Beginning
ಲೂಕನು ಬರೆದ ಎರಡನೆ ಪುಸ್ತಕ
1 ಪ್ರಿಯ ಥೆಯೊಫಿಲನೇ,
ಯೇಸು ಮಾಡಿದ ಕಾರ್ಯಗಳ ಬಗ್ಗೆ ಮತ್ತು ನೀಡಿದ ಬೋಧನೆಗಳ ಬಗ್ಗೆ ಪ್ರತಿಯೊಂದನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು. 2 ನಾನು ಯೇಸುವಿನ ಇಡೀ ಜೀವಮಾನದ ಬಗ್ಗೆ ಅಂದರೆ ಆತನು ಪರಲೋಕಕ್ಕೆ ಏರಿಹೋಗುವವರೆಗೆ ನಡೆದ ಸಂಗತಿಗಳನ್ನು ಬರೆದೆನು. ಯೇಸು ಪರಲೋಕಕ್ಕೆ ಎತ್ತಲ್ಪಡುವದಕ್ಕಿಂತ ಮೊದಲು, ತಾನು ಆರಿಸಿಕೊಂಡಿದ್ದ ಅಪೊಸ್ತಲರೊಂದಿಗೆ[a] ಮಾತಾಡಿದನು; ಅವರು ಮಾಡಬೇಕಾದದ್ದನ್ನು ಪವಿತ್ರಾತ್ಮನ[b] ಸಹಾಯದಿಂದ ಅವರಿಗೆ ತಿಳಿಸಿದನು. 3 ಇದು ಆತನ ಮರಣಾನಂತರ ನಡೆದ ಸಂಗತಿ. ತಾನು ಜೀವಂತವಾಗಿರುವುದನ್ನು ಆತನು ಅಪೊಸ್ತಲರಿಗೆ ತೋರ್ಪಡಿಸಿದನು ಮತ್ತು ಶಕ್ತಿಯುತವಾದ ಅನೇಕ ಕಾರ್ಯಗಳನ್ನು ಮಾಡುವುದರ ಮೂಲಕ ಅದನ್ನು ನಿರೂಪಿಸಿದನು. ಯೇಸು ಜೀವಂತವಾಗಿ ಎದ್ದುಬಂದ ನಂತರದ ನಲವತ್ತು ದಿನಗಳ ಅವಧಿಯಲ್ಲಿ ಅಪೊಸ್ತಲರು ಆತನನ್ನು ಅನೇಕ ಸಲ ನೋಡಿದರು. ಯೇಸು ದೇವರ ರಾಜ್ಯದ ಕುರಿತು ಅಪೊಸ್ತಲರೊಂದಿಗೆ ಮಾತಾಡಿದನು. 4 ಒಮ್ಮೆ, ಯೇಸು ಅವರೊಂದಿಗೆ ಊಟ ಮಾಡುತ್ತಿದ್ದಾಗ, ಜೆರುಸಲೇಮನ್ನು ಬಿಟ್ಟುಹೋಗಬಾರದೆಂದು ಅವರಿಗೆ ಹೇಳಿದನು. “ತಂದೆಯು ನಿಮಗೊಂದು ವಾಗ್ದಾನವನ್ನು ಮಾಡಿದ್ದಾನೆ. ನಾನು ಮೊದಲೇ ಅದರ ಬಗ್ಗೆ ನಿಮಗೆ ತಿಳಿಸಿದ್ದೇನೆ. ಈ ವಾಗ್ದಾನವನ್ನು ಸ್ವೀಕರಿಸಿಕೊಳ್ಳಲು ಜೆರುಸಲೇಮಿನಲ್ಲಿ ಕಾದುಕೊಂಡಿರಿ. 5 ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನವಾಗುವುದು” ಎಂದು ಆತನು ಹೇಳಿದನು.
ಪರಲೋಕಾರೋಹಣ
6 ಅಪೊಸ್ತಲರು ಒಟ್ಟಾಗಿ ಸೇರಿದ್ದಾಗ, ಅವರು ಯೇಸುವಿಗೆ, “ಪ್ರಭುವೇ, ನೀನು ಯೆಹೂದ್ಯರಿಗೆ ಮತ್ತೆ ಅವರ ರಾಜ್ಯವನ್ನು ಕೊಡುವಂಥದ್ದು ಈ ಕಾಲದಲ್ಲೋ?” ಎಂದು ಕೇಳಿದರು.
7 ಯೇಸು ಅವರಿಗೆ, “ದಿನಗಳನ್ನು ಮತ್ತು ಕಾಲಗಳನ್ನು ನಿರ್ಧರಿಸುವ ಅಧಿಕಾರವಿರುವುದು ತಂದೆಯೊಬ್ಬನಿಗಷ್ಟೇ. ನೀವು ಅವುಗಳನ್ನು ತಿಳಿದುಕೊಳ್ಳಲಾಗುವುದಿಲ್ಲ. 8 ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲಹೊಂದಿ ಜೆರುಸಲೇಮಿನಲ್ಲಿಯೂ ಇಡೀ ಜುದೇಯದಲ್ಲಿಯೂ ಸಮಾರ್ಯದಲ್ಲಿಯೂ ಮತ್ತು ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದನು.
9 ಯೇಸು ಈ ಸಂಗತಿಗಳನ್ನು ಅಪೊಸ್ತಲರಿಗೆ ಹೇಳಿದ ಮೇಲೆ ಅಪೊಸ್ತಲರು ನೋಡುತ್ತಿರುವಾಗಲೇ ಆಕಾಶಕ್ಕೆ ಎತ್ತಲ್ಪಟ್ಟನು. ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರು ಆತನನ್ನು ಕಾಣಲಾಗಲಿಲ್ಲ. 10 ಯೇಸು ಹೋಗುತ್ತಿರಲು ಅಪೊಸ್ತಲರು ಆಕಾಶವನ್ನೇ ನೋಡುತ್ತಾ ನಿಂತಿದ್ದರು. ಆಗ, ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ಪುರುಷರು (ದೇವದೂತರು) ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತುಕೊಂಡು, 11 “ಗಲಿಲಾಯದವರೇ, ಏಕೆ ಆಕಾಶವನ್ನೇ ನೋಡುತ್ತಾ ನಿಂತುಕೊಂಡಿದ್ದೀರಿ? ಯೇಸು ನಿಮ್ಮ ಕಣ್ಣೆದುರಿನಲ್ಲಿ ಪರಲೋಕಕ್ಕೆ ಹೇಗೆ ಏರಿ ಹೋದನೋ ಅದೇ ರೀತಿಯಲ್ಲಿ ಹಿಂತಿರುಗಿ ಬರುತ್ತಾನೆ” ಎಂದು ಹೇಳಿದರು.
ಹೊಸ ಅಪೊಸ್ತಲನೊಬ್ಬನ ಆಯ್ಕೆ
12 ಬಳಿಕ ಅಪೊಸ್ತಲರು ಆಲಿವ್ ಮರಗಳ ಗುಡ್ಡದಿಂದ ಜೆರುಸಲೇಮಿಗೆ ಹಿಂತಿರುಗಿಹೋದರು. (ಈ ಗುಡ್ಡಕ್ಕೂ ಜೆರುಸಲೇಮಿಗೂ ಸುಮಾರು ಅರ್ಧ ಮೈಲಿ ಅಂತರವಿದೆ.) 13 ಅಪೊಸ್ತಲರು ಪಟ್ಟಣವನ್ನು ಪ್ರವೇಶಿಸಿ ತಾವು ವಾಸವಾಗಿದ್ದಲ್ಲಿಗೆ ಹೋದರು. ಅದು ಮೇಲಂತಸ್ತಿನಲ್ಲಿತ್ತು. ಆ ಅಪೊಸ್ತಲರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಯಾಕೋಬ (ಅಲ್ಫಾಯನ ಮಗ), ದೇಶಾಭಿಮಾನಿಯಾದ ಸಿಮೋನ ಮತ್ತು ಯೂದ (ಯಾಕೋಬನ ಮಗ).
14 ಅಪೊಸ್ತಲರೆಲ್ಲರೂ ಒಟ್ಟಾಗಿ ಸೇರಿದ್ದರು. ಅವರು ಒಂದೇ ಉದ್ದೇಶದಿಂದ ಎಡಬಿಡದೆ ಪ್ರಾರ್ಥಿಸುತ್ತಿದ್ದರು. ಕೆಲವು ಸ್ತ್ರೀಯರೂ ಯೇಸುವಿನ ತಾಯಿ ಮರಿಯಳೂ ಆತನ ಸಹೋದರರೂ ಅಪೊಸ್ತಲರ ಸಂಗಡವಿದ್ದರು.
15 ಕೆಲವು ದಿನಗಳಾದ ಮೇಲೆ ವಿಶ್ವಾಸಿಗಳು ಸಭೆ ಸೇರಿದ್ದರು. (ಅಲ್ಲಿ ಸುಮಾರು ನೂರಿಪ್ಪತ್ತು ಮಂದಿ ಇದ್ದರು.) ಪೇತ್ರನು ಎದ್ದುನಿಂತುಕೊಂಡು ಹೀಗೆಂದನು: 16-17 “ಸಹೋದರರೇ, ಪವಿತ್ರಾತ್ಮನು ದಾವೀದನ ಮೂಲಕವಾಗಿ ಪವಿತ್ರ ಗ್ರಂಥದಲ್ಲಿ[c] ಮುಂತಿಳಿಸಿದ್ದ ಸಂಗತಿ ನೆರವೇರಬೇಕಿತ್ತು. ನಮ್ಮ ಸ್ವಂತ ಗುಂಪಿನವರಲ್ಲಿ ಒಬ್ಬನಾದ ಯೂದನ ಬಗ್ಗೆ ದಾವೀದನು ಹೇಳಿದ್ದಾನೆ. ಯೂದನು ನಮ್ಮೊಂದಿಗೆ ಸೇವೆ ಮಾಡಿದನು. ಯೇಸುವನ್ನು ಬಂಧಿಸುವವರಿಗೆ ಯೂದನು ಮಾರ್ಗದರ್ಶಕನಾಗುತ್ತಾನೆಂದು ಪವಿತ್ರಾತ್ಮನು ತಿಳಿಸಿದ್ದನು.”
18 (ಈ ಕಾರ್ಯ ಮಾಡುವುದಕ್ಕಾಗಿ ಯೂದನಿಗೆ ಹಣ ಕೊಡಲಾಗಿತ್ತು. ಆ ಹಣದಿಂದ ಒಂದು ಹೊಲವನ್ನು ಅವನಿಗಾಗಿ ಕೊಂಡುಕೊಳ್ಳಲಾಯಿತು. ಆದರೆ ಯೂದನು ತಲೆಕೆಳಗಾಗಿ ಬಿದ್ದಾಗ ಅವನ ಹೊಟ್ಟೆ ಒಡೆದುಹೋಯಿತು. ಅವನ ಕರುಳೆಲ್ಲಾ ಹೊರಗೆ ಬಂದವು. 19 ಇದರ ಬಗ್ಗೆ ಜೆರುಸಲೇಮಿನ ಜನರೆಲ್ಲರಿಗೂ ತಿಳಿಯಿತು. ಆದಕಾರಣವೇ ಅವರು ಆ ಹೊಲಕ್ಕೆ ಅಕೆಲ್ದಮಾ ಎಂದು ಹೆಸರಿಟ್ಟರು. ಅವರ ಭಾಷೆಯಲ್ಲಿ ಅಕೆಲ್ದಮಾ ಅಂದರೆ “ರಕ್ತದ ಹೊಲ” ಎಂದರ್ಥ.)
20 ‘ಅವನ ಮನೆ ಹಾಳಾಗಲಿ!
ಅಲ್ಲಿ ಯಾರೂ ವಾಸಿಸದಂತಾಗಲಿ!’(A)
ಎಂದು ಕೀರ್ತನೆಗಳ ಪುಸ್ತಕದಲ್ಲಿ ಯೂದನ ಬಗ್ಗೆ ಬರೆದಿದೆ.
ಅಲ್ಲದೆ ‘ಬೇರೊಬ್ಬನು ಅವನ ಕೆಲಸವನ್ನು ಪಡೆದುಕೊಳ್ಳಲಿ’(B)
ಎಂದು ಸಹ ಬರೆದಿದೆ.
21-22 “ಆದ್ದರಿಂದ ಬೇರೊಬ್ಬನು ನಮ್ಮೊಂದಿಗೆ ಸೇರಿ, ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಯಾಗಿರಬೇಕು. ಪ್ರಭುವಾದ ಯೇಸು ನಮ್ಮಲ್ಲಿ ಹೋಗುತ್ತಾ ಬರುತ್ತಾ ಇದ್ದ ಕಾಲವೆಲ್ಲಾ ಅವನು ನಮ್ಮ ಗುಂಪಿನಲ್ಲಿದ್ದವರಲ್ಲಿ ಒಬ್ಬನಾಗಿರಬೇಕು. ಯೋಹಾನನು ದೀಕ್ಷಾಸ್ನಾನ ಕೊಡಲು ಆರಂಭ ಮಾಡಿದ ದಿನದ ಮೊದಲುಗೊಂಡು ಯೇಸುವು ನಮ್ಮ ಬಳಿಯಿಂದ ಪರಲೋಕಕ್ಕೆ ಎತ್ತಲ್ಪಟ್ಟ ದಿನದವರೆಗೂ ಅವನು ನಮ್ಮೊಂದಿಗಿದ್ದವನಾಗಿರಬೇಕು.”
23 ಅಪೊಸ್ತಲರು ಇಬ್ಬರನ್ನು ಸಭೆಯ ಮುಂದೆ ನಿಲ್ಲಿಸಿದರು. ಒಬ್ಬನು ಬಾರ್ಸಬನೆಂಬ ಯೋಸೇಫ. ಇವನನ್ನು ಯೂಸ್ತನೆಂದೂ ಕರೆಯುತ್ತಿದ್ದರು. ಮತ್ತೊಬ್ಬನು ಮತ್ತೀಯ. 24-25 ಅಪೊಸ್ತಲರು ಹೀಗೆ ಪ್ರಾರ್ಥಿಸಿದರು: “ಪ್ರಭುವೇ, ನೀನು ಎಲ್ಲಾ ಜನರ ಮನಸ್ಸುಗಳನ್ನು ತಿಳಿದಿರುವೆ. ಈ ಕೆಲಸವನ್ನು ಮಾಡುವುದಕ್ಕಾಗಿ ಈ ಇಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡಿರುವೆ ಎಂಬುದನ್ನು ನಮಗೆ ತೋರಿಸು. ಯೂದನು ಈ ಕೆಲಸಕ್ಕೆ ವಿಮುಖನಾಗಿ ತಾನು ಸೇರಬೇಕಿದ್ದಲ್ಲಿಗೆ ಹೊರಟುಹೋದನು. ಪ್ರಭುವೇ, ಅವನ ಸ್ಥಳದಲ್ಲಿ ಅಪೊಸ್ತಲನಾಗಿ ಯಾರು ನೇಮಕಗೊಳ್ಳಬೇಕೆಂಬುದನ್ನು ನಮಗೆ ತೋರಿಸು!” 26 ಬಳಿಕ ಅಪೊಸ್ತಲರು ಅವರಿಬ್ಬರಲ್ಲಿ ಒಬ್ಬನನ್ನು ಆರಿಸಿಕೊಳ್ಳಲು ಚೀಟಿಹಾಕಿದರು. ಚೀಟಿ ಮತ್ತೀಯನಿಗೆ ಬಂದದ್ದರಿಂದ ಹನ್ನೊಂದು ಮಂದಿಯೊಂದಿಗೆ ಅವನೂ ಅಪೊಸ್ತಲನಾದನು.
ಪವಿತ್ರಾತ್ಮನ ಆಗಮನ
2 ಪಂಚಾಶತ್ತಮ ಹಬ್ಬದ[d] ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. 2 ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು. 3 ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು. 4 ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.
5 ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು. 6 ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.
7 ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು![e] 8 ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು. 9 ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,[f] 10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್‌ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್‌ನವರು, 11 ಕ್ರೇಟ್‌ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.
12 ಜನರೆಲ್ಲರೂ ವಿಸ್ಮಯಗೊಂಡರು ಮತ್ತು ಗಲಿಬಿಲಿಯಾದರು. ಅವರು, “ಏನು ನಡೆಯುತ್ತಿದೆ?” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು. 13 ಕೆಲವರು ಅಪೊಸ್ತಲರನ್ನು ನೋಡಿ ನಗುತ್ತಾ, “ಇವರು ಅತಿಯಾಗಿ ದ್ರಾಕ್ಷಾರಸ ಕುಡಿದು ಮತ್ತರಾಗಿದ್ದಾರೆ” ಎಂದು ಹಾಸ್ಯಮಾಡಿದರು.
ಪೇತ್ರನ ಪ್ರಸಂಗ
14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ. 15 ನೀವು ಯೋಚಿಸಿಕೊಂಡಿರುವಂತೆ ಈ ಜನರು ಕುಡಿದು ಮತ್ತರಾದವರಲ್ಲ. ಈಗ ಮುಂಜಾನೆ ಒಂಭತ್ತು ಗಂಟೆಯಷ್ಟೆ! 16 ಆದರೆ ಈ ಹೊತ್ತು ಇಲ್ಲಿ ನಡೆಯುತ್ತಿರುವ ಸಂಗತಿಗಳ ಬಗ್ಗೆ ಪ್ರವಾದಿಯಾದ ಯೋವೇಲನು ಹೀಗೆ ಬರೆದಿದ್ದಾನೆ:
17 ‘ದೇವರು ಹೀಗೆನ್ನುತ್ತಾನೆ:
ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಎಲ್ಲಾ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಮಕ್ಕಳು, ಹೆಣ್ಣುಮಕ್ಕಳು ಪ್ರವಾದಿಸುವರು.
ನಿಮ್ಮ ಯುವಜನರು ದರ್ಶನಗಳನ್ನು ಕಾಣುವರು.
ನಿಮ್ಮ ವಯೋವೃದ್ಧರು ವಿಶೇಷ ಕನಸುಗಳನ್ನು ಕಾಣುವರು.
18 ಆ ಸಮಯದಲ್ಲಿ ನಾನು ನನ್ನ ಆತ್ಮವನ್ನು ನನ್ನ ದಾಸದಾಸಿಯರ ಮೇಲೆ ಸುರಿಸುವೆನು.
ಆಗ ಅವರು ಪ್ರವಾದಿಸುವರು.
19 ನಾನು ಆಕಾಶದಲ್ಲಿ ಅದ್ಭುತಕಾರ್ಯಗಳನ್ನು ತೋರಿಸುವೆನು.
ಭೂಮಿಯ ಮೇಲೆ ಸೂಚಕಕಾರ್ಯಗಳನ್ನು ಮಾಡುವೆನು.
ರಕ್ತ, ಬೆಂಕಿ ಮತ್ತು ಕಪ್ಪೊಗೆಗಳು ಅಲ್ಲಿರುವವು.
20 ಸೂರ್ಯನು ಕತ್ತಲಾಗುವನು,
ಚಂದ್ರನು ರಕ್ತದಂತೆ ಕೆಂಪಾಗುವನು,
ಆಗ ಪ್ರಭುವಿನ ಗಂಭೀರವಾದ ಮಹಾದಿನವು ಬರುವುದು;
21 ಪ್ರಭುವಿನ ಹೆಸರನ್ನು ಹೇಳಿಕೊಳ್ಳುವವರಿಗೆಲ್ಲ ರಕ್ಷಣೆ ಆಗುವುದು.’(C)
22 “ಯೆಹೂದ್ಯರೇ, ಈ ಮಾತುಗಳನ್ನು ಕೇಳಿರಿ: ನಜರೇತಿನ ಯೇಸು ಬಹು ವಿಶೇಷವಾದ ವ್ಯಕ್ತಿ. ದೇವರು ತಾನು ಯೇಸುವಿನ ಮೂಲಕ ಮಾಡಿದ ಶಕ್ತಿಯುತವಾದ ಮತ್ತು ಅದ್ಭುತವಾದ ಕಾರ್ಯಗಳ ಮೂಲಕ ಇದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾನೆ. ಈ ಸಂಗತಿಗಳನ್ನು ನೀವೆಲ್ಲರೂ ನೋಡಿದಿರಿ. ಆದ್ದರಿಂದ ಇದು ಸತ್ಯವೆಂದು ನಿಮಗೆ ಗೊತ್ತಿದೆ. 23 ಯೇಸುವನ್ನು ನಿಮಗೆ ಒಪ್ಪಿಸಲಾಯಿತು. ನೀವು ಕೆಟ್ಟಜನರ ಸಹಾಯದಿಂದ ಆತನನ್ನು ಶಿಲುಬೆಗೇರಿಸಿದಿರಿ. ಆದರೆ ಇವುಗಳೆಲ್ಲಾ ಸಂಭವಿಸುತ್ತವೆಯೆಂದು ದೇವರಿಗೆ ಗೊತ್ತಿತ್ತು. ಇದು ದೇವರ ಯೋಜನೆ. ದೇವರು ಬಹು ಕಾಲದ ಹಿಂದೆಯೇ ಈ ಯೋಜನೆಯನ್ನು ಮಾಡಿದನು. 24 ಯೇಸು ಮರಣವೇದನೆಯನ್ನು ಅನುಭವಿಸಿದನು. ಆದರೆ ದೇವರು ಆತನನ್ನು ಬಿಡಿಸಿದನು. ದೇವರು ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಮರಣವು ಯೇಸುವನ್ನು ಹಿಡಿದುಕೊಳ್ಳಲಾಗಲಿಲ್ಲ. 25 ಯೇಸುವಿನ ಬಗ್ಗೆ ದಾವೀದನು ಹೀಗೆ ಹೇಳಿದ್ದಾನೆ:
‘ಪ್ರಭುವು ಯಾವಾಗಲೂ ನನ್ನ ಮುಂದೆ ಇರುವುದನ್ನು ನಾನು ನೋಡುತ್ತಿದ್ದೆನು;
ನನ್ನನ್ನು ಸುರಕ್ಷಿತವಾಗಿಡಲು ಆತನು ನನ್ನ ಬಲಗಡೆಯಲ್ಲಿದ್ದಾನೆ.
26 ಆದ್ದರಿಂದ ನನ್ನ ಹೃದಯವು ಹರ್ಷಿಸುತ್ತದೆ.
ನನ್ನ ಬಾಯಿ ಆನಂದದಿಂದ ಮಾತಾಡುತ್ತದೆ.
ಹೌದು, ನನ್ನ ದೇಹವು ಸಹ ನಿರೀಕ್ಷೆಯಿಂದ ಜೀವಿಸುವುದು;
27 ಯಾಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ತೊರೆದುಬಿಡುವುದಿಲ್ಲ.
ನಿನ್ನ ಪರಿಶುದ್ಧನ ದೇಹವು ಸಮಾಧಿಯಲ್ಲಿ ಕೊಳೆಯಲು ನೀನು ಅವಕಾಶ ಕೊಡುವುದಿಲ್ಲ.
28 ಹೇಗೆ ಜೀವಿಸಬೇಕೆಂಬುದನ್ನು ನೀನು ನನಗೆ ಉಪದೇಶಿಸಿದೆ.
ನಿನ್ನ ಪ್ರಸನ್ನತೆಯು ನನ್ನಲ್ಲಿ ಮಹಾ ಆನಂದವನ್ನು ಉಂಟುಮಾಡುವುದು.’(D)
29 “ನನ್ನ ಸಹೋದರರೇ, ನಮ್ಮ ಪಿತೃವಾದ ದಾವೀದನ ಬಗ್ಗೆ ನಾನು ನಿಮಗೆ ನಿಜವಾಗಿಯೂ ಹೇಳಬಲ್ಲೆನು. ಅವನು ಸತ್ತುಹೋದನು ಮತ್ತು ಅವನಿಗೆ ಸಮಾಧಿಯಾಯಿತು. ಅವನ ಸಮಾಧಿಯು ನಮ್ಮ ಮಧ್ಯದಲ್ಲಿ ಇಂದಿನವರೆಗೂ ಇದೆ. 30 ದಾವೀದನು ಒಬ್ಬ ಪ್ರವಾದಿಯಾಗಿದ್ದನು[g] ಮತ್ತು ‘ನಿನ್ನ ಕುಟುಂಬದ ಒಬ್ಬನನ್ನು ನಿನ್ನಂತೆಯೇ ರಾಜನನ್ನಾಗಿ ಮಾಡುವೆನು’ ಎಂದು ದೇವರು ಅವನಿಗೆ ಆಣೆಯಿಟ್ಟು ವಾಗ್ದಾನ ಮಾಡಿದ್ದು ಅವನಿಗೆ ಗೊತ್ತಿತ್ತು. 31 ಅದು ನೆರವೇರುವುದಕ್ಕಿಂತ ಮೊದಲೇ ದಾವೀದನಿಗೆ ತಿಳಿದಿತ್ತು. ಆದಕಾರಣ ದಾವೀದನು ಪುನರುತ್ಥಾನ ಹೊಂದುವ ಕ್ರಿಸ್ತನ ಬಗ್ಗೆ,
‘ಆತನನ್ನು ಪಾತಾಳದಲ್ಲಿ ಬಿಡಲ್ಪಡಲಿಲ್ಲ.
ಆತನ ದೇಹವು ಸಮಾಧಿಯಲ್ಲಿ ಕೊಳೆಯಲಿಲ್ಲ’
ಎಂದಿದ್ದಾನೆ. 32 ಆದ್ದರಿಂದ ದೇವರು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದು ಯೇಸುವನ್ನೇ ಹೊರತು ದಾವೀದನನ್ನಲ್ಲ! ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ನಾವು ಆತನನ್ನು ಕಂಡೆವು! 33 ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು. ಈಗ ಯೇಸು ದೇವರೊಂದಿಗಿದ್ದಾನೆ, ದೇವರ ಬಲಗಡೆಯಲ್ಲಿದ್ದಾನೆ. ಈಗ ತಂದೆಯು (ದೇವರು) ಪವಿತ್ರಾತ್ಮನನ್ನು ಯೇಸುವಿಗೆ ಕೊಟ್ಟಿದ್ದಾನೆ. ಪವಿತ್ರಾತ್ಮನನ್ನು ಕೊಡುವುದಾಗಿ ದೇವರು ವಾಗ್ದಾನ ಮಾಡಿದ್ದನು. ಆದ್ದರಿಂದ ಯೇಸು ಈಗ ಆ ಆತ್ಮನನ್ನು ಸುರಿಸಿದ್ದಾನೆ. ನೀವು ನೋಡುತ್ತಿರುವುದು ಮತ್ತು ಕೇಳುತ್ತಿರುವುದು ಇದನ್ನೇ. 34-35 ಪರಲೋಕಕ್ಕೆ ಎತ್ತಲ್ಪಟ್ಟವನು ದಾವೀದನಲ್ಲ, ಯೇಸುವೇ. ದಾವೀದನೇ ಅದರ ಬಗ್ಗೆ ಹೇಳುತ್ತಾ,
‘ಪ್ರಭುವು (ದೇವರು) ನನ್ನ ಪ್ರಭುವಿಗೆ,
ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಗಳಿಗೆ ಪೀಠವಾಗಿ ಮಾಡುವ ತನಕ
ನನ್ನ ಬಲಗಡೆಯಲ್ಲಿ ಕುಳಿತುಕೊ ಎಂದು ತಿಳಿಸಿದನು’ ಎಂದಿದ್ದಾನೆ.(E)
36 “ಆದ್ದರಿಂದ ಯೆಹೂದ್ಯರೆಲ್ಲರೂ ಇದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು. ದೇವರು ಯೇಸುವನ್ನು ಪ್ರಭುವನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ. ನೀವು ಶಿಲುಬೆಗೇರಿಸಿದ ವ್ಯಕ್ತಿಯೇ ಆತನು!”
37 ಇದನ್ನು ಕೇಳಿದಾಗ, ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪೇತ್ರನನ್ನು ಮತ್ತು ಉಳಿದ ಅಪೊಸ್ತಲರನ್ನು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
38 ಪೇತ್ರನು ಅವರಿಗೆ, “ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲದೆ ದೇವರು ವಾಗ್ದಾನ ಮಾಡಿರುವ ಪವಿತ್ರಾತ್ಮನನ್ನು ಹೊಂದಿಕೊಳ್ಳುವಿರಿ. 39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು.
40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, “ಈ ದುಷ್ಟ ಸಂತತಿಯಿಂದ ತಪ್ಪಿಸಿಕೊಳ್ಳಿ” ಎಂದು ಬೇಡಿಕೊಂಡನು. 41 ಪೇತ್ರನು ಹೇಳಿದ್ದನ್ನು ಸ್ವೀಕರಿಸಿಕೊಂಡ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿನ ಸುಮಾರು ಮೂರುಸಾವಿರ ಜನರು ವಿಶ್ವಾಸಿಗಳ ಗುಂಪಿಗೆ ಸೇರಿದರು.
ಅನ್ಯೋನ್ಯ ಜೀವನ
42 ಇವರೆಲ್ಲರೂ ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವುದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. 43 ಅಪೊಸ್ತಲರು ಅನೇಕ ಶಕ್ತಿಯುತ ಮತ್ತು ಅದ್ಭುತಕಾರ್ಯಗಳನ್ನು ಮಾಡುತ್ತಿದ್ದರು; ಮತ್ತು ಪ್ರತಿಯೊಬ್ಬರಿಗೂ ದೇವರಲ್ಲಿ ಭಯಭಕ್ತಿ ಉಂಟಾಯಿತು. 44 ಎಲ್ಲಾ ವಿಶ್ವಾಸಿಗಳು ಒಟ್ಟಾಗಿ ವಾಸಿಸುತ್ತಿದ್ದರು. ಅವರು ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು. 45 ತಮ್ಮ ಜಮೀನನ್ನು ಮತ್ತು ತಾವು ಹೊಂದಿದ್ದ ವಸ್ತುಗಳನ್ನು ಮಾರಿ, ಬಂದ ಹಣವನ್ನೆಲ್ಲಾ ಕೊರತೆಯಲ್ಲಿದ್ದವರಿಗೆ ಹಂಚಿಕೊಡುತ್ತಿದ್ದರು; 46 ಪ್ರತಿದಿನ ದೇವಾಲಯದಲ್ಲಿ ಸೇರಿಬರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. ಅವರು ತಮ್ಮ ಮನೆಗಳಲ್ಲಿ ರೊಟ್ಟಿ ಮುರಿದು ಒಟ್ಟಾಗಿ ಊಟ ಮಾಡುತ್ತಿದ್ದರು. ಅವರ ಹೃದಯಗಳು ಆನಂದದಿಂದ ತುಂಬಿದ್ದವು. 47 ಅವರು ದೇವರನ್ನು ಕೊಂಡಾಡುತ್ತಿದ್ದರು ಮತ್ತು ಜನರೆಲ್ಲರೂ ಅವರನ್ನು ಇಷ್ಟಪಡುತ್ತಿದ್ದರು. ಪ್ರತಿದಿನವೂ ಹೆಚ್ಚುಹೆಚ್ಚು ಜನರು ರಕ್ಷಣೆ ಹೊಂದುತ್ತಿದ್ದರು; ಪ್ರಭುವು ಅವರನ್ನೆಲ್ಲಾ ವಿಶ್ವಾಸಿಗಳ ಸಭೆಗೆ ಸೇರಿಸುತ್ತಿದ್ದನು.
ಪೇತ್ರನಿಂದ ಗುಣಹೊಂದಿದ ಕುಂಟ
3 ಒಂದು ದಿನ ಪೇತ್ರ ಮತ್ತು ಯೋಹಾನ ದೇವಾಲಯಕ್ಕೆ ಹೋದರು. ಆಗ ಮಧ್ಯಾಹ್ನ ಮೂರು ಗಂಟೆಯ ಸಮಯವಾಗಿತ್ತು. ಈ ವೇಳೆಯಲ್ಲೇ ಪ್ರತಿದಿನ ಪ್ರಾರ್ಥನಾಕೂಟ ನಡೆಯುತ್ತಿತ್ತು. 2 ಅವರು ದೇವಾಲಯಕ್ಕೆ ಹೋಗುತ್ತಿದ್ದಾಗ ಅಲ್ಲೊಬ್ಬ ಹುಟ್ಟುಕುಂಟನಿದ್ದನು. ಅವನಿಗೆ ನಡೆಯಲಾಗುತ್ತಿರಲಿಲ್ಲ. ಆದ್ದರಿಂದ ಅವನ ಕೆಲವು ಸ್ನೇಹಿತರು ಅವನನ್ನು ಪ್ರತಿದಿನ ದೇವಾಲಯಕ್ಕೆ ಹೊತ್ತುಕೊಂಡು ಬಂದು, ದೇವಾಲಯದ ಹೊರ ಬಾಗಿಲುಗಳ ಒಂದರ ಸಮೀಪದಲ್ಲಿ ಕುಳ್ಳಿರಿಸುತ್ತಿದ್ದರು. ಆ ಬಾಗಿಲಿನ ಹೆಸರು “ಸುಂದರ ದ್ವಾರ.” ಅವನು ದೇವಾಲಯಕ್ಕೆ ಹೋಗುವ ಜನರಿಂದ ಭಿಕ್ಷೆ ಬೇಡುತ್ತಿದ್ದನು. 3 ಅಂದು ದೇವಾಲಯದೊಳಕ್ಕೆ ಹೋಗುತ್ತಿದ್ದ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಕೇಳಿದನು.
4 ಪೇತ್ರ ಮತ್ತು ಯೋಹಾನ ಆ ಕುಂಟನಿಗೆ, “ನಮ್ಮನ್ನು ನೋಡು!” ಎಂದರು. 5 ಅವನು ಅವರನ್ನು ನೋಡಿದನು. ಅವರು ಸ್ವಲ್ಪ ಹಣಕೊಡಬಹುದೆಂದು ಅವನು ಭಾವಿಸಿಕೊಂಡನು. 6 ಆದರೆ ಪೇತ್ರನು, “ನನ್ನಲ್ಲಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿರುವುದನ್ನು ನಿನಗೆ ಕೊಡಬಲ್ಲೆನು. ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದುನಡೆ!” ಎಂದು ಹೇಳಿ,
7 ಆ ಮನುಷ್ಯನ ಕೈಹಿಡಿದು ಎತ್ತಿದನು. ಆ ಕೂಡಲೇ ಅವನ ಕಾಲುಗಳು ಮತ್ತು ಪಾದಗಳು ಬಲಗೊಂಡವು. 8 ಅವನು ಜಿಗಿದು, ತನ್ನ ಪಾದಗಳ ಮೇಲೆ ನಿಂತುಕೊಂಡು ನಡೆಯತೊಡಗಿದನು. ಅವನೂ ಅವರೊಂದಿಗೆ ದೇವಾಲಯಕ್ಕೆ ಹೋದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಕೊಂಡಾಡುತ್ತಿದ್ದನು. 9-10 ಜನರೆಲ್ಲರೂ ಅವನನ್ನು ಗುರುತಿಸಿದರು. ಸುಂದರ ದ್ವಾರದ ಬಳಿಯಲ್ಲಿ ಯಾವಾಗಲೂ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದ ಕುಂಟನೇ ಇವನೆಂದು ಜನರಿಗೆ ತಿಳಿದಿತ್ತು. ಈಗ ಅದೇ ವ್ಯಕ್ತಿಯು ನಡೆಯುತ್ತಾ ದೇವರನ್ನು ಕೊಂಡಾಡುತ್ತಿರುವುದನ್ನು ಕಂಡು ಅವರು ಆಶ್ಚರ್ಯಗೊಂಡು ಬೆರಗಾದರು.
ಜನರಿಗೆ ಪೇತ್ರನ ವಿವರಣೆ
11 ಆ ಮನುಷ್ಯನು ಪೇತ್ರ ಮತ್ತು ಯೋಹಾನರನ್ನು ಹಿಡಿದುಕೊಂಡೇ ನಿಂತಿದ್ದನು. ಅವನಿಗೆ ಗುಣವಾದದ್ದರಿಂದ ಜನರೆಲ್ಲರೂ ಆಶ್ಚರ್ಯಗೊಂಡಿದ್ದರು. ಸೊಲೊಮೋನನ ಮಂಟಪದ ಬಳಿ ನಿಂತಿದ್ದ ಪೇತ್ರ ಮತ್ತು ಯೋಹಾನರ ಬಳಿ ಅವರು ಓಡಿಬಂದರು.
12 ಆಗ ಪೇತ್ರನು ಅವರಿಗೆ, “ನನ್ನ ಯೆಹೂದ್ಯ ಸಹೋದರರೇ, ಇದನ್ನು ಕಂಡು ನೀವು ಯಾಕೆ ಆಶ್ಚರ್ಯಗೊಂಡಿರುವಿರಿ? ಈ ಮನುಷ್ಯನನ್ನು ನಡೆಯುವಂತೆ ಮಾಡಿದ್ದು ನಮ್ಮ ಶಕ್ತಿಯೆಂದು ನೀವು ನಮ್ಮನ್ನು ನೋಡುತ್ತಿರುವಿರಾ? ನಾವು ಒಳ್ಳೆಯವರಾಗಿರುವುದರಿಂದ ಈ ಕಾರ್ಯವಾಯಿತೆಂದು ಭಾವಿಸಿಕೊಂಡಿದ್ದೀರಾ? 13 ಈ ಕಾರ್ಯವನ್ನು ಮಾಡಿದ್ದು ನಾವಲ್ಲ! ದೇವರು! ಆತನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ[h] ದೇವರು. ಆತನೇ ನಮ್ಮ ಪಿತೃಗಳೆಲ್ಲರ ದೇವರು. ಆತನು ತನ್ನ ವಿಶೇಷ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ಆದರೆ ನೀವು ಯೇಸುವನ್ನು ಕೊಲ್ಲಲು ಒಪ್ಪಿಸಿಕೊಟ್ಟಿರಿ. ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ನಿರ್ಧರಿಸಿದನು. ಆದರೆ ನೀವು ಪಿಲಾತನಿಗೆ, ನಮಗೆ ಯೇಸು ಬೇಕಿಲ್ಲವೆಂದು ಹೇಳಿದಿರಿ. 14 ಯೇಸು ಪರಿಶುದ್ಧನಾಗಿದ್ದನು ಮತ್ತು ಒಳ್ಳೆಯವನಾಗಿದ್ದನು. ಆದರೆ ನೀವು ಆತನನ್ನು ತಿರಸ್ಕರಿಸಿದಿರಿ. ಆತನ ಬದಲಾಗಿ ಕೊಲೆಗಾರನನ್ನು[i] ಬಿಡುಗಡೆ ಮಾಡಬೇಕೆಂದು ಪಿಲಾತನನ್ನು ಬೇಡಿಕೊಂಡಿರಿ. 15 ಹೀಗೆ ನೀವು ಜೀವದಾಯಕನನ್ನೇ ಕೊಂದುಹಾಕಿದಿರಿ! ಆದರೆ ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಇದಕ್ಕೆ ನಾವೇ ಸಾಕ್ಷಿಗಳು. ಇದನ್ನು ನಾವು ಕಣ್ಣಾರೆ ಕಂಡಿದ್ದೇವೆ.
16 “ನಿಮ್ಮ ಕಣ್ಣೆದುರಿಗಿರುವ ಇವನ ಪರಿಚಯ ನಿಮ್ಮೆಲ್ಲರಿಗೂ ಇದೆ. ಇವನು ಗುಣವಾದದ್ದಕ್ಕೆ ಇವನು ಯೇಸುವಿನ ಹೆಸರಿನಲ್ಲಿ ಇಟ್ಟ ನಂಬಿಕೆಯೇ ಕಾರಣ. ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನನ್ನು ನಿಮ್ಮೆಲ್ಲರ ಮುಂದೆ ಗುಣಪಡಿಸಿತು.
17 “ಸಹೋದರರೇ, ನೀವು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆಂದು ನನಗೆ ಗೊತ್ತಿದೆ. ನಿಮ್ಮ ನಾಯಕರು ಸಹ ಅರ್ಥಮಾಡಿಕೊಳ್ಳಲಿಲ್ಲ. 18 ಹೀಗಾಗುತ್ತದೆ ಎಂದು ದೇವರು ಮೊದಲೇ ತಿಳಿಸಿದ್ದನು. ಕ್ರಿಸ್ತನು ಶ್ರಮೆ ಅನುಭವಿಸಿ ಸಾಯುವನೆಂದು ದೇವರು ತನ್ನ ಪ್ರವಾದಿಗಳ ಮೂಲಕ ಮೊದಲೇ ತಿಳಿಸಿದ್ದನ್ನು ಹೀಗೆ ನೆರವೇರಿಸಿದ್ದಾನೆ. 19 ಆದ್ದರಿಂದ ನೀವು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿ. ಆಗ ಆತನು ನಿಮ್ಮ ಪಾಪಗಳನ್ನು ಕ್ಷಮಿಸುವನು. 20 ಪ್ರಭುವು ನಿಮಗೆ ಆತ್ಮಿಕ ವಿಶ್ರಾಂತಿಯನ್ನು ಕೊಡುವನು. ಆತನು ಕ್ರಿಸ್ತನನ್ನಾಗಿ ಆರಿಸಿಕೊಂಡ ಯೇಸುವನ್ನು ನಿಮಗೆ ಕೊಡುವನು.
21 “ಆದರೆ ಎಲ್ಲವನ್ನು ಸರಿಪಡಿಸುವ ಕಾಲ ಬರುವ ತನಕ ಯೇಸು ಪರಲೋಕದಲ್ಲೇ ಇರಬೇಕು. ದೇವರು ಬಹುಕಾಲದ ಹಿಂದೆ ತನ್ನ ಪವಿತ್ರ ಪ್ರವಾದಿಗಳ ಸಂದೇಶದ ಮೂಲಕ ಮಾತಾಡಿದಾಗ, ಈ ಕಾಲದ ಬಗ್ಗೆ ಹೇಳಿದನು. 22 ಮೋಶೆಯು ಇಂತೆಂದಿದ್ದಾನೆ: ‘ನಿಮ್ಮ ದೇವರಾದ ಪ್ರಭುವು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ನಿಮ್ಮ ಸ್ವಂತ ಜನರ ಮಧ್ಯದಿಂದಲೇ ಆ ಪ್ರವಾದಿ ಬರುವನು. ಆತನು ನನ್ನಂತೆ ಇರುವನು. ಆ ಪ್ರವಾದಿ ಹೇಳುವ ಪ್ರತಿಯೊಂದಕ್ಕೂ ನೀವು ವಿಧೇಯರಾಗಬೇಕು. 23 ಆತನಿಗೆ ವಿಧೇಯನಾಗದವನು ದೇವಜನರಿಂದ ಬೇರ್ಪಟ್ಟು ಮರಣ ಹೊಂದುವನು.’(F)
24 “ಸಮುವೇಲನು ಮತ್ತು ಅವನ ನಂತರದ ಪ್ರವಾದಿಗಳು ಇಂದಿನ ಈ ಕಾಲದ ಬಗ್ಗೆ ಮಾತಾಡಿದರು. 25 ಆ ಪ್ರವಾದಿಗಳು ಹೇಳಿದ ಸಂಗತಿಗಳನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃಗಳೊಂದಿಗೆ ಮಾಡಿಕೊಂಡ ಒಪ್ಪಂದವನ್ನು ನೀವು ಸ್ವೀಕರಿಸಿಕೊಂಡಿರುವಿರಿ. ದೇವರು ನಿಮ್ಮ ಪಿತೃವಾದ ಅಬ್ರಹಾಮನಿಗೆ, ‘ನಿನ್ನ ಸಂತತಿಯಿಂದ ಭೂಮಿಯ ಮೇಲಿರುವ ಜನರೆಲ್ಲರು ಆಶೀರ್ವಾದ ಹೊಂದುವರು’(G) ಎಂದು ಹೇಳಿದನು. 26 ದೇವರು ತನ್ನ ವಿಶೇಷ ಸೇವಕನನ್ನು (ಯೇಸುವನ್ನು) ಮೊಟ್ಟಮೊದಲು ನಿಮ್ಮ ಬಳಿಗೆ ಕಳುಹಿಸಿದನು. ನಿಮ್ಮನ್ನು ಆಶೀರ್ವದಿಸುವುದಕ್ಕಾಗಿ ದೇವರು ಯೇಸುವನ್ನು ಕಳುಹಿಸಿದನು. ಆತನು ನಿಮ್ಮನ್ನು ನಿಮ್ಮ ಕೆಟ್ಟಕಾರ್ಯಗಳಿಂದ ದೂರಮಾಡಿ ಆಶೀರ್ವದಿಸುತ್ತಾನೆ.”
Kannada Holy Bible: Easy-to-Read Version. All rights reserved. © 1997 Bible League International