Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 1-3

ಇವು ಯೆರೆಮೀಯನ ಸಂದೇಶಗಳು. ಯೆರೆಮೀಯನು ಹಿಲ್ಕೀಯನೆಂಬುವನ ಮಗನು. ಯೆರೆಮೀಯನು ಅನಾತೋತ್ ನಗರದ ಯಾಜಕ ಕುಟುಂಬಕ್ಕೆ ಸೇರಿದವನಾಗಿದ್ದನು. ಆ ನಗರವು ಬೆನ್ಯಾಮೀನ್ಯರ ಪ್ರದೇಶದಲ್ಲಿತ್ತು. ಯೆಹೂದದಲ್ಲಿ ಆಮೋನನ ಮಗನಾದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವನು ಯೆರೆಮೀಯನೊಂದಿಗೆ ಮಾತನಾಡಲು ಪ್ರಾರಂಭಿಸಿದನು. ಯೆಹೋಯಾಕೀಮನು ಯೆಹೂದದಲ್ಲಿ ಆಳುವಾಗಲೂ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಯೆಹೋಯಾಕೀಮನು ಯೋಷೀಯನ ಮಗನು. ಯೆಹೂದದಲ್ಲಿ ಚಿದ್ಕೀಯನು ಆಳಿದ ಹನ್ನೊಂದು ವರ್ಷ ಐದು ತಿಂಗಳ ಕಾಲ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಚಿದ್ಕೀಯನು ಸಹ ಯೋಷೀಯನ ಮಗನಾಗಿದ್ದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ನಿವಾಸಿಗಳು ಸೆರೆ ಒಯ್ಯಲ್ಪಟ್ಟರು.

ಯೆಹೋವನು ಯೆರೆಮೀಯನನ್ನು ಕರೆದನು

ಯೆರೆಮೀಯನಿಗೆ ಯೆಹೋವನ ಈ ಸಂದೇಶ ಬಂದಿತು:

“ನಾನು ನಿನ್ನನ್ನು ನಿನ್ನ ತಾಯಿಯ ಗರ್ಭದಲ್ಲಿ ರೂಪಿಸುವ ಮುಂಚೆಯೇ
    ನಿನ್ನನ್ನು ಬಲ್ಲವನಾಗಿದ್ದೆನು.
ನೀನು ಹುಟ್ಟುವದಕ್ಕಿಂತ ಮುಂಚೆಯೇ
    ನಾನು ನಿನ್ನನ್ನು ಒಂದು ವಿಶೇಷವಾದ ಕೆಲಸಕ್ಕೆ
    ಅಂದರೆ ಜನಾಂಗಗಳಿಗೆ ಪ್ರವಾದಿಯನ್ನಾಗಿ ಆರಿಸಿಕೊಂಡಿದ್ದೆನು.”

ಆಗ ಯೆರೆಮೀಯನೆಂಬ ನಾನು, “ಸರ್ವಶಕ್ತನಾದ ಯೆಹೋವನೇ, ಹೇಗೆ ಮಾತನಾಡಬೇಕೆಂಬುದೇ ನನಗೆ ತಿಳಿಯದು. ನಾನು ಕೇವಲ ಹುಡುಗನಷ್ಟೇ” ಎಂದು ಹೇಳಿದೆ.

ಆದರೆ ಯೆಹೋವನು ನನಗೆ,

“ನಾನು ಕೇವಲ ಹುಡುಗನೆಂದು ಹೇಳಬೇಡ,
    ನಾನು ಕಳುಹಿಸುವ ಸ್ಥಳಗಳಿಗೆ ನೀನು ಹೋಗಬೇಕು.
    ನಾನು ಹೇಳು ಅಂದದ್ದನ್ನೆಲ್ಲ ನೀನು ಹೇಳಬೇಕು.
ಯಾರಿಗೂ ನೀನು ಹೆದರಬೇಡ, ನಾನೇ ನಿನ್ನ ಜೊತೆ ಇದ್ದೇನೆ.
    ನಾನು ನಿನ್ನನ್ನು ಕಾಪಾಡುತ್ತೇನೆ.
ಈ ಮಾತನ್ನು ಯೆಹೋವನಾದ ನಾನೇ ಹೇಳುತ್ತಿದ್ದೇನೆ” ಎಂದನು.

ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ,

“ಯೆರೆಮೀಯನೇ, ಇಗೋ, ನಾನು ನನ್ನ ಮಾತುಗಳನ್ನು ನಿನ್ನ ಬಾಯಲ್ಲಿ ಇಡುತ್ತಿದ್ದೇನೆ.
10 ಕಿತ್ತುಹಾಕಲು, ಕೆಡವಲು, ನಾಶಪಡಿಸಲು, ಹಾಳುಮಾಡಲು,
    ಕಟ್ಟಲು, ನೆಡಲು, ಜನಾಂಗಗಳ ಮೇಲೂ ರಾಜ್ಯಗಳ ಮೇಲೂ
    ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.

ಎರಡು ದರ್ಶನಗಳು

11 ಯೆಹೋವನಿಂದ ನನಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನಿನಗೆ ಏನು ಕಾಣುತ್ತಿದೆ?” ಎಂದು ಯೆಹೋವನು ಕೇಳಿದನು.

ನಾನು ಆತನಿಗೆ, “ಬಾದಾಮಿಯ ಮರದಿಂದ ಮಾಡಿದ ಒಂದು ದಂಡ ಕಾಣಿಸುತ್ತಿದೆ” ಎಂದು ಉತ್ತರಕೊಟ್ಟೆನು.

12 ಆಗ ಯೆಹೋವನು, “ನೀನು ಸರಿಯಾಗಿ ನೋಡಿರುವೆ, ನನ್ನ ಮಾತನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆ” ಎಂದು ತಿಳಿದುಕೊ ಎಂಬುದಾಗಿ ಹೇಳಿದನು.

13 ಇನ್ನೊಂದು ಸಲ ಯೆಹೋವನು, “ನಿನಗೆ ಏನು ಕಾಣುತ್ತಿದೆ?” ಎಂದು ಕೇಳಿದನು.

ನಾನು ಯೆಹೋವನಿಗೆ, “ಕುದಿಯುವ ನೀರಿನ ಒಂದು ಹಂಡೆ ಕಾಣುತ್ತಿದೆ. ಆ ಹಂಡೆಯು ಉತ್ತರದಿಂದ ಈ ಕಡೆಗೆ ಬಾಗಿಕೊಂಡಿದೆ” ಎಂದು ಉತ್ತರಿಸಿದೆನು.

14 ಯೆಹೋವನು ನನಗೆ, “ಉತ್ತರ ದಿಕ್ಕಿನಿಂದ
    ಈ ದೇಶದ ನಿವಾಸಿಗಳೆಲ್ಲರ ಮೇಲೆ ಒಂದು ಕೇಡು ಬರುವದು.
15 ಸ್ವಲ್ಪ ಸಮಯದಲ್ಲಿಯೇ ನಾನು ಉತ್ತರ ರಾಜ್ಯಗಳ ಎಲ್ಲಾ ಜನರನ್ನು ಕರೆಯುತ್ತೇನೆ” ಎಂದನು.
ಮತ್ತೆ ಯೆಹೋವನು ಹೀಗೆ ಹೇಳಿದನು:

“ಆ ದೇಶಗಳ ರಾಜರು ಬರುವರು.
    ಅವರು ಜೆರುಸಲೇಮಿನ ಹೆಬ್ಬಾಗಿಲಿನ ಹತ್ತಿರ ತಮ್ಮ ಆಸನಗಳನ್ನು ಹಾಕುವರು.
ಅವರು ಜೆರುಸಲೇಮಿನ ಎಲ್ಲಾ ಕೋಟೆಗೋಡೆಗಳಿಗೆ ಮುತ್ತಿಗೆಹಾಕುವರು.
    ಅವರು ಯೆಹೂದ ಪ್ರದೇಶದ ಎಲ್ಲಾ ನಗರಗಳ ಮೇಲೆ ಧಾಳಿ ಮಾಡುವರು.
16 ನಾನು ನನ್ನ ಜನರ ವಿರುದ್ಧ ನನ್ನ ನ್ಯಾಯನಿರ್ಣಯವನ್ನು ಘೋಷಿಸುವೆನು.
    ಅವರು ಕೆಟ್ಟ ಜನರು, ಅವರು ನನ್ನ ವಿರೋಧಿಗಳಾಗಿದ್ದಾರೆ.
ನನ್ನ ಜನರು ನನ್ನನ್ನು ತ್ಯಜಿಸಿದ್ದಾರೆ.
    ಅವರು ನನ್ನನ್ನು ಹೇಗೆ ತ್ಯಜಿಸಿದರು?
ಅವರು ಅನ್ಯದೇವರುಗಳಿಗೆ ಹೋಮ ಮಾಡಿದರು.
    ಅವರು ತಮ್ಮ ಕೈಗಳಿಂದಲೇ ಮಾಡಿದ ವಿಗ್ರಹಗಳನ್ನು ಪೂಜಿಸಿದರು.

17 “ಯೆರೆಮೀಯನೇ, ಸಿದ್ಧನಾಗು! ಎದ್ದುನಿಲ್ಲು!
    ನಾನು ಹೇಳಿದ್ದೆಲ್ಲವನ್ನು ಜನರಿಗೆ ಹೇಳು.
    ಅವರಿಗೆ ಹೆದರಬೇಡ.
ನೀನು ಅವರಿಗೆ ಹೆದರಿಕೊಂಡರೆ,
    ನಾನು ನಿನ್ನನ್ನು ಅವರೆದುರಿನಲ್ಲಿ ಹೆದರಿಸುವೆನು.
18 ಇಗೋ, ನೀನು ನನ್ನ ವಿಷಯವಾಗಿ ಹೇಳಬೇಕು.
    ನಾನು ನಿನ್ನನ್ನು ಭದ್ರವಾದ ನಗರವನ್ನಾಗಿಯೂ
    ಕಬ್ಬಿಣದ ಕಂಬವನ್ನಾಗಿಯೂ
    ಕಂಚಿನ ಗೋಡೆಯನ್ನಾಗಿಯೂ ಮಾಡುತ್ತೇನೆ.
ನೀನು ದೇಶದಲ್ಲಿ ಎಲ್ಲರಿಗೂ ಎದುರಾಗಿ ನಿಲ್ಲಬಹುದು,
    ಯೆಹೂದ ದೇಶದ ರಾಜರ ವಿರುದ್ಧವಾಗಿಯೂ
    ಯೆಹೂದದ ನಾಯಕರ ವಿರುದ್ಧವಾಗಿಯೂ
    ಯೆಹೂದದ ಯಾಜಕರ ವಿರುದ್ಧವಾಗಿಯೂ
    ಯೆಹೂದದೇಶದ ಜನರ ವಿರುದ್ಧವಾಗಿಯೂ ನೀನು ನಿಲ್ಲುವೆ.
19 ಆ ಜನರೆಲ್ಲಾ ನಿನ್ನ ವಿರುದ್ಧ ಹೋರಾಡುವರು,
    ಆದರೆ ಅವರು ನಿನ್ನನ್ನು ಸೋಲಿಸಲಾಗುವುದಿಲ್ಲ.
ಏಕೆಂದರೆ ನಾನೇ ನಿನ್ನೊಂದಿಗೆ ಇರುವೆನು.
    ನಾನೇ ನಿನ್ನನ್ನು ರಕ್ಷಿಸುವೆನು.”
ಇದು ಯೆಹೋವನಾದ ನನ್ನ ಮಾತು.

ದೇವ ಜನರ ದೇವದ್ರೋಹವು

ಯೆಹೋವನ ಈ ಸಂದೇಶವು ಯೆರೆಮೀಯನಿಗೆ ಬಂದಿತು: “ಯೆರೆಮೀಯನೇ, ಹೋಗಿ ಜೆರುಸಲೇಮಿನ ಜನರೊಂದಿಗೆ ಮಾತನಾಡು, ಅವರಿಗೆ ಹೀಗೆ ಹೇಳು:

“ಯೆಹೋವನು ಹೀಗೆನ್ನುತ್ತಾನೆ: ‘ನೀವು ಯುವ ರಾಷ್ಟ್ರವಾಗಿದ್ದಾಗ ನನಗೆ ನಂಬಿಗಸ್ತರಾಗಿದ್ದಿರಿ;
    ಯುವತಿಯಾದ ಮದುಮಗಳಂತೆ ನನ್ನನ್ನು ಹಿಂಬಾಲಿಸಿದಿರಿ.
ಎಂದೂ ಬೇಸಾಯಕ್ಕೆ ಬಳಸದ ಭೂಮಿಯಲ್ಲಿಯೂ
    ಮರಳುಗಾಡಿನಲ್ಲಿಯೂ ನನ್ನನ್ನು ಹಿಂಬಾಲಿಸಿದಿರಿ.
ಇಸ್ರೇಲಿನ ಜನರು ಯೆಹೋವನಿಗೆ ಒಂದು ಪವಿತ್ರವಾದ ಕಾಣಿಕೆಯಾಗಿದ್ದರು.
    ಅವರು ಯೆಹೋವನ ಬೆಳೆಯ ಪ್ರಥಮ ಫಲವಾಗಿದ್ದರು.
ಇಸ್ರೇಲಿನ ಜನರನ್ನು ಪೀಡಿಸಲು ಪ್ರಯತ್ನಿಸಿದವರನ್ನು ಯಾರಾದರೂ ಆಗಿರಲಿ, ದೋಷಿಗಳೆಂದು ನಿರ್ಣಯಿಸಲಾಗುತ್ತಿತ್ತು.
    ಆ ಕೆಟ್ಟ ಜನರಿಗೆ ಕೇಡಾಗುತ್ತಿತ್ತು.’”
ಇದು ಯೆಹೋವನ ಸಂದೇಶ.

ಯಾಕೋಬನ ಮನೆತನದವರೇ, ಯೆಹೋವನ ಸಂದೇಶವನ್ನು ಕೇಳಿರಿ.
    ಇಸ್ರೇಲಿನ ಎಲ್ಲಾ ಕುಲದವರೇ, ಯೆಹೋವನ ಸಂದೇಶವನ್ನು ಕೇಳಿರಿ.

ಯೆಹೋವನು ಹೀಗೆನ್ನುತ್ತಾನೆ:
“ನಾನು ನಿಮ್ಮ ಪೂರ್ವಿಕರಿಗೆ ಅನ್ಯಾಯ ಮಾಡಿದೆನೇ?
    ಅದಕ್ಕಾಗಿ ಅವರು ನನ್ನನ್ನು ತಿರಸ್ಕರಿಸಿದರೇ?
ನಿಮ್ಮ ಪೂರ್ವಿಕರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿ
    ತಾವು ಸಹ ನಿಷ್ಪ್ರಯೋಜಕರಾದರು.
‘ಈಜಿಪ್ಟಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
    ಮರಳುಗಾಡಿನಿಂದ ನಮ್ಮನ್ನು ಕರೆದುಕೊಂಡು ಬಂದ ಯೆಹೋವನು ಎಲ್ಲಿದ್ದಾನೆ?
ನಿರ್ಜನವಾದ ಬೆಟ್ಟಪ್ರದೇಶದಿಂದ ನಮ್ಮನ್ನು ತಂದ ಯೆಹೋವನು ಎಲ್ಲಿದ್ದಾನೆ?
    ಎಂದು ನಿಮ್ಮ ಪೂರ್ವಿಕರು ಸ್ಮರಿಸಲಿಲ್ಲ.
ಯೆಹೋವನು ನಮ್ಮನ್ನು ಅಂಧಕಾರಮಯವಾದ
    ಮತ್ತು ಅಪಾಯಕಾರಿಯಾದ ಭೂಮಿಯಿಂದ ಕರೆದುತಂದನು.
ಆ ಭೂಮಿಯ ಮಾರ್ಗವಾಗಿ ಯಾರೂ ಪ್ರಯಾಣ ಮಾಡುವುದಿಲ್ಲ.
    ಯಾರೂ ಆ ಭೂಮಿಯ ಮೇಲೆ ವಾಸ ಮಾಡುವದಿಲ್ಲ.
ಈಗ ಆ ಯೆಹೋವನು ಎಲ್ಲಿದ್ದಾನೆ?’”
    ನಿಮ್ಮ ಪೂರ್ವಿಕರು ಆ ಪ್ರಶ್ನೆಗಳನ್ನು ಕೇಳಲೇ ಇಲ್ಲ.

“ನಾನು ನಿಮ್ಮನ್ನು ಅನೇಕ ಅಮೂಲ್ಯವಸ್ತುಗಳಿಂದ ಕೂಡಿದ
    ಫಲವತ್ತಾದ ಭೂಮಿಗೆ ಕರೆದುತಂದೆ.
ಅಲ್ಲಿ ಬೆಳೆಯುವ ಫಲಗಳನ್ನು ತಿನ್ನಲಿ ಎಂಬ ಉದ್ದೇಶದಿಂದ ನಾನು ಕರೆದುತಂದೆ.
    ಆದರೆ ನೀವು ಬಂದು ನನ್ನ ಭೂಮಿಯನ್ನು ಹೊಲಸು ಮಾಡಿದಿರಿ.
ನಾನು ಆ ಭೂಮಿಯನ್ನು ನಿಮಗೆ ಕೊಟ್ಟೆ,
    ಆದರೆ ನೀವು ಅದನ್ನು ಕೆಟ್ಟ ಸ್ಥಳವನ್ನಾಗಿ ಮಾಡಿದಿರಿ.

“‘ಯೆಹೋವನು ಎಲ್ಲಿ?’
    ಎಂದು ಯಾಜಕರು ಕೇಳಲಿಲ್ಲ.
ಧರ್ಮಶಾಸ್ತ್ರವನ್ನು ಬಲ್ಲವರು ನನ್ನನ್ನು ತಿಳಿಯಬಯಸಲಿಲ್ಲ.
    ಇಸ್ರೇಲರ ಜನನಾಯಕರು ನನ್ನ ವಿರೋಧಿಗಳಾದರು.
ಪ್ರವಾದಿಗಳು ಸುಳ್ಳುದೇವರಾದ ಬಾಳನ ಹೆಸರಿನಿಂದ ಭವಿಷ್ಯವಾಣಿಯನ್ನು ನುಡಿದರು.
    ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಪೂಜಿಸಿದರು.”

“ಆದ್ದರಿಂದ ನಾನು ನಿಮ್ಮನ್ನು ಮತ್ತೊಮ್ಮೆ ಆಪಾದಿಸುವೆನು.
    ನಾನು ನಿಮ್ಮ ಮೊಮ್ಮಕ್ಕಳ ಮೇಲೂ ಆಪಾದಿಸುವೆನು” ಎನ್ನುತ್ತಾನೆ ಯೆಹೋವನು.
10 ಸಮುದ್ರದ ಆಚೆಗಿದ್ದ ಕಿತ್ತೀಮ್ ದಿಬಪಗಳಿಗೆ ಹೋಗಿ ನೋಡಿರಿ.
    ಸೂಕ್ಷ್ಮವಾಗಿ ಪರಿಶೀಲಿಸಲು ಯಾರನ್ನಾದರೂ ಕೇದಾರಿಗೆ ಕಳುಹಿಸಿರಿ.
ಯಾರಾದರೂ ಎಂದಾದರೂ
    ಇಂಥ ಕೆಲಸ ಮಾಡಿರುವರೇ, ನೋಡಿರಿ.
11 ಯಾವ ಜನಾಂಗವಾದರೂ ಎಂದಾದರೂ
    ತಮ್ಮ ಹಳೆಯ ದೇವರುಗಳನ್ನು ಬದಲಾಯಿಸಿ ಹೊಸ ದೇವರುಗಳನ್ನು ಪಡೆಯಿತೇ?
ಇಲ್ಲ. (ಅವರ ದೇವರುಗಳು ನಿಜವಾದ ದೇವರುಗಳೇ ಅಲ್ಲ.)
ಆದರೆ ನನ್ನ ಜನರು ತಮ್ಮ ಮಹಿಮಾಶಾಲಿಯಾದ ದೇವರನ್ನು
    ಅಪ್ರಯೋಜಕವಾದ ವಿಗ್ರಹಗಳೊಂದಿಗೆ ಬದಲಾಯಿಸಿಕೊಂಡಿದ್ದಾರೆ.

12 “ಆಕಾಶಮಂಡಲವೇ, ನಡೆದ ಸಂಗತಿಗಳಿಗಾಗಿ ಬೆಚ್ಚಿಬೆರಗಾಗು!
    ಭಯದಿಂದ ನಡುಗು!”
ಎಂದು ಯೆಹೋವನು ನುಡಿಯುತ್ತಾನೆ.
13 “ನನ್ನ ಜನರು ಎರಡು ಅಪರಾಧಗಳನ್ನು ಮಾಡಿದ್ದಾರೆ.
    ಅವರು ನನ್ನಿಂದ ಮುಖ ತಿರುವಿದ್ದಾರೆ.
ನಾನು ಜೀವಜಲದ ಬುಗ್ಗೆಯಾಗಿದ್ದೇನೆ.
    ಅವರು ತಮ್ಮದೇ ಆದ ನೀರಿನ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ.
ಅವರು ಇತರ ದೇವರುಗಳ ಕಡೆಗೆ ತಿರುಗಿಕೊಂಡಿದ್ದಾರೆ.
    ಅವರ ತೊಟ್ಟಿಗಳು ಒಡೆದಿವೆ.
    ಅವುಗಳಲ್ಲಿ ನೀರು ತುಂಬಿಡಲು ಸಾಧ್ಯವಿಲ್ಲ.

14 “ಇಸ್ರೇಲಿನ ಜನರು ಗುಲಾಮರಾಗಿರುವರೇ?
    ಅವರು ಗುಲಾಮರಾಗಿ ಹುಟ್ಟಿದ ಮನುಷ್ಯನಂತಿರುವರೇ?
    ಬೇರೆಯವರು ಇಸ್ರೇಲರ ಸಂಪತ್ತನ್ನು ಏಕೆ ತೆಗೆದುಕೊಂಡರು?
15 ಪ್ರಾಯದಸಿಂಹಗಳು (ವೈರಿಗಳು) ಇಸ್ರೇಲ್ ಜನಾಂಗದ ಮೇಲೆ ಗರ್ಜಿಸುತ್ತಿವೆ.
    ಆ ಸಿಂಹಗಳು ಆರ್ಭಟಿಸುತ್ತಿವೆ; ಇಸ್ರೇಲರ ನಾಡನ್ನು ನಾಶಮಾಡಿವೆ.
ಇಸ್ರೇಲ್‌ನ ನಗರಗಳು ಸುಡಲ್ಪಟ್ಟಿವೆ;
    ಅವುಗಳು ನಿರ್ಜನವಾಗಿವೆ.
16 ಮೆಂಫೀಸ್ ಮತ್ತು ತಹಪನೇಸ್ ನಗರಗಳ ಜನರು
    ನಿನ್ನ ತಲೆಬುರುಡೆಯನ್ನು ಒಡೆದುಬಿಟ್ಟಿದ್ದಾರೆ.
17 ತೊಂದರೆಯು ನಿನ್ನ ತಪ್ಪಿನ ಫಲ.
    ನಿನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದ್ದ
    ನಿನ್ನ ದೇವರಾದ ಯೆಹೋವನಿಗೆ ನೀನು ವಿಮುಖನಾದೆ.
18 ಯೆಹೂದದ ಜನರೇ, ಅದರ ಬಗ್ಗೆ ಯೋಚಿಸಿರಿ.
    ಇದರಿಂದ ನಿಮಗೆ ಈಜಿಪ್ಟಿಗೆ ಹೋಗಲು ಸಹಾಯವಾಯಿತೇ?
    ನೈಲ್ ನದಿಯ ನೀರನ್ನು ಕುಡಿಯಲು ಈಜಿಪ್ಟಿಗೆ ಹೋಗುವುದೇಕೆ?[a]
    ಅವರ ನದಿಯ ನೀರನ್ನು ಕುಡಿಯಲು ಅಸ್ಸೀರಿಯಕ್ಕೆ ಹೋಗುವುದೇಕೆ?
19 ನೀವು ಕೆಟ್ಟದ್ದನ್ನು ಮಾಡಿದರೆ
    ಆ ಕೆಟ್ಟತನ ನಿಮಗೆ ಶಿಕ್ಷೆಯಾಗುವಂತೆ ಮಾತ್ರ ಮಾಡುತ್ತದೆ.
ನಿಮಗೆ ವಿಪತ್ತು ಬರುತ್ತದೆ.
    ಆ ವಿಪತ್ತು ನಿಮಗೊಂದು ಪಾಠವನ್ನು ಕಲಿಸುತ್ತದೆ.
ಅದರ ಬಗ್ಗೆ ಯೋಚಿಸಿರಿ.
    ಆಗ ನಿಮ್ಮ ದೇವರಿಗೆ ವಿಮುಖರಾಗುವುದು ಎಷ್ಟು ಕೆಟ್ಟದ್ದೆಂದು ನಿಮಗೆ ಗೊತ್ತಾಗುತ್ತದೆ.
    ನನಗೆ ಭಯಭಕ್ತಿ ತೋರದೆ ಇರುವದು ತಪ್ಪು.”
ಈ ಸಂದೇಶವು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಂದ ಬಂದಿತು.
20 “ಯೆಹೂದವೇ, ಬಹಳ ದಿನಗಳ ಹಿಂದೆಯೇ ನೀನು ನಿನ್ನ ನೊಗವನ್ನು ಕಳಚಿ ಎಸೆದುಬಿಟ್ಟೆ.
    ನನ್ನೊಂದಿಗೆ ಬಂಧಿಸಿದ ಕಣ್ಣಿಗಳನ್ನು ಹರಿದುಬಿಟ್ಟೆ.
    ‘ನಾನು ನಿನ್ನನ್ನು ಸೇವಿಸುವದಿಲ್ಲ’ ವೆಂದು ನನಗೆ ಹೇಳಿಬಿಟ್ಟೆ.
ನಿಜವಾಗಿ ನೋಡಿದರೆ ಎತ್ತರವಾದ ಎಲ್ಲಾ ಪರ್ವತಗಳ ಮೇಲೂ ಮತ್ತು ಸೊಂಪಾಗಿ ಬೆಳೆದ ಎಲ್ಲಾ ಮರಗಳ ಕೆಳಗೂ
    ನೀನು ಮಲಗಿಕೊಂಡು ವೇಶ್ಯೆಯರಂತೆ ವರ್ತಿಸಿದೆ.[b]
21 ಯೆಹೂದವೇ, ನಾನು ನಿನ್ನನ್ನು ಅತ್ಯುತ್ತಮ ದ್ರಾಕ್ಷಾಲತೆಯಂತೆ ನೆಟ್ಟೆ.
    ನೀನು ಒಳ್ಳೆಯ ಬೀಜದಂತಿದ್ದಿ.
ನೀನು ಕೆಟ್ಟ ಫಲಗಳನ್ನು ಫಲಿಸುವ ಬೇರೆ ದ್ರಾಕ್ಷಿಯ ಬಳ್ಳಿಯಾದದ್ದು ಹೇಗೆ?
22 ನೀನು ಚೌಳನಿಂದ ತೊಳೆದುಕೊಂಡರೂ
    ಹೆಚ್ಚು ಸೋಪನ್ನು ಉಪಯೋಗಿಸಿದರೂ
    ನಾನು ನಿನ್ನ ದೋಷವನ್ನು ಕಂಡುಹಿಡಿಯಬಲ್ಲೆ” ಅನ್ನುತ್ತಾನೆ ಯೆಹೋವನು.
23 “ಯೆಹೂದವೇ, ‘ನಾನು ತಪ್ಪಿತಸ್ಥಳಲ್ಲವೆಂದೂ ನಾನು ಬಾಳನ ವಿಗ್ರಹಗಳನ್ನು ಪೂಜಿಸಲಿಲ್ಲವೆಂದೂ’
    ನೀನು ನನಗೆ ಹೇಗೆ ಹೇಳುವೆ?
ನೀನು ಕಣಿವೆಯಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಯೋಚಿಸು.
    ನೀನು ಮಾಡಿದ ಕೆಲಸಗಳ ಬಗ್ಗೆ ಯೋಚಿಸು.
ನೀನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಿಹೋಗುವ
    ತೀವ್ರಗತಿಯ ಹೆಣ್ಣು ಒಂಟೆಯಂತೆ ಇರುವೆ.
24 ನೀನು ಮರುಭೂಮಿಯಲ್ಲಿ ವಾಸಿಸುವ ಕಾಡುಕತ್ತೆಯಂತೆ ಇರುವೆ.
    ಅದು ಬೆದೆಯ ಕಾಲದಲ್ಲಿ ಗಾಳಿಯನ್ನು ಮೂಸಿ ನೋಡುತ್ತದೆ.
    ಅದಕ್ಕೆ ಬೆದೆ ಏರಿದಾಗ ಯಾರೂ ಅದನ್ನು ಹಿಡಿಯಲು ಸಾಧ್ಯವಿಲ್ಲ.
ಅದು ಬೆದೆಗೆ ಬಂದಾಗ ಅದನ್ನು ಇಷ್ಟಪಡುವ ಪ್ರತಿಯೊಂದು ಗಂಡು ಕತ್ತೆಗೆ ಅದು ಲಭಿಸುವುದು.
    ಆಗ ಅದನ್ನು ಪಡೆಯುವುದು ಬಹಳ ಸುಲಭ.
25 ಯೆಹೂದವೇ, ವಿಗ್ರಹಗಳ ಬೆನ್ನುಹತ್ತಿ ಹೋಗುವದನ್ನು ನಿಲ್ಲಿಸು!
    ಆ ಅನ್ಯದೇವರುಗಳ ಬಗ್ಗೆ ನಿನ್ನಲ್ಲಿರುವ ಬಯಕೆಯನ್ನು ತೊರೆದುಬಿಡು.
ಆದರೆ ನೀನು ‘ಹಾಗೆ ಮಾಡಿದರೆ ಪ್ರಯೋಜನವೇನು?
    ನಾನು ಅವುಗಳನ್ನು ಬಿಡಲಾರೆ.
    ನಾನು ಆ ಅನ್ಯದೇವರುಗಳನ್ನು ಪ್ರೀತಿಸುತ್ತೇನೆ.
    ನಾನು ಅವುಗಳನ್ನು ಪೂಜಿಸಬಯಸುತ್ತೇನೆ’ ಎಂದು ಹೇಳುವೆ.

26 “ಜನರ ಕೈಗೆ ಸಿಕ್ಕಿಬಿದ್ದಾಗ
    ಕಳ್ಳನಿಗೆ ನಾಚಿಕೆಯಾಗುತ್ತದೆ.
ಅದೇ ರೀತಿಯಲ್ಲಿ ಇಸ್ರೇಲ್ ವಂಶವು ನಾಚಿಕೆಪಡುತ್ತದೆ.
    ರಾಜರು ಮತ್ತು ನಾಯಕರು ನಾಚಿಕೆಪಡುವರು.
    ಯಾಜಕರು ಮತ್ತು ಪ್ರವಾದಿಗಳು ನಾಚಿಕೆಪಡುವರು.
27 ಅವರು ಮರದ ತುಂಡುಗಳೊಡನೆ ಮಾತನಾಡಿ,
    ‘ನೀನು ನಮ್ಮ ತಂದೆ’ ಎಂದು ಹೇಳುವರು.
ಆ ಜನರು ಕಲ್ಲುಬಂಡೆಯೊಂದಿಗೆ ಮಾತನಾಡಿ,
    ‘ನೀನು ನಮಗೆ ಜನ್ಮಕೊಟ್ಟ ತಾಯಿ’ ಎಂದು ಹೇಳುವರು.
ಆ ಜನರೆಲ್ಲರು ನಾಚಿಕೆಪಡುವರು.
ಅವರು ನನ್ನ ಕಡೆಗೆ ನೋಡುವದಿಲ್ಲ.
    ಅವರು ನನಗೆ ವಿಮುಖರಾಗಿದ್ದಾರೆ.
ಆದರೆ ಯೆಹೂದದ ಜನರು ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಾಗ,
    ‘ಬಾ ನಮ್ಮನ್ನು ರಕ್ಷಿಸು’ ಎಂದು ನನ್ನನ್ನು ಕೇಳುತ್ತಾರೆ.
28 ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸಲಿ, ನೀವು ಮಾಡಿದ ವಿಗ್ರಹಗಳು ಎಲ್ಲಿವೆ?
    ನೀವು ಕಷ್ಟದಲ್ಲಿದ್ದಾಗ ಆ ವಿಗ್ರಹಗಳು ಬಂದು ನಿಮ್ಮನ್ನು ರಕ್ಷಿಸುವವೇ ಎಂಬುದನ್ನು ನೋಡೋಣ.
ಯೆಹೂದದ ನಿವಾಸಿಗಳೇ, ನಿಮ್ಮಲ್ಲಿ ಎಷ್ಟು ಪಟ್ಟಣಗಳಿವೆಯೋ ಅಷ್ಟು ವಿಗ್ರಹಗಳಿವೆ.

29 “ನೀವು ನನ್ನೊಂದಿಗೆ ಏಕೆ ಚರ್ಚೆಮಾಡುವಿರಿ,
    ನೀವೆಲ್ಲರೂ ನನ್ನ ವಿರುದ್ಧ ದಂಗೆ ಎದ್ದಿದ್ದೀರಿ”
ಎನ್ನುತ್ತಾನೆ ಯೆಹೋವನು.
30 “ಯೆಹೂದದ ಜನರೇ ನಾನು ನಿಮ್ಮನ್ನು ಶಿಕ್ಷಿಸಿದೆ,
    ಆದರೆ ಅದರಿಂದ ಪ್ರಯೋಜನವಾಗಲಿಲ್ಲ.
ಶಿಕ್ಷಿಸಿದರೂ ನೀವು ಹಿಂತಿರುಗಿ ಬರಲಿಲ್ಲ.
ನಿಮ್ಮಲ್ಲಿಗೆ ಬಂದ ಪ್ರವಾದಿಗಳನ್ನು ನೀವು ಕತ್ತಿಯಿಂದ ಕೊಂದುಹಾಕಿದಿರಿ.
    ನೀವು ಅಪಾಯಕಾರಿಯಾದ ಸಿಂಹದಂತಿದ್ದು ಪ್ರವಾದಿಗಳನ್ನು ಕೊಂದುಹಾಕಿದಿರಿ.”
31 ಈ ಪೀಳಿಗೆಯ ಜನರೇ, ಯೆಹೋವನ ಸಂದೇಶದ ಕಡೆಗೆ ಗಮನ ಕೊಡಿ,

“ಇಸ್ರೇಲಿನ ಜನರಿಗೆ ನಾನು ಮರಳುಗಾಡಿನಂತೆ ಇರುವೆನೇ?
    ನಾನು ಗಾಢಾಂಧಕಾರಮಯವಾದ ಮತ್ತು ಅಪಾಯಕಾರಿಯಾದ ಭೂಮಿಯಂತೆ ಇರುವೆನೇ?
ನನ್ನ ಜನರು, ‘ನಮಗೆ ಇಷ್ಟವಾದ ಮಾರ್ಗವನ್ನು ಅನುಸರಿಸಲು ನಾವು ಸ್ವತಂತ್ರರಾಗಿದ್ದೇವೆ.
    ಯೆಹೋವನೇ, ನಾವು ಪುನಃ ನಿನ್ನಲ್ಲಿಗೆ ಬರುವದಿಲ್ಲ’ ಎಂದು ಹೇಳುತ್ತಾರೆ.
ಅವರು ಹಾಗೆ ಏಕೆ ಹೇಳುತ್ತಾರೆ?
32 ಯುವತಿಯು ತನ್ನ ಆಭರಣಗಳನ್ನು ಮರೆಯುವಳೇ? ಇಲ್ಲ.
    ವಧುವು ಮದುವೆಯ ಉಡುಪನ್ನು ಧರಿಸಿಕೊಳ್ಳಲು ಮರೆಯುವಳೇ? ಇಲ್ಲ.
ಆದರೆ ನನ್ನ ಜನರು ನನ್ನನ್ನು ಅಸಂಖ್ಯಾತ ದಿನಗಳವರೆಗೆ ಮರೆತುಬಿಟ್ಟಿದ್ದಾರೆ.

33 “ಯೆಹೂದವೇ, ಪ್ರಿಯತಮನ ಬೆನ್ನುಹತ್ತಿ ಹೋಗುವದು ನಿನಗೆ ಗೊತ್ತು.
    ಆದಕಾರಣ ದುರಾಭ್ಯಾಸವನ್ನು ನೀನು ಕಲಿತುಕೊಂಡಿರುವೆ.
34 ನಿನ್ನ ಕೈಗಳ ಮೇಲೆ ರಕ್ತದ ಕಲೆ ಇದೆ.
    ಅದು ನಿರ್ದೋಷಿಗಳಾದ ಬಡವರ ರಕ್ತ.
ಅವರು ನಿನ್ನ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳರಾಗಿರಲಿಲ್ಲ.
    ಆದರೂ ನೀನು ಅವರನ್ನು ಕೊಲೆ ಮಾಡಿರುವೆ.
    ನೀನು ಅಂಥ ಕೆಟ್ಟ ಕೆಲಸವನ್ನು ಮಾಡಿರುವೆ.
35 ಆದರೆ ನೀನು, ‘ನಾನು ತಪ್ಪು ಮಾಡಿಲ್ಲ.
    ದೇವರು ನನ್ನ ಮೇಲೆ ಕೋಪಗೊಂಡಿಲ್ಲ’ ಎಂದು ಹೇಳುತ್ತಿರುವೆ.
ಆದ್ದರಿಂದ ನೀನು ಸುಳ್ಳು ಹೇಳಿದ ಅಪರಾಧಿಯೆಂದು ನಾನು ನಿನಗೆ ತೀರ್ಪುನೀಡುತ್ತೇನೆ.
    ಏಕೆಂದರೆ ‘ನಾನು ಯಾವ ತಪ್ಪೂ ಮಾಡಿಲ್ಲ’ ಎಂದು ನೀನು ಹೇಳಿಕೊಳ್ಳುತ್ತಿರುವೆ.
36 ನಿನ್ನ ವಿಚಾರಗಳನ್ನು ಬದಲಾಯಿಸುವದು ನಿನಗೆ ಸುಲಭ.
    ಅಸ್ಸೀರಿಯಾ ನಿನ್ನನ್ನು ನಿರಾಶೆಗೊಳಿಸಿತು.
ಆಗ ನೀನು ಅಸ್ಸೀರಿಯರನ್ನು ಬಿಟ್ಟು ಈಜಿಪ್ಟಿನ ಸಹಾಯವನ್ನು ಕೇಳಿದೆ,
    ಈಜಿಪ್ಟ್ ನಿನ್ನನ್ನು ನಿರಾಶೆಗೊಳಿಸುತ್ತದೆ.
37 ಕೊನೆಗೆ ನೀನು ಈಜಿಪ್ಟನ್ನು ಬಿಡುವೆ, ನಾಚಿಕೆಯಿಂದ
    ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವೆ.
ನೀನು ಆ ದೇಶಗಳನ್ನು ನಂಬಿರುವೆ,
    ಆದರೆ ಆ ದೇಶಗಳಿಂದ ನಿನಗೆ ಯಾವ ಅನುಕೂಲವೂ ಆಗದು.
    ಯೆಹೋವನು ಆ ದೇಶಗಳನ್ನು ನಿರಾಕರಿಸಿದ್ದಾನೆ.”
ಯೆಹೋವನು ಹೀಗೆ ನುಡಿದನು: “ಒಬ್ಬನು ತನ್ನ ಹೆಂಡತಿಯೊಂದಿಗೆ ವಿವಾಹವಿಚ್ಛೇದನ ಮಾಡಿಕೊಂಡ ಮೇಲೆ ಅವಳು ಮತ್ತೊಬ್ಬನನ್ನು ಮದುವೆಯಾದರೆ
    ಆ ಮೊದಲನೆಯ ಗಂಡನು ಪುನಃ ಅವಳಲ್ಲಿಗೆ ಬರಲು ಸಾಧ್ಯವೇ? ಇಲ್ಲ.
    ಆ ಮನುಷ್ಯನು ಪುನಃ ಆ ಸ್ತ್ರೀಯಲ್ಲಿಗೆ ಹೋದರೆ ಆ ದೇಶವು ಪರಿಪೂರ್ಣವಾಗಿ ಅಪವಿತ್ರವಾಗುತ್ತದೆ.
ಯೆಹೂದವೇ, ನೀನು ಬಹು ಜನರೊಂದಿಗೆ ಕಾಮದಾಟವಾಡಿದ ವೇಶ್ಯಾ ಸ್ತ್ರೀಯಂತೆ ವರ್ತಿಸಿದೆ.
    ಈಗ ನೀನು ಪುನಃ ನನ್ನಲ್ಲಿಗೆ ಬರಲು ಇಚ್ಛಿಸುವಿಯಾ?”
ಇದು ಯೆಹೋವನ ನುಡಿ.
“ಯೆಹೂದವೇ, ತಲೆಯೆತ್ತಿ ಬೋಳುಗುಡ್ಡಗಳ ಕಡೆಗೆ ನೋಡು.
    ನೀನು ಕಾಮಕೇಳಿ ಆಡದ ಸ್ಥಳ ಯಾವುದಾದರೂ ಇದೆಯೇ?
ಅರಬೀಯನಂತೆ ನೀನು ಮಾರ್ಗದ ಮಗ್ಗುಲಲ್ಲಿ
    ಪ್ರಿಯತಮರಿಗಾಗಿ ಎದುರುನೋಡುತ್ತಾ ಕುಳಿತಿರುವೆ.
ನೀನು ಭೂಮಿಯನ್ನು ಅಪವಿತ್ರಗೊಳಿಸಿದೆ;
    ಹೇಗೆಂದರೆ, ನೀನು ಅನೇಕ ಕೆಟ್ಟಕೆಲಸಗಳನ್ನು ಮಾಡಿದೆ.
    ನನಗೆ ವಿಶ್ವಾಸದ್ರೋಹ ಮಾಡಿದೆ.
ನೀನು ಪಾಪ ಮಾಡಿದ್ದರಿಂದ ಮಳೆ ಬರಲಿಲ್ಲ;
    ಹಿಂಗಾರು ಮಳೆಯೂ ಆಗಲಿಲ್ಲ.
ನಿನ್ನ ಮುಖದ ಮೇಲೆ ಇನ್ನೂ ವೇಶ್ಯೆಯ ಕಳೆಯೇ ಇದೆ.
    ನೀನು ಮಾಡಿದ ದುಷ್ಕೃತ್ಯಗಳಿಗಾಗಿ ನಿನಗೆ ನಾಚಿಕೆಯೂ ಆಗುವುದಿಲ್ಲ.
ಆದರೆ ಈಗ ನೀನು, ‘ನನ್ನ ತಂದೆಯೇ,
    ನಾನು ಚಿಕ್ಕ ಮಗು ಆದಾಗಿನಿಂದ ನೀನು ನನ್ನ ಪ್ರೀತಿಯ ಸ್ನೇಹಿತನಾಗಿದ್ದೆ’
ಎಂದು ಕೂಗುತ್ತಲಿರುವೆ.
ಇದಲ್ಲದೆ, ಯೆಹೂದವೇ,
    ‘ದೇವರು ಯಾವಾಗಲೂ ನನ್ನ ಮೇಲೆ ಕೋಪಿಷ್ಟನಾಗಿರುವುದಿಲ್ಲ.
    ದೇವರ ಕೋಪವು ಶಾಶ್ವತವಾಗಿರುವುದಿಲ್ಲ’ ಎಂದು ನೀನು ಹೇಳಿದೆಯಲ್ಲಾ.

“ಯೆಹೂದ, ನೀನು ಹಾಗೆ ಹೇಳಿದರೂ, ನಿನ್ನಿಂದಾದಷ್ಟು ಕೆಡುಕನ್ನು ಮಾಡುತ್ತಿರುವೆ.”

ಇಬ್ಬರು ಕೆಟ್ಟ ಸಹೋದರಿಯರು: ಇಸ್ರೇಲ್ ಮತ್ತು ಯೆಹೂದ

ಯೆಹೂದ ಪ್ರದೇಶವನ್ನು ಯೋಷೀಯನು ಆಳುತ್ತಿದ್ದಾಗ ಯೆಹೋವನು ನನ್ನೊಂದಿಗೆ ಮಾತನಾಡಿ, “ಯೆರೆಮೀಯನೇ, ಇಸ್ರೇಲ್‌[c] ಎಂಬಾಕೆಯು ಮಾಡಿದ ದುಷ್ಕೃತ್ಯಗಳನ್ನು ನೀನು ನೋಡಿದಿಯಾ? ಅವಳು ನನಗೆ ಹೇಗೆ ವಂಚಿಸಿದಳು ನೋಡಿದಿಯಾ? ಅವಳು ಪ್ರತಿಯೊಂದು ಬೆಟ್ಟದ ಮೇಲೆಯೂ ಸೊಂಪಾಗಿ ಬೆಳೆದ ಪ್ರತಿಯೊಂದು ಮರದ ಕೆಳಗೂ ವಿಗ್ರಹಗಳ ಜೊತೆ ಜಾರತನ ಮಾಡಿದಳು. ‘ಈ ದುಷ್ಕೃತ್ಯಗಳನ್ನೆಲ್ಲಾ ಮಾಡಿ ಮುಗಿಸಿದ ಮೇಲೆಯೂ ಇಸ್ರೇಲ್ ನನ್ನಲ್ಲಿಗೆ ಬರಬಹುದು’ ಎಂದು ನಾನು ಭಾವಿಸಿದ್ದೆ. ಆದರೆ ಅವಳು ನನ್ನಲ್ಲಿಗೆ ಬರಲಿಲ್ಲ. ಇಸ್ರೇಲಿನ ವಂಚಕಿ ಸಹೋದರಿಯಾದ ಯೆಹೂದ ಎಂಬಾಕೆಯು ಮಾಡಿದ್ದನ್ನು ನೋಡಿದಳು. ಇಸ್ರೇಲ್ ಎಂಬಾಕೆಯು ನನಗೆ ವಿಶ್ವಾಸದ್ರೋಹ ಮಾಡಿದ್ದಳು. ನಾನು ಏಕೆ ಹೊರಗೆ ಹಾಕಿದೆ ಎಂಬುದು ಅವಳಿಗೆ ಗೊತ್ತಿತ್ತು. ಅವಳ ಜಾರತನ ಎಂಬ ಪಾಪದ ಬಗ್ಗೆ ನನಗೆ ತಿಳಿದಿದೆ ಎಂದು ಇಸ್ರೇಲಳಿಗೆ ಗೊತ್ತಾಗಿತ್ತು. ಆದರೆ ಅದರಿಂದ ಅವಳ ವಂಚಕಳಾದ ಸೋದರಿಗೆ ಭಯವಾಗಲಿಲ್ಲ. ಯೆಹೂದ ಭಯಪಡಲಿಲ್ಲ. ಆಕೆಯು ಸಹ ವೇಶ್ಯೆಯರಂತೆ ವರ್ತಿಸಿದಳು. ತನ್ನ ನಡತೆಯ ಬಗ್ಗೆ ಆಕೆ ಯೋಚಿಸಲಿಲ್ಲ. ಅವಳು ತನ್ನ ದೇಶವನ್ನು ‘ಅಶುದ್ಧ’ಗೊಳಿಸಿದಳು. ಕಲ್ಲಿನ ಮತ್ತು ಮರದ ವಿಗ್ರಹಗಳನ್ನು ಪೂಜಿಸಿ ಜಾರತನ ಎಂಬ ಪಾಪವನ್ನು ಮಾಡಿದಳು. 10 ಇಸ್ರೇಲಿಗೆ ಇಷ್ಟೆಲ್ಲಾ ದಂಡನೆ ಆದರೂ ಅವಳ ಸೋದರಿಯಾದ ಯೆಹೂದ ತುಂಬುಹೃದಯದಿಂದ ನನ್ನಲ್ಲಿಗೆ ಬರಲಿಲ್ಲ. ಅವಳು ನನ್ನಲ್ಲಿಗೆ ತಿರುಗಿ ಬರುವ ನಟನೆಯನ್ನು ಮಾತ್ರ ಮಾಡಿದಳು. ಇದು ಯೆಹೋವನಾದ ನನ್ನ ನುಡಿ” ಎಂದು ಹೇಳಿದನು.

11 ಯೆಹೋವನು ನನಗೆ, “ಇಸ್ರೇಲ್ ಎಂಬಾಕೆಯು ನನಗೆ ನಂಬಿಗಸ್ತಳಾಗಿ ನಡೆದುಕೊಳ್ಳಲಿಲ್ಲ. ಆದರೆ ಅವಳು ಯೆಹೂದ ಎಂಬಾಕೆಗಿಂತ ಒಳ್ಳೆಯವಳಾಗಿ ಕಂಡು ಬಂದಳು. 12 ಯೆರೆಮೀಯನೇ, ಹೋಗು. ಈ ಸಂದೇಶವನ್ನು ಉತ್ತರದಿಕ್ಕಿನಲ್ಲಿ ಸಾರು. ಯೆಹೋವನು ಹೀಗೆ ಹೇಳುತ್ತಾನೆ:

“‘ವಿಶ್ವಾಸದ್ರೋಹಿಗಳಾದ ಇಸ್ರೇಲಿನ ಜನರೇ, ಹಿಂತಿರುಗಿ ಬನ್ನಿ.’
‘ನಾನು ಕೋಪಮುಖದಿಂದ ನಿಮ್ಮನ್ನು ನೋಡುವುದನ್ನು ನಿಲ್ಲಿಸುವೆನು.
    ನಾನು ಕರುಣಾಶಾಲಿ, ನಿತ್ಯಕೋಪಿಯಲ್ಲ.’
ಇದು ಯೆಹೋವನ ನುಡಿ.
13 ‘ನೀವು ನಿಮ್ಮ ಪಾಪವನ್ನು ಅರಿತುಕೊಂಡರೆ ಸಾಕು.
    ನೀವು ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧ ತಿರುಗಿದಿರಿ,
    ಅದೇ ನಿಮ್ಮ ಪಾಪ.
ನೀವು ಬೇರೆ ರಾಷ್ಟ್ರದವರ ವಿಗ್ರಹಗಳನ್ನು ಆರಾಧಿಸಿದಿರಿ.
    ನೀವು ಪ್ರತಿಯೊಂದು ಹಸಿರು ಮರದ ಕೆಳಗೆ ವಿಗ್ರಹಗಳನ್ನು ಆರಾಧಿಸಿದಿರಿ.
    ನೀವು ನನ್ನ ಆಜ್ಞೆಯನ್ನು ಪರಿಪಾಲಿಸಲಿಲ್ಲ’”
ಇದು ಯೆಹೋವನ ನುಡಿಯಾಗಿತ್ತು.

14 “ವಿಶ್ವಾಸದ್ರೋಹಿಗಳಾದ ಜನರೇ, ನನ್ನಲ್ಲಿಗೆ ಹಿಂತಿರುಗಿ ಬನ್ನಿ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಬ್ಬ ವ್ಯಕ್ತಿಯನ್ನು ಮತ್ತು ಪ್ರತಿಯೊಂದು ಕುಲದಿಂದ ಇಬ್ಬರನ್ನು ಆರಿಸಿ ಚೀಯೋನಿಗೆ ಕರೆದು ತರುವೆನು. 15 ನಿಮಗೆ ಹೊಸ ಪಾಲಕರನ್ನು ನೇಮಿಸುವೆನು. ಆ ಪಾಲಕರು ನನಗೆ ನಂಬಿಗಸ್ತರಾಗಿರುತ್ತಾರೆ. ಅವರು ಬುದ್ಧಿ ಮತ್ತು ಜ್ಞಾನಗಳಿಂದ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. 16 ಆಗ ದೇಶದಲ್ಲಿ ನಿಮ್ಮ ಸಂಖ್ಯೆ ಬೆಳೆಯುವದು” ಇದು ಯೆಹೋವನ ನುಡಿ.

“ಆ ಕಾಲದಲ್ಲಿ ಜನರು, ‘ನಮ್ಮಲ್ಲಿ ಯೆಹೋವನ ಒಡಂಬಡಿಕೆಯ ಪೆಟ್ಟಿಗೆ ಇದ್ದ ದಿನಗಳನ್ನು ಜ್ಞಾಪಿಸಿಕೊಳ್ಳುವ’ ಎಂದು ಹೇಳುವುದಿಲ್ಲ. ಅವರು, ‘ಪವಿತ್ರ ಪೆಟ್ಟಿಗೆ’ಯ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ಅವರು ಅದನ್ನು ಜ್ಞಾಪಿಸುವುದೂ ಇಲ್ಲ. ಅದರ ಅಭಾವವನ್ನು ಮನಸ್ಸಿಗೆ ತಂದುಕೊಳ್ಳುವುದೂ ಇಲ್ಲ. ಅವರು ಇನ್ನೊಂದು ‘ಪವಿತ್ರ ಪೆಟ್ಟಿಗೆ’ಯನ್ನು ಸಿದ್ಧಪಡಿಸುವದಿಲ್ಲ. 17 ಆ ಕಾಲದಲ್ಲಿ ಜೆರುಸಲೇಮ್ ನಗರಕ್ಕೆ ‘ಯೆಹೋವನ ಸಿಂಹಾಸನ’ ಎಂದು ಕರೆಯುವರು. ಯೆಹೋವನ ಹೆಸರಿಗೆ ಗೌರವ ಸೂಚಿಸಲು ಎಲ್ಲಾ ಜನಾಂಗದವರು ಜೆರುಸಲೇಮಿನಲ್ಲಿ ಬಂದು ಸೇರುವರು. ಅವರು ತಮ್ಮ ದುಷ್ಟ ಮತ್ತು ಹಟಮಾರಿ ಹೃದಯಗಳನ್ನು ಅನುಸರಿಸುವುದಿಲ್ಲ. 18 ಆ ಕಾಲದಲ್ಲಿ ಯೆಹೂದದ ಜನರು ಇಸ್ರೇಲ್ ಜನರನ್ನು ಕೂಡಿಕೊಳ್ಳುವರು. ಅವೆರಡೂ ಕೂಡಿ ಉತ್ತರದಿಕ್ಕಿನ ಪ್ರದೇಶದಿಂದ ಬರುವರು. ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶಕ್ಕೆ ಅವರು ಬರುವರು.”

19 ಯೆಹೋವನಾದ ನಾನು ಹೀಗೆಂದುಕೊಂಡೆ:

“ನಾನು ಸಂತೋಷದಿಂದ ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುವೆನು.
    ಬೇರೆ ಎಲ್ಲಾ ಜನಾಂಗಗಳ ಪ್ರದೇಶಕ್ಕಿಂತ ಅತಿ ಸುಂದರವಾದ ಪ್ರದೇಶವನ್ನು
    ನಿಮಗೆ ಕೊಡುವುದಕ್ಕೆ ನಾನು ಸಂತೋಷಪಡುವೆನು.
ನೀವು ನನ್ನನ್ನು ‘ತಂದೆ’ ಎಂದು ಕರೆಯುವಿರೆಂದು ನಾನು ಭಾವಿಸಿದ್ದೆ.
    ನೀವು ಯಾವಾಗಲೂ ನನ್ನ ಹಿಂಬಾಲಕರಾಗಿರುವಿರೆಂದು ಭಾವಿಸಿದ್ದೆ.
20 ಆದರೆ ನೀವು ಗಂಡನಿಗೆ ವಂಚಿಸುವ ಜಾರಿಣಿಯಂತಾದಿರಿ.
    ಇಸ್ರೇಲ್ ವಂಶದವರೇ, ನೀವು ನನಗೆ ದ್ರೋಹ ಮಾಡಿದಿರಿ” ಎಂದು ಯೆಹೋವನು ನುಡಿದನು.
21 ಬೋಳುಪರ್ವತದ ಮೇಲೆ ಅಳುವ ಧ್ವನಿಯನ್ನು ನೀವು ಕೇಳಬಹುದು.
    ಇಸ್ರೇಲಿನ ಜನರು ಕಣ್ಣೀರು ಸುರಿಸಿ ಕರುಣೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಅವರು ತುಂಬಾ ಕೆಟ್ಟುಹೋಗಿ
    ತಮ್ಮ ದೇವರಾದ ಯೆಹೋವನನ್ನು ಮರೆತರು.

22 ಇದಲ್ಲದೆ ಯೆಹೋವನು, “ಅಪನಂಬಿಗಸ್ತರಾದ ಜನರೇ,
    ನನ್ನಲ್ಲಿಗೆ ಹಿಂತಿರುಗಿ ಬನ್ನಿ.
ನನಗೆ ವಿಶ್ವಾಸದ್ರೋಹ ಮಾಡಿದುದಕ್ಕೆ ನಾನು ಕ್ಷಮಿಸುವೆನು,
    ಹಿಂತಿರುಗಿ ಬನ್ನಿ” ಎಂದು ಹೇಳುತ್ತಾನೆ.

“ಅದಕ್ಕೆ ಜನರು, ‘ಆಗಲಿ ನಿನ್ನಲ್ಲಿಗೆ ಬರುತ್ತೇವೆ.
    ನೀನೇ ನಮ್ಮ ದೇವರಾದ ಯೆಹೋವನು.
23 ಬೆಟ್ಟದ ಮೇಲೆ ವಿಗ್ರಹಗಳ ಪೂಜೆ ಮಾಡಿದ್ದು ನಮ್ಮ ಮೂರ್ಖತನವಾಯಿತು.
    ಬೆಟ್ಟಗಳ ಮೇಲಿನ ಎಲ್ಲಾ ಉತ್ಸವಗಳು ಕೇವಲ ಸುಳ್ಳು.
ಇಸ್ರೇಲಿನ ರಕ್ಷಣೆ ಖಚಿತವಾಗಿಯೂ
    ನಮ್ಮ ದೇವರಾದ ಯೆಹೋವನಿಂದ ಮಾತ್ರ ಸಾಧ್ಯ.
24 ನಮ್ಮ ಪೂರ್ವಿಕರು ಸಂಪಾದಿಸಿದ್ದೆಲ್ಲವನ್ನು
    ನೈವೇದ್ಯದಲ್ಲಿ ಸುಳ್ಳುದೇವರಾದ ಬಾಳನು ತಿಂದುಬಿಟ್ಟನು.
ನಮ್ಮ ಬಾಲ್ಯದಿಂದಲೂ ಹೀಗಾಗುತಾ ಬಂದಿದೆ.
ಭಯಂಕರವಾದ ಆ ಸುಳ್ಳು ದೇವರು
    ನಮ್ಮ ಪೂರ್ವಿಕರ ದನಕುರಿಗಳನ್ನೂ
    ಅವರ ಗಂಡುಹೆಣ್ಣುಮಕ್ಕಳನ್ನೂ ಬಲಿ ತೆಗೆದುಕೊಳ್ಳುತ್ತಿರುವನು.
25 ನಾವು ತಂದುಕೊಂಡ ಅವಮಾನದಲ್ಲಿ ಬಿದ್ದಿರೋಣ.
    ನಮ್ಮ ನಾಚಿಕೆಯು ಕಂಬಳಿಯು ಹೊದಿಸಿದಂತೆ ನಮ್ಮನ್ನು ಮುಚ್ಚಿಬಿಡಲಿ.
ನಾವು ನಮ್ಮ ದೇವರಾದ ಯೆಹೋವನ ವಿಷಯದಲ್ಲಿ ಪಾಪಮಾಡಿದ್ದೇವೆ.
    ನಾವು ಮತ್ತು ನಮ್ಮ ಪೂರ್ವಿಕರು ಪಾಪಮಾಡಿದ್ದೇವೆ.
    ನಮ್ಮ ಬಾಲ್ಯದಿಂದ ಇಂದಿನವರೆಗೆ ನಾವು ನಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸಲಿಲ್ಲ’” ಎಂದು ಮೊರೆಯಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International