Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೆಶಾಯ 18-22

ಇಥಿಯೋಪ್ಯಕ್ಕೆ ದೇವರ ಸಂದೇಶ

18 ಇಥಿಯೋಪ್ಯದ ನದಿಯ ದಡದಲ್ಲಿರುವ ಪ್ರಾಂತ್ಯಗಳನ್ನು ಗಮನಿಸಿರಿ. ಆ ಪ್ರಾಂತ್ಯವು ಕ್ರಿಮಿಕೀಟಗಳಿಂದ ತುಂಬಿದೆ. ಅವುಗಳ ರೆಕ್ಕೆಗಳ ಝೇಂಕಾರವನ್ನು ನೀವು ಕೇಳಬಹುದು. ಆ ದೇಶದವರು ಬೆಂಡಿನ ದೋಣಿಗಳಲ್ಲಿ ಜನರನ್ನು ಸಮುದ್ರದಾಚೆ ಕಳುಹಿಸುವರು.

ವೇಗವುಳ್ಳ ದೂತರೇ, ಉನ್ನತವಾಗಿಯೂ
    ಬಲಶಾಲಿಗಳಾಗಿಯೂ ಇರುವ ಜನರ ಬಳಿಗೆ ಹೋಗಿರಿ.
    ಎಲ್ಲಾ ದೇಶಗಳವರು ಉನ್ನತರಾದ ಬಲಶಾಲಿಗಳಾದ ಜನರಿಗೆ ಭಯಪಡುತ್ತಾರೆ.
ಅವರು ಬಲಾಢ್ಯ ಜನಾಂಗ.
    ಅವರ ಜನಾಂಗವು ಬೇರೆ ಜನಾಂಗಗಳನ್ನು ಸೋಲಿಸಿಬಿಡುತ್ತದೆ.
    ಅವರ ದೇಶವು ನದಿಯ ಶಾಖೆಗಳಿಂದ ತುಂಬಿರುತ್ತದೆ.
ಆ ಜನರಿಗೆ ಕೇಡು ಸಂಭವಿಸಲಿದೆ ಎಂಬ ಎಚ್ಚರಿಕೆಯನ್ನು ಕೊಡು.
    ಪ್ರಪಂಚದ ಎಲ್ಲಾ ಜನರು ಆ ದೇಶಕ್ಕೆ ಸಂಭವಿಸುವದನ್ನು ನೋಡುವರು.
ಪರ್ವತದ ತುದಿಯಲ್ಲಿ ಧ್ವಜವೇರಿಸಿದರೆ ಹೇಗೆ ಎಲ್ಲರಿಗೂ ಕಾಣಿಸುತ್ತದೋ
    ಹಾಗೆಯೇ ಜನರು ಅದನ್ನು ಸ್ಪಷ್ಟವಾಗಿ ನೋಡುವರು.
ಲೋಕದೊಳಗೆ ವಾಸಿಸುವ ಜನರೆಲ್ಲಾ ಆ ಉನ್ನತ ಬಲಶಾಲಿಗಳಾದ ಜನರಿಗೆ
    ಸಂಭವಿಸುವ ವಿಷಯಗಳ ವಾರ್ತೆಯನ್ನು ಕೇಳುವರು.
ರಣರಂಗದಲ್ಲಿ ತುತ್ತೂರಿಯು ಮೊಳಗುವುದು
    ಹೇಗೆ ಸ್ಪಷ್ಟವಾಗಿ ಕೇಳಿಸುತ್ತದೋ ಹಾಗೇ ಕೇಳಿಸಿಕೊಳ್ಳುವರು.

ಯೆಹೋವನು ಹೀಗೆನ್ನುತ್ತಾನೆ: “ನನಗಾಗಿ ಸಿದ್ಧಪಡಿಸಲ್ಪಟ್ಟ ಸ್ಥಳದಲ್ಲಿ ಮೌನವಾಗಿದ್ದು ಇವುಗಳನ್ನೆಲ್ಲಾ ವೀಕ್ಷಿಸುವೆನು. ಬೇಸಿಗೆಯ ಮಧ್ಯಾಹ್ನದ ಹೊತ್ತಿನಲ್ಲಿ ಜನರು ವಿಶ್ರಮಿಸುತ್ತಿರುವರು. ಅದು ಬೇಸಿಗೆಯ ಸುಗ್ಗಿಕಾಲವಾಗಿರುವದು; ಮಳೆ ಇರುವದಿಲ್ಲ, ಕೇವಲ ಮುಂಜಾನೆಯ ಇಬ್ಬನಿ ಇರುವದು. ಆಗ ಭಯಂಕರವಾದ ಒಂದು ಘಟನೆಯು ನಡೆಯುವದು. ಅದು ಪುಷ್ಪಗಳು ಅರಳುವ ಕಾಲದ ನಂತರ ನಡೆಯುವದು. ಹೊಸ ದ್ರಾಕ್ಷಾಲತೆಗಳು ಚಿಗುರುತ್ತಾ ಬೆಳೆಯುವವು. ಆದರೆ ಅವು ಫಲಕೊಡುವದಕ್ಕಿಂತ ಮೊದಲೇ ಶತ್ರುಗಳು ಬಂದು ಬಳ್ಳಿಗಳನ್ನು ಕೊಯ್ದುಹಾಕುವರು. ಬಳ್ಳಿಗಳನ್ನು ನಾಶಮಾಡಿ ವೈರಿಗಳು ಅವುಗಳನ್ನು ದೂರ ಬಿಸಾಡಿಬಿಡುವರು. ಅವುಗಳನ್ನು ಅಡವಿಯ ಪ್ರಾಣಿಗಳಿಗೂ ಬೆಟ್ಟದಹಕ್ಕಿಗಳಿಗೂ ತಿನ್ನಲು ಬಿಡುವರು. ಪಕ್ಷಿಗಳು ಬೇಸಿಗೆಕಾಲದಲ್ಲಿ ದ್ರಾಕ್ಷಾಲತೆಗಳ ಮೇಲೆ ವಾಸಿಸುತ್ತವೆ; ಚಳಿಗಾಲದಲ್ಲಿ ಕಾಡುಪ್ರಾಣಿಗಳು ದ್ರಾಕ್ಷಾಲತೆಗಳನ್ನು ತಿನ್ನುತ್ತವೆ.”

ಆ ಸಮಯದಲ್ಲಿ ಸರ್ವಶಕ್ತನಾದ ಯೆಹೋವನಿಗೆ ವಿಶೇಷವಾದ ಕಾಣಿಕೆಯು ಸಮರ್ಪಿಸಲ್ಪಡುವದು. ಆ ಕಾಣಿಕೆಯು ಉನ್ನತವಾಗಿರುವ ಬಲಶಾಲಿಗಳಾದ ಜನರಿಂದ ಬರುವದು. ಎಲ್ಲಾ ದೇಶಗಳ ಜನರು ಈ ಉನ್ನತವಾದ ಈ ಬಲಿಷ್ಠರಿಗೆ ಹೆದರುವರು. ಅವರು ಬಲಾಢ್ಯ ಜನಾಂಗವಾಗಿದ್ದಾರೆ. ಅವರ ಜನಾಂಗವು ಇತರ ಜನಾಂಗಗಳನ್ನು ಸೋಲಿಸುತ್ತದೆ. ಅವರ ದೇಶವು ನದಿಯ ಶಾಖೆಗಳಿಂದ ತುಂಬಿದೆ. ಈ ಕಾಣಿಕೆಯನ್ನು ಚೀಯೋನ್ ಪರ್ವತದಲ್ಲಿರುವ ಯೆಹೋವನ ಸ್ಥಳಕ್ಕೆ ತರುವರು.

ಈಜಿಪ್ಟಿಗೆ ದೇವರ ಸಂದೇಶ

19 ಈಜಿಪ್ಟಿನ ವಿಷಯವಾಗಿ ದುಃಖಕರವಾದ ಸಂದೇಶ: ಯೆಹೋವನು ವೇಗವಾಗಿ ಬರುವ ಮೋಡದೊಂದಿಗೆ ಬರುತ್ತಿದ್ದಾನೆ. ಆತನು ಈಜಿಪ್ಟನ್ನು ಪ್ರವೇಶಿಸುವಾಗ ಈಜಿಪ್ಟಿನ ಸುಳ್ಳುದೇವರುಗಳೆಲ್ಲಾ ಹೆದರಿ ನಡುಗುವವು. ಈಜಿಪ್ಟು ಧೈರ್ಯಶಾಲಿ ದೇಶವಾಗಿದ್ದರೂ, ಅದರ ಧೈರ್ಯ ಮೇಣದಂತೆ ಕರಗಿಹೋಗುವದು.

ದೇವರು ಹೇಳುವುದೇನೆಂದರೆ: “ನಾನು ಈಜಿಪ್ಟಿನ ಜನರಲ್ಲಿ ಒಳಜಗಳವನ್ನು ಹುಟ್ಟಿಸುವೆನು. ಜನರು ತಮ್ಮ ಸಹೋದರರೊಂದಿಗೆ ಜಗಳವಾಡುವರು. ನೆರೆಹೊರೆಯವರು ಪರಸ್ಪರ ಜಗಳವಾಡುವರು. ನಗರವು ನಗರದೊಂದಿಗೆ ಯುದ್ಧ ಮಾಡುವದು. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರದೊಂದಿಗೆ ಯುದ್ಧಮಾಡುವದು. ಈಜಿಪ್ಟಿನ ಜನರಲ್ಲಿ ಗಲಿಬಿಲಿ ಉಂಟಾಗುವದು. ಆ ಜನರು ತಮ್ಮ ಸುಳ್ಳುದೇವರುಗಳ ಬಳಿಗೂ ಪಂಡಿತರ ಬಳಿಗೂ ಓಡಿ ತಾವು ಏನು ಮಾಡಬೇಕೆಂದು ವಿಚಾರಿಸುವರು. ಮಂತ್ರವಾದಿಗಳನ್ನೂ ಪ್ರೇತವಿಚಾರಕರನ್ನೂ ಬೇತಾಳಿಕರನ್ನೂ ಕೇಳುವರು. ಆದರೆ ಅವರ ಯಾವ ಸಲಹೆಗಳೂ ಪ್ರಯೋಜನಕ್ಕೆ ಬರುವದಿಲ್ಲ.” ಸರ್ವಶಕ್ತನೂ ಒಡೆಯನೂ ಆಗಿರುವ ಯೆಹೋವನು ಹೇಳುವುದೇನೆಂದರೆ: “ನಾನು ಈಜಿಪ್ಟನ್ನು ಕಠಿಣನಾದ ಒಡೆಯನಿಗೆ ಒಪ್ಪಿಸುವೆನು. ಬಲಿಷ್ಠ ಒಡೆಯನು ಅವರನ್ನು ಆಳುವನು.”

ನೈಲ್ ನದಿಯು ಬತ್ತಿಹೋಗುವದು. ಪ್ರವಾಹದ ನೀರು ಇಲ್ಲವಾಗುವದು. ಎಲ್ಲಾ ನದಿಗಳಿಂದ ದುರ್ವಾಸನೆ ಹೊರಡುವದು. ಈಜಿಪ್ಟಿನ ಕಾಲಿವೆಗಳು ಬತ್ತಿಹೋಗುತ್ತವೆ; ಜಲಸಸ್ಯಗಳೆಲ್ಲ ಒಣಗಿಹೋಗುತ್ತವೆ. ನದಿಯ ದಡದಲ್ಲಿರುವ ಮರಗಳೆಲ್ಲಾ ಒಣಗಿಹೋಗಿ ಗಾಳಿಯಲ್ಲಿ ಹಾರಿಹೋಗುವವು. ನದಿಯ ತೀರದಲ್ಲಿರುವ ಮರಗಳೂ ಒಣಗಿಹೋಗುವವು.

ಬೆಸ್ತರೂ ಮೀನು ಹಿಡಿಯುವವರೂ ನೈಲ್ ನದಿಯ ನೀರು ಬತ್ತಿಹೋದದ್ದಕ್ಕಾಗಿ ದುಃಖಿಸುತ್ತಾ ಅಳುವರು. ಅವರು ಜೀವನೋಪಾಯಕ್ಕಾಗಿ ನೈಲ್ ನದಿಯನ್ನು ಆಧಾರ ಮಾಡಿಕೊಂಡಿದ್ದರು. ಬಟ್ಟೆಗಳನ್ನು ನೇಯುವವರು ದುಃಖಿಸುವರು. ನದಿ ಬತ್ತಿಹೋದದ್ದರಿಂದಲೂ ನದಿಯ ತೀರದಲ್ಲಿ ನಾರಿನ ಗಿಡಗಳು ಬೆಳೆಯದೆ ಇರುವದರಿಂದಲೂ ಅವರಿಗೆ ಬಟ್ಟೆ ನೇಯಲು ನಾರು ಸಿಗುವುದಿಲ್ಲ. 10 ನೀರನ್ನು ಉಳಿಸುವದಕ್ಕಾಗಿ ನದಿಗೆ ಅಣೆಕಟ್ಟನ್ನು ಕಟ್ಟುವ ಜನರೂ ದುಃಖಿಸುವರು. ಯಾಕೆಂದರೆ ನದಿಯಲ್ಲಿ ನೀರಿಲ್ಲದ ನಿಮಿತ್ತ ಅವರಿಗೆ ಕೆಲಸವಿರುವುದಿಲ್ಲ.

11 ಚೋಯನಿನ ನಗರದ ಪ್ರಮುಖರು ಮೂರ್ಖರಾಗಿದ್ದಾರೆ. ಫರೋಹನ “ಜ್ಞಾನಿಗಳಾದ ಸಲಹೆಗಾರರು” ತಪ್ಪು ಸಲಹೆ ಕೊಡುತ್ತಾರೆ. ಅವರು ತಾವೇ ಬುದ್ಧಿವಂತರೆಂದೂ ರಾಜವಂಶದವರೆಂದೂ ಹೇಳಿಕೊಳ್ಳುವರು. ಆದರೆ ತಾವು ನೆನಸುವಷ್ಟರ ಮಟ್ಟಿಗೆ ಅವರು ಬುದ್ಧಿವಂತರಲ್ಲ. 12 ಈಜಿಪ್ಟೇ, ನಿನ್ನ ಜ್ಞಾನಿಗಳು ಎಲ್ಲಿ? ಸರ್ವಶಕ್ತನಾದ ಯೆಹೋವನು ಈಜಿಪ್ಟ್ ದೇಶಕ್ಕೆ ಮಾಡಿರುವ ಯೋಜನೆಯನ್ನು ನಿನ್ನ ಜ್ಞಾನಿಗಳು ಮೊದಲು ತಿಳಿದುಕೊಳ್ಳಬೇಕು. ನಿಮಗೆ ಸಂಭವಿಸಲಿರುವುದನ್ನು ಅವರು ನಿನಗೆ ತಿಳಿಸಬೇಕು.

13 ಚೋಯನಿನ ಅಧಿಪತಿಗಳು ಮೋಸಹೋದರು. ನೋಫಿನ ಪ್ರಮುಖರು ಸುಳ್ಳನ್ನು ನಂಬಿದರು. ಆದ್ದರಿಂದ ನಾಯಕರು ಈಜಿಪ್ಟನ್ನು ತಪ್ಪುದಾರಿಗೆ ನಡೆಸಿದರು. 14 ಯೆಹೋವನು ಆ ನಾಯಕರನ್ನು ಗಲಿಬಿಲಿಪಡಿಸಿದನು. ಅವರು ಈಜಿಪ್ಟನ್ನು ತಪ್ಪಾದ ದಾರಿಯಲ್ಲಿ ನಡೆಸಿದರು. ಅವರು ಮಾಡುವ ಪ್ರತಿಯೊಂದು ಕಾರ್ಯವೂ ತಪ್ಪಾದದ್ದೇ. ಅವರು ಕುಡಿದು ಮತ್ತರಾದವರಂತೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾರೆ. 15 ಆ ನಾಯಕರುಗಳಿಗೆ ಏನೂ ಮಾಡಲಾಗದು. (ಈ ನಾಯಕರುಗಳು “ತಲೆಯೂ ಬಾಲವೂ” ಆಗಿದ್ದಾರೆ; “ಮರದ ಕೊಂಬೆಯೂ ಕಾಂಡವೂ” ಆಗಿದ್ದಾರೆ.)

16 ಆ ಸಮಯದಲ್ಲಿ ಈಜಿಪ್ಟಿನವರು ಭಯದಿಂದ ಕಂಗೆಟ್ಟ ಹೆಂಗಸರಂತಿರುವರು. ಅವರು ಸರ್ವಶಕ್ತನಾದವನಿಗೆ ಭಯಪಡುವರು. ಯೆಹೋವನು ಜನರನ್ನು ಶಿಕ್ಷಿಸಲು ತನ್ನ ಕೈಯನ್ನೆತ್ತುವನು. ಆಗ ಅವರೆಲ್ಲರೂ ಹೆದರಿಹೋಗುವರು. 17 ಯೆಹೂದ ಪ್ರಾಂತ್ಯದವರೂ ಈಜಿಪ್ಟಿನಲ್ಲಿರುವವರೂ ಭಯಪಡಬೇಕಾಗಿದೆ. ಈಜಿಪ್ಟಿನಲ್ಲಿ ಯಾರೇ ಆಗಲಿ ಯೆಹೂದದ ಹೆಸರು ಕೇಳಿದಾಗ ಭಯಪಡುವರು. ಯಾಕೆಂದರೆ ಭಯಂಕರ ಘಟನೆಗಳು ಈಜಿಪ್ಟಿನಲ್ಲಿ ಸಂಭವಿಸುವಂತೆ ಸರ್ವಶಕ್ತನಾದ ಯೆಹೋವನು ಮಾಡುತ್ತಾನೆ. 18 ಆ ಸಮಯದಲ್ಲಿ ಈಜಿಪ್ಟಿನಲ್ಲಿ ಕಾನಾನ್ ದೇಶದ (ಯೆಹೂದ್ಯರ) ಭಾಷೆಯನ್ನಾಡುವ ಐದು ಪಟ್ಟಣಗಳಿರುವವು. ಅದರಲ್ಲಿ ಒಂದರ ಹೆಸರು “ನಾಶನದ ನಗರ.” ಆ ಜನರು ಸರ್ವಶಕ್ತನಾದ ಯೆಹೋವನನ್ನು ಹಿಂಬಾಲಿಸಲು ತೀರ್ಮಾನಿಸುವರು.

19 ಆ ಸಮಯದಲ್ಲಿ ಈಜಿಪ್ಟಿನ ಮಧ್ಯದಲ್ಲಿ ಯೆಹೋವನಿಗಾಗಿ ಒಂದು ವೇದಿಕೆ ಇರುವದು. ಈಜಿಪ್ಟಿನ ಗಡಿಯಲ್ಲಿ ಯೆಹೋವನ ಗೌರವಾರ್ಥವಾಗಿ ಸ್ಮಾರಕಸ್ತಂಭ ಇರುವದು. 20 ಇದು ಸರ್ವಶಕ್ತನಾದ ಯೆಹೋವನು ಅದ್ಭುತವನ್ನು ನಡಿಸುತ್ತಾನೆಂಬುದಕ್ಕೆ ಗುರುತಾಗಿದೆ. ಜನರು ಯಾವಾಗಲಾದರೂ ಸರಿಯೇ ಸಹಾಯಕ್ಕಾಗಿ ಮೊರೆಯಿಟ್ಟರೆ ಆತನು ಸಹಾಯವನ್ನು ಕಳುಹಿಸುವನು. ಯೆಹೋವನು ಅವರನ್ನು ರಕ್ಷಿಸಲೂ ಕಾಪಾಡಲೂ ಒಬ್ಬನನ್ನು ಕಳುಹಿಸುವನು. ಆ ಮನುಷ್ಯನು ಬೇರೆಯವರಿಂದ ಶೋಷಿತರಾದವರನ್ನು ಸಂರಕ್ಷಿಸುವನು.

21 ಆ ಸಮಯದಲ್ಲಿ ಈಜಿಪ್ಟಿನ ಜನರು ಯೆಹೋವನನ್ನು ನಿಜವಾಗಿಯೂ ಅರಿತುಕೊಳ್ಳುವರು. ಅವರು ದೇವರನ್ನು ಪ್ರೀತಿಸುವರು. ಅವರು ಯೆಹೋವನನ್ನು ಸೇವಿಸಿ ಅನೇಕ ಯಜ್ಞಗಳನ್ನು ಸಮರ್ಪಿಸುವರು. ಯೆಹೋವನಿಗೆ ಹರಕೆ ಹೊತ್ತು ಸಲ್ಲಿಸುವರು. 22 ಯೆಹೋವನು ಈಜಿಪ್ಟಿನ ಜನರನ್ನು ಶಿಕ್ಷಿಸುವನು. ಆಮೇಲೆ ಆತನು ಅವರನ್ನು ಕ್ಷಮಿಸುವನು. ಆಗ ಅವರು ಆತನ ಬಳಿಗೆ ಹಿಂದಿರುಗಿ ಬರುವರು. ಯೆಹೋವನು ಅವರ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸುವನು.

23 ಆ ಸಮಯದಲ್ಲಿ ಈಜಿಪ್ಟಿನಿಂದ ಅಶ್ಶೂರದವರೆಗೆ ಹೆದ್ದಾರಿ ಇರುವುದು. ಆಗ ಅಶ್ಶೂರದವರು ಈಜಿಪ್ಟಿಗೂ, ಈಜಿಪ್ಟಿನವರು ಅಶ್ಶೂರಕ್ಕೂ ಪ್ರಯಾಣ ಮಾಡುವರು. ಈಜಿಪ್ಟಿನವರು ಅಶ್ಶೂರದವರೊಟ್ಟಿಗೆ ಕೆಲಸ ಮಾಡುವರು. 24 ಆ ಸಮಯದಲ್ಲಿ ಇಸ್ರೇಲ್, ಅಶ್ಶೂರ ಮತ್ತು ಈಜಿಪ್ಟು ಒಟ್ಟಾಗಿ ಸೇರಿ ದೇಶವನ್ನು ನಿಯಂತ್ರಿಸುವರು. ಇದು ದೇಶಕ್ಕೆ ಆಶೀರ್ವಾದದಾಯಕವಾಗಿರುವದು. 25 ಸರ್ವಶಕ್ತನಾದ ಯೆಹೋವನು ಈ ದೇಶಗಳನ್ನು ಆಶೀರ್ವದಿಸುವನು. ಆತನು, “ಈಜಿಪ್ಟೇ, ನೀನು ನನ್ನವನು; ಅಶ್ಶೂರವೇ, ನಾನು ನಿನ್ನನ್ನು ನಿರ್ಮಿಸಿದೆನು. ಇಸ್ರೇಲೇ, ನೀನು ನನ್ನ ಸ್ವಾಸ್ತ್ಯ. ನೀವೆಲ್ಲರೂ ಆಶೀರ್ವದಿಸಲ್ಪಟ್ಟವರು” ಎನ್ನುವನು.

ಅಶ್ಶೂರವು ಈಜಿಪ್ಟ್ ಮತ್ತು ಇಥಿಯೋಪ್ಯವನ್ನು ಸೋಲಿಸುವದು

20 ಸರ್ಗೋನ್ ಅಶ್ಶೂರದ ರಾಜನಾಗಿದ್ದನು. ಇವನು ತರ್ತಾನನ್ನು ಅಷ್ಡೋದಿಗೆ ವಿರುದ್ಧವಾಗಿ ಯುದ್ಧಮಾಡಲು ಕಳುಹಿಸಿದನು. ತರ್ತಾನ್ ಎಂಬವನು ಅಷ್ಡೋದ್ ನಗರಕ್ಕೆ ಹೋಗಿ ಅದನ್ನು ವಶಪಡಿಸಿಕೊಂಡನು. ಆ ಸಮಯದಲ್ಲಿ ಆಮೋಚನ ಮಗನಾದ ಯೆಶಾಯನೊಂದಿಗೆ ಯೆಹೋವನು ಮಾತನಾಡಿದನು. “ನಿನ್ನ ಶೋಕವಸ್ತ್ರಗಳನ್ನು ತೆಗೆದುಹಾಕು. ನಿನ್ನ ಕಾಲುಗಳಿಂದ ಪಾದರಕ್ಷೆಗಳನ್ನು ತೆಗೆದುಬಿಡು” ಎಂದು ಯೆಹೋವನು ಹೇಳಿದಾಗ ಯೆಶಾಯನು ಆತನಿಗೆ ವಿಧೇಯನಾದನು. ಯೆಶಾಯನು ಪಾದರಕ್ಷೆಗಳಿಲ್ಲದೆ, ಬಟ್ಟೆಗಳಿಲ್ಲದೆ ಅಡ್ಡಾಡಿದನು.

ಆಗ ಯೆಹೋವನು, “ಮೂರು ವರ್ಷಗಳ ತನಕ ನನ್ನ ಸೇವಕನಾದ ಯೆಶಾಯನು ಬಟ್ಟೆ ಇಲ್ಲದೆ, ಪಾದರಕ್ಷೆ ಇಲ್ಲದೆ ನಡೆದಾಡಿದ್ದಾನೆ. ಇದು ಈಜಿಪ್ಟಿಗೂ ಇಥಿಯೋಪ್ಯಕ್ಕೂ ಗುರುತಾಗಿದೆ. ಅಶ್ಶೂರದ ಅರಸನು ಈಜಿಪ್ಟನ್ನೂ ಇಥಿಯೋಪ್ಯವನ್ನೂ ಸೋಲಿಸುವನು. ಅಶ್ಶೂರವು ಜನರನ್ನು ಸೆರೆಹಿಡಿದು ಅವರ ರಾಜ್ಯಗಳಿಂದ ಹೊರಗೆ ಕೊಂಡುಹೋಗುವದು. ವೃದ್ಧರೂ ಬಾಲಕರೂ ಬಟ್ಟೆಯಿಲ್ಲದೆಯೂ ಪಾದರಕ್ಷೆಗಳಿಲ್ಲದೆಯೂ ಇರುವರು. ಅವರು ಪೂರ್ಣ ಬೆತ್ತಲೆಯಾಗಿರುವರು. ಈಜಿಪ್ಟಿನ ಜನರು ನಾಚಿಕೆಗೆ ತುತ್ತಾಗುವರು. ಜನರು ಇಥಿಯೋಪ್ಯದ ಕಡೆಗೆ ಸಹಾಯಕ್ಕಾಗಿ ನೋಡುವರು. ಅವರು ಕಂಗೆಟ್ಟು ಹೋಗುವರು. ಈಜಿಪ್ಟಿನ ಮಹಿಮೆಯನ್ನು ಗಮನಿಸಿದವರು ಈಗ ನಾಚಿಕೆಯಲ್ಲಿ ಬೀಳುವರು” ಎನ್ನುವನು.

ಸಮುದ್ರ ತೀರದಲ್ಲಿ ವಾಸಿಸುವವರು ಹೀಗೆ ಹೇಳುವರು: “ಆ ದೇಶದವರು ನಮಗೆ ಸಹಾಯ ಮಾಡುವರೆಂದು ಅವರನ್ನು ನಂಬಿದೆವು. ಅಶ್ಶೂರದ ಅರಸನಿಂದ ನಮ್ಮನ್ನು ಕಾಪಾಡುವಂತೆ ನಾವು ಅವರ ಬಳಿಗೆ ಓಡಿಹೋದೆವು. ಆದರೆ ಈಗ ನೋಡಿ, ಆ ದೇಶದವರು ಸೋತು ಹೋಗಿ ವೈರಿವಶವಾಗಿದ್ದಾರೆ. ಈಗ ನಾವು ಪಾರಾಗಲು ಹೇಗೆ ಸಾಧ್ಯ?”

ಬಾಬಿಲೋನಿಗೆ ದೇವರ ಸಂದೇಶ

21 ಸಮುದ್ರದ ಮರುಭೂಮಿಗೆ ದುಃಖದ ಸಂದೇಶ:

ನೆಗೆವ್ ಮೂಲಕ ಬೀಸುವ ಬಿರುಗಾಳಿಯಂತೆ ಮರುಭೂಮಿಯಿಂದಲೂ
    ಭಯಂಕರ ದೇಶದಿಂದಲೂ ಒಬ್ಬನು ದಂಡೆತ್ತಿ ಬರುವನು.
ನಡೆಯಲಿರುವ ಒಂದು ಭಯಂಕರ ಘಟನೆಯನ್ನು ನಾನು ದರ್ಶನದಲ್ಲಿ ನೋಡಿದ್ದೇನೆ.
    ನಿನಗೆ ವಿರುದ್ಧವಾಗಿ ದ್ರೋಹಿಗಳು ಏಳುತ್ತಿದ್ದಾರೆ.
    ನಿನ್ನ ಧನೈಶ್ವರ್ಯಗಳನ್ನು ಜನರು ಕಿತ್ತುಕೊಳ್ಳುತ್ತಿದ್ದಾರೆ.

ಏಲಾಮೇ, ಹೋಗಿ ಆ ಜನರೊಂದಿಗೆ ಹೋರಾಡು.
    ಮೇದ್ಯವೇ, ಆ ಪಟ್ಟಣವನ್ನು ನಿನ್ನ ಸೈನ್ಯದಿಂದ ಸೋಲಿಸು.
    ಆ ನಗರದ ಎಲ್ಲಾ ದುಷ್ಟತನವನ್ನು ನಾನು ಕೊನೆಗಾಣಿಸುವೆನು.

ನಾನು ಆ ಭಯಂಕರ ಸಂಗತಿಗಳನ್ನು ನೋಡಿದ್ದರಿಂದ ಈಗ ಭಯಪೀಡಿತನಾಗಿದ್ದೇನೆ.
    ಭಯದಿಂದ ನನ್ನ ಹೊಟ್ಟೆಯು ನೋಯುತ್ತಿದೆ. ಆ ನೋವು ಪ್ರಸವವೇದನೆಯಂತಿದೆ.
ನಾನು ಕೇಳುವ ವಿಷಯಗಳು ನನ್ನನ್ನು ಭಯಪಡಿಸಿವೆ;
    ನಾನು ನೋಡುವ ವಿಷಯಗಳು ನನ್ನನ್ನು ನಡುಗಿಸುತ್ತಿವೆ.
ನಾನು ಚಿಂತೆಯಿಂದಲೂ ಭಯದಿಂದಲೂ ನಡುಗುತ್ತಿದ್ದೇನೆ.
    ನನ್ನ ಆನಂದದ ರಾತ್ರಿಯು ಭಯಂಕರವಾಗಿದೆ.

ಜನರಾದರೋ, “ಊಟ ಬಡಿಸಿರಿ!
    ತಿನ್ನೋಣ, ಕುಡಿಯೋಣ” ಎಂದು ಹೇಳುತ್ತಿದ್ದಾರೆ.
ಅದೇ ಸಮಯದಲ್ಲಿ ಸೈನಿಕರು, “ಕಾವಲುಗಾರರನ್ನು ಇರಿಸಿರಿ,
    ಸೇನಾಪತಿಗಳೇ ಎದ್ದೇಳಿರಿ,
    ನಿಮ್ಮ ಗುರಾಣಿಗಳನ್ನು ಉಜ್ಜಿ ನಯಗೊಳಿಸಿರಿ” ಎಂದು ಹೇಳುತ್ತಿದ್ದಾರೆ.

ನನ್ನ ಒಡೆಯನು ನನಗೆ, “ಹೋಗಿ ಈ ನಗರವನ್ನು ಕಾಯಲು ಒಬ್ಬ ಮನುಷ್ಯನನ್ನು ಕಂಡುಹಿಡಿ. ಅವನು ಏನೂ ನೋಡಿದರೂ ನಮಗೆ ತಿಳಿಸಬೇಕು. ಅವನು ಸಾಲಾಗಿ ಬರುತ್ತಿರುವ ಸೈನಿಕರನ್ನೋ, ಕತ್ತೆಗಳನ್ನೋ, ಒಂಟೆಗಳನ್ನೋ ನೋಡಿದರೆ ಬಹಳ ಸೂಕ್ಷ್ಮವಾಗಿ ಆಲಿಸಬೇಕು.”

ಒಂದು ದಿವಸ ಆ ಕಾವಲುಗಾರನು,

“ನನ್ನ ಒಡೆಯನೇ, ಪ್ರತಿ ದಿನವೂ ನಾನು ಹಗಲಿರುಳು
    ಕಾವಲಿನ ಬುರುಜಿನಲ್ಲಿ ನಿಂತುಕೊಂಡು ಕಾವಲು ಕಾಯುತ್ತಿದ್ದೇನೆ;
ನೋಡು, ಅವರು ಬರುತ್ತಿದ್ದಾರೆ. ಅಶ್ವದಳಗಳು ಸಾಲುಸಾಲಾಗಿಯೂ ಬರುತ್ತಿವೆ” ಎಂದು ಕೂಗಿಕೊಂಡನು.

ಆಗ ಒಬ್ಬ ದೂತನು,
    “ಬಾಬಿಲೋನಿಗೆ ಸೋಲಾಯಿತು.
    ಬಾಬಿಲೋನು ನೆಲಕ್ಕೆ ಅಪ್ಪಳಿಸಲ್ಪಟ್ಟಿತು.
ಅದರ ದೇವ ದೇವತೆಯರ ವಿಗ್ರಹಗಳೆಲ್ಲಾ
    ನೆಲದ ಮೇಲೆ ಚೂರುಚೂರಾಗಿ ಬಿದ್ದಿವೆ” ಎಂದು ಹೇಳಿದನು.

10 ನನ್ನ ಬಡಿತಕ್ಕೆ ಈಡಾದ ಜನರೇ, ಸರ್ವಶಕ್ತನೂ ದೇವರೂ ಆಗಿರುವ ಯೆಹೋವನು ಹೇಳಿದ್ದನ್ನೆಲ್ಲಾ ಇಸ್ರೇಲರಾದ ನಿಮಗೆ ತಿಳಿಸಿದ್ದೇನೆ. ಕಣದಲ್ಲಿ ಧಾನ್ಯವು ನುಚ್ಚುನೂರಾಗುವಂತೆ ನೀವು ನಜ್ಜುಗುಜ್ಜಾಗುವಿರಿ.

ಎದೋಮಿಗೆ ದೇವರ ಸಂದೇಶ

11 ದೂಮದ ಕುರಿತು ದುಃಖದ ದೈವೋಕ್ತಿ:

ಸೇಯಿರ್‌ನಿಂದ ಎದೋಮನ್ನು ಯಾರೋ ಒಬ್ಬನು,
    “ಕಾವಲುಗಾರನೇ, ರಾತ್ರಿ ಮುಗಿಯಲು ಎಷ್ಟು ಸಮಯ ಉಂಟು?
    ರಾತ್ರಿಗೆ ಇನ್ನು ಎಷ್ಟು ಕಾಲ ಉಂಟು?” ಎಂದು ಕೇಳಿದನು.

12 ಅದಕ್ಕೆ ಕಾವಲುಗಾರ,
    “ಮುಂಜಾನೆ ಬರುತ್ತಿದೆ. ಆದರೆ ರಾತ್ರಿ ತಿರುಗಿ ಬರುತ್ತಿದೆ.
ನೀನೇನಾದರೋ ಕೇಳಬೇಕಿದ್ದರೆ ಮತ್ತೆ ಬಂದು ವಿಚಾರಿಸು”
    ಎಂದು ಉತ್ತರಿಸಿದನು.

ಅರೇಬಿಯಕ್ಕೆ ದೇವರ ಸಂದೇಶ

13 ಅರೇಬಿಯದ ಬಗ್ಗೆ ದುಃಖಕರವಾದ ಸಂದೇಶ:

ದೇದಾನಿನಿಂದ ಬಂದ ಪ್ರಯಾಣಿಕರು
    ಅರೇಬಿಯ ಮರುಭೂಮಿಯಲ್ಲಿನ ಪೊದೆಗಳಲ್ಲಿ ರಾತ್ರಿ ತಂಗಿದರು.
14 ಬಾಯಾರಿದ ಪ್ರಯಾಣಿಕರಿಗೆ ಅವರು ಕುಡಿಯಲು ನೀರು ಕೊಟ್ಟರು.
    ತೇಮದ ಕೆಲವರು ಹಸಿದ ಪ್ರವಾಸಿಗಳಿಗೆ ಊಟ ಕೊಟ್ಟರು.
15 ಅವರು ತಮ್ಮನ್ನು ಸಾಯಿಸಲಿಕ್ಕಿದ್ದ
    ಕತ್ತಿಯಿಂದ ತಪ್ಪಿಸಿಕೊಂಡು ಬಂದವರು.
ಅವರು ತಮ್ಮನ್ನು ಹೊಡೆಯಲು ಸಿದ್ಧವಾಗಿದ್ದ
    ಬಾಣಗಳಿಂದ ಪಾರಾಗಿ ಬಂದವರು.
ಅವರು ಘೋರ ರಣರಂಗದಿಂದ ಓಡಿಬಂದವರು.

16 ನನ್ನ ಒಡೆಯನಾದ ಯೆಹೋವನು ಈ ವಿಷಯಗಳು ಸಂಭವಿಸುವವೆಂದು ಹೇಳಿದನು. ಆತನು ಹೇಳಿದ್ದೇನೆಂದರೆ: “ಇನ್ನೊಂದು ವರ್ಷದಲ್ಲಿ ಕೂಲಿಗಾರನು ತನ್ನ ಸಮಯವನ್ನು ಲೆಕ್ಕಿಸುವಂತೆ ಕೇದಾರಿನ ಘನತೆಯೆಲ್ಲವೂ ಹೋಗಿ ಬಿಡುವದು. 17 ಆ ಸಮಯದಲ್ಲಿ ಕೆಲವೇ ಮಂದಿ ಬಿಲ್ಲುಗಾರರು ಕೇದಾರಿನ ವೀರರೊಳಗಿಂದ ಉಳಿಯುವರು.” ಇಸ್ರೇಲರ ದೇವರಾದ ಯೆಹೋವನು ಇದನ್ನು ನುಡಿದನು.

ಜೆರುಸಲೇಮಿಗೆ ದೇವರ ಸಂದೇಶ

22 ದಿವ್ಯದರ್ಶನದ ಕಣಿವೆಯ ವಿಷಯವಾಗಿ ದುಃಖದ ಸಂದೇಶ:

ಜನಗಳೇ, ನಿಮಗೆ ಏನಾಯಿತು?
    ನಿಮ್ಮ ಮನೆ ಮಾಳಿಗೆಯ ಮೇಲೆ ಯಾಕೆ ಅಡಗಿರುತ್ತೀರಿ?
ಹಿಂದಿನ ಕಾಲದಲ್ಲಿ ಈ ನಗರವು ಅತ್ಯಂತ ಜನಸಂದಣಿಯಿಂದ ಕೂಡಿತ್ತು.
ಈ ನಗರದಲ್ಲಿ ಗದ್ದಲವೂ ಜನರ ಸಂತಸದ ಧ್ವನಿಯೂ ತುಂಬಿತ್ತು.
    ಆದರೆ ಈಗ ಎಲ್ಲವೂ ಬದಲಾಯಿತು.
ನಿಮ್ಮ ಜನರು ಸತ್ತದ್ದು ಖಡ್ಗದಿಂದಲ್ಲ.
    ಯುದ್ಧದಲ್ಲಿ ಸಾಯದೆ ಬೇರೆ ರೀತಿಯಲ್ಲಿ ಸತ್ತರು.
ಅಧಿಪತಿಗಳೆಲ್ಲಾ ಒಟ್ಟಾಗಿ ಪಲಾಯನಗೈದರು.
    ಆದರೆ ಅವರೆಲ್ಲಾ ಬಿಲ್ಲುಗಳಿಲ್ಲದೆ ಹಿಡಿಯಲ್ಪಟ್ಟರು.
ನಿಮ್ಮ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಬಹು ದೂರಪ್ರದೇಶಗಳಿಗೆ ಓಡಿದರು.
    ಆದರೆ ಅವರೆಲ್ಲಾ ಹಿಡಿಯಲ್ಪಟ್ಟರು.

ಆದ್ದರಿಂದ ನಾನು ಹೇಳುವುದೇನೆಂದರೆ: “ನೀವು ನನ್ನ ಕಡೆಗೆ ನೋಡಬೇಡಿ!
    ನನ್ನನ್ನು ಅಳಲು ಬಿಡಿರಿ!
ಜೆರುಸಲೇಮಿನ ನಾಶನದ ಕುರಿತಾಗಿ ನನ್ನನ್ನು ಕೂಡಲೇ ಸಂತೈಸಬೇಡಿರಿ.”

ಯೆಹೋವನು ಒಂದು ವಿಶೇಷ ದಿನವನ್ನು ಆರಿಸಿರುತ್ತಾನೆ. ಆ ದಿನದಲ್ಲಿ ಗಲಭೆ ಮತ್ತು ಗಲಿಬಿಲಿಯು ಇರುವದು. ದಿವ್ಯದರ್ಶನದ ಕಣಿವೆಯಲ್ಲಿ ಜನರು ಒಬ್ಬರನ್ನೊಬ್ಬರು ತುಳಿದುಕೊಂಡು ಅವರ ಮೇಲೆಯೇ ನಡೆದುಕೊಂಡು ಹೋಗುವರು. ನಗರದ ಕೋಟೆಗೋಡೆಗಳು ಕೆಡವಲ್ಪಡುವವು. ಕಣಿವೆಯಲ್ಲಿ ವಾಸಿಸುವ ಜನರು ಬೆಟ್ಟದ ಮೇಲಿನ ನಗರದ ಜನರಿಗೆ ಚೀರಾಡುವರು. ಏಲಾಮಿನ ಅಶ್ವಸೈನಿಕರು ತಮ್ಮ ಬತ್ತಳಿಕೆಯನ್ನು ತೆಗೆದುಕೊಂಡು ರಣರಂಗಕ್ಕೆ ಹೊರಡುವರು. ಕೀರ್ ಸ್ಥಳದ ಜನರು ತಮ್ಮ ಗುರಾಣಿಗಳಿಂದ ಶಬ್ದಮಾಡುವರು. ಸೈನ್ಯಗಳು ನಿಮ್ಮ ವಿಶೇಷವಾದ ಕಣಿವೆಯಲ್ಲಿ ಎದುರುಬದುರಾಗಿ ಭೇಟಿಯಾಗುವರು. ಕಣಿವೆಯು ರಥಗಳಿಂದ ತುಂಬಿಹೋಗುವದು. ಅಶ್ವದಳದವರನ್ನು ದ್ವಾರದ ಮುಂದೆ ನಿಲ್ಲಿಸಲಾಗುವದು. ಆ ಸಮಯದಲ್ಲಿ ಯೆಹೂದದ ಜನರು ತಾವು ಕಾಡಿನ ಅರಮನೆಯಲ್ಲಿಟ್ಟಿದ್ದ ಆಯುಧಗಳನ್ನು ಉಪಯೋಗಿಸುವುದಕ್ಕೆ ಮನಸ್ಸು ಮಾಡುವರು. ಯೆಹೂದವನ್ನು ರಕ್ಷಿಸುವ ಗೋಡೆಗಳನ್ನು ಶತ್ರುಗಳು ಕೆಡವಿಹಾಕುವರು.

9-11 ದಾವೀದ ನಗರದ ಕೋಟೆಗೋಡೆಗಳಲ್ಲಿ ಬಿರುಕುಗಳು ಉಂಟಾಗುವವು. ಆ ಬಿರುಕುಗಳನ್ನು ನೀವು ಸ್ಪಷ್ಟವಾಗಿ ಕಾಣಬಹುದು. ಅದರೊಳಗಿರುವ ಮನೆಗಳನ್ನು ಲೆಕ್ಕ ಮಾಡಬಹುದು. ಆ ಮನೆಗಳ ಕಲ್ಲುಗಳನ್ನು ತೆಗೆದು ಬಿರುಕು ಮುಚ್ಚಲಾಗುವದು. ಎರಡು ಸಾಲು ಕೋಟೆಗೋಡೆಗಳ ಮಧ್ಯದಲ್ಲಿ ಹಳೆಯ ಕಾಲುವೆಯ ಮೂಲಕ ನೀರನ್ನು ತರಿಸಿ ಆ ನೀರನ್ನು ಉಳಿತಾಯ ಮಾಡುವಿರಿ.

ಇವೆಲ್ಲವನ್ನು ನೀವು ನಿಮ್ಮನ್ನು ಸಂರಕ್ಷಿಸಿಕೊಳ್ಳುವದಕ್ಕೋಸ್ಕರ ಮಾಡುವಿರಿ. ಆದರೆ ಇವೆಲ್ಲವನ್ನು ನಿರ್ಮಿಸಿದ ದೇವರ ಮೇಲೆ ನೀವು ನಂಬಿಕೆ ಇಡುವದಿಲ್ಲ. ಇದನ್ನು ಬಹಳ ಕಾಲದ ಹಿಂದೆ ನಿರ್ಮಿಸಿದ ದೇವರನ್ನು ನೀವು ನೋಡುವದಿಲ್ಲ. 12 ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನು ಜನರಿಗೆ, ಅವರ ಸತ್ತುಹೋದ ಸ್ನೇಹಿತರಿಗೋಸ್ಕರ ರೋಧಿಸಿ ದುಃಖಿಸಿರಿ ಎಂದು ಹೇಳುವನು. ಜನರು ತಮ್ಮ ತಲೆಗಳನ್ನು ಬೋಳಿಸಿ ಶೋಕವಸ್ತ್ರಗಳನ್ನು ಧರಿಸುವರು. 13 ಇಗೋ, ಈಗ ಜನರು ಸಂತೋಷಪಡುತ್ತಿದ್ದಾರೆ. ಅವರು ಹರ್ಷಿಸುತ್ತಾ:

“ದನಕುರಿಗಳನ್ನು ಕೊಯ್ಯಿರಿ, ನಾವು ಹಬ್ಬ ಆಚರಿಸೋಣ,
ಊಟಮಾಡಿ ದ್ರಾಕ್ಷಾರಸ ಕುಡಿಯೋಣ,
    ತಿಂದು, ಕುಡಿದು ಸಂತೋಷವಾಗಿರೋಣ. ಯಾಕೆಂದರೆ ನಾಳೆ ನಾವು ಸಾಯುವೆವು” ಎಂದು ಹೇಳುವರು.

14 ಸರ್ವಶಕ್ತನಾದ ಯೆಹೋವನು ನನಗೆ ತಿಳಿಸಿದ ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ನೀವು ಕೆಟ್ಟಕಾರ್ಯಗಳನ್ನು ನಡೆಸಿ ಅಪರಾಧಿಗಳಾಗಿರುವಿರಿ. ನಿಮ್ಮ ದುಷ್ಟತ್ವವು ಕ್ಷಮಿಸಲ್ಪಡುವ ಮುಂಚೆ ನೀವು ಸಾಯುವಿರಿ ಎಂದು ಖಂಡಿತವಾಗಿ ಹೇಳುತ್ತೇನೆ” ಇದು ನನ್ನ ಒಡೆಯನಾದ ಸರ್ವಶಕ್ತನ ನುಡಿಗಳು.

ಶೆಬ್ನಕ್ಕೆ ದೇವರ ಸಂದೇಶ

15 ನನ್ನ ಒಡೆಯನೂ ಸರ್ವಶಕ್ತನೂ ಆದ ಯೆಹೋವನು, “ಸೇವಕನಾದ ಶೆಬ್ನನ ಬಳಿಗೆ ಹೋಗು. ಅವನು ಅರಮನೆಯ ಮೇಲ್ವಿಚಾರಕನಾಗಿದ್ದಾನೆ. 16 ಆ ಸೇವಕನನ್ನು ‘ನೀನಿಲ್ಲಿ ಏನು ಮಾಡುತ್ತಿರುವೆ? ನಿನ್ನ ಕುಟುಂಬದವರಲ್ಲಿ ಯಾರನ್ನಾದರೂ ಇಲ್ಲಿ ಸಮಾಧಿ ಮಾಡಿರುವಿಯಾ? ಇಲ್ಲಿ ಸಮಾಧಿಯನ್ನು ಯಾಕೆ ನಿರ್ಮಿಸಿರುವೆ? ಎಂದು ಕೇಳು.’” ಅದಕ್ಕೆ ಯೆಶಾಯನು, “ಈ ಮನುಷ್ಯನನ್ನು ನೋಡು. ಅವನು ತನ್ನ ಸಮಾಧಿಯನ್ನು ಎತ್ತರವಾದ ಸ್ಥಳದಲ್ಲಿ ಸಿದ್ಧಪಡಿಸುತ್ತಿದ್ದಾನೆ. ಅವನು ಸಮಾಧಿ ಸಿದ್ಧಪಡಿಸಲು ಬಂಡೆಯನ್ನು ಕೊರೆಯುತ್ತಿದ್ದಾನೆ.

17-18 “ಮನುಷ್ಯನೇ, ಯೆಹೋವನು ನಿನ್ನನ್ನು ಧ್ವಂಸ ಮಾಡುವನು. ಆತನು ನಿನ್ನನ್ನು ಚೆಂಡಿನಂತೆ ಉರುಳಿಸಿ ಬಹುದೂರಕ್ಕೆ ಅಂದರೆ ಬೇರೊಂದು ದೇಶದ ತೆರೆದ ತೋಳುಗಳಿಗೆ ಎಸೆದುಬಿಡುವನು. ಅಲ್ಲಿ ನೀನು ಸಾಯುವೆ” ಎಂದು ಹೇಳಿದನು.

ಅದಕ್ಕೆ ಯೆಹೋವನು, “ನೀನು ನಿನ್ನ ರಥಗಳಲ್ಲಿ ಹೆಚ್ಚಳಪಡುತ್ತಿರುವೆ. ಆದರೆ ಆ ದೂರದೇಶದಲ್ಲಿರುವ ನಿನ್ನ ಹೊಸ ಅರಸನ ಬಳಿಯಲ್ಲಿ ಇದಕ್ಕಿಂತಲೂ ಶ್ರೇಷ್ಠವಾದ ರಥಗಳಿವೆ. ಅವನ ಅರಮನೆಯಲ್ಲಿ ನಿನ್ನ ರಥಗಳು ಮುಖ್ಯವಾದವುಗಳಾಗಿರುವುದಿಲ್ಲ. 19 ಇಲ್ಲಿ ನೀನಿರುವ ಮುಖ್ಯ ಹುದ್ದೆಯಿಂದ ನಿನ್ನನ್ನು ತಳ್ಳಿಬಿಡುವೆನು. ನಿನ್ನ ಹೊಸ ಅರಸನು ನಿನ್ನನ್ನು ಆ ಹುದ್ದೆಯಿಂದ ತೆಗೆದುಬಿಡುವನು. 20 ಆ ಸಮಯದಲ್ಲಿ ನನ್ನ ಸೇವಕನೂ ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ನಾನು ಕರೆಯುವೆನು. 21 ನಿನ್ನ ಬಟ್ಟೆಯನ್ನು ತೆಗೆದು ಆ ಸೇವಕನಿಗೆ ಕೊಡುವೆನು. ನಿನ್ನ ರಾಜದಂಡವನ್ನು ಅವನಿಗೆ ಕೊಡುವೆನು. ನಿನ್ನ ವಿಶೇಷ ಹುದ್ದೆಯನ್ನು ಅವನಿಗೆ ಕೊಡುವೆನು. ಆ ಸೇವಕನು ಯೆಹೂದದ ಜನರಿಗೂ ಜೆರುಸಲೇಮಿನ ಜನರಿಗೂ ತಂದೆಯಂತಿರುವನು.

22 “ದಾವೀದನ ಮನೆಯ ಬೀಗದ ಕೈಯನ್ನು ಅವನ ಕುತ್ತಿಗೆಯಲ್ಲಿರಿಸುವೆನು. ಅವನು ಬಾಗಿಲನ್ನು ತೆರೆದರೆ ಅದು ತೆರೆದೇ ಇರುವದು. ಅದನ್ನು ಯಾರೂ ಮುಚ್ಚಲಾರರು. ಅವನು ಬಾಗಿಲನ್ನು ಮುಚ್ಚಿದರೆ ಅದು ಮುಚ್ಚಿಯೇ ಇರುವದು. ಅದನ್ನು ತೆರೆಯಲು ಯಾರಿಂದಲೂ ಆಗುವದಿಲ್ಲ. 23 ಒಂದು ಗಟ್ಟಿಯಾದ ಹಲಗೆಯಲ್ಲಿ ಮೊಳೆಯನ್ನು ಹೊಡೆದು ಗಟ್ಟಿಯಾಗಿರಿಸುವಂತೆ ಅವನನ್ನು ನಾನು ಬಲಪಡಿಸುವೆನು. ಆ ಸೇವಕನು ತನ್ನ ಕುಟುಂಬದವರಿಗೆ ಗೌರವಪೀಠದಂತಿರುವನು. 24 ಅವನ ತಂದೆಯ ಮನೆಯ ಎಲ್ಲಾ ವಿಶೇಷ ಸಂಗತಿಗಳನ್ನು, ವಸ್ತುಗಳನ್ನು ಅವನಿಗೆ ತೂಗುಹಾಕುವರು. ಎಲ್ಲಾ ಹಿರಿಕಿರಿಯರು ಅವನ ಮೇಲೆ ಆತುಕೊಂಡಿರುವರು. ಅವರು ಅವನಿಗೆ ತೂಗುಹಾಕಲ್ಪಟ್ಟ ಚಿಕ್ಕಚಿಕ್ಕ ಪಾತ್ರೆಗಳಂತೆಯೂ ನೀರಿನ ದೊಡ್ಡ ಸೀಸೆಗಳಂತೆಯೂ ಇರುವರು.”

25 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ಆ ಸಮಯದಲ್ಲಿ ಹಲಗೆಗೆ ಬಲವಾಗಿ ಹೊಡೆಯಲ್ಪಟ್ಟ ಆ ಮೊಳೆಯು (ಶೆಬ್ನ) ಬಲಹೀನವಾಗಿ ತುಂಡಾಗುವದು. ಆ ಮೊಳೆಯು ನೆಲಕ್ಕೆ ಬಿದ್ದು ನಾಶವಾಗುವದು. ಆಗ ಆ ಮೊಳೆಗೆ ತೂಗುಹಾಕಿದ್ದೆಲ್ಲವೂ ಅದರೊಂದಿಗೆ ನೆಲಕ್ಕೆ ಬೀಳುವದು. ಆಗ ನಾನು ಈ ಸಂದೇಶದಲ್ಲಿ ಹೇಳಿದ್ದೆಲ್ಲವೂ ಸಂಭವಿಸುವದು. ಅವುಗಳು ನೆರವೇರುತ್ತವೆ ಯಾಕೆಂದರೆ ಅವುಗಳನ್ನು ಹೇಳಿದಾತನು ಯೆಹೋವನೇ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International