Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 46-48

ಜನಾಂಗಗಳ ವಿಷಯವಾಗಿ ಯೆಹೋವನ ಸಂದೇಶಗಳು

46 ಈ ಸಂದೇಶಗಳು ಪ್ರವಾದಿಯಾದ ಯೆರೆಮೀಯನಿಗೆ ಬಂದವು. ಈ ಸಂದೇಶಗಳು ವಿವಿಧ ಜನಾಂಗಗಳ ಬಗ್ಗೆ ಇವೆ.

ಈಜಿಪ್ಟಿನ ಬಗ್ಗೆ ಸಂದೇಶ

ಈ ಸಂದೇಶವು ಈಜಿಪ್ಟ್ ಜನಾಂಗದ ಬಗ್ಗೆ ಇದೆ. ಈ ಸಂದೇಶವು ಫರೋಹನೆಕೋವಿನ ಸೈನ್ಯದ ಬಗ್ಗೆ ಇದೆ. ಫರೋಹನೆಕೋವು ಈಜಿಪ್ಟಿನ ರಾಜನಾಗಿದ್ದನು. ಅವನ ಸೈನ್ಯವನ್ನು ಕರ್ಕೆಮೀಷ್ ಪಟ್ಟಣದಲ್ಲಿ ಸೋಲಿಸಲಾಯಿತು. ಕರ್ಕೆಮೀಷ್ ಪಟ್ಟಣವು ಯೂಫ್ರೇಟೀಸ್ ನದಿಯ ದಂಡೆಯ ಮೇಲಿದೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದದಲ್ಲಿ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಫರೋಹನೆಕೋವಿನ ಸೈನ್ಯವನ್ನು ಕರ್ಕೆಮೀಷಿನಲ್ಲಿ ಸೋಲಿಸಿದನು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಈಜಿಪ್ಟಿಗೆ ಯೆಹೋವನ ಸಂದೇಶ ಹೀಗಿತ್ತು:

“ನಿಮ್ಮ ದೊಡ್ಡ ಮತ್ತು ಸಣ್ಣ ಗುರಾಣಿಗಳನ್ನು
    ಸಿದ್ಧಪಡಿಸಿಕೊಂಡು ಯುದ್ಧಕ್ಕೆ ಹೊರಡಿರಿ.
ಕುದುರೆಗಳನ್ನು ಸಜ್ಜುಗೊಳಿಸಿರಿ.
    ಸೈನಿಕರೇ, ನಿಮ್ಮ ಕುದುರೆಯ ಮೇಲೆ ಹತ್ತಿರಿ,
ಯುದ್ಧಕ್ಕಾಗಿ ನಿಮ್ಮನಿಮ್ಮ ಸ್ಥಾನಗಳಿಗೆ ಹೋಗಿರಿ.
    ನಿಮ್ಮ ಶಿರಸ್ತ್ರಾಣಗಳನ್ನು ಧರಿಸಿರಿ,
ನಿಮ್ಮ ಭರ್ಜಿಗಳನ್ನು ಚೂಪುಗೊಳಿಸಿರಿ.
    ನಿಮ್ಮ ಕವಚಗಳನ್ನು ಧರಿಸಿರಿ.
ನಾನು ನೋಡುತ್ತಿರುವುದೇನು?
    ಸೈನ್ಯವು ಗಾಬರಿಪಟ್ಟಿದೆ.
ಸೈನಿಕರು ಓಡಿಹೋಗುತ್ತಿದ್ದಾರೆ.
    ಅವರ ಶೂರಸೈನಿಕರು ಸೋತಿದ್ದಾರೆ.
ಅವರು ಅವಸರದಿಂದ ಓಡಿಹೋಗುತ್ತಿದ್ದಾರೆ.
    ಅವರು ಹಿಂದಕ್ಕೆ ತಿರುಗಿ ಸಹ ನೋಡುತ್ತಿಲ್ಲ.
    ಎಲ್ಲಾ ಕಡೆಗೂ ಭೀತಿ ಆವರಿಸಿಕೊಂಡಿದೆ”
ಯೆಹೋವನು ಹೀಗೆಂದನು.

“ವೇಗಶಾಲಿಗಳೂ ಓಡಿಹೋಗಲಾರರು.
    ಶೂರಸೈನಿಕರೂ ತಪ್ಪಿಸಿಕೊಳ್ಳಲಾರರು.
ಅವರೆಲ್ಲರೂ ಎಡವಿ ಬಿದ್ದುಬಿಡುವರು.
    ಇದೆಲ್ಲ ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ನಡೆಯುವುದು.
ನೈಲ್ ನದಿಯಂತೆ ಯಾರು ಬರುತ್ತಿರುವರು?
    ಶಕ್ತಿಶಾಲಿಯಾದ ಮತ್ತು ರಭಸದಿಂದ ಹರಿಯುವ ನದಿಯಂತೆ ಯಾರು ಬರುತ್ತಿರುವರು?
ಭೋರ್ಗರೆಯುವ ನೈಲ್ ನದಿಯಂತೆ
    ಈಜಿಪ್ಟ್ ಬರುತ್ತಿದೆ.
ಬಲಿಷ್ಠವಾಗಿಯೂ ಮತ್ತು ರಭಸವಾಗಿಯೂ
    ಹರಿಯುವ ನದಿಯಂತೆ ಬರುತ್ತಿದೆ.
‘ನಾನು ಬಂದು ಭೂಮಿಯ ಮೇಲೆಲ್ಲ ವ್ಯಾಪಿಸಿಕೊಳ್ಳುವೆನು.
    ನಾನು ನಗರಗಳನ್ನೂ ಅಲ್ಲಿದ್ದ ಜನರನ್ನೂ ನಾಶಮಾಡುವೆನು’ ಎಂದು ಈಜಿಪ್ಟ್ ಹೇಳುತ್ತಿದೆ.
ಅಶ್ವಾರೋಹಿಗಳೇ, ಯುದ್ಧದಲ್ಲಿ ಧುಮುಕಿರಿ,
    ಸಾರಥಿಗಳೇ, ರಥಗಳನ್ನು ವೇಗವಾಗಿ ಓಡಿಸಿರಿ.
ಶೂರ ಸೈನಿಕರೇ, ಮುನ್ನುಗ್ಗಿರಿ;
    ಕೂಷ್ಯ ಮತ್ತು ಪೂಟ್ಯ ಸೈನಿಕರೇ, ನಿಮ್ಮ ಗುರಾಣಿಗಳನ್ನು ಹಿಡಿದುಕೊಂಡು ಹೋಗಿರಿ.
    ಲೂದ್ಯ ಸೈನಿಕರೇ, ನಿಮ್ಮ ಬಿಲ್ಲುಗಳನ್ನು ಉಪಯೋಗಿಸಿರಿ.

10 “ಆದರೆ ಆ ದಿನ ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಗೆಲ್ಲುವನು.
    ಆಗ ಆ ಜನರಿಗೆ ತಕ್ಕ ಶಿಕ್ಷೆಯನ್ನು ಕೊಡುವನು.
    ಯೆಹೋವನ ವೈರಿಗಳು ತಕ್ಕ ಶಿಕ್ಷೆಯನ್ನು ಅನುಭವಿಸುವರು.
ಖಡ್ಗವು ಸರ್ವರನ್ನು ಕೊಲೆ ಮಾಡುವುದು.
    ಖಡ್ಗವು ತನ್ನ ರಕ್ತದ ದಾಹ ತೀರುವವರೆಗೂ ಕೊಲೆ ಮಾಡುವುದು.
ನಮ್ಮ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಗೆ ಬಲಿ ನಡೆಯಬೇಕಾಗಿರುವುದರಿಂದ ಹೀಗೆಲ್ಲ ಆಗುವುದು.
    ಈಜಿಪ್ಟಿನ ಸೈನ್ಯವನ್ನು ಉತ್ತರದಲ್ಲಿ ಯೂಫ್ರೇಟೀಸ್ ನದಿಯ ಹತ್ತಿರ ಬಲಿಯಾಗಿ ಕೊಡಲಾಗುವುದು.

11 “ಈಜಿಪ್ಟೇ, ಗಿಲ್ಯಾದಿಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ಬಾ.
    ನೀನು ಬಗೆಬಗೆಯ ಔಷಧಿಗಳನ್ನು ಉಪಯೋಗಿಸಬಹುದು.
    ಆದರೆ ಅದರಿಂದ ಪ್ರಯೋಜನವಿಲ್ಲ. ನೀನು ಗುಣಹೊಂದುವುದಿಲ್ಲ.
12 ಬೇರೆ ಜನಾಂಗಗಳು ನೀನು ಗೋಳಾಡುವದನ್ನು ಕೇಳಿಸಿಕೊಳ್ಳುವವು.
    ನಿನ್ನ ಗೋಳಾಟವು ಇಡೀ ಭೂಮಂಡಲದಲ್ಲೆಲ್ಲ ಕೇಳಿಸುವುದು.
‘ಒಬ್ಬ ಶೂರ ಸೈನಿಕನು’ ಮತ್ತೊಬ್ಬ ‘ಶೂರ ಸೈನಿಕನನ್ನು’ ಎದುರಿಸುವನು.
    ಆ ಶೂರ ಸೈನಿಕರಿಬ್ಬರೂ ಒಟ್ಟಿಗೆ ನೆಲಕ್ಕೆ ಬೀಳುವರು.”

13 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನು ಕೊಟ್ಟ ಸಂದೇಶವಿದು. ಈ ಸಂದೇಶ ನೆಬೂಕದ್ನೆಚ್ಚರನು ಈಜಿಪ್ಟಿನ ಮೇಲೆ ಧಾಳಿ ಮಾಡಲು ಬರುವುದರ ಬಗ್ಗೆ ಇದೆ.

14 “ಈಜಿಪ್ಟಿನಲ್ಲಿ ಈ ಸಂದೇಶವನ್ನು ಪ್ರಕಟಿಸು,
    ಮಿಗ್ದೋಲ್ ನಗರದಲ್ಲಿ ಇದನ್ನು ಪ್ರಚುರಪಡಿಸು.
    ನೋಫ್ ಮತ್ತು ತಹಪನೇಸ್‌ಗಳಲ್ಲಿ ಪ್ರಚುರಪಡಿಸಿರಿ,
‘ಯುದ್ಧಕ್ಕೆ ಸಿದ್ಧರಾಗಿರಿ,
    ಏಕೆಂದರೆ ನಿಮ್ಮ ಸುತ್ತಲೂ ಜನರು ಖಡ್ಗಕ್ಕೆ ಆಹುತಿಯಾಗಿದ್ದಾರೆ.’
15 ಈಜಿಪ್ಟೇ, ನಿಮ್ಮ ಶೂರಸೈನಿಕರು ಏಕೆ ಕೊಲ್ಲಲ್ಪಡುವರು?
    ಅವರು ನಿಲ್ಲಲಾರರು.
    ಏಕೆಂದರೆ ಯೆಹೋವನು ಅವರನ್ನು ನೆಲಕ್ಕೆ ತಳ್ಳುವನು.
16 ಆ ಸೈನಿಕರು ಮತ್ತೆಮತ್ತೆ ಎಡವುತ್ತಾರೆ.
    ಅವರು ಒಬ್ಬರಮೇಲೊಬ್ಬರು ಬೀಳುವರು.
‘ಎದ್ದೇಳು, ನಮ್ಮ ಜನರಲ್ಲಿಗೆ ನಾವು ಹೋಗೋಣ.
    ನಮ್ಮ ಜನ್ಮಭೂಮಿಗೆ ನಾವು ಹೋಗೋಣ.
    ನಮ್ಮ ವೈರಿಯು ನಮ್ಮನ್ನು ಸೋಲಿಸುತ್ತಿದ್ದಾನೆ.
    ನಾವು ಇಲ್ಲಿಂದ ಹೊರಡಬೇಕು’ ಎಂದು ಅವರು ಹೇಳಿಕೊಳ್ಳುವರು.
17 ‘ಈಜಿಪ್ಟಿನ ರಾಜನಾದ ಫರೋಹನು ಕೇವಲ ಒಂದು ಪೊಳ್ಳು ಧ್ವನಿ.
    ಅವನ ವೈಭವದ ದಿನಗಳು ಮುಗಿದವು’”
ಎಂದು ಆ ಸೈನಿಕರು ತಮ್ಮ ಜನ್ಮಭೂಮಿಯಲ್ಲಿ ಹೇಳುವರು.
18 ಈ ಸಂದೇಶವು ರಾಜನಿಂದ ಬಂದದ್ದು.
    ಆ ರಾಜನೇ ಸರ್ವಶಕ್ತನಾದ ಯೆಹೋವನು.
“ನನ್ನ ಜೀವದಾಣೆಯಾಗಿ ಹೇಳುತ್ತೇನೆ.
    ಬಲಿಷ್ಠನಾದ ನಾಯಕನು ಬರುವನು.
ಅವನು ತಾಬೋರ್ ಬೆಟ್ಟದಂತೆಯೂ ಸಮುದ್ರದ ಸಮೀಪದ ಕರ್ಮೆಲ್ ಗುಡ್ಡದಂತೆಯೂ ಇರುವನು.
19 ಈಜಿಪ್ಟಿನ ಜನಗಳೇ, ನಿಮ್ಮ ವಸ್ತುಗಳನ್ನು ಕಟ್ಟಿಕೊಂಡು
ಸೆರೆವಾಸಕ್ಕೆ ಸಿದ್ಧರಾಗಿರಿ.
    ಏಕೆಂದರೆ ನೋಫ್ ಪಟ್ಟಣವು ಹಾಳುಬಿದ್ದ ನಿರ್ಜನವಾದ ಪ್ರದೇಶವಾಗುವುದು.
ನಗರಗಳನ್ನು ನಾಶಪಡಿಸಲಾಗುವುದು;
    ಅವುಗಳು ನಿರ್ಜನವಾಗುವವು.

20 “ಈಜಿಪ್ಟು ಸುಂದರವಾದ ಹಸುವಿನಂತಿದೆ,
    ಆದರೆ ಉತ್ತರದಿಂದ ತೊಣಚಿಯು[a] ಅದನ್ನು ಪೀಡಿಸಲು ಬರುತ್ತಿದೆ.
21 ಸಂಬಳಕ್ಕಾಗಿ ದುಡಿಯುವ ಈಜಿಪ್ಟಿನ ಸೈನಿಕರು ಕೊಬ್ಬಿದ ಕರುಗಳಂತಿದ್ದಾರೆ.
ಅವರೆಲ್ಲರು ಹಿಂತಿರುಗಿ ಓಡಿಹೋಗುವರು.
    ಅವರು ಧೈರ್ಯದಿಂದ ಧಾಳಿಯನ್ನು ಎದುರಿಸಲಾರರು.
ಅವರ ವಿನಾಶದ ಕಾಲ ಬರುತ್ತಿದೆ.
    ಬೇಗ ಅವರನ್ನು ದಂಡಿಸಲಾಗುವುದು.
22 ಈಜಿಪ್ಟು ಬುಸುಗುಟ್ಟಿ ತಪ್ಪಿಸಿಕೊಳ್ಳಲು
    ಪ್ರಯತ್ನಮಾಡುವ ಹಾವಿನಂತಿದೆ.
ವೈರಿಗಳು ಬಹಳ ಹತ್ತಿರಕ್ಕೆ ಬಂದಿದ್ದಾರೆ.
    ಈಜಿಪ್ಟಿನ ಸೈನಿಕರು ಓಡಿಹೋಗಲು ಪ್ರಯತ್ನ ಮಾಡುತ್ತಿದ್ದಾರೆ.
ವೈರಿಗಳು ಕೊಡಲಿಯನ್ನು ಹಿಡಿದುಕೊಂಡು ಈಜಿಪ್ಟಿನ ಮೇಲೆ ಬೀಳುವರು;
    ಅವರು ಮರ ಕಡಿಯುವ ಜನರಂತಿದ್ದಾರೆ.”

23 ಯೆಹೋವನು ಹೀಗೆನ್ನುತ್ತಾನೆ:
“ವೈರಿಗಳು ಈಜಿಪ್ಟಿನ ಅರಣ್ಯವನ್ನು (ಸೈನ್ಯವನ್ನು) ಕತ್ತರಿಸುವರು.
    ಆ ಅರಣ್ಯದಲ್ಲಿ (ಸೈನ್ಯದಲ್ಲಿ) ಅನೇಕ ಮರಗಳಿವೆ (ಸೈನಿಕರಿದ್ದಾರೆ).
    ಆದರೂ ಅದನ್ನು ಕತ್ತರಿಸಲಾಗುವುದು.
ಮಿಡತೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೈರಿಗಳ ಸೈನಿಕರಿದ್ದಾರೆ.
    ಆ ಸೈನಿಕರನ್ನು ಯಾರಿಂದಲೂ ಎಣಿಸಲಾಗದು.
24 ಈಜಿಪ್ಟಿಗೆ ಅವಮಾನವಾಗುವುದು.
    ಉತ್ತರದ ಶತ್ರು ಅವಳನ್ನು ಸೋಲಿಸುವುದು.”

25 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: “ಬಹುಬೇಗನೆ ನಾನು ಥೀಬಸ್ಸಿನ ಆಮೋನ್ ದೇವತೆಯನ್ನು ದಂಡಿಸುವೆನು. ನಾನು ಫರೋಹನನ್ನು, ಈಜಿಪ್ಟನ್ನು ಮತ್ತು ಅವಳ ದೇವರುಗಳನ್ನು ದಂಡಿಸುವೆನು. ನಾನು ಈಜಿಪ್ಟಿನ ರಾಜರನ್ನು ದಂಡಿಸುವೆನು. ಫರೋಹನನ್ನು ನಂಬಿದವರನ್ನು ದಂಡಿಸುವೆನು. 26 ಆ ಜನರನ್ನೆಲ್ಲ ಅವರ ಶತ್ರುಗಳು ಸೋಲಿಸುವಂತೆ ಮಾಡುವೆನು. ಅವರ ಶತ್ರುಗಳು ಅವರನ್ನು ಕೊಲ್ಲಬಯಸುವರು. ನಾನು ಆ ಜನರನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಅವನ ಸೇವಕರ ಕೈಗೆ ಒಪ್ಪಿಸುವೆನು.”

“ಬಹಳ ಹಿಂದೆ, ಈಜಿಪ್ಟ್ ದೇಶದಲ್ಲಿ ಶಾಂತಿ ನೆಲೆಸಿತ್ತು. ತೊಂದರೆಗಳ ಈ ದಿನಗಳ ತರುವಾಯ ಈಜಿಪ್ಟ್ ಪುನಃ ಶಾಂತಿಯ ಬೀಡಾಗುವುದು” ಇದು ಯೆಹೋವನ ನುಡಿ.

ಉತ್ತರ ಇಸ್ರೇಲಿಗೆ ಸಂದೇಶ

27 “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ.
    ಇಸ್ರೇಲೇ, ಅಂಜಬೇಡ.
ಆ ದೂರಸ್ಥಳಗಳಿಂದ ನಾನು ನಿನ್ನನ್ನು ಖಂಡಿತವಾಗಿ ರಕ್ಷಿಸುತ್ತೇನೆ.
    ಬಂಧಿಯಾಗಿರುವ ದೇಶಗಳಿಂದ ನಾನು ನಿನ್ನ ಮಕ್ಕಳನ್ನು ರಕ್ಷಿಸುತ್ತೇನೆ.
ಯಾಕೋಬು ಪುನಃ ನೆಮ್ಮದಿಯಾಗಿಯೂ ಸುರಕ್ಷಿತವಾಗಿಯೂ ಇರುವುದು.
    ಯಾರೂ ಅದನ್ನು ಹೆದರಿಸಲಾರರು.”
28 ಯೆಹೋವನು ಹೀಗೆನ್ನುತ್ತಾನೆ:
“ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ.
    ನಾನು ನಿನ್ನ ಜೊತೆಯಲ್ಲಿದ್ದೇನೆ.
ನಾನು ನಿನ್ನನ್ನು ಅನೇಕ ಸ್ಥಳಗಳಿಗೆ ಕಳುಹಿಸಿದೆ.
    ನಾನು ಆ ಜನಾಂಗಗಳನ್ನೆಲ್ಲ ಸಂಪೂರ್ಣವಾಗಿ ನಾಶಮಾಡುತ್ತೇನೆ.
    ಆದರೆ ನಿನ್ನನ್ನು ನಾನು ಸಂಪೂರ್ಣವಾಗಿ ನಾಶಮಾಡುವದಿಲ್ಲ.
ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ಶಿಕ್ಷೆ ಆಗಲೇಬೇಕು.
ಆದ್ದರಿಂದ ನೀನು ದಂಡನೆಯಿಂದ ತಪ್ಪಿಸಿಕೊಳ್ಳಲು ನಾನು ಬಿಡುವದಿಲ್ಲ.
ನಾನು ನಿನಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ, ಆದರೆ ನ್ಯಾಯವಂತನಾಗಿರುವೆನು.”

ಫಿಲಿಷ್ಟಿಯರ ಬಗ್ಗೆ ಸಂದೇಶ

47 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಫಿಲಿಷ್ಟಿಯರ ಬಗ್ಗೆ ಬಂದಿತು. ಫರೋಹನು ಗಾಜಾ ಪಟ್ಟಣದ ಮೇಲೆ ಧಾಳಿ ಮಾಡುವ ಮುಂಚೆ ಈ ಸಂದೇಶ ಬಂದಿತು.

ಯೆಹೋವನು ಹೀಗೆನ್ನುತ್ತಾನೆ:
“ನೋಡಿರಿ, ಉತ್ತರದಲ್ಲಿ ಶತ್ರು ಸೈನಿಕರು ಒಟ್ಟುಗೂಡುತ್ತಿದ್ದಾರೆ.
    ದಡಮೀರಿ ಭೋರ್ಗರೆಯುವ ನದಿಯಂತೆ ಅವರು ಬರುವರು.
ಅವರು ಪ್ರವಾಹದಂತೆ ಇಡೀ ದೇಶವನ್ನು ವ್ಯಾಪಿಸುವರು.
    ಅವರು ಪಟ್ಟಣಗಳನ್ನೂ ಅಲ್ಲಿ ವಾಸಿಸುವ ಜನರನ್ನೂ ಮುತ್ತುವರು.
ಆ ದೇಶಗಳಲ್ಲಿ ವಾಸಮಾಡುವ ಎಲ್ಲರೂ
    ಸಹಾಯಕ್ಕಾಗಿ ಗೋಳಿಡುವರು.
ಅವರು ವೇಗವಾಗಿ ಓಡುವ
    ಕುದುರೆಗಳ ಶಬ್ಧವನ್ನು ಕೇಳುವರು.
ಅವರು ರಭಸವಾಗಿ ಚಲಿಸುವ ರಥಗಳ ಶಬ್ಧವನ್ನು ಕೇಳುವರು.
    ಅವರು ಚಕ್ರಗಳ ಗಡಗಡ ಶಬ್ಧವನ್ನು ಕೇಳುವರು.
ತಂದೆಗಳು ತಮ್ಮತಮ್ಮ ಮಕ್ಕಳಿಗೆ ಸುರಕ್ಷಣೆಯನ್ನು
    ಕೊಡಲಾಗದಷ್ಟು ದುಬರ್ಲರಾಗಿರುವರು.
ಎಲ್ಲಾ ಫಿಲಿಷ್ಟಿಯರ ವಿನಾಶನದ ಕಾಲ ಬಂದಿದೆ.
ತೂರಿನ ಮತ್ತು ಚೀದೋನಿನ ಸಹಾಯಕರಲ್ಲಿ
    ಅಳಿದುಳಿದವರನ್ನೆಲ್ಲ ನಾಶಮಾಡುವ ಕಾಲ ಬಂದಿದೆ.
ಯೆಹೋವನು ಬಹುಬೇಗ ಫಿಲಿಷ್ಟಿಯರನ್ನು ನಾಶಮಾಡುವನು.
    ಕಪ್ತೋರ್ ದಿಬಪದ ಅಳಿದುಳಿದ ಜನರನ್ನು ಆತನು ನಾಶಮಾಡುವನು.
ಗಾಜಾದ ಜನರು ದುಃಖಿತರಾಗಿ ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವರು.
    ಅಷ್ಕೆಲೋನಿನ ಜನರನ್ನು ಸ್ತಬ್ಧಗೊಳಿಸಲಾಗುವುದು.
ಕಣಿವೆ ಪ್ರದೇಶದಿಂದ ಉಳಿದುಕೊಂಡವರೇ,
    ನಿಮ್ಮನ್ನು ಎಂದಿನವರೆಗೆ ಕತ್ತರಿಸಿಕೊಳ್ಳುತ್ತಿರುವಿರಿ?

“ಅಯ್ಯೋ, ಯೆಹೋವನ ಖಡ್ಗವೇ, ನೀನಿನ್ನೂ ಹೋಗಲಿಲ್ಲವೇ?
    ಎಷ್ಟು ಹೊತ್ತು ನೀನು ಹೋರಾಡುತ್ತಿರುವೆ?
ನಿನ್ನ ಒರೆಯಲ್ಲಿ ಹೋಗು!
    ಸುಮ್ಮನಿರು, ಶಾಂತವಾಗಿರು!
ಆದರೆ ಯೆಹೋವನ ಖಡ್ಗವು ವಿಶ್ರಾಂತಿ ಪಡೆಯುವುದು ಹೇಗೆ ಸಾಧ್ಯ?
    ಯೆಹೋವನು ಅದಕ್ಕೆ ಒಂದು ಆಜ್ಞೆಯನ್ನು ಕೊಟ್ಟಿದ್ದಾನೆ.
ಅಷ್ಕೆಲೋನ್ ನಗರದ ಮೇಲೆ ಮತ್ತು ಕರಾವಳಿಯ ಮೇಲೆ
    ಧಾಳಿ ಮಾಡಬೇಕೆಂದು ಯೆಹೋವನು ಅದಕ್ಕೆ ಆಜ್ಞೆ ವಿಧಿಸಿದ್ದಾನೆ.”

ಮೋವಾಬಿನ ವಿಷಯವಾಗಿ ಸಂದೇಶ

48 ಈ ಸಂದೇಶವು ಮೋವಾಬ್ ದೇಶವನ್ನು ಕುರಿತದ್ದು. ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ:

“ನೆಬೋ ಪರ್ವತಕ್ಕೆ ದುರ್ಗತಿ ಬರುವುದು.
    ನೆಬೋ ಪರ್ವತ ಪ್ರದೇಶವು ಹಾಳಾಗುವುದು.
ಕಿರ್ಯಾತಯಿಮ್ ಪಟ್ಟಣವು ಸೋಲುವುದು.
    ಅದನ್ನು ವಶಪಡಿಸಿಕೊಳ್ಳಲಾಗುವುದು.
ಭದ್ರವಾದ ಸ್ಥಳವನ್ನು ಸೋಲಿಸಿ
    ಧ್ವಂಸ ಮಾಡಲಾಗುವುದು.
ಇನ್ನು ಮುಂದೆ ಮೋವಾಬ್ ಪಟ್ಟಣವು ಹೊಗಳಿಕೆಗೆ ಪಾತ್ರವಾಗುವುದಿಲ್ಲ.
    ಹೆಷ್ಬೋನ್ ಪಟ್ಟಣದ ಜನರು ಮೋವಾಬನ್ನು ಸೋಲಿಸುವ ಯುಕ್ತಿ ಮಾಡುವರು.
ಅವರು ಆ ಜನಾಂಗವನ್ನು ನಾಶಮಾಡುವ ಆಲೋಚನೆ ಮಾಡುವರು.
ಮದ್ಮೆನೆ ಪಟ್ಟಣವೇ, ನೀನೂ ಸಹ ಸುಮ್ಮನಾಗುವೆ.
    ಖಡ್ಗವು ನಿನ್ನನ್ನು ಬೆನ್ನಟ್ಟುವದು.
ಹೊರೊನಯಿಮಿನಿಂದ ಬರುವ ಗೋಳಾಟದ ಧ್ವನಿಯನ್ನು ಕೇಳಿರಿ.
    ಅದು ವಿನಾಶದ ಮತ್ತು ಗೊಂದಲದ ಧ್ವನಿ.
ಮೋವಾಬನ್ನು ನಾಶಮಾಡಲಾಗುವುದು.
    ಅವಳ ಚಿಕ್ಕಮಕ್ಕಳು ಸಹಾಯಕ್ಕಾಗಿ ಗೋಳಿಡುವರು.
ಮೋವಾಬಿನ ಜನರು ಲೂಹೀತಿನ ದಾರಿಹಿಡಿದು ಹೋಗುತ್ತಾರೆ.
    ಹೋಗುವಾಗ ಅವರು ಬಹಳವಾಗಿ ಗೋಳಾಡುತ್ತಾರೆ.
ಅವರ ಕಷ್ಟ ಮತ್ತು ನೋವಿನ ಗೋಳಾಟವು
    ಆ ದಾರಿಯಿಂದ ಹೊರೊನಯಿಮ್ ಪಟ್ಟಣದವರೆಗೂ ಕೇಳಿಬರುತ್ತದೆ.
ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವದಕ್ಕಾಗಿ ಓಡಿಹೋಗಿರಿ.
    ಮರುಭೂಮಿಯಲ್ಲಿರುವ ಕಾಡುಕತ್ತೆಯಂತೆ ಓಡಿರಿ.

“ನೀವು ನಿರ್ಮಿಸಿದ ವಸ್ತುಗಳಲ್ಲಿ ಮತ್ತು ನಿಮ್ಮ ಸಂಪತ್ತಿನಲ್ಲಿ ನಂಬಿಕೆಯಿಟ್ಟಿದ್ದರಿಂದ
    ನಿಮ್ಮನ್ನು ವಶಪಡಿಸಿಕೊಳ್ಳಲಾಗುವುದು.
ಕೆಮೋಷ್ ದೇವತೆಯನ್ನು ಅದರ ಯಾಜಕರೊಂದಿಗೆ
    ಮತ್ತು ಪ್ರಧಾನರೊಂದಿಗೆ ಸೆರೆಹಿಡಿಯಲಾಗುವುದು.
ಪ್ರತಿಯೊಂದು ಪಟ್ಟಣದ ಮೇಲೆ ವಿನಾಶಕನು ಧಾಳಿ ಮಾಡುವನು.
    ಒಂದು ಪಟ್ಟಣವೂ ತಪ್ಪಿಸಿಕೊಳ್ಳಲಾರದು.
ಇಳಿಜಾರು ಪ್ರದೇಶವನ್ನು ನಾಶಪಡಿಸಲಾಗುವುದು.
    ಎತ್ತರದಲ್ಲಿದ್ದ ಪ್ರದೇಶವನ್ನು ಹಾಳುಮಾಡಲಾಗುವುದು.
ಇದನ್ನು ಯೆಹೋವನೇ ಹೇಳಿರುವುದರಿಂದ ನೆರವೇರುವುದು.
ಮೋವಾಬಿನ ಭೂಮಿಯ ಮೇಲೆ ಉಪ್ಪನ್ನು ಹರಡಿರಿ.
    ದೇಶವು ಬರಿದಾದ ಮರುಭೂಮಿಯಾಗುವುದು.
ಮೋವಾಬಿನ ಪಟ್ಟಣಗಳು ಬರಿದಾಗುವವು.
    ಅಲ್ಲಿ ಯಾರೂ ವಾಸಮಾಡಲಾರರು.
10 ಯೆಹೋವನು ಹೇಳಿದಂತೆ ನಡೆಯದಿದ್ದವನಿಗೆ
    ಮತ್ತು ಆ ಜನರನ್ನು ಕೊಲ್ಲಲು ತನ್ನ ಖಡ್ಗವನ್ನು ಬಳಸದಿದ್ದವನಿಗೆ ಕೇಡಾಗುವುದು.

11 “ಮೋವಾಬಿಗೆ ಕಷ್ಟವೆಂಬುದೇ ಗೊತ್ತಿಲ್ಲ.
    ಮೋವಾಬ್ ಮಡ್ಡಿ ತಂಗಿಸಲು ಬಿಟ್ಟ ದ್ರಾಕ್ಷಾರಸದಂತಿದೆ.
ಅದನ್ನು ಒಂದು ಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಒಮ್ಮೆಯೂ ಸುರಿದಿಲ್ಲ.
    ಅದನ್ನು ಒಮ್ಮೆಯೂ ಸೆರೆಹಿಡಿದಿಲ್ಲ.
ಆದ್ದರಿಂದ ಅದರ ರುಚಿ ಮೊದಲಿದ್ದ ಹಾಗೆ ಇದೆ.
    ಅದರ ವಾಸನೆಯಲ್ಲಿ ಬದಲಾವಣೆಯಾಗಿಲ್ಲ.”
12 ಯೆಹೋವನು ಹೀಗೆಂದನು:
“ನಿನ್ನನ್ನು ನಿನ್ನ ಪಾತ್ರೆಯಿಂದ ಸುರಿಯುವದಕ್ಕೆ
    ನಾನು ಜನರನ್ನು ಕಳುಹಿಸುತ್ತೇನೆ.
ಆ ಜನರು ಮೋವಾಬಿನ ಪಾತ್ರೆಗಳನ್ನು ಬರಿದಾಗಿಸುವರು.
    ಅನಂತರ ಆ ಪಾತ್ರೆಗಳನ್ನು ಒಡೆದು ಚೂರುಚೂರು ಮಾಡುವರು.”

13 ಆಗ ಮೋವಾಬಿನ ಜನರು ತಮ್ಮ ಸುಳ್ಳುದೇವರಾದ ಕೆಮೋಷಿಗಾಗಿ ನಾಚಿಕೆಪಡುವರು. ಇಸ್ರೇಲಿನ ಜನರು ಬೇತೇಲಿನಲ್ಲಿ ಆ ಸುಳ್ಳುದೇವರನ್ನು ನಂಬಿಕೊಂಡಿದ್ದರು. ಆದರೆ ಆ ಸುಳ್ಳುದೇವರು ಅವರ ಸಹಾಯಕ್ಕೆ ಬಾರದೆ ಇದ್ದಾಗ ಆ ಇಸ್ರೇಲರು ನಾಚಿಕೆಗೆ ಈಡಾದರು. ಮೋವಾಬ್ ಸಹ ಅದೇ ಸ್ಥಿತಿಯಲ್ಲಿರುವುದು.

14 “‘ನಾವು ಒಳ್ಳೆಯ ಯೋಧರಾಗಿದ್ದೇವೆ.
    ನಾವು ಯುದ್ಧವೀರರಾಗಿದ್ದೇವೆ’ ಎಂದು ನೀವು ಹೇಳಲಾರಿರಿ.
15 ವೈರಿಯು ಮೋವಾಬಿನ ಮೇಲೆ ಧಾಳಿ ಮಾಡುವನು.
    ವೈರಿಯು ಆ ಪಟ್ಟಣಗಳಲ್ಲಿ ಪ್ರವೇಶಮಾಡಿ ಅವುಗಳ ಧ್ವಂಸ ಮಾಡುವನು.
ಅವಳ ಅತ್ಯುತ್ತಮ ತರುಣರು ಕೊಲೆಗೀಡಾಗುವರು.”
ಈ ಸಂದೇಶವು ರಾಜನಿಂದ ಬಂದಿದೆ.
    ಆ ರಾಜನ ಹೆಸರು ಸರ್ವಶಕ್ತನಾದ ಯೆಹೋವನು ಎಂದು.
16 “ಮೋವಾಬಿನ ಅಂತ್ಯ ಸಮೀಪಿಸುತ್ತಿದೆ.
    ಬೇಗನೆ ಮೋವಾಬನ್ನು ಧ್ವಂಸಗೊಳಿಸಲಾಗುವುದು.
17 ಮೋವಾಬಿನ ಸುತ್ತಮುತ್ತಲೂ ವಾಸಿಸುವ ನೀವೆಲ್ಲರು ಆ ದೇಶಕ್ಕಾಗಿ ಗೋಳಾಡಬೇಕು.
    ಮೋವಾಬ್ ಎಷ್ಟು ಸುಪ್ರಸಿದ್ಧವಾಗಿದೆ ಎಂಬುದು ನಿಮಗೆಲ್ಲ ಗೊತ್ತು.
    ಆದ್ದರಿಂದ ಅದಕ್ಕಾಗಿ ಗೋಳಾಡಿರಿ.
‘ರಾಜನ ಶಕ್ತಿಯು ಇಲ್ಲವಾಯಿತು.
    ಮೋವಾಬಿನ ಸಾಮರ್ಥ್ಯ ಮತ್ತು ಘನತೆ ಕಣ್ಮರೆಯಾದವು’ ಎಂದು ಹೇಳಿರಿ.

18 “ದೀಬೋನ್‌ನಲ್ಲಿ ವಾಸಿಸುವ ಜನರೇ,
    ನಿಮ್ಮ ಗೌರವಾನಿಬತ ಸ್ಥಳದಿಂದ ಕೆಳಗಿಳಿದು ಬನ್ನಿ.
ನೆಲದ ಮೇಲೆ ಧೂಳಿನಲ್ಲಿ ಕುಳಿತುಕೊಳ್ಳಿ.
    ಏಕೆಂದರೆ, ಧ್ವಂಸಕನು ಬರುತ್ತಿದ್ದಾನೆ.
ನಿಮ್ಮ ಭದ್ರವಾದ ನಗರಗಳನ್ನು ಅವನು ಹಾಳುಮಾಡುತ್ತಾನೆ.

19 “ಅರೋಯೇರಿನವರೇ,
    ದಾರಿಯ ಮಗ್ಗುಲಲ್ಲಿ ನಿಂತುಕೊಂಡು ನೋಡಿರಿ,
ಆ ಗಂಡಸು ಓಡಿಹೋಗುವದನ್ನು ನೋಡಿರಿ.
    ಆ ಹೆಂಗಸು ಓಡಿಹೋಗುವದನ್ನು ನೋಡಿರಿ.
    ಏನಾಯಿತೆಂದು ಅವರನ್ನು ಕೇಳಿರಿ.

20 “ಮೋವಾಬು ಹಾಳಾಗುವುದು; ಅದು ನಾಚಿಕೆಪಡುವುದು.
    ಮೋವಾಬು ಸತತವಾಗಿ ಗೋಳಾಡುವುದು.
ಮೋವಾಬು ಹಾಳಾಯಿತೆಂದು
    ಅರ್ನೋನ್ ನದಿಯ ತೀರದಲ್ಲಿ ಸಾರಿರಿ.
21 ಎತ್ತರದ ಪ್ರದೇಶದಲ್ಲಿರುವ ಜನರನ್ನು ಶಿಕ್ಷಿಸಲಾಗಿದೆ.
    ಹೋಲೋನ್, ಯಾಚಾ ಮತ್ತು ಮೆಫಾತ್ ಪಟ್ಟಣಗಳಿಗೆ,
22 ದೂರದಲ್ಲಿರುವ ಮೋವಾಬಿನ ಎಲ್ಲಾ ಊರುಗಳಿಗೆ
    ಅಂದರೆ ದೀಬೋನ್, ನೆಬೋ, ಬೇತ್‌ದಿಬ್ಲಾತಯೀಮ್,
23 ಕಿರ್ಯಾತಯೀಮ್, ಬೇತ್‌ಗಾಮೂಲ್, ಬೇತ್‌ಮೆಯೋನ್,
24 ಕೆರೀಯೋತ್, ಬೊಚ್ರ ಮೊದಲಾದ
    ಮೋವಾಬಿನ ದೂರದ ಹತ್ತಿರದ ಎಲ್ಲಾ ಪಟ್ಟಣಗಳಿಗೆ ದಂಡನೆ ವಿಧಿಸಲಾಗಿದೆ.
25 ಮೋವಾಬಿನ ಬಲವನ್ನು ಕತ್ತರಿಸಲಾಗಿದೆ.
    ಅದರ ತೋಳನ್ನು ಮುರಿಯಲಾಗಿದೆ”
ಇದು ಯೆಹೋವನ ನುಡಿ.

26 ತಾನು ಯೆಹೋವನಿಗಿಂತ ಬಹಳ ಮುಖ್ಯವಾದವನೆಂದು ಮೋವಾಬು ಭಾವಿಸಿತ್ತು.
    ಕುಡಿದು ಮದವೇರಿದವನಂತೆ ಆಗುವವರೆಗೆ ಮೋವಾಬನ್ನು ದಂಡಿಸಿರಿ.
ಮೋವಾಬು ತನ್ನ ವಾಂತಿಯಲ್ಲಿ ಬಿದ್ದು ಹೊರಳಾಡುವದು.
    ಜನರು ಮೋವಾಬನ್ನು ತಮಾಷೆ ಮಾಡುವರು.

27 “ಮೋವಾಬೇ, ನೀನು ಇಸ್ರೇಲಿನ ಬಗ್ಗೆ ತಮಾಷೆ ಮಾಡಿದೆ.
    ಇಸ್ರೇಲ್ ಒಂದು ಕಳ್ಳರ ಗುಂಪಿನಿಂದ ಹಿಡಿಯಲ್ಪಟ್ಟಿತ್ತೇನು?
ಇಸ್ರೇಲಿನ ಬಗ್ಗೆ ಮಾತನಾಡಿದಾಗಲೆಲ್ಲ ನೀನು ತಲೆಯಾಡಿಸಿದೆ.
    ಇಸ್ರೇಲಿಗಿಂತ ಉತ್ತಮನೋ ಎಂಬಂತೆ ನಟಿಸಿದೆ.
28 ಮೋವಾಬ್ಯರೇ, ನಿಮ್ಮ ಪಟ್ಟಣಗಳನ್ನು ಬಿಟ್ಟುಬಿಡಿ.
    ಹೋಗಿ, ಬೆಟ್ಟಗಳಲ್ಲಿ ವಾಸಿಸಿರಿ.
ಗುಹೆಯ ಬಾಗಿಲಿನಲ್ಲಿ ತನ್ನ ಗೂಡನ್ನು ಕಟ್ಟಿಕೊಳ್ಳುವ
    ಪಾರಿವಾಳದಂತೆ ಆಗಿರಿ.”

29 “ಮೋವಾಬಿನ ಸೊಕ್ಕಿನ ಬಗ್ಗೆ ನಾವು ಕೇಳಿದ್ದೇವೆ.
    ಅವನಿಗೆ ತುಂಬ ಸೊಕ್ಕು ಬಂದಿತ್ತು.
ತಾನೇ ಮುಖ್ಯವಾದವನೆಂದು ಅವನು ಭಾವಿಸಿದ್ದನು.
    ಅವನು ಯಾವಾಗಲೂ ಬಡಾಯಿಕೊಚ್ಚಿಕೊಳ್ಳುತ್ತಿದ್ದನು.
    ಅವನು ತುಂಬಾ ಸೊಕ್ಕಿನವನಾಗಿದ್ದನು.”

30 ಯೆಹೋವನು ಹೀಗೆಂದನು: “ಬಹುಬೇಗ ಮೋವಾಬಿಗೆ ಕೋಪ ಬರುತ್ತದೆ.
ಅವನು ಬಡಾಯಿ ಕೊಚ್ಚಿಕೊಳ್ಳುತ್ತಾನೆಂಬುದು ನನಗೆ ಗೊತ್ತು.
    ಆದರೆ ಅವನ ಬಡಾಯಿಗಳೆಲ್ಲ ಸುಳ್ಳು.
    ತಾನು ಹೇಳಿದಂತೆ ಮಾಡಲು ಅವನಿಂದಾಗದು.
31 ಆದ್ದರಿಂದ ನಾನು ಮೋವಾಬಿಗಾಗಿ ಗೋಳಾಡುವೆನು;
    ಮೋವಾಬಿನ ಪ್ರತಿಯೊಬ್ಬರಿಗಾಗಿ ಗೋಳಾಡುವೆನು.
    ನಾನು ಕೀರ್ ಹೆರೆಸಿನವರಿಗಾಗಿ ಪ್ರಲಾಪಿಸುವೆನು.
32 ನಾನು ಯೆಜ್ಜೇರಿನ ಜನರೊಂದಿಗೆ ಯೆಜ್ಜೇರಿಗಾಗಿ ಪ್ರಲಾಪಿಸುವೆನು.
    ಸಿಬ್ಮವೇ, ನಿನ್ನ ದ್ರಾಕ್ಷಿಬಳ್ಳಿಗಳು ಸಮುದ್ರದವರೆಗೂ ಹಬ್ಬಿದ್ದವು;
    ಅವು ಯೆಜ್ಜೇರ್ ಪಟ್ಟಣದವರೆಗೂ ಚಾಚಿದ್ದವು.
ಆದರೆ ವಿನಾಶಕನು ನಿನ್ನ ಹಣ್ಣುಗಳನ್ನು ಮತ್ತು ದ್ರಾಕ್ಷಿಗಳನ್ನು ಕಿತ್ತುಕೊಂಡಿದ್ದಾನೆ.
33 ಮೋವಾಬಿನ ದೊಡ್ಡದೊಡ್ಡ ದ್ರಾಕ್ಷಿತೋಟಗಳಿಂದ
ಹರ್ಷವೂ ಆನಂದವೂ ಕಣ್ಮರೆಯಾಗಿವೆ.
ದ್ರಾಕ್ಷಿಗಾಣದಿಂದ ದ್ರಾಕ್ಷಾರಸ ಹರಿಯುವದನ್ನು ನಾನು ನಿಲ್ಲಿಸಿದ್ದೇನೆ.
ದ್ರಾಕ್ಷಾರಸವನ್ನು ಮಾಡಲು ದ್ರಾಕ್ಷಿಯನ್ನು ತುಳಿಯುವ ಜನರ ಹಾಡು ಮತ್ತು ನೃತ್ಯ ಕಂಡುಬರುವದಿಲ್ಲ.
ಸಂತೋಷದ ಧ್ವನಿ ಕೇಳಿಬರುತ್ತಿಲ್ಲ.

34 “ಹೆಷ್ಬೋನ್ ಮತ್ತು ಎಲೆಯಾಲೆ ಎಂಬ ಪಟ್ಟಣಗಳ ಜನರು ಅರಚಿಕೊಳ್ಳುತ್ತಿದ್ದಾರೆ. ಅವರ ಕಿರುಚಾಟವು ದೂರದ ಯಹಚಿನವರೆಗೂ ಕೇಳಿಬರುತ್ತಿದೆ. ಅವರ ಕಿರುಚಾಟವು ಚೋಯರಿನಿಂದ ದೂರದ ಹೊರೊನಯಿಮ್ ಮತ್ತು ಎಗ್ಲತ್ ಶೆಲಿಶೀಯದವರೆಗೆ ಕೇಳಿಬರುತ್ತದೆ. ನಿಮ್ರೀಮ್ ಹಳ್ಳದ ನೀರು ಸಹ ಬತ್ತಿಹೋಗಿದೆ. 35 ಮೋವಾಬಿನ ಜನರು ಪೂಜಾಸ್ಥಾನದಲ್ಲಿ ಧೂಪಹಾಕುವದನ್ನು ನಾನು ನಿಲ್ಲಿಸುತ್ತೇನೆ. ಅವರು ತಮ್ಮ ದೇವರುಗಳಿಗೆ ಬಲಿ ಅರ್ಪಿಸುವದನ್ನು ನಿಲ್ಲಿಸುತ್ತೇನೆ” ಎಂದು ಯೆಹೋವನು ನುಡಿದನು.

36 “ಮೋವಾಬಿಗಾಗಿ ನಾನು ಬಹಳ ದುಃಖಿತನಾಗಿದ್ದೇನೆ. ಸ್ಮಶಾನಯಾತ್ರೆಯ ಕಾಲದಲ್ಲಿ ಊದುವ ಕೊಳಲಿನಿಂದ ಹೊರಬರುವ ದುಃಖದ ಧ್ವನಿಯಂತೆ ನನ್ನ ಹೃದಯ ಅಳುತ್ತಿದೆ. ಕೀರ್ ಹೆರೆಸಿನ ಜನರಿಗಾಗಿ ನಾನು ದುಃಖಿಸುತ್ತೇನೆ. ಅವರ ಹಣವನ್ನು ಮತ್ತು ಸಂಪತ್ತನ್ನು ಕಿತ್ತುಕೊಳ್ಳಲಾಗಿದೆ. 37 ಪ್ರತಿಯೊಬ್ಬರ ತಲೆಯನ್ನು ಬೋಳಿಸಲಾಗಿದೆ. ಪ್ರತಿಯೊಬ್ಬರ ಗಡ್ಡವನ್ನು ಕತ್ತರಿಸಲಾಗಿದೆ. ಪ್ರತಿಯೊಬ್ಬರ ಕೈಗಳು ಕತ್ತರಿಸಲ್ಪಟ್ಟು ಅವುಗಳಿಂದ ರಕ್ತ ಸುರಿಯುತ್ತಿದೆ. ಪ್ರತಿಯೊಬ್ಬರು ತಮ್ಮ ಸೊಂಟಕ್ಕೆ ದುಃಖಸೂಚಕ ವಸ್ತ್ರಗಳನ್ನು ಸುತ್ತಿಕೊಂಡಿದ್ದಾರೆ. 38 ಮೋವಾಬಿನ ಪ್ರತಿಯೊಂದು ಮಾಳಿಗೆಯ ಮೇಲೂ ಸಾರ್ವಜನಿಕ ಚೌಕಗಳಲ್ಲಿಯೂ ಜನ ಸತ್ತವರಿಗಾಗಿ ಶೋಕಿಸುತ್ತಿದ್ದಾರೆ. ಮೋವಾಬನ್ನು ನಾನು ಬರಿದಾದ ಪಾತ್ರೆಯಂತೆ ಮಾಡಿರುವುದರಿಂದ ದುಃಖ ವ್ಯಾಪಿಸಿದೆ.” ಇದು ಯೆಹೋವನ ನುಡಿ.

39 “ಮೋವಾಬ್ ನುಚ್ಚುನೂರಾಯಿತು. ಜನರು ಕಿರುಚುತ್ತಿದ್ದಾರೆ. ಮೋವಾಬ್ ಶರಣಾಗತವಾಯಿತು. ಮೋವಾಬ್ ಈಗ ನಾಚಿಕೆಪಡುತ್ತಿದೆ. ಜನರು ಮೋವಾಬನ್ನು ತಮಾಷೆ ಮಾಡುತ್ತಾರೆ. ಆದರೆ ಇಲ್ಲಿ ನಡೆದ ಘಟನೆಗಳು ಅವರನ್ನು ಭೀತರನ್ನಾಗಿ ಮಾಡಿವೆ.”

40 ಯೆಹೋವನು ಹೀಗೆನ್ನುತ್ತಾನೆ: “ನೋಡಿ, ಒಂದು ರಣಹದ್ದು ಆಕಾಶದಿಂದ ಎರಗುತ್ತಿದೆ.
    ಅದು ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಹರಡುತ್ತಿದೆ.
41 ಮೋವಾಬಿನ ಪಟ್ಟಣಗಳನ್ನು ಗೆದ್ದುಕೊಳ್ಳಲಾಗುವುದು.
    ಅಡಗಿಕೊಳ್ಳುವ ಭದ್ರವಾದ ನೆಲೆಗಳನ್ನು ವಶಪಡಿಸಿಕೊಳ್ಳಲಾಗುವುದು.
ಆಗ ಮೋವಾಬಿನ ಸೈನಿಕರು ಪ್ರಸವವೇದನೆಪಡುವ ಹೆಂಗಸಿನಂತೆ ಗಾಬರಿಯಾಗುವರು.
42 ಮೋವಾಬ್ ಜನಾಂಗವನ್ನು ನಾಶಮಾಡಲಾಗುವದು.
    ಏಕೆಂದರೆ ತಾವು ಯೆಹೋವನಿಗಿಂತ ಬಹಳ ಮುಖ್ಯವಾದವರೆಂದು ಅವರು ಭಾವಿಸಿಕೊಂಡರು.”

43 ಯೆಹೋವನು ಹೀಗೆ ಹೇಳಿದನು:
    “ಮೋವಾಬಿನ ಜನರೇ, ಭಯವೂ ಆಳವಾದ ಗುಂಡಿಗಳೂ ಬಲೆಗಳೂ ನಿಮಗಾಗಿ ಕಾದುಕೊಂಡಿವೆ.
44 ಜನರು ಅಂಜಿ ಓಡಿಹೋಗುವರು;
    ಆಳವಾದ ಗುಂಡಿಗಳಲ್ಲಿ ಬೀಳುವರು.
ಯಾರಾದರೂ ಆ ಆಳವಾದ ಗುಂಡಿಗಳಿಂದ ಮೇಲಕ್ಕೆ ಹತ್ತಿ ಬಂದರೆ
    ಅವರನ್ನು ಬಲೆಯಲ್ಲಿ ಹಿಡಿಯಲಾಗುವುದು.
ನಾನು ಮೋವಾಬಿಗೆ ದಂಡನೆಯ ವರ್ಷವನ್ನು ತರುವೆನು”
ಎಂದು ಯೆಹೋವನು ನುಡಿದನು.

45 “ಜನರು ಪ್ರಬಲನಾದ ವೈರಿಯಿಂದ ತಪ್ಪಿಸಿಕೊಂಡು
    ತಮ್ಮ ರಕ್ಷಣೆಗಾಗಿ ಹೆಷ್ಬೋನ್ ಪಟ್ಟಣಕ್ಕೆ ಓಡಿಹೋದರು.
    ಆದರೆ ಅಲ್ಲಿ ರಕ್ಷಣೆಯಿರಲಿಲ್ಲ.
ಹೆಷ್ಬೋನಿನಲ್ಲಿ ಅಗ್ನಿಜ್ವಾಲೆ ಪ್ರಾರಂಭವಾಯಿತು.
    ಸೀಹೋನಿನಲ್ಲಿ ಅಗ್ನಿಜ್ವಾಲೆ ಪ್ರಾರಂಭವಾಯಿತು.
    ಅದು ಮೋವಾಬಿನ ನಾಯಕರುಗಳನ್ನು ಸುಡುತ್ತಿದೆ.
    ಅದು ಆ ಗರ್ವಿಷ್ಠರನ್ನು ಸುಡುತ್ತಿದೆ.
46 ಮೋವಾಬ್ಯರೇ, ನಿಮಗೆ ಕೇಡು ಕಾದಿದೆ.
    ಕೆಮೋಷಿನ ಭಕ್ತರು ನಾಶವಾಗುತ್ತಿದ್ದಾರೆ.
ನಿಮ್ಮ ಮಕ್ಕಳನ್ನು ಬಂಧಿಗಳನ್ನಾಗಿಯೂ ಸೆರೆಯಾಳುಗಳನ್ನಾಗಿಯೂ ತೆಗೆದುಕೊಂಡು ಹೋಗಲಾಗುತ್ತಿದೆ.

47 “ಮೋವಾಬಿನ ಜನರನ್ನು ಸೆರೆಹಿಡಿದುಕೊಂಡು ಹೋಗಲಾಗುವುದು. ಆದರೆ ಭವಿಷ್ಯದಲ್ಲಿ ನಾನು ಮೋವಾಬ್ಯರನ್ನು ಪುನಃ ಕರೆದು ತರುವೆನು” ಇದು ಯೆಹೋವನಿಂದ ಬಂದ ಸಂದೇಶ.

ಮೋವಾಬಿನ ಕುರಿತಾದ ನ್ಯಾಯತೀರ್ಪು ಇದೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International