Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಜೆಕರ್ಯ 1-7

ತನ್ನ ಜನರು ಹಿಂದಿರುಗಿ ಬರಬೇಕೆಂದು ಯೆಹೋವನು ಆಶಿಸುತ್ತಾನೆ

ಪರ್ಶಿಯಾದಲ್ಲಿ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಬೆರೆಕ್ಯನ ಮಗನಾದ ಜೆಕರ್ಯನಿಗೆ ಯೆಹೋವನಿಂದ ಸಂದೇಶವು ದೊರಕಿತು. ಬೆರೆಕ್ಯನು ಪ್ರವಾದಿಯಾದ ಇದ್ದೋವಿನ ಮಗನು. ಇದು ಆತನ ಸಂದೇಶ:

ನಿಮ್ಮ ಪೂರ್ವಿಕರ ಮೇಲೆ ಯೆಹೋವನು ಬಹಳವಾಗಿ ಕೋಪಗೊಂಡಿದ್ದಾನೆ. ಆದ್ದರಿಂದ ನಿನ್ನ ಜನರಿಗೆ ನೀನು ಈ ವಿಷಯಗಳನ್ನು ತಿಳಿಸಬೇಕು. ಯೆಹೋವನು ಹೇಳುವುದೇನೆಂದರೆ, “ನನ್ನ ಬಳಿಗೆ ಹಿಂದಿರುಗಿರಿ. ಆಗ ನಾನು ನಿಮ್ಮ ಬಳಿಗೆ ಹಿಂದಿರುಗುವೆನು” ಇದು ಸರ್ವಶಕ್ತನಾದ ಯೆಹೋವನ ಮಾತುಗಳು.

ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರಂತೆ ಆಗಬೇಡಿರಿ. ಹಿಂದಿನ ಕಾಲದಲ್ಲಿ ಪ್ರವಾದಿಗಳು ಅವರ ಸಂಗಡ ಮಾತನಾಡಿದರು. ಅವರು, ‘ಸರ್ವಶಕ್ತನಾದ ಯೆಹೋವನು ನಿಮ್ಮ ಕೆಟ್ಟಜೀವಿತವನ್ನು ಬದಲಾಯಿಸಲು ಇಷ್ಟಪಡುತ್ತಾನೆ. ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಿರಿ.’ ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ.” ಇದು ಯೆಹೋವನ ನುಡಿ.

ಯೆಹೋವನು ಹೀಗೆನ್ನುತ್ತಾನೆ: “ನಿಮ್ಮ ಪೂರ್ವಿಕರು ದಾಟಿಹೋದರು. ಆ ಪ್ರವಾದಿಗಳು ನಿತ್ಯಕಾಲಕ್ಕೂ ಜೀವಿಸಲಿಲ್ಲ. ಪ್ರವಾದಿಗಳು ನನ್ನ ಸೇವಕರು. ನಿಮ್ಮ ಪೂರ್ವಿಕರಿಗೆ ನ್ಯಾಯಪ್ರಮಾಣಗಳನ್ನು ಬೋಧಿಸಲು ನಾನು ಅವರನ್ನು ಉಪಯೋಗಿಸಿದೆನು. ನಿಮ್ಮ ಪೂರ್ವಿಕರು ಕಟ್ಟಕಡೆಗೆ ಪಾಠವನ್ನು ಕಲಿತರು. ಅವರು, ‘ಸರ್ವಶಕ್ತನಾದ ಯೆಹೋವನು ತಾನು ಹೇಳಿದ್ದನ್ನು ನೆರವೇರಿಸಿದನು. ನಮ್ಮ ದುಷ್ಕೃತ್ಯಗಳಿಗಾಗಿ ನಮ್ಮನ್ನು ಶಿಕ್ಷಿಸಿದನು’ ಎಂದು ಹೇಳಿದರು ಮತ್ತು ದೇವರ ಕಡೆಗೆ ತಿರುಗಿದರು.”

ನಾಲ್ಕು ಕುದುರೆಗಳು

ಪರ್ಶಿಯದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಹನ್ನೊಂದನೇ ತಿಂಗಳಿನ (ಶೆಬಾಟ್) ಇಪ್ಪತ್ತನಾಲ್ಕನೆಯ ದಿವಸ ಜೆಕರ್ಯನು ಯೆಹೋವನಿಂದ ಇನ್ನೊಂದು ಸಂದೇಶವನ್ನು ಪಡೆದನು. ಈತನು ಪ್ರವಾದಿಯಾದ ಇದ್ದೋವಿನ ಮಗನಾದ ಬೆರೆಕ್ಯನ ಮಗನು. ಆ ಸಂದೇಶವು ಹೀಗಿತ್ತು.

ರಾತ್ರಿವೇಳೆಯಲ್ಲಿ ಒಬ್ಬ ಮನುಷ್ಯನು ಕೆಂಪು ಬಣ್ಣದ ಕುದುರೆಯ ಮೇಲೆ ಸವಾರಿ ಮಾಡುವದನ್ನು ಕಂಡೆನು. ಅವನು ಕಣಿವೆಯ ಸುಗಂಧ ಮರಗಳ ಬಳಿ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು ಮತ್ತು ಬಿಳಿ ಕುದುರೆಗಳು ನಿಂತಿದ್ದವು. ಆಗ ನಾನು, “ಸ್ವಾಮೀ, ಈ ಕುದುರೆಗಳು ಯಾಕೆ?” ಎಂದು ವಿಚಾರಿಸಿದೆನು.

ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನು ಉತ್ತರಿಸುತ್ತಾ, “ಈ ಕುದುರೆಗಳು ಯಾತಕ್ಕಾಗಿ ಎಂದು ನಾನು ನಿನಗೆ ತೋರಿಸುತ್ತೇನೆ” ಅಂದನು.

10 ಆಗ ಸುಗಂಧ ಮರಗಳ ಬಳಿ ನಿಂತಿದ್ದ ಮನುಷ್ಯನು, “ಈ ಕುದುರೆಗಳು ಭೂಮಿಯ ಮೇಲೆ ಅತ್ತಿತ್ತ ತಿರುಗಾಡುವಂತೆ ಯೆಹೋವನು ಕಳುಹಿಸಿದನು” ಎಂದನು.

11 ಆಗ ಯೆಹೋವನ ದೂತನೊಂದಿಗೆ ಆ ಕುದುರೆಗಳು ಮಾತನಾಡುತ್ತಾ, “ನಾವು ಭೂಮಿಯ ಮೇಲೆ ಅತ್ತಿತ್ತ ಸಂಚರಿಸಿದೆವು. ಎಲ್ಲೆಲ್ಲಿಯೂ ಶಾಂತಿ ಸಮಾಧಾನವಿದೆ” ಎಂದವು.

12 ಆಗ ಯೆಹೋವನ ದೂತನು, “ಯೆಹೋವನೇ, ಜೆರುಸಲೇಮನ್ನೂ ಯೆಹೂದದ ಇತರ ನಗರಗಳನ್ನೂ ಸಂತೈಸಲು ಇನ್ನೆಷ್ಟು ಕಾಲಬೇಕು? ಈ ಪಟ್ಟಣಗಳ ಮೇಲೆ ಈಗಾಗಲೇ ಎಪ್ಪತ್ತು ವರ್ಷಗಳ ಕಾಲ ನಿನ್ನ ಕೋಪವನ್ನು ಪ್ರದರ್ಶಿಸಿರುವೆ” ಎಂದು ಹೇಳಿದನು.

13 ಆಗ ನನ್ನೊಡನೆ ಮಾತಾಡುತ್ತಿದ್ದ ದೇವದೂತನಿಗೆ ಯೆಹೋವನು ಉತ್ತರಿಸಿ ಅವನನ್ನು ಒಳ್ಳೆಯ ಆದರಣೆಯ ಮಾತುಗಳಿಂದ ಸಂತೈಸಿದನು.

14 ಆಗ ಆ ದೂತನು ಜನರಿಗೆ ತಿಳಿಸಲು ಈ ವಿಷಯವನ್ನು ನನಗೆ ಹೇಳಿದನು: ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,

“ಜೆರುಸಲೇಮಿನ ಮೇಲೆಯೂ ಚೀಯೋನಿನ ಮೇಲೆಯೂ ನನಗೆ ಆಳವಾದ ಪ್ರೀತಿಯಿದೆ.
15     ತಾವು ಸುರಕ್ಷಿತರಾಗಿದ್ದೇವೆ ಎಂದು ನೆನಸುವ ಜನಾಂಗಗಳ ಮೇಲೆ ನಾನು ಕೋಪಗೊಳ್ಳುವೆನು.
ನಾನು ಸ್ವಲ್ಪ ಕೋಪಗೊಂಡಿದ್ದರಿಂದ
    ನನ್ನ ಜನರನ್ನು ಶಿಕ್ಷಿಸಲು ಆ ಜನಾಂಗಗಳನ್ನು ಉಪಯೋಗಿಸಿಕೊಂಡೆನು.
    ಆದರೆ ಆ ಜನಾಂಗಗಳು ಅತಿಯಾಗಿ ಅವರನ್ನು ಹಾನಿಮಾಡಿದರು.”
16 ಆದ್ದರಿಂದ ಯೆಹೋವನು ಹೀಗೆನ್ನುತ್ತಾನೆ: “ನಾನು ಜೆರುಸಲೇಮಿಗೆ ಹಿಂತಿರುಗಿ ಬರುವೆನು. ಬಂದು ಆಕೆಯನ್ನು ಸಂತೈಸುವೆನು.”
    ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಜೆರುಸಲೇಮ್ ತಿರುಗಿ ಕಟ್ಟಲ್ಪಡುವದು ಮತ್ತು ನನ್ನ ಆಲಯವು ಅಲ್ಲಿ ಕಟ್ಟಲ್ಪಡುವದು.”

17 ಆಗ ದೂತನು: “ಈ ವಿಷಯವನ್ನು ಜನರಿಗೆ ತಿಳಿಸು, ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
    ‘ನನ್ನ ಪಟ್ಟಣಗಳು ತಿರುಗಿ ಐಶ್ವರ್ಯದಿಂದ ತುಂಬುವವು.
ಚೀಯೋನನ್ನು ನಾನು ಸಂತೈಸುವೆನು.
    ನಾನು ಜೆರುಸಲೇಮನ್ನು ನನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವೆನು’” ಎಂದನು.

ನಾಲ್ಕುಕೊಂಬುಗಳೂ ನಾಲ್ಕು ಕೆಲಸಗಾರರೂ

18 ಆಗ ನಾನು ಮೇಲೆ ನೋಡಿದಾಗ ನಾಲ್ಕು ಕೊಂಬುಗಳನ್ನು ಕಂಡೆನು. 19 “ಈ ಕೊಂಬುಗಳೇನು?” ಎಂದು ನಾನು ದೇವದೂತನೊಂದಿಗೆ ವಿಚಾರಿಸಿದೆನು.

ಅದಕ್ಕವನು, “ಇವು ಬಲಿಷ್ಠವಾದ ಕೊಂಬುಗಳು (ಬಲಿಷ್ಠವಾದ ಜನಾಂಗಗಳು); ಇಸ್ರೇಲ್, ಯೆಹೂದ ಮತ್ತು ಜೆರುಸಲೇಮಿನ ಜನರನ್ನು ಪರದೇಶಗಳಿಗೆ ಚದರಿಹೋಗುವಂತೆ ಮಾಡಿವೆ” ಅಂದನು.

20 ಯೆಹೋವನು ನನಗೆ ನಾಲ್ಕು ಮಂದಿ ಕೆಲಸಗಾರರನ್ನು ತೋರಿಸಿದನು. 21 “ಯಾವ ಕೆಲಸಕ್ಕಾಗಿ ಈ ಕೆಲಸಗಾರರು ಬರುತ್ತಿದ್ದಾರೆ?” ಎಂದು ನಾನು ವಿಚಾರಿಸಿದೆನು.

ಅದಕ್ಕಾತನು, “ಯೆಹೂದದ ಜನರನ್ನು ವಿದೇಶಗಳಲ್ಲಿ ಚದರಿ ಹೋಗುವಂತೆ ಮಾಡಿದ ಜನಾಂಗಗಳನ್ನು ಈ ಕೊಂಬುಗಳು ಸೂಚಿಸುತ್ತವೆ. ಈ ಕೊಂಬುಗಳು ಯೆಹೂದದ ಜನರನ್ನು ಎತ್ತಿ ಪರದೇಶಗಳಿಗೆ ಬಿಸಾಡಿದವು. ಈ ಕೊಂಬುಗಳು ಯಾರಿಗೂ ದಯೆ ತೋರಿಸಲಿಲ್ಲ. ಆದರೆ ಈ ನಾಲ್ಕು ಮಂದಿ ಕೆಲಸಗಾರರು ಆ ಕೊಂಬುಗಳಿಗೆ ಭಯಪಡಿಸಿ ಅವುಗಳನ್ನು ಎತ್ತಿ ಬಿಸಾಡಲು ಬಂದಿದ್ದಾರೆ” ಎಂದು ಹೇಳಿದನು.

ಜೆರುಸಲೇಮನ್ನು ಅಳತೆ ಮಾಡಿದ್ದು

ಆಗ ನಾನು ಮೇಲಕ್ಕೆ ನೋಡಿದಾಗ ಒಬ್ಬ ಮನುಷ್ಯನು ಕೈಯಲ್ಲಿ ಒಂದು ಹಗ್ಗ ಮತ್ತು ಅಳತೆ ಮಾಡುವ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದನ್ನು ಕಂಡೆನು. “ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು.

“ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು.

ಆಗ ನನ್ನೊಡನೆ ಮಾತನಾಡುತ್ತಿದ್ದ ದೂತನು ನನ್ನನ್ನು ಬಿಟ್ಟುಹೋದನು. ಅವನೊಡನೆ ಮಾತನಾಡಲು ಇನ್ನೊಬ್ಬ ದೂತನು ಬಂದನು. ಅವನು, “ಓಡಿಹೋಗಿ ಆ ಯೌವನಸ್ಥನಿಗೆ ಜೆರುಸಲೇಮು ಅಳತೆ ಮಾಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ ಎಂದು ಹೇಳು. ಅಲ್ಲದೆ ಅವನಿಗೆ ಈ ವಿಷಯವನ್ನೂ ತಿಳಿಸು:

‘ಜೆರುಸಲೇಮ್ ಗೋಡೆಗಳಿಲ್ಲದ ಪಟ್ಟಣವಾಗುವದು.
    ಯಾಕೆಂದರೆ ಅಷ್ಟೊಂದು ಜನರೂ ಪಶುಗಳೂ ಅಲ್ಲಿ ವಾಸಿಸುವವು.’
ಯೆಹೋವನು ಹೇಳುವುದೇನೆಂದರೆ,
‘ನಾನು ಆಕೆಯ ಸುತ್ತಲೂ ಆಕೆಯನ್ನು ಸಂರಕ್ಷಿಸುವ ಬೆಂಕಿಯ ಗೋಡೆಯಂತಿರುವೆನು.
    ಮತ್ತು ನಾನು ಅಲ್ಲಿಯೇ ವಾಸಿಸುವದರಿಂದ ಆ ನಗರಕ್ಕೆ ಮಹಿಮೆಯನ್ನು ತರುವೆನು.’”

ತಮ್ಮ ಮನೆಗೆ ಬರಲು ದೇವರು ತನ್ನ ಜನರನ್ನು ಕರೆಯುತ್ತಾನೆ

ಯೆಹೋವನು ಹೀಗೆನ್ನುತ್ತಾನೆ,
“ಅವಸರಪಡುತ್ತಾ ಉತ್ತರದ ದೇಶಗಳಿಂದ ಹೊರಬನ್ನಿರಿ.
    ಹೌದು, ನಾನು ನಿಮ್ಮ ಜನರನ್ನು ಪ್ರತಿಯೊಂದು ದಿಕ್ಕಿಗೂ ಚದರಿಸಿರುವುದು ನಿಜ.
ಚೀಯೋನಿನ ಜನರಾದ ನೀವು ಬಾಬಿಲೋನಿನಲ್ಲಿ ವಾಸಿಸುತ್ತಿದ್ದೀರಿ.
    ಅಲ್ಲಿಂದ ತಪ್ಪಿಸಿಕೊಂಡು ಬನ್ನಿರಿ. ಆ ನಗರದಿಂದ ಓಡಿಹೋಗಿರಿ.”
ಇದು ಸರ್ವಶಕ್ತನಾದ ಯೆಹೋವನ ನುಡಿ.
“ನಿಮ್ಮ ವಸ್ತುಗಳನ್ನು ಕದ್ದುಕೊಂಡ ಜನಾಂಗಗಳಿಗೆ ಆತನು ನನ್ನನ್ನು ಕಳುಹಿಸಿದನು.
    ನಿಮಗೆ ಗೌರವವನ್ನು ತರುವುದಕ್ಕಾಗಿ ಆತನು ನನ್ನನ್ನು ಕಳುಹಿಸಿದನು.
ಯಾಕೆಂದರೆ, ನಿಮಗೆ ಹಾನಿ ಮಾಡಿದರೆ
    ಅದು ದೇವರ ಕಣ್ಣುಗುಡ್ಡೆಗೆ ಹಾನಿ ಮಾಡಿದಂತೆ.
ಬಾಬಿಲೋನಿನ ಜನರು ನನ್ನ ಜನರನ್ನು ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿದರು.
    ಆದರೆ ನಾನು ಅವರನ್ನು ಹೊಡೆಯುವೆನು.
    ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು.”
ಆಗ ಯೆಹೋವ ದೇವರು ನನ್ನನ್ನು ಕಳುಹಿಸಿದನೆಂಬುದು ನಿಮಗೆ ಗೊತ್ತಾಗುವದು.

10 ಯೆಹೋವನು ಹೀಗೆನ್ನುತ್ತಾನೆ,
“ಚೀಯೋನೇ, ಆನಂದಿಸು, ಯಾಕೆಂದರೆ ನಾನು ಬಂದು
    ನಿಮ್ಮ ಪಟ್ಟಣದಲ್ಲಿ ವಾಸಿಸುವೆನು.
11 ಆ ಸಮಯದಲ್ಲಿ ವಿವಿಧ ಜನಾಂಗಗಳ ಜನರು
    ನನ್ನನ್ನು ನೋಡಲು ಬರುವರು.
ಅವರು ನನ್ನ ಜನರಾಗುವರು.
    ಮತ್ತು ನಾನು ನಿಮ್ಮ ನಗರದಲ್ಲಿ ವಾಸಿಸುವೆನು.”
ಆಗ ಸರ್ವಶಕ್ತನಾದ ದೇವರು ನನ್ನನ್ನು ಕಳುಹಿಸಿದ್ದಾನೆಂದು
    ನಿಮಗೆ ಗೊತ್ತಾಗುವುದು.

12 ಯೆಹೋವನು ತಿರುಗಿ ಜೆರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು.
    ಯೆಹೂದವು ಆ ಪವಿತ್ರ ದೇಶದಲ್ಲಿರುವ ಆತನ ಪಾಲು.
13 ಎಲ್ಲರೂ ಮೌನವಾಗಿರಿ.
    ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಹೊರಬರುತ್ತಿದ್ದಾನೆ.

ಪ್ರಧಾನ ಯಾಜಕನು

ದೇವದೂತನು ನನಗೆ ಪ್ರಧಾನ ಯಾಜಕನಾದ ಯೆಹೋಶುವನನ್ನು ತೋರಿಸಿದನು. ಅವನು ಯೆಹೋವನ ದೂತನ ಮುಂದೆ ನಿಂತಿದ್ದನು. ಸೈತಾನನು ಯೆಹೋಶುವನ ಬಲಗಡೆಯಲ್ಲಿ ನಿಂತಿದ್ದನು. ಯೆಹೋಶುವನು ಕೆಟ್ಟಕೃತ್ಯಗಳನ್ನು ಮಾಡಿದ್ದಾನೆಂದು ದೂರು ಹೇಳುವದಕ್ಕಾಗಿ ಸೈತಾನನು ಅಲ್ಲಿ ನಿಂತಿದ್ದನು. ಆಗ ಯೆಹೋವನ ದೂತನು ಹೇಳಿದ್ದೇನೆಂದರೆ, “ಯೆಹೋವನು ನಿನ್ನನ್ನು ಖಂಡಿಸಲಿ ಮತ್ತು ಟೀಕೆ ಮಾಡಲಿ. ಯೆಹೋವನು ತನ್ನ ವಿಶೇಷ ನಗರವನ್ನಾಗಿ ಜೆರುಸಲೇಮನ್ನು ಆರಿಸಿಕೊಂಡಿದ್ದಾನೆ. ಆ ನಗರವನ್ನು ಆತನೇ ಕಾಪಾಡಿದನು. ಬೆಂಕಿಯಿಂದ ಎಳೆದುತೆಗೆದ ಕೊಳ್ಳಿಯಂತೆ ಆತನು ಅದನ್ನು ಕಾಪಾಡಿದನು.”

ಯೆಹೋಶುವನು ದೂತನ ಮುಂದೆ ನಿಂತುಕೊಂಡಿದ್ದನು. ಅವನ ವಸ್ತ್ರವು ಮಲಿನವಾಗಿತ್ತು. ಆಗ ಆ ದೂತನು ಪಕ್ಕದಲ್ಲಿ ನಿಂತಿದ್ದ ಬೇರೆ ದೂತರನ್ನುದ್ದೇಶಿಸಿ, “ಯೆಹೋಶುವನ ಮೇಲಿರುವ ಮೈಲಿಗೆ ವಸ್ತ್ರವನ್ನು ತೆಗೆಯಿರಿ” ಎಂದು ಹೇಳಿದನು. ಆಗ ದೂತನು ಯೆಹೋಶುವನಿಗೆ, “ನಾನು ನಿನ್ನ ದೋಷಗಳನ್ನು ತೊಳೆದುಬಿಟ್ಟಿರುವೆ. ಈಗ ನಾನು ನಿನಗೆ ಹೊಸ ಬಟ್ಟೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.

ಆಗ ನಾನು, “ಅವನ ತಲೆಯ ಮೇಲೆ ಶುಚಿಯಾದ ಪೇಟವನ್ನಿಡಿರಿ” ಎಂದು ಹೇಳಿದಾಗ ಅವರು ಅವನಿಗೆ ಶುಭ್ರವಾದ ಪೇಟವನ್ನು ಇಟ್ಟರು. ಯೆಹೋವನ ದೂತನು ಅಲ್ಲಿ ನಿಂತಿದ್ದಾಗಲೇ ಅವನಿಗೆ ನಿರ್ಮಲವಾದ ಬಟ್ಟೆಗಳನ್ನು ಧರಿಸಲು ಕೊಟ್ಟರು. ಆಗ ಯೆಹೋವನ ದೂತನು ಯೆಹೋಶುವನಿಗೆ ಹೀಗೆ ಹೇಳಿದನು.

ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ಹೇಳುವ ರೀತಿಯಲ್ಲಿ ಜೀವಿಸು.
    ನಾನು ಹೇಳುವ ರೀತಿಯಲ್ಲಿ ನಡೆ.
ನೀನು ನನ್ನ ಆಲಯದ ಮುಖ್ಯಾಧಿಕಾರಿಯಾಗುವೆ.
    ಅದರ ಅಂಕಣಗಳನ್ನು ನೀನು ನೋಡಿಕೊಳ್ಳುವೆ.
ಇಲ್ಲಿ ನಿಂತಿರುವವರೊಂದಿಗೆ ನೀನು ಪ್ರವೇಶಿಸಬಹುದು.
ಪ್ರಧಾನ ಯಾಜಕನಾದ ಯೆಹೋಶುವನೇ,
    ಅವನೊಂದಿಗೆ ಸೇವೆಮಾಡುವ ಇತರ ಯಾಜಕರೇ, ನನ್ನ ಮಾತಿಗೆ ಕಿವಿಗೊಡಿರಿ.
ಈ ಗಂಡಸರು ಮುಂದೆ ಏನಾಗಬಹುದೆಂಬುದಕ್ಕೆ ನಿದರ್ಶನವಾಗಿದ್ದಾರೆ.
    ಆಗ ನಾನು ನನ್ನ ವಿಶೇಷ ಸೇವಕನನ್ನು ಕರೆತರುವೆನು.
    ಆತನ ಹೆಸರು ಕೊಂಬೆ.
ನೋಡು, ನಾನು ಯೆಹೋಶುವನ ಮುಂದೆ ಒಂದು ವಿಶೇಷ ಕಲ್ಲನ್ನಿಡುವೆನು.
    ಆ ಕಲ್ಲಿನಲ್ಲಿ ಏಳು ಬದಿಗಳಿವೆ.
ನಾನು ಆ ವಿಶೇಷ ಕಲ್ಲಿನ ಮೇಲೆ ವಿಶೇಷ ಸಂದೇಶವನ್ನು ಕೆತ್ತುವೆನು.
    ನಾನು ಆ ದೇಶದ ಪಾಪವನ್ನು ಒಂದು ದಿವಸದಲ್ಲಿ ತೆಗೆದುಹಾಕುವೆನೆಂದು ಅದು ತೋರಿಸುವುದು.”

10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
“ಆ ದಿವಸಗಳಲ್ಲಿ ಜನರು ತಮ್ಮ ಸ್ನೇಹಿತರೊಂದಿಗೆ
    ಕುಳಿತುಕೊಂಡು ಸಂಭಾಷಿಸುವರು.
ಅಂಜೂರದ ಮರದ ನೆರಳಿನಲ್ಲಿಯೂ ದ್ರಾಕ್ಷಿತೋಟಗಳ ನೆರಳಿನಲ್ಲಿಯೂ
    ಕುಳಿತುಕೊಂಡು ಮಾತನಾಡಲು ಪರಸ್ಪರ ಆಮಂತ್ರಿಸುವರು.”

ದೀಪಸ್ತಂಭವೂ, ಎರಡು ಆಲೀವ್ ಮರಗಳೂ

ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಬಂದು ನನ್ನನ್ನೆಬ್ಬಿಸಿದನು. ನಾನು ನಿದ್ರೆಯಿಂದ ಎದ್ದೇಳುವವನಂತೆ ಇದ್ದೆನು. ಆಗ ದೂತನು, “ಏನು ನೋಡುತ್ತೀ?” ಎಂದು ಪ್ರಶ್ನಿಸಿದನು.

ಆಗ ನಾನು “ಬಂಗಾರದ ದೀಪಸ್ತಂಭವನ್ನು ನೋಡುತ್ತಿದ್ದೇನೆ. ಆ ಸ್ತಂಭದಲ್ಲಿ ಏಳು ದೀಪಗಳಿವೆ. ದೀಪಸ್ತಂಭದ ಮೇಲೆ ಒಂದು ಬೋಗುಣಿ ಇದೆ. ಆ ಬೋಗುಣಿಯಿಂದ ಏಳು ನಳಿಗೆಗಳು ಪ್ರತೀ ದೀಪಕ್ಕೆ ಹೋಗುತ್ತವೆ. ಬೋಗುಣಿಯಲ್ಲಿಟ್ಟ ಎಣ್ಣೆಯು ಆ ನಳಿಗೆಯ ಮೂಲಕ ದೀಪಕ್ಕೆ ಸುರಿಯುತ್ತಿತ್ತು. ಆ ಬೋಗುಣಿಯ ಬಳಿಯಲ್ಲಿ ಎರಡು ಆಲೀವ್ ಮರಗಳಿದ್ದವು. ಒಂದು ಬಲಬದಿಯಲ್ಲಿಯೂ ಇನ್ನೊಂದು ಎಡಬದಿಯಲ್ಲಿಯೂ ಇತ್ತು. ಈ ಮರಗಳು ದೀಪಗಳಿಗೆ ಬೇಕಾದ ಎಣ್ಣೆಯನ್ನು ತಯಾರು ಮಾಡುತ್ತಿದ್ದವು.” ಆಗ ನಾನು ನನ್ನ ಜೊತೆ ಮಾತನಾಡುತ್ತಿದ್ದ ದೂತನೊಡನೆ, “ಸ್ವಾಮಿ, ಇವುಗಳ ಅರ್ಥವೇನು?” ಎಂದು ಕೇಳಿದೆನು.

ಅವನು ಹೀಗೆ ಹೇಳಿದನು: “ಈ ವಿಷಯಗಳು ಏನೆಂದು ನಿನಗೆ ತಿಳಿಯಲಿಲ್ಲವೇ?”

ನಾನು, “ಇಲ್ಲ” ಅಂದೆನು.

ಅವನು ಅದಕ್ಕೆ ಉತ್ತರಿಸಿ, “ಇದು ಯೆಹೋವನಿಂದ ಜೆರುಬ್ಬಾಬೆಲನಿಗೆ ಕೊಟ್ಟ ಸಂದೇಶವಾಗಿದೆ. ‘ನಿನ್ನ ಸಹಾಯವು ನಿನ್ನ ಸ್ವಂತ ಶಕ್ತಿಸಾಮರ್ಥ್ಯದಿಂದ ಬರುವದಿಲ್ಲ. ಅದು ನನ್ನ ಆತ್ಮದಿಂದಲೇ ನಿನಗೆ ದೊರಕುವದು.’ ಇದು ಸರ್ವಶಕ್ತನಾದ ಯೆಹೋವನ ನುಡಿ. ಉನ್ನತವಾದ ಶಿಖರವು ಜೆರುಬ್ಬಾಬೆಲನಿಗೆ ಸಮತಟ್ಟಾದ ನೆಲದಂತಿರುವುದು. ಅವನು ಆಲಯವನ್ನು ಕಟ್ಟುವನು. ಅದರ ಅತಿ ವಿಶೇಷವಾದ ಕಲ್ಲನ್ನಿಟ್ಟ ಬಳಿಕ ಜನರೆಲ್ಲರೂ, ‘ಬಹಳ ಚಂದ, ಬಹಳ ಚಂದ’ ಎಂದು ಆರ್ಭಟಿಸುವರು.”

ನನಗೆ ಯೆಹೋವನ ಸಂದೇಶವೂ ಸಹ ಹೀಗೆ ಹೇಳಿತು: “ಜೆರುಬ್ಬಾಬೆಲನು ನನ್ನ ಆಲಯದ ಅಸ್ತಿವಾರವನ್ನು ಹಾಕುವನು. ಜೆರುಬ್ಬಾಬೆಲನು ಆಲಯವನ್ನು ಕಟ್ಟಿ ಮುಗಿಸುವನು. ಆಗ ನೀವು ಸರ್ವಶಕ್ತನಾದ ಯೆಹೋವನು ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆಂದು ತಿಳಿಯುವಿರಿ. 10 ಒಂದು ಸಣ್ಣ ರೀತಿಯ ಪ್ರಾರಂಭಕ್ಕೆ ಜನರು ನಾಚುವುದಿಲ್ಲ. ಜೆರುಬ್ಬಾಬೆಲನು ನೂಲುಗುಂಡು ಹಿಡಿದುಕೊಂಡು ಸಂಪೂರ್ಣವಾದ ಆಲಯವನ್ನು ಅಳತೆ ಮಾಡುವಾಗ ಜನರು ಅತಿಯಾಗಿ ಸಂತೋಷಿಸುವರು. ಈಗ ಆ ಕಲ್ಲಿನ ಏಳು ಬದಿಗಳು ಯೆಹೋವನ ಕಣ್ಣುಗಳು ಎಲ್ಲಾ ದಿಕ್ಕುಗಳನ್ನು ನೋಡುತ್ತಿರುವುದನ್ನು ಸೂಚಿಸುತ್ತವೆ. ಅವು ಭೂಲೋಕದಲ್ಲಿರುವ ಎಲ್ಲಾ ಸಂಗತಿಗಳನ್ನು ನೋಡುತ್ತಿವೆ.”

11 ಆಗ ಜೆಕರ್ಯನಾದ ನಾನು ಅವನಿಗೆ ಹೇಳಿದ್ದೇನೆಂದರೆ, “ನಾನು ದೀಪಸ್ತಂಭದ ಬಲಗಡೆಯಲ್ಲಿ ಒಂದು ಆಲೀವ್ ಮರವನ್ನೂ ಎಡಗಡೆಯಲ್ಲಿ ಇನ್ನೊಂದು ಆಲೀವ್ ಮರವನ್ನೂ ನೋಡಿದೆನು. ಇವುಗಳು ಏನನ್ನು ಸೂಚಿಸುತ್ತವೆ?” ಎಂದು ಕೇಳಿದೆನು. 12 ತಿರಿಗಿ ನಾನು ಅವನಿಗೆ, “ನಾನು ಆ ಎರಡು ಬಂಗಾರದ ನಳಿಗೆಯ ಬದಿಯಲ್ಲಿ ಆಲೀವ್ ಮರದ ಎರಡು ಕೊಂಬೆಗಳನ್ನು ನೋಡಿದೆನು. ಅದರಿಂದ ಬಂಗಾರದ ಬಣ್ಣದ ಎಣ್ಣೆಯು ಹರಿಯುತ್ತಿತ್ತು. ಇವುಗಳ ಅರ್ಥವೇನು?” ಎಂದು ಕೇಳಿದೆನು.

13 ಆಗ ದೇವದೂತನು ಹೇಳಿದ್ದೇನೆಂದರೆ, “ಇವು ಏನನ್ನು ಸೂಚಿಸುತ್ತವೆ ಎಂದು ನಿನಗೆ ತಿಳಿಯದೋ?”

ಅದಕ್ಕೆ ನಾನು, “ಇಲ್ಲ” ಅಂದೆನು.

14 ಆಗ ಅವನು, “ಈ ಪ್ರಪಂಚದಲ್ಲಿ ಯೆಹೋವನು ತನ್ನ ಸೇವೆಮಾಡಲು ಆರಿಸಿಕೊಂಡ ಇಬ್ಬರು ಮನುಷ್ಯರನ್ನು ಅವು ಪ್ರತಿನಿಧಿಸುತ್ತವೆ” ಅಂದನು.

ಹಾರುವ ಸುರುಳಿ

ನಾನು ತಿರುಗಿ ಮೇಲಕ್ಕೆ ನೋಡಿದಾಗ ಒಂದು ಹಾರುವ ಸುರುಳಿಯನ್ನು ಕಂಡೆನು. “ಏನನ್ನು ನೋಡುತ್ತೀ?” ಎಂದು ದೇವದೂತನು ಕೇಳಿದನು.

“ಒಂದು ಹಾರುವ ಸುರುಳಿ, ಅದು ಮೂವತ್ತು ಅಡಿ ಉದ್ದ, ಹದಿನೈದು ಅಡಿ ಅಗಲವಿದೆ” ಎಂದು ನಾನು ಉತ್ತರಿಸಿದೆನು.

ಆಗ ದೇವದೂತನು ನನಗೆ ಹೇಳಿದ್ದೇನೆಂದರೆ, “ಈ ಸುರುಳಿಯಲ್ಲಿ ಶಾಪವು ಬರೆಯಲ್ಪಟ್ಟಿದೆ. ಸುರುಳಿಯ ಒಂದು ಬದಿಯಲ್ಲಿ ಕದಿಯುವ ಜನರಿಗೆ ಶಾಪ ಬರೆಯಲ್ಪಟ್ಟಿದೆ. ಅದರ ಇನ್ನೊಂದು ಬದಿಯಲ್ಲಿ ವಾಗ್ದಾನ ಮಾಡಿಯೂ ಅದನ್ನು ಪಾಲಿಸದೆ ಸುಳ್ಳಾಡುವವರಿಗೆ ಶಾಪ ಬರೆಯಲ್ಪಟ್ಟಿದೆ. ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಆ ಸುರುಳಿಯನ್ನು ಕದಿಯುವವರ ಮನೆಗಳಿಗೂ ಮತ್ತು ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಡುವವರ ಮನೆಗಳಿಗೂ ಕಳುಹಿಸುವೆನು. ಆ ಸುರುಳಿಯು ಅಲ್ಲಿಯೇ ಇದ್ದು ಆ ಮನೆಗಳನ್ನು ನಾಶಮಾಡುವುದು. ಮನೆಯ ಕಲ್ಲುಕಂಬಗಳನ್ನು, ಮರದ ತೊಲೆಗಳನ್ನು ನಾಶಮಾಡುವದು.’”

ಸ್ತ್ರೀ ಮತ್ತು ಬುಟ್ಟಿ

ನನ್ನೊಡನೆ ಮಾತನಾಡುತ್ತಿದ್ದ ದೇವದೂತನು ಹೊರಗೆ ಹೋದನು. ಆಗ ಅವನು, “ನೋಡು, ನಮ್ಮ ಬಳಿಗೆ ಏನು ಬರುತ್ತಿದೆ ಎಂದು ನೋಡು” ಎಂದನು.

“ಅದು ಏನೋ ನನಗೆ ಗೊತ್ತಾಗುತ್ತಿಲ್ಲ. ಅದು ಏನಿರಬಹುದು?” ಎಂದು ನಾನು ವಿಚಾರಿಸಿದೆನು.

ಅದಕ್ಕವನು, “ಅದು ಒಂದು ಅಳೆಯುವ ಬುಟ್ಟಿ, ಈ ಬುಟ್ಟಿಯು ಈ ದೇಶದ ಜನರ ಪಾಪವನ್ನು ಅಳೆಯುವ ಬುಟ್ಟಿಯಾಗಿದೆ” ಎಂದನು.

ಸೀಸದಿಂದ ಮಾಡಲ್ಪಟ್ಟ ಒಂದು ಮುಚ್ಚಳವನ್ನು ಆ ಬುಟ್ಟಿಯಿಂದ ತೆಗೆಯಲಾಯಿತು. ಆಗ ಅದರೊಳಗೆ ಒಬ್ಬ ಹೆಂಗಸು ಇರುವುದನ್ನು ಕಂಡೆನು. ಆಗ ಆ ದೂತನು, “ಆ ಸ್ತ್ರೀಯು ದುಷ್ಟತನವನ್ನು ಸೂಚಿಸುತ್ತಾಳೆ” ಎಂದು ಹೇಳಿ ದೂತನು ಆ ಸ್ತ್ರೀಯನ್ನು ಬುಟ್ಟಿಯ ತಳಕ್ಕೆ ನೂಕಿ, ಸೀಸದ ಮುಚ್ಚಳವನ್ನು ಹಾಕಿಬಿಟ್ಟನು. ಆ ಬಳಿಕ ನಾನು ಮೇಲಕ್ಕೆ ನೋಡಿದಾಗ ಕೊಕ್ಕರೆಯಂತೆ ರೆಕ್ಕೆಗಳಿರುವ ಎರಡು ಸ್ತ್ರೀಯರನ್ನು ಕಂಡೆನು. ಅವರು ಹಾರುತ್ತಾ ರೆಕ್ಕೆಗಳಲ್ಲಿಯ ಗಾಳಿಯ ಸಹಾಯದಿಂದ ಬುಟ್ಟಿಯನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಿಕೊಂಡು ಹೋದರು. 10 ಆಗ ನಾನು ದೂತನನ್ನು, “ಅವರು ಬುಟ್ಟಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ?” ಎಂದು ಪ್ರಶ್ನಿಸಿದೆನು.

11 “ಅವರು ಶಿನಾರಿನಲ್ಲಿ ಅದಕ್ಕೊಂದು ಮನೆ ಕಟ್ಟುವದಕ್ಕಿದ್ದಾರೆ. ಮನೆಕಟ್ಟಿದ ಬಳಿಕ ಆ ಬುಟ್ಟಿಯನ್ನು ಅವರು ಅದರೊಳಗಿಡುವರು” ಎಂದು ಹೇಳಿದನು.

ನಾಲ್ಕು ರಥಗಳು

ನಾನು ತಿರುಗಿ ಮೇಲಕ್ಕೆ ನೋಡಿದಾಗ ನಾಲ್ಕು ರಥಗಳು ನಾಲ್ಕು ಹಿತ್ತಾಳೆಯ ಪರ್ವತಗಳ ಮಧ್ಯೆ ಓಡುವುದನ್ನು ಕಂಡೆನು. ಮೊದಲನೇ ರಥವನ್ನು ಕೆಂಪು ಕುದುರೆಗಳು ಎಳೆಯುತ್ತಿದ್ದವು. ಎರಡನೇ ರಥವನ್ನು ಕಪ್ಪು ಕುದುರೆಗಳು ಎಳೆಯುತ್ತಿದ್ದವು. ಬಿಳಿ ಕುದುರೆಗಳು ಮೂರನೇ ರಥವನ್ನೂ ಕೆಂಪು ಮಚ್ಚೆಗಳುಳ್ಳ ಕುದುರೆಗಳು ನಾಲ್ಕನೇ ರಥವನ್ನೂ ಎಳೆಯುತ್ತಿದ್ದವು. “ಇವು ಏನನ್ನು ಸೂಚಿಸುತ್ತವೆ?” ಎಂದು ನನ್ನೊಡನೆ ಮಾತನಾಡುತ್ತಿದ್ದ ದೂತನೊಡನೆ ವಿಚಾರಿಸಿದೆನು.

ದೇವದೂತನು ಹೇಳಿದ್ದೇನೆಂದರೆ, “ಇವು ನಾಲ್ಕು ಗಾಳಿಗಳು. ಅವು ಭೂಲೋಕದ ಒಡೆಯನ ಬಳಿಯಿಂದ ಈಗ ತಾನೇ ಬಂದವು. ಕಪ್ಪು ಕುದುರೆಗಳು ಉತ್ತರದಿಕ್ಕಿಗೆ ಹೋಗುವವು. ಕೆಂಪು ಕುದುರೆಗಳು ಪೂರ್ವದಿಕ್ಕಿಗೆ ಹೋಗುವವು. ಬಿಳಿ ಕುದುರೆಗಳು ಪಶ್ಚಿಮಕ್ಕೂ ಮಚ್ಚೆಯಿರುವ ಕುದುರೆಗಳು ದಕ್ಷಿಣ ದಿಕ್ಕಿಗೂ ಹೋಗುವವು.”

ಕೆಂಪು ಮಚ್ಚೆ ಇರುವ ಕುದುರೆಗಳು ತಮಗೆ ನೇಮಕವಾದ ಜಾಗಕ್ಕೆ ಹೋಗಿ ಅದನ್ನು ನೋಡಲು ಆತುರಗೊಂಡಿದ್ದವು. ಆಗ ದೂತನು ಅವುಗಳಿಗೆ, “ಹೋಗಿ, ಭೂಮಿಯ ಮೇಲೆ ಹೋಗಿ ಬನ್ನಿ” ಎಂದು ಹೇಳಿದಾಗ ಅವುಗಳು ಹೋಗಿ ತಮ್ಮ ಪ್ರಾಂತ್ಯದಲ್ಲಿ ನಡೆದಾಡಿದವು.

ಆಗ ಯೆಹೋವನು ನನ್ನನ್ನು ಗಟ್ಟಿಯಾಗಿ ಕರೆದು, “ನೋಡು, ಆ ಉತ್ತರ ದಿಕ್ಕಿಗೆ ಹೋಗುತ್ತಿದ್ದ ಆ ಕುದುರೆಗಳು ತಮ್ಮ ಕೆಲಸವನ್ನು ಬಾಬಿಲೋನಿನಲ್ಲಿ ಮುಗಿಸಿವೆ. ಅವು ನನ್ನ ಆತ್ಮವನ್ನು ಶಾಂತಗೊಳಿಸಿವೆ. ಈಗ ನಾನು ಕೋಪಗೊಂಡಿಲ್ಲ.” ಎಂದು ಹೇಳಿದನು.

ಪ್ರಧಾನ ಯಾಜಕನಾದ ಯೆಹೋಶುವನು ಕಿರೀಟ ಹೊಂದುವನು

ಆಗ ತಿರುಗಿ ನಾನು ಯೆಹೋವನಿಂದ ಸಂದೇಶವನ್ನು ಪಡಕೊಂಡೆನು. 10 ಆತನು ಹೇಳಿದ್ದೇನೆಂದರೆ, “ಹೆಲ್ದಾಯ, ತೋಬೀಯ ಮತ್ತು ಯೆದಾಯ ಇವರು ಬಾಬಿಲೋನಿನಿಂದ ಸೆರೆಯಾಳುಗಳಾಗಿ ಬಂದಿರುತ್ತಾರೆ. ಅವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿರಿ. 11 ಆ ಬೆಳ್ಳಿಬಂಗಾರಗಳಿಂದ ಒಂದು ಕಿರೀಟವನ್ನು ಮಾಡಿ ಯೆಹೋಶುವನ ತಲೆಯ ಮೇಲಿಟ್ಟು ಅವನಿಗೆ ಹೀಗೆ ಹೇಳಿರಿ: (ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಇವನ ತಂದೆ ಯೆಹೋಜಾದಾಕನು.) 12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,

“ಕೊಂಬೆ ಎಂಬ ಒಬ್ಬಾತನು ಇದ್ದಾನೆ.
    ಆತನು ಬೆಳೆದು ಬಲಿಷ್ಠನಾಗುವನು.
    ಆತನು ದೇವಾಲಯವನ್ನು ಕಟ್ಟುವನು.
13 ಆತನು ದೇವಾಲಯವನ್ನು ಕಟ್ಟುವನು
    ಮತ್ತು ಗೌರವವನ್ನು ಹೊಂದುವನು.
ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜ್ಯವನ್ನು ಆಳುವನು.
    ಒಬ್ಬ ಯಾಜಕನು ಆತನ ಸಿಂಹಾಸನದ ಬಳಿಯಲ್ಲಿ ನಿಂತುಕೊಂಡಿರುವನು.
ಅವರಿಬ್ಬರೂ ಸಮಾಧಾನದಿಂದ ಕೆಲಸ ಮಾಡುವರು.

14 ಜನರು ಸ್ಮರಿಸಿಕೊಳ್ಳುವಂತೆ ಅವರು ಆ ಕಿರೀಟವನ್ನು ಆಲಯದೊಳಗೆ ಇಡುವರು. ಅದು ಹೆಲ್ದಾಯ, ತೋಬೀಯ, ಯೆದಾಯ ಮತ್ತು ಚೆಫನ್ಯನ ಮಗನಾದ ಹೇನ್‌ನಿಗೆ ಘನತೆಯನ್ನು ತರುವುದು.”

15 ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯೆಹೋವನು ಹೇಳಿದಂತೆ ನೀವು ಮಾಡಿದರೆ ಇವೆಲ್ಲಾ ನೆರವೇರುವುದು.

ಯೆಹೋವನಿಗೆ ದಯೆ ಕರುಣೆಗಳು ಬೇಕಾಗಿವೆ

ಪರ್ಶಿಯದ ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರ್ಷದ ಒಂಭತ್ತನೇ ತಿಂಗಳಿನ (ಕಿಸ್ಲೇವ್) ನಾಲ್ಕನೇ ದಿವಸದಲ್ಲಿ ಯೆಹೋವನ ಸಂದೇಶವನ್ನು ಜೆಕರ್ಯನು ಹೊಂದಿದನು. ಬೇತೇಲಿನ ಜನರು ಸರೆಚರ್, ರೆಗೆಮ್ ಮೆಲೆಕ್ ಮತ್ತು ಅವರ ಜನರನ್ನು ಯೆಹೋವನಿಗೆ ಒಂದು ಪ್ರಶ್ನೆಯನ್ನು ಕೇಳಲು ಕಳುಹಿಸಿದರು. ಅವರು ಸರ್ವಶಕ್ತನಾದ ಯೆಹೋವನ ಆಲಯದಲ್ಲಿದ್ದ ಯಾಜಕರ ಬಳಿಗೂ ಪ್ರವಾದಿಗಳ ಬಳಿಗೂ ಹೋದರು. ಅವರು ಹೀಗೆ ಪ್ರಶ್ನೆ ಕೇಳಿದರು: “ಅನೇಕ ವರ್ಷಗಳಿಂದ ಆಲಯವು ಕೆಡವಲ್ಪಟ್ಟದ್ದಕ್ಕಾಗಿ ನಮ್ಮ ದುಃಖವನ್ನು ತೋರಿಸಿದೆವು. ಪ್ರತೀ ವರ್ಷದ ಐದನೇ ತಿಂಗಳಿನಲ್ಲಿ ಉಪವಾಸಕ್ಕಾಗಿ ಮತ್ತು ರೋದಿಸುವುದಕ್ಕಾಗಿ ನಾವು ಪ್ರತ್ಯೇಕ ಸಮಯವನ್ನು ನೇಮಿಸುತ್ತಿದ್ದೆವು. ನಾವು ಇದನ್ನು ಹೀಗೆಯೇ ಮುಂದುವರಿಸಬೇಕೋ?”

ಆಗ ನನಗೆ ಸರ್ವಶಕ್ತನಾದ ಯೆಹೋವನಿಂದ ಈ ಸಂದೇಶವು ದೊರಕಿತು: “ಯಾಜಕರಿಗೂ, ದೇಶದ ಇತರ ಜನರಿಗೂ ಇದನ್ನು ಹೇಳು, ಎಪ್ಪತ್ತು ವರ್ಷಗಳ ತನಕ ನೀವು ಐದನೇ ಮತ್ತು ಏಳನೇ ತಿಂಗಳಿನಲ್ಲಿ ನಿಮ್ಮ ದುಃಖವನ್ನು ಉಪವಾಸ ಮಾಡವದರಲ್ಲಿ ತೋರಿಸಿದಿರಿ. ಆದರೆ ಮಾಡಿದ ಆ ಉಪವಾಸವು ನಿಜವಾಗಿಯೂ ನನಗಾಗಿಯೋ? ಇಲ್ಲ! ನೀವು ತಿಂದು ಕುಡಿದಾಗ ಅದು ನನಗಾಗಿ ಇತ್ತೋ? ಇಲ್ಲ. ಅದು ನಿಮ್ಮ ಒಳ್ಳೆಯದಕ್ಕಾಗಿಯೇ ಇತ್ತು. ಇದನ್ನು ತಿಳಿಸುವುದಕ್ಕಾಗಿಯೇ ದೇವರು ಹಿಂದಿನ ಕಾಲದಲ್ಲಿ ಪ್ರವಾದಿಗಳನ್ನು ಉಪಯೋಗಿಸಿದ್ದನು. ಜೆರುಸಲೇಮ್ ಜನಭರಿತವಾದ ಪಟ್ಟಣವಾಗಿದ್ದಾಗ ದೇವರು ಇದನ್ನು ಜನರಿಗೆ ತಿಳಿಸಿದ್ದನು. ಜೆರುಸಲೇಮಿನ ಸುತ್ತಮುತ್ತ ಇರುವ ಪಟ್ಟಣಗಳಲ್ಲಿ ಜನರು ವಾಸಿಸುತ್ತಿದ್ದ ಸಮಯದಲ್ಲಿ ದೇವರು ಇದನ್ನು ತಿಳಿಸಿದ್ದನು. ನೆಗೆವ್‌ನಲ್ಲಿಯೂ ಪಶ್ಚಿಮದ ಪರ್ವತಗಳ ಬುಡದಲ್ಲಿಯೂ ದೇವರು ಇದನ್ನು ಜನರಿಗೆ ತಿಳಿಸಿದ್ದನು.”

ಇದು ಜೆಕರ್ಯನಿಗೆ ಯೆಹೋವನ ಸಂದೇಶ:
“ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ:
‘ನೀವು ಯಾವದು ನ್ಯಾಯವೋ ಯಾವುದು ಯೋಗ್ಯವೋ ಅದನ್ನು ಮಾಡಬೇಕು.
    ನೀವು ಒಬ್ಬರಿಗೊಬ್ಬರು ದಯೆಕರುಣೆಗಳನ್ನು ತೋರಿಸಬೇಕು.
10 ವಿಧವೆಯರಿಗೂ ಅನಾಥರಿಗೂ ಹಾನಿಮಾಡಬೇಡಿರಿ.
    ಅಪರಿಚಿತರಿಗೂ ಬಡವರಿಗೂ ಕೇಡುಮಾಡಬೇಡಿ.
ಒಬ್ಬರಿಗೊಬ್ಬರು ಕೇಡುಮಾಡಲು ಯೋಚಿಸಲೂಬೇಡಿ!’”

11 ಆದರೆ ಆ ಜನರು ಈ ಮಾತುಗಳನ್ನು ಕೇಳಲಿಲ್ಲ.
    ಆತನು ಹೇಳಿದ ಹಾಗೆ ನಡೆಯಲಿಲ್ಲ.
ದೇವರು ಹೇಳುವುದು ತಮಗೆ ಕೇಳದಂತೆ
    ತಮ್ಮ ಕಿವಿಗಳನ್ನು ಮುಚ್ಚಿಕೊಂಡರು.
12 ಅವರು ಹಠಮಾರಿಗಳಾಗಿದ್ದರು.
    ನ್ಯಾಯವಿಧಿಗಳಿಗೆ ಅವರು ವಿಧೇಯರಾಗಲಿಲ್ಲ.
ಸರ್ವಶಕ್ತನಾದ ಯೆಹೋವನು ತನ್ನ ಆತ್ಮನಿಂದ
    ಪ್ರವಾದಿಗಳ ಮೂಲಕ ಅವರಿಗೆ ಸಂದೇಶ ಕಳುಹಿಸಿದನು.
ಆದರೂ ಜನರು ಅವರಿಗೆ ಕಿವಿಗೊಡಲಿಲ್ಲ.
    ಆದ್ದರಿಂದ ಸರ್ವಶಕ್ತನಾದ ಯೆಹೋವನು ಬಹಳ ಕೋಪಗೊಂಡನು.
13 ಆತನು ಹೇಳಿದ್ದೇನೆಂದರೆ, “ನಾನು ಅವರನ್ನು ಕರೆದರೂ
    ಅವರು ನನಗೆ ಕಿವಿಗೊಡಲಿಲ್ಲ.
ಆದ್ದರಿಂದ ಈಗ ಅವರು ನನ್ನನ್ನು ಕರೆದರೂ
    ನಾನು ಅವರಿಗೆ ಉತ್ತರಕೊಡುವುದಿಲ್ಲ.
14 ನಾನು ಇತರ ಜನಾಂಗಗಳನ್ನು ಬಿರುಗಾಳಿಯಂತೆ ಅವರ ಬಳಿಗೆ ಕಳುಹಿಸುವೆನು.
    ಆ ರಾಷ್ಟ್ರಗಳನ್ನು ಅವರು ತಿಳಿದಿರಲಿಲ್ಲ.
ಆದರೆ ಆ ದೇಶಗಳವರು ಇವರ ದೇಶವನ್ನು ದಾಟಿಹೋಗುವಾಗ
    ಆ ಸುಂದರವಾದ ದೇಶವು ನಾಶವಾಗುವದು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International