Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 46-50

ರಚನೆಗಾರರು: ಕೋರಹೀಯರು.

46 ದೇವರು ನಮಗೆ ಆಶ್ರಯವೂ ಬಲವೂ ಆಗಿದ್ದಾನೆ.
    ಆತನು ಆಪತ್ತಿನಲ್ಲಿ ನಮಗೆ ಸಹಾಯಮಾಡಲು ಸದಾ ಸಿದ್ಧನಾಗಿರುವನು.
ಆದ್ದರಿಂದ ಭೂಮಿಯು ನಡುಗಿದರೂ ಬೆಟ್ಟಗಳು
    ಸಮುದ್ರದೊಳಗೆ ಮುಳುಗಿಹೋದರೂ ನಮಗೇನೂ ಭಯವಿಲ್ಲ.
ಸಮುದ್ರಗಳು ಭೋರ್ಗರೆಯುತ್ತಾ ನೊರೆಕಾರಿದರೂ
    ಅವುಗಳ ಅಲ್ಲೋಲಕಲ್ಲೋಲಗಳಿಂದ ಬೆಟ್ಟಗಳು ನಡುಗಿದರೂ ನಮಗೇನೂ ಭಯವಿಲ್ಲ.

ಒಂದು ನದಿ ಅದೆ; ಅದರ ಕಾಲುವೆಗಳು ಮಹೋನ್ನತನಾದ ದೇವರ ಪವಿತ್ರ ಪಟ್ಟಣವಾಗಿರುವ
    ದೇವನಗರವನ್ನು ಸಂತೋಷಪಡಿಸುತ್ತದೆ.
ದೇವರು ಆ ಪಟ್ಟಣದಲ್ಲಿದ್ದಾನೆ, ಆದ್ದರಿಂದ ಅದೆಂದಿಗೂ ನಾಶವಾಗುವುದಿಲ್ಲ.
    ಸೂರ್ಯೋದಯಕ್ಕಿಂತ ಮೊದಲೇ ದೇವರು ಅದರ ಸಹಾಯಕ್ಕಾಗಿ ಬರುವನು.
ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ;
    ಭೂಮಿಯು ಕರಗಿಹೋಗುವುದು.
ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮ್ಮ ಆಶ್ರಯದುರ್ಗವಾಗಿದ್ದಾನೆ.
ಬನ್ನಿರಿ, ಯೆಹೋವನ ಕಾರ್ಯಗಳನ್ನು ನೋಡಿರಿ;
    ಭೂಮಿಯ ಮೇಲೆ ಆತನು ಮಾಡುತ್ತಿರುವ ಭಯಂಕರವಾದ ಕಾರ್ಯಗಳನ್ನು ನೋಡಿರಿ.
ಇಡೀ ಪ್ರಪಂಚದಲ್ಲಿ ಆತನು ಯುದ್ಧವನ್ನು ನಿಲ್ಲಿಸುವನು;
    ಬಿಲ್ಲುಗಳನ್ನೂ ಗುರಾಣಿಗಳನ್ನೂ[a] ಮುರಿದುಹಾಕುವನು; ಗುರಾಣಿಗಳನ್ನು ಬೆಂಕಿಯಿಂದ ಸುಟ್ಟುಹಾಕುವನು.

10 ದೇವರು ಹೀಗೆನ್ನುವನು: “ಹೋರಾಡುವುದನ್ನು ನಿಲ್ಲಿಸಿ, ನಾನೇ ದೇವರೆಂಬುದನ್ನು ಕಲಿತುಕೊಳ್ಳಿ!
    ನಾನು ಜನಾಂಗಗಳನ್ನು ಸೋಲಿಸುವೆನು!
    ಇಡೀ ಲೋಕವನ್ನು ಹತೋಟಿಗೆ ತೆಗೆದುಕೊಳ್ಳುವೆನು!”

11 ಸೇನಾಧೀಶ್ವರನಾದ ಯೆಹೋವನು ನಮ್ಮೊಂದಿಗಿದ್ದಾನೆ.
    ಯಾಕೋಬನ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ.

ರಚನೆಗಾರರು: ಕೋರಹೀಯರು.

47 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ;
    ದೇವರಿಗೆ ಆನಂದಘೋಷ ಮಾಡಿರಿ!
ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ.
    ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ.
ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ
    ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ.
ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು;
    ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು.

ಯೆಹೋವನು ಆನಂದಘೋಷದೊಡನೆಯೂ
    ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು.
ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ.
    ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ.
ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ;
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ;
    ದೇವರು ಎಲ್ಲಾ ಜನಾಂಗಗಳನ್ನು ಆಳುವನು.
ಜನಾಂಗಗಳ ನಾಯಕರು
    ಅಬ್ರಹಾಮನ ದೇವಜನರೊಡನೆ ಕೂಡಿಬರುವರು.
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ.
    ದೇವರು ಅವರಿಗೆ ಸರ್ವಾಧಿಕಾರಿ!

ರಚನೆಗಾರರು: ಕೋರಹೀಯರು.

48 ಯೆಹೋವನೇ ಮಹೋನ್ನತನು.
    ನಮ್ಮ ದೇವರನ್ನು ಆತನ ಪವಿತ್ರ ಪರ್ವತ ಪಟ್ಟಣದಲ್ಲಿ ಜನರು ಬಹಳವಾಗಿ ಕೊಂಡಾಡುವರು.
ದೇವರ ಪವಿತ್ರ ಪಟ್ಟಣವು ರಮ್ಯವಾಗಿದೆ.
    ಭೂಲೋಕದಲ್ಲೆಲ್ಲಾ ಇರುವ ಜನರನ್ನು ಅದು ಸಂತೋಷಗೊಳಿಸುವುದು.
ಸಿಯೋನ್ ಪರ್ವತವೇ ದೇವರ ನಿಜವಾದ ಪರ್ವತ.
    ಅದೇ ಆ ಮಹಾರಾಜನ ಪರ್ವತ.
ದೇವರು ಆ ಪಟ್ಟಣಗಳ ಅರಮನೆಗಳಲ್ಲಿ,
    ತಾನೇ ಆಶ್ರಯದುರ್ಗವೆಂದು ಹೆಸರುವಾಸಿಯಾಗಿದ್ದಾನೆ.
ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು.
    ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.
ಆದರೆ ಅವರು ಅದನ್ನು ಕಂಡಾಗ ದಿಗ್ಭ್ರಮೆಗೊಂಡರು;
    ಭಯದಿಂದ ಓಡಿಹೋದರು.
ಭಯವು ಅವರನ್ನು
    ಪ್ರಸವವೇದನೆಯಂತೆ ಆವರಿಸಿಕೊಂಡಿತು.
ಪೂರ್ವದ ಬಿರುಗಾಳಿಯಿಂದ ಒಡೆದುಹೋದ ಹಡಗುಗಳಂತೆ
    ನೀನು ಅವರನ್ನು ನಾಶಮಾಡಿದೆ.
ಹೌದು, ಆ ರಾಜರುಗಳಿಗೆ ಸಂಭವಿಸಿದ್ದನ್ನು ನಾವು ಕಿವಿಯಾರೆ ಕೇಳಿದಂತೆಯೇ ಕಣ್ಣಾರೆಯೂ ಕಂಡೆವು.
    ನಮ್ಮ ದೇವರೂ ಸೇನಾಧೀಶ್ವರನೂ ಆಗಿರುವ ಯೆಹೋವನ ಪಟ್ಟಣದಲ್ಲಿ ನಾವು ಅದನ್ನು ನೋಡಿದ್ದೇವೆ.
ದೇವರು ಆ ಪಟ್ಟಣವನ್ನು ಶಾಶ್ವತವಾಗಿ ಭದ್ರಗೊಳಿಸುವನು.

ದೇವರೇ, ನಿನ್ನ ಆಲಯದಲ್ಲಿ ನಿನ್ನ ಶಾಶ್ವತ ಪ್ರೀತಿಯ ಕುರಿತು ಧ್ಯಾನಿಸುವೆವು.
10 ದೇವರೇ, ನೀನು ಪ್ರಖ್ಯಾತನಾಗಿರುವೆ.
    ಭೂಮಿಯ ಮೇಲೆಲ್ಲಾ ಜನರು ನಿನ್ನನ್ನು ಕೊಂಡಾಡುವರು.
    ನೀನು ಎಷ್ಟು ಒಳ್ಳೆಯವನೆಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
11 ನಿನ್ನ ನ್ಯಾಯನಿರ್ಣಯಗಳಿಂದ ಚೀಯೋನ್ ಪರ್ವತವು ಹರ್ಷಿಸಲಿ;
    ಯೆಹೂದದ ಊರುಗಳು ಉಲ್ಲಾಸಿಸಲಿ.
12 ಚೀಯೋನಿನ ಸುತ್ತಲೂ ಸಂಚರಿಸಿ, ಆ ಪಟ್ಟಣವನ್ನು ನೋಡಿರಿ.
    ಅದರ ಬುರುಜುಗಳನ್ನು ಎಣಿಸಿರಿ.
13 ಅದರ ಕೋಟೆಗಳನ್ನು ನೋಡಿರಿ.
    ಚೀಯೋನಿನ ಅರಮನೆಗಳನ್ನು ಹೊಗಳಿರಿ.
ಆಗ ನೀವು ನಿಮ್ಮ ಮುಂದಿನ ಸಂತತಿಯವರಿಗೆ ಅದರ ಬಗ್ಗೆ ಹೇಳಬಲ್ಲಿರಿ.
14 ಈ ದೇವರೇ ಎಂದೆಂದಿಗೂ ನಮ್ಮ ದೇವರು!
    ನಮ್ಮನ್ನು ಶಾಶ್ವತವಾಗಿ ನಡೆಸುವಾತನು ಆತನೇ!

ರಚನೆಗಾರರು: ಕೋರಹೀಯರು.

49 ಸರ್ವಜನಾಂಗಗಳೇ, ಕೇಳಿರಿ,
    ಭೂನಿವಾಸಿಗಳೆಲ್ಲರೇ, ಆಲಿಸಿರಿ.
    ಸಾಮಾನ್ಯ ಜನರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
ನಾನು ನಿಮಗೆ ಸುಜ್ಞಾನವನ್ನೂ
    ವಿವೇಕವನ್ನೂ ಬೋಧಿಸುವೆನು.
ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ.
    ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.

ಆಪತ್ತು ಬಂದಾಗ ನಾನೇಕೆ ಭಯಪಡಬೇಕು?
    ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
ಅವರು ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ;
    ಅವರು ಬುದ್ಧಿಹೀನರಾಗಿದ್ದಾರೆ.
ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು.
    ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು
    ಹಣ ಯಾವನಿಗೂ ದೊರೆಯುವುದಿಲ್ಲ.
ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು
    ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು
    ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
10 ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು.
    ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
11 ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ.
    ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
12 ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು.
    ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
13 ತಮ್ಮ ಐಶ್ವರ್ಯವನ್ನು ಮೆಚ್ಚಿಕೊಂಡಿರುವ
    ಬುದ್ಧಿಹೀನರಿಗೆ ಇದೇ ಗತಿ.
14 ಅವರು ಕುರಿಗಳಂತಿದ್ದಾರೆ. ಸಮಾಧಿಯೇ ಅವರ ಕೊಟ್ಟಿಗೆ.
    ಮರಣವೇ ಅವರ ಕುರುಬ.
ಒಂದು ಮುಂಜಾನೆ, ಅವರ ದೇಹಗಳು ಅವರ ಮನೆಗಳಿಂದ ದೂರವಾಗಿ ಸಮಾಧಿಯಲ್ಲಿ ಕೊಳೆಯುತ್ತಿರಲು,
    ನೀತಿವಂತರು ಜಯಶಾಲಿಗಳಾಗಿರುವರು.

15 ಆದರೆ ದೇವರು ಈಡುಕೊಟ್ಟು ನನ್ನ ಪ್ರಾಣವನ್ನು ರಕ್ಷಿಸುವನು.
    ಆತನು ನನ್ನನ್ನು ತನ್ನೊಂದಿಗಿರಲು ಕೊಂಡೊಯ್ಯುವಾಗ ನನ್ನನ್ನು ಸಮಾಧಿಯ ಬಲದಿಂದ ರಕ್ಷಿಸುವನು.

16 ಜನರು ಐಶ್ವರ್ಯವಂತರಾಗಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
    ಜನರು ಭವ್ಯವಾದ ಮನೆಗಳಲ್ಲಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
17 ಅವರು ಸಾಯುವಾಗ ತಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲಾರರು.
    ಅವರ ವೈಭವವು ಅವರೊಂದಿಗೆ ಹೋಗಲಾರದು.
18 ಐಶ್ವರ್ಯವಂತನು ತನ್ನ ವಿಷಯದಲ್ಲಿ ಉಬ್ಬಿಕೊಂಡಿದ್ದರೂ
    ಜನರು ಅವನನ್ನು ಹೊಗಳುತ್ತಿದ್ದರೂ
19 ಸತ್ತು ತನ್ನ ಪೂರ್ವಿಕರ ಬಳಿ ಸೇರುವ ಕಾಲ ಅವನಿಗೆ ಬಂದೇ ಬರುವುದು.
    ಅವನು ಹಗಲಿನ ಬೆಳಕನ್ನು ಮತ್ತೆಂದಿಗೂ ನೋಡಲಾರ.
20 ಅರ್ಥಮಾಡಿಕೊಳ್ಳಲಾರದವನು ಎಷ್ಟೇ ಐಶ್ವರ್ಯವಂತನಾಗಿದ್ದರೂ
    ಪ್ರಾಣಿಗಳಂತೆಯೇ ನಾಶವಾಗುವನು.

ರಚನೆಗಾರ: ಆಸಾಫ.

50 ದೇವಾಧಿದೇವನಾದ ಯೆಹೋವನು ಪೂರ್ವದಿಂದ ಪಶ್ಚಿಮದವರೆಗೂ
    ಇರುವ ಭೂನಿವಾಸಿಗಳೆಲ್ಲರನ್ನು ತನ್ನ ಸನ್ನಿಧಿಗೆ ಬರಲು ಆಜ್ಞಾಪಿಸುವನು.
ಸೌಂದರ್ಯದಿಂದ ಕಂಗೊಳಿಸುತ್ತಿರುವ ಚೀಯೋನಿನಲ್ಲಿ ದೇವರು ಪ್ರಕಾಶಿಸುತ್ತಾನೆ.
ನಮ್ಮ ದೇವರು ಬರುತ್ತಿದ್ದಾನೆ; ಆತನು ಸುಮ್ಮನಿರುವುದಿಲ್ಲ.
    ಆತನ ಮುಂಭಾಗದಲ್ಲಿ ಬೆಂಕಿಯು ಪ್ರಜ್ವಲಿಸುವುದು.
    ಆತನ ಸುತ್ತಲೂ ಬಿರುಗಾಳಿ ಬೀಸುವುದು.
ಯೆಹೋವನು ತನ್ನ ಜನರಿಗೆ ನ್ಯಾಯವಿಚಾರಣೆಗಾಗಿ
    ಭೂಮ್ಯಾಕಾಶಗಳನ್ನು ಸಾಕ್ಷಿಗಳಾಗಿ ಕರೆಯುವನು.
ದೇವರು, “ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆ ಮಾಡಿಕೊಂಡ ನನ್ನ ಪವಿತ್ರ ಪ್ರಜೆಗಳೇ,
    ನನ್ನ ಸುತ್ತಲೂ ಸೇರಿಬನ್ನಿರಿ” ಎಂದು ಆಜ್ಞಾಪಿಸುವನು.

ದೇವರೊಬ್ಬನೇ ನ್ಯಾಯಾಧಿಪತಿ;
    ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುವುದು.

ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
    ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
    ದೇವರಾದ ನಾನೇ ನಿಮ್ಮ ದೇವರು!
ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
    ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
    ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
    ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
    ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
    ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
    ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”

14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
    ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
    ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”

16 ದೇವರು ದುಷ್ಟರಿಗೆ ಹೀಗೆನ್ನುವನು:
    “ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ;
    ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.
17 ಹೀಗಿರಲು ನೀವು ನನ್ನ ಸುಶಿಕ್ಷಣವನ್ನು ದ್ವೇಷಿಸುವುದೇಕೆ?
    ನಾನು ಹೇಳುವುದನ್ನು ನೀವು ತುಚ್ಛೀಕರಿಸುವುದೇಕೆ?
18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ;
    ವ್ಯಭಿಚಾರಿಗಳ ಒಡನಾಟ ಮಾಡುವಿರಿ.
19 ನಿಮ್ಮ ಬಾಯಿಂದ ಕೇಡನ್ನು ಕಲ್ಪಿಸುವಿರಿ.
    ನಿಮ್ಮ ನಾಲಿಗೆಯಿಂದ ಮೋಸವನ್ನು ನೇಯುವಿರಿ.
20 ಬೇರೆಯವರ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ
    ಕೆಟ್ಟದ್ದನ್ನು ಹೇಳುತ್ತಲೇ ಇರುತ್ತೀರಿ.
21 ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.
    ಆದ್ದರಿಂದ ನಾನೂ ನಿಮ್ಮಂಥವನೆಂದು ನೀವು ಆಲೋಚಿಸಿಕೊಂಡಿರಿ.
ಈಗಲಾದರೋ ನಾನು ಮೌನವಾಗಿರುವುದಿಲ್ಲ!
    ಎಲ್ಲವನ್ನು ನಿಮಗೆ ವಿವರಿಸಿ ನಿಮ್ಮ ಮುಂದೆಯೇ ನಿಮ್ಮನ್ನು ಟೀಕಿಸುವೆನು!
22 ದೇವರನ್ನು ಮರೆತುಬಿಟ್ಟವರೇ,
    ಇದನ್ನು ಗಮನಕ್ಕೆ ತಂದುಕೊಳ್ಳಿರಿ.
ಇಲ್ಲವಾದರೆ ನಿಮ್ಮನ್ನು ತುಂಡುತಂಡು ಮಾಡುವೆನು;
    ಯಾರೂ ನಿಮ್ಮನ್ನು ರಕ್ಷಿಸಲಾರರು!
23 ನನಗೆ ಕೃತಜ್ಞತಾಯಜ್ಞವನ್ನು ಅರ್ಪಿಸುವವನೇ ನನ್ನನ್ನು ಸನ್ಮಾನಿಸುವವನು.
    ಆದರೆ ನೀತಿವಂತನಾಗಿ ಜೀವಿಸುವವನಿಗೆ ನನ್ನ ರಕ್ಷಣಾಶಕ್ತಿಯನ್ನು ತೋರಿಸುವೆನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International