Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ರೋಮ್ನಗರದವರಿಗೆ 11-13

ದೇವರು ತನ್ನ ಜನರನ್ನು ಮರೆತಿಲ್ಲ

11 ಹಾಗಾದರೆ, “ದೇವರು ತನ್ನ ಜನರನ್ನು ತಿರಸ್ಕರಿಸಿದನೇ?” ಎಂದು ನಾನು ಕೇಳುತ್ತೇನೆ. ಇಲ್ಲ! ನಾನೂ ಒಬ್ಬ ಇಸ್ರೇಲನಾಗಿದ್ದೇನೆ. ನಾನು ಅಬ್ರಹಾಮನ ಕುಟುಂಬಕ್ಕೆ ಸೇರಿದವನಾಗಿದ್ದೇನೆ: ಬೆನ್ಯಾಮೀನನ ಕುಲದವನಾಗಿದ್ದೇನೆ. ಇಸ್ರೇಲರು ಹುಟ್ಟುವುದಕ್ಕಿಂತ ಮೊದಲೇ ದೇವರು ಅವರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಆತನು ಅವರನ್ನು ಹೊರಕ್ಕೆ ತಳ್ಳಿಬಿಡಲಿಲ್ಲ. ಎಲೀಯನ ಬಗ್ಗೆ ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ಇಸ್ರೇಲಿನ ಜನರ ವಿರೋಧವಾಗಿ ಎಲೀಯನು ದೇವರಿಗೆ ಮಾಡಿದ ಪ್ರಾರ್ಥನೆಯ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿದೆ. ಎಲೀಯನು, “ಪ್ರಭುವೇ, ಜನರು ನಿನ್ನ ಪ್ರವಾದಿಗಳನ್ನು ಕೊಂದುಹಾಕಿದರು; ನಿನ್ನ ಯಜ್ಞವೇದಿಕೆಗಳನ್ನು ನಾಶಮಾಡಿದರು. ಪ್ರವಾದಿಗಳಲ್ಲಿ ನಾನೊಬ್ಬನು ಮಾತ್ರ ಇನ್ನೂ ಬದುಕಿದ್ದೇನೆ. ಈಗ ಜನರು ನನ್ನನ್ನೂ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ”(A) ಎಂದು ಪ್ರಾರ್ಥಿಸಿದನು. ಆದರೆ ದೇವರು ಎಲೀಯನಿಗೆ ಕೊಟ್ಟ ಉತ್ತರವೇನು? ದೇವರು ಎಲೀಯನಿಗೆ, “ಇನ್ನೂ ನನ್ನನ್ನು ಆರಾಧಿಸುತ್ತಿರುವ ಏಳು ಸಾವಿರ ಮಂದಿಯನ್ನು ನನಗಾಗಿ ಉಳಿಸಿಕೊಂಡಿದ್ದೇನೆ. ಅವರನ್ನು ಬಾಳನ ಪೂಜೆಗೆ ಕೊಟ್ಟಿಲ್ಲ”(B) ಎಂದು ಉತ್ತರಕೊಟ್ಟನು.

ಈಗಲೂ ಅದರಂತೆಯೇ ಆಗಿದೆ. ದೇವರು ತನ್ನ ಕೃಪೆಯ ಮೂಲಕ ಆರಿಸಿಕೊಂಡಿರುವ ಕೆಲವು ಜನರು ಇದ್ದಾರೆ. ದೇವರ ಕೃಪೆಯ ಮೂಲಕ ಆರಿಸಲ್ಪಟ್ಟಿರುವ ಅವರು ದೇವರ ಮಕ್ಕಳಾದದ್ದು ತಮ್ಮ ಕ್ರಿಯೆಗಳಿಂದಲ್ಲ. ಇಲ್ಲದಿದ್ದರೆ, ದೇವರ ಕೃಪಾವರವು ಕೃಪಾವರವೆನಿಸಿಕೊಳ್ಳುತ್ತಿರಲಿಲ್ಲ.

ಆದ್ದರಿಂದ ನಡೆದ ಸಂಗತಿಯಿಷ್ಟೆ: ಇಸ್ರೇಲಿನ ಜನರು ನೀತಿವಂತರಾಗಲು ಪ್ರಯತ್ನಿಸಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಿರಲು, ದೇವರಿಂದ ಆರಿಸಲ್ಪಟ್ಟಿದ್ದ ಜನರು ನೀತಿವಂತರಾದರು. ಆದರೆ ಉಳಿದ ಜನರು ಕಠಿಣರಾಗಿ ದೇವರಿಗೆ ಕಿವಿಗೊಡಲಿಲ್ಲ. ಪವಿತ್ರ ಗ್ರಂಥದಲ್ಲಿ ಬರೆದಿರುವಂತೆಯೇ ಇದಾಯಿತು:

“ಜನರಿಗೆ ಅರ್ಥವಾಗದಂತೆ ದೇವರು ಅವರನ್ನು ಮಂಕುಗೊಳಿಸಿದನು.”(C)

“ಅವರು ಇಂದಿನವರೆಗೂ ಕಣ್ಣಿದ್ದರೂ ಕಾಣದಂತೆ
    ಕಿವಿಯಿದ್ದರೂ ಕೇಳದಂತೆ ದೇವರು ಅವುಗಳನ್ನು ಮುಚ್ಚಿಬಿಟ್ಟನು.”(D)

ದಾವೀದನು ಹೀಗೆನ್ನುತ್ತಾನೆ:

“ಅವರು ತಮ್ಮ ಔತಣಗಳಲ್ಲಿ ಸಿಕ್ಕಿಕೊಂಡು ಬಂಧಿತರಾಗಲಿ;
    ಎಡವಿಬಿದ್ದು ದಂಡನೆ ಹೊಂದಲಿ.
10 ಅವರ ಕಣ್ಣು ಕುರುಡಾಗಲಿ;
    ನಿರಂತರ ಭಾರದಿಂದ ಬೆನ್ನು ಗೂನಾಗಲಿ.”(E)

11 ಹಾಗಾದರೆ, ಯೆಹೂದ್ಯರು ಮೇಲೇಳದಂತೆ ಮುಗ್ಗರಿಸಿ ಬಿದ್ದರೇ? ಎಂದಿಗೂ ಇಲ್ಲ. ಆದರೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆಪಡುವಂತಾಯಿತು. 12 ಯೆಹೂದ್ಯರ ಅಪರಾಧವು ಜಗತ್ತಿಗೆ ಅಧಿಕವಾದ ಆಶೀರ್ವಾದಗಳನ್ನೂ ಅವರ ಅಪಜಯವು ಯೆಹೂದ್ಯರಲ್ಲದ ಜನರಿಗೆ ಅಧಿಕವಾದ ಆಶೀರ್ವಾದಗಳನ್ನೂ ತರಲು ಕಾರಣವಾದರೆ, ದೇವರ ಇಚ್ಛೆಗನುಸಾರವಾಗಿ ಯೆಹೂದ್ಯರೆಲ್ಲರು ಪರಿವರ್ತನೆ ಹೊಂದಿದಾಗ ಜಗತ್ತು ಮತ್ತಷ್ಟು ಅಗಾಧವಾದ ಆಶೀರ್ವಾದಗಳನ್ನು ಹೊಂದುವುದು ನಿಶ್ಚಯವಲ್ಲವೇ?

13 ಈಗ ನಾನು ಯೆಹೂದ್ಯರಲ್ಲದ ಜನರೊಂದಿಗೆ ಮಾತಾಡುತ್ತಿದ್ದೇನೆ. ನಾನು ಅವರಿಗೆ ಅಪೊಸ್ತಲನಾಗಿದ್ದೇನೆ. ಆದ್ದರಿಂದ ನಾನು ಈ ಕೆಲಸವನ್ನು ನನ್ನಿಂದ ಸಾಧ್ಯವಾದಷ್ಟು ಉತ್ತಮವಾಗಿಯೇ ಮಾಡುತ್ತೇನೆ. 14 ನಾನು ನನ್ನ ಸ್ವಂತ ಜನರಲ್ಲಿ (ಯೆಹೂದ್ಯರಲ್ಲಿ) ಅಸೂಯೆಯನ್ನು ಉಂಟುಮಾಡಿ ಅವರಲ್ಲಿ ಕೆಲವರಾದರೂ ರಕ್ಷಣೆ ಹೊಂದುವಂತೆ ಮಾಡಬಲ್ಲೆನೆಂಬ ನಿರೀಕ್ಷೆ ನನಗಿದೆ. 15 ಇಸ್ರೇಲರು ತಿರಸ್ಕೃತರಾದ್ದರಿಂದ ಜಗತ್ತು ದೇವರೊಡನೆ ಸಂಧಾನವಾಗಲು ಸಾಧ್ಯವಾಯಿತಾದರೆ ಅವರು ಸ್ವೀಕೃತರಾದಾಗ ಇನ್ನೇನು ತಾನೆ ಸಂಭವಿಸದು! ಸತ್ತವರು ಜೀವ ಪಡೆದುಕೊಂಡಂತಾಗುವುದಿಲ್ಲವೇ? 16 ರೊಟ್ಟಿಯ ಮೊದಲನೇ ತುಂಡನ್ನು ದೇವರಿಗೆ ಅರ್ಪಿಸಿದಾಗ, ಇಡೀ ರೊಟ್ಟಿಯೇ ಪವಿತ್ರವಾಯಿತು. ಮರದ ಬೇರುಗಳು ಪವಿತ್ರವಾಗಿದ್ದರೆ, ಆ ಮರದ ಕೊಂಬೆಗಳು ಸಹ ಪವಿತ್ರವಾಗಿವೆ.

17 ಇದು, ಆಲಿವ್ ಮರದ ಕೆಲವು ಕೊಂಬೆಗಳು ಮುರಿಯಲ್ಪಟ್ಟಾಗ, ಕಾಡುಆಲಿವ್ ಮರದ ಕೊಂಬೆಯೊಂದು ಮೊದಲಿನ ಆಲಿವ್ ಮರಕ್ಕೆ ಸೇರಿಕೊಂಡಂತಿದೆ. ಯೆಹೂದ್ಯರಲ್ಲದ ನೀವು ಕಾಡುಕೊಂಬೆಗೆ ಸಮಾನವಾಗಿದ್ದೀರಿ. ಆದರೆ ಈಗ ನೀವು ಮೊದಲನೆ ಮರದ (ಯೆಹೂದ್ಯರ) ಶಕ್ತಿಯಲ್ಲಿಯೂ ಜೀವದಲ್ಲಿಯೂ ಪಾಲುಗಾರರಾಗಿದ್ದೀರಿ. 18 ಆದ್ದರಿಂದ ಮುರಿಯಲ್ಪಟ್ಟ ಆ ಕೊಂಬೆಗಳನ್ನು ಕಡೆಗಣಿಸಬೇಡಿ. ಅವುಗಳನ್ನು ಕಡೆಗಣಿಸಲು ನಿಮಗೆ ಯಾವ ಕಾರಣವೂ ಇಲ್ಲ. ಏಕೆಂದರೆ, ನೀವು ಬೇರಿಗೆ ಜೀವವನ್ನು ಕೊಡುವುದಿಲ್ಲ. ಬೇರು ನಿಮಗೆ ಜೀವವನ್ನು ಕೊಡುತ್ತದೆ. 19 “ನಾವು ಆ ಮರದ ಕೊಂಬೆಗಳಿಗೆ ಸೇರಿಕೊಳ್ಳಬೇಕೆಂದು ಆ ಕೊಂಬೆಗಳು ಮುರಿಯಲ್ಪಟ್ಟವು” ಎಂದು ನೀವು ಹೇಳಬಹುದು. 20 ಅದು ಸತ್ಯ. ಆ ಕೊಂಬೆಗಳು ಮುರಿಯಲ್ಪಟ್ಟವು. ಅದಕ್ಕೆ ಅಪನಂಬಿಕೆಯೇ ಕಾರಣ. ನೀವು ಆ ಮರದ ಒಂದು ಭಾಗವಾದದ್ದು ನಿಮ್ಮ ನಂಬಿಕೆಯಿಂದಲೇ. ಆದ್ದರಿಂದ ಗರ್ವಪಡಬೇಡ, ಭಯದಿಂದಿರು. 21 ದೇವರು ಸಹಜವಾದ ಕೊಂಬೆಗಳನ್ನೇ ಉಳಿಸಿಲ್ಲದಿರುವುದರಿಂದ ನೀವು ನಂಬದಿದ್ದರೆ ಆತನು ನಿನ್ನನ್ನು ಉಳಿಸುವುದಿಲ್ಲ.

22 ಆದ್ದರಿಂದ ದೇವರು ದಯೆ ಉಳ್ಳವನಾಗಿದ್ದರೂ ಬಹುಕಠಿಣನೂ ಆಗಿದ್ದಾನೆ ಎಂಬುದನ್ನು ಗಮನಿಸು. ದೇವರು ತನ್ನನ್ನು ಹಿಂಬಾಲಿಸದಿರುವ ಜನರನ್ನು ದಂಡಿಸುತ್ತಾನೆ. ಆದರೆ ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡಿದ್ದರೆ, ದೇವರು ನಿನಗೆ ದಯಾಳುವಾಗಿರುತ್ತಾನೆ. ಇಲ್ಲವಾದರೆ, ನಿನ್ನನ್ನು ಮರದಿಂದ ಕಡಿದುಹಾಕಲಾಗುವುದು. 23 ಯೆಹೂದ್ಯರು ತಮ್ಮ ಅಪನಂಬಿಕೆಯನ್ನು ಬಿಡುವುದಾದರೆ, ದೇವರು ಅವರನ್ನು ಮತ್ತೆ ಸ್ವೀಕರಿಸಿಕೊಳ್ಳುವನು. ಅವರ ಮೊದಲಿನ ಸ್ಥಾನವನ್ನು ಅವರಿಗೆ ಕೊಡಲು ದೇವರು ಶಕ್ತನಾಗಿದ್ದಾನೆ. 24 ಕಾಡುಕೊಂಬೆಯೊಂದು ಒಳ್ಳೆಯ ಮರದ ಕೊಂಬೆಯಾಗುವುದು ಸಹಜವಾದದ್ದಲ್ಲ. ಆದರೆ ಯೆಹೂದ್ಯರಲ್ಲದ ನೀವು ಕಾಡು ಆಲಿವ್ ಮರದಿಂದ ಕತ್ತರಿಸಲ್ಪಟ್ಟ ಕೊಂಬೆಯಾಗಿದ್ದು ಒಳ್ಳೆಯ ಆಲಿವ್ ಮರಕ್ಕೆ ಕಸಿಕಟ್ಟಲ್ಪಟ್ಟಿದ್ದೀರಿ. ಯೆಹೂದ್ಯರಾದರೋ ಒಳ್ಳೆಯ ಆಲಿವ್ ಮರದಲ್ಲಿ ಬೆಳೆದ ರೆಂಬೆಗಳು. ಆದ್ದರಿಂದ ಅವರು ತಮ್ಮ ಸ್ವಂತ ಮರಕ್ಕೆ ಮತ್ತೆ ಸೇರಿಸಲ್ಪಡಲು ಖಂಡಿತವಾಗಿಯೂ ಸಾಧ್ಯ.

25 ಸಹೋದರ ಸಹೋದರಿಯರೇ, ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳದಂತೆ ಇದುವರೆಗೆ ರಹಸ್ಯವಾಗಿದ್ದ ಸತ್ಯವನ್ನು ನಿಮಗೆ ತಿಳಿಸುತ್ತೇನೆ. ಅದೇನೆಂದರೆ: ಇಸ್ರೇಲಿನ ಜನರಲ್ಲಿ ಒಂದು ಪಾಲು ಮಂದಿ ಮೊಂಡರಾದರು. ಆದರೆ ಯೆಹೂದ್ಯರಲ್ಲದ ಜನರೆಲ್ಲರೂ ದೇವರ ಬಳಿಗೆ ಬಂದಾಗ ಅವರ ಮೊಂಡತನವು ಇಲ್ಲವಾಗುವುದು. 26 ಹೀಗೆ ಎಲ್ಲಾ ಇಸ್ರೇಲರು ರಕ್ಷಣೆ ಹೊಂದುವರು. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ಸಿಯೋನಿನಿಂದ ರಕ್ಷಕನು ಬರುವನು:
    ಆತನು ಯಾಕೋಬನ ಕುಟುಂಬದಿಂದ ಎಲ್ಲಾ ದುಷ್ಟತನವನ್ನು ನಿವಾರಣೆ ಮಾಡುವನು.
27 ನಾನು ಆ ಜನರ ಪಾಪಗಳನ್ನು ಪರಿಹರಿಸುವಾಗ
    ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.”(F)

28 ಯೆಹೂದ್ಯರು ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. ಆದ್ದರಿಂದ ಅವರು ದೇವರ ಶತ್ರುಗಳಾಗಿದ್ದಾರೆ. ಯೆಹೂದ್ಯರಲ್ಲದ ಜನರಿಗೆ ಸಹಾಯವಾಗಲೆಂದೇ ಇದಾಯಿತು. ಆದರೆ ಯೆಹೂದ್ಯರು ಇನ್ನೂ ದೇವರಿಂದ ಆರಿಸಲ್ಪಟ್ಟ ಜನರಾಗಿದ್ದಾರೆ. ಆದ್ದರಿಂದ ಆತನು ಪಿತೃಗಳೊಂದಿಗೆ ತಾನು ಮಾಡಿಕೊಂಡ ಒಡಂಬಡಿಕೆಯ ನಿಮಿತ್ತ ಅವರನ್ನು ಪ್ರೀತಿಸುತ್ತಾನೆ. 29 ಆತನು, ತಾನು ಕರೆಯುವ ಜನರ ವಿಷಯವಾಗಿಯೂ ತಾನು ಅವರಿಗೆ ಕೊಡುವ ವರಗಳ ವಿಷಯವಾಗಿಯೂ ತನ್ನ ಮನಸ್ಸನ್ನು ಬದಲಾಯಿಸುವುದೇ ಇಲ್ಲ; ತಾನು ಜನರಿಗೆ ನೀಡಿದ ಕರೆಯನ್ನು ಹಿಂತೆಗೆದುಕೊಳ್ಳುವುದೇ ಇಲ್ಲ. 30 ಒಂದು ಕಾಲದಲ್ಲಿ ನೀವು ಆತನಿಗೆ ವಿಧೇಯರಾಗಿರಲಿಲ್ಲ. ಈಗಲಾದರೋ ನೀವು ಕರುಣೆಯನ್ನು ಹೊಂದಿಕೊಂಡಿರಿ. ಏಕೆಂದರೆ ಅವರು (ಯೆಹೂದ್ಯರು) ಆತನಿಗೆ ಅವಿಧೇಯರಾದರು. 31 ದೇವರು ನಿಮಗೆ ಕರುಣೆ ತೋರಿದ್ದರಿಂದ ಈಗ ಯೆಹೂದ್ಯರು ವಿಧೇಯರಾಗುವುದಿಲ್ಲ. ಆದರೆ ಅವರು ಸಹ ದೇವರಿಂದ ಕರುಣೆಯನ್ನು ಹೊಂದಿಕೊಳ್ಳಲೆಂದು ಹೀಗಾಯಿತು. 32 ಎಲ್ಲರೂ ದೇವರಿಗೆ ಅವಿಧೇಯರಾದರು. ದೇವರು ಎಲ್ಲರಿಗೂ ಕರುಣೆಯನ್ನು ತೋರಬೇಕೆಂದು ಎಲ್ಲರನ್ನೂ ಒಟ್ಟಾಗಿ ಅವಿಧೇಯತ್ವದಿಂದ ಬಂಧಿಸಿದ್ದಾನೆ.

ದೇವರಿಗೆ ಸ್ತೋತ್ರವಾಗಲಿ

33 ಹೌದು, ದೇವರ ಐಶ್ವರ್ಯವು ಎಷ್ಟೋ ಅಪಾರವಾಗಿದೆ! ದೇವರ ವಿವೇಕಕ್ಕೂ ಜ್ಞಾನಕ್ಕೂ ಕೊನೆಯೇ ಇಲ್ಲ! ದೇವರು ನಿರ್ಧರಿಸುವ ಸಂಗತಿಗಳನ್ನು ಯಾವನೂ ವಿವರಿಸಲಾರನು. ದೇವರ ಮಾರ್ಗಗಳನ್ನು ಯಾವನೂ ಅರ್ಥಮಾಡಿಕೊಳ್ಳಲಾರನು. 34 ಪವಿತ್ರ ಗ್ರಂಥ ಹೇಳುವಂತೆ:

“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
    ದೇವರಿಗೆ ಸಲಹೆಯನ್ನು ಯಾರು ಕೊಡಬಲ್ಲರು?”(G)

35 “ಮೊದಲು ದೇವರಿಗೆ ಕೊಟ್ಟು ಪ್ರತಿಫಲ ಪಡೆದವರ್ಯಾರು?
    ದೇವರು ಯಾರಿಗೂ ಸಾಲಗಾರನಾಗಿಲ್ಲ.”(H)

36 ಹೌದು, ದೇವರು ಸಮಸ್ತವನ್ನು ಸೃಷ್ಟಿಸಿದನು. ಸಮಸ್ತವು ದೇವರ ಮೂಲಕವಾಗಿಯೂ ದೇವರಿಗಾಗಿಯೂ ಮುಂದುವರಿಯುತ್ತಿದೆ. ದೇವರಿಗೆ ಸದಾಕಾಲವೂ ಸ್ತೋತ್ರ! ಆಮೆನ್.

ನಿಮ್ಮ ಜೀವಿತಗಳನ್ನು ದೇವರಿಗೆ ಕೊಡಿರಿ

12 ಆದ್ದರಿಂದ ಸಹೋದರ ಸಹೋದರಿಯರೇ, ದೇವರ ಮಹಾಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವ ಯಜ್ಞಗಳಾಗಿ ಅರ್ಪಿಸಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ. ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.

ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ. ಪ್ರತಿಯೊಬ್ಬರಿಗೂ ಒಂದು ದೇಹವಿದೆ. ಆ ದೇಹಕ್ಕೆ ಅನೇಕ ಅಂಗಾಂಗಗಳಿವೆ. ಆ ಅಂಗಾಂಗಗಳು ಒಂದೇ ಕಾರ್ಯವನ್ನು ಮಾಡುವುದಿಲ್ಲ. ಹೀಗೆ ನಮ್ಮಲ್ಲಿ ಅನೇಕರಿದ್ದರೂ ಕ್ರಿಸ್ತನಲ್ಲಿ ನಾವೆಲ್ಲರೂ ಒಂದೇ ದೇಹವಾಗಿದ್ದೇವೆ. ನಾವು ಆ ದೇಹದ ಅಂಗಗಳಾಗಿದ್ದೇವೆ. ಆ ದೇಹದ ಪ್ರತಿಯೊಂದು ಅಂಗವು ಇತರ ಅಂಗಗಳಿಗೂ ಸೇರಿಕೊಂಡಿದೆ.

ನಾವೆಲ್ಲರೂ ಬೇರೆಬೇರೆ ವರಗಳನ್ನು ಹೊಂದಿದ್ದೇವೆ. ದೇವರು ನಮಗೆ ಕೊಟ್ಟಿರುವ ಕೃಪೆಯಿಂದಲೇ ಪ್ರತಿಯೊಂದು ವರವು ಬಂದಿದೆ. ಪ್ರವಾದಿಸುವ ವರವನ್ನು ಹೊಂದಿರುವವನು ತನಗಿರುವ ನಂಬಿಕೆಯೊಂದಿಗೆ ಆ ವರವನ್ನು ಉಪಯೋಗಿಸಬೇಕು. ಸೇವೆಮಾಡುವ ವರವನ್ನು ಹೊಂದಿರುವವನು ಸೇವೆಮಾಡಬೇಕು. ಉಪದೇಶಮಾಡುವ ವರವನ್ನು ಹೊಂದಿರುವವನು ಉಪದೇಶ ಮಾಡಬೇಕು. ಸಂತೈಸುವ ವರವನ್ನು ಹೊಂದಿರುವವನು ಬೇರೆಯವರನ್ನು ಸಂತೈಸಬೇಕು. ದಾನಮಾಡುವ ವರವನ್ನು ಹೊಂದಿರುವವನು ಉದಾರವಾಗಿ ಕೊಡಬೇಕು. ನಾಯಕತ್ವದ ವರವನ್ನು ಹೊಂದಿರುವವನು ನಾಯಕತ್ವವನ್ನು ವಹಿಸಿಕೊಂಡಿರುವಾಗ ಕಷ್ಟಪಟ್ಟು ದುಡಿಯಬೇಕು. ಕನಿಕರವನ್ನು ತೋರುವ ವರವನ್ನು ಹೊಂದಿರುವವನು ಆನಂದದಿಂದ ಆ ಕಾರ್ಯವನ್ನು ಮಾಡಬೇಕು.

ನಿಮ್ಮ ಪ್ರೀತಿಯು ಯಥಾರ್ಥವಾಗಿರಲಿ. ದುಷ್ಕೃತ್ಯಗಳನ್ನು ದ್ವೇಷಿಸಿರಿ. ಒಳ್ಳೆಯ ಕಾರ್ಯಗಳನ್ನು ಮಾತ್ರ ಮಾಡಿರಿ. 10 ಸಹೋದರ ಸಹೋದರಿಯರೆಂಬ ಅನ್ಯೋನ್ಯಭಾವದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ. ನೀವು ನಿಮಗೋಸ್ಕರ ಬಯಸುವ ಮರ್ಯಾದೆಗಿಂತಲೂ ಹೆಚ್ಚು ಮರ್ಯಾದೆಯನ್ನು ನಿಮ್ಮ ಸಹೋದರ ಸಹೋದರಿಯರಿಗೆ ಕೊಡಿರಿ. 11 ನೀವು ಪ್ರಭುವಿಗೋಸ್ಕರ ಸೇವೆಮಾಡುವುದು ಅಗತ್ಯವಿರುವಾಗ ಸೋಮಾರಿಗಳಾಗಿರಬೇಡಿರಿ. ಆತ್ಮಿಕವಾದ ಉತ್ಸಾಹದಿಂದ ಆತನ ಸೇವೆಮಾಡಿರಿ. 12 ನಿಮಗೆ ನಿರೀಕ್ಷೆಯಿರುವುದರಿಂದ ಸಂತೋಷವಾಗಿರಿ. ನಿಮಗೆ ಸಂಕಟಗಳಿರುವಾಗ ತಾಳ್ಮೆಯಿಂದಿರಿ. ಎಲ್ಲಾ ಸಮಯದಲ್ಲಿ ಪ್ರಾರ್ಥಿಸಿರಿ. 13 ಕೊರತೆಯಲ್ಲಿರುವ ದೇವಜನರಿಗೆ ಸಹಾಯ ಮಾಡಿರಿ. ಅತಿಥಿಸತ್ಕಾರದ ಅಗತ್ಯವಿರುವವರನ್ನು ಗುರುತಿಸಿ, ನಿಮ್ಮ ಮನೆಗಳಿಗೆ ಆಹ್ವಾನಿಸಿರಿ.

14 ನಿಮಗೆ ಕೇಡುಮಾಡುವವರನ್ನು ಶಪಿಸದೆ ಆಶೀರ್ವದಿಸಿರಿ. 15 ಸಂತೋಷಪಡುವವರ ಸಂಗಡ ಸಂತೋಷಪಡಿರಿ. ದುಃಖಪಡುವವರೊಂದಿಗೆ ದುಃಖಪಡಿರಿ. 16 ನೀವು ಒಬ್ಬರಿಗೊಬ್ಬರು ಸಮಾಧಾನದಿಂದ ಒಟ್ಟಾಗಿ ಜೀವಿಸಿರಿ. ಗರ್ವಪಡಬೇಡಿರಿ. ಸಮಾಜದಲ್ಲಿ ಗಣನೆಗೆ ಬಾರದ ಜನರೊಂದಿಗೆ ಸ್ನೇಹದಿಂದಿರಲು ಅಪೇಕ್ಷಿಸಿರಿ. ನಿಮ್ಮನ್ನು ನೀವೆ, ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.

17 ಯಾವನಾದರು ನಿಮಗೆ ಕೇಡುಮಾಡಿದರೆ, ಅದಕ್ಕೆ ಪ್ರತಿಯಾಗಿ ಅವನಿಗೆ ಕೇಡುಮಾಡಬೇಡಿ. ಎಲ್ಲಾ ಜನರು ಒಳ್ಳೆಯದೆಂದು ಯೋಚಿಸುವ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿರಿ. 18 ಎಲ್ಲಾ ಜನರೊಂದಿಗೆ ಶಾಂತಿಯಿಂದ ಜೀವಿಸಲು ನಿಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಪ್ರಯತ್ನಿಸಿರಿ. 19 ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ”(I) ಎಂಬುದಾಗಿ ಬರೆಯಲ್ಪಟ್ಟಿದೆ. 20 ನೀವು ಮಾಡಬೇಕಾದದ್ದೇನೆಂದರೆ,

“ನಿಮ್ಮ ವೈರಿಯು ಹಸಿವೆಗೊಂಡಿದ್ದರೆ,
    ಅವನಿಗೆ ಊಟ ಕೊಡಿರಿ.
ನಿಮ್ಮ ವೈರಿಯು ಬಾಯಾರಿದ್ದರೆ,
    ಅವನಿಗೆ ಕುಡಿಯಲು ನೀರು ಕೊಡಿರಿ.
ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”(J)

21 ಕೆಟ್ಟತನವು ನಿಮ್ಮನ್ನು ಸೋಲಿಸುವುದಕ್ಕೆ ಅವಕಾಶಕೊಡದೆ ಒಳ್ಳೆಯದನ್ನು ಮಾಡುವುದರ ಮೂಲಕವಾಗಿ ಕೆಟ್ಟತನವನ್ನು ಸೋಲಿಸಿರಿ.

ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಿ

13 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ. ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ. ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.

ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಆ ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.

ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಆ ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ. ನೀವು ಯಾರ್ಯಾರಿಗೆ ಏನೇನು ಕೊಡಬೇಕೋ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೋ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.

ಇತರ ಜನರನ್ನು ಪ್ರೀತಿಸಬೇಕೆಂಬ ಒಂದೇ ಆಜ್ಞೆ

ಜನರಿಗೆ ಯಾವ ವಿಷಯದಲ್ಲಿಯೂ ಸಾಲಗಾರರಾಗಿರಬೇಡಿ. ಆದರೆ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ವಿಷಯದಲ್ಲಿ ಮಾತ್ರ ಯಾವಾಗಲೂ ಸಾಲಗಾರರಾಗಿದ್ದೀರಿ. ಇತರ ಜನರನ್ನು ಪ್ರೀತಿಸುವ ವ್ಯಕ್ತಿಯು ಇಡೀ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದಾನೆ. ಏಕೆಂದರೆ, “ವ್ಯಭಿಚಾರ ಮಾಡಕೂಡದು; ಕೊಲೆ ಮಾಡಕೂಡದು; ಕದಿಯಕೂಡದು; ಇತರರಿಗೆ ಸೇರಿದ ವಸ್ತುಗಳನ್ನು ಅಪೇಕ್ಷಿಸಕೂಡದು”(K) ಎಂದು ಧರ್ಮಶಾಸ್ತ್ರವು ಹೇಳುತ್ತದೆ. ಈ ಆಜ್ಞೆಗಳನ್ನು ಮೊದಲುಗೊಂಡು ಉಳಿದೆಲ್ಲಾ ಆಜ್ಞೆಗಳು, “ನೀನು ನಿನ್ನನ್ನು ಪ್ರೀತಿಸುವಂತೆ ಇತರ ಜನರನ್ನೂ ಪ್ರೀತಿಸು”(L) ಎಂಬ ಒಂದೇ ಆಜ್ಞೆಯಲ್ಲಿ ಅಡಕವಾಗಿದೆ. 10 ಪ್ರೀತಿಯು ಬೇರೆಯವರಿಗೆ ಕೇಡುಮಾಡುವುದಿಲ್ಲ. ಆದ್ದರಿಂದ ಪ್ರೀತಿಸುವುದಕ್ಕೂ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದಕ್ಕೂ ವ್ಯತ್ಯಾಸವೇನೂ ಇಲ್ಲ.

11 ನಾವು ಪ್ರಾಮುಖ್ಯವಾದ ಸಮಯದಲ್ಲಿ ಜೀವಿಸುತ್ತಿರುವುದರಿಂದ ಈ ವಿಷಯಗಳನ್ನು ಹೇಳುತ್ತಿದ್ದೇನೆ ಎಂಬುದು ನಿಮಗೆ ಗೊತ್ತೇ ಇದೆ. ಹೌದು, ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಕಾಲ ಇದಾಗಿದೆ. ನಾವು ವಿಶ್ವಾಸಿಗಳಾದ ಕಾಲಕ್ಕಿಂತ ಈಗ ನಮ್ಮ ರಕ್ಷಣೆಯು ಸಮೀಪವಾಗಿದೆ. 12 “ರಾತ್ರಿ”ಯು ಬಹುಮಟ್ಟಿಗೆ ಮುಗಿದುಹೋಗಿದೆ. “ಹಗಲು” ಬಹುಮಟ್ಟಿಗೆ ಬಂದಿದೆ. ಆದ್ದರಿಂದ ಕತ್ತಲೆಗೆ ಸೇರಿದ ಕಾರ್ಯಗಳನ್ನು ಇನ್ನು ಮೇಲೆ ಮಾಡದೆ ಬೆಳಕಿಗೆ ಸೇರಿದ ಕಾರ್ಯಗಳನ್ನು ಮಾಡಲು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು. 13 ಹಗಲಿಗೆ ಸೇರಿದ ಜನರಂತೆ ಸರಿಯಾದ ರೀತಿಯಲ್ಲಿ ಜೀವಿಸೋಣ. ಕೆಟ್ಟದಾದ ಮತ್ತು ವ್ಯರ್ಥವಾದ ಔತಣಕೂಟಗಳನ್ನು ನಾವು ಏರ್ಪಡಿಸಕೂಡದು; ಕುಡಿದು ಮತ್ತರಾಗಕೂಡದು; ನಾವು ಲೈಂಗಿಕ ಪಾಪವನ್ನಾಗಲಿ ನಮ್ಮ ದೇಹದಿಂದ ಯಾವುದೇ ಬಗೆಯ ಪಾಪವನ್ನಾಗಲಿ ಮಾಡಕೂಡದು; ವಾಗ್ವಾದಗಳನ್ನಾಗಲಿ ಜಗಳಗಳನ್ನಾಗಲಿ ಎಬ್ಬಿಸಬಾರದು; ಅಲ್ಲದೆ ಹೊಟ್ಟೆಕಿಚ್ಚುಪಡಬಾರದು. 14 ಪ್ರಭುವಾದ ಯೇಸು ಕ್ರಿಸ್ತನನ್ನೇ ಧರಿಸಿಕೊಳ್ಳಿರಿ. ನಿಮ್ಮ ಪಾಪಸ್ವಭಾವವನ್ನು ಹೇಗೆ ತೃಪ್ತಿಗೊಳಿಸಬೇಕೆಂದಾಗಲಿ ಕೆಟ್ಟಕಾರ್ಯಗಳನ್ನು ಮಾಡಬೇಕೆಂಬ ಬಯಕೆಯನ್ನು ಹೇಗೆ ಪೂರೈಸಿಕೊಳ್ಳಬೇಕೆಂದಾಗಲಿ ಆಲೋಚಿಸಬೇಡಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International