Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 115-118

115 ಯೆಹೋವನೇ, ಘನಮಾನಗಳು ನಮ್ಮವಲ್ಲ!
    ಅವು ನಿನ್ನವೇ.
ನಿನ್ನ ಪ್ರೀತಿಯ ನಿಮಿತ್ತವಾಗಿಯೂ ನಂಬಿಗಸ್ತಿಕೆಯ ನಿಮಿತ್ತವಾಗಿಯೂ ಘನಮಾನಗಳು ನಿನಗೇ ಸಲ್ಲತಕ್ಕದ್ದು.
ಅವರ ದೇವರು ಎಲ್ಲಿದ್ದಾನೆಂದು ಜನಾಂಗಗಳು ಯಾಕೆ ಹೇಳಬೇಕು?
ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಬಯಸಿದ್ದನ್ನೆಲ್ಲಾ ಮಾಡುತ್ತಾನೆ.
ಅನ್ಯಜನಾಂಗಗಳ “ದೇವರುಗಳು” ಬೆಳ್ಳಿಬಂಗಾರಗಳಿಂದ ಮಾಡಿದ ವಿಗ್ರಹಗಳಷ್ಟೇ.
    ಅವುಗಳನ್ನು ಮಾಡಿದವರು ಮನುಷ್ಯರೇ.
ಆ ವಿಗ್ರಹಗಳಿಗೆ ಬಾಯಿಗಳಿವೆ, ಆದರೆ ಮಾತಾಡಲಾರವು.
    ಕಣ್ಣುಗಳಿವೆ, ಆದರೆ ನೋಡಲಾರವು.
ಕಿವಿಗಳಿವೆ, ಆದರೆ ಕೇಳಲಾರವು.
    ಮೂಗುಗಳಿವೆ, ಆದರೆ ಮೂಸಲಾರವು.
ಕೈಗಳಿವೆ, ಆದರೆ ಯಾವುದನ್ನೂ ಮುಟ್ಟಲಾರವು.
    ಕಾಲುಗಳಿವೆ, ಆದರೆ ನಡೆಯಲಾರವು.
    ಅವುಗಳ ಗಂಟಲುಗಳಿಂದ ಶಬ್ದವೇ ಹೊರಡದು.
ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಟ್ಟಿರುವವರೂ ಅವುಗಳಂತೆಯೇ.

ಇಸ್ರೇಲರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
10 ಆರೋನನ ಮನೆತನದವರೇ, ಯೆಹೋವನಲ್ಲಿ ಭರವಸವಿಡಿರಿ.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.
11 ಯೆಹೋವನ ಭಕ್ತರು ಆತನಲ್ಲಿ ಭರವಸವಿಡುವರು.
    ಆತನು ಅವರ ಬಲವೂ ಗುರಾಣಿಯೂ ಆಗಿದ್ದಾನೆ.

12 ಯೆಹೋವನು ನಮ್ಮನ್ನು ಜ್ಞಾಪಕಮಾಡಿಕೊಂಡು ಆಶೀರ್ವದಿಸುವನು.
    ಆತನು ಇಸ್ರೇಲನ್ನೂ ಆರೋನನ ಮನೆತನವನ್ನೂ ಆಶೀರ್ವದಿಸುವನು.
13 ಆತನು ದೊಡ್ಡವರೂ ಚಿಕ್ಕವರೂ ಎಂದೆನ್ನದೆ ತನ್ನ ಭಕ್ತರನ್ನೆಲ್ಲಾ ಆಶೀರ್ವದಿಸುವನು.

14 ಯೆಹೋವನು ನಿಮ್ಮ ಕುಟುಂಬಗಳನ್ನೂ ನಿಮ್ಮ ಮಕ್ಕಳ ಕುಟುಂಬಗಳನ್ನೂ ಅಭಿವೃದ್ಧಿಪಡಿಸಲಿ.
15     ಯೆಹೋವನಿಂದ ನಿಮಗೆ ಆಶೀರ್ವಾದವಾಗಲಿ.
    ಪರಲೋಕವನ್ನೂ ಭೂಲೋಕವನ್ನೂ ಸೃಷ್ಟಿಮಾಡಿದಾತನು ಆತನೇ.
16 ಪರಲೋಕವು ಯೆಹೋವನದು.
    ಆತನು ಭೂಲೋಕವನ್ನು ಮನುಷ್ಯರಿಗೆ ಕೊಟ್ಟನು.
17 ಸತ್ತುಹೋದವರು ಯೆಹೋವನನ್ನು ಕೊಂಡಾಡುವುದಿಲ್ಲ.
    ಸಮಾಧಿಯೊಳಗಿರುವವರು ಆತನನ್ನು ಸ್ತುತಿಸುವುದಿಲ್ಲ.
18 ನಾವಾದರೋ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು!

ಯೆಹೋವನಿಗೆ ಸ್ತೋತ್ರ!

116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
    ನಾನು ಆತನನ್ನು ಪ್ರೀತಿಸುತ್ತೇನೆ.
ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
    ಆತನು ನನಗೆ ಕಿವಿಗೊಡುತ್ತಾನೆ.
ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
    ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
    ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
ಆಗ ನಾನು ಯೆಹೋವನ ಹೆಸರು ಹೇಳಿ,
    “ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
ಯೆಹೋವನು ಒಳ್ಳೆಯವನೂ ಕೃಪಾಪೂರ್ಣನೂ ಆಗಿದ್ದಾನೆ.
    ನಮ್ಮ ದೇವರು ಕರುಣಾಮಯನಾಗಿದ್ದಾನೆ.
ಯೆಹೋವನು ಅಸಹಾಯಕರನ್ನು ಕಾಪಾಡುವನು.
    ನಾನು ಅಸಹಾಯಕನಾಗಿದ್ದಾಗ ಯೆಹೋವನು ನನ್ನನ್ನು ರಕ್ಷಿಸಿದನು.
ನನ್ನ ಆತ್ಮವೇ, ವಿಶ್ರಮಿಸಿಕೊ!
    ಯೆಹೋವನು ನಿನ್ನನ್ನು ಕಾಪಾಡುವನು.
ಯೆಹೋವನೇ, ನೀನು ನನ್ನ ಆತ್ಮವನ್ನು ಮರಣದಿಂದ ರಕ್ಷಿಸಿದೆ.
    ನೀನು ನನ್ನ ಕಣ್ಣೀರನ್ನು ನಿಲ್ಲಿಸಿದೆ;
    ಬೀಳದಂತೆ ನನ್ನನ್ನು ಕಾಪಾಡಿದೆ.
ಜೀವಿಸುವವರ ನಾಡಿನಲ್ಲಿ ನಾನು ಯೆಹೋವನ ಸೇವೆಯನ್ನು ಮುಂದುವರಿಸುವೆನು.

10 “ನಾಶವಾದೆನು!” ಎಂದು
    ನಾನು ಹೇಳಿದಾಗಲೂ ನಂಬಿಕೊಂಡೇ ಇದ್ದೆನು.
11 ನಾನು ಭಯಗೊಂಡು, “ಎಲ್ಲಾ ಮನುಷ್ಯರು ಸುಳ್ಳುಗಾರರಾಗಿದ್ದಾರೆ!”
    ಎಂದು ಹೇಳಿದಾಗಲೂ ನಂಬಿಕೊಂಡೇ ಇದ್ದೆನು.

12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
    ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
    ಜನರ ಮುಂದೆ ಆತನಿಗೆ ಸಲ್ಲಿಸುವೆನು.

15 ಯೆಹೋವನು ತನ್ನ ಭಕ್ತರ ಮರಣವನ್ನು
    ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
    ನಿನ್ನ ದಾಸಿಯರಲ್ಲೊಬ್ಬಳ ಮಗ.
    ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
    ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
    ಈ ಯಜ್ಞಗಳನ್ನು ಅರ್ಪಿಸುವೆನು.

ಯೆಹೋವನಿಗೆ ಸ್ತೋತ್ರವಾಗಲಿ!

117 ಸರ್ವಜನಾಂಗಗಳೇ, ಯೆಹೋವನನ್ನು ಕೊಂಡಾಡಿರಿ.
    ಸರ್ವಜನರೇ, ಆತನನ್ನು ಸ್ತುತಿಸಿರಿ.
ಆತನ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ.
    ಆತನ ನಂಬಿಗಸ್ತಿಕೆಯು ಶಾಶ್ವತವಾದದ್ದು.

ಯೆಹೋವನಿಗೆ ಸ್ತೋತ್ರವಾಗಲಿ.

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
ಯಾಜಕರೇ,
    “ಆತನ ಪ್ರೀತಿ ಶಾಶ್ವತವಾದದ್ದು!” ಎಂದು ಹೇಳಿರಿ.
ಯೆಹೋವನ ಭಕ್ತರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ನಾನು ಆಪತ್ತಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು.
    ಆತನು ನನಗೆ ಸದುತ್ತರವನ್ನು ದಯಪಾಲಿಸಿ ನನ್ನನ್ನು ಬಿಡಿಸಿದನು.
ಯೆಹೋವನು ನನ್ನೊಂದಿಗಿದ್ದಾನೆ, ಆದ್ದರಿಂದ ನಾನು ಭಯಪಡುವುದಿಲ್ಲ.
    ಮನುಷ್ಯರು ನನಗೇನು ಮಾಡಬಲ್ಲರು?
ಯೆಹೋವನು ನನಗೆ ಸಹಾಯಕನಾಗಿದ್ದಾನೆ.
    ನನ್ನ ಶತ್ರುಗಳಿಗಾಗುವ ಸೋಲನ್ನು ಕಣ್ಣಾರೆ ಕಾಣುವೆನು.
ಜನರಲ್ಲಿ ಭರವಸೆ ಇಡುವುದಕ್ಕಿಂತಲೂ
    ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.
ನಿಮ್ಮ ನಾಯಕರುಗಳಲ್ಲಿ ಭರವಸೆ ಇಡುವುದಕ್ಕಿಂತಲೂ
    ಯೆಹೋವನಲ್ಲಿ ಭರವಸೆ ಇಡುವುದೇ ಉತ್ತಮ.

10 ಅನೇಕ ಶತ್ರುಗಳು ನನ್ನನ್ನು ಸುತ್ತುಗಟ್ಟಿದರು.
    ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
11 ಶತ್ರುಗಳು ನನ್ನನ್ನು ಮತ್ತೆಮತ್ತೆ ಸುತ್ತುಗಟ್ಟಿದರು.
    ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.
12 ಶತ್ರುಗಳು ಜೇನುನೊಣಗಳ ಹಿಂಡಿನಂತೆ ನನ್ನನ್ನು ಸುತ್ತುಗಟ್ಟಿದರು.
    ಆದರೆ, ಧಗಧಗನೆ ಉರಿಯುವ ಪೊದೆಯಂತೆ ಅವರು ಕೊನೆಗೊಂಡರು.
ನಾನು ಅವರನ್ನು ಯೆಹೋವನ ಶಕ್ತಿಯಿಂದ ಸೋಲಿಸಿದೆನು.

13 ಶತ್ರುಗಳು ನನ್ನ ಮೇಲೆ ಆಕ್ರಮಣ ಮಾಡಿ ಸಂಪೂರ್ಣವಾಗಿ ನಾಶಮಾಡಲಿದ್ದರು.
    ಆದರೆ ಯೆಹೋವನು ನನಗೆ ಸಹಾಯ ಮಾಡಿದನು.
14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

25 “ಯೆಹೋವನಿಗೆ ಸ್ತೋತ್ರವಾಗಲಿ!
    ಆತನು ನಮ್ಮನ್ನು ರಕ್ಷಿಸಿದ್ದಾನೆ.
26     ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಸುಸ್ವಾಗತ!”

“ಯೆಹೋವನ ಆಲಯದಿಂದ ನಾವು ನಿನ್ನನ್ನು ಆಶೀರ್ವದಿಸುತ್ತೇವೆ!
27 ಯೆಹೋವನೇ ದೇವರು.
    ಆತನು ನಮ್ಮನ್ನು ಸ್ವೀಕರಿಸಿಕೊಳ್ಳುವನು.
    ಯಜ್ಞಕ್ಕೋಸ್ಕರ ಕುರಿಮರಿಯನ್ನು ಕಟ್ಟಿ ಯಜ್ಞವೇದಿಕೆಯ ಕೊಂಬುಗಳ ಸಮೀಪಕ್ಕೆ ಹೊತ್ತುಕೊಂಡು ಬನ್ನಿರಿ” ಎಂದು ಯಾಜಕರು ಉತ್ತರಿಸಿದರು.

28 ಯೆಹೋವನೇ, ನೀನೇ ನನ್ನ ದೇವರು; ನಾನು ನಿನಗೆ ಕೃತಜ್ಞತೆ ಸಲ್ಲಿಸುವೆನು.
    ನಾನು ನಿನ್ನನ್ನು ಘನಪಡಿಸುವೆನು!
29 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International