Beginning
ರಾಜನೂ ಹಬ್ಬಗಳೂ
46 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಒಳಗಿನ ಪ್ರಾಕಾರದ ಪೂರ್ವ ದಿಕ್ಕಿನ ದ್ವಾರವು ಆರು ಕೆಲಸದ ದಿವಸಗಳಲ್ಲಿ ಮುಚ್ಚಲ್ಪಡುವದು. ಅದು ಸಬ್ಬತ್ ದಿವಸಗಳಲ್ಲಿಯೂ ಅಮಾವಾಸ್ಯೆಯ ದಿವಸಗಳಲ್ಲಿಯೂ ತೆರೆಯಲ್ಪಡುವದು. 2 ಅಧಿಪತಿಯು ಆ ದ್ವಾರದ ಕೈಸಾಲೆಯೊಳಗೆ ಪ್ರವೇಶಿಸಿ ಅದರ ನಿಲುವು ಕಂಬದ ಬಳಿಯಲ್ಲಿ ನಿಲ್ಲುವನು. ಅಧಿಪತಿಯು ಕೊಡುವ ಸರ್ವಾಂಗಹೋಮವನ್ನು ಮತ್ತು ಸಮಾಧಾನಯಜ್ಞವನ್ನು ಆಗ ಯಾಜಕರು ಸಮರ್ಪಿಸುವರು. ಅಧಿಪತಿಯು ಆ ದ್ವಾರದ ಮುಂಭಾಗದಲ್ಲಿ ಆರಾಧಿಸುವನು. ಅನಂತರ ಅವನು ಹೊರಗೆ ಹೋಗುವನು. ಆ ದ್ವಾರದ ಕದಗಳು ಸಾಯಂಕಾಲದ ತನಕ ತೆರೆದೇ ಇರುವವು. 3 ಸಬ್ಬತ್ ಮತ್ತು ಅಮಾವಾಸ್ಯೆ ದಿವಸಗಳಲ್ಲಿ ಸಾಮಾನ್ಯ ಜನರೂ ಅದೇ ದ್ವಾರದ ಬಳಿ ಆರಾಧಿಸುವರು.
4 “ಸಬ್ಬತ್ ದಿವಸದಲ್ಲಿ ರಾಜನು ಯೆಹೋವನಿಗೆ ಸರ್ವಾಂಗಹೋಮವನ್ನು ಸಮರ್ಪಿಸುವನು. ಅವನು ಅದಕ್ಕಾಗಿ ನಿಷ್ಕಳಂಕವಾದ ಆರು ಕುರಿಗಳನ್ನೂ ನಿಷ್ಕಳಂಕವಾದ ಒಂದು ಟಗರನ್ನೂ ಕೊಡಬೇಕು. 5 ಟಗರಿನೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಗಾಗಿ ಕೊಡಬೇಕು. ಕುರಿಗಳೊಂದಿಗೆ ಧಾನ್ಯಸಮರ್ಪಣೆಗಾಗಿ ರಾಜನು ತನ್ನ ಇಷ್ಟಬಂದ ಹಾಗೆ ಕೊಡಬಹುದು. ಆದರೆ ಪ್ರತೀ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಬೇಕು.
6 “ಅಮಾವಾಸ್ಯೆ ದಿವಸ ಅವನು ಒಂದು ಎಳೇ ಪೂರ್ಣಾಂಗವಾದ ಹೋರಿಯನ್ನು ಸಮರ್ಪಿಸಬೇಕು. ಅದರ ಜೊತೆಗೆ ಆರು ಪೂರ್ಣಾಂಗವಾದ ಕುರಿಗಳನ್ನೂ ಒಂದು ಪೂರ್ಣಾಂಗವಾದ ಟಗರನ್ನೂ ಸಮರ್ಪಿಸಬೇಕು. 7 ರಾಜನು ಒಂದು ಏಫಾ ಧಾನ್ಯವನ್ನು ಹೋರಿಯೊಂದಿಗೂ ಇನ್ನೊಂದು ಏಫಾ ಧಾನ್ಯವನ್ನು ಟಗರಿನೊಂದಿಗೂ ಕೊಡಬೇಕು. ಆದರೆ ಅಧಿಪತಿಯು ಕುರಿಗಳೊಂದಿಗೆ ತನಗಿಷ್ಟವಾದಷ್ಟು ಧಾನ್ಯಸಮರ್ಪಣೆಯನ್ನು ಕೊಡಬಹುದು. ಆದರೆ ಅವನು ಪ್ರತೀ ಒಂದು ಏಫಾ ಧಾನ್ಯಕ್ಕೆ ಒಂದು ಹಿನ್ ಆಲಿವ್ ಎಣ್ಣೆಯನ್ನು ಕೊಡಲೇಬೇಕು.
8 “ಅಧಿಪತಿಯು ಆಲಯದ ಸಂಕೀರ್ಣ ಪ್ರವೇಶಿಸುವಾಗ ಅವನು ಪೂರ್ವದಿಕ್ಕಿನ ದ್ವಾರದಿಂದ ಪ್ರವೇಶಿಸಬೇಕು. ಮತ್ತು ಅದರ ಮೂಲಕವೇ ಅವನು ಹೊರಗೆ ಹೋಗಬೇಕು.
9 “ಸಾಮಾನ್ಯ ಜನರು ವಿಶೇಷ ಹಬ್ಬದ ದಿವಸಗಳಲ್ಲಿ ಯೆಹೋವನನ್ನು ಸಂಧಿಸಲು ಬರುವಾಗ ಉತ್ತರ ದ್ವಾರದಿಂದ ಬರುವವರು ದಕ್ಷಿಣ ದ್ವಾರದ ಮೂಲಕ ಹೊರಗೆ ಹೋಗಬೇಕು. ದಕ್ಷಿಣದ ದ್ವಾರದಿಂದ ಒಳ ಪ್ರವೇಶಿಸುವವನು ಉತ್ತರ ದ್ವಾರದ ಮೂಲಕ ಹೊರಗೆ ಹೋಗಬೇಕು. ಯಾರೂ ಬಂದ ದಾರಿಯಿಂದ ಹಿಂದೆ ಹೋಗಬಾರದು. ಪ್ರತಿಯೊಬ್ಬನೂ ನೇರವಾಗಿ ಮುಂದಕ್ಕೆ ಹೋಗಬೇಕು. 10 ರಾಜನು ತನ್ನ ಜನರೊಂದಿಗೆ ಇರಬೇಕು. ಜನರು ಒಳಗೆ ಪ್ರವೇಶ ಮಾಡುವಾಗ ಅವನೂ ಅವರ ಜೊತೆಯಲ್ಲಿರಬೇಕು. ಅವರು ಹೊರಗೆ ಹೋಗುವಾಗಲೂ ಅವನು ಅವರ ಜೊತೆಯಲ್ಲಿರಬೇಕು.
11 “ಹಬ್ಬದ ದಿವಸಗಳಲ್ಲಿ ಮತ್ತು ಬೇರೆ ವಿಶೇಷ ದಿವಸಗಳಲ್ಲಿ ಪ್ರತಿ ಎಳೇ ಹೋರಿಯೊಂದಿಗೆ ಒಂದು ಏಫಾ ಧಾನ್ಯಸಮರ್ಪಣೆಯನ್ನು ಸಮರ್ಪಿಸಬೇಕು. ಮತ್ತು ಪ್ರತಿ ಒಂದು ಟಗರಿನೊಂದಿಗೆ ಒಂದು ಏಫಾ ಧಾನ್ಯವನ್ನು ಸಮರ್ಪಿಸಬೇಕು. ಕುರಿಗಳೊಂದಿಗೆ ಸಮರ್ಪಿಸಬೇಕಾದ ಧಾನ್ಯವು ರಾಜನಿಗೆ ಇಷ್ಟದ ಪ್ರಕಾರ ಇರುವದು. ಅದರ ಜೊತೆಗೆ ಒಂದು ಏಫಾ ಧಾನ್ಯದೊಂದಿಗೆ ಒಂದು ಹಿನ್ ಎಣ್ಣೆಯನ್ನೂ ಕೊಡಬೇಕು.
12 “ರಾಜನು ತನ್ನ ಇಚ್ಛೆಯ ಪ್ರಕಾರ ಯೆಹೋವನಿಗೆ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞ ಅಥವಾ ಮನಃಪೂರ್ವಕವಾದ ಕಾಣಿಕೆಯನ್ನು ಸಮರ್ಪಿಸುವಾಗ ಅವನಿಗಾಗಿ ಪೂರ್ವದ ಬಾಗಿಲು ತೆಗೆಯಲ್ಪಡಬೇಕು. ಆದರೆ ಅವನು ಸಬ್ಬತ್ ದಿನದಂತೆ ತನ್ನ ಕಾಣಿಕೆಗಳನ್ನು ಸಮರ್ಪಿಸಿದ ನಂತರ ಅವನು ಹಿಂತಿರುಗಿದಾಗ ಪ್ರವೇಶ ದ್ವಾರವು ಮುಚ್ಚಲ್ಪಡಬೇಕು.
ದೈನಂದಿನ ಸಮರ್ಪಣೆ
13 “ನೀನು ಪ್ರತಿದಿನ ಮುಂಜಾನೆ ಒಂದು ವರ್ಷದ ಪೂರ್ಣಾಂಗವಾದ ಕುರಿಯನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. 14 ಪ್ರತಿ ಮುಂಜಾನೆ ನೀನು ಐದು ಸೇರು ಗೋಧಿಹಿಟ್ಟನ್ನೂ ಎರಡು ಸೇರು ಎಣ್ಣೆಯನ್ನೂ ಒಟ್ಟಾಗಿ ಬೆರೆಸಿ ಪ್ರತಿದಿನ ಯೆಹೋವನಿಗೆ ಧಾನ್ಯ ನೈವೇದ್ಯವಾಗಿ ಸಮರ್ಪಿಸಬೇಕು. 15 ಹೀಗೆ ಅವರು ಶಾಶ್ವತವಾಗಿ ಕುರಿ, ಧಾನ್ಯ ಮತ್ತು ಎಣ್ಣೆಯನ್ನು ಪ್ರತೀ ಮುಂಜಾನೆ ಸರ್ವಾಂಗಹೋಮವಾಗಿ ಸಮರ್ಪಿಸಬೇಕು.”
ರಾಜನ ಸ್ವಾಸ್ತ್ಯದ ಬಗ್ಗೆ ಕಟ್ಟಳೆಗಳು
16 ನನ್ನ ಒಡೆಯನಾದ ಯೆಹೋವನು ಹೇಳಿದ್ದೇನೆಂದರೆ, “ಒಬ್ಬ ರಾಜನು ತನ್ನ ಗಂಡುಮಕ್ಕಳಿಗೆ ತನ್ನ ಭೂಮಿಯ ಭಾಗವನ್ನು ಉಚಿತವಾಗಿ ಕೊಟ್ಟರೆ ಅದು ಅವನ ಗಂಡುಮಕ್ಕಳಿಗೆ ಸೇರುವದು. ಅದು ಅವರ ಆಸ್ತಿಯಾಗುವದು. 17 ಆದರೆ ಆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ದಾಸನಿಗೆ ಉಚಿತವಾಗಿ ಕೊಟ್ಟರೆ, ಆ ಭೂಮಿಯು ಬಿಡುಗಡೆ ಸಂವತ್ಸರದ ತನಕ ಮಾತ್ರವೇ ದಾಸನದ್ದಾಗಿರುವದು. ಅನಂತರ ಅದು ರಾಜನಿಗೆ ಹಿಂದೆ ಹೋಗುವದು. ರಾಜನ ಗಂಡುಮಕ್ಕಳು ಮಾತ್ರ ರಾಜನಿಂದ ಹೊಂದಿದ ಭೂಮಿಯನ್ನು ನಿತ್ಯಕಾಲಕ್ಕೂ ಅನುಭೋಗಿಸುವರು. 18 ರಾಜನು ತನ್ನ ಪ್ರಜೆಯ ಭೂಮಿಯನ್ನು ತನ್ನ ಉಪಯೋಗಕ್ಕೆಂದು ಬಲತ್ಕಾರದಿಂದ ಇಟ್ಟುಕೊಳ್ಳಬಾರದು ಅಥವಾ ತೆಗೆದುಕೊಳ್ಳಲೂಬಾರದು. ತನ್ನ ಸ್ವಂತ ಭೂಮಿಯಿಂದ ಪಾಲನ್ನು ತನ್ನ ಮಕ್ಕಳಿಗೆ ಕೊಡಬೇಕು. ಹೀಗೆ ನನ್ನ ಜನರು ತಮ್ಮ ಭೂಮಿಯನ್ನು ಕಳೆದುಕೊಳ್ಳುವದಿಲ್ಲ.”
ವಿಶೇಷ ಅಡಿಗೆಮನೆ
19 ಬಳಿಕ ಆ ಪುರುಷನು ನನ್ನನ್ನು ಮಹಾದ್ವಾರದ ಪಕ್ಕದಲ್ಲಿನ ಪ್ರವೇಶಮಾರ್ಗವಾಗಿ ಉತ್ತರದಲ್ಲಿರುವ ಯಾಜಕರ ಪವಿತ್ರ ಕೋಣೆಗಳಿಗೆ ಕರೆದುಕೊಂಡು ಹೋದನು. 20 ಅವನು ನನಗೆ ಹೇಳಿದ್ದೇನೆಂದರೆ, “ಈ ಸ್ಥಳದಲ್ಲಿ ಯಾಜಕರು ದೋಷಪರಿಹಾರಕ ಮತ್ತು ಪಾಪಪರಿಹಾರಕಯಜ್ಞದ ಮಾಂಸಗಳನ್ನು ಬೇಯಿಸುವರು. ಇದೇ ಸ್ಥಳದಲ್ಲಿ ಧಾನ್ಯಸಮರ್ಪಣೆಯ ಹಿಟ್ಟಿನಿಂದ ರೊಟ್ಟಿಯನ್ನು ಸುಡುವರು. ಇದನ್ನು ಇಲ್ಲಿಯೇ ಯಾಕೆ ಮಾಡುತ್ತಾರೆಂದರೆ ಅವರು ಹೊರಗಿನ ಪ್ರಾಕಾರದೊಳಗೆ ಆ ಪವಿತ್ರ ವಸ್ತುವನ್ನು ತರುವ ಅವಶ್ಯಕತೆ ಇರುವದಿಲ್ಲ. ಸಾರ್ವಜನಿಕರು ಕೂಡುವ ಸ್ಥಳದಲ್ಲಿ ಆ ಪವಿತ್ರ ವಸ್ತುವನ್ನು ತರಬಾರದು.”
21 ಆಮೇಲೆ ಅವನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಆ ಪ್ರಾಕಾರದ ನಾಲ್ಕು ಮೂಲೆಗಳಿಗೆ ನನ್ನನ್ನು ಕರೆದುಕೊಂಡು ಹೋದನು. ವಿಶಾಲವಾದ ಪ್ರಾಕಾರದ ಪ್ರತೀ ಮೂಲೆಗಳಲ್ಲಿ ಇನ್ನೊಂದು ಚಿಕ್ಕ ಪ್ರಾಕಾರವಿರುವದನ್ನು ಕಂಡೆನು. 22 ಆ ನಾಲ್ಕು ಮೂಲೆಗಳಲ್ಲಿಯೂ ಗೋಡೆಗಳಿಂದ ಆವರಿಸಲ್ಪಟ್ಟಿದ್ದ ಒಂದು ಚಿಕ್ಕ ಪ್ರಾಕಾರವಿತ್ತು. ಈ ಪ್ರಾಕಾರದ ಉದ್ದ ನಲವತ್ತು ಮೊಳ ಮತ್ತು ಅಗಲ ಮೂವತ್ತು ಮೊಳ. ಈ ನಾಲ್ಕು ಚಿಕ್ಕ ಪ್ರಾಕಾರಗಳು ಒಂದೇ ಅಳತೆಯುಳ್ಳವುಗಳಾಗಿದ್ದವು. 23 ಇವುಗಳ ಸುತ್ತಲೂ ಇಟ್ಟಿಗೆಯ ಗೋಡೆ ಕಟ್ಟಲ್ಪಟ್ಟಿತ್ತು. ಈ ಗೋಡೆಯೊಳಗೆ ಅಡಿಗೆ ಮಾಡುವದಕ್ಕಾಗಿ ಸ್ಥಳವನ್ನು ಏರ್ಪಡಿಸಲಾಗಿತ್ತು. 24 ಅವನು ನನಗೆ ಹೇಳಿದ್ದೇನೆಂದರೆ, “ಆಲಯದ ಈ ಸ್ಥಳದಲ್ಲಿ ಸೇವೆಮಾಡುವ ಜನರು ಸಾಮಾನ್ಯ ಜನರ ಯಜ್ಞದ ಮಾಂಸವನ್ನು ಆ ಜನರಿಗಾಗಿ ಬೇಯಿಸುವರು.”
ಆಲಯದಿಂದ ನೀರಿನ ಹರಿಯುವಿಕೆ
47 ಅವನು ಆಲಯದ ಪ್ರವೇಶ ದ್ವಾರಕ್ಕೆ ನನ್ನನ್ನು ಕರೆದುಕೊಂಡು ಹೋದನು. ನಾನು ಅಲ್ಲಿ ಆಲಯದ ಪೂರ್ವ ದ್ವಾರದ ಕೆಳಗಡೆಯಿಂದ ಹರಿಯುವ ನೀರನ್ನು ಕಂಡೆನು. ಆಲಯದ ಮುಂಭಾಗ ಪೂರ್ವ ದಿಕ್ಕಿನಲ್ಲಿದೆ. ಆ ನೀರು ಆಲಯದ ದಕ್ಷಿಣದ ಭಾಗದ ಕೆಳಗಿನಿಂದ ಹರಿಯುತ್ತಾ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯುತ್ತಿತ್ತು. 2 ಅವನು ನನ್ನನ್ನು ಉತ್ತರದ ದ್ವಾರದಿಂದ ಹೊರಕ್ಕೆ ತಂದು, ದೇವಾಲಯದ ಹೊರ ಅಂಚಿನಲ್ಲಿಯೇ ಪೂರ್ವ ದ್ವಾರಕ್ಕೆ ತಂದನು. ಆ ದ್ವಾರದ ದಕ್ಷಿಣದ ಕಡೆಯಿಂದ ನೀರು ಹರಿದು ಬರುತ್ತಿತ್ತು.
3 ಅವನು ಕೈಯಲ್ಲಿ ಅಳತೆಯ ನೂಲನ್ನು ಹಿಡಿದುಕೊಂಡು ಪೂರ್ವದ ಕಡೆಗೆ ನಡೆದನು. ಅವನು ಸಾವಿರ ಮೊಳ ಅಳೆದನು. ನನ್ನನ್ನು ಆ ಸ್ಥಳದಲ್ಲಿ ನೀರಿನಲ್ಲಿ ನಡೆದುಕೊಂಡು ಬರುವಂತೆ ಹೇಳಿದನು. ನೀರು ನನ್ನ ಪಾದ ಮುಳುಗುವಷ್ಟು ಆಳವಿತ್ತು. 4 ಅವನು ತಿರುಗಿ ಸಾವಿರ ಮೊಳ ಅಳೆದನು. ಆ ಜಾಗದಲ್ಲಿದ್ದ ನೀರಿನಲ್ಲಿ ನನಗೆ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಮೊಣಕಾಲಿನಷ್ಟು ಆಳವಿತ್ತು. ತಿರುಗಿ ಅವನು ಸಾವಿರ ಮೊಳದಷ್ಟು ದೂರ ಅಳತೆ ಮಾಡಿದನು. ಆ ಸ್ಥಳದಲ್ಲಿ ನೀರಿನಲ್ಲಿ ನಡೆಯಲು ಹೇಳಿದನು. ಅಲ್ಲಿ ನೀರು ನನ್ನ ಸೊಂಟದಷ್ಟು ಆಳವಾಗಿತ್ತು. 5 ಅವನು ಇನ್ನೂ ಒಂದು ಸಾವಿರ ಮೊಳ ದೂರ ಅಳೆದನು. ಅಲ್ಲಿ ನೀರು ಹೆಚ್ಚಿದ್ದು ನನ್ನಿಂದ ದಾಟಲು ಆಗದಷ್ಟು ಆಳವಿತ್ತು. ಅದು ನದಿಯಾಗಿತ್ತು. ಆ ನೀರಿನಲ್ಲಿ ಈಜಾಡಬಹುದಾಗಿತ್ತು. ದಾಟಲಾಗದ ಆಳವಾದ ಹೊಳೆಯಾಗಿತ್ತು. 6 ಆಗ ಅವನು ನನಗೆ, “ನರಪುತ್ರನೇ, ನೀನು ನೋಡಿರುವ ವಿಷಯಗಳ ಬಗ್ಗೆ ಗಮನವಿಟ್ಟಿಯಾ?” ಎಂದು ಕೇಳಿದನು.
ಆಗ ಅವನು ನನ್ನನ್ನು ಹೊಳೆಯ ಪಕ್ಕದಲ್ಲೇ ಕರೆದುಕೊಂಡು ಹೋದನು. 7 ನಾನು ನದಿಯ ತೀರದಲ್ಲಿ ನಡೆಯುತ್ತಿರುವಾಗ ಅದರ ಎರಡೂ ಕಡೆಗಳಲ್ಲಿ ಲೆಕ್ಕವಿಲ್ಲದಷ್ಟು ಮರಗಳನ್ನು ನೋಡಿದೆನು. 8 ಅವನು ನನ್ನೊಡನೆ, “ಈ ನದಿಯು ಪೂರ್ವಕ್ಕೆ ಹೊರಟು ಅರಾಬಾ ತಗ್ಗಿನ ಕಡೆ ಹರಿಯುತ್ತಿದೆ. 9 ಇದು ಮೃತ್ಯುಸಮುದ್ರವನ್ನು ಸೇರಿದಾಗ ಅದರ ನೀರು ಹೊಸದಾಗಿ ಶುದ್ಧವಾಗುವದು. ನೀರಿನಲ್ಲಿ ನಾನಾ ತರದ ಮೀನುಗಳು ಜೀವಿಸುವವು, ಮತ್ತು ಆ ಹೊಳೆಯು ಹರಿಯುವಲ್ಲೆಲ್ಲಾ ವಿವಿಧ ಜಾತಿಯ ಪ್ರಾಣಿಗಳು ವಾಸಿಸುವವು. 10 ಎಂಗೇದಿಯಿಂದ ಪ್ರಾರಂಭವಾಗಿ ಏನ್‌ಎಗ್ಲಯಿಮ್ ತನಕ ಬೆಸ್ತರು ಹೊಳೆಯ ದಡದಲ್ಲಿ ನಿಂತಿರುವದನ್ನು ನೀನು ನೋಡಬಹುದು. ಅವರು ತಮ್ಮ ಬಲೆಗಳನ್ನು ಬೀಸಿ ನಾನಾ ತರದ ಮೀನುಗಳನ್ನು ಹಿಡಿಯುವದನ್ನು ನೀನು ನೋಡಬಹುದು. ಭೂಮಧ್ಯ ಸಮುದ್ರದೊಳಗೆ ಎಷ್ಟು ವಿಧವಾದ ಮೀನುಗಳಿವೆಯೋ ಅಷ್ಟೇ ವಿಧವಾದ ಮೀನುಗಳು ಈ ಹೊಳೆಯಲ್ಲಿಯೂ ಇವೆ. 11 ಆದರೆ ಜವುಗು ನೆಲಗಳೂ ಸವುಳು ನೆಲಗಳೂ ಸಿಹಿಯಾಗುವದಿಲ್ಲ. ಅವು ಉಪ್ಪು ತಯಾರಿಸುವದಕ್ಕಾಗಿ ಉಪಯೋಗಿಸಲ್ಪಡುವವು. 12 ಎಲ್ಲಾ ತರಹದ ಹಣ್ಣಿನ ಮರಗಳು ನದಿಯ ಇಕ್ಕೆಡೆಗಳಲ್ಲಿಯೂ ಬೆಳೆಯುವವು. ಅವುಗಳ ಎಲೆಗಳು ಎಂದಿಗೂ ಒಣಗಿ ನೆಲಕ್ಕೆ ಉದುರವು. ಆ ಮರಗಳಲ್ಲಿ ಸದಾಕಾಲ ಹಣ್ಣುಗಳು ಇರುವವು. ಪ್ರತೀ ತಿಂಗಳಿಗೆ ಹಣ್ಣುಗಳನ್ನು ಕೊಡುವವು. ಯಾಕೆಂದರೆ ಆ ಮರಗಳಿಗೆ ನೀರು ಆಲಯದಿಂದ ಬರುತ್ತದೆ. ಅದರ ಹಣ್ಣುಗಳನ್ನು ಆಹಾರಕ್ಕಾಗಿಯೂ ಅದರ ಎಲೆಗಳಿಂದ ಔಷಧಿಯನ್ನೂ ತಯಾರಿಸಬಹುದು.”
ಕುಲಗಳಿಗನುಸಾರವಾಗಿ ದೇಶದ ವಿಭಜನೆ
13 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲರ ಹನ್ನೆರಡು ಕುಲಗಳಿಗೆ ದೇಶವನ್ನು ವಿಂಗಡಿಸುವಾಗ ಅವುಗಳ ಮೇರೆ ಯಾವುವೆಂದರೆ, ಯೋಸೇಫನಿಗೆ ಎರಡು ಪಾಲು ಇರುವದು. 14 ನೀವು ದೇಶವನ್ನು ಸಮಾನವಾಗಿ ಪಾಲು ಮಾಡಬೇಕು. ನಾನು ನಿಮ್ಮ ಪೂರ್ವಿಕರಿಗೆ ಈ ದೇಶವನ್ನು ಕೊಡುತ್ತೇನೆಂದು ವಾಗ್ದಾನ ಮಾಡಿದ್ದೆನು. ಈಗ ನಾನು ಇದನ್ನು ನಿಮಗೆ ಕೊಡುತ್ತಿದ್ದೇನೆ.
15 “ದೇಶದ ಮೇರೆ ಯಾವದೆಂದರೆ, ಉತ್ತರದ ಮೇರೆಯು ಭೂಮಧ್ಯ ಸಮುದ್ರದಲ್ಲಿ ಪ್ರಾರಂಭವಾಗಿ ಹೆತ್ಲೋನ್ ಕಡೆಗೂ ಅಲ್ಲಿಂದ ಚೆದಾದ್ ಕಡೆಗೂ 16 ಅಲ್ಲಿಂದ ಬೇರೋತ್ ಕಡೆಗೂ ಅಲ್ಲಿಂದ ಸಿಬ್ರಯಿಮ್ (ಇದು ದಮಸ್ಕ ಮತ್ತು ಹಾಮತ್‌ಗಳ ಮೇರೆಯಲ್ಲಿದೆ) ಕಡೆಗೂ ಅಲ್ಲಿಂದ ಹಾಚೇರ್ ಕಡೆಗೂ ಅಲ್ಲಿಂದ ಹತ್ತೀಕೋನ್ (ಇದು ಹವಾನದ ಮೇರೆಯಲ್ಲಿದೆ) ಕಡೆಗೂ ಹೋಗುತ್ತದೆ. 17 ಹೀಗೆ ಉತ್ತರದ ಮೇರೆಯು ಸಮುದ್ರದಿಂದ ದಮಸ್ಕದ ಉತ್ತರದ ಗಡಿಯಾದ ಹಚರ್ ಐನೋನ್ ಮತ್ತು ಹಮಾತಿಗೆ ಸೇರ್ಪಡೆಯಾಗುವದು. ಇದು ಉತ್ತರ ಭಾಗದ ಮೇರೆ.
18 “ಪೂರ್ವ ಭಾಗದಲ್ಲಿ, ಮೇರೆಯು ಹವ್ರಾನ್ ಮತ್ತು ದಮಸ್ಕದ ಮಧ್ಯದಲ್ಲಿರುವ ಹಚರ್ ಐನೋನ್ ಇಲ್ಲಿಂದ ಹೊರಟು ಜೋರ್ಡನ್ ಹೊಳೆಯ ತೀರದಲ್ಲಿ ಮುಂದುವರಿದು ಗಿಲ್ಯಾದಿಗೂ ಇಸ್ರೇಲ್ ರಾಜ್ಯಕ್ಕೂ ಮಧ್ಯದಲ್ಲಿ ಹರಿದು ಪೂರ್ವದ ಸಮುದ್ರದ ಕಡೆಗೆ ಹೋಗುತ್ತದೆ. ಅಲ್ಲಿಂದ ತಾಮಾರಿಗೆ ಸೇರುತ್ತದೆ. ಇದು ಪೂರ್ವ ಕಡೆಯ ಮೇರೆ.
19 “ದಕ್ಷಿಣ ಮೇರೆಯು ತಾಮಾರಿನಿಂದ ಹೊರಟು ಮೆರೀಬೋತ್-ಕಾದೇಶ್ ನಲ್ಲಿರುವ ನೀರಿನ ಬುಗ್ಗೆಯವರೆಗೂ ಹೋಗುವರು. ಬಳಿಕ ಅಲ್ಲಿಂದ ಹೊರಟು ಈಜಿಪ್ಟಿನ ನೀರಿನ ತೊರೆಯ ಮಾರ್ಗದಿಂದ ಭೂಮಧ್ಯ ಸಮುದ್ರವನ್ನು ಸೇರುವದು. ಇದು ದಕ್ಷಿಣದ ಮೇರೆ.
20 “ಪಶ್ಚಿಮದಲ್ಲಿ ಲೆಬೊಹಮಾತ್ ಎಂಬ ಸ್ಥಳದ ಮುಂಭಾಗದಲ್ಲಿರುವ ಸಮುದ್ರ ತೀರವೇ ಪಶ್ಚಿಮ ದಿಕ್ಕಿನ ಮೇರೆಯಾಗಿರುತ್ತದೆ.
21 “ಈ ದೇಶವನ್ನು ನಿಮ್ಮ ಕುಲಗಳಿಗನುಸಾರವಾಗಿ ನೀವು ವಿಂಗಡಿಸಬೇಕು. 22 ನೀವು ಇದನ್ನು ಸ್ವಂತ ಸ್ವಾಸ್ತ್ಯಕ್ಕಾಗಿ ವಿಂಗಡಿಸಬೇಕು. ನಿಮ್ಮ ಮಧ್ಯೆ ಪರದೇಶದವರೂ ಅವರ ಮಕ್ಕಳೂ ವಾಸವಾಗಿದ್ದಾರೆ. ಈ ಪರದೇಶಸ್ಥರು ಈ ದೇಶದ ನಿವಾಸಿಗಳಾಗಿರುವರು. ಅವರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದ ಇಸ್ರೇಲಿನವರಂತಿರುತ್ತಾರೆ. ನೀವು ಅವರಿಗೂ ನಿಮ್ಮ ವಂಶದವರೊಂದಿಗೆ ಭೂಮಿಯನ್ನು ಕೊಡಬೇಕು. 23 ಯಾವ ಕುಲದವರೊಂದಿಗೆ ಆ ಪರದೇಶಸ್ಥನು ವಾಸವಾಗಿರುತ್ತಾನೋ ಅದೇ ಕುಲದವರು ಅವನಿಗೆ ನೆಲವನ್ನು ಕೊಡಬೇಕು.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಇಸ್ರೇಲಿನ ವಿವಿಧ ಕುಲದವರಿಗೆ ಸ್ವಾಸ್ತ್ಯ
48 1-7 “ಉತ್ತರದ ಮೇರೆಯು ಭೂಮಧ್ಯ ಸಮುದ್ರದಿಂದ ಪೂರ್ವಕ್ಕೆ ಹೋಗಿ ಅಲ್ಲಿಂದ ಹೆತ್ಲೋನಿಗೂ ಅಲ್ಲಿಂದ ಹಮಾತ್ ಕಣಿವೆಗೂ ಅಲ್ಲಿಂದ ಹಚರ್ ಏನಾನಿಗೂ ಹೋಗುವುದು. ಈ ಸ್ಥಳವು ಹಮಾತ್ ಮತ್ತು ದಮಸ್ಕಸ್‌ನ ಗಡಿಯಲ್ಲಿರುವದು. ಪೂರ್ವದ ಗಡಿಯಿಂದ ಪಶ್ಚಿಮದ ತನಕ ಹೋಗುವ ಈ ಪ್ರಾಂತ್ಯದಲ್ಲಿ ಇಸ್ರೇಲಿನ ದಾನ್, ಆಶೇರ್, ನಫ್ತಾಲಿ, ಮನಸ್ಸೆ, ಎಫ್ರಾಯೀಮ್ ರೂಬೇನ್ ಮತ್ತು ಯೆಹೂದ ಕುಲದ ಜನರಿಗೆ ಭೂಮಿಯು ಸಿಗುವದು.
ದೇಶದ ವಿಶೇಷವಾದ ಭಾಗ
8 “ಆ ಯೆಹೂದನ ಸರಹದ್ದಿನ ಪಕ್ಕದಲ್ಲಿ ಪೂರ್ವದಿಂದ ಪಶ್ಚಿಮದವರೆಗೆ ನೀವು ಮೀಸಲಾಗಿಡಬೇಕಾದ ಭೂಮಿಯಿದೆ. ಇದಲ ಅಗಲ ಇಪ್ಪತ್ತೈದು ಸಾವಿರ ಮೊಳ. ಇದರ ಉದ್ದವು ಪೂರ್ವದಿಂದ ಪಶ್ಚಿಮದ ತನಕ ಇರುವ ಬೇರೆ ಕುಲದವರ ಸ್ವಾಸ್ತ್ಯದ ಭೂಮಿಯಷ್ಟಿರುವುದು. ಆಲಯವು ಈ ವಿಶೇಷವಾದ ಪ್ರಾಂತ್ಯದ ಮಧ್ಯದಲ್ಲಿರುವದು. 9 ಈ ಭೂಮಿಯನ್ನು ನೀವು ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಇದು ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಇಪ್ಪತ್ತು ಸಾವಿರ ಮೊಳ ಅಗಲವಾಗಿರುವದು. 10 ಈ ವಿಶೇಷವಾದ ಭೂಮಿಯನ್ನು ವಿಭಾಗಿಸಿ ಯಾಜಕರಿಗೆ ಮತ್ತು ಲೇವಿಯರಿಗೆ ಕೊಡಲಾಗುವುದು.
“ಯಾಜಕರು ಆ ಪ್ರದೇಶದ ಒಂದು ಭಾಗವನ್ನು ಪಡೆದುಕೊಳ್ಳುವರು. ಆ ಭಾಗದ ಉದ್ದವು ಉತ್ತರದಿಕ್ಕಿಗೆ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ಪೂರ್ವಕ್ಕೆ ಹತ್ತು ಸಾವಿರ ಮೊಳ ಅಗಲವಾಗಿಯೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರುತ್ತದೆ. ಯೆಹೋವನ ಆಲಯವು ಈ ಪ್ರದೇಶದ ಮಧ್ಯದಲ್ಲಿರುವುದು. 11 ಈ ಭೂಮಿಯು ಚಾದೋಕನ ಸಂತತಿಯವರಿಗಿರುವದು. ಆ ಜನರು ನನ್ನ ಪರಿಶುದ್ಧ ಯಾಜಕರಾಗಿ ಆರಿಸಲ್ಪಟ್ಟಿರುತ್ತಾರೆ. ಯಾಕೆಂದರೆ ಇಸ್ರೇಲಿನ ಇತರ ಜನರು ನನ್ನನ್ನು ಬಿಟ್ಟು ತೊಲಗಿದರೂ ಇವರು ನನಗೆ ಸೇವೆಮಾಡುವದನ್ನು ಮುಂದುವರಿಸುತ್ತಿದ್ದರು. ಲೇವಿಕುಲದ ಜನರಂತೆ ಚಾದೋಕನ ಸಂತತಿಯವರು ನನ್ನನ್ನು ಬಿಟ್ಟುಹೋಗಲಿಲ್ಲ. 12 ಪವಿತ್ರ ಪ್ರಾಂತ್ಯದ ಈ ಭಾಗವು ಆ ಯಾಜಕರಿಗಾಗಿ ಮೀಸಲಾಗಿದೆ. ಇದು ಲೇವಿಯರ ಭೂಮಿಗೆ ಪಕ್ಕದಲ್ಲಿ ಇರುತ್ತದೆ.
13 “ಯಾಜಕರ ಭೂಮಿಯ ಪಕ್ಕದಲ್ಲಿ ಲೇವಿಯರ ಪಾಲಿನ ಭೂಮಿ ಇರುವದು. ಇದರ ಉದ್ದ ಇಪ್ಪತ್ತೈದು ಸಾವಿರ ಮೊಳ; ಅಗಲ ಹತ್ತು ಸಾವಿರ ಮೊಳ. ಈ ಎರಡು ಪಾಲುಗಳ ಒಟ್ಟಳತೆ ಇಪ್ಪತ್ತೈದು ಸಾವಿರ ಮೊಳ ಉದ್ದ, ಇಪ್ಪತ್ತು ಸಾವಿರ ಮೊಳ ಅಗಲ. 14 ಈ ಪ್ರದೇಶವನ್ನು ಲೇವಿಯರು ಮಾರಕೂಡದು, ಬದಲಾಯಿಸಕೂಡದು ಮತ್ತು ವಿಭಜಿಸಕೂಡದು. ಈ ಪ್ರದೇಶವು ಯೆಹೋವನಿಗೆ ಮೀಸಲಾಗಿರುವುದರಿಂದ ಅದು ಬಹಳ ವಿಶೇಷವಾಗಿದೆ ಅಲ್ಲದೆ ದೇಶದ ಅತ್ಯುತ್ತಮ ಭಾಗವಾಗಿದೆ.
ನಗರದ ಆಸ್ತಿಯ ಪಾಲು
15 “ಯಾಜಕರಿಗೆ ಮತ್ತು ಲೇವಿಯರಿಗೆ ಸ್ಥಳ ಕೊಟ್ಟ ಮೇಲೆ ಇನ್ನೂ ಇಪ್ಪತ್ತೈದು ಸಾವಿರ ಮೊಳ ಉದ್ದ ಮತ್ತು ಐದು ಸಾವಿರ ಮೊಳ ಅಗಲದ ಒಂದು ತುಂಡು ಜಾಗ ಉಳಿಯುವದು. ಈ ಜಾಗವು ನಗರವನ್ನು ಕಟ್ಟುವುದಕ್ಕಾಗಿ; ಪಶುಗಳ ಹುಲ್ಲುಗಾವಲಿಗಾಗಿ ಮತ್ತು ಮನೆಗಳನ್ನು ಕಟ್ಟುವುದಕ್ಕಾಗಿ ಇರುವದು. ಸಾಮಾನ್ಯ ಜನರು ಈ ಜಾಗವನ್ನು ಉಪಯೋಗಿಸಬಹುದು. ನಗರವು ಇದರ ಮಧ್ಯದಲ್ಲಿ ಇರುವದು. 16 ನಗರದ ಅಳತೆಯು ಈ ರೀತಿಯಾಗಿ ಇರುವದು; ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ; ದಕ್ಷಿಣದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ, ಪೂರ್ವದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಮತ್ತು ಪಶ್ಚಿಮ ದಿಕ್ಕಿನ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಇರುವದು. 17 ಪಶುಗಳನ್ನು ಮೇಯಿಸಲು ಪಟ್ಟಣದ ಸುತ್ತಲೂ ಹುಲ್ಲುಗಾವಲಿರುವದು. ಈ ಹುಲ್ಲುಗಾವಲಿನ ಅಗಲವು ಪಟ್ಟಣದ ಸುತ್ತಲೂ ಇನ್ನೂರ ಐವತ್ತು ಮೊಳವಿರುತ್ತದೆ. 18 ವಿಶೇಷವಾದ ಪ್ರದೇಶದಲ್ಲಿ ಉಳಿದ ಸ್ಥಳದ ಪೂರ್ವಕ್ಕೆ ಹತ್ತು ಸಾವಿರ ಮೊಳ ಮತ್ತು ಪಶ್ಚಿಮಕ್ಕೆ ಹತ್ತು ಸಾವಿರ ಮೊಳ. ಈ ಸ್ಥಳವು ಭೂಪ್ರದೇಶದ ಪವಿತ್ರ ಭಾಗದ ಪಕ್ಕದಲ್ಲಿರುತ್ತದೆ. ನಗರದ ಕೆಲಸಗಾರರಿಗೆ ಬೆಳೆಗಳನ್ನು ಬೆಳೆಯಿಸುವುದಕ್ಕಾಗಿ ಈ ಸ್ಥಳವಿರುತ್ತದೆ. 19 ನಗರದ ಕೆಲಸಗಾರರು ಈ ಜಾಗವನ್ನು ಉತ್ತು ಬೆಳೆ ಬೆಳೆಸುವರು. ಇವರು ಇಸ್ರೇಲರ ಎಲ್ಲಾ ಗೋತ್ರಕ್ಕೆ ಸೇರಿದವರಾಗಿರುತ್ತಾರೆ.
20 “ವಿಶೇಷವಾದ ಈ ಭೂಪ್ರದೇಶವು ಚೌಕವಾಗಿರುವದು. ಇದರ ಉದ್ದ ಮತ್ತು ಇಪ್ಪತ್ತೈದು ಸಾವಿರ ಮೊಳ ಅಗಲ ಇಪ್ಪತ್ತೈದು ಸಾವಿರ ಮೊಳ. ಈ ಪ್ರದೇಶವನ್ನು ನೀನು ಅದರ ವಿಶೇಷವಾದ ಕಾರ್ಯಗಳಿಗಾಗಿ ಮೀಸಲಾಗಿಡಬೇಕು. ಅದರ ಒಂದು ಭಾಗವು ಯಾಜಕರಿಗಾಗಿರುತ್ತದೆ. ಇನ್ನೊಂದು ಭಾಗವು ಲೇವಿಯರಿಗಾಗಿರುತ್ತದೆ; ಮತ್ತೊಂದು ಭಾಗವು ಪಟ್ಟಣಕ್ಕಾಗಿರುತ್ತದೆ.
21-22 “ಈ ವಿಶೇಷ ಭೂಪ್ರದೇಶದ ಒಂದು ಭಾಗವು ದೇಶಾಧಿಪತಿಗೆ ಸೇರಿದೆ. ಈ ಭೂಪ್ರದೇಶವು ಚೌಕವಾಗಿದೆ. ಇದರ ಉದ್ದ 25,000 ಮೊಳ. ಇದರ ಅಗಲ 25,000 ಮೊಳ. ಈ ವಿಶೇಷ ಪ್ರದೇಶದಲ್ಲಿ ಒಂದು ಭಾಗವು ಯಾಜಕರಿಗೂ ಒಂದು ಭಾಗವು ಲೇವಿಯರಿಗೂ ಒಂದು ಭಾಗವು ದೇವಾಲಯಕ್ಕೂ ಸೇರಿವೆ. ಈ ವಿಶೇಷ ಪ್ರದೇಶದ ಕೇಂದ್ರದಲ್ಲಿ ದೇವಾಲಯವಿರುತ್ತದೆ. ಉಳಿದ ಭಾಗವೆಲ್ಲಾ ದೇಶಾಧಿಪತಿಗೆ ಸೇರಿದೆ. ಬೆನ್ಯಾಮೀನನ ಭಾಗಕ್ಕೂ ಯೆಹೂದದ ಭಾಗಕ್ಕೂ ನಡುವೆ ಇರುವ ಭೂಮಿಯು ಅಧಿಪತಿಗೆ ಸೇರಿದೆ.
23-27 “ಈ ವಿಶೇಷ ಜಾಗದ ದಕ್ಷಿಣದ ಸ್ಥಳವು ಜೋರ್ಡನ್ ಹೊಳೆಯ ಪೂರ್ವದಲ್ಲಿ ವಾಸಿಸಿದ್ದ ಇಸ್ರೇಲರ ಕುಲದವರಿಗಾಗಿ. ಈ ಗೋತ್ರದ ಪ್ರತಿ ಒಂದೊಂದು ಕುಲದವರಿಗೆ ಪೂರ್ವದ ಮೇರೆಯಿಂದ ಹಿಡಿದು ಭೂಮಧ್ಯ ಸಮುದ್ರದವರೆಗಿನ ದೇಶದ ಭಾಗದಲ್ಲಿ ಒಂದು ತುಂಡು ಅವರಿಗೆ ದೊರೆಯುವದು. ಉತ್ತರದಿಂದ ದಕ್ಷಿಣದ ತನಕ ಇಲ್ಲಿ ಜಾಗ ದೊರೆಯುವ ಕುಲದವರು ಯಾರೆಂದರೆ, ಬೆನ್ಯಾಮೀನ್, ಸಿಮೆಯೋನ್, ಇಸ್ಸಾಕಾರ್, ಜೆಬೂಲೂನ್ ಮತ್ತು ಗಾದ್ ವಂಶದವರು.
28 “ದೇವರ ಪ್ರಾಂತ್ಯದ ದಕ್ಷಿಣದ ಮೇರೆಯು ತಾಮಾರಿನಿಂದ ಪ್ರಾರಂಭವಾಗಿ ಮೆರೀಬೋತ್‌ಕಾದೇಶ್ ಎಂಬ ಮರುಭೂಮಿಯ ನೀರಿನಾಶ್ರಯಕ್ಕೆ ಹೋಗುತ್ತದೆ. ಅನಂತರ ಈಜಿಪ್ಟಿನ ನದಿಯ ಅಂಚಿನಲ್ಲಿ ಮುಂದುವರಿದು ಭೂಮಧ್ಯ ಸಮುದ್ರಕ್ಕೆ ತಾನು ಸೇರುವ ಸ್ಥಳಕ್ಕೆ ಹೋಗುತ್ತದೆ. 29 ಈ ಪ್ರಾಂತ್ಯವನ್ನು ನೀವು ಇಸ್ರೇಲರ ಕುಲದವರಿಗೆ ವಿಭಾಗಿಸಿ ಹಂಚಬೇಕು. ಇದು ಪ್ರತೀ ಕುಲದವರಿಗೆ ದೊರಕುವ ಭೂಮಿಯ ವಿವರ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ನಗರದ ಬಾಗಿಲುಗಳು
30 “ಇವು ನಗರದ ಬಾಗಿಲುಗಳು. ಅವುಗಳಿಗೆ ಇಸ್ರೇಲರ ಕುಲದವರ ಹೆಸರು ಕೊಡಲ್ಪಟ್ಟಿದೆ.
“ನಗರದ ಉತ್ತರದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. 31 ಅದಕ್ಕೆ ಮೂರು ಬಾಗಿಲುಗಳು ಇರುವವು. ರೂಬೇನ್ ಬಾಗಿಲು, ಯೆಹೂದ ಬಾಗಿಲು ಮತ್ತು ಲೇವಿ ಬಾಗಿಲು.
32 “ನಗರದ ಪೂರ್ವದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಾಗಿರುವದು. ಈ ಮೇರೆಯಲ್ಲಿ ಮೂರು ಬಾಗಿಲುಗಳಿರುವವು. ಯೋಸೇಫ್ ಬಾಗಿಲು, ಬೆನ್ಯಾಮೀನ್ ಬಾಗಿಲು ಮತ್ತು ದಾನ್ ಬಾಗಿಲು.
33 “ನಗರದ ದಕ್ಷಿಣ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಇದಕ್ಕೆ ಮೂರು ಬಾಗಿಲುಗಳಿರುವವು. ಸಿಮೆಯೋನ್ ಬಾಗಿಲು, ಇಸ್ಸಾಕಾರ್ ಬಾಗಿಲು ಮತ್ತು ಜೆಬುಲೂನ್ ಬಾಗಿಲು.
34 “ನಗರದ ಪಶ್ಚಿಮದ ಮೇರೆಯು ನಾಲ್ಕು ಸಾವಿರದ ಐನೂರು ಮೊಳ ಉದ್ದವಿರುವದು. ಅದಕ್ಕೆ ಮೂರು ಬಾಗಿಲುಗಳು ಇರುವವು. ಗಾದ್ ಬಾಗಿಲು, ಆಶೇರ್ ಬಾಗಿಲು ಮತ್ತು ನಫ್ತಾಲಿ ಬಾಗಿಲು.
35 “ನಗರದ ಸುತ್ತಳತೆಯು ಹದಿನೆಂಟು ಸಾವಿರ ಮೊಳ. ಇಂದಿನಿಂದ ಈ ನಗರದ ಹೆಸರು ‘ಯೆಹೋವನು ಅಲ್ಲಿದ್ದಾನೆ.’”[a]
Kannada Holy Bible: Easy-to-Read Version. All rights reserved. © 1997 Bible League International