Beginning
ಪವಿತ್ರಾತ್ಮನಿಗೆ ಅಧೀನವಾದ ಜೀವಿತ
8 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. 2 ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. 3 ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. 4 ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.
5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. 6 ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. 7 ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. 8 ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.
9 ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.
12 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ನಾವು ನಮ್ಮ ಪಾಪಾಧೀನಸ್ವಭಾವದ ಆಳ್ವಿಕೆಗೆ ಒಳಗಾಗಿರಬಾರದು. ನಮ್ಮ ಪಾಪಸ್ವಭಾವದ ಬಯಕೆಗನುಸಾರವಾಗಿ ನಾವು ಜೀವಿಸಕೂಡದು. 13 ನಿಮ್ಮ ಪಾಪಸ್ವಭಾವವು ಬಯಸುವ ಕೆಟ್ಟಕಾರ್ಯಗಳನ್ನು ಮಾಡುವುದಕ್ಕಾಗಿ ನೀವು ನಿಮ್ಮ ಜೀವಿತವನ್ನು ಉಪಯೋಗಿಸಿದರೆ, ನೀವು ಆತ್ಮಿಕವಾಗಿ ಸಾಯುವಿರಿ. ಆದರೆ ನೀವು ನಿಮ್ಮ ದೇಹದ ಮೂಲಕವಾಗಿ ಮಾಡುವ ಕೆಟ್ಟಕಾರ್ಯಗಳನ್ನು ಪವಿತ್ರಾತ್ಮನ ಸಹಾಯದಿಂದ ನಿಲ್ಲಿಸಿದರೆ ಹೊಸ ಜೀವಿತವನ್ನು ಹೊಂದಿಕೊಳ್ಳುವಿರಿ.
14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.
ಭವಿಷ್ಯತ್ತಿನಲ್ಲಿ ನಮಗೆ ಮಹಿಮೆ ದೊರೆಯುವುದು
18 ಈಗ ನಾವು ಕಷ್ಟಸಂಕಟಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ ನಮಗೆ ಮುಂದೆ ಕೊಡಲ್ಪಡುವ ಮಹಿಮೆಗೆ ಈ ಕಷ್ಟಸಂಕಟಗಳನ್ನು ಹೋಲಿಸಿದರೆ ಇವು ಗಣನೆಗೆ ಬರುವುದಿಲ್ಲ. 19 ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ. 20 ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಹೀಗಾದದ್ದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ. ಆದರೂ ಅದಕ್ಕೆ ನಿರೀಕ್ಷೆಯಿತ್ತು. ಅದೇನೆಂದರೆ: 21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ. 25 ಆದರೆ ನಾವಿನ್ನೂ ಹೊಂದಿಕೊಂಡಿಲ್ಲದೆ ಇರುವುದನ್ನು ನಿರೀಕ್ಷಿಸುತ್ತಾ ತಾಳ್ಮೆಯಿಂದ ಅದಕ್ಕಾಗಿ ಕಾಯುತ್ತಿದ್ದೇವೆ.
26 ನಾವು ಬಲಹೀನರಾಗಿರುವುದರಿಂದ ನಮ್ಮ ಬಲಹೀನತೆಯಲ್ಲಿ ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ. ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದು ನಮಗೆ ತಿಳಿಯದು. ಆದರೆ ಪವಿತ್ರಾತ್ಮನು ತಾನೇ ನಮಗೋಸ್ಕರ ದೇವರಲ್ಲಿ ವಿವರಿಸಲಾಗದ ಅಂತರ್ಭಾವದಿಂದ ಬೇಡಿಕೊಳ್ಳುತ್ತಾನೆ. 27 ಅಂತರಂಗವನ್ನು ನೋಡಬಲ್ಲ ದೇವರಿಗೆ ಪವಿತ್ರಾತ್ಮನ ಮನಸ್ಸಿನಲ್ಲಿರುವುದೆಲ್ಲಾ ಗೊತ್ತಿದೆ, ಏಕೆಂದರೆ ದೇವರ ಚಿತ್ತಕ್ಕನುಸಾರವಾಗಿಯೇ ಪವಿತ್ರಾತ್ಮನು ದೇವಜನರಿಗೋಸ್ಕರ ದೇವರಲ್ಲಿ ವಿಜ್ಞಾಪಿಸುತ್ತಾನೆ.
28 ದೇವರು ತನ್ನನ್ನು ಪ್ರೀತಿಸುವವರ ಒಳ್ಳೆಯದಕ್ಕಾಗಿ ಪ್ರತಿಯೊಂದು ಕಾರ್ಯವನ್ನೂ ಅನುಕೂಲ ಮಾಡುತ್ತಾನೆಂದು ನಮಗೆ ಗೊತ್ತಿದೆ. ಆ ಜನರನ್ನು ದೇವರೇ ಆರಿಸಿಕೊಂಡನು, ಏಕೆಂದರೆ ಅದು ಆತನ ಯೋಜನೆಯಾಗಿತ್ತು. 29 ದೇವರು ತಾನು ಜಗತ್ತನ್ನು ಸೃಷ್ಟಿಸುವುದಕ್ಕಿಂತ ಮೊದಲೇ ಆ ಜನರನ್ನು ಬಲ್ಲವನಾಗಿದ್ದನು ಮತ್ತು ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂದು ನಿರ್ಧರಿಸಿದನು. ಹೀಗಿರಲಾಗಿ, ಅನೇಕ ಸಹೋದರ ಸಹೋದರಿಯರಲ್ಲಿ ಯೇಸುವೇ ಹಿರಿಯವನಾಗಿದ್ದಾನೆ. 30 ಆ ಜನರು ತನ್ನ ಮಗನ ಅನುರೂಪಿಗಳಾಗಿರಬೇಕೆಂಬ ತನ್ನ ಯೋಜನೆಗನುಸಾರವಾಗಿ ದೇವರು ಅವರನ್ನು ಕರೆದು, ನೀತಿವಂತರನ್ನಾಗಿ ಮಾಡಿ, ಅವರಿಗೆ ತನ್ನ ಮಹಿಮೆಯನ್ನು ಕೊಟ್ಟನು.
ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ
31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:
“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)
37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.
ದೇವರು ಮತ್ತು ಯೆಹೂದ್ಯರು
9 ನಾನು ಕ್ರಿಸ್ತನಲ್ಲಿದ್ದೇನೆ ಮತ್ತು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳಾಡುವುದಿಲ್ಲ. ನನ್ನ ಆಲೋಚನೆಗಳು ಪವಿತ್ರಾತ್ಮನ ಆಳ್ವಿಕೆಗೆ ಒಳಪಟ್ಟಿವೆ. ನನ್ನ ಮನಸ್ಸೇ ಇದಕ್ಕೆ ಸಾಕ್ಷಿ. 2 ಯೆಹೂದ್ಯರ ವಿಷಯದಲ್ಲಿ ನನಗೆ ಅತೀವ ದುಃಖವಿದೆ; ನಿರಂತರ ಮನೋವೇದನೆಯಿದೆ. 3 ಅವರು ನನ್ನ ಸಹೋದರ ಸಹೋದರಿಯರಾಗಿದ್ದಾರೆ; ಇಹಲೋಕದ ಕುಟುಂಬದವರಾಗಿದ್ದಾರೆ. ಅವರಿಗೆ ಸಹಾಯ ಮಾಡಲು ಕ್ರಿಸ್ತನನ್ನು ಅಗಲಿ ಶಾಪಗ್ರಸ್ತನಾಗುವುದಕ್ಕೂ ಸಿದ್ಧನಾಗಿದ್ದೇನೆ. 4 ಅವರು ಇಸ್ರೇಲಿನ ಜನರು. ಅವರು ದೇವರಿಂದ ಆರಿಸಲ್ಪಟ್ಟ ಮಕ್ಕಳು. ಅವರು ದೇವರ ಮಹಿಮೆಯನ್ನು ಮತ್ತು ದೇವರು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಗಳನ್ನು ಹೊಂದಿದ್ದಾರೆ. ದೇವರು ಅವರಿಗೆ ಮೋಶೆಯ ಧರ್ಮಶಾಸ್ತ್ರವನ್ನೂ ಸರಿಯಾದ ಆರಾಧನೆಯ ಕ್ರಮವನ್ನೂ ತನ್ನ ವಾಗ್ದಾನಗಳನ್ನೂ ಕೊಟ್ಟನು. 5 ಅವರು ನಮ್ಮ ಪಿತೃಗಳ ಸಂತಾನಗಳಿಗೆ ಸೇರಿದವರಾಗಿದ್ದಾರೆ; ಕ್ರಿಸ್ತನು ಶಾರೀರಿಕವಾಗಿ ಇವರ ವಂಶದಲ್ಲಿಯೇ ಹುಟ್ಟಿದನು. ಕ್ರಿಸ್ತನು ಸಕಲಕ್ಕೂ ಒಡೆಯನಾಗಿದ್ದಾನೆ. ಆತನಿಗೆ ಎಂದೆಂದಿಗೂ ಸ್ತೋತ್ರವಾಗಲಿ! ಆಮೆನ್.
6 ಹೌದು, ನಾನು ಯೆಹೂದ್ಯರ ವಿಷಯದಲ್ಲಿ ದುಃಖಿಸುತ್ತೇನೆ. ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದರಲ್ಲಿ ವಿಫಲನಾದನೆಂದು ನಾನು ಹೇಳುತ್ತಿಲ್ಲ. ಏಕೆಂದರೆ ಇಸ್ರೇಲ್ ವಂಶದಲ್ಲಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. 7 ಅಬ್ರಹಾಮನ ಸಂತತಿಗಳವರಲ್ಲಿ ಕೆಲವರು ಮಾತ್ರ ಅಬ್ರಹಾಮನ ನಿಜವಾದ ಮಕ್ಕಳಾಗಿದ್ದಾರೆ. ದೇವರು ಅವನಿಗೆ, “ಇಸಾಕನು ಮಾತ್ರ ನಿಮಗೆ ನ್ಯಾಯಬದ್ಧವಾದ ಮಗನು”(B) ಎಂದು ಹೇಳಿದನು. 8 ಇದರರ್ಥವೇನೆಂದರೆ, ಶರೀರ ಸಂಬಂಧವಾಗಿ ಹುಟ್ಟಿದವರೆಲ್ಲರೂ ದೇವರ ಮಕ್ಕಳಲ್ಲ. ವಾಗ್ದಾನ ಸಂಬಂಧವಾಗಿ ಹುಟ್ಟಿದವರೇ ದೇವರ (ನಿಜ) ಮಕ್ಕಳಾಗಿದ್ದಾರೆ. 9 ದೇವರು ಅವನಿಗೆ, “ನೇಮಿತ ಕಾಲದಲ್ಲಿ ನಾನು ಹಿಂತಿರುಗಿಬರುವೆನು, ಆಗ ಸಾರಳಿಗೆ ಒಬ್ಬ ಮಗನಿರುವನು”(C) ಎಂಬ ವಾಗ್ದಾನ ಮಾಡಿದ್ದನು.
10 ಅದಷ್ಟೇ ಅಲ್ಲ, ರೆಬೆಕ್ಕಳಿಗೂ ಇಬ್ಬರು ಗಂಡುಮಕ್ಕಳಿದ್ದರು. ಅವರಿಬ್ಬರಿಗೂ ಒಬ್ಬನೇ ತಂದೆ. ಅವನೇ ನಮ್ಮ ಪಿತೃವಾದ ಇಸಾಕನು. 11-12 ಆದರೆ ಆ ಇಬ್ಬರು ಗಂಡುಮಕ್ಕಳು ಹುಟ್ಟುವ ಮೊದಲೇ, ದೇವರು ರೆಬೆಕ್ಕಳಿಗೆ, “ಹಿರಿಯವನು ಕಿರಿಯವನ ಸೇವೆ ಮಾಡುವನು”(D) ಎಂದು ಹೇಳಿದನು. ಆ ಬಾಲಕರು ಯಾವ ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಮಾಡುವ ಮೊದಲೇ ಇದಾಯಿತು. ದೇವರು ಆ ಬಾಲಕನನ್ನು ತನ್ನ ಸ್ವಂತ ಯೋಜನೆಗನುಸಾರವಾಗಿ ಆರಿಸಿಕೊಂಡಿದ್ದರಿಂದ ಆ ಬಾಲಕರು ಹುಟ್ಟುವದಕ್ಕಿಂತ ಮೊದಲೇ ಹೀಗೆ ಹೇಳಿದನು. ದೇವರು ಅವನನ್ನು ಆರಿಸಿಕೊಂಡಿದ್ದರಿಂದ ಅವನನ್ನೇ ಕರೆಯಬೇಕೆಂದಿದ್ದನು. ಆದರೆ ಅದು ಆ ಬಾಲಕರ ಯಾವುದೇ ಕಾರ್ಯಗಳ ಮೇಲೆ ಆಧಾರಗೊಂಡಿರಲಿಲ್ಲ. 13 ಅಂತೆಯೇ, “ನಾನು ಯಾಕೋಬನನ್ನು ಪ್ರೀತಿಸಿದೆನು, ಆದರೆ ಏಸಾವನನ್ನು ದ್ವೇಷಿಸಿದೆನು”(E) ಎಂದು ಪವಿತ್ರ ಗ್ರಂಥವು ಹೇಳುತ್ತದೆ.
14 ಹಾಗಾದರೆ, ಇದರ ಬಗ್ಗೆ ಏನು ಹೇಳೋಣ? ದೇವರು ಅನ್ಯಾಯಗಾರನೇ? ಎಂದಿಗೂ, ಇಲ್ಲ. 15 ದೇವರು ಮೋಶೆಗೆ, “ನಾನು ಯಾರಿಗೆ ಕರುಣೆ ತೋರಬಯಸುತ್ತೇನೋ ಅವನಿಗೆ ಕರುಣೆ ತೋರುವೆನು. ನಾನು ಯಾರಿಗೆ ಕನಿಕರ ತೋರಬಯಸುತ್ತೇನೋ ಅವರಿಗೆ ಕನಿಕರ ತೋರುವೆನು”(F) ಎಂದು ಹೇಳಿದ್ದಾನೆ. 16 ಆದ್ದರಿಂದ ದೇವರು ತಾನು ಯಾರಿಗೆ ಕರುಣೆ ತೋರಬಯಸುತ್ತಾನೊ ಅವನನ್ನೇ ಆರಿಸಿಕೊಳ್ಳುತ್ತಾನೆ. ಆತನ ಆಯ್ಕೆಯು ಜನರು ಏನು ಮಾಡಬಯಸುತ್ತಾರೆ ಅಥವಾ ಏನು ಮಾಡಲು ಪ್ರಯತ್ನಿಸುತ್ತಾರೆಂಬುದರ ಮೇಲೆ ಆಧಾರಗೊಂಡಿಲ್ಲ. 17 ಪವಿತ್ರ ಗ್ರಂಥದಲ್ಲಿ ದೇವರು ಫರೋಹನಿಗೆ, “ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸಬೇಕೆಂತಲೂ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಖ್ಯಾತಿಪಡಿಸಬೇಕೆಂತಲೂ ನಿನ್ನನ್ನು ರಾಜನನ್ನಾಗಿ ಮಾಡಿದೆನು”(G) ಎಂದು ಹೇಳಿದ್ದಾನೆ. 18 ಆದ್ದರಿಂದ ದೇವರು ತಾನು ಯಾರಿಗೆ ಕರುಣೆಯನ್ನು ತೋರಬಯಸುತ್ತಾನೋ ಅವರಿಗೆ ಕರುಣೆಯನ್ನು ತೋರಿಸುತ್ತಾನೆ. ದೇವರು ಯಾರನ್ನು ಮೊಂಡರನ್ನಾಗಿ ಮಾಡಬಯಸುತ್ತಾನೋ ಅವರನ್ನು ಮೊಂಡರನ್ನಾಗಿ ಮಾಡುತ್ತಾನೆ.
19 “ನಾವು ಮಾಡುವ ಕಾರ್ಯಗಳು ದೇವರ ಹಿಡಿತಕ್ಕೆ ಒಳಗಾಗಿರುವುದಾದರೆ, ನಮ್ಮ ಪಾಪಗಳ ನಿಮಿತ್ತ ದೇವರು ನಮ್ಮನ್ನು ದೂಷಿಸುವುದೇಕೆ?” ಎಂದು ನಿಮ್ಮಲ್ಲಿ ಒಬ್ಬನು ಕೇಳಬಹುದು. 20 ಹಾಗೆ ಕೇಳಬೇಡಿ. ನೀವು ಕೇವಲ ಮನುಷ್ಯರು. ದೇವರನ್ನು ಪ್ರಶ್ನಿಸಲು ಮನುಷ್ಯರಿಗೆ ಯಾವ ಹಕ್ಕೂ ಇಲ್ಲ. ಮಡಕೆಯು ತನ್ನನ್ನು ತಯಾರಿಸಿದವನಿಗೆ, “ನೀನು ನನ್ನನ್ನು ಈ ರೀತಿ ತಯಾರಿಸಿದ್ದೇಕೆ” ಎಂದು ಕೇಳುವುದುಂಟೇ? 21 ಕುಂಬಾರನು ತನಗೆ ಇಷ್ಟಬಂದಂತೆ ಒಂದೇ ಮಣ್ಣಿನಿಂದ ವಿವಿಧ ವಸ್ತುಗಳನ್ನು ತಯಾರಿಸುವುದಿಲ್ಲವೇ? ಅವನು ಒಂದನ್ನು ವಿಶೇಷವಾದ ಬಳಕೆಗಾಗಿಯೂ ಮತ್ತೊಂದನ್ನು ದೈನಂದಿನ ಬಳಕೆಗಾಗಿಯೂ ತಯಾರಿಸುವನು.
22 ದೇವರು ಮಾಡಿರುವುದು ಸಹ ಹೀಗೆಯೇ. ಆತನು ತನ್ನ ಕೋಪವನ್ನು ತೋರಿಸಿ, ತನ್ನ ಶಕ್ತಿಯನ್ನು ಜನರಿಗೆ ಪ್ರಸಿದ್ಧಿಪಡಿಸಬೇಕೆಂದಿದ್ದನು. ಆದರೂ ಆತನು ತನ್ನ ಕೋಪಕ್ಕೆ ಗುರಿಯಾಗಿ ನಾಶವಾಗಲಿದ್ದ ಜನರನ್ನು ಬಹು ಸಹನೆಯಿಂದ ಸಹಿಸಿಕೊಂಡನು. 23 ದೇವರು ತನ್ನ ಅತಿಶಯವಾದ ಮಹಿಮೆಯನ್ನು ತೋರ್ಪಡಿಸಬೇಕೆಂದು ತಾಳ್ಮೆಯಿಂದ ಕಾದುಕೊಂಡಿದ್ದನು. ತನ್ನ ಕರುಣೆಯನ್ನು ಹೊಂದಿಕೊಳ್ಳುವ ಜನರಿಗೆ ದೇವರು ಆ ಮಹಿಮೆಯನ್ನು ಕೊಡಬೇಕೆಂದಿದ್ದನು. ತನ್ನ ಮಹಿಮೆಯನ್ನು ಹೊಂದಿಕೊಳ್ಳಲೆಂದು ದೇವರು ಆ ಜನರನ್ನು ಸಿದ್ಧಪಡಿಸಿದನು. 24 ನಾವೇ ಆ ಜನರು. ದೇವರಿಂದ ಕರೆಯಲ್ಪಟ್ಟ ಜನರು ನಾವೇ. ದೇವರು ನಮ್ಮನ್ನು ಯೆಹೂದ್ಯರೊಳಗಿಂದ ಮತ್ತು ಯೆಹೂದ್ಯರಲ್ಲದವರೊಳಗಿಂದ ಕರೆದನು. 25 ಪವಿತ್ರ ಗ್ರಂಥದ ಹೋಶೇಯನ ಪುಸ್ತಕದಲ್ಲಿ ಈ ರೀತಿ ಬರೆಯಲ್ಪಟ್ಟಿದೆ:
“ನನ್ನವರಲ್ಲದ ಜನರನ್ನು
ನನ್ನ ಜನರೆಂದು ಹೇಳುವೆನು.
ನನಗೆ ಪ್ರಿಯರಲ್ಲದವರನ್ನು
ನನಗೆ ಪ್ರಿಯರೆಂದು ಹೇಳುವೆನು.”(H)
26 ಮತ್ತು
“ಯಾವ ಸ್ಥಳದಲ್ಲಿ ದೇವರು,
‘ನೀವು ನನ್ನ ಜನರಲ್ಲ’ ಎಂದು ಹೇಳಿದ್ದನೋ
ಅದೇ ಸ್ಥಳದಲ್ಲಿ ಅವರನ್ನು ಜೀವವುಳ್ಳ ದೇವರ ಮಕ್ಕಳೆಂದು ಕರೆಯಲಾಗುವುದು.”(I)
27 ಇದಲ್ಲದೆ ಯೆಶಾಯನು ಇಸ್ರೇಲಿನ ಬಗ್ಗೆ ಕೂಗಿ ಹೇಳಿದ್ದಾನೆ:
“ಸಮುದ್ರ ತೀರದ ಮರಳಿನಂತೆ ಇಸ್ರೇಲರು ಅಸಂಖ್ಯಾತವಾಗಿರುವರು.
ಆದರೆ ಆ ಜನರಲ್ಲಿ ಕೆಲವರು ಮಾತ್ರ ರಕ್ಷಣೆ ಹೊಂದುವರು.
28 ಹೌದು, ಪ್ರಭುವು ಭೂಮಿಯ ಮೇಲಿನ ಜನರಿಗೆ ಬಹುಬೇಗನೆ ತೀರ್ಪನ್ನು ಪೂರ್ಣವಾಗಿ ತೀರಿಸುವನು.”(J)
29 ಯೆಶಾಯನು ಹೇಳಿರುವುದೇನೆಂದರೆ:
“ಪ್ರಭುವು ಸರ್ವಶಕ್ತನಾಗಿದ್ದಾನೆ. ಪ್ರಭುವು ತನ್ನ ಜನರಲ್ಲಿ ಕೆಲವರನ್ನು ನಮಗೋಸ್ಕರವಾಗಿ ರಕ್ಷಿಸಿದ್ದಾನೆ.
ಆತನು ಹೀಗೆ ಮಾಡಿಲ್ಲದಿದ್ದರೆ,
ಈಗ ನಾವು ಸೊದೋಮಿನಂತೆಯೂ
ಗೊಮೋರದಂತೆಯೂ ಇರುತ್ತಿದ್ದೆವು.”(K)
30 ಇದರರ್ಥವೇನೆಂದರೆ, ಯೆಹೂದ್ಯರಲ್ಲದವರು ನೀತಿವಂತರಾಗಲು ಪ್ರಯತ್ನಿಸುತ್ತಿರಲಿಲ್ಲ. ಆದರೆ ಅವರನ್ನು ನೀತಿವಂತರನ್ನಾಗಿ ಮಾಡಲಾಯಿತು. ಅವರು ನಂಬಿಕೆಯಿಂದಲೇ ನೀತಿವಂತರಾದರು. 31 ಇಸ್ರೇಲಿನ ಜನರಾದರೋ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ನೀತಿವಂತರಾಗಲು ಪ್ರಯತ್ನಿಸಿ ವಿಫಲರಾದರು. 32 ಏಕೆಂದರೆ ಕ್ರಿಯೆಗಳ ಮೂಲಕ ನೀತಿವಂತರಾಗಲು ಅವರು ಪ್ರಯತ್ನಿಸಿದರೇ ಹೊರತು ನಂಬಿಕೆಯನ್ನು ಆಧಾರ ಮಾಡಿಕೊಳ್ಳಲಿಲ್ಲ. ಜನರನ್ನು ಬೀಳಿಸುವ ಕಲ್ಲಿನ ಮೇಲೆ ಅವರು ಬಿದ್ದರು. 33 ಪವಿತ್ರ ಗ್ರಂಥವು ಆ ಕಲ್ಲಿನ ಬಗ್ಗೆ ಹೀಗೆ ತಿಳಿಸಿದೆ:
“ಇಗೋ, ನಾನು ಸಿಯೋನಿನಲ್ಲಿ[a] ಜನರನ್ನು ಎಡವಿಬೀಳಿಸುವ ಒಂದು ಕಲ್ಲನ್ನು ಇಡುತ್ತೇನೆ.
ಈ ಬಂಡೆಯಿಂದಾಗಿ ಜನರು ಎಡವಿಬೀಳುತ್ತಾರೆ.
ಆದರೆ ಆ ಬಂಡೆಯಲ್ಲಿ ನಂಬಿಕೆಯಿಡುವವನು ಎಂದಿಗೂ ಆಶಾಭಂಗ ಹೊಂದುವುದಿಲ್ಲ.”(L)
10 ಸಹೋದರ ಸಹೋದರಿಯರೇ, ಇಸ್ರೇಲರೆಲ್ಲರೂ ರಕ್ಷಣೆ ಹೊಂದಬೇಕೆಂಬುದೇ ನನ್ನ ಮಹಾಭಿಲಾಷೆ. ನಾನು ದೇವರಲ್ಲಿ ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. 2 ನಾನು ಯೆಹೂದ್ಯರ ಬಗ್ಗೆ ಹೀಗೆ ಹೇಳಬಲ್ಲೆನು: ಅವರು ದೇವರನ್ನು ಹಿಂಬಾಲಿಸಲು ನಿಜವಾಗಿಯೂ ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗ ಗೊತ್ತಿಲ್ಲ. 3 ನೀತಿವಂತರನ್ನಾಗಿ ಮಾಡುವ ದೇವರ ಮಾರ್ಗವನ್ನು ಅವರು ತಿಳಿದಿಲ್ಲದ ಕಾರಣ ತಮ್ಮ ಸ್ವಂತ ಮಾರ್ಗದ ಮೂಲಕವಾಗಿ ತಮ್ಮನ್ನು ನೀತಿವಂತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು. 4 ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ನೀತಿನಿರ್ಣಯ ಹೊಂದಬೇಕೆಂದು ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗೊಳಿಸಿದನು.
5 ಧರ್ಮಶಾಸ್ತ್ರದಿಂದಾಗುವ ನೀತಿಯ ಬಗ್ಗೆ, “ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಜೀವವನ್ನು ಪಡೆದುಕೊಳ್ಳಲು ಬಯಸುವವನು, ಧರ್ಮಶಾಸ್ತವು ಹೇಳುವ ಕಾರ್ಯಗಳನ್ನು ಮಾಡಲೇಬೇಕು”(M) ಎಂದು ಮೋಶೆ ಹೇಳಿದ್ದಾನೆ. 6 ಆದರೆ ನಂಬಿಕೆಯ ಮೂಲಕ ನೀತಿನಿರ್ಣಯ ಹೊಂದುವುದರ ಬಗ್ಗೆ, “(ಕ್ರಿಸ್ತನನ್ನು ಕೆಳಕ್ಕೆ ಕರೆದುಕೊಂಡು ಬರಲು) ‘ಯಾರು ಪರಲೋಕಕ್ಕೆ ಏರಿಹೋಗಬಲ್ಲರು?’” ಎಂದಾಗಲಿ (ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು.) 7 “‘ಯಾರು ಪಾತಾಳಕ್ಕೆ ಇಳಿದುಹೋಗಬಲ್ಲರು’ ಎಂದಾಗಲಿ ಹೇಳಬೇಡಿ” ಎಂದು ಪವಿತ್ರ ಗ್ರಂಥವು ಹೇಳುತ್ತದೆ.
8 ಇದಲ್ಲದೆ, “ದೇವರ ವಾಕ್ಯವು ನಿಮ್ಮ ಸಮೀಪದಲ್ಲೇ ಇದೆ. ಅದು ನಿಮ್ಮ ಬಾಯಲ್ಲಿಯೂ ನಿಮ್ಮ ಹೃದಯದಲ್ಲಿಯೂ ಇದೆ” ಎಂದು ಪವಿತ್ರ ಗ್ರಂಥವು ಹೇಳುತ್ತದೆ. ನಾವು ಜನರಿಗೆ ನಂಬಿಕೆಯ ಕುರಿತಾಗಿ ಸಾರುವ ವಾಕ್ಯವೇ ಅದು. 9 “ಯೇಸುವೇ ಪ್ರಭು”ವೆಂದು ನಿನ್ನ ಬಾಯಿಯ ಮೂಲಕ ಹೇಳುವುದಾದರೆ ಮತ್ತು ಯೇಸುವನ್ನು ಸತ್ತವರೊಳಗಿಂದ ಜೀವಂತನಾಗಿ ಎಬ್ಬಿಸಿದವನು ದೇವರೇ ಎಂದು ನಿನ್ನ ಹೃದಯದಲ್ಲಿ ನಂಬುವುದಾದರೆ, ನೀನು ರಕ್ಷಣೆ ಹೊಂದುವೆ. 10 ಹೌದು, ನಾವು ನಮ್ಮ ಹೃದಯಗಳಲ್ಲಿ ನಂಬುವುದರ ಮೂಲಕ ನೀತಿವಂತರಾಗುತ್ತೇವೆ. “ನಂಬುತ್ತೇವೆ” ಎಂದು ಬಾಯಾರೆ ಹೇಳುವುದರ ಮೂಲಕ ರಕ್ಷಣೆ ಹೊಂದುತ್ತೇವೆ.
11 ಪವಿತ್ರ ಗ್ರಂಥವು ಹೀಗೆ ಹೇಳುತ್ತದೆ: “ಆತನಲ್ಲಿ ನಂಬಿಕೆಯಿಡುವ ಯಾವ ವ್ಯಕ್ತಿಯೂ ನಾಚಿಕೆಗೆ ಗುರಿಯಾಗುವುದೇ ಇಲ್ಲ.”(N) 12 ಏಕೆಂದರೆ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಒಬ್ಬನೇ ಪ್ರಭು. ತನ್ನಲ್ಲಿ ನಂಬಿಕೆಯಿಡುವ ಜನರೆಲ್ಲರಿಗೆ ಪ್ರಭುವು ಅನೇಕ ಆಶೀರ್ವಾದಗಳನ್ನು ಕೊಡುತ್ತಾನೆ. 13 ಹೌದು, ಪವಿತ್ರ ಗ್ರಂಥವು ಹೇಳುವಂತೆ, “ಪ್ರಭುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ರಕ್ಷಣೆ ಹೊಂದುವನು.”(O)
14 ಪ್ರಭುವಿನಲ್ಲಿ ನಂಬಿಕೆಯಿಲ್ಲದೆ ಆತನಲ್ಲಿ ಭರವಸೆವಿಡುವುದಾದರೂ ಹೇಗೆ? ಪ್ರಭುವಿನ ವಿಷಯವನ್ನು ಕೇಳದೆ ಆತನಲ್ಲಿ ನಂಬಿಕೆ ಇಡುವುದಾದರೂ ಹೇಗೆ? ಮತ್ತೊಬ್ಬನು ತಿಳಿಸದ ಹೊರತು ಪ್ರಭುವಿನ ಬಗ್ಗೆ ಕೇಳುವುದಾದರೂ ಹೇಗೆ? 15 ಬೋಧಕರನ್ನು ಕಳುಹಿಸದ ಹೊರತು ಜನರಿಗೆ ತಿಳಿಸುವುದಾದರೂ ಹೇಗೆ? ಆದ್ದರಿಂದಲೇ, “ಸುವಾರ್ತಿಕರ ಪಾದಗಳು ಸುಂದರವಾಗಿವೆ”(P) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
16 ಆದರೆ ಯೆಹೂದ್ಯರೆಲ್ಲರೂ ಆ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳಲಿಲ್ಲ. “ಪ್ರಭುವೇ, ನಾವು ಅವರಿಗೆ ಹೇಳಿದ ಸಂಗತಿಗಳನ್ನು ಯಾರು ನಂಬಿದರು?”(Q) ಎಂದು ಯೆಶಾಯ ಹೇಳಿದ್ದಾನೆ. 17 ಹೀಗಿರಲು, ಸುವಾರ್ತೆಯನ್ನು ಕೇಳುವುದರ ಮೂಲಕ ನಂಬಿಕೆ ಬರುತ್ತದೆ. ಕ್ರಿಸ್ತನ ಬಗ್ಗೆ ಹೇಳುವುದರ ಮೂಲಕ ಸುವಾರ್ತೆ ಪ್ರಕಟವಾಗುತ್ತದೆ.
18 ಆದರೆ, “ಜನರು ಸುವಾರ್ತೆಯನ್ನು ಕೇಳಲಿಲ್ಲವೇ?” ಎಂದು ನಾನು ಪ್ರಶ್ನಿಸುತ್ತೇನೆ. ಹೌದು, ಅವರು ಕೇಳಿದರು ಪವಿತ್ರ ಗ್ರಂಥ ಹೇಳುವಂತೆ:
“ಅವರ ಸ್ವರಗಳು ಲೋಕದಲ್ಲೆಲ್ಲಾ ಪ್ರಸಾರಗೊಂಡವು.
ಅವರ ಮಾತುಗಳು ಪ್ರಪಂಚದ ಎಲ್ಲಾ ಕಡೆಗಳಿಗೂ ಹೋದವು.”(R)
19 “ಇಸ್ರೇಲಿನ ಜನರು ಅರ್ಥಮಾಡಿಕೊಳ್ಳಲಿಲ್ಲವೇ?” ಎಂದು ನಾನು ಮತ್ತೆ ಕೇಳುತ್ತೇನೆ. ಹೌದು, ಅವರು ಅರ್ಥಮಾಡಿಕೊಂಡರು. ಮೊದಲನೆಯದಾಗಿ, ದೇವರು ಮೋಶೆಯ ಮೂಲಕ ಹೀಗೆ ತಿಳಿಸಿದ್ದಾನೆ:
“ಜನಾಂಗವೆನಿಸಿಕೊಳ್ಳದವರ ಮೂಲಕ ಹೀಗೆ ನಾನು ನಿಮ್ಮಲ್ಲಿ ಅಸೂಯೆ ಹುಟ್ಟಿಸುವೆನು.
ಬುದ್ದಿಹೀನರೆನಿಸಿಕೊಂಡ ಜನಾಂಗದ ಮೂಲಕ ನಾನು ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು.”(S)
20 ಬಳಿಕ ಯೆಶಾಯನು ದೇವರ ಈ ನುಡಿಯನ್ನು ಧೈರ್ಯವಾಗಿ ಹೇಳಿದ್ದಾನೆ:
“ನನ್ನನ್ನು ಹುಡುಕದೆ ಇದ್ದ ಜನರು
ನನ್ನನ್ನು ಕಂಡುಕೊಂಡರು.
ನನಗಾಗಿ ಕೇಳಿಕೊಳ್ಳದ ಜನರಿಗೆ ನನ್ನನ್ನು ತೋರ್ಪಡಿಸಿಕೊಂಡೆನು.”(T)
21 ಆದರೆ ಇಸ್ರೇಲಿನ ಜನರ ಬಗ್ಗೆ ದೇವರು:
“ನಾನು ಆ ಜನರಿಗಾಗಿ ದಿನವೆಲ್ಲಾ ಕಾದುಕೊಂಡಿದ್ದೆನು,
ಆದರೆ ಅವರು ವಿಧೇಯರಾಗಲಿಲ್ಲ; ನನ್ನನ್ನು ಹಿಂಬಾಲಿಸಲಿಲ್ಲ” ಎನ್ನುತ್ತಾನೆ.(U)
Kannada Holy Bible: Easy-to-Read Version. All rights reserved. © 1997 Bible League International