Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 14-15

ಇಕೋನಿಯಾದಲ್ಲಿ ಪೌಲ ಮತ್ತು ಬಾರ್ನಬ

14 ಪೌಲ ಬಾರ್ನಬರು ಇಕೋನಿಯಾ ಪಟ್ಟಣಕ್ಕೆ ಹೋದರು. (ಪ್ರತಿಯೊಂದು ಪಟ್ಟಣದಲ್ಲಿಯೂ ಅವರು ಮಾಡುತ್ತಿದ್ದಂತೆ) ಇಲ್ಲಿಯೂ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಜನರಿಗೆ ಬೋಧಿಸಿದರು. ಪೌಲ ಬಾರ್ನಬರ ಅಮೋಘ ಬೋಧನೆಯನ್ನು ಕೇಳಿ ಅನೇಕ ಯೆಹೂದ್ಯರು ಮತ್ತು ಗ್ರೀಕರು ನಂಬಿಕೊಂಡರು. ಆದರೆ ಯೆಹೂದ್ಯರಲ್ಲಿ ನಂಬದೆ ಹೋದ ಕೆಲವರು ಯೆಹೂದ್ಯರಲ್ಲದವರನ್ನು ಪ್ರಚೋಧಿಸಿ ಸಹೋದರರ ವಿರುದ್ಧ ಜನರನ್ನು ಎಬ್ಬಿಸಿದರು.

ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು. ಆದರೆ ಪಟ್ಟಣದ ಜನರಲ್ಲಿ ಕೆಲವರು ಯೆಹೂದ್ಯರ ಮಾತನ್ನೂ ಇನ್ನು ಕೆಲವರು ಪೌಲ ಬಾರ್ನಬರ ಮಾತನ್ನೂ ನಂಬಿಕೊಂಡದ್ದರಿಂದ ಅವರಲ್ಲಿಯೇ ಎರಡು ಪಂಗಡವಾಯಿತು.

ಯೆಹೂದ್ಯರಲ್ಲದವರಲ್ಲಿ ಮತ್ತು ಯೆಹೂದ್ಯರಲ್ಲಿ ಕೆಲವರು ತಮ್ಮ ನಾಯಕರೊಡನೆ ಸೇರಿಕೊಂಡು ಪೌಲ ಬಾರ್ನಬರನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ಇದನ್ನು ಅರಿತುಕೊಂಡ ಪೌಲ ಬಾರ್ನಬರು ಆ ಪಟ್ಟಣವನ್ನು ಬಿಟ್ಟು ಲುಕವೋನಿಯಾದ ಪಟ್ಟಣಗಳಾದ ಲುಸ್ತ್ರ ಮತ್ತು ದರ್ಬೆಗಳಿಗೂ ಹಾಗೂ ಆ ಪಟ್ಟಣಗಳ ಸುತ್ತಮುತ್ತಲಿದ್ದ ಪ್ರದೇಶಗಳಿಗೂ ಹೋದರು. ಅವರು ಅಲ್ಲಿಯೂ ಸುವಾರ್ತೆ ತಿಳಿಸಿದರು.

ಲುಸ್ತ್ರ ಮತ್ತು ದರ್ಬೆಗಳಲ್ಲಿ ಪೌಲನು

ಲುಸ್ತ್ರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಕಾಲುಗಳಲ್ಲಿ ಬಲವಿರಲಿಲ್ಲ. ಹುಟ್ಟುಕುಂಟನಾಗಿದ್ದ ಅವನು ಎಂದೂ ನಡೆದಿರಲಿಲ್ಲ. ಈ ಮನುಷ್ಯನು ತಾನು ಕುಳಿತಲ್ಲೇ ಪೌಲನ ಮಾತನ್ನು ಆಲಿಸುತ್ತಿದ್ದನು. ಪೌಲನು ಅವನನ್ನು ದೃಷ್ಟಿಸಿ ನೋಡಿದನು. ದೇವರು ಗುಣಪಡಿಸಬಲ್ಲನೆಂಬ ನಂಬಿಕೆ ಅವನಲ್ಲಿರುವುದನ್ನು ಪೌಲನು ಕಂಡು, 10 ಅವನಿಗೆ, “ಎದ್ದೇಳು, ಕಾಲೂರಿ ನಿಂತುಕೊ!” ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಆ ಮನುಷ್ಯನು ಜಿಗಿದುನಿಂತು ನಡೆಯಲಾರಂಭಿಸಿದನು.

11 ಪೌಲನು ಮಾಡಿದ ಈ ಕಾರ್ಯವನ್ನು ಕಂಡ ಜನರು ತಮ್ಮ ಸ್ವಂತ ಲುಕವೋನಿಯ ಭಾಷೆಯಲ್ಲಿ “ದೇವರುಗಳು ಮನುಷ್ಯರೂಪ ಧರಿಸಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಎಂದು ಆರ್ಭಟಿಸಿದರು. 12 ಜನರು ಬಾರ್ನಬನನ್ನು “ಜೆಯುಸ್”[a] ದೇವರೆಂದೂ ಮುಖ್ಯ ಬೋಧಕನಾಗಿದ್ದ ಪೌಲನನ್ನು “ಹೆರ್ಮೆ”[b] ದೇವರೆಂದೂ ಕರೆದರು. 13 ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.

14 ಇದನ್ನು ಕೇಳಿದ ಪೌಲ ಬಾರ್ನಬರು ತಮ್ಮ ಬಟ್ಟೆಗಳನ್ನು ಹರಿದುಕೊಂಡು[c] ಜನಸಮೂಹದೊಳಕ್ಕೆ ಓಡಿಹೋಗಿ ಹೀಗೆಂದು ಕೂಗಿ ಹೇಳಿದರು: 15 “ಜನರೇ, ನೀವು ಈ ಕಾರ್ಯಗಳನ್ನು ಮಾಡುತ್ತಿರುವುದೇಕೆ? ನಾವು ದೇವರುಗಳಲ್ಲ. ನಾವು ನಿಮ್ಮಂತೆ ಕೇವಲ ಮನುಷ್ಯರು. ನಿಮಗೆ ಸುವಾರ್ತೆಯನ್ನು ಹೇಳುವುದಕ್ಕಾಗಿ ನಾವು ಬಂದೆವು. ವ್ಯರ್ಥವಾದ ಈ ಕಾರ್ಯಗಳನ್ನು ನೀವು ಬಿಟ್ಟುಬಿಡಿರಿ; ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಅವುಗಳಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಮಾಡಿದಾತನು ಆತನೇ.

16 “ಹಿಂದಿನ ಕಾಲದಲ್ಲಿ ದೇವರು ಎಲ್ಲಾ ಜನಾಂಗಗಳನ್ನು ಅವುಗಳ ಇಷ್ಟಕ್ಕನುಸಾರವಾಗಿ ನಡೆಯಲು ಬಿಟ್ಟುಕೊಟ್ಟನು. 17 ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”

18 ಪೌಲ ಬಾರ್ನಬರು ಇಷ್ಟೆಲ್ಲಾ ಹೇಳಿದರೂ ಯಜ್ಞವರ್ಪಿಸಿ ಆರಾಧಿಸದಂತೆ ಜನರನ್ನು ತಡೆಯಲು ಬಹಳ ಪ್ರಯಾಸಪಡಬೇಕಾಯಿತು.

19 ಬಳಿಕ ಕೆಲವು ಯೆಹೂದ್ಯರು ಅಂತಿಯೋಕ್ಯದಿಂದ ಮತ್ತು ಇಕೋನಿಯದಿಂದ ಬಂದು ಪೌಲನಿಗೆ ವಿರೋಧವಾಗಿ ಜನರನ್ನು ಹುರಿದುಂಬಿಸಿ ಪೌಲನಿಗೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಹಾಕಿದರು. 20 ಆದರೆ, ಯೇಸುವಿನ ಶಿಷ್ಯರು ಅವನ ಸುತ್ತಲೂ ನೆರೆದು ಬಂದಾಗ ಅವನು ಎದ್ದು ಪಟ್ಟಣದೊಳಗೆ ಹೋದನು. ಮರುದಿನ ಅವನು ಮತ್ತು ಬಾರ್ನಬನು ದರ್ಬೆಪಟ್ಟಣಕ್ಕೆ ಹೋದರು.

ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ

21 ಪೌಲ ಬಾರ್ನಬರು ದರ್ಬೆ ಪಟ್ಟಣದಲ್ಲೂ ಸುವಾರ್ತೆಯನ್ನು ತಿಳಿಸಿದರು. ಅನೇಕ ಜನರು ಯೇಸುವಿನ ಶಿಷ್ಯರಾದರು. ಪೌಲಬಾರ್ನಬರು ಲುಸ್ತ್ರ, ಇಕೋನಿಯ ಮತ್ತು ಅಂತಿಯೋಕ್ಯ ಪಟ್ಟಣಗಳಿಗೆ ಹಿಂತಿರುಗಿ, 22 ಯೇಸುವಿನ ಶಿಷ್ಯರನ್ನು ಬಲಗೊಳಿಸಿ, ನಂಬಿಕೆಯಲ್ಲಿ ದೃಢವಾಗಿರಲು ಅವರಿಗೆ ಪ್ರೋತ್ಸಾಹಿಸಿದರು, “ನಾವು ದೇವರ ರಾಜ್ಯಕ್ಕೆ ಅನೇಕ ಕಷ್ಟಗಳ ಮೂಲಕ ಹೋಗಬೇಕಾಗಿದೆ” ಎಂದು ಬೋಧಿಸಿದರು. 23 ಪೌಲ ಬಾರ್ನಬರು ಪ್ರತಿಯೊಂದು ಸಭೆಗೂ ಹಿರಿಯರನ್ನು ಆಯ್ಕೆ ಮಾಡಿದರು. ಅವರು ಈ ಹಿರಿಯರಿಗೋಸ್ಕರ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರನ್ನು ಪ್ರಭುವಿನ ಕೈಗೆ ಒಪ್ಪಿಸಿಕೊಟ್ಟರು.

24 ಪೌಲ ಬಾರ್ನಬರು ಪಿಸಿದಿಯ ನಾಡಿನ ಮೂಲಕವಾಗಿ ಪಾಂಫೀಲಿಯ ನಾಡಿಗೆ ಬಂದರು. 25 ಅವರು ದೇವರ ಸಂದೇಶವನ್ನು ಪೆರ್ಗ ಪಟ್ಟಣದಲ್ಲಿ ಬೋಧಿಸಿ, ಅಲ್ಲಿಂದ ಅತ್ತಾಲಿಯ ಪಟ್ಟಣಕ್ಕೆ ಬಂದರು. 26 ಅಲ್ಲಿಂದ ಅವರು ಸಿರಿಯಾದ ಅಂತಿಯೋಕ್ಯಕ್ಕೆ ನೌಕಾಯಾನ ಮಾಡಿದರು. ಈವರೆಗೆ ಮಾಡಿಮುಗಿಸಿದ್ದ ಸೇವಾಕಾರ್ಯಕ್ಕಾಗಿ ದೇವರ ಕೈಗೆ ಒಪ್ಪಿಸಿ ಕಳುಹಿಸಿಕೊಟ್ಟಿದ್ದವರು ಈ ಪಟ್ಟಣದ ವಿಶ್ವಾಸಿಗಳೇ.

27 ಪೌಲ ಬಾರ್ನಬರು ಇಲ್ಲಿಗೆ ತಲುಪಿದಾಗ, ಸಭಿಕರನ್ನೆಲ್ಲ ಒಟ್ಟುಗೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸಿದರು. ಮತ್ತು “ಇತರ ಜನಾಂಗಗಳವರು ಸಹ ನಂಬಿಕೊಳ್ಳುವಂತೆ ದೇವರು ಬಾಗಿಲನ್ನು ತೆರೆದಿದ್ದಾನೆ!” ಎಂದು ವಿವರಿಸಿದರು. 28 ಅಲ್ಲಿ ಪೌಲಬಾರ್ನಬರು ಯೇಸುವಿನ ಶಿಷ್ಯರೊಂದಿಗೆ ಬಹುಕಾಲ ಇದ್ದರು.

ಜೆರುಸಲೇಮಿನಲ್ಲಿ ಸಮ್ಮೇಳನ

15 ಬಳಿಕ ಕೆಲವು ಜನರು ಜುದೇಯದಿಂದ ಅಂತಿಯೋಕ್ಯಕ್ಕೆ ಬಂದರು. “ನೀವು ಸುನ್ನತಿ ಮಾಡಿಸಿಕೊಳ್ಳದಿದ್ದರೆ ನಿಮಗೆ ರಕ್ಷಣೆಯಾಗುವುದಿಲ್ಲ. ಸುನ್ನತಿ ಮಾಡಿಸಿಕೊಳ್ಳಬೇಕೆಂದು ಮೋಶೆಯೇ ಹೇಳಿದ್ದಾನೆ” ಎಂದು ಅವರು ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಉಪದೇಶಿಸತೊಡಗಿದರು. ಪೌಲ ಬಾರ್ನಬರು ಈ ಉಪದೇಶಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಅವರೊಂದಿಗೆ ವಾದ ಮಾಡಿದರು. ಈ ಸಮಸ್ಯೆಯ ಬಗ್ಗೆ ಅಪೊಸ್ತಲರೊಡನೆ ಮತ್ತು ಹಿರಿಯರೊಡನೆ ಚರ್ಚಿಸಲು ಪೌಲ ಬಾರ್ನಬರನ್ನು ಮತ್ತು ಇತರ ಕೆಲವರನ್ನು ಜೆರುಸಲೇಮಿಗೆ ಕಳುಹಿಸಲು ಸಭೆ ನಿರ್ಧರಿಸಿತು.

ಅಂತೆಯೇ ಸಭೆಯು ಇವರನ್ನು ಕಳುಹಿಸಿತು. ಇವರು ಫೆನಿಷ್ಯ ಮತ್ತು ಸಮಾರ್ಯದ ಮಾರ್ಗವಾಗಿ ಪ್ರಯಾಣಮಾಡಿದರು. ಯೆಹೂದ್ಯರಲ್ಲದ ಜನರು ನಿಜದೇವರ ಕಡೆಗೆ ತಿರುಗಿಕೊಂಡಿದ್ದರ ಬಗ್ಗೆ ಈ ನಾಡುಗಳಲ್ಲಿ ವಿವರಿಸಿದರು. ಇದನ್ನು ಕೇಳಿ ಸಹೋದರರಿಗೂ ಬಹಳ ಸಂತೋಷವಾಯಿತು. ಪೌಲ ಬಾರ್ನಬರು ಮತ್ತು ಇತರರು ಜೆರುಸಲೇಮನ್ನು ತಲುಪಿದರು. ಅಪೊಸ್ತಲರು, ಹಿರಿಯರು ಮತ್ತು ಸಭೆಯವರು ಇವರನ್ನು ಸ್ವಾಗತಿಸಿದರು. ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಮತ್ತು ಇತರರು ವಿವರಿಸಿದರು. ಜೆರುಸಲೇಮಿನಲ್ಲಿದ್ದ ವಿಶ್ವಾಸಿಗಳಲ್ಲಿ ಕೆಲವರು ಫರಿಸಾಯರ ಗುಂಪಿಗೆ ಸೇರಿದವರಾಗಿದ್ದರು. ಅವರು ಎದ್ದು ನಿಂತುಕೊಂಡು, “ಯೆಹೂದ್ಯರಲ್ಲದ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳಬೇಕು. ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯರಾಗಬೇಕೆಂದು ನಾವು ಅವರಿಗೆ ಹೇಳಬೇಕು!” ಎಂದರು.

ಬಳಿಕ, ಅಪೊಸ್ತಲರು ಮತ್ತು ಹಿರಿಯರು ಈ ಸಮಸ್ಯೆಯನ್ನು ಪರಿಶೀಲಿಸಲು ಸೇರಿಬಂದರು. ದೀರ್ಘಚರ್ಚೆಯಾಯಿತು. ಬಳಿಕ ಪೇತ್ರ ಎದ್ದುನಿಂತು ಅವರಿಗೆ, “ನನ್ನ ಸಹೋದರರೇ, ನಿಮಗೇ ತಿಳಿದಿರುವಂತೆ, ಯೆಹೂದ್ಯರಲ್ಲದ ಜನರಿಗೆ ಸುವಾರ್ತೆಯನ್ನು ಬೋಧಿಸುವುದಕ್ಕಾಗಿ ನಿಮ್ಮ ಮಧ್ಯದೊಳಗಿಂದ ದೇವರು ನನ್ನನ್ನು ಬಹುದಿನಗಳ ಹಿಂದೆ ಆರಿಸಿಕೊಂಡನು. ಅವರು ನನ್ನಿಂದ ಸುವಾರ್ತೆಯನ್ನು ಕೇಳಿ ನಂಬಿಕೊಂಡರು. ಎಲ್ಲಾ ಜನರ ಆಲೋಚನೆಗಳನ್ನು ಬಲ್ಲ ದೇವರು ಯೆಹೂದ್ಯರಲ್ಲದ ಜನರನ್ನೂ ಸ್ವೀಕರಿಸಿಕೊಂಡನು. ದೇವರು ನಮಗೆ ಪವಿತ್ರಾತ್ಮನನ್ನು ಕೊಟ್ಟಂತೆಯೇ ಅವರಿಗೂ ಪವಿತ್ರಾತ್ಮನನ್ನು ಕೊಟ್ಟು ಇದನ್ನು ರುಜುವಾತುಪಡಿಸಿದ್ದಾನೆ. ದೇವರ ದೃಷ್ಟಿಯಲ್ಲಿ ಅವರಿಗೂ ನಮಗೂ ಯಾವ ವ್ಯತ್ಯಾಸವಿಲ್ಲ. ಅವರು ನಂಬಿಕೊಂಡಾಗ, ದೇವರು ಅವರ ಹೃದಯಗಳನ್ನು ಶುದ್ಧೀಕರಿಸಿದನು. 10 ಹೀಗಿರಲಾಗಿ, ಯೆಹೂದ್ಯರಲ್ಲದ ಸಹೋದರರ ಹೆಗಲ ಮೇಲೆ ಭಾರವಾದ ಹೊರೆಯನ್ನು[d] ಯಾಕೆ ಹೊರಿಸುತ್ತೀರಿ? ನೀವು ದೇವರನ್ನು ಸಿಟ್ಟಿಗೆಬ್ಬಿಸಲು ಪ್ರಯತ್ನಿಸುತ್ತಿದ್ದೀರಾ? ನಮಗಾಗಲಿ ನಮ್ಮ ಪಿತೃಗಳಿಗಾಗಲಿ ಈ ಹೊರೆಯನ್ನು ಹೊರವಷ್ಟು ಶಕ್ತಿ ಇರಲಿಲ್ಲ! 11 ಆದ್ದರಿಂದ ನಾವಾಗಲಿ ಇವರಾಗಲಿ ರಕ್ಷಣೆ ಹೊಂದುವುದು ಪ್ರಭುವಾದ ಯೇಸುವಿನ ಕೃಪೆಯಿಂದಲೇ ಎಂದು ನಾವು ನಂಬುತ್ತೇವೆ!” ಎಂದನು.

12 ಆಗ ಇಡೀ ಸಭೆಯು ಮೌನವಾಯಿತು. ಅವರು ಪೌಲ ಬಾರ್ನಬರಿಗೆ ಕಿವಿಗೊಟ್ಟರು. ಯೆಹೂದ್ಯರಲ್ಲದ ಜನರ ಮಧ್ಯದಲ್ಲಿ ದೇವರು ತಮ್ಮ ಮೂಲಕವಾಗಿ ಮಾಡಿದ ಎಲ್ಲಾ ಅದ್ಭುತಕಾರ್ಯಗಳ ಮತ್ತು ಸೂಚಕಕಾರ್ಯಗಳ ಬಗ್ಗೆ ಪೌಲ ಬಾರ್ನಬರು ಹೇಳಿದರು. 13 ಬಳಿಕ ಯಾಕೋಬನು, “ನನ್ನ ಸಹೋದರರೇ, ನನಗೆ ಕಿವಿಗೊಡಿರಿ. 14 ಯೆಹೂದ್ಯರಲ್ಲದ ಜನರಿಗೆ ದೇವರು ತನ್ನ ಪ್ರೀತಿಯನ್ನು ಹೇಗೆ ತೋರಿಸಿದ್ದಾನೆಂದು ಸೀಮೋನನು ನಮಗೆ ತಿಳಿಸಿದ್ದಾನೆ. ಮೊಟ್ಟಮೊದಲ ಬಾರಿಗೆ, ದೇವರು ಯೆಹೂದ್ಯರಲ್ಲದ ಜನರನ್ನು ಸ್ವೀಕರಿಸಿಕೊಂಡನು. ಅವರನ್ನು ತನ್ನ ಜನರನ್ನಾಗಿ ಮಾಡಿಕೊಂಡನು. 15 ಪ್ರವಾದಿಗಳ ಮಾತುಗಳು ಸಹ ಇದಕ್ಕೆ ಸಾಮರಸ್ಯವಾಗಿವೆ:

16 ‘ಇದಾದನಂತರ ನಾನು ಹಿಂತಿರುಗುವೆನು.
    ನಾನು ದಾವೀದನ ಮನೆಯನ್ನು ಮತ್ತೆ ಕಟ್ಟುವೆನು.
    ಅದು ಬಿದ್ದುಹೋಗಿದೆ.
ಆದರೆ ಕೆಡವಲ್ಪಟ್ಟ ಅವನ ಮನೆಯ ಚೂರುಗಳನ್ನು ನಾನು ಮತ್ತೆ ಒಂದುಗೂಡಿಸುವೆನು.
    ನಾನು ಅವನ ಮನೆಯನ್ನು ಹೊಸದು ಮಾಡುವೆನು.
17 ಬಳಿಕ ಇತರ ಜನರೆಲ್ಲರೂ ಪ್ರಭುವಿಗಾಗಿ ಹುಡುಕುವರು.
    ಯೆಹೂದ್ಯರಲ್ಲದ ಜನರೆಲ್ಲರೂ ಸಹ ನನ್ನ ಜನರೇ ಆಗಿದ್ದಾರೆ.
ಪ್ರಭುವೇ ಇದನ್ನು ಹೇಳಿದ್ದಾನೆ.
    ಈ ಕಾರ್ಯಗಳನ್ನೆಲ್ಲ ಮಾಡುವವನು ಆತನೇ.’(A)

18 ‘ಆದಿಯಿಂದಲೂ ಈ ಕಾರ್ಯಗಳನ್ನು ತಿಳಿಯಪಡಿಸಲಾಗಿದೆ.’[e]

19 “ಆದ್ದರಿಂದ, ದೇವರ ಕಡೆಗೆ ತಿರುಗಿಕೊಂಡ ಯೆಹೂದ್ಯರಲ್ಲದ ಸಹೋದರರಿಗೆ ನಾವು ತೊಂದರೆ ಕೊಡಬಾರದು. 20 ಅದಕ್ಕೆ ಬದಲಾಗಿ ನಾವು ಅವರಿಗೆ ಒಂದು ಪತ್ರವನ್ನು ಬರೆದು ಈ ವಿಷಯಗಳನ್ನು ತಿಳಿಸೋಣ:

ವಿಗ್ರಹಗಳಿಗೆ ಅರ್ಪಿಸಿದ ಆಹಾರವನ್ನು ತಿನ್ನಬೇಡಿರಿ. (ಈ ಆಹಾರ ಅಶುದ್ಧವಾದದ್ದು.)

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ. ರಕ್ತವನ್ನು ತಿನ್ನಬೇಡಿ.

ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

21 ಅವರು ಇವುಗಳನ್ನು ಮಾಡಕೂಡದು. ಏಕೆಂದರೆ ಮೋಶೆಯ ಧರ್ಮಶಾಸ್ತ್ರವನ್ನು ಬೋಧಿಸುವಂಥ ಜನರು ಪ್ರತಿಯೊಂದು ಪಟ್ಟಣದಲ್ಲಿ ಇನ್ನೂ ಇದ್ದಾರೆ. ಅನೇಕ ವರ್ಷಗಳಿಂದ ಪ್ರತಿ ಸಬ್ಬತ್ ದಿನದಲ್ಲಿ ಮೋಶೆಯ ಮಾತುಗಳನ್ನು ಓದಲಾಗುತ್ತಿದೆ” ಎಂದು ಹೇಳಿದನು.

ಯೆಹೂದ್ಯರಲ್ಲದ ವಿಶ್ವಾಸಿಗಳಿಗೆ ಪತ್ರ

22 ಅಪೊಸ್ತಲರು, ಹಿರಿಯರು ಮತ್ತು ಇಡೀ ಸಭೆಯವರು ಪೌಲ ಬಾರ್ನಬರೊಂದಿಗೆ ಕೆಲವು ಜನರನ್ನು ಅಂತಿಯೋಕ್ಯಕ್ಕೆ ಕಳುಹಿಸಬಯಸಿದರು. ತಮ್ಮವರೇ ಆದ ಕೆಲವರನ್ನು ಆರಿಸಿಕೊಳ್ಳಲು ಸಭೆಯು ನಿರ್ಧರಿಸಿತು. ಅವರು ಯೂದನನ್ನು (ಬಾರ್ಸಬನೆಂದೂ ಕರೆಯುತ್ತಿದ್ದರು) ಮತ್ತು ಸೀಲನನ್ನು ಆರಿಸಿಕೊಂಡರು. ಇವರು ಜೆರುಸಲೇಮಿನ ಸಭೆಯವರಲ್ಲಿ ಪ್ರಮುಖರಾಗಿದ್ದರು. 23 ಸಭೆಯು ಇವರ ಕೈಯಲ್ಲಿ ಪತ್ರವನ್ನು ಕಳುಹಿಸಿಕೊಟ್ಟಿತು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

ಅಂತಿಯೋಕ್ಯ ಪಟ್ಟಣದಲ್ಲಿಯೂ ಸಿರಿಯ ಮತ್ತು ಸಿಲಿಸಿಯ ನಾಡುಗಳಲ್ಲಿಯೂ ಇರುವ ಯೆಹೂದ್ಯರಲ್ಲದ ಸಹೋದರರಿಗೆಲ್ಲಾ, ನಿಮ್ಮ ಸಹೋದರರಾದ ಅಪೊಸ್ತಲರೂ ಹಿರಿಯರೂ ಬರೆಯುವುದೇನೆಂದರೆ:

ಪ್ರಿಯ ಸಹೋದರರೇ,

24 ನಮ್ಮ ಸಮುದಾಯದಿಂದ ನಿಮ್ಮ ಬಳಿಗೆ ಬಂದ ಕೆಲವರು ನಿಮಗೆ ಕೆಲವು ಸಂಗತಿಗಳನ್ನು ಹೇಳುವುದರ ಮೂಲಕ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮಲ್ಲಿ ಗಲಿಬಿಲಿ ಉಂಟುಮಾಡಿದರೆಂಬ ಸಮಾಚಾರ ನಮಗೆ ತಿಳಿಯಿತು. ಆದರೆ ಹೀಗೆ ಮಾಡಬೇಕೆಂದು ನಾವು ಅವರಿಗೆ ಹೇಳಿರಲಿಲ್ಲ! 25 ಆದ್ದರಿಂದ ನಾವೆಲ್ಲರೂ ಕೆಲವರನ್ನು ಸರ್ವಾನುಮತದಿಂದ ಆರಿಸಿ ನಿಮ್ಮ ಬಳಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಿಯ ಸಹೋದರರಾದ ಬಾರ್ನಬ ಮತ್ತು ಪೌಲರೊಂದಿಗೆ ಅವರು ಬರುತ್ತಿದ್ದಾರೆ. 26 ಬಾರ್ನಬನು ಮತ್ತು ಪೌಲನು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಸೇವೆಗಾಗಿ ತಮ್ಮ ಜೀವಿತಗಳನ್ನೇ ಕೊಟ್ಟಿದ್ದಾರೆ. 27 ಆದ್ದರಿಂದ ನಾವು ಯೂದನನ್ನು ಮತ್ತು ಸೀಲನನ್ನು ಅವರೊಂದಿಗೆ ಕಳುಹಿಸಿದ್ದೇವೆ. ಕೆಳಕಂಡ ಸಂಗತಿಗಳನ್ನೆಲ್ಲ ಅವರು ನಿಮಗೆ ತಿಳಿಸುವರು. 28 ನಿಮಗೆ ಇನ್ನೂ ಹೆಚ್ಚಿನ ಭಾರಗಳು ಇರಕೂಡದೆಂಬುದು ಪವಿತ್ರಾತ್ಮನ ನಿರ್ಧಾರ. ಅದಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನೀವು ಈ ನಿಯಮಗಳನ್ನು ಮಾತ್ರ ಅನುಸರಿಸಬೇಕಾಗಿದೆ:

29 ವಿಗ್ರಹಗಳಿಗೆ ಅರ್ಪಿಸಿರುವ ಆಹಾರವನ್ನು ತಿನ್ನಬೇಡಿ.

ರಕ್ತವನ್ನು ತಿನ್ನಬೇಡಿ. ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬೇಡಿ.

ಯಾವುದೇ ಬಗೆಯ ಲೈಂಗಿಕ ಪಾಪವನ್ನು ಮಾಡಬೇಡಿ.

ನೀವು ಇವುಗಳಿಂದ ದೂರವಿದ್ದರೆ ನಿಮಗೆ ಒಳ್ಳೆಯದಾಗುವುದು. ನಿಮಗೆ ಶುಭವಾಗಲಿ!

30 ಆದ್ದರಿಂದ ಪೌಲ ಬಾರ್ನಬರು ಮತ್ತು ಯೂದ ಸೀಲರು ಜೆರುಸಲೇಮಿನಿಂದ ಹೊರಟರು. ಅವರು ಅಂತಿಯೋಕ್ಯಕ್ಕೆ ಹೋಗಿ, ಅಲ್ಲಿ ವಿಶ್ವಾಸಿಗಳ ಸಭೆಸೇರಿಸಿ ಅವರಿಗೆ ಪತ್ರವನ್ನು ಕೊಟ್ಟರು. 31 ವಿಶ್ವಾಸಿಗಳು ಅದನ್ನು ಓದಿ ಬಹು ಸಂತೋಷಪಟ್ಟರು. ಆ ಪತ್ರವು ಅವರನ್ನು ಸಂತೈಸಿತು. 32 ಯೂದ ಸೀಲರು ಸಹ ಪ್ರವಾದಿಗಳಾಗಿದ್ದರು. ಅವರು ಅನೇಕ ಸಂಗತಿಗಳನ್ನು ಸಹೋದರರಿಗೆ ತಿಳಿಸಿ ಅವರನ್ನು ಬಲಪಡಿಸಿದರು. 33 ಯೂದ ಸೀಲರು ಸ್ವಲ್ಪಕಾಲ ಅಲ್ಲಿದ್ದು ಸಹೋದರರಿಂದ ಸಮಾಧಾನವೆಂಬ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅವರು ತಮ್ಮನ್ನು ಕಳುಹಿಸಿಕೊಟ್ಟಿದ್ದ ಜೆರುಸಲೇಮಿನ ಸಹೋದರರ ಬಳಿಗೆ ಹಿಂತಿರುಗಿದರು. 34 [f]

35 ಆದರೆ ಪೌಲ ಬಾರ್ನಬರು ಅಂತಿಯೋಕ್ಯದಲ್ಲಿ ತಂಗಿದ್ದು ಇತರ ಅನೇಕರೊಂದಿಗೆ ಸೇರಿಕೊಂಡು ಸುವಾರ್ತೆಯನ್ನು ಸಾರಿದರು ಮತ್ತು ಪ್ರಭುವಿನ ಸಂದೇಶವನ್ನು ಜನರಿಗೆ ಬೋಧಿಸಿದರು.

ಪೌಲ ಬಾರ್ನಬರು ಬೇರ್ಪಡುವರು

36 ಕೆಲವು ದಿನಗಳಾದ ಮೇಲೆ ಪೌಲನು ಬಾರ್ನಬನಿಗೆ, “ನಾವು ಅನೇಕ ಪಟ್ಟಣಗಳಲ್ಲಿ ಪ್ರಭುವಿನ ಸಂದೇಶವನ್ನು ತಿಳಿಸಿದೆವು. ಆ ಪಟ್ಟಣಗಳಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸಂದರ್ಶಿಸಿ ಅವರು ಹೇಗಿದ್ದಾರೆಂದು ನೋಡಿಕೊಂಡು ಬರೋಣ” ಎಂದು ಹೇಳಿದನು.

37 ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಸಹ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕೆಂದು ಬಾರ್ನಬನ ಇಷ್ಟವಾಗಿತ್ತು. 38 ಆದರೆ ಅವರ ಮೊದಲನೆ ಪ್ರಯಾಣದಲ್ಲಿ ಮಾರ್ಕನೆನಿಸಿಕೊಳ್ಳುವ ಯೋಹಾನನು ಅವರನ್ನು ಪಾಂಫೀಲಿಯದ ಬಳಿ ಬಿಟ್ಟುಹೋದನು. ಅವನು ಅವರೊಂದಿಗೆ ಸೇವೆಯಲ್ಲಿ ಮುಂದುವರಿಯಲಿಲ್ಲ. ಆದ್ದರಿಂದ ಅವನನ್ನು ಕರೆದುಕೊಂಡು ಹೋಗುವುದು ಒಳ್ಳೆಯ ಆಲೋಚನೆಯಲ್ಲವೆಂದು ಪೌಲನು ಯೋಚಿಸಿದನು. 39 ಇದರ ಬಗ್ಗೆ ಪೌಲ ಮತ್ತು ಬಾರ್ನಬರ ನಡುವೆ ದೊಡ್ಡ ವಾಗ್ವಾದವೇ ನಡೆಯಿತು. ಅವರಿಬ್ಬರೂ ಬೇರ್ಪಟ್ಟು ಬೇರೆ ಮಾರ್ಗಗಳಲ್ಲಿ ಹೋದರು. ಬಾರ್ನಬನು ಮಾರ್ಕನೊಂದಿಗೆ ಸೈಪ್ರಸ್‌ಗೆ ನೌಕಾಯಾನ ಮಾಡಿದನು.

40 ಪೌಲನು ತನ್ನೊಂದಿಗೆ ಸೀಲನನ್ನು ಕರೆದುಕೊಂಡು ಹೋದನು. ಅಂತಿಯೋಕ್ಯದ ಸಹೋದರರು ಪೌಲನನ್ನು ಪ್ರಭುವಿನ ಆಶ್ರಯಕ್ಕೆ ಒಪ್ಪಿಸಿ ಕಳುಹಿಸಿಕೊಟ್ಟರು. 41 ಪೌಲ ಸೀಲರು ಸಿರಿಯಾ ಮತ್ತು ಸಿಲಿಸಿಯ ನಾಡುಗಳಲ್ಲಿ ಹಾದು ಹೋಗುತ್ತಾ ಅಲ್ಲಿದ್ದ ಸಭೆಗಳಿಗೆ ಬಲವಾಗಿ ಬೆಳೆಯಲು ನೆರವು ನೀಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International