Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 18-22

ಕುಂಬಾರ ಮತ್ತು ಜೇಡಿಮಣ್ಣು

18 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನೀನು ಕುಂಬಾರನ ಮನೆಗೆ ಹೋಗು. ನಾನು ಕುಂಬಾರನ ಮನೆಯಲ್ಲಿಯೇ ನಿನಗೆ ಸಂದೇಶವನ್ನು ಕೊಡುತ್ತೇನೆ.”

ನಾನು ಕುಂಬಾರನ ಮನೆಗೆ ಹೋದೆನು. ಅವನು ಜೇಡಿಮಣ್ಣನ್ನು ಉಪಯೋಗಿಸಿ ಚಕ್ರದಿಂದ ಕೆಲಸ ಮಾಡುವದನ್ನು ನಾನು ಕಂಡೆನು. ಅವನು ಜೇಡಿಮಣ್ಣಿನಿಂದ ಒಂದು ಮಡಕೆಯನ್ನು ಮಾಡುತ್ತಿದ್ದನು. ಆ ಮಡಕೆಯಲ್ಲಿ ಯಾವುದೋ ಒಂದು ದೋಷವಿತ್ತು. ಆದ್ದರಿಂದ ಆ ಕುಂಬಾರನು ಪುನಃ ಆ ಜೇಡಿಮಣ್ಣನ್ನು ಬಳಸಿ ಮತ್ತೊಂದು ಮಡಕೆಯನ್ನು ಮಾಡಿದನು. ಮಡಕೆಗೆ ತಾನು ಬಯಸಿದ ಆಕಾರವನ್ನು ಕೊಡಲು ತನ್ನ ಕೈಗಳನ್ನು ಉಪಯೋಗಿಸಿದನು.

ಆಗ ನನಗೆ ಯೆಹೋವನಿಂದ ಈ ಸಂದೇಶ ಬಂದಿತು: “ಇಸ್ರೇಲ್ ಮನೆತನದವರೇ, ನಾನು ನಿಮಗೆ ಹೀಗೆಯೇ ಮಾಡಲು ಸಾಧ್ಯವೆಂಬುದನ್ನು ನೀವು ಬಲ್ಲಿರಿ. ನೀವು ಕುಂಬಾರನ ಕೈಯಲ್ಲಿದ್ದ ಜೇಡಿಮಣ್ಣಿನಂತಿದ್ದೀರಿ. ನಾನು ಆ ಕುಂಬಾರನಂತಿದ್ದೇನೆ. ಒಮ್ಮೆ ನಾನು ಒಂದು ಜನಾಂಗವನ್ನಾಗಲಿ ಅಥವಾ ರಾಜ್ಯವನ್ನಾಗಲಿ ಕುರಿತು ಮಾತನಾಡುವಾಗ ಆ ಜನಾಂಗವನ್ನು ನಾನು ಖಂಡಿಸುವೆನೆಂದು ಮತ್ತು ಆ ಜನಾಂಗವನ್ನು ನಾನು ನಾಶಪಡಿಸುವೆನೆಂದು ಹೇಳಬಹುದು. ಆದರೆ ಆ ಜನಾಂಗದ ಜನರು ತಮ್ಮ ಮನಸ್ಸನ್ನು ಮತ್ತು ಜೀವನವನ್ನು ಪರಿವರ್ತಿಸಿಕೊಳ್ಳಬಹುದು. ಆ ಜನಾಂಗದ ಜನರು ಮಾಡುವ ದುಷ್ಕೃತ್ಯಗಳನ್ನು ನಿಲ್ಲಿಸಬಹುದು. ಆಗ ನಾನು ನನ್ನ ವಿಚಾರವನ್ನು ಬದಲಾಯಿಸಿ, ಆ ಜನಾಂಗವನ್ನು ನಾಶಪಡಿಸಬೇಕೆಂದು ಮಾಡಿದ ನನ್ನ ಮುಂಚಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರದಿರಬಹುದು. ಇನ್ನೊಮ್ಮೆ ಒಂದು ಜನಾಂಗದ ಬಗ್ಗೆ ಹೇಳುವಾಗ ಆ ಜನಾಂಗವನ್ನು ನಾನು ಅಭಿವೃದ್ಧಿಗೆ ತರುತ್ತೇನೆ, ಅದನ್ನು ನೆಟ್ಟು ಕಟ್ಟುತ್ತೇನೆ ಎಂದು ಹೇಳಬಹುದು. 10 ಆದರೆ ಆ ಜನಾಂಗವು ನನ್ನ ಆಜ್ಞಾಪಾಲನೆಯನ್ನು ಮಾಡದೆ ದುಷ್ಕೃತ್ಯಗಳಲ್ಲಿ ತೊಡಗಿದರೆ ಅದನ್ನು ನೋಡಿ ಆ ಜನಾಂಗಕ್ಕೆ ನಾನು ಮಾಡಬೇಕೆಂದಿದ್ದ ಒಳಿತಿನ ಬಗ್ಗೆ ಮತ್ತೊಮ್ಮೆ ವಿಚಾರ ಮಾಡಬಹುದು.

11 “ಯೆರೆಮೀಯನೇ, ಯೆಹೂದದ ಜನರಿಗೆ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಜನರಿಗೆ ಯೆಹೋವನು ಹೀಗೆನ್ನುವನು: ‘ಈಗಲೇ ನಾನು ನಿಮಗೋಸ್ಕರ ತೊಂದರೆಗಳನ್ನು ಎಬ್ಬಿಸುತ್ತೇನೆ. ನಿಮ್ಮ ವಿರುದ್ಧ ಯೋಜನೆಗಳನ್ನು ಹಾಕುತ್ತಿದ್ದೇನೆ. ಆದ್ದರಿಂದ ನೀವು ಮಾಡುತ್ತಿರುವ ದುಷ್ಕೃತ್ಯಗಳನ್ನು ನಿಲ್ಲಿಸಬೇಕು. ಪ್ರತಿಯೊಬ್ಬನು ಪರಿವರ್ತನೆ ಹೊಂದಿ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರಾರಂಭಿಸಬೇಕು’ ಎಂದು ಹೇಳು. 12 ಆದರೆ ಯೆಹೂದದ ಜನರು, ‘ಪ್ರಯತ್ನ ಮಾಡುವದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಮನಸ್ಸಿಗೆ ಬಂದಂತೆ ನಾವು ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ದುಷ್ಟ ಮತ್ತು ಮೊಂಡುಮನಸ್ಸು ಹೇಳಿದಂತೆ ನಡೆಯುವೆವು’ ಎಂಬುದಾಗಿ ಉತ್ತರಿಸುವರು” ಎಂದನು.

13 ಯೆಹೋವನು ಹೇಳುವದನ್ನು ಆಲಿಸಿರಿ:

“ಬೇರೆ ಜನಾಂಗದ ಜನರಿಗೆ ಈ ಪ್ರಶ್ನೆಯನ್ನು ಕೇಳಿರಿ,
    ‘ಇಸ್ರೇಲ್ ಮಾಡಿದಂಥ ದುಷ್ಕೃತ್ಯಗಳನ್ನು ಬೇರೆ ಯಾರಾದರೂ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ?’
    ಇಸ್ರೇಲ್ ದೇಶವು ದೇವರ ವಧುವಿನಂತಿದೆ.
14 ಲೆಬನೋನಿನ ಪರ್ವತಗಳ ಮೇಲಿನ ಹಿಮವು ಇಳಿಜಾರಿನ ಬಂಡೆಯಿಂದ ಎಂದಾದರೂ ಕರಗುವುದೇ?
    ಬಹುದೂರದಲ್ಲಿ ಹುಟ್ಟಿ ಹರಿದುಬರುವ ತೊರೆಗಳು ಎಂದಾದರೂ ಹರಿಯದೆ ನಿಂತುಹೋಗುವುದೇ?[a]
15 ಆದರೆ ನನ್ನ ಜನರು ನನ್ನನ್ನು ಮರೆತಿದ್ದಾರೆ.
    ಅವರು ನಿಷ್ಪ್ರಯೋಜಕವಾದ ವಿಗ್ರಹಗಳಿಗೆ ನೈವೇದ್ಯ ಮಾಡುತ್ತಾರೆ.
ನನ್ನ ಜನರು ತಾವು ಮಾಡುವ ಕೆಲಸಗಳಲ್ಲಿ ಮುಗ್ಗರಿಸುತ್ತಾರೆ.
    ಅವರು ತಮ್ಮ ಪೂರ್ವಿಕರ ಹಳೆಯ ಹಾದಿಯಲ್ಲಿಯೇ ಮುಗ್ಗರಿಸುತ್ತಾರೆ.
ನನ್ನ ಜನರು ಒಳ್ಳೆಯ ರಾಜಬೀದಿಯ ಮೇಲೆ ನನ್ನನ್ನು ಹಿಂಬಾಲಿಸುವದನ್ನು
    ತೊರೆದು ಹಾಳಾದ ಹಾದಿಯನ್ನು ಹಿಡಿಯುತ್ತಾರೆ.
16 ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು.
    ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು.
    ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.
17 ಪೂರ್ವದಿಂದ ಬರುವ ಗಾಳಿಯಂತೆ
    ಯೆಹೂದದ ಜನರನ್ನು ಅವರ ವೈರಿಗಳ ಎದುರಿನಲ್ಲಿ ಚದರಿಸಿಬಿಡುವೆನು.
ನಾನು ಅವರನ್ನು ನಾಶಮಾಡುವೆನು.
ಆ ಸಮಯದಲ್ಲಿ ಅವರಿಗೆ ಸಹಾಯಮಾಡಲು ನಾನು ಬರುವದಿಲ್ಲ.
    ಇಲ್ಲ! ನಾನು ಬಿಟ್ಟುಹೋಗುವುದನ್ನು ಅವರು ನೋಡುವರು.”

ಯೆರೆಮೀಯನ ನಾಲ್ಕನೇ ದೂರು

18 ಆಗ ಯೆರೆಮೀಯನ ವೈರಿಗಳು ಹೀಗೆಂದರು: “ಬನ್ನಿ, ನಾವು ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಯಾಜಕನಿಂದ ಧರ್ಮೋಪದೇಶವು ತಪ್ಪುವದಿಲ್ಲ, ಇದು ಖಂಡಿತ. ಜ್ಞಾನಿಗಳಿಂದ ಮಂತ್ರಾಲೋಚನೆಯು ಇದ್ದೇ ಇರುತ್ತದೆ. ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದು. ಆದ್ದರಿಂದ ಅವನ ಬಗ್ಗೆ ಸುಳ್ಳು ಹೇಳಿ ನಾಶಮಾಡೋಣ. ಅವನು ಹೇಳುವ ಯಾವುದಕ್ಕೂ ನಾವು ಗಮನಕೊಡಬೇಕಾಗಿಲ್ಲ.”

19 ಯೆಹೋವನೇ, ನನ್ನ ಮಾತನ್ನು ಆಲಿಸು,
    ನನ್ನ ವಾದವನ್ನು ಆಲಿಸಿ ಯಾರು ಹೇಳುವುದು ಸರಿ ಎನ್ನುವುದನ್ನು ನಿರ್ಣಯಿಸು.
20 ನಾನು ಯೆಹೂದದ ಜನರಿಗೆ ಒಳ್ಳೆಯದನ್ನು ಮಾಡಿದೆನು.
    ಆದರೆ ಅವರೀಗ ನನಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ.
    ಈಗ ಅವರು ನನ್ನನ್ನು ಕೊಲ್ಲುವುದಕ್ಕಾಗಿ ಒಂದು ಗುಂಡಿಯನ್ನು ತೋಡಿದ್ದಾರೆ.
ಯೆಹೋವನೇ, ನಾನು ಮಾಡಿದ್ದು ನಿನ್ನ ಜ್ಞಾಪಕದಲ್ಲಿದೆಯೇ?
    ನಾನು ನಿನ್ನ ಎದುರಿಗೆ ನಿಂತುಕೊಂಡು ಈ ಜನರಿಗೆ ಒಳ್ಳೆಯದನ್ನು ಮಾಡೆಂದೂ
    ಅವರ ಮೇಲೆ ಕೋಪಗೊಳ್ಳಬಾರದೆಂದೂ ನಿನ್ನಲ್ಲಿ ಕೇಳಿಕೊಂಡೆ.
21 ಆದ್ದರಿಂದ ಈಗ ಅವರ ಮಕ್ಕಳು ಕ್ಷಾಮಪೀಡಿತರಾಗಿ ಉಪವಾಸಬೀಳುವಂತೆ ಮಾಡು.
    ಅವರ ಶತ್ರುಗಳು ಅವರನ್ನು ಖಡ್ಗದಿಂದ ಸೋಲಿಸುವಂತೆ ಮಾಡು.
ಅವರ ಹೆಂಡತಿಯರು ಮಕ್ಕಳನ್ನು ಕಳೆದುಕೊಳ್ಳಲಿ ಮತ್ತು ವಿಧವೆಯರಾಗಲಿ.
    ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗದಿಂದ ಹತರಾಗಲಿ.
22 ಅವರ ಮನೆಗಳಲ್ಲಿ ರೋಧನದ ಧ್ವನಿ ಬರಲಿ.
    ನೀನು ಫಕ್ಕನೆ ಅವರ ಮುಂದೆ ಶತ್ರುವನ್ನು ತಂದು ನಿಲ್ಲಿಸಿದಾಗ ಅವರು ಅಳುವಂತಾಗಲಿ.
ನನ್ನ ವೈರಿಗಳು ನನ್ನನ್ನು ಬಲೆಯಲ್ಲಿ ಸಿಕ್ಕಿಸಬೇಕೆಂದು ಪ್ರಯತ್ನ ಮಾಡಿದ್ದಾರೆ.
    ನಾನು ಸಿಕ್ಕಿಹಾಕಿಕೊಳ್ಳುವಂಥ ಮತ್ತು ನನ್ನ ಕಣ್ಣಿಗೆ ಕಾಣದ ಗುಪ್ತವಾದ ಬಲೆಗಳನ್ನು ಅವರು ಹಾಕಿದ್ದಾರೆ.
23 ಯೆಹೋವನೇ, ನನ್ನನ್ನು ಕೊಲ್ಲಲು ಅವರು ಹಾಕಿದ ಯೋಜನೆಗಳನ್ನೆಲ್ಲ ನೀನು ಬಲ್ಲೆ.
    ಅವರ ಅಪರಾಧಗಳನ್ನು ಮನ್ನಿಸಬೇಡ.
ಅವರ ಪಾಪಗಳನ್ನು ಅಳಿಸಬೇಡ.
    ನನ್ನ ವೈರಿಗಳನ್ನು ನಾಶಪಡಿಸು, ನೀನು ಕೋಪದಲ್ಲಿದ್ದಾಗ ಆ ಜನರನ್ನು ಶಿಕ್ಷಿಸು.

ಮುರಿದ ಮಣ್ಣಿನ ಕೊಡ

19 ಯೆಹೋವನು ನನಗೆ ಹೀಗೆ ಹೇಳಿದನು: “ಯೆರೆಮೀಯನೇ, ಒಬ್ಬ ಕುಂಬಾರನ ಹತ್ತಿರ ಹೋಗಿ ಅವನಿಂದ ಒಂದು ಮಣ್ಣಿನ ಕೊಡವನ್ನು ಕೊಂಡುಕೊಂಡು ಬೋಕಿಯ ದ್ವಾರದ[b] ಸಮೀಪದಲ್ಲಿರುವ ಬೆನ್‌ಹಿನ್ನೊಮ್ ತಗ್ಗಿಗೆ ಹೋಗು. ನಿನ್ನ ಸಂಗಡ ಜನರ ಹಿರಿಯರಲ್ಲಿ ಕೆಲವರನ್ನೂ ಯಾಜಕರ ಹಿರಿಯರಲ್ಲಿ ಕೆಲವರನ್ನೂ ಕರೆದುಕೊಂಡು ಹೋಗು. ನಾನು ನಿನಗೆ ಹೇಳುವುದನ್ನು ನೀನು ಅಲ್ಲಿ ಅವರಿಗೆ ಹೇಳು. ನಿನ್ನ ಜೊತೆಯಲ್ಲಿದ್ದ ಜನರಿಗೆ ಹೇಳು, ‘ಯೆಹೂದದ ರಾಜನೇ, ಜೆರುಸಲೇಮಿನ ಜನರೇ, ಯೆಹೋವನ ಈ ಸಂದೇಶವನ್ನು ಕೇಳಿರಿ. ಇಸ್ರೇಲರ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆ ಹೇಳುತ್ತಾನೆ: ನಾನು ಈ ಸ್ಥಳಕ್ಕೆ ಒಂದು ಭಯಂಕರವಾದ ಕೇಡನ್ನು ಉಂಟುಮಾಡುವೆನು. ಅದರ ಬಗ್ಗೆ ಕೇಳಿದ ಪ್ರತಿಯೊಬ್ಬ ವ್ಯಕ್ತಿಯು ವಿಸ್ಮಯಪಡುವನು ಮತ್ತು ಭಯಪಡುವನು. ಯೆಹೂದದ ಜನರು ನನ್ನ ಅನುಸರಣೆಯನ್ನು ಬಿಟ್ಟಿದ್ದರಿಂದ ನಾನು ಹೀಗೆ ಮಾಡುವೆನು. ಇದನ್ನು ಅವರು ಅನ್ಯದೇವರುಗಳ ಸ್ಥಳವನ್ನಾಗಿ ಮಾಡಿದ್ದಾರೆ. ಯೆಹೂದದ ಜನರು ಈ ಸ್ಥಳದಲ್ಲಿ ಅನ್ಯದೇವರುಗಳಿಗಾಗಿ ಧೂಪವನ್ನು ಹಾಕಿದ್ದಾರೆ. ಬಹಳ ಹಿಂದೆ ಈ ಜನರು ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಅವರ ಹಿರಿಯರೂ ಆ ದೇವರುಗಳನ್ನು ಪೂಜಿಸುತ್ತಿರಲಿಲ್ಲ. ಇವುಗಳು ಅನ್ಯದೇಶದ ಹೊಸ ದೇವರುಗಳು. ಯೆಹೂದದ ರಾಜರು ಈ ಸ್ಥಳವನ್ನು ಮುಗ್ಧಮಕ್ಕಳ ರಕ್ತದಿಂದ ತುಂಬಿದರು. ಯೆಹೂದದ ರಾಜರು ಬಾಳ್ ದೇವರಿಗಾಗಿ ಉನ್ನತವಾದ ಸ್ಥಳಗಳನ್ನು ಕಟ್ಟಿಸಿದರು. ಅವರು ಆ ಸ್ಥಳಗಳಲ್ಲಿ ತಮ್ಮ ಗಂಡುಮಕ್ಕಳನ್ನು ಹೋಮಮಾಡಿದರು. ಅವರು ಬಾಳ್ ದೇವರಿಗೆ ತಮ್ಮ ಗಂಡುಮಕ್ಕಳನ್ನು ಆಹುತಿಕೊಟ್ಟರು. ನಾನು ಹಾಗೆ ಮಾಡಲು ಅವರಿಗೆ ಹೇಳಿರಲಿಲ್ಲ. ನಿಮ್ಮ ಗಂಡುಮಕ್ಕಳನ್ನು ಆಹುತಿಯಾಗಿ ಕೊಡಿ ಎಂದು ನಿಮಗೆ ಹೇಳಲಿಲ್ಲ. ಅಂಥ ವಿಚಾರ ನನ್ನ ಮನಸ್ಸಿನಲ್ಲಿ ಬರಲೇ ಇಲ್ಲ. ಈಗ, ಬೆನ್‌ಹಿನ್ನೊಮೀನ ಕಣಿವೆಯಲ್ಲಿದ್ದ ಈ ಸ್ಥಳವನ್ನು ಜನರು “ತೋಫೆತ್” ಎಂದು ಕರೆಯುತ್ತಾರೆ. ಆದರೆ ಜನರು ಇದನ್ನು “ಕೊಲೆಯ ಕಣಿವೆ” ಎಂದು ಕರೆಯುವ ದಿನಗಳು ಬರುತ್ತಿವೆ ಎಂದು ನಾನು ನಿಮಗೆ ಮುನ್ನೆಚ್ಚರಿಕೆಯನ್ನು ಕೊಡುತ್ತೇನೆ. ಇದು ಯೆಹೋವನ ನುಡಿ. ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು. ನಾನು ಈ ನಗರವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ಜೆರುಸಲೇಮಿನಿಂದ ಹಾದುಹೋಗುವಾಗ ಜನರು ಸಿಳ್ಳುಹಾಕಿ ತಲೆಯಾಡಿಸಿ ಹೋಗುವರು. ನಗರವು ಹಾಳಾಗಿರುವುದನ್ನು ಕಂಡು ಅವರು ಬೆರಗಾಗುವರು. ಶತ್ರುವು ನಗರದ ಸುತ್ತಲೂ ತನ್ನ ಸೈನ್ಯವನ್ನು ತರುವನು. ಜನರು ಆಹಾರವನ್ನು ಶೇಖರಿಸಲು ಹೊರಗೆ ಹೋಗದಂತೆ ಆ ಸೈನ್ಯವು ತಡೆಯುವದು. ನಗರದಲ್ಲಿದ್ದ ಜನರು ಉಪವಾಸ ಬೀಳುವರು. ಅವರು ಹಸಿವು ತಾಳಲಾರದೆ ತಮ್ಮ ಮಕ್ಕಳನ್ನೇ ತಿನ್ನುವರು. ಆಮೇಲೆ ಅವರು ಒಬ್ಬರನ್ನೊಬ್ಬರು ತಿನ್ನಲು ಪ್ರಾರಂಭಿಸುವರು.’

10 “ಯೆರೆಮೀಯನೇ, ನೀನು ಜನರಿಗೆ ಆ ವಿಷಯಗಳನ್ನು ಹೇಳು. ಅವರು ಗಮನವಿಟ್ಟು ಕೇಳುತ್ತಿರುವಾಗ ಆ ಮಣ್ಣಿನ ಕೊಡವನ್ನು ಒಡೆದುಹಾಕಿ 11 ಹೀಗೆ ಹೇಳು: ‘ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ಈ ಮಣ್ಣಿನ ಕೊಡವನ್ನು ಒಡೆದುಹಾಕಿದಂತೆ ನಾನು ಯೆಹೂದ ಜನಾಂಗವನ್ನು ಮತ್ತು ಜೆರುಸಲೇಮ್ ನಗರವನ್ನು ಒಡೆದುಹಾಕುವೆನು. ಈ ಕೊಡವನ್ನು ಪುನಃ ಜೋಡಿಸಲು ಸಾಧ್ಯವಿಲ್ಲ. ಯೆಹೂದ ಜನಾಂಗದ ಸ್ಥಿತಿಯೂ ಹೀಗೆಯೇ ಆಗುವುದು. ತೋಫೆತಿನಲ್ಲಿ ಸ್ಥಳವಿಲ್ಲದಂತಾಗುವವರೆಗೂ ಸತ್ತವರನ್ನು ಅಲ್ಲಿ ಹೂಳಲಾಗುವುದು. 12 ನಾನು ಈ ಜನರಿಗೂ ಮತ್ತು ಈ ಸ್ಥಳಕ್ಕೂ ಹೀಗೆ ಮಾಡುತ್ತೇನೆ. ನಾನು ಈ ನಗರವನ್ನು ತೋಫೆತಿನಂತೆ ಮಾಡುತ್ತೇನೆ’ ಇದು ಯೆಹೋವನ ನುಡಿ. 13 ‘ಜೆರುಸಲೇಮಿನ ಮನೆಗಳು ಈ ತೋಫೆತಿನಷ್ಟೆ “ಹೊಲಸಾಗುವವು.” ಯೆಹೂದದ ರಾಜರ ಅರಮನೆಗಳು ಈ ತೋಫೆತಿನಂತೆ ಹಾಳಾಗುವವು. ಏಕೆಂದರೆ ಜನರು ತಮ್ಮ ಮನೆಯ ಮಾಳಿಗೆಯ ಮೇಲೆ ಸುಳ್ಳುದೇವರುಗಳನ್ನು ಪೂಜಿಸಿದರು. ಅವರು ನಕ್ಷತ್ರಗಳನ್ನು ಪೂಜಿಸಿ ಅವುಗಳ ಗೌರವಾರ್ಥವಾಗಿ ಧೂಪಹಾಕಿದರು. ಅವರು ಸುಳ್ಳುದೇವರುಗಳಿಗೆ ಪಾನನೈವೇದ್ಯಗಳನ್ನು ಅರ್ಪಿಸಿದರು.’”

14 ಯೆರೆಮೀಯನು ಯೆಹೋವನ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಮೇಲೆ ಅಲ್ಲಿಂದ ಬಂದು ಪವಿತ್ರಾಲಯದ ಪ್ರಾಕಾರದಲ್ಲಿ ನಿಂತುಕೊಂಡು, ಎಲ್ಲಾ ಜನರನ್ನುದ್ದೇಶಿಸಿ ಹೀಗೆ ಹೇಳಿದನು: 15 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ‘ನಾನು ಜೆರುಸಲೇಮಿಗೂ ಅದರ ಸುತ್ತಲಿನ ಹಳ್ಳಿಗಳಿಗೂ ಅನೇಕ ವಿಪತ್ತುಗಳನ್ನು ಬರಮಾಡುವುದಾಗಿ ಹೇಳಿದೆನು. ಅವುಗಳನ್ನು ಬೇಗನೆ ಬರಮಾಡುತ್ತೇನೆ. ಏಕೆಂದರೆ ಜನರು ಬಹಳ ಮೊಂಡರಾಗಿದ್ದಾರೆ. ನಾನು ಹೇಳಿದ್ದನ್ನು ಅವರು ಕೇಳುವುದೂ ಇಲ್ಲ, ಅನುಸರಿಸುವುದೂ ಇಲ್ಲ.’”

ಯೆರೆಮೀಯ ಮತ್ತು ಪಷ್ಹೂರನು

20 ಪಷ್ಹೂರನೆಂಬುವನು ಯಾಜಕನಾಗಿದ್ದನು. ಅವನು ಯೆಹೋವನ ಆಲಯದ ಮುಖ್ಯಾಧಿಕಾರಿಯಾಗಿದ್ದನು. ಪಷ್ಹೂರನು ಇಮ್ಮೇರನ ಮಗನು. ಯೆಹೋವನ ಆಲಯದ ಪ್ರಾಕಾರದಲ್ಲಿ ಯೆರೆಮೀಯನು ಮಾಡಿದ ಪ್ರವಾದನೆಯನ್ನು ಪಷ್ಹೂರನು ಕೇಳಿದನು. ಅವನು ಪ್ರವಾದಿಯಾದ ಯೆರೆಮೀಯನನ್ನು ಹೊಡೆಯಿಸಿ ಯೆಹೋವನ ಆಲಯಕ್ಕೆ ಸೇರಿದ ಮೇಲಣ ಬೆನ್ಯಾಮೀನ್ ದ್ವಾರದಲ್ಲಿದ್ದ ಕೋಳಕ್ಕೆ ಹಾಕಿಸಿದನು. ಮರುದಿನ ಪಷ್ಹೂರನು ಯೆರೆಮೀಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆಮೀಯನು ಪಷ್ಹೂರನಿಗೆ ಹೀಗೆ ಹೇಳಿದನು: “ದೇವರು ನಿನ್ನನ್ನು ಪಷ್ಹೂರ್ ಎಂದು ಹೇಳುವದಿಲ್ಲ. ಈಗ ಯೆಹೋವನು ನಿನಗಿಟ್ಟ ಹೆಸರು, ‘ಪ್ರತಿಯೊಂದು ಭಾಗದಲ್ಲಿಯೂ ಭಯಂಕಾರಿ.’ ಅದು ನಿನ್ನ ಹೆಸರು. ಏಕೆಂದರೆ ಯೆಹೋವನು ಹೇಳುತ್ತಾನೆ: ‘ನಾನು ತಕ್ಷಣ ನಿನ್ನನ್ನು ನಿನಗೆ ಭಯಂಕಾರಿಯನ್ನಾಗಿ ಮಾಡುವೆನು. ನಾನು ನಿನ್ನನ್ನು ನಿನ್ನ ಎಲ್ಲಾ ಸ್ನೇಹಿತರಿಗೆ ಭಯಂಕಾರಿಯನ್ನಾಗಿ ಮಾಡುವೆನು. ವೈರಿಗಳು ಖಡ್ಗಗಳಿಂದ ನಿನ್ನ ಸ್ನೇಹಿತರನ್ನು ಕೊಲ್ಲುವುದನ್ನು ನೀನು ನೋಡುವೆ. ಯೆಹೂದದ ಎಲ್ಲಾ ಜನರನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುವೆನು. ಅವನು ಯೆಹೂದ್ಯರನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು; ಅವನ ಸೈನಿಕರು ಯೆಹೂದ್ಯರನ್ನು ತಮ್ಮ ಕತ್ತಿಗಳಿಂದ ಕೊಂದುಹಾಕುವರು. ಸಂಪತ್ತನ್ನು ಸಂಗ್ರಹಿಸಿ ಸಿರಿವಂತರಾಗಲು ಜೆರುಸಲೇಮಿನ ಜನರು ಬಹಳ ಕಷ್ಟಪಟ್ಟು ದುಡಿದರು. ಆದರೆ ನಾನು ಅದೆಲ್ಲವನ್ನು ಅವರ ವೈರಿಗಳಿಗೆ ಒಪ್ಪಿಸುವೆನು. ಜೆರುಸಲೇಮಿನ ರಾಜನ ಬಳಿ ಅನೇಕ ನಿಧಿನಿಕ್ಷೇಪಗಳಿವೆ. ಆದರೆ ನಾನು ಆ ನಿಧಿನಿಕ್ಷೇಪಗಳನ್ನೆಲ್ಲಾ ವೈರಿಗೆ ಒಪ್ಪಿಸುತ್ತೇನೆ. ವೈರಿಯು ಅವುಗಳನ್ನು ಬಾಬಿಲೋನ್ ದೇಶಕ್ಕೆ ತೆಗೆದುಕೊಂಡು ಹೋಗುವನು. ಪಷ್ಹೂರನೇ, ನಿನ್ನನ್ನೂ ನಿನ್ನ ಮನೆಯಲ್ಲಿರುವವರೆಲ್ಲರನ್ನೂ ಬಲವಂತವಾಗಿ ಬಾಬಿಲೋನ್ ದೇಶಕ್ಕೆ ಸೆರೆ ಒಯ್ಯಲಾಗುವುದು. ನೀನು ಬಾಬಿಲೋನ್‌ನಲ್ಲಿ ಮರಣಹೊಂದುವೆ; ನಿನ್ನನ್ನು ಆ ಪರದೇಶದಲ್ಲಿಯೇ ಹೂಳಲಾಗುವುದು. ನೀನು ನಿನ್ನ ಸ್ನೇಹಿತರಿಗೆ ಸುಳ್ಳುಬೋಧನೆಯನ್ನು ಮಾಡಿದೆ. ಹೀಗಾಗುವುದಿಲ್ಲವೆಂದು ನೀನು ಹೇಳಿದೆ. ಆದರೆ ನಿನ್ನೆಲ್ಲ ಸ್ನೇಹಿತರು ಸಹ ಸತ್ತು ಬಾಬಿಲೋನಿನಲ್ಲಿ ಹೂಳಲ್ಪಡುವರು.’”

ಯೆರೆಮೀಯನ ಐದನೆ ದೂರು

ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು,
    ನೀನು ನನಗಿಂತ ಬಲಿಷ್ಠನಾದುದರಿಂದ ಗೆದ್ದೆ.
ನಾನೊಂದು ತಮಾಷೆಯಾಗಿದ್ದೇನೆ.
    ಹಗಲೆಲ್ಲ ಜನರು ನನ್ನನ್ನು ಕಂಡು ನಗುತ್ತಾರೆ.
    ನನ್ನನ್ನು ಗೇಲಿ ಮಾಡುತ್ತಾರೆ.
ನಾನು ಮಾತನಾಡಿದಾಗಲೆಲ್ಲ ಕೂಗಿಕೂಗಿ ಹೇಳುತ್ತೇನೆ.
    ನಾನು ಯಾವಾಗಲೂ ಹಿಂಸೆ ಮತ್ತು ವಿನಾಶದ ಬಗ್ಗೆ ಕೂಗಿಕೊಳ್ಳುತ್ತೇನೆ.
    ಯೆಹೋವನಿಂದ ಬಂದ ಸಂದೇಶದ ಬಗ್ಗೆ ಜನರಿಗೆ ಹೇಳುತ್ತೇನೆ.
ಆದರೆ ಜನರು ಯಾವಾಗಲೂ ನನಗೆ ಅವಮಾನ ಮಾಡುತ್ತಾರೆ.
    ನನ್ನನ್ನು ಗೇಲಿ ಮಾಡುತ್ತಾರೆ.
ಒಮ್ಮೊಮ್ಮೆ ನನ್ನಷ್ಟಕ್ಕೆ ನಾನೇ ಹೇಳಿಕೊಳ್ಳುತ್ತೇನೆ,
“ನಾನು ಯೆಹೋವನನ್ನೇ ಮರೆತುಬಿಡುತ್ತೇನೆ.
    ಆತನ ಹೆಸರಿನಲ್ಲಿ ಇನ್ನೇನೂ ಮಾತನಾಡುವುದಿಲ್ಲ”
ಎಂದುಕೊಂಡರೆ ಆತನ ಸಂದೇಶವು ನನ್ನ ಅಂತರಾಳದಲ್ಲಿ ಉರಿಯುವ ಜ್ವಾಲೆಯಂತಾಗುತ್ತದೆ.
    ಅದು ಆಳಕ್ಕೆ ಇಳಿದು ನನ್ನ ಎಲುಬುಗಳನ್ನು ಸುಡುವಂತಾಗುತ್ತದೆ.
ಯೆಹೋವನ ಸಂದೇಶವನ್ನು ನನ್ನ ಅಂತರಾಳದಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನ ಮಾಡಿ ನಾನು ದಣಿಯುತ್ತೇನೆ.
    ಕೊನೆಗೆ ಅದನ್ನು ನನ್ನೊಳಗೆ ಇಟ್ಟುಕೊಳ್ಳಲು ಅಸಾಧ್ಯವಾಗುತ್ತದೆ.
10 ಅನೇಕ ಜನರು ನನ್ನ ವಿರುದ್ಧವಾಗಿ ಮೆಲುಧ್ವನಿಯಲ್ಲಿ ಮಾತನಾಡುವದು ನನ್ನ ಕಿವಿಗೆ ಬೀಳುತ್ತಿದೆ,
    ಅದು ನನ್ನನ್ನು ಭಯಗೊಳಿಸುತ್ತಿದೆ.
    ನನ್ನ ಸ್ನೇಹಿತರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ.
ನಾನು ಯಾವುದಾದರೂ ತಪ್ಪನ್ನು ಮಾಡಲಿ ಎಂದು ಜನರು ಹೊಂಚುಹಾಕಿ ಕಾದಿದ್ದಾರೆ.
    “ಅವನು ದುಷ್ಕೃತ್ಯವನ್ನು ಮಾಡಿದ್ದಾನೆಂದು ನಾವು ಸುಳ್ಳು ಹೇಳೋಣ.
    ಯೆರೆಮೀಯನನ್ನು ನಾವು ವಂಚಿಸಲು ಸಾಧ್ಯವಾಗಬಹುದು.
    ನಾವು ಅವನನ್ನು ಹಿಡಿದುಕೊಳ್ಳಬಹುದು.
    ಕೊನೆಗೆ ಅವನನ್ನು ತೊಲಗಿಸಬಹುದು.
    ನಾವು ಅವನನ್ನು ಹಿಡಿದು ಅವನ ಮೇಲೆ ನಮ್ಮ ಸೇಡನ್ನು ತೀರಿಸಿಕೊಳ್ಳೋಣ” ಎಂದು ಮಾತನಾಡುತ್ತಿದ್ದಾರೆ.
11 ಆದರೆ ಯೆಹೋವನು ನನ್ನೊಡನಿದ್ದಾನೆ.
    ಯೆಹೋವನು ಒಬ್ಬ ಶೂರ ಯೋಧನಂತಿದ್ದಾನೆ.
ಆದ್ದರಿಂದ ನನ್ನನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಜನರು ಬೀಳುತ್ತಾರೆ.
    ಅವರು ನನ್ನನ್ನು ಸೋಲಿಸಲಾರರು.
ಆ ಜನರು ಸೋತುಹೋಗುತ್ತಾರೆ.
    ಅವರಿಗೆ ಆಶಾಭಂಗವಾಗುತ್ತದೆ.
ಅವರಿಗೆ ನಾಚಿಕೆಯಾಗುತ್ತದೆ.
    ಅವರು ಆ ನಾಚಿಕೆಯನ್ನು ಎಂದೂ ಮರೆಯಲಾರರು.

12 ಸರ್ವಶಕ್ತನಾದ ಯೆಹೋವನೇ, ನೀನು ಒಳ್ಳೆಯವರನ್ನು ಪರೀಕ್ಷಿಸುವೆ.
    ನೀನು ಒಬ್ಬ ವ್ಯಕ್ತಿಯ ಹೃದಯವನ್ನು ಮತ್ತು ಬುದ್ಧಿಯನ್ನು ಆಳವಾಗಿ ಪರೀಕ್ಷಿಸಿನೋಡುವೆ.
ನಾನು ಅವರ ವಿರುದ್ಧ ನನ್ನ ಅಭಿಪ್ರಾಯಗಳನ್ನು ನಿನಗೆ ತಿಳಿಸಿದ್ದೇನೆ.
    ನೀನು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿರುವದನ್ನು ನನ್ನ ಕಣ್ಣುಗಳು ನೋಡಲಿ.
13 ಯೆಹೋವನನ್ನು ಕೀರ್ತಿಸಿರಿ, ಯೆಹೋವನನ್ನು ಸ್ತುತಿಸಿರಿ.
ಆತನು ಬಡಜನರ ಪ್ರಾಣಗಳನ್ನು ಉಳಿಸುತ್ತಾನೆ.
    ಆತನು ಅವರನ್ನು ದುಷ್ಟರ ದೌರ್ಜನ್ಯದಿಂದ ರಕ್ಷಿಸುತ್ತಾನೆ.

ಯೆರೆಮೀಯನ ಆರನೇ ದೂರು

14 ನಾನು ಹುಟ್ಟಿದ ದಿನವು ಶಾಪಗ್ರಸ್ತವಾಗಲಿ;
    ತಾಯಿಯು ನನ್ನನ್ನು ಹೆತ್ತ ದಿನವು ಶುಭವೆನಿಸಿಕೊಳ್ಳದಿರಲಿ.
15 “ನಿನಗೆ ಗಂಡುಮಗು ಹುಟ್ಟಿದೆ” ಎಂಬ ಸಮಾಚಾರವನ್ನು ನನ್ನ ತಂದೆಗೆ ತಿಳಿಸಿ
    ಅವನಿಗೆ ಅತ್ಯಾನಂದವನ್ನು ಉಂಟುಮಾಡಿದವನು ಶಪಿಸಲ್ಪಡಲಿ.
16 ಯೆಹೋವನು ಕನಿಕರಪಡದೆ
    ಕೆಡವಿಬಿಟ್ಟ ನಗರಗಳ ಗತಿಯು ಅವನಿಗೆ ಬರಲಿ.
ಬೆಳಿಗ್ಗೆ ಯುದ್ಧದ ಕೂಗಾಟವೂ,
    ಮಧ್ಯಾಹ್ನದಲ್ಲಿ ಯುದ್ಧದ ಕಿರುಚಾಟವೂ ಅವನ ಕಿವಿಗೆ ಬೀಳಲಿ.
17 ಯಾಕೆ ಆ ಮನುಷ್ಯನು
    ನಾನು ನನ್ನ ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಕೊಲ್ಲಲಿಲ್ಲ?
ಆಗ ಅವನು ನನ್ನನ್ನು ಕೊಂದಿದ್ದರೆ
    ನನ್ನ ತಾಯಿಯೇ ನನಗೆ ಗೋರಿಯಾಗುತ್ತಿದ್ದಳು.
    ನಾನೆಂದೂ ಹುಟ್ಟುತ್ತಲೇ ಇರಲಿಲ್ಲ.
18 ನಾನು ತಾಯಿಯ ಗರ್ಭದಿಂದ ಏಕೆ ಹೊರಬರಬೇಕಿತ್ತು?
    ನಾನು ಕಷ್ಟವನ್ನು ಮತ್ತು ದುಃಖವನ್ನು ಕಂಡಿರುವೆನಷ್ಟೇ.
    ನನ್ನ ಜೀವನವು ನಾಚಿಕೆಯಲ್ಲಿಯೇ ಕೊನೆಗೊಳ್ಳುವುದು.

ದೇವರು ರಾಜನಾದ ಚಿದ್ಕೀಯನ ಪ್ರಾರ್ಥನೆಯನ್ನು ತಿರಸ್ಕರಿಸಿದನು

21 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನಾದ ಯಾಜಕ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿದಾಗ ಈ ಸಂದೇಶ ಬಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನ್ನು ತಂದಿದ್ದರು. ಪಷ್ಹೂರ ಮತ್ತು ಚೆಫನ್ಯರು ಹೀಗೆಂದರು: “ನಮಗೋಸ್ಕರ ಯೆಹೋವನನ್ನು ಪ್ರಾರ್ಥಿಸಿ ಮುಂದೆ ಸಂಭವಿಸುವುದನ್ನು ವಿಚಾರಿಸು. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ನಮಗೆ ವಿರುದ್ಧವಾಗಿ ಯುದ್ಧಮಾಡುತ್ತಿರುವನು; ಆದ್ದರಿಂದ ಮುಂದೆ ಸಂಭವಿಸುವುದನ್ನು ನಾವು ತಿಳಿಯ ಬಯಸುತ್ತೇವೆ. ಮೊದಲಿನಂತೆ ಯೆಹೋವನು ನಮಗೋಸ್ಕರ ಅದ್ಭುತಗಳನ್ನೂ ಮಾಡಬಹುದು. ನೆಬೂಕದ್ನೆಚ್ಚರನು ನಮ್ಮ ಮೇಲೆ ಧಾಳಿ ಮಾಡುವುದನ್ನು ನಿಲ್ಲಿಸಿ ಹೊರಟುಹೋಗುವಂತೆ ಆತನು ಮಾಡಬಹುದು.”

ಆಗ ಯೆರೆಮೀಯನು ಪಷ್ಹೂರ ಮತ್ತು ಚೆಫನ್ಯರಿಗೆ ಹೀಗೆ ಉತ್ತರಕೊಟ್ಟನು: “ರಾಜನಾದ ಚಿದ್ಕೀಯನಿಗೆ ಹೇಳಿರಿ. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ನಿಮ್ಮ ಕೈಯಲ್ಲಿ ಯುದ್ಧದ ಆಯುಧಗಳಿವೆ. ಆ ಆಯುಧಗಳನ್ನು ನೀವು ನಿಮ್ಮ ರಕ್ಷಣೆಗಾಗಿಯೂ ಬಾಬಿಲೋನಿನ ರಾಜನ ವಿರುದ್ಧವಾಗಿಯೂ ಮತ್ತು ಬಾಬಿಲೋನಿನ ಜನರ ವಿರುದ್ಧವಾಗಿಯೂ ಬಳಸುತ್ತಿದ್ದೀರಿ. ಆದರೆ ನಾನು ಆ ಆಯುಧಗಳನ್ನು ವಿಫಲಗೊಳಿಸುತ್ತೇನೆ.

“‘ಬಾಬಿಲೋನಿನ ಸೈನ್ಯವು ನಗರದ ಸುತ್ತಲಿನ ಪೌಳಿಗೋಡೆಯ ಬಳಿಯಿದೆ. ತಕ್ಷಣವೇ ನಾನು ಆ ಸೈನ್ಯವನ್ನು ಜೆರುಸಲೇಮಿನ ಒಳಗಡೆ ತರುತ್ತೇನೆ. ಯೆಹೂದಿಗಳಾದ ನಿಮ್ಮ ವಿರುದ್ಧ ನಾನೇ ಕಾದಾಡುತ್ತೇನೆ. ನಾನು ನನ್ನ ಬಲಿಷ್ಠವಾದ ಕೈಗಳಿಂದ ನಿಮ್ಮ ವಿರುದ್ಧ ಹೋರಾಡುತ್ತೇನೆ. ನಿಮ್ಮ ಮೇಲೆ ನನಗೆ ಬಹಳ ಕೋಪ ಬಂದಿದೆ; ಅದಕ್ಕಾಗಿ ನನ್ನ ಬಲಿಷ್ಠವಾದ ತೋಳಿನಿಂದ ನಾನು ನಿಮ್ಮ ಸಂಗಡ ಯುದ್ಧ ಮಾಡುತ್ತೇನೆ. ನಾನು ನಿಮ್ಮ ವಿರುದ್ಧ ಬಹಳ ರಭಸದಿಂದ ಯುದ್ಧಮಾಡಿ ನನಗೆ ಎಷ್ಟು ಕೋಪ ಬಂದಿದೆ ಎಂಬುದನ್ನು ತೋರಿಸುತ್ತೇನೆ. ಜೆರುಸಲೇಮಿನಲ್ಲಿ ವಾಸಮಾಡುತ್ತಿರುವ ಜನರನ್ನು ನಾನು ಕೊಂದುಬಿಡುತ್ತೇನೆ. ನಾನು ಜನರನ್ನು ಮತ್ತು ಪ್ರಾಣಿಗಳನ್ನು ಕೊಲ್ಲುತ್ತೇನೆ. ಅವರುಗಳು ನಗರದಲ್ಲೆಲ್ಲಾ ಹರಡಿದ ಭಯಂಕರವಾದ ರೋಗದಿಂದ ಮಡಿಯುವರು.’” ಇದು ಯೆಹೋವನ ನುಡಿ. “‘ಇದಾದ ಮೇಲೆ ನಾನು ಯೆಹೂದದ ರಾಜನಾದ ಚಿದ್ಕೀಯನನ್ನು ಮತ್ತು ಅಧಿಪತಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುತ್ತೇನೆ. ಜೆರುಸಲೇಮಿನ ಕೆಲವು ಜನರು ಭಯಂಕರವಾದ ರೋಗದಿಂದ ಸಾಯುವುದಿಲ್ಲ; ಕೆಲವು ಜನರು ಖಡ್ಗಗಳಿಗೆ ಆಹುತಿಯಾಗುವದಿಲ್ಲ; ಕೆಲವರು ಹಸಿವಿನಿಂದ ಸಾಯುವುದಿಲ್ಲ. ಅಂಥವರನ್ನು ನಾನು ನೆಬೂಕದ್ನೆಚ್ಚರನಿಗೆ ಕೊಡುತ್ತೇನೆ. ಯೆಹೂದದ ವೈರಿಯು ಗೆಲ್ಲುವಂತೆ ನಾನು ಮಾಡುತ್ತೇನೆ. ನೆಬೂಕದ್ನೆಚ್ಚರನ ಸೈನಿಕರು ಯೆಹೂದ್ಯರನ್ನು ಕೊಲ್ಲಬಯಸುತ್ತಾರೆ. ಆದ್ದರಿಂದ ಯೆಹೂದ ಮತ್ತು ಜೆರುಸಲೇಮಿನ ಜನರು ಖಡ್ಗಗಳಿಗೆ ಬಲಿಯಾಗುವರು. ನೆಬೂಕದ್ನೆಚ್ಚರನು ಸ್ವಲ್ಪವೂ ದಯೆ ತೋರುವದಿಲ್ಲ. ಆ ಜನರ ಸಲುವಾಗಿ ಅವನು ಮರುಗುವದಿಲ್ಲ.’

“ಜೆರುಸಲೇಮಿನ ಜನರಿಗೆ ಇದನ್ನು ಸಹ ಹೇಳಿರಿ. ಯೆಹೋವನು ಹೀಗೆನ್ನುತ್ತಾನೆ, ‘ನಾನು ನಿಮಗೆ ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆ ಎಂಬುದನ್ನು ತಿಳಿದುಕೊಳ್ಳಿರಿ. ಜೆರುಸಲೇಮಿನಲ್ಲಿ ಉಳಿಯುವವನು ಮರಣಹೊಂದುವನು. ಆತನು ಖಡ್ಗದಿಂದಾಗಲಿ ಹಸಿವಿನಿಂದಾಗಲಿ ಭಯಂಕರವಾದ ರೋಗದಿಂದಾಗಲಿ ಮಡಿಯುವನು. ಆದರೆ ಜೆರುಸಲೇಮಿನಿಂದ ಹೊರಗೆ ಬಾಬಿಲೋನಿನ ಸೈನಿಕರಿಗೆ ಶರಣಾಗತನಾದವನು ಬದುಕುವನು. ಆ ಸೈನಿಕರು ನಗರವನ್ನು ಮುತ್ತಿದ್ದಾರೆ. ಯಾರೂ ನಗರದಲ್ಲಿ ಆಹಾರವನ್ನು ತರುವಂತಿಲ್ಲ. ಆದರೆ ನಗರವನ್ನು ಬಿಟ್ಟು ಹೊರಗೆ ಹೋದವರು ಬದುಕುವರು. 10 ಜೆರುಸಲೇಮ್ ನಗರಕ್ಕೆ ತೊಂದರೆಯನ್ನು ಉಂಟುಮಾಡಬೇಕೆಂದು ನಾನು ನಿಶ್ಚಯಿಸಿದ್ದೇನೆ. ನಾನು ಈ ನಗರಕ್ಕೆ ಸಹಾಯಮಾಡುವದಿಲ್ಲ.’” ಇದು ಯೆಹೋವನಿಂದ ಬಂದ ಸಂದೇಶ. “‘ಜೆರುಸಲೇಮ್ ನಗರವನ್ನು ನಾನು ಬಾಬಿಲೋನಿನ ರಾಜನಿಗೆ ಒಪ್ಪಿಸುತ್ತೇನೆ. ಅವನು ಅದನ್ನು ಬೆಂಕಿಯಿಂದ ಸುಟ್ಟುಹಾಕುತ್ತಾನೆ.’”

11 “ಯೆಹೂದದ ರಾಜಮನೆತನದವರಿಗೆ ಈ ವಿಷಯಗಳನ್ನು ತಿಳಿಸಿರಿ:
    ‘ಯೆಹೋವನ ಸಂದೇಶವನ್ನು ಕೇಳಿರಿ.
12 ದಾವೀದನ ಮನೆತನದವರೇ, ಯೆಹೋವನು ಹೀಗೆ ಹೇಳುತ್ತಾನೆ:
ನೀವು ಪ್ರತಿದಿನ ನಿಷ್ಪಕ್ಷಪಾತವಾಗಿ ನ್ಯಾಯನಿರ್ಣಯ ಮಾಡಬೇಕು.
    ಅಪರಾಧಿಗಳಿಂದ ಕಷ್ಟಕ್ಕೊಳಗಾದವರನ್ನು ರಕ್ಷಿಸಬೇಕು.
ನೀವು ಹಾಗೆ ಮಾಡದಿದ್ದರೆ
    ನನಗೆ ಬಹಳ ಕೋಪ ಬರುತ್ತದೆ.
ನನ್ನ ಕೋಪವು ಯಾರಿಂದಲೂ ನಂದಿಸಲಾಗದ ಬೆಂಕಿಯಂತಿದೆ.
    ನೀವು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಹೀಗಾಗುತ್ತದೆ.’

13 “ಜೆರುಸಲೇಮ್ ನಗರವೇ, ನಾನು ನಿನ್ನ ವಿರುದ್ಧವಾಗಿದ್ದೇನೆ.
    ನೀನು ಬೆಟ್ಟದ ಮೇಲೆ ಕುಳಿತಿರುವೆ,
    ನೀನು ರಾಣಿಯಂತೆ ಈ ಕಣಿವೆಯ ಮೇಲೆ ಕುಳಿತಿರುವೆ.
‘ನಮ್ಮ ಮೇಲೆ ಯಾರೂ ಧಾಳಿ ಮಾಡಲಾರರು,
    ನಮ್ಮ ಭದ್ರವಾದ ನಗರವನ್ನು ಯಾರೂ ಪ್ರವೇಶ ಮಾಡಲಾರರು’
    ಎಂದು ಜೆರುಸಲೇಮಿನ ನಿವಾಸಿಗಳಾದ ನೀವು ಹೇಳುವಿರಿ.”
ಆದರೆ ಯೆಹೋವನ ಸಂದೇಶವನ್ನು ಕೇಳಿರಿ.

14 “ನೀವು ತಕ್ಕ ಶಿಕ್ಷೆಯನ್ನು ಅನುಭವಿಸುವಿರಿ.
ನಾನು ನಿಮ್ಮ ಅರಣ್ಯಗಳಲ್ಲಿ ಬೆಂಕಿಯನ್ನು ಹೊತ್ತಿಸುತ್ತೇನೆ.
    ಆ ಬೆಂಕಿಯು ನಿಮ್ಮ ಸುತ್ತಮುತ್ತಲಿನ ಪ್ರತಿಯೊಂದು ವಸ್ತುವನ್ನು ಸುಟ್ಟುಹಾಕುತ್ತದೆ.”

ದುಷ್ಟರಾಜರ ವಿರುದ್ಧ ನ್ಯಾಯನಿರ್ಣಯ

22 ಯೆಹೋವನು ಹೇಳಿದನು: “ಯೆರೆಮೀಯನೇ, ರಾಜನ ಅರಮನೆಗೆ ಹೋಗು. ಯೆಹೂದದ ರಾಜನ ಬಳಿಗೆ ಹೋಗಿ ಅಲ್ಲಿ ಈ ಸಂದೇಶವನ್ನು ಸಾರು. ‘ಯೆಹೂದದ ರಾಜನೇ, ಯೆಹೋವನಿಂದ ಬಂದ ಸಂದೇಶವನ್ನು ಕೇಳು. ನೀನು ದಾವೀದನ ಸಿಂಹಾಸನಾರೂಢನಾಗಿ ರಾಜ್ಯಭಾರ ಮಾಡುವೆ, ಅದಕ್ಕಾಗಿ ಕೇಳು. ರಾಜನೇ, ನೀನು ಮತ್ತು ನಿನ್ನ ಅಧಿಕಾರಿಗಳು ಚೆನ್ನಾಗಿ ಕೇಳಬೇಕು. ಜೆರುಸಲೇಮಿನ ದ್ವಾರಗಳ ಮೂಲಕ ಬರುವ ನಿನ್ನ ಜನರೆಲ್ಲರೂ ಯೆಹೋವನ ಸಂದೇಶವನ್ನು ಕೇಳಬೇಕು. ಯೆಹೋವನು ಅನ್ನುತ್ತಾನೆ, ನಿಮ್ಮ ಆಚರಣೆ ನೀತಿಬದ್ಧವಾಗಿಯೂ ನ್ಯಾಯಬದ್ಧವಾಗಿಯೂ ಇರಲಿ. ಸುಲಿಗೆಗೀಡಾದವರನ್ನು ದೋಚಿಕೊಂಡವನಿಂದ ರಕ್ಷಿಸಿರಿ. ಅನಾಥರನ್ನು ಮತ್ತು ವಿಧವೆಯರನ್ನು ಹಿಂಸಿಸಬೇಡಿ; ನಿರಪರಾಧಿಗಳನ್ನು ಕೊಲ್ಲಬೇಡಿ. ನೀವು ಈ ಆಜ್ಞೆಗಳನ್ನು ಪಾಲಿಸಿದರೆ ದಾವೀದನ ಸಿಂಹಾಸನಾರೂಢರಾದ ರಾಜರು ಈ ದ್ವಾರಗಳಿಂದ ಜೆರುಸಲೇಮ್ ನಗರವನ್ನು ಪ್ರವೇಶಿಸುವುದು ಮುಂದುವರೆಯುತ್ತದೆ. ಆ ರಾಜರು ತಮ್ಮ ಅಧಿಕಾರಿಗಳೊಂದಿಗೆ ಈ ದ್ವಾರಗಳಿಂದ ಬರುತ್ತಾರೆ. ಆ ಅರಸರು, ಅವರ ಅಧಿಕಾರಿಗಳು, ಅವರ ಜನರು, ರಥಗಳಲ್ಲಿ ಮತ್ತು ಕುದುರೆಗಳ ಮೇಲೆ ಕುಳಿತುಕೊಂಡು ಬರುವರು. ನೀವು ಈ ಆಜ್ಞೆಗಳನ್ನು ಪಾಲಿಸದಿದ್ದರೆ ರಾಜನ ಅರಮನೆಯನ್ನು ನಾಶಮಾಡಲಾಗುವುದು. ಅದು ಕಲ್ಲುಬಂಡೆಗಳ ರಾಶಿಯಾಗುವದೆಂದು ಯೆಹೋವನಾದ ನಾನು ಆಣೆಯಿಟ್ಟುಕೊಂಡು ಹೇಳುತ್ತೇನೆ’” ಎಂದು ಯೆಹೋವನು ನುಡಿದನು.

ಯೆಹೂದದ ರಾಜನು ವಾಸಮಾಡುವ ಅರಮನೆಯ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ:

“ಈ ಅರಮನೆಯು ಗಿಲ್ಯಾದಿನ ಅರಣ್ಯದಂತೆ,
    ಲೆಬನೋನಿನ ಪರ್ವತದಂತೆ ಎತ್ತರವಾಗಿದೆ.
ಆದರೆ ನಾನು ಅದನ್ನು ನಿಜವಾಗಿ ಮರುಭೂಮಿಯಂತೆ ಮಾಡುತ್ತೇನೆ.
    ಈ ಅರಮನೆಯು ಹಾಳುಬಿದ್ದ ನಗರದಂತಾಗುವುದು.
ಅರಮನೆಯನ್ನು ಹಾಳುಮಾಡಲು ನಾನು ಜನರನ್ನು ಕಳುಹಿಸುತ್ತೇನೆ.
    ಪ್ರತಿಯೊಬ್ಬನ ಹತ್ತಿರ ಆ ಮನೆಯನ್ನು ಹಾಳುಮಾಡಲು ಬೇಕಾಗುವ ಸಾಧನಗಳಿರುವವು.
ಆ ಜನರು ನಿನ್ನ ಸುಂದರವಾದ ಮತ್ತು ಗಟ್ಟಿಯಾದ ದೇವದಾರಿನ ತೊಲೆಗಳನ್ನು ಕಡಿದುಹಾಕುತ್ತಾರೆ.
    ಅವರು ಆ ತೊಲೆಗಳನ್ನು ಬೆಂಕಿಯಲ್ಲಿ ಎಸೆಯುತ್ತಾರೆ.

“ಅನೇಕ ಜನಾಂಗಗಳ ಜನರು ಈ ನಗರದಿಂದ ಹಾದುಹೋಗುವರು. ಅವರು, ‘ಜೆರುಸಲೇಮ್ ಒಂದು ಮಹಾನಗರವಾಗಿತ್ತು. ಯೆಹೋವನು ಜೆರುಸಲೇಮಿಗೆ ಇಂಥ ಭಯಂಕರ ಸ್ಥಿತಿಯನ್ನು ಏಕೆ ತಂದನು?’ ಎಂದು ಒಬ್ಬರನ್ನೊಬ್ಬರು ಕೇಳುವರು. ಆ ಪ್ರಶ್ನೆಗೆ ಈ ಉತ್ತರ: ‘ಯೆಹೂದದ ಜನರು ತಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಅನುಸರಣೆಯನ್ನು ಬಿಟ್ಟುಬಿಟ್ಟರು. ಅವರು ಬೇರೆ ದೇವರುಗಳ ಸೇವೆಯನ್ನು ಮಾಡಿ ಪೂಜಿಸಿದರು.’”

ರಾಜನಾದ ಯೋಹಾಜನ ಬಗ್ಗೆ ನ್ಯಾಯನಿರ್ಣಯ

10 ಸತ್ತ ರಾಜನ ಬಗ್ಗೆ ಅಳಬೇಡಿ.
    ಅವನಿಗೋಸ್ಕರ ಅಳಬೇಡಿ.
ಆದರೆ ಇಲ್ಲಿಂದ ಹೋಗುತ್ತಿರುವ
    ರಾಜನ ಬಗ್ಗೆ ಗಟ್ಟಿಯಾಗಿ ರೋಧಿಸಿರಿ.
ಅವನು ಮತ್ತೆ ಇಲ್ಲಿಗೆ ಬರುವದಿಲ್ಲ. ಆದ್ದರಿಂದ ಅವನಿಗೋಸ್ಕರ ರೋಧಿಸಿರಿ.
    ಯೋಹಾಜನು ತನ್ನ ಜನ್ಮಭೂಮಿಯನ್ನು ಮತ್ತೆಂದಿಗೂ ನೋಡುವುದಿಲ್ಲ.

11 ಯೋಷೀಯನ ಮಗನಾದ ಯೋಹಾಜನ (ಶಲ್ಲೂಮನ) ಬಗ್ಗೆ ಯೆಹೋವನು ಹೀಗೆಂದನು: (ಶಲ್ಲೂಮನು ತನ್ನ ತಂದೆಯಾದ ಯೋಷೀಯನ ಮರಣಾನಂತರ ರಾಜನಾದನು.) “ಯೋಹಾಜನು ಜೆರುಸಲೇಮಿನಿಂದ ಹೊರಟುಹೋದನು. ಅವನು ಮತ್ತೆಂದಿಗೂ ಜೆರುಸಲೇಮಿಗೆ ಹಿಂದಿರುಗುವುದಿಲ್ಲ. 12 ಈಜಿಪ್ಟಿನವರು ಅವನನ್ನು ತೆಗೆದುಕೊಂಡು ಹೋದ ಸ್ಥಳದಲ್ಲಿಯೇ ಸತ್ತುಹೋಗುವನು. ಅವನು ಮತ್ತೊಮ್ಮೆ ಈ ಪ್ರದೇಶವನ್ನು ನೋಡಲಾರನು.”

ರಾಜನಾದ ಯೆಹೋಯಾಕೀಮನ ಬಗ್ಗೆ ನ್ಯಾಯನಿರ್ಣಯ

13 “ರಾಜನಾದ ಯೆಹೋಯಾಕೀಮನಿಗೆ ದುರ್ಗತಿ ಉಂಟಾಗುವುದು.
    ಅವನು ತನ್ನ ಅರಮನೆಯನ್ನು ಕಟ್ಟಿಸುವದಕ್ಕೋಸ್ಕರ ದುರ್ನೀತಿಯನ್ನು ಅವಲಂಭಿಸಿದ್ದಾನೆ.
    ಮಹಡಿಯ ಮೇಲೆ ಕೋಣೆಗಳನ್ನು ಕಟ್ಟಿಸುವದಕ್ಕಾಗಿ ಅವನು ತನ್ನ ಜನರನ್ನು ವಂಚಿಸುತ್ತಿದ್ದಾನೆ.
    ಅವನು ತನ್ನ ಜನರಿಂದ ಬಿಟ್ಟಿಕೆಲಸವನ್ನು ಮಾಡಿಸುತ್ತಿದ್ದಾನೆ.
    ಅವರಿಂದ ಕೆಲಸ ಮಾಡಿಸಿಕೊಂಡು ಅವರಿಗೆ ಕೂಲಿಯನ್ನೇ ಕೊಡುವದಿಲ್ಲ.

14 “ಯೆಹೋಯಾಕೀಮನು,
    ‘ನಾನೇ ಒಂದು ದೊಡ್ಡ ಅರಮನೆಯನ್ನು ಕಟ್ಟಿಸುತ್ತೇನೆ.
    ನಾನು ಮಹಡಿಯ ಮೇಲೆ ದೊಡ್ಡದೊಡ್ಡ ಕೋಣೆಗಳನ್ನು ಕಟ್ಟಿಸುತ್ತೇನೆ’ ಎಂದು ಹೇಳುತ್ತಾನೆ.
ಅವನು ದೊಡ್ಡದೊಡ್ಡ ಕಿಟಕಿಗಳುಳ್ಳ ಮನೆಯನ್ನು ಕಟ್ಟಿಸುತ್ತಾನೆ.
    ದೇವದಾರಿನ ಹಲಗೆಗಳನ್ನು ಹೊದಿಸುತ್ತಾನೆ.
    ಅದಕ್ಕೆ ಕೆಂಪು ಬಣ್ಣವನ್ನು ಬಳಿಯುತ್ತಾನೆ.

15 “ಯೆಹೋಯಾಕೀಮನೇ, ನಿನ್ನ ಮನೆಯಲ್ಲಿ ದೇವದಾರಿನ ಮರವನ್ನು
    ಬಹಳವಾಗಿ ಇಟ್ಟುಕೊಳ್ಳುವದರಿಂದ ನೀನು ದೊಡ್ಡ ರಾಜನಾಗುವದಿಲ್ಲ.
ನಿನ್ನ ತಂದೆಯಾದ ಯೋಷೀಯನು ಅನ್ನಪಾನೀಯಗಳಿಂದ ತೃಪ್ತಿಪಟ್ಟುಕೊಳ್ಳುತ್ತಿದ್ದನು.
    ಅವನು ನೀತಿ ಮತ್ತು ನ್ಯಾಯ ಸಮ್ಮತವಾದದ್ದನ್ನು ಮಾಡುತ್ತಿದ್ದನು.
    ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
16 ಯೋಷೀಯನು ದೀನದರಿದ್ರರಿಗೆ ಸಹಾಯ ಮಾಡುತ್ತಿದ್ದನು.
    ಯೋಷೀಯನು ಹಾಗೆ ಮಾಡಿದ್ದರಿಂದ ಎಲ್ಲವೂ ಸರಿಹೋಯಿತು.
ಯೆಹೋಯಾಕೀಮನೇ, ‘ದೇವರನ್ನು ಅರಿತುಕೊಳ್ಳುವುದು ಎಂದರೇನು?’
ನ್ಯಾಯ ಮತ್ತು ನೀತಿಯಿಂದ ನಡೆದುಕೊಳ್ಳುವುದು,
    ನನ್ನನ್ನು ಅರಿತುಕೊಳ್ಳಲು ಬೇಕಾದದ್ದು ಅದೇ.
ಇದು ಯೆಹೋವನಿಂದ ಬಂದ ಸಂದೇಶ:

17 “ಯೆಹೋಯಾಕೀಮನೇ, ನಿನಗೆ ಲಾಭದಾಯಕವಾದದ್ದು ಮಾತ್ರ ನಿನ್ನ ಕಣ್ಣಿಗೆ ಕಾಣುತ್ತದೆ.
    ನೀನು ಯಾವಾಗಲೂ ನಿನಗೆ ಹೆಚ್ಚು ಲಾಭ ಬರುವದನ್ನು ನೋಡುವೆ.
ನೀನು ನಿರಪರಾಧಿಗಳನ್ನು ಕೊಲ್ಲಲು ಸಿದ್ಧನಾಗಿರುವೆ.
    ನೀನು ಬೇರೆಯವರ ವಸ್ತುಗಳನ್ನು ಅಪಹರಿಸಲು ಸಿದ್ಧನಾಗಿರುವೆ.”

18 ಯೋಷೀಯನ ಮಗನಾದ ಯೆಹೋಯಾಕೀಮನಿಗೆ ಯೆಹೋವನು ಹೀಗೆ ಹೇಳುವನು,
    “ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಗೋಳಾಡುವದಿಲ್ಲ.
ಅವರು ಒಬ್ಬರಿಗೊಬ್ಬರು,
    ‘ನನ್ನ ಸೋದರನೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ,
    ನನ್ನ ಸೋದರಿಯೇ, ಯೆಹೋಯಾಕೀಮನಿಗೋಸ್ಕರ ನನಗೆ ತುಂಬ ದುಃಖವಾಗಿದೆ’ ಎಂದು ಹೇಳುವದಿಲ್ಲ.
ಯೆಹೂದದ ಜನರು ಯೆಹೋಯಾಕೀಮನಿಗೋಸ್ಕರ ಅಳುವದಿಲ್ಲ.
ಅವರು ಅವನ ಬಗ್ಗೆ
    ‘ಒಡೆಯನೇ, ನನ್ನ ರಾಜನೇ,
    ನನಗೆ ತುಂಬಾ ದುಃಖವಾಗಿದೆ’ ಎಂದು ಹೇಳುವದಿಲ್ಲ.
19 ಜೆರುಸಲೇಮಿನ ಜನರು ಯೆಹೋಯಾಕೀಮನನ್ನು ಒಂದು ಕತ್ತೆಯನ್ನು ಹೂಳಿದಂತೆ ಹೂಳಿಬಿಡುತ್ತಾರೆ.
    ಅವರು ಅವನ ಶವವನ್ನು ದೂರ ಎಳೆದುಕೊಂಡು ಹೋಗುತ್ತಾರೆ.
    ಅವನ ಶವವನ್ನು ಜೆರುಸಲೇಮಿನ ದ್ವಾರಗಳ ಹೊರಗೆ ಎಸೆದುಬಿಡುತ್ತಾರೆ.

20 “ಯೆಹೂದವೇ, ಲೆಬನೋನ್ ಪರ್ವತವನ್ನು ಹತ್ತಿ ಕೂಗಿಕೊ,
    ನಿನ್ನ ಧ್ವನಿಯು ಬಾಷಾನ್ ಪರ್ವತಗಳಲ್ಲಿ ಕೇಳಿಸಲಿ.
ಅಬಾರೀಮಿನಲ್ಲಿ ಅರಚಿಕೊ;
    ಏಕೆಂದರೆ ನಿನ್ನ ‘ಪ್ರಿಯತಮರೆಲ್ಲರನ್ನೂ’ ನಾಶಮಾಡಲಾಗುವುದು.

21 “ಯೆಹೂದವೇ, ನೀನು ಸುರಕ್ಷಿತಳಾಗಿರುವೆ ಎಂದು ನೀನು ಭಾವಿಸಿಕೊಂಡಿರುವೆ.
    ಆದರೆ ನಾನು ನಿನಗೆ ಎಚ್ಚರಿಕೆಯನ್ನು ಕೊಟ್ಟೆ.
ಹೌದು, ನಾನೇ ಎಚ್ಚರಿಕೆಯನ್ನು ಕೊಟ್ಟೆ,
    ಆದರೆ ನೀನು ಅದನ್ನು ಕಿವಿಗೆ ಹಾಕಿಕೊಳ್ಳಲು ಒಪ್ಪಲಿಲ್ಲ.
ನಿನ್ನ ಬಾಲ್ಯದಿಂದಲೂ ನೀನು ಹೀಗೆಯೇ ಮಾಡಿದೆ.
ಯೆಹೂದವೇ, ನಿನ್ನ ಬಾಲ್ಯದಿಂದಲೂ
    ನೀನು ನನ್ನ ಆಜ್ಞೆಯನ್ನು ಪಾಲಿಸಲಿಲ್ಲ.
22 ಯೆಹೂದವೇ, ನನ್ನ ದಂಡನೆಯು ಒಂದು ಬಿರುಗಾಳಿಯಂತೆ ಬರುವುದು.
    ಅದು ನಿನ್ನ ಎಲ್ಲಾ ಕುರುಬರನ್ನು (ನಾಯಕರನ್ನು) ಹಾರಿಸಿಕೊಂಡು ಹೋಗುವುದು.
ಯಾವುದಾದರೂ ಬೇರೆ ಜನಾಂಗ ನಿನಗೆ ಸಹಾಯಮಾಡಬಹುದೆಂದು ನೀನು ಭಾವಿಸಿಕೊಂಡಿರುವೆ.
ಆದರೆ ಆ ಜನಾಂಗಗಳನ್ನೂ ಸೋಲಿಸಲಾಗುವುದು.
    ಆಗ ನಿನಗೆ ನಿಜವಾಗಿಯೂ ಆಶಾಭಂಗವಾಗುವುದು.
    ನೀನು ಮಾಡಿದ ಎಲ್ಲಾ ದುಷ್ಕೃತ್ಯಗಳಿಗಾಗಿ ನೀನು ನಾಚಿಕೆಪಡುವೆ.

23 “ರಾಜನೇ, ಬೆಟ್ಟದ ಮೇಲೆ ದೇವದಾರು ಮರದಿಂದ ಮಾಡಿದ ನಿನ್ನ ಮನೆಯಲ್ಲಿ ನೀನು ವಾಸಿಸುವೆ.
    ಆ ಮನೆಯು ಲೆಬನೋನಿನ ಮರದ ತೋಪಿನಂತಿದೆ.
ನೀನು ಎತ್ತರವಾದ ಪರ್ವತ ಪ್ರದೇಶದಲ್ಲಿದ್ದ
    ನಿನ್ನ ವಿಶಾಲವಾದ ಮನೆಯಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿದುಕೊಂಡಿರುವೆ.
ಆದರೆ ನಿನಗೆ ದಂಡನೆಯಾದಾಗ ನೀನು ನರಳುವೆ.
    ಪ್ರಸವವೇದನೆಯಂಥ ನೋವನ್ನು ನೀನು ಅನುಭವಿಸುವೆ.”

ರಾಜನಾದ ಯೆಹೋಯಾಚೀನನ ಬಗ್ಗೆ ನ್ಯಾಯನಿರ್ಣಯ

24 ಯೆಹೋವನು ಹೀಗೆನ್ನುತ್ತಾನೆ: “ಯೆಹೋಯಾಕೀಮನ ಮಗನೂ ಯೆಹೂದದ ರಾಜನೂ ಆಗಿರುವ ಯೆಹೋಯಾಚೀನನೇ, ನನ್ನ ಜೀವದಾಣೆಯಾಗಿಯೂ ನಿನಗೆ ಹೀಗೆ ಮಾಡುವೆನು. ನೀನು ನನ್ನ ಬಲಗೈಯ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುವೆನು. 25 ಯೆಹೋಯಾಚೀನನೇ, ನಾನು ನಿನಗೆ ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನ ಮತ್ತು ಕಸ್ದೀಯರ ಕೈಗೆ ಕೊಟ್ಟುಬಿಡುವೆನು. ನೀನು ಹೆದರಿಕೊಂಡಿರುವುದು ಆ ಜನರಿಗೇ. ಆ ಜನರು ನಿನ್ನನ್ನು ಕೊಲ್ಲಬಯಸುತ್ತಾರೆ. 26 ನಾನು ನಿನ್ನನ್ನೂ ನಿನ್ನ ತಾಯಿಯನ್ನೂ ನಿಮ್ಮಿಬ್ಬರ ಜನ್ಮಸ್ಥಳವಲ್ಲದ ಬೇರೆ ದೇಶದಲ್ಲಿ ಎಸೆದುಬಿಡುತ್ತೇನೆ. ನೀನು ಮತ್ತು ನಿನ್ನ ತಾಯಿ ಆ ದೇಶದಲ್ಲಿ ಸತ್ತುಹೋಗುವಿರಿ. 27 ಯೆಹೋಯಾಚೀನನೇ, ನೀನು ನಿನ್ನ ದೇಶಕ್ಕೆ ಹಿಂದಿರುಗಬೇಕೆಂದು ಅಪೇಕ್ಷಿಸಿದರೂ ನಿನಗೆ ಬರಲು ಸಾಧ್ಯವಾಗದು.”

28 ಯೆಹೋಯಾಚೀನನು ಎಸೆಯಲ್ಪಟ್ಟ ಒಡೆದ ಮಡಕೆಯಂತಿದ್ದಾನೆ.
    ಅವನು ಯಾರಿಗೂ ಬೇಡವಾಗದ ಮಡಕೆಯಂತಿದ್ದಾನೆ.
ಯೆಹೋಯಾಚೀನನು ಮತ್ತು ಅವನ ಮಕ್ಕಳು ಏಕೆ ಹೊರಗೆ ಎಸೆಯಲ್ಪಡುವರು?
    ಅವರು ಪರದೇಶಕ್ಕೆ ಏಕೆ ಒಯ್ಯಲ್ಪಡುವರು?
29 ದೇಶವೇ, ದೇಶವೇ, ಯೆಹೂದದ ದೇಶವೇ,
    ಯೆಹೋವನ ಸಂದೇಶವನ್ನು ಕೇಳು.
30 ಯೆಹೋವನು ಹೇಳುವುದೇನೆಂದರೆ: “ಯೆಹೋಯಾಚೀನನು ಮಕ್ಕಳಿಲ್ಲದವನೆಂದು ನೊಂದಾಯಿಸಿರಿ.
    ಯೆಹೋಯಾಚೀನನು ತನ್ನ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ.
    ಅವನ ಮಕ್ಕಳಲ್ಲಿ ಯಾರೂ ದಾವೀದನ ಸಿಂಹಾಸನವನ್ನೇರುವದಿಲ್ಲ.
ಅವನ ಮಕ್ಕಳಲ್ಲಿ ಯಾರೂ ಯೆಹೂದದಲ್ಲಿ ರಾಜ್ಯಭಾರ ಮಾಡುವುದಿಲ್ಲ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International