Beginning
ಯೆಹೋವನು ಮತ್ತು ವಿಗ್ರಹಗಳು
10 ಇಸ್ರೇಲ್ ವಂಶದವರೇ, ಯೆಹೋವನ ಮಾತುಗಳನ್ನು ಕೇಳಿರಿ. 2 ಯೆಹೋವನು ಹೀಗೆ ಹೇಳುತ್ತಾನೆ:
“ಬೇರೆ ಜನಾಂಗಗಳಂತೆ ಜೀವಿಸಬೇಡಿ.
ಆಕಾಶದಲ್ಲಿ ಕಾಣುವ ವಿಶೇಷ ಉತ್ಪಾತಗಳಿಗೆ ಹೆದರಬೇಡಿರಿ.
ಆಕಾಶದಲ್ಲಿ ಕಾಣುವ ಉತ್ಪಾತಗಳಿಗೆ ಬೇರೆ ಜನಾಂಗಗಳು ಹೆದರುತ್ತವೆ.
ಆದರೆ ನೀವು ಅವುಗಳಿಗೆ ಹೆದರಬಾರದು.
3 ಬೇರೆ ಜನರ ಸಂಪ್ರದಾಯಗಳು ನಿಷ್ಪ್ರಯೋಜಕವಾದವುಗಳಾಗಿವೆ.
ಅವರ ವಿಗ್ರಹಗಳು ಅರಣ್ಯದ ಮರವಲ್ಲದೆ ಮತ್ತೇನಲ್ಲ.
ಅವರ ವಿಗ್ರಹಗಳು ಬಡಗಿಯು ಉಳಿಯಿಂದ ಮಾಡಲ್ಪಟ್ಟವುಗಳು.
4 ಅವರು ತಮ್ಮ ವಿಗ್ರಹಗಳನ್ನು ಬೆಳ್ಳಿಬಂಗಾರಗಳಿಂದ ಸುಂದರವಾಗಿ ಅಲಂಕರಿಸುತ್ತಾರೆ.
ಸುತ್ತಿಗೆಯಿಂದ ಮೊಳೆ ಬಡಿದು ಅವುಗಳು ಬೀಳದಂತೆ ನಿಲ್ಲಿಸುತ್ತಾರೆ.
5 ಬೇರೆ ಜನಾಂಗದವರ ವಿಗ್ರಹಗಳು
ಸೌತೆಕಾಯಿ ತೋಟಗಳಲ್ಲಿ ನಿಲ್ಲಿಸುವ ಬೆದರುಕಂಬಗಳಂತಿವೆ.
ಅವರ ವಿಗ್ರಹಗಳು ಮಾತಾಡಲಾರವು;
ಅವು ನಡೆಯಲಾರವು. ಜನರು ಆ ವಿಗ್ರಹಗಳನ್ನು ಹೊತ್ತುಕೊಂಡು ಹೋಗಬೇಕು.
ಆದ್ದರಿಂದ ಆ ವಿಗ್ರಹಗಳಿಗೆ ಹೆದರಬೇಡಿರಿ.
ಅವು ನಿಮಗೆ ಕೇಡನ್ನೂ ಮಾಡಲಾರವು;
ಸಹಾಯವನ್ನೂ ಮಾಡಲಾರವು.”
6 ಯೆಹೋವನೇ, ನಿನ್ನತೆ ಯಾರೂ ಇಲ್ಲ.
ನೀನೇ ಮಹೋನ್ನತನು.
ನಿನ್ನ ಹೆಸರು ಮಹೋನ್ನತವಾದದ್ದು; ಸಾಮರ್ಥ್ಯಪೂರ್ಣವಾದದ್ದು.
7 ದೇವರೇ, ಪ್ರತಿಯೊಬ್ಬರೂ ನಿನ್ನನ್ನು ಗೌರವಿಸಬೇಕು.
ನೀನು ಪ್ರತಿಯೊಂದು ಜನಾಂಗಕ್ಕೂ ರಾಜನಾಗಿರುವೆ.
ಅವರೆಲ್ಲರೂ ನಿನಗೆ ಗೌರವ ತೋರಿಸಬೇಕು.
ಜನಾಂಗಗಳಲ್ಲಿ ಎಷ್ಟೋ ಮಂದಿ ಜ್ಞಾನಿಗಳಿದ್ದಾರೆ
ಆದರೆ ಅವರಲ್ಲಿ ಒಬ್ಬರೂ ನಿನ್ನಷ್ಟು ಜ್ಞಾನಿಗಳಲ್ಲ.
8 ಬೇರೆ ಜನಾಂಗಗಳ ಎಲ್ಲಾ ಜನರು ಮಂದಬುದ್ಧಿಯವರಾಗಿದ್ದಾರೆ ಮತ್ತು ಮೂರ್ಖರಾಗಿದ್ದಾರೆ;
ಅವರ ಉಪದೇಶಗಳು ನಿಷ್ಪ್ರಯೋಜಕವಾದ ಮರದ ಬೊಂಬೆಗಳಿಂದ ಬಂದವುಗಳಾಗಿವೆ.
9 ಅವರು ತಾರ್ಷೀಷ್ ನಗರದ ಬೆಳ್ಳಿಯಿಂದಲೂ
ಧಿಫಜ್ ನಗರದ ಬಂಗಾರದಿಂದಲೂ ತಮ್ಮ ವಿಗ್ರಹಗಳನ್ನು ಮಾಡುತ್ತಾರೆ.
ಆ ವಿಗ್ರಹಗಳನ್ನು ಬಡಗಿಗಳು, ಕಮ್ಮಾರರು ಮತ್ತು ಅಕ್ಕಸಾಲಿಗರು ಮಾಡುತ್ತಾರೆ;
ಅವರು ನೀಲಿ ಮತ್ತು ಕಂದು ಬಣ್ಣದ ಬಟ್ಟೆಗಳನ್ನು ಆ ವಿಗ್ರಹಗಳಿಗೆ ತೊಡಿಸುತ್ತಾರೆ.
ಅವು ಕುಶಲರ ಕೌಶಲ್ಯವಾಗಿವೆ.
10 ಯೆಹೋವನೊಬ್ಬನೇ ನಿಜವಾದ ದೇವರು.
ಆತನು ನಿಜವಾಗಿಯೂ ಜೀವಸ್ವರೂಪನಾಗಿದ್ದಾನೆ.
ಆತನು ಶಾಶ್ವತವಾಗಿ ಆಳುವ ರಾಜನಾಗಿದ್ದಾನೆ.
ಆತನು ಕೋಪಿಸಿಕೊಂಡಾಗ ಭೂಮಿಯು ನಡುಗುತ್ತದೆ.
ಜನಾಂಗಗಳು ಆತನ ಕೋಪವನ್ನು ತಡೆಯಲಾರವು.
11 ಯೆಹೋವನು ಹೇಳುತ್ತಾನೆ, “ಈ ಸಂದೇಶವನ್ನು ಆ ಜನರಿಗೆ ಹೇಳು:
‘ಆ ಸುಳ್ಳುದೇವರುಗಳು ಭೂಲೋಕವನ್ನೂ ಪರಲೋಕವನ್ನೂ ಸೃಷ್ಟಿ ಮಾಡಿಲ್ಲ.
ಆ ಸುಳ್ಳುದೇವರುಗಳನ್ನು ನಾಶಮಾಡಲಾಗುವುದು;
ಅವುಗಳು ಭೂಲೋಕದಿಂದಲೂ ಆಕಾಶದಿಂದಲೂ ಕಣ್ಮರೆಯಾಗುವವು.’”
12 ದೇವರು ತನ್ನ ಶಕ್ತಿಯಿಂದ ಭೂಲೋಕವನ್ನು ಸೃಷ್ಟಿಸಿದನು.
ದೇವರು ತನ್ನ ಜ್ಞಾನದಿಂದ ಈ ಜಗತ್ತನ್ನು ನಿರ್ಮಿಸಿದನು.
ತನ್ನ ವಿವೇಕದಿಂದ ದೇವರು
ಈ ಭೂಮಂಡಲದ ಮೇಲೆ ಆಕಾಶವನ್ನು ಹೊದಿಸಿದ್ದಾನೆ.
13 ಯೆಹೋವನು ಗರ್ಜಿಸುವ ಗುಡುಗನ್ನು ಬರಮಾಡುತ್ತಾನೆ.
ಆತನು ಆಕಾಶದಿಂದ ನೀರನ್ನು ಮಹಾಪ್ರವಾಹದಂತೆ ಸುರಿಸುತ್ತಾನೆ.
ಆತನು ಭೂಮಿಯ ಎಲ್ಲೆಡೆಯಿಂದ ಮೇಘಗಳು ಆಕಾಶಕ್ಕೆ ಏರಿಹೋಗುವಂತೆ ಮಾಡುತ್ತಾನೆ.
ಆತನು ಮಳೆಯೊಂದಿಗೆ ಸಿಡಿಲನ್ನು ಬೀಳಿಸುತ್ತಾನೆ.
ತನ್ನ ಭಂಡಾರದಿಂದ ಹೊರಗೆ ಗಾಳಿ ಬೀಸುವಂತೆ ಮಾಡುತ್ತಾನೆ.
14 ಜನರು ಬುದ್ಧಿಗೇಡಿಗಳಾಗಿದ್ದಾರೆ.
ತಾವು ಕೆತ್ತಿದ ವಿಗ್ರಹಗಳಿಂದ ಅಕ್ಕಸಾಲಿಗರು ಮೋಸಹೋಗುತ್ತಾರೆ.
ಆ ವಿಗ್ರಹಗಳು ಕೇವಲ ಸುಳ್ಳಿನ ಕಂತೆಗಳು.
ಅವುಗಳಲ್ಲಿ ಜೀವವಿಲ್ಲ.[a]
15 ಆ ವಿಗ್ರಹಗಳು ನಿಷ್ಪ್ರಯೋಜಕ ವಸ್ತುಗಳಾಗಿವೆ.
ಅವು ಅಪಹಾಸ್ಯಕ್ಕೆ ಯೋಗ್ಯವಾದವುಗಳಾಗಿವೆ.
ನ್ಯಾಯನಿರ್ಣಯದ ಸಮಯದಲ್ಲಿ
ಆ ವಿಗ್ರಹಗಳನ್ನು ನಾಶಪಡಿಸಲಾಗುವುದು.
16 ಆದರೆ ಯಾಕೋಬ್ಯರ ದೇವರು ಆ ವಿಗ್ರಹಗಳಂತಲ್ಲ.
ಆತನು ಸಮಸ್ತವನ್ನೂ ನಿರ್ಮಿಸಿದಾತನಾಗಿದ್ದಾನೆ.
ಇಸ್ರೇಲು ಆತನ ಸ್ವಾಸ್ತ್ಯವಾದ ಜನಾಂಗ.
“ಸರ್ವಶಕ್ತನಾದ ಯೆಹೋವ” ಎಂಬುದು ಆತನ ನಾಮಧೇಯ.
ವಿನಾಶವು ಬರುತ್ತಿದೆ
17 ನಿಮ್ಮದಾದ ಎಲ್ಲವನ್ನು ತೆಗೆದುಕೊಂಡು ಇಲ್ಲಿಂದ ಹೊರಡುವುದಕ್ಕೆ ಸಿದ್ಧರಾಗಿರಿ.
ಯೆಹೂದದ ಜನರಾದ ನೀವು ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ.
ವೈರಿಯು ನಗರವನ್ನು ಮುತ್ತಿದ್ದಾನೆ.
18 ಯೆಹೋವನು ಹೇಳುತ್ತಾನೆ:
“ಈ ಸಾರಿ ಯೆಹೂದದ ಜನರನ್ನು ನಾನು ದೇಶದಿಂದ ಹೊರಗೆ ತಳ್ಳುತ್ತೇನೆ.
ಅವರಿಗೆ ನಾನು ನೋವು ಮತ್ತು ಕಷ್ಟಗಳನ್ನು ತರುತ್ತೇನೆ.
ಅವರು ಪಾಠ ಕಲಿಯುವದಕ್ಕೋಸ್ಕರ ನಾನು ಹೀಗೆ ಮಾಡುತ್ತೇನೆ.”
19 ಅಯ್ಯೋ, ನನಗೆ (ಯೆರೆಮೀಯನಿಗೆ) ತುಂಬಾ ಪೆಟ್ಟಾಗಿದೆ.
ನನಗೆ ಗಾಯವಾಗಿದೆ; ನನಗೆ ವಾಸಿಯಾಗುತ್ತಿಲ್ಲ.
ಆದರೂ “ಇದು ನನ್ನ ವ್ಯಾಧಿ, ಇದನ್ನು ನಾನು ಅನುಭವಿಸಬೇಕು”
ಎಂದು ಸಮಾಧಾನ ತಂದುಕೊಂಡೆ.
20 ನನ್ನ ಗುಡಾರವು ಹಾಳಾಗಿದೆ.
ಗುಡಾರದ ಎಲ್ಲಾ ಹಗ್ಗಗಳು ಕಿತ್ತುಹೋಗಿವೆ.
ನನ್ನ ಮಕ್ಕಳು ನನ್ನನ್ನು ಬಿಟ್ಟು
ಹೊರಟುಹೋಗಿದ್ದಾರೆ.
ನನ್ನ ಗುಡಾರವನ್ನು ಹಾಕುವದಕ್ಕೆ ಯಾರೂ ಉಳಿದಿಲ್ಲ.
ನನಗಾಗಿ ಒಂದು ಆಸರೆಯನ್ನು ನಿರ್ಮಿಸುವದಕ್ಕೆ ಯಾರೂ ಉಳಿದಿಲ್ಲ.
21 ಕುರುಬರು ಬುದ್ಧಿಗೇಡಿಗಳಾಗಿದ್ದಾರೆ.
ಅವರು ಯೆಹೋವನನ್ನು ಹುಡುಕುವ ಪ್ರಯತ್ನ ಮಾಡುವುದಿಲ್ಲ.
ಅವರು ಜ್ಞಾನಿಗಳಲ್ಲ,
ಅವರ ಹಿಂಡುಗಳು ಚದರಿಹೋಗುವವು; ಕಳೆದುಹೋಗುವವು.
22 ಕೇಳಿರಿ, ಉತ್ತರ ದಿಕ್ಕಿನಿಂದ
ಬರುತ್ತಿರುವ ಮಹಾಧ್ವನಿಯನ್ನು!
ಇದು ಯೆಹೂದದ ನಗರಗಳನ್ನು ನಾಶಮಾಡುತ್ತದೆ.
ಯೆಹೂದವು ಒಂದು ಬರಿದಾದ ಮರಳುಗಾಡಾಗುವದು, ನರಿಗಳ ನಿವಾಸವಾಗುವುದು.
23 ಯೆಹೋವನೇ, ಮಾನವನ ಜೀವ ಅವನ ಸ್ವಾಧೀನದಲ್ಲಿಲ್ಲವೆಂಬುದು ನನಗೆ ಗೊತ್ತು.
ಜನರಿಗೆ ಸರಿಯಾದ ಜೀವನ ಕ್ರಮಗೊತ್ತಿಲ್ಲ.
24 ಯೆಹೋವನೇ, ನಮ್ಮನ್ನು ತಿದ್ದು,
ಆದರೆ ಕಠೋರನಾಗಬೇಡ,
ಕೋಪದಲ್ಲಿ ನಮ್ಮನ್ನು ದಂಡಿಸಬೇಡ.
25 ನಿನಗೆ ಕೋಪ ಬಂದಿದ್ದರೆ
ಬೇರೆ ಜನಾಂಗಗಳನ್ನು ಶಿಕ್ಷಿಸು.
ಅವರು ನಿನ್ನನ್ನು ಅರಿಯದವರಾಗಿದ್ದಾರೆ; ಗೌರವಿಸದವರಾಗಿದ್ದಾರೆ.
ಅವರು ನಿನ್ನನ್ನು ಆರಾಧಿಸುವುದಿಲ್ಲ.
ಆ ಜನಾಂಗಗಳು ಯಾಕೋಬ್ಯರ ವಂಶವನ್ನು ನಾಶಮಾಡಿದರು.
ಅವರು ಇಸ್ರೇಲನ್ನು ಸಂಪೂರ್ಣವಾಗಿ ನಾಶಮಾಡಿದರು.
ಅವರು ಇಸ್ರೇಲರ ವಾಸಸ್ಥಳವನ್ನು ನಾಶಮಾಡಿದರು.
ಒಡಂಬಡಿಕೆಯ ಉಲ್ಲಂಘನೆ
11 ಯೆರೆಮೀಯನಿಗೆ ಈ ಸಂದೇಶ ಯೆಹೋವನಿಂದ ಬಂದಿತು: 2 “ಯೆರೆಮೀಯನೇ, ಈ ಒಡಂಬಡಿಕೆಯ ವಚನಗಳನ್ನು ಕೇಳು, ಈ ವಿಷಯಗಳ ಬಗ್ಗೆ ಯೆಹೂದದ ಜನರಿಗೂ ಜೆರುಸಲೇಮಿನಲ್ಲಿರುವ ಜನರಿಗೂ ಹೇಳು. 3 ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ಈ ಒಡಂಬಡಿಕೆಯನ್ನು ಪಾಲಿಸದೆ ಇದ್ದವರಿಗೆ ಕೇಡಾಗುತ್ತದೆ.’ 4 ನಾನು ನಿಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಈಜಿಪ್ಟಿನಿಂದ ಅವರನ್ನು ಹೊರತಂದಾಗ ನಾನು ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡೆ. ಈಜಿಪ್ಟು ಅನೇಕ ಕಷ್ಟಗಳ ನಾಡಾಗಿತ್ತು. ಅದು ಕಬ್ಬಿಣವನ್ನು ಕರಗಿಸುವ ಉರಿಯುವ ಕುಲುಮೆಯಂತಿತ್ತು. ನಾನು ಅವರಿಗೆ, ‘ನನ್ನ ಆಜ್ಞಾಪಾಲನೆಯನ್ನು ಮಾಡಿರಿ ಮತ್ತು ನಾನು ಹೇಳಿದಂತೆ ಎಲ್ಲವನ್ನು ಮಾಡಿರಿ. ಆಗ ನೀವು ನನ್ನ ಭಕ್ತರಾಗುವಿರಿ. ನಾನು ನಿಮ್ಮ ದೇವರಾಗುವೆನು’ ಎಂದೆ.
5 “ನಾನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಲು ನಾನು ಇದೆಲ್ಲವನ್ನು ಮಾಡಿದೆ. ನಾನು ಅವರಿಗೆ ಫಲವತ್ತಾದ ಭೂಮಿಯನ್ನೂ ಹಾಲು ಮತ್ತು ಜೇನು ಹರಿಯುವ ಪ್ರದೇಶವನ್ನೂ ಕೊಡುವ ವಾಗ್ದಾನ ಮಾಡಿದ್ದೆ. ನೀವು ಈಗ ಈ ಪ್ರದೇಶದಲ್ಲಿ ವಾಸಮಾಡುತ್ತಿದ್ದೀರಿ.”
ನಾನು, “ಯೆಹೋವನೇ ನಿನ್ನ ಅಪ್ಪಣೆಯಂತಾಗಲಿ” ಎಂದು ಉತ್ತರಿಸಿದೆನು.
6 ಯೆಹೋವನು ನನಗೆ, “ಯೆರೆಮೀಯನೇ, ಯೆಹೂದದ ಪಟ್ಟಣಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಈ ಸಂದೇಶವನ್ನು ಸಾರು. ಈ ಒಡಂಬಡಿಕೆಯಲ್ಲಿನ ಮಾತುಗಳನ್ನು ಕೇಳಿ ಅನುಸರಿಸಿರಿ. 7 ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದಾಗ ಅವರಿಗೆ ಒಂದು ಮುನ್ನೆಚ್ಚರಿಕೆಯನ್ನು ಕೊಟ್ಟೆನು. ಇಂದಿನವರೆಗೂ ನಾನು ಮತ್ತೆಮತ್ತೆ ಅವರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟೆ. ನನ್ನ ಆಜ್ಞಾಪಾಲನೆ ಮಾಡಬೇಕೆಂದು ಅವರಿಗೆ ಹೇಳಿದೆ. 8 ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ದುಷ್ಟಹೃದಯ ಹೇಳಿದಂತೆ ಮಾಡಿದರು. ಆಜ್ಞಾಪಾಲನೆ ಮಾಡದಿದ್ದರೆ ಅವರಿಗೆ ಕೆಡುಕಾಗುವದೆಂದು ಒಡಂಬಡಿಕೆಯಲ್ಲಿ ಹೇಳಲಾಗಿದೆ. ಅದಕ್ಕಾಗಿ ನಾನು ಅವರಿಗೆ ಕೇಡುಂಟಾಗುವಂತೆ ಮಾಡಿದೆ, ಒಡಂಬಡಿಕೆಯನ್ನು ಪಾಲಿಸಬೇಕೆಂದು ನಾನು ಅವರಿಗೆ ಆಜ್ಞಾಪಿಸಿದೆ ಆದರೆ ಅವರು ಪಾಲಿಸಲಿಲ್ಲ.”
9 ಯೆಹೋವನು ನನಗೆ, “ಯೆರೆಮೀಯನೇ, ಯೆಹೂದದ ಜನರೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೂ ಒಳಸಂಚನ್ನು ಮಾಡಿದ್ದಾರೆ. 10 ಅವರು ತಮ್ಮ ಪೂರ್ವಿಕರು ಮಾಡಿದ ಪಾಪಗಳನ್ನೇ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನ ಸಂದೇಶವನ್ನು ಕೇಳಲು ಒಪ್ಪಲಿಲ್ಲ. ಅವರು ಬೇರೆ ದೇವರುಗಳನ್ನು ಅನುಸರಿಸಿ ಪೂಜಿಸಿದರು. ನಾನು ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಯೆಹೂದ ಮತ್ತು ಇಸ್ರೇಲ್ ವಂಶದವರು ಮೀರಿದ್ದಾರೆ.”
11 ಯೆಹೋವನು ಹೇಳುತ್ತಾನೆ, “ನಾನು ಶೀಘ್ರವಾಗಿ ಯೆಹೂದದ ಜನರಿಗೆ ಏನಾದರೊಂದು ಭಯಂಕರ ಅನಾಹುತ ಸಂಭವಿಸುವಂತೆ ಮಾಡುತ್ತೇನೆ. ಅವರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಅವರು ಪಶ್ಚಾತ್ತಾಪಪಡುವರು. ಅವರು ಸಹಾಯಕ್ಕಾಗಿ ನನಗೆ ಮೊರೆಯಿಡುವರು. ಆದರೆ ನಾನು ಅವರ ಮೊರೆಯನ್ನು ಕೇಳುವದಿಲ್ಲ. 12 ಯೆಹೂದದ ಪಟ್ಟಣಗಳ ಜನರು ಮತ್ತು ಜೆರುಸಲೇಮ್ ನಗರದ ಜನರು ತಮ್ಮ ವಿಗ್ರಹಗಳ ಹತ್ತಿರ ಹೋಗಿ ಸಹಾಯಕ್ಕಾಗಿ ಪ್ರಾರ್ಥಿಸುವರು. ಆ ವಿಗ್ರಹಗಳ ಮುಂದೆ ಅವರು ಧೂಪ ಹಾಕುವರು. ಆದರೆ ಕೇಡು ಬಂದಾಗ ಯೆಹೂದದ ಜನರಿಗೆ ಸಹಾಯಮಾಡಲು ಆ ವಿಗ್ರಹಗಳಿಗೆ ಸಾಧ್ಯವಾಗುವದಿಲ್ಲ.
13 “ಯೆಹೂದದ ಜನರೇ, ನೀವು ಅನೇಕ ವಿಗ್ರಹಗಳನ್ನು ಇಟ್ಟುಕೊಂಡಿದ್ದೀರಿ. ಯೆಹೂದದಲ್ಲಿ ಎಷ್ಟು ಪಟ್ಟಣಗಳಿವೆಯೋ, ಅಷ್ಟು ವಿಗ್ರಹಗಳಿವೆ. ತುಚ್ಛ ದೇವರಾದ ಬಾಳನನ್ನು ಪೂಜಿಸಲು ನೀವು ಅನೇಕ ಬಲಿಪೀಠಗಳನ್ನು ಕಟ್ಟಿಕೊಂಡಿದ್ದೀರಿ. ಜೆರುಸಲೇಮಿನಲ್ಲಿ ಎಷ್ಟು ಬೀದಿಗಳಿವೆಯೋ ಅಷ್ಟು ಬಲಿಪೀಠಗಳಿವೆ.
14 “ಯೆರೆಮೀಯನೇ, ಈ ಯೆಹೂದದ ಜನರಿಗಾಗಿ ಬೇಡಿಕೊಳ್ಳಬೇಡ. ಅವರಿಗಾಗಿ ಮೊರೆಯಿಡಬೇಡ. ಅವರಿಗಾಗಿ ಪ್ರಾರ್ಥನೆ ಮಾಡಿದರೂ ನಾನು ಕೇಳುವದಿಲ್ಲ. ಆ ಜನರು ತೊಂದರೆಯನ್ನು ಅನುಭವಿಸುವರು. ಆಗ ಅವರು ಸಹಾಯಕ್ಕಾಗಿ ನನಗೆ ಮೊರೆಯಿಡುವರು. ಆದರೆ ನಾನು ಕೇಳುವದಿಲ್ಲ.
15 “ನನ್ನ ಪ್ರೇಯಸಿ (ಯೆಹೂದ) ನನ್ನ ಪವಿತ್ರ ಆಲಯದಲ್ಲಿ ಏಕೆ ಇದ್ದಾಳೆ?
ಇಲ್ಲಿ ಇರಲು ಅವಳಿಗೆ ಅಧಿಕಾರವಿಲ್ಲ. ಅವಳು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾಳೆ.
ಯೆಹೂದವೇ, ಹರಕೆಗಳಿಂದ ಮತ್ತು ಪ್ರಾಣಿಗಳ ಬಲಿಯಿಂದ ನಿನ್ನ ವಿನಾಶವನ್ನು ತಡೆಯಬಹುದೆಂದು ತಿಳಿದುಕೊಂಡಿರುವಿಯಾ?
ನನಗೆ ಹೋಮವನ್ನು ಅರ್ಪಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿದುಕೊಂಡಿರುವಿಯಾ?”
16 “ಯೆಹೋವನು ನಿನಗೆ
‘ನೋಡಲು ಸುಂದರವಾದ ಹಸಿರು ಆಲೀವ್ ಮರ ಎಂದು’ ಹೆಸರು ಕೊಟ್ಟನು.
ಆದರೆ ಯೆಹೋವನು ಬಿರುಗಾಳಿ ಬೀಸಿ ಆ ಮರಕ್ಕೆ ಬೆಂಕಿ ಇಡುವನು.
ಆಗ ಅದರ ಕೊಂಬೆಗಳು ಸುಟ್ಟುಹೋಗುವವು.
17 ಸರ್ವಶಕ್ತನಾದ ಯೆಹೋವನು ನಿಮ್ಮನ್ನು ನೆಟ್ಟನು.
ನಿಮಗೆ ಕೇಡು ಬರುವದೆಂದು ಆತನು ಸಾರಿರುವನು.
ಏಕೆಂದರೆ ಇಸ್ರೇಲ್ ವಂಶವೂ
ಯೆಹೂದ ವಂಶವೂ ದುಷ್ಕೃತ್ಯಗಳನ್ನು ಮಾಡಿವೆ.
ಬಾಳನಿಗೆ ಹೋಮವನ್ನರ್ಪಿಸಿ
ನನಗೆ ಕೋಪ ಬರುವಂತೆ ಮಾಡಿವೆ.”
ಯೆರೆಮೀಯನ ವಿರುದ್ಧ ಒಳಸಂಚು
18 ಅನಾತೋತಿನ[b] ಜನರು ನನ್ನ ವಿರುದ್ಧ ಮಾಡುತ್ತಿರುವ ಕುತಂತ್ರವನ್ನೂ ಮಾಡುವ ಕೃತ್ಯಗಳನ್ನೂ ಯೆಹೋವನು ನನಗೆ ತೋರಿಸಿದನು. ಆದ್ದರಿಂದ ಅವರು ನನ್ನ ವಿರೋಧಿಗಳೆಂದು ನಾನು ತಿಳಿದುಕೊಂಡೆನು. 19 ಜನರು ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆಂಬುದನ್ನು ಯೆಹೋವನು ನನಗೆ ತೋರಿಸುವ ಮುಂಚೆ ನಾನು ವಧೆಗಾಗಿ ತೆಗೆದುಕೊಂಡು ಹೋದ ಸಾಧುಕುರಿಯಂತೆ ಇದ್ದೆನು. ಅವರು ನನ್ನ ವಿರೋಧಿಗಳೆಂದು ನಾನು ತಿಳಿದುಕೊಂಡಿರಲಿಲ್ಲ. ಅವರು ನನ್ನ ಬಗ್ಗೆ ಹೀಗೆ ಹೇಳುತ್ತಿದ್ದರು: “ಮರವನ್ನು ಮತ್ತು ಅದರ ಫಲಗಳನ್ನು ನಾಶಮಾಡೋಣ; ಅವನನ್ನು ಕೊಂದುಬಿಡೋಣ; ಜನರು ಅವನನ್ನು ಮರೆತುಬಿಡುವರು.” 20 ಆದರೆ ಯೆಹೋವನೇ, ನೀನು ನ್ಯಾಯಪರನಾದ ತೀರ್ಪುಗಾರ. ಜನರ ಹೃದಯವನ್ನು ಮತ್ತು ಬುದ್ಧಿಯನ್ನು ಹೇಗೆ ಪರೀಕ್ಷಿಸಬೇಕೆಂದು ನಿನಗೆ ಗೊತ್ತು. ನಾನು ನನ್ನ ವಾದವನ್ನು ನಿನ್ನ ಮುಂದೆ ಮಂಡಿಸುತ್ತೇನೆ ಮತ್ತು ನೀನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡು ಎಂದು ಅರಿಕೆ ಮಾಡಿಕೊಳ್ಳುತ್ತೇನೆ.
21 ಅನಾತೋತಿನ ಜನರು ಯೆರೆಮೀಯನನ್ನು ಕೊಲೆ ಮಾಡಬೇಕೆಂದು ಯೋಚಿಸುತ್ತಿದ್ದರು. ಆ ಜನರು ಯೆರೆಮೀಯನಿಗೆ, “ಯೆಹೋವನ ಹೆಸರಿನಿಂದ ನೀನು ಪ್ರವಾದಿಸಬೇಡ, ನೀನು ಹಾಗೆ ಮಾಡಿದರೆ ನಾವು ನಿನ್ನ ಕೊಲೆ ಮಾಡುವೆವು” ಎಂದರು. ಅನಾತೋತಿನ ಆ ಜನರ ಬಗ್ಗೆ ಯೆಹೋವನು ಒಂದು ನಿರ್ಣಯವನ್ನು ತೆಗೆದುಕೊಂಡನು. 22 ಸರ್ವಶಕ್ತನಾದ ಯೆಹೋವನು, “ನಾನು ಕೂಡಲೇ ಅನಾತೋತಿನ ಜನರನ್ನು ದಂಡಿಸುವೆನು. ಅವರ ಯುವಕರೆಲ್ಲ ಯುದ್ಧದಲ್ಲಿ ಮಡಿದು ಹೋಗುವರು. ಅವರ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಹಸಿವಿನಿಂದ ಸತ್ತುಹೋಗುವರು. 23 ಅನಾತೋತ್ ನಗರದಲ್ಲಿ ಒಬ್ಬನೂ ಉಳಿಯುವುದಿಲ್ಲ; ಯಾರೂ ಬದುಕುವದಿಲ್ಲ. ನಾನು ಅವರನ್ನು ದಂಡಿಸುತ್ತೇನೆ. ಅವರಿಗೆ ಏನಾದರೂ ಕೇಡಾಗುವಂತೆ ಮಾಡುತ್ತೇನೆ” ಎಂದು ಹೇಳಿದನು.
ದೇವರಲ್ಲಿ ಯೆರೆಮೀಯನ ದೂರು
12 ಯೆಹೋವನೇ, ನಾನು ನಿನ್ನ ಜೊತೆ ವಾದ ಮಾಡಿದರೆ,
ನೀನು ಯಾವಾಗಲೂ ನ್ಯಾಯಪರನೆಂಬುದು ರುಜುವಾತಾಗುತ್ತದೆ.
ಆದರೂ ನ್ಯಾಯಪೂರ್ಣವಲ್ಲದ ಕೆಲವು ವಿಷಯಗಳ ಬಗ್ಗೆ ನಾನು ನಿನ್ನನ್ನು ಕೇಳಬಯಸುತ್ತೇನೆ.
ದುಷ್ಟರು ಏಕೆ ಅಭಿವೃದ್ಧಿ ಹೊಂದುತ್ತಾರೆ?
ನಿನ್ನ ವಿಶ್ವಾಸಕ್ಕೆ ಪಾತ್ರರಾಗದವರು ನೆಮ್ಮದಿಯ ಜೀವನ ನಡೆಸಲು ಹೇಗೆ ಸಾಧ್ಯ?
2 ನೀನು ಆ ದುಷ್ಟರನ್ನು ಇಲ್ಲಿ ಇಟ್ಟಿರುವೆ. ಅವರು ಆಳವಾಗಿ ಬೇರುಬಿಟ್ಟ ಸಸಿಗಳಂತಿದ್ದಾರೆ,
ಅವು ಬೆಳೆಯುತ್ತವೆ, ಹಣ್ಣು ಬಿಡುತ್ತವೆ.
ನೀನು ಅವರಿಗೆ ತುಂಬ ಹತ್ತಿರದವನು ಮತ್ತು ಪ್ರೀತಿಪಾತ್ರನು ಎಂದು ಅವರು ಬಾಯಿಂದ ಹೇಳುತ್ತಾರೆ.
ಆದರೆ ಹೃದಯದಲ್ಲಿ ಅವರು ನಿನ್ನಿದ ತುಂಬಾ ದೂರದಲ್ಲಿದ್ದಾರೆ.
3 ಆದರೆ ಯೆಹೋವನೇ, ನಿನಗೆ ನನ್ನ ಹೃದಯದ ಬಗ್ಗೆ ತಿಳಿದಿದೆ,
ನೀನು ನನ್ನನ್ನು ನೋಡಿ ನನ್ನ ಮನಸ್ಸನ್ನು ಪರೀಕ್ಷಿಸುವೆ.
ವಧೆಗೆ ಎಳೆದುಕೊಂಡು ಹೋಗುವ ಕುರಿಗಳಂತೆ ಆ ಕೆಡುಕರನ್ನು ಎಳೆದುಹಾಕು.
ಅವರನ್ನು ವಧೆಯ ದಿನಕ್ಕೆಂದು ಆರಿಸು.
4 ಎಷ್ಟು ಕಾಲದವರೆಗೆ ಭೂಮಿಯು ಒಣಗಿರಬೇಕು?
ಎಷ್ಟು ಕಾಲದವರೆಗೆ ಹುಲ್ಲು ಒಣಗಿ ನಿರ್ಜೀವವಾಗಿರಬೇಕು?
ದೇಶದಲ್ಲಿ ಪಶುಪಕ್ಷಿಗಳು ಸತ್ತುಹೋಗಿವೆ.
ಇದು ದುಷ್ಟರ ತಪ್ಪಾದರೂ
ಆ ದುಷ್ಟರು,
“ನಮಗೆ ಏನಾಗುವದೆಂದು ನೋಡಲು
ಯೆರೆಮೀಯನು ಬಹಳ ದಿವಸ ಬದುಕಿರಲಾರ” ಎಂದು ಹೇಳುತ್ತಿದ್ದಾರೆ.
ಯೆರೆಮೀಯನಿಗೆ ದೇವರ ಉತ್ತರ
5 “ಯೆರೆಮೀಯನೇ, ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿರುವುದಾದರೆ,
ಕುದುರೆಗಳೊಂದಿಗೆ ಓಡಿ ಹೇಗೆ ಗೆಲ್ಲುವೆ?
ಸುರಕ್ಷಿತವಾದ ದೇಶದಲ್ಲಿ ನೀನು ದಣಿದುಕೊಂಡರೆ
ಜೋರ್ಡನ್ ನದಿ ದಡದ ಭಯಾನಕ ಮುಳ್ಳುಕಂಟಿಯ ಪ್ರದೇಶಕ್ಕೆ ಬಂದಾಗ ಏನು ಮಾಡುವೆ?
6 ಈ ಜನರು ನಿನ್ನ ಸ್ವಂತ ಸಹೋದರರಾಗಿದ್ದಾರೆ.
ನಿನ್ನ ಸ್ವಂತ ಕುಟುಂಬದ ಜನರೇ ನಿನ್ನ ವಿರುದ್ಧ ಕೂಗಾಡುತ್ತಾ ಸಂಚು ಮಾಡುತ್ತಿದ್ದಾರೆ.
ಅವರು ನಿನ್ನೊಡನೆ ಸ್ನೇಹಿತರಂತೆ
ಮಾತನಾಡಿದರೂ ಅವರನ್ನು ನಂಬಬೇಡ.”
ಯೆಹೋವನು ತನ್ನ ಜನರನ್ನೂ ಯೆಹೂದವನ್ನೂ ನಿರಾಕರಿಸುವನು
7 “ನಾನು (ಯೆಹೋವನು) ನನ್ನ ಮನೆಯನ್ನು ತ್ಯಜಿಸಿದ್ದೇನೆ.
ನಾನು ನನ್ನ ಆಸ್ತಿಯನ್ನು ಬಿಟ್ಟುಬಿಟ್ಟಿದ್ದೇನೆ.
ನಾನು ನನ್ನ ಪ್ರಿಯತಮೆಯನ್ನು (ಯೆಹೂದ) ಅವಳ ಶತ್ರುಗಳಿಗೆ ಕೊಟ್ಟಿದ್ದೇನೆ.
8 ನನ್ನ ‘ಸ್ವಾಸ್ತ್ಯವಾದ ಜನರು’ ನನಗೊಂದು ಅರಣ್ಯದ ಸಿಂಹದಂತಾಗಿದ್ದಾರೆ.
ಅವರು ನನ್ನನ್ನು ಕಂಡು ಗರ್ಜಿಸುತ್ತಾರೆ.
ಆದ್ದರಿಂದಲೇ ನಾನು ಅವರಿಗೆ ವಿಮುಖನಾದೆನು.
9 ನನ್ನ ‘ಸ್ವಾಸ್ತ್ಯವಾದ ಜನರು’ ಹದ್ದುಗಳಿಂದ
ಸುತ್ತುವರಿಯಲ್ಪಟ್ಟು ಸಾಯುತ್ತಿರುವ ಪ್ರಾಣಿಯಂತಾಗಿದ್ದಾರೆ.
ಆ ಪಕ್ಷಿಗಳು ಅವರ ಸುತ್ತಲೂ ಹಾರಾಡುತ್ತವೆ.
ಕಾಡುಪ್ರಾಣಿಗಳೇ, ಬನ್ನಿ, ಬನ್ನಿ,
ಬಂದು ನಿಮ್ಮ ಆಹಾರವನ್ನು ತೆಗೆದುಕೊಳ್ಳಿ.
10 ಅನೇಕ ಕುರುಬರು ದ್ರಾಕ್ಷಿತೋಟವನ್ನು ಹಾಳುಮಾಡಿದ್ದಾರೆ.
ಆ ಕುರುಬರು ನನ್ನ ತೋಟದ ಸಸಿಗಳನ್ನು ತುಳಿದುಬಿಟ್ಟಿದ್ದಾರೆ:
ನನ್ನ ಸುಂದರವಾದ ತೋಟವನ್ನು ಮರಳುಗಾಡನ್ನಾಗಿ ಮಾಡಿದ್ದಾರೆ.
11 ಹೌದು, ಮರಳುಭೂಮಿಯನ್ನಾಗಿ ಮಾಡಿದ್ದಾರೆ.
ಅದು ಒಣಗಿಹೋಗಿ ನಿಸ್ಸತ್ವವಾಗಿದೆ.
ಅಲ್ಲಿ ಯಾರೂ ವಾಸಿಸುವದಿಲ್ಲ. ಇಡೀ ದೇಶವೇ ಬರಿದಾದ ಮರಳುಗಾಡಾಗಿದೆ.
ಆ ತೋಟವನ್ನು ನೋಡಿಕೊಳ್ಳುವದಕ್ಕೆ ಯಾರೂ ಉಳಿದಿಲ್ಲ.
12 ಅನೇಕ ಸೈನಿಕರು ಆ ಬೋಳುಬೆಟ್ಟಗಳನ್ನು ತುಳಿದುಕೊಂಡು ಹೋದರು.
ಆ ಸೈನ್ಯಗಳಿಂದ ಯೆಹೋವನು ಆ ದೇಶವನ್ನು ದಂಡಿಸಿದನು.
ಆ ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವಾಸಿಸಿದ ಎಲ್ಲಾ ಜನರನ್ನು ದಂಡಿಸಲಾಯಿತು.
ಯಾರೂ ಸುರಕ್ಷಿತವಾಗಿ ಉಳಿಯಲಿಲ್ಲ.
13 ಜನರು ಗೋಧಿಯನ್ನು ಬಿತ್ತುವರು;
ಆದರೆ ಅವರು ಕೇವಲ ಮುಳ್ಳಿನ ರಾಶಿಯನ್ನು ಕೊಯ್ಯುವರು.
ಅವರು ತುಂಬ ದಣಿಯುವವರೆಗೆ ಕಷ್ಟಪಟ್ಟು ಕೆಲಸ ಮಾಡುವರು.
ಆದರೆ ಆ ಎಲ್ಲಾ ಕೆಲಸದ ಪ್ರತಿಫಲವಾಗಿ ಅವರಿಗೆ ಏನೂ ಸಿಗುವದಿಲ್ಲ.
ಅವರು ತಮ್ಮ ಬೆಳೆಗಳಿಂದ ನಾಚಿಕೆಪಟ್ಟುಕೊಳ್ಳುವರು.
ಯೆಹೋವನ ರೋಷವು ಹಾಗೆಲ್ಲ ಮಾಡುವುದು.”
ಇಸ್ರೇಲಿನ ನೆರೆಯವರಿಗೆ ಯೆಹೋವನ ವಾಗ್ದಾನ
14 ಯೆಹೋವನು ಹೀಗೆ ಹೇಳುತ್ತಾನೆ: “ಇಸ್ರೇಲ್ ಪ್ರದೇಶದ ಸುತ್ತಮುತ್ತ ವಾಸಮಾಡುವ ಜನರಿಗಾಗಿ ನಾನು ಏನು ಮಾಡುವೆನೆಂಬುದನ್ನು ನಿಮಗೆ ಹೇಳುವೆನು. ಆ ಜನರು ತುಂಬ ದುಷ್ಟರಾಗಿದ್ದಾರೆ. ನಾನು ಇಸ್ರೇಲಿನ ಜನರಿಗೆ ಕೊಟ್ಟ ಪ್ರದೇಶವನ್ನು ಅವರು ಹಾಳು ಮಾಡಿದರು. ನಾನು ಆ ಜನರನ್ನು ಅವರ ಪ್ರದೇಶದಿಂದ ಹೊರಗೆ ಎಸೆಯುವೆನು. ನಾನು ಅವರೊಂದಿಗೆ ಯೆಹೂದದ ಜನರನ್ನೂ ಎಸೆಯುವೆನು. 15 ಬಳಿಕ ನಾನು ಅವರಿಗಾಗಿ ಪರಿತಪಿಸುವೆನು. ನಾನು ಪ್ರತಿಯೊಂದು ಕುಟುಂಬವನ್ನು ಅದರ ಸ್ವಾಸ್ತ್ಯಕ್ಕೂ ಅದರ ದೇಶಕ್ಕೂ ಕರೆತರುವೆನು. 16 ಆ ಜನರು ತಮ್ಮ ಪಾಠಗಳನ್ನು ಸರಿಯಾಗಿ ಕಲಿತುಕೊಳ್ಳಬೇಕೆಂಬುದು ನನ್ನ ಅಪೇಕ್ಷೆ. ಮೊದಲು, ಆ ಜನರು ಬಾಳನ ಹೆಸರೆತ್ತಿ ಪ್ರಮಾಣ ಮಾಡುವುದನ್ನು ನನ್ನ ಜನರಿಗೆ ಕಲಿಸಿಕೊಟ್ಟರು. ಈಗ ಆ ಜನರು ಅದೇ ರೀತಿಯಲ್ಲಿ ತಮ್ಮ ಪಾಠವನ್ನು ಕಲಿತುಕೊಳ್ಳಬೇಕೆಂಬುದು ನನ್ನ ಇಚ್ಛೆ. ಅವರು, ‘ಯೆಹೋವನ ಜೀವದಾಣೆ’ ಎಂದು ಹೇಳಿದರೆ ಅವರನ್ನು ಅಭಿವೃದ್ಧಿಪಡಿಸಿ ಅವರನ್ನು ನಮ್ಮ ಜನರ ಮಧ್ಯದಲ್ಲಿ ನೆಲೆಗೊಳಿಸುವೆನು. 17 ಯಾವ ಜನಾಂಗವಾದರೂ ನನ್ನ ಸಂದೇಶವನ್ನು ಕೇಳದೆಹೋದರೆ ಅದನ್ನು ಸಂಪೂರ್ಣವಾಗಿ ನಾಶಮಾಡುವೆನು. ಒಣಗಿ ಸತ್ತುಹೋದ ಸಸಿಯಂತೆ ಅದನ್ನು ಕಿತ್ತು ಎಸೆದುಬಿಡುವೆನು.” ಇದು ಯೆಹೋವನಿಂದ ಬಂದ ಸಂದೇಶ.
ನಡುಪಟ್ಟಿಯ ಸಂಕೇತ
13 ಯೆಹೋವನು ನನಗೆ ಹೀಗೆ ಹೇಳಿದನು, “ಯೆರೆಮೀಯನೇ, ಹೋಗಿ ಒಂದು ನಾರಿನ ನಡುಪಟ್ಟಿಯನ್ನು ಕೊಂಡುಕೊ. ಅದನ್ನು ನಿನ್ನ ಸೊಂಟಕ್ಕೆ ಸುತ್ತಿಕೊ. ಆ ನಡುಪಟ್ಟಿ ನೀರಿನಲ್ಲಿ ನೆನೆಯದಂತೆ ನೋಡಿಕೊ.”
2 ಯೆಹೋವನು ಹೇಳಿದಂತೆ ನಾನು ಒಂದು ನಾರಿನ ನಡುಪಟ್ಟಿಯನ್ನು ಕೊಂಡು ತಂದೆನು. ಅದನ್ನು ನನ್ನ ಸೊಂಟಕ್ಕೆ ಸುತ್ತಿಕೊಂಡೆನು. 3 ಆಗ ಎರಡನೇ ಸಲ ನನಗೆ ಯೆಹೋವನ ಸಂದೇಶ ಬಂದಿತು. 4 ಆ ಸಂದೇಶವಿದು, “ಯೆರೆಮೀಯನೇ, ನೀನು ಕೊಂಡ ತಂದು ಸುತ್ತಿಕೊಂಡ ನಡುಪಟ್ಟಿಯನ್ನು ತೆಗೆದುಕೊಂಡು ಪೆರಾತ್‌ಗೆ ಹೋಗು. ಆ ನಡುಪಟ್ಟಿಯನ್ನು ಬೆಟ್ಟದ ಸಂದಿನಲ್ಲಿ ಬಚ್ಚಿಡು.”
5 ಆದ್ದರಿಂದ ನಾನು ಪೆರಾತ್‌ಗೆ ಹೋದೆ. ಯೆಹೋವನು ಹೇಳಿದ ಪ್ರಕಾರ ನಡುಪಟ್ಟಿಯನ್ನು ಬಚ್ಚಿಟ್ಟೆ. 6 ಬಹಳ ದಿನಗಳಾದ ತರುವಾಯ, ಯೆಹೋವನು ನನಗೆ, “ಯೆರೆಮೀಯನೇ, ಪೆರಾತ್‌ಗೆ ಹೋಗು, ನಾನು ನಿನಗೆ ಅಲ್ಲಿ ಬಚ್ಚಿಡಲು ಹೇಳಿದ ನಡುಪಟ್ಟಿಯನ್ನು ತೆಗೆದುಕೊಂಡು ಬಾ” ಎಂದು ಹೇಳಿದನು.
7 ನಾನು ಪೆರಾತ್‌ಗೆ ಹೋದೆ ಮತ್ತು ನಡುಪಟ್ಟಿಯನ್ನು ಬಚ್ಚಿಟ್ಟ ಬೆಟ್ಟದ ಸಂದಿನಿಂದ ಹೊರತೆಗೆದೆ. ಆದರೆ ಆ ನಡುಪಟ್ಟಿ ಹಾಳಾಗಿಹೋಗಿತ್ತು. ನಾನು ಅದನ್ನು ಧರಿಸಲಾಗಲಿಲ್ಲ. ಅದು ಯಾವುದಕ್ಕೂ ಪ್ರಯೋಜನವಿರಲಿಲ್ಲ.
8 ಆಗ ನನಗೆ ಯೆಹೋವನ ಸಂದೇಶ ಬಂದಿತು. 9 ಯೆಹೋವನು ಹೀಗೆ ಹೇಳಿದನು, “ನಡುಪಟ್ಟಿಯು ಹಾಳಾಗಿ ನಿಷ್ಪ್ರಯೋಜಕವಾಗಿದೆ. ಅಂತೆಯೇ ನಾನು ಯೆಹೂದದ ಮತ್ತು ಜೆರುಸಲೇಮಿನ ಜಂಬದ ಜನರನ್ನು ಹಾಳುಮಾಡುತ್ತೇನೆ. 10 ಯೆಹೂದದಲ್ಲಿ ದುಷ್ಟರೂ ಗರ್ವಿಷ್ಠರೂ ಆಗಿರುವ ಜನರನ್ನು ಹಾಳುಮಾಡುವೆನು. ಅವರು ನನ್ನ ಸಂದೇಶವನ್ನು ಕೇಳುವುದಿಲ್ಲ. ಅವರು ಹಟಮಾರಿಗಳೂ ತಮ್ಮ ಮನಸ್ಸಿಗೆ ಬಂದಂತೆ ಮಾಡುವವರೂ ಆಗಿದ್ದಾರೆ. ಅವರು ಬೇರೆ ದೇವರುಗಳನ್ನು ಅನುಸರಿಸುತ್ತಾರೆ ಮತ್ತು ಪೂಜಿಸುತ್ತಾರೆ. ಯೆಹೂದದ ಜನರು ಈ ನಾರಿನ ನಡುಪಟ್ಟಿಯಂತೆ ಆಗುವರು. ಅವರು ಹಾಳಾಗಿ ನಿಷ್ಪ್ರಯೋಜಕರಾಗುವರು. 11 ಪುರುಷನೊಬ್ಬನು ನಡುಪಟ್ಟಿಯನ್ನು ಬಿಗಿಯಾಗಿ ಸೊಂಟಕ್ಕೆ ಸುತ್ತಿಕೊಳ್ಳುವಂತೆ ನಾನು ಇಸ್ರೇಲಿನ ಎಲ್ಲಾ ವಂಶಗಳನ್ನು ಮತ್ತು ಯೆಹೂದದ ಎಲ್ಲಾ ವಂಶಗಳನ್ನು ನನ್ನ ಸುತ್ತಲೂ ಬಿಗಿದುಕೊಂಡೆನು.” ಇದು ಯೆಹೋವನಿಂದ ಬಂದ ಮಾತು. “ಅವರು ನನ್ನ ಜನರಾಗುವರು ಎಂದುಕೊಂಡು ನಾನು ಹಾಗೆ ಮಾಡಿದೆ. ನನ್ನ ಜನರು ನನಗೆ ಕೀರ್ತಿ, ಸ್ತುತಿ, ಗೌರವ ತರುವರೆಂದು ತಿಳಿದಿದ್ದೆ. ಆದರೆ ನನ್ನ ಜನರು ನನ್ನ ಮಾತನ್ನು ಕೇಳದೆಹೋದರು.”
ಯೆಹೂದಕ್ಕೆ ಕೊಟ್ಟ ಎಚ್ಚರಿಕೆಗಳು
12 “ಯೆರೆಮೀಯನೇ, ಯೆಹೂದದ ಜನರಿಗೆ, ‘ಇಸ್ರೇಲಿನ ದೇವರಾದ ಯೆಹೋವನು ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕು ಎಂದು ಹೇಳುತ್ತಾನೆ’ ಎಂದು ಹೇಳು. ಆಗ ಆ ಜನರು ನಕ್ಕು, ‘ಪ್ರತಿಯೊಂದು ಚರ್ಮದ ಬುದ್ದಲಿಯು ದ್ರಾಕ್ಷಾರಸದಿಂದ ತುಂಬಿರಬೇಕೆಂಬುದು ನಮಗೆ ಚೆನ್ನಾಗಿ ಗೊತ್ತು’ ಎಂದು ನಿನಗೆ ಹೇಳುತ್ತಾರೆ. 13 ಆಗ ನೀನು ಅವರಿಗೆ, ‘ಯೆಹೋವನು ಹೀಗೆ ಹೇಳುತ್ತಾನೆ ಎಂದು ಹೇಳು. ಈ ಪ್ರದೇಶದಲ್ಲಿ ವಾಸಮಾಡುವ ಪ್ರತಿಯೊಬ್ಬ ಮನುಷ್ಯನನ್ನು ಕುಡಿದು ಮತ್ತನಾದವನಂತೆ ಅಸಹಾಯಕನನ್ನಾಗಿ ಮಾಡುತ್ತೇನೆ. ನಾನು ದಾವೀದನ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ರಾಜರ ಬಗ್ಗೆ ಹೇಳುತ್ತಿದ್ದೇನೆ. ನಾನು ಯಾಜಕರ, ಪ್ರವಾದಿಗಳ ಮತ್ತು ಜೆರುಸಲೇಮಿನಲ್ಲಿ ವಾಸಿಸುವ ಎಲ್ಲಾ ಜನರ ಬಗ್ಗೆಯೂ ಹೇಳುತ್ತಿದ್ದೇನೆ. 14 ಯೆಹೂದದ ಜನರು ಎಡವಿ, ಒಬ್ಬರಮೇಲೊಬ್ಬರು ಬೀಳುವಂತೆ ನಾನು ಮಾಡುವೆನು. ತಂದೆ ಮತ್ತು ಮಕ್ಕಳು ಒಬ್ಬರಮೇಲೊಬ್ಬರು ಬೀಳುವರು.’” ಇದು ಯೆಹೋವನ ನುಡಿ. “‘ನಾನು ಅವರಿಗಾಗಿ ಕನಿಕರಪಡುವದಿಲ್ಲ ಅಥವಾ ಕರುಣೆ ತೋರಿಸುವದಿಲ್ಲ. ಯೆಹೂದದ ಜನರ ವಿನಾಶವನ್ನು ಕರುಣೆಯು ತಡೆಯದಂತೆ ನೋಡಿಕೊಳ್ಳುತ್ತೇನೆ.’”
15 ಕೇಳಿರಿ, ಗಮನ ಕೊಡಿರಿ;
ದೇವರು ನಿಮಗೆ ಹೇಳಿದ್ದಾನೆ.
ಗರ್ವಪಡಬೇಡಿರಿ.
16 ನಿಮ್ಮ ದೇವರಾದ ಯೆಹೋವನು
ಅಂಧಕಾರವನ್ನು ಉಂಟುಮಾಡುವ ಮೊದಲೇ ಆತನನ್ನು ಗೌರವಿಸಿರಿ,
ಕಗ್ಗತ್ತಲಿನ ಬೆಟ್ಟಗಳ ಮೇಲೆ ನೀವು ಬೀಳುವ ಮೊದಲೇ ಆತನನ್ನು ಸ್ತುತಿಸಿರಿ.
ಯೆಹೂದದ ಜನರಾದ ನೀವು ಬೆಳಕನ್ನು ನಿರೀಕ್ಷಿಸುತ್ತಿದ್ದೀರಿ.
ಆದರೆ ಯೆಹೋವನು ಬೆಳಕನ್ನು ಗಾಢಾಂಧಕಾರವನ್ನಾಗಿ ಪರಿವರ್ತಿಸುವನು.
17 ಯೆಹೂದದ ಜನರಾದ ನೀವು ಯೆಹೋವನ ಮಾತನ್ನು ಕೇಳದಿದ್ದರೆ,
ನಾನು ಗುಟ್ಟಾದ ಸ್ಥಳದಲ್ಲಿ ಅಳುವೆನು.
ನಿಮ್ಮ ಅಹಂಕಾರವು ನನ್ನನ್ನು ಅಳುವ ಹಾಗೆ ಮಾಡುವುದು.
ನಾನು ಬಹಳ ಗಟ್ಟಿಯಾಗಿ ಅಳುವೆನು,
ನನ್ನ ಕಣ್ಣುಗಳಿಂದ ಕಣ್ಣೀರು ಹೊರಸೂಸುವುದು.
ಏಕೆಂದರೆ ಯೆಹೋವನ ಮಂದೆಯು ಸೆರೆಹಿಡಿಯಲ್ಪಡುವುದು.
18 ಈ ಸಂಗತಿಗಳನ್ನು ರಾಜನಿಗೂ ರಾಣಿಗೂ ಹೇಳಿರಿ:
“ನಿಮ್ಮ ಸಿಂಹಾಸನಗಳಿಂದ ಕೆಳಗಿಳಿದು ಬನ್ನಿ.
ನಿಮ್ಮ ಸುಂದರವಾದ ಕಿರೀಟಗಳು ನಿಮ್ಮ ತಲೆಯಿಂದ ಉರುಳಿ ಕೆಳಗೆ ಬಿದ್ದಿವೆ” ಎಂದು ಹೇಳಿರಿ.
19 ನೆಗೆವ್ ಮರುಭೂಮಿಯ ಎಲ್ಲಾ ನಗರಗಳಿಗೆ ಬೀಗ ಹಾಕಲಾಗಿದೆ.
ಅವುಗಳನ್ನು ತೆರೆಯುವುದು ಯಾರಿಂದಲೂ ಸಾಧ್ಯವಿಲ್ಲ.
ಯೆಹೂದದ ಎಲ್ಲಾ ಜನರು ಸೆರೆ ಒಯ್ಯಲ್ಪಟ್ಟಿದ್ದಾರೆ.
ಅವರೆಲ್ಲರನ್ನು ಸೆರೆಯಾಳುಗಳಾಗಿ ತೆಗೆದುಕೊಂಡು ಹೋಗಲಾಗಿದೆ.
20 ಜೆರುಸಲೇಮೇ, ಮುಖವೆತ್ತಿ ನೋಡು.
ಉತ್ತರ ದಿಕ್ಕಿನಿಂದ ಬರುವ ಶತ್ರುಗಳನ್ನು ನೋಡು.
ನಿನ್ನ ಮಂದೆ[c] ಎಲ್ಲಿದೆ? ದೇವರು ನಿನಗೆ ಆ ಸುಂದರವಾದ ಮಂದೆಯನ್ನು ದಯಪಾಲಿಸಿದನು.
ನೀನು ಆ ಮಂದೆಯನ್ನು ನೋಡಿಕೊಳ್ಳಬೇಕಾಗಿತ್ತು.
21 ಯೆಹೋವನು ನಿನಗೆ ಆ ಮಂದೆಯ ಲೆಕ್ಕವನ್ನೊಪ್ಪಿಸು ಎಂದು ಕೇಳಿದರೆ ಏನು ಹೇಳುವೆ?
ಜನರಿಗೆ ದೇವರ ಬಗ್ಗೆ ತಿಳಿಸುವದು ನಿನ್ನ ಕರ್ತವ್ಯವಾಗಿತ್ತು.
ನಿನ್ನ ನಾಯಕರು ಜನರಿಗೆ ಮಾರ್ಗದರ್ಶನ ಮಾಡಬೇಕಾಗಿತ್ತು.
ಆದರೆ ಅವರು ತಮ್ಮ ಕೆಲಸವನ್ನು ಮಾಡಲಿಲ್ಲ.
ಆದ್ದರಿಂದ ನಿನಗೆ ಹೆಚ್ಚಿನ ನೋವು ಮತ್ತು ಕಷ್ಟಗಳು ಉಂಟಾಗುವವು.
ಪ್ರಸವವೇದನೆಯಂಥ ನೋವು ನಿನಗಾಗುವುದು.
22 “ಇಂಥ ಕೇಡು ನನಗೆ ಏಕೆ ಉಂಟಾಯಿತು?”
ಎಂದು ನಿನ್ನನ್ನು ನೀನೇ ಕೇಳಿಕೊಳ್ಳಬಹುದು.
ನೀನು ಮಾಡಿದ ಅನೇಕ ಪಾಪಗಳ ಫಲದಿಂದಲೇ ಆಯಿತು.
ನಿನ್ನ ಪಾಪಗಳ ಫಲವಾಗಿ ನಿನ್ನ ಲಂಗವನ್ನು ಹರಿಯಲಾಯಿತು.
ನಿನ್ನ ಪಾದರಕ್ಷೆಯನ್ನು ಕಿತ್ತುಕೊಳ್ಳಲಾಯಿತು.
ನಿನ್ನನ್ನು ಕಂಗೆಡಿಸುವದಕ್ಕಾಗಿ ಅವರು ಹೀಗೆ ಮಾಡಿದರು.
23 ಕಪ್ಪಗಿರುವವನು ತನ್ನ ಚರ್ಮದ ಬಣ್ಣವನ್ನು ಬದಲಿಸಲಾರನು.
ಚಿರತೆಯು ತನ್ನ ಮೈಮೇಲಿನ ಚುಕ್ಕೆಗಳನ್ನು ಬದಲಾಯಿಸಲಾರದು.
ಅದೇ ರೀತಿ, ಜೆರುಸಲೇಮ್ ನಗರವೇ, ನೀನು ಸಹ ಮಾರ್ಪಾಟು ಹೊಂದಿ ಒಳ್ಳೆಯದನ್ನು ಮಾಡಲಾರೆ.
ನೀನು ಯಾವಾಗಲೂ ಕೆಟ್ಟದ್ದನ್ನೇ ಮಾಡುವೆ.
24 “ನಾನು ನಿಮಗೆ ನಿಮ್ಮ ಮನೆಗಳನ್ನು ಬಿಟ್ಟು ಓಡಿಹೋಗುವಂತೆ ಒತ್ತಾಯ ಮಾಡುತ್ತೇನೆ.
ನೀವು ಎಲ್ಲಾ ದಿಕ್ಕುಗಳಲ್ಲಿಯೂ ಓಡಿಹೋಗುವಿರಿ.
ನೀವು ಮರುಭೂಮಿಯ ಗಾಳಿಯಿಂದ ಹಾರಿಹೋಗುವ ಹೊಟ್ಟಿನಂತಾಗುವಿರಿ.
25 ನಿಮ್ಮ ಗತಿ ಹೀಗಾಗುವುದು.
ನನ್ನ ಯೋಜನೆಗಳಲ್ಲಿ ಇದು ನಿಮ್ಮ ಪಾತ್ರ.”
ಇದು ಯೆಹೋವನ ನುಡಿ.
“ಏಕೆ ಹೀಗಾಗುವದು?
ಏಕೆಂದರೆ ನೀವು ನನ್ನನ್ನು ಮರೆತುಬಿಟ್ಟಿರಿ.
ಸುಳ್ಳುದೇವರುಗಳನ್ನು ನಂಬಿದಿರಿ.
26 ಜೆರುಸಲೇಮ್ ನಗರವೇ, ನಾನು ನಿನ್ನ ಲಂಗವನ್ನು ನಿನ್ನ ಮುಖದವರೆಗೆ ಎತ್ತಿಬಿಡುತ್ತೇನೆ.
ಎಲ್ಲರೂ ನಿನ್ನನ್ನು ನೋಡುತ್ತಾರೆ.
ನಿನಗೆ ನಾಚಿಕೆಯಾಗುತ್ತದೆ.
27 ನೀನು ಮಾಡಿದ ಭಯಾನಕ ಕೃತ್ಯಗಳನ್ನು ನಾನು ನೋಡಿದ್ದೇನೆ.
ನಿನ್ನ ಪ್ರಿಯತಮರ ಜೊತೆಗೆ ನಗುವದನ್ನೂ ಕಾಮದಾಟವಾಡುವದನ್ನೂ ನಾನು ನೋಡಿದ್ದೇನೆ.
ನೀನು ವೇಶ್ಯೆಯಂತೆ ನಡೆದುಕೊಳ್ಳಬೇಕೆಂದು ಯೋಚನೆ ಮಾಡಿದ್ದು ನನಗೆ ಗೊತ್ತು.
ನೀನು ಹೊಲಗಳಲ್ಲಿಯೂ ಬೆಟ್ಟಗಳಲ್ಲಿಯೂ ಮಾಡಿದ ಅಸಹ್ಯಕೃತ್ಯಗಳನ್ನು ನಾನು ನೋಡಿದ್ದೇನೆ.
ಜೆರುಸಲೇಮೇ, ಇದರಿಂದ ನಿನಗೆ ತುಂಬಾ ಕೇಡಾಗುವದು.
ನೀನು ಎಷ್ಟು ದಿನ ಹೀಗೆಯೇ ನಿನ್ನ ಪಾಪಕೃತ್ಯಗಳನ್ನು ಮುಂದುವರಿಸುವೆ ಎಂದು ನಾನು ಯೋಚಿಸುತ್ತಿದ್ದೇನೆ.”
Kannada Holy Bible: Easy-to-Read Version. All rights reserved. © 1997 Bible League International