Beginning
ನೀತಿಯ ನ್ಯಾಯತೀರ್ಪು
18 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 2 “ಇಸ್ರೇಲ್ ದೇಶದ ಕುರಿತಾದ ಈ ಗಾದೆಯನ್ನು ನೀವೆಲ್ಲರೂ ಮರುನುಡಿಯುವುದೇಕೆ?
‘ಹೆತ್ತವರು ಹುಳಿ ದ್ರಾಕ್ಷಿಹಣ್ಣನ್ನು ತಿಂದಾಗ
ಮಕ್ಕಳ ಬಾಯಿ ಹುಳಿಯಾಗುವುದು.’[a]”
3 ಆದರೆ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಜನರು ಇನ್ನು ಮುಂದಕ್ಕೆ ಈ ಗಾದೆಯು ಸತ್ಯವೆಂದು ನೆನಸುವದಿಲ್ಲ. 4 ಎಲ್ಲಾ ಪ್ರಾಣಗಳು ನನ್ನವೇ. ತಂದೆಯ ಪ್ರಾಣವೂ ಮಗನ ಪ್ರಾಣವೂ ನನ್ನವೇ. ಪಾಪಮಾಡುವವನು ಮಾತ್ರ ಸಾಯುವನು.
5 “ಒಬ್ಬ ವ್ಯಕ್ತಿ ನೀತಿವಂತನಾಗಿದ್ದರೆ ಅವನು ಬಾಳುವನು. ಆ ಮನುಷ್ಯನು ಜನರನ್ನು ಸರಿಯಾದ ರೀತಿಯಲ್ಲಿ ನೋಡುವನು. 6 ಆ ನೀತಿವಂತ ಮನುಷ್ಯನು ಬೆಟ್ಟಗಳಿಗೆ ಹೋಗಿ ಅಲ್ಲಿ ಸುಳ್ಳು ದೇವರಿಗೆ ಅರ್ಪಿಸಿದ ಆಹಾರದಲ್ಲಿ ಪಾಲು ತೆಗೆದುಕೊಳ್ಳುವದಿಲ್ಲ. ಇಸ್ರೇಲಿನಲ್ಲಿರುವ ಆ ಹೊಲಸು ವಿಗ್ರಹಗಳಿಗೆ ಅವನು ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. ತನ್ನ ಹೆಂಡತಿಯು ಮುಟ್ಟಾದಾಗ ಆಕೆಯನ್ನು ಕೂಡುವುದಿಲ್ಲ. 7 ಆ ಒಳ್ಳೆಯ ಮನುಷ್ಯನು ಜನರ ಬಲಹೀನತೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ; ಸಾಲ ಮಾಡಿದವನ ಒತ್ತೆಯನ್ನು ಬಿಗಿಹಿಡಿಯುವುದಿಲ್ಲ; ಯಾರ ಸೊತ್ತನ್ನೂ ದರೋಡೆ ಮಾಡುವುದಿಲ್ಲ; ಹಸಿದವನಿಗೆ ಅನ್ನ ಕೊಡುವನು; ಬಟ್ಟೆಯಿಲ್ಲದವನಿಗೆ ಬಟ್ಟೆ ಕೊಡುವನು; 8 ಅವನು ಸಾಲ ಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ಕೆಡುಕುಗಳನ್ನು ಮಾಡುವುದಿಲ್ಲ. ಅವನು ತನ್ನ ವ್ಯವಹಾರಗಳಲ್ಲಿ ಪ್ರತಿಯೊಬ್ಬನೊಂದಿಗೂ ಯಥಾರ್ಥವಾಗಿಯೂ ನ್ಯಾಯವಾಗಿಯೂ ಇರುವನು. 9 ಅವನು ನನ್ನ ನಿಯಮಗಳಿಗನುಸಾರವಾಗಿ ಜೀವಿಸುವನು ಮತ್ತು ನನ್ನ ಕಟ್ಟಳೆಗಳಿಗೆ ನಂಬಿಗಸ್ತಿಕೆಯಿಂದ ವಿಧೇಯನಾಗುವನು. ಅಂಥಾ ಮನುಷ್ಯನು ನೀತಿವಂತನಾಗಿದ್ದಾನೆ ಮತ್ತು ಅವನು ಖಂಡಿತವಾಗಿಯೂ ಬದುಕುವನು.
10 “ಆದರೆ ಒಂದುವೇಳೆ ಆ ನೀತಿವಂತನ ಮಗನು ಒಳ್ಳೆಯ ಕಾರ್ಯಗಳನ್ನು ಮಾಡದೆ ದರೋಡೆ ಮಾಡುವವನೂ ಕೊಲೆಮಾಡುವವನೂ ಆಗಿರಬಹುದು. 11 ಅವನ ತಂದೆಯು ಈ ಪಾಪಗಳಿಂದ ದೂರವಿದ್ದಾಗ್ಯೂ, ಮಗನು ಈ ಪಾಪಗಳಲ್ಲಿ ಪ್ರತಿಯೊಂದನ್ನೂ ಮಾಡಿದ್ದಿರಬಹುದು. ಅವನು ಬೆಟ್ಟದ ಮೇಲೆ ಹೋಗಿ ಅಲ್ಲಿ ವಿಗ್ರಹಗಳಿಗರ್ಪಿಸಿದ ನೈವೇದ್ಯದಲ್ಲಿ ಪಾಲು ತೆಗೆದುಕೊಳ್ಳಬಹುದು. ಆ ಕೆಟ್ಟ ಮಗನು ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ನಡೆಸಿದ್ದಿರಬಹುದು. 12 ಬಡ, ನಿಸ್ಸಹಾಯಕರಾದ ಜನರಿಗೆ ಕಿರುಕುಳ ಕೊಟ್ಟಿರಬಹುದು. ಜನರ ನಿಸ್ಸಹಾಯಕತೆಯ ಪ್ರಯೋಜನ ಪಡೆಯುತ್ತಿರಬಹುದು. ಒತ್ತೆಗೆ ತೆಗೆದುಕೊಂಡ ವಸ್ತುವನ್ನು ಹಿಂದಕ್ಕೆ ಕೊಡದೆ ಇದ್ದಿರಬಹುದು. ಆ ಮಗನು ವಿಗ್ರಹಗಳಿಗೆ ಪ್ರಾರ್ಥಿಸಿ ಇನ್ನೂ ಅನೇಕ ಭಯಂಕರ ಕೃತ್ಯಗಳನ್ನೂ ಮಾಡಿದ್ದಿರಬಹುದು. 13 ಆ ಕೆಟ್ಟ ಮಗನಿಂದ ಯಾರಾದರೂ ಸಾಲ ತೆಗೆದುಕೊಂಡಿದ್ದರೆ ಅವನು ಅವರಿಂದ ಬಡ್ಡಿಯನ್ನು ಕಡ್ಡಾಯವಾಗಿ ವಸೂಲು ಮಾಡಿದ್ದಿರಬಹುದು. ಹೀಗಿರುವದರಿಂದ ಆ ಕೆಟ್ಟ ಮಗನು ಹೆಚ್ಚುಕಾಲ ಬದುಕುವುದಿಲ್ಲ. ಅವನು ಭಯಂಕರ ಕೃತ್ಯಗಳನ್ನು ಮಾಡಿರುವದರಿಂದ ಕೊಲ್ಲಲ್ಪಡುವನು. ಅವನ ಮರಣಕ್ಕೆ ಅವನೇ ಜವಾಬ್ದಾರನು.
14 “ಇಗೋ, ಆ ಕೆಟ್ಟ ಮಗನಿಗೆ ಒಬ್ಬ ಮಗನಿರಬಹುದು. ತಂದೆ ಮಾಡುವ ದುಷ್ಕೃತ್ಯಗಳನ್ನು ನೋಡಿದ ಅವನು ತಂದೆಯಂತೆ ಜೀವಿಸದಿರಬಹುದು. 15 ಈ ಒಳ್ಳೆಯ ಮಗನು ಬೆಟ್ಟಕ್ಕೆ ಹೋಗಿ ಅಲ್ಲಿ ವಿಗ್ರಹಗಳಿಗೆ ಅರ್ಪಿಸಿದ ನೈವೇದ್ಯವನ್ನು ತಿನ್ನುವುದಿಲ್ಲ. ಅವನು ಇಸ್ರೇಲಿನ ಹೊಲಸು ವಿಗ್ರಹಗಳಿಗೆ ಪ್ರಾರ್ಥಿಸುವುದಿಲ್ಲ. ಅವನು ತನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡುವುದಿಲ್ಲ. 16 ಆ ಒಳ್ಳೆಯ ಮಗನು ಯಾರ ಮೇಲೂ ದಬ್ಬಾಳಿಕೆ ನಡೆಸುವುದಿಲ್ಲ. ಅವನು ಒತ್ತೆಯಿಲ್ಲದೆ ಸಾಲಕೊಡುವನು. ಅವನು ಯಾರನ್ನೂ ದರೋಡೆ ಮಾಡುವುದಿಲ್ಲ. ಅವನು ಹಸಿದವರಿಗೆ ಊಟ ಕೊಡುವನು; ಬಟ್ಟೆಯಿಲ್ಲದವರಿಗೆ ಬಟ್ಟೆಯನ್ನು ಕೊಡುವನು. 17 ಅವನು ಬಡವರಿಗೆ ನೋವು ಮಾಡುವುದಿಲ್ಲ. ಅವನು ಹಣವನ್ನು ಸಾಲಕೊಡುವಾಗ ಬಡ್ಡಿಹಾಕುವುದಿಲ್ಲ. ಅವನು ನನ್ನ ಕಟ್ಟಳೆಗಳಿಗೆ ವಿಧೇಯನಾಗುವನು. ಮತ್ತು ನನ್ನ ನಿಯಮಗಳನ್ನು ಅನುಸರಿಸುವನು. ಈ ಒಳ್ಳೆಯ ಮಗನು ತಂದೆಯ ದುಷ್ಟತನದ ಕಾರಣಕ್ಕಾಗಿ ಮರಣಶಿಕ್ಷೆಯನ್ನು ಅನುಭವಿಸುವದಿಲ್ಲ. ಆ ಒಳ್ಳೆಯ ಮಗನು ಬಾಳುವನು. 18 ತಂದೆಯು ಜನರನ್ನು ಹೆದರಿಸಿಯಾಗಲಿ ದರೋಡೆ ಮಾಡಿಯಾಗಲಿ ವಸ್ತುಗಳನ್ನು ತೆಗೆದುಕೊಂಡಿರಬಹುದು. ತನ್ನ ಜನರ ಮಧ್ಯದಲ್ಲಿ ಕೆಟ್ಟದಾಗಿರುವುದನ್ನು ಅವನು ಮಾಡಿರಬಹುದು. ಆ ತಂದೆಯು ತನ್ನ ಪಾಪಗಳ ಸಲುವಾಗಿ ಸಾಯುವನು. ಆದರೆ ತಂದೆಯ ಪಾಪಗಳಿಗಾಗಿ ಮಗನು ಶಿಕ್ಷಿಸಲ್ಪಡುವುದಿಲ್ಲ.
19 “‘ತಂದೆಯ ಪಾಪಗಳಿಗಿರುವ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳದಿರುವದೇಕೆ?’ ಎಂದು ನೀವು ಕೇಳಬಹುದು. ಮಗನು ನ್ಯಾಯವಾದುದ್ದನ್ನು ಮತ್ತು ಸರಿಯಾದುದ್ದನ್ನು ಮಾಡಿದ್ದಾನೆ. ಅವನು ಎಚ್ಚರಿಕೆಯಿಂದ ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾಗಿದ್ದನು. ಆದ್ದರಿಂದ ಅವನು ಬಾಳುವನು. 20 ಯಾರು ಪಾಪ ಮಾಡುತ್ತಾರೋ ಅವರೇ ಮರಣಶಿಕ್ಷೆ ಹೊಂದುವರು. ತಂದೆಯ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ಮಗನು ಹೊತ್ತುಕೊಳ್ಳುವುದಿಲ್ಲ. ಮತ್ತು ಮಗನ ಪಾಪಗಳ ಪ್ರತಿಫಲಗಳಲ್ಲಿ ಯಾವುದನ್ನೂ ತಂದೆಯು ಹೊತ್ತುಕೊಳ್ಳುವದಿಲ್ಲ. ಒಬ್ಬ ಒಳ್ಳೆ ಮನುಷ್ಯನ ನೀತಿಯು ಅವನಿಗೇ ಸೇರಿದ್ದು. ಕೆಟ್ಟ ಮನುಷ್ಯನ ದುಷ್ಟತ್ವವೂ ಆ ಕೆಟ್ಟ ಮನುಷ್ಯನಿಗೆ ಸೇರಿದ್ದಾಗಿದೆ.
21 “ಒಂದುವೇಳೆ ದುಷ್ಟನೊಬ್ಬನು ತಾನು ಮಾಡಿದ ಎಲ್ಲಾ ಪಾಪಗಳಿಗೆ ವಿಮುಖನಾದರೆ, ನನ್ನ ಎಲ್ಲಾ ನಿಯಮಗಳಿಗೆ ವಿಧೇಯನಾದರೆ, ನ್ಯಾಯವಾದುದ್ದನ್ನೂ ಸರಿಯಾದುದ್ದನ್ನೂ ಮಾಡಿದರೆ, ಅವನು ಸಾಯದೆ ಬದುಕುವನು. 22 ದೇವರು ಅವನ ಹಿಂದಿನ ಪಾಪಗಳನ್ನು ನೆನಪಿಗೆ ತರುವದಿಲ್ಲ. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ಬದುಕುವನು.”
23 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನನಗೆ ಪಾಪಿಗಳು ಸಾಯುವದರಲ್ಲಿ ಇಷ್ಟವಿಲ್ಲ. ಅವರು ತಮ್ಮ ಜೀವಿತವನ್ನು ಬದಲಾಯಿಸಿ ಜೀವವನ್ನು ಹೊಂದಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.
24 “ಒಂದುವೇಳೆ ಒಳ್ಳೆಯವನೊಬ್ಬನು ತನ್ನ ಒಳ್ಳೆಯತನವನ್ನು ಬಿಟ್ಟು ಪಾಪ ಮಾಡಬಹುದು; ದುಷ್ಟರು ಮಾಡುವ ಅಸಹ್ಯಕೃತ್ಯಗಳನ್ನೆಲ್ಲ ಮಾಡಬಹುದು. ಅವನು ಹೀಗೆ ಮಾಡುತ್ತಾ ಬದುಕಲು ಸಾಧ್ಯವೇ ಇಲ್ಲ! ಅವನು ಅಪನಂಬಿಗಸ್ತನಾದ್ದರಿಂದ ಮತ್ತು ಪಾಪ ಮಾಡಿದ್ದರಿಂದ ದೇವರು ಅವನ ಎಲ್ಲಾ ಒಳ್ಳೆಯ ಕಾರ್ಯಗಳನ್ನೂ ಮರೆತುಬಿಡುವನು. ಅವನು ತನ್ನ ಪಾಪಗಳ ದೆಸೆಯಿಂದ ಸಾಯುವನು.”
25 ದೇವರು ಹೇಳಿದ್ದೇನೆಂದರೆ: “ಒಂದುವೇಳೆ ನೀವು ಹೇಳಬಹುದು: ‘ನನ್ನ ಒಡೆಯನಾದ ದೇವರ ಕ್ರಮವು ದೃಢವಾಗಿಲ್ಲ.’ ಆದರೆ, ಇಸ್ರೇಲಿನ ಜನರೇ, ಕೇಳಿರಿ. ನಿಮ್ಮ ನಡತೆಯೇ ದೃಢವಾಗಿಲ್ಲ. 26 ಒಬ್ಬ ಒಳ್ಳೆಯವನು ಬದಲಾವಣೆ ಹೊಂದಿ ಕೆಟ್ಟಕಾರ್ಯಗಳನ್ನು ಮಾಡಿದರೆ, ಅವನ ದುಷ್ಟತ್ವಕ್ಕಾಗಿ ಅವನು ಸಾಯಲೇಬೇಕು. 27 ಆದರೆ ಒಬ್ಬ ಪಾಪಿ ಬದಲಾವಣೆ ಹೊಂದಿ ನೀತಿವಂತನಾಗಿ ಬಾಳಿದರೆ ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ತಾನು ಎಷ್ಟು ಕೆಟ್ಟವನಾಗಿ ಜೀವಿಸಿದನೆಂದು ತಿಳಿದು ನನ್ನ ಕಡೆಗೆ ತಿರುಗಿ ದುಷ್ಟತನ ಮಾಡುವದನ್ನು ನಿಲ್ಲಿಸಿದರೆ. ಅಂಥವನು ಸಾಯದೆ, ಬಾಳುವನು.”
29 ಆದರೆ ಇಸ್ರೇಲ್ ಜನರು, “ಅದು ಸರಿಯಲ್ಲ. ನನ್ನ ಒಡೆಯನಾದ ಯೆಹೋವನ ಕ್ರಮವು ದೃಢವಲ್ಲ” ಎಂದರು.
ಆಗ ದೇವರು, “ನಾನು ದೃಢವಾಗಿದ್ದೇನೆ. ನಿಮ್ಮ ನಡತೆಯೇ ದೃಢವಾಗಿಲ್ಲ. 30 ಇಸ್ರೇಲರೇ, ನಾನು ಪ್ರತಿಯೊಬ್ಬನನ್ನು ಅವನವನ ಕಾರ್ಯಗಳ ಪ್ರಕಾರ ನ್ಯಾಯತೀರಿಸುವೆನು” ಎಂದು ಹೇಳಿದನು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆದ್ದರಿಂದ ನನ್ನ ಬಳಿಗೆ ಬನ್ನಿರಿ, ದುಷ್ಟತನ ಮಾಡುವದನ್ನು ನಿಲ್ಲಿಸಿರಿ, ಪಾಪವು ನಿಮ್ಮ ನಾಶನಕ್ಕೆ ಕಾರಣವಾಗದಂತೆ ಎಚ್ಚರಿಕೆಯಾಗಿರಿ. 31 ನಿಮ್ಮ ದಂಗೆಕೋರತನದ ಮಾರ್ಗಗಳನ್ನೆಲ್ಲ ತೊರೆದುಬಿಟ್ಟು ನಿಮ್ಮ ಹೃದಯವನ್ನೂ ಸ್ವಭಾವವನ್ನೂ ನೂತನ ಮಾಡಿಕೊಳ್ಳಿರಿ. ಇಸ್ರೇಲ್ ಜನರೇ, ನೀವು ಮರಣವನ್ನು ಬರಮಾಡಿಕೊಳ್ಳುವುದೇಕೆ? 32 ನಿಮ್ಮನ್ನು ಸಾಯಿಸಲು ನನಗೆ ಇಷ್ಟವಿಲ್ಲ. ನೀವು ನನ್ನ ಕಡೆಗೆ ಹಿಂದಿರುಗಿ ಜೀವಿಸಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
ಇಸ್ರೇಲಿನ ಪ್ರಭುಗಳ ಕುರಿತು ಶೋಕಗೀತೆ
19 ದೇವರು ನನಗೆ, “ಇಸ್ರೇಲರ ಅಧಿಪತಿಗಳ ವಿಷಯವಾದ ಈ ಶೋಕಗೀತೆಯನ್ನು ನೀನು ಹಾಡಬೇಕು” ಎಂದು ಹೇಳಿದನು:
2 “‘ನಿನ್ನ ತಾಯಿಯು ಏನಾಗಿದ್ದಳು?
ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು.
ಆಕೆಯು ಪ್ರಾಯದ ಸಿಂಹಗಳೊಡನೆ
ಮಲಗಿ ತನ್ನ ಮರಿಗಳನ್ನು ಸಾಕಿದಳು.
3 ಮರಿಗಳಲ್ಲೊಂದು ಎದ್ದು
ಗಟ್ಟಿಮುಟ್ಟಾದ ಸಿಂಹವಾಗಿ ಬೆಳೆಯುತ್ತಾ ಬಂತು.
ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ
ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.
4 “‘ಅದು ಗರ್ಜಿಸುವ ಶಬ್ದವನ್ನು ಜನರು ಕೇಳಿದರು.
ಜನಾಂಗಗಳು ಅದರ ಬಗ್ಗೆ ಕೇಳಿದರು.
ಅದನ್ನು ತಮ್ಮ ಗುಂಡಿಯಲ್ಲಿ ಅವರು ಬಂಧಿಸಿದರು.
ಅವರು ಅದರ ಬಾಯಿಗೆ ಕೊಂಡಿಯನ್ನು ಹಾಕಿ ಈಜಿಪ್ಟಿಗೆ ಅದನ್ನು ಕೊಂಡೊಯ್ದರು.
5 “‘ಆ ಸಿಂಹಿಣಿಯು ತನಗಾದ ನಿರಾಶೆಯನ್ನೂ
ತನ್ನ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನ್ನು ಕಂಡು,
ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು
ಅದನ್ನು ಪ್ರಾಯದ ಸಿಂಹವನ್ನಾಗಿ ಮಾಡಿತು.
6 ಅದು ಬೆಳೆದು ಪ್ರಾಯದ ಸಿಂಹವಾಗಿ
ಸಿಂಹಗಳೊಂದಿಗೆ ಬೇಟೆಯಾಡಲು ಹೋಯಿತು;
ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ
ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.
7 ಅದು ಸ್ತ್ರೀಯರನ್ನು ವಿಧವೆಯರನ್ನಾಗಿ ಮಾಡಿತು; ಪಟ್ಟಣಗಳನ್ನು ನಿರ್ಜನವನ್ನಾಗಿ ಮಾಡಿತು;
ಅದು ಗರ್ಜಿಸಿದಾಗ ದೇಶವೂ ಅದರಲ್ಲಿರುವ ಪ್ರತಿಯೊಂದೂ ಭಯಗೊಂಡವು.
8 ಸುತ್ತಮುತ್ತಲಿನ ಜನಾಂಗಗಳವರು ಕೂಡಿಬಂದು ಅದರ ವಿರುದ್ಧವಾಗಿ ನಿಂತು,
ಬಲೆಹರಡಿ ಅದನ್ನು ಬಂಧಿಸಿದರು.
9 ಅವರು ಅದನ್ನು ಮರದ ಪಂಜರದಲ್ಲಿಟ್ಟು ಕೊಂಡಿಗಳನ್ನು ಹಾಕಿ,
ಬಾಬಿಲೋನಿನ ರಾಜನ ಬಳಿಗೆ ಕೊಂಡೊಯ್ದರು.
ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನ್ನೆಂದಿಗೂ ಕೇಳದಿರಲಿ
ಎಂದು ಅದನ್ನು ಅಲ್ಲಿ ಸೆರೆಮನೆಗೆ ಹಾಕಿದರು.
10 “‘ನಿನ್ನ ತಾಯಿಯು ನೀರಾವರಿಯಲ್ಲಿ ನೆಟ್ಟ
ದ್ರಾಕ್ಷಾಲತೆಯಂತಿದ್ದಳು.
ಬೇಕಾದಷ್ಟು ನೀರು ಇದ್ದುದರಿಂದ
ಅದು ಫಲಭರಿತವಾಗಿದ್ದು ಅನೇಕ ಕೊಂಬೆಗಳನ್ನು ಹೊಂದಿತ್ತು.
11 ಅದು ಬಲವಾದ ಕಾಂಡಗಳನ್ನು ಬೆಳೆಸಿತು.
ಅದರ ಕಾಂಡಗಳು ಅಧಿಪತಿಗಳ ರಾಜದಂಡದಂತಿದ್ದವು.
ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಬೆಳೆಯಿತು.
ಅದು ತನ್ನ ಎತ್ತರದಿಂದ ಮತ್ತು ತನ್ನ ಅನೇಕ ಕೊಂಬೆಗಳಿಂದ ಎದ್ದುಕಾಣುತ್ತಿತ್ತು.
12 ಆದರೆ ದ್ರಾಕ್ಷಾಲತೆಯು ಬೇರು ಸಮೇತ ಕಿತ್ತುಹಾಕಲ್ಪಟ್ಟಿತು.
ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು.
ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನ್ನು ಒಣಗಿಸಿತು.
ಅದರ ಬಲವಾದ ಕೊಂಬೆಗಳು ಮುರಿಯಲ್ಪಟ್ಟವು.
ಅವುಗಳನ್ನು ಬೆಂಕಿಯು ಸುಟ್ಟುಹಾಕಿತು.
13 “‘ಈಗ ಆ ದ್ರಾಕ್ಷಾಬಳ್ಳಿಯನ್ನು ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ.
ಅದು ನೀರಿಲ್ಲದ ಬಂಜರು ಭೂಮಿ.
14 ಅದರ ಸ್ವಂತ ಕಾಂಡದಿಂದಲೇ ಬೆಂಕಿಯು ಹೊರಟುಬಂದು
ಅದರ ಚಿಕ್ಕ ಕೊಂಬೆಗಳನ್ನು ಮತ್ತು ಫಲಗಳನ್ನು ನಾಶಮಾಡಿತು.
ಈಗ ಬಲವಾದ ಕಾಂಡ ಅದರಲ್ಲಿಲ್ಲ.
ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’
ಇದು ಮರಣದ ಶೋಕಗೀತೆ. ಇದನ್ನು ಶೋಕಗೀತೆಯನ್ನಾಗಿಯೇ ಬಳಸಲಾಗುತ್ತಿದೆ.”
ಯೆಹೋವನಿಗೆ ಇಸ್ರೇಲ್ ವಿಮುಖಗೊಂಡದ್ದು
20 ಮಾರ್ಗದರ್ಶನಕ್ಕಾಗಿ ಯೆಹೋವನನ್ನು ಕೇಳಲು ಒಂದು ದಿನ ಇಸ್ರೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದರು. ಅದು ಸೆರೆವಾಸದ ಏಳನೆ ವರ್ಷದ ಐದನೆ ತಿಂಗಳಿನ ಹತ್ತನೆಯ ದಿನ. ಹಿರಿಯರು ನನ್ನ ಎದುರಿನಲ್ಲಿ ಕುಳಿತುಕೊಂಡರು.
2 ಆಗ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 3 “ನರಪುತ್ರನೇ, ಇಸ್ರೇಲಿನ ಹಿರಿಯರೊಂದಿಗೆ ಮಾತಾಡಿ ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನೀವು ನನ್ನ ಬುದ್ಧಿವಾದವನ್ನು ಕೇಳಲು ಬಂದಿರುವಿರಾ? ನನ್ನ ಜೀವದಾಣೆ, ನನ್ನ ಬುದ್ಧಿವಾದವನ್ನು ನಿಮಗೆ ಹೇಳುವದಿಲ್ಲವೆಂದು ನಾನು ಪ್ರಮಾಣಮಾಡುತ್ತೇನೆ. ನನ್ನ ಒಡೆಯನಾದ ಯೆಹೋವನ ವಾಕ್ಯವಿದು.’ 4 ನರಪುತ್ರನೇ, ನೀನು ಅವರ ನ್ಯಾಯತೀರಿಸುವಿಯಾ? ಅವರ ಪೂರ್ವಿಕರು ಮಾಡಿದ ಭಯಂಕರ ಸಂಗತಿಗಳನ್ನು ನೀನು ಅವರಿಗೆ ಹೇಳಬೇಕು. 5 ನೀನು ಅವರಿಗೆ, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಇಸ್ರೇಲನ್ನು ಆರಿಸಿಕೊಂಡ ದಿವಸ ನಾನು ನನ್ನನ್ನು ಈಜಿಪ್ಟ್ ದೇಶದಲ್ಲಿ ಅವರಿಗೆ ಪ್ರಕಟಿಸಿಕೊಂಡೆನು. ನಾನು ನನ್ನ ಕೈಯನ್ನು ಮೇಲೆತ್ತಿ ಯಾಕೋಬನ ಕುಟುಂಬಕ್ಕೆ ವಾಗ್ದಾನ ಮಾಡಿದೆನು. ನಾನು ಅವರಿಗೆ, “ನಿಮ್ಮ ಒಡೆಯನಾದ ಯೆಹೋವನು ನಾನೇ.” ಎಂದು ಹೇಳಿದೆನು. 6 ಅವರನ್ನು ಈಜಿಪ್ಟಿನಿಂದ ಹೊರಗೆ ತಂದು, ನಾನು ಅವರಿಗಾಗಿ ಹುಡುಕಿಟ್ಟಿರುವ ದೇಶಕ್ಕೆ ಕರೆದುಕೊಂಡು ಹೋಗುವುದಾಗಿ ವಾಗ್ದಾನ ಮಾಡಿದೆನು. ಅದು ಹಾಲೂ ಜೇನೂ ಹರಿಯುವ ದೇಶವಾಗಿತ್ತು. ಅದು ಎಲ್ಲಾ ದೇಶಗಳಿಗಿಂತಲೂ ಸುಂದರವಾದ ದೇಶ.[b]
7 “‘ನಾನು ಇಸ್ರೇಲ್ ಜನಾಂಗದವರಿಗೆ, ಅವರಲ್ಲಿದ್ದ ಅಸಹ್ಯವಾದ ಎಲ್ಲಾ ವಿಗ್ರಹಗಳನ್ನು ಬಿಸಾಡಿಬಿಡಲು ಹೇಳಿದೆನು. ಈಜಿಪ್ಟಿನ ಹೊಲಸು ವಿಗ್ರಹಗಳಿಂದ ಹೊಲಸು ಆಗಬಾರದು ಎಂದು ಹೇಳಿದೆನು. “ನಾನು ನಿಮ್ಮ ದೇವರಾದ ಯೆಹೋವನು” ಎಂಬುದಾಗಿ ಹೇಳಿದೆನು. 8 ಆದರೆ ಅವರು ನನ್ನ ವಿರುದ್ಧವಾಗಿ ಎದ್ದು ನನ್ನ ಮಾತುಗಳನ್ನು ಕೇಳದೆ ಹೋದರು. ತಮ್ಮ ವಿಗ್ರಹಗಳನ್ನು ಬಿಸಾಡಿಬಿಡಲಿಲ್ಲ. ಈಜಿಪ್ಟಿನ ವಿಗ್ರಹಗಳನ್ನು ತೊರೆದುಬಿಡಲಿಲ್ಲ. ಆದ್ದರಿಂದ ನಾನು ಅವರನ್ನು (ಇಸ್ರೇಲರನ್ನು) ಈಜಿಪ್ಟಿನಲ್ಲಿಯೇ ನಾಶಮಾಡಿ ನನ್ನ ರೋಷಾಗ್ನಿಯನ್ನು ತೀರಿಸಿಕೊಳ್ಳಲು ಆಲೋಚಿಸಿದೆನು. 9 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಇಸ್ರೇಲರು ವಾಸವಾಗಿರುವ ಸ್ಥಳದಲ್ಲಿ ಜನರ ಮುಂದೆ ನನ್ನ ಹೆಸರನ್ನು ಅವಮಾನಕ್ಕೆ ಗುರಿಮಾಡಲು ನನಗೆ ಇಷ್ಟವಿರಲಿಲ್ಲ. ಈಜಿಪ್ಟಿನಿಂದ ಹೊರಗೆ ತರುತ್ತೇನೆಂಬ ವಾಗ್ದಾನದೊಡನೆ ನಾನು ಇಸ್ರೇಲರಿಗೆ ಪ್ರಕಟಿಸಿಕೊಂಡಿದ್ದನ್ನು ಅವರು ನೋಡಿದ್ದರು. ಆದ್ದರಿಂದ ನಾನು ಇಸ್ರೇಲರನ್ನು ಅವರ ಮುಂದೆ ನಾಶಮಾಡಲಿಲ್ಲ. 10 ನಾನು ಇಸ್ರೇಲ್ ಜನಾಂಗವನ್ನು ಈಜಿಪ್ಟಿನಿಂದ ಹೊರತಂದು ಅಡವಿ ಪ್ರದೇಶದಲ್ಲಿ ನಡೆಸಿದೆನು. 11 ಅಲ್ಲಿ ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟೆನು. ನನ್ನ ವಿಧಿನಿಯಮಗಳನ್ನು ತಿಳಿಸಿದೆನು. ಅವುಗಳನ್ನು ಕೈಕೊಂಡು ನಡೆಯುವ ಎಲ್ಲರೂ ಜೀವಿಸುತ್ತಾರೆ. 12 ಅವರ ವಿಶ್ರಾಂತಿ ದಿವಸಗಳ ಬಗ್ಗೆ ತಿಳಿಸಿದೆನು. ಆ ವಿಶೇಷ ದಿವಸಗಳು ನನಗೂ ಅವರಿಗೂ ಇರುವ ಸಂಬಂಧಕ್ಕೆ ಒಂದು ಗುರುತಾಗಿತ್ತು. ನಾನೇ ಯೆಹೋವನೆಂದೂ ನಾನು ಅವರನ್ನು ನನಗೆ ವಿಶೇಷವಾದವರನ್ನಾಗಿ ಮಾಡಿಕೊಳ್ಳುತ್ತಿರುವೆನೆಂದೂ ಅವು ತೋರಿಸುತ್ತಿದ್ದವು.
13 “‘ಆದರೆ ಇಸ್ರೇಲ್ ಜನರು ಅಡವಿಯಲ್ಲಿರುವಾಗ ನನಗೆ ವಿರುದ್ಧವಾಗಿ ತಿರುಗಿಬಿದ್ದರು. ನನ್ನ ಆಜ್ಞೆಗಳನ್ನು ಅವರು ಅನುಸರಿಸಲಿಲ್ಲ. ನನ್ನ ನಿಯಮಗಳಿಗೆ ವಿಧೇಯರಾಗಲು ನಿರಾಕರಿಸಿದರು. ಆ ಆಜ್ಞೆಗಳೆಲ್ಲಾ ನ್ಯಾಯವಾದವುಗಳೇ. ಒಬ್ಬನು ಆ ಆಜ್ಞೆಗಳಿಗೆ ವಿಧೇಯನಾದರೆ ಅವನು ಬಾಳುವನು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ವಿಶೇಷವಾಗಿ ಅಲಕ್ಷ್ಯ ಮಾಡಿದರು. ಆ ದಿವಸಗಳಲ್ಲಿ ಅವರು ಎಷ್ಟೋ ಸಾರಿ ಕೆಲಸ ಮಾಡಿದರು. ನನ್ನ ರೌದ್ರದ ತೀವ್ರತೆಯನ್ನು ಅವರು ಅರಿತುಕೊಳ್ಳಲೆಂದು ನಾನು ಅವರನ್ನು ಅಡವಿಯಲ್ಲಿ ದಂಡಿಸಿ ನಾಶಮಾಡಲು ಆಲೋಚಿಸಿಕೊಂಡೆನು. 14 ಆದರೆ ನಾನು ಅವರನ್ನು ನಾಶಮಾಡಲಿಲ್ಲ. ಬೇರೆ ದೇಶದವರು ನಾನು ಅವರನ್ನು ಈಜಿಪ್ಟಿನಿಂದ ಬಿಡಿಸಿ ತರುವುದನ್ನು ನೋಡಿದರು. ನನ್ನ ಒಳ್ಳೆಯ ಹೆಸರನ್ನು ಅವರೆದುರಿನಲ್ಲಿ ಅವಮಾನಪಡಿಸುವದಕ್ಕೆ ನನಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಮುಂದೆ ಇಸ್ರೇಲನ್ನು ನಾಶಮಾಡಲಿಲ್ಲ. 15 ಅವರು ಅಡವಿಯಲ್ಲಿದ್ದಾಗ ನಾನು ಮತ್ತೊಂದು ಪ್ರಮಾಣವನ್ನು ಮಾಡಿದೆನು. ನಾನು ಅವರಿಗೆ ಕೊಟ್ಟಿದ್ದ ದೇಶಕ್ಕೆ ಅವರನ್ನು ಹೋಗಗೊಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಆ ದೇಶವು ಅತ್ಯುತ್ತಮವಾಗಿತ್ತು. ಎಲ್ಲಾ ದೇಶಗಳಿಗಿಂತ ಬಹು ಸುಂದರವಾದ ದೇಶ.[c]
16 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನನ್ನ ಕಟ್ಟಳೆಗಳನ್ನು ಅವರು ಅನುಸರಿಸಲಿಲ್ಲ. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಅವರ ಮನಸ್ಸು ಆ ಹೊಲಸು ದೇವರುಗಳ ಮೇಲೆ ನೆಟ್ಟಿದ್ದರಿಂದ ಅವರು ಹಾಗೆಲ್ಲಾ ಮಾಡಿದರು. 17 ಆದರೆ ನಾನು ಅವರಿಗಾಗಿ ದುಃಖಗೊಂಡೆನು. ಆದ್ದರಿಂದ ಅವರನ್ನು ನಾನು ನಾಶಮಾಡಲಿಲ್ಲ. ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. 18 ಅವರ ಮಕ್ಕಳಿಗೆ ನಾನು ಬುದ್ಧಿಹೇಳುತ್ತಾ, “ನಿಮ್ಮ ಪೂರ್ವಿಕರಂತೆ ನೀವಾಗಬೇಡಿರಿ. ಅವರ ಅಸಹ್ಯವಾದ ವಿಗ್ರಹಗಳಿಂದ ನಿಮ್ಮನ್ನು ನೀವು ಅಶುದ್ಧಮಾಡಿಕೊಳ್ಳಬೇಡಿರಿ. ಅವರ ಕಟ್ಟಳೆಗಳನ್ನು ಅನುಸರಿಸಬೇಡಿರಿ. ಅವರ ಆಜ್ಞೆಗಳಿಗೆ ವಿಧೇಯರಾಗಬೇಡಿರಿ. 19 ನಾನೇ ನಿಮ್ಮ ದೇವರಾದ ಯೆಹೋವನು. ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಿ, ನನ್ನ ಆಜ್ಞೆಗಳನ್ನು ಅನುಸರಿಸಿರಿ. ನಾನು ಹೇಳಿದವುಗಳನ್ನು ಮಾಡಿರಿ. 20 ನಾನು ನೇಮಿಸಿದ ಸಬ್ಬತ್ ದಿವಸಗಳು ಮಹತ್ವವಾದವುಗಳೆಂದು ಎಣಿಸಿರಿ. ನನ್ನ ಮತ್ತು ನಿಮ್ಮ ಸಂಬಂಧಕ್ಕೆ ಅವು ಗುರುತುಗಳಾಗಿವೆ. ನಾನು ನಿಮ್ಮ ಕರ್ತನು. ನಾನೇ ನಿಮ್ಮ ದೇವರಾದ ಯೆಹೋವನೆಂದು ತಿಳಿದುಕೊಳ್ಳಲು ಇವುಗಳು ಸಾಕ್ಷಿಗಳಾಗಿವೆ.”
21 “‘ಆದರೆ ಅವರ ಮಕ್ಕಳು ನನಗೆ ವಿರುದ್ಧವಾಗಿ ದಂಗೆ ಎದ್ದರು. ಅವರು ನನ್ನ ಕಟ್ಟಳೆಗಳನ್ನು ಅನುಸರಿಸಲಿಲ್ಲ. ಅವರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಾನು ಹೇಳಿದ್ದನ್ನು ಅವರು ಮಾಡಲಿಲ್ಲ. ಅವು ಒಳ್ಳೆಯ ಕಟ್ಟಳೆಗಳಾಗಿದ್ದವು. ಅವುಗಳಿಗೆ ವಿಧೇಯರಾಗುವವರು ಜೀವಿಸುವರು. ಅವರು ನನ್ನ ಸಬ್ಬತ್ ದಿವಸಗಳನ್ನು ಆಚರಿಸಲಿಲ್ಲ. ಆದ್ದರಿಂದ ಮರುಭೂಮಿಯಲ್ಲಿ ಅವರನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ನಿರ್ಧರಿಸಿದೆನು. ನನ್ನ ಕೋಪದ ತೀಕ್ಷ್ಣತೆಯನ್ನು ಅವರು ತಿಳಿದುಕೊಳ್ಳಬೇಕೆಂದು ತೀರ್ಮಾನಿಸಿದೆನು. 22 ಆದರೆ ನಾನು ನನ್ನನ್ನು ಹಾಗೆ ಮಾಡದಂತೆ ತಡೆದೆನು. ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದನ್ನು ಬೇರೆ ಜನಾಂಗದವರು ನೋಡಿರುತ್ತಾರೆ. ಆದ್ದರಿಂದ ನಾನು ಅವರನ್ನು ನಾಶಮಾಡಲಿಲ್ಲ. ನನ್ನ ಹೆಸರಿನ ಘನತೆಯನ್ನು ಉಳಿಸಿಕೊಂಡೆನು. 23 ಆಗ ನಾನು ಅಡವಿಯಲ್ಲಿ ಅವರೊಂದಿಗೆ ಇನ್ನೊಂದು ಮಾತುಕೊಟ್ಟೆನು. ನಾನು ಅವರನ್ನು ನಾನಾ ದೇಶಗಳಿಗೆ ಚದರಿಸಿಬಿಡುವೆನೆಂದು ಅವರಿಗೆ ತಿಳಿಸಿದೆನು.
24 “‘ಇಸ್ರೇಲ್ ಜನರು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನನ್ನ ಕಟ್ಟಳೆಗಳಿಗೆ ವಿಧೇಯರಾಗಲು ನಿರಾಕರಿಸಿದರು. ನಾನು ನೇಮಿಸಿದ ಸಬ್ಬತ್ ದಿವಸಗಳನ್ನು ಅಲಕ್ಷ್ಯಮಾಡಿದರು. ಮತ್ತು ಅವರ ಪೂರ್ವಿಕರ ಹೊಲಸು ವಿಗ್ರಹಗಳನ್ನು ಪೂಜಿಸಿದರು. 25 ಆಗ ನಾನು ಅವರಿಗೆ ಒಳ್ಳೆಯದಲ್ಲದ ಕಟ್ಟಳೆಗಳನ್ನು ಕೊಟ್ಟೆನು. ಜೀವವನ್ನು ಕೊಡಲು ಅಸಾಧ್ಯವಾದ ನಿಯಮಗಳನ್ನು ವಿಧಿಸಿದೆನು. 26 ಅವರು ತಮ್ಮ ಕಾಣಿಕೆಗಳಿಂದ ತಮ್ಮನ್ನೆ ಹೊಲಸು ಮಾಡಿಕೊಳ್ಳಲು ಅವರನ್ನು ಬಿಟ್ಟುಕೊಟ್ಟೆನು. ಅವರು ತಮ್ಮ ವಿಗ್ರಹಗಳಿಗೆ ತಮ್ಮ ಸ್ವಂತ ಚೊಚ್ಚಲು ಗಂಡುಮಕ್ಕಳನ್ನು ಆಹುತಿಕೊಡಲು ಪ್ರಾರಂಭಿಸಿದರು. ಈ ರೀತಿಯಾಗಿ ನಾನು ಆ ಜನರನ್ನು ನಾಶಮಾಡುವೆನು. ಆಗ ಅವರು ನಾನು ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವರು.’ 27 ಆದ್ದರಿಂದ ನರಪುತ್ರನೇ, ಇಸ್ರೇಲ್ ಜನಾಂಗದವರೊಂದಿಗೆ ಮಾತನಾಡು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ‘ನಿಮ್ಮ ಪೂರ್ವಿಕರು ನನಗೆ ಅಪಮಾನ ಮಾಡಿದರು ಮತ್ತು ದ್ರೋಹ ಮಾಡಿದರು. 28 ನಾನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಬಂದೆನು. ಆದರೆ ಎತ್ತರವಾದ ಬೆಟ್ಟವನ್ನಾಗಲಿ ಎಲೆಗಳುಳ್ಳ ಮರವನ್ನಾಗಲಿ ಅವರು ಕಂಡಾಗಲೆಲ್ಲಾ ಅವರು ಅಲ್ಲಿಗೆ ಹೋದರು ಮತ್ತು ವಿಗ್ರಹಗಳನ್ನು ಪೂಜಿಸಿದರು. ಅಲ್ಲಿ ಅವರು ಯಜ್ಞಗಳನ್ನೂ ನನ್ನನ್ನು ಕೋಪಗೊಳಿಸುವ ಕಾಣಿಕೆಗಳನ್ನೂ ಧೂಪವನ್ನೂ ಮತ್ತು ಪಾನದ್ರವ್ಯಾರ್ಪಣೆಗಳನ್ನೂ ಅರ್ಪಿಸಿದರು. 29 ನಾನು ಇಸ್ರೇಲರಿಗೆ, “ನೀವು ಎತ್ತರದಲ್ಲಿರುವ ಪೂಜಾಸ್ಥಳಗಳಿಗೆ ಯಾಕೆ ಹೋಗುತ್ತೀರಿ?” ಎಂದು ಪ್ರಶ್ನಿಸಿದೆನು. ಆ ಪೂಜಾಸ್ಥಳಗಳು ಇಂದಿಗೂ “ಎತ್ತರವಾದ ಸ್ಥಳ” ಎಂದು ಕರೆಯಲ್ಪಡುತ್ತಿವೆ. ಈಗಲೂ ಆ ಪೂಜಾಸ್ಥಳಗಳು ಅಲ್ಲಿವೆ.’”
30 ದೇವರು ಹೇಳಿದ್ದೇನೆಂದರೆ, “ಇಸ್ರೇಲ್ ಜನರು ದುಷ್ಕೃತ್ಯಗಳನ್ನು ಮಾಡಿದ್ದಾರೆ. ಆದ್ದರಿಂದ ನೀನು ಹೋಗಿ ಅವರಿಗೆ ಹೇಳು: ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಪೂರ್ವಿಕರು ಮಾಡಿದಂತೆಯೇ ನೀವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ನೀವು ಸೂಳೆಯರ ಹಾಗೆ ವರ್ತಿಸಿರುತ್ತೀರಿ. ನಿಮ್ಮ ಪೂರ್ವಿಕರು ಪೂಜಿಸಿದ ಆ ಭಯಂಕರವಾದ ವಿಗ್ರಹಗಳೊಂದಿಗೆ ಇರುವದಕ್ಕಾಗಿ ನನ್ನನ್ನು ನೀವು ತೊರೆದುಬಿಟ್ಟಿರಿ. 31 ನೀವು ಅವುಗಳಿಗೆ ಅದೇ ರೀತಿಯ ಕಾಣಿಕೆಗಳನ್ನರ್ಪಿಸುತ್ತೀರಿ. ಆ ಸುಳ್ಳು ದೇವರುಗಳಿಗೆ ನೀವು ನಿಮ್ಮ ಮಕ್ಕಳನ್ನು ಬೆಂಕಿಯ ಮೂಲಕ ಆಹುತಿ ಮಾಡುತ್ತೀರಿ. ಈ ಹೊತ್ತಿನ ದಿನದ ತನಕವೂ ಆ ಹೊಲಸು ವಿಗ್ರಹಗಳ ಮೂಲಕ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳುತ್ತಿದ್ದೀರಿ. ನೀವು ನನ್ನ ಬಳಿಗೆ ಬಂದು ನನ್ನ ಸಲಹೆಗಳನ್ನು ಕೇಳಲು ನಿಮ್ಮನ್ನು ನಾನು ಸ್ವಾಗತಿಸಬೇಕೋ? ನಾನು ಒಡೆಯನಾದ ಯೆಹೋವನು. ನನ್ನ ಜೀವದಾಣೆ, ನಾನು ನಿಮಗೆ ಉತ್ತರಿಸುವುದಿಲ್ಲ; ನಿಮಗೆ ಸಲಹೆಗಳನ್ನೂ ಕೊಡುವದಿಲ್ಲ. 32 ನಾವು ಮರದ ಮತ್ತು ಕಲ್ಲಿನ ವಸ್ತುಗಳನ್ನು ಪೂಜಿಸುತ್ತಾ ಇತರ ಜನಾಂಗಗಳಂತೆ ಇರೋಣ ಎಂದು ನೀವು ಯೋಚಿಸುತ್ತಲೇ ಇರುತ್ತೀರಿ. ನಿಮ್ಮ ಮನಸ್ಸುಗಳಲ್ಲಿರುವ ಈ ಆಲೋಚನೆಯು ಎಂದಿಗೂ ನೆರವೇರುವುದಿಲ್ಲ.’”
33 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಜೀವದಾಣೆ, ನಾನು ರಾಜನಾಗಿ ನಿಮ್ಮ ಮೇಲೆ ದೊರೆತನ ಮಾಡುವೆನೆಂದು ಪ್ರಮಾಣ ಮಾಡುತ್ತೇನೆ. ನಾನು ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ದಂಡಿಸುವೆನು. ನಿಮ್ಮ ವಿರುದ್ಧವಾಗಿ ನನ್ನ ಕೋಪವನ್ನು ತೋರ್ಪಡಿಸುವೆನು. 34 ಪರದೇಶಗಳಿಂದ ನಾನು ನಿಮ್ಮನ್ನು ಹೊರತರುವೆನು. ನಾನು ಆ ದೇಶಗಳಲ್ಲಿ ನಿಮ್ಮನ್ನು ಚದರಿಸಿದೆನು. ಆದರೆ ಆ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸಿ ಹಿಂದಕ್ಕೆ ಬರಮಾಡುವೆನು. ನನ್ನ ಬಲವಾದ ಕೈಯನ್ನು ಮತ್ತು ಶಕ್ತಿಯುತವಾದ ತೋಳನ್ನು ಮೇಲೆತ್ತಿ ನಿಮ್ಮನ್ನು ಶಿಕ್ಷಿಸಿ ನನ್ನ ಕೋಪವನ್ನು ಪ್ರದರ್ಶಿಸುವೆನು. 35 ನಾನು ಹಿಂದಿನ ಕಾಲದಲ್ಲಿ ಮಾಡಿದಂತೆ ಮರುಭೂಮಿಗೆ ನಿಮ್ಮನ್ನು ನಡೆಸುವೆನು. ಆದರೆ ಇದು ಅನ್ಯಜನಾಂಗಗಳು ವಾಸಿಸುವ ಸ್ಥಳದಲ್ಲಿರುವುದು ಮತ್ತು ನಾನು ಎದುರುಬದುರಾಗಿ ನಿಂತು ನಿಮಗೆ ನ್ಯಾಯತೀರಿಸುವೆನು. 36 ನಾನು ಈಜಿಪ್ಟಿನ ಮರುಭೂಮಿಯಲ್ಲಿ ನಿಮ್ಮ ಪೂರ್ವಿಕರನ್ನು ದಂಡಿಸಿದಂತೆ ನಿಮ್ಮನ್ನೂ ದಂಡಿಸುವೆನು.” ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.
37 “ನಾನು ನಿಮ್ಮ ನ್ಯಾಯವಿಚಾರಣೆ ಮಾಡಿ ನೀವು ಮಾಡಿದ ತಪ್ಪುಗಳಿಗೆ ನನ್ನ ಒಡಂಬಡಿಕೆಯ ಪ್ರಕಾರ ನಿಮ್ಮನ್ನು ಶಿಕ್ಷಿಸುವೆನು. 38 ನನಗೆ ವಿರೋಧವಾಗಿ ಎದ್ದು ಪಾಪಮಾಡಿದ ಜನರನ್ನು ಅವರ ಸ್ವದೇಶದಿಂದ ತೆಗೆದುಬಿಡುವೆನು. ಅವರು ಇನ್ನೆಂದಿಗೂ ಇಸ್ರೇಲ್ ದೇಶಕ್ಕೆ ಹಿಂತಿರುಗಿ ಬರುವುದೇ ಇಲ್ಲ. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು.”
39 ಇಸ್ರೇಲ್ ಜನರೇ, ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ಆ ಹೊಲಸು ವಿಗ್ರಹಗಳನ್ನು ಆರಾಧಿಸಬೇಕೆನ್ನುವವನು ಹೋಗಿ ಆರಾಧಿಸಲಿ. ಮುಂದಿನ ಕಾಲದಲ್ಲಂತೂ ನೀವು ನನ್ನ ಬುದ್ಧಿಮಾತನ್ನು ಕೇಳೇ ಕೇಳುವಿರಿ. ನನ್ನ ಪರಿಶುದ್ಧ ಹೆಸರನ್ನು ನೀವು ನಿಮ್ಮ ಬಲಿಗಳಿಂದಲೂ ಬೊಂಬೆಗಳಿಂದಲೂ ಅಪಕೀರ್ತಿಗೆ ಗುರಿಮಾಡುವುದೇ ಇಲ್ಲ.”
40 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿನ ಎತ್ತರವಾದ ನನ್ನ ಪವಿತ್ರಪರ್ವತಕ್ಕೆ ಜನರು ಬರಲೇಬೇಕು. ಅಲ್ಲಿ ಅವರು ನನ್ನ ಸೇವೆ ಮಾಡಲೇಬೇಕು. ಇಡೀ ಇಸ್ರೇಲ್ ಜನಾಂಗವು ತಮ್ಮ ದೇಶದಲ್ಲಿರುವುದು. ಅಲ್ಲಿ ನಾನು ಅವರನ್ನು ಸ್ವೀಕರಿಸಿಕೊಳ್ಳುವೆನು. ಅಲ್ಲಿ ನೀವು ನಿಮ್ಮ ಕಾಣಿಕೆಗಳನ್ನು ಪ್ರಥಮ ಫಲಗಳನ್ನು ಮತ್ತು ಎಲ್ಲಾ ಪವಿತ್ರ ಕಾಣಿಕೆಗಳನ್ನು ನನಗೆ ತರಬೇಕೆಂದು ಅಪೇಕ್ಷಿಸುತ್ತೇನೆ. 41 ಆಗ ನಿಮ್ಮ ಕಾಣಿಕೆಯ ಸುವಾಸನೆಯಿಂದ ಸಂತೋಷಭರಿತನಾಗುವೆನು. ಇದು ನಿಮ್ಮನ್ನು ಹಿಂದಕ್ಕೆ ನಿಮ್ಮ ದೇಶಕ್ಕೆ ಕರೆತಂದಾಗ ಆಗುವದು. ನಾನು ನಿಮ್ಮನ್ನು ಅನೇಕ ದೇಶಗಳಲ್ಲಿ ಚದರಿಸಿದೆನು. ಆದರೆ ನಾನು ನಿಮ್ಮನ್ನು ಒಟ್ಟುಗೂಡಿಸಿ ನಿಮ್ಮ ಮೂಲಕ ನನ್ನ ಪವಿತ್ರತೆಯನ್ನು ಪ್ರದರ್ಶಿಸುವೆನು. ಆ ಎಲ್ಲಾ ದೇಶಗಳವರು ಇದನ್ನು ನೋಡುವರು. 42 ನಾನು ನಿಮ್ಮನ್ನು ತಿರುಗಿ ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಇಸ್ರೇಲ್ ದೇಶಕ್ಕೆ ಬರಮಾಡಿದಾಗ ನಾನೇ ಯೆಹೋವನೆಂದು ಅರಿತುಕೊಳ್ಳುವಿರಿ. 43 ನಿಮ್ಮನ್ನು ನಿಮ್ಮ ದುಷ್ಟತ್ವದಿಂದ ಹೊಲಸು ಮಾಡಿಕೊಂಡದ್ದನ್ನು ಅಲ್ಲಿ ಜ್ಞಾಪಕಮಾಡಿಕೊಳ್ಳುವಿರಿ. ಆಗ ನೀವು ನಾಚಿಕೆಪಡುವಿರಿ. 44 ಇಸ್ರೇಲ್ ಜನಾಂಗಗಳೇ, ನೀವು ಅನೇಕ ಕೆಟ್ಟ ವಿಷಯಗಳನ್ನು ಮಾಡಿರುತ್ತೀರಿ. ಆ ದುಷ್ಕೃತ್ಯಗಳಿಗಾಗಿ ನೀವು ನಾಶವಾಗಿ ಹೋಗಬೇಕಾಗಿತ್ತು. ಆದರೆ ನನ್ನ ಒಳ್ಳೆಯ ಹೆಸರಿನ ಸಲುವಾಗಿ ನೀವು ಹೊಂದಬೇಕಾದ ಶಿಕ್ಷೆಯನ್ನು ನಾನು ನಿಮಗೆ ವಿಧಿಸುವುದಿಲ್ಲ. ಆಗ ನಾನೇ ಒಡೆಯನಾದ ಯೆಹೋವನೆಂದು ತಿಳಿದುಕೊಳ್ಳುವಿರಿ.” ಇದು ನನ್ನ ಒಡೆಯನಾದ ಯೆಹೋವನ ನುಡಿ.
45 ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 46 “ನರಪುತ್ರನೇ, ಯೆಹೂದದ ದಕ್ಷಿಣದಲ್ಲಿರುವ ನೆಗೆವ್ ಕಡೆಗೆ ನೋಡು. ನೆಗೆವ್ ಅಡವಿಗೆ ವಿರುದ್ಧವಾಗಿ ಮಾತನಾಡು. 47 ನೆಗೆವ್ ಅಡವಿಗೆ ಹೀಗೆ ಹೇಳು: ‘ಯೆಹೋವನ ಮಾತುಗಳನ್ನು ಆಲೈಸು. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಅಡವಿಯಲ್ಲಿ ಬೆಂಕಿಯನ್ನು ಹಾಕುತ್ತೇನೆ. ಆ ಬೆಂಕಿಯು ಪ್ರತಿಯೊಂದು ಹಸಿರು ಮರವನ್ನೂ ಪ್ರತಿಯೊಂದು ಒಣಗಿದ ಮರವನ್ನೂ ಸುಟ್ಟುಬಿಡುವುದು. ಆ ಬೆಂಕಿಯನ್ನು ನಂದಿಸಲಾಗುವದಿಲ್ಲ. ದಕ್ಷಿಣದಿಂದ ಉತ್ತರದ ತನಕವಿರುವ ಪ್ರತಿಯೊಂದು ಮುಖವು ಅದರ ತಾಪವನ್ನು ಅನುಭವಿಸುವುದು. 48 ಆಗ ಎಲ್ಲಾ ಜನರು ಯೆಹೋವನಾದ ನಾನೇ ಬೆಂಕಿಯನ್ನಿಟ್ಟಿದ್ದು ಎಂದು ತಿಳಿದುಕೊಳ್ಳುವರು. ಆ ಬೆಂಕಿಯು ನಂದಿಸಲ್ಪಡುವುದಿಲ್ಲ.’”
49 ಆಗ ನಾನು (ಯೆಹೆಜ್ಕೇಲ್), “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನಾನು ಇದನ್ನೆಲ್ಲಾ ಹೇಳಿದರೆ, ನಿಗೂಢವಾದ ಕಥೆಗಳನ್ನು ಹೇಳುತ್ತಿದ್ದೇನೆಂದು ಹೇಳುವರು. ಮತ್ತು ನನಗೆ ಇನ್ನೆಂದಿಗೂ ಕಿವಿಗೊಡುವದಿಲ್ಲ” ಎಂದು ಹೇಳಿದೆನು.
Kannada Holy Bible: Easy-to-Read Version. All rights reserved. © 1997 Bible League International