Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಬನು 8-10

ಬಿಲ್ದದನ ವಾದ

ಬಳಿಕ ಶೂಹ ದೇಶದ ಬಿಲ್ದದನು ಉತ್ತರಿಸಿದನು:

“ಇನ್ನೆಷ್ಟುಕಾಲ ಹೀಗೆ ಮಾತಾಡುವೆ?
    ನಿನ್ನ ಮಾತುಗಳು ಬೀಸುವ ಬಿರುಗಾಳಿಯಂತಿವೆ.
ದೇವರು ಅನ್ಯಾಯ ಮಾಡುವನೇ?
    ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವನೇ?
ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪ ಮಾಡಿದ್ದರಿಂದ ಆತನು ಅವರನ್ನು ಶಿಕ್ಷಿಸಿದ್ದಾನೆ.
    ಅವರ ಪಾಪಗಳಿಗಾಗಿ ಪ್ರತಿಫಲ ದೊರೆಯಿತು.
ಯೋಬನೇ, ಈಗಲಾದರೋ ದೇವರ ಕಡೆಗೆ ನೋಡು,
    ಕರುಣೆತೋರುವಂತೆ ಸರ್ವಶಕ್ತನಾದ ದೇವರಿಗೆ ಪ್ರಾರ್ಥಿಸು.
ನೀನು ಶುದ್ಧನೂ ಒಳ್ಳೆಯವನೂ ಆಗಿದ್ದರೆ
    ಆತನು ಬಂದು ನಿನಗೆ ಸಹಾಯ ಮಾಡುತ್ತಾನೆ;
    ನಿನ್ನ ಕುಟುಂಬವನ್ನು ನಿನಗೆ ಮತ್ತೆ ದಯಪಾಲಿಸುತ್ತಾನೆ.
ಆಗ, ನೀನು ಮೊದಲು ಹೊಂದಿದ್ದೆಲ್ಲ ಅಲ್ಪವಾಗಿ ತೋರುವುದು;
    ನಿನ್ನ ಭವಿಷ್ಯವು ಬಹು ಯಶಸ್ವಿಯಾಗುವುದು.

“ಪೂರ್ವಿಕರನ್ನು ವಿಚಾರಿಸಿ
    ಅವರ ಪಿತೃಗಳು ಕಲಿತುಕೊಂಡದ್ದನ್ನು ತಿಳಿದುಕೊ.
ಯಾಕೆಂದರೆ, ನಾವು ಕೇವಲ ನಿನ್ನೆ ಹುಟ್ಟಿದವರಂತಿದ್ದೇವೆ.
    ನಮಗೇನೂ ಗೊತ್ತಿಲ್ಲ.
    ಭೂಮಿಯ ಮೇಲಿನ ನಮ್ಮ ದಿನಗಳು ನೆರಳಿನಂತೆ ಕ್ಷಣಿಕವಷ್ಟೇ.
10 ಅವರು ನಿನಗೆ ಉಪದೇಶಮಾಡಿ ಬುದ್ಧಿ ಹೇಳುವರು;
    ತಾವು ಕಲಿತುಕೊಂಡದ್ದನ್ನು ನಿನಗೆ ಹೇಳಿಕೊಡುವರು.

11 “ಜಂಬುಗಿಡವು ಜವುಗುಮಣ್ಣಿಲ್ಲದೆ ಎತ್ತರವಾಗಿ ಬೆಳೆಯಬಲ್ಲದೇ?
    ಜವುಗುಸಸ್ಯವು ನೀರಿಲ್ಲದೆ ಬೆಳೆಯಬಲ್ಲದೇ?
12 ನೀರು ಬತ್ತಿಹೋದರೆ ಅವು ಸಹ ಒಣಗಿಹೋಗುತ್ತವೆ.
    ಅವು ತುಂಬ ಎಳೆಯದಾಗಿರುವುದರಿಂದ ಕತ್ತರಿಸಿ ಉಪಯೋಗಿಸಲಾಗದು.
13 ದೇವರನ್ನು ಮರೆಯುವವನು ಆ ಜವುಗು ಸಸ್ಯಗಳಂತೆಯೇ ಇರುವನು.
    ದೇವರನ್ನು ಮರೆಯುವವನಿಗೆ ನಿರೀಕ್ಷೆಯೇ ಇಲ್ಲ.
14 ಅವನ ಭರವಸೆಯು ಬಹು ಬಲಹೀನವಾಗಿರುವುದು.
    ಅವನು ಜೇಡರಬಲೆಯ ಮೇಲೆ ಭರವಸವಿಡುವನು.
15 ಅವನು ಜೇಡರಬಲೆಯನ್ನು ಒರಗಿಕೊಳ್ಳುವನು,
    ಆದರೆ ಬಲೆಯು ಕಿತ್ತುಹೋಗುವುದು.
ಅವನು ಜೇಡರಬಲೆಯನ್ನು ಹಿಡಿದುಕೊಳ್ಳುವನು,
    ಆದರೆ ಅದು ಅವನಿಗೆ ಆಧಾರ ನೀಡುವುದಿಲ್ಲ.
16 ಅವನು ಬೇಕಾದಷ್ಟು ನೀರನ್ನೂ ಬಿಸಿಲನ್ನೂ ಹೊಂದಿರುವ ಬಳ್ಳಿಯಂತಿರುವನು.
    ಆ ಬಳ್ಳಿಯ ಕವಲುಗಳು ತೋಟದಲ್ಲೆಲ್ಲಾ ಹರಡಿಕೊಳ್ಳುತ್ತವೆ.
17 ಅದು ಕಲ್ಲುಕುಪ್ಪೆಯ ಸುತ್ತಲೂ ತನ್ನ ಬೇರುಗಳನ್ನು ಹೆಣೆದುಕೊಂಡು
    ಕಲ್ಲುಗಳಲ್ಲಿ ಬೆಳೆಯಲು ಒಂದು ಸ್ಥಳಕ್ಕಾಗಿ ನೋಡುವುದು.
18 ಆದರೆ ಆ ತೋಟವು,
    ‘ನಾನು ನಿನ್ನನ್ನು ಮೊದಲು ನೋಡಿಯೇ ಇಲ್ಲ’ ಎಂದು ಹೇಳುತ್ತದೆ.
19 ಆದ್ದರಿಂದ ಆ ಬಳ್ಳಿ ಹೊಂದಿರುವ ಸಂತೋಷವೆಲ್ಲಾ ಅಷ್ಟೇ.
    ಬಳಿಕ ಆ ಮಣ್ಣಿನಿಂದ ಇತರ ಸಸಿಗಳು ಬೆಳೆಯುತ್ತವೆ.
20 ಆದರೆ ದೇವರು ಒಬ್ಬ ನಿರಪರಾಧಿಯನ್ನೂ ಕೈಬಿಡುವುದಿಲ್ಲ.
    ಆತನು ದುಷ್ಟರಿಗೆ ಸಹಾಯ ಮಾಡುವುದಿಲ್ಲ.
21 ದೇವರು ಇನ್ನು ಮೇಲೆ ನಿನ್ನ ಬಾಯನ್ನು ನಗೆಯಿಂದಲೂ
    ನಿನ್ನ ತುಟಿಗಳನ್ನು ಉತ್ಸಾಹಧ್ವನಿಯಿಂದಲೂ ತುಂಬಿಸುವನು.
22 ಆದರೆ ನಿನ್ನನ್ನು ದ್ವೇಷಿಸುವವರಿಗೆ ದೇವರು ಅವಮಾನ ಮಾಡುವನು;
    ದುಷ್ಟರ ಮನೆಗಳನ್ನು ನಾಶಮಾಡುವನು.”

ಯೋಬನ ವಾದ

ಬಳಿಕ ಯೋಬನು ಪ್ರತ್ಯುತ್ತರವಾಗಿ ಹೀಗೆಂದನು:

“ಹೌದು, ನೀನು ಹೇಳಿದ್ದು ಸತ್ಯವೇ ಸರಿ!
    ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?
ಒಬ್ಬನು ದೇವರೊಂದಿಗೆ ವಾದಿಸಬಯಸಿದರೆ,
    ದೇವರ ಸಾವಿರ ಪ್ರಶ್ನೆಗಳಲ್ಲಿ ಮನುಷ್ಯನು ಒಂದಕ್ಕೂ ಉತ್ತರ ಕೊಡಲಾರನು.
ದೇವರ ಜ್ಞಾನವು ಅಗಾಧವಾದದ್ದು;
    ಆತನ ಶಕ್ತಿಯು ಮಹತ್ವವಾದದ್ದು; ಯಾವನೂ ದೇವರಿಗೆ ವಿರೋಧವಾಗಿ ಜಯಗಳಿಸಲಾರನು.
ದೇವರು ಪರ್ವತಗಳನ್ನು ಅವುಗಳಿಗೇ ತಿಳಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುವನು.
ಆತನು ಭೂಮಿಯನ್ನು ಅದರ ಸ್ಥಳದೊಳಗಿಂದ ಕದಲಿಸುವನು;
    ಅದರ ಅಸ್ತಿವಾರಗಳನ್ನು ನಡುಗಿಸುವನು.
ಆತನು ಆಜ್ಞಾಪಿಸಿದರೆ, ಆತನ ಆಜ್ಞೆಯಂತೆಯೇ ಸೂರ್ಯೋದಯವಾಗದು.
    ನಕ್ಷತ್ರಗಳು ಪ್ರಕಾಶಿಸದಂತೆ ಆತನು ಅವುಗಳನ್ನು ಮುಚ್ಚಿಟ್ಟು ಮುದ್ರೆ ಹಾಕಬಲ್ಲನು.
ಆಕಾಶಮಂಡಲವನ್ನು ಸೃಷ್ಟಿಸಿದವನು ಆತನೇ.
    ಆತನು ಭೋರ್ಗರೆಯುತ್ತಿರುವ ಸಮುದ್ರದ ಮೇಲೆ ನಡೆಯಬಲ್ಲನು.

“ಆತನೇ ಬೇರ್, ಒರೈಯನ್ ಮತ್ತು ಪ್ಲೈಯಡ್ಸ್[a] ಎಂಬ ನಕ್ಷತ್ರಸಮೂಹಗಳನ್ನು ಸೃಷ್ಟಿಮಾಡಿದನು.
    ದಕ್ಷಿಣ ಆಕಾಶದಲ್ಲಿ ನಕ್ಷತ್ರವ್ಯೂಹಗಳನ್ನು ಸೃಷ್ಟಿಸಿದವನು ಆತನೇ.
10 ಗ್ರಹಿಸಲಶಕ್ಯವಾದ ಅದ್ಭುತಕಾರ್ಯಗಳನ್ನೂ
    ಅಸಂಖ್ಯಾತವಾದ ಮಹತ್ಕಾರ್ಯಗಳನ್ನೂ ಆತನು ಮಾಡುವನು.
11 ದೇವರು ನನ್ನ ಸಮೀಪದಲ್ಲಿ ಹಾದುಹೋದರೂ ನನಗೆ ಕಾಣಿಸದು;
    ನನ್ನ ಮುಂದೆ ಹೋದರೂ ನನಗೆ ತಿಳಿಯದು.
12 ದೇವರೇ ತೆಗೆದುಕೊಳ್ಳುವುದಾದರೆ, ಆತನನ್ನು ತಡೆಯಬಲ್ಲವರು ಯಾರು?
    ‘ನೀನು ಏನು ಮಾಡುತ್ತಿರುವೆ’ ಎಂದು ಆತನನ್ನು ಕೇಳುವವರು ಯಾರು?
13 ದೇವರು ತನ್ನ ಕೋಪವನ್ನು ತಡೆಹಿಡಿದುಕೊಳ್ಳುವುದಿಲ್ಲ.
    ರಹಬನ ಸಹಾಯಕರು ಸಹ ದೇವರ ಮುಂದೆ ಭಯದಿಂದ ಅಡ್ಡಬೀಳುವರು.
14 ಆದ್ದರಿಂದ ನಾನು ದೇವರೊಂದಿಗೆ ವಾದ ಮಾಡಲಾರೆ.
    ಆತನಿಗೆ ಉತ್ತರ ಕೊಡುವುದಕ್ಕೂ ನಾನು ಅಶಕ್ತನಾಗಿರುವೆ.
15 ಯೋಬನಾದ ನಾನು ನಿರಪರಾಧಿಯಾಗಿದ್ದರೂ ಆತನಿಗೆ ಉತ್ತರವನ್ನು ಕೊಡಲಾರೆ.
    ನನಗೆ ಕರುಣೆ ತೋರುವಂತೆ ನ್ಯಾಯಾಧಿಪತಿಯಾದ ದೇವರನ್ನು ಬೇಡಿಕೊಳ್ಳುವೆನು.
16 ನಾನು ಆತನಿಗೆ ಮೊರೆಯಿಟ್ಟಿದ್ದರೂ, ಆತನು ನನಗೆ ಉತ್ತರ ಕೊಟ್ಟಿದ್ದರೂ
    ಈಗ ಆತನು ನನಗೆ ಕಿವಿಗೊಡುತ್ತಾನೆ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ.
17 ನನ್ನನ್ನು ಜಜ್ಜುವುದಕ್ಕಾಗಿ ದೇವರು ಬಿರುಗಾಳಿಯನ್ನು ಕಳುಹಿಸುವನು;
    ನಿಷ್ಕಾರಣವಾಗಿ ನನಗೆ ಗಾಯಮಾಡುವನು.
18 ಉಸಿರೆಳೆದುಕೊಳ್ಳಲೂ ಬಿಡುವು ನೀಡದೆ
    ಕಷ್ಟದ ಮೇಲೆ ಕಷ್ಟವನ್ನು ಕೊಡುವನು.
19 ಆತನನ್ನು ಸೋಲಿಸೋಣವೆಂದರೆ
    ಆತನೇ ಬಲಿಷ್ಠನಾಗಿದ್ದಾನೆ;
ನ್ಯಾಯಾಲಯಕ್ಕೆ ಹೋಗೋಣವೆಂದರೆ
    ಆತನನ್ನು ನ್ಯಾಯಾಲಯಕ್ಕೆ ಬರಮಾಡುವವನು ಯಾರು?
20 ನಾನು ನಿರಪರಾಧಿಯಾಗಿದ್ದರೂ ನನ್ನ ಬಾಯಿ ನನ್ನನ್ನು ಖಂಡಿಸುವುದು;
    ನಾನು ನಿರ್ದೋಷಿಯಾಗಿದ್ದರೂ ನನ್ನ ಬಾಯಿ ನನ್ನನ್ನು ದೋಷಿಯೆಂದು ಹೇಳುವುದು.
21 ನಾನು ನಿರಪರಾಧಿಯಾಗಿದ್ದರೂ ನನ್ನ ಬಗ್ಗೆ ಚಿಂತಿಸುವುದಿಲ್ಲ;
    ನನ್ನ ಜೀವಿತವನ್ನೇ ತುಚ್ಫೀಕರಿಸುವೆನು.
22 ‘ಜೀವಿತದಲ್ಲಿ ಎಲ್ಲರೂ ಒಂದೇ.
    ಆದ್ದರಿಂದ ಆತನು ಅಪರಾಧಿಗಳನ್ನೂ ನಿರಪರಾಧಿಗಳನ್ನೂ ನಾಶಮಾಡುತ್ತಾನೆ’
    ಎಂಬುದು ನನ್ನ ಆಲೋಚನೆ.
23 ಪಕ್ಕನೆ ಆಪತ್ತಿಗೊಳಗಾಗಿ ನಿರಪರಾಧಿಯು ಸತ್ತರೆ, ದೇವರು ಅವನನ್ನು ನೋಡುತ್ತಾ ನಗುವನೇ?
24 ದುಷ್ಟನು ಭೂಮಿಯನ್ನು ಆಕ್ರಮಿಸಿಕೊಂಡಾಗ, ದೇವರು ಅದನ್ನು ನ್ಯಾಯಾಧಿಪತಿಗಳಿಗೆ ಮರೆಮಾಡುವನೇ?
    ಇದು ಸತ್ಯವಾಗಿದ್ದರೆ, ಇದನ್ನು ದೇವರಲ್ಲದೆ ಇನ್ಯಾರು ಮಾಡಿದರು?

25 “ನನ್ನ ದಿನಗಳು ಓಟಗಾರನಿಗಿಂತಲೂ ವೇಗವಾಗಿ ಹೋಗುತ್ತಿವೆ.
    ಸುಖವಿಲ್ಲದ ನನ್ನ ದಿನಗಳು ಹಾರಿಹೋಗುತ್ತಿವೆ.
26 ಜಂಬುಗಿಡದಿಂದ ಮಾಡಿದ ದೋಣಿಗಳಂತೆಯೂ
    ಹದ್ದು ತನ್ನ ಬೇಟೆಯ ಮೇಲೆ ಎರಗಲು ಹಾರಿಹೋಗುವಂತೆಯೂ
    ನನ್ನ ದಿನಗಳು ವೇಗವಾಗಿ ಹೋಗುತ್ತಿವೆ.

27 “ನಾನು ದೂರು ಹೇಳುವುದಿಲ್ಲ.
    ನನ್ನ ನೋವನ್ನು ಮರೆತು ನನ್ನ ಮುಖವನ್ನು ಮಾರ್ಪಡಿಸಿಕೊಂಡು ನಗುವೆನೆಂದರೆ,
28 ನನ್ನ ಎಲ್ಲಾ ಸಂಕಟಗಳಿಂದ ಇನ್ನೂ ಭಯಗೊಂಡಿರುವೆ.
    ಯಾಕೆಂದರೆ ನನ್ನನ್ನು ಅಪರಾಧಿಯೆಂದು ದೇವರು ಹೇಳುತ್ತಿದ್ದಾನೆ.
29 ಅಪರಾಧಿಯೆಂದು ಈಗಾಗಲೇ ನನಗೆ ತೀರ್ಪಾಗಿದೆ.
    ಹೀಗಿರಲು ನಾನೇಕೆ ವ್ಯರ್ಥ ಪ್ರಯತ್ನ ಮಾಡಲಿ?
30 ನಾನು ಹಿಮದಿಂದ ಸ್ನಾನಮಾಡಿದರೂ
    ಸಾಬೂನಿನಿಂದ ಕೈತೊಳೆದುಕೊಂಡರೂ
31 ದೇವರು ನನ್ನನ್ನು ಮಣ್ಣಿನ ಗುಂಡಿಗೆ ತಳ್ಳಿ
    ನನ್ನ ಬಟ್ಟೆಗಳಿಗೇ ನಾನು ಅಸಹ್ಯವಾಗುವಂತೆ ಮಾಡುವನು.
32 ದೇವರು ನನ್ನಂಥ ಮನುಷ್ಯನಲ್ಲ; ನಾನು ಆತನಿಗೆ ಉತ್ತರಿಸಲಾರೆ.
    ನಾವು ನ್ಯಾಯಾಲಯದಲ್ಲಿ ಒಬ್ಬರನ್ನೊಬ್ಬರು ಸಂಧಿಸಲಾರೆವು.
33 ನಮ್ಮಿಬ್ಬರಿಗೆ ಮಧ್ಯಸ್ಥಗಾರನಿದ್ದರೆ, ನಮ್ಮಿಬ್ಬರ ಮೇಲೆ ಅಧಿಕಾರವುಳ್ಳವನಿದ್ದರೆ
    ಎಷ್ಟೋ ಚೆನ್ನಾಗಿರುತ್ತಿತ್ತು. (ಆದರೆ ಅಂಥವರು ಯಾರೂ ಇಲ್ಲ.)
34 ದೇವರ ದಂಡವನ್ನು ತೆಗೆದುಹಾಕುವ ಮಧ್ಯಸ್ಥಗಾರನಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.
    ಆಗ ಆತನು ನನ್ನನ್ನು ಹೆದರಿಸುತ್ತಿರಲಿಲ್ಲ.
35 ಆಗ ನಾನು ಭಯವಿಲ್ಲದೆ ಮಾತಾಡುತ್ತಿದ್ದೆನು;
    ಆದರೆ ಈಗ ನನಗೆ ಸಾಧ್ಯವೇ ಇಲ್ಲ.”

10 ಯೋಬನು ತನ್ನ ಮಾತನ್ನು ಮುಂದುವರಿಸಿದನು:

“ನನ್ನ ಜೀವಿತವೇ ನನಗೆ ಅಸಹ್ಯವಾಗಿದೆ.
    ಹೃದಯ ಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು.
ನಾನು ದೇವರಿಗೆ ಹೀಗೆ ಹೇಳುತ್ತೇನೆ: ‘ನನ್ನನ್ನು ಖಂಡಿಸದೆ ಹೇಳು! ನಾನೇನು ತಪ್ಪುಮಾಡಿರುವೆ?
    ನನಗೆ ವಿರೋಧವಾಗಿ ನಿನ್ನಲ್ಲಿರುವ ದೂರುಗಳೇನು?
ದೇವರೇ, ನನ್ನನ್ನು ನೋಯಿಸುವುದು ನಿನಗೆ ಸಂತೋಷವೇ?
    ನಿನ್ನ ಸೃಷ್ಟಿಯ ಬಗ್ಗೆ ನೀನು ಚಿಂತಿಸದಂತೆ ತೋರುತ್ತಿದೆ.
    ದುಷ್ಟರ ಆಲೋಚನೆಗಳಲ್ಲಿ ನಿನಗೆ ಸಂತೋಷವೇ?
ದೇವರೇ, ನಿನಗೆ ಮನುಷ್ಯರ ಕಣ್ಣುಗಳಿವೆಯೋ?
    ಮನುಷ್ಯರು ನೋಡುವಂತೆ ನೀನು ನೋಡುವಿಯೋ?
ನಿನ್ನ ಜೀವಿತದ ದಿನಗಳು ನಮ್ಮಂತೆ ಕೊಂಚವಲ್ಲ.
    ನಿನ್ನ ವರ್ಷಗಳು ಮನುಷ್ಯನ ವರ್ಷಗಳಂತೆ ಕೊಂಚವಲ್ಲ.
ನೀನು ನನ್ನ ತಪ್ಪಿಗಾಗಿ ನೋಡುವೆ;
    ನನ್ನ ಪಾಪಕ್ಕಾಗಿ ಅವಸರದಿಂದ ಹುಡುಕುವೆ.
ಆದರೆ ನಾನು ನಿರಪರಾಧಿಯೆಂದು ನಿನಗೆ ಗೊತ್ತದೆ.
    ಆದರೆ ಯಾರೂ ನನ್ನನ್ನು ನಿನ್ನ ಶಕ್ತಿಯಿಂದ ಬಿಡಿಸಲಾರರು!
ನನ್ನನ್ನು ಸೃಷ್ಟಿಸಿದ್ದೂ ನನ್ನ ದೇಹವನ್ನು ರೂಪಿಸಿದ್ದೂ ನಿನ್ನ ಕೈಗಳೇ.
    ಈಗ ಮನಸ್ಸು ಬೇರೆಮಾಡಿಕೊಂಡು ನೀನು ನನ್ನನ್ನು ನಾಶಮಾಡುತ್ತಿರುವೆ!
ದೇವರೇ, ನೀನು ನನ್ನನ್ನು ಜೇಡಿಮಣ್ಣಿನಂತೆ ಮಾಡಿರುವೆ ಎಂಬುದನ್ನು ಜ್ಞಾಪಿಸಿಕೋ.
    ಈಗ ನನ್ನನ್ನು ಮತ್ತೆ ಧೂಳನ್ನಾಗಿ ಯಾಕೆ ಮಾರ್ಪಡಿಸುತ್ತಿರುವೆ?
10 ನೀನು ನನ್ನನ್ನು ಹಾಲಿನಂತೆ ಸುರಿದುಬಿಟ್ಟಿರುವೆ;
    ಬೆಣ್ಣೆ ಮಾಡುವವನಂತೆ ನನ್ನನ್ನು ಕಡೆದು ಮಾರ್ಪಡಿಸಿರುವೆ.[b]
11 ನೀನು ನನ್ನನ್ನು ಎಲುಬುಗಳಿಂದಲೂ ನರಗಳಿಂದಲೂ ಹೆಣೆದು
    ಮಾಂಸಚರ್ಮಗಳಿಂದ ಹೊದಿಸಿರುವೆ.
12 ನೀನು ನನಗೆ ಜೀವವನ್ನು ಕೊಟ್ಟು ದಯೆತೋರಿರುವೆ.
    ನೀನು ನನ್ನನ್ನು ಪರಿಪಾಲಿಸಿ ನನ್ನ ಆತ್ಮವನ್ನು ಕಾಪಾಡಿದೆ.
13 ಆದರೆ ನಿನ್ನ ಹೃದಯದಲ್ಲಿ ಮರೆಮಾಡಿಕೊಂಡಿದ್ದು ಇದನ್ನೇ;
    ನಿನ್ನ ಹೃದಯದಲ್ಲಿ ನೀನು ರಹಸ್ಯವಾಗಿ ಆಲೋಚಿಸಿದ್ದೂ ಇದನ್ನೇ.
    ಹೌದು, ನಿನ್ನ ಮನಸ್ಸಿನಲ್ಲಿ ಇದೇ ಇತ್ತೆಂದು ನನಗೆ ಗೊತ್ತಿದೆ:
14 ನಾನು ಪಾಪ ಮಾಡಿದರೆ ನೀನು ನನ್ನನ್ನು ಗಮನಿಸುವೆ;
    ನಾನು ಮಾಡಿದ ತಪ್ಪಿಗಾಗಿ ನನ್ನನ್ನು ಶಿಕ್ಷಿಸುವೆ.
15 ನಾನು ದೋಷಿಯಾಗಿದ್ದರೆ,
    ನನ್ನ ಗತಿಯನ್ನು ಏನು ಹೇಳಲಿ?
ನಾನು ಸನ್ಮಾರ್ಗಿಯಾಗಿದ್ದರೂ
    ನನ್ನ ಶ್ರಮೆಗಳನ್ನು ನೋಡುತ್ತಾ
ಅವಮಾನದಿಂದ
    ನನ್ನ ತಲೆಯೆತ್ತಲಾರೆ.
16 ನಾನು ತಲೆಯೆತ್ತಿದರೆ
    ನೀನು ಸಿಂಹದಂತೆ ನನ್ನನ್ನು ಬೇಟೆಯಾಡುವೆ;
    ನಿನ್ನ ಶಕ್ತಿಯನ್ನು ನನಗೆ ವಿರೋಧವಾಗಿ ಮತ್ತೆ ತೋರಿಸುವೆ.
17 ನನ್ನನ್ನು ದೋಷಿಯೆಂದು ನಿರೂಪಿಸಲು
    ನಿನ್ನ ಬಳಿಯಲ್ಲಿ ಯಾರಾದರೊಬ್ಬರು ಇದ್ದೇ ಇರುವರು.
ನಿನ್ನ ಕೋಪವು ನನಗೆ ವಿರೋಧವಾಗಿ ಹೆಚ್ಚೆಚ್ಚಾಗುವುದು.
    ನೀನು ನನಗೆ ವಿರೋಧವಾಗಿ ಹೊಸ ಸೈನ್ಯಗಳನ್ನು ತರುವೆ.
18 ದೇವರೇ, ನಾನು ಜನಿಸಲು ನೀನೇಕೆ ಅವಕಾಶ ಕೊಟ್ಟೆ?
    ಯಾರೂ ನನ್ನನ್ನು ನೋಡುವುದಕ್ಕಿಂತ ಮೊದಲೇ ನಾನು ಸತ್ತುಹೋಗಬೇಕಿತ್ತು.
19 ಎಂದೂ ಜೀವಿಸಿಲ್ಲದ ವ್ಯಕ್ತಿಯಂತೆ ನಾನಿರಬೇಕಿತ್ತು.
    ನನ್ನ ತಾಯಿಯ ಗರ್ಭದಿಂದ ನನ್ನನ್ನು ನೇರವಾಗಿ ಸಮಾಧಿಗೆ ಹೊತ್ತುಕೊಂಡು ಹೋಗಬೇಕಿತ್ತು.
20 ನನ್ನ ಜೀವಿತವು ಬಹುಮಟ್ಟಿಗೆ ಮುಗಿದುಹೋಗಿದೆ.
    ಆದ್ದರಿಂದ ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡು!
21 ಯಾರೂ ಮರಳಿ ಬರಲಾಗದಂಥ ಕತ್ತಲೆಯ ಸ್ಥಳಕ್ಕೂ ಮರಣಾಂಧಕಾರದ ಸ್ಥಳಕ್ಕೂ
    ಹೋಗುವ ಮೊದಲೇ ನನಗಿರುವ ಅಲ್ಪಕಾಲವನ್ನು ಆನಂದಿಸಲು ಅವಕಾಶಕೊಡು.
22 ಆ ಸ್ಥಳವು ಕತ್ತಲೆಯಿಂದಲೂ ಮರಣಾಂಧಕಾರದಿಂದಲೂ ಗಲಿಬಿಲಿಯಿಂದಲೂ ಕೂಡಿದೆ.
    ಅಲ್ಲಿನ ಬೆಳಕು ಸಹ ಕತ್ತಲೆಯೇ!’”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International