Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 38-41

ಯೆರೆಮೀಯನನ್ನು ಒಂದು ಬಾವಿಯಲ್ಲಿ ಹಾಕಲಾಯಿತು.

38 ಯೆರೆಮೀಯನು ಪ್ರವಾದಿಸುತ್ತಿರುವುದನ್ನು ಕೆಲವು ಜನ ರಾಜಾಧಿಕಾರಿಗಳು ಕೇಳಿಸಿಕೊಂಡರು. ಮತ್ತಾನನ ಮಗನಾದ ಶೆಫತ್ಯ, ಪಷ್ಹೂರನ ಮಗನಾದ ಗೆದಲ್ಯ, ಸೆಲೆಮ್ಯನ ಮಗನಾದ ಯೂಕಲ, ಮಲ್ಕೀಯನ ಮಗನಾದ ಪಷ್ಹೂರ ಇವರುಗಳು ಅವನ ಮಾತನ್ನೆಲ್ಲಾ ಕೇಳಿಸಿಕೊಂಡರು. ಯೆರೆಮೀಯನು ಎಲ್ಲಾ ಜನರಿಗೆ ಈ ಸಂದೇಶವನ್ನು ಹೇಳುತ್ತಿದ್ದನು. “ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರು ಖಡ್ಗದಿಂದಾಗಲಿ ಕ್ಷಾಮದಿಂದಾಗಲಿ ಭಯಂಕರವಾದ ವ್ಯಾಧಿಯಿಂದಾಗಲಿ ಸತ್ತುಹೋಗುವರು. ಆದರೆ ಬಾಬಿಲೋನಿನ ಸೈನಿಕರಿಗೆ ಶರಣಾಗುವ ಪ್ರತಿಯೊಬ್ಬರು ಬದುಕುವರು. ಅವರು ಜೀವಂತ ಉಳಿಯುವರು.’ ಯೆಹೋವನು ಹೀಗೆನ್ನುತ್ತಾನೆ: ‘ಈ ಜೆರುಸಲೇಮ್ ನಗರವನ್ನು ಖಂಡಿತವಾಗಿಯೂ ಬಾಬಿಲೋನ್ ರಾಜನ ಸೈನಿಕರ ಕೈಗೆ ಒಪ್ಪಿಸಲಾಗುವುದು. ಅವನು ಈ ನಗರವನ್ನು ಸ್ವಾಧೀನಪಡಿಸಿಕೊಳ್ಳುವನು.’”

ಯೆರೆಮೀಯನು ಜನರಿಗೆ ಹೇಳುತ್ತಿರುವ ವಿಷಯಗಳನ್ನು ಕೇಳಿದ ರಾಜಾಧಿಕಾರಿಗಳು ರಾಜನಾದ ಚಿದ್ಕೀಯನ ಬಳಿಗೆ ಹೋಗಿ, “ಯೆರೆಮೀಯನಿಗೆ ಮರಣದಂಡನೆಯಾಗಬೇಕು. ಇನ್ನೂ ನಗರದಲ್ಲಿರುವ ಸೈನಿಕರನ್ನೂ ಎಲ್ಲರನ್ನೂ ತನ್ನ ಮಾತುಗಳಿಂದ ಧೈರ್ಯಗೆಡಿಸುತ್ತಿದ್ದಾನೆ. ನಮಗೆ ಒಳ್ಳೆಯದಾಗಬೇಕೆಂದು ಅವನು ಬಯಸದೆ ಜೆರುಸಲೇಮಿನ ಜನರ ನಾಶನವನ್ನು ಬಯಸುತ್ತಾನೆ” ಎಂದು ಹೇಳಿದರು.

ಆಗ ರಾಜನಾದ ಚಿದ್ಕೀಯನು, “ಯೆರೆಮೀಯನು ನಿಮ್ಮ ಅಧಿನದಲ್ಲಿದ್ದಾನೆ. ನೀವು ಏನು ಬೇಕಾದರೂ ಮಾಡಿ” ಎಂದು ಆ ಅಧಿಕಾರಿಗಳಿಗೆ ಹೇಳಿದನು.

ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಹಿಡಿದು ಮಲ್ಕೀಯನ ಬಾವಿಯೊಳಗೆ ಹಾಕಿದರು. (ಮಲ್ಕೀಯನು ರಾಜವಂಶದವನಾಗಿದ್ದನು.) ಆ ಬಾವಿಯು ಕಾರಾಗೃಹದ ಅಂಗಳದಲ್ಲಿತ್ತು. ಆ ಅಧಿಕಾರಿಗಳು ಹಗ್ಗಗಳನ್ನು ಕಟ್ಟಿ ಯೆರೆಮೀಯನನ್ನು ಬಾವಿಯಲ್ಲಿ ಇಳಿಬಿಟ್ಟರು. ಆ ಬಾವಿಯಲ್ಲಿ ಸ್ವಲ್ಪವೂ ನೀರಿರಲಿಲ್ಲ. ಕೇವಲ ಕೇಸರಿತ್ತು. ಯೆರೆಮೀಯನು ಕೆಸರಿನಲ್ಲಿ ಮುಳುಗಿಹೋದನು.

ಆ ಅಧಿಕಾರಿಗಳು ಯೆರೆಮೀಯನನ್ನು ಬಾವಿಗೆ ಹಾಕಿದ ಸಂಗತಿಯು ಎಬೆದ್ಮೆಲೆಕನೆಂಬ ಮನುಷ್ಯನ ಕಿವಿಗೆ ಬಿತ್ತು. ಎಬೆದ್ಮೆಲೆಕನು ಇಥಿಯೋಪಿಯದವನಾಗಿದ್ದು ಅರಮನೆಯಲ್ಲಿ ಕಂಚುಕಿಯಾಗಿದ್ದನು. ರಾಜನಾದ ಚಿದ್ಕೀಯನು ಬೆನ್ಯಾಮೀನ್ ಊರ ಬಾಗಲಲ್ಲಿ ಕುಳಿತಿದ್ದನು. ಎಬೆದ್ಮೆಲೆಕನು ಅರಮನೆಯನ್ನು ಬಿಟ್ಟು ಬೆನ್ಯಾಮೀನ್ ಊರಹೆಬ್ಬಾಗಿಲಿನ ಹತ್ತಿರ ಕುಳಿತಿದ್ದ ರಾಜನಾದ ಚಿದ್ಕೀಯನ ಹತ್ತಿರ ಬಂದು ಹೀಗೆ ಹೇಳಿದನು: 8-9 “ನನ್ನ ಒಡೆಯನಾದ ರಾಜನೇ, ಆ ಅಧಿಕಾರಿಗಳು ದುಷ್ಟ ರೀತಿಯಲ್ಲಿ ವರ್ತಿಸಿದ್ದಾರೆ. ಅವರು ಪ್ರವಾದಿಯಾದ ಯೆರೆಮೀಯನೊಂದಿಗೆ ದುಷ್ಟತನದಿಂದ ವ್ಯವಹರಿಸಿದ್ದಾರೆ. ಅವರು ಅವನನ್ನು ಒಂದು ಬಾವಿಯಲ್ಲಿ ಎಸೆದಿದ್ದಾರೆ. ಅವನನ್ನು ಅಲ್ಲಿಯೇ ಸಾಯಲು ಬಿಟ್ಟಿದ್ದಾರೆ” ಎಂದು ಹೇಳಿದನು.

10 ಆಗ ರಾಜನಾದ ಚಿದ್ಕೀಯನು ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ, “ಅರಮನೆಯಿಂದ ಮೂರು ಜನರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು. ಯೆರೆಮೀಯನನ್ನು ಅವನು ಸಾಯುವ ಮುಂಚೆ ಬಾವಿಯಿಂದ ಮೇಲೆತ್ತು” ಎಂದು ಅಪ್ಪಣೆಕೊಟ್ಟನು.

11 ಎಬೆದ್ಮೆಲೆಕನು ಆ ಜನರನ್ನು ಕರೆದುಕೊಂಡು ಹೊರಟನು. ಅವನು ಮೊದಲು ಅರಮನೆಯ ಉಗ್ರಾಣದ ಕೆಳಗಿರುವ ಕೋಣೆಗೆ ಹೋದನು. ಆ ಕೋಣೆಯಿಂದ ಅವನು ಕೆಲವು ಹಳೆಯದಾದ ಮತ್ತು ಹರಿದುಹೋದ ಬಟ್ಟೆಗಳನ್ನು ತೆಗೆದುಕೊಂಡನು. ಆ ಚಿಂದಿಬಟ್ಟೆಗಳನ್ನು ಒಂದು ಹಗ್ಗಕ್ಕೆ ಕಟ್ಟಿ ಆಳವಾದ ಬಾವಿಯಲ್ಲಿ ಯೆರೆಮೀಯನಿಗೆ ತಲುಪುವಂತೆ ಇಳಿಬಿಟ್ಟನು. 12 ಆಗ ಇಥಿಯೋಪಿಯದವನಾದ ಎಬೆದ್ಮೆಲೆಕನು, “ಆ ಹರಿದುಹೋದ ಮತ್ತು ಹಳೆಯದಾದ ಬಟ್ಟೆಗಳನ್ನು ನಿನ್ನ ಕಂಕುಳಲ್ಲಿ ಇಟ್ಟುಕೋ. ನಾವು ನಿನ್ನನ್ನು ಮೇಲಕ್ಕೆಳೆಯುವಾಗ ನಿನ್ನ ಕಂಕುಳಿಗೆ ಹಗ್ಗಗಳಿಂದ ಗಾಯಗಳಾಗುವದಿಲ್ಲ” ಎಂದನು. ಯೆರೆಮೀಯನು ಎಬೆದ್ಮೆಲೆಕನು ಹೇಳಿದಂತೆ ಮಾಡಿದನು. 13 ಅವರು ಯೆರೆಮೀಯನನ್ನು ಹಗ್ಗದಿಂದ ಮೇಲಕ್ಕೆ ಎಳೆದು ಬಾವಿಯಿಂದ ಹೊರತೆಗೆದರು. ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಿಸಿದನು.

ಚಿದ್ಕೀಯನು ಯೆರೆಮೀಯನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು

14 ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಒಬ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದ್ವಾರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನ್ನು ಕೇಳಲಿದ್ದೇನೆ. ನನ್ನಿಂದ ಏನನ್ನೂ ಮುಚ್ಚಿಡಬೇಡ. ಎಲ್ಲವನ್ನು ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.

15 ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಬಹುಶಃ ನನ್ನನ್ನು ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.

16 ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನ್ನೂ ಜೀವವನ್ನೂ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಕೊಲ್ಲಬಯಸುವ ಅಧಿಕಾರಿಗಳ ಕೈಗೂ ನಿನ್ನನ್ನು ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.

17 ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಬಾಬಿಲೋನಿನ ರಾಜನ ಅಧಿಕಾರಿಗಳಿಗೆ ಶರಣಾಗತನಾದರೆ ನಿನ್ನ ಪ್ರಾಣವನ್ನು ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಬದುಕುವೆ ಮತ್ತು ನಿನ್ನ ಕುಟುಂಬದವರೂ ಬದುಕುವರು. 18 ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’”

19 ಆಗ ಚಿದ್ಕೀಯನು, “ನಾನು ಈಗಾಗಲೇ ಬಾಬಿಲೋನಿನ ಸೈನ್ಯದ ಕಡೆಗೆ ಸೇರಿದ ಯೆಹೂದ್ಯರಿಗೆ ಹೆದರುತ್ತೇನೆ. ಆ ಸೈನಿಕರು ನನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸಿಕೊಡಬಹುದು ಮತ್ತು ಅವರು ನನಗೆ ಕೇಡುಮಾಡಬಹುದು; ನನ್ನನ್ನು ಹಿಂಸಿಸಬಹುದು ಎಂದು ಭಯವಾಗುತ್ತದೆ” ಎಂದು ಯೆರೆಮೀಯನಿಗೆ ಹೇಳಿದನು.

20 ಆದರೆ ಯೆರೆಮೀಯನು, “ರಾಜನಾದ ಚಿದ್ಕೀಯನೇ, ಆ ಸೈನಿಕರು ನಿನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸುವುದಿಲ್ಲ. ನಾನು ಹೇಳಿದಂತೆ ಮಾಡಿ ಯೆಹೋವನ ಆಜ್ಞಾಪಾಲನೆ ಮಾಡು. ಆಗ ನಿನಗೆಲ್ಲ ಒಳ್ಳೆಯದಾಗುವುದು ಮತ್ತು ನಿನ್ನ ಪ್ರಾಣ ಉಳಿಯುವುದು. 21 ನೀನು ಬಾಬಿಲೋನಿನ ಸೈನಿಕರಿಗೆ ಶರಣಾಗತನಾಗದಿದ್ದರೆ ಏನಾಗುವದೆಂಬುದನ್ನು ಯೆಹೋವನು ನನಗೆ ತೋರಿಸಿಕೊಟ್ಟಿದ್ದಾನೆ. ಯೆಹೋವನು ನನಗೆ ಹೀಗೆ ಹೇಳಿದ್ದಾನೆ: 22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು:

‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು
    ನಿನ್ನನ್ನು ತಪ್ಪುದಾರಿಗೆ ಎಳೆದರು.
ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ.
    ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ.
    ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’

23 “ನಿನ್ನ ಎಲ್ಲಾ ಹೆಂಡತಿಯರನ್ನು ಮತ್ತು ಮಕ್ಕಳನ್ನು ಹೊರತರಲಾಗುವುದು. ಅವರನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಬಾಬಿಲೋನಿನ ರಾಜನು ನಿನ್ನನ್ನು ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.

24 ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಬೇಡ. ಇಲ್ಲವಾದರೆ ನೀನು ಸಾಯುವೆ. 25 ನಾನು ನಿನ್ನೊಂದಿಗೆ ಮಾತನಾಡಿದ್ದನ್ನು ಆ ಅಧಿಕಾರಿಗಳು ಪತ್ತೆ ಹಚ್ಚಬಹುದು. ಅವರು ನಿನ್ನ ಹತ್ತಿರ ಬಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನ್ನು ನಮಗೆ ಹೇಳು; ಇಲ್ಲವಾದರೆ ನಾವು ನಿನ್ನನ್ನು ಕೊಂದುಬಿಡುತ್ತೇವೆ’ ಎನ್ನಬಹುದು. 26 ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಯ ನೆಲಮಾಳಿಗೆಯ ಕತ್ತಲು ಕೋಣೆಗೆ ನನ್ನನ್ನು ಮತ್ತೆ ಕಳುಹಿಸಬೇಡಿ, ಅಲ್ಲಿಗೆ ಹೋದರೆ ನಾನು ಸತ್ತುಹೋಗುವೆನೆಂದು ರಾಜನಿಗೆ ಪ್ರಾರ್ಥಿಸುತ್ತಿದ್ದೆ’” ಎಂದು ಹೇಳು.

27 ಆ ರಾಜ್ಯಾಧಿಕಾರಿಗಳು ಅವನನ್ನು ಪ್ರಶ್ನಿಸುವದಕ್ಕಾಗಿ ಯೆರೆಮೀಯನಲ್ಲಿಗೆ ಬಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನ್ನು ಹೇಳಿದನು. ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಬಿಟ್ಟುಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನ್ನು ಯಾರೂ ಕೇಳಿರಲಿಲ್ಲ.

28 ಜೆರುಸಲೇಮ್ ನಗರವು ಶತ್ರುಗಳ ವಶವಾಗುವವರೆಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಮಾಡಿಕೊಂಡಿದ್ದನು.

ಜೆರುಸಲೇಮಿನ ಪತನ

39 ಜೆರುಸಲೇಮನ್ನು ಹೀಗೆ ವಶಪಡಿಸಿಕೊಳ್ಳಲಾಯಿತು: ಚಿದ್ಕೀಯನು ಯೆಹೂದದ ರಾಜನಾಗಿ ಆಳುತ್ತಿದ್ದ ಒಂಭತ್ತನೇ ವರ್ಷದ ಹತ್ತನೆಯ ತಿಂಗಳಿನಲ್ಲಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ತನ್ನ ಇಡೀ ಸೈನ್ಯದೊಂದಿಗೆ ಜೆರುಸಲೇಮಿನ ಮೇಲೆ ಧಾಳಿ ಮಾಡಿದನು. ಅದನ್ನು ವಶಪಡಿಸಿಕೊಳ್ಳುವದಕ್ಕಾಗಿ ಅವನು ಆ ನಗರವನ್ನು ಮುತ್ತಿದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೆ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೇ ದಿನದಂದು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆಯಲಾಯಿತು. ಆಗ ಬಾಬಿಲೋನಿನ ಎಲ್ಲಾ ರಾಜ್ಯಾಧಿಕಾರಿಗಳು ಜೆರುಸಲೇಮ್ ನಗರವನ್ನು ಪ್ರವೇಶಿಸಿದರು. ಅವರು ಒಳಗೆ ಬಂದು ಮಧ್ಯ ದ್ವಾರದಲ್ಲಿ ಕುಳಿತುಕೊಂಡರು. ಅವರು ಯಾರೆಂದರೆ: ಸಮ್ಗರ್ ನೆಬೋದದ ಅಧಿಪತಿಯಾದ ನೇರ್ಗಲ್ ಸರೆಚರ್; ಇನ್ನೊಬ್ಬ ದೊಡ್ಡ ಅಧಿಕಾರಿಯಾದ ಸೆರ್ಸೆಕೀಮ್ ಮತ್ತು ಬೇರೆಬೇರೆ ದೊಡ್ಡ ಅಧಿಕಾರಿಗಳು ಕೂಡ ಅಲ್ಲಿದ್ದರು.

ಯೆಹೂದದ ರಾಜನಾದ ಚಿದ್ಕೀಯನು ಬಾಬಿಲೋನಿನ ಆ ಅಧಿಕಾರಿಗಳನ್ನು ನೋಡಿದನು. ಅವನು ಮತ್ತು ಅವನ ಜೊತೆಗಿದ್ದ ಸೈನಿಕರು ಓಡಿಹೋದರು. ಅವರು ರಾತ್ರಿಯಲ್ಲಿ ಜೆರುಸಲೇಮ್ ನಗರವನ್ನು ಬಿಟ್ಟು ರಾಜನ ಉದ್ಯಾನದ ಮಾರ್ಗವಾಗಿ ಹೊರಗೆ ಹೋದರು. ಅವರು ಎರಡು ಗೋಡೆಗಳ ಮಧ್ಯದಲ್ಲಿದ್ದ ಬಾಗಿಲಿನಿಂದ ಹೊರಗೆ ಬಂದು ಮರುಭೂಮಿಯ ಕಡೆಗೆ ಹೊರಟರು. ಆದರೆ ಬಾಬಿಲೋನಿನ ಸೈನಿಕರು ಚಿದ್ಕೀಯ ಮತ್ತು ಅವನ ಸೈನಿಕರನ್ನು ಬೆನ್ನಟ್ಟಿದರು. ಕಸ್ದೀಯರ ಸೈನಿಕರು ಜೆರಿಕೊವಿನ ಬಯಲಿನಲ್ಲಿ ಚಿದ್ಕೀಯನನ್ನು ಬಂಧಿಸಿ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಲ್ಲಿಗೆ ತೆಗೆದುಕೊಂಡು ಹೋದರು. ಆಗ ನೆಬೂಕದ್ನೆಚ್ಚರನು ಹಮಾತ್ ಸೀಮೆಯ “ರಿಬ್ಲ”ದಲ್ಲಿದ್ದನು. ಆ ಸ್ಥಳದಲ್ಲಿಯೇ ನೆಬೂಕದ್ನೆಚ್ಚರನು ಚಿದ್ಕೀಯನ ಬಗ್ಗೆ ತನ್ನ ನಿರ್ಣಯವನ್ನು ಪ್ರಕಟಿಸಿದನು. ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣೆದುರಿನಲ್ಲಿಯೇ ಅವನ ಗಂಡುಮಕ್ಕಳನ್ನು ಕೊಲ್ಲಿಸಿದನು. ಚಿದ್ಕೀಯನು ನೋಡುತ್ತಿದ್ದಂತೆಯೇ ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ರಾಜಾಧಿಕಾರಿಗಳನ್ನು ಕೊಲ್ಲಿಸಿದನು. ಅನಂತರ ನೆಬೂಕದ್ನೆಚ್ಚರನು ಚಿದ್ಕೀಯನ ಕಣ್ಣುಗಳನ್ನು ಕೀಳಿಸಿದನು. ಕಂಚಿನ ಸರಪಳಿಗಳಿಂದ ಬಿಗಿಸಿ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು.

ಬಾಬಿಲೋನಿನ ಸೈನಿಕರು ಅರಮನೆಗೂ ಮತ್ತು ಜೆರುಸಲೇಮಿನ ಉಳಿದ ನಿವಾಸಿಗಳ ಮನೆಗಳಿಗೂ ಬೆಂಕಿಯಿಟ್ಟರು. ಜೆರುಸಲೇಮಿನ ಗೋಡೆಗಳನ್ನು ಕೆಡವಿದರು. ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನೆಂಬವನು ಜೆರುಸಲೇಮಿನಲ್ಲಿ ಉಳಿದ ಜನರನ್ನು ಹಿಡಿದು ಬಂಧಿಗಳನ್ನಾಗಿ ಮಾಡಿದ್ದನು. ಅವರನ್ನು ಅವನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಈ ಮೊದಲೆ ಅವನಿಗೆ ಶರಣಾಗತರಾದವರನ್ನೂ ಸಹ ನೆಬೂಜರದಾನನು ಬಂಧಿಗಳನ್ನಾಗಿ ಮಾಡಿದನು. ಅವನು ಜೆರುಸಲೇಮಿನ ಉಳಿದವರೆಲ್ಲರನ್ನು ಬಂಧಿಗಳನ್ನಾಗಿ ಮಾಡಿ ಬಾಬಿಲೋನಿಗೆ ತೆಗೆದುಕೊಂಡು ಹೋದನು. 10 ಆದರೆ ಬಾಬಿಲೋನ್ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಯೆಹೂದದ ಕೆಲ ಬಡಜನರನ್ನು ಅಲ್ಲಿಯೇ ಬಿಟ್ಟನು. ಆ ಜನಗಳಿಗೆ ಯಾವ ಆಸ್ತಿಪಾಸ್ತಿ ಇದ್ದಿರಲಿಲ್ಲ. ಆದ್ದರಿಂದ ಅಂದು ನೆಬೂಜರದಾನನು ಯೆಹೂದದ ಆ ಬಡಜನರಿಗೆ ದ್ರಾಕ್ಷಿತೋಟಗಳನ್ನು ಮತ್ತು ಹೊಲಗಳನ್ನು ಕೊಟ್ಟನು.

11 ನೆಬೂಕದ್ನೆಚ್ಚರನು ನೆಬೂಜರದಾನನಿಗೆ ಯೆರೆಮೀಯನ ಬಗ್ಗೆ ಕೆಲವು ಆಜ್ಞೆಗಳನ್ನು ಕೊಟ್ಟನು. ನೆಬೂಜರದಾನನು ನೆಬೂಕದ್ನೆಚ್ಚರನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಆ ಆಜ್ಞೆ ಹೀಗಿತ್ತು: 12 “ಯೆರೆಮೀಯನನ್ನು ಪತ್ತೆಹಚ್ಚಿ ಅವನ ಕ್ಷೇಮದ ಬಗ್ಗೆ ಎಚ್ಚರಿಕೆವಹಿಸಿರಿ, ಅವನಿಗೆ ನೋವಾಗದಂತೆ ನೋಡಿಕೊಳ್ಳಿ. ಅವನು ಕೇಳಿದ್ದನ್ನೆಲ್ಲ ಕೊಡಿ.”

13 ರಾಜನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನ್, ಬಾಬಿಲೋನಿನ ಸೈನ್ಯದ ಒಬ್ಬ ಮುಖ್ಯ ಅಧಿಕಾರಿಯಾದ ನೆಬೂಷಜ್ಜಾನ್, ದೊಡ್ಡ ಅಧಿಕಾರಿಯಾದ ನೇರ್ಗಲ್ ಸರೆಚರ್ ಮತ್ತು ಬಾಬಿಲೋನಿನ ಇನ್ನುಳಿದ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಹುಡುಕಲು ಜನರನ್ನು ಕಳುಹಿಸಿದರು. 14 ಅವರು ಯೆರೆಮೀಯನನ್ನು ಕಾರಾಗೃಹದ ಅಂಗಳದಿಂದ ಹೊರಗೆ ಕರೆದು ತಂದರು. ಬಾಬಿಲೋನಿನ ಆ ಸೈನ್ಯಾಧಿಕಾರಿಗಳು ಯೆರೆಮೀಯನನ್ನು ಗೆದಲ್ಯನ ವಶಕ್ಕೆ ಕೊಟ್ಟರು. ಗೆದಲ್ಯನು ಅಹೀಕಾಮನ ಮಗ ಮತ್ತು ಅಹೀಕಾಮನು ಶಾಫಾನನ ಮಗನಾಗಿದ್ದನು. ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದು ಗೆದಲ್ಯನಿಗೆ ಆಜ್ಞಾಪಿಸಲಾಯಿತು. ಅದರಂತೆ ಯೆರೆಮೀಯನನ್ನು ಮನೆಗೆ ಕರೆದುಕೊಂಡು ಹೋಗಲಾಯಿತು; ಅವನು ತನ್ನ ಜನರೊಂದಿಗೆ ವಾಸಿಸತೊಡಗಿದನು.

ಎಬೆದ್ಮೆಲೆಕನಿಗೆ ಯೆಹೋವನಿಂದ ಒಂದು ಸಂದೇಶ

15 ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂದಿಯಾಗಿದ್ದಾಗ ಯೆಹೋವನಿಂದ ಅವನಿಗೊಂದು ಸಂದೇಶ ಬಂದಿತು. ಆ ಸಂದೇಶ ಹೀಗಿತ್ತು: 16 “ಯೆರೆಮೀಯನೇ, ಹೋಗಿ ಇಥಿಯೋಪಿಯದವನಾದ ಎಬೆದ್ಮೆಲೆಕನಿಗೆ ಈ ಸಂದೇಶವನ್ನು ಕೊಡು: ‘ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುತ್ತಾನೆ: ಜೆರುಸಲೇಮ್ ನಗರದ ಬಗ್ಗೆ ನಾನು ಕೊಟ್ಟ ಸಂದೇಶಗಳು ಬೇಗ ಕಾರ್ಯರೂಪಕ್ಕೆ ಬರುತ್ತವೆ. ನನ್ನ ಸಂದೇಶ ಕಾರ್ಯರೂಪಕ್ಕೆ ಬರುವುದು ಕೇಡುಗಳ ಮೂಲಕವೇ ಹೊರತು ಒಳ್ಳೆಯದರ ಮೂಲಕವಲ್ಲ. ಎಲ್ಲವೂ ನನ್ನ ಸಂದೇಶದಂತೆ ನಡೆಯುವುದನ್ನು ನೀನು ಕಣ್ಣಾರೆ ನೋಡುವೆ. 17 ಆದರೆ ಅಂದು ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುತ್ತೇನೆ.’ ಇದು ಯೆಹೋವನ ನುಡಿ. ‘ನೀನು ಊಹಿಸಿ ಭಯಪಟ್ಟಂತೆ ನಿನ್ನನ್ನು ಆ ಜನರ ಕೈಗೆ ಒಪ್ಪಿಸುವದಿಲ್ಲ. 18 ಎಬೆದ್ಮೆಲೆಕನೇ, ನಾನು ನಿನ್ನನ್ನು ರಕ್ಷಿಸುವೆನು. ನೀನು ಖಡ್ಗಕ್ಕೆ ಆಹುತಿಯಾಗುವದಿಲ್ಲ. ನೀನು ತಪ್ಪಿಸಿಕೊಂಡು ಬದುಕುವೆ. ನೀನು ನನ್ನಲ್ಲಿ ನಂಬಿಕೆ ಇಟ್ಟುಕೊಂಡಿದ್ದೇ ಇದಕ್ಕೆ ಕಾರಣ’” ಇದು ಯೆಹೋವನ ನುಡಿ.

ಯೆರೆಮೀಯನ ಬಿಡುಗಡೆ

40 ರಾಮನಗರದ ಹತ್ತಿರ ಅವನ ಬಿಡುಗಡೆಯಾದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಬಾಬಿಲೋನಿನ ರಾಜನ ವಿಶೇಷ ರಕ್ಷಕ ದಳದ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ರಾಮದಲ್ಲಿ ನೋಡಿದನು. ಯೆರೆಮೀಯನನ್ನು ಸಂಕೋಲೆಗಳಿಂದ ಬಿಗಿಯಲಾಗಿತ್ತು. ಅವನು ಜೆರುಸಲೇಮ್ ಮತ್ತು ಯೆಹೂದದ ಎಲ್ಲಾ ಸೆರೆಯಾಳುಗಳ ಜೊತೆಗಿದ್ದನು. ಆ ಸೆರೆಯಾಳುಗಳನ್ನು ಸೆರೆಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಕಂಡಾಗ ಅವನನ್ನು ಮಾತನಾಡಿಸಿ ಹೀಗೆಂದನು: “ಯೆರೆಮೀಯನೇ, ನಿಮ್ಮ ದೇವರಾದ ಯೆಹೋವನು ಈ ಸ್ಥಳಕ್ಕೆ ಇಂಥಾ ದುಸ್ಥಿತಿ ಬರುವದೆಂದು ಸಾರಿದ್ದನು. ಏನೇನು ಮಾಡುವೆನೆಂದು ಯೆಹೋವನು ಹೇಳಿದ್ದನೋ ಅದೆಲ್ಲವನ್ನು ಹೇಳಿದ್ದಂತೆಯೇ ಮಾಡಿದ್ದಾನೆ. ಯೆಹೂದದ ಜನರಾದ ನೀವುಗಳು ಯೆಹೋವನ ವಿರುದ್ಧ ಪಾಪ ಮಾಡಿದ್ದರಿಂದ ಈ ಕೇಡು ಸಂಭವಿಸಿತು. ನೀವು ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ. ಯೆರೆಮೀಯನೇ, ನಾನು ಈಗ ನಿನ್ನನ್ನು ಬಿಡುಗಡೆ ಮಾಡುವೆನು. ನಾನು ನಿನ್ನ ಕೈಗಳಿಂದ ಸಂಕೋಲೆಗಳನ್ನು ಬಿಚ್ಚುವೆನು. ನೀನು ಇಷ್ಟಪಟ್ಟರೆ ನನ್ನ ಸಂಗಡ ಬಾಬಿಲೋನಿಗೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೆ ನನ್ನ ಸಂಗಡ ಬರುವ ಇಷ್ಟವಿಲ್ಲದಿದ್ದರೆ ಬರಬೇಡ. ಇಡೀ ದೇಶದಲ್ಲಿ ನಿನಗೆ ಎಲ್ಲಿ ಇಷ್ಟವೋ ಅಲ್ಲಿಗೆ ಹೋಗು. ಅಥವಾ ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನಲ್ಲಿಗೆ ಹಿಂತಿರುಗಿಹೋಗು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಪಟ್ಟಣಗಳಿಗೆ ಅಧಿಪತಿಯಾಗಿ ನೇಮಿಸಿದ್ದಾನೆ. ಗೆದಲ್ಯನಲ್ಲಿಗೆ ಹೋಗಿ ಜನರೊಂದಿಗೆ ವಾಸಿಸು; ಅಥವಾ ನಿನ್ನ ಮನಸ್ಸು ಬಂದಲ್ಲಿಗೆ ಹೋಗು.”

ತರುವಾಯ ನೆಬೂಜರದಾನನು ಯೆರೆಮೀಯನಿಗೆ ಊಟವನ್ನೂ ಕಾಣಿಕೆಯನ್ನೂ ಕೊಟ್ಟು ಕಳುಹಿಸಿದನು. ಯೆರೆಮೀಯನು ಅಹೀಕಾಮನ ಮಗನಾದ ಗೆದಲ್ಯನು ಇದ್ದ ಮಿಚ್ಫಕ್ಕೆ ಹೋದನು. ಯೆರೆಮೀಯನು ಗೆದಲ್ಯನ ಸಂಗಡ ದೇಶದಲ್ಲಿ ಉಳಿದ ಜನರ ಮಧ್ಯೆ ವಾಸಮಾಡಿದನು.

ಗೆದಲ್ಯನ ಸಂಕ್ಷಿಪ್ತ ಆಳ್ವಿಕೆ

ಜೆರುಸಲೇಮ್ ನಗರವನ್ನು ನಾಶಮಾಡಿದಾಗ ಯೆಹೂದದ ಕೆಲವು ಜನ ಸೈನ್ಯಾಧಿಕಾರಿಗಳು ಮತ್ತು ಅವನ ಸೈನಿಕರು ಇನ್ನೂ ಕಾಡುಮೇಡುಗಳಲ್ಲಿದ್ದರು. ಬಾಬಿಲೋನಿನ ರಾಜನು ಅಹೀಕಾಮನ ಮಗನಾದ ಗೆದಲ್ಯನನ್ನು ಅಳಿದುಳಿದ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದಾನೆಂಬ ಸಮಾಚಾರ ಕಿವಿಗೆ ಬಿತ್ತು. ಇಲ್ಲಿ ಅಳಿದುಳಿದವರು ಬಹಳ ಬಡವರಾದ ಗಂಡಸರು, ಹೆಂಗಸರು ಮತ್ತು ಮಕ್ಕಳು. ಅವರನ್ನು ಬಂಧಿಗಳನ್ನಾಗಿ ಮಾಡಿಕೊಂಡು ಬಾಬಿಲೋನಿಗೆ ತೆಗೆದುಕೊಂಡು ಹೋಗಿರಲಿಲ್ಲ. ಆ ಸೈನಿಕರು ಮಿಚ್ಫದಲ್ಲಿ ವಾಸವಾಗಿದ್ದ ಗೆದಲ್ಯನಲ್ಲಿಗೆ ಬಂದರು. ಆ ಸೈನಿಕರು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಕ್ಕಳಾದ ಯೋಹಾನಾನ ಮತ್ತು ಅವನ ಸೋದರ ಯೋನಾಥಾನ, ತನ್ಹಮೆತನ ಮಗನಾದ ಸೆರಾಯ, ನೆಟೋಫದವನಾದ ಏಫಯನ ಮಕ್ಕಳು, ಮಾಕಾ ಊರಿನ ಯೆಜನ್ಯ ಮತ್ತು ಅವರ ಸಂಗಡ ಇದ್ದ ಜನರು.

ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನು, ಆ ಸೈನಿಕರು ಮತ್ತು ಅವರ ಜನರು ಈಗ ಅಲ್ಲಿ ಹೆಚ್ಚು ಸುರಕ್ಷಿತರೆಂದು ನಂಬಿಕೆಹುಟ್ಟುವ ಹಾಗೆ ಆಣೆಮಾಡಿ ಹೇಳಿದನು. ಗೆದಲ್ಯನು ಹೀಗೆ ಹೇಳಿದನು. “ಸೈನಿಕರೇ, ಬಾಬಿಲೋನಿನ ಜನರ ಸೇವೆಮಾಡಲು ಭಯಪಡಬೇಡಿ. ಈ ಪ್ರದೇಶದಲ್ಲಿ ನೆಲೆಸಿ ಬಾಬಿಲೋನಿನ ರಾಜನ ಸೇವೆಮಾಡಿರಿ. ನೀವು ಹೀಗೆ ಮಾಡಿದರೆ ನಿಮಗೆಲ್ಲ ಒಳ್ಳೆಯದಾಗುವುದು. 10 ನಾನು ಸ್ವತಃ ಮಿಚ್ಫದಲ್ಲಿ ವಾಸಮಾಡುತ್ತೇವೆ. ಇಲ್ಲಿಗೆ ಬರುವ ಕಸ್ದೀಯರ ಮುಂದೆ ನಿಮ್ಮ ಪರವಾಗಿ ಮಾತನಾಡುತ್ತೇನೆ. ಆ ಕೆಲಸವನ್ನು ನೀವು ನನಗೆ ಬಿಟ್ಟುಬಿಡಿ. ನೀವು ದ್ರಾಕ್ಷಾರಸ, ಹಣ್ಣು ಮತ್ತು ಎಣ್ಣೆ ಇವುಗಳನ್ನು ಸಂಗ್ರಹಿಸಿ ನಿಮ್ಮ ಪಾತ್ರೆಗಳಲ್ಲಿ ತುಂಬಿಸಿಟ್ಟು ನೀವು ಹಿಡಿದುಕೊಂಡ ಪಟ್ಟಣಗಳಲ್ಲಿ ವಾಸಿಸಿರಿ.”

11 ಬಾಬಿಲೋನಿನ ರಾಜನು ಕೆಲವು ಜನ ಯೆಹೂದಿಯರನ್ನು ಆ ಪ್ರದೇಶದಲ್ಲಿ ಬಿಟ್ಟುಹೋಗಿದ್ದಾನೆ ಮತ್ತು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಅವರ ಅಧಿಪತಿಯನ್ನಾಗಿ ನೇಮಿಸಿದ್ದಾನೆ ಎಂಬ ಸಮಾಚಾರವನ್ನು ಮೋವಾಬ್, ಎದೋಮ್, ಅಮ್ಮೋನ್ ಮೊದಲಾದ ದೇಶಗಳಲ್ಲಿ ಚದುರಿಹೋಗಿದ್ದ ಯೆಹೂದಿಯರು ಕೇಳಿದರು. 12 ಯೆಹೂದದ ಆ ಜನರು ಈ ಸಮಾಚಾರವನ್ನು ಕೇಳಿದ ಕೂಡಲೆ ತಾವು ಚದುರಿಹೋಗಿದ್ದ ಎಲ್ಲಾ ದೇಶಗಳಿಂದ ಯೆಹೂದ ಪ್ರದೇಶಕ್ಕೆ ಹಿಂತಿರುಗಿ ಮಿಚ್ಫದಲ್ಲಿ ಗೆದಲ್ಯನ ಬಳಿಗೆ ಬಂದರು. ಅವರು ದ್ರಾಕ್ಷಾರಸವನ್ನು ಮತ್ತು ಹಣ್ಣುಗಳನ್ನು ಸಮೃದ್ಧಿಯಾಗಿ ಸಂಗ್ರಹಿಸಿದರು.

13 ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕಾಡುಮೇಡುಗಳಲ್ಲಿದ್ದ ಯೆಹೂದದ ಸೈನ್ಯಾಧಿಕಾರಿಗಳೂ ಗೆದಲ್ಯನ ಬಳಿಗೆ ಬಂದರು. ಗೆದಲ್ಯನು ಮಿಚ್ಫ ಪಟ್ಟಣದಲ್ಲಿದ್ದನು. 14 ಯೋಹಾನಾನ ಮತ್ತು ಅವನ ಸಂಗಡ ಇದ್ದ ಅಧಿಕಾರಿಗಳು ಹೀಗೆಂದರು: “ಅಮ್ಮೋನ್ಯರ ರಾಜನಾದ ಬಾಲೀಸನು ನಿನ್ನನ್ನು ಕೊಲ್ಲಬಯಸುತ್ತಾನೆ. ಅವನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆ ಎಂಬುದು ನಿನಗೆ ಗೊತ್ತಿದೆಯೇ?” ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ.

15 ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಫದಲ್ಲಿ ಗೆದಲ್ಯನೊಂದಿಗೆ ರಹಸ್ಯವಾಗಿ ಮಾತನಾಡಿದನು. ಯೋಹಾನಾನನು ಗೆದಲ್ಯನಿಗೆ ಹೀಗೆ ಹೇಳಿದನು: “ನಾನು ಹೋಗಿ ನೆತನ್ಯನ ಮಗನಾದ ಇಷ್ಮಾಯೇಲನ ಕೊಲೆ ಮಾಡುವೆನು. ಯಾರಿಗೂ ಆ ವಿಷಯ ತಿಳಿಯುವುದಿಲ್ಲ. ನಾವು ಇಷ್ಮಾಯೇಲನಿಗೆ ನಿನ್ನನ್ನು ಕೊಲ್ಲುವ ಅವಕಾಶ ಕೊಡಬಾರದು. ಅದರಿಂದ ನಿನ್ನ ಆಶ್ರಯದಲ್ಲಿ ಬಂದು ನೆಲೆಸಿದ ಎಲ್ಲಾ ಯೆಹೂದ್ಯರು ಮತ್ತೆ ಬೇರೆಬೇರೆ ದೇಶಗಳಲ್ಲಿ ಚದುರಿ ಹೋಗಬೇಕಾಗುತ್ತದೆ. ಆಗ ಅಳಿದುಳಿದ ಕೆಲವೇ ಜನ ಯೆಹೂದಿಗಳು ಸಹ ಇಲ್ಲವಾಗುತ್ತಾರೆ.”

16 ಆಗ ಅಹೀಕಾಮನ ಮಗನಾದ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಇಷ್ಮಾಯೇಲನನ್ನು ಕೊಲ್ಲಬೇಡ. ನೀನು ಇಷ್ಮಾಯೇಲನ ಬಗ್ಗೆ ಹೇಳಿದ ಸಂಗತಿಗಳು ನಿಜವಲ್ಲ” ಎಂದನು.

41 ಏಳನೇ ತಿಂಗಳಿನಲ್ಲಿ ನೆತನ್ಯನ ಮಗನೂ ಎಲೀಷಾಮನ ಮೊಮ್ಮಗನೂ ಆದ ಇಷ್ಮಾಯೇಲನು ಅಹೀಕಾಮನ ಮಗನಾದ ಗೆದಲ್ಯನಲ್ಲಿಗೆ ಬಂದನು. ಇಷ್ಮಾಯೇಲನು ತನ್ನ ಹತ್ತು ಮಂದಿಯೊಂದಿಗೆ ಬಂದನು. ಆ ಜನರು ಮಿಚ್ಫ ಪಟ್ಟಣಕ್ಕೆ ಬಂದರು. ಇಷ್ಮಾಯೇಲನು ರಾಜವಂಶೀಯನಾಗಿದ್ದನು. ಅವನು ಯೆಹೂದದ ರಾಜನ ಒಬ್ಬ ಅಧಿಕಾರಿಯಾಗಿದ್ದನು. ಇಷ್ಮಾಯೇಲ್ ಮತ್ತು ಅವನ ಜನರು ಗೆದಲ್ಯನೊಂದಿಗೆ ಊಟಮಾಡಿದರು. ಅವರು ಒಟ್ಟಿಗೆ ಊಟ ಮಾಡುತ್ತಿದ್ದಾಗ, ಇಷ್ಮಾಯೇಲ್ ಮತ್ತು ಅವನ ಹತ್ತು ಜನರು ಎದ್ದು ಅಹೀಕಾಮನ ಮಗನಾದ ಗೆದಲ್ಯನನ್ನು ಖಡ್ಗದಿಂದ ಕೊಂದರು. ಗೆದಲ್ಯನನ್ನು ಬಾಬಿಲೋನಿನ ರಾಜನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಫದಲ್ಲಿದ್ದ ಎಲ್ಲಾ ಯೆಹೂದ್ಯರನ್ನು ಸಹ ಕೊಂದನು. ಇಷ್ಮಾಯೇಲನು ಗೆದಲ್ಯನ ಸಂಗಡ ಇದ್ದ ಎಲ್ಲಾ ಬಾಬಿಲೋನಿನ ಸೈನಿಕರನ್ನು ಸಹ ಕೊಂದುಹಾಕಿದನು.

4-5 ಗೆದಲ್ಯನ ಕೊಲೆಯ ಎರಡನೆಯ ದಿನ ಯೆಹೋವನ ಆಲಯಕ್ಕೆ ನೈವೇದ್ಯವನ್ನು ಮತ್ತು ಧೂಪವನ್ನು ತೆಗೆದುಕೊಂಡು ಎಂಭತ್ತು ಜನ ಯೆಹೂದ್ಯರು ಮಿಚ್ಫಕ್ಕೆ ಬಂದರು. ಆ ಎಂಭತ್ತು ಜನ ತಮ್ಮ ಗಡ್ಡ ಬೋಳಿಸಿಕೊಂಡಿದ್ದರು ಮತ್ತು ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗಾಯಮಾಡಿಕೊಂಡಿದ್ದರು. ಅವರು ಶೆಕೆಮ್, ಶಿಲೋ, ಸಮಾರ್ಯ ಎಂಬ ಊರುಗಳಿಂದ ಬಂದಿದ್ದರು. ಗೆದಲ್ಯನ ಕೊಲೆ ಮಾಡಲಾಗಿದೆ ಎಂಬುದು ಇವರಲ್ಲಿ ಯಾರಿಗೂ ತಿಳಿದಿರಲಿಲ್ಲ. ಇಷ್ಮಾಯೇಲನು ಈ ಎಂಭತ್ತು ಜನರನ್ನು ಕಾಣುವದಕ್ಕಾಗಿ ಮಿಚ್ಫ ಪಟ್ಟಣದ ಹೊರಗಡೆ ಹೋದನು. ಅವರನ್ನು ಕಾಣುವದಕ್ಕೆ ಹೋಗುವಾಗ ಅವನು ಅಳುತ್ತಿದ್ದನು. ಇಷ್ಮಾಯೇಲನು ಆ ಎಂಭತ್ತು ಜನರನ್ನು ಎದುರುಗೊಂಡು, “ಅಹೀಕಾಮನ ಮಗನಾದ ಗೆದಲ್ಯನನ್ನು ಭೇಟಿ ಮಾಡುವದಕ್ಕೆ ನನ್ನೊಂದಿಗೆ ಬನ್ನಿ” ಎಂದು ಕರೆದನು. ಆ ಎಂಭತ್ತು ಜನರು ಮಿಚ್ಫಪಟ್ಟಣಕ್ಕೆ ಹೋದರು. ಆಗ ಇಷ್ಮಾಯೇಲ ಮತ್ತು ಅವನ ಸಂಗಡಿಗರು ಅವರಲ್ಲಿ ಎಪ್ಪತ್ತು ಮಂದಿಯನ್ನು ಕೊಂದರು. ಇಷ್ಮಾಯೇಲ ಮತ್ತು ಅವನ ಸಂಗಡಿಗರು ಆ ಎಪ್ಪತ್ತು ಮಂದಿ ದೇಹಗಳನ್ನು ಒಂದು ಆಳವಾದ ಬಾವಿಯಲ್ಲಿ ಎಸೆದರು. ಆದರೆ ಉಳಿದ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡ, ನಮ್ಮಲ್ಲಿ ಗೋಧಿ, ಜವೆಗೋಧಿ, ಎಣ್ಣೆ ಮತ್ತು ಜೇನುತುಪ್ಪ ಇವೆ. ನಾವು ಆ ವಸ್ತುಗಳನ್ನು ಒಂದು ಹೊಲದಲ್ಲಿ ಬಚ್ಚಿಟ್ಟಿದ್ದೇವೆ” ಎಂದು ಹೇಳಿದರು. ಆದ್ದರಿಂದ ಇಷ್ಮಾಯೇಲನು ಆ ಹತ್ತು ಮಂದಿಯನ್ನು ಬಿಟ್ಟುಬಿಟ್ಟನು. ಅವನು ಬೇರೆಯವರೊಂದಿಗೆ ಅವರನ್ನು ಕೊಲ್ಲಲಿಲ್ಲ. ಇಷ್ಮಾಯೇಲನು ಶವಗಳನ್ನು ಆ ಬಾವಿಯೊಳಗೆ ಹಾಕಿದನು. ಆ ಬಾವಿಯು ಬಹಳ ದೊಡ್ಡದಾಗಿತ್ತು. ಅದನ್ನು ಯೆಹೂದದ ರಾಜನಾದ ಆಸನು ತೋಡಿಸಿದ್ದನು. ಯುದ್ಧದ ಸಮಯದಲ್ಲಿ ನಗರದಲ್ಲಿ ನೀರು ಸಾಕಷ್ಟು ಇರಬೇಕೆಂಬ ಉದ್ದೇಶದಿಂದ ರಾಜನಾದ ಆಸನು ಈ ಬಾವಿಯನ್ನು ತೋಡಿಸಿದ್ದನು. ರಾಜನಾದ ಆಸನು ತನ್ನ ನಗರವನ್ನು ಇಸ್ರೇಲಿನ ರಾಜನಾದ ಬಾಷನಿಂದ ರಕ್ಷಿಸುವುದಕ್ಕಾಗಿ ಇದನ್ನು ಕಟ್ಟಿಸಿದ್ದನು.

10 ಮಿಚ್ಫ ನಗರದಲ್ಲಿ ಉಳಿದೆಲ್ಲ ಜನರನ್ನು ಇಷ್ಮಾಯೇಲನು ವಶಪಡಿಸಿಕೊಂಡನು. ಅವರಲ್ಲಿ ರಾಜನ ಹೆಣ್ಣಮಕ್ಕಳು ಮತ್ತು ಅಲ್ಲಿದ್ದ ಬೇರೆ ಜನರೂ ಸೇರಿದ್ದರು. ಆ ಜನರನ್ನು ನೋಡಿಕೊಳ್ಳಲೆಂದು ನೆಬೂಜರದಾನನು ಗೆದಲ್ಯನನ್ನು ನೇಮಿಸಿದ್ದನು. ನೆಬೂಜರದಾನನು ಬಾಬೆಲಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು. ಇಷ್ಮಾಯೇಲನು ಆ ಜನರನ್ನು ಸೆರೆಹಿಡಿದು ಅವರನ್ನು ತೆಗೆದುಕೊಂಡು ಅಮ್ಮೋನ್ಯರ ಸೀಮೆಗೆ ಹೊರಟನು.

11 ಕಾರೇಹನ ಮಗನಾದ ಯೋಹಾನಾನನೂ ಅವನೊಂದಿಗಿದ್ದ ಸಕಲ ಸೇನಾಪತಿಗಳೂ ಇಷ್ಮಾಯೇಲನು ಮಾಡಿದ ಎಲ್ಲಾ ದುಷ್ಕೃತ್ಯಗಳ ಬಗ್ಗೆ ಕೇಳಿದರು. 12 ಆದ್ದರಿಂದ ಯೋಹಾನಾನನು ಮತ್ತು ಅವನೊಂದಿಗಿದ್ದ ಸಕಲ ಸೇನಾಪತಿಗಳು ತಮ್ಮ ಜನರನ್ನು ಕರೆದುಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ವಿರುದ್ಧ ಹೋರಾಡಲು ಹೊರಟರು. ಅವರು ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಇಷ್ಮಾಯೇಲನನ್ನು ಹಿಡಿದರು. 13 ಇಷ್ಮಾಯೇಲನು ಸೆರೆಹಿಡಿದ ಸೆರೆಯಾಳುಗಳು ಯೋಹಾನಾನನನ್ನು ಮತ್ತು ಸೇನಾಪತಿಗಳನ್ನು ನೋಡಿದರು. ಈ ಸೆರೆಯಾಳುಗಳಿಗೆ ಬಹಳ ಸಂತೋಷವಾಯಿತು. 14 ಆಗ, ಇಷ್ಮಾಯೇಲನು ಮಿಚ್ಫದಲ್ಲಿ ಸೆರೆಹಿಡಿದುಕೊಂಡು ಹೋಗಿದ್ದ ಎಲ್ಲಾ ಜನರು ಕಾರೇಹನ ಮಗನಾದ ಯೋಹಾನಾನನ ಕಡೆಗೆ ಓಡಿದರು. 15 ನೆತನ್ಯನ ಮಗನಾದ ಇಷ್ಮಾಯೇಲನು ಮತ್ತು ಅವನ ಎಂಟು ಜನ ಸಂಗಡಿಗರು ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರ ಮೊರೆಹೊಕ್ಕರು.

16 ಇಷ್ಮಾಯೇಲನು ಗೆದಲ್ಯನನ್ನು ಕೊಂದು ಮಿಚ್ಫದಲ್ಲಿ ಸೆರೆಹಿಡಿದ ಬಂದಿಗಳನ್ನು ಕಾರೇಹನ ಮಗನಾದ ಯೋಹಾನಾನನು ಮತ್ತು ಅವನ ಸೇನಾಪತಿಗಳು ರಕ್ಷಿಸಿದರು. ಆಗ ಉಳಿದುಕೊಂಡವರಲ್ಲಿ ಸೈನಿಕರು, ಹೆಂಗಸರು, ಮಕ್ಕಳು ಮತ್ತು ಅಧಿಕಾರಿಗಳು ಸೇರಿದ್ದರು. ಯೋಹಾನಾನನು ಗಿಬ್ಯೋನಿನಿಂದ ಅವರನ್ನು ಹಿಂದಕ್ಕೆ ಕರೆತಂದನು.

ಈಜಿಪ್ಟಿಗೆ ವಲಸೆ

17-18 ಯೋಹಾನಾನನೂ ಉಳಿದ ಸೇನಾಧಿಪತಿಗಳೂ ಕಸ್ದೀಯರಿಗೆ ಹೆದರಿದರು. ಬಾಬಿಲೋನಿನ ರಾಜನು ಗೆದಲ್ಯನನ್ನು ಯೆಹೂದದ ಅಧಿಪತಿಯಾಗಿ ನೇಮಿಸಿದ್ದನು. ಆದರೆ ಇಷ್ಮಾಯೇಲನು ಗೆದಲ್ಯನನ್ನು ಕೊಲೆ ಮಾಡಿದನು. ಇದರಿಂದ ಕಸ್ದೀಯರಿಗೆ ಕೋಪ ಬರಬಹುದೆಂದು ಯೋಹಾನಾನನು ಭಯಪಟ್ಟನು. ಆದ್ದರಿಂದ ಈಜಿಪ್ಟಿಗೆ ಓಡಿಹೋಗಬೇಕೆಂದು ಅವರು ನಿರ್ಧರಿಸಿದರು. ಈಜಿಪ್ಟಿಗೆ ಹೋಗುವ ದಾರಿಯಲ್ಲಿ ಅವರು ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. ಗೇರುಥ್ ಕಿಮ್ಹಾಮು ಬೆತ್ಲೆಹೇಮ್ ಪಟ್ಟಣದ ಸಮೀಪದಲ್ಲಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International