Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಬನು 5-7

“ಯೋಬನೇ, ನೀನು ಕೂಗಿಕೊಂಡರೂ ನಿನಗೆ ಉತ್ತರಿಸುವವರಿಲ್ಲ;
    ದೇವದೂತರುಗಳಲ್ಲಿ ಯಾರನ್ನು ಆಶ್ರಯಿಸಿಕೊಳ್ಳುವೆ?
ಮೂಢನ ಕೋಪವು ಅವನನ್ನೇ ಕೊಲ್ಲುವುದು.
    ಮೂರ್ಖನ ಹೊಟ್ಟೆಕಿಚ್ಚು ಅವನನ್ನೇ ಕೊಲ್ಲುವುದು.
ಅಭಿವೃದ್ಧಿಯಾಗುತ್ತಿರುವ ಮೂರ್ಖನನ್ನು ನಾನು ನೋಡಿದ್ದೇನೆ.
    ಇದ್ದಕ್ಕಿದ್ದಂತೆ ಅವನ ಮನೆಯು ಶಾಪಗ್ರಸ್ತವಾಯಿತು.
ಅವನ ಮಕ್ಕಳಿಗೆ ಸಹಾಯಮಾಡುವಂಥವರು ಇರಲಿಲ್ಲ.
    ಅವರ ಪರವಾಗಿ ವಾದಿಸಲು ನ್ಯಾಯಾಲಯದಲ್ಲಿ ಒಬ್ಬರೂ ಇರಲಿಲ್ಲ.
ಹಸಿದಿರುವವರು ಆ ಮೂರ್ಖನ ಬೆಳೆಗಳನ್ನು ತಿಂದುಬಿಟ್ಟರು.
    ಅವರು ಬೇಲಿಗಳ ಮಧ್ಯದಲ್ಲಿ ಬೆಳೆಯುತ್ತಿರುವ ಧಾನ್ಯವನ್ನು ಸಹ ತಿಂದುಬಿಟ್ಟರು.
    ದುರಾಶೆಯುಳ್ಳವರು ಅವರ ಆಸ್ತಿಯನ್ನೆಲ್ಲಾ ಕಸಿದುಕೊಂಡರು.
ವಿಪತ್ಕಾಲಗಳು ಬರುವುದು ಧೂಳಿನಿಂದಲ್ಲ;
    ಕೇಡು ಬೆಳೆಯುವುದು ನೆಲದಿಂದಲ್ಲ.
ಆದರೆ ಮನುಷ್ಯರಿಂದ ಕೇಡುಗಳು ಉದ್ಭವಿಸುವುದೂ
    ಬೆಂಕಿಯಿಂದ ಕಿಡಿಗಳು ಮೇಲಕ್ಕೆ ಹಾರುವುದೂ ಸಹಜ.
ಯೋಬನೇ, ನಾನೇನಾದರೂ ನಿನ್ನ ಸ್ಥಿತಿಯಲ್ಲಿದ್ದಿದ್ದರೆ,
    ದೇವರನ್ನೇ ಆಶ್ರಯಿಸಿಕೊಂಡು ನನ್ನ ಕಷ್ಟವನ್ನು ಆತನಿಗೆ ಹೇಳಿಕೊಳ್ಳುತ್ತಿದ್ದೆನು.
ದೇವರ ಅದ್ಭುತಕಾರ್ಯಗಳು ಗ್ರಹಿಸಲಶಕ್ಯ.
    ಆತನ ಮಹತ್ಕಾರ್ಯಗಳು ಅಸಂಖ್ಯಾತ.
10 ದೇವರು ಭೂಮಿಯ ಮೇಲೆ ಮಳೆ ಸುರಿಸಿ
    ಹೊಲಗದ್ದೆಗಳಿಗೆ ನೀರನ್ನು ಒದಗಿಸುವನು.
11 ದೇವರು ಹೀನಸ್ಥಿತಿಯಲ್ಲಿರುವವರನ್ನು ಉನ್ನತಸ್ಥಿತಿಗೆ ಏರಿಸುವನು.
    ವ್ಯಥೆಯಿಂದಿರುವವರನ್ನು ಸಂತೋಷಗೊಳಿಸುವನು.
12 ದೇವರು ಯುಕ್ತಿವಂತರ ಕುತಂತ್ರಗಳನ್ನು ವಿಫಲಗೊಳಿಸಿ
    ಭಂಗಪಡಿಸುವನು.
13 ದೇವರು ಜ್ಞಾನಿಗಳನ್ನು ಅವರ ತಂತ್ರಗಳಲ್ಲೇ ಹಿಡಿದುಕೊಳ್ಳುವನು;
    ಮೋಸಗಾರರ ಆಲೋಚನೆಗಳನ್ನು ವಿಫಲಗೊಳಿಸುವನು.
14 ಯುಕ್ತಿವಂತರು ಹಗಲಿನಲ್ಲೂ ಕತ್ತಲೆಗೆ ಓಡಿಹೋಗುವರು;
    ನಡುಮಧ್ಯಾಹ್ನದಲ್ಲಿ ಕತ್ತಲೆಯಲ್ಲೋ ಎಂಬಂತೆ ಮುಗ್ಗರಿಸುವರು.
15 ದೇವರು ಬಡವರನ್ನು ದುಷ್ಟರ ನಿಂದನೆಯಿಂದಲೂ
    ಬಲಿಷ್ಠರ ಕೈಯಿಂದಲೂ ಕಾಪಾಡುವನು.
16 ಹೀಗೆ ಬಡವನಿಗೆ ನಿರೀಕ್ಷೆ ಉಂಟಾಗುವುದು.
    ಅನ್ಯಾಯವು ತನ್ನ ಬಾಯನ್ನು ಮುಚ್ಚಿಕೊಳ್ಳುವುದು.

17 “ಇಗೋ ದೇವರು ಯಾವನನ್ನು ಶಿಕ್ಷಿಸುವನೋ ಅವನೇ ಭಾಗ್ಯವಂತನು.
    ಆದ್ದರಿಂದ ಸರ್ವಶಕ್ತನಾದ ದೇವರು ನಿನ್ನನ್ನು ಶಿಕ್ಷಿಸುವಾಗ ದೂರು ಹೇಳಬೇಡ.”
18 ಗಾಯ ಮಾಡುವವನೂ ಗಾಯ ಕಟ್ಟುವವನೂ ಆತನೇ.
    ಆತನು ಗಾಯಮಾಡಿದರೂ ಆತನ ಕೈಗಳೇ ವಾಸಿಮಾಡುತ್ತವೆ.
19 ಆತನು ನಿನ್ನನ್ನು ಆರು ಆಪತ್ತುಗಳಿಂದ ರಕ್ಷಿಸುವನು;
    ಹೌದು, ಏಳನೆಯ ಆಪತ್ತಿನಿಂದಲೂ ನಿನಗೆ ಕೇಡಾಗದು.
20 ಬರಗಾಲದಲ್ಲಿ ಮರಣದಿಂದಲೂ
    ಯುದ್ಧದಲ್ಲಿ ಕತ್ತಿಯಿಂದಲೂ
    ಆತನು ನಿನ್ನನ್ನು ಸಂರಕ್ಷಿಸುವನು.
21 ದೇವರು ನಿನ್ನನ್ನು ನಿಂದನೆಯಿಂದ ತಪ್ಪಿಸುವನು.
    ನಾಶನದಲ್ಲಿಯೂ ನೀನು ಭಯಪಡುವ ಅಗತ್ಯವಿಲ್ಲ!
22 ನಾಶನಕ್ಕೂ ಬರಗಾಲಕ್ಕೂ ನೀನು ನಗುವೆ.
    ನೀನು ಕ್ರೂರಪ್ರಾಣಿಗಳಿಗೆ ಭಯಪಡುವ ಅಗತ್ಯವಿಲ್ಲ!
23 ನೀನು ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವೆ;
    ಕಾಡುಮೃಗಗಳೂ ನಿನ್ನೊಂದಿಗೆ ಸಮಾಧಾನದಿಂದಿರುತ್ತವೆ.
24 ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ.
    ನೀನು ನಿನ್ನ ಆಸ್ತಿಯನ್ನು ಲೆಕ್ಕಿಸುವಾಗ ಯಾವುದೂ ಕಳೆದುಹೋಗಿರುವುದಿಲ್ಲ.
25 ನೀನು ಅನೇಕ ಮಕ್ಕಳನ್ನು ಪಡೆದುಕೊಳ್ಳುವೆ.
    ಅವರು ಭೂಮಿಯ ಮೇಲಿರುವ ಹುಲ್ಲಿನ ಗರಿಗಳಷ್ಟಿರುವರು.
26 ಸುಗ್ಗಿಕಾಲದವರೆಗೂ ಬೆಳೆದು ಬಲಿಯುವ ಗೋಧಿಯಂತೆ ನೀನಿರುವೆ.
    ಹೌದು, ನೀನು ವೃದ್ಧಾಪ್ಯದ ಕೊನೆಯವರೆಗೂ ಜೀವಿಸುವೆ.

27 “ಯೋಬನೇ, ನಾವು ಈ ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ.
    ಆದ್ದರಿಂದ ನೀನು ಸಹ ಕಿವಿಗೊಟ್ಟು ಅವುಗಳನ್ನು ತಿಳಿದುಕೊ.”

ಯೋಬನ ವಾದ

1-2 ಆಗ ಯೋಬನು ಹೀಗೆ ಉತ್ತರಿಸಿದನು:

“ನನ್ನ ಸಂಕಟವನ್ನು ತೂಕಮಾಡುವುದಕ್ಕೂ
    ನನ್ನ ಕಷ್ಟವನ್ನೆಲ್ಲಾ ತಕ್ಕಡಿಯ ಮೇಲಿಡುವುದಕ್ಕೂ ಸಾಧ್ಯವಿದ್ದರೆ,
ನನ್ನ ದುಃಖವನ್ನು ನೀನು ಅರ್ಥಮಾಡಿಕೊಳ್ಳುವೆ!
    ನನ್ನ ದುಃಖವು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವಾಗಿದೆ.
    ಆದ್ದರಿಂದಲೇ ನನ್ನ ಮಾತುಗಳು ಮೂರ್ಖತನದಂತೆ ಕಾಣುತ್ತಿವೆ.
ಸರ್ವಶಕ್ತನಾದ ದೇವರ ಬಾಣಗಳು ನನಗೆ ನಾಟಿಕೊಂಡಿವೆ.
    ನನ್ನ ಪ್ರಾಣವು ಅವುಗಳ ವಿಷವನ್ನು ಕುಡಿಯುತ್ತಿದೆ.
    ದೇವರು ಕಳುಹಿಸಿದ ಅಪಾಯಗಳು ನನಗೆ ವಿರೋಧವಾಗಿ ವ್ಯೂಹಕಟ್ಟಿವೆ.
ಕಾಡುಕತ್ತೆಗೆ ತಿನ್ನಲು ಹುಲ್ಲಿದ್ದರೆ ಅರಚುವುದೇ?
    ಎತ್ತಿಗೆ ಆಹಾರವಿದ್ದರೆ ಕೂಗುವುದೇ?
ಊಟವನ್ನು ಉಪ್ಪಿಲ್ಲದೆ ತಿನ್ನುವರೇ?
    ಮೊಟ್ಟೆಯ ಲೋಳೆಗೆ ರುಚಿಯಿದೆಯೇ?
ಇಂಥಾ ಊಟವು ನನಗೆ ಅಸಹ್ಯ;
    ನಾನು ಅದನ್ನು ಮುಟ್ಟಲಾರೆ.

“ಅಯ್ಯೋ! ನಾನು ಕೇಳಿಕೊಂಡದ್ದು ನನಗೆ ದೊರೆಯುವುದಿಲ್ಲವೇ?
    ನಾನು ಬಯಸಿದ್ದನ್ನು ದೇವರು ನನಗೆ ಕೊಡುವುದಿಲ್ಲವೇ?
ನನ್ನನ್ನು ಜಜ್ಜಿಹಾಕಲು ದೇವರು ಇಚ್ಫಿಸುವುದಾಗಿದ್ದರೆ,
    ಆತನು ನನ್ನನ್ನು ಕೊಲ್ಲಲಿ!
10 ಆಗ ನನಗೆ ಆದರಣೆಯಾಗುವುದು.
    ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು;
    ಪವಿತ್ರವಾಗಿರುವಾತನ ಆಜ್ಞೆಗಳಿಗೆ ನಾನು ಅವಿಧೇಯನಾಗಲೇ ಇಲ್ಲ.

11 “ನನ್ನ ಬಲವು ಕುಗ್ಗಿಹೋಗಿದೆ; ಬದುಕುವ ನಿರೀಕ್ಷೆಯೇ ನನಗಿಲ್ಲ.
    ಕೊನೆಯಲ್ಲಿ ನನಗೇನಾಗುವುದೋ ತಿಳಿಯದು, ಆದ್ದರಿಂದ ನಾನು ತಾಳ್ಮೆಯಿಂದಿರುವುದೇಕೇ?
12 ನಾನು ಬಂಡೆಯಂತೆ ಬಲಿಷ್ಠನಲ್ಲ.
    ನನ್ನ ದೇಹವು ತಾಮ್ರದಿಂದ ಮಾಡಿದ್ದಲ್ಲ.
13 ಈಗ ನನಗೇ ಸಹಾಯಮಾಡಿಕೊಳ್ಳಲು ನನ್ನಲ್ಲಿ ಶಕ್ತಿಯಿಲ್ಲ.
    ಸಹಾಯಮಾಡವವರೂ ನನಗೆ ಯಾರೂ ಇಲ್ಲ.

14 “ಕಷ್ಟದಲ್ಲಿರುವವನಿಗೆ ಅವನ ಸ್ನೇಹಿತನು ದಯೆತೋರಬೇಕು;
    ಒಂದುವೇಳೆ ಅವನು ಸರ್ವಶಕ್ತನಾದ ದೇವರಿಗೆ ವಿಮುಖನಾಗಿದ್ದರೂ
    ಅವನ ಸ್ನೇಹಿತನು ನಂಬಿಗಸ್ತನಾಗಿರಬೇಕು.
15 ಆದರೆ ನನ್ನ ಸಹೋದರರಾದ ನೀವು ನಂಬಿಗಸ್ತರಲ್ಲ.
    ನಾನು ನಿಮ್ಮನ್ನು ಆಶ್ರಯಿಸಿಕೊಳ್ಳಲಾರೆ. ಕೆಲವೊಮ್ಮೆ ಹರಿಯುವ, ಕೆಲವೊಮ್ಮೆ ಹರಿಯದಿರುವ
    ತೊರೆಗಳಂತೆ ನೀವು ದ್ರೋಹಿಗಳಾಗಿದ್ದೀರಿ.
16 ಮಂಜಿನಿಂದಲೂ ಕರಗುವ ಹಿಮದಿಂದಲೂ ತುಂಬಿ ಹರಿಯುವ ತೊರೆಗಳಂತೆ ನೀವಿದ್ದೀರಿ.
17 ಆದರೆ ಆ ತೊರೆಗಳು ಬೇಸಿಗೆಕಾಲದಲ್ಲಿ ಇದ್ದಕ್ಕಿದ್ದಂತೆ ಹರಿಯದೆ ನಿಂತುಹೋಗುತ್ತವೆ.
    ಬೇಸಿಗೆ ಕಾಲದ ಕಾವಿಗೆ ನೀರು ಬತ್ತಿಹೋಗುತ್ತದೆ; ತೊರೆಗಳು ಇಲ್ಲವಾಗುತ್ತವೆ.
18 ವರ್ತಕರ ತಂಡಗಳು ಅವುಗಳ ದಾರಿಗಳಿಂದ ಬೇರೆ ಕಡೆಗೆ ತಿರುಗಿಕೊಳ್ಳುವರು.
    ಅವರು ಅಲೆಯುತ್ತಾ ಮರುಭೂಮಿಗೆ ಹೋಗಿ ಕಾಣದಂತಾಗುವರು.
19 ತೇಮದ ವರ್ತಕರ ತಂಡಗಳು ನೀರಿಗಾಗಿ ನೋಡುವರು.
    ಶೆಬದ ಪ್ರಯಾಣಿಕರು ನಿರೀಕ್ಷೆಯಿಂದ ನೋಡುವರು.
20 ನೀರು ಸಿಗುವುದೆಂದು ಅವರು ನಂಬಿಕೊಂಡಿದ್ದರೂ
    ಅವರಿಗೆ ನಿರಾಶೆಯಾಯಿತು.
21 ನೀವು ಸಹ ಆ ತೊರೆಗಳಂತಿದ್ದೀರಿ.
    ನೀವು ನನ್ನ ಕಷ್ಟಗಳನ್ನು ನೋಡಿ ಭಯಗೊಂಡಿದ್ದೀರಿ.
22 ‘ನನಗೆ ಏನಾದರೂ ಕೊಡಿ’ ಎಂದಾಗಲಿ
    ‘ನನಗೋಸ್ಕರವಾಗಿ ನಿಮ್ಮ ಐಶ್ವರ್ಯದಿಂದ ಇಂಥವನಿಗೆ ಲಂಚಕೊಡಿ’ ಎಂದಾಗಲಿ
    ನಾನೆಂದೂ ಕೇಳಲಿಲ್ಲ.
23 ‘ಶತ್ರುವಿನ ಶಕ್ತಿಯಿಂದ ನನ್ನನ್ನು ರಕ್ಷಿಸಿರಿ.
    ವೈರಿಯಿಂದ ನನ್ನನ್ನು ರಕ್ಷಿಸಲು ಪ್ರಾಯಶ್ಚಿತ್ತ ಕೊಡಿರಿ’ ಎಂದಾಗಲಿ ನಾನೆಂದೂ ಕೇಳಲಿಲ್ಲ.

24 “ಈಗ ನನಗೆ ಉಪದೇಶಿಸಿ ನನ್ನ ತಪ್ಪನ್ನು ತಿಳಿಸಿರಿ;
    ನಾನು ಮೌನವಾಗಿರುವೆನು.
25 ಯಥಾರ್ಥಾವಾದ ನುಡಿಗಳು ಶಕ್ತಿಯುತವಾಗಿವೆ.
    ಆದರೆ ನಿಮ್ಮ ವಾದಗಳು ಏನನ್ನೂ ನಿರೂಪಿಸುವುದಿಲ್ಲ.
26 ನನ್ನನ್ನು ಟೀಕೆ ಮಾಡಬೇಕೆಂದಿದ್ದೀರೋ?
    ಇನ್ನೂ ಕಟುವಾದ ಮಾತುಗಳನ್ನು ಆಡಬೇಕೆಂದಿದ್ದೀರೋ?
27 ಹೌದು, ನೀವು ಚೀಟುಹಾಕಿ ಅನಾಥರಿಗೆ ಸೇರಿದ ವಸ್ತುಗಳನ್ನು ತೆಗೆದುಕೊಳ್ಳುವವರಾಗಿದ್ದೀರಿ.
    ನೀವು ನಿಮ್ಮ ಸ್ನೇಹಿತನನ್ನು ಮಾರಾಟ ಮಾಡುವವರಾಗಿದ್ದೀರಿ.
28 ಆದರೆ ಈಗ ದಯವಿಟ್ಟು ನನ್ನ ಮುಖವನ್ನು ನೋಡಿರಿ.
    ನಾನು ನಿಮಗೆ ಸುಳ್ಳು ಹೇಳುವುದಿಲ್ಲ.
29 ಆದ್ದರಿಂದ ಈಗ ನಿಮ್ಮ ಮನಸ್ಸನ್ನು ಬದಲಾಯಿಸಿರಿ, ಅನ್ಯಾಯಸ್ಥರಾಗಿರಬೇಡಿ.
    ಹೌದು, ಮತ್ತೊಮ್ಮೆ ಯೋಚಿಸಿರಿ. ನಾನೇನೂ ತಪ್ಪು ಮಾಡಿಲ್ಲ.
30 ನಾನು ಸುಳ್ಳು ಹೇಳುತ್ತಿಲ್ಲ.
    ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ನನಗೆ ಗೊತ್ತಿದೆ.

“ಭೂಲೋಕದಲ್ಲಿ ಮನುಷ್ಯನಿಗೆ ಬಹು ಪ್ರಯಾಸದ ಕೆಲಸವಿದೆ.
    ಅವನ ಜೀವನವು ಕೂಲಿ ಕೆಲಸದವನ ಜೀವನದಂತಿದೆ.
ಮನುಷ್ಯನು ಉರಿಬಿಸಿಲಿನಲ್ಲಿ ಪ್ರಯಾಸಪಟ್ಟು ದುಡಿದ ಮೇಲೆ
    ತಂಪಾದ ನೆರಳನ್ನು ಬಯಸುವ ಗುಲಾಮನಂತಿದ್ದಾನೆ.
    ಮನುಷ್ಯನು, ದಿನದ ಕೂಲಿಗಾಗಿ ಕಾಯುತ್ತಿರುವ ಕೂಲಿಯವನಂತಿದ್ದಾನೆ.
ಜಿಗುಪ್ಸೆಯ ತಿಂಗಳುಗಳನ್ನೂ ಸಂಕಟದ ರಾತ್ರಿಗಳನ್ನೂ
    ನನಗೆ ನೇಮಿಸಲಾಗಿದೆ.
ಮಲಗಿಕೊಳ್ಳುವಾಗ,
    ‘ಯಾವಾಗ ಏಳುವೆನೋ’ ಅಂದುಕೊಳ್ಳುವೆನು.
ರಾತ್ರಿಯು ಬೆಳೆಯುತ್ತಾ ಹೋಗುವುದು;
    ಸೂರ್ಯೋದಯದವರೆಗೂ ಹೊರಳಾಡುವೆನು.
ನನ್ನ ದೇಹವು ಹುಳಗಳಿಂದಲೂ ಧೂಳಿನಿಂದಲೂ ಆವರಿಸಿಕೊಂಡಿದೆ.
    ನನ್ನ ಚರ್ಮವು ಬಿರಿದುಹೋಗಿ ಕೀವು ಸೋರುತ್ತಿರುವ ಕುರುಗಳಿಂದ ತುಂಬಿಹೋಗಿದೆ.

“ನನ್ನ ದಿನಗಳು ಮಗ್ಗದ ಲಾಳಿಗಿಂತಲೂ ವೇಗವಾಗಿ ಹೋಗುತ್ತವೆ.
    ನನ್ನ ಜೀವಿತವು ನಿರೀಕ್ಷೆಯಿಲ್ಲದೆ ಕೊನೆಗೊಳ್ಳುವುದು.
ದೇವರೇ, ನನ್ನ ಜೀವನವು ಕೇವಲ ಉಸಿರೆಂಬುದನ್ನು ನೆನಸಿಕೋ,
    ನನ್ನ ಕಣ್ಣುಗಳು ಮತ್ತೆಂದಿಗೂ ಸುಖವನ್ನು ನೋಡುವುದಿಲ್ಲ.
ನೀನು ನನ್ನನ್ನು ಮತ್ತೆಂದೂ ಕಾಣುವುದಿಲ್ಲ.
    ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.
ಮೋಡವು ಕಣ್ಣಿಗೆ ಕಾಣದೆ ಇಲ್ಲವಾಗುವುದು.
    ಅದೇ ರೀತಿಯಲ್ಲಿ, ಸತ್ತು ಸಮಾಧಿಯಲ್ಲಿ ಹೂಳಲ್ಪಟ್ಟವನು ಹಿಂತಿರುಗಿ ಬರುವುದಿಲ್ಲ.
10 ಅವನು ತನ್ನ ಮನೆಗೆ ಮತ್ತೆಂದಿಗೂ ಹಿಂತಿರುಗಿ ಬರುವುದಿಲ್ಲ.
    ಇನ್ನು ಮೇಲೆ ಅವನ ಸ್ಥಳವು ಅವನನ್ನು ತಿಳಿದಿರುವುದಿಲ್ಲ.

11 “ಆದ್ದರಿಂದ ನಾನು ಮೌನವಾಗಿರುವುದಿಲ್ಲ, ನಾನು ಮಾತಾಡುವೆನು!
    ನನ್ನ ಆತ್ಮವು ಸಂಕಟಪಡುತ್ತಿದೆ!
    ನನ್ನ ಮನಸ್ಸು ನೊಂದು ಹೋಗಿರುವುದರಿಂದ ನಾನು ದೂರು ಹೇಳುವೆನು.
12 ದೇವರೇ, ನೀನು ನನ್ನನ್ನು ಕಾಯುವುದೇಕೆ?
    ನಾನೇನು ಸಮುದ್ರವೇ? ಭಯಂಕರವಾದ ಸಮುದ್ರ ಪ್ರಾಣಿಯೇ?
13 ನನ್ನ ಹಾಸಿಗೆಯು ನನ್ನನ್ನು ಸಂತೈಸುತ್ತದೆ;
    ನನ್ನ ಮಂಚವು ನನಗೆ ವಿಶ್ರಾಂತಿಯನ್ನೂ ಉಪಶಮನವನ್ನೂ ಕೊಡುತ್ತದೆ ಎಂದು
    ನಾನು ಆಲೋಚಿಸುವಾಗ,
14 ನೀನು ಕನಸುಗಳಿಂದ ನನ್ನನ್ನು ಹೆದರಿಸುವೆ;
    ದರ್ಶನಗಳಿಂದ ನನ್ನನ್ನು ಭಯಗೊಳಿಸುವೆ.
15 ನಾನು ಬದುಕುವುದಕ್ಕಿಂತ
    ಉಸಿರುಕಟ್ಟಿ ಸಾಯುವುದೇ ಮೇಲು.
16 ನನ್ನ ಜೀವಿತವು ನನಗೆ ಅಸಹ್ಯವಾಗಿದೆ.
    ಶಾಶ್ವತವಾಗಿ ಬದುಕಲು ನನಗೆ ಇಷ್ಟವಿಲ್ಲ.
ನನ್ನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡು!
    ನನ್ನ ಜೀವಿತಕ್ಕೆ ಅರ್ಥವೇ ಇಲ್ಲ!
17 ದೇವರೇ, ಮನುಷ್ಯನು ಎಷ್ಟರವನು?
    ನೀನು ಅವನ ಕಡೆಗೆ ಗಮನ ಕೊಡುವುದೇಕೆ?
18 ನೀನು ಪ್ರತಿ ಮುಂಜಾನೆ ಮನುಷ್ಯನನ್ನು ಪರೀಕ್ಷಿಸುವುದೇಕೆ?
    ಅವನನ್ನು ಪ್ರತಿಗಳಿಗೆಯಲ್ಲೂ ಪರೀಕ್ಷಿಸುವುದೇಕೆ?
19 ದೇವರೇ, ಇನ್ನೆಷ್ಟರವರೆಗೆ ನೀನು ನನ್ನ ಕಡೆಯಿಂದ ದೃಷ್ಟಿಯನ್ನು ತಿರುಗಿಸದೆ ಇರುವೆ?
    ನೀನು ನನ್ನನ್ನು ಕ್ಷಣ ಕಾಲವಾದರೂ ಒಬ್ಬಂಟಿಗನನ್ನಾಗಿ ಬಿಡುವುದಿಲ್ಲ.
20 ಮನುಷ್ಯನನ್ನು ಗಮನಿಸುವವನೇ,
    ನಾನು ಪಾಪ ಮಾಡಿದ್ದರೆ, ಅದರಿಂದ ನಿನಗೇನಾಯಿತು?
ದೇವರೇ, ನೀನು ನನ್ನನ್ನು ಗುರಿಯನ್ನಾಗಿ ಮಾಡಿಕೊಂಡದ್ದೇಕೆ?
    ನಾನು ನಿನಗೆ ಸಮಸ್ಯೆಯಾದೆನೇ?
21 ನೀನು ನನ್ನ ತಪ್ಪುಗಳನ್ನು ಮನ್ನಿಸಬಾರದೇಕೆ?
    ನನ್ನ ಪಾಪಗಳನ್ನು ಕ್ಷಮಿಸಬಾರದೇಕೆ?
ನಾನು ಬೇಗನೆ ಸತ್ತು ಸಮಾಧಿಯಲ್ಲಿರುವೆನು.
    ಆಮೇಲೆ ನೀನು ನನಗಾಗಿ ಹುಡುಕುವೆ, ಆದರೆ ನಾನು ಅಷ್ಟರಲ್ಲೇ ಹೊರಟುಹೋಗಿರುವೆನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International