Beginning
ಚೋಫರನ ವಾದ
11 ಆಗ ನಾಮಾಥ ದೇಶದ ಚೋಫರನು ಯೋಬನಿಗೆ ಉತ್ತರಿಸಿದನು:
2 “ಮಾತುಗಳ ಈ ಪ್ರವಾಹಕ್ಕೆ ಯಾರಾದರೊಬ್ಬರು ಉತ್ತರ ಕೊಡಬೇಕು!
ಇಷ್ಟೆಲ್ಲಾ ಮಾತುಗಳು ಯೋಬನನ್ನು ನೀತಿವಂತನನ್ನಾಗಿ ಮಾಡುತ್ತವೆಯೋ? ಇಲ್ಲ!
3 ಯೋಬನೇ, ಅರ್ಥರಹಿತವಾದ ನಿನ್ನ ಮಾತುಗಳಿಗೆ
ನಮ್ಮಲ್ಲಿ ಉತ್ತರವೇ ಇಲ್ಲವೆಂದು ಆಲೋಚಿಸಿಕೊಂಡಿರುವೆಯಾ?
ನೀನು ದೇವರನ್ನು ಅಪಹಾಸ್ಯ ಮಾಡುವಾಗ
ಯಾರೂ ನಿನ್ನನ್ನು ಎಚ್ಚರಿಸುವುದಿಲ್ಲ ಎಂದುಕೊಂಡಿರುವಿಯಾ?
4 ಯೋಬನೇ, ನೀನು ದೇವರಿಗೆ,
‘ನನ್ನ ವಾದಗಳು ಸರಿಯಾಗಿವೆ,
ನಿನ್ನ ದೃಷ್ಟಿಯಲ್ಲಿ ನಾನು ಶುದ್ಧನಾಗಿರುವೆ’ ಎಂದು ಹೇಳಿದೆಯಲ್ಲವೇ?
5 ದೇವರು ನಿನಗೆ ಉತ್ತರ ನೀಡಿ ನಿನ್ನನ್ನು ತಪ್ಪಿತಸ್ಥನೆಂದು ಹೇಳಿದರೆ
ಎಷ್ಟೋ ಒಳ್ಳೆಯದು.
6 ಆತನು ನಿನಗೆ ಜ್ಞಾನದ ರಹಸ್ಯಗಳನ್ನು ತಿಳಿಸಿ
ಜ್ಞಾನಕ್ಕೆ ಎರಡು ಮುಖಗಳಿವೆ ಎಂದು ತೋರಿಸಿಕೊಟ್ಟರೆ ಎಷ್ಟೋ ಲೇಸು.
ದೇವರು ನಿನಗೆ ತಕ್ಕ ದಂಡನೆಯನ್ನು ವಿಧಿಸಿಲ್ಲವೆಂಬುದು
ನಿನಗೆ ತಿಳಿದಿರಲಿ.
7 “ನೀನು ದೇವರ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲೆಯಾ?
ಸರ್ವಶಕ್ತನಾದ ದೇವರ ಜ್ಞಾನದ ಮೇರೆಗಳನ್ನು ತಿಳಿದುಕೊಳ್ಳಬಲ್ಲೆಯಾ?
8 ಆತನ ಜ್ಞಾನವು ಆಕಾಶಕ್ಕಿಂತಲೂ ಉನ್ನತವಾಗಿದೆ; ಅದನ್ನು ಅರ್ಥಮಾಡಿಕೊಳ್ಳಲು ನಿನಗೆ ಸಾಧ್ಯವೇ ಇಲ್ಲ.
ಅದು ಮೃತ್ಯುಲೋಕಕ್ಕಿಂತಲೂ ಆಳವಾಗಿದೆ. ನೀನು ಅದನ್ನು ಗ್ರಹಿಸಿಕೊಳ್ಳಲಾರೆ.
9 ದೇವರ ಜ್ಞಾನವು ಭೂಮಿಗಿಂತಲೂ ಉದ್ದವಾಗಿದೆ;
ಸಮುದ್ರಕ್ಕಿಂತಲೂ ಅಗಲವಾಗಿದೆ.
10 “ದೇವರು ನಿನ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಎಳೆದುಕೊಂಡು ಬರುವುದಾದರೆ
ಆತನನ್ನು ತಡೆಯಬಲ್ಲವರು ಯಾರು?
11 ಅಯೋಗ್ಯರು ಯಾರೆಂಬುದು ದೇವರಿಗೆ ಚೆನ್ನಾಗಿ ಗೊತ್ತಿದೆ.
ಆತನು ಕೆಟ್ಟದ್ದನ್ನು ಕಂಡಾಗ ಗಮನಿಸುವನು.
12 ಕಾಡುಕತ್ತೆಯು ಮನುಷ್ಯನನ್ನು ಹೇಗೆ ಹೆರಲಾರದೋ
ಅದೇ ರೀತಿಯಲ್ಲಿ ದಡ್ಡನು ಎಂದಿಗೂ ಜ್ಞಾನಿಯಾಗಲಾರನು.
13 ಯೋಬನೇ, ನಿನ್ನ ಕೈಗಳನ್ನು ಮೇಲೆತ್ತಿ ದೇವರೊಬ್ಬನನ್ನೇ ಆರಾಧಿಸುವುದಕ್ಕಾಗಿ
ನಿನ್ನ ಹೃದಯವನ್ನು ಸಿದ್ಧಪಡಿಸಿಕೊ.
14 ನೀನು ಪಾಪವನ್ನು ಹಿಡಿದುಕೊಂಡಿದ್ದರೆ ಅದನ್ನು ನಿನ್ನಿಂದ ದೂರಮಾಡು.
ದುಷ್ಟತನವು ನಿನ್ನ ಗುಡಾರಗಳಲ್ಲಿ ವಾಸಿಸದಿರಲಿ.
15 ಆಗ ನೀನು ಖಂಡಿತವಾಗಿ ನಾಚಿಕೆಯಿಲ್ಲದೆ ತಲೆಯೆತ್ತುವೆ;
ಸ್ಥಿರವಾಗಿ ನಿಂತುಕೊಂಡು ನಿರ್ಭಯದಿಂದಿರುವೆ.
16 ಯೋಬನೇ, ಆಗ ನೀನು ನಿನ್ನ ಕಷ್ಟವನ್ನು ಮರೆತುಬಿಡುವೆ;
ಹರಿದುಹೋದ ನೀರನ್ನೋ ಎಂಬಂತೆ ನಿನ್ನ ಕಷ್ಟಗಳನ್ನು ಜ್ಞಾಪಿಸಿಕೊಳ್ಳುವೆ.
17 ನಿನ್ನ ಜೀವಿತವು ಮಧ್ಯಾಹ್ನದ ಸೂರ್ಯನಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿರುವುದು.
ನಿನ್ನ ಜೀವಿತದ ಕಾರ್ಗತ್ತಲೆಯ ತಾಸುಗಳು ಮುಂಜಾನೆಯ ಸೂರ್ಯನಂತೆ ಹೊಳೆಯುತ್ತವೆ.
18 ಯೋಬನೇ, ನಿನಗೆ ನಿರೀಕ್ಷೆಯಿರುವುದರಿಂದ ಸುರಕ್ಷಿತನಾಗಿರುವೆ.
ಆತನು ನಿನ್ನನ್ನು ಪರಿಪಾಲಿಸುತ್ತಾ ನಿನಗೆ ವಿಶ್ರಾಂತಿಯನ್ನು ದಯಪಾಲಿಸುವನು.
19 ಆಗ ನೀನು ಮಲಗಿ ವಿಶ್ರಮಿಸಿಕೊಳ್ಳುವೆ; ಯಾರೂ ನಿನಗೆ ಭಯ ಹುಟ್ಟಿಸುವುದಿಲ್ಲ.
ಅನೇಕರು ನಿನ್ನ ಸಹಾಯಕ್ಕಾಗಿಯೇ ಕೇಳಿಕೊಳ್ಳುವರು.
20 ಆದರೆ ದುಷ್ಟರು ಸಹಾಯಕ್ಕಾಗಿ ಎದುರುನೋಡಿದರೂ
ತಮ್ಮ ಆಪತ್ತುಗಳಿಂದ ಪಾರಾಗಲು ಅವರಿಗೆ ಸಾಧ್ಯವಿಲ್ಲ.
ಅವರ ನಿರೀಕ್ಷೆಯೇ ಅವರನ್ನು ಮರಣಕ್ಕೆ ನಡೆಸುತ್ತದೆ.”
ಯೋಬನ ವಾದ
12 ಆಮೇಲೆ ಯೋಬನು ಚೋಫರನಿಗೆ ಹೀಗೆ ಉತ್ತರಿಸಿದನು:
2 “ನೀವು ನಿಮ್ಮನ್ನೇ ಜ್ಞಾನಿಗಳೆಂದು ಆಲೋಚಿಸಿಕೊಂಡಿದ್ದೀರಿ.
ನೀವು ಸಾಯುವಾಗ ಜ್ಞಾನವು ನಿಮ್ಮೊಡನೆಯೇ ಸಾಯುವುದು.
3 ಆದರೆ ನನ್ನ ಮನಸ್ಸು ನಿಮ್ಮ ಮನಸ್ಸಿನಂತೆಯೇ ಒಳ್ಳೆಯದಾಗಿದೆ.
ನಾನು ನಿಮ್ಮಂತೆಯೇ ಬುದ್ಧಿವಂತನಾಗಿರುವೆ.
ಇದು ಸತ್ಯವೆಂದು
ಯಾರು ಬೇಕಾದರೂ ತಿಳಿದುಕೊಳ್ಳಬಲ್ಲರು.
4 “ಈಗ ನನ್ನ ಸ್ನೇಹಿತರು ನನ್ನನ್ನು ನೋಡಿ ನಗುವರು.
ಹೌದು, ನಾನು ದೇವರಿಗೆ ಪ್ರಾರ್ಥಿಸುವೆನು; ಆತನು ನನಗೆ ಉತ್ತರಿಸುವನು.
ನಾನು ನೀತಿವಂತನಾಗಿದ್ದರೂ ನಿರ್ದೋಷಿಯಾಗಿದ್ದರೂ
ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ.
5 ಆಪತ್ತಿಗೆ ಗುರಿಯಾಗಿಲ್ಲದವರು ಆಪತ್ತಿನಿಂದ ಕಷ್ಟಪಡುತ್ತಿರುವ ಜನರನ್ನು ಗೇಲಿ ಮಾಡುವರು;
ಜಾರಿಬಿದ್ದವನಿಗೆ ಹೊಡೆಯುವರು.
6 ಕಳ್ಳರ ಗುಡಾರಗಳಿಗೆ ತೊಂದರೆಯಿಲ್ಲ;
ತಮ್ಮ ದೇವರುಗಳನ್ನು ಕೈಗಳಲ್ಲಿ ಎತ್ತಿಕೊಂಡು ಹೋಗುತ್ತಾ
ದೇವರನ್ನು ರೇಗಿಸುವವರು ಸಮಾಧಾನದಿಂದಿದ್ದಾರೆ.
7 “ಆದರೆ ಪ್ರಾಣಿಗಳನ್ನು ಕೇಳು, ಅವು ನಿನಗೆ ಉಪದೇಶಿಸುತ್ತವೆ.
ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುತ್ತವೆ.
8 ಭೂಮಿಯೊಂದಿಗೆ ಮಾತಾಡು, ಅದು ನಿನಗೆ ಉಪದೇಶಿಸುತ್ತದೆ.
ಸಮುದ್ರದ ಮೀನುಗಳು ತಮ್ಮ ಜ್ಞಾನವನ್ನು ನಿನಗೆ ತಿಳಿಸಲಿ.
9 ಇದನ್ನು ಮಾಡಿದಾತನು ಯೆಹೋವನೇ ಎಂಬುದು
ಈ ಸೃಷ್ಟಿಗಳಲ್ಲಿ ಪ್ರತಿಯೊಂದಕ್ಕೂ ಗೊತ್ತು.
10 ಪ್ರತಿಯೊಂದು ಪ್ರಾಣಿಯ ಜೀವವೂ ಪ್ರತಿಯೊಬ್ಬ ವ್ಯಕ್ತಿಯ ಆತ್ಮವೂ
ದೇವರ ಕೈಯಲ್ಲಿವೆ.
11 ಆದರೆ ನಾಲಿಗೆಯು ಊಟದ ರುಚಿಯನ್ನು ಆನಂದಿಸುವಂತೆ
ಕಿವಿಗಳು ಮಾತುಗಳನ್ನು ವಿವೇಚಿಸುವುದಿಲ್ಲವೇ?
12 ‘ಜ್ಞಾನವು ವೃದ್ಧರಲ್ಲಿಲ್ಲವೇ?
ದೀರ್ಘಾಯುಷ್ಯವು ತಿಳಿವಳಿಕೆಯನ್ನು ಉಂಟುಮಾಡುವುದಿಲ್ಲವೇ?’
13 ಜ್ಞಾನವೂ ಶಕ್ತಿಯೂ ಆತನವೇ.
ಆಲೋಚನೆಯೂ ವಿವೇಕವೂ ಆತನವೇ.
14 ದೇವರು ಕೆಡವಿದ್ದನ್ನು ಮತ್ತೆ ಕಟ್ಟುವುದಕ್ಕಾಗಲಿ
ಸೆರೆಗೆ ಹಾಕಿದವನನ್ನು ಬಿಡಿಸುವುದಕ್ಕಾಗಲಿ ಯಾರಿಗೂ ಸಾಧ್ಯವಿಲ್ಲ.
15 ಆತನು ಮಳೆಯನ್ನು ತಡೆಹಿಡಿದರೆ ಭೂಮಿಗೆ ಬರಗಾಲವಾಗುವುದು.
ಮಳೆಯನ್ನು ಸುರಿಸಿದರೆ ಭೂಮಿಯ ಮೇಲೆ ಪ್ರವಾಹವಾಗುವುದು.
16 ದೇವರು ಬಲಿಷ್ಠನಾಗಿರುವುದರಿಂದ ಯಾವಾಗಲೂ ಜಯಗಳಿಸುತ್ತಾನೆ.
ಗೆಲ್ಲುವವರೂ ಸೋಲುವವರೂ ಆತನವರೇ!
17 ದೇವರು ಮಂತ್ರಿಗಳ ಜ್ಞಾನವನ್ನು ತೆಗೆದುಹಾಕುವನು.
ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುವನು.
18 ರಾಜರುಗಳು ಜನರಿಗೆ ಬೇಡಿಗಳನ್ನು ಹಾಕಿಸಿದರೆ ದೇವರು ಅವುಗಳನ್ನು ಕಿತ್ತೊಗೆದು
ರಾಜರುಗಳ ಸೊಂಟಕ್ಕೆ ಚಿಂದಿಬಟ್ಟೆಯನ್ನು ಕಟ್ಟಿಸುವನು.
19 ದೇವರು ಯಾಜಕರುಗಳ ಅಧಿಕಾರವನ್ನು ಕಿತ್ತೊಗೆಯುವನು;
ಪ್ರಧಾನರನ್ನು ದಬ್ಬಿಬಿಡುವನು.
20 ದೇವರು ವಿಶ್ವಾಸನೀಯವಾದ ಆಲೋಚನಾಗಾರರನ್ನು ಮೌನಗೊಳಿಸುವನು;
ಹಿರಿಯರ ವಿವೇಕವನ್ನು ತೆಗೆದುಹಾಕುವನು.
21 ದೇವರು ಪ್ರಮುಖರಿಗೆ ಅವಮಾನ ಮಾಡುವನು;
ಅಧಿಪತಿಗಳ ಶಕ್ತಿಯನ್ನು ತೆಗೆದುಹಾಕುವನು.[a]
22 ಕಾರ್ಗತ್ತಲೆಯೊಳಗಿರುವ ನಿಗೂಢ ರಹಸ್ಯಗಳನ್ನು ಆತನು ಪ್ರಕಟಿಸುವನು;
ಮರಣಾಂಧಕಾರದ ಸ್ಥಳಗಳನ್ನು ಬೆಳಕಿನಿಂದ ಪ್ರಕಾಶಗೊಳಿಸುವನು.
23 ದೇವರು ಜನಾಂಗಗಳನ್ನು ವೃದ್ಧಿಮಾಡಿ ಬಲಗೊಳಿಸುವನು;
ಬಳಿಕ ಅವುಗಳನ್ನು ನಾಶಮಾಡುವನು.
ಆತನು ಜನಾಂಗಗಳನ್ನು ವಿಸ್ತಾರವಾಗಿ ಬೆಳೆಯ ಮಾಡುವನು;
ನಂತರ ಅವುಗಳನ್ನು ಚದರಿಸಿಬಿಡುವನು.
24 ದೇವರು ಭೂಲೋಕದ ನಾಯಕರುಗಳನ್ನು ಮೂಢರನ್ನಾಗಿ ಮಾಡುವನು;
ರಸ್ತೆಯಿಲ್ಲದ ಮರಳುಗಾಡಿನಲ್ಲಿ ಅವರನ್ನು ಅಲೆದಾಡಿಸುವನು.
25 ಅವರು ಬೆಳಕಿಲ್ಲದೆ ಕತ್ತಲೆಯಲ್ಲಿ ತಡವಾಡುವರು.
ಆತನು ಅವರನ್ನು ಅಮಲೇರಿದವರಂತೆ ಅಲೆದಾಡಿಸುವನು.”
13 ಯೋಬನು ಹೇಳಿದನು:
“ಇಗೋ, ಇವುಗಳನ್ನೆಲ್ಲ ನನ್ನ ಕಣ್ಣುಗಳು ಕಂಡಿವೆ;
ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.
2 ನಿಮಗೆ ತಿಳಿದಿರುವುದು ನನಗೂ ತಿಳಿದಿದೆ.
ನಾನು ನಿಮಗಿಂತ ಕಡಿಮೆಯಲ್ಲ.
3 ಆದರೆ ನಾನು ನಿಮ್ಮೊಂದಿಗೆ ವಾದಮಾಡದೆ
ಸರ್ವಶಕ್ತನಾದ ದೇವರೊಂದಿಗೆ ಮಾತಾಡುವೆನು;
ನನ್ನ ಕಷ್ಟಗಳ ಕುರಿತು ಆತನೊಂದಿಗೆ ವಾದಿಸುವೆನು.
4 ನೀವಾದರೋ ನಿಮ್ಮ ಆ ಜ್ಞಾನವನ್ನು ಸುಳ್ಳುಗಳಿಂದ ಮುಚ್ಚಲು ಪ್ರಯತ್ನಿಸುತ್ತಿದ್ದೀರಿ.
ನೀವೆಲ್ಲರೂ ಗುಣಪಡಿಸಲಾಗದ ವೈದ್ಯರುಗಳಂತಿದ್ದೀರಿ.
5 ನೀವು ಬಾಯಿಮುಚ್ಚಿಕೊಂಡು ಸುಮ್ಮನಿದ್ದರೆ ಎಷ್ಟೋ ಒಳ್ಳೆಯದು.
ನೀವು ಮಾಡಬಹುದಾದ ಜ್ಞಾನದ ಕಾರ್ಯ ಅದೊಂದೇ.
6 “ಈಗ ನನ್ನ ವಾದಕ್ಕೆ ಕಿವಿಗೊಡಿ.
ನಾನು ಹೇಳುವುದನ್ನು ಕೇಳಿ.
7 ನೀವು ದೇವರಿಗಾಗಿ ಸುಳ್ಳಾಡುವಿರಾ?
ಆತನಿಗಾಗಿ ಅನ್ಯಾಯದ ವಾದಗಳನ್ನು ಬಳಸುವಿರಾ?
8 ನೀವು ದೇವರಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ?
ನ್ಯಾಯಾಲಯದಲ್ಲಿ ಆತನಿಗಾಗಿ ವಾದಿಸಲು ಹೋಗುವಿರಾ?
9 ದೇವರು ನಿಮ್ಮನ್ನು ಸೂಕ್ಷ್ಮವಾಗಿ ಪರಿಶೋಧಿಸಿದರೆ
ನೀವು ನೀತಿವಂತರಾಗಿ ಕಂಡುಬರುವಿರಾ?
ಜನರಿಗೆ ಮೋಸ ಮಾಡುವಂತೆ
ದೇವರಿಗೂ ಮೋಸ ಮಾಡಬಹುದೆಂದು ಯೋಚಿಸಿಕೊಂಡಿದ್ದೀರಾ?
10 ನೀವು ನ್ಯಾಯಾಲಯದಲ್ಲಿ ರಹಸ್ಯವಾಗಿ ಪಕ್ಷಪಾತ ಮಾಡಿದರೆ
ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.
11 ಆತನ ಪ್ರಕಾಶಮಾನವಾದ ಮಹಿಮೆಯು ನಿಮ್ಮನ್ನು ಹೆದರಿಸುವುದಿಲ್ಲವೇ?
ನೀವು ಆತನಿಗೆ ಭಯಪಡುವುದಿಲ್ಲವೇ?
12 ನೀವಾಡುವ ಸ್ಮರಣೀಯ ನುಡಿಗಳು ಬೂದಿಗೆ ಸಮಾನವಾಗಿವೆ.
ನಿಮ್ಮ ವಾದಗಳು ಮಣ್ಣಿನಷ್ಟೇ ಬಲಹೀನವಾಗಿವೆ.
13 “ಸುಮ್ಮನಿರಿ, ಮಾತಾಡಲು ನನಗೆ ಅವಕಾಶ ಕೊಡಿ!
ನನಗೆ ಏನಾಗಬೇಕೋ ಆಗಲಿ.
14 ನಾನು ನನ್ನನ್ನು ಅಪಾಯಕ್ಕೊಡ್ಡುವೆನು;
ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15 ದೇವರು ನನ್ನನ್ನು ಕೊಂದರೂ ಆತನಲ್ಲಿಯೇ ಭರವಸವಿಟ್ಟಿರುವೆನು.
ನನ್ನ ನಡತೆಯ ಕುರಿತು ಆತನ ಮುಂದೆ ವಾದಿಸುವೆನು.
16 ನಾನು ನಿರಪರಾಧಿಯೆಂದು ಆಗ ರುಜುವಾತಾಗುವುದು.
ಯಾಕೆಂದರೆ, ದೇವರನ್ನು ಮುಖಾಮುಖಿಯಾಗಿ ಸಂಧಿಸಲು ದುಷ್ಟನಿಗೆ ಸಾಧ್ಯವೇ ಇಲ್ಲ.
17 ನಾನು ಹೇಳುವುದನ್ನು ಗಮನವಿಟ್ಟು ಕೇಳಿ.
ನನ್ನ ವಿವರಣೆಯನ್ನು ನಿಮ್ಮ ಕಿವಿಗಳು ಕೇಳಲಿ.
18 ನನ್ನ ಪರವಾಗಿ ವಾದಿಸಲು ಈಗ ಸಿದ್ಧವಾಗಿದ್ದೇನೆ.
ನಾನು ನಿರಪರಾಧಿಯೆಂದು ನನಗೆ ಗೊತ್ತದೆ.
19 ನಾನು ತಪ್ಪಿತಸ್ಥನೆಂದು ಯಾವನೂ ನಿರೂಪಿಸಲಾರನು.
ನಿರೂಪಿಸಬಲ್ಲವನಿದ್ದರೆ ಬಾಯಿ ಮುಚ್ಚಿಕೊಳ್ಳುವೆನು.
20 “ದೇವರೇ, ನನಗಾಗಿ ಎರಡು ಕಾರ್ಯಗಳನ್ನು ಮಾಡಬೇಡ,
ಆಗ ನನ್ನನ್ನು ನಿನಗೆ ಮರೆಮಾಡಿಕೊಳ್ಳುವುದಿಲ್ಲ.
21 ನನ್ನ ಮೇಲೆತ್ತಿರುವ ನಿನ್ನ ಕೈಯಿಂದ ನನ್ನನ್ನು ದಂಡಿಸಬೇಡ,
ಭಯಾನಕವಾದವುಗಳಿಂದ ನನ್ನನ್ನು ಹೆದರಿಸಬೇಡ.
22 ಆಗ ನೀನು ಕರೆದರೆ, ನಾನು ಉತ್ತರಕೊಡುವೆನು.
ಇಲ್ಲವೇ ನಾನು ಕರೆಯುವೆ, ನೀನು ಉತ್ತರಕೊಡು.
23 ನಾನು ಎಷ್ಟು ಪಾಪಗಳನ್ನು ಮಾಡಿರುವೆ?
ನಾನೇನು ತಪ್ಪು ಮಾಡಿರುವೆ?
ನನ್ನ ತಪ್ಪನ್ನೂ ಪಾಪವನ್ನೂ ನನಗೆ ತೋರಿಸು.
24 ದೇವರೇ, ನೀನೇಕೆ ನನಗೆ ಮರೆಯಾಗಿರುವೆ?
ನನ್ನನ್ನೇಕೆ ನಿನ್ನ ಶತ್ರುವೆಂದು ಪರಿಗಣಿಸಿರುವೆ?
25 ಒಣಗಿದ ಎಲೆಯಂತಿರುವ ನನ್ನನ್ನು ಹೆದರಿಸುವಿಯಾ?
ಹುಲ್ಲುಕಡ್ಡಿಯಂತಿರುವ ನನ್ನ ಮೇಲೆ ಆಕ್ರಮಣ ಮಾಡುವಿಯಾ?
26 ದೇವರೇ, ನೀನು ನನಗೆ ಕಠಿಣವಾದ ದಂಡನೆಗಳನ್ನು ವಿಧಿಸಿರುವೆ.
ನನ್ನ ಯೌವನದ ಪಾಪಗಳ ದೆಸೆಯಿಂದ ನನ್ನನ್ನು ಸಂಕಟಪಡಿಸಿರುವೆ.
27 ನೀನು ನನ್ನ ಕಾಲುಗಳಿಗೆ ಕೋಳವನ್ನು ಹಾಕಿರುವೆ.
ನಾನಿಡುವ ಪ್ರತಿಯೊಂದು ಹೆಜ್ಜೆಯನ್ನು ನೀನು ಸೂಕ್ಷ್ಮವಾಗಿ ಗಮನಿಸಿ
ನನ್ನ ಹೆಜ್ಜೆಗಳಿಗೆ ಮೇರೆಗಳನ್ನು ಹಾಕಿರುವೆ.
28 ಆದ್ದರಿಂದ ನಾನು ಕೊಳೆತುಹೋದ ಪದಾರ್ಥದಂತೆಯೂ
ನುಸಿಹಿಡಿದ ಬಟ್ಟೆಯ ಚೂರಿನಂತೆಯೂ
ಕ್ಷಯಿಸಿಹೋಗುತ್ತಿದ್ದೇನೆ.”
Kannada Holy Bible: Easy-to-Read Version. All rights reserved. © 1997 Bible League International