Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 1-4

ಯೆಹೆಜ್ಕೇಲನನ್ನು ಪ್ರವಾದಿಯನ್ನಾಗಿ ನೇಮಿಸಿದ್ದು

1-3 ನಾನು ಯಾಜಕನಾಗಿದ್ದೇನೆ. ನಾನು ಬೂಜಿಯ ಮಗನಾದ ಯೆಹೆಜ್ಕೇಲ. ನಾನು ಬಾಬಿಲೋನಿನಲ್ಲಿ ಯೆಹೂದ್ಯರೊಂದಿಗೆ ಸೆರೆಯಲ್ಲಿದ್ದೆ. ನಾನು ಕೆಬಾರ್ ಕಾಲುವೆಯ ಬಳಿಯಲ್ಲಿದ್ದಾಗ ಆಕಾಶ ತೆರೆದಿರುವದನ್ನು ಕಂಡೆನು. ನನಗೆ ದೇವದರ್ಶನವಾಯಿತು. ಇದು ಮೂವತ್ತನೆಯ ವರ್ಷದ ನಾಲ್ಕನೆಯ ತಿಂಗಳಿನ ಐದನೆ ದಿವಸದಲ್ಲಾಯಿತು. ಒಡೆಯನಾದ ಯೆಹೋಯಾಖೀನನು ಸೆರೆಯಲ್ಲಿದ್ದ ಐದನೆಯ ವರ್ಷದ ನಾಲ್ಕನೆ ತಿಂಗಳಿನ ಐದನೆಯ ದಿನದಲ್ಲಿ ಯೆಹೋವನ ವಾಕ್ಯವು ಯೆಹೆಜ್ಕೇಲನಿಗೆ ಬಂದಿತು. ಆ ಸ್ಥಳದಲ್ಲಿ ಯೆಹೋವನ ಆತ್ಮನಿಂದ ಅವನು ಪರವಶನಾದನು.

ಯೆಹೋವನ ರಥ—ದೇವರ ಸಿಂಹಾಸನ

ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜ್ವಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು. ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು. ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು. ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು. ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು; ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು.

10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. 11 ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. 12 ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ. 13 ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು.

ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು.

15-16 ಆ ಜೀವಿಗಳನ್ನು ನಾನು ನೋಡುತ್ತಿರುವಾಗ, ನೆಲಕ್ಕೆ ತಾಕಿದ್ದ ನಾಲ್ಕು ಚಕ್ರಗಳನ್ನು ಕಂಡೆನು. ಒಂದೊಂದು ಜೀವಿಯ ಪಕ್ಕದಲ್ಲಿ ಒಂದೊಂದು ಚಕ್ರಗಳಿದ್ದವು. ಆ ಎಲ್ಲಾ ಚಕ್ರಗಳು ಒಂದೇ ಪ್ರಕಾರವಾಗಿ ಕಾಣುತ್ತಿದ್ದವು. ಅವುಗಳು ಹೊಳೆಯುವ ಹಳದಿ ಬಣ್ಣದ ರತ್ನಗಳಿಂದ ಮಾಡಲ್ಪಟ್ಟಂತೆ ತೋರುತ್ತಿದ್ದವು. ಆ ಚಕ್ರದೊಳಗೆ ಇನ್ನೊಂದು ಚಕ್ರವಿದ್ದಂತೆ ತೋರುತ್ತಿತ್ತು. 17 ಆ ಚಕ್ರಗಳು ಹೊರಳುವಾಗ ನಾಲ್ಕು ದಿಕ್ಕುಗಳಲ್ಲಿ ಯಾವ ದಿಕ್ಕಿಗೆ ಬೇಕಾದರೂ ತಿರುಗಬಲ್ಲವುಗಳಾಗಿದ್ದವು. ಆದರೆ ಜೀವಿಗಳು ಚಲಿಸುತ್ತಿರುವಾಗ ಅವು ತಿರುಗುತ್ತಿರಲಿಲ್ಲ.

18 ಚಕ್ರಗಳ ಅಂಚು ಎತ್ತರವಾಗಿದ್ದು ಭಯಾನಕವಾಗಿ ಕಾಣುತ್ತಿದ್ದವು. ಆ ನಾಲ್ಕು ಚಕ್ರಗಳ ಅಂಚುಗಳ ತುಂಬ ಕಣ್ಣುಗಳಿದ್ದವು.

19 ಚಕ್ರಗಳು ಜೀವಿಗಳೊಂದಿಗೆ ಯಾವಾಗಲೂ ಚಲಿಸುತ್ತಿದ್ದವು. ಜೀವಿಗಳು ಗಾಳಿಯಲ್ಲಿ ಹಾರಾಡುತ್ತಿದ್ದರೆ, ಚಕ್ರಗಳು ಸಹ ಅವುಗಳ ಜೊತೆಯಲ್ಲಿಯೇ ಚಲಿಸುತ್ತಿದ್ದವು. 20 ದೇವರಾತ್ಮನು ನಡೆಸಿದ ಕಡೆಗೆ ಜೀವಿಗಳು ಹೋದವು. ಚಕ್ರಗಳು ಸಹ ಅವುಗಳೊಂದಿಗೆ ಚಲಿಸಿದವು. ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿತ್ತು. 21 ಹೀಗೆ ಜೀವಿಗಳು ಚಲಿಸಿದಾಗ ಚಕ್ರಗಳು ಚಲಿಸಿದವು. ಜೀವಿಗಳು ನಿಂತಾಗ ಚಕ್ರಗಳೂ ನಿಂತವು. ಜೀವಿಗಳು ಗಾಳಿಯಲ್ಲಿ ಮೇಲಕ್ಕೆ ಹೋದರೆ, ಚಕ್ರಗಳೂ ಅವುಗಳೊಂದಿಗೆ ಮೇಲಕ್ಕೆ ಹೋದವು; ಯಾಕೆಂದರೆ ಜೀವಿಗಳನ್ನು ನಿಯಂತ್ರಿಸುವ ಆತ್ಮವು ಚಕ್ರಗಳಲ್ಲಿ ಇತ್ತು.

22 ಆ ಜೀವಿಗಳ ತಲೆಗಳ ಮೇಲೆ ಆಶ್ಚರ್ಯಕರವಾದ ಒಂದು ಗುಮಟದಂತಿರುವ ವಸ್ತುವು ಹರಡಿಕೊಂಡಿತ್ತು. ಅದು ತಲೆಕೆಳಕಾಗಿ ಇಟ್ಟಿದ್ದ ಬೋಗುಣಿಯಂತಿತ್ತು. ಅದು ಸ್ಪಟಿಕದಂತೆ ಸ್ವಚ್ಫವಾಗಿತ್ತು. 23 ಈ ಬೋಗುಣಿಯಡಿಯಲ್ಲಿ ಒಂದೊಂದು ಜೀವಿಯು ತನ್ನ ಎರಡು ರೆಕ್ಕೆಗಳನ್ನು ಚಾಚಿಕೊಂಡು ಮತ್ತೊಂದು ಜೀವಿಯನ್ನು ತಾಕುತ್ತಿತ್ತು. ಒಂದೊಂದು ಜೀವಿಯ ಮತ್ತೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು.

24 ಜೀವಿಗಳು ಚಲಿಸಿದಾಗಲೆಲ್ಲಾ ಅವುಗಳ ರೆಕ್ಕೆಗಳ ಗಟ್ಟಿಯಾದ ಶಬ್ದ ನನಗೆ ಕೇಳಿಸಿತು. ಅದು ನೀರು ಭೋರ್ಗರೆಯುವ ಶಬ್ದದಂತಿತ್ತು. ಸರ್ವಶಕ್ತನಾದ ದೇವರ ಶಬ್ದದಂತೆ ಅದು ಗಟ್ಟಿಯಾಗಿತ್ತು. ಅದು ದೊಡ್ಡ ಸೈನ್ಯದ ಅಥವಾ ಜನಸಮೂಹದ ಶಬ್ದದಂತಿತ್ತು. ಜೀವಿಗಳು ಚಲಿಸುವುದನ್ನು ನಿಲ್ಲಿಸಿದಾಗ ಅವುಗಳು ತಮ್ಮ ರೆಕ್ಕೆಗಳನ್ನು ತಮ್ಮ ಪಾರ್ಶ್ವಗಳಲ್ಲಿ ಕೆಳಗಿಳಿಸುತ್ತಿದ್ದವು.

25 ಜೀವಿಗಳು ಚಲಿಸುವದನ್ನು ನಿಲ್ಲಿಸಿ ರೆಕ್ಕೆಗಳನ್ನು ಕೆಳಗಿಳಿಸಿದವು. ಆಗ ಇನ್ನೊಂದು ದೊಡ್ಡ ಶಬ್ದ ಉಂಟಾಯಿತು. ಅವುಗಳ ತಲೆಗಳ ಮೇಲ್ಗಡೆಯ ಬೋಗುಣಿಯ ಮೇಲಿನಿಂದ ಆ ಶಬ್ದವು ಹೊರಟಿತ್ತು. 26 ಆ ಬೋಗುಣಿಯ ಮೇಲೆ ಸಿಂಹಾಸನದಂತಿದ್ದ ವಸ್ತುವು ಇತ್ತು. ಅದು ನೀಲಮಣಿಯಂತೆ ನೀಲಿ ಬಣ್ಣದ್ದಾಗಿತ್ತು. ಆ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದ ಒಬ್ಬನು ಮನುಷ್ಯನಂತೆ ಕಾಣುತ್ತಿದ್ದನು. 27 ನಾನು ಆತನ ಸೊಂಟದ ಮೇಲ್ಭಾಗವನ್ನು ನೋಡಿದಾಗ, ಆತನು ಬೆಂಕಿಯಿಂದ ಸುತ್ತುವರಿದ ಕಾದಲೋಹದಂತೆ ಕಂಡನು. ನಾನು ಆತನ ಸೊಂಟದಿಂದ ಕೆಳಭಾಗವನ್ನು ನೋಡಿದಾಗ ಆತನು ಬೆಂಕಿಯಂತೆ ಕಂಡನು. ಆತನ ಸುತ್ತಲೂ ಪ್ರಕಾಶಮಾನವಾದ ಬೆಳಕಿತ್ತು. 28 ಆತನ ಸುತ್ತಲೂ ಇದ್ದ ಪ್ರಕಾಶವು ಮೇಘಬಿಲ್ಲಿನಂತೆಯೂ ಯೆಹೋವನ ಮಹಿಮೆಯಂತೆಯೂ ಕಾಣುತ್ತಿತ್ತು. ನಾನು ಅದನ್ನು ನೋಡಿದ ಕೂಡಲೇ ನೆಲಕ್ಕೆ ಬಿದ್ದೆನು. ಮುಖವನ್ನು ನೆಲದ ಮೇಲಿಟ್ಟು ಅಡ್ಡಬಿದ್ದೆನು. ಆಗ ನನ್ನೊಂದಿಗೆ ಮಾತನಾಡುತ್ತಿದ್ದ ಸ್ವರವನ್ನು ಕೇಳಿದೆನು.

ಯೆಹೋವನು ಯೆಹೆಜ್ಕೇಲನ ಸಂಗಡ ಮಾತನಾಡಿದ್ದು

ಆ ಸ್ವರವು, “ನರಪುತ್ರನೇ, ಎದ್ದೇಳು ನಾನು ನಿನ್ನೊಂದಿಗೆ ಮಾತನಾಡುತ್ತೇನೆ” ಎಂದಿತು.

ಆತನು ನನ್ನೊಂದಿಗೆ ಮಾತನಾಡುತ್ತಿರಲು, ಆತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಆತನು ನನ್ನೊಂದಿಗೆ ಮಾತಾಡುವುದು ನನಗೆ ಕೇಳಿಸಿತು. ಆತನು ನನ್ನೊಂದಿಗೆ, “ನರಪುತ್ರನೇ, ಇಸ್ರೇಲ್ ಜನಾಂಗದವರೊಡನೆ ಮಾತನಾಡಲು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಎಷ್ಟೋಬಾರಿ ನನಗೆ ವಿರುದ್ಧವಾಗಿ ಎದ್ದರು. ಅವರ ಪೂರ್ವಿಕರೂ ನನಗೆ ವಿರುದ್ಧವಾಗಿ ಎದ್ದಿದ್ದರು. ನನಗೆ ವಿರುದ್ಧವಾಗಿ ಎಷ್ಟೋವೇಳೆ ಪಾಪ ಮಾಡಿದರು. ಈಗಲೂ ಅವರು ಪಾಪ ಮಾಡುತ್ತಲೇ ಇದ್ದಾರೆ. ಆ ಜನರೊಂದಿಗೆ ಮಾತನಾಡಲು ನಾನು ನಿನ್ನನ್ನು ಕಳುಹಿಸುತ್ತಿದ್ದೇನೆ. ಅವರು ಬಹಳವಾಗಿ ಪ್ರತಿಭಟಿಸುವವರೂ ಮೊಂಡರೂ ಆಗಿದ್ದಾರೆ. ಆದರೆ ನೀನು ಅವರೊಂದಿಗೆ ಮಾತಾಡಿ, ‘ನಮ್ಮ ಒಡೆಯನಾದ ಯೆಹೋವನು ಇದನ್ನು ಹೇಳಿದ್ದಾನೆ’ ಎಂದು ಹೇಳಬೇಕು. ಜನರು ನಿನ್ನ ಮಾತನ್ನು ಕೇಳಬಹುದು ಅಥವಾ ಕೇಳದಿರಬಹುದು: ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ನನ್ನ ಮುಂದೆ ಪಾಪಮಾಡುವುದನ್ನು ನಿಲ್ಲಿಸಲಿಲ್ಲ. ಅವರು ಯಾವಾಗಲೂ ನನ್ನ ವಿರುದ್ಧ ದಂಗೆ ಏಳುವರು. ಆದ್ದರಿಂದ ನಾನು ತಿಳಿಸಿದ್ದನ್ನೆ ನೀನು ಹೇಳಬೇಕು. ಆಗ ಅವರು ತಮ್ಮ ಮಧ್ಯೆ ಒಬ್ಬ ಪ್ರವಾದಿ ಇದ್ದಾನೆಂದು ಗ್ರಹಿಸಿಕೊಳ್ಳುವರು.

“ನರಪುತ್ರನೇ, ಆ ಜನರು ನಿನ್ನನ್ನು ವಿರೋಧಿಸಿದರೂ ನೀನು ಅವರಿಗೆ ಭಯಪಡಬೇಡ ಮತ್ತು ಅವರು ಹೇಳುವ ಮಾತುಗಳಿಗೆ ನೀನು ಹೆದರಬೇಡ. ಮುಳ್ಳುಗಳೂ ಮುಳ್ಳುಪೊದೆಗಳೂ ನಿನಗೆ ಒತ್ತುವಂತೆಯೂ ನೀನು ಚೇಳುಗಳ ಮೇಲೆ ಕುಳಿತುಕೊಂಡಿರುವಂತೆಯೂ ಅದು ಇರುವದು. ಆದರೆ ಅವರಾಡುವ ಮಾತುಗಳಿಗೆ ಭಯಪಡಬೇಡ. ಅವರು ದಂಗೆಕೋರರು. ಅವರು ಕೇಳಲಿ, ಕೇಳದಿರಲಿ, ನಾನು ಹೇಳುವದನ್ನು ಅವರಿಗೆ ತಿಳಿಸು; ಯಾಕೆಂದರೆ ಅವರು ದಂಗೆಕೋರರು.

“ನರಪುತ್ರನೇ, ನಾನು ಹೇಳುವದನ್ನು ನೀನು ಸರಿಯಾಗಿ ಕೇಳಬೇಕು. ದಂಗೆಕೋರರಾದ ಆ ಜನರಂತೆ ನೀನೂ ನನಗೆ ವಿರುದ್ಧವಾಗಿರಬೇಡ. ನಾನು ನಿನಗೆ ಕೊಡಲಿರುವುದನ್ನು ನಿನ್ನ ಬಾಯಿತೆರೆದು ತಿನ್ನು.”

ಆಗ ನಾನು ಒಂದು ಕೈ ನನ್ನ ಬಳಿಗೆ ಬರುವದನ್ನು ಕಂಡೆನು. ಆ ಕೈ ಒಂದು ಸುರುಳಿಯನ್ನು ಹಿಡುಕೊಂಡಿತ್ತು. 10 ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಬರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಬರೆಯಲ್ಪಟ್ಟಿದ್ದವು.

ದೇವರು ನನಗೆ, “ನರಪುತ್ರನೇ, ನೀನು ನೋಡುತ್ತಿರುವ ಈ ಸುರುಳಿಯನ್ನು ತಿನ್ನು. ಆಮೇಲೆ ಹೋಗಿ ಇಸ್ರೇಲ್ ವಂಶದವರಿಗೆ ಈ ವಿಷಯಗಳ ಬಗ್ಗೆ ಹೇಳು” ಎಂದು ಅಪ್ಪಣೆಕೊಟ್ಟನು.

ಆಗ ನಾನು ನನ್ನ ಬಾಯನ್ನು ತೆರೆಯಲು ಆತನು ಆ ಸುರುಳಿಯನ್ನು ನನ್ನ ಬಾಯೊಳಗೆ ಹಾಕಿದನು. ಆಗ ದೇವರು ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಈ ಸುರುಳಿಯನ್ನು ನಿನಗೆ ಕೊಡುತ್ತೇನೆ. ಇದನ್ನು ನುಂಗು. ಇದು ನಿನ್ನ ಹೊಟ್ಟೆಯನ್ನು ತುಂಬಲಿ.”

ಆಗ ನಾನು ಆ ಸುರುಳಿಯನ್ನು ತಿಂದೆನು. ಅದು ನನ್ನ ಬಾಯಲ್ಲಿ ಜೇನುತುಪ್ಪದ ಸಿಹಿಯಂತೆ ರುಚಿಯಾಗಿತ್ತು.

ಆಗ ದೇವರು ನನಗೆ ಹೇಳಿದ್ದೇನೆಂದರೆ, “ನರಪುತ್ರನೇ, ಇಸ್ರೇಲ್ ವಂಶದವರ ಬಳಿಗೆ ಹೋಗಿ ನನ್ನ ಮಾತುಗಳನ್ನು ಅವರಿಗೆ ತಿಳಿಸು. ನೀನು ಕಷ್ಟಕರವಾದ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಲಿ ಮಾತನಾಡುವುದಕ್ಕಾಗಲಿ ಪರದೇಶಿಯರ ಬಳಿಗೆ ನಾನು ಕಳುಹಿಸುತ್ತಿಲ್ಲ. ನಾನು ಇಸ್ರೇಲ್ ವಂಶದವರ ಬಳಿಗೆ ನಿನ್ನನ್ನು ಕಳುಹಿಸುತ್ತಿದ್ದೇನೆ. ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಕರವಾದ ಅಥವಾ ಮಾತಾಡಲು ಕಷ್ಟವಾದ ಅಥವಾ ಪದಗಳನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವಾಗದ ಅನೇಕ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತಿಲ್ಲ. ಆ ಜನಾಂಗಗಳ ಬಳಿಗೆ ನಾನು ನಿನ್ನನ್ನು ಕಳುಹಿಸಿದರೆ ಅವರು ಖಂಡಿತವಾಗಿಯೂ ಕಿವಿಗೊಡುವರು. ಆದರೆ ನಾನು ಇಸ್ರೇಲ್ ವಂಶದವರ ಬಳಿಗೆ ನಿನ್ನನ್ನು ಕಳುಹಿಸುತ್ತಿದ್ದೇನೆ. ಇವರಿಗೆ ಮೊಂಡತನವಿರುವದು. ನಿನ್ನ ಮಾತನ್ನು ಕೇಳಲು ನಿರಾಕರಿಸುವರು. ಅವರಿಗೆ ನನ್ನ ಮಾತುಗಳನ್ನು ಕೇಳಲು ಇಷ್ಟವಿಲ್ಲ. ಅವರು ಕಠಿಣರಾಗಿರುವಂತೆಯೇ ನಾನು ನಿನ್ನನ್ನೂ ಕಠಿಣಗೊಳಿಸುತ್ತೇನೆ. ನಿನಗೂ ಅವರಂತೆ ಮೊಂಡತನವನ್ನು ಕೊಡುವೆನು. ವಜ್ರವು ಬಂಡೆಕಲ್ಲಿಗಿಂತ ಗಟ್ಟಿಯಾದ ವಸ್ತು. ಅದೇ ಪ್ರಕಾರ ನಿನ್ನ ತಲೆ ಅವರ ತಲೆಗಿಂತ ಗಟ್ಟಿಯಾಗಿರುವುದು. ಆ ಜನರಿಗೆ ಭಯಪಡಬೇಡ. ಅವರು ದಂಗೆಕೋರರಾಗಿದ್ದರೂ ಅವರ ಸಮ್ಮುಖದಲ್ಲಿ ಭಯಪಡಬೇಡ.”

10 ದೇವರು ನನಗೆ ಮತ್ತೇ ಹೇಳಿದ್ದೇನೆಂದರೆ, “ನರಪುತ್ರನೇ, ನಾನು ಹೇಳುವ ಪ್ರತಿಯೊಂದು ಮಾತನ್ನು ನೀನು ಕಿವಿಗೊಟ್ಟು ಕೇಳಬೇಕು. ಆ ಮಾತುಗಳನ್ನು ನೀನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. 11 ಬಳಿಕ ಸೆರೆವಾಸದಲ್ಲಿರುವ ನಿನ್ನ ಸ್ವಜನರ ಬಳಿಗೆ ಹೋಗು. ಅವರು ಕೇಳಲಿ, ಕೇಳದಿರಲಿ, ನೀನು ಅವರಿಗೆ, ‘ದೇವರಾದ ಯೆಹೋವನು ಹೀಗೆ ಹೇಳುತ್ತಾನೆ’” ಎಂದು ಹೇಳು.

12 ಆಗ ದೇವರಾತ್ಮವು ನನ್ನನ್ನು ಮೇಲಕ್ಕೆ ಎತ್ತಿತು. ಯೆಹೋವನ ಮಹಿಮೆಯು ತನ್ನ ಸ್ಥಳದಿಂದ ಮೇಲೇರಿದಾಗ ನನ್ನ ಹಿಂಭಾಗದಲ್ಲಿ ಮಹಾ ಗುಡುಗುವ ಶಬ್ದವನ್ನು ಕೇಳಿದೆನು. ಅದು ಯೆಹೋವನಿಗೆ ಆತನ ನಿವಾಸದಲ್ಲಿ ಸ್ತೋತ್ರವಾಗಲಿ ಎಂಬ ವಾಣಿಯೊಂದಿಗೆ ಕೇಳಿಸುತ್ತಿತ್ತು. 13 ಅದು ಜೀವಿಗಳು ತಮ್ಮ ರೆಕ್ಕೆಗಳನ್ನು ಒಂದಕ್ಕೊಂದು ಬಡಿದಾಡುವ ಸಪ್ಪಳ ಮತ್ತು ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಸಪ್ಪಳ. 14 ಆತ್ಮವು ನನ್ನನ್ನು ಅಲ್ಲಿಂದ ಎತ್ತಿಕೊಂಡು ಹೋಯಿತು. ನಾನು ಆಗ ದುಃಖಗೊಂಡು ನನ್ನ ಆತ್ಮದಲ್ಲಿ ತತ್ತರಗೊಂಡೆನು. ಆದರೆ ಯೆಹೋವನ ಶಕ್ತಿಯು ನನ್ನನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ತೆಗೆದುಕೊಂಡಿತು. 15 ಕೆಬಾರ್ ಕಾಲುವೆ ಪಕ್ಕದಲ್ಲಿದ್ದ ತೇಲ್ ಆಬೀಬ್‌ನಲ್ಲಿ ಸೆರೆಯಾಳುಗಳಾಗಿದ್ದ ಇಸ್ರೇಲ್ ಜನರ ಬಳಿಗೆ ನಾನು ಒಯ್ಯಲ್ಪಟ್ಟೆನು. ಅಲ್ಲಿದ್ದ ಜನರ ಮಧ್ಯೆ ನಾನು ಏಳು ದಿವಸ ಸ್ತಬ್ಧನಾಗಿದ್ದೆನು.

ಇಸ್ರೇಲಿಗೆ ಕಾವಲುಗಾರನಾಗಿ

16 ಏಳು ದಿವಸಗಳ ತರುವಾಯ, ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: 17 “ನರಪುತ್ರನೇ, ನಾನು ನಿನ್ನನ್ನು ಇಸ್ರೇಲರಿಗೆ ಕಾವಲುಗಾರನನ್ನಾಗಿ ಮಾಡಿದ್ದೇನೆ. ನಾನು ಅವರಿಗೆ ಸಂಭವಿಸುವ ಕೆಟ್ಟ ವಿಷಯಗಳನ್ನು ನಿನಗೆ ಹೇಳುತ್ತಿದ್ದೇನೆ. ಮತ್ತು ನೀನು ನನ್ನ ಪರವಾಗಿ ಅವರನ್ನು ಎಚ್ಚರಿಸು. 18 ನಾನು ದುಷ್ಟನಿಗೆ, ‘ನೀನು ಸಾಯುವೆ’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸಬೇಕು. ಅವನು ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುವದಕ್ಕಾಗಿ ತನ್ನ ಜೀವಿತವನ್ನು ಮಾರ್ಪಡಿಸಿಕೊಂಡು ದುಷ್ಕೃತ್ಯ ನಿಲ್ಲಿಸಬೇಕೆಂದು ನೀನು ಅವನಿಗೆ ಹೇಳಬೇಕು. ನೀನು ಅವನನ್ನು ಎಚ್ಚರಿಸದಿದ್ದರೆ ಅವನು ತನ್ನ ಪಾಪದ ದೆಸೆಯಿಂದ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೇ ಹೊಣೆಗಾರನನ್ನಾಗಿ ಮಾಡುತ್ತೇನೆ.

19 “ಒಂದುವೇಳೆ ನೀನು ಒಬ್ಬ ದುಷ್ಟಮನುಷ್ಯನನ್ನು ಎಚ್ಚರಿಸಿ ಅವನು ಪಾಪ ಮಾಡದಂತೆ ಮತ್ತು ಅವನ ಜೀವಿತವನ್ನು ಬದಲಾವಣೆ ಮಾಡಲು ಹೇಳಿದ್ದಲ್ಲಿ ಆ ಮನುಷ್ಯನು ನಿನ್ನ ಮಾತುಗಳನ್ನು ಕೇಳಲು ನಿರಾಕರಿಸಿದರೆ, ಅವನು ಪಾಪ ಮಾಡುವುದರಿಂದ ಸಾಯುವನು. ಆದರೆ ನೀನು ನಿನ್ನ ಜೀವವನ್ನು ರಕ್ಷಿಸಿಕೊಳ್ಳುವಿ.

20 “ಒಳ್ಳೆಯವನು ತನ್ನ ಒಳ್ಳೆಯತನವನ್ನು ತೊರೆದು ಕೆಟ್ಟದ್ದನ್ನು ಮಾಡಿದರೆ, ನಾನು ಅವನ ಹಾದಿಗೆ ತಡೆಯನ್ನು ಹಾಕಿ ಅವನು ಬೀಳುವಂತೆ ಮಾಡುವೆನು; ಅವನು ಸಾಯುವನು. ನೀನು ಅವನನ್ನು ಎಚ್ಚರಿಸಲಿಲ್ಲವಾದ್ದರಿಂದ ಅವನು ತನ್ನ ಪಾಪದ ನಿಮಿತ್ತ ಸಾಯುವನು. ಆದರೆ ಅವನ ಮರಣಕ್ಕೆ ನಾನು ನಿನ್ನನ್ನೆ ಹೊಣೆಗಾರನನ್ನಾಗಿ ಮಾಡುತ್ತೇನೆ. ಜನರು ಅವನ ಒಳ್ಳೆಯ ಕಾರ್ಯಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.

21 “ನೀನು ಆ ಒಳ್ಳೆಯವನಿಗೆ ಪಾಪ ಮಾಡದಂತೆ ಎಚ್ಚರಿಸಿದರೆ ಮತ್ತು ಅವನು ಪಾಪ ಮಾಡುವದನ್ನು ನಿಲ್ಲಿಸಿದರೆ, ಆ ಮನುಷ್ಯನು ಸಾಯುವದಿಲ್ಲ; ಯಾಕೆಂದರೆ ಅವನು ನಿನ್ನ ಎಚ್ಚರಿಕೆಗೆ ಕಿವಿಗೊಟ್ಟನು ಮತ್ತು ನೀನು ನಿನ್ನ ಸ್ವಂತ ಪ್ರಾಣವನ್ನು ರಕ್ಷಿಸಿಕೊಂಡಿರುವೆ.”

22 ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನಗೆ, “ಎದ್ದೇಳು, ಬಯಲು ಸೀಮೆಗೆ ಹೋಗು. ಅಲ್ಲಿ ನಾನು ನಿನ್ನೊಂದಿಗೆ ಮಾತನಾಡುವೆನು” ಎಂದು ಹೇಳಿದನು.

23 ನಾನೆದ್ದು ಬಯಲು ಸೀಮೆಗೆ ಹೋದೆನು. ಕೆಬಾರ್ ನದಿಯ ಪಕ್ಕದಲ್ಲಿ ನಾನು ಕಂಡ ಮಹಿಮೆಯಂತಿದ್ದ ಯೆಹೋವನ ಮಹಿಮೆಯು ಅಲ್ಲಿ ಇತ್ತು. ನಾನು ನನ್ನ ಮುಖವನ್ನು ನೆಲಕ್ಕೆ ತಾಗಿಸಿ ಬಗ್ಗಿ ನಮಸ್ಕರಿಸಿದೆ. 24 ಆಗ ಆತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಬಳಿಕ ಆತನು ನನಗೆ, “ನೀನು ನಿನ್ನ ಮನೆಯೊಳಗೆ ಹೋಗಿ ಒಳಗಿನಿಂದ ಕದವನ್ನು ಹಾಕಿಕೊ. 25 ನರಪುತ್ರನೇ, ನಿನ್ನ ಸ್ವಜನರು ಹಗ್ಗ ಹಿಡಿದುಕೊಂಡು ಬಂದು ನಿನ್ನನ್ನು ಕಟ್ಟುವರು. ನಿನ್ನನ್ನು ಜನರ ಮಧ್ಯದಿಂದ ಹೊರಹೋಗದಂತೆ ಮಾಡುವರು. 26 ನಿನ್ನ ನಾಲಿಗೆಯು ಸೇದಿ ಹೋಗುವಂತೆ ಮಾಡುವೆನು. ನಿನಗೆ ಮಾತನಾಡಲು ಆಗದು. ಆದ್ದರಿಂದ ಅವರನ್ನು ಖಂಡಿಸಲು ಯಾರೂ ಇರುವದಿಲ್ಲ. ಯಾಕೆಂದರೆ ಆ ಜನರು ಯಾವಾಗಲೂ ನನ್ನ ವಿರುದ್ಧವಾಗಿ ವರ್ತಿಸುವರು. 27 ಆದರೆ ನಾನು ನಿನ್ನೊಂದಿಗೆ ಮಾತನಾಡುವಾಗ, ನಿನ್ನನ್ನು ಮಾತನಾಡಲಾಗುವಂತೆ ಮಾಡುವೆನು. ಆಗ ನೀನು ಅವರಿಗೆ, ‘ನಮ್ಮ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ’ ಎಂದು ಹೇಳಬೇಕು. ಕೆಲವರು ಕಿವಿಗೊಡುವರು; ಕೆಲವರು ಕಿವಿಗೊಡರು; ಯಾಕೆಂದರೆ ಅವರು ಯಾವಾಗಲೂ ನನಗೆ ವಿರುದ್ಧವಾಗಿಯೇ ಇರುವರು.

ಜೆರುಸಲೇಮಿನ ನಾಶನದ ಕುರಿತು ಮುನ್ನೆಚ್ಚರಿಕೆ

“ನರಪುತ್ರನೇ, ಒಂದು ಇಟ್ಟಿಗೆಯನ್ನು ತೆಗೆದುಕೊ, ಅದನ್ನು ನಿನ್ನ ಮುಂದೆ ಇಟ್ಟು ಅದರ ಮೇಲೆ ಒಂದು ಚಿತ್ರವನ್ನು ಅಂದರೆ ಜೆರುಸಲೇಮ್ ನಗರದ ಚಿತ್ರವನ್ನು ಕೊರೆ. ಆಮೇಲೆ, ನೀನೇ ಒಂದು ಸೈನ್ಯದೊಂದಿಗೆ ಆ ನಗರವನ್ನು ಮುತ್ತಿಗೆ ಹಾಕಿದವನಂತೆ ನಟನೆ ಮಾಡು. ನಗರದ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿ ನೀನು ಅದಕ್ಕೆ ಧಾಳಿ ಮಾಡಲು ಸಹಾಯವಾಗುವಂತೆ ಮಾಡು. ನಗರದ ಪೌಳಿಗೋಡೆಯ ತನಕ ಒಂದು ರಸ್ತೆಯನ್ನು ತಯಾರಿಸು. ಒಂದು ಭಿತ್ತಿಭೇದಕ ಯಂತ್ರವನ್ನು ತಂದು ಸೈನ್ಯದ ಪಾಳೆಯಗಳನ್ನು ನಗರದ ಸುತ್ತಲೂ ನಿರ್ಮಿಸು. ಆ ಬಳಿಕ ಒಂದು ಕಬ್ಬಿಣದ ರೊಟ್ಟಿ ಕಲ್ಲನ್ನು ನಿನಗೂ ನಗರಕ್ಕೂ ಮಧ್ಯೆ ಇಡು. ಅದು ನಿನಗೂ ನಗರಕ್ಕೂ ನಡುವೆ ಇರುವ ಕಬ್ಬಿಣದ ಗೋಡೆಯಂತಿರುವುದು. ಈ ರೀತಿಯಾಗಿ ನೀನು ಆ ನಗರಕ್ಕೆ ವಿರುದ್ಧವಾಗಿರುವಂತೆ ಕಂಡುಬರುವೆ. ನೀನು ಆ ನಗರಕ್ಕೆ ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧ ಮಾಡುವಿ. ಯಾಕೆಂದರೆ, ಶೀಬ್ರದಲ್ಲೇ ಏನು ಸಂಭವಿಸುತ್ತದೆ ಎಂಬುದಕ್ಕೆ ಇಸ್ರೇಲ್ ಜನರಿಗೆ ಇದು ಸೂಚನೆಯಾಗಿದೆ.

“ಆಮೇಲೆ ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿಕೊಂಡು ಇಸ್ರೇಲ್ ಜನರ ದೋಷವನ್ನು ನಿನ್ನ ಎಡಮಗ್ಗುಲ ಮೇಲೆ ಹಾಕು. ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿರುವಷ್ಟು ದಿನ ಇಸ್ರೇಲರ ದೋಷಗಳನ್ನು ಹೊತ್ತುಕೊಳ್ಳುವೆ. ನೀನು ಮುನ್ನೂರತೊಂಭತ್ತು ದಿವಸಗಳ ತನಕ ಇಸ್ರೇಲರ ದೋಷಗಳನ್ನು ಹೊತ್ತುಕೊಳ್ಳಬೇಕು. ಈ ರೀತಿಯಾಗಿ ಇಸ್ರೇಲರು ಎಷ್ಟು ಕಾಲ ಶಿಕ್ಷೆ ಅನುಭವಿಸುವರೆಂದು ತೋರಿಸುತ್ತೇನೆ. ಆ ಒಂದು ದಿವಸವು ಒಂದು ವರ್ಷದಂತಿರುವುದು.

“ಅನಂತರ ನೀನು ನಿನ್ನ ಬಲಗಡೆಯಲ್ಲಿ ನಲವತ್ತು ದಿವಸಗಳ ಕಾಲ ಮಲಗಬೇಕು. ಈ ಸಾರಿ ನೀನು ಯೆಹೂದದ ದೋಷಗಳನ್ನು ನಲವತ್ತು ದಿವಸ ಹೊತ್ತುಕೊಳ್ಳುವೆ. ಒಂದು ದಿವಸವು ಒಂದು ವರ್ಷಕ್ಕೆ ಸಮಾನ. ಯೆಹೂದವು ಎಷ್ಟು ಕಾಲ ಶಿಕ್ಷೆಯನ್ನು ಅನುಭವಿಸಬೇಕೆಂದು ಇದು ತೋರಿಸುವುದು.”

ದೇವರು ಮತ್ತೆ ಹೇಳಿದ್ದೇನೆಂದರೆ: “ಈಗ ನೀನು ನಿನ್ನ ಬಟ್ಟೆಯ ತೋಳನ್ನು ಮೇಲಕ್ಕೆ ಮಡಿಚಿ ನಿನ್ನ ಕೈಯನ್ನು ಇಟ್ಟಿಗೆಯ ಮೇಲೆ ಚಾಚು. ಜೆರುಸಲೇಮ್ ನಗರದ ಮೇಲೆ ಯುದ್ಧ ಮಾಡುವವನಂತೆ ನಟಿಸು. ಪಟ್ಟಣದ ವಿರುದ್ಧವಾಗಿ ಪ್ರವಾದಿಸು. ನೋಡು, ಈಗ ನಾನು ನಿನ್ನನ್ನು ಹಗ್ಗದಿಂದ ಕಟ್ಟುತ್ತಿದ್ದೇನೆ. ನೀನು ಜೆರುಸಲೇಮ್ ನಗರದ ಮೇಲೆ ನಿನ್ನ ಆಕ್ರಮಣವನ್ನು ಮುಗಿಸುವ ತನಕ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೊರಳಲು ನಿನ್ನಿಂದಾಗುವದಿಲ್ಲ.”

ದೇವರು ಮತ್ತೆ ಹೇಳಿದ್ದೇನೆಂದರೆ: “ನೀನು ರೊಟ್ಟಿಯನ್ನು ಮಾಡಲು ಕಾಳುಗಳನ್ನು ತರಬೇಕು. ಸ್ವಲ್ಪ ಗೋಧಿ, ಬಾರ್ಲಿ, ಅಲಸಂದೆ, ಸಾವೆ, ಕಡಲೆ ಇವುಗಳನ್ನೆಲ್ಲಾ ಒಂದು ಬೋಗುಣಿಯಲ್ಲಿ ಹಾಕಿ ಬೀಸಿ ಹಿಟ್ಟು ಮಾಡು. ಈ ಹಿಟ್ಟನ್ನು ನಾದಿ ರೊಟ್ಟಿ ಮಾಡು. ನೀನು ಮುನ್ನೂರತೊಂಭತ್ತು ದಿವಸಗಳ ಕಾಲ ನಿನ್ನ ಎಡಮಗ್ಗುಲಲ್ಲಿ ಮಲಗಿರುವಾಗ ಅದನ್ನು ಮಾತ್ರ ತಿನ್ನುವೆ. 10 ನೀನು ದಿನವೊಂದಕ್ಕೆ ಎಂಟು ರೊಟ್ಟಿಗಳನ್ನು ತಿನ್ನುವೆ. ನೀನು ಅವುಗಳನ್ನು ಪ್ರತಿದಿನ ಒಂದೇ ಸಮಯದಲ್ಲಿ ತಿನ್ನಬೇಕು. 11 ನೀನು ದಿನಕ್ಕೆ ಮೂರು ಲೋಟ ನೀರನ್ನು ಮಾತ್ರ ಕುಡಿಯಬೇಕು. ನೀನು ಅವುಗಳನ್ನು ಪ್ರತಿದಿನ ಒಂದೇ ಸಮಯದಲ್ಲಿ ಕುಡಿಯಬೇಕು. 12 ನೀನು ಬಾರ್ಲಿ ರೊಟ್ಟಿಗಳನ್ನು ಮಾಡುವಂತೆ ತಿನ್ನುವದಕ್ಕಾಗಿ ನೀನು ಪ್ರತಿದಿನ ರೊಟ್ಟಿಯನ್ನು ಮಾಡಬೇಕು. ಒಣಗಿದ ಮನುಷ್ಯನ ಮಲದಲ್ಲಿ ಅದನ್ನು ಸುಡಬೇಕು. ಈ ಬೆಂಕಿಯ ಮೇಲೆ ರೊಟ್ಟಿಯನ್ನು ಕಾಯಿಸಬೇಕು. ನೀನು ಈ ರೊಟ್ಟಿಯನ್ನು ಜನರ ಮುಂದೆ ಮಾಡಿ ತಿನ್ನಬೇಕು.” 13 ಬಳಿಕ ಯೆಹೋವನು, “ನಾನು ಇಸ್ರೇಲ್ ಜನರನ್ನು ಬಲವಂತವಾಗಿ ಕಳುಹಿಸುವ ಪರದೇಶಗಳಲ್ಲಿ ಅವರು ಅಶುದ್ಧವಾದ ರೊಟ್ಟಿಗಳನ್ನು ತಿನ್ನುತ್ತಾರೆಂದು ಇದು ಸೂಚಿಸುತ್ತದೆ” ಎಂದು ಹೇಳಿದನು.

14 ಆಗ ನಾನು ಹೇಳಿದ್ದೇನೆಂದರೆ, “ಅಯ್ಯೋ, ನನ್ನ ಒಡೆಯನಾದ ಯೆಹೋವನೇ, ನಾನು ಎಂದೂ ಅಶುದ್ಧ ಆಹಾರವನ್ನು ತಿನ್ನಲಿಲ್ಲ. ತಾನಾಗಿಯೇ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿಯು ಕೊಂದ ಪ್ರಾಣಿಯ ಮಾಂಸವನ್ನಾಗಲಿ ಎಂದೂ ತಿಂದದ್ದಿಲ್ಲ. ಬಾಲ್ಯ ಪ್ರಾಯದಿಂದ ಈ ದಿವಸ ಪರ್ಯಂತ ಅಶುದ್ಧ ಆಹಾರ ತಿಂದಿಲ್ಲ; ಅಂತಹ ಮಾಂಸವೂ ನನ್ನ ಬಾಯೊಳಕ್ಕೆ ಹೋಗಲಿಲ್ಲ.”

15 ಆಗ ದೇವರು ನನಗೆ, “ಸರಿ! ಹಾಗಾದರೆ, ರೊಟ್ಟಿಯನ್ನು ಮಾಡುವದಕ್ಕಾಗಿ ಮನುಷ್ಯನ ಮಲದ ಬದಲಾಗಿ ದನದ ಒಣಗಿದ ಸಗಣಿಯನ್ನು ಉಪಯೋಗಿಸು” ಎಂದು ಉತ್ತರಕೊಟ್ಟನು.

16 ಬಳಿಕ ದೇವರು ನನಗೆ, “ನರಪುತ್ರನೇ, ನಾನು ಜೆರುಸಲೇಮಿಗೆ ರೊಟ್ಟಿಯ ಸರಬರಾಜನ್ನು ನಿಲ್ಲಿಸುವೆನು. ಜನರಿಗೆ ತಿನ್ನಲು ಕೊಂಚ ರೊಟ್ಟಿ ಸಿಗುವುದು. ಆಹಾರವು ಮುಗಿದು ಹೋಗುತ್ತಿರುವದರಿಂದ ಅವರು ಬಹಳವಾಗಿ ಚಿಂತಿಸುವರು. ಅವರಿಗೆ ಸ್ವಲ್ಪವೇ ಕುಡಿಯುವ ನೀರು ಇರುವುದು. ಆ ನೀರನ್ನು ಕುಡಿಯುವಾಗ ಅವರಿಗೆ ಭಯಹಿಡಿಯುವುದು. 17 ಯಾಕೆಂದರೆ ಎಲ್ಲರಿಗೆ ಸಾಕಾಗುವಷ್ಟು ಆಹಾರಸಾಮಾಗ್ರಿಯಾಗಲಿ ನೀರಾಗಲಿ ಇರುವದಿಲ್ಲ. ಅವರು ಒಬ್ಬರನ್ನೊಬ್ಬರು ಕಂಡು ಗಾಬರಿಗೊಳ್ಳುವರು. ತಮ್ಮ ಪಾಪಗಳ ನಿಮಿತ್ತವಾಗಿ ಅವರು ಬಡಕಲಾಗಿಯೂ ಹಸಿವೆಯಿಂದಲೂ ಇರುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International