Beginning
ಜೆರುಸಲೇಮ್ ತನ್ನ ನಾಶನದ ಬಗ್ಗೆ ಅಳುತ್ತಾಳೆ
1 ಒಂದು ಕಾಲದಲ್ಲಿ ಜೆರುಸಲೇಮ್ ಜನಭರಿತವಾದ ನಗರವಾಗಿತ್ತು.
ಆದರೆ ಈಗ ಆ ನಗರವು ಹಾಳುಬಿದ್ದಿದೆ.
ಒಂದು ಕಾಲದಲ್ಲಿ ಜೆರುಸಲೇಮ್ ಅತ್ಯಂತ ದೊಡ್ಡನಗರಗಳಲ್ಲಿ ಒಂದಾಗಿತ್ತು.
ಆದರೆ ಈಗ ಅದು ವಿಧವೆಯಂತೆ ಆಗಿದೆ.
ಒಂದು ಕಾಲದಲ್ಲಿ ಅವಳು ಎಲ್ಲ ನಗರಗಳ ನಡುವೆ ರಾಜಕುಮಾರಿಯಂತೆ ಇದ್ದಳು.
ಆದರೆ ಈಗ ಅವಳನ್ನು ದಾಸಿಯನ್ನಾಗಿ ಮಾಡಲಾಗಿದೆ.
2 ರಾತ್ರಿಯಲ್ಲಿ ಅವಳು ಬಿಕ್ಕಿಬಿಕ್ಕಿ ಅಳುತ್ತಾಳೆ.
ಅವಳ ಕೆನ್ನೆಗಳ ಮೇಲೆ ಕಣ್ಣೀರು ಹರಿಯುತ್ತಿದೆ.
ಅವಳನ್ನು ಸಂತೈಸುವವರು ಯಾರೂ ಇಲ್ಲ.
ಅವಳ ಮಿತ್ರ ರಾಷ್ಟ್ರಗಳಲ್ಲಿ ಒಂದೂ ಕೂಡ ಅವಳನ್ನು ಸಂತೈಸುವುದಿಲ್ಲ.
ಅವಳ ಸ್ನೇಹಿತರೆಲ್ಲಾ ಅವಳಿಗೆ ದ್ರೋಹ ಮಾಡಿದರು.
ಅವಳ ಸ್ನೇಹಿತರೆಲ್ಲಾ ಅವಳಿಗೆ ದ್ರೋಹ ಮಾಡಿದರು.
ಅವಳ ಸ್ನೇಹಿತರೆಲ್ಲಾ ಅವಳಿಗೆ ಶತ್ರುಗಳಾದರು.
3 ಅತಿ ಕಷ್ಟಗಳನ್ನು ಅನುಭವಿಸಿದ ಮೇಲೆ ಯೆಹೂದ ಬಂಧನಕ್ಕೊಳಗಾಗಿದ್ದಾಳೆ.
ಅತಿ ಶ್ರಮಪಟ್ಟ ಮೇಲೆಯೂ ಅವಳು ಸೆರೆ ಒಯ್ಯಲ್ಪಟ್ಟಿದ್ದಾಳೆ.
ಯೆಹೂದ ಬೇರೆ ಜನಾಂಗಗಳ ಜೊತೆಯಲ್ಲಿ ವಾಸಿಸುತ್ತಾಳೆ.
ಆದರೆ ಅವಳಿಗೆ ವಿಶ್ರಾಂತಿ ಸಿಕ್ಕಿಲ್ಲ.
ಅವಳನ್ನು ಬೆನ್ನಟ್ಟಿದ ಜನರು
ಆಕೆಯು ಬಳಲಿ ಹೋಗಿದ್ದಾಗಲೇ ಅವಳನ್ನು ಹಿಡಿದುಕೊಂಡರು.
4 ಚೀಯೋನಿಗೆ ಹೋಗುವ ದಾರಿಗಳು ದುಃಖಿಸುತ್ತಿವೆ.
ಅವುಗಳು ದುಃಖಿಸುತ್ತಿವೆ; ಏಕೆಂದರೆ ಯಾರೂ ಈಗ ಉತ್ಸವಗಳಿಗಾಗಿ ಚೀಯೋನಿಗೆ ಬರುವದಿಲ್ಲ.
ಚೀಯೋನಿನ ಎಲ್ಲ ಹೆಬ್ಬಾಗಿಲುಗಳು ನಿರ್ಜನವಾಗಿವೆ.
ಚೀಯೋನಿನ ಎಲ್ಲ ಯಾಜಕರು ನರಳಾಡುತ್ತಿದ್ದಾರೆ.
ಚೀಯೋನಿನ ತರುಣಿಯರನ್ನು ತೆಗೆದುಕೊಂಡು ಹೋಗಲಾಗಿದೆ.[a]
ಇದೆಲ್ಲ ಚೀಯೋನಿಗೆ ಅತಿ ದುಃಖವನ್ನುಂಟುಮಾಡಿದೆ.
5 ಜೆರುಸಲೇಮಿನ ಶತ್ರುಗಳು ಗೆದ್ದಿದ್ದಾರೆ.
ಅವಳ ಶತ್ರುಗಳು ಜಯಶೀಲರಾಗಿದ್ದಾರೆ.
ಯೆಹೋವನು ಅವಳನ್ನು ದಂಡಿಸಿದ ಕಾರಣ ಹೀಗಾಯಿತು.
ಅವಳ ಅನೇಕ ಪಾಪಗಳಿಗಾಗಿ ಆತನು ಜೆರುಸಲೇಮನ್ನು ದಂಡಿಸಿದನು.
ಅವಳ ಮಕ್ಕಳು ದೂರಹೋಗಿದ್ದಾರೆ.
ಅವರು ವೈರಿಗಳ ಸೆರೆಯಾಳುಗಳಾಗಿ ದೂರ ಹೋಗಿದ್ದಾರೆ.
6 ಚೀಯೋನಿನ ಮಗಳ ಸೌಂದರ್ಯವು ಹೊರಟುಹೋಗಿದೆ.
ಅವಳ ರಾಜಕುಮಾರರು ಹುಲ್ಲುಗಾವಲನ್ನು ಕಂಡುಕೊಂಡಿಲ್ಲದ ಜಿಂಕೆಯಂತಾಗಿದ್ದಾರೆ.
ಅವರು ಬಲಹೀನರಾಗಿ ಓಡಿಹೋದರು.
ಬೆನ್ನಟ್ಟಿ ಬಂದ ಜನರಿಗೆ ಬೆಂಗೊಟ್ಟು ಓಡಿಹೋಗಿದ್ದಾರೆ.
7 ಜೆರುಸಲೇಮ್ ಹಿಂದಿನ ದಿನಗಳ ಬಗ್ಗೆ ಯೋಚಿಸುತ್ತಾಳೆ;
ತಾನು ಮನೆಯನ್ನು ಕಳೆದುಕೊಂಡ
ಮತ್ತು ಹಿಂಸೆಗೊಳಗಾದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾಳೆ.
ಹಿಂದೆ ಅವಳಿಗಿದ್ದ ಎಲ್ಲ ಭೋಗ್ಯ ವಸ್ತುಗಳನ್ನು
ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಹಳೆಯ ಕಾಲದಲ್ಲಿ ಲಭ್ಯವಿದ್ದ
ಎಲ್ಲ ಉತ್ತಮ ವಸ್ತುಗಳನ್ನು ಅವಳು ಸ್ಮರಿಸಿಕೊಳ್ಳುತ್ತಾಳೆ.
ತನ್ನ ಜನರನ್ನು ವೈರಿಗಳು
ವಶಪಡಿಸಿಕೊಂಡ ಸಂಗತಿಯನ್ನು ಅವಳು ಸ್ಮರಿಸುತ್ತಾಳೆ.
ಆಗ ತನಗೆ ಸಹಾಯ ಮಾಡಲು
ಯಾರೂ ಇರಲಿಲ್ಲವೆಂಬುದನ್ನು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
ಅವಳ ಶತ್ರುಗಳು ಅವಳನ್ನು ನೋಡಿ ನಕ್ಕರು.
ಅವಳು ಹಾಳಾದುದನ್ನು ನೋಡಿ ಅವರು ನಕ್ಕರು.
8 ಜೆರುಸಲೇಮ್ ಮಹಾಪಾಪ ಮಾಡಿತು.
ಜೆರುಸಲೇಮ್ ಭಯಂಕರ ಪಾಪ ಮಾಡಿದ್ದಕ್ಕಾಗಿ
ಅವಳು ಹಾಳುಬಿದ್ದ ನಗರವಾದಳು. ಜನರು ಅವಳನ್ನು ಹೀನೈಸುವಂತಾಗಿದೆ.
ಮೊದಲು ಅವಳನ್ನು ಗೌರವಿಸುತ್ತಿದ್ದ ಎಲ್ಲ ಜನ ಈಗ ಅವಳನ್ನು ತಿರಸ್ಕರಿಸುತ್ತಾರೆ.
ಏಕೆಂದರೆ ಅವರು ಅವಳ ಬೆತ್ತಲೆ ದೇಹವನ್ನು ನೋಡಿದರು.
ಜೆರುಸಲೇಮ್ ನರಳಾಡುತ್ತಿದ್ದಾಳೆ.
ಅವಳು ನಾಚಿಕೆಯಿಂದ ತನ್ನ ಮುಖವನ್ನು ತಗ್ಗಿಸಿಕೊಂಡಿದ್ದಾಳೆ.
9 ಜೆರುಸಲೇಮಿನ ಲಂಗಗಳು ಮಲಿನವಾಗಿದ್ದವು.
ಅವಳಿಗೆ ಮುಂದೆ ಏನಾಗುವದೆಂಬುದರ ಬಗ್ಗೆ ಅವಳು ಯೋಚಿಸಲಿಲ್ಲ.
ಅವಳ ಪತನ ವಿಸ್ಮಯಕಾರಿಯಾಗಿತ್ತು.
ಅವಳನ್ನು ಸಂತೈಸಲು ಯಾರೂ ಇರಲಿಲ್ಲ.
“ಅಯ್ಯೋ, ಯೆಹೋವನೇ, ನನಗೆಷ್ಟು ನೋವಾಗಿದೆ. ನೋಡು!
ನನ್ನ ಶತ್ರು ತನ್ನನ್ನು ಎಷ್ಟು ದೊಡ್ಡವನೆಂದು ಭಾವಿಸಿಕೊಂಡಿದ್ದಾನೆ.” ಎಂದು ಆಕೆ ಹೇಳುತ್ತಾಳೆ.
10 ಶತ್ರು ತನ್ನ ಕೈಗಳನ್ನು ಚಾಚಿದನು.
ಅವಳ ಎಲ್ಲ ಅಮೂಲ್ಯ ವಸ್ತುಗಳನ್ನು ತೆಗೆದುಕೊಂಡನು.
ಯೆಹೋವನೇ, ಆ ಜನರು ನಿನ್ನ ಸಭೆಯನ್ನು ಪ್ರವೇಶಿಸಬಾರದೆಂದು
ನೀನು ಆಜ್ಞಾಪಿಸಿದ್ದರೂ ಪರಕೀಯರು ತನ್ನ ಪವಿತ್ರಾಲಯವನ್ನು ಪ್ರವೇಶಿಸುವದನ್ನು ಅವಳು ನೋಡಬೇಕಾಯಿತು.
11 ಜೆರುಸಲೇಮಿನ ಎಲ್ಲ ಜನರು ನರಳಾಡುತ್ತಿದ್ದಾರೆ.
ಅವಳ ಎಲ್ಲ ಜನರು ಆಹಾರಕ್ಕಾಗಿ ಹುಡುಕುತ್ತಿದ್ದಾರೆ.
ಅವರು ತಮ್ಮ ಎಲ್ಲ ಒಳ್ಳೆಯ ವಸ್ತುಗಳನ್ನು ಆಹಾರಕ್ಕಾಗಿ ಕೊಟ್ಟುಬಿಡುತ್ತಿದ್ದಾರೆ.
ಬದುಕಿರುವ ಸಲುವಾಗಿ ಅವರು ಹೀಗೆ ಮಾಡುತ್ತಿದ್ದಾರೆ. “ಯೆಹೋವನೇ, ನನ್ನ ಕಡೆಗೆ ನೋಡು!
ಜನರು ನನ್ನನ್ನು ಹೇಗೆ ದ್ವೇಷಿಸುತ್ತಾರೆ ನೋಡು” ಎಂದು ಜೆರುಸಲೇಮ್ ಬೇಡಿಕೊಂಡಳು.
12 ರಸ್ತೆಯಲ್ಲಿ ಹಾದುಹೋಗುವ ಜನರೇ,
ನೀವು ನನ್ನ ಬಗ್ಗೆ ಯೋಚಿಸುವುದಿಲ್ಲವೆಂದು ತೋರುತ್ತದೆ.
ನನ್ನ ಕಡೆಗೆ ಗಮನ ಕೊಡಿ.
ನನ್ನ ನೋವಿನಂಥ ನೋವು ಮತ್ತೊಂದು ಇದೆಯೇ?
ನನಗೆ ಬಂದಂಥ ನೋವು ಇನ್ನಾವುದಾದರೂ ಇದೆಯೇ?
ದಂಡನೆಯಾಗಿ ಯೆಹೋವನು ನನಗೆ ಕೊಟ್ಟ ನೋವಿನಂಥ ನೋವು ಮತ್ತೊಂದು ಇದೆಯೇ?
ಆತನು ತನ್ನ ಮಹಾಕೋಪದ ದಿನದಂದು
ನನ್ನನ್ನು ದಂಡಿಸಿರುವನು.
13 ಯೆಹೋವನು ಮೇಲಿನಿಂದ ಬೆಂಕಿಯನ್ನು ಕಳಿಸಿದ್ದಾನೆ.
ಆ ಬೆಂಕಿ ನನ್ನ ಎಲುಬುಗಳ ಆಳಕ್ಕೆ ಇಳಿದುಹೋಗಿದೆ.
ಆತನು ನನ್ನ ಪಾದಗಳಿಗೆ ಬಲೆಯನ್ನು ಒಡ್ಡಿದ್ದಾನೆ.
ಆತನು ನನ್ನನ್ನು ಸುತ್ತಲು ತಿರುಗಿಸಿದ್ದಾನೆ.
ಆತನು ನನ್ನನ್ನು ಹಾಳುಭೂಮಿಯನ್ನಾಗಿ ಮಾಡಿದ್ದಾನೆ.
ನಾನು ಸದಾ ಬಳಲುತ್ತಿದ್ದೇನೆ.
14 “ನನ್ನ ಪಾಪಗಳನ್ನೆಲ್ಲ ಒಟ್ಟುಗೂಡಿಸಿ ನೊಗದಂತೆ ಕಟ್ಟಲಾಗಿದೆ.[b]
ಯೆಹೋವನು ತನ್ನ ಕೈಗಳಿಂದ ನನ್ನ ಪಾಪಗಳನ್ನು ಒಟ್ಟಿಗೆ ಕಟ್ಟಿದ್ದಾನೆ.
ಯೆಹೋವನ ಆ ನೊಗವು ನನ್ನ ಕತ್ತಿನ ಮೇಲೆ ಇದೆ.
ಯೆಹೋವನು ನನ್ನನ್ನು ದುರ್ಬಲಗೊಳಿಸಿದ್ದಾನೆ.
ನಾನು ಎದುರಿಸಲಾಗದ ಜನರ ಕೈಗೆ
ಯೆಹೋವನು ನನ್ನನ್ನು ಒಪ್ಪಿಸಿಕೊಟ್ಟಿದ್ದಾನೆ.
15 ನನ್ನ ಶೂರ ಸೈನಿಕರನ್ನೆಲ್ಲಾ ಯೆಹೋವನು ತಿರಸ್ಕರಿಸಿದ್ದಾನೆ.
ಆ ಸೈನಿಕರು ನಗರದ ಒಳಭಾಗದಲ್ಲಿದ್ದರು.
ಆಗ ಯೆಹೋವನು ನನ್ನ ವಿರುದ್ಧ ಒಂದು ಜನರ ಗುಂಪನ್ನು ತಂದನು.
ಆತನು ನನ್ನ ತರುಣ ಸೈನಿಕರನ್ನು ಕೊಲ್ಲುವ ಸಲುವಾಗಿ ಆ ಜನರನ್ನು ತಂದನು.
ಯೆಹೋವನು ದ್ರಾಕ್ಷಿಯನ್ನು ಆಲೆಯಲ್ಲಿ ತುಳಿದಿದ್ದಾನೆ.
ಆ ದ್ರಾಕ್ಷಿಆಲೆಯು ಜೆರುಸಲೇಮ್ ಕನ್ನಿಕೆಗೆ ಸೇರಿದ್ದು.
16 “ನಾನು ಈ ಎಲ್ಲ ವಿಪತ್ತುಗಳಿಗಾಗಿ ಅಳುತ್ತೇನೆ.
ನನ್ನ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿದೆ.
ನನ್ನನ್ನು ಸಂತೈಸುವವರು ಯಾರೂ ಸಮೀಪದಲ್ಲಿ ಇಲ್ಲ;
ನನ್ನನ್ನು ಪ್ರೋತ್ಸಾಹಿಸುವವರು ಯಾರೂ ಇಲ್ಲ.
ನನ್ನ ಮಕ್ಕಳು ಹಾಳುಬಿದ್ದ ಭೂಮಿಯಂತಿದ್ದಾರೆ.
ಶತ್ರುವು ಜಯಶಾಲಿಯಾದ ಕಾರಣ ಅವರು ಹಾಗಾಗಿದ್ದಾರೆ.”
17 ಚೀಯೋನು ತನ್ನ ಕೈಗಳನ್ನು ಚಾಚಿದಳು.
ಅವಳನ್ನು ಸಂತೈಸುವವರೇ ಇರಲಿಲ್ಲ.
ಯಾಕೋಬನಿಗೆ ವೈರಿಗಳಾಗಬೇಕೆಂದು
ಅವನ ನೆರೆಹೊರೆಯವರಿಗೆ ಯೆಹೋವನು ಆಜ್ಞಾಪಿಸಿದ್ದನು.
ಜೆರುಸಲೇಮ್ ಒಂದು ಹೊಲಸು ವಸ್ತುವಾಗಿದ್ದಾಳೆ.
ಆ ವೈರಿಗಳ ಮಧ್ಯದಲ್ಲಿ ಅವಳು ಒಂದು ಹೊಲಸು ವಸ್ತುವಾಗಿದ್ದಾಳೆ.
18 ಅವಳು ಹೇಳಿದಳು, “ಯೆಹೋವನು ಮಾಡಿದ್ದು ನ್ಯಾಯವಾಗಿಯೇ ಇದೆ.
ಏಕೆಂದರೆ ನಾನು ಆತನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.
ಎಲ್ಲಾ ಜನಗಳೇ, ನನ್ನ ಮಾತುಗಳನ್ನು ಕೇಳಿರಿ.
ನನ್ನ ವ್ಯಥೆಯನ್ನು ನೋಡಿರಿ.
ನನ್ನ ತರುಣತರುಣಿಯರು ಸೆರೆ ಒಯ್ಯಲ್ಪಟ್ಟಿದ್ದಾರೆ.
19 ನಾನು ನನ್ನ ಪ್ರಿಯತಮರನ್ನು ಕೂಗಿ ಕರೆದೆ.
ಆದರೆ ಅವರು ನನಗೆ ಮೋಸ ಮಾಡಿದರು.
ನನ್ನ ಯಾಜಕರು ಮತ್ತು ಹಿರಿಯರು
ನಗರದಲ್ಲಿ ಸತ್ತುಹೋದರು.
ಅವರು ತಮಗಾಗಿ ಆಹಾರವನ್ನು ಹುಡುಕುತ್ತಿದ್ದರು.
ಅವರು ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳ ಬಯಸಿದರು.
20 “ಯೆಹೋವನೇ, ನನ್ನ ಕಡೆ ನೋಡು, ನಾನು ತೊಂದರೆಯಲ್ಲಿದ್ದೇನೆ.
ನನ್ನ ಮನಸ್ಸು ಕ್ಷೋಭೆಗೊಂಡಿದೆ.
ನನ್ನ ಮನಸ್ಸಿಗೆ ತಲೆ ಕೆಳಗಾದಂತೆ ಭಾಸವಾಗುತ್ತಿದೆ.
ನಾನು ದುರಹಂಕಾರಿಯಾಗಿದ್ದುದರಿಂದ
ನನ್ನ ಮನಸ್ಸಿಗೆ ಹಾಗೆ ಭಾಸವಾಗುತ್ತಿದೆ.
ಕಾರಣವೇನೆಂದರೆ, ನಾನು ದಂಗೆಕೋರಳಾಗಿದ್ದೆ.
ಬೀದಿಗಳಲ್ಲಿ ನನ್ನ ಮಕ್ಕಳು ಖಡ್ಗಕ್ಕೆ ಆಹುತಿಯಾದರು.
ಮನೆಯಲ್ಲಿಯೂ ಸಹ ಸಾವಿತ್ತು.
21 “ನಾನು ನರಳಾಡುತ್ತಿದ್ದೇನೆ.
ಅದಕ್ಕಾಗಿ ನನ್ನ ಮಾತುಗಳಿಗೆ ಕಿವಿಗೊಡು;
ನನ್ನನ್ನು ಸಂತೈಸುವವರು ಯಾರೂ ಇಲ್ಲ.
ನನ್ನ ಎಲ್ಲ ವೈರಿಗಳು ನನ್ನ ಕಷ್ಟಗಳ ಬಗ್ಗೆ ಕೇಳಿದ್ದಾರೆ.
ಅವರು ಸಂತೋಷಪಡುತ್ತಿದ್ದಾರೆ.
ನೀನು ನನಗೆ ಈ ಸ್ಥಿತಿಯನ್ನು ತಂದದ್ದಕ್ಕಾಗಿ ಅವರು ಸಂತೋಷಪಡುತ್ತಲಿದ್ದಾರೆ.
ನೀನು ಪ್ರಕಟಿಸಿದ ಆ ದಿನವನ್ನು ಬರಮಾಡು.
ಆ ದಿನ ನನ್ನ ಶತ್ರುಗಳ ಸ್ಥಿತಿ
ನನ್ನ ಇಂದಿನ ಸ್ಥಿತಿಯಂತೆ ಆಗಲಿ.
22 “ನನ್ನ ಶತ್ರುಗಳು ಎಷ್ಟು ದುಷ್ಟರಾಗಿದ್ದಾರೆ ನೋಡು.
ನನ್ನ ಎಲ್ಲ ಪಾಪಗಳ ನಿಮಿತ್ತ ನೀನು ನನಗೆ ಮಾಡಿದಂತೆ
ಅವರಿಗೂ ಮಾಡಲು ನಿನಗೆ ಸಾಧ್ಯವಾಗುವುದು.
ನಾನು ಪದೇಪದೇ ನರಳಾಡುತ್ತಿರುವುದರಿಂದ ನೀನು ಇದನ್ನು ಮಾಡಬೇಕು.
ನನ್ನ ಹೃದಯವು ಅಸ್ವಸ್ಥಗೊಂಡಿರುವುದರಿಂದ ನೀನು ಇದನ್ನು ಮಾಡಬೇಕು.”
ಯೆಹೋವನು ಜೆರುಸಲೇಮನ್ನು ನಾಶಮಾಡಿದನು
2 ಕೋಪೋದ್ರಿಕ್ತನಾದ ಯೆಹೋವನು ಚೀಯೋನಿನ ಮಗಳ[c] ಮೇಲೆ ಹೇಗೆ ಕಾರ್ಮೋಡಗಳು ಕವಿಯುವಂತೆ ಮಾಡಿದ್ದಾನೆ ನೋಡಿರಿ.
ಆತನು ಇಸ್ರೇಲಿನ ವೈಭವವನ್ನು ಆಕಾಶದಿಂದ ಭೂಮಿಗೆ ಎಸೆದಿದ್ದಾನೆ.
ಯೆಹೋವನಿಗೆ ಕೋಪ ಬಂದಾಗ ಆತನು ಇಸ್ರೇಲ್ ತನ್ನ ಪಾದಪೀಠವೆಂಬುದನ್ನು ಗಮನಕ್ಕೆ ತಂದುಕೊಳ್ಳಲಿಲ್ಲ.
2 ಯೆಹೋವನು ಯಾಕೋಬನ ಮನೆಗಳನ್ನು ನಾಶಪಡಿಸಿದನು.
ಆತನು ಕನಿಕರವಿಲ್ಲದೆ ಅವುಗಳನ್ನು ನುಂಗಿಬಿಟ್ಟನು.
ತನ್ನ ಕೋಪದಲ್ಲಿ ಆತನು ಯೆಹೂದದ
ಮಗಳ[d] ಕೋಟೆಗಳನ್ನು ನಾಶಪಡಿಸಿದನು.
ಯೆಹೋವನು ಯೆಹೂದ ರಾಜ್ಯವನ್ನೂ ಮತ್ತು ಅದರ ಅಧಿಪತಿಗಳನ್ನೂ ನೆಲಕ್ಕೆ ಅಪ್ಪಳಿಸಿದನು.
ಆತನು ಯೆಹೂದ ರಾಜ್ಯಕ್ಕೆ ಅವಮಾನ ಮಾಡಿದ್ದಾನೆ.
3 ನನ್ನ ಕೋಪದ ಭರದಲ್ಲಿ ಯೆಹೋವನು
ಇಸ್ರೇಲಿನ ಶಕ್ತಿಯನ್ನೆಲ್ಲ ಕತ್ತರಿಸಿಹಾಕಿದನು.
ಆತನು ಇಸ್ರೇಲಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡನು.
ಶತ್ರು ಬಂದಾಗ ಆತನು ಹೀಗೆ ಮಾಡಿದನು.
ಅಗ್ನಿಜ್ವಾಲೆಗಳಂತೆ ಆತನು ಯಾಕೋಬಿನಲ್ಲಿ ಉರಿದನು.
ಸುತ್ತಮುತ್ತಲೆಲ್ಲ (ಪ್ರತಿಯೊಂದನ್ನೂ) ದಹಿಸುವ ಬೆಂಕಿಯಂತೆ ಆತನಿದ್ದನು.
4 ಯೆಹೋವನು ವೈರಿಯಂತೆ ತನ್ನ ಬಿಲ್ಲನ್ನು ಬಾಗಿಸಿದನು.
ತನ್ನ ಬಲಗೈಯಲ್ಲಿ ಖಡ್ಗವನ್ನು ಧರಿಸಿದನು:
ಆತನು ಯೆಹೂದದ ಎಲ್ಲ ಆಕರ್ಷಕ ಜನರನ್ನು ಕೊಂದುಹಾಕಿದನು.
ಆತನು ಶತ್ರುವಿನಂತೆ ಅವರನ್ನು ಕೊಂದನು.
ಆತನು ತನ್ನ ರೋಷಾಗ್ನಿಯನ್ನು ಹೊರಸೂಸಿದನು.
ಆತನು ಅದನ್ನು ಚೀಯೋನಿನ ಗುಡಾರಗಳ ಮೇಲೆ ಸುರಿಸಿದನು.
5 ಆತನು ಒಬ್ಬ ಶತ್ರುವಿನಂತಾಗಿದ್ದಾನೆ.
ಆತನು ಇಸ್ರೇಲನ್ನು ನಾಶಮಾಡಿದನು.
ಆತನು ಅವಳ ಎಲ್ಲ ಅರಮನೆಗಳನ್ನು ನುಂಗಿಬಿಟ್ಟನು.
ಆತನು ಅವಳ ಎಲ್ಲ ಕೋಟೆಗಳನ್ನು ನುಂಗಿಬಿಟ್ಟನು.
ಯೆಹೂದ ಜನಾಂಗದಲ್ಲಿ
ಆತನು ಹೆಚ್ಚಿನ ದುಃಖವನ್ನು ಉಂಟುಮಾಡಿ ಶೋಕವನ್ನು ಹರಡಿದ್ದಾನೆ.
6 ಯೆಹೋವನು ತನ್ನ ಸ್ವಂತ ಗುಡಾರವನ್ನು
ಒಂದು ತೋಟವೋ ಎಂಬಂತೆ ಹಾಳುಮಾಡಿದ್ದಾನೆ.
ಜನರು ಆತನನ್ನು ಆರಾಧಿಸಲು
ಸೇರಿಬರುತ್ತಿದ್ದ ಸ್ಥಳವನ್ನು ನಾಶಪಡಿಸಿದ್ದಾನೆ.
ಚೀಯೋನಿನಲ್ಲಿ ಜನರು ಮಹೋತ್ಸವಗಳನ್ನು
ಮತ್ತು ವಿಶೇಷ ವಿಶ್ರಾಂತಿ ದಿನಗಳನ್ನು ಮರೆಯುವಂತೆ ಯೆಹೋವನು ಮಾಡಿದ್ದಾನೆ.
ಯೆಹೋವನು ರಾಜನನ್ನು ಮತ್ತು ಯಾಜಕರನ್ನು ತಿರಸ್ಕರಿಸಿದ್ದಾನೆ.
ಆತನು ತನ್ನ ಕಡುಕೋಪದಿಂದ ಅವರನ್ನು ತಿರಸ್ಕರಿಸಿದ್ದಾನೆ.
7 ಯೆಹೋವನು ತನ್ನ ಯಜ್ಞವೇದಿಕೆಯನ್ನು ತಿರಸ್ಕರಿಸಿದ್ದಾನೆ.
ಆತನು ತನ್ನ ಪವಿತ್ರಾಲಯವನ್ನು ತಿರಸ್ಕರಿಸಿದ್ದಾನೆ.
ಆತನು ಜೆರುಸಲೇಮಿನ ಅರಮನೆಗಳ ಗೋಡೆಗಳನ್ನು
ಶತ್ರುಗಳ ವಶಮಾಡಿದ್ದಾನೆ.
ವೈರಿಗಳು ಯೆಹೋವನ ಪವಿತ್ರ ಆಲಯದಲ್ಲಿ ಗದ್ದಲವನ್ನು ಮಾಡಿದರು.
ಅವರು ಉತ್ಸವದ ದಿನದಂತೆ ಗದ್ದಲವನ್ನು ಮಾಡಿದರು.
8 ಯೆಹೋವನು ಚೀಯೋನ್ ಕುಮಾರಿಯ
ಪೌಳಿಗೋಡೆಯನ್ನು ನಾಶಮಾಡಬೇಕೆಂದು ಯೋಚಿಸಿದ್ದಾನೆ.
ಆತನು ಅಳತೆದಾರದಿಂದ ಒಡೆಯಬೇಕಾದ ಗೋಡೆಗೆ ಗುರುತು ಮಾಡಿದ್ದಾನೆ.
ಆತನು ತಾನು ಮಾಡುತ್ತಿದ್ದ ನಾಶನವನ್ನು ನಿಲ್ಲಿಸಲಿಲ್ಲ.
ಪೌಳಿಗೋಡೆಗಳು ಮತ್ತು ಗೋಪುರಗಳು ದುಃಖದಿಂದ ಗೋಳಾಡುವಂತೆ ಆತನು ಮಾಡಿದ್ದಾನೆ.
ಅವೆರಡೂ ಕುಸಿದುಹೋಗಿವೆ.
9 ಜೆರುಸಲೇಮಿನ ಹೆಬ್ಬಾಗಿಲುಗಳು ನೆಲದಲ್ಲಿ ಹೂತುಹೋಗಿವೆ.
ಆತನು ಹೆಬ್ಬಾಗಿಲುಗಳ ಸರಳುಗಳನ್ನು ಮುರಿದು ಚೂರುಚೂರು ಮಾಡಿದ್ದಾನೆ.
ಅವಳ ರಾಜನು ಮತ್ತು ರಾಜಕುಮಾರರು ಅನ್ಯಜನಾಂಗಗಳ ಮಧ್ಯದಲ್ಲಿದ್ದಾರೆ.
ಆ ಜನರಿಗೆ ಉಪದೇಶ ಮಾಡಲು ಯಾರೂ ಇಲ್ಲ.
ಪ್ರವಾದಿಗಳಿಗೆ ಯೆಹೋವನಿಂದ ಯಾವ ದರ್ಶನಗಳೂ ಇಲ್ಲ.
10 ಚೀಯೋನಿನ ಹಿರಿಯರು ನೆಲದ ಮೇಲೆ
ಮೌನವಾಗಿ ಕುಳಿತುಕೊಂಡಿದ್ದಾರೆ.
ಅವರು ತಮ್ಮ ತಲೆಗಳ ಮೇಲೆ ಧೂಳನ್ನು ತೂರಿಕೊಂಡು
ಗೋಣಿತಟ್ಟನ್ನು ಸುತ್ತಿಕೊಂಡಿದ್ದಾರೆ.
ಜೆರುಸಲೇಮಿನ ತರುಣಿಯರು
ದುಃಖದಿಂದ ತಲೆ ತಗ್ಗಿಸಿಕೊಂಡಿದ್ದಾರೆ.
11 ಕಂಬನಿ ಸುರಿದು ನನ್ನ ಕಣ್ಣುಗಳು ಇಂಗಿಹೋಗಿವೆ.
ನನ್ನ ಕರುಳು ತಳಮಳಗೊಂಡಿದೆ.
ನನ್ನ ಹೃದಯವನ್ನು ನೆಲಕ್ಕೆ ಚೆಲ್ಲಲಾಗಿದೆ ಎಂದೆನಿಸುತ್ತಿದೆ.
ನನ್ನ ಜನರ ವಿನಾಶದಿಂದ ನನಗೆ ಹೀಗಾಗಿದೆ.
ಮಕ್ಕಳು ಮತ್ತು ಶಿಶುಗಳು ಮೂರ್ಛೆ ಹೋಗುತ್ತಿದ್ದಾರೆ.
ಅವರು ನಗರದ ಕೇಂದ್ರ ಸ್ಥಳಗಳಲ್ಲಿ (ಚೌಕಗಳಲ್ಲಿ) ಮೂರ್ಛೆಹೋಗುತ್ತಿದ್ದಾರೆ.
12 ಆ ಮಕ್ಕಳು ತಮ್ಮ ತಾಯಂದಿರನ್ನು,
“ರೊಟ್ಟಿ ಮತ್ತು ದ್ರಾಕ್ಷಾರಸ ಎಲ್ಲಿದೆ?” ಎಂದು ಕೇಳುತ್ತಿದ್ದಾರೆ.
ಅವರು ಅಸುನೀಗುವಾಗ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ.
ಅವರು ತಮ್ಮ ತಾಯಂದಿರ ಮಡಿಲಲ್ಲಿಯೇ ಪ್ರಾಣಬಿಡುತ್ತಿದ್ದಾರೆ.
13 ನನ್ನ ಪ್ರಿಯ ಜೆರುಸಲೇಮೇ, ನಾನು ನಿನ್ನ ಬಗ್ಗೆ ಏನು ಹೇಳಲಿ?
ನಾನು ನಿನ್ನನ್ನು ಯಾವುದಕ್ಕೆ ಹೋಲಿಸಲಿ?
ನೀನು ಎಂಥವಳೆಂದು ಹೇಳಲಿ?
ನನ್ನ ಚೀಯೋನೇ,
ನಾನು ನಿನ್ನನ್ನು ಹೇಗೆ ಸಂತೈಸಲಿ.
ನಿನ್ನ ವಿನಾಶವು ಸಾಗರದಷ್ಟು ಅಪಾರ.
ಯಾರೂ ನಿನ್ನನ್ನು ಸ್ವಸ್ಥ ಮಾಡಲಾರರು ಎಂದೆನಿಸುತ್ತದೆ.
14 ನಿನ್ನ ಪ್ರವಾದಿಗಳು ನಿನಗಾಗಿ ದರ್ಶನಗಳನ್ನು ಕಂಡರು.
ಆದರೆ ಅವರ ದರ್ಶನಗಳು ನಿರರ್ಥಕವಾದ ಹುಸಿನುಡಿಗಳಾಗಿವೆ.
ಅವರು ನಿನ್ನ ಪಾಪಕೃತ್ಯಗಳನ್ನು ಬಹಿರಂಗಪಡಿಸಲಿಲ್ಲ.
ಅವರು ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನ ಮಾಡಲಿಲ್ಲ.
ಅವರು ನಿನ್ನ ಕುರಿತು ಸಂದೇಶಗಳನ್ನು ಪ್ರವಾದಿಸಿದರು.
ಆದರೆ ಅವು ನಿರಾಧಾರವಾದ ಸಂದೇಶಗಳಾಗಿದ್ದು ನಿನ್ನನ್ನು ಮರುಳುಗೊಳಿಸಿದವು.
15 ಪಕ್ಕದಲ್ಲಿ ದಾರಿ ಹಿಡಿದುಹೋಗುವ ಜನರು
ನಿನ್ನನ್ನು ನೋಡಿ ಅಪಹಾಸ್ಯದಿಂದ ಚಪ್ಪಾಳೆ ತಟ್ಟುತ್ತಾರೆ.
ಜೆರುಸಲೇಮಿನ ಮಗಳ ಸ್ಥಿತಿಯನ್ನು ನೋಡಿ
ಅವರು ಸಿಳ್ಳುಹಾಕುತ್ತಾರೆ ಮತ್ತು ತಲೆಯಾಡಿಸುತ್ತಾರೆ.
“ಜನರಿಂದ ‘ಪರಿಪೂರ್ಣ ಸುಂದರ ನಗರ’
‘ಸಮಸ್ತಲೋಕದ ಸಂತೋಷ’ ಎಂದು ಕರೆಸಿಕೊಂಡದ್ದು
ಇದೇ ನಗರವೇ?” ಎಂದು ಅವರು ಕೇಳುತ್ತಾರೆ.
16 ನಿನ್ನ ಎಲ್ಲ ವೈರಿಗಳು ನಿನ್ನನ್ನು ನೋಡಿ
ಬಾಯಿ ತೆರೆದು ಸಿಳ್ಳುಹಾಕಿ ಹಲ್ಲು ಕಡಿಯುತ್ತಾರೆ.
“ನಾವು ಅವರನ್ನು ಸಂಪೂರ್ಣವಾಗಿ ನುಂಗಿದೆವು!
ನಿಜವಾಗಿ ನಾವು ಈ ದಿನವನ್ನೇ ನಿರೀಕ್ಷಿಸುತ್ತಿದ್ದೆವು.
ಅಂತೂ ಕೊನೆಗೆ ಇದು ನೆರವೇರುವುದನ್ನು ನಾವು ಕಂಡೆವು”
ಎಂದು ಅವರು ಅನ್ನುತ್ತಾರೆ.
17 ಯೆಹೋವನು ತಾನು ನಿಯೋಜಿಸಿದಂತೆ ಮಾಡಿದನು.
ತಾನು ಮಾಡುತ್ತೇನೆಂದು ಹೇಳಿದ್ದನ್ನು ಆತನು ಮಾಡಿದ್ದಾನೆ.
ಪುರಾತನ ಕಾಲದಿಂದ ತಾನು ವಿಧಿಸಿದ್ದನ್ನು ಆತನು ಮಾಡಿದ್ದಾನೆ.
ಆತನು ನಿಷ್ಕರುಣೆಯಿಂದ ನಾಶಮಾಡಿದ್ದಾನೆ.
ನಿನಗೆ ಸಂಭವಿಸಿದವುಗಳ ಮೂಲಕವಾಗಿ ಆತನು ನಿನ್ನ ವೈರಿಗಳನ್ನು ಸಂತೋಷಪಡಿಸಿದ್ದಾನೆ.
ಆತನು ನಿನ್ನ ವೈರಿಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದಾನೆ.
18 ಜೆರುಸಲೇಮ್ ನಗರದ ಗೋಡೆಯೇ,
ಮನಃಪೂರ್ವಕವಾಗಿ ಯೆಹೋವನಲ್ಲಿ ಮೊರೆಯಿಡು.
ನಿನ್ನ ಕಣ್ಣೀರು ಹಗಲಿರುಳು ನದಿಯಂತೆ ಹರಿಯಲಿ, ನಿಲ್ಲಿಸಬೇಡ.
ನಿನ್ನ ಕಣ್ಣುಗಳಿಗೆ ವಿರಾಮ ಸಿಗುವುದು ಬೇಡ.
19 ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ.
ನಿಮ್ಮ ಹೃದಯವು ನೀರಿನಂತೆ ಹರಿಯಲಿ.
ನಿಮ್ಮ ಹೃದಯಸಾರವನ್ನು ಯೆಹೋವನ ಸಮ್ಮುಖದಲ್ಲಿ ಹೊಯ್ದುಬಿಡಿರಿ.
ನಿಮ್ಮ ಕೈಗಳನ್ನು ಮೇಲೆತ್ತಿ ಯೆಹೋವನಿಗೆ ಪ್ರಾರ್ಥಿಸಿರಿ.
ನಿಮ್ಮ ಮಕ್ಕಳು ಬದುಕಲಿ ಎಂದು ಆತನನ್ನು ಕೇಳಿಕೊಳ್ಳಿರಿ.
ಹಸಿವೆಯಿಂದ ಮೂರ್ಛೆಹೋಗುತ್ತಿದ್ದ ನಿಮ್ಮ ಮಕ್ಕಳ ಪ್ರಾಣ ಉಳಿಯಲಿ ಎಂದು ಆತನನ್ನು ಪ್ರಾರ್ಥಿಸಿರಿ.
ಹಸಿವೆಯಿಂದ ಅವರು ನಗರದ ಎಲ್ಲ ಬೀದಿಗಳಲ್ಲಿ ಮೂರ್ಛೆಹೋಗುತ್ತಿದ್ದಾರೆ.
20 ನನ್ನ ಕಡೆಗೆ ನೋಡು.
ನೀನು ಇಷ್ಟೆಲ್ಲ ಮಾಡಿದ್ದು ಯಾರಿಗೆ ಎಂಬುದನ್ನು ನೋಡು.
ನಾನು ನಿನಗೆ ಈ ಪ್ರಶ್ನೆಗಳನ್ನು ಕೇಳಬಯಸುತ್ತೇನೆ.
ಏನು, ಸ್ತ್ರೀಯರು ತಾವು ಹೆತ್ತ ಮಕ್ಕಳನ್ನೇ ತಿನ್ನಬೇಕೇ?
ಸ್ತ್ರೀಯರು ತಾವು ಲಾಲನೆಪಾಲನೆ ಮಾಡಿದ ಮಕ್ಕಳನ್ನೇ ತಿನ್ನಬೇಕೇ?
ಯೆಹೋವನ ಪವಿತ್ರ ಆಲಯದಲ್ಲಿಯೇ ಯಾಜಕನನ್ನು ಮತ್ತು ಪ್ರವಾದಿಯನ್ನು ಕೊಲ್ಲಬೇಕೇ?
21 ಬೀದಿಗಳಲ್ಲಿ ತರುಣರು ಮತ್ತು ವೃದ್ಧರು
ನೆಲದ ಮೇಲೆ ಬಿದ್ದಿದ್ದಾರೆ.
ನನ್ನ ಯುವತಿಯರು ಮತ್ತು ಯುವಕರು
ಖಡ್ಗದಿಂದ ಹತರಾಗಿದ್ದಾರೆ.
ಯೆಹೋವನೇ, ನಿನಗೆ ಕೋಪಬಂದ ದಿನ ಅವರನ್ನು ಕೊಂದುಬಿಟ್ಟೆ;
ಕರುಣೆ ತೋರದೆ ಅವರನ್ನು ಸಂಹರಿಸಿದೆ.
22 ಭೀತಿಯು ಸುತ್ತಮುತ್ತಲಿಂದ
ನನ್ನ ಕಡೆಗೆ ಬರುವಂತೆ ನೀನು ಆಹ್ವಾನಿಸಿದೆ.
ಯೆಹೋವನ ಕೋಪದ ದಿನದಂದು
ಯಾರೂ ತಪ್ಪಿಸಿಕೊಳ್ಳಲಿಲ್ಲ.
ಯಾರೂ ಉಳಿಯಲಿಲ್ಲ.
ನಾನು ಸಾಕಿಸಲಹಿದವರನ್ನು ನನ್ನ ವೈರಿಯು ಸಂಹರಿಸಿದನು.
ಸಂಕಟದ ಅರ್ಥ
3 ಯೆಹೋವನ ರೌದ್ರ ದಂಡದಿಂದ
ಸಂಕಟವನ್ನು ಅನುಭವಿಸಿರುವವನು ನಾನೇ!
2 ಯೆಹೋವನು ನನ್ನನ್ನು ಬೆಳಕೇ ಇಲ್ಲದ
ಕತ್ತಲೆಗೆ ನಡೆಸಿಕೊಂಡು ಬಂದನು.
3 ಯೆಹೋವನು ತನ್ನ ಕೈಯನ್ನು ನನಗೆ ವಿರೋಧವಾಗಿ ತಿರುಗಿಸಿದನು.
ಆತನು ಇಡೀ ದಿನವೆಲ್ಲಾ ಮತ್ತೆಮತ್ತೆ ಹಾಗೆಯೇ ಮಾಡಿದನು.
4 ಆತನು ನನ್ನ ಮಾಂಸವನ್ನು ಮತ್ತು ಚರ್ಮವನ್ನು ಕಂದಿಸಿದ್ದಾನೆ.
ಆತನು ನನ್ನ ಮೂಳೆಗಳನ್ನು ಮುರಿದುಹಾಕಿದನು.
5 ಆತನು ನನ್ನನ್ನು ಕಠೋರತೆಯಿಂದಲೂ
ಆಪತ್ತಿನಿಂದಲೂ ಸುತ್ತುವರಿದು ಮುತ್ತಿಗೆಹಾಕಿದ್ದಾನೆ.
6 ಬಹುಕಾಲದ ಹಿಂದೆಯೇ ಸತ್ತಿರುವವರಂತೆ
ನನ್ನನ್ನು ಕತ್ತಲೆಯಲ್ಲಿ ಕುಳ್ಳಿರಿಸಿದ್ದಾನೆ.
7 ಯೆಹೋವನು ನನ್ನನ್ನು ಬಂಧಿಸಿ ನಾನು ಹೊರಗೆ ಬರಲಾಗದಂತೆ ಮಾಡಿದನು.
ಆತನು ನನ್ನನ್ನು ಬಲವಾದ ಸರಪಣಿಗಳಿಂದ ಕಟ್ಟಿ ಹಾಕಿದನು.
8 ನಾನು ಸಹಾಯಕ್ಕಾಗಿ ಅರಚಿಕೊಳ್ಳುವಾಗಲೂ ಕೂಗಿಕೊಳ್ಳುವಾಗಲೂ
ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ.
9 ಆತನು ನನ್ನ ದಾರಿಯನ್ನು ಕಲ್ಲುಗಳಿಂದ ಮುಚ್ಚಿದ್ದಾನೆ.
ಆತನು ನನ್ನ ಹಾದಿಯನ್ನು ಡೊಂಕುಗೊಳಿಸಿದ್ದಾನೆ.
10 ನನ್ನ ಪಾಲಿಗಂತೂ ಯೆಹೋವನು ಆಕ್ರಮಣಮಾಡಲು ಸಿದ್ಧವಾಗಿರುವ ಕರಡಿಯಂತೆಯೂ
ಅಡಗಿಕೊಂಡಿರುವ ಸಿಂಹದಂತೆಯೂ ಇದ್ದಾನೆ.
11 ಯೆಹೋವನು ನನ್ನನ್ನು ನನ್ನ ದಾರಿಯಿಂದ ಓಡಿಸಿದನು.
ಆತನು ನನ್ನನ್ನು ಚೂರುಚೂರು ಮಾಡಿದನು.
ಆತನು ನನ್ನನ್ನು ಅಸಹಾಯಕನನ್ನಾಗಿ ತೊರೆದುಬಿಟ್ಟಿದ್ದಾನೆ.
12 ಆತನು ತನ್ನ ಬಿಲ್ಲನ್ನು ಸಜ್ಜುಗೊಳಿಸಿದನು.
ಆತನು ತನ್ನ ಬಾಣಗಳಿಂದ ನನಗೆ ಗುರಿಯಿಟ್ಟನು.
13 ಆತನು ನನ್ನ ಹೊಟ್ಟೆಗೆ
ತನ್ನ ಬಾಣಗಳಿಂದ ಹೊಡೆದನು.
14 ನನ್ನ ಜನರಿಗೆಲ್ಲಾ ಹಾಸ್ಯಾಸ್ಪದವಾಗಿದ್ದೇನೆ.
ದಿನವೆಲ್ಲಾ ಅವರು ನನ್ನ ಬಗ್ಗೆ ಹಾಡುಗಳನ್ನು ಹಾಡುತ್ತಾ ಗೇಲಿ ಮಾಡುತ್ತಾರೆ.
15 ಯೆಹೋವನು ನನಗೆ ಕುಡಿಯಲು ಈ ವಿಷವನ್ನು (ಶಿಕ್ಷೆಯನ್ನು) ಕೊಟ್ಟನು.
ಕಹಿಯಾದ ಈ ಪಾನೀಯದಿಂದ ಆತನು ನನ್ನನ್ನು ತುಂಬಿಸಿದನು.
16 ಯೆಹೋವನು ನನಗೆ ನುರುಜುಗಲ್ಲನ್ನು ಮುಕ್ಕಿಸಿ ನನ್ನ ಹಲ್ಲುಗಳನ್ನು ಮುರಿದುಹಾಕಿದ್ದಾನೆ.
ಆತನು ನನ್ನನ್ನು ಧೂಳಿಗೆ ಹಾಕಿ ತುಳಿದಿದ್ದಾನೆ.
17 ಇನ್ನೆಂದಿಗೂ ಸಮಾಧಾನವೇ ಇರುವುದಿಲ್ಲವೆಂದುಕೊಂಡೆನು.
ನಾನು ಸಂತೋಷವನ್ನು ಮರೆತುಬಿಟ್ಟೆನು.
18 ನಾನು ನನ್ನೊಳಗೆ, “ಯೆಹೋವನು ನನಗೆ ಸಹಾಯ ಮಾಡುತ್ತಾನೆ
ಎಂಬ ನಿರೀಕ್ಷೆ ಇನ್ನೆಂದಿಗೂ ನನಗಿಲ್ಲ” ಎಂದು ಕೊಂಡೆನು.
19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.
25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.
27 ಯೌವನದಲ್ಲೇ ಸಂಕಟದ ನೊಗವನ್ನು
ಹೊರುವುದು ಮನುಷ್ಯನಿಗೆ ಒಳ್ಳೆಯದು.
28 ಯೆಹೋವನು ಈ ಸಂಕಟದ ನೊಗವನ್ನು
ಅವನ ಮೇಲೆ ಹಾಕುವಾಗ ಅವನು ಮೌನವಾಗಿ ಕುಳಿತುಕೊಂಡಿರಬೇಕು.
29 ಅವನು ದೀನತೆಯಿಂದ ತನ್ನ ಮುಖವನ್ನು ಧೂಳಿನಲ್ಲಿ ಹಾಕಬೇಕು.
ಆಗ ಅವನ ಜೀವಕ್ಕೆ ನಿರೀಕ್ಷೆ ಇದ್ದರೂ ಇರಬಹುದು.
30 ಆ ವ್ಯಕ್ತಿಯು ತನ್ನನ್ನು ಹೊಡೆಯುವವರಿಗೆ ತನ್ನ ಕೆನ್ನೆಯನ್ನು ಒಡ್ಡಬೇಕು.
ಅವನು ತನಗೆ ಜನರಿಂದಾಗುವ ಗೇಲಿಯನ್ನು ಸಹಿಸಿಕೊಳ್ಳಬೇಕು.
31 ಯೆಹೋವನು ಜನರನ್ನು ಶಾಶ್ವತವಾಗಿ ತೊರೆದುಬಿಡುವುದಿಲ್ಲ
ಎಂಬುದು ಆ ವ್ಯಕ್ತಿಯ ನೆನಪಿನಲ್ಲಿರಬೇಕು.
32 ಯೆಹೋವನು ಶಿಕ್ಷಿಸುವಾಗ ಕರುಣೆಯುಳ್ಳವನೂ ಆಗಿರುತ್ತಾನೆ.
ಆತನು ತನ್ನ ಮಹಾಪ್ರೀತಿ ಮತ್ತು ಕನಿಕರಗಳಿಂದಲೇ ಕರುಣೆಯುಳ್ಳವನಾಗಿರುತ್ತಾನೆ.
33 ತಾನು ಜನರನ್ನು ಶಿಕ್ಷಿಸಬೇಕೆಂಬುದು ಯೆಹೋವನ ಬಯಕೆಯೇನಲ್ಲ.
ತಾನು ಜನರನ್ನು ವ್ಯಸನಗೊಳಿಸಬೇಕೆಂಬುದು ಆತನಿಗೆ ಇಷ್ಟವಿಲ್ಲ.
34 ಈ ಸಂಗತಿಗಳನ್ನು ಇಷ್ಟಪಡುವುದಿಲ್ಲ.
ಯಾರೋ ಒಬ್ಬನು ಈ ಲೋಕದ ಕೈದಿಗಳನ್ನೆಲ್ಲಾ ತನ್ನ ಪಾದದ ಕೆಳಗೆ ಹಾಕಿ ತುಳಿಯುವುದನ್ನು ಆತನು ಇಷ್ಟಪಡುವುದಿಲ್ಲ.
35 ಒಬ್ಬನು ಮತ್ತೊಬ್ಬನಿಗೆ ಅನ್ಯಾಯ ಮಾಡುವುದನ್ನು ಆತನು ಇಷ್ಟಪಡುವುದಿಲ್ಲ.
ಆದರೆ ಕೆಲವರು ಆ ಕೆಟ್ಟಕಾರ್ಯಗಳನ್ನು ಮಹೋನ್ನತನಾದ ಯೆಹೋವನ ಎದುರಿನಲ್ಲಿಯೇ ಮಾಡುತ್ತಾರೆ.
36 ವ್ಯಾಜ್ಯದಲ್ಲಿ ದೊರೆಯಬೇಕಾದ ನ್ಯಾಯವನ್ನು ದೊರೆಯದಂತೆ ಮಾಡುವುದು ಯೆಹೋವನಿಗೆ ಇಷ್ಟವಿಲ್ಲ.
ಯೆಹೋವನು ಈ ಸಂಗತಿಗಳಲ್ಲಿ ಯಾವುದನ್ನೂ ಇಷ್ಟಪಡುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International