Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 66-69

ಸ್ತುತಿಗೀತೆ.

66 ಸರ್ವಭೂನಿವಾಸಿಗಳೇ, ದೇವರಿಗೆ ಜಯಘೋಷ ಮಾಡಿರಿ!
ಆತನ ಹೆಸರಿನ ಮಹಿಮೆಯನ್ನು ಕೀರ್ತಿಸಿರಿ.
    ಸ್ತುತಿಗೀತೆಗಳಿಂದ ಆತನನ್ನು ಸನ್ಮಾನಿಸಿರಿ.
ದೇವರೇ, ನಿನ್ನ ಕಾರ್ಯಗಳು ಎಷ್ಟು ಅದ್ಭುತವಾಗಿವೆ!
    ನಿನ್ನ ಮಹಾಶಕ್ತಿಯಿಂದಾಗಿ ಶತ್ರುಗಳು ನಿನಗೆ ಭಯಪಟ್ಟು ಅಡ್ಡಬೀಳುವರು.
ಸರ್ವಭೂನಿವಾಸಿಗಳು ನಿನ್ನನ್ನು ಆರಾಧಿಸಲಿ.
    ಪ್ರತಿಯೊಬ್ಬರೂ ನಿನ್ನ ಹೆಸರನ್ನು ಕೀರ್ತಿಸಲಿ.

ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ;
    ಆತನ ಕಾರ್ಯಗಳು ಅತ್ಯದ್ಭುತವಾಗಿವೆ!
ಆತನು ಸಮುದ್ರವನ್ನು ಒಣನೆಲವನ್ನಾಗಿ ಮಾಡಿದನು.
    ಆತನ ಜನರು ಕಾಲುನಡಿಗೆಯಿಂದ ನದಿಯನ್ನು ದಾಟಿದರು.
    ಅದಕ್ಕಾಗಿ ನಾವು ಆತನಲ್ಲಿ ಉಲ್ಲಾಸಪಡೋಣ.
ಆತನು ಪ್ರಪಂಚವನ್ನು ತನ್ನ ಮಹಾಶಕ್ತಿಯಿಂದ ಆಳುತ್ತಾನೆ.
    ಆತನು ಎಲ್ಲರನ್ನೂ ಗಮನಿಸುತ್ತಾನೆ.
    ಆತನ ವಿರುದ್ಧ ದಂಗೆಯೇಳಲು ಯಾರಿಗೂ ಆಗದು.

ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ನಮಗೆ ಜೀವಕೊಟ್ಟವನು ಆತನೇ.
    ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
    ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
    ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
    ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
    ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15     ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
    ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
    ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.

16 ದೇವಭಕ್ತರೆಲ್ಲರೂ ಬನ್ನಿರಿ,
    ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
    ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
    ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
    ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
    ಆತನು ನನಗೆ ವಿಮುಖನಾಗದೆ,
    ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!

ಸ್ತುತಿಗೀತೆ.

67 ದೇವರೇ, ನನ್ನನ್ನು ಕರುಣಿಸಿ ಆಶೀರ್ವದಿಸು.
    ಪ್ರಸನ್ನಮುಖದಿಂದ ನಮ್ಮನ್ನು ನೋಡು.

ದೇವರೇ, ಸರ್ವಭೂನಿವಾಸಿಗಳು ನಿನ್ನನ್ನು ತಿಳಿದುಕೊಳ್ಳಲಿ.
    ಜನರಿಗೆ ನಿನ್ನಿಂದಾಗುವ ರಕ್ಷಣೆಯನ್ನು ಸರ್ವಜನಾಂಗಗಳೂ ಕಾಣಲಿ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ಎಲ್ಲಾ ಜನಾಂಗಗಳು ಸಂತೋಷದಿಂದ ಉಲ್ಲಾಸಿಸಲಿ.
    ಯಾಕೆಂದರೆ ಜನರಿಗೆ ನ್ಯಾಯವಾದ ತೀರ್ಪುಮಾಡುವಾತನು ನೀನೇ;
    ಪ್ರತಿಯೊಂದು ಜನಾಂಗವನ್ನು ಆಳುವಾತನು ನೀನೇ.
ದೇವರೇ, ಜನಾಂಗಗಳು ನಿನ್ನನ್ನು ಕೊಂಡಾಡಲಿ!
    ಸರ್ವಜನರೆಲ್ಲರೂ ನಿನ್ನನ್ನು ಸ್ತುತಿಸಲಿ!
ದೇವರೇ, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸು.
    ನಮ್ಮ ಭೂಮಿಯು ಮಹಾಸುಗ್ಗಿಯನ್ನು ಕೊಡಲಿ.
ಆತನು ನಮ್ಮನ್ನು ಆಶೀರ್ವದಿಸಲಿ.
    ಸರ್ವಭೂನಿವಾಸಿಗಳೆಲ್ಲರೂ ಆತನಲ್ಲಿ ಭಯಭಕ್ತಿವುಳ್ಳವರಾಗಲಿ.

ರಚನೆಗಾರ: ದಾವೀದ.

68 ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು.
    ಆತನ ಶತ್ರುಗಳೆಲ್ಲಾ ಆತನ ಬಳಿಯಿಂದ ಓಡಿಹೋಗಲಿ.
ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ
    ನಿನ್ನ ಶತ್ರುಗಳು ಚದರಿಹೋಗಲಿ.
ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ
    ನಿನ್ನ ಶತ್ರುಗಳು ನಾಶವಾಗಲಿ.
ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ;
    ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ!
ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ.
    ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ.
ಆತನ ಹೆಸರು ಯಾಹು.
    ಆತನ ಹೆಸರನ್ನು ಕೊಂಡಾಡಿರಿ!
ದೇವರು ತನ್ನ ಪವಿತ್ರ ಆಲಯದಲ್ಲಿ,
    ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ.
ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು.
    ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು.
    ದೇವದ್ರೋಹಿಗಳಾದರೋ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.

ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ.
    ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು,
ಭೂಮಿಯೇ ಕಂಪಿಸಿತು.
    ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು.
ದೇವರೇ, ನೀನು ಮಳೆ ಸುರಿಸಿ,
    ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ.
10 ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು.
    ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ.
11 ದೇವರು ಆಜ್ಞಾಪಿಸಲು ಅನೇಕರು
    ಈ ಸುವಾರ್ತೆಯನ್ನು ಸಾರಲು ಹೋದರು:
12 “ಬಲಿಷ್ಠ ರಾಜರುಗಳ ಸೈನ್ಯಗಳು ಓಡಿಹೋಗುತ್ತಿವೆ!
    ಸೈನಿಕರು ಯುದ್ಧದಿಂದ ತಂದ ಕೊಳ್ಳೆವಸ್ತುಗಳನ್ನು ಮನೆಯಲ್ಲಿದ್ದ ಸ್ತ್ರೀಯರು ಹಂಚಿಕೊಳ್ಳುವರು.
13 ಕುರಿಹಟ್ಟಿಯೊಳಗೆ ಇದ್ದವರೂ ಐಶ್ವರ್ಯವನ್ನು ಪಾಲುಮಾಡಿಕೊಳ್ಳುವರು.
    ಬಂಗಾರದ ಗರಿಗಳಿಂದ ಥಳಥಳಿಸುವ ಬೆಳ್ಳಿ ಹೊದಿಸಿರುವ ಪಾರಿವಾಳದ ರೆಕ್ಕೆಗಳನ್ನು ಅವರು ಪಡೆದುಕೊಳ್ಳುವರು.”

14 ಸಲ್ಮೋನ್ ಪರ್ವತದ ಮೇಲೆ ದೇವರು ಶತ್ರು ರಾಜರುಗಳನ್ನು ಚದರಿಸಿಬಿಟ್ಟನು.
    ಅವರು ಸುರಿಯುತ್ತಿರುವ ಹಿಮದಂತಿದ್ದರು.
15 ಬಾಷಾನ್ ಬೆಟ್ಟವು ಅನೇಕ ಶಿಖರಗಳುಳ್ಳ ಮಹಾಪರ್ವತ.
16 ಬಾಷಾನ್ ಪರ್ವತವೇ, ಚೀಯೋನ್ ಪರ್ವತವನ್ನು ನೀನು ಕೀಳಾಗಿ ಕಾಣುವುದೇಕೆ?
    ಯೆಹೋವನು ತನಗೆ ಪ್ರಿಯವಾದ ಚೀಯೋನ್ ಪರ್ವತವನ್ನೇ
    ತನ್ನ ಶಾಶ್ವತ ವಾಸಸ್ಥಾನವಾಗಿ ಆರಿಸಿಕೊಂಡಿದ್ದಾನೆ.
17 ಯೆಹೋವನು ಪವಿತ್ರವಾದ ಚೀಯೋನ್ ಪರ್ವತಕ್ಕೆ ಬರುತ್ತಾನೆ.
    ಆತನ ಹಿಂದೆ ಆತನ ಲಕ್ಷಾಂತರ ರಥಗಳಿವೆ.
18 ಆತನು ಸೆರೆಯಾಳುಗಳನ್ನು ನಡೆಸಿಕೊಂಡು
    ಬೆಟ್ಟದ ಮೇಲೇರಿ ಹೋದನು;
ತನಗೆ ದ್ರೋಹಮಾಡಿದ ಜನರಿಂದ
    ಆತನು ಕಷ್ಟಕಾಣಿಕೆಗಳನ್ನು ತೆಗೆದುಕೊಳ್ಳುವನು.
ದೇವರಾದ ಯೆಹೋವನು ಮೇಲೇರಿಹೋದದ್ದು ಅಲ್ಲಿ ವಾಸಿಸುವುದಕ್ಕಾಗಿಯೇ.
19 ನಮ್ಮ ಅನುದಿನದ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ!
    ನಮ್ಮನ್ನು ರಕ್ಷಿಸುವವನು ಆತನೇ.

20 ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ.
    ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು.
21 ದೇವರು ತನ್ನ ವೈರಿಗಳ ಶಿರಸ್ಸುಗಳನ್ನೂ
    ಪಾಪದಲ್ಲಿ ಜೀವಿಸುವವರ ತಲೆಗಳನ್ನೂ ಜಜ್ಜಿಬಿಡುವನು.
22 ನನ್ನ ಯೆಹೋವನು ಹೀಗೆಂದನು: “ನಾನು ಪೂರ್ವ ದಿಕ್ಕಿನಲ್ಲಿರುವ ಬಾಷಾನಿನಿಂದಲೂ
    ಪಶ್ಚಿಮ[a] ದಿಕ್ಕಿನಿಂದಲೂ ಶತ್ರುಗಳನ್ನು ಹಿಡಿದು ತರುವೆನು.
23 ಆಗ ನೀನು ಅವರ ರಕ್ತದಲ್ಲಿ ಕಾಲಾಡಿಸುವೆ.
    ನಿನ್ನ ನಾಯಿಗಳು ಅವರ ರಕ್ತವನ್ನು ನೆಕ್ಕುತ್ತವೆ.”

24 ಇಗೋ, ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
    ನನ್ನ ರಾಜನಾದ ಪರಿಶುದ್ಧ ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
25 ಮುಂಭಾಗದಲ್ಲಿ ಗಾಯಕರೂ ಹಿಂಭಾಗದಲ್ಲಿ ವಾದ್ಯ ಬಾರಿಸುವವರೂ
    ಸುತ್ತಲು ದಮ್ಮಡಿ ಬಡಿಯುವ ಯುವತಿಯರೂ ಹೋಗುತ್ತಿದ್ದಾರೆ.
26 ಮಹಾಸಭೆಯಲ್ಲಿ ದೇವರಿಗೆ ಸ್ತೋತ್ರವಾಗಲಿ!
    ಇಸ್ರೇಲ್ ಜನರೇ, ಯೆಹೋವನಿಗೆ ಸ್ತೋತ್ರಮಾಡಿರಿ!
27 ಅವರನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಮೊದಲನೆಯದಾಗಿ ಬೆನ್ಯಾಮೀನನ ಚಿಕ್ಕ ಕುಲವಿದೆ;
    ಅದರ ನಂತರ ಯೆಹೂದನ ಮಹಾಕುಲವಿದೆ.
    ಅದರ ನಂತರ ಜೆಬುಲೂನ್ ಮತ್ತು ನಫ್ತಾಲಿ ಕುಲಗಳ ನಾಯಕರು ಇದ್ದಾರೆ.

28 ದೇವರೇ, ನಿನ್ನ ಬಲವನ್ನು ನಮಗೆ ತೋರಿಸು!
    ಹಿಂದಿನ ಕಾಲದಲ್ಲಿ ನಮಗಾಗಿ ಮಾಡಿದ ಬಲಪ್ರಯೋಗವನ್ನು ನಮಗೆ ತೋರಿಸು.
29 ರಾಜರುಗಳು ತಮ್ಮ ಕಾಣಿಕೆಗಳನ್ನು ತೆಗೆದುಕೊಂಡು
    ಜೆರುಸಲೇಮಿನ ನಿನ್ನ ಆಲಯಕ್ಕೆ ಬರುವರು.
30 ಕೋಲಿನಿಂದ ಬಡಿದು ನಿನಗೆ ಬೇಕಾದದ್ದನ್ನೆಲ್ಲಾ ಆ ಪ್ರಾಣಿಗಳಿಂದ ಮಾಡಿಸು.
    ಆ ಜನಾಂಗಗಳಲ್ಲಿರುವ “ಹೋರಿಗಳು” ಮತ್ತು “ಹಸುಗಳು” ನಿನಗೆ ವಿಧೇಯವಾಗಿರುವಂತೆ ಮಾಡು.
ನೀನು ಆ ಜನಾಂಗಗಳನ್ನು ಯುದ್ಧದಲ್ಲಿ ಸೋಲಿಸಿರುವುದರಿಂದ
    ಅವರು ನಿನಗೆ ಬೆಳ್ಳಿಯನ್ನು ತಂದುಕೊಡುವಂತೆ ಮಾಡು.
31 ಅವರು ಈಜಿಪ್ಟಿನಿಂದ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
    ದೇವರೇ, ಇಥಿಯೋಪಿಯದವರು ತಮ್ಮ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
32 ಭೂರಾಜರುಗಳೇ, ದೇವರಿಗೆ ಗಾಯನ ಮಾಡಿರಿ!
    ನಮ್ಮ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿರಿ!

33 ದೇವರಿಗೆ ಗಾಯನ ಮಾಡಿರಿ!
ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು.
    ಆತನ ಗರ್ಜನೆಗೆ ಕಿವಿಗೊಡಿರಿ!
34 ದೇವರ ಬಲವನ್ನು ಕೊಂಡಾಡಿರಿ.
    ಆತನ ಗಾಂಭೀರ್ಯವು ಇಸ್ರೇಲರ ಆಶ್ರಯವಾಗಿದೆ.
    ಆತನ ಶಕ್ತಿಯು ಆಕಾಶಗಳಲ್ಲಿ ವ್ಯಾಪಿಸಿದೆ.
35 ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತಸ್ವರೂಪನಾಗಿರುವೆ.
ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು.
ದೇವರಿಗೆ ಸ್ತೋತ್ರ!

ರಚನೆಗಾರ: ದಾವೀದ.

69 ದೇವರೇ, ನನ್ನನ್ನು ರಕ್ಷಿಸು!
    ನನ್ನ ಕತ್ತಿನವರೆಗೂ ನೀರು ಏರಿಬಂದಿದೆ.
ನಿಂತುಕೊಳ್ಳಲು ನೆಲೆ ಸಿಕ್ಕುತ್ತಿಲ್ಲ;
    ಆಳವಾದ ಮರಳಿನೊಳಕ್ಕೆ ಮುಳುಗಿಹೋಗುತ್ತಿದ್ದೇನೆ.
ನಾನು ಆಳವಾದ ನೀರಿನಲ್ಲಿದ್ದೇನೆ.
    ಅಲೆಗಳು ನನ್ನನ್ನು ಆವರಿಸಿಕೊಳ್ಳುತ್ತಿವೆ.
ಸಹಾಯಕ್ಕಾಗಿ ಕೂಗಿಕೂಗಿ ಬಲಹೀನನಾಗಿರುವೆ.
    ನನ್ನ ಗಂಟಲು ನೋಯುತ್ತಿದೆ.
ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಾ
    ನನ್ನ ಕಣ್ಣುಗಳು ನೋಯುತ್ತಿವೆ.
ಶತ್ರುಗಳು ನನ್ನ ತಲೆಕೂದಲುಗಳಿಗಿಂತ ಹೆಚ್ಚಾಗಿದ್ದಾರೆ.
    ಅವರು ನಿಷ್ಕಾರಣವಾಗಿ ನನ್ನನ್ನು ದ್ವೇಷಿಸುತ್ತಾರೆ;
    ನನ್ನನ್ನು ನಾಶಮಾಡಲು ಬಹು ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಶತ್ರಗಳು ನನ್ನ ಬಗ್ಗೆ ಸುಳ್ಳು ಹೇಳುವರು.
    ನಾನು ಕದ್ದಿಲ್ಲದಿದ್ದರೂ ಸುಳ್ಳು ಅಪವಾದ ಹೊರಿಸಿ
    ನನ್ನಿಂದ ದಂಡ ವಸೂಲಿ ಮಾಡಿದರು.
ದೇವರೇ, ನಾನೇನೂ ತಪ್ಪುಮಾಡಿಲ್ಲವೆಂದು ನಿನಗೆ ಗೊತ್ತಿದೆ.
    ನನ್ನ ಪಾಪಗಳನ್ನು ನಿನಗೆ ಮರೆಮಾಡಲು ನನ್ನಿಂದಾಗದು.
ಸೇನಾಧೀಶ್ವರನಾದ ನನ್ನ ಯೆಹೋವನೇ, ನಿನ್ನ ಹಿಂಬಾಲಕರಿಗೆ ನನ್ನಿಂದ ನಾಚಿಕೆಯಾಗದಿರಲಿ.
    ಇಸ್ರೇಲರ ದೇವರೇ, ನಿನ್ನ ಆರಾಧಕರಿಗೆ ನನ್ನಿಂದ ಅವಮಾನವಾಗದಿರಲಿ.
ನಾಚಿಕೆಯು ನನ್ನ ಮುಖವನ್ನು ಕವಿದಿದೆ.
    ನಿನಗೋಸ್ಕರವಾಗಿ ಈ ನಾಚಿಕೆಯನ್ನು ಹೊತ್ತುಕೊಂಡಿದ್ದೇನೆ.
ನನ್ನ ಸಹೋದರರು ನನ್ನನ್ನು ಅಪರಿಚಿತನಂತೆ ಕಾಣುತ್ತಾರೆ.
    ನನ್ನ ತಾಯಿಯ ಪುತ್ರರು ನನ್ನನ್ನು ಪರಕೀಯನಂತೆ ಕಾಣುತ್ತಾರೆ.
ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತಿದೆ.
    ನಿನ್ನನ್ನು ಗೇಲಿಮಾಡುವ ಜನರಿಂದ ನನಗೆ ಅಪಮಾನವಾಗುತ್ತಿದೆ.
10 ನಾನು ಅಳುತ್ತಾ ಉಪವಾಸಮಾಡುವೆನು.
    ಅವರು ಅದಕ್ಕೂ ನನ್ನನ್ನು ಗೇಲಿಮಾಡುವರು.
11 ನಾನು ಶೋಕವಸ್ತ್ರವನ್ನು ಧರಿಸಿಕೊಂಡದ್ದು
    ಗಾದೆಯ ಮಾತಾಯಿತು.
12 ಅವರು ನನ್ನ ಬಗ್ಗೆ ಬಹಿರಂಗ ಸ್ಥಳಗಳಲ್ಲಿ ಮಾತಾಡುವರು.
    ಕುಡುಕರು ನನ್ನ ವಿಷಯದಲ್ಲಿ ಹಾಡನ್ನು ರಚಿಸುವರು.
13 ಯೆಹೋವನೇ, ನಾನಾದರೋ, ನಿನಗೆ ಮೊರೆಯಿಟ್ಟಿದ್ದೇನೆ;
    ನಿನ್ನ ಕೃಪೆಗೆ ತಕ್ಕಕಾಲ ಇದೇ.
ದೇವರೇ, ನಿನ್ನ ಮಹಾಪ್ರೀತಿಯಿಂದಲೂ
    ನಿಶ್ಚಿತವಾದ ರಕ್ಷಣೆಯಿಂದಲೂ ನನಗೆ ಉತ್ತರಿಸು.
14 ನನ್ನನ್ನು ಕಳ್ಳುಸುಬಿನಿಂದ ಮೇಲೆತ್ತು;
    ಮುಳುಗಿಹೋಗಲು ಬಿಡಬೇಡ.
ನನ್ನನ್ನು ದ್ವೇಷಿಸುವ ಜನರಿಂದ ನನ್ನನ್ನು ರಕ್ಷಿಸು.
    ಈ ಆಳವಾದ ನೀರಿನಿಂದ ನನ್ನನ್ನು ರಕ್ಷಿಸು.
15 ಅಲೆಗಳು ನನ್ನನ್ನು ಮುಳುಗಿಸಲು ಬಿಡಬೇಡ.
    ಆಳವಾದ ಹಳ್ಳವು ನನ್ನನ್ನು ಎಳೆದುಕೊಳ್ಳಲು ಬಿಡಬೇಡ.
    ಸಮಾಧಿಯು ನನ್ನನ್ನು ನುಂಗಲು ಬಿಡಬೇಡ.
16 ಯೆಹೋವನೇ, ನಿನ್ನ ಪ್ರೀತಿ ಎಷ್ಟೋ ಒಳ್ಳೆಯದು.
    ನಿನ್ನ ಪೂರ್ಣಪ್ರೀತಿಯಿಂದ ನನಗೆ ಉತ್ತರಿಸು.
    ನಿನ್ನ ಪೂರ್ಣ ಕರುಣೆಯಿಂದ ನನ್ನ ಕಡೆಗೆ ತಿರುಗಿ ಸಹಾಯಮಾಡು.
17 ನಿನ್ನ ಸೇವಕನಿಗೆ ವಿಮುಖನಾಗಬೇಡ.
    ನಾನು ಆಪತ್ತಿನಲ್ಲಿದ್ದೇನೆ! ಬೇಗನೆ ನನಗೆ ಸಹಾಯಮಾಡು!
18 ಬಂದು ನನ್ನ ಪ್ರಾಣವನ್ನು ರಕ್ಷಿಸು.
    ನನ್ನ ಶತ್ರುಗಳಿಂದ ನನ್ನನ್ನು ವಿಮೋಚಿಸು.
19 ನನ್ನ ನಾಚಿಕೆ ನಿನಗೆ ಗೊತ್ತಿದೆ.
    ಶತ್ರುಗಳು ನನಗೆ ಮಾಡಿದ ಅವಮಾನ ನಿನಗೆ ಗೊತ್ತಿದೆ.
    ಅವರು ಮಾಡಿದ್ದನ್ನೆಲ್ಲಾ ನೀನು ಕಣ್ಣಾರೆ ನೋಡಿರುವೆ.
20 ಅವಮಾನವು ನನ್ನನ್ನು ಜಜ್ಜಿಹಾಕಿದೆ!
    ನಾನು ನಾಚಿಕೆಯಿಂದ ಸಾಯುವಂತಿದ್ದೇನೆ.
ಕರುಣಾಳುಗಳನ್ನು ನಿರೀಕ್ಷಿಸಿದೆ,
    ಆದರೆ ಯಾರೂ ದೊರೆಯಲಿಲ್ಲ.
ಸಂತೈಸುವವರನ್ನು ಹಾರೈಸಿದೆ,
    ಆದರೆ ಯಾರೂ ಸಿಗಲಿಲ್ಲ.
21 ಅವರು ನನಗೆ ಕೊಟ್ಟದ್ದು ವಿಷ, ಆಹಾರವಲ್ಲ.
    ಅವರು ನನಗೆ ಕೊಟ್ಟದ್ದು ಹುಳಿರಸ, ದ್ರಾಕ್ಷಾರಸವಲ್ಲ.
22 ಅವರ ಮೇಜಿನ ಮೇಲಿರುವ ಆಹಾರ, ಪಾನೀಯಗಳು ಅವರಿಗೆ ವಿಷವಾಗಲಿ.
23 ಅವರು ಕುರುಡರಾಗಲಿ; ಅವರ ಬೆನ್ನುಗಳು ಗೂನಾಗಲಿ.
24 ನಿನ್ನ ಕೋಪವನ್ನೆಲ್ಲಾ ಅವರು ಅನುಭವಿಸಲಿ.
25 ಅವರ ಮನೆಗಳು ಬರಿದಾಗಲಿ;
    ಅವುಗಳಲ್ಲಿ ಯಾರೂ ವಾಸಿಸದಂತಾಗಲಿ.
26 ಅವರನ್ನು ದಂಡಿಸು. ಆಗ ಅವರು ಓಡಿಹೋಗುವರು.
    ಅಲ್ಲದೆ ಅವರಿಗಾದ ನೋವುಗಳು, ಗಾಯಗಳು ಅವರ ಆಡಿಕೆಗೆ ಕಾರಣವಾಗುವವು.
27 ಅವರ ದುಷ್ಕೃತ್ಯಗಳಿಗಾಗಿ ಅವರನ್ನು ದಂಡಿಸು.
    ನಿನ್ನ ರಕ್ಷಣೆಯಲ್ಲಿ ಅವರಿಗೆ ಪಾಲುಕೊಡಬೇಡ.
28 ಜೀವಬಾಧ್ಯರ ಪುಸ್ತಕದಿಂದ ಅವರ ಹೆಸರುಗಳನ್ನು ಅಳಿಸಿಬಿಡು.
    ನೀತಿವಂತರ ಹೆಸರುಗಳೊಂದಿಗೆ ಅವರು ಹೆಸರುಗಳನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಬೇಡ.
29 ನಾನು ನೋವಿನಿಂದ ದುಃಖಗೊಂಡಿರುವೆ.
    ದೇವರೇ, ನನ್ನನ್ನು ಮೇಲೆತ್ತಿ ರಕ್ಷಿಸು!
30 ನಾನು ದೇವರ ಹೆಸರನ್ನು ಹಾಡಿಕೊಂಡಾಡುವೆನು;
    ಕೃತಜ್ಞತಾಗೀತೆಯೊಂದಿಗೆ ಆತನನ್ನು ಸ್ತುತಿಸುವೆನು.
31 ಇದು ಯೆಹೋವನಿಗೆ ಹೋರಿಗಳ ಸರ್ವಾಂಗಹೋಮಕ್ಕಿಂತಲೂ
    ಬಹು ಪ್ರಿಯವಾದದ್ದು.
32 ದೇವರನ್ನು ಆರಾಧಿಸಲು ಬಂದ ಬಡವರೇ,
    ಇದನ್ನು ಕೇಳಿ ಹರ್ಷಿಸಿರಿ.
33 ಯೆಹೋವನು ಬಡವರಿಗೂ ನಿಸ್ಸಹಾಯಕರಿಗೂ ಕಿವಿಗೊಡುತ್ತಾನೆ.
    ಸೆರೆಯಲ್ಲಿರುವ ತನ್ನ ಜನರನ್ನು ಸಹ ಕಡೆಗಣಿಸುವುದಿಲ್ಲ.
34 ಭೂಮ್ಯಾಕಾಶಗಳೇ, ಸಮುದ್ರವೇ,
    ಸಮುದ್ರದಲ್ಲಿರುವ ಸಮಸ್ತವೇ, ಯೆಹೋವನನ್ನು ಸ್ತುತಿಸಿರಿ!
35 ಯೆಹೋವನು ಚೀಯೋನನ್ನು ರಕ್ಷಿಸುವನು!
    ಆತನು ಯೆಹೂದದ ಪಟ್ಟಣಗಳನ್ನು ಮತ್ತೆ ಕಟ್ಟುವನು.
ಆತನ ಜನರು ಅಲ್ಲಿ ವಾಸವಾಗಿದ್ದು ಸ್ವದೇಶವಾಗಿ ಮಾಡಿಕೊಳ್ಳುವರು!
36     ಆತನ ಸೇವಕರ ಸಂತತಿಗಳವರು ಆ ದೇಶವನ್ನು ಪಡೆದುಕೊಳ್ಳುವರು.
    ಆತನ ಹೆಸರನ್ನು ಪ್ರೀತಿಸುವ ಜನರು ಅಲ್ಲಿ ವಾಸಿಸುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International