Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಬನು 38-39

ಯೋಬನಿಗೆ ದೇವರ ಉತ್ತರ

38 ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು:

“ನನ್ನ ಉದ್ದೇಶಗಳನ್ನು ಮೂರ್ಖತನದ ಮಾತುಗಳಿಂದ ಗಲಿಬಿಲಿಗೊಳಿಸುತ್ತಿರುವ
    ಈ ಮನುಷ್ಯನು ಯಾರು?
ಯೋಬನೇ, ನಡುಕಟ್ಟಿಕೊಂಡು ಬಲಿಷ್ಠನಾಗಿರು.
    ನಾನು ನಿನಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗು.

“ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ?
    ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು.
ಯೋಬನೇ, ಭೂಮಿಯ ಅಳತೆಗಳನ್ನು ಯಾರು ನಿರ್ಧರಿಸಿದರು?
    ಭೂಮಿಯ ಅಳತೆಯನ್ನು ನೂಲುಗುಂಡಿನಿಂದ ಅಳೆದವರು ಯಾರು?
ಭೂಮಿಯ ಆಧಾರಸ್ತಂಭಗಳು ಯಾವುದರ ಮೇಲೆ ನೆಲೆಗೊಂಡಿವೆ?
    ಭೂಮಿಯ ಅಸ್ತಿವಾರಕ್ಕೆ ಮೊದಲ ಕಲ್ಲನ್ನು ಹಾಕಿದವರು ಯಾರು?
ಅದು ಸಂಭವಿಸಿದಾಗ, ಮುಂಜಾನೆಯ ನಕ್ಷತ್ರಗಳು ಒಟ್ಟಾಗಿ ಹಾಡಿದವು;
    ದೇವದೂತರುಗಳು ಆನಂದಘೋಷ ಮಾಡಿದರು!

“ಯೋಬನೇ, ಭೂಮಿಯ ಗರ್ಭದೊಳಗಿಂದ ನುಗ್ಗಿ ಬರುವ ಸಮುದ್ರದ ನೀರನ್ನು
    ನಿಲ್ಲಿಸುವುದಕ್ಕಾಗಿ ಬಾಗಿಲುಗಳನ್ನು ಮುಚ್ಚಿದವರು ಯಾರು?
ಆ ಸಮಯದಲ್ಲಿ ನಾನು ಸಮುದ್ರವನ್ನು ಮೋಡಗಳಿಂದ ಮುಚ್ಚಿ
    ಕಾರ್ಗತ್ತಲನ್ನು ಬಟ್ಟೆಯಂತೆ ಸುತ್ತಿಟ್ಟೆನು.
10 ನಾನು ಸಮುದ್ರಕ್ಕೆ ಮೇರೆಯನ್ನು ನಿಗದಿಪಡಿಸಿ
    ಕದ ಹಾಕಿದ ಬಾಗಿಲುಗಳ ಹಿಂಭಾಗದಲ್ಲಿಟ್ಟೆನು.
11 ನಾನು ಸಮುದ್ರಕ್ಕೆ, ‘ನೀನು ಇಲ್ಲಿಯವರೆಗೆ ಬರಬಹುದು, ಆದರೆ ಇದಕ್ಕಿಂತ ಹೆಚ್ಚಿಗೆ ಬರಕೂಡದು.
    ನಿನ್ನ ಹೆಮ್ಮೆಯ ಅಲೆಗಳು ಇಲ್ಲೇ ನಿಲ್ಲಬೇಕು’ ಎಂದು ಅಪ್ಪಣೆಕೊಟ್ಟೆನು.

12 “ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ
    ಮುಂಜಾನೆಗಾಗಲಿ ಹಗಲಿಗಾಗಲಿ ಆರಂಭವಾಗೆಂದು ಆಜ್ಞಾಪಿಸಿರುವಿಯಾ?
13 ಯೋಬನೇ, ದುಷ್ಟರನ್ನು ಅವರು ಅಡಗಿಕೊಂಡಿರುವ ಸ್ಥಳಗಳಲ್ಲಿ ಹಿಡಿದು
    ನಡುಗಿಸಬೇಕೆಂದು ನೀನು ಮುಂಜಾನೆಯ ಬೆಳಕಿಗೆ ಎಂದಾದರೂ ಆಜ್ಞಾಪಿಸಿರುವಿಯಾ?
14 ಮುಂಜಾನೆಯ ಬೆಳಕು ಬೆಟ್ಟಗಳನ್ನೂ ಕಣಿವೆಗಳನ್ನೂ
    ಸ್ಪಷ್ಟವಾಗಿ ಕಾಣಮಾಡುತ್ತವೆ.
ಹಗಲುಬೆಳಕು ಭೂಮಿಗೆ ಬಂದಾಗ
    ಆ ಸ್ಥಳಗಳ ರೂಪಗಳು ಮೇಲಂಗಿಯ ನೆರಿಗೆಗಳಂತೆ ಎದ್ದುಕಾಣುತ್ತವೆ.
ಆ ಸ್ಥಳಗಳು ಮುದ್ರೆಯೊತ್ತಿದ
    ಜೇಡಿಮಣ್ಣಿನಂತೆ ರೂಪಗೊಳ್ಳುತ್ತವೆ.
15 ದುಷ್ಟರು ಹಗಲುಬೆಳಕನ್ನು ಇಷ್ಟಪಡುವುದಿಲ್ಲ.
    ಅದು ಪ್ರಕಾಶಮಾನವಾಗಿ ಹೊಳೆಯುವಾಗ, ದುಷ್ಕೃತ್ಯಗಳನ್ನು ಮಾಡದಂತೆ ಅದು ಅವರನ್ನು ತಡೆಯುತ್ತದೆ.

16 “ಯೋಬನೇ, ಸಮುದ್ರವು ಆರಂಭವಾಗುವ ಅತ್ಯಂತ ಆಳವಾದ ಭಾಗಗಳಿಗೆ ನೀನು ಎಂದಾದರೂ ಹೋಗಿರುವಿಯಾ?
    ಸಾಗರದ ತಳದ ಮೇಲೆ ನೀನು ಎಂದಾದರೂ ನಡೆದಿರುವಿಯಾ?
17 ಯೋಬನೇ, ಪಾತಾಳದ ದ್ವಾರಗಳನ್ನಾಗಲಿ
    ಘೋರಾಂಧಕಾರದ ಬಾಗಿಲುಗಳನ್ನಾಗಲಿ ನೀನು ಎಂದಾದರೂ ನೋಡಿರುವಿಯಾ?
18 ಯೋಬನೇ, ಭೂಮಿಯ ವಿಶಾಲತೆಯನ್ನು ನೋಡಿರುವಿಯಾ?
    ನೀನು ನಿಜವಾಗಿಯೂ ಅರ್ಥಮಾಡಿಕೊಳ್ಳುವಿಯಾ?
    ನಿನಗೆ ಇದೆಲ್ಲಾ ತಿಳಿದಿದ್ದರೆ, ನನಗೆ ಹೇಳು.

19 “ಯೋಬನೇ, ಬೆಳಕು ಎಲ್ಲಿಂದ ಬರುತ್ತದೆ?
    ಕತ್ತಲೆಯು ಎಲ್ಲಿಂದ ಬರುತ್ತದೆ?
20 ಯೋಬನೇ, ಬೆಳಕನ್ನೂ ಕತ್ತಲೆಯನ್ನೂ ಅವುಗಳ ಉಗಮಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ?
    ಅಲ್ಲಿಗೆ ಹೋಗುವ ಮಾರ್ಗ ನಿನಗೆ ಗೊತ್ತಿದೆಯೋ?
21 ಯೋಬನೇ, ಇವು ನಿನಗೆ ತಿಳಿದಿವೆ, ಯಾಕೆಂದರೆ ನೀನು ಬಹು ವೃದ್ಧನೂ ಜ್ಞಾನಿಯೂ ಆಗಿರುವೆ.
    ನಾನು ಅವುಗಳನ್ನು ನಿರ್ಮಿಸಿದಾಗ ನೀನು ಅಲ್ಲಿ ವಾಸವಾಗಿರಲಿಲ್ಲವೇ?

22 “ಯೋಬನೇ, ನಾನು ಹಿಮವನ್ನೂ ಆಲಿಕಲ್ಲನ್ನೂ ಇಟ್ಟಿರುವ ಉಗ್ರಾಣಗಳೊಳಗೆ
    ನೀನು ಎಂದಾದರೂ ಹೋಗಿರುವಿಯಾ?
23 ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ಕಾಲಕ್ಕಾಗಿಯೂ
    ನಾನು ಅವುಗಳನ್ನು ಕೂಡಿಸಿಟ್ಟಿದ್ದೇನೆ.
24 ಯೋಬನೇ, ಸೂರ್ಯನು ಹೊರಟ ಸ್ಥಳಕ್ಕೂ ಪೂರ್ವದಿಕ್ಕಿನ ಗಾಳಿಯು ಭೂಮಿಯ ಮೇಲೆಲ್ಲಾ ಬೀಸುವುದಕ್ಕಾಗಿ ಹೊರಟುಬರುವ ಸ್ಥಳಕ್ಕೂ
    ನೀನು ಎಂದಾದರೂ ಹೋಗಿರುವಿಯಾ?
25 ಯೋಬನೇ, ದೊಡ್ಡ ಮಳೆಗಾಗಿ ಆಕಾಶದಲ್ಲಿ ಅಗೆದು ಸುರಂಗಮಾಡಿದವರು ಯಾರು?
    ಗುಡುಗು ಮಿಂಚಿನ ಮಳೆಗೆ ಹಾದಿಯನ್ನು ಮಾಡಿದವರು ಯಾರು?
26-27 ಯೋಬನೇ, ಯಾರೂ ವಾಸಿಸದಿರುವ ಸ್ಥಳದಲ್ಲಿ ನೀರು ಇರುವಂತೆಯೂ
    ಆ ನೀರು ಬರಿದಾದ ಸ್ಥಳವನ್ನು ತೃಪ್ತಿಪಡಿಸಿ ಬಹಳ ಹುಲ್ಲಿನಿಂದ ಅದನ್ನು ಹಸಿರುಗೊಳಿಸುವಂತೆಯೂ ಮಾಡಿದವರು ಯಾರು?
28 ಯೋಬನೇ, ಮಳೆಗೆ ತಂದೆಯಿರುವನೇ?
    ಇಬ್ಬನಿಯ ಹನಿಗಳನ್ನು ನಿರ್ಮಿಸಿದವರು ಯಾರು?
29 ಯೋಬನೇ, ಮಂಜಿಗೆ ತಾಯಿ ಇರುವಳೇ?
    ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು?
30 ನೀರು ಕಲ್ಲಿನಂತೆ ಗಟ್ಟಿಯಾದಾಗ,
    ಸಾಗರಗಳ ಮೇಲ್ಭಾಗವು ಹೆಪ್ಪುಗಟ್ಟಿದಾಗ ಆಕಾಶದ ಹಿಮಕ್ಕೆ ಜನನ ಕೊಡುವವರು ಯಾರು?

31 “ಯೋಬನೇ, ಪ್ಲೆಯಡ್ಸ್[a] ಎಂಬ ನಕ್ಷತ್ರಗುಂಪನ್ನು ನೀನು ಕಟ್ಟಬಲ್ಲೆಯಾ?
    ನೀನು ಒರೈಯನ್[b] ನಕ್ಷತ್ರ ಗುಂಪಿನ ನಡುಪಟ್ಟಿಯನ್ನು ಬಿಚ್ಚಬಲ್ಲೆಯಾ?
32 ಯೋಬನೇ, ನೀನು ಸಮಯಕ್ಕೆ ಸರಿಯಾಗಿ ನಕ್ಷತ್ರರಾಶಿಗಳನ್ನು ಬರಮಾಡಬಲ್ಲೆಯಾ?
    ನೀನು ಬೇರ್[c] ನಕ್ಷತ್ರಗಳನ್ನು ಅದರ ಮರಿಗಳೊಂದಿಗೆ ನಡೆಸಬಲ್ಲೆಯಾ?
33 ಯೋಬನೇ, ಆಕಾಶವನ್ನು ಆಳುವ ನಿಯಮಗಳು ನಿನಗೆ ಗೊತ್ತಿವೆಯೋ?
    ಅವುಗಳ ಆಳ್ವಿಕೆಯನ್ನು ನೀನು ಭೂಮಿಯ ಮೇಲೆ ಆರಂಭಿಸಬಲ್ಲೆಯಾ?

34 “ಯೋಬನೇ, ನೀನು ಮೋಡಗಳಿಗೆ ಮಹಾಧ್ವನಿಯಿಂದ ಆಜ್ಞಾಪಿಸಿ
    ಅವು ನಿನ್ನನ್ನು ದೊಡ್ಡ ಮಳೆಯಿಂದ ಆವರಿಸಿಕೊಳ್ಳುವಂತೆ ಮಾಡಬಲ್ಲೆಯಾ?
35 ಯೋಬನೇ, ನೀನು ಸಿಡಿಲಿಗೆ ಆಜ್ಞಾಪಿಸಬಲ್ಲೆಯಾ?
    ಅದು ನಿನ್ನ ಬಳಿಗೆ ಬಂದು, ‘ಇಗೋ ಬಂದಿದ್ದೇನೆ;
    ತಮಗೇನಾಗಬೇಕು’ ಎನ್ನುವುದೇ?

36 “ಯೋಬನೇ, ಮನುಷ್ಯರನ್ನು ಜ್ಞಾನಿಗಳನ್ನಾಗಿ ಮಾಡುವವರು ಯಾರು?
    ಅವರ ಅಂತರಾಳದಲ್ಲಿ ಜ್ಞಾನವನ್ನು ಇಡುವವರು ಯಾರು?
37 ಮೋಡಗಳನ್ನು ಲೆಕ್ಕಿಸಿ
    ಮಳೆ ಸುರಿಸಲು ಅವುಗಳನ್ನು ಮೊಗಚಿಹಾಕಿ
38 ಧೂಳನ್ನು ಮಣ್ಣನ್ನಾಗಿಯೂ ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ
    ಮಾಡುವ ಜ್ಞಾನಿ ಯಾರು?

39-40 “ಯೋಬನೇ, ಹೆಣ್ಣುಸಿಂಹಕ್ಕೆ ನೀನು ಆಹಾರವನ್ನು ಹುಡುಕುವೆಯಾ?
    ಗವಿಗಳಲ್ಲಿ ಮಲಗಿಕೊಂಡಿರುವ ಸಿಂಹಗಳಿಗೂ ಪೊದೆಯಲ್ಲಿ ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಿಗೂ ನೀನು ಉಣಿಸಬಲ್ಲೆಯಾ?
41 ಕಾಗೆಗಳು ಆಹಾರವಿಲ್ಲದೆ ಅಲೆದಾಡುತ್ತಿರುವ ಅವುಗಳ ಮರಿಗಳು ದೇವರಿಗೆ ಮೊರೆಯಿಡುವಾಗ
    ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು?

39 “ಯೋಬನೇ, ಬೆಟ್ಟದ ಮೇಕೆಗಳು ಯಾವಾಗ ಹುಟ್ಟುತ್ತವೆ ಎಂಬುದು ನಿನಗೆ ಗೊತ್ತಿದೆಯೋ?
    ತಾಯಿ ಜಿಂಕೆಯು ಮರಿ ಈಯುವಾಗ ನೀನು ಸಹಾಯ ಮಾಡಬಲ್ಲೆಯಾ?
ಬೆಟ್ಟದ ಮೇಕೆಯೂ ಜಿಂಕೆಯೂ ತಮ್ಮ ಮರಿಗಳನ್ನು ಹೊಟ್ಟೆಯಲ್ಲಿ ಎಷ್ಟು ತಿಂಗಳವರೆಗೆ ಹೊತ್ತುಕೊಂಡಿರುತ್ತವೆ ಎಂಬುದು ನಿನಗೆ ಗೊತ್ತಿದೆಯೋ?
    ಅವುಗಳು ಹುಟ್ಟುವುದಕ್ಕೆ ಸರಿಯಾದ ಸಮಯ ಯಾವುದೆಂದು ನಿನಗೆ ಗೊತ್ತಿದೆಯೋ?
ಅವು ಬಗ್ಗಿಕೊಂಡು ಮರಿಗಳನ್ನು ಈಯುತ್ತವೆ;
    ಬಳಿಕ ಅವುಗಳ ಪ್ರಸವವೇದನೆ ಕೊನೆಗೊಳ್ಳುತ್ತದೆ.
ಬೆಟ್ಟದಮೇಕೆ ಮರಿಗಳೂ ಜಿಂಕೆಯ ಮರಿಗಳೂ ಬಯಲುಗಳಲ್ಲಿ ಪುಷ್ಟಿಯಾಗಿ ಬೆಳೆಯುತ್ತವೆ.
    ಬಳಿಕ ಅವು ತಮ್ಮ ತಾಯಂದಿರನ್ನು ಬಿಟ್ಟುಹೋಗುತ್ತವೆ; ಹಿಂತಿರುಗಿ ಬರುವುದೇ ಇಲ್ಲ.

“ಯೋಬನೇ, ಸ್ವತಂತ್ರವಾಗಿರುವಂತೆ ಕಾಡುಕತ್ತೆಗಳನ್ನು ಕಳುಹಿಸಿದವರು ಯಾರು?
    ಅವುಗಳ ಹಗ್ಗಗಳನ್ನು ಬಿಚ್ಚಿ, ಅವುಗಳನ್ನು ಬಿಟ್ಟುಬಿಟ್ಟವರು ಯಾರು?
ಕಾಡುಕತ್ತೆಗೆ ಅಡವಿಯನ್ನು ಮನೆಯನ್ನಾಗಿ ಕೊಟ್ಟವನೇ ನಾನು.
    ಅವುಗಳಿಗೆ ಉಪ್ಪುಭೂಮಿಯನ್ನು ವಾಸಿಸುವ ಸ್ಥಳವನ್ನಾಗಿ ಕೊಟ್ಟವನೇ ನಾನು.
ಕಾಡುಕತ್ತೆಯು ಗದ್ದಲವಿರುವ ಊರುಗಳ ಸಮೀಪಕ್ಕೂ ಹೋಗುವುದಿಲ್ಲ,
    ಯಾರೂ ಅವುಗಳನ್ನು ಪಳಗಿಸಿ ದುಡಿಸುವುದಿಲ್ಲ.
ಕಾಡುಕತ್ತೆಗಳು ಬೆಟ್ಟಗಳಲ್ಲಿ ವಾಸಿಸುತ್ತವೆ.
    ಹಸಿರಾದ ಏನನ್ನಾದರೂ ತಿನ್ನುವುದಕ್ಕೆ ಅವು ಅಲ್ಲಿಯೇ ಹುಡುಕುತ್ತವೆ.

“ಯೋಬನೇ, ಕಾಡುಕೋಣಕ್ಕೆ ಮೂಗುದಾರವನ್ನು ಕಟ್ಟಿ ನಿನ್ನ ಹೊಲವನ್ನು ಉಳುವಂತೆ ಮಾಡಬಲ್ಲೆಯಾ?
    ತಗ್ಗುಭೂಮಿಯಲ್ಲಿ ಕುಂಟೆ ಹೊಡೆಯಬಲ್ಲೆಯಾ?
10 ಕಾಡುಕೋಣವನ್ನು ಹಗ್ಗದಿಂದ ಕಟ್ಟಿ ಭೂಮಿಯನ್ನು ಉಳುಮೆ ಮಾಡಬಲ್ಲೆಯಾ?
    ಅದು ತಗ್ಗುಗಳಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ?
11 ನಿನ್ನ ಬೇಸಾಯಕ್ಕೆ ಕಾಡುಕೋಣದ ಶಕ್ತಿಯನ್ನು ಅವಲಂಭಿಸಿಕೊಳ್ಳಬಲ್ಲೆಯಾ?
    ಪ್ರಯಾಸದ ಕೆಲಸವನ್ನು ಅದು ಮಾಡಬೇಕೆಂದು ಅಪೇಕ್ಷಿಸುವೆಯಾ?
12 ಅದು ನಿನ್ನ ಬೆಳೆಯನ್ನು ಕೂಡಿಸಿ,
    ನಿನ್ನ ಕಣಕ್ಕೆ ಹೊತ್ತುಕೊಂಡು ಬರುವುದೆಂದು ಭರವಸವಿಡುವಿಯಾ?

13 “ಉಷ್ಟ್ರಪಕ್ಷಿಯು ಸಂತೋಷದಿಂದ ತನ್ನ ರೆಕ್ಕೆಗಳನ್ನು ಬಡಿದಾಡುವುದು.
    ಆದರೆ ಅದರ ರೆಕ್ಕೆಗಳು ಕೊಕ್ಕರೆಯ ರೆಕ್ಕೆಗಳಿಗೆ ಸರಿಹೋಲುವುದಿಲ್ಲ.
14 ಉಷ್ಟ್ರಪಕ್ಷಿಯು ನೆಲದ ಮೇಲೆ ಮೊಟ್ಟೆಗಳನ್ನು ಇಡುತ್ತದೆ;
    ಮೊಟ್ಟೆಗಳು ಮರಳಿನಲ್ಲಿ ಕಾವು ಪಡೆಯುತ್ತವೆ.
15 ಆ ಮೊಟ್ಟೆಗಳನ್ನು ಮನುಷ್ಯರಾಗಲಿ ಪ್ರಾಣಿಗಳಾಗಲಿ ತುಳಿಯಬಹುದೆಂಬುದನ್ನು
    ಆ ಉಷ್ಟ್ರಪಕ್ಷಿಯು ಮರೆತುಬಿಡುತ್ತದೆ.
16 ಉಷ್ಟ್ರಪಕ್ಷಿಯು ತನ್ನ ಮರಿಗಳನ್ನು ಕಡೆಗಣಿಸಿ
    ತನ್ನ ಮರಿಗಳಲ್ಲವೆಂಬಂತೆ ವರ್ತಿಸುತ್ತದೆ;
    ಮರಿಗಳು ಸತ್ತುಹೋದರೆ ತನ್ನ ಪ್ರಯಾಸವು ವ್ಯರ್ಥವಾಯಿತೆಂಬ ಚಿಂತೆಯೂ ಅದಕ್ಕಿಲ್ಲ.
17 ಯಾಕೆಂದರೆ ನಾನು ಉಷ್ಟ್ರಪಕ್ಷಿಗೆ ಜ್ಞಾನವನ್ನು ಕೊಡಲಿಲ್ಲ.
    ಉಷ್ಟ್ರಪಕ್ಷಿಯು ಮೂಢಪಕ್ಷಿಯಾಗಿದೆ, ಅದನ್ನು ಈ ರೀತಿ ನಿರ್ಮಿಸಿದವನು ನಾನೇ.
18 ಆದರೆ ಉಷ್ಟ್ರಪಕ್ಷಿಯು ಓಡಲು ಎದ್ದೇಳುವಾಗ, ಕುದುರೆಯನ್ನೂ ಅದರ ಸವಾರನನ್ನೂ ಕಂಡು ನಗುತ್ತದೆ.
    ಅದು ಕುದುರೆಗಿಂತಲೂ ವೇಗವಾಗಿ ಓಡಬಲ್ಲದು.

19 “ಯೋಬನೇ, ನೀನು ಕುದುರೆಗೆ ಶಕ್ತಿಯನ್ನು ಕೊಟ್ಟೆಯಾ?
    ಅದರ ಕೊರಳಿನ ಮೇಲಿನ ಕೇಸರವನ್ನು ಕೊಟ್ಟೆಯಾ?
20 ಮಿಡತೆಯು ಕುಪ್ಪಳಿಸುವಂತೆ ನೀನು ಕುದುರೆಯನ್ನೂ ಕುಪ್ಪಳಿಸಬಲ್ಲೆಯಾ?
    ಅದರ ಗಟ್ಟಿಯಾದ ಕೆನೆತ ಜನರನ್ನು ಭಯಗೊಳಿಸುತ್ತದೆ.
21 ಕುದುರೆಯು ತನಗಿರುವ ಬಾಹುಬಲದಲ್ಲಿ ಸಂತೋಷಪಡುತ್ತದೆ;
    ತನ್ನ ಪಾದದಿಂದ ನೆಲವನ್ನು ಕೆರೆಯುತ್ತದೆ, ಯುದ್ಧಕ್ಕೆ ವೇಗವಾಗಿ ಓಡುತ್ತಾ ಹೋಗುವುದು.
22 ಕುದುರೆಯು ಭಯವನ್ನು ಕಂಡು ನಗುವುದು; ಅದಕ್ಕೆ ಭಯವಿಲ್ಲ!
    ಅದು ಯುದ್ಧದಿಂದ ಓಡಿಹೋಗುವುದಿಲ್ಲ.
23 ಕುದುರೆಯ ಪಾರ್ಶ್ವದಲ್ಲಿ ಬತ್ತಳಿಕೆಯು ಅಲುಗಾಡುವುದು.
    ಕುದುರೆಸವಾರನು ಕೊಂಡೊಯ್ಯುತ್ತಿರುವ ಬರ್ಜಿ ಮತ್ತು ಆಯುಧಗಳು ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತವೆ.
24 ಕುದುರೆಯು ಬಹು ಉತ್ಸುಕತೆಯಿಂದಿರುತ್ತದೆ!
    ಅದು ನೆಲದ ಮೇಲೆ ವೇಗವಾಗಿ ಓಡುವುದು; ಅದು ತೂತೂರಿಯ ಧ್ವನಿಯನ್ನು ಕೇಳಿದರೂ ನಿಲ್ಲದು.
25 ತುತ್ತೂರಿಯ ಧ್ವನಿಗೆ ಕುದುರೆಯು, “ಆಹಾ!” ಎಂದು ಹೇಳುತ್ತದೆ.
    ಅದು ದೂರದಿಂದಲೇ ಯುದ್ಧವನ್ನು ಮೂಸಿ ನೋಡಿ ತಿಳಿಯುವುದು.
    ಸೇನಾಧಿಪತಿಗಳು ಗಟ್ಟಿಯಾಗಿ ಅಪ್ಪಣೆಕೊಡುವುದನ್ನೂ ಯುದ್ಧದ ಎಲ್ಲಾ ಕೂಗಾಟವನ್ನೂ ಅದು ಕೇಳಿಸಿಕೊಳ್ಳುತ್ತದೆ.

26 “ಯೋಬನೇ, ತನ್ನ ರೆಕ್ಕೆಗಳನ್ನು ಚಾಚಿಕೊಂಡು ದಕ್ಷಿಣದ ಕಡೆಗೆ ಹಾರುವ ಗಿಡುಗಕ್ಕೆ ನೀನು ಹಾರುವುದನ್ನು ಕಲಿಸಿದೆಯೋ?
27 ನೀನು ಹದ್ದಿಗೆ ಹಾರಿಹೋಗಿ ಎತ್ತರವಾದ ಬೆಟ್ಟಗಳ ಮೇಲೆ ಗೂಡನ್ನು ಕಟ್ಟಿಕೊಳ್ಳಲು ಆಜ್ಞಾಪಿಸುವೆಯಾ?
28 ಹದ್ದು ಕಡಿದಾದ ಬಂಡೆಯ ಮೇಲೆ ವಾಸಿಸುವುದು.
    ಕಡಿದಾದ ಬಂಡೆಯು ಹದ್ದಿನ ದುರ್ಗವಾಗಿದೆ.
29 ಹದ್ದು ಆಹಾರಕ್ಕಾಗಿ ತನ್ನ ದುರ್ಗದಿಂದ ನೋಡುತ್ತದೆ.
    ದೂರದಲ್ಲಿರುವ ಆಹಾರವನ್ನು ಅದು ನೋಡಬಲ್ಲದು.
30 ಹದ್ದಿನ ಮರಿಗಳು ರಕ್ತವನ್ನು ಕುಡಿಯುತ್ತವೆ.
    ಅವು ಸತ್ತದೇಹಗಳ ಸುತ್ತಲೂ ಸೇರಿಕೊಳ್ಳುತ್ತವೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International