Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 16-17

ತಿಮೊಥೆಯನು ಪೌಲ ಸೀಲರೊಂದಿಗೆ ಹೋಗುವನು

16 ಪೌಲನು ದರ್ಬೆ ಮತ್ತು ಲುಸ್ತ್ರ ಪಟ್ಟಣಗಳಿಗೆ ಹೋದನು. ತಿಮೊಥೆ ಎಂಬ ಕ್ರಿಸ್ತನ ಶಿಷ್ಯನೊಬ್ಬನು ಅಲ್ಲಿದ್ದನು. ತಿಮೊಥೆಯನ ತಾಯಿ ಯೆಹೂದ್ಯ ವಿಶ್ವಾಸಿಯಾಗಿದ್ದಳು. ಅವನ ತಂದೆಯು ಗ್ರೀಕನಾಗಿದ್ದನು. ಲುಸ್ತ್ರ ಮತ್ತು ಇಕೋನಿಯಾ ಪಟ್ಟಣಗಳ ವಿಶ್ವಾಸಿಗಳು ತಿಮೊಥೆಯನನ್ನು ಗೌರವಿಸುತ್ತಿದ್ದರು; ಮತ್ತು ಅವನ ಬಗ್ಗೆ ಒಳ್ಳೆಯದನ್ನೇ ಹೇಳುತ್ತಿದ್ದರು. ಪೌಲನು ತಿಮೊಥೆಯನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆದರೆ ಆ ಪ್ರದೇಶದಲ್ಲಿ ವಾಸವಾಗಿದ್ದ ಎಲ್ಲಾ ಜನರಿಗೂ ತಿಮೊಥೆಯನ ತಂದೆ ಗ್ರೀಕನೆಂಬುದು ಗೊತ್ತಿತ್ತು. ಆದ್ದರಿಂದ ಪೌಲನು ಯೆಹೂದ್ಯರನ್ನು ಮೆಚ್ಚಿಸುವುದಕ್ಕಾಗಿ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು.

ಬಳಿಕ ಪೌಲನು ಮತ್ತು ಅವನ ಸಂಗಡಿಗರು ಬೇರೆ ಪಟ್ಟಣಗಳ ಮೂಲಕ ಪ್ರಯಾಣ ಮಾಡಿದರು. ಜೆರುಸಲೇಮಿನಲ್ಲಿರುವ ಅಪೊಸ್ತಲರ ಮತ್ತು ಹಿರಿಯರ ನಿಯಮಗಳನ್ನೂ ತೀಮಾರ್ನಗಳನ್ನೂ ಅವರು ವಿಶ್ವಾಸಿಗಳಿಗೆ ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ತಿಳಿಸಿದರು. ಇದರಿಂದಾಗಿ ಸಭೆಗಳು ನಂಬಿಕೆಯಲ್ಲಿ ಬಲವಾಗತೊಡಗಿದವು ಮತ್ತು ಸಂಖ್ಯೆಯಲ್ಲಿ ದಿನದಿನಕ್ಕೂ ಹೆಚ್ಚಾಗತೊಡಗಿದವು.

ಏಷ್ಯಾದಿಂದಾಚೆಗೆ ಬರಲು ಪೌಲನಿಗೆ ಕರೆ

ಪೌಲನು ಮತ್ತು ಅವನ ಸಂಗಡಿಗರು ಫ್ರಿಜಿಯ ಮತ್ತು ಗಲಾತ್ಯ ಪ್ರಾಂತ್ಯಗಳ ಮೂಲಕ ಹಾದುಹೋದರು. ಏಷ್ಯಾ[a] ಸೀಮೆಯಲ್ಲಿ ಸುವಾರ್ತೆಯನ್ನು ತಿಳಿಸದಂತೆ ಪವಿತ್ರಾತ್ಮನು ಅವರನ್ನು ತಡೆದನು. ಪೌಲ ತಿಮೊಥೆಯರು ಮುಸಿಯ ನಾಡಿನ ಸಮೀಪಕ್ಕೆ ಹೋದರು. ಅವರು ಬಿಥೂನಿಯ ನಾಡಿನೊಳಗೆ ಹೋಗಬೇಕೆಂದಿದ್ದರು. ಆದರೆ ಯೇಸುವಿನ ಆತ್ಮನು ಅಲ್ಲಿಗೆ ಹೋಗದಂತೆ ಅವರನ್ನು ತಡೆದನು. ಆದ್ದರಿಂದ ಅವರು ಮುಸಿಯ ನಾಡನ್ನು ಹಾದು ನೇರವಾಗಿ ತ್ರೋವ ಪಟ್ಟಣಕ್ಕೆ ಬಂದರು.

ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು. ಈ ದರ್ಶನದಲ್ಲಿ ಮಕೆದೋನಿಯದ ನಾಡಿನಿಂದ ಬಂದ ಒಬ್ಬ ಮನುಷ್ಯನು ಅಲ್ಲಿ ನಿಂತುಕೊಂಡು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡು” ಎಂದು ಬೇಡಿಕೊಂಡನು. 10 ಪೌಲನು ಆ ದರ್ಶನವನ್ನು ಕಂಡಕೂಡಲೇ, ಅಲ್ಲಿಯ ಜನರಿಗೆ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ದೇವರು ನಮ್ಮನ್ನು ಕರೆದಿದ್ದಾನೆಂದು ಅರ್ಥಮಾಡಿಕೊಂಡು ಮಕೆದೋನಿಯಕ್ಕೆ ಹೋಗಲು ನಾವು ಸಿದ್ಧರಾದೆವು.

ಲಿಡಿಯಳ ಪರಿವರ್ತನೆ

11 ನಾವು ತ್ರೋವದಿಂದ ಹಡಗಿನಲ್ಲಿ ಹೊರಟು ಸಮೊಥ್ರ ದ್ವೀಪಕ್ಕೆ ಬಂದು ಮರುದಿನ ನೆಯಪೊಲಿಸ್ ಪಟ್ಟಣವನ್ನು ತಲುಪಿ, 12 ಅಲ್ಲಿಂದ ಫಿಲಿಪ್ಪಿಗೆ ಹೋದೆವು. ಅದು ಮಕೆದೋನಿಯದ ಜಿಲ್ಲೆಯಲ್ಲಿ ಮತ್ತು ರೋಮನ್ನರ ವಸಾಹತುವಿನಲ್ಲಿ[b] ಮುಖ್ಯವಾದ ಪಟ್ಟಣವಾಗಿತ್ತು. ನಾವು ಅಲ್ಲಿ ಕೆಲವು ದಿನಗಳವರೆಗೆ ಇಳಿದುಕೊಂಡೆವು.

13 ನದಿಯ ಸಮೀಪದಲ್ಲಿ ವಿಶೇಷವಾದ ಪ್ರಾರ್ಥನಾ ಸ್ಥಳವನ್ನು ನಾವು ಕಾಣಬಹುದೆಂದು ಆಲೋಚಿಸಿಕೊಂಡು ಸಬ್ಬತ್ ದಿನದಂದು ನದಿಯ ಬಳಿಗೆ ಹೋಗಲು ನಗರದ್ವಾರದಿಂದ ಹೊರಗೆ ಹೋದೆವು. ಕೆಲವು ಸ್ತ್ರೀಯರು ಅಲ್ಲಿ ಸೇರಿ ಬಂದಿದ್ದರು. ಆದ್ದರಿಂದ ನಾವು ಕುಳಿತುಕೊಂಡು ಅವರೊಂದಿಗೆ ಮಾತಾಡಿದೆವು. 14 ಅಲ್ಲಿ ಲಿಡಿಯಾ ಎಂಬ ಒಬ್ಬ ಹೆಂಗಸಿದ್ದಳು. ಆಕೆಯು ಥುವತೈರ ಪಟ್ಟಣದವಳು. ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಮಾರುವುದು ಆಕೆಯ ಕಸುಬಾಗಿತ್ತು. ಆಕೆಯು ನಿಜ ದೇವರನ್ನು ಆರಾಧಿಸುತ್ತಿದ್ದಳು. ಪೌಲನ ಮಾತನ್ನು ಲಿಡಿಯಾ ಆಲಿಸುತ್ತಿದ್ದಳು. ಪ್ರಭುವು ಆಕೆಯ ಹೃದಯವನ್ನು ತೆರೆದನು. ಪೌಲನು ಹೇಳಿದ ಸಂಗತಿಗಳನ್ನು ಆಕೆ ನಂಬಿಕೊಂಡಳು. 15 ಆಕೆ ಮತ್ತು ಆಕೆಯ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆಕೆಯು, “ನಾನು ಪ್ರಭು ಯೇಸುವಿನಲ್ಲಿ ನಿಜವಾದ ವಿಶ್ವಾಸಿಯೆಂದು ನೀವು ಯೋಚಿಸುವುದಾಗಿದ್ದರೆ, ನನ್ನ ಮನೆಗೆ ಬಂದು ತಂಗಿರಿ” ಎಂದು ಕೇಳಿಕೊಂಡು ನಮ್ಮನ್ನು ಒತ್ತಾಯ ಮಾಡಿದಳು.

ಸೆರೆಮನೆಯಲ್ಲಿ ಪೌಲ ಸೀಲರು

16 ಒಂದು ಸಲ, ನಾವು ಪ್ರಾರ್ಥನಾಸ್ಥಳಕ್ಕೆ ಹೋಗುತ್ತಿದ್ದಾಗ ಒಂದು ಸಂಗತಿ ಸಂಭವಿಸಿತು. ದಾಸಿಯೊಬ್ಬಳು ನಮ್ಮನ್ನು ಎದುರುಗೊಂಡಳು. ಆಕೆಯಲ್ಲಿ ವಿಶೇಷವಾದ ಆತ್ಮವಿತ್ತು. ಆ ಆತ್ಮದ ಶಕ್ತಿಯಿಂದ ಅವಳು ಮುಂದೆ ಸಂಭವಿಸುವ ಸಂಗತಿಗಳ ಬಗ್ಗೆ ಹೇಳುತ್ತಿದ್ದಳು. ಇದರ ಮೂಲಕವಾಗಿ ಆಕೆ ತನ್ನ ಯಜಮಾನರಿಗೆ ಬಹಳ ಹಣವನ್ನು ಗಳಿಸಿ ಕೊಡುತ್ತಿದ್ದಳು. 17 ಅವಳು ಪೌಲನನ್ನು ಮತ್ತು ನಮ್ಮನ್ನು ಹಿಂಬಾಲಿಸುತ್ತಾ, “ಈ ಜನರು ಮಹೋನ್ನತನಾದ ದೇವರ ಸೇವಕರು! ನೀವು ಹೇಗೆ ರಕ್ಷಣೆ ಹೊಂದಬಹುದೆಂಬುದನ್ನು ಅವರು ಹೇಳುತ್ತಿದ್ದಾರೆ!” ಎಂದು ಕೂಗುತ್ತಿದ್ದಳು. 18 ಹೀಗೆ ಆಕೆ ಅನೇಕ ದಿನಗಳವರೆಗೆ ಮಾಡಿದಳು. ಇದರಿಂದ ಬೇಸರಗೊಂಡ ಪೌಲನು ಹಿಂತಿರುಗಿ, ಆ ಆತ್ಮಕ್ಕೆ, “ಅವಳನ್ನು ಬಿಟ್ಟು ಹೋಗಬೇಕೆಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ!” ಎಂದು ಹೇಳಿದನು. ಆ ಕೂಡಲೇ ಆ ಆತ್ಮವು ಹೊರಬಂದಿತು.

19 ಇದನ್ನು ಕಂಡ ಅವಳ ಯಜಮಾನರು ಈಗ ಆಕೆಯಿಂದ ಹಣಗಳಿಸಲು ಸಾಧ್ಯವಿಲ್ಲವೆಂದು ಅರಿತುಕೊಂಡರು. ಆದ್ದರಿಂದ ಅವರು ಪೌಲ ಸೀಲರನ್ನು ಹಿಡಿದು ಪಟ್ಟಣದ ನ್ಯಾಯಸ್ಥಾನಕ್ಕೆ ಎಳೆದುಕೊಂಡು ಹೋದರು. ನಗರಾಧಿಕಾರಿಗಳು ಅಲ್ಲಿದ್ದರು. 20 ಆ ಜನರು ಪೌಲ ಸೀಲರನ್ನು ನ್ಯಾಯಾಧೀಶರ ಬಳಿಗೆ ತಂದು, “ಈ ಜನರು ಯೆಹೂದ್ಯರು. ಇವರು ನಮ್ಮ ಪಟ್ಟಣದಲ್ಲಿ ಗಲಭೆ ಎಬ್ಬಿಸುತ್ತಿದ್ದಾರೆ. 21 ನಿಷಿದ್ಧ ಕಾರ್ಯಗಳನ್ನು ಮಾಡುವಂತೆ ಇವರು ಜನರಿಗೆ ಹೇಳುತ್ತಿದ್ದಾರೆ. ರೋಮ್ ಪ್ರಜೆಗಳಾಗಿರುವ ನಾವು ಅಂಥ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.

22 ಜನರು ಪೌಲ ಸೀಲರಿಗೆ ವಿರೋಧವಾಗಿದ್ದರು. ಆಗ ನಾಯಕರು ಪೌಲ ಸೀಲರ ಬಟ್ಟೆಗಳನ್ನು ಹರಿದುಹಾಕಿಸಿ ಅವರಿಬ್ಬರಿಗೂ ಕೋಲುಗಳಿಂದ ಬಲವಾಗಿ ಹೊಡೆಸಿ, ಸೆರೆಮನೆಗೆ ಹಾಕಿಸಿದರು. 23 ಬಳಿಕ ಸೆರೆಮನೆಯ ಅಧಿಕಾರಿಗೆ, “ಅವರನ್ನು ಬಹು ಎಚ್ಚರಿಕೆಯಿಂದ ಕಾಯಿರಿ!” ಎಂದು ಆಜ್ಞಾಪಿಸಿದರು. 24 ಆದ್ದರಿಂದ ಸೆರೆಮನೆಯ ಅಧಿಕಾರಿಯು ಅವರನ್ನು ಸೆರೆಮನೆಯ ಒಳಕೋಣೆಗೆ ಹಾಕಿಸಿ, ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು.

25 ಸುಮಾರು ಮಧ್ಯರಾತ್ರಿಯಲ್ಲಿ ಪೌಲ ಸೀಲರು ಪ್ರಾರ್ಥನೆ ಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು. 26 ಇದ್ದಕ್ಕಿದ್ದಂತೆ ದೊಡ್ಡ ಭೂಕಂಪವಾಯಿತು. ಭೀಕರವಾಗಿದ್ದ ಅದು ಸೆರೆಮನೆಯ ಅಡಿಪಾಯವನ್ನೇ ನಡುಗಿಸಿತು. ಆಗ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದುಕೊಂಡವು. ಎಲ್ಲಾ ಕೈದಿಗಳ ಸರಪಣಿಗಳು ಕಳಚಿಬಿದ್ದವು. 27 ಆಗ ಸೆರೆಮನೆಯ ಅಧಿಕಾರಿಗೆ ಎಚ್ಚರವಾಯಿತು. ಸೆರೆಮನೆಯ ಬಾಗಿಲುಗಳು ತೆರೆದುಕೊಂಡಿರುವುದನ್ನು ಕಂಡು ಈಗಾಗಲೇ ಕೈದಿಗಳು ತಪ್ಪಿಸಿಕೊಂಡಿದ್ದಾರೆಂದು ಅವನು ಭಾವಿಸಿದನು. ಆದ್ದರಿಂದ ಅವನು ತನ್ನ ಕತ್ತಿಯನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿಯೇ 28 ಪೌಲನು ಅವನಿಗೆ, “ಹಾನಿ ಮಾಡಿಕೊಳ್ಳಬೇಡ! ನಾವೆಲ್ಲಾ ಇಲ್ಲೇ ಇದ್ದೇವೆ!” ಎಂದು ಕೂಗಿ ಹೇಳಿದನು.

29 ಸೆರೆಮನೆಯ ಅಧಿಕಾರಿಯು ಒಬ್ಬನಿಗೆ ದೀಪವನ್ನು ತರಬೇಕೆಂದು ಹೇಳಿದನು. ಬಳಿಕ ಅವನು ಒಳಗೆ ಓಡಿಹೋದನು. ಅವನು ನಡುಗುತ್ತಾ ಪೌಲ ಸೀಲರ ಮುಂದೆ ಕುಸಿದುಬಿದ್ದನು. 30 ಬಳಿಕ ಅವನು ಅವರನ್ನು ಹೊರಗೆ ಕರೆದುಕೊಂಡು ಬಂದು, “ಸ್ವಾಮಿಗಳೇ, ನಾನು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು?” ಎಂದು ಕೇಳಿದನು.

31 ಅವರು ಅವನಿಗೆ, “ಪ್ರಭು ಯೇಸುವಿನಲ್ಲಿ ನಂಬಿಕೆಯಿಡು. ಆಗ ನೀನು ರಕ್ಷಣೆ ಹೊಂದುವೆ ಮತ್ತು ನಿನ್ನ ಮನೆಯವರೆಲ್ಲರೂ ರಕ್ಷಣೆ ಹೊಂದುವರು” ಎಂದು ಹೇಳಿ, 32 ಅವನಿಗೂ ಅವನ ಮನೆಯವರೆಲ್ಲರಿಗೂ ಪ್ರಭುವಿನ ಸಂದೇಶವನ್ನು ತಿಳಿಸಿದರು. 33 ಆಗ ಮಧ್ಯರಾತ್ರಿ ಕಳೆದಿತ್ತು. ಆದರೂ ಅವನು ಪೌಲ ಸೀಲರನ್ನು ಕರೆದೊಯ್ದು ಅವರ ಗಾಯಗಳನ್ನು ತೊಳೆದನು. ಬಳಿಕ ಅವನು ಮತ್ತು ಅವನ ಮನೆಯವರೆಲ್ಲರೂ ದೀಕ್ಷಾಸ್ನಾನ ಮಾಡಿಸಿಕೊಂಡರು. 34 ಇದಾದ ಮೇಲೆ ಅವನು ಪೌಲ ಸೀಲರನ್ನು ಮನೆಗೆ ಕರೆದೊಯ್ದು ಅವರಿಗೆ ಊಟಮಾಡಿಸಿದನು. ಆ ಜನರೆಲ್ಲರೂ ಪ್ರಭುವಿನಲ್ಲಿ ನಂಬಿಕೆ ಇಟ್ಟದ್ದರಿಂದ ಬಹ ಸಂತೋಷಭರಿತರಾದರು.

35 ಮರುದಿನ ಮುಂಜಾನೆ ನಾಯಕರು ಸೆರೆಮನೆಯ ಅಧಿಕಾರಿಗೆ, “ಈ ಜನರನ್ನು ಬಿಟ್ಟುಬಿಡು!” ಎಂದು ಕೆಲವು ಸೈನಿಕರ ಮೂಲಕ ಹೇಳಿ ಕಳುಹಿಸಿದರು.

36 ಸೆರೆಮನೆಯ ಅಧಿಕಾರಿಯು ಪೌಲನಿಗೆ, “ನಮ್ಮ ನಾಯಕರು ನಿಮ್ಮನ್ನು ಬಿಡುಗಡೆ ಮಾಡಬೇಕೆಂದು ಸೈನಿಕರ ಮೂಲಕ ಹೇಳಿ ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಿರಿ” ಎಂದು ಹೇಳಿದನು.

37 ಆದರೆ ಪೌಲನು, “ನಾವು ಏನು ತಪ್ಪು ಮಾಡಿದ್ದೇವೆಂಬುದನ್ನು ನಿಮ್ಮ ನಾಯಕರು ನಿರೂಪಿಸದೆ ನಮ್ಮನ್ನು ಜನರ ಎದುರಿನಲ್ಲಿ ಹೊಡೆಸಿ ಸೆರೆಮನೆಗೆ ಹಾಕಿಸಿದರು. ನಾವು ರೋಮಿನ ಪ್ರಜೆಗಳು. ಆದ್ದರಿಂದ ನಮಗೂ ಹಕ್ಕುಗಳಿವೆ. ಈಗ ಅವರು ನಮ್ಮನ್ನು ಗೋಪ್ಯವಾಗಿ ಬಿಡುಗಡೆ ಮಾಡಬೇಕೆಂದಿರುವರೇ? ಇಲ್ಲ! ನಾಯಕರೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಬೇಕು!” ಎಂದು ಹೇಳಿದನು.

38 ಆ ಸೈನಿಕರು ನಾಯಕರ ಬಳಿಗೆ ಹೋಗಿ ಪೌಲನು ಹೇಳಿದ್ದನ್ನೆಲ್ಲ ತಿಳಿಸಿದರು. ಪೌಲ ಸೀಲರು ರೋಮಿನ ಪ್ರಜೆಗಳೆಂಬುದನ್ನು ಕೇಳಿದ ಕೂಡಲೇ ನಾಯಕರಿಗೆ ಭಯವಾಯಿತು. 39 ಆದ್ದರಿಂದ ಅವರು ಪೌಲ ಸೀಲರ ಬಳಿಗ ಬಂದು ಕ್ಷಮೆ ಕೇಳಿದರು. ಅಲ್ಲದೆ ಅವರನ್ನು ಸೆರೆಮನೆಯಿಂದ ಹೊರಗೆ ಕರೆದುಕೊಂಡು ಹೋದರು ಮತ್ತು ತಮ್ಮ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಕೇಳಿಕೊಂಡರು. 40 ಆದರೆ ಪೌಲ ಸೀಲರು ಸೆರೆಮನೆಯಿಂದ ಹೊರಟು ಲಿಡಿಯಾಳ ಮನೆಗೆ ಹೋದರು. ಅಲ್ಲಿ ಅವರು ಕೆಲವು ವಿಶ್ವಾಸಿಗಳನ್ನು ಕಂಡು ಅವರನ್ನು ಸಂತೈಸಿದರು. ಬಳಿಕ ಪೌಲ ಸೀಲರು ಅಲ್ಲಿಂದ ಹೊರಟುಹೋದರು.

ಥೆಸಲೋನಿಕದಲ್ಲಿ ಪೌಲ ಸೀಲರು

17 ಪೌಲ ಸೀಲರು ಆಂಫಿಪೊಲಿ ಮತ್ತು ಅಪೊಲೋನಿಯ ಮಾರ್ಗವಾಗಿ ಪ್ರಯಾಣ ಮಾಡಿ ಥೆಸಲೋನಿಕ ಪಟ್ಟಣಕ್ಕೆ ಬಂದರು. ಆ ಪಟ್ಟಣದಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು. ಪೌಲನು ಎಂದಿನಂತೆ ಯೆಹೂದ್ಯರನ್ನು ಭೇಟಿಯಾಗಲು ಈ ಸಭಾಮಂದಿರದೊಳಗೆ ಹೋದನು. ಅವನು ಮೂರು ವಾರಗಳವರೆಗೆ ಪ್ರತಿ ಸಬ್ಬತ್‌ದಿನದಂದು ಯೆಹೂದ್ಯರೊಂದಿಗೆ ಪವಿತ್ರ ಗ್ರಂಥದ ಆಧಾರದೊಡನೆ ಚರ್ಚಿಸಿ ವಿವರಿಸಿದನು. ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಎದ್ದು ಬರಲೇಬೇಕಿತ್ತು ಎಂಬುದನ್ನು ತೋರಿಸಿಕೊಟ್ಟನು. “ನಾನು ನಿಮಗೆ ತಿಳಿಸುತ್ತಿರುವ ಈ ಯೇಸುವೇ ಕ್ರಿಸ್ತನು” ಎಂದು ಪೌಲನು ಸ್ಪಷ್ಟಪಡಿಸಿದನು. ನಿಜದೇವರನ್ನು ಪ್ರೀತಿಸುತ್ತಿದ್ದ ಕೆಲವು ಮಂದಿ ಗ್ರೀಕರು ಮತ್ತು ಕೆಲವು ಮಂದಿ ಪ್ರಮುಖ ಸ್ತ್ರೀಯರು ಅಲ್ಲಿದ್ದರು. ಅವರಲ್ಲಿ ಅನೇಕರಿಗೆ ಮನವರಿಕೆಯಾಗಿ ಪೌಲ ಸೀಲರನ್ನು ಸೇರಿಕೊಂಡರು.

ಆದರೆ ನಂಬದೆಹೋದ ಯೆಹೂದ್ಯರು ಅಸೂಯೆಗೊಂಡರು. ಅವರು ಪಟ್ಟಣದಲ್ಲಿದ್ದ ಕೆಲವು ಕೆಡುಕರಿಗೆ ಹಣಕೊಟ್ಟು ಕರೆದುಕೊಂಡು ಬಂದರು. ಈ ಕೆಡುಕರು ಅನೇಕ ಜನರನ್ನು ಒಟ್ಟುಗೂಡಿಸಿ, ಪಟ್ಟಣದಲ್ಲಿ ಗಲಭೆ ಮಾಡಿದರು. ಜನರು ಪೌಲ ಸೀಲರನ್ನು ಹುಡುಕುತ್ತಾ ಯಾಸೋನನ ಮನೆಗೆ ಹೋದರು. ಅವರು ಪೌಲ ಸೀಲರನ್ನು ಜನರ ಮುಂದೆ ಹೊರಗೆ ಎಳೆದುಕೊಂಡು ಬರಬೇಕೆಂದಿದ್ದರು. ಆದರೆ ಅವರು ಪೌಲ ಸೀಲರನ್ನು ಅಲ್ಲಿ ಕಾಣಲಿಲ್ಲ. ಆದ್ದರಿಂದ ಅವರು ಯಾಸೋನನನ್ನೂ ಕೆಲವು ವಿಶ್ವಾಸಿಗಳನ್ನೂ ನಗರಾಧಿಕಾರಿಗಳ ಮುಂದೆ ಎಳೆದುಕೊಂಡು ಬಂದು, “ಈ ಜನರು (ಪೌಲ ಸೀಲರು) ಪ್ರಪಂಚದ ಎಲ್ಲಾ ಕಡೆಗಳಲ್ಲೂ ಗಲಭೆಯನ್ನು ಉಂಟುಮಾಡಿ ಈಗ ಇಲ್ಲಿಗೂ ಬಂದಿದ್ದಾರೆ! ಯಾಸೋನನು ಇವರನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಇವರೆಲ್ಲರೂ ಸೀಸರನ ಕಾನೂನುಗಳನ್ನು ಉಲ್ಲಂಘಿಸುತ್ತಾರೆ ಮತ್ತು ‘ಯೇಸು’ ಎಂಬ ಮತ್ತೊಬ್ಬ ರಾಜನಿರುವನೆಂದು ಹೇಳುತ್ತಾರೆ” ಎಂದು ಕೂಗಿ ಹೇಳಿದರು.

ಈ ಸಂಗತಿಗಳನ್ನು ಕೇಳಿದ ನಗರಾಧಿಕಾರಿಗಳು ಮತ್ತು ಇತರರು ಬಹು ಗಲಿಬಿಲಿಗೊಂಡರು. ಅವರು ಯಾಸೋನನಿಂದಲೂ ಇತರ ವಿಶ್ವಾಸಿಗಳಿಂದಲೂ ಜಾಮೀನು ತೆಗೆದುಕೊಂಡು ಅವರನ್ನು ಬಿಡುಗಡೆ ಮಾಡಿದರು.

ಪೌಲ ಸೀಲರ ಪ್ರಯಾಣ

10 ಅದೇ ರಾತ್ರಿಯಲ್ಲಿ ವಿಶ್ವಾಸಿಗಳು ಪೌಲ ಸೀಲರನ್ನು ಬೆರೋಯ ಎಂಬ ಮತ್ತೊಂದು ಪಟ್ಟಣಕ್ಕೆ ಕಳುಹಿಸಿದರು. ಬೆರೋಯದಲ್ಲಿ ಪೌಲ ಸೀಲರು ಯೆಹೂದ್ಯರ ಸಭಾಮಂದಿರಕ್ಕೆ ಹೋದರು. 11 ಈ ಯೆಹೂದ್ಯರು ಥೆಸಲೋನಿಕದ ಯೆಹೂದ್ಯರಿಗಿಂತಲೂ ಉತ್ತಮರಾಗಿದ್ದರು. ಪೌಲ ಸೀಲರು ಹೇಳಿದ ಸಂಗತಿಗಳನ್ನು ಇವರು ಬಹಳ ಸಂತೋಷದಿಂದ ಕೇಳಿದರು. ಮತ್ತು ಈ ಸಂಗತಿಗಳು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಪವಿತ್ರ ಗ್ರಂಥವನ್ನು ಪ್ರತಿದಿನವೂ ಅಧ್ಯಯನ ಮಾಡಿದರು. 12 ಈ ಯೆಹೂದ್ಯರಲ್ಲಿ ಅನೇಕರು ನಂಬಿದರು. ಅತಿ ಪ್ರಮುಖರಾದ ಗ್ರೀಕ್ ಸ್ತ್ರೀಯರು ಮತ್ತು ಪುರುಷರು ನಂಬಿಕೊಂಡರು.

13 ಆದರೆ ಪೌಲನು ಬೆರೋಯದಲ್ಲಿ ದೇವರ ವಾಕ್ಯವನ್ನು ಹೇಳುತ್ತಿದ್ದಾನೆ ಎಂಬ ವಾರ್ತೆಯನ್ನು ಕೇಳಿದ ಥೆಸಲೋನಿಕದ ಯೆಹೂದ್ಯರು ಬೆರೋಯಕ್ಕೂ ಬಂದು ಅಲ್ಲಿಯ ಜನರನ್ನು ಗಲಿಬಿಲಿಗೊಳಿಸಿ ಗಲಭೆ ಮಾಡಿದರು. 14 ಆದ್ದರಿಂದ ವಿಶ್ವಾಸಿಗಳು ಪೌಲನನ್ನು ಸಮುದ್ರತೀರಕ್ಕೆ ಆ ಕೂಡಲೇ ಕಳುಹಿಸಿದರು. ಆದರೆ ಸೀಲ ತಿಮೊಥೆಯರು ಬೆರೋಯದಲ್ಲಿ ಉಳಿದುಕೊಂಡರು. 15 ಪೌಲನೊಂದಿಗೆ ಹೋದ ವಿಶ್ವಾಸಿಗಳು ಅವನನ್ನು ಅಥೆನ್ಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಈ ಸಹೋದರರು ಪೌಲನಿಂದ ಸೀಲ ತಿಮೊಥೆಯರಿಗೆ ಒಂದು ಸಂದೇಶವನ್ನು ತೆಗೆದುಕೊಂಡು ಹಿಂತಿರುಗಿ ಬಂದರು. “ಸಾಧ್ಯವಾದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ” ಎಂಬುದೇ ಆ ಸಂದೇಶ.

ಅಥೆನ್ಸಿನಲ್ಲಿ ಪೌಲನು

16 ಪೌಲನು ಅಥೆನ್ಸಿನಲ್ಲಿ ಸೀಲ ತಿಮೊಥೆಯರಿಗಾಗಿ ಎದುರು ನೋಡುತ್ತಿದ್ದನು. ಆ ಪಟ್ಟಣದ ಎಲ್ಲೆಲ್ಲಿಯೂ ವಿಗ್ರಹಗಳಿರುವುದನ್ನು ಕಂಡು ಅವನ ಮನಸ್ಸು ನೊಂದುಹೋಯಿತು. 17 ಸಭಾಮಂದಿರದಲ್ಲಿ ಪೌಲನು ಯೆಹೂದ್ಯರೊಂದಿಗೆ ಮತ್ತು ಯೆಹೂದ್ಯರಾಗಿದ್ದ ಗ್ರೀಕರೊಂದಿಗೆ ಚರ್ಚಿಸಿದನು. ಪಟ್ಟಣದ ವ್ಯಾಪಾರಸ್ಥಳದಲ್ಲಿಯೂ ಪೌಲನು ಕೆಲವು ಜನರೊಂದಿಗೆ ಪ್ರತಿದಿನ ಚರ್ಚಿಸಿದನು. 18 ಎಪಿಕೊರಿಯಾ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರಲ್ಲಿ ಕೆಲವರು ಅವನೊಂದಿಗೆ ವಾದಿಸಿದರು.

ಅವರಲ್ಲಿ ಕೆಲವರು, “ಈ ಮನುಷ್ಯನಿಗೆ ತಾನು ಯಾವುದರ ಬಗ್ಗೆ ಮಾತಾಡುತ್ತಿದ್ದೇನೆ ಎಂಬುದೇ ನಿಜವಾಗಿಯೂ ತಿಳಿದಿಲ್ಲ. ಅವನು ಏನು ಹೇಳಲು ಪ್ರಯತ್ನಿಸುತ್ತಿದ್ದಾನೆ?” ಎಂದರು. ಯೇಸುವು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದಿದ್ದಾನೆ ಎಂಬ ಸುವಾರ್ತೆಯನ್ನು ಪೌಲನು ಅವರಿಗೆ ಹೇಳುತ್ತಿದ್ದನು. ಆದ್ದರಿಂದ ಅವರು, “ಕೆಲವು ಬೇರೆ ದೇವರುಗಳ ಬಗ್ಗೆ ಅವನು ನಮಗೆ ಹೇಳುತ್ತಿರುವಂತೆ ತೋರುತ್ತಿದೆ” ಎಂದರು.

19 ಅವರು ಪೌಲನನ್ನು ಅರಿಯೊಪಾಗ ನ್ಯಾಯಸಭೆಗೆ ಕರೆದುಕೊಂಡು ಹೋದರು. ಅವರು ಅವನಿಗೆ, “ನೀನು ಉಪದೇಶಿಸುತ್ತಿರುವ ಹೊಸ ತತ್ವವನ್ನು ದಯವಿಟ್ಟು ನಮಗೆ ವಿವರಿಸು. 20 ನೀನು ಹೇಳುತ್ತಿರುವ ಸಂಗತಿಗಳು ನಮಗೆ ಹೊಸದಾಗಿವೆ. ನಾವು ಹಿಂದೆಂದೂ ಈ ಸಂಗತಿಗಳನ್ನು ಕೇಳಿಲ್ಲ. ಈ ಉಪದೇಶದ ಅರ್ಥವನ್ನು ನಾವು ತಿಳಿದುಕೊಳ್ಳ ಬಯಸುತ್ತೇವೆ” ಎಂದು ಹೇಳಿದರು. 21 (ಅಥೆನ್ಸಿನ ಎಲ್ಲಾ ಜನರು ಮತ್ತು ಅಲ್ಲಿ ವಾಸವಾಗಿದ್ದ ಬೇರೆ ದೇಶಗಳವರು ಹೊಸ ಆಲೋಚನೆಗಳ ಬಗ್ಗೆ ಮಾತಾಡುವುದಕ್ಕೂ ಕೇಳುವುದಕ್ಕೂ ಬಹಳ ಇಷ್ಟಪಡುತ್ತಿದ್ದರು.)

22 ಆಗ ಪೌಲನು ಅರಿಯೊಪಾಗ ನ್ಯಾಯಸಭೆಯ ಮುಂದೆ ನಿಂತುಕೊಂಡು ಹೀಗೆಂದನು: “ಅಥೆನ್ಸಿನ ಜನರೇ, ನೀವು ಎಲ್ಲಾ ಸಂಗತಿಗಳಲ್ಲೂ ಬಹು ಧಾರ್ಮಿಕರೆಂದು ನನಗೆ ತೋರುತ್ತದೆ. 23 ನಾನು ನಿಮ್ಮ ಪಟ್ಟಣದಲ್ಲಿ ನಡೆದು ಹೋಗುವಾಗ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಕಂಡೆನು. ಒಂದು ಯಜ್ಞವೇದಿಕೆಯ ಮೇಲೆ, ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು. ನಿಮಗೆ ಗೊತ್ತಿಲ್ಲದ ದೇವರನ್ನು ನೀವು ಆರಾಧಿಸುತ್ತಿದ್ದೀರಿ.

24 “ದೇವರ ಬಗ್ಗೆಯೇ ನಾನು ನಿಮಗೆ ಹೇಳುತ್ತಿದ್ದೇನೆ! ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಪ್ರತಿಯೊಂದನ್ನು ಸೃಷ್ಟಿಮಾಡಿದಾತನೇ ಆ ದೇವರು. ಆತನೇ ಭೂಮ್ಯಾಕಾಶಗಳ ಒಡೆಯನು. ಮನುಷ್ಯರು ನಿರ್ಮಿಸುವ ಗುಡಿಗಳಲ್ಲಿ ಆತನು ಜೀವಿಸುವವನಲ್ಲ. 25 ಮನುಷ್ಯರಿಗೆ ಜೀವವನ್ನೂ ಉಸಿರನ್ನೂ ಸಮಸ್ತವನ್ನೂ ಕೊಡುವಾತನು ಆ ದೇವರೇ. ಆತನಿಗೆ ಜನರ ಸೇವೆಯ ಅಗತ್ಯವೇನೂ ಇಲ್ಲ. ಆತನಿಗೆ ಕೊರತೆಯೆಂಬುದೂ ಇಲ್ಲ. 26 ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.

27 “ಜನರು ತನ್ನನ್ನು ಹುಡುಕಬೇಕೆಂಬುದು ದೇವರ ಉದ್ದೇಶವಾಗಿತ್ತು. ತನಗಾಗಿ ಸುತ್ತಮುತ್ತಲೆಲ್ಲಾ ಹುಡುಕಿ ಕಂಡುಕೊಳ್ಳಬಹುದೆಂದು ದೇವರು ಹಾಗೆ ಮಾಡಿದನು. ಆದರೆ ಆತನು ನಮ್ಮಲ್ಲಿ ಯಾರಿಗೂ ಬಹುದೂರವಾಗಿಲ್ಲ. 28 ನಾವು ಆತನೊಂದಿಗೆ ವಾಸಿಸುತ್ತೇವೆ, ನಡೆಯುತ್ತೇವೆ, ಇರುತ್ತೇವೆ. ನಿಮ್ಮವರೇ ಆದ ಕೆಲವು ಲೇಖಕರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.

29 “ನಾವು ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜನರು ಊಹಿಸಿಕೊಳ್ಳುವ ರೀತಿಯಲ್ಲಾಗಲಿ ನಿರ್ಮಿಸುವ ರೀತಿಯಲ್ಲಾಗಲಿ ದೇವರಿದ್ದಾನೆಂದು ನೀವು ಯೋಚಿಸಕೂಡದು. ಆತನು ಬೆಳ್ಳಿಬಂಗಾರ ಮತ್ತು ಕಲ್ಲುಗಳ ರೂಪದಲ್ಲಿಲ್ಲ. 30 ಹಿಂದಿನ ಕಾಲದಲ್ಲಿ ಜನರು ದೇವರನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ದೇವರು ಅದಕ್ಕೆ ಲಕ್ಷ್ಯಕೊಡಲಿಲ್ಲ. ಈಗಲಾದರೋ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವವರು ಪಶ್ಚಾತ್ತಾಪಪಡಬೇಕೆಂದು ಆತನು ಆಜ್ಞಾಪಿಸುತ್ತಾನೆ. 31 ಪ್ರಪಂಚದ ಜನರೆಲ್ಲರಿಗೂ ನ್ಯಾಯತೀರಿಸುವುದಕ್ಕಾಗಿ ದೇವರು ಒಂದು ದಿನವನ್ನು ಗೊತ್ತುಪಡಿಸಿದ್ದಾನೆ. ಅಂದು ನ್ಯಾಯತೀರಿಸುವುದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನು ಬಹುಕಾಲದ ಹಿಂದೆಯೇ ಆರಿಸಿಕೊಂಡಿದ್ದಾನೆ. ಇದನ್ನು ಎಲ್ಲರಿಗೂ ಖಚಿತಪಡಿಸುವುದಕ್ಕಾಗಿ ಆ ವ್ಯಕ್ತಿಯನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾನೆ.”

32 ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ ಎಂಬ ಸಂಗತಿಯನ್ನು ಕೇಳಿದ ಆ ಜನರಲ್ಲಿ ಕೆಲವರು ಅಪಹಾಸ್ಯಮಾಡಿದರು. ಇತರರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ” ಎಂದು ಹೇಳಿದರು. 33 ಆದ್ದರಿಂದ ಪೌಲನು ಅವರ ಬಳಿಯಿಂದ ಹೊರಟುಹೋದನು. 34 ಆದರೆ ಆ ಜನರಲ್ಲಿ ಕೆಲವರು ಪೌಲನನ್ನು ನಂಬಿ ಅವನನ್ನು ಸೇರಿಕೊಂಡರು. ನಂಬಿದ ಜನರಲ್ಲಿ ಅರಿಯೊಪಾಗ ನ್ಯಾಯಸಭೆಯ ಸದಸ್ಯನಾದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International