Beginning
ತಾನು ದೇವರಂತೆ ಎಂದು ತೂರ್ ನೆನಸಿತು
28 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ತೂರಿನ ರಾಜನಿಗೆ ಹೀಗೆ ಹೇಳು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ:
“‘ನೀನು ಬಹಳ ಹೆಮ್ಮೆಯುಳ್ಳವನು.
“ನಾನು ದೇವರು ಎಂದು ಹೇಳುವೆ.
ಸಾಗರದ ಮಧ್ಯದಲ್ಲಿ ದೇವರುಗಳ ಸಿಂಹಾಸನದಲ್ಲಿ
ನಾನು ಕೂತಿರುತ್ತೇನೆ ಎಂದು ಅನ್ನುವೆ.”
“‘ಆದರೆ ನೀನು ಮನುಷ್ಯನು, ದೇವರಲ್ಲ.
ನೀನು ದೇವರೆಂದು ನೀನೇ ನೆನಸಿಕೊಳ್ಳುವೆ.
3 ನೀನು ದಾನಿಯೇಲನಿಗಿಂತ ಜಾಣನು ಎಂಬುದಾಗಿ ಭಾವಿಸುತ್ತಿ.
ಎಲ್ಲಾ ರಹಸ್ಯಗಳು ನನಗೆ ಗೊತ್ತು ಎಂದು ನೀನು ನೆನಸುವೆ.
4 ನಿನ್ನ ಜ್ಞಾನ ಮತ್ತು ತಿಳುವಳಿಕೆಯಿಂದ ನೀನು ಐಶ್ವರ್ಯವನ್ನು ಕೂಡಿಹಾಕಿದ್ದೀ.
ನಿನ್ನ ಖಜಾನೆಯಲ್ಲಿ ಬೆಳ್ಳಿಬಂಗಾರವನ್ನು ಶೇಖರಿಸಿದ್ದೀ.
5 ನಿನ್ನ ವ್ಯಾಪಾರದ ಜಾಣತನದಿಂದ ನಿನ್ನ ಐಶ್ವರ್ಯವು ಬೆಳೆಯುವಂತೆ ಮಾಡಿದ್ದೀ.
ಆ ಐಶ್ವರ್ಯದ ಕಾರಣದಿಂದ ನೀನು ಹೆಮ್ಮೆಯಿಂದ ತುಂಬಿರುತ್ತೀ.
6 “‘ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
ತೂರ್, ನೀನು ದೇವರೆಂದು ನೆನಸಿಕೊಂಡಿಯಲ್ಲಾ?
7 ನಿನಗೆ ವಿರುದ್ಧವಾಗಿ ಯುದ್ಧ ಮಾಡಲು ಅಪರಿಚಿತರನ್ನು ಕರೆತರುವೆನು.
ಅವರು ಎಲ್ಲಾ ಜನಾಂಗಗಳವರಿಗಿಂತ ಕ್ರೂರರು,
ಅವರು ತಮ್ಮ ಖಡ್ಗವನ್ನು ಎಳೆದು
ನಿನ್ನ ಜ್ಞಾನದಿಂದ ಕೊಂಡುಕೊಂಡಿದ್ದ ಎಲ್ಲಾ ಬೆಲೆಬಾಳುವ
ಅಪೂರ್ವ ವಸ್ತುಗಳನ್ನು ನಾಶಮಾಡುವರು.
8 ನಿನ್ನ ಘನತೆಯನ್ನು ಕೆಡಿಸಿಬಿಡುವರು. ಸಮಾಧಿಗೆ ನಿನ್ನನ್ನು ತರುವರು.
ಸಮುದ್ರದಲ್ಲಿ ಸತ್ತ ನಾವಿಕನ ಸ್ಥಿತಿಯು ನಿನ್ನದಾಗುವದು.
9 ಆ ಮನುಷ್ಯನು ನಿನ್ನನ್ನು ಕೊಂದುಹಾಕುವನು.
ಆಗಲೂ ನೀನು “ನಾನು ದೇವರು” ಎಂದು ಹೇಳುವಿಯಾ?
ಇಲ್ಲ. ಅವನು ನಿನ್ನನ್ನು ತನ್ನ ಅಧಿಕಾರದಲ್ಲಿರಿಸುವನು.
ಆಗ ನೀನು “ಕೇವಲ ಮನುಷ್ಯನೇ” ಎಂದು ತಿಳಿಯುವಿ.
10 ಪರದೇಶಸ್ಥರು ನಿನ್ನನ್ನು ಪರದೇಶಿಯಂತೆ ನೋಡುವರು ಮತ್ತು ಕೊಲೆ ಮಾಡುವರು.
ನಾನು ಆ ರೀತಿಯಾಗಿ ಮಾಡಬೇಕೆಂದು ಆಜ್ಞಾಪಿಸುವದರಿಂದ ನಿನಗೆ ಹಾಗೆ ಆಗುವದು.’”
ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ.
11 ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 12 “ನರಪುತ್ರನೇ, ತೂರ್ ದೇಶದ ರಾಜನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ:
“‘ನೀನೊಬ್ಬ ಆದರ್ಶ ಮನುಷ್ಯನಾಗಿದ್ದೆ.
ಸರ್ವಾಂಗಸುಂದರನೂ ಜ್ಞಾನದಿಂದ ತುಂಬಿದವನೂ ಆಗಿದ್ದೆ.
13 ದೇವರ ಉದ್ಯಾನವನವಾಗಿದ್ದ ಏದೆನಿನಲ್ಲಿ ನೀನಿದ್ದೆ.
ನಿನ್ನ ಬಳಿಯಲ್ಲಿ ಬಂಗಾರದ ಚೌಕಟ್ಟಿನಲ್ಲಿ ಕುಳ್ಳಿರಿಸಿದ
ವಜ್ರ, ವೈಢೂರ್ಯ, ನವರತ್ನಗಳ ಆಭರಣಗಳಿದ್ದವು.
ನೀನು ಸೃಷ್ಟಿಸಲ್ಪಟ್ಟ ದಿನದಲ್ಲಿ ಈ ಸೌಂದರ್ಯವು ನಿನಗೆ ಕೊಡಲ್ಪಟ್ಟಿತು.
ದೇವರು ನಿನ್ನನ್ನು ಬಲಾಢ್ಯನನ್ನಾಗಿ ಮಾಡಿದನು.
14 ನೀನು ಆರಿಸಲ್ಪಟ್ಟ ಕೆರೂಬಿಯರಲ್ಲಿ ಒಬ್ಬನಾಗಿದ್ದೆ.
ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿದ್ದವು.
ನಾನು ನಿನ್ನನ್ನು ದೇವರ ಪವಿತ್ರ ಪರ್ವತದಲ್ಲಿಟ್ಟೆನು.
ನೀನು ಬೆಂಕಿಯಂತೆ ಹೊಳೆಯುವ ರತ್ನಗಳ ಮೇಲೆ ನಡೆದಾಡಿದೆ.
15 ನಾನು ನಿನ್ನನ್ನು ಸೃಷ್ಟಿಸಿದಾಗ ನೀನು ಸದ್ಗುಣಿಯಾಗಿ ನಿರ್ದೋಷಿಯಾಗಿದ್ದಿ.
ಆದರೆ ನೀನು ದುಷ್ಟನಾಗುತ್ತಾ ಬಂದೆ.
16 ನಿನ್ನ ವ್ಯಾಪಾರವು ನಿನಗೆ ಐಶ್ವರ್ಯವನ್ನು ತಂದಿತು.
ಆದರೆ ಅದರೊಂದಿಗೆ ನಾನಾ ದುಷ್ಟತ್ವಗಳು ನಿನ್ನೊಳಗೆ ಬಂದು ನೀನು ಪಾಪ ಮಾಡಿದೆ.
ಆಗ ನಾನು ನಿನ್ನನ್ನು ಅಶುದ್ಧನೆಂದು ಪರಿಗಣಿಸಿ
ನಿನ್ನನ್ನು ದೇವರ ಪರ್ವತದಿಂದ ದಬ್ಬಿಬಿಟ್ಟೆನು.
ನೀನು ನನ್ನ ಕೆರೂಬಿಯರಲ್ಲಿ ವಿಶೇಷವಾದವನಾಗಿದ್ದೆ.
ನಿನ್ನ ರೆಕ್ಕೆಗಳು ನನ್ನ ಸಿಂಹಾಸನದ ಮೇಲೆ ಚಾಚಿರುತ್ತಿದ್ದವು.
ಆದರೆ ಬೆಂಕಿಯಂತೆ ಹೊಳೆಯುವ ರತ್ನಾಭರಣಗಳನ್ನೆಲ್ಲಾ
ತೆಗೆದಿಡಲು ನಿನ್ನನ್ನು ಬಲವಂತಪಡಿಸಿದೆ.
17 ನಿನ್ನ ಸೌಂದರ್ಯವು ನಿನಗೆ ಹೆಮ್ಮೆ ಏರುವಂತೆ ಮಾಡಿತು.
ನಿನ್ನ ಘನತೆಯು ನಿನ್ನ ಜ್ಞಾನವನ್ನು ಕೆಡಿಸಿತು.
ಆದ್ದರಿಂದ ನಿನ್ನನ್ನು ನೆಲಕ್ಕೆ ದಬ್ಬಿದೆ.
ಈಗ ಬೇರೆ ರಾಜರುಗಳು ನಿನ್ನನ್ನೆ ಎವೆಯಿಕ್ಕದೆ ನೋಡುತ್ತಾರೆ.
18 ನೀನು ಅನೇಕ ತಪ್ಪುಗಳನ್ನು ಮಾಡಿದೆ.
ನೀನು ಮೋಸಗಾರನಾದ ವ್ಯಾಪಾರಿ.
ಇದರಿಂದಾಗಿ ನೀನು ಪವಿತ್ರಸ್ಥಳವನ್ನು ಹೊಲೆ ಮಾಡಿರುವಿ.
ಆದ್ದರಿಂದ ನಿನ್ನೊಳಗೆ ಬೆಂಕಿಯನ್ನು ಬರಮಾಡಿ
ಅದು ನಿನ್ನನ್ನು ದಹಿಸುವಂತೆ ಮಾಡಿದೆನು.
ನೀನು ಸುಟ್ಟ ಬೂದಿಯಾದೆ.
ಈಗ ಎಲ್ಲರೂ ನಿನ್ನ ಲಜ್ಜಾತನವನ್ನು ನೋಡುವರು.
19 “‘ಬೇರೆ ಜನಾಂಗಗಳ ಜನರು
ನಿನಗೆ ಆದದ್ದನ್ನು ನೋಡಿ ಬೆಚ್ಚಿಬೆರಗಾದರು.
ನಿನಗಾದ ದುಸ್ಥಿತಿಯು ಜನರನ್ನು ಭಯಪಡಿಸಿತು.
ನಿನ್ನ ಅಂತ್ಯವಾಯಿತು!’”
ಚೀದೋನಿನ ವಿರುದ್ಧ ಸಂದೇಶ
20 ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೀಗೆ ಹೇಳಿದನು: 21 “ನರಪುತ್ರನೇ, ಚೀದೋನಿನ ಕಡೆಗೆ ನೋಡಿ ನನ್ನ ಪರವಾಗಿ ನೀನೇ ಅದರ ವಿರುದ್ಧವಾಗಿ ಮಾತನಾಡು. 22 ನನ್ನ ಒಡೆಯನಾದ ಯೆಹೋವನು ಈ ಮಾತುಗಳನ್ನು ಹೇಳಿದನೆಂದು ಅವನಿಗೆ ತಿಳಿಸು:
“‘ಚೀದೋನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನಿನ್ನ ಜನರು ನನ್ನನ್ನು ಗೌರವಿಸಲು ಕಲಿಯುವರು.
ನಾನು ಚೀದೋನನ್ನು ಶಿಕ್ಷಿಸಿದಾಗ
ನಾನೇ ಯೆಹೋವನೆಂದು ಜನರಿಗೆ ಗೊತ್ತಾಗುವದು.
ನಾನು ಪವಿತ್ರನು ಎಂದು ಅವರು ತಿಳಿದು ಆ ರೀತಿಯಾಗಿ ಅವರು ನನ್ನೊಂದಿಗೆ ವರ್ತಿಸುವರು.
23 ಚೀದೋನಿಗೆ ನಾನು ರೋಗಮರಣಗಳನ್ನು ಕಳುಹಿಸುವೆನು.
ನಗರದೊಳಗೆ ವಾಸಿಸುವ ಅನೇಕ ಮಂದಿ ಸಾಯುವರು.
ನಗರದ ಹೊರಗೆ ಖಡ್ಗವು ಅನೇಕರನ್ನು ಕೊಲ್ಲುವದು,
ಆಗ ಅವರು ನಾನು ಯೆಹೋವನೆಂದು ತಿಳಿಯುವರು.’”
ರಾಜ್ಯಗಳು ಇಸ್ರೇಲಿಗೆ ಹಾಸ್ಯ ಮಾಡುವದನ್ನು ನಿಲ್ಲಿಸುವರು
24 “‘ಇಸ್ರೇಲಿನ ಸುತ್ತಲಿರುವ ರಾಜ್ಯಗಳು ಅದನ್ನು ಹಗೆ ಮಾಡಿದರು. ಆ ರಾಜ್ಯಗಳಿಗೆ ಬಹು ದೊಡ್ಡ ಕಂಟಕವು ಬಂದೊದಗುವದು. ಆಗ ಹರಿತವಾದ ಮುಳ್ಳಾಗಲಿ ಮುಳ್ಳಿನ ಪೊದೆಗಳಾಗಲಿ ಇಸ್ರೇಲಿನ ಜನರನ್ನು ಬಾಸಿ ಮಾಡಲು ಇರುವದಿಲ್ಲ. ಆಗ ನಾನು ಅವರ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.’”
25 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದನು: “ಬೇರೆ ದೇಶಗಳಿಗೆ ನಾನು ಇಸ್ರೇಲರನ್ನು ಚದರಿಸಿದೆನು. ಆದರೆ ತಿರುಗಿ ಇಸ್ರೇಲರನ್ನೆಲ್ಲಾ ಒಟ್ಟುಗೂಡಿಸುವೆನು. ಆಗ ಆ ದೇಶದವರು ನಾನು ಪವಿತ್ರವಾದ ದೇವರೆಂದು ತಿಳಿದು ಆ ರೀತಿಯಾಗಿ ನನ್ನನ್ನು ನೋಡುವರು. ಆಗ ಇಸ್ರೇಲರು ತಮ್ಮ ದೇಶದಲ್ಲಿ ವಾಸಮಾಡುವರು. ಆ ದೇಶವನ್ನು ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟಿದ್ದೆನು. 26 ಆ ದೇಶದಲ್ಲಿ ಅವರು ಸುರಕ್ಷಿತವಾಗಿ ವಾಸಿಸುವರು; ಮನೆಗಳನ್ನು ಕಟ್ಟಿ ದ್ರಾಕ್ಷಿತೋಟಗಳನ್ನು ಮಾಡುವರು. ಅವರನ್ನು ದ್ವೇಷಿಸಿದ ರಾಜ್ಯಗಳನ್ನು ದಂಡಿಸುವೆನು. ಆಗ ಇಸ್ರೇಲ್ ಜನರು ಸುರಕ್ಷಿತವಾಗಿ ಜೀವಿಸುವರು; ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
ಈಜಿಪ್ಟಿನ ವಿರುದ್ಧ ಸಂದೇಶ
29 ಸೆರೆ ಒಯ್ಯಲ್ಪಟ್ಟ ಹತ್ತನೇ ವರ್ಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿವಸದಲ್ಲಿ ನನ್ನ ಒಡೆಯನಾದ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 2 “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನ ಕಡೆಗೆ ಮುಖಮಾಡು. ಅವನಿಗೂ ಈಜಿಪ್ಟಿಗೂ ವಿರುದ್ಧವಾಗಿ ನನ್ನ ಪರವಾಗಿ ಮಾತನಾಡು. 3 ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು,
“‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ,
“ಇದು ನಾನು ನಿರ್ಮಿಸಿದ ಹೊಳೆ”
ಎಂದು ನೀನು ಹೇಳಿಕೊಳ್ಳುವೆ.
4 “‘ಆದರೆ ನಾನು ನಿನ್ನ ದವಡೆಗಳಿಗೆ ಕೊಂಡಿಗಳನ್ನು ಸಿಕ್ಕಿಸುವೆನು.
ನೈಲ್ ನದಿಯ ಮೀನುಗಳು ನಿನ್ನ ಪೊರೆಗಳಿಗೆ ಸಿಲುಕಿಕೊಳ್ಳುವವು.
5 ನಾನು ನಿನ್ನನ್ನೂ ನಿನ್ನ ಮೀನುಗಳನ್ನೂ
ನೀರಿನೊಳಗಿಂದ ಹೊರಕ್ಕೆತ್ತಿ ಒಣನೆಲದ ಮೇಲೆ ಹಾಕುವೆನು.
ನೀನು ನೆಲದ ಮೇಲೆ ಬೀಳುವೆ.
ಯಾರೂ ನಿನ್ನನ್ನು ಮೇಲಕ್ಕೆ ಎತ್ತುವುದೂ ಇಲ್ಲ ಹೂಣಿಡುವುದೂ ಇಲ್ಲ.
ನಾನು ನಿನ್ನನ್ನು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಕೊಡುವೆನು.
ಅವರಿಗೆ ನೀನು ಆಹಾರವಾಗುವೆ.
6 ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ
ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು.
“‘ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ?
ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
7 ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು.
ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು.
ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”
8 ಆದ್ದರಿಂದ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ,
“ನಾನು ನಿನಗೆ ವಿರುದ್ಧವಾಗಿ ಖಡ್ಗವನ್ನು ತರುವೆನು.
ನಾನು ನಿನ್ನ ಜನರನ್ನೂ ಪ್ರಾಣಿಗಳನ್ನೂ ಸಂಪೂರ್ಣವಾಗಿ ಸಂಹರಿಸುವೆನು.
9 ಈಜಿಪ್ಟ್ ನಿಶ್ಯೇಷವಾಗಿ ನಾಶವಾಗುವದು.
ಆಗ ಅವರು ನಾನೇ ದೇವರಾದ ಯೆಹೋವನು ಎಂದು ತಿಳಿದುಕೊಳ್ಳುವರು.”
ದೇವರು ಹೀಗೆಂದನು, “ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ. ಯಾಕೆಂದರೆ ನೀನು, ‘ಇದು ನನ್ನ ನದಿ, ಇದನ್ನು ನಾನು ಮಾಡಿದೆನು’ ಎಂದು ಹೇಳಿದೆ. 10 ಆದ್ದರಿಂದ ನಾನು ನಿನಗೆ ವಿರೋಧವಾಗಿರುತ್ತೇನೆ. ನೈಲ್ ನದಿಯ ಅನೇಕ ಶಾಖೆಗಳಿಗೂ ನಾನು ವಿರೋಧವಾಗಿದ್ದೇನೆ. ಈಜಿಪ್ಟನ್ನು ನಾನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಮಿಗ್ದೋಲ್‌ನಿಂದ ಅಸ್ವಾನ್ ತನಕ ಇರುವ ಪಟ್ಟಣಗಳು ಬರಿದಾಗುವವು. ಇಥಿಯೋಪ್ಯದ ಮೇರೆಯ ತನಕವೂ ಬರಿದಾಗುವದು. 11 ಯಾವನೂ, ಯಾವ ಪ್ರಾಣಿಯೂ ಈಜಿಪ್ಟ್ ದೇಶವನ್ನು ದಾಟುವುದಿಲ್ಲ. ನಲವತ್ತು ವರ್ಷದ ತನಕ ಯಾರೂ ಅಲ್ಲಿ ನೆಲೆಸುವದಿಲ್ಲ. 12 ನಾನು ಈಜಿಪ್ಟನ್ನು ನಾಶಮಾಡುತ್ತೇನೆ. ಅದರ ನಗರಗಳು ನಲವತ್ತು ವರ್ಷಗಳ ತನಕ ನಿರ್ಜನವಾಗಿರುವದು. ಈಜಿಪ್ಟ್ ಜನರನ್ನು ಬೇರೆ ದೇಶಗಳಿಗೆ ಅಟ್ಟಿಬಿಡುವೆನು. ಪರದೇಶಗಳಲ್ಲಿ ಅವರು ಪ್ರವಾಸಿಗಳಂತಿರುವರು.”
13 ನನ್ನ ಒಡೆಯನಾದ ಯೆಹೋವನು ಇದನ್ನು ಹೇಳುತ್ತಾನೆ: “ಈಜಿಪ್ಟಿನ ಜನರನ್ನು ನಾನು ಅನೇಕ ದೇಶಗಳಲ್ಲಿ ಚದರಿಸಿಬಿಡುವೆನು. ನಲವತ್ತು ವರ್ಷದ ಕೊನೆಯಲ್ಲಿ ಅವರನ್ನು ತಿರಿಗಿ ಒಟ್ಟುಗೂಡಿಸುವೆನು. 14 ಸೆರೆಹಿಡಿಯಲ್ಪಟ್ಟ ಈಜಿಪ್ಟರನ್ನು ಪತ್ರೋಸ್ ದೇಶಕ್ಕೆ ಬರಮಾಡುವೆನು. ಅವರ ಜನ್ಮಸ್ಥಳಕ್ಕೆ ಅವರನ್ನು ತಿರುಗಿ ಬರಮಾಡುವೆನು. ಆದರೆ ಅವರ ರಾಜ್ಯಕ್ಕೆ ಮಹತ್ವವಿರುವುದಿಲ್ಲ. 15 ಅದು ಯಾವ ಮಹತ್ವವೂ ಇಲ್ಲದ ರಾಜ್ಯವಾಗಿರುವುದು. ಬೇರೆ ರಾಜ್ಯಗಳಿಗಿಂತ ಅದು ಎಂದಿಗೂ ಉನ್ನತಸ್ಥಾನದಲ್ಲಿರದು. ಅದು ಅಷ್ಟು ಚಿಕ್ಕ ರಾಜ್ಯವಾಗುವುದರಿಂದ ಬೇರೆ ದೇಶಗಳ ಮೇಲೆ ಅಧಿಕಾರ ನಡೆಸದು. 16 ಇಸ್ರೇಲರು ಅವರ ಮೇಲೆ ಇನ್ನು ಎಂದಿಗೂ ಭರವಸವಿಡುವುದಿಲ್ಲ. ಇಸ್ರೇಲರು ಸಹಾಯಕ್ಕಾಗಿ ದೇವರ ಬಳಿಗೆ ಹೋಗದೆ ಈಜಿಪ್ಟಿನವರ ಮೇಲೆ ಭರವಸವಿಟ್ಟಿದ್ದ ಪಾಪವನ್ನು ಅರಿತುಕೊಳ್ಳುವರು. ಆಗ ಅವರು ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.”
ಬಾಬಿಲೋನ್ ಈಜಿಪ್ಟನ್ನು ಸೆರೆಹಿಡಿಯುವದು
17 ಯೆಹೋಯಾಖೀನನು ಸೆರೆಹಿಡಿಯಲ್ಪಟ್ಟ ಇಪ್ಪತ್ತೇಳನೇ ವರ್ಷದ, ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಸೈನ್ಯವು ತೂರ್ ದೇಶದವರೊಂದಿಗೆ ಉಗ್ರವಾಗಿ ಹೋರಾಡುವಂತೆ ನಡೆಸಿದನು. ಪ್ರತಿ ಸೈನಿಕನ ತಲೆಯನ್ನು ಬೋಳಿಸಿದರು. ಪ್ರತಿಯೊಬ್ಬನ ಭುಜಗಳು ಭಾರ ಹೊತ್ತುಹೊತ್ತು ಸವೆದುಹೋಗಿದ್ದವು. ನೆಬೂಕದ್ನೆಚ್ಚರ್ ಮತ್ತು ಅವನ ಸೈನ್ಯವು ತೂರ್ ದೇಶವನ್ನು ಸೋಲಿಸಲು ಬಹಳವಾಗಿ ಪ್ರಯಾಸಪಡಬೇಕಾಗಿ ಬಂತು. ಆದರೆ ಅವರ ಪ್ರಯಾಸದ ಪ್ರತಿಫಲವಾಗಿ ಏನೂ ದೊರಕಲಿಲ್ಲ.” 19 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ರಾಜನಾದ ನೆಬೂಕದ್ನೆಚ್ಚರನಿಗೆ ನಾನು ಈಜಿಪ್ಟ್ ದೇಶವನ್ನು ಕೊಡುವೆನು. ನೆಬೂಕದ್ನೆಚ್ಚರನು ಈಜಿಪ್ಟಿನವರನ್ನು ಸೆರೆಹಿಡಿದು ಕೊಂಡೊಯ್ವನು. ಈಜಿಪ್ಟಿನ ಬೆಲೆಬಾಳುವ ವಸ್ತುಗಳನ್ನೆಲ್ಲಾ ದೋಚುವನು. ಇದು ಅವನ ಸೈನಿಕರ ಸಂಬಳವಾಗುವುದು. 20 ನೆಬೂಕದ್ನೆಚ್ಚರನು ಪ್ರಯಾಸದ ಕೆಲಸ ಮಾಡಿದ್ದರಿಂದ ನಾನು ಅವನಿಗೆ ಪ್ರತಿಫಲವಾಗಿ ಈಜಿಪ್ಟ್ ದೇಶವನ್ನು ಕೊಟ್ಟೆನು. ಯಾಕೆಂದರೆ ಅವರು ನನಗೋಸ್ಕರ ಪ್ರಯಾಸಪಟ್ಟರು.” ಇದು ಒಡೆಯನಾದ ಯೆಹೋವನ ನುಡಿ.
21 “ಆ ದಿವಸದಲ್ಲಿ ಇಸ್ರೇಲ್ ವಂಶವನ್ನು ನಾನು ಬಲಪಡಿಸುವೆನು. ಯೆಹೆಜ್ಕೇಲನೇ, ನೀನು ಅವರೊಂದಿಗೆ ಮಾತನಾಡುವಂತೆ ಮಾಡುವೆನು. ಆಗ ಅವರು ನಾನೇ ಯೆಹೋವನೆಂದು ತಿಳಿದುಕೊಳ್ಳುವರು.”
ಬಾಬಿಲೋನಿನ ಸೈನ್ಯವು ಈಜಿಪ್ಟಿನ ಮೇಲೆ ಯುದ್ಧಮಾಡುವದು
30 ತಿರುಗಿ ಯೆಹೋವನ ಸಂದೇಶ ನನಗೆ ಬಂತು, ಆತನು ಹೇಳಿದ್ದೇನೆಂದರೆ: 2 “ನರಪುತ್ರನೇ, ನನ್ನ ಪರವಾಗಿ ಮಾತನಾಡು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ’ ಎಂದು ಹೇಳು.
“‘ಅಳುತ್ತಾ,
“ಭಯಂಕರ ದಿವಸಗಳು ಬರುತ್ತವೆ” ಎಂದು ಹೇಳು.
3 ಆ ದಿನವು ಹತ್ತಿರ ಬಂತು!
ಹೌದು, ದೇವರು ನ್ಯಾಯತೀರಿಸುವ ದಿನ ಹತ್ತಿರ ಬಂತು.
ಅದು ಮೋಡ ಕವಿದ ದಿನವಾಗಿರುವುದು.
ಅದು ಜನಾಂಗಗಳಿಗೆ ನ್ಯಾಯತೀರಿಸುವ ಸಮಯ.
4 ಈಜಿಪ್ಟಿಗೆ ವಿರುದ್ಧವಾಗಿ ಒಂದು ಖಡ್ಗವು ಬರುವದು!
ಈಜಿಪ್ಟ್ ಬೀಳುವಾಗ ಇಥಿಯೋಪ್ಯವು ಭಯದಿಂದ ನಡುಗುವದು.
ಬಾಬಿಲೋನಿನ ಸೈನ್ಯವು ಈಜಿಪ್ಟಿನವರನ್ನು ಸೆರೆ ಹಿಡಿದುಕೊಂಡು ಹೋಗುವದು.
ಈಜಿಪ್ಟಿನ ಅಡಿಪಾಯಗಳು ಒಡೆದುಹೋಗುವವು.
5 “‘ಅನೇಕ ದೇಶಗಳವರು ಈಜಿಪ್ಟಿನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಥಿಯೋಪ್ಯ, ಪೂಟ್, ಲೂದ್, ಅರೇಬಿಯ, ಲಿಬ್ಯ ಮತ್ತು ಇಸ್ರೇಲಿನ ಜನರು[a] ಇವರೆಲ್ಲರೂ ನಾಶವಾಗುವರು.
6 “‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು:
ಈಜಿಪ್ಟಿಗೆ ಸಹಾಯ ಮಾಡುವವನು ಬೀಳುವನು.
ಅವಳು ಹೆಮ್ಮೆಪಡುವ ಸಾಮರ್ಥ್ಯ ಅಂತ್ಯವಾಗುವದು.
ಈಜಿಪ್ಟಿನಲ್ಲಿರುವ ಜನರು ರಣರಂಗದಲ್ಲಿ ಮಿಗ್ದೋಲ್‌ನಿಂದ ಹಿಡಿದು ಅಸ್ವಾನ್ ತನಕ ಸಾಯುವರು.
ಇದು ನನ್ನ ಒಡೆಯನಾದ ಯೆಹೋವನ ನುಡಿ.
7 ನಾಶಮಾಡಲ್ಪಟ್ಟ ಬೇರೆ ದೇಶಗಳನ್ನು ಈಜಿಪ್ಟ್ ಸೇರಿಕೊಳ್ಳುವುದು.
ಈಜಿಪ್ಟ್ ಬಂಜರು ದೇಶಗಳಲ್ಲೊಂದಾಗುವುದು.
ಬಾಬಿಲೋನಿನ ಸೈನ್ಯವು
ಈಜಿಪ್ಟಿನ ಮೇಲೆ ಯುದ್ಧಮಾಡುವದು
8 ಈಜಿಪ್ಟಿನಲ್ಲಿ ನಾನು ಹೊತ್ತಿಸಿದ ಬೆಂಕಿಯು
ಅದರ ಸಹಾಯಕರನ್ನು ದಹಿಸುವದು.
ಆಗ ನಾನು ಯೆಹೋವನೆಂದು ಅವರು ತಿಳಿಯುವರು.
9 “‘ಆ ಸಮಯದಲ್ಲಿ, ನಾನು ಸಂದೇಶವಾಹಕರನ್ನು ಕಳುಹಿಸುವೆನು. ಅವರು ಇಥಿಯೋಪ್ಯಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿ ಕೆಟ್ಟ ಸುದ್ದಿಯನ್ನು ಒಯ್ಯುವರು. ಇಥಿಯೋಪ್ಯ ಈಗ ಸುರಕ್ಷಿತವಾಗಿರುವುದು. ಆದರೆ ಈಜಿಪ್ಟ್ ಶಿಕ್ಷಿಸಲ್ಪಟ್ಟಾಗ ಇಥಿಯೋಪ್ಯದ ಜನರು ಭಯದಿಂದ ನಡುಗುವರು. ಆ ಸಮಯವು ಬರುವದು.’”
10 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ;
“ಈಜಿಪ್ಟಿನ ಜನರನ್ನು ನಾಶಮಾಡುವುದಕ್ಕಾಗಿ
ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಉಪಯೋಗಿಸುವೆನು.
11 ಎಲ್ಲಾ ಜನಾಂಗಗಳಿಗಿಂತ ನೆಬೂಕದ್ನೆಚ್ಚರನು
ಮತ್ತು ಅವನ ಸಿಪಾಯಿಗಳು ಅತ್ಯಂತ ಕ್ರೂರಿಗಳು.
ಈಜಿಪ್ಟನ್ನು ನಾಶಮಾಡಲು ಅವರನ್ನು ಕರೆಹಿಸುವೆನು.
ಅವರು ತಮ್ಮ ಖಡ್ಗಗಳನ್ನು ಒರೆಯಿಂದ ತೆಗೆದು ಈಜಿಪ್ಟಿಗೆ ವಿರುದ್ಧವಾಗಿ ಉಪಯೋಗಿಸುವರು
ಮತ್ತು ದೇಶವನ್ನು ಸತ್ತ ಹೆಣಗಳಿಂದ ತುಂಬಿಸುವರು.
12 ನೈಲ್ ನದಿಯನ್ನು ನಾನು ಒಣನೆಲವನ್ನಾಗಿ ಮಾಡುವೆನು.
ಆ ಒಣನೆಲವನ್ನು ನಾನು ಕೆಟ್ಟ ಜನರಿಗೆ ಮಾರುವೆನು.
ಆ ದೇಶವನ್ನು ಬಂಜರು ಭೂಮಿಯನ್ನಾಗಿ ಮಾಡಲು ನಾನು ಪರದೇಶಸ್ಥರನ್ನು ಉಪಯೋಗಿಸುವೆನು.
ನನ್ನ ಒಡೆಯನಾದ ಯೆಹೋವನು ಮಾತನಾಡಿದ್ದಾನೆ.”
ಈಜಿಪ್ಟಿನ ವಿಗ್ರಹಗಳು ನಾಶವಾಗುವವು
13 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ಈಜಿಪ್ಟಿನಲ್ಲಿರುವ ವಿಗ್ರಹಗಳನ್ನು ನಾನು ನಾಶಮಾಡುವೆನು.
ಮೆಂಫೀಸಿನ ವಿಗ್ರಹಗಳನ್ನು ತೆಗೆದುಬಿಡುವೆನು.
ಈಜಿಪ್ಟಿನಲ್ಲಿ ಇನ್ನು ಮುಂದೆ ರಾಜನಿರನು.
ಅವರಲ್ಲಿ ಭಯವನ್ನು ಹುಟ್ಟಿಸುವೆನು.
14 ಪತ್ರೋಸನ್ನು ನಾನು ಬರಿದಾಗಿ ಮಾಡುವೆನು.
ಸೋನಿನಲ್ಲಿ ಬೆಂಕಿಯನ್ನು ಬರಮಾಡುವೆನು.
ತೆಬೆಸವನ್ನು ನಾನು ಶಿಕ್ಷಿಸುವೆನು.
15 ಈಜಿಪ್ಟಿನ ಕೋಟೆಯಾಗಿರುವ ಸೀನ್ ಪ್ರಾಂತ್ಯದ ಮೇಲೆ ನನ್ನ ಕೋಪವನ್ನು ಸುರಿಸುವೆನು.
ತೆಬೆಸದ ಜನರನ್ನು ನಾನು ನಾಶಮಾಡುವೆನು.
16 ಈಜಿಪ್ಟಿನಲ್ಲಿ ಬೆಂಕಿಯನ್ನು ಬರಮಾಡುವೆನು.
ಸೀನ್ ನಗರವು ಭಯದಿಂದ ಕಂಗೆಡುವದು.
ಸೈನಿಕರು ತೆಬೆಸವನ್ನು ಧಾಳಿ ಮಾಡುವರು.
ತೆಬೆಸದಲ್ಲಿ ಪ್ರತಿದಿವಸವೂ ಸಂಕಟವಿರುವುದು.
17 ಒನ್ ಮತ್ತು ಪೀಬೆಸೆತಿನ ಯುವಕರು ಯುದ್ಧದಲ್ಲಿ ಹತರಾಗುವರು.
ಆ ನಗರದ ಜನರು ಹಿಡಿಯಲ್ಪಟ್ಟು ಒಯ್ಯಲ್ಪಡುವರು.
18 ನಾನು ಈಜಿಪ್ಟಿನ ನೊಗವನ್ನು ಮುರಿದಾಗ ತಹಪನೇಸ್‌ನಲ್ಲಿ ಕತ್ತಲೆಯ ದಿನವಾಗಿರುವುದು.
ಈಜಿಪ್ಟಿನ ಅಧಿಕಾರಕ್ಕೆ ಅಂತ್ಯ ಬರುವುದು.
ಈಜಿಪ್ಟಿನ ಮೇಲೆ ಮೋಡವು ಕವಿಯುವುದು.
ಅದರ ಪಟ್ಟಣಗಳ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು.
19 ನಾನು ಈಜಿಪ್ಟನ್ನು ಶಿಕ್ಷಿಸುವಾಗ
ನಾನೇ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.”
ಈಜಿಪ್ಟ್ ನಿತ್ಯಕಾಲಕ್ಕೂ ಬಲಹೀನವಾಗುವದು
20 ಸೆರೆಹಿಡಿಯಲ್ಪಟ್ಟ ಹನ್ನೊಂದನೆಯ ವರ್ಷದ ಮೊದಲನೇ ತಿಂಗಳಿನ ಏಳನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 21 “ನರಪುತ್ರನೇ, ನಾನು ಈಜಿಪ್ಟಿನ ರಾಜನಾದ ಫರೋಹನ ಕೈಯ ಬಲವನ್ನು ಮುರಿದಿದ್ದೇನೆ. ಯಾರೂ ಅವನನ್ನು ಶೂಶ್ರೂಷೆ ಮಾಡಲಾರರು. ಅದು ಗುಣವಾಗದು. ಅವನ ಕೈಗೆ ಖಡ್ಗ ಹಿಡಿದುಕೊಳ್ಳುವಷ್ಟೂ ಬಲವಿರದು.”
22 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನು ಈಜಿಪ್ಟಿನ ರಾಜನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಅವನ ಎರಡು ಕೈಗಳನ್ನೂ ಮುರಿಯುವೆನು. ಒಂದು ಕೈ ಮುರಿಯಲ್ಪಟ್ಟಿತ್ತು. ಇನ್ನೊಂದು ಸರಿಯಾಗಿದ್ದ ಕೈಯೂ ಮುರಿಯಲ್ಪಡುವದು. ಅವನ ಕೈಯಿಂದ ಖಡ್ಗವು ಬೀಳುವಂತೆ ಮಾಡುವೆನು. 23 ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. 24 ಬಾಬಿಲೋನಿನ ರಾಜನ ಕೈಗಳನ್ನು ನಾನು ಬಲಪಡಿಸುವೆನು. ನನ್ನ ಖಡ್ಗವನ್ನು ನಾನು ಅವನ ಕೈಯಲ್ಲಿಡುವೆನು. ಆದರೆ ಫರೋಹನ ಕೈಗಳನ್ನು ನಾನು ಮುರಿಯುವೆನು. ಆಗ ನೋವಿನಿಂದ ಫರೋಹನು ಕಿರುಚುವನು. ಒಬ್ಬ ಸಾಯುವ ಮನುಷ್ಯನು ಕಿರುಚುವಂತೆ ಆ ಶಬ್ದವು ಇರುವುದು. 25 ನಾನು ಬಾಬಿಲೋನಿನ ರಾಜನ ಕೈಗಳನ್ನು ಬಲಪಡಿಸುವೆನು. ಫರೋಹನ ಕೈಗಳು ಜೋಲುಬೀಳುವವು. ಆಗ ಅವರು ನಾನೇ ಯೆಹೋವನೆಂದು ತಿಳಿಯುವರು.
“ನನ್ನ ಖಡ್ಗವನ್ನು ನಾನು ಬಾಬಿಲೋನ್ ರಾಜನ ಕೈಗಳಲ್ಲಿ ಇಡುವೆನು. ಆಗ ಅವನು ಈಜಿಪ್ಟಿನ ಕಡೆಗೆ ಅದನ್ನು ಚಾಚುವನು. 26 ನಾನು ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. ಆಗ ನಾನು ಯೆಹೋವನೆಂದು ಅವರು ತಿಳಿದುಕೊಳ್ಳುವರು.”
Kannada Holy Bible: Easy-to-Read Version. All rights reserved. © 1997 Bible League International