರೂ ಕೆಲವರು ನಮ್ಮನ್ನು ಅಪ್ರಸಿದ್ಧರಂತೆ ಕಾಣುತ್ತಾರೆ. ನಾವು ಸಾಯುವಂತಿದ್ದರೂ ಬದುಕಿದ್ದೇವೆ; ಶಿಕ್ಷಿಸಲ್ಪಟ್ಟರೂ ಕೊಲ್ಲಲ್ಪಡಲಿಲ್ಲ; 10 ದುಃಖಿತರಂತೆ ಕಂಡರೂ ಯಾವಾಗಲೂ ಉಲ್ಲಾಸಿಸುವವರಾಗಿದ್ದೇವೆ; ಬಡವರಂತೆ ಕಂಡರೂ ಅನೇಕರನ್ನು ನಂಬಿಕೆಯಲ್ಲಿ ಐಶ್ವರ್ಯವಂತರನ್ನಾಗಿ ಮಾಡುತ್ತಿದ್ದೇವೆ; ಏನೂ ಇಲ್ಲದವರಂತೆ ಕಂಡರೂ ವಾಸ್ತವವಾಗಿ ಎಲ್ಲವನ್ನೂ ಹೊಂದಿದವರಾಗಿದ್ದೇವೆ.
11 ಕೊರಿಂಥದಲ್ಲಿರುವ ನಿಮ್ಮೊಂದಿಗೆ ಬಿಚ್ಚುಮನಸ್ಸಿನಿಂದ ಮಾತಾಡಿದ್ದೇವೆ. ನಮ್ಮ ಹೃದಯಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. 12 ನಿಮ್ಮ ಮೇಲೆ ನಮಗಿರುವ ಪ್ರೀತಿಯು ನಿಂತು ಹೋಗಿಲ್ಲ. ಆದರೆ ನಮ್ಮ ಮೇಲೆ ನಿಮಗಿದ್ದ ಪ್ರೀತಿಯೇ ನಿಂತು ಹೋಗಿದೆ. 13 ನೀವು ನನ್ನ ಮಕ್ಕಳೆಂಬಂತೆ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾವು ತೆರೆದಂತೆ ನೀವು ಸಹ ನಿಮ್ಮ ಹೃದಯಗಳನ್ನು ತೆರೆಯಿರಿ.
ಅವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ
14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ? 15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು? 16 ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:
“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು;
ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”(B)
17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ;
ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು.
ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ,
ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”(C)
18 “ನಾನು ನಿಮ್ಮ ತಂದೆಯಾಗಿರುವೆನು
ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”(D)
7 ಪ್ರಿಯ ಸ್ನೇಹಿತರೇ, ನಾವು ದೇವರಿಂದ ಈ ವಾಗ್ದಾನಗಳನ್ನು ಹೊಂದಿದ್ದೇವೆ. ಆದ್ದರಿಂದ ನಮ್ಮನ್ನು ಶುದ್ಧರನ್ನಾಗಿ ಮಾಡಿಕೊಳ್ಳಬೇಕು. ನಮ್ಮ ದೇಹವನ್ನಾಗಲಿ ನಮ್ಮ ಆತ್ಮವನ್ನಾಗಲಿ ಅಶುದ್ಧಗೊಳಿಸುವ ಎಲ್ಲಾ ವಿಧದ ಮಲಿನತೆಯಿಂದ ನಾವು ದೂರವಿರೋಣ. ನಾವು ದೇವರನ್ನು ಗೌರವಿಸುವುದರಿಂದ ಪರಿಶುದ್ಧವಾದ ಬಾಳ್ವೆಯನ್ನು ನಡೆಸಲು ನಾವು ಪ್ರಯತ್ನಿಸಬೇಕು.
ಪೌಲನ ಆನಂದ
2 ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ. 3 ನಾನು ಇದನ್ನು ಹೇಳುತ್ತಿರುವುದು ನಿಮ್ಮನ್ನು ನಿಂದಿಸುವುದಕ್ಕಾಗಿಯಲ್ಲ. ನಿಮ್ಮೊಂದಿಗೆ ಬದುಕುವಷ್ಟರಮಟ್ಟಿಗೆ ಮತ್ತು ಸಾಯುವಷ್ಟರಮಟ್ಟಿಗೆ ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತೇವೆಂದು ನಾನು ಮೊದಲೇ ನಿಮಗೆ ತಿಳಿಸಿದ್ದೇನೆ. 4 ನಿಮ್ಮ ವಿಷಯದಲ್ಲಿ ನನಗೆ ಬಹಳ ಭರವಸವಿದೆ. ನಾನು ನಿಮ್ಮ ವಿಷಯದಲ್ಲಿ ಹೆಮ್ಮೆಪಡುತ್ತೇನೆ. ನೀವು ನನ್ನನ್ನು ಬಹಳವಾಗಿ ಸಂತೈಸಿದಿರಿ. ನಮ್ಮ ಎಲ್ಲಾ ಇಕ್ಕಟ್ಟುಗಳಲ್ಲಿಯೂ ನನಗೆ ಮಹಾ ಆನಂದವಿದೆ.
5 ನಾವು ಮಕೆದೋನಿಯಕ್ಕೆ ಬಂದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿದ್ದವು. ಹೊರಗೆ ಕಲಹವಿತ್ತು, ಒಳಗೆ ಭಯವಿತ್ತು. 6 ಆದರೆ ದೇವರು ಇಕ್ಕಟ್ಟುಗಳಲ್ಲಿರುವ ಜನರನ್ನು ಸಂತೈಸುತ್ತಾನೆ. ತೀತನು ಬಂದಾಗ ದೇವರು ನಮ್ಮನ್ನು ಸಂತೈಸಿದನು. 7 ಅವನ ಆಗಮನದಿಂದಲೂ ನೀವು ಅವನಿಗೆ ಕೊಟ್ಟ ಆದರಣೆಯಿಂದಲೂ ನಮಗೆ ಸಮಾಧಾನವಾಯಿತು. ನನ್ನನ್ನು ನೋಡಲು ನಿಮಗಿರುವ ಹಂಬಲದ ಕುರಿತಾಗಿಯೂ ನಿಮ್ಮ ಕಾರ್ಯಗಳಿಂದ ನಿಮಗಾಗಿರುವ ದುಃಖದ ಕುರಿತಾಗಿಯೂ ನನ್ನ ವಿಷಯವಾಗಿ ನಿಮಗಿರುವ ಮಹಾಹಿತಚಿಂತನೆಯ ಕುರಿತಾಗಿಯೂ ಅವನು ನನಗೆ ಹೇಳಿದಾಗ ನನಗೆ ಬಹಳ ಸಂತೋಷವಾಯಿತು.
8 ನಾನು ನಿಮಗೆ ಬರೆದ ಪತ್ರವು ನಿಮಗೆ ದುಃಖವನ್ನು ಉಂಟುಮಾಡಿದ್ದರೂ, ಅದನ್ನು ಬರೆದದ್ದಕ್ಕೆ ನನಗೆ ದುಃಖವಿಲ್ಲ, ಆ ಪತ್ರವು ನಿಮಗೆ ದುಃಖವನ್ನು ಉಂಟು ಮಾಡಿತೆಂದು ನನಗೆಗೊತ್ತಿದೆ. ಆ ವಿಷಯದಲ್ಲಿ ನನಗೆ ವ್ಯಸನವಾಯಿತು. ಆದರೆ ಅದು ನಿಮ್ಮನ್ನು ಸ್ವಲ್ಪಕಾಲದವರೆಗೆ ಮಾತ್ರ ದುಃಖಿತರನ್ನಾಗಿ ಮಾಡಿತು. 9 ಈಗ ನಾನು ಸಂತೋಷವಾಗಿದ್ದೇನೆ. ನಿಮ್ಮನ್ನು ದುಃಖಿತರನ್ನಾಗಿ ಮಾಡಿದ್ದಕ್ಕಾಗಿ ನಾನು ದುಃಖಿಸುತ್ತಿಲ್ಲ. ಆದರೆ ನಿಮ್ಮ ದುಃಖವು ನಿಮ್ಮ ಹೃದಯಗಳಲ್ಲಿ ಪರಿವರ್ತನೆಯನ್ನು ಉಂಟುಮಾಡಿದ್ದರಿಂದ ನಾನು ಸಂತೋಷವಾಗಿದ್ದೇನೆ. ದೇವರ ಇಚ್ಫೆಗನುಸಾರವಾಗಿ ನೀವು ದುಃಖಿತರಾದಿರಿ. ಆದ್ದರಿಂದ ನಮ್ಮಿಂದ ನಿಮಗೆ ಯಾವ ರೀತಿಯಲ್ಲಿಯೂ ನೋವಾಗಲಿಲ್ಲ. 10 ದೇವರ ಇಷ್ಟಾನುಸಾರವಾದ ದುಃಖವು ಹೃದಯವನ್ನೂ ಜೀವಿತವನ್ನೂ ಪರಿವರ್ತಿಸುತ್ತದೆ. ಈ ಪರಿವರ್ತನೆಯು ರಕ್ಷಣೆಗೆ ನಡೆಸುತ್ತದೆ. ಈ ಪರಿವರ್ತನೆಯ ವಿಷಯದಲ್ಲಿ ನಾವು ವ್ಯಸನಪಡಬೇಕಾಗಿಲ್ಲ. ಆದರೆ, ಲೋಕವು ಹೊಂದಿರುವ ದುಃಖವು ಮರಣವನ್ನು ಬರಮಾಡುತ್ತದೆ. 11 ನೀವು ಯಾವ ದುಃಖವನ್ನು ಹೊಂದಿರಬೇಕೆಂದು ದೇವರು ಬಯಸಿದ್ದನೋ ಅದೇ ದುಃಖವನ್ನು ನೀವು ಹೊಂದಿದ್ದೀರಿ. ಆ ದುಃಖವು ನಿಮ್ಮನ್ನು ಬಹು ಆಸಕ್ತಿಯುಳ್ಳವರನ್ನಾಗಿ ಮಾಡಿತು; ನೀವು ತಪ್ಪಿತಸ್ಥರಾಗಿರಲಿಲ್ಲವೆಂದು ನಿರೂಪಿಸಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನಿಮ್ಮನ್ನು ಕೋಪಗೊಳಿಸಿತು ಮತ್ತು ಭಯಗೊಳಿಸಿತು; ನನ್ನನ್ನು ನೋಡಬೇಕೆಂಬ ಬಯಕೆಯನ್ನು ನಿಮ್ಮಲ್ಲಿ ಉಂಟುಮಾಡಿತು; ನನ್ನ ಬಗ್ಗೆ ಚಿಂತಿಸುವಂತೆ ಮಾಡಿತು; ತಪ್ಪಿತಸ್ಥರನ್ನು ದಂಡಿಸಬೇಕೆಂಬ ಬಯಕೆಯನ್ನು ಉಂಟು ಮಾಡಿತು. ಆ ಸಮಸ್ಯೆಯ ಯಾವ ವಿಷಯದಲ್ಲಿಯೂ ನೀವು ಅಪರಾಧಿಗಳಾಗಿರಲಿಲ್ಲವೆಂದು ನಿರೂಪಿಸಿದಿರಿ. 12 ನಾನು ಆ ಪತ್ರವನ್ನು ಬರೆದದ್ದು ತಪ್ಪು ಮಾಡಿದವನಿಗೋಸ್ಕರವಲ್ಲ, ಆ ತಪ್ಪಿನಿಂದ ದುಃಖಕ್ಕೆ ಒಳಗಾದವನಿಗೋಸ್ಕರವೂ ಅಲ್ಲ. ಆದರೆ ನಮ್ಮ ವಿಷಯದಲ್ಲಿ ನಿಮಗಿರುವ ಮಹಾಚಿಂತೆಯನ್ನು ನೀವು ದೇವರ ಎದುರಿನಲ್ಲಿ ನೋಡುವಂತಾಗಬೇಕೆಂದು ಆ ಪತ್ರವನ್ನು ಬರೆದೆನು. 13 ಆದ್ದರಿಂದಲೇ ನಮಗೆ ಆದರಣೆಯಾಯಿತು.
ತೀತನು ಬಹು ಸಂತೋಷವಾಗಿರುವುದನ್ನು ಕಂಡು ನಮಗೆ ಮತ್ತಷ್ಟು ಸಂತೋಷವಾಯಿತು. ನೀವೆಲ್ಲರೂ ಅವನನ್ನು ಸಂತೋಷಗೊಳಿಸಿದಿರಿ. 14 ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದೆನು. ಅದು ಸಮರ್ಪಕವೆಂದು ನೀವು ನಿರೂಪಿಸಿದಿರಿ. ನಾವು ನಿಮಗೆ ಹೇಳಿದ ಪ್ರತಿಯೊಂದೂ ಸತ್ಯವಾಗಿತ್ತು. ನಾವು ತೀತನ ಮುಂದೆ ನಿಮ್ಮ ವಿಷಯದಲ್ಲಿ ಹೇಳಿದ ಹೊಗಳಿಕೆಯ ಮಾತುಗಳೆಲ್ಲಾ ಸತ್ಯವೆಂದು ನೀವು ನಿರೂಪಿಸಿದಿರಿ. 15 ನೀವೆಲ್ಲರೂ ವಿಧೇಯರಾಗಿರಲು ಸಿದ್ಧರಾಗಿದ್ದನ್ನು ಜ್ಞಾಪಿಸಿಕೊಂಡಾಗಲೆಲ್ಲಾ ಅವನಿಗೆ ನಿಮ್ಮ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ನೀವು ಅವನನ್ನು ಗೌರವದಿಂದಲೂ ಭಯದಿಂದಲೂ ಸ್ವೀಕರಿಸಿದಿರಿ. 16 ನನಗೆ ನಿಮ್ಮ ವಿಷಯದಲ್ಲಿ ಪೂರ್ಣ ಭರವಸೆ ಇರುವುದರಿಂದ ಬಹು ಸಂತೋಷಪಡುತ್ತೇನೆ.
ಕ್ರೈಸ್ತರ ಕೊಡುವಿಕೆ
8 ಸಹೋದರ ಸಹೋದರಿಯರೇ, ಮಕೆದೋನಿಯದ ಸಭೆಗಳಲ್ಲಿ ದೇವರು ತೋರಿದ ಕೃಪೆಯ ಬಗ್ಗೆ ನಿಮಗೆ ತಿಳಿಸಲು ಇಷ್ಟಪಡುತ್ತೇವೆ. 2 ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು. 3 ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ. 4 ದೇವಜನರಿಗೋಸ್ಕರವಾದ ಈ ಸೇವೆಯಲ್ಲಿ ತಾವೂ ಪಾಲುಗಾರರಾಗುವ ಭಾಗ್ಯ ದೊರೆಯಬೇಕೆಂದು ಅವರು ನಮ್ಮನ್ನು ಪದೇಪದೇ ಕೇಳಿಕೊಂಡರು ಮತ್ತು ಬೇಡಿಕೊಂಡರು. 5 ನಾವೆಂದೂ ನೆನಸಿಲ್ಲದ ರೀತಿಯಲ್ಲಿ ಅವರು ಕೊಟ್ಟರು. ಅವರು ತಮ್ಮ ಹಣವನ್ನು ನಮಗೆ ಕೊಡುವುದಕ್ಕಿಂತ ಮೊದಲು ತಮ್ಮನ್ನೇ ಪ್ರಭುವಿಗೂ ನಮಗೂ ಒಪ್ಪಿಸಿಕೊಟ್ಟರು. ದೇವರು ಬಯಸುವುದು ಇದನ್ನೇ.
6 ಆದ್ದರಿಂದ, ವಿಶೇಷವಾದ ಈ ಕೃಪಾಕಾರ್ಯವನ್ನು ಪೂರೈಸಲು ನಿಮಗೆ ಸಹಾಯ ಮಾಡಬೇಕೆಂದು ನಾವು ತೀತನನ್ನು ಕೇಳಿಕೊಂಡೆವು. ಈ ಕಾರ್ಯವನ್ನು ಪ್ರಾರಂಭಿಸಿದವನು ತೀತನೇ. 7 ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.
8 ನೀವು ಕೊಡಬೇಕೆಂದು ನಾನು ಆಜ್ಞಾಪಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯು ನಿಜವಾದ ಪ್ರೀತಿಯೇ ಎಂಬುದನ್ನು ನಾನು ನೋಡಬಯಸುತ್ತೇನೆ. ಸಹಾಯ ಮಾಡಲು ಇತರ ಜನರಿಗಿರುವ ನಿಜವಾದ ಬಯಕೆಯನ್ನು ನಿಮಗೆ ತೋರಿಸುವುದರ ಮೂಲಕವಾಗಿ ನಾನು ನಿಮ್ಮನ್ನು ಪರೀಕ್ಷಿಸುತ್ತೇನೆ. 9 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಿದೆ. ಕ್ರಿಸ್ತನು ದೇವರೊಂದಿಗೆ ಶ್ರೀಮಂತಿಕೆಯಲ್ಲಿದ್ದರೂ ನಿಮಗೋಸ್ಕರವಾಗಿ ಬಡವನಾದದ್ದು ನಿಮಗೆ ಗೊತ್ತಿದೆ. ನೀವು ಶ್ರೀಮಂತರಾಗಬೇಕೆಂದು ಕ್ರಿಸ್ತನು ಬಡವನಾದನು.
10 ನಾನು ನಿಮಗೆ ಹೇಳುವುದೇನೆಂದರೆ: ಕಳೆದ ವರ್ಷ ಕೊಡುವುದರಲ್ಲಿ ನೀವೇ ಮೊದಲಿಗರಾಗಿದ್ದಿರಿ ಮತ್ತು ಮೊಟ್ಟಮೊದಲನೆಯದಾಗಿ ಕೊಟ್ಟವರು ನೀವೇ. 11 ಆದ್ದರಿಂದ ನೀವು ಆರಂಭಿಸಿದ ಕಾರ್ಯವನ್ನು ಈಗ ಪೂರ್ಣಗೊಳಿಸಿರಿ. ಆಗ, ನಿಮ್ಮ ಕಾರ್ಯ ಮತ್ತು ನಿಮ್ಮ ಸಿದ್ಧಮನಸ್ಸು ಸರಿಸಮಾನವಾಗಿರುವುದು. ನಿಮ್ಮಲ್ಲಿರುವುದನ್ನು ಕೊಡಿರಿ. 12 ನೀವು ಕೊಡಬೇಕೆಂದು ಕೊಟ್ಟರೆ ನಿಮ್ಮ ದಾನವು ಸ್ವೀಕೃತವಾಗುವುದು. ನಿಮ್ಮ ದಾನದ ಮೌಲ್ಯಮಾಪನವು ನೀವು ಏನನ್ನು ಹೊಂದಿದ್ದೀರಿ ಎಂಬುದರ ಮೇಲೆಯೇ ಹೊರತು ನೀವು ಏನನ್ನು ಹೊಂದಿಲ್ಲ ಎಂಬುದರ ಮೇಲೆ ಆಧಾರಗೊಂಡಿಲ್ಲ. 13 ಇತರ ಜನರು ಸುಖವಾಗಿರುವಾಗ ನೀವು ಕಷ್ಟದಿಂದಿರುವುದು ನಮಗೆ ಇಷ್ಟವಿಲ್ಲ. ಪ್ರತಿಯೊಂದರಲ್ಲಿಯೂ ಸಮಾನತೆ ಇರಬೇಕೆಂಬುದೇ ನಮ್ಮ ಬಯಕೆ. 14 ಈಗ ನಿಮ್ಮಲ್ಲಿ ಬೇಕಾದಷ್ಟಿದೆ. ನಿಮ್ಮ ಈ ಸಮೃದ್ಧಿಯು ಇತರ ಜನರ ಕೊರತೆಯನ್ನು ನೀಗಿಸುವುದು. ಬಳಿಕ, ಅವರು ಸಮೃದ್ಧರಾಗಿರುವಾಗ ನಿಮ್ಮ ಕೊರತೆಯನ್ನು ನೀಗಿಸುವರು. ಹೀಗೆ ಎಲ್ಲರೂ ಸಮಾನರಾಗಿರುವರು. 15 ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದಾಗುವುದು,
“ಬಹಳವಾಗಿ ಶೇಖರಿಸಿಕೊಂಡವನಿಗೆ ಏನೂ ಹೆಚ್ಚಾಗಲಿಲ್ಲ,
ಸ್ವಲ್ಪ ಶೇಖರಿಸಿಕೊಂಡವನಿಗೆ ಏನೂ ಕಡಿಮೆಯಾಗಲಿಲ್ಲ.”(E)
ತೀತನು ಮತ್ತು ಅವನ ಸಂಗಡಿಗರು
16 ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ದೇವರು ತೀತನಿಗೂ ಕೊಟ್ಟದ್ದಕ್ಕಾಗಿ ದೇವರನ್ನು ಸ್ತುತಿಸುತ್ತೇನೆ. 17 ನಾವು ಕೇಳಿಕೊಂಡ ಕಾರ್ಯಗಳನ್ನು ಮಾಡಲು ತೀತನು ಒಪ್ಪಿಕೊಂಡನು. ನಿಮ್ಮ ಬಳಿಗೆ ಬರಲು ಅವನು ಅತ್ಯಾಸಕ್ತನಾಗಿದ್ದನು. ಇದು ಅವನ ಸ್ವಂತ ಆಲೋಚನೆ. 18 ಎಲ್ಲಾ ಸಭೆಗಳಲ್ಲಿ ಹೊಗಳಿಕೆಗೆ ಪಾತ್ರನಾಗಿರುವ ಒಬ್ಬ ಸಹೋದರನನ್ನು ತೀತನೊಡನೆ ಕಳುಹಿಸುತ್ತಿದ್ದೇವೆ. ಈ ಸಹೋದರನು ಸುವಾರ್ತಾಸೇವೆಯ ವಿಷಯದಲ್ಲಿ ಕೀರ್ತಿಪಡೆದಿದ್ದಾನೆ. 19 ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ.
20 ಹೇರಳವಾದ ಈ ಸಹಾಯಧನವನ್ನು ನಾವು ನೋಡಿಕೊಳ್ಳುವ ಬಗ್ಗೆ ಟೀಕಿಸಲು ಯಾರಿಗೂ ಅವಕಾಶ ಕೊಡಬಾರದೆಂದು ಎಚ್ಚರಿಕೆಯಿಂದಿದ್ದೇವೆ. 21 ಪ್ರಭುವು ಯಾವುದನ್ನು ಸರಿಯಾದದ್ದೆಂದು ಸ್ವೀಕರಿಸಿಕೊಳ್ಳುವನೋ ಮತ್ತು ಜನರು ಯಾವುದನ್ನು ಸರಿಯಾದದ್ದೆಂದು ಯೋಚಿಸುವರೋ ಅದನ್ನೇ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.
22 ಇದಲ್ಲದೆ, ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುವ ನಮ್ಮ ಸಹೋದರನನ್ನು ಅವರೊಂದಿಗೆ ಕಳುಹಿಸಿಕೊಡುತ್ತಿದ್ದೇವೆ. ಅವನು ಅನೇಕ ವಿಧದಲ್ಲಿ ತನ್ನನ್ನು ನಿರೂಪಿಸಿದ್ದಾನೆ. ಈಗ ಅವನಿಗೆ ನಿಮ್ಮಲ್ಲಿ ಹೆಚ್ಚು ಭರವಸೆ ಇರುವುದರಿಂದ ಮತ್ತಷ್ಟು ಸಹಾಯ ಮಾಡಲು ಬಯಸುತ್ತಾನೆ.
23 ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ. 24 ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.
ಕ್ರೈಸ್ತರಿಗೆ ಸಹಾಯ ಮಾಡಿರಿ
9 ದೇವಜನರಿಗೋಸ್ಕರವಾದ ಈ ಸಹಾಯದ ಬಗ್ಗೆ ನಾನು ನಿಮಗೆ ಬರೆಯುವುದು ನಿಜವಾಗಿಯೂ ಅಗತ್ಯವಿಲ್ಲ. 2 ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ. 3 ನಾನು ಸಹೋದರರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ. ನಿಮ್ಮ ಬಗ್ಗೆ ಈ ವಿಷಯದಲ್ಲಿ ಹೊಗಳಿದ್ದು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನಾನು ಹೇಳಿಕೊಂಡಂತೆ ನೀವು ಸಿದ್ಧರಾಗಿರಬೇಕೆಂದು ಆಶಿಸುತ್ತೇನೆ. 4 ಒಂದುವೇಳೆ ಮಕೆದೋನಿಯದ ಜನರಲ್ಲಿ ಯಾರಾದರೂ ನನ್ನೊಂದಿಗೆ ಬಂದಾಗ ನೀವು ಸಿದ್ಧರಾಗಿಲ್ಲದಿದ್ದರೆ ನಾವು ನಾಚಿಕೆಗೆ ಗುರಿಯಾಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಬಹಳ ಭರವಸೆ ಇಟ್ಟಿದ್ದರಿಂದ ನಾವು ನಾಚಿಕೆಗೆ ಗುರಿಯಾಗುವೆವು (ಮತ್ತು ನೀವೂ ಸಹ ನಾಚಿಕೆಗೆ ಗುರಿಯಾಗುವಿರಿ.) 5 ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.
6 ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿರಿ: ಸ್ವಲ್ಪ ಬಿತ್ತುವವನು ಕೇವಲ ಸ್ವಲ್ಪವನ್ನೇ ಕೊಯ್ಯುವನು, ಆದರೆ ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು. 7 ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೋ ಅಷ್ಟನ್ನೇ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ. 8 ಮತ್ತು ನಿಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚು ಆಶೀರ್ವಾದಗಳನ್ನು ದೇವರು ಕೊಡಬಲ್ಲನು. ಆಗ ನಿಮ್ಮಲ್ಲಿ ನಿಮಗೆ ಅಗತ್ಯವಾದ ಪ್ರತಿಯೊಂದೂ ಯಾವಾಗಲೂ ಇರುವುದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಕೊಡಲು ನಿಮ್ಮಲ್ಲಿ ಸಾಕಷ್ಟು ಇರುವುದು. 9 ಪವಿತ್ರ ಗ್ರಂಥದಲ್ಲಿ ಹೀಗೆ ಬರೆದಿದೆ:
“ಆತನು ಬಡವರಿಗೆ ಉದಾರವಾಗಿ ಕೊಡುವನು;
ಆತನ ಕರುಣೆಯು ಶಾಶ್ವತವಾಗಿರುವುದು.”(F)
10 ಬಿತ್ತುವವನಿಗೆ ಬೀಜವನ್ನು ಕೊಡುವವನು ದೇವರೇ. ಆತನು ಆಹಾರಕ್ಕಾಗಿ ರೊಟ್ಟಿಯನ್ನು ಕೊಡುವನು. ಅಂತೆಯೇ, ದೇವರು ಆತ್ಮಿಕ ಬೀಜವನ್ನು ಕೊಡುವನು ಮತ್ತು ನಿಮ್ಮ ಬೀಜವನ್ನು ಬೆಳೆಯಮಾಡುವನು. ನಿಮ್ಮ ಒಳ್ಳೆಯ ಕ್ರಿಯೆಯಿಂದ ಆತನು ಮಹಾ ಸುಗ್ಗಿಯನ್ನು ಉಂಟುಮಾಡುವನು. 11 ಯಾವಾಗಲೂ ಉದಾರವಾಗಿ ಕೊಡಬೇಕೆಂದು ದೇವರು ನಿಮ್ಮನ್ನು ಪ್ರತಿಯೊಂದು ವಿಷಯದಲ್ಲಿಯೂ ಶ್ರೀಮಂತರನ್ನಾಗಿ ಮಾಡುವನು. ನಮ್ಮ ಮೂಲಕವಾಗಿ ನೀವು ಕೊಡುವ ಸಹಾಯಧನದ ನಿಮಿತ್ತ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.
12 ನೀವು ಮಾಡುವ ಈ ಸೇವಾಕಾರ್ಯದಿಂದ ಕೊರತೆಯಲ್ಲಿರುವ ದೇವಜನರಿಗೆ ಸಹಾಯವಾಗುವುದು. ಅಷ್ಟು ಮಾತ್ರವೇ ಅಲ್ಲ, ಇದರಿಂದಾಗಿ ದೇವರಿಗೆ ಹೆಚ್ಚುಹೆಚ್ಚಾಗಿ ಕೃತಜ್ಞತಾಸ್ತುತಿ ಉಂಟಾಗುವುದು. 13 ನೀವು ಮಾಡುವ ಈ ಸೇವಾಕಾರ್ಯವು ನಿಮ್ಮ ನಂಬಿಕೆಗೆ ಸಾಕ್ಷಿಯಾಗಿದೆ. ಇದರ ನಿಮಿತ್ತವಾಗಿ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಕ್ರಿಸ್ತನ ಸುವಾರ್ತೆಯನ್ನು ಅನುಸರಿಸುವುದರಿಂದ ಅವರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಹೇಳುವ ಸುವಾರ್ತೆಯನ್ನು ನೀವು ನಂಬಿದ್ದೀರಿ. ತಮ್ಮೊಂದಿಗೆ ಮತ್ತು ಎಲ್ಲರೊಂದಿಗೆ ನೀವು ಉದಾರವಾಗಿ ಹಂಚಿಕೊಂಡಿದ್ದರಿಂದ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. 14 ಇದಲ್ಲದೆ ಆ ಜನರು ಪ್ರಾರ್ಥಿಸುವಾಗ ತಾವು ನಿಮ್ಮೊಂದಿಗೆ ಇರಬೇಕಾಗಿತ್ತೆಂದು ಆಶಿಸುವರು. ದೇವರ ಅತಿಶಯವಾದ ಕೃಪೆಯು ನಿಮ್ಮಲ್ಲಿರುವುದೇ ಅದಕ್ಕೆ ಕಾರಣ. 15 ವರ್ಣಿಸಲಸಾಧ್ಯವಾದ ದೇವರ ವರಕ್ಕಾಗಿ ಆತನಿಗೆ ಸ್ತೋತ್ರವಾಗಲಿ.
Kannada Holy Bible: Easy-to-Read Version. All rights reserved. © 1997 Bible League International