Beginning
ರೇಕಾಬ್ಯರ ಒಂದು ಒಳ್ಳೆಯ ದೃಷ್ಟಾಂತ
35 ಯೆಹೋಯಾಕೀಮನು ಯೆಹೂದವನ್ನು ಆಳುತ್ತಿದ್ದ ಕಾಲದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋಯಾಕೀಮನು ರಾಜನಾದ ಯೋಷೀಯನ ಮಗನಾಗಿದ್ದನು. ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ರೇಕಾಬನ ಕುಟುಂಬದವರಲ್ಲಿಗೆ[a] ಹೋಗು. ಅವರನ್ನು ಯೆಹೋವನ ಆಲಯದ ಒಂದು ಪಕ್ಕದ ಕೋಣೆಗೆ ಕರೆದು, ಕುಡಿಯುವದಕ್ಕೆ ದ್ರಾಕ್ಷಾರಸವನ್ನು ಕೊಡು.”
3 ಆದ್ದರಿಂದ ನಾನು (ಯೆರೆಮೀಯನು) ಯಾಜನ್ಯನನ್ನು ಕರೆಯಲು ಹೋದೆನು. ಯಾಜನ್ಯನು ಯೆರೆಮೀಯನೆಂಬುವನ[b] ಮಗ. ಯೆರೆಮೀಯನು ಹಬಚ್ಚಿನ್ಯನ ಮಗ. ನಾನು ಯಾಜನ್ಯನ ಎಲ್ಲಾ ಸಹೋದರರನ್ನೂ ಮಕ್ಕಳನ್ನೂ ಕರೆತಂದೆನು. ನಾನು ರೇಕಾಬ್ಯರ ಇಡೀ ಮನೆತನವನ್ನು ಒಟ್ಟಿಗೆ ಸೇರಿಸಿದೆನು. 4 ಅನಂತರ ನಾನು ರೇಕಾಬ ವಂಶದವರನ್ನು ಯೆಹೋವನ ಆಲಯದಲ್ಲಿ ಕರೆತಂದೆನು. ನಾವು ಹಾನಾನನ ಮಕ್ಕಳ ಕೋಣೆ ಎಂದು ಕರೆಯಲ್ಪಡುವ ಕೋಣೆಯೊಳಕ್ಕೆ ಹೋದೆವು. ಹಾನಾನನು ಇಗ್ದಲ್ಯನೆಂಬವನ ಮಗನು. ಹಾನಾನನು ದೇವರ ಮನುಷ್ಯ. ಈ ಕೋಣೆಯು ಯೆಹೂದದ ರಾಜಕುಮಾರರ ಕೋಣೆಯ ಪಕ್ಕದಲ್ಲಿತ್ತು. ಇದು ಶಲ್ಲೂಮನ ಮಗನಾದ ಮಾಸೇಯನ ಕೋಣೆಯ ಮೇಲ್ಗಡೆ ಇತ್ತು. ಮಾಸೇಯನು ಆಲಯದ ದ್ವಾರಪಾಲಕನಾಗಿದ್ದನು. 5 ಆಮೇಲೆ ನಾನು ದ್ರಾಕ್ಷಾರಸ ತುಂಬಿದ ಕೆಲವು ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ರೇಕಾಬ್ಯ ಕುಟುಂಬದವರ ಮುಂದಿಟ್ಟು, “ಸ್ವಲ್ಪ ದ್ರಾಕ್ಷಾರಸವನ್ನು ಕುಡಿಯಿರಿ” ಎಂದೆನು.
6 ಆದರೆ ರೇಕಾಬ್ಯರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ. ಏಕೆಂದರೆ ನಮ್ಮ ಪೂರ್ವಿಕನಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವು ಮತ್ತು ನಿಮ್ಮ ಸಂತಾನದವರು ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬಾರದು. 7 ನೀವೆಂದೂ ಮನೆಯನ್ನು ಕಟ್ಟಿಕೊಳ್ಳಬಾರದು, ಬೀಜಗಳನ್ನು ಬಿತ್ತಬಾರದು, ದ್ರಾಕ್ಷಿತೋಟಗಳನ್ನು ಬೆಳಸಬಾರದು. ನೀವು ಅವುಗಳಲ್ಲಿ ಒಂದನ್ನು ಕೂಡ ಎಂದಿಗೂ ಮಾಡಬಾರದು. ನೀವು ಕೇವಲ ಗುಡಾರಗಳಲ್ಲಿ ವಾಸಿಸಬೇಕು. ಆಗ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆಹೋಗುವ ದೇಶದಲ್ಲಿ ಬಹಳ ಕಾಲದವರೆಗೆ ಇರಬಲ್ಲಿರಿ’ ಎಂದು ಆಜ್ಞಾಪಿಸಿದ್ದಾನೆ. 8 ಆದ್ದರಿಂದ ರೇಕಾಬ್ಯರಾದ ನಾವು ನಮ್ಮ ಪೂರ್ವಿಕನಾದ ಯೋನಾದಾಬನು ಕೊಟ್ಟ ಆಜ್ಞೆಯನ್ನು ಸಂಪೂರ್ಣವಾಗಿ ಪಾಲಿಸಿದ್ದೇವೆ. ನಾವು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಮ್ಮ ಹೆಂಡತಿಯರು ಮತ್ತು ಮಕ್ಕಳು ಸಹ ಎಂದೂ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. 9 ವಾಸಿಸುವದಕ್ಕೆ ನಾವೆಂದೂ ಮನೆಗಳನ್ನು ಕಟ್ಟುವದಿಲ್ಲ: ದ್ರಾಕ್ಷಿತೋಟಗಳನ್ನಾಗಲಿ ಹೊಲಗಳನ್ನಾಗಲಿ ಕೊಳ್ಳುವುದಿಲ್ಲ; ಬೀಜವನ್ನು ಬಿತ್ತುವದಿಲ್ಲ. 10 ನಾವು ಗುಡಾರದಲ್ಲಿ ವಾಸಮಾಡಿದ್ದೇವೆ; ನಮ್ಮ ಪೂರ್ವಿಕನಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲ ಆಸಕ್ತಿಯಿಂದ ಮಾಡಿದ್ದೇವೆ. 11 ಆದರೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದ ಮೇಲೆ ಧಾಳಿ ಮಾಡಿದಾಗ ನಾವು ಜೆರುಸಲೇಮ್ ನಗರದಲ್ಲಿ ಪ್ರವೇಶ ಮಾಡಿ ಹೀಗೆ ಮಾತನಾಡಿಕೊಂಡೆವು, ‘ಬನ್ನಿ, ನಾವು ಬಾಬಿಲೋನಿನ ಸೈನ್ಯದಿಂದ ಮತ್ತು ಅರಾಮ್ಯರ ಸೈನ್ಯದಿಂದ ತಪ್ಪಿಸಿಕೊಳ್ಳುವದಕ್ಕಾಗಿ ಜೆರುಸಲೇಮ್ ನಗರವನ್ನು ಪ್ರವೇಶಿಸೋಣ.’ ಹೀಗಾಗಿ ನಾವು ಜೆರುಸಲೇಮ್ ನಗರದಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು.
12 ಆಗ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು: 13 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳಿದನು: ಯೆರೆಮೀಯನೇ, ಹೋಗಿ ಈ ಸಂದೇಶವನ್ನು ಯೆಹೂದದ ಮತ್ತು ಜೆರುಸಲೇಮಿನ ಜನರಿಗೆ ತಿಳಿಸು. ನೀವು ಇದರಿಂದ ಒಂದು ಪಾಠವನ್ನು ಕಲಿಯಬೇಕು ಮತ್ತು ನನ್ನ ಸಂದೇಶವನ್ನು ಅನುಸರಿಸಬೇಕು. 14 ‘ರೇಕಾಬನ ಮಗನಾದ ಯೋನಾದಾಬನು ತನ್ನ ಮಕ್ಕಳಿಗೆ ದ್ರಾಕ್ಷಾರಸವನ್ನು ಕುಡಿಯಬೇಡಿರೆಂದು ಹೇಳಿದನು. ಅವನ ಆಜ್ಞೆಯನ್ನು ಪಾಲಿಸಲಾಗಿದೆ. ಇಂದಿನವರೆಗೂ ಯೋನಾದಾಬನ ಸಂತಾನದವರು ತಮ್ಮ ಪೂರ್ವಿಕರ ಆಜ್ಞೆಯನ್ನು ಪಾಲಿಸಿದ್ದಾರೆ. ಅವರು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. ನಾನೇ ನಿಮ್ಮ ದೇವರಾದ ಯೆಹೋವನು. ನಾನು ಯೆಹೂದದ ಜನರಾದ ನಿಮಗೆ ಮತ್ತೆಮತ್ತೆ ಸಂದೇಶಗಳನ್ನು ಕೊಟ್ಟಿದ್ದೇನೆ. ಆದರೆ ನೀವು ನನ್ನ ಆಜ್ಞೆಗಳನ್ನು ಪಾಲಿಸಲಿಲ್ಲ. 15 ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಇಸ್ರೇಲಿಗೆ ಮತ್ತು ಯೆಹೂದಕ್ಕೆ ಕಳುಹಿಸಿಕೊಟ್ಟೆ. ನಾನು ಅವರನ್ನು ನಿಮ್ಮಲ್ಲಿಗೆ ಪುನಃಪುನಃ ಕಳುಹಿಸಿಕೊಟ್ಟೆ. ಆ ಪ್ರವಾದಿಗಳು, “ಇಸ್ರೇಲಿನ ಮತ್ತು ಯೆಹೂದದ ಪ್ರತಿಯೊಬ್ಬರೂ ದುಷ್ಕೃತ್ಯಗಳನ್ನು ಮಾಡುವದನ್ನು ನಿಲ್ಲಿಸಬೇಕು. ನೀವು ಒಳ್ಳೆಯವರಾಗಿರಬೇಕು. ಬೇರೆ ದೇವರುಗಳನ್ನು ಅನುಸರಿಸಬಾರದು. ಅವುಗಳನ್ನು ಪೂಜಿಸಬಾರದು. ಅವುಗಳ ಸೇವೆಮಾಡಬಾರದು ಎಂದು ಹೇಳಿದರು. ನನ್ನ ಆಜ್ಞೆಯನ್ನು ಪಾಲಿಸಿದರೆ ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಕೊಟ್ಟ ಪ್ರದೇಶದಲ್ಲಿ ನೀವು ವಾಸಿಸಬಹುದು” ಎಂದು ಹೇಳಿದ್ದೆ. ಆದರೆ ನೀವು ನನ್ನ ಸಂದೇಶದ ಕಡೆಗೆ ಗಮನ ಕೊಡಲಿಲ್ಲ. 16 ಯೋನಾದಾಬನ ಸಂತಾನದವರು ತಮ್ಮ ಪೂರ್ವಿಕರು ವಿಧಿಸಿದ ಆಜ್ಞೆಗಳನ್ನು ಪಾಲಿಸಿದರು. ಆದರೆ ಯೆಹೂದದ ಜನರು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.’
17 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆಂದನು: ‘ಯೆಹೂದ ಮತ್ತು ಜೆರುಸಲೇಮಿಗೆ ಅನೇಕ ಕೇಡುಗಳು ಸಂಭವಿಸುವವೆಂದು ನಾನು ಹೇಳಿರುವೆನು. ಆ ಎಲ್ಲಾ ಕೇಡುಗಳು ಬೇಗನೆ ಸಂಭವಿಸುವಂತೆ ನಾನು ಮಾಡುವೆನು. ನಾನು ಆ ಜನರೊಂದಿಗೆ ಮಾತನಾಡಿದೆ, ಆದರೆ ಅವರು ಕಿವಿಗೆ ಹಾಕಿಕೊಳ್ಳಲಿಲ್ಲ. ನಾನು ಅವರನ್ನು ಕೂಗಿದೆ, ಆದರೆ ಅವರು ನನಗೆ ಓಗೊಡಲಿಲ್ಲ.’”
18 ಅನಂತರ ಯೆರೆಮೀಯನು ರೇಕಾಬ್ಯರಿಗೆ ಹೀಗೆ ಹೇಳಿದನು, “ಸರ್ವಶಕ್ತನಾದ ಯೆಹೋವನು, ಇಸ್ರೇಲಿನ ದೇವರು ಹೀಗೆ ಹೇಳುತ್ತಾನೆ. ‘ನೀವು ನಿಮ್ಮ ಪೂರ್ವಿಕನಾದ ಯೋನಾದಾಬನ ಆಜ್ಞೆಗಳನ್ನು ಪಾಲಿಸಿದ್ದೀರಿ. ನೀವು ಯೋನಾದಾಬನ ಎಲ್ಲಾ ಉಪದೇಶಗಳನ್ನು ಅನುಸರಿಸಿದ್ದೀರಿ. ನೀವು ಅವನು ವಿಧಿಸಿದಂತೆ ಎಲ್ಲವನ್ನು ಮಾಡಿದ್ದೀರಿ.’ 19 ಆದ್ದರಿಂದ ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನು ‘ರೇಕಾಬನ ಮಗನಾದ ಯೋನಾದಾಬನ ಸಂತಾನದವರು ಯಾವಾಗಲೂ ನನ್ನ ಸೇವೆಯಲ್ಲಿರುವರು’ ಎಂದು ನುಡಿದನು.”
ಯೆಹೋಯಾಕೀಮನು ಯೆರೆಮೀಯನ ಗ್ರಂಥವನ್ನು ಸುಟ್ಟದ್ದು
36 ಯೋಷೀಯನ ಮಗನಾದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ಒಂದು ಸುರಳಿಯನ್ನು ತೆಗೆದುಕೊಂಡು ನಾನು ನಿನಗೆ ಹೇಳಿದ ಎಲ್ಲಾ ಸಂದೇಶಗಳನ್ನು ಅದರಲ್ಲಿ ಬರೆದಿಡು. ನಾನು ನಿನಗೆ ಇಸ್ರೇಲ್ ಮತ್ತು ಯೆಹೂದ ಜನಾಂಗಗಳ ಬಗ್ಗೆಯೂ ಮತ್ತು ಉಳಿದ ಜನಾಂಗಗಳ ಬಗ್ಗೆಯೂ ಹೇಳಿದ್ದೇನೆ. ಯೋಷೀಯನ ಆಳ್ವಿಕೆಯ ಕಾಲದಿಂದ ಇಲ್ಲಿಯವರೆಗೂ ನಾನು ನಿನಗೆ ಹೇಳಿದ ಪ್ರತಿಯೊಂದು ಶಬ್ಧವನ್ನೂ ಬರೆದಿಡು. 3 ನಾನು ಮಾಡಬೇಕೆಂದು ಯೋಚಿಸಿರುವುದನ್ನು ಯೆಹೂದ ಕುಲದವರು ಕೇಳಿಸಿಕೊಳ್ಳಬಹುದು. ಅವರು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಅವರು ಹಾಗೆ ಮಾಡಿದರೆ ಅವರು ಮಾಡಿದ ಪಾಪಗಳನ್ನು ನಾನು ಕ್ಷಮಿಸುವೆನು.”
4 ಆಗ ಯೆರೆಮೀಯನು ಬಾರೂಕನೆಂಬ ಒಬ್ಬ ವ್ಯಕ್ತಿಯನ್ನು ಕರೆದನು. ಬಾರೂಕನು ನೇರೀಯನ ಮಗ. ಯೆರೆಮೀಯನು ಯೆಹೋವನ ಸಂದೇಶವನ್ನು ಹೇಳುತ್ತಿದ್ದಾಗ ಬಾರೂಕನು ಆ ಸಂದೇಶವನ್ನು ಸುರುಳಿಯ ಮೇಲೆ ಬರೆದನು. 5 ಆಗ ಯೆರೆಮೀಯನು ಬಾರೂಕನಿಗೆ ಹೀಗೆ ಹೇಳಿದನು: “ಯೆಹೋವನ ಆಲಯಕ್ಕೆ ನಾನು ಹೋಗಲಾರೆ. ಅಲ್ಲಿ ಹೋಗುವದಕ್ಕೆ ಅಪ್ಪಣೆಯಿಲ್ಲ. 6 ಆದ್ದರಿಂದ ನೀನು ಯೆಹೋವನ ಆಲಯಕ್ಕೆ ಉಪವಾಸದ ದಿನ ಹೋಗು ಮತ್ತು ಸುರುಳಿಯಲ್ಲಿ ಬರೆದದ್ದನ್ನು ಜನರ ಮುಂದೆ ಓದು. ನಾನು ಹೇಳುತ್ತಿದ್ದಂತೆಯೇ ನೀನು ಸುರುಳಿಯ ಮೇಲೆ ಬರೆದುಕೊಂಡ ಯೆಹೋವನ ಸಂದೇಶಗಳನ್ನು ಆ ಜನರ ಮುಂದೆ ಓದು. ತಾವು ವಾಸಮಾಡುವ ಸ್ಥಳಗಳಿಂದ ಜೆರುಸಲೇಮಿಗೆ ಬಂದಿರುವ ಎಲ್ಲಾ ಯೆಹೂದ್ಯರ ಮುಂದೆ ಆ ಸಂದೇಶಗಳನ್ನು ಓದು. 7 ಬಹುಶಃ ಆ ಜನರು ತಮಗೆ ಸಹಾಯಮಾಡೆಂದು ಯೆಹೋವನನ್ನು ಪ್ರಾರ್ಥಿಸಬಹುದು. ಆಗ ಪ್ರತಿಯೊಬ್ಬನೂ ದುಷ್ಕೃತ್ಯ ಮಾಡುವದನ್ನು ನಿಲ್ಲಿಸಬಹುದು. ಆ ಜನರ ಮೇಲೆ ತನಗೆ ಬಹಳ ಕೋಪಬಂದಿದೆ ಎಂದು ಯೆಹೋವನು ಪ್ರಕಟಿಸಿದ್ದಾನೆ.” 8 ಪ್ರವಾದಿಯಾದ ಯೆರೆಮೀಯನು ತನಗೆ ಮಾಡಲು ಹೇಳಿದಂತೆ ನೇರೀಯನ ಮಗನಾದ ಬಾರೂಕನು ಮಾಡಿದನು. ಬಾರೂಕನು ಸುರುಳಿಯ ಮೇಲೆ ಬರೆದ ಯೆಹೋವನ ಸಂದೇಶಗಳನ್ನು ಗಟ್ಟಿಯಾಗಿ ಯೆಹೋವನ ಆಲಯದಲ್ಲಿ ಓದಿದನು.
9 ಯೆಹೋಯಾಕೀಮನ ಆಳ್ವಿಕೆಯ ಐದನೇ ವರ್ಷದ ಒಂಭತ್ತನೇ ತಿಂಗಳಲ್ಲಿ ಒಂದು ಉಪವಾಸವನ್ನು ಪ್ರಕಟಿಸಲಾಯಿತು. ಜೆರುಸಲೇಮ್ ನಗರದ ನಿವಾಸಿಗಳೆಲ್ಲರೂ ಯೆಹೂದದ ಬೇರೆ ಊರುಗಳಿಂದ ಜೆರುಸಲೇಮಿಗೆ ಬಂದವರೆಲ್ಲರೂ ಯೆಹೋವನ ಆಲಯದಲ್ಲಿ ಉಪವಾಸ ಮಾಡುವರೆಂದು ಗೊತ್ತುಪಡಿಸಲಾಗಿತ್ತು. 10 ಆ ಸಂದರ್ಭದಲ್ಲಿ ಯೆರೆಮೀಯನು ಹೇಳಿದ ಆ ಸಂದೇಶವನ್ನು ಬಾರೂಕನು ಓದಿದನು. ಅವನು ಯೆಹೋವನ ಆಲಯದಲ್ಲಿ ಆ ಸುರುಳಿಯನ್ನು ಓದಿದನು. ಯೆಹೋವನ ಆಲಯದಲ್ಲಿದ್ದ ಎಲ್ಲಾ ಜನರು ಕೇಳುವಂತೆ ಬಾರೂಕನು ಆ ಸುರುಳಿಯನ್ನು ಓದಿದನು. ಆ ಸುರುಳಿಯನ್ನು ಓದುವಾಗ ಬಾರೂಕನು ಮೇಲಿನ ಪ್ರಾಕಾರದಲ್ಲಿದ್ದ ಗೆಮರ್ಯನ ಕೋಣೆಯಲ್ಲಿದ್ದನು. ಆ ಕೋಣೆಯು ಪವಿತ್ರ ಆಲಯದ ಹೊಸ ಬಾಗಿಲಿನ ಹತ್ತಿರ ಇತ್ತು. ಗೆಮರ್ಯನು ಶಾಫಾನನ ಮಗನಾಗಿದ್ದನು. ಗೆಮರ್ಯನು ಯೆಹೋವನ ಆಲಯದಲ್ಲಿ ಯೆಹೂದ್ಯ ಧರ್ಮಶಾಸ್ತ್ರಜ್ಞನಾಗಿದ್ದನು.
11 ಬಾರೂಕನು ಓದಿದ ಎಲ್ಲಾ ಯೆಹೋವನ ಸಂದೇಶಗಳನ್ನು ಮೀಕಾಯನೆಂಬ ಒಬ್ಬ ಮನುಷ್ಯನು ಕೇಳಿಸಿಕೊಂಡನು. ಮೀಕಾಯನು ಶಾಫಾನನ ಮಗನಾದ ಗೆಮರ್ಯನ ಮಗನಾಗಿದ್ದನು. 12 ಸುರುಳಿಯಲ್ಲಿದ್ದ ಸಂದೇಶಗಳನ್ನು ಕೇಳಿದ ಕೂಡಲೇ ಅವನು ರಾಜನ ಅರಮನೆಯಲ್ಲಿದ್ದ ಆಸ್ಥಾನದ ಅಧಿಕಾರಿಯ ಕೋಣೆಗೆ ಹೋದನು. ರಾಜನ ಅರಮನೆಯಲ್ಲಿ ಎಲ್ಲಾ ರಾಜಾಧಿಕಾರಿಗಳು ಕುಳಿತುಕೊಂಡಿದ್ದರು. ಆ ಅಧಿಕಾರಿಗಳ ಹೆಸರುಗಳು ಇಂತಿವೆ: ದರ್ಬಾರಿನ ಅಧಿಕಾರಿಯಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಮತ್ತು ಉಳಿದೆಲ್ಲ ಅಧಿಕಾರಿಗಳು ಅಲ್ಲಿದ್ದರು. 13 ಬಾರೂಕನು ಸುರಳಿಯಿಂದ ಓದಿದ ಎಲ್ಲಾ ವಿಷಯವನ್ನು ಮೀಕಾಯನು ಈ ಅಧಿಕಾರಿಗಳಿಗೆ ಹೇಳಿದನು.
14 ಆಗ ಆ ಅಧಿಕಾರಿಗಳೆಲ್ಲ ಯೆಹೂದಿ ಎಂಬುವನನ್ನು ಬಾರೂಕನಲ್ಲಿಗೆ ಕಳುಹಿಸಿಕೊಟ್ಟರು. ಯೆಹೂದಿಯು ಶೆಲೆಮ್ಯನ ಮಗನಾದ ನೆಥನ್ಯನ ಮಗ. ಶೆಲೆಮ್ಯನು ಕೂಷಿಯ ಮಗ. ಯೆಹೂದಿಯು ಬಾರೂಕನಿಗೆ, “ನೀನು ಓದಿದ ಸುರುಳಿಯನ್ನು ತೆಗೆದುಕೊಂಡು ನನ್ನ ಜೊತೆ ಬಾ” ಎಂದು ಕರೆದನು.
ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ತೆಗೆದುಕೊಂಡು ಯೆಹೂದಿಯ ಸಂಗಡ ಆ ಅಧಿಕಾರಿಗಳ ಹತ್ತಿರಕ್ಕೆ ಹೋದನು.
15 ಆಗ ಆ ಅಧಿಕಾರಿಗಳು ಬಾರೂಕನಿಗೆ, “ಕುಳಿತುಕೊ. ಆ ಸುರುಳಿಯನ್ನು ನಮ್ಮ ಮುಂದೆ ಓದು” ಎಂದರು.
ಬಾರೂಕನು ಸುರುಳಿಯನ್ನು ಅವರ ಮುಂದೆ ಓದಿದನು.
16 ಆ ರಾಜ್ಯಾಧಿಕಾರಿಗಳು ಆ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಕೇಳಿ ಭಯಪಟ್ಟು ಒಬ್ಬರ ಮುಖವನ್ನೊಬ್ಬರು ನೋಡಿದರು. ಅವರು ಬಾರೂಕನಿಗೆ, “ನಾವು ರಾಜನಾದ ಯೆಹೋಯಾಕೀಮನಿಗೆ ಈ ಸುರುಳಿಯಲ್ಲಿರುವ ಸಂದೇಶಗಳ ಬಗ್ಗೆ ತಿಳಿಸಬೇಕು” ಎಂದರು. 17 ಬಳಿಕ ಆ ಅಧಿಕಾರಿಗಳು ಬಾರೂಕನಿಗೆ, “ಬಾರೂಕನೇ, ನೀನು ಈ ಸುರುಳಿಯ ಮೇಲೆ ಬರೆದ ಸಂದೇಶಗಳನ್ನು ಎಲ್ಲಿಂದ ಪಡೆದೆ? ಯೆರಮೀಯನು ನಿನಗೆ ಹೇಳಿದ್ದನ್ನು ನೀನು ಬರೆದುಕೊಂಡೆಯಾ? ಹೇಳು” ಎಂದು ಪ್ರಶ್ನಿಸಿದರು.
18 “ಹೌದು, ಯೆರೆಮೀಯನು ಬಾಯಿಂದ ಹೇಳಿದನು ಮತ್ತು ನಾನು ಆ ಸಂದೇಶಗಳನ್ನೆಲ್ಲಾ ಶಾಹಿಯಿಂದ ಸುರುಳಿಯ ಮೇಲೆ ಬರೆದೆನು” ಎಂದು ಬಾರೂಕನು ಉತ್ತರಿಸಿದನು.
19 ಆಗ ರಾಜಾಧಿಕಾರಿಗಳು ಬಾರೂಕನಿಗೆ, “ನೀನು ಮತ್ತು ಯೆರೆಮೀಯನು ಹೋಗಿ ಎಲ್ಲಿಯಾದರೂ ಅಡಗಿಕೊಳ್ಳಿರಿ. ಎಲ್ಲಿ ಅಡಗಿಕೊಂಡಿದ್ದೀರೆಂಬುದನ್ನು ಯಾರಿಗೂ ತಿಳಿಸಬೇಡಿ” ಎಂದು ಹೇಳಿದರು.
20 ಅನಂತರ ರಾಜಾಧಿಕಾರಿಗಳು ಆ ಸುರುಳಿಯನ್ನು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಲ್ಲಿ ಇಟ್ಟರು. ಅವರು ರಾಜನಾದ ಯೆಹೋಯಾಕೀಮನ ಬಳಿಗೆ ಹೋಗಿ ಆ ಸುರುಳಿಯ ಬಗ್ಗೆ ವಿವರವಾಗಿ ಹೇಳಿದರು.
21 ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ತರುವದಕ್ಕೆ ಯೆಹೂದಿಯನ್ನು ಕಳುಹಿಸಿದನು. ಯೆಹೂದಿಯು ಧರ್ಮಶಾಸ್ತ್ರಜ್ಞನಾದ ಎಲೀಷಾಮನ ಕೋಣೆಯಿಂದ ಆ ಸುರುಳಿಯನ್ನು ತಂದನು. ಬಳಿಕ ರಾಜನು ಮತ್ತು ಅವನ ಸುತ್ತಲು ನಿಂತ ಅಧಿಕಾರಿಗಳೆಲ್ಲ ಕೇಳುವಂತೆ ಯೆಹೂದಿಯು ಆ ಸುರಳಿಯನ್ನು ಓದಿದನು. 22 ಅದು ನಡೆದದ್ದು ಒಂಭತ್ತನೇ ತಿಂಗಳಲ್ಲಿ, ರಾಜನಾದ ಯೆಹೋಯಾಕೀಮನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು. ರಾಜನ ಎದುರಿಗಿದ್ದ ಒಂದು ಸಣ್ಣ ಅಗ್ಗಿಷ್ಟಿಕೆಯಲ್ಲಿ ಬೆಂಕಿಯು ಉರಿಯುತ್ತಿತು. 23 ಯೆಹೂದಿಯು ಸುರುಳಿಯನ್ನು ಓದಲು ಪ್ರಾರಂಭಿಸಿದನು. ಆದರೆ ಅವನು ಎರಡು ಅಥವಾ ಮೂರು ಅಂಕಣಗಳನ್ನು ಓದಿ ಮುಗಿಸಿದ ಕೂಡಲೆ ರಾಜನಾದ ಯೆಹೋಯಾಕೀಮನು ಆ ಸುರುಳಿಯನ್ನು ಕಸಿದುಕೊಂಡು ಆ ಅಂಕಣಗಳನ್ನು ಒಂದು ಸಣ್ಣ ಚೂರಿಯಿಂದ ಕತ್ತರಿಸಿ ಅಗ್ಗಿಷ್ಟಿಕೆಯಲ್ಲಿ ಎಸೆಯತೊಡಗಿದನು. ಕೊನೆಗೆ ಇಡೀ ಸುರುಳಿಯನ್ನು ಸುಟ್ಟುಹಾಕಲಾಯಿತು. 24 ಈ ಸುರುಳಿಯಲ್ಲಿದ್ದ ಸಂದೇಶವನ್ನು ಕೇಳಿ ರಾಜನಾದ ಯೆಹೋಯಾಕೀಮನು ಮತ್ತು ಅವನ ಸೇವಕರು ಗಾಬರಿಯಾಗಲಿಲ್ಲ. ತಾವು ತಪ್ಪು ಮಾಡಿದ್ದಕ್ಕಾಗಿ ದುಃಖವನ್ನು ಸೂಚಿಸಲು ಅವರು ತಮ್ಮ ವಸ್ತ್ರಗಳನ್ನು ಹರಿದುಕೊಳ್ಳಲಿಲ್ಲ.
25 ಎಲ್ನಾಥಾನನೂ ದೆಲಾಯನೂ ಗೆಮರ್ಯನೂ ಅದನ್ನು ಸುಡಬೇಡವೆಂದು ರಾಜನಿಗೆ ಹೇಳುವ ಪ್ರಯತ್ನ ಮಾಡಿದರು. ಆದರೆ ರಾಜನು ಅವರ ಮಾತನ್ನು ಕೇಳಲಿಲ್ಲ. 26 ರಾಜನಾದ ಯೆಹೋಯಾಕೀಮನು ಲಿಪಿಕಾರನಾದ ಬಾರೂಕನನ್ನು ಮತ್ತು ಪ್ರವಾದಿಯಾದ ಯೆರೆಮೀಯನನ್ನು ಬಂಧಿಸಬೇಕೆಂದು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶೆಲೆಮ್ಯ ಇವರಿಗೆ ಆಜ್ಞೆಯನ್ನು ಕೊಟ್ಟನು. ಆದರೆ ಅವರಿಂದ ಬಾರೂಕನನ್ನು ಮತ್ತು ಯೆರೆಮೀಯನನ್ನು ಹುಡುಕಲಾಗಲಿಲ್ಲ. ಯಾಕೆಂದರೆ ಯೆಹೋವನು ಅವರನ್ನು ಬಚ್ಚಿಟ್ಟಿದ್ದನು.
27 ಯೆರೆಮೀಯನು ಬಾರೂಕನಿಗೆ ಹೇಳಿದ್ದ, ಬಾರೂಕನು ಶಾಹಿಯಿಂದ ಬರೆದಿದ್ದ ಸುರುಳಿಯನ್ನು ಯೆಹೋಯಾಕೀಮನು ಸುಟ್ಟುಹಾಕಿದ ಮೇಲೆ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು:
28 “ಯೆರೆಮೀಯನೇ, ಇನ್ನೊಂದು ಸುರುಳಿಯನ್ನು ತೆಗೆದುಕೊ. ಯೆಹೂದದ ರಾಜನಾದ ಯೆಹೋಯಾಕೀಮನು ಸುಟ್ಟುಹಾಕಿದ ಮೊದಲನೇ ಸುರುಳಿಯಲ್ಲಿ ಬರೆದ ಎಲ್ಲಾ ಸಂದೇಶಗಳನ್ನು ಈ ಸುರುಳಿಯ ಮೇಲೆ ಬರೆ. 29 ಯೆರೆಮೀಯನೇ, ಯೆಹೂದದ ರಾಜನಾದ ಯೆಹೋಯಾಕೀಮನಿಗೆ ಹೀಗೆ ಹೇಳು, ‘ಯೆಹೋವನು ಹೀಗೆನ್ನುತ್ತಾನೆ: ಯೆಹೋಯಾಕೀಮನೇ, ನೀನು ಆ ಸುರುಳಿಯನ್ನು ಸುಟ್ಟುಬಿಟ್ಟೆ. ನೀನು, “ಬಾಬಿಲೋನ್ ರಾಜನು ಖಂಡಿತವಾಗಿ ಬಂದು ಈ ದೇಶವನ್ನು ನಾಶಮಾಡುವನು ಎಂದು ಯೆರೆಮೀಯನು ಏಕೆ ಬರೆದನು? ಬಾಬಿಲೋನ್ ರಾಜನು ಈ ದೇಶದ ಮನುಷ್ಯರನ್ನು ಮತ್ತು ಪ್ರಾಣಿಗಳನ್ನು ನಾಶಮಾಡುವನು ಎಂದು ಏಕೆ ಹೇಳಿದನು?” ಎಂದು ಕೇಳಿದೆ. 30 ಇಗೋ ಯೆಹೂದದ ರಾಜನಾದ ಯೆಹೋಯಾಕೀಮನ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: ಯೆಹೋಯಾಕೀಮನ ಸಂತಾನದವರು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳಲಾಗದು. ಯೆಹೋಯಾಕೀಮನು ಸತ್ತರೆ ರಾಜ ಮರ್ಯಾದೆಯಿಂದ ಅವನ ಶವಸಂಸ್ಕಾರ ಮಾಡಲಾಗುವದಿಲ್ಲ. ಅವನ ಶವವನ್ನು ನೆಲದ ಮೇಲೆ ಎಸೆಯಲಾಗುವುದು. ಅವನ ಶವ ಹಗಲಿನ ತಾಪದಲ್ಲಿ ಮತ್ತು ರಾತ್ರಿಯ ಚಳಿಯಲ್ಲಿ ಹೊರಗೆ ಬಿದ್ದಿರುವದು. 31 ಯೆಹೋವನಾದ ನಾನು ಯೆಹೋಯಾಕೀಮ ಮತ್ತು ಅವನ ಮಕ್ಕಳನ್ನು ದಂಡಿಸುವೆನು. ನಾನು ಅವನ ಅಧಿಕಾರಿಗಳನ್ನೂ ದಂಡಿಸುವೆನು. ಅವರು ದುಷ್ಟರಾದುದರಿಂದ ಹೀಗೆ ಮಾಡುವೆನು. ನಾನು ಅವರ ಮೇಲೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೆಲ್ಲರ ಮೇಲೂ ಮತ್ತು ಯೆಹೂದದ ಜನರ ಮೇಲೂ ಭಯಂಕರವಾದ ಕೇಡನ್ನು ತರಲು ನಿಶ್ಚಯಿಸಿದ್ದೇನೆ. ನಾನು ಹೇಳಿದಂತೆ ಅವರಿಗೆ ಎಲ್ಲಾ ಕೆಡುಕನ್ನು ಉಂಟುಮಾಡುವೆನು. ಏಕೆಂದರೆ ಅವರು ನನ್ನ ಮಾತನ್ನು ಕೇಳಲಿಲ್ಲ.’”
32 ಅನಂತರ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾದ ಲಿಪಿಕಾರ ಬಾರೂಕನಿಗೆ ಕೊಟ್ಟನು. ರಾಜ ಯೆಹೋಯಾಕೀಮನು ಸುಟ್ಟುಹಾಕಿದ ಸುರುಳಿಯಲ್ಲಿದ್ದ ಸಂದೇಶವನ್ನೇ ಯೆರೆಮೀಯನು ಹೇಳಿದಂತೆಲ್ಲ ಬಾರೂಕನು ಸುರುಳಿಯ ಮೇಲೆ ಬರೆದನು. ಬೇರೆ ಹಲವು ಸಂದೇಶಗಳನ್ನು ಎರಡನೇ ಸುರುಳಿಯಲ್ಲಿ ಸೇರಿಸಲಾಯಿತು.
ಯೆರೆಮೀಯನನ್ನು ಕಾರಾಗೃಹದಲ್ಲಿಡಲಾಯಿತು
37 ನೆಬೂಕದ್ನೆಚ್ಚರನು ಬಾಬಿಲೋನಿನ ರಾಜನಾಗಿದ್ದನು. ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನಾದ ಕೊನ್ಯನ ಸ್ಥಾನದಲ್ಲಿ ಚಿದ್ಕೀಯನನ್ನು ಯೆಹೂದದ ರಾಜನನ್ನಾಗಿ ನೇಮಿಸಿದ್ದನು. ಚಿದ್ಕೀಯನು ರಾಜನಾದ ಯೋಷೀಯನ ಮಗನಾಗಿದ್ದನು. 2 ಆದರೆ ಯೆಹೋವನು ಯೆರೆಮೀಯನಿಗೆ ಪ್ರವಾದನೆ ಮಾಡಲು ಹೇಳಿದ ಸಂದೇಶಗಳ ಕಡೆಗೆ ಗಮನ ಕೊಡಲಿಲ್ಲ. ಚಿದ್ಕೀಯನ ಸೇವಕರು ಮತ್ತು ಯೆಹೂದದ ಜನರು ಯೆಹೋವನ ಸಂದೇಶಗಳಿಗೆ ಯಾವ ಗಮನವನ್ನೂ ಕೊಡಲಿಲ್ಲ.
3 ರಾಜನಾದ ಚಿದ್ಕೀಯನು ಶೆಲೆಮ್ಯನ ಮಗನಾದ ಯೆಹೂಕಲನನ್ನು ಮತ್ತು ಮಾಸೇಯನ ಮಗನಾದ ಯಾಜಕ ಚೆಫನನನ್ನು ಒಂದು ಸಂದೇಶದೊಂದಿಗೆ ಯೆರೆಮೀಯನಲ್ಲಿಗೆ ಕಳುಹಿಸಿದನು. ಯೆರೆಮೀಯನಿಗೆ ಅವರು ತಂದ ಸಂದೇಶ ಹೀಗಿತ್ತು: “ಯೆರೆಮೀಯನೇ, ನಮ್ಮ ದೇವರಾದ ಯೆಹೋವನನ್ನು ನಮಗಾಗಿ ಪ್ರಾರ್ಥಿಸು.”
4 (ಆ ಕಾಲದಲ್ಲಿ ಯೆರೆಮೀಯನನ್ನು ಇನ್ನೂ ಕಾರಾಗೃಹದಲ್ಲಿಟ್ಟಿರಲಿಲ್ಲ. ಅವನು ತನ್ನ ಮನಬಂದ ಕಡೆ ಹೋಗಲು ಸ್ವತಂತ್ರನಾಗಿದ್ದನು. 5 ಅದಲ್ಲದೆ ಆಗ ಫರೋಹನ ಸೈನ್ಯವು ಈಜಿಪ್ಟಿನಿಂದ ಯೆಹೂದದ ಕಡೆಗೆ ಹೊರಟಿತ್ತು. ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಬಾಬಿಲೋನ್ ಸೈನ್ಯವು ಜೆರುಸಲೇಮ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಆಗ ಈಜಿಪ್ಟಿನ ಸೈನ್ಯವು ತಮ್ಮ ಕಡೆ ಬರುತ್ತಿದೆ ಎಂಬ ಸಮಾಚಾರವು ಬಂದಿತು. ಅದನ್ನು ಕೇಳಿ ಬಾಬಿಲೋನಿನ ಸೈನ್ಯವು ಈಜಿಪ್ಟಿನ ಸೈನ್ಯವನ್ನೆದುರಿಸಲು ಜೆರುಸಲೇಮನ್ನು ಬಿಟ್ಟುಹೋಗಿತ್ತು.)
6 ಪ್ರವಾದಿಯಾದ ಯೆರೆಮೀಯನಿಗೆ ಯೆಹೋವನಿಂದ ಸಂದೇಶ ಬಂದಿತು: 7 “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಯೆಹೂಕಲನೇ ಮತ್ತು ಚೆಫನ್ಯನೇ, ಯೆಹೂದದ ರಾಜನಾದ ಚಿದ್ಕೀಯನು ನನಗೆ ಪ್ರಶ್ನೆಗಳನ್ನು ಕೇಳುವದಕ್ಕಾಗಿ ನಿಮ್ಮನ್ನು ನನ್ನಲ್ಲಿಗೆ ಕಳಿಸಿದ್ದಾನೆಂಬುದು ನನಗೆ ಗೊತ್ತು. ರಾಜನಾದ ಚಿದ್ಕೀಯನಿಗೆ ಹೀಗೆ ಹೇಳಿರಿ. ಬಾಬಿಲೋನಿನ ಸೈನ್ಯದ ವಿರುದ್ಧ ನಿಮಗೆ ಸಹಾಯ ಮಾಡಲು ಇಲ್ಲಿಗೆ ಬರುವದಕ್ಕಾಗಿ ಫರೋಹನ ಸೈನ್ಯವು ಈಜಿಪ್ಟಿನಿಂದ ಹೊರಟಿತು. ಆದರೆ ಫರೋಹನ ಸೈನ್ಯವು ಈಜಿಪ್ಟಿಗೆ ಹಿಂದಿರುಗುವುದು. 8 ಬಳಿಕ ಬಾಬಿಲೋನಿನ ಸೈನ್ಯವು ಇಲ್ಲಿಗೆ ಬರುವುದು. ಅವರು ಜೆರುಸಲೇಮಿನ ಮೇಲೆ ಧಾಳಿ ಮಾಡುವರು. ಆಗ ಬಾಬಿಲೋನಿನ ಆ ಸೈನ್ಯವು ಜೆರುಸಲೇಮನ್ನು ವಶಪಡಿಸಿಕೊಂಡು ಅದನ್ನು ಸುಟ್ಟುಹಾಕುವುದು.’ 9 ಯೆಹೋವನು ಹೀಗೆನ್ನುತ್ತಾನೆ: ‘ಜೆರುಸಲೇಮ್ ನಿವಾಸಿಗಳೇ “ಬಾಬಿಲೋನ್ ಸೈನಿಕರು ಖಂಡಿತವಾಗಿಯೂ ನಮ್ಮನ್ನು ಬಿಟ್ಟುಹೋಗುವರು” ಎಂದು ನಿಮಗೆ ನೀವೇ ಹೇಳಿಕೊಂಡು ನಿಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳಬೇಡಿ, ಅವರು ನಿಮ್ಮನ್ನು ಬಿಟ್ಟುಹೋಗುವದಿಲ್ಲ. 10 ಜೆರುಸಲೇಮಿನ ಜನರೇ, ನಿಮ್ಮ ಮೇಲೆ ಧಾಳಿ ಮಾಡುವ ಬಾಬಿಲೋನಿನ ಎಲ್ಲಾ ಸೈನಿಕರನ್ನು ನೀವು ಸೋಲಿಸಿದರೂ ಅವರ ಗುಡಾರದಲ್ಲಿ ಕೆಲವು ಜನ ಗಾಯಗೊಂಡವರು ಉಳಿದಿರುತ್ತಾರೆ. ಆ ಗಾಯಾಳುಗಳೇ ತಮ್ಮ ಗುಡಾರದಿಂದ ಹೊರಬಂದು ಜೆರುಸಲೇಮನ್ನು ಸುಟ್ಟುಹಾಕುವರು.’”
11 ಈಜಿಪ್ಟ್ ದೇಶದ ಫರೋಹನ ಸೈನ್ಯದೊಂದಿಗೆ ಕಾದಾಡಲು ಬಾಬಿಲೋನಿನ ಸೈನ್ಯವು ಜೆರುಸಲೇಮನ್ನು ಬಿಟ್ಟುಹೋದ ಮೇಲೆ 12 ಯೆರೆಮೀಯನು ಜೆರುಸಲೇಮಿನಿಂದ ಬೆನ್ಯಾಮೀನ್ ಪ್ರದೇಶಕ್ಕೆ ಹೋಗ ಬಯಸಿದನು. ತನ್ನ ಮನೆತನಕ್ಕೆ ಸೇರಿದ ಆಸ್ತಿಯ ವಿಭಜನೆಗಾಗಿ ಅವನು ಹೋಗುತ್ತಿದ್ದನು. 13 ಆದರೆ ಯೆರೆಮೀಯನು ಜೆರುಸಲೇಮಿನ ಬೆನ್ಯಾಮೀನ್ ಹೆಬ್ಬಾಗಿಲಿನ ಹತ್ತಿರ ಹೋದಾಗ ಪಹರೆದಾರರ ಮುಖ್ಯಸ್ಥನು ಅವನನ್ನು ಹಿಡಿದುಕೊಂಡನು. ಆ ಮುಖ್ಯಸ್ಥನ ಹೆಸರು ಇರೀಯ. ಇರೀಯನು ಶೆಲೆಮ್ಯನ ಮಗನು; ಶೆಲೆಮ್ಯನು ಹನನ್ಯನ ಮಗನು. ಮುಖ್ಯಸ್ಥನಾದ ಇರೀಯನು ಯೆರೆಮೀಯನನ್ನು ಹಿಡಿದುಕೊಂಡು, “ಯೆರೆಮೀಯನೇ, ನೀನು ಬಾಬಿಲೋನಿನ ಕಡೆ ಸೇರಿಕೊಳ್ಳುವದಕ್ಕಾಗಿ ನಮ್ಮನ್ನು ಬಿಟ್ಟುಹೋಗುತ್ತಿರುವೆ” ಎಂದನು.
14 “ಅದು ನಿಜವಲ್ಲ, ಬಾಬಿಲೋನಿನವರ ಕಡೆ ಸೇರಿಕೊಳ್ಳಲು ನಾನು ಬಿಟ್ಟುಹೋಗುತ್ತಿಲ್ಲ” ಎಂದು ಯೆರೆಮೀಯನು ಇರೀಯನಿಗೆ ಹೇಳಿದನು. ಆದರೆ ಇರೀಯನು ಯೆರೆಮೀಯನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇರೀಯನು ಯೆರೆಮೀಯನನ್ನು ಬಂಧಿಸಿ ಜೆರುಸಲೇಮಿನ ರಾಜಾಧಿಕಾರಿಗಳ ಬಳಿಗೆ ಕರೆದೊಯ್ದನು. 15 ಆ ಅಧಿಕಾರಿಗಳು ಯೆರೆಮೀಯನ ಮೇಲೆ ತುಂಬಾ ಕೋಪಗೊಂಡರು. ಯೆರೆಮೀಯನನ್ನು ಹೊಡೆಯಬೇಕೆಂದು ಅವರು ಆಜ್ಞೆಯಿತ್ತರು. ಆಮೇಲೆ ಅವರು ಯೆರೆಮೀಯನನ್ನು ಸೆರೆಮನೆಯಲ್ಲಿಟ್ಟರು. ಆ ಸೆರೆಮನೆಯು ಯೆಹೋನಾಥಾನನೆಂಬುವನ ಮನೆಯಲ್ಲಿತ್ತು. ಯೆಹೋನಾಥಾನನು ಯೆಹೂದದ ರಾಜನ ಲಿಫಿಗಾರನಾಗಿದ್ದನು. ಯೆಹೋನಾಥಾನನ ಮನೆಯನ್ನು ಸೆರೆಮನೆಯನ್ನಾಗಿ ಮಾಡಲಾಗಿತ್ತು. 16 ಅವರು ಯೆರೆಮೀಯನನ್ನು ಯೆಹೋನಾಥಾನನ ನೆಲಮನೆಯ ಒಂದು ಕೋಣೆಯಲ್ಲಿಟ್ಟರು. ಆ ಕೋಣೆಯು ನೆಲಮನೆಯ ಕೆಳಭಾಗದಲ್ಲಿತ್ತು. ಯೆರೆಮೀಯನು ಅಲ್ಲಿ ಬಹಳ ದಿವಸಗಳವರೆಗೆ ಇದ್ದನು.
17 ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ತನ್ನ ಅರಮನೆಗೆ ಕರೆತರಿಸಿದನು. ಚಿದ್ಕೀಯನು ಯೆರೆಮೀಯನೊಂದಿಗೆ ರಹಸ್ಯವಾಗಿ ಮಾತನಾಡಿ, “ಯೆಹೋವನಿಂದ ಏನಾದರೂ ಸಂದೇಶವಿದೆಯೊ?” ಎಂದು ಕೇಳಿದನು.
“ಹೌದು, ಯೆಹೋವನಿಂದ ಒಂದು ಸಂದೇಶವಿದೆ. ಚಿದ್ಕೀಯನೇ, ನಿನ್ನನ್ನು ಬಾಬಿಲೋನಿನ ರಾಜನಿಗೆ ಒಪ್ಪಿಸಲಾಗುವುದು” ಎಂದು ಯೆರೆಮೀಯನು ಉತ್ತರಿಸಿದನು. 18 ಆಮೇಲೆ ಯೆರೆಮೀಯನು ರಾಜನಾದ ಚಿದ್ಕೀಯನನ್ನು ಹೀಗೆ ಕೇಳಿದನು, “ನಾನು ಏನು ತಪ್ಪು ಮಾಡಿದ್ದೇನೆ? ನಾನು ನಿನ್ನ ವಿರುದ್ಧ ಅಥವಾ ನಿನ್ನ ಅಧಿಕಾರಿಗಳ ವಿರುದ್ಧ ಅಥವಾ ಜೆರುಸಲೇಮಿನ ಜನರ ವಿರುದ್ಧ ಯಾವ ಅಪರಾಧವನ್ನು ಮಾಡಿದ್ದೇನೆ? ನೀನು ನನ್ನನ್ನು ಸೆರೆಮನೆಯಲ್ಲಿ ಏಕೆ ಹಾಕಿರುವೆ? 19 ರಾಜನಾದ ಚಿದ್ಕೀಯನೇ, ನಿನ್ನ ಪ್ರವಾದಿಗಳು ಈಗ ಎಲ್ಲಿದ್ದಾರೆ? ಆ ಪ್ರವಾದಿಗಳು ನಿನಗೆ ಸುಳ್ಳುಪ್ರವಾದನೆಯನ್ನು ಮಾಡಿದರು. ‘ಬಾಬಿಲೋನಿನ ರಾಜನು ನಿನ್ನ ಮೇಲಾಗಲಿ ಅಥವಾ ಈ ಯೆಹೂದ ಪ್ರದೇಶದ ಮೇಲಾಗಲಿ ಧಾಳಿ ಮಾಡುವದಿಲ್ಲ’ ಎಂದು ಅವರು ಹೇಳಿದ್ದರು. 20 ಆದರೆ ಯೆಹೂದದ ರಾಜನಾದ ಚಿದ್ಕೀಯನೇ, ದಯವಿಟ್ಟು ನಾನು ಹೇಳುವದನ್ನು ಕೇಳು. ನನ್ನ ಕೋರಿಕೆಯನ್ನು ದಯವಿಟ್ಟು ಕೇಳು. ನನ್ನನ್ನು ಲಿಪಿಕಾರನಾದ ಯೆಹೋನಾಥಾನನ ಮನೆಗೆ ತಿರುಗಿ ಕಳುಹಿಸಬೇಡ. ಇದೇ ನನ್ನ ಬೇಡಿಕೆ. ನೀನು ನನ್ನನ್ನು ಮತ್ತೆ ಅಲ್ಲಿಗೆ ಕಳುಹಿಸಿದರೆ ನಾನು ಅಲ್ಲಿ ಸತ್ತುಹೋಗುತ್ತೇನೆ” ಎಂದನು.
21 ಆಗ ರಾಜನಾದ ಚಿದ್ಕೀಯನು ಯೆರೆಮೀಯನನ್ನು ಕಾರಾಗೃಹದ ಅಂಗಳದಲ್ಲಿಡಬೇಕೆಂದು ಮತ್ತು ಅವನಿಗೆ ಪೇಟೆಯಿಂದ ರೊಟ್ಟಿಯನ್ನು ತಂದುಕೊಡಬೇಕೆಂದು ಆಜ್ಞೆ ಮಾಡಿದನು. ನಗರದಲ್ಲಿ ರೊಟ್ಟಿ ಇರುವವರೆಗೆ ಯೆರೆಮೀಯನಿಗೆ ರೊಟ್ಟಿಯನ್ನು ಕೊಡಲಾಯಿತು. ಹೀಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಬಂಧಿಯಾಗಿದ್ದನು.
Kannada Holy Bible: Easy-to-Read Version. All rights reserved. © 1997 Bible League International