Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ದಾನಿಯೇಲ 4-6

ನೆಬೂಕದ್ನೆಚ್ಚರನಿಗೆ ಮರದ ಕನಸು

ಲೋಕದಲ್ಲೆಲ್ಲ ವಾಸಿಸುವ ಸಕಲ ಜನಾಂಗ, ಕುಲ, ಭಾಷೆಗಳ ಜನರಿಗೆ ಅರಸನಾದ ನೆಬೂಕದ್ನೆಚ್ಚರನು ಈ ಪತ್ರವನ್ನು ಕಳುಹಿಸಿದನು.

ಶುಭಾಶಯಗಳು,

ಮಹೋನ್ನತನಾದ ದೇವರು ನನಗೋಸ್ಕರ ಮಾಡಿದ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ನಿಮಗೆ ತಿಳಿಸಲು ನನಗೆ ಬಹಳ ಸಂತೋಷವಾಗುತ್ತದೆ.

ದೇವರು ಅಚ್ಚರಿಗೊಳಿಸುವ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
    ದೇವರು ಅದ್ಭುತಕಾರ್ಯಗಳನ್ನು ಮಾಡಿದ್ದಾನೆ.
ದೇವರ ಸಾಮ್ರಾಜ್ಯವು ಶಾಶ್ವತವಾದದ್ದು.
    ದೇವರ ಆಳ್ವಿಕೆಯು ಎಲ್ಲಾ ತಲೆಮಾರುಗಳಲ್ಲಿಯೂ ಮುಂದುವರೆಯುವುದು.

ನೆಬೂಕದ್ನೆಚ್ಚರನಾದ ನಾನು ಅರಮನೆಯಲ್ಲಿದ್ದೆ; ಸುಖಸಂತೋಷದಿಂದ ಇದ್ದೆ. ಆಗ ನನಗೊಂದು ಕನಸು ಬಿತ್ತು. ಅದು ನನ್ನಲ್ಲಿ ಭಯವನ್ನುಂಟುಮಾಡಿತು. ನಾನು ನನ್ನ ಹಾಸಿಗೆಯ ಮೇಲೆ ಮಲಗಿದ್ದೆ. ಅನೇಕ ಚಿತ್ರಗಳನ್ನು ಮತ್ತು ದೃಶ್ಯಗಳನ್ನು ಕಂಡೆ. ಅವುಗಳು ನನ್ನಲ್ಲಿ ಹೆಚ್ಚಿನ ಭಯವನ್ನುಂಟುಮಾಡಿದವು. ಅದಕ್ಕಾಗಿ ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕರೆತರಬೇಕೆಂದು ಆಜ್ಞೆಯನ್ನು ಕೊಟ್ಟೆ. ಅವರು ನನ್ನ ಕನಸಿನ ಅರ್ಥವನ್ನು ತಿಳಿಸಲಿ ಎಂಬುದೇ ನನ್ನ ಉದ್ದೇಶವಾಗಿತ್ತು. ಮಂತ್ರವಾದಿಗಳು, ಜೋಯಿಸರು ಮತ್ತು ವಿದ್ವಾಂಸರು ಬಂದ ಮೇಲೆ ನಾನು ಅವರಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ಆದರೆ ಅವರಿಗೆ ಅರ್ಥವನ್ನು ತಿಳಿಸಲಾಗಲಿಲ್ಲ. ಕೊನೆಗೆ ದಾನಿಯೇಲನು ಬಂದನು. (ನಾನು ದಾನಿಯೇಲನಿಗೆ ನನ್ನ ದೇವರ ಸ್ಮರಣಾರ್ಥವಾಗಿ ಬೇಲ್ತೆಶಚ್ಚರನೆಂಬ ಹೆಸರನ್ನು ಇಟ್ಟಿದ್ದೆ. ಪರಿಶುದ್ಧ ದೇವರುಗಳ ಆತ್ಮವು ಅವನಲ್ಲಿದೆ.) ನಾನು ದಾನಿಯೇಲನಿಗೆ ನನ್ನ ಕನಸಿನ ಬಗ್ಗೆ ಹೇಳಿದೆ. ನಾನು, “ಬೇಲ್ತೆಶಚ್ಚರನೇ, ಎಲ್ಲಾ ಮಂತ್ರವಾದಿಗಳಿಗಿಂತಲೂ ನೀನು ಬಹಳ ಶ್ರೇಷ್ಠನು. ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿದೆ ಎಂದು ನನಗೆ ಗೊತ್ತಿದೆ. ನಿನಗೆ ತಿಳಿದುಕೊಳ್ಳಲು ಕಷ್ಟವಾದ ಯಾವ ರಹಸ್ಯವೂ ಇಲ್ಲವೆಂದು ನಾನು ಬಲ್ಲೆನು. ನಾನು ಕನಸಿನಲ್ಲಿ ಕಂಡದ್ದು ಇಂತಿದೆ. ಅದರ ಅರ್ಥವನ್ನು ನನಗೆ ಹೇಳು. 10 ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡಾಗ ಕಂಡ ದೃಶ್ಯಗಳು ಇವು: ನನ್ನ ಎದುರಿಗೆ ಭೂಮಿಯ ಮಧ್ಯದಲ್ಲಿ ಬಹು ಎತ್ತರವಾದ ಒಂದು ಮರವು ಇದ್ದುದನ್ನು ನಾನು ಕಂಡೆ. 11 ಆ ಮರವು ಬಹಳ ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಆ ಮರದ ತುದಿಯು ಆಕಾಶಕ್ಕೆ ಮುಟ್ಟಿತ್ತು. ಅದನ್ನು ಭೂಲೋಕದ ಯಾವ ಸ್ಥಳದಿಂದಲಾದರೂ ನೋಡಬಹುದಾಗಿತ್ತು. 12 ಆ ಮರದ ಎಲೆಗಳು ಸುಂದರವಾಗಿದ್ದವು. ಅದು ತುಂಬ ಒಳ್ಳೆಯ ಹಣ್ಣುಗಳನ್ನು ಫಲಿಸಿತ್ತು. ಆ ಮರದಲ್ಲಿ ಪ್ರತಿಯೊಬ್ಬರಿಗೂ ಸಾಕಾಗುವಷ್ಟು ಆಹಾರವಿತ್ತು. ಕಾಡುಪ್ರಾಣಿಗಳೂ ಆ ಮರದ ಕೆಳಗೆ ಆಶ್ರಯವನ್ನು ಪಡೆದಿದ್ದವು. ಅದರ ಕೊಂಬೆಗಳಲ್ಲಿ ಪಕ್ಷಿಗಳು ವಾಸಮಾಡಿಕೊಂಡಿದ್ದವು. ಪ್ರತಿಯೊಂದು ಪ್ರಾಣಿಗೂ ಆ ಮರದಿಂದ ಆಹಾರ ಸಿಕ್ಕುತ್ತಿತ್ತು.

13 “ನಾನು ನನ್ನ ಹಾಸಿಗೆಯಲ್ಲಿ ಮಲಗಿಕೊಂಡು ನನ್ನ ದರ್ಶನದಲ್ಲಿ ಅದೆಲ್ಲವನ್ನು ನೋಡುತ್ತಿದ್ದೆ. ಆಗ ಪವಿತ್ರ ದೇವದೂತನೊಬ್ಬನು ಆಕಾಶದಿಂದ ಕೆಳಗಿಳಿದು ಬರುವುದನ್ನು ಕಂಡೆ. 14 ಅವನು ಮಹಾ ಧ್ವನಿಯಿಂದ, ‘ಮರವನ್ನು ಕಡಿದುಹಾಕಿರಿ; ಅದರ ಕೊಂಬೆಗಳನ್ನು ಕಡಿದುಹಾಕಿರಿ; ಅದರ ಎಲೆಗಳನ್ನು ಕಿತ್ತುಹಾಕಿರಿ; ಹಣ್ಣುಗಳನ್ನು ಸುತ್ತಲೂ ಉದುರಿಸಿಬಿಡಿ. ಮರದ ಕೆಳಗೆ ಇದ್ದ ಪ್ರಾಣಿಗಳು ಓಡಿಹೋಗುವವು. ಅದರ ಕೊಂಬೆಗಳಲ್ಲಿ ವಾಸವಾಗಿದ್ದ ಪಕ್ಷಿಗಳು ಹಾರಿಹೋಗುವವು. 15 ಆದರೆ ಅದರ ಬೇರುಗಳು ಮತ್ತು ಬುಡದ ಮೋಟು ಭೂಮಿಯಲ್ಲಿ ಉಳಿಯಲಿ. ಅದರ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಮೋಟು ಮತ್ತು ಬೇರುಗಳು ಹೊಲದಲ್ಲಿ ಉಳಿಯಲಿ. ಅದರ ಸುತ್ತ ಹುಲ್ಲು ಬೆಳೆದಿರಲಿ. ಅದು ಅಡವಿಯಲ್ಲಿ ಕಾಡುಪ್ರಾಣಿಗಳ ಮತ್ತು ಸಸಿಗಳ ಜೊತೆಯಲ್ಲಿ ಇರಲಿ; ಅದು ಇಬ್ಬನಿಯಿಂದ ನೆನೆಯಲಿ. 16 ಅದು ಮನುಷ್ಯನಂತೆ ವಿಚಾರ ಮಾಡುವುದನ್ನು ಬಿಟ್ಟು ಪ್ರಾಣಿಯಂತೆ ವಿಚಾರ ಮಾಡತೊಡಗಲಿ. ಅದು ಈ ಸ್ಥಿತಿಯಲ್ಲಿ ಏಳು ವರ್ಷವಿರಲಿ’ ಎಂದು ಹೇಳಿದನು.

17 “ಈ ಶಿಕ್ಷೆಯನ್ನು ದೇವದೂತನು ಸಾರಿದನು. ಮಾನವ ಸಾಮ್ರಾಜ್ಯಗಳ ಮೇಲೆ ಮಹೋನ್ನತನಾದ ದೇವರು ಆಳುವನು. ಅವನು ಆ ಸಾಮ್ರಾಜ್ಯಗಳನ್ನು ತನಗೆ ಬೇಕಾದವರಿಗೆ ಒಪ್ಪಿಸುವನು, ಕನಿಷ್ಠರನ್ನು ನೇಮಿಸುವನು ಎಂಬುದು ಲೋಕದ ಜನರಿಗೆಲ್ಲ ತಿಳಿದುಬರಲಿ ಎಂದೇ ಅವನು ಸಾರಿದನು.

18 “ಅರಸನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು. ಈಗ ನೀನು, ಬೇಲ್ತೆಶಚ್ಚರನೇ (ದಾನಿಯೇಲನೇ), ಇದರ ಅರ್ಥವನ್ನು ನನಗೆ ತಿಳಿಸು. ನನ್ನ ರಾಜ್ಯದಲ್ಲಿರುವ ವಿದ್ವಾಂಸರಲ್ಲಿ ಯಾರೂ ಇದರ ಅರ್ಥವನ್ನು ನನಗೆ ಹೇಳಲಾರರು. ಆದರೆ ನೀನು ಈ ಕನಸಿನ ಅರ್ಥವನ್ನು ತಿಳಿಸಬಲ್ಲೆ. ಏಕೆಂದರೆ ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವದು ನನಗೆ ತಿಳಿದದೆ” ಎಂದೆನು.

19 ಆಗ ದಾನಿಯೇಲನು (ಬೇಲ್ತೆಶಚ್ಚರನು) ಸುಮಾರು ಒಂದು ಗಂಟೆಯವರೆಗೆ ಮೌನವಾಗಿದ್ದನು. ಅವನ ಬುದ್ಧಿಗೆ ತೋರಿದ ವಿಷಯಗಳು ಅವನನ್ನು ಗಾಬರಿಪಡಿಸಿದವು. ಆಗ ರಾಜನು, “ಬೇಲ್ತೆಶಚ್ಚರನೇ, ಕನಸು ಅಥವಾ ಕನಸಿನ ಅರ್ಥವು ನಿನ್ನನ್ನು ಭಯಗೊಳಿಸದಿರಲಿ” ಎಂದು ಧೈರ್ಯ ಹೇಳಿದನು.

ಆಗ ಬೇಲ್ತೆಶಚ್ಚರನು ಅರಸನಿಗೆ, “ನನ್ನ ಒಡೆಯನೇ, ಈ ಕನಸು ನಿನ್ನ ವಿರೋಧಿಗಳಿಗೆ ಫಲಿಸಲಿ. ಇದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ ಎಂದು ನಾನು ಹಾರೈಸುತ್ತೇನೆ. 20-21 ನೀನು ನಿನ್ನ ಕನಸಿನಲ್ಲಿ ಒಂದು ಮರವನ್ನು ಕಂಡೆ. ಆ ಮರವು ದೊಡ್ಡದಾಗಿ ಮತ್ತು ಬಲಯುತವಾಗಿ ಬೆಳೆಯಿತು. ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದು ಭೂಲೋಕದ ಎಲ್ಲೆಡೆಯಿಂದಲೂ ಕಾಣಿಸುತ್ತಿತ್ತು. ಅದರ ಎಲೆಗಳು ಸುಂದರವಾಗಿದ್ದವು: ಅದು ಸಾಕಷ್ಟು ಹಣ್ಣುಗಳನ್ನು ಫಲಿಸಿತ್ತು. ಆ ಹಣ್ಣುಗಳು ಎಲ್ಲರಿಗೂ ಸಾಕಾಗುವಷ್ಟು ಆಹಾರವನ್ನು ಕೊಟ್ಟವು. ಅದು ಕಾಡುಪ್ರಾಣಿಗಳಿಗೆ ವಾಸಸ್ಥಾನವಾಗಿತ್ತು; ಅದರ ಕೊಂಬೆಗಳು ಪಕ್ಷಿಗಳಿಗೆ ಗೂಡುಕಟ್ಟುವ ಸ್ಥಳಗಳಾಗಿದ್ದವು. ಆ ಮರವನ್ನು ನೀನು ನೋಡಿದೆ. 22 ಅರಸನೇ, ನೀನೇ ಆ ಮರ. ನೀನು ಪ್ರಖ್ಯಾತನೂ ಮತ್ತು ಪ್ರಬಲನೂ ಆಗಿರುವೆ. ನೀನು ಗಗನಚುಂಬಿಯಾದ ಆ ಮರದಂತೆ ಬೆಳೆದಿರುವೆ. ನಿನ್ನ ಪ್ರಾಬಲ್ಯವು ಈ ಭೂಮಿಯಲ್ಲಿ ದೂರದೂರದವರೆಗೆ ಹಬ್ಬಿದೆ.

23 “ಅರಸನೇ, ನೀನು ಆಕಾಶದಿಂದ ಇಳಿದುಬರುತ್ತಿದ್ದ ಒಬ್ಬ ಪರಿಶುದ್ಧ ದೇವದೂತನನ್ನು ಕಂಡೆ. ಅವನು, ‘ಮರವನ್ನು ಕಡಿದು ನಾಶಮಾಡಿರಿ. ಅದರ ಬುಡದ ಮೋಟಿನ ಸುತ್ತಲೂ ಕಬ್ಬಿಣದ ಮತ್ತು ಕಂಚಿನ ಒಂದು ಪಟ್ಟಿಯನ್ನು ಹಾಕಿರಿ. ಆ ಬುಡದ ಮೋಟನ್ನು ಮತ್ತು ಬೇರುಗಳನ್ನು ಭೂಮಿಯಲ್ಲಿ ಬಿಟ್ಟುಬಿಡಿ. ಅದರ ಸುತ್ತಲೂ ಕಾಡಿನ ಹುಲ್ಲು ಬೆಳೆಯಲಿ. ಅದು ಇಬ್ಬನಿಯಿಂದ ತೋಯ್ದು ಹೋಗಲಿ. ಅದು ಕಾಡುಪ್ರಾಣಿಯಂತೆ ಇರುವುದು. ಅದು ಏಳು ವರ್ಷ ಕಳೆಯುವವರೆಗೆ ಹಾಗೆಯೇ ಇರುವುದು’ ಎಂದು ಹೇಳಿದನು.

24 “ಕನಸಿನ ಅರ್ಥವು ಹೀಗಿದೆ: ಅರಸನೇ, ಮಹೋನ್ನತನಾದ ದೇವರು ನನ್ನ ಒಡೆಯನಾದ ಅರಸನಿಗೆ ಹೀಗಾಗಬೇಕೆಂದು ಆಜ್ಞಾಪಿಸಿದ್ದಾನೆ. 25 ರಾಜನಾದ ನೆಬೂಕದ್ನೆಚ್ಚರನೇ, ನಿನ್ನನ್ನು ಬಲವಂತದಿಂದ ಜನರಿಂದ ದೂರಮಾಡುವರು. ನೀನು ಕಾಡುಪ್ರಾಣಿಗಳೊಂದಿಗೆ ವಾಸಮಾಡುವೆ; ಹಸುಗಳಂತೆ ಹುಲ್ಲು ತಿನ್ನುವೆ; ಇಬ್ಬನಿಯಿಂದ ತೋಯಿಸಿಕೊಳ್ಳುವೆ. ಏಳು ವರ್ಷಗಳು ಕಳೆಯುವವು. ಆಗ ನೀನು ಮಹೋನ್ನತನಾದ ದೇವರು ಮಾನವರ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ರಾಜ್ಯವನ್ನು ಕೊಡುತ್ತಾನೆ ಎಂಬ ಪಾಠವನ್ನು ಕಲಿಯುವೆ.

26 “ಮರದ ಬುಡದ ಮೋಟನ್ನು ಮತ್ತು ಅದರ ಬೇರುಗಳನ್ನು ಭೂಮಿಯಲ್ಲಿಯೇ ಬಿಟ್ಟುಬಿಡಿ ಎಂಬುದರ ಅರ್ಥವೇನೆಂದರೆ, ನಿನ್ನ ರಾಜ್ಯವನ್ನು ನಿನಗೆ ಹಿಂತಿರುಗಿಸಲಾಗುವುದು. ಮಹೋನ್ನತನಾದ ದೇವರು ನಿನ್ನ ಸಾಮ್ರಾಜ್ಯದ ಮೇಲೆ ಆಳ್ವಿಕೆ ಮಾಡುತ್ತಾನೆ ಎಂಬುದನ್ನು ನೀನು ತಿಳಿದುಕೊಂಡ ಬಳಿಕ ಹೀಗಾಗುವುದು. 27 ಆದ್ದರಿಂದ ರಾಜನೇ, ನನ್ನ ಬುದ್ಧಿವಾದವನ್ನು ದಯವಿಟ್ಟು ಒಪ್ಪಿಕೊ. ನೀನು ಪಾಪಕೃತ್ಯಗಳನ್ನು ಮಾಡಬೇಡ. ನೀತಿಯನ್ನು ಅನುಸರಿಸು; ಕೆಟ್ಟದ್ದನ್ನು ಮಾಡಬೇಡ. ಬಡಜನರಿಗೆ ಕರುಣೆಯನ್ನು ತೋರು. ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾಗುವುದು. ಇದೇ ನನ್ನ ಬುದ್ಧಿವಾದ” ಎಂದು ಅರಿಕೆ ಮಾಡಿದನು.

28 ಇದೆಲ್ಲವೂ ಅರಸನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು. 29-30 ಕನಸು ಕಂಡ ಹನ್ನೆರಡು ತಿಂಗಳುಗಳಾದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿದ್ದ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಮಾಳಿಗೆಯ ಮೇಲಿದ್ದಾಗ ಅರಸನು, “ಈ ಬಾಬಿಲೋನ್ ನಗರವನ್ನು ನೋಡಿ, ನಾನು ಈ ಮಹಾನಗರವನ್ನು ಕಟ್ಟಿದೆ. ಇದು ನನ್ನ ಅರಮನೆ. ನಾನು ನನ್ನ ಸಾಮರ್ಥ್ಯದಿಂದ ಈ ಅರಮನೆಯನ್ನು ಕಟ್ಟಿದೆ. ನಾನು ಎಂಥಾ ದೊಡ್ಡವನು ಎಂದು ಲೋಕಕ್ಕೆ ತೋರಿಸಲು ನಾನು ಈ ಅರಮನೆಯನ್ನು ಕಟ್ಟಿದೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದನು.

31 ಆ ಶಬ್ದಗಳು ಇನ್ನೂ ಬಾಯಿಯಲ್ಲಿಯೇ ಇದ್ದಾಗ, ಆಕಾಶವಾಣಿಯಾಯಿತು. ಆ ಧ್ವನಿಯು, “ಅರಸನಾದ ನೆಬೂಕದ್ನೆಚ್ಚರನೇ, ನಿನ್ನಿಂದ ನಿನ್ನ ರಾಜಪದವಿಯನ್ನು ಕಿತ್ತುಕೊಳ್ಳಲಾಗಿದೆ. 32 ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.

33 ಆ ಮಾತುಗಳು ತಕ್ಷಣ ನೆರವೇರಿದವು. ನೆಬೂಕದ್ನೆಚ್ಚರನು ಜನರನ್ನು ಬಿಟ್ಟುಹೋಗಬೇಕಾಯಿತು. ಅವನು ಹಸುಗಳಂತೆ ಹುಲ್ಲು ತಿನ್ನತೊಡಗಿದನು. ಅವನು ಇಬ್ಬನಿಯಿಂದ ನೆನೆದನು. ಅವನ ಕೂದಲುಗಳು ಹದ್ದಿನ ಗರಿಗಳಂತೆ ಬೆಳೆದವು. ಅವನ ಉಗುರುಗಳು ಪಕ್ಷಿಗಳ ಉಗುರುಗಳಂತೆ ಬೆಳೆದವು.

34 ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ.

ದೇವರ ಆಳ್ವಿಕೆಯು ಶಾಶ್ವತವಾದದ್ದು!
    ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
35 ಭೂಮಿಯ ಜನರು ಬಹು ಮುಖ್ಯರಲ್ಲ.
    ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ.
ಯಾರೂ ಆತನನ್ನು ತಡೆಯಲಾರರು!
    ಯಾರೂ ಆತನನ್ನು ಪ್ರಶ್ನಿಸಲಾರರು!

36 ಆಗ ದೇವರು ನನಗೆ ಸರಿಯಾದ ಬುದ್ಧಿಯನ್ನು ಕೊಟ್ಟನು. ನನಗೆ ರಾಜನ ಗೌರವ, ಪ್ರಭಾವ, ವೈಭವಗಳು ಮತ್ತೆ ಲಭಿಸಿದವು. ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸ್ವೀಕರಿಸಿದರು. ನಾನು ಮತ್ತೆ ಅರಸನಾದೆನು. ನಾನು ಮೊದಲಿಗಿಂತಲೂ ಅಧಿಕ ಶಕ್ತಿಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನಾದೆನು. 37 ಅರಸ ನೆಬೂಕದ್ನೆಚ್ಚರನಾದ ನಾನು ಈಗ ಪರಲೋಕದ ರಾಜನನ್ನು ಘನಪಡಿಸುತ್ತೇನೆ, ಮಹಿಮೆಪಡಿಸುತ್ತೇನೆ. ಆತನು ಮಾಡುವದೆಲ್ಲ ಸರಿ. ಆತನು ಯಾವಾಗಲೂ ನ್ಯಾಯವಂತನಾಗಿದ್ದಾನೆ. ಆತನು ಗರ್ವಿಷ್ಠರನ್ನು ದೀನರನ್ನಾಗಿ ಮಾಡಬಲ್ಲನು.

ಗೋಡೆಯ ಮೇಲೆ ಅದ್ಭುತ ಲೇಖನ

ರಾಜನಾದ ಬೇಲ್ಶಚ್ಚರನು ತನ್ನ ಒಂದು ಸಾವಿರ ಜನ ಅಧಿಕಾರಿಗಳಿಗೆ ಒಂದು ಔತಣವನ್ನು ಕೊಟ್ಟನು. ರಾಜನು ಅವರ ಜೊತೆ ದ್ರಾಕ್ಷಾರಸವನ್ನು ಪಾನ ಮಾಡುತ್ತಿದ್ದನು. ಬೇಲ್ಶಚ್ಚರನು ದ್ರಾಕ್ಷಾರಸ ಪಾನ ಮಾಡುವಾಗ, ತನ್ನ ತಂದೆಯಾದ ನೆಬೂಕದ್ನೆಚ್ಚರನು ಜೆರುಸಲೇಮಿನ ಆಲಯದಿಂದ ಎತ್ತಿಕೊಂಡು ಬಂದಿದ್ದ ಬೆಳ್ಳಿಬಂಗಾರಗಳ ಲೋಟಗಳನ್ನು ತೆಗೆದುಕೊಂಡು ಬರಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ತನ್ನ ಮುಖಂಡರು, ಪತ್ನಿಯರು ಮತ್ತು ಉಪಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾರಸ ಪಾನ ಮಾಡಬೇಕೆಂದು ರಾಜನಾದ ಬೇಲ್ಶಚ್ಚರನ ಅಪೇಕ್ಷೆಯಾಗಿತ್ತು. ಆದ್ದರಿಂದ ಅವರು ಜೆರುಸಲೇಮಿನ ಆಲಯದಿಂದ ತಂದಿದ್ದ ಆ ಪಾತ್ರೆಗಳನ್ನು ತಂದರು. ರಾಜನು, ಅವನ ಅಧಿಕಾರಿಗಳು, ಅವನ ಪತ್ನಿಯರು, ಅವನ ಉಪಪತ್ನಿಯರು ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದರು. ಅವರು ಕುಡಿಯುವಾಗ ತಮ್ಮ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸುತ್ತಿದ್ದರು.

ಆಗ ಫಕ್ಕನೆ ಮನುಷ್ಯನ ಕೈಯೊಂದು ಕಾಣಿಸಿಕೊಂಡು ಗೋಡೆಯ ಮೇಲೆ ಬರೆಯುವದಕ್ಕೆ ಪ್ರಾರಂಭಿಸಿತು. ಬೆರಳುಗಳು ಗೋಡೆಯ ಸುಣ್ಣದ ಮೇಲೆ ಅಕ್ಷರಗಳನ್ನು ಕೊರೆದವು. ಆ ಕೈಯು ದೀಪಸ್ತಂಭದ ಹತ್ತಿರ ಅರಮನೆಯ ಗೋಡೆಯ ಮೇಲೆ ಅರಸನ ಕಣ್ಣೆದುರಿನಲ್ಲಿಯೇ ಬರೆಯಿತು.

ರಾಜನಾದ ಬೇಲ್ಶಚ್ಚರನು ಬಹಳ ಹೆದರಿದನು. ಭಯದಿಂದ ಅವನ ಮುಖವು ಕಳೆಗುಂದಿತು; ಮತ್ತು ಅವನ ಮೊಣಕಾಲುಗಳು ನಡುಗಿ ಒಂದಕ್ಕೊಂದು ಬಡಿಯುತ್ತಿದ್ದವು. ಅವನ ಕಾಲುಗಳು ತುಂಬ ಬಲಹೀನವಾಗಿ ಅವನಿಗೆ ನಿಲ್ಲಲಾಗಲಿಲ್ಲ. ಆಗ ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ, ಪಂಡಿತ, ಶಾಕುನಿಕರನ್ನು ತನ್ನಲ್ಲಿಗೆ ಕರೆಸಿದನು. ಅವನು ಆ ವಿದ್ವಾಂಸರಿಗೆ, “ಈ ಬರವಣಿಗೆಯನ್ನು ಓದಿ ನನಗೆ ಅದರ ಅರ್ಥವನ್ನು ಹೇಳಬಲ್ಲ ಮನುಷ್ಯನಿಗೆ ನಾನು ಬಹುಮಾನವನ್ನು ಕೊಡುತ್ತೇನೆ. ಆ ಮನುಷ್ಯನಿಗೆ ನಾನು ಕಂದು ಬಣ್ಣದ ವಸ್ತ್ರಗಳನ್ನು ಕೊಡುತ್ತೇನೆ. ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.

ಆಸ್ಥಾನದ ವಿದ್ವಾಂಸರೆಲ್ಲರೂ ಬಂದು ನೋಡಿದರು. ಆದರೆ ಆ ಬರಹವನ್ನು ಓದುವುದಕ್ಕಾಗಲಿ ಅದರ ಅರ್ಥವನ್ನು ತಿಳಿದುಕೊಳ್ಳುವುದಕ್ಕಾಗಲಿ ಅವರಿಗೆ ಆಗಲಿಲ್ಲ. ಆಗ ಅರಸನಾದ ಬೇಲ್ಶಚ್ಚರನ ಅಧಿಕಾರಿಗಳಿಗೆ ಏನೂ ತೋಚದಂತಾಯಿತು. ಅರಸನು ಮತ್ತಷ್ಟು ಅಂಜಿದನು ಮತ್ತು ಕಳವಳಪಟ್ಟನು. ಅವನ ಮುಖವು ಭಯದಿಂದ ಕಳೆಗುಂದಿತು.

10 ಆಗ ರಾಜನ ತಾಯಿಯು ಆ ಔತಣ ಶಾಲೆಗೆ ಬಂದಳು. ರಾಜನು ಮತ್ತು ಅವನ ಅಧಿಕಾರಿಗಳು ಆಡುತ್ತಿದ್ದ ಮಾತುಗಳನ್ನು ಕೇಳಿ ಅವಳು, “ರಾಜನೇ, ಚಿರಂಜೀವಿಯಾಗಿರು, ಭಯಪಡಬೇಡ. ಭಯದಿಂದ ನಿನ್ನ ಮುಖ ಅಷ್ಟೊಂದು ಬಿಳುಚಿಕೊಳ್ಳಲು ಬಿಡಬೇಡ. 11 ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ. ದೇವರ ಜ್ಞಾನಕ್ಕೆ ಸಮಾನವಾದ ಜ್ಞಾನವೂ ಬುದ್ಧಿಯೂ ರಹಸ್ಯವನ್ನು ತಿಳಿದುಕೊಳ್ಳುವ ಶಕ್ತಿಯೂ ತನಗಿರುವುದಾಗಿ ಅವನು ನಿನ್ನ ತಂದೆಯ ಕಾಲದಲ್ಲಿಯೇ ತೋರಿಸಿಕೊಟ್ಟಿದ್ದಾನೆ. ನಿನ್ನ ತಂದೆಯಾದ ನೆಬೂಕದ್ನೆಚ್ಚರನು ಈ ಮನುಷ್ಯನನ್ನು ಎಲ್ಲ ವಿದ್ವಾಂಸರ ಅಧ್ಯಕ್ಷನನ್ನಾಗಿ ನೇಮಿಸಿದ್ದನು. ಎಲ್ಲ ಜೋಯಿಸರಿಗೆ, ಮಂತ್ರವಾದಿಗಳಿಗೆ, ಶಾಕುನಿಕರಿಗೆ ಮತ್ತು ಪಂಡಿತರಿಗೆ ಇವನು ಮುಖ್ಯಸ್ಥನಾಗಿದ್ದನು. 12 ನಾನು ಹೇಳುತ್ತಿರುವ ಮನುಷ್ಯನ ಹೆಸರು ದಾನಿಯೇಲ. ರಾಜನು ಅವನಿಗೆ ಬೇಲ್ತೆಶಚ್ಚರನೆಂದು ಹೆಸರಿಟ್ಟಿದ್ದನು. ಬೇಲ್ತೆಶಚ್ಚರನು ಬಹಳ ಚಾಣಾಕ್ಷ ಮತ್ತು ಅನೇಕ ವಿಷಯಗಳನ್ನು ಬಲ್ಲವನು, ಅವನು ಕನಸುಗಳ ಅರ್ಥವನ್ನು ಹೇಳಬಲ್ಲನು, ರಹಸ್ಯಗಳನ್ನು ವಿವರಿಸಬಲ್ಲನು; ಕಠಿಣವಾದ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲನು. ದಾನಿಯೇಲನನ್ನು ಕರೆಯಿಸು. ಅವನು ಗೋಡೆಯ ಮೇಲಿನ ಬರಹದ ಅರ್ಥವನ್ನು ನಿನಗೆ ಹೇಳುತ್ತಾನೆ” ಎಂದು ಹೇಳಿದಳು.

13 ದಾನಿಯೇಲನನ್ನು ಅರಸನಲ್ಲಿಗೆ ಕರೆದು ತರಲಾಯಿತು. ಆಗ ರಾಜನು, “ರಾಜನಾಗಿದ್ದ ನನ್ನ ತಂದೆಯು ಯೆಹೂದದಿಂದ ಸೆರೆಹಿಡಿದು ತಂದವರಲ್ಲಿ ಒಬ್ಬನಾದ ದಾನಿಯೇಲನು ನೀನೋ? 14 ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿದೆ ಎಂದು ನಾನು ಕೇಳಿದ್ದೇನೆ. ನೀನು ರಹಸ್ಯವನ್ನು ತಿಳಿದುಕೊಳ್ಳಬಲ್ಲವನು, ಬಹಳ ಚಾಣಾಕ್ಷನು ಮತ್ತು ಬುದ್ಧಿವಂತನೆಂದು ನಾನು ಕೇಳಿದ್ದೇನೆ. 15 ಗೋಡೆಯ ಮೇಲಿನ ಈ ಬರಹವನ್ನು ಓದಲು ಮಂತ್ರವಾದಿಗಳನ್ನು, ವಿದ್ವಾಂಸರನ್ನು ಕರೆಸಲಾಯಿತು. ಅವರು ಆ ಬರಹದ ಅರ್ಥವನ್ನು ನನಗೆ ವಿವರಿಸಬೇಕೆಂದು ನನ್ನ ಉದ್ದೇಶವಾಗಿತ್ತು. ಆದರೆ ಗೋಡೆಯ ಮೇಲಿನ ಈ ಬರಹದ ಅರ್ಥವನ್ನು ಅವರು ನನಗೆ ಹೇಳಲು ಸಾಧ್ಯವಾಗಲಿಲ್ಲ. 16 ನಾನು ನಿನ್ನ ಬಗ್ಗೆ ಕೇಳಿದ್ದೇನೆ. ನೀನು ಗೂಢಾರ್ಥವನ್ನು ತಿಳಿದುಕೊಳ್ಳಬಲ್ಲೆ ಮತ್ತು ಕಠಿಣವಾದ ಸಮಸ್ಯೆಗಳಿಗೆ ಪರಿಹಾರ ಹೇಳಬಲ್ಲೆ ಎಂದು ನಾನು ಕೇಳಿದ್ದೇನೆ. ನೀನು ಗೋಡೆಯ ಮೇಲಿನ ಈ ಬರಹವನ್ನು ಓದಿ ಅದರ ಅರ್ಥವನ್ನು ನನಗೆ ವಿವರಿಸಿದರೆ, ನಾನು ನಿನಗೆ ಕಂದುಬಣ್ಣದ ಬಟ್ಟೆಗಳನ್ನು ಕೊಡುತ್ತೇನೆ. ನಿನ್ನ ಕತ್ತಿಗೆ ಚಿನ್ನದ ಹಾರವನ್ನು ಹಾಕುತ್ತೇನೆ; ನಿನ್ನನ್ನು ನನ್ನ ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುತ್ತೇನೆ” ಎಂದು ಹೇಳಿದನು.

17 ಆಗ ದಾನಿಯೇಲನು ರಾಜನಿಗೆ, “ರಾಜನಾದ ಬೇಲ್ಶಚ್ಚರನೇ, ನಿನ್ನ ಕಾಣಿಕೆಗಳು ನಿನ್ನಲ್ಲಿಯೇ ಇರಲಿ ಅಥವಾ ಆ ಬಹುಮಾನಗಳನ್ನು ಬೇರೆ ಯಾರಿಗಾದರೂ ಕೊಡು. ಆದರೂ ಗೋಡೆಯ ಮೇಲಿನ ಬರಹವನ್ನು ಓದಿ ಅದರ ಅರ್ಥವನ್ನು ನಿನಗೆ ವಿವರಿಸುತ್ತೇನೆ” ಎಂದು ಉತ್ತರಿಸಿದನು.

18 “ರಾಜನೇ, ಮಹೋನ್ನತನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನನ್ನು ಮಹಾ ದೊಡ್ಡ ರಾಜನನ್ನಾಗಿಯೂ ಬಲಿಷ್ಠನಾದ ರಾಜನನ್ನಾಗಿಯೂ ಪ್ರಮುಖನಾದ ರಾಜನನ್ನಾಗಿಯೂ ಮಾಡಿದ್ದನು. 19 ಹಲವಾರು ಜನಾಂಗದ ಮತ್ತು ಭಾಷೆಯ ಜನರು ಅವನಿಗೆ ತುಂಬ ಹೆದರುತ್ತಿದ್ದರು. ಏಕೆಂದರೆ ಮಹೋನ್ನತನಾದ ದೇವರು ಅವನನ್ನು ಬಹುದೊಡ್ಡ ರಾಜನನ್ನಾಗಿ ಮಾಡಿದ್ದನು. ನೆಬೂಕದ್ನೆಚ್ಚರನು ಯಾರನ್ನಾದರೂ ಕೊಲ್ಲಬೇಕೆಂದು ಇಚ್ಛಿಸಿದರೆ ಅವನನ್ನು ಕೊಲ್ಲಿಸಿಬಿಡುತ್ತಿದ್ದನು; ತನಗೆ ಬೇಕಾದವರನ್ನು ಉಳಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಏರಿಸುತ್ತಿದ್ದನು; ತನ್ನ ಮನಸ್ಸಿಗೆ ಬಂದವರನ್ನು ಇಳಿಸುತ್ತಿದ್ದನು.

20 “ಆದರೆ ನೆಬೂಕದ್ನೆಚ್ಚರನು ಬಹಳ ಅಹಂಕಾರಿಯಾಗಿದ್ದನು ಮತ್ತು ಹಟಮಾರಿಯಾಗಿದ್ದನು. ಆದ್ದರಿಂದ ಅವನ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ರಾಜಸಿಂಹಾಸನದಿಂದ ಇಳಿಸಿ ಅವನ ಎಲ್ಲ ಘನತೆಗೌರವಗಳನ್ನು ಕಿತ್ತುಕೊಳ್ಳಲಾಯಿತು. 21 ಅನಂತರ ನೆಬೂಕದ್ನೆಚ್ಚರನನ್ನು ಜನರ ಮಧ್ಯದಿಂದ ಓಡಿಸಲಾಯಿತು. ಅವನ ಬುದ್ಧಿಯು ಮೃಗಬುದ್ಧಿಯಂತಾಯಿತು. ಅವನು ಕಾಡುಕತ್ತೆಗಳ ಜೊತೆ ವಾಸಿಸಿದನು; ಹಸುಗಳಂತೆ ಹುಲ್ಲು ತಿಂದನು; ಮಂಜಿನಲ್ಲಿ ನೆನೆದನು. ಅವನಿಗೆ ಸರಿಯಾದ ಬುದ್ಧಿ ಬರುವತನಕ ಅವನು ಆ ಸ್ಥಿತಿಯಲ್ಲಿದ್ದನು. ಆಗ ಅವನು ಮಹೋನ್ನತನಾದ ದೇವರೇ ಮಾನವರ ಸಾಮ್ರಾಜ್ಯವನ್ನು ಆಳುತ್ತಾನೆ ಮತ್ತು ಆ ಸಾಮ್ರಾಜ್ಯಕ್ಕೆ ತನಗೆ ಬೇಕಾದವರನ್ನು ಅರಸರನ್ನಾಗಿ ನೇಮಿಸುತ್ತಾನೆ ಎಂಬುದನ್ನು ತಿಳಿದುಕೊಂಡನು.

22 “ಬೇಲ್ಶಚ್ಚರನೇ, ಇವುಗಳೆಲ್ಲ ನಿನಗೆ ತಿಳಿದೇ ಇವೆ. ನೀನು ನೆಬೂಕದ್ನೆಚ್ಚರನ ಮಗ. ಆದರೂ ನೀನು ನಮ್ರತೆಯಿಂದ ವರ್ತಿಸಲಿಲ್ಲ. 23 ಇಲ್ಲ, ನೀನು ನಮ್ರನಾಗಿರಲಿಲ್ಲ. ಅದಕ್ಕೆ ಪ್ರತಿಯಾಗಿ ನೀನು ಪರಲೋಕದೊಡೆಯನಿಗೆ ವಿರುದ್ಧವಾಗಿ ನಡೆದುಕೊಂಡೆ. ಯೆಹೋವನ ಆಲಯದಿಂದ ಕುಡಿಯುವ ಪಾತ್ರೆಗಳನ್ನು ತರಬೇಕೆಂದು ಆಜ್ಞಾಪಿಸಿದೆ. ನೀನು ಮತ್ತು ನಿನ್ನ ಅಧಿಕಾರಿಗಳು, ನಿನ್ನ ಪತ್ನಿಯರು ಮತ್ತು ನಿನ್ನ ಉಪಪತ್ನಿಯರು ಆ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿದಿರಿ. ನೀನು ಬೆಳ್ಳಿ, ಬಂಗಾರ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸಿದೆ. ಅವುಗಳಿಗೆ ನೋಡುವ, ಕೇಳಿಸಿಕೊಳ್ಳುವ ಅಥವಾ ಸ್ತೋತ್ರವನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲ. ಆದರೆ ನಿನ್ನ ಜೀವದ ಮೇಲೆಯೂ ನಿನ್ನ ಆಗುಹೋಗುಗಳ ಮೇಲೆಯೂ ಅಧಿಕಾರವುಳ್ಳ ದೇವರನ್ನು ನೀನು ಸ್ತುತಿಸಲಿಲ್ಲ. 24 ಆದ್ದರಿಂದ ದೇವರು ಗೋಡೆಯ ಮೇಲೆ ಬರೆಯಲು ಆ ಕೈಯನ್ನು ಕಳುಹಿಸಿಕೊಟ್ಟನು. 25 ಆ ಗೋಡೆಯ ಮೇಲೆ ಬರೆದ ಶಬ್ದಗಳು ಹೀಗಿವೆ:

ಮೆನೇ, ಮೆನೇ, ತೆಕೇಲ್, ಉಪರ್ಸಿನ್.

26 “ಈ ಶಬ್ದಗಳ ಅರ್ಥ ಹೀಗಿದೆ:

ಮೆನೇ ಎಂದರೆ: ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ.

27 ತೆಕೇಲ್ ಎಂದರೆ: ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವೆ.

28 ಉಪರ್ಸಿನ್ ಎಂದರೆ: ನಿನ್ನ ರಾಜ್ಯವನ್ನು ನಿನ್ನಿಂದ ತೆಗೆದುಕೊಂಡು ವಿಭಜಿಸಲಾಗಿದೆ. ಅದನ್ನು ಮೇದ್ಯಯರಿಗೂ ಪಾರಸಿಯರಿಗೂ ಕೊಡಲಾಗುವುದು” ಎಂದು ವಿವರಿಸಿದನು.

29 ದಾನಿಯೇಲನಿಗೆ ಬೇಲ್ಶಚ್ಚರನ ಆಜ್ಞೆಯಂತೆ ಕಂದು ಬಣ್ಣದ ವಸ್ತ್ರಗಳನ್ನು ಕೊಡಲಾಯಿತು. ಚಿನ್ನದ ಸರವನ್ನು ಅವನ ಕೊರಳಿಗೆ ಹಾಕಲಾಯಿತು; ಅವನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನಾದನು. 30 ಅದೇ ರಾತ್ರಿ ಕಸ್ದೀಯರ ರಾಜನಾದ ಬೇಲ್ಶಚ್ಚರನ ಕೊಲೆಯಾಯಿತು. 31 ಮೇದ್ಯನಾದ ದಾರ್ಯಾವೆಷನು ಹೊಸ ಅರಸನಾದನು. ಅವನು ಸುಮಾರು ಅರವತ್ತೆರಡು ವರ್ಷದವನಾಗಿದ್ದನು.

ದಾನಿಯೇಲನು ಮತ್ತು ಸಿಂಹಗಳು

ದಾರ್ಯಾವೆಷನು ತನ್ನ ರಾಜ್ಯಭಾರವನ್ನು ನಿರ್ವಹಿಸುವದಕ್ಕೋಸ್ಕರ ರಾಜ್ಯದ ಆಯಾ ಭಾಗಗಳ ಮೇಲೆ ನೂರಿಪ್ಪತ್ತು ಜನ ದೇಶಾಧಿಪತಿಗಳನ್ನು ನೇಮಿಸಿದನು. ಆ ನೂರಿಪ್ಪತ್ತು ಜನರ ಮೇಲೆ ಮೂರು ಜನ ಮುಖ್ಯಾಧಿಕಾರಿಗಳನ್ನು ನೇಮಿಸಿದನು. ದಾನಿಯೇಲನು ಈ ಮೂರು ಜನ ಮುಖ್ಯಾಧಿಕಾರಿಗಳಲ್ಲೊಬ್ಬನಾಗಿದ್ದನು. ಯಾರೊಬ್ಬರೂ ತನಗೆ ಮೋಸ ಮಾಡದಂತೆ ಮತ್ತು ತನ್ನ ರಾಜ್ಯಕ್ಕೆ ನಷ್ಟವಾಗದಂತೆ ನೋಡಿಕೊಳ್ಳಲು ರಾಜನು ಈ ಮೂವರನ್ನು ನೇಮಿಸಿದ್ದನು. ದಾನಿಯೇಲನು ಬೇರೆ ಮುಖ್ಯಾಧಿಕಾರಿಗಳಿಗಿಂತ ಸಮರ್ಥನೆಂದು ತೋರಿಸಿಕೊಟ್ಟನು. ದಾನಿಯೇಲನು ತನ್ನ ಒಳ್ಳೆಯ ಗುಣ ಮತ್ತು ಮಹಾ ಸಾಮರ್ಥ್ಯಗಳ ಮೂಲಕ ಈ ಒಳ್ಳೆಯ ಹೆಸರನ್ನು ಪಡೆದನು. ದಾನಿಯೇಲನಿಂದ ಅರಸನು ತುಂಬ ಪ್ರಭಾವಿತನಾಗಿ ಅವನನ್ನು ಇಡೀ ರಾಜ್ಯದ ಅಧಿಕಾರಿಯನ್ನಾಗಿ ನೇಮಿಸಲು ಯೋಜನೆ ಮಾಡಿದನು. ಆದರೆ ಬೇರೆ ಮುಖ್ಯಾಧಿಕಾರಿಗಳು ಮತ್ತು ದೇಶಾಧಿಪತಿಗಳು ಈ ಸಮಾಚಾರವನ್ನು ತಿಳಿದು ಹೊಟ್ಟೆಕಿಚ್ಚುಪಟ್ಟರು. ಅವರು ದಾನಿಯೇಲನ ಮೇಲೆ ದೋಷಾರೋಪಣೆ ಮಾಡಲು ಕಾರಣಗಳನ್ನು ಹುಡುಕಲಾರಂಭಿಸಿದರು. ದಾನಿಯೇಲನು ಮಾಡುವ ರಾಜ್ಯದ ಎಲ್ಲ ಕೆಲಸಗಳ ಮೇಲೆ ಅವರು ಕಣ್ಣಿಟ್ಟರು. ಆದರೆ ದಾನಿಯೇಲನಲ್ಲಿ ಯಾವ ತಪ್ಪೂ ಅವರಿಗೆ ಸಿಕ್ಕಲಿಲ್ಲ. ಆದ್ದರಿಂದ ಅವರು ಅವನ ಮೇಲೆ ಯಾವ ದೋಷಾರೋಪಣೆಯನ್ನೂ ಮಾಡಲಾಗಲಿಲ್ಲ. ದಾನಿಯೇಲನು ಪ್ರಾಮಾಣಿಕನೂ ವಿಶ್ವಾಸಪಾತ್ರನೂ ಆಗಿದ್ದನು. ಅವನು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದನು; ಅರಸನಿಗೆ ಯಾವ ರೀತಿಯಲ್ಲೂ ವಂಚನೆ ಮಾಡುತ್ತಿರಲಿಲ್ಲ.

ಕೊನೆಗೆ ಅವರು, “ದಾನಿಯೇಲನ ಮೇಲೆ ದೋಷಾರೋಪಣೆ ಮಾಡುವದಕ್ಕೆ ನಮಗೆ ಕಾರಣ ಸಿಕ್ಕುವುದೇ ಇಲ್ಲ. ಅವನ ದೇವರ ಧರ್ಮಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿಯೇ ಏನಾದರೂ ತಪ್ಪು ಹುಡುಕಬೇಕು” ಎಂದು ಮಾತನಾಡಿಕೊಂಡರು.

ಆ ಇಬ್ಬರು ಮುಖ್ಯಾಧಿಕಾರಿಗಳು ಮತ್ತು ದೇಶಾಧಿಪತಿಗಳು ಒಟ್ಟಿಗೆ ಸೇರಿ ಅರಸನ ಬಳಿಗೆ ಹೋದರು. ಅವರು, “ಅರಸನಾದ ದಾರ್ಯಾವೆಷನೇ, ಚಿರಂಜೀವಿಯಾಗಿರು. ರಾಜ್ಯದ ಸಕಲ ಮುಖ್ಯಾಧಿಕಾರಿಗಳು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಸಂಸ್ಥಾನಾಧ್ಯಕ್ಷರು ಸೇರಿ ಒಂದು ಆಲೋಚನೆಯನ್ನು ಮಾಡಿದ್ದಾರೆ. ಈ ಸಂಬಂಧವಾಗಿ ಅರಸನು ಒಂದು ನಿಬಂಧನೆಯನ್ನು ಮಾಡಿ ರಾಜಾಜ್ಞೆಯನ್ನು ಹೊರಡಿಸಬೇಕೆಂದು ನಮ್ಮೆಲ್ಲರ ಅನಿಸಿಕೆ. ಎಲ್ಲರೂ ಆ ರಾಜಾಜ್ಞೆಯನ್ನು ಪಾಲಿಸಬೇಕು. ಆ ನಿಬಂಧನೆ ಹೀಗಿದೆ: ಬರಲಿರುವ ಮೂವತ್ತು ದಿನ ಯಾರೂ ಅರಸನಾದ ನಿನ್ನನ್ನು ಬಿಟ್ಟು ಬೇರೆ ಯಾವ ದೇವರನ್ನಾಗಲಿ ಮನುಷ್ಯನನ್ನಾಗಲಿ ಪ್ರಾರ್ಥಿಸಕೂಡದು. ಯಾರಾದರೂ ಹಾಗೆ ಮಾಡಿದರೆ ಅವರನ್ನು ಸಿಂಹಗಳ ಗುಹೆಯಲ್ಲಿ ಎಸೆಯಲಾಗುವುದು. ಅರಸನೇ, ಈ ನಿಬಂಧನೆಯನ್ನು ಬರೆದ ಕಾಗದಕ್ಕೆ ನಿನ್ನ ಹಸ್ತಾಕ್ಷರ ಹಾಕಿ ಅದನ್ನು ಶಾಸನವನ್ನಾಗಿ ಮಾಡು. ಹೀಗೆ ಮಾಡಿದರೆ ಶಾಸನವನ್ನು ಬದಲಾಯಿಸಲಾಗುವುದಿಲ್ಲ. ಏಕೆಂದರೆ ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ಎಂದಿಗೂ ರದ್ದಾಗುವದಿಲ್ಲ ಮತ್ತು ಅವುಗಳನ್ನು ಬದಲಾಯಿಸಲಾಗುವುದಿಲ್ಲ.” ರಾಜನಾದ ದಾರ್ಯಾವೆಷನು ಆ ನಿಬಂಧನೆಯನ್ನು ಶಾಸನವನ್ನಾಗಿ ಮಾಡಿ ರುಜು ಹಾಕಿದನು.

10 ದಾನಿಯೇಲನು ಯಾವಾಗಲೂ ಪ್ರತಿದಿನ ಮೂರು ಸಲ ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದನು. ದಾನಿಯೇಲನು ಮೊಣಕಾಲೂರಿ ದೇವರಲ್ಲಿ ಪ್ರಾರ್ಥಿಸುತ್ತಿದ್ದನು ಮತ್ತು ದೇವರನ್ನು ಸ್ತುತಿಸುತ್ತಿದ್ದನು. ಈ ಹೊಸ ಶಾಸನದ ಬಗ್ಗೆ ಕೇಳಿದ ಮೇಲೆ ದಾನಿಯೇಲನು ತನ್ನ ಮನೆಯ ಮಹಡಿಯ ಮೇಲಿದ್ದ ತನ್ನ ಕೋಣೆಗೆ ಹೋಗಿ ಜೆರುಸಲೇಮಿನ ಕಡೆಗೆ ತೆರೆದ ಕಿಟಕಿಯ ಬಳಿ ಮೊಣಕಾಲೂರಿ ಎಂದಿನಂತೆ ಪ್ರಾರ್ಥನೆಮಾಡಿದನು.

11 ಆಗ ಆ ಜನರು ಗುಂಪಾಗಿ ಹೋಗಿ ದಾನಿಯೇಲನನ್ನು ನೋಡಿದರು. ದಾನಿಯೇಲನು ದೇವರಲ್ಲಿ ಪ್ರಾರ್ಥಿಸಿ ಸಹಾಯ ಕೋರುತ್ತಿರುವದನ್ನು ಅವರು ನೋಡಿದರು. 12 ಅವರು ಅರಸನ ಬಳಿಗೆ ಹೋಗಿ ತಮ್ಮ ಶಾಸನದ ಬಗ್ಗೆ ಅರಸನೊಂದಿಗೆ ಮಾತನಾಡಿದರು. ಅವರು, “ರಾಜನಾದ ದಾರ್ಯಾವೆಷನೇ. ಮುಂಬರುವ ಮೂವತ್ತು ದಿನಗಳಲ್ಲಿ ಯಾರಾದರೂ ನಿನ್ನ ಹೊರತು ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಸಲ್ಲಿಸಿದರೆ ಅವರನ್ನು ಸಿಂಹದ ಗುಹೆಯಲ್ಲಿ ಎಸೆಯಲಾಗುವುದೆಂಬ ಶಾಸನಕ್ಕೆ ನೀನು ರುಜು ಹಾಕಿರುವಿಯಲ್ಲವೆ?” ಎಂದು ಕೇಳಿದರು.

ರಾಜನು, “ಹೌದು, ನಾನು ಆ ಶಾಸನಕ್ಕೆ ರುಜು ಹಾಕಿದ್ದೇನೆ. ಮೇದ್ಯಯರ ಮತ್ತು ಪಾರಸಿಯರ ಶಾಸನಗಳು ರದ್ದಾಗುವದಿಲ್ಲ ಮತ್ತು ಬದಲಾವಣೆ ಹೊಂದುವದಿಲ್ಲ” ಎಂದು ಉತ್ತರಕೊಟ್ಟನು.

13 ಆಗ ಅವರು ರಾಜನಿಗೆ, “ದಾನಿಯೇಲನೆಂಬ ಆ ಮನುಷ್ಯ ನಿನ್ನ ಕಡೆಗೆ ಎಳ್ಳಷ್ಟೂ ಗಮನ ಕೊಡುತ್ತಿಲ್ಲ. ಅವನು ಯೆಹೂದದ ಸೆರೆಯಾಳುಗಳಲ್ಲೊಬ್ಬನು. ನೀನು ರುಜುಹಾಕಿದ ಶಾಸನಕ್ಕೆ ಅವನು ಸ್ವಲ್ಪವಾದರೂ ಬೆಲೆಕೊಡುತ್ತಿಲ್ಲ. ದಾನಿಯೇಲನು ಈಗಲೂ ದಿನಕ್ಕೆ ಮೂರು ಸಲ ತನ್ನ ದೇವರಲ್ಲಿ ಪ್ರಾರ್ಥಿಸುತ್ತಾನೆ” ಎಂದು ಹೇಳಿದರು.

14 ಇದನ್ನು ಕೇಳಿ ಅರಸನಿಗೆ ದುಃಖವೂ ವ್ಯಸನವೂ ಆಯಿತು. ದಾನಿಯೇಲನನ್ನು ರಕ್ಷಿಸಲು ಉಪಾಯವೊಂದನ್ನು ಕಂಡುಹಿಡಿಯಲು ಸಾಯಂಕಾಲದವರೆಗೆ ಯೋಚಿಸಿದನು. 15 ಆಗ ಅವರು ಗುಂಪಾಗಿ ಅರಸನ ಬಳಿಗೆ ಹೋಗಿ, “ಅರಸನೇ, ನೆನಪಿಡು, ಮೇದ್ಯಯರ ಮತ್ತು ಪಾರಸಿಯರ ಶಾಸನದ ಪ್ರಕಾರ ಅರಸನ ಹಸ್ತಾಕ್ಷರದೊಂದಿಗೆ ಹೊರಡಿಸಿದ ರಾಜಾಜ್ಞೆಯನ್ನು ಎಂದಿಗೂ ರದ್ದುಗೊಳಿಸಲಾಗುವುದಿಲ್ಲ; ಅದರಲ್ಲಿ ಬದಲಾವಣೆ ಮಾಡಲಾಗುವುದಿಲ್ಲ” ಎಂದರು.

16 ರಾಜನಾದ ದಾರ್ಯಾವೆಷನು ಆಜ್ಞೆಯನ್ನು ಕೊಟ್ಟನು. ಅವರು ದಾನಿಯೇಲನನ್ನು ಸಿಂಹಗಳ ಗುಹೆಯಲ್ಲಿ ಎಸೆದರು. ಅರಸನು ದಾನಿಯೇಲನಿಗೆ, “ನೀನು ಸೇವೆ ಮಾಡುತ್ತಲೇ ಇರುವ ದೇವರು ನಿನ್ನನ್ನು ರಕ್ಷಿಸುವನೆಂದು ನನಗೆ ಗೊತ್ತಿದೆ” ಎಂದನು. 17 ಕೂಡಲೆ ಒಂದು ದೊಡ್ಡ ಕಲ್ಲುಬಂಡೆಯನ್ನು ತಂದು ಆ ಸಿಂಹದ ಗುಹೆಯ ಬಾಯಿಯನ್ನು ಮುಚ್ಚಿದರು. ಅರಸನು ತನ್ನ ಮುದ್ರೆಯುಂಗುರದಿಂದ ಆ ಬಂಡೆಗೆ ಮುದ್ರೆ ಹಾಕಿದನು. ಅರಸನ ಅಧಿಕಾರಗಳ ಮುದ್ರೆಯುಂಗುರಗಳಿಂದಲೂ ಸಹ ಆ ಕಲ್ಲುಬಂಡೆಗೆ ಮುದ್ರೆ ಹಾಕಲಾಯಿತು. ಇದರಿಂದಾಗಿ ಯಾರೂ ಆ ಕಲ್ಲುಬಂಡೆಯನ್ನು ಸರಿಸಿ ದಾನಿಯೇಲನನ್ನು ಆ ಸಿಂಹದ ಗುಹೆಯಿಂದ ಹೊರಗೆ ತೆಗೆಯದಂತಾಯಿತು. 18 ರಾಜನಾದ ದಾರ್ಯಾವೆಷನು ಅರಮನೆಗೆ ಹಿಂತಿರುಗಿದನು. ಆ ರಾತ್ರಿ ಅರಸನು ಊಟಮಾಡಲಿಲ್ಲ. ಮನೋರಂಜನೆಗಾಗಿ ಯಾರನ್ನೂ ತನ್ನ ಹತ್ತಿರ ಬರಗೊಡಿಸಲಿಲ್ಲ. ಇಡೀ ರಾತ್ರಿ ಅವನಿಗೆ ನಿದ್ರೆಯೇ ಬರಲಿಲ್ಲ.

19 ಮರುದಿನ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ರಾಜನಾದ ದಾರ್ಯಾವೆಷನು ಎದ್ದನು. ಅವನು ಸಿಂಹಗಳ ಗುಹೆಗೆ ಬೇಗಬೇಗನೆ ಹೋದನು. 20 ರಾಜನಿಗೆ ಬಹಳ ಚಿಂತೆಯಾಗಿತ್ತು. ರಾಜನು ಸಿಂಹಗಳ ಗುಹೆಗೆ ಹೋಗಿ, “ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಸೇವೆ ಮಾಡುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉಳಿಸಲು ಶಕ್ತನಾದನೇ?” ಎಂದು ಕೂಗಿ ಕೇಳಿದನು.

21 ದಾನಿಯೇಲನು, “ಅರಸನೇ, ಚಿರಂಜೀವಿಯಾಗಿರು. 22 ನನ್ನ ದೇವರು ನನ್ನನ್ನು ರಕ್ಷಿಸುವುದಕ್ಕಾಗಿ ತನ್ನ ದೂತನನ್ನು ಕಳುಹಿಸಿದನು. ಆ ದೇವದೂತನು ಸಿಂಹಗಳ ಬಾಯಿಯನ್ನು ಮುಚ್ಚಿದನು. ಸಿಂಹಗಳು ನನ್ನನ್ನು ಗಾಯಗೊಳಿಸಲಿಲ್ಲ. ಏಕೆಂದರೆ ನಾನು ತಪ್ಪಿತಸ್ಥನಲ್ಲವೆಂದು ನನ್ನ ದೇವರಿಗೆ ಗೊತ್ತುಂಟು. ರಾಜನೇ, ನಾನೆಂದೂ ನಿನಗೆ ತಪ್ಪು ಮಾಡಲಿಲ್ಲ” ಎಂದು ಉತ್ತರಿಸಿದನು.

23 ಅರಸನಾದ ದಾರ್ಯಾವೆಷನಿಗೆ ಬಹಳ ಸಂತೋಷವಾಯಿತು. ದಾನಿಯೇಲನನ್ನು ಸಿಂಹಗಳ ಗುಹೆಯಿಂದ ಮೇಲಕ್ಕೆ ಎತ್ತಿಸಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ದಾನಿಯೇಲನನ್ನು ಸಿಂಹಗಳ ಗುಹೆಯಿಂದ ಹೊರತೆಗೆದು ನೋಡಲಾಗಿ ಸಿಂಹಗಳಿಂದ ಅವನಿಗೆ ಯಾವ ಗಾಯಗಳೂ ಆಗಿರಲಿಲ್ಲ. ದಾನಿಯೇಲನು ತನ್ನ ದೇವರಲ್ಲಿ ನಂಬಿಕೆಯಿಟ್ಟಿದ್ದರಿಂದ ಅವನಿಗೆ ಸಿಂಹಗಳಿಂದ ಯಾವ ನೋವೂ ಆಗಿರಲಿಲ್ಲ.

24 ಆಗ ರಾಜನು ದಾನಿಯೇಲನ ಮೇಲೆ ದೋಷಾರೋಪಣೆಯನ್ನು ಮಾಡಿದ ಜನರನ್ನು ಸಿಂಹಗಳ ಗುಹೆಗೆ ಕರೆತರಬೇಕೆಂದು ಆಜ್ಞಾಪಿಸಿದನು. ಆ ಜನರನ್ನೂ ಅವರ ಹೆಂಡತಿಮಕ್ಕಳನ್ನೂ ಸಹಿತವಾಗಿ ಸಿಂಹಗಳ ಗುಹೆಯಲ್ಲಿ ಎಸೆಯಲಾಯಿತು. ಅವರು ಗುಹೆಯ ನೆಲಕ್ಕೆ ಮುಟ್ಟುವ ಮೊದಲೇ ಸಿಂಹಗಳು ಅವರನ್ನು ಎಳೆದುಕೊಂಡವು. ಸಿಂಹಗಳು ಅವರ ದೇಹಗಳನ್ನು ತಿಂದು ಎಲುಬುಗಳನ್ನು ಅಗಿದುಹಾಕಿದವು.

25 ಆಗ ಅರಸನಾದ ದಾರ್ಯಾವೆಷನು ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ ಕುಲಭಾಷೆಗಳವರಿಗೆ ಈ ಪತ್ರವನ್ನು ಬರೆದನು:

ಶುಭಾಶಯಗಳು.

26 ನಾನೊಂದು ಹೊಸ ಶಾಸನವನ್ನು ಮಾಡುತ್ತಿದ್ದೇನೆ. ಈ ಶಾಸನವು ನನ್ನ ರಾಜ್ಯದ ಎಲ್ಲ ಭಾಗಗಳ ಜನರಿಗೆ ಅನ್ವಯಿಸುವುದು. ನೀವೆಲ್ಲರೂ ದಾನಿಯೇಲನ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.

ದಾನಿಯೇಲನ ದೇವರೇ ಜೀವಸ್ವರೂಪನಾದ ದೇವರು.
    ಆತನು ನಿರಂತರವೂ ಇರುವಾತನಾಗಿದ್ದಾನೆ.
ಆತನ ಸಾಮ್ರಾಜ್ಯವು ಎಂದಿಗೂ ಹಾಳಾಗುವದಿಲ್ಲ.
    ಆತನ ಆಧಿಪತ್ಯವು ಎಂದಿಗೂ ಮುಗಿಯುವದಿಲ್ಲ.
27 ದೇವರು ಜನರಿಗೆ ಸಹಾಯ ಮಾಡುತ್ತಾನೆ ಮತ್ತು ರಕ್ಷಿಸುತ್ತಾನೆ.
    ದೇವರು ಭೂಮ್ಯಾಕಾಶಗಳಲ್ಲಿ ಅದ್ಭುತಕಾರ್ಯಗಳನ್ನು ಮಾಡುತ್ತಾನೆ.
    ದೇವರು ದಾನಿಯೇಲನನ್ನು ಸಿಂಹಗಳಿಂದ ರಕ್ಷಿಸಿದನು.

28 ದಾನಿಯೇಲನು ದಾರ್ಯಾವೆಷನ ಆಳ್ವಿಕೆಯಲ್ಲಿಯೂ ಪಾರಸಿಯನಾದ ಕೋರೆಷನ ಆಳ್ವಿಕೆಯಲ್ಲಿಯೂ ಘನತೆಯನ್ನು ಪಡೆದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International