Beginning
ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ
4 ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. 2 ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. 3 ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. 4 ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.
5 ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. 6 ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. 7 ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.
8 ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, 9 ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!
11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
ಮುಖ್ಯವಾದ ಮೂಲೆಗಲ್ಲಾಯಿತು.’(A)
12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.
13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.
15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.
18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.
21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.
ಪೇತ್ರ ಮತ್ತು ಯೋಹಾನರು ಹಿಂತಿರುಗಿದರು
23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:
‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!
26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(B)
27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.
31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.
ವಿಶ್ವಾಸಿಗಳ ಅನ್ಯೋನ್ಯ ಜೀವನ
32 ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು. 33 ಪ್ರಭುವಾದ ಯೇಸು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ಅಪೊಸ್ತಲರು ಬಹುಬಲವಾಗಿ ಜನರಿಗೆ ಹೇಳುತ್ತಿದ್ದರು. ದೇವರು ವಿಶ್ವಾಸಿಗಳೆಲ್ಲರನ್ನು ಬಹಳವಾಗಿ ಆಶೀರ್ವದಿಸಿದನು. 34 ಅವರೆಲ್ಲರ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಜಮೀನುಗಳನ್ನು ಮತ್ತು ಮನೆಗಳನ್ನು ಹೊಂದಿದ್ದ ಪ್ರತಿಯೊಬ್ಬರು ಅವುಗಳನ್ನು ಮಾರಿ, 35 ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರಿಗೂ ಅವರವರ ಅಗತ್ಯತೆಗಳಿಗನುಸಾರವಾಗಿ ಹಂಚಲಾಗುತ್ತಿತ್ತು.
36 ಆ ವಿಶ್ವಾಸಿಗಳಲ್ಲಿ ಯೋಸೇಫ ಎಂಬವನೂ ಇದ್ದನು. ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದರು. (ಬಾರ್ನಬ ಅಂದರೆ “ಧೈರ್ಯದಾಯಕ.”) ಸೈಪ್ರಸ್‌ನಲ್ಲಿ ಹುಟ್ಟಿದ ಇವನು ಲೇವಿಯನಾಗಿದ್ದನು.[a] 37 ಯೋಸೇಫನಿಗೆ ಒಂದು ಹೊಲವಿತ್ತು. ಅವನು ಅದನ್ನು ಮಾರಿ ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಟ್ಟನು.
ಅನನೀಯ ಮತ್ತು ಸಫೈರ
5 ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು. 2 ಆದರೆ, ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅವನು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಅವನು ಸ್ವಲ್ಪ ಹಣವನ್ನು ತನಗೋಸ್ಕರ ರಹಸ್ಯವಾಗಿಟ್ಟುಕೊಂಡನು. ಅವನ ಹೆಂಡತಿಗೆ ಇದು ತಿಳಿದಿತ್ತು. ಆಕೆಯೂ ಅದಕ್ಕೆ ಒಪ್ಪಿಕೊಂಡಿದ್ದಳು.
3 ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ? 4 ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.
5-6 ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.
7 ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ. 8 ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು.
ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.
9 ಪೇತ್ರನು ಆಕೆಗೆ, “ನೀನು ಮತ್ತು ನಿನ್ನ ಗಂಡನು ಪ್ರಭುವಿನ ಆತ್ಮನನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದೇಕೆ? ಅಗೋ, ನಿನ್ನ ಗಂಡನನ್ನು ಹೂಳಿಟ್ಟ ಜನರು ಬಾಗಿಲ ಬಳಿಗೆ ಬಂದಿದ್ದಾರೆ! ಅವರು ನಿನ್ನನ್ನೂ ಅದೇರೀತಿ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. 10 ತಕ್ಷಣವೇ ಸಫೈರಳು ಅವನ ಪಾದಗಳ ಮುಂದೆ ಬಿದ್ದು ಸತ್ತುಹೋದಳು. ಆ ಯೌವನಸ್ಥರು ಒಳಗೆ ಬಂದು ನೋಡಿದಾಗ ಆಕೆ ಸತ್ತುಹೋಗಿದ್ದಳು. ಅವರು ಆಕೆಯನ್ನು ಹೊತ್ತುಕೊಂಡು ಹೋಗಿ, ಆಕೆಯ ಗಂಡನ ಪಕ್ಕದಲ್ಲಿ ಹೂಳಿಟ್ಟರು. 11 ಈ ಸಂಗತಿಗಳ ಬಗ್ಗೆ ಕೇಳಿದ ವಿಶ್ವಾಸಿಗಳೆಲ್ಲರೂ ಮತ್ತು ಜನರೆಲ್ಲರೂ ಭಯಗ್ರಸ್ತರಾದರು.
ದೇವರ ಸೂಚಕಕಾರ್ಯಗಳು
12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.
ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ
17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು. 18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ, 20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು. 21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.
ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು. 22 ದೇವಾಲಯದ ಸಿಪಾಯಿಗಳು ಸೆರೆಮನೆಗೆ ಹೋದಾಗ ಅಲ್ಲಿ ಅಪೊಸ್ತಲರನ್ನು ಕಾಣಲಿಲ್ಲ. ಆದ್ದರಿಂದ ಅವರು ಹಿಂತಿರುಗಿ ಬಂದು ಯೆಹೂದ್ಯನಾಯಕರಿಗೆ, 23 “ಸೆರೆಮನೆ ಮುಚ್ಚಿತ್ತು ಮತ್ತು ಬೀಗವನ್ನು ಹಾಕಲಾಗಿತ್ತು. ಕಾವಲುಗಾರರು ಬಾಗಿಲ ಬಳಿ ನಿಂತುಕೊಂಡಿದ್ದರು. ಆದರೆ ನಾವು ಬಾಗಿಲುಗಳನ್ನು ತೆರೆದಾಗ ಸೆರೆಮನೆಯು ಬರಿದಾಗಿತ್ತು!” ಎಂದು ತಿಳಿಸಿದರು. 24 ದೇವಾಲಯದ ಕಾವಲುಗಾರರ ನಾಯಕನು ಮತ್ತು ಮಹಾಯಾಜಕರು ಇದನ್ನು ಕೇಳಿ ಗಲಿಬಿಲಿಗೊಂಡರು. ಇದರಿಂದ ಏನಾಗುವುದೋ ಎಂದು ಅವರು ಭಯಪಟ್ಟರು.
25 ಬಳಿಕ ಬೇರೊಬ್ಬನು ಬಂದು ಅವರಿಗೆ, “ಕೇಳಿ! ನೀವು ಸೆರೆಮನೆಯಲ್ಲಿ ಹಾಕಿದ್ದ ಜನರು ದೇವಾಲಯದಲ್ಲಿ ನಿಂತಿದ್ದಾರೆ. ಅವರು ಜನರಿಗೆ ಉಪದೇಶ ಮಾಡುತ್ತಿದ್ದಾರೆ!” ಎಂದು ಹೇಳಿದನು. 26 ಆಗ ದಳಪತಿ ಮತ್ತು ಅವನ ಜನರು ಹೋಗಿ ಅಪೊಸ್ತಲರನ್ನು ಮರಳಿ ಕರೆತಂದರು. ಆದರೆ ಸೈನಿಕರು ಒತ್ತಾಯ ಮಾಡಲಿಲ್ಲ. ಯಾಕೆಂದರೆ ಅವರು ಜನರಿಗೆ ಭಯಪಟ್ಟರು. ಜನರು ಕೋಪಗೊಂಡು ಕಲ್ಲೆಸೆದು ತಮ್ಮನ್ನು ಕೊಲ್ಲಬಹುದೆಂದು ಅವರು ಹೆದರಿದರು.
27 ಸೈನಿಕರು ಅಪೊಸ್ತಲರನ್ನು ಸಭೆಗೆ ಕರೆದುಕೊಂಡು ಬಂದು ಯೆಹೂದ್ಯನಾಯಕರ ಮುಂದೆ ನಿಲ್ಲಿಸಿದರು. ಪ್ರಧಾನಯಾಜಕನು ಅಪೊಸ್ತಲರಿಗೆ, 28 “ಈ ಮನುಷ್ಯನ (ಯೇಸುವಿನ) ಬಗ್ಗೆ ನೀವು ಬೋಧಿಸಕೂಡದೆಂದು ನಾವು ನಿಮಗೆ ಆಜ್ಞಾಪಿಸಿದೆವು. ಆದರೆ ನೀವು ಮಾಡಿರುವುದೇನು? ನೀವು ಜೆರುಸಲೇಮನ್ನು ನಿಮ್ಮ ಉಪದೇಶದಿಂದ ತುಂಬಿಸಿಬಿಟ್ಟಿದ್ದೀರಿ. ಈ ಮನುಷ್ಯನ (ಯೇಸುವಿನ) ಸಾವಿಗೆ ನಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲು ನೀವು ಪ್ರಯತ್ನಿಸುತ್ತಿದ್ದೀರಿ” ಎಂದರು.
29 ಪೇತ್ರ ಮತ್ತು ಉಳಿದ ಅಪೊಸ್ತಲರು, “ನಾವು ವಿಧೇಯರಾಗಬೇಕಾದದ್ದು ದೇವರಿಗೇ ಹೊರತು ನಿಮಗಲ್ಲ! 30 ನೀವು ಯೇಸುವನ್ನು ಕೊಂದಿರಿ. ನೀವು ಆತನನ್ನು ಶಿಲುಬೆಯ ಮೇಲೆ ನೇತುಹಾಕಿದಿರಿ. ಆದರೆ ದೇವರು, ಅಂದರೆ ನಮ್ಮ ಪಿತೃಗಳ ದೇವರೇ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು! 31 ದೇವರಿಂದ ಆತನ ಬಲಗಡೆಗೆ ಏರಿಸಲ್ಪಟ್ಟಾತನೇ ಯೇಸು. ಎಲ್ಲಾ ಯೆಹೂದ್ಯರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವುದರ ಮೂಲಕ ಪಾಪಕ್ಷಮೆ ಹೊಂದಿಕೊಳ್ಳಲೆಂದು ದೇವರು ಯೇಸುವನ್ನು ನಮ್ಮ ನಾಯಕನನ್ನಾಗಿಯೂ ರಕ್ಷಕನನ್ನಾಗಿಯೂ ಮಾಡಿದ್ದಾನೆ. 32 ಈ ಘಟನೆಗಳಿಗೆ ನಾವೇ ಸಾಕ್ಷಿಗಳು. ನಾವು ಮಾತ್ರವಲ್ಲದೆ ವಿಧೇಯರಾಗುವ ಎಲ್ಲಾ ಜನರಿಗೆ ದೇವರು ದಯಪಾಲಿಸಿರುವ ಪವಿತ್ರಾತ್ಮನೂ ಸಾಕ್ಷಿಯಾಗಿದ್ದಾನೆ” ಎಂದನು.
33 ಯೆಹೂದ್ಯನಾಯಕರು ಈ ಮಾತುಗಳನ್ನು ಕೇಳಿ ಬಹು ಕೋಪಗೊಂಡು, ಅಪೊಸ್ತಲರನ್ನು ಕೊಲ್ಲಬೇಕೆಂದಿದ್ದರು. 34 ಆಗ ಫರಿಸಾಯರಲ್ಲಿ ಒಬ್ಬನು ಸಭೆಯಲ್ಲಿ ಎದ್ದು ನಿಂತುಕೊಂಡನು. ಅವನ ಹೆಸರು ಗಮಲಿಯೇಲ. ಅವನು ಧರ್ಮೋಪದೇಶಕನಾಗಿದ್ದನು ಮತ್ತು ಜನರೆಲ್ಲಾ ಅವನನ್ನು ಗೌರವಿಸುತ್ತಿದ್ದರು. ಕೆಲವು ನಿಮಿಷಗಳವರೆಗೆ ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಬೇಕೆಂದು ಅವನು ಜನರಿಗೆ ಹೇಳಿದನು. 35 ಬಳಿಕ ಅವನು ಅವರಿಗೆ, “ಇಸ್ರೇಲ್ ಜನರೇ, ನೀವು ಇವರಿಗೆ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯಾಗಿರಿ! 36 ಒಮ್ಮೆ, ತೈದ ಎಂಬುವನು ಬಂದದ್ದು ನಿಮ್ಮ ನೆನಪಿನಲ್ಲಿದೆಯೋ? ಅವನು ತನ್ನನ್ನು ಮಹಾಪುರುಷನೆಂದು ಹೇಳಿಕೊಂಡನು. ಸುಮಾರು ನಾನೂರು ಮಂದಿ ಅವನ ಜೊತೆ ಸೇರಿದರು. ಆದರೆ ಅವನು ಕೊಲ್ಲಲ್ಪಟ್ಟನು. ಅವನನ್ನು ಹಿಂಬಾಲಿಸುತ್ತಿದ್ದವರೆಲ್ಲ ಚದರಿ ಓಡಿಹೋದರು. ಅವರಿಂದ ಏನೂ ಮಾಡಲಾಗಲಿಲ್ಲ. 37 ಬಳಿಕ, ಯೂದ ಎಂಬುವನು ಗಲಿಲಾಯದಿಂದ ಬಂದನು. ಅದು ಜನಗಣತಿಯ ಕಾಲವಾಗಿತ್ತು. ಅವನು ಸಹ ಅನುಯಾಯಿಗಳ ಒಂದು ಗುಂಪನ್ನೇ ಕಟ್ಟಿದ. ಅವನು ಸಹ ಕೊಲ್ಲಲ್ಪಟ್ಟನು. ಅವನ ಅನುಯಾಯಿಗಳೆಲ್ಲಾ ಚದರಿ ಓಡಿಹೋದರು. 38 ಆದ್ದರಿಂದ ಈಗ ನಾನು ನಿಮಗೆ ಹೇಳುವುದೇನೆಂದರೆ, ಈ ಜನರಿಂದ ದೂರವಾಗಿರಿ. ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿರಿ. ಅವರ ಯೋಜನೆಯು ಮನುಷ್ಯರಿಂದ ಬಂದದ್ದಾಗಿದ್ದರೆ, ಅದು ಉರುಳಿಹೋಗುವುದು. 39 ಆದರೆ ಅದು ದೇವರಿಂದ ಬಂದದ್ದಾಗಿದ್ದರೆ, ನೀವು ಅವರನ್ನು ತಡೆಯಲು ಸಾಧ್ಯವಾಗುವುದಿಲ್ಲ. ನೀವು ದೇವರಿಗೇ ವಿರುದ್ಧವಾಗಿ ಹೋರಾಡಿದಂತಾದೀತು!” ಎಂದು ಹೇಳಿದನು.
ಗಮಲಿಯೇಲನ ಸಲಹೆಗೆ ಯೆಹೂದ್ಯ ನಾಯಕರು ಒಪ್ಪಿಕೊಂಡರು. 40 ಅವರು ಅಪೊಸ್ತಲರನ್ನು ಒಳಗೆ ಕರೆಸಿ, ಹೊಡೆಸಿ, ಯೇಸುವಿನ ಬಗ್ಗೆ ಜನರಿಗೆ ಹೇಳಕೂಡದೆಂದು ಎಚ್ಚರಿಸಿ ಕಳುಹಿಸಿ ಬಿಟ್ಟರು. 41 ಅಪೊಸ್ತಲರು ಸಭೆಯಿಂದ ಹೊರಟುಹೋದರು. ಯೇಸುವಿನ ಹೆಸರಿಗಾಗಿ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದುಕೊಂಡೆವೆಂದು ಅವರು ಸಂತೋಷಪಟ್ಟರು. 42 ಅವರು ಜನರಿಗೆ ಉಪದೇಶಿಸುವುದನ್ನು ನಿಲ್ಲಿಸಲಿಲ್ಲ. ಯೇಸುವೇ ಕ್ರಿಸ್ತನೆಂಬ ಶುಭವಾರ್ತೆಯನ್ನು ಜನರಿಗೆ ಹೇಳುವುದನ್ನು ಮುಂದುವರಿಸಿದರು. ಅವರು ಪ್ರತಿದಿನ ದೇವಾಲಯದಲ್ಲಿಯೂ ಜನರ ಮನೆಗಳಲ್ಲಿಯೂ ಉಪದೇಶಿಸುತ್ತಿದ್ದರು.
ವಿಶೇಷ ಕಾರ್ಯಕ್ಕೆ ಏಳು ಮಂದಿಯ ಆಯ್ಕೆ
6 ಯೇಸುವಿನ ಶಿಷ್ಯರ ಸಂಖ್ಯೆಯು ಹೆಚ್ಚುಹೆಚ್ಚಾಗುತ್ತಿತ್ತು. ಆದರೆ ಈ ಸಮಯದಲ್ಲಿ ಗ್ರೀಕ್ ಮಾತಾಡುವ ಶಿಷ್ಯರು ಯೆಹೂದ್ಯ ಶಿಷ್ಯರಿಗೆ ದೂರು ಹೇಳಿದರು. ಪ್ರತಿದಿನ ಶಿಷ್ಯರಿಗೆ ಕೊಡುವಂಥವುಗಳಲ್ಲಿ ತಮ್ಮ ವಿಧವೆಯರಿಗೆ ಅವರ ಪಾಲು ದೊರೆಯುತ್ತಿಲ್ಲವೆಂದು ಅವರು ಆಪಾದಿಸಿದರು.
2 ಆಗ ಹನ್ನೆರಡು ಮಂದಿ ಅಪೊಸ್ತಲರು ಇಡೀ ಶಿಷ್ಯಸಮುದಾಯದ ಸಭೆಯನ್ನು ಕರೆದು ಅವರಿಗೆ, “ದೇವರ ವಾಕ್ಯವನ್ನು ಬೋಧಿಸುವುದು ನಮ್ಮ ಕೆಲಸ. ಆದರೆ ಅದು ನಿಂತುಹೋಗುವುದು ಸರಿಯಲ್ಲ! ನಾವು ಜನರಿಗೆ ಊಟವನ್ನು ಒದಗಿಸಲು ಸಹಾಯ ಮಾಡುವುದಕ್ಕಿಂತಲೂ ದೇವರ ವಾಕ್ಯೋಪದೇಶವನ್ನು ಮುಂದುವರಿಸುವುದು ಒಳ್ಳೆಯದು. 3 ಆದ್ದರಿಂದ, ಸಹೋದರರೇ, ನಿಮ್ಮ ಜನರಲ್ಲಿ ಏಳು ಮಂದಿಯನ್ನು ಆರಿಸಿಕೊಳ್ಳಿರಿ. ಅವರು ಜನರಿಂದ ಒಳ್ಳೆಯವರು ಎನಿಸಿಕೊಂಡವರಾಗಿರಬೇಕು; ಜ್ಞಾನಪೂರ್ಣರಾಗಿರಬೇಕು ಮತ್ತು ಪವಿತ್ರಾತ್ಮಭರಿತರಾಗಿರಬೇಕು. ನಾವು ಅವರಿಗೆ ಈ ಕೆಲಸವನ್ನು ಒಪ್ಪಿಸಿಕೊಡುತ್ತೇವೆ. 4 ಆಗ ನಾವು ನಮ್ಮ ಸಮಯವನ್ನೆಲ್ಲಾ ಪ್ರಾರ್ಥನೆಗೂ ದೇವರ ವಾಕ್ಯೋಪದೇಶಕ್ಕೂ ಕೊಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
5 ಇಡೀ ಸಮುದಾಯವು ಈ ಆಲೋಚನೆಯನ್ನು ಇಷ್ಟಪಟ್ಟಿತು. ಆದ್ದರಿಂದ ಅವರು ಈ ಏಳು ಮಂದಿಯನ್ನು ಆರಿಸಿಕೊಂಡರು: ಸ್ತೆಫನ (ಮಹಾನಂಬಿಕೆಯುಳ್ಳ ಮತ್ತು ಪವಿತ್ರಾತ್ಮಭರಿತನಾಗಿದ್ದ ಮನುಷ್ಯ), ಫಿಲಿಪ್ಪ,[b] ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ನಿಕೊಲಾಯ (ಮತಾಂತರ ಹೊಂದಿ ಯೆಹೂದ್ಯನಾಗಿದ್ದ ಇವನು ಅಂತಿಯೋಕ್ಯಕ್ಕೆ ಸೇರಿದವನು.) 6 ಬಳಿಕ ಅವರು ಈ ಏಳು ಮಂದಿಯನ್ನು ಅಪೊಸ್ತಲರ ಮುಂದೆ ನಿಲ್ಲಿಸಿದರು. ಅಪೊಸ್ತಲರು ಪ್ರಾರ್ಥಿಸಿ, ಅವರ ತಲೆಗಳ ಮೇಲೆ ತಮ್ಮ ಕೈಗಳನ್ನಿಟ್ಟರು.
7 ದೇವರ ವಾಕ್ಯವು ಹೆಚ್ಚುಹೆಚ್ಚು ಜನರಿಗೆ ತಲುಪತೊಡಗಿತು. ಜೆರುಸಲೇಮಿನ ಶಿಷ್ಯಸಮುದಾಯವು ಹೆಚ್ಚುಹೆಚ್ಚು ದೊಡ್ಡದಾಗ ತೊಡಗಿತು. ಅನೇಕ ಯೆಹೂದ್ಯಯಾಜಕರು ನಂಬಿಕೊಂಡರು ಮತ್ತು ವಿಧೇಯರಾದರು.
ಯೆಹೂದ್ಯರು ಸ್ತೆಫನನಿಗೆ ವಿರುದ್ಧವಾದರು
8 ಸ್ತೆಫನನು (ಏಳು ಮಂದಿಯಲ್ಲಿ ಒಬ್ಬನು) ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಅದ್ಭುತಕಾರ್ಯಗಳನ್ನು ಮತ್ತು ಸೂಚಕಕಾರ್ಯಗಳನ್ನು ಮಾಡುತ್ತಾ ಇದ್ದನು. 9 ಆದರೆ ಕೆಲವು ಯೆಹೂದ್ಯರು ಬಂದು ಅವನೊಂದಿಗೆ ವಾದಿಸಿದರು. ಈ ಯೆಹೂದ್ಯರು ಸಭಾಮಂದಿರಕ್ಕೆ ಸೇರಿದವರು. ಅದಕ್ಕೆ “ಬಿಡುಗಡೆ ಹೊಂದಿದವರ[c] ಸಭಾಮಂದಿರ” ಎಂದು ಕರೆಯುತ್ತಿದ್ದರು. (ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರಿಗೋಸ್ಕರವಾಗಿಯೂ ಈ ಸಭಾಮಂದಿರವಿತ್ತು.) ಸಿಲಿಸಿಯ ಮತ್ತು ಏಷ್ಯಾದಿಂದ ಬಂದ ಯೆಹೂದ್ಯರೂ ಅವರೊಂದಿಗಿದ್ದರು. ಅವರೆಲ್ಲರೂ ಬಂದು ಅವನೊಂದಿಗೆ ವಾದಮಾಡಿದರು. 10 ಆದರೆ ವಿವೇಕದಿಂದ ಮಾತಾಡಲು ಪವಿತ್ರಾತ್ಮನು ಅವನಿಗೆ ಸಹಾಯಮಾಡಿದನು. ಸ್ತೆಫನನ ಮಾತುಗಳು ಬಹು ಶಕ್ತಿಯುತವಾಗಿದ್ದ ಕಾರಣ ಅವನೊಂದಿಗೆ ವಾದಿಸಲು ಅವರಿಗೆ ಸಾಧ್ಯವಾಗದೆ,
11 “ಸ್ತೆಫನನು ಮೋಶೆಗೂ ದೇವರಿಗೂ ವಿರುದ್ಧವಾಗಿ ಕೆಟ್ಟ ಸಂಗತಿಗಳನ್ನು ಹೇಳುತ್ತಾನೆ; ಅವನ್ನು ನಾವೇ ಕೇಳಿದ್ದೇವೆ!” ಎಂದು ತಿಳಿಸುವಂತೆ ಕೆಲವರಿಗೆ ಹಣಕೊಟ್ಟರು. 12 ಹೀಗೆ ಈ ಯೆಹೂದ್ಯರು ಜನರನ್ನೂ ಯೆಹೂದ್ಯರ ಹಿರಿಯನಾಯಕರನ್ನೂ ಧರ್ಮೋಪದೇಶಕರನ್ನೂ ಗಲಿಬಿಲಿಗೊಳಿಸಿದರು. ಅವರು ಬಹು ಸಿಟ್ಟಿನಿಂದ ಬಂದು ಸ್ತೆಫನನನ್ನು ಬಂಧಿಸಿ ಯೆಹೂದ್ಯನಾಯಕರ ಸಭೆಗೆ ಕೊಂಡೊಯ್ದರು.
13 ಈ ಯೆಹೂದ್ಯರು ಕೆಲವು ಮಂದಿ ಸುಳ್ಳುಸಾಕ್ಷಿಗಳನ್ನು ಕರೆದುಕೊಂಡು ಬಂದು, “ಈ ಮನುಷ್ಯನು ಈ ಪವಿತ್ರಸ್ಥಳದ (ದೇವಾಲಯದ) ವಿರುದ್ಧವಾಗಿಯೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧವಾಗಿಯೂ ಕೆಟ್ಟಸಂಗತಿಗಳನ್ನು ಯಾವಾಗಲೂ ಹೇಳುತ್ತಾನೆ. 14 ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆಯ ವಿಧಿಗಳನ್ನು ಬದಲಾಯಿಸುತ್ತಾನೆಂದು ಇವನು ಹೇಳುವುದನ್ನು ನಾವು ಕೇಳಿದ್ದೇವೆ” ಎಂದು ಹೇಳಿಸಿದರು. 15 ಸಭೆಯಲ್ಲಿ ಕುಳಿತಿದ್ದವರೆಲ್ಲರೂ ಸ್ತೆಫನನ ಮುಖವನ್ನು ದಿಟ್ಟಿಸಿ ನೋಡಲು ಅವನ ಮುಖವು ದೇವದೂತನ ಮುಖದಂತೆ ಕಂಗೊಳಿಸಿತು.
Kannada Holy Bible: Easy-to-Read Version. All rights reserved. © 1997 Bible League International