Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ದಾನಿಯೇಲ 1-3

ದಾನಿಯೇಲನು ಬಾಬಿಲೋನಿಗೆ ಸೆರೆ ಒಯ್ಯಲ್ಪಟ್ಟದ್ದು

ನೆಬೂಕದ್ನೆಚ್ಚರನು ಬಾಬಿಲೋನಿನ ಅರಸನಾಗಿದ್ದನು. ನೆಬೂಕದ್ನೆಚ್ಚರನು ಜೆರುಸಲೇಮಿಗೆ ಬಂದನು. ನೆಬೂಕದ್ನೆಚ್ಚರನು ತನ್ನ ಸೈನ್ಯ ಸಮೇತ ಜೆರುಸಲೇಮಿಗೆ ಮುತ್ತಿಗೆ ಹಾಕಿದನು. ಯೆಹೂದದ ಅರಸನಾದ ಯೆಹೋಯಾಕೀಮನ ಆಳ್ವಿಕೆಯ ಮೂರನೆಯ ವರ್ಷದಲ್ಲಿ[a] ಈ ಘಟನೆ ನಡೆಯಿತು. ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಅವನು ಆಲಯದ ಸಾಮಾಗ್ರಿಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಆ ಸಾಮಾಗ್ರಿಗಳನ್ನು ಅವನು ತನ್ನ ವಿಗ್ರಹಾಲಯದಲ್ಲಿಟ್ಟನು.

ಆಗ ಅರಸನಾದ ನೆಬೂಕದ್ನೆಚ್ಚರನು ಅಶ್ಪೆನಜನಿಗೆ ಆದೇಶಕೊಟ್ಟನು. ಅಶ್ಪೆನಜನು ಅರಸನ ಸೇವೆಯಲ್ಲಿದ್ದ ಎಲ್ಲಾ ಕಂಚುಕಿಯರಿಗೆ ಮುಖಂಡನಾಗಿದ್ದನು. ಅರಸನು ಕೆಲವು ಜನ ಇಸ್ರೇಲರನ್ನು ತನ್ನ ಅರಮನೆಗೆ ಸೇರಿಸಬೇಕೆಂದು ಅಶ್ಪೆನಜನಿಗೆ ಹೇಳಿದನು. ನೆಬೂಕದ್ನೆಚ್ಚರನು ಇಸ್ರೇಲರ ರಾಜವಂಶೀಯರನ್ನು ಮತ್ತು ಪ್ರಮುಖ ಮನೆತನದವರನ್ನು ತನ್ನ ಅರಮನೆಗೆ ಸೇರಿಸಬಯಸಿದನು. ಅರಸನಾದ ನೆಬೂಕದ್ನೆಚ್ಚರನು ಆರೋಗ್ಯವಂತರೂ ಅಂಗದೋಷವಿಲ್ಲದವರೂ ಸುಂದರರೂ ಬುದ್ಧಿವಂತರೂ ವಿದ್ಯಾನಿಪುಣರೂ ಆಗಿದ್ದ ಯುವಕರನ್ನು ತನ್ನ ಸನ್ನಿಧಿಸೇವೆಗಾಗಿ ಆರಿಸಿಕೊಂಡು ಅವರಿಗೆ ಕಸ್ದೀಯ ಭಾಷೆಯನ್ನೂ ಬರವಣಿಗೆಯನ್ನೂ ಕಲಿಸಬೇಕೆಂದು ಆಜ್ಞೆ ವಿಧಿಸಿದನು.

ಅರಸನಾದ ನೆಬೂಕದ್ನೆಚ್ಚರನು ದಿನಾಲು ಆ ತರುಣರಿಗೆ ತಾನು ಸೇವಿಸುವ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ಕೊಡುತ್ತಿದ್ದನು. ಅವರನ್ನು ತನ್ನ ಸೇವಕರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಮೂರು ವರ್ಷಗಳ ತರಬೇತಿ ಕೊಡಬೇಕೆಂದು ಆಜ್ಞಾಪಿಸಿದನು. ಆ ತರುಣರಲ್ಲಿ ಯೆಹೂದ ಕುಲಕ್ಕೆ ಸೇರಿದವರಾದ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಎಂಬವರಿದ್ದರು. ಅಶ್ಪೆನಜನು ಆ ಯೆಹೂದ್ಯ ತರುಣರಿಗೆ ಬಾಬಿಲೋನಿನ ಹೆಸರುಗಳನ್ನಿಟ್ಟನು. ದಾನಿಯೇಲನ ಹೊಸ ಹೆಸರು ಬೇಲ್ತೆಶಚ್ಚರ್, ಹನನ್ಯನ ಹೊಸ ಹೆಸರು ಶದ್ರಕ್, ಮೀಶಾಯೇಲನ ಹೊಸ ಹೆಸರು ಮೇಶಕ್ ಮತ್ತು ಅಜರ್ಯನ ಹೊಸ ಹೆಸರು ಅಬೇದ್‌ನೆಗೋ.

ದಾನಿಯೇಲನು ಅರಸನ ಪುಷ್ಟಿದಾಯಕ ಆಹಾರವನ್ನು ಮತ್ತು ಪಾನೀಯವನ್ನು ಇಷ್ಟಪಡಲಿಲ್ಲ. ಆ ಆಹಾರ ಮತ್ತು ಪಾನೀಯಗಳಿಂದ ತನ್ನನ್ನು ಅಶುದ್ಧಗೊಳಿಸಿಕೊಳ್ಳಲು ದಾನಿಯೇಲನಿಗೆ ಇಷ್ಟವಿರಲಿಲ್ಲ. ಆದ್ದರಿಂದ ಈ ರೀತಿ ತನ್ನನ್ನು ಅಶುದ್ಧಗೊಳಿಸಿಕೊಳ್ಳದೆ ಇರುವದಕ್ಕಾಗಿ ಅಶ್ಪೆನಜನ ಅಪ್ಪಣೆಯನ್ನು ಕೇಳಿದನು.

ದೇವರು ಅಶ್ಪೆನಜನ ಮನಸ್ಸಿನಲ್ಲಿ ದಾನಿಯೇಲನ ಮೇಲೆ ಕನಿಕರವನ್ನೂ ದಯೆಯನ್ನೂ ಹುಟ್ಟಿಸಿದನು. 10 ಆದರೆ ಅಶ್ಪೆನಜನು ದಾನಿಯೇಲನಿಗೆ, “ನಾನು ನನ್ನ ಒಡೆಯನಾದ ಅರಸನಿಗೆ ಹೆದರುತ್ತೇನೆ. ಈ ಆಹಾರ ಮತ್ತು ಪಾನೀಯಗಳನ್ನು ನಿನಗೆ ಕೊಡಬೇಕೆಂದು ಅರಸನು ಅಪ್ಪಣೆ ಮಾಡಿದ್ದಾನೆ. ನೀನು ಈ ಆಹಾರವನ್ನು ತೆಗೆದುಕೊಳ್ಳದಿದ್ದರೆ ಅಶಕ್ತನಾಗಿಯೂ ಅಸ್ವಸ್ಥನಾಗಿಯೂ ಕಾಣಿಸುವೆ. ನೀನು ನಿನ್ನ ವಯಸ್ಸಿನ ಬೇರೆ ತರುಣರಿಗಿಂತ ಸೊರಗಿದವನಾಗಿ ಕಾಣುವೆ. ಅರಸನು ಇದನ್ನು ಗಮನಿಸಿ ನನ್ನ ಮೇಲೆ ಕೋಪಗೊಂಡು ನನ್ನ ತಲೆಯನ್ನೇ ಕತ್ತರಿಸಬಹುದು. ಅದಕ್ಕೆ ನೀನೇ ಹೊಣೆಯಾಗುವೆ” ಎಂದನು.

11 ಆಗ ದಾನಿಯೇಲನು ತಮ್ಮ ಕಾವಲುಗಾರನೊಂದಿಗೆ ಮಾತನಾಡಿದನು. ಅಶ್ಪೆನಜನು ಕಾವಲುಗಾರನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳ ಮೇಲೆ ದೃಷ್ಟಿಯಿಟ್ಟಿರಬೇಕೆಂದು ಆಜ್ಞಾಪಿಸಿದನು. 12 ದಾನಿಯೇಲನು ಕಾವಲುಗಾರನಿಗೆ, “ದಯವಿಟ್ಟು ಹತ್ತು ದಿನಗಳವರೆಗೆ ನಮ್ಮನ್ನು ಪರೀಕ್ಷಿಸಿರಿ. ತಿನ್ನುವದಕ್ಕೆ ಕಾಯಿಪಲ್ಯ, ಕುಡಿಯುವದಕ್ಕೆ ನೀರು, ಇವುಗಳ ಹೊರತು ನಮಗೆ ಇನ್ನೇನೂ ಕೊಡಬೇಡಿ. 13 ಹತ್ತು ದಿನಗಳಾದ ಮೇಲೆ ನಮ್ಮನ್ನು ಅರಸನ ಆಹಾರ ಪಾನೀಯಗಳನ್ನು ಸ್ವೀಕರಿಸುವ ತರುಣರ ಜೊತೆಗೆ ಹೋಲಿಸಿ ನೋಡಿರಿ. ಯಾರು ಹೆಚ್ಚು ಆರೋಗ್ಯವಂತರಾಗಿ ಕಾಣುತ್ತಾರೆಂಬುದನ್ನು ನೀವೇ ಪರೀಕ್ಷಿಸಿ ನೋಡಿರಿ. ಆಮೇಲೆ ನಮ್ಮ ವಿಷಯದಲ್ಲಿ ನೀವೇ ತೀರ್ಮಾನಿಸಿರಿ. ನಾವು ನಿಮ್ಮ ಸೇವಕರಾಗಿದ್ದೇವೆ” ಎಂದು ಬೇಡಿಕೊಂಡನು.

14 ಕಾವಲುಗಾರನು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳನ್ನು ಹತ್ತು ದಿನಗಳವರೆಗೆ ಪರೀಕ್ಷಿಸಲು ಒಪ್ಪಿಕೊಂಡನು. 15 ಹತ್ತು ದಿನಗಳ ತರುವಾಯ ದಾನಿಯೇಲ ಮತ್ತು ಅವನ ಸ್ನೇಹಿತರು ಅರಸನ ಆಹಾರವನ್ನು ಊಟಮಾಡಿದ ಇತರ ಎಲ್ಲ ತರುಣರಿಗಿಂತ ಆರೋಗ್ಯವಂತರಾಗಿ ಕಾಣಿಸಿದರು. 16 ಆದ್ದರಿಂದ ಕಾವಲುಗಾರನು ಅರಸನ ವಿಶೇಷ ಆಹಾರವನ್ನು ಮತ್ತು ದ್ರಾಕ್ಷಾರಸವನ್ನು ತೆಗೆದುಕೊಂಡು ಅದಕ್ಕೆ ಬದಲಾಗಿ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಕಾಯಿಪಲ್ಯಗಳನ್ನು ಕೊಡಲು ಪ್ರಾರಂಭಿಸಿದನು.

17 ದೇವರು ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರುಗಳಿಗೆ ಅನೇಕ ಶಾಸ್ತ್ರಗಳನ್ನೂ ವಿಜ್ಞಾನವನ್ನೂ ಕಲಿಯುವ ಬುದ್ಧಿಸಾಮರ್ಥ್ಯಗಳನ್ನು ದಯಪಾಲಿಸಿದನು. ದಾನಿಯೇಲನು ಸಮಸ್ತ ಸ್ವಪ್ನಗಳನ್ನೂ ದಿವ್ಯದರ್ಶನಗಳನ್ನೂ ಗ್ರಹಿಸಬಲ್ಲವನಾಗಿದ್ದನು.

18 ಎಲ್ಲ ತರುಣರು ಮೂರು ವರ್ಷ ತರಬೇತಿ ಪಡೆಯಬೇಕೆಂದು ಅರಸನು ಹೇಳಿದ್ದನು. ಆ ಅವಧಿ ಮುಗಿದ ಮೇಲೆ ಅಶ್ಪೆನಜನು ಆ ಎಲ್ಲ ತರುಣರನ್ನು ಅರಸನಾದ ನೆಬೂಕದ್ನೆಚ್ಚರನ ಸಮ್ಮುಖಕ್ಕೆ ಕರೆತಂದನು. 19 ರಾಜನು ಅವರ ಸಂಗಡ ಮಾತಾಡಿದನು. ಅರಸನಿಗೆ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯ ಇವರಷ್ಟು ಯೊಗ್ಯರಾದವರು ಆ ಸಮಸ್ತ ಯುವಕರಲ್ಲಿ ಮತ್ತಾರೂ ಕಂಡು ಬರಲಿಲ್ಲ. ಆದ್ದರಿಂದ ಆ ನಾಲ್ಕು ಜನ ಯುವಕರು ರಾಜನ ಸೇವಕರಾದರು. 20 ಅರಸನು ಮಹತ್ವಪೂರ್ಣವಾದ ವಿಷಯಗಳ ಬಗ್ಗೆ ಅವರನ್ನು ಕೇಳಿದಾಗಲೆಲ್ಲ ಅವರು ಹೆಚ್ಚಿನ ಪ್ರಜ್ಞೆಯನ್ನು, ಬುದ್ಧಿಯನ್ನು ತೋರಿದರು. ಅವರು ಇಡೀ ದೇಶದ ಎಲ್ಲ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿದ್ದಾರೆಂಬುದನ್ನು ಅರಸನು ಕಂಡುಕೊಂಡನು. 21 ದಾನಿಯೇಲನು ರಾಜನಾದ ಕೋರೆಷನ ಆಳ್ವಿಕೆಯ ಮೊದಲನೆ ವರ್ಷದ[b] ತನಕ ಅರಸನ ಸೇವಕನಾಗಿ ಮುಂದುವರಿದನು.

ನೆಬೂಕದ್ನೆಚ್ಚರನ ಸ್ವಪ್ನ

ತನ್ನ ಆಳ್ವಿಕೆಯ ಎರಡನೇ ವರ್ಷದಲ್ಲಿ ನೆಬೂಕದ್ನೆಚ್ಚರನು ಕೆಲವು ಕನಸುಗಳನ್ನು ಕಂಡನು. ಆ ಕನಸುಗಳು ಅವನನ್ನು ತತ್ತರಿಸಿಬಿಟ್ಟವು ಮತ್ತು ಅವನಿಗೆ ನಿದ್ರೆ ಬರದಂತೆ ಮಾಡಿದವು. ಅರಸನು ತನ್ನ ಎಲ್ಲಾ ಪಂಡಿತರನ್ನು ಕರೆಸಿದನು. ಅವರು ಮಾಟಮಂತ್ರಗಳಿಂದ, ಜ್ಯೋತಿಶ್ಶಾಸ್ತ್ರದ ಸಹಾಯದಿಂದ ಅರಸನ ಕನಸಿನ ಅರ್ಥವನ್ನೂ ಭವಿಷ್ಯದಲ್ಲಿ ಸಂಭವಿಸಲಿರುವುದನ್ನೂ ತಿಳಿದುಕೊಳ್ಳಲು ಪ್ರಯತ್ನ ಮಾಡಿದರು. ರಾಜನು ತಾನು ಕಂಡ ಕನಸಿನ ಅರ್ಥವನ್ನು ತಿಳಿಯಬಯಸಿದ್ದರಿಂದ ಅವರು ಒಳಗೆ ಬಂದು ಅರಸನ ಸಮ್ಮುಖದಲ್ಲಿ ನಿಂತುಕೊಂಡರು.

ಆಗ ಅರಸನು ಅವರಿಗೆ, “ನಾನೊಂದು ಕನಸು ಕಂಡೆ. ಅದು ನನ್ನನ್ನು ಪೀಡಿಸುತ್ತಿದೆ. ಆ ಕನಸಿನ ಅರ್ಥವೇನೆಂಬುದನ್ನು ನಾನು ತಿಳಿಯಬಯಸುತ್ತೇನೆ” ಎಂದನು.

ಆಗ ಆ ಕಸ್ದೀಯರು ಅರಮೇಯಿಕ್ ಭಾಷೆಯಲ್ಲಿ, “ಅರಸನೇ ಚಿರಂಜೀವಿಯಾಗಿರು. ನಾವು ನಿನ್ನ ಸೇವಕರು. ದಯವಿಟ್ಟು ನಮಗೆ ನಿನ್ನ ಕನಸನ್ನು ಹೇಳು. ನಾವು ಅದರ ಅರ್ಥವನ್ನು ತಿಳಿಸುತ್ತೇವೆ” ಎಂದು ಉತ್ತರಕೊಟ್ಟರು.

ಆಗ ಅರಸನಾದ ನೆಬೂಕದ್ನೆಚ್ಚರನು, “ಹಾಗಲ್ಲ, ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕು. ಇಲ್ಲವಾದರೆ ನಾನು ನಿಮ್ಮ ದೇಹವನ್ನು ತುಂಡುತುಂಡಾಗಿ ಕತ್ತರಿಸಲು ಆಜ್ಞಾಪಿಸುತ್ತೇನೆ. ನಿಮ್ಮ ಮನೆಗಳನ್ನು ಬೀಳಿಸಿ ಮಣ್ಣುಗುಡ್ಡೆಯನ್ನಾಗಿಯೂ ಮತ್ತು ಬೂದಿರಾಶಿಯನ್ನಾಗಿಯೂ ಮಾಡುವಂತೆ ಆಜ್ಞಾಪಿಸುತ್ತೇನೆ. ಆದರೆ ನೀವು ನನಗೆ ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಿದರೆ ಕಾಣಿಕೆಗಳನ್ನೂ ಬಹುಮಾನಗಳನ್ನೂ ಕೊಡುತ್ತೇನೆ ಮತ್ತು ಮಹಾಸನ್ಮಾನವನ್ನು ಮಾಡುತ್ತೇನೆ. ಆದ್ದರಿಂದ ನೀವು ನನಗೆ ಕನಸನ್ನೂ ಅದರ ಅರ್ಥವನ್ನೂ ಹೇಳಿರಿ” ಎಂದನು.

ಆ ಪಂಡಿತರು ಅರಸನಿಗೆ, “ದಯವಿಟ್ಟು ತಾವು ಕನಸಿನ ಬಗ್ಗೆ ಹೇಳಿರಿ. ನಾವು ಅದರ ಅಭಿಪ್ರಾಯವನ್ನು ಹೇಳುತ್ತೇವೆ” ಎಂದರು.

ಅರಸನಾದ ನೆಬೂಕದ್ನೆಚ್ಚರನು, “ನೀವು ಹೆಚ್ಚಿನ ಕಾಲಾವಕಾಶವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದೀರೆಂಬುದನ್ನು ನಾನು ಬಲ್ಲೆ. ನಾನು ಹೇಳಿದ್ದು ನಿಮಗೆ ಸರಿಯಾಗಿ ತಿಳಿದಿದೆ. ನೀವು ನನಗೆ ನನ್ನ ಕನಸಿನ ಬಗ್ಗೆ ಹೇಳದಿದ್ದರೆ ನಿಮಗೆ ಶಿಕ್ಷೆಯಾಗುವದೆಂದು ನೀವು ಬಲ್ಲಿರಿ. ನೀವೆಲ್ಲ ನನಗೆ ಸುಳ್ಳು ಹೇಳಬೇಕೆಂದು ನಿರ್ಧರಿಸಿಕೊಂಡಿದ್ದೀರಿ. ನೀವು ಹೆಚ್ಚಿನ ಸಮಯವನ್ನು ಪಡೆಯಲಿಚ್ಛಿಸುತ್ತಿದ್ದೀರಿ. ನಿಮಗೆ ಹೇಳಿದ್ದನ್ನು ನಾನು ಮರೆತುಬಿಡಬಹುದೆಂದು ನೀವು ಭಾವಿಸುತ್ತಿರುವಿರಿ. ಈಗ ನನ್ನ ಕನಸನ್ನು ತಿಳಿಸಿರಿ. ನೀವು ಕನಸನ್ನು ತಿಳಿಸಿದರೆ ಅದರ ನಿಜವಾದ ಅರ್ಥವನ್ನೂ ಹೇಳಬಲ್ಲಿರಿ” ಎಂದು ಅವರಿಗೆ ಉತ್ತರಕೊಟ್ಟನು.

10 ಕಸ್ದೀಯರು, “ಮಹಾಪ್ರಭುಗಳು ಕೇಳುತ್ತಿರುವುದನ್ನು ಹೇಳುವವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಈ ಹಿಂದೆ ಯಾವ ಅರಸನೂ ತನ್ನ ಆಸ್ಥಾನ ಪಂಡಿತರಿಗೂ ಮಂತ್ರವಾದಿಗಳಿಗೂ ಇಂತಹ ಪ್ರಶ್ನೆಯನ್ನು ಕೇಳಲಿಲ್ಲ. ಅತ್ಯಂತ ದೊಡ್ಡ ಮತ್ತು ಪ್ರಬಲನಾದ ಅರಸನೂ ತನ್ನ ಪಂಡಿತರಿಗಾಗಲಿ ಜೋಯಿಸರಿಗಾಗಲಿ ಇಂಥದ್ದನ್ನು ಕೇಳಲಿಲ್ಲ. 11 ಮಹಾಪ್ರಭುಗಳು ಕೇಳುವ ವಿಷಯ ಅತಿ ಕಠಿಣವಾದದ್ದು. ದೇವತೆಗಳು ಮಾತ್ರ ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸಲು ಸಾಧ್ಯ. ಆದರೆ ದೇವತೆಗಳು ಮಾನವರೊಂದಿಗೆ ವಾಸಮಾಡುವುದಿಲ್ಲ” ಎಂದರು.

12 ಇದನ್ನು ಕೇಳಿ ಅರಸನು ಬಹಳ ಕೋಪಗೊಂಡು ಬಾಬಿಲೋನಿನ ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕೆಂದು ಆಜ್ಞಾಪಿಸಿದನು. 13 ಅರಸನಾದ ನೆಬೂಕದ್ನೆಚ್ಚರನ ಆಜ್ಞೆಯನ್ನು ಪ್ರಕಟಗೊಳಿಸಲಾಯಿತು. ಎಲ್ಲಾ ವಿದ್ವಾಂಸರನ್ನು ಕೊಲ್ಲಬೇಕಾಗಿತ್ತು. ದಾನಿಯೇಲ ಮತ್ತು ಅವನ ಸ್ನೇಹಿತರನ್ನು ಹುಡುಕಿ ಅವರ ಕೊಲೆ ಮಾಡುವುದಕ್ಕಾಗಿ ರಾಜಭಟರನ್ನು ಕಳುಹಿಸಲಾಯಿತು.

14 ಅರ್ಯೋಕನು ಅರಸನ ಮೈಗಾವಲಿನವರ ದಳವಾಯಿಯಾಗಿದ್ದನು. ಅವನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಲು ಹೊರಟಿದ್ದನು. ಆದರೆ ದಾನಿಯೇಲನು ಅವನೊಂದಿಗೆ ಮಾತನಾಡಿದನು. ದಾನಿಯೇಲನು ಅವನ ಸಂಗಡ ವಿವೇಕ ಮತ್ತು ನಮ್ರತೆಯಿಂದ ಮಾತನಾಡಿದನು. 15 ದಾನಿಯೇಲನು ಅರ್ಯೋಕನಿಗೆ, “ಅರಸನು ಅಂತಹ ಕಠಿಣ ಶಿಕ್ಷೆಯನ್ನು ಏಕೆ ಆಜ್ಞಾಪಿಸಿದನು?” ಎಂದು ಕೇಳಿದನು.

ಆಗ ಅರ್ಯೋಕನು ಅರಸನ ಕನಸಿಗೆ ಸಂಬಂಧಿಸಿದ ಎಲ್ಲಾ ವಿಷಯವನ್ನು ವಿವರಿಸಿದನು. 16 ಆಗ ದಾನಿಯೇಲನು ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಹೋಗಿ ತನಗೆ ಸ್ವಲ್ಪ ಸಮಯ ಕೊಡುವುದಾದರೆ ತಾನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುವುದಾಗಿ ಹೇಳಿದನು.

17 ದಾನಿಯೇಲನು ಮನೆಗೆ ಹೋಗಿ ತನ್ನ ಸ್ನೇಹಿತರಾದ ಹನನ್ಯ, ಮೀಶಾಯೇಲ ಮತ್ತು ಅಜರ್ಯ ಇವರುಗಳಿಗೆ ಈ ವಿಷಯ ತಿಳಿಸಿದನು. 18 ಪರಲೋಕದ ದೇವರು ತನಗೆ ಸಹಾಯ ಮಾಡುವಂತೆಯೂ ಕೃಪೆ ತೋರುವಂತೆಯೂ ಪ್ರಾರ್ಥಿಸಬೇಕೆಂದು ದಾನಿಯೇಲನು ಅವರನ್ನು ಕೇಳಿಕೊಂಡನು. ದಾನಿಯೇಲ ಮತ್ತು ಅವನ ಸ್ನೇಹಿತರು ಮರಣದಂಡನೆಯಿಂದ ಪಾರಾಗಬೇಕಿದ್ದರೆ ಕನಸನ್ನೂ ಅದರ ಅರ್ಥವನ್ನೂ ತಿಳಿಸಬೇಕಿತ್ತು.

19 ಅಂದು ರಾತ್ರಿ ದಾನಿಯೇಲನಿಗೆ ದೇವದರ್ಶನವಾಯಿತು. ಆಗ ದಾನಿಯೇಲನು ಪರಲೋಕದ ದೇವರನ್ನು ಹೀಗೆ ಸ್ತುತಿಸಿದನು:

20 “ದೇವರ ನಾಮವನ್ನು ಎಂದೆಂದಿಗೂ ಸ್ತುತಿಸಿರಿ!
    ಜ್ಞಾನವೂ ಸಾಮರ್ಥ್ಯವೂ ಆತನವೇ.
21 ಆತನು ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ.
    ಆತನು ಅರಸರನ್ನು ಬದಲಾಯಿಸುತ್ತಾನೆ.
    ಆತನು ಅರಸರಿಗೆ ಪ್ರಭುತ್ವವನ್ನು ಕೊಡುವನು.
    ಆತನು ಅವರ ಪ್ರಭುತ್ವವನ್ನು ಕಿತ್ತುಕೊಳ್ಳುವನು!
ಜನರಿಗೆ ಜ್ಞಾನವನ್ನು ಕೊಟ್ಟು ಜ್ಞಾನಿಗಳನ್ನಾಗಿ ಮಾಡುವವನು ಆತನೇ.
    ಜನರಿಗೆ ವಿವೇಕವನ್ನು ಕೊಟ್ಟು ವಿವೇಕಿಗಳನ್ನಾಗಿ ಮಾಡುವವನು ಆತನೇ.
22 ಆಳದಲ್ಲಿ ಅಡಗಿರುವ ರಹಸ್ಯಗಳನ್ನು ಬಲ್ಲವನು ಆತನೇ.
    ಬೆಳಕು ಆತನಲ್ಲಿಯೇ ಇದೆ.
    ಆದ್ದರಿಂದ ಕಗ್ಗತ್ತಲೆಯಲ್ಲಿ ಅಡಗಿರುವುದು ಆತನಿಗೆ ಗೋಚರವಾಗುವುದು.
23 ನನ್ನ ಪೂರ್ವಿಕರ ದೇವರೇ, ನಿನ್ನನ್ನು ಕೊಂಡಾಡಿ ಸ್ತುತಿಸುತ್ತೇನೆ.
    ನೀನು ನನಗೆ ಜ್ಞಾನವನ್ನೂ ಸಾಮರ್ಥ್ಯವನ್ನೂ ದಯಪಾಲಿಸಿದೆ.
ನಾನು ಕೇಳಿದ್ದನ್ನು ಅನುಗ್ರಹಿಸಿದೆ.
    ಅರಸನ ಕನಸಿನ ಬಗ್ಗೆ ತಿಳಿಸಿದೆ.”

ದಾನಿಯೇಲನು ಕನಸಿನ ಅರ್ಥವನ್ನು ಹೇಳಿದನು

24 ಆಮೇಲೆ ದಾನಿಯೇಲನು ಅರ್ಯೋಕನ ಬಳಿಗೆ ಹೋದನು. ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲುವದಕ್ಕೆ ಅರ್ಯೋಕನನ್ನು ಆರಿಸಿದ್ದನು. ದಾನಿಯೇಲನು ಅರ್ಯೋಕನಿಗೆ, “ಬಾಬಿಲೋನಿನ ವಿದ್ವಾಂಸರನ್ನು ಕೊಲ್ಲಬೇಡ. ನನ್ನನ್ನು ಅರಸನ ಹತ್ತಿರ ಕರೆದುಕೊಂಡು ಹೋಗು. ನಾನು ಅವನಿಗೆ ಅವನ ಕನಸನ್ನು ಮತ್ತು ಅದರ ಅರ್ಥವನ್ನು ತಿಳಿಸುತ್ತೇನೆ” ಎಂದನು.

25 ಕೂಡಲೇ ಅರ್ಯೋಕನು ದಾನಿಯೇಲನನ್ನು ಅರಸನ ಹತ್ತಿರ ಕರೆದುಕೊಂಡು ಹೋದನು. ಅರ್ಯೊಕನು ಅರಸನಿಗೆ, “ಯೆಹೂದದಿಂದ ಸೆರೆಯಾಳಾಗಿ ತಂದವರಲ್ಲಿ ಅರಸನ ಕನಸನ್ನು ಮತ್ತು ಅದರ ಅರ್ಥವನ್ನು ಹೇಳಬಲ್ಲ ಒಬ್ಬನನ್ನು ನಾನು ಕಂಡುಹಿಡಿದಿದ್ದೇನೆ. ಅವನು ಅರಸನ ಕನಸನ್ನೂ ಅದರ ಅರ್ಥವನ್ನೂ ತಿಳಿಸುತ್ತಾನೆ” ಎಂದನು.

26 ಅರಸನು ದಾನಿಯೇಲನಿಗೆ (ಬೇಲ್ತೆಶಚ್ಚರನಿಗೆ), “ನೀನು ನನ್ನ ಕನಸನ್ನೂ ಅದರ ಅರ್ಥವನ್ನೂ ಹೇಳಬಲ್ಲೆಯಾ?” ಎಂದು ಕೇಳಿದನು.

27 ದಾನಿಯೇಲನು, “ಅರಸನಾದ ನೆಬೂಕದ್ನೆಚ್ಚರನೇ, ಯಾವ ವಿದ್ವಾಂಸರಾಗಲಿ ಮಾಟಗಾರರಾಗಲಿ ಜೋಯಿಸರಾಗಲಿ ಶಕುನದವರಾಗಲಿ ಅರಸನಾದ ನಿನಗೆ ರಹಸ್ಯವನ್ನು ಹೇಳಲಾಗಲಿಲ್ಲ. 28 ಆದರೆ ಪರಲೋಕದಲ್ಲಿ ಯೆಹೋವನು ಎಂಬಾತನಿದ್ದಾನೆ. ಆತನು ರಹಸ್ಯಗಳನ್ನು ಹೇಳುತ್ತಾನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ಅರಸನಾದ ನಿನಗೆ ಯೆಹೋವನು ತಿಳಿಯಪಡಿಸಿದ್ದಾನೆ. ಇದೇ ನೀನು ಕಂಡ ಕನಸು, ನೀನು ಹಾಸಿಗೆಯ ಮೇಲೆ ಮಲಗಿದ್ದಾಗ ಕಂಡ ಸಂಗತಿಗಳು ಇವು: 29 ಅರಸನೇ, ನೀನು ನಿನ್ನ ಹಾಸಿಗೆಯ ಮೇಲೆ ಮಲಗಿಕೊಂಡಿದ್ದೆ. ಭವಿಷ್ಯದಲ್ಲಿ ಸಂಭವಿಸುವುದರ ಬಗ್ಗೆ ಆಲೋಚಿಸತೊಡಗಿದ್ದೆ. ದೇವರು ಜನರಿಗೆ ರಹಸ್ಯವನ್ನು ತಿಳಿಸಬಲ್ಲನು. ಭವಿಷ್ಯದಲ್ಲಿ ನಡೆಯಲಿರುವುದನ್ನು ಆತನೇ ನಿನಗೆ ತೋರಿಸಿದನು. 30 ದೇವರು ರಹಸ್ಯವನ್ನು ನನಗೂ ತಿಳಿಸಿದ್ದಾನೆ! ದೇವರು ನನಗೆ ತಿಳಿಸಿರುವುದು ನಾನು ಬೇರೆಯವರಿಗಿಂತ ಹೆಚ್ಚು ಬುದ್ಧಿವಂತನೆಂದಲ್ಲ. ಆದರೆ ಅರಸನಾದ ನಿನಗೆ ಇದರ ಅರ್ಥ ತಿಳಿಯಲಿ ಎಂಬ ಉದ್ದೇಶದಿಂದ ದೇವರು ನನಗೆ ತಿಳಿಸಿದ್ದಾನೆ. ಇದರಿಂದ ನಿನ್ನ ಮನಸ್ಸಿನ ಯೋಚನೆಗಳ ವಿಷಯ ನಿನಗೆ ತಿಳಿದುಬರುತ್ತದೆ.

31 “ಅರಸನೇ, ನಿನ್ನ ಕನಸಿನಲ್ಲಿ ನಿನ್ನ ಎದುರಿಗೆ ಒಂದು ದೊಡ್ಡ ಪ್ರತಿಮೆಯನ್ನು ಕಂಡೆ. ಅದು ಬಹಳ ದೊಡ್ಡದಾಗಿಯೂ ಪ್ರಕಾಶಮಾನವಾಗಿಯೂ ಪ್ರಭಾವಶಾಲಿಯಾಗಿಯೂ ಇತ್ತು. ನೋಡಿದವರು ಆಶ್ಚರ್ಯಚಕಿತರಾಗಿ ಕಣ್ಣರಳಿಸುವಂತಿತ್ತು. 32 ಆ ಪ್ರತಿಮೆಯ ತಲೆಯನ್ನು ಚೊಕ್ಕ ಚಿನ್ನದಿಂದ ಮಾಡಲಾಗಿತ್ತು. ಅದರ ಎದೆ ಮತ್ತು ತೋಳುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. ಆ ಪ್ರತಿಮೆಯ ಹೊಟ್ಟೆ, ಸೊಂಟ ಮತ್ತು ತೊಡೆಗಳು ಕಂಚಿನಿಂದ ಮಾಡಲ್ಪಟ್ಟಿದ್ದವು. 33 ಕಾಲುಗಳು ಕಬ್ಬಿಣದಿಂದ ಮಾಡಲ್ಪಟ್ಟಿದ್ದವು. ಆ ಪ್ರತಿಮೆಯ ಪಾದಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಲಾಗಿದ್ದವು. 34 ನೀನು ಆ ಪ್ರತಿಮೆಯನ್ನು ನೋಡುತ್ತಿದ್ದಾಗ ನಿನಗೊಂದು ಬಂಡೆಯು ಕಾಣಿಸಿತು. ಆ ಬಂಡೆಯು ತನ್ನಷ್ಟಕ್ಕೆ ತಾನೇ ಸಡಿಲಗೊಂಡಿತು; ಯಾರೂ ಅದನ್ನು ಒಡೆಯಲಿಲ್ಲ. ಆಮೇಲೆ ಆ ಬಂಡೆಯು ಗಾಳಿಯಲ್ಲಿ ಹಾರಿಬಂದು ಆ ಪ್ರತಿಮೆಯ ಕಬ್ಬಿಣ ಮತ್ತು ಮಣ್ಣಿನ ಪಾದಗಳಿಗೆ ಅಪ್ಪಳಿಸಿತು. ಆ ಬಂಡೆಯು ಪ್ರತಿಮೆಯ ಪಾದಗಳನ್ನು ಒಡೆದು ಪುಡಿಪುಡಿ ಮಾಡಿತು. 35 ಆಮೇಲೆ ಕಬ್ಬಿಣ, ಮಣ್ಣು, ಕಂಚು, ಬೆಳ್ಳಿ, ಚಿನ್ನ ಎಲ್ಲವೂ ಏಕಕಾಲಕ್ಕೆ ಒಡೆದು ಚೂರುಚೂರಾದವು. ಆ ಚೂರುಗಳೆಲ್ಲ ಬೇಸಿಗೆಕಾಲದ ಕಣದಲ್ಲಿನ ಹೊಟ್ಟಿನಂತಾದವು. ಗಾಳಿಯು ಆ ಚೂರುಗಳನ್ನು ಹಾರಿಸಿಕೊಂಡು ಹೋಯಿತು. ಅಲ್ಲಿ ಏನೂ ಉಳಿಯಲಿಲ್ಲ. ಹಿಂದೆಂದೂ ಅಲ್ಲೊಂದು ಪ್ರತಿಮೆ ಇತ್ತೆಂದು ಯಾರೂ ಹೇಳುವಂತಿರಲಿಲ್ಲ. ಆಮೇಲೆ ಆ ಪ್ರತಿಮೆಗೆ ಅಪ್ಪಳಿಸಿದ ಬಂಡೆಯು ಒಂದು ದೊಡ್ಡ ಪರ್ವತವಾಗಿ ಇಡೀ ಭೂಮಂಡಲವನ್ನು ವ್ಯಾಪಿಸಿತು.

36 “ಇದೇ ನಿನ್ನ ಕನಸು. ಈಗ ನಾನು ನಿನಗೆ ಅದರ ಅರ್ಥವನ್ನು ಹೇಳುತ್ತೇನೆ. 37 ಅರಸನೇ, ನೀನು ರಾಜಾಧಿರಾಜ. ಪರಲೋಕದ ದೇವರು ನಿನಗೆ ರಾಜ್ಯ, ಬಲ, ಪರಾಕ್ರಮ ಮತ್ತು ವೈಭವಗಳನ್ನು ದಯಪಾಲಿಸಿದ್ದಾನೆ. 38 ದೇವರು ನಿನಗೆ ಅಧಿಕಾರವನ್ನು ಕೊಟ್ಟಿದ್ದಾನೆ. ಆ ದೇವರು ನಿನ್ನನ್ನು ಎಲ್ಲೆಡೆಯಲ್ಲಿರುವ ಜನರ ಮೇಲೆ, ಕಾಡುಪ್ರಾಣಿಗಳ ಮೇಲೆ, ಪಕ್ಷಿಗಳ ಮೇಲೆ ಆಳುವಂತೆ ಮಾಡಿದ್ದಾನೆ. ಅರಸನಾದ ನೆಬೂಕದ್ನೆಚ್ಚರನೇ, ನೀನೇ ಆ ಪ್ರತಿಮೆಯ ಬಂಗಾರದ ತಲೆ.

39 “ನಿನ್ನ ಕಾಲವಾದ ಮೇಲೆ ಮತ್ತೊಂದು ರಾಜ್ಯವುಂಟಾಗುವುದು. ಅದು ಬೆಳ್ಳಿಯ ಭಾಗ. ಆದರೆ ಆ ರಾಜ್ಯವು ನಿನ್ನ ರಾಜ್ಯದಷ್ಟು ದೊಡ್ಡದಾಗಿರುವುದಿಲ್ಲ. ಆ ತರುವಾಯ ಬೇರೊಂದು ಮೂರನೇ ರಾಜ್ಯವು ಈ ಭೂಮಿಯ ಮೇಲೆ ಆಳ್ವಿಕೆ ಮಾಡುವುದು. ಅದು ಕಂಚಿನ ಭಾಗ. 40 ಆಮೇಲೆ ನಾಲ್ಕನೆಯ ರಾಜ್ಯ. ಆ ರಾಜ್ಯವು ಕಬ್ಬಿಣದಂತೆ ಗಟ್ಟಿಯಾಗಿರುತ್ತದೆ. ಹೇಗೆ ಕಬ್ಬಿಣವು ಎಲ್ಲ ವಸ್ತುಗಳನ್ನು ಒಡೆದು ಪುಡಿ ಮಾಡುತ್ತದೆಯೋ ಹಾಗೆಯೇ ಆ ನಾಲ್ಕನೆಯ ರಾಜ್ಯವು ಉಳಿದೆಲ್ಲ ರಾಜ್ಯಗಳನ್ನು ಒಡೆದು ಪುಡಿ ಮಾಡುತ್ತದೆ.

41 “ಆ ಪ್ರತಿಮೆಯ ಪಾದಗಳು ಮತ್ತು ಕಾಲ್ಬೆರಳುಗಳು ಕಬ್ಬಿಣ ಮತ್ತು ಜೇಡಿಮಣ್ಣಿನಿಂದ ಮಾಡಿದ್ದನ್ನು ನೀನು ನೋಡಿರುವೆ. ನಾಲ್ಕನೆಯ ರಾಜ್ಯವು ವಿಭಜಿತ ರಾಜ್ಯವಾಗುವದೆಂದು ಇದರ ಅರ್ಥ. ನೀನು ನೋಡಿದಂತೆ ಕಬ್ಬಿಣವು ಜೇಡಿಮಣ್ಣಿನಲ್ಲಿ ಬೆರೆತದ್ದರಿಂದ ಅದರಲ್ಲಿ ಕಬ್ಬಿಣದ ಗಟ್ಟಿತನ ಸ್ವಲ್ಪ ಇರುತ್ತದೆ. 42 ಆ ಪ್ರತಿಮೆಯ ಕಾಲ್ಬೆರಳುಗಳ ಒಂದಂಶ ಕಬ್ಬಿಣ ಮತ್ತೊಂದು ಅಂಶ ಜೇಡಿಮಣ್ಣಾಗಿದ್ದಂತೆ ಆ ರಾಜ್ಯದ ಒಂದಂಶವು ಕಬ್ಬಿಣದಂತೆ ಗಟ್ಟಿ, ಇನ್ನೊಂದು ಅಂಶವು ಜೇಡಿಮಣ್ಣಿನಂತೆ ದುರ್ಬಲವಾಗಿರುತ್ತದೆ. 43 ಕಬ್ಬಿಣ ಮತ್ತು ಜೇಡಿಮಣ್ಣು ಬೆರೆಸಿದ್ದನ್ನು ನೀನು ನೋಡಿರುವೆ. ಆದರೆ ಕಬ್ಬಿಣ ಮತ್ತು ಜೇಡಿಮಣ್ಣು ಸಂಪೂರ್ಣವಾಗಿ ಪರಸ್ಪರ ಬೆರೆಯುವದಿಲ್ಲ. ಅದೇ ರೀತಿ ನಾಲ್ಕನೇ ರಾಜ್ಯದ ಜನರು ಪರಸ್ಪರ ಕೂಡಿದ್ದರೂ ಸಹ ಒಂದೇ ಜನರಲ್ಲಿರಬೇಕಾದ ಏಕತೆ ಅವರಲ್ಲಿರುವದಿಲ್ಲ.

44 “ನಾಲ್ಕನೇ ರಾಜ್ಯದ ಅರಸರ ಕಾಲದಲ್ಲಿ ಪರಲೋಕದ ದೇವರು ಇನ್ನೊಂದು ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವನು. ಈ ಸಾಮ್ರಾಜ್ಯವು ಎಂದೆಂದಿಗೂ ಉಳಿಯುವದು. ಎಂದಿಗೂ ಅಳಿಯದು; ಬೇರೊಂದು ಜನರ ಗುಂಪಿಗೆ ಹೋಗದಂಥ ಸಾಮ್ರಾಜ್ಯವಾಗಿರುವುದು. ಈ ಸಾಮ್ರಾಜ್ಯವು ಉಳಿದೆಲ್ಲ ಸಾಮ್ರಾಜ್ಯಗಳನ್ನು ನಾಶಮಾಡಿ ಕೊನೆಗಾಣಿಸುವುದು. ಆದರೆ ಆ ಸಾಮ್ರಾಜ್ಯವು ಮಾತ್ರ ಶಾಶ್ವತವಾಗಿ ನಿಲ್ಲುವದು.

45 “ಅರಸನಾದ ನೆಬೂಕದ್ನೆಚ್ಚರನೇ, ಬೆಟ್ಟದಿಂದ ಒಂದು ದೊಡ್ಡ ಬಂಡೆ ಒಡೆದು ಬಂದದ್ದನ್ನು ನೀನು ನೋಡಿದೆ. ಯಾರೂ ಅದನ್ನು ಒಡೆಯಲಿಲ್ಲ! ಆ ಬಂಡೆಯು ಕಬ್ಬಿಣವನ್ನು, ಕಂಚನ್ನು, ಜೇಡಿಮಣ್ಣನ್ನು, ಬೆಳ್ಳಿಯನ್ನು, ಚಿನ್ನವನ್ನು ಚೂರುಚೂರು ಮಾಡಿತು. ಭವಿಷ್ಯದಲ್ಲಿ ಏನಾಗುವದೆಂಬುದನ್ನು ದೇವರು ನಿನಗೆ ಈ ರೀತಿಯಲ್ಲಿ ತೋರಿಸಿದ್ದಾನೆ. ನಿನ್ನ ಕನಸು ನಿಜ. ಅದರ ಅರ್ಥವು ನಂಬಿಕೆಗೆ ಯೋಗ್ಯವಾಗಿದೆ” ಎಂದು ವಿವರಿಸಿದನು.

46 ಆಗ ಅರಸನಾದ ನೆಬೂಕದ್ನೆಚ್ಚರನು ದಾನಿಯೇಲನ ಮುಂದೆ ಅಡ್ಡಬಿದ್ದು ಅವನನ್ನು ಹೊಗಳಿದನು; ಅವನ ಗೌರವಾರ್ಥವಾಗಿ ಧೂಪಹಾಕಿ ನೈವೇದ್ಯಮಾಡಬೇಕೆಂದು ಆಜ್ಞಾಪಿಸಿದನು. ಆಮೇಲೆ ಅರಸನು ದಾನಿಯೇಲನಿಗೆ, 47 “ನಿನ್ನ ದೇವರು ಸರ್ವಶ್ರೇಷ್ಠನು ಮತ್ತು ಪ್ರಬಲನು ಎನ್ನುವದು ನನಗೆ ಖಚಿತವಾಯಿತು. ಆತನು ಎಲ್ಲ ಅರಸರ ಒಡೆಯನಾಗಿದ್ದಾನೆ. ಆತನು ಜನರಿಗೆ ನಿಗೂಢವಾಗಿದ್ದ ರಹಸ್ಯವನ್ನು ತಿಳಿಸುತ್ತಾನೆ. ನೀನು ನನಗೆ ಈ ರಹಸ್ಯವನ್ನು ತಿಳಿಸಲು ಸಮರ್ಥನಾದುದರಿಂದ ಇದೆಲ್ಲ ನಿಜವೆಂದು ನಾನು ನಂಬುತ್ತೇನೆ” ಎಂದು ಹೇಳಿದನು.

48 ತರುವಾಯ ಅರಸನು ದಾನಿಯೇಲನಿಗೆ ತನ್ನ ರಾಜ್ಯದಲ್ಲಿ ಬಹುಮುಖ್ಯವಾದ ಉದ್ಯೋಗವನ್ನು ಕೊಟ್ಟನು. ಅಮೂಲ್ಯವಾದ ಕಾಣಿಕೆಗಳನ್ನೂ ಕೊಟ್ಟನು. ನೆಬೂಕದ್ನೆಚ್ಚರನು ದಾನಿಯೇಲನನ್ನು ಬಾಬಿಲೋನ್ ಸಂಸ್ಥಾನದ ಅಧಿಪತಿಯನ್ನಾಗಿ ಮಾಡಿದನು. ಬಾಬಿಲೋನಿನ ಎಲ್ಲಾ ವಿದ್ವಾಂಸರ ಮುಖ್ಯಸ್ಥನನ್ನಾಗಿ ಮಾಡಿದನು. 49 ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಾಬಿಲೋನ್ ಸಂಸ್ಥಾನದ ದೊಡ್ಡ ಅಧಿಕಾರಿಗಳನ್ನಾಗಿ ನೇಮಿಸಬೇಕೆಂದು ದಾನಿಯೇಲನು ಅರಸನನ್ನು ಕೇಳಿಕೊಂಡನು. ದಾನಿಯೇಲನು ಹೇಳಿದಂತೆ ಅರಸನು ಮಾಡಿದನು. ದಾನಿಯೇಲನು ಅರಸನ ಸನ್ನಿಧಿಯಲ್ಲಿರುವ ಪ್ರಮುಖರಲ್ಲಿ ಒಬ್ಬನಾದನು.

ಬಂಗಾರದ ವಿಗ್ರಹ ಮತ್ತು ಉರಿಯುವ ಕುಲುಮೆ

ಅರಸನಾದ ನೆಬೂಕದ್ನೆಚ್ಚರನು ಒಂದು ಬಂಗಾರದ ವಿಗ್ರಹವನ್ನು ಮಾಡಿಸಿದ್ದನು. ಆ ವಿಗ್ರಹವು ಅರವತ್ತು ಮೊಳ ಎತ್ತರವಾಗಿತ್ತು. ಆರು ಮೊಳ ಅಗಲವಾಗಿತ್ತು. ಆ ವಿಗ್ರಹವನ್ನು ಬಾಬಿಲೋನ್ ಪ್ರಾಂತ್ಯದ ದೂರಾ ಎಂಬ ಬಯಲಿನಲ್ಲಿ ನಿಲ್ಲಿಸಿದನು. ಅರಸನು ಆ ವಿಗ್ರಹದ ಪ್ರತಿಷ್ಠಾಪನೆಯ ಮಹೋತ್ಸವಕ್ಕೆ ಉಪರಾಜರನ್ನು, ನಾಯಕರನ್ನು, ದೇಶಾಧಿಪತಿಗಳನ್ನು, ಮಂತ್ರಿಗಳನ್ನು, ಕೋಶಾಧ್ಯಕ್ಷರನ್ನು, ನ್ಯಾಯಾಧಿಪತಿಗಳನ್ನು ಮತ್ತು ಉಳಿದೆಲ್ಲ ಅಧಿಕಾರಿಗಳನ್ನು ಕರೆಸಿದನು.

ಅವರೆಲ್ಲರು ಬಂದು ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹದ ಎದುರಿಗೆ ನಿಂತುಕೊಂಡರು. ಆಗ ಸಾರುವವನು ದೊಡ್ಡ ಧ್ವನಿಯಲ್ಲಿ, “ವಿವಿಧ ಜನಾಂಗ, ಕುಲ, ಭಾಷೆಗಳ ಜನರೇ, ನಾನು ಹೇಳುವುದನ್ನು ಕೇಳಿರಿ. ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೇ ನೀವು ಅಡ್ಡಬೀಳಬೇಕು. ಇದು ರಾಜಾಜ್ಞೆ. ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಬಂಗಾರದ ವಿಗ್ರಹವನ್ನು ಪೂಜಿಸಬೇಕು. ಅರಸನಾದ ನೆಬೂಕದ್ನೆಚ್ಚರನು ಈ ವಿಗ್ರಹವನ್ನು ನಿಲ್ಲಿಸಿದ್ದಾನೆ. ಯಾರಾದರೂ ಈ ಬಂಗಾರದ ವಿಗ್ರಹಕ್ಕೆ ಅಡ್ಡಬೀಳದಿದ್ದರೆ ಮತ್ತು ಪೂಜಿಸದಿದ್ದರೆ ತಕ್ಷಣ ಅವರನ್ನು ಬೆಂಕಿಯ ಕೊಂಡಕ್ಕೆ ಎಸೆಯಲಾಗುವುದು” ಎಂದು ಸಾರಿದನು.

ಆದ್ದರಿಂದ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅವರು ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಿದರು. ಅರಸನಾದ ನೆಬೂಕದ್ನೆಚ್ಚರನು ನಿಲ್ಲಿಸಿದ ವಿಗ್ರಹವನ್ನು ಎಲ್ಲ ಜನಾಂಗಗಳ, ಭಾಷೆಗಳ ಜನರು ಪೂಜಿಸಿದರು.

ಆಗ ಕೆಲವು ಜನ ಕಲ್ದೀಯರು ಅರಸನ ಬಳಿಗೆ ಬಂದು ಅವರು ಯೆಹೂದ್ಯರ ವಿರುದ್ಧ ಮಾತನಾಡತೊಡಗಿದರು. ಅರಸನಾದ ನೆಬೂಕದ್ನೆಚ್ಚರನಿಗೆ ಅವರು, “ಮಹಾರಾಜನೇ, ಚಿರಂಜೀವಿಯಾಗಿರು! 10 ಅರಸನೇ, ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಪ್ರತಿಯೊಬ್ಬನೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸಬೇಕು ಎಂದು ತಾವು ಆಜ್ಞೆ ಕೊಟ್ಟಿದ್ದೀರಿ. 11 ಯಾರಾದರೂ ಅಡ್ಡಬಿದ್ದು ಬಂಗಾರದ ವಿಗ್ರಹವನ್ನು ಪೂಜಿಸದಿದ್ದರೆ ಅವರನ್ನು ಉರಿಯುವ ಬೆಂಕಿಯ ಕೊಂಡದಲ್ಲಿ ಎಸೆಯಲಾಗುವುದೆಂದು ಕೂಡ ತಾವು ಹೇಳಿದ್ದೀರಿ. 12 ಅರಸನೇ, ಕೆಲವು ಜನ ಯೆಹೂದ್ಯರು ತಮ್ಮ ಆಜ್ಞೆಯನ್ನು ಪಾಲಿಸಲಿಲ್ಲ. ಆ ಯೆಹೂದ್ಯರನ್ನು ತಾವು ಬಾಬಿಲೋನ್ ಪ್ರಾಂತ್ಯದಲ್ಲಿ ಪ್ರಮುಖ ಅಧಿಕಾರಿಗಳನ್ನಾಗಿ ನೇಮಿಸಿದ್ದೀರಿ. ಅವರ ಹೆಸರುಗಳು, ಶದ್ರಕ್, ಮೇಶಕ್, ಅಬೇದ್‌ನೆಗೋ ಎಂದು. ಅವರು ನಿಮ್ಮ ದೇವರುಗಳನ್ನು ಪೂಜಿಸುವುದಿಲ್ಲ. ನೀವು ನಿಲ್ಲಿಸಿದ ಬಂಗಾರದ ವಿಗ್ರಹಕ್ಕೆ ಅಡ್ಡಬಿದ್ದು ಪೂಜಿಸುವದಿಲ್ಲ” ಎಂದು ಚಾಡಿ ಹೇಳಿದರು.

13 ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಅವನು ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕರೆಸಿದನು. ಅವರನ್ನು ಅರಸನ ಬಳಿಗೆ ಕರೆದುತರಲಾಯಿತು. 14 ನೆಬೂಕದ್ನೆಚ್ಚರನು ಅವರಿಗೆ, “ಶದ್ರಕ್, ಮೇಶಕ್, ಅಬೆದ್‌ನೆಗೋ, ನೀವು ನನ್ನ ದೇವರುಗಳನ್ನು ಪೂಜಿಸುವುದಿಲ್ಲವಂತೆ, ಇದು ನಿಜವೇ? ನಾನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ನೀವು ಅಡ್ಡಬಿದ್ದು ಪೂಜಿಸಲಿಲ್ಲವಂತೆ, ಇದು ನಿಜವೇ? 15 ಈಗಲಾದರೋ ತುತ್ತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ಚಿನ್ನದ ವಿಗ್ರಹವನ್ನು ಪೂಜಿಸಬೇಕು. ನಾನು ಮಾಡಿಸಿದ ಈ ವಿಗ್ರಹವನ್ನು ಪೂಜಿಸಲು ನೀವು ಸಿದ್ಧರಾಗಿದ್ದರೆ ಸರಿ. ನೀವು ಅದನ್ನು ಪೂಜಿಸದಿದ್ದರೆ ತಕ್ಷಣ ನಿಮ್ಮನ್ನು ಉರಿಯುವ ಕೊಂಡದಲ್ಲಿ ಎಸೆಯಲಾಗುವುದು. ಆಗ ನನ್ನ ಕೈಯಿಂದ ನಿಮ್ಮನ್ನು ಬಿಡಿಸುವುದು ಯಾವ ದೇವರಿಗೂ ಸಾಧ್ಯವಾಗಲಾರದು” ಎಂದು ಹೇಳಿದನು.

16 ಇದನ್ನು ಕೇಳಿ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬುವವರು ಅರಸನಿಗೆ, “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. 17 ನೀನು ನಮ್ಮನ್ನು ಉರಿಯುವ ಕೊಂಡದಲ್ಲಿ ಎಸೆದರೆ ನಾವು ಆರಾಧಿಸುವ ದೇವರು ನಮ್ಮನ್ನು ರಕ್ಷಿಸಬಲ್ಲನು. ಆತನು ಇಚ್ಛಿಸಿದರೆ ನಮ್ಮನ್ನು ನಿನ್ನ ಕೈಯಿಂದ ಬಿಡಿಸಬಲ್ಲನು. 18 ಅರಸನೇ, ಒಂದುವೇಳೆ ದೇವರು ನಮ್ಮನ್ನು ರಕ್ಷಿಸದಿದ್ದರೂ ನಾವು ನಿನ್ನ ದೇವರುಗಳನ್ನು ಪೂಜಿಸುವುದಿಲ್ಲ. ನೀನು ನಿಲ್ಲಿಸಿದ ಬಂಗಾರದ ವಿಗ್ರಹವನ್ನು ಪೂಜಿಸುವುದಿಲ್ಲ. ಇದು ನಿನಗೆ ತಿಳಿದಿರಲಿ” ಎಂದು ಖಂಡಿತವಾಗಿ ಹೇಳಿದರು.

19 ಆಗ ನೆಬೂಕದ್ನೆಚ್ಚರನಿಗೆ ಬಹಳ ಕೋಪ ಬಂತು. ಶದ್ರಕ್, ಮೇಶಕ್, ಅಬೇದ್‌ನೆಗೋ ಅವರ ವಿರುದ್ಧವಾಗಿ ಅವನ ಮುಖಭಾವವು ಕೆರಳಿತು. ಕುಲುಮೆಯನ್ನು ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. 20 ಆಮೇಲೆ ನೆಬೂಕದ್ನೆಚ್ಚರನು, ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬಂಧಿಸಿ ಉರಿಯುವ ಕೊಂಡದಲ್ಲಿ ಎಸೆಯಬೇಕೆಂದು ತನ್ನ ಸೈನ್ಯದಲ್ಲಿದ್ದ ಅತಿ ಬಲಶಾಲಿಗಳಾದ ಕೆಲವರಿಗೆ ಆಜ್ಞಾಪಿಸಿದನು.

21 ಅವರು ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬವರನ್ನು ಚೆನ್ನಾಗಿ ಬಿಗಿದುಕಟ್ಟಿ ಉರಿಯುವ ಕೊಂಡದಲ್ಲಿ ಎಸೆದರು. ಅವರು ತಮ್ಮ ಶಲ್ಯ, ಇಜಾರು, ಟೊಪ್ಪಿಗೆ ಮೊದಲಾದ ಉಡುಪನ್ನು ಧರಿಸಿಕೊಂಡಿದ್ದರು. 22 ಆಜ್ಞೆಯನ್ನು ಕೊಟ್ಟಾಗ ಅರಸನು ತುಂಬ ಕೋಪದಲ್ಲಿದ್ದನು. ಆದ್ದರಿಂದ ತಕ್ಷಣ ಕುಲುಮೆಯಲ್ಲಿ ಅತಿ ಹೆಚ್ಚು ಬೆಂಕಿಯನ್ನು ಉರಿಸಲಾಯಿತು. ಆ ಜ್ವಾಲೆ ಎಷ್ಟು ಭಯಂಕರವಾಗಿತ್ತೆಂದರೆ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಕುಲುಮೆಯಲ್ಲಿ ಎಸೆಯಲು ಹೋದ ಶಕ್ತಿಶಾಲಿಗಳಾದ ಸೈನಿಕರೇ ಅದರ ತಾಪಕ್ಕೆ ಸತ್ತುಹೋದರು. 23 ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಕಟ್ಟಲ್ಪಟ್ಟವರಾಗಿ ಧಗಧಗನೆ ಉರಿಯುವ ಬೆಂಕಿಯಲ್ಲಿ ಬಿದ್ದುಬಿಟ್ಟರು.

24 ಅರಸನಾದ ನೆಬೂಕದ್ನೆಚ್ಚರನು ಬೆಚ್ಚಿ ತಟ್ಟನೆ ಎದ್ದುನಿಂತನು. ಅವನು ಆಶ್ಚರ್ಯಚಕಿತನಾಗಿ ತನ್ನ ಮಂತ್ರಿಗಳನ್ನು, “ನಾವು ಕೇವಲ ಮೂರು ಜನರನ್ನು ಕಟ್ಟಿದೆವು, ಕೇವಲ ಮೂರು ಜನರನ್ನು ಬೆಂಕಿಯಲ್ಲಿ ಎಸೆದೆವು. ಹೌದಲ್ಲವೇ?” ಎಂದು ಕೇಳಿದನು.

ಅವನ ಮಂತ್ರಿಗಳು, “ಹೌದು, ಮಹಾರಾಜನೇ” ಎಂದು ಉತ್ತರಿಸಿದರು.

25 ಆಗ ಅರಸನು, “ನೋಡಿರಿ, ನಾಲ್ಕು ಜನರು ಬೆಂಕಿಯಲ್ಲಿ ತಿರುಗಾಡುತ್ತಿರುವುದು ನನಗೆ ಕಾಣುತ್ತಿದೆ. ಅವರು ಕಟ್ಟಲ್ಪಟ್ಟಿಲ್ಲ. ಅವರನ್ನು ಬೆಂಕಿಯು ಸುಟ್ಟಿಲ್ಲ. ನಾಲ್ಕನೆಯವನು ದೇವಕುಮಾರನಂತೆ ಕಾಣುತ್ತಾನೆ” ಎಂದು ಹೇಳಿದನು.

26 ಆಗ ನೆಬೂಕದ್ನೆಚ್ಚರನು ಉರಿಯುವ ಕೊಂಡದ ಬಾಯಿಯ ಬಳಿಗೆ ಹೋಗಿ, “ಮಹೋನ್ನತನಾದ ದೇವರ ಸೇವಕರಾದ ಶದ್ರಕ್, ಮೇಶಕ್, ಅಬೆದ್‌ನೆಗೋ ಎಂಬವರೇ ಬನ್ನಿ, ಹೊರಗೆ ಬನ್ನಿ” ಎಂದು ಕೂಗಿದನು.

ಶದ್ರಕ್, ಮೇಶಕ್, ಅಬೇದ್‌ನೆಗೋ ಈ ಮೂವರು ಬೆಂಕಿಯೊಳಗಿಂದ ಹೊರಗೆ ಬಂದರು. 27 ಅವರು ಹೊರಗೆ ಬಂದ ಮೇಲೆ ಉಪರಾಜರು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು ಮತ್ತು ಇತರರು ಅವರ ಸುತ್ತಲೂ ನೆರೆದರು. ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳನ್ನು ಬೆಂಕಿಯು ಸುಟ್ಟಿಲ್ಲ. ಅವರ ದೇಹಕ್ಕೆ ಬೆಂಕಿಯು ಮುಟ್ಟಿಲ್ಲ. ಅವರ ಕೂದಲಿಗೂ ವಸ್ತ್ರಗಳಿಗೂ ಬೆಂಕಿಯು ತಾಕಿಲ್ಲ. ಬೆಂಕಿಯ ಸಮೀಪಕ್ಕೆ ಹೋದ ವಾಸನೆಯೂ ಅವರಿಗೆ ಮುಟ್ಟಿಲ್ಲ ಎಂಬುದನ್ನು ಅವರು ತಿಳಿದುಕೊಂಡರು.

28 ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್, ಅಬೇದ್‌ನೆಗೋ ಇವರುಗಳ ದೇವರಿಗೆ ಸ್ತೋತ್ರವಾಗಲಿ. ಅವರ ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರನ್ನು ಬೆಂಕಿಯಿಂದ ರಕ್ಷಿಸಿದ್ದಾನೆ. ಈ ಮೂರು ಜನರು ತಮ್ಮ ದೇವರ ಮೇಲೆ ವಿಶ್ವಾಸವಿಟ್ಟರು. ಅವರು ನನ್ನ ಆಜ್ಞೆಯನ್ನು ಪಾಲಿಸಲು ಒಪ್ಪಲಿಲ್ಲ. ಬೇರೆ ಯಾವ ದೇವರನ್ನೂ ಪೂಜಿಸುವುದಕ್ಕೆ ಅಥವಾ ಸೇವಿಸುವುದಕ್ಕೆ ಬದಲಾಗಿ ಸಾಯಲು ಅವರು ಸಿದ್ಧರಾಗಿದ್ದರು. 29 ನಾನು ಈಗ ಸಕಲ ಜನಾಂಗ, ಕುಲ, ಭಾಷೆಗಳ ಜನರಲ್ಲಿ ಯಾರಾದರೂ ಶದ್ರಕ್, ಮೇಶಕ್, ಅಬೇದ್‌ನೆಗೋ ಇವರ ದೇವರ ವಿರುದ್ಧವಾಗಿ ಮಾತನಾಡಿದರೆ ಅವರನ್ನು ತುಂಡುತುಂಡಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ. ಬೇರೆ ಯಾವ ದೇವರೂ ತನ್ನ ಭಕ್ತರನ್ನು ಈ ರೀತಿ ರಕ್ಷಿಸಲಾರನು” ಎಂದು ಹೇಳಿದನು. 30 ಬಳಿಕ ರಾಜನು ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಈ ಮೂವರಿಗೆ ಬಾಬಿಲೋನ್ ಸಂಸ್ಥಾನದಲ್ಲಿ ಹೆಚ್ಚು ಮಹತ್ವದ ಪದವಿಗಳನ್ನು ಕೊಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International