Beginning
ಎಜ್ರನೊಂದಿಗೆ ಹಿಂದಿರುಗಿದ ನಾಯಕರು
8 ಬಾಬಿಲೋನಿನಿಂದ ಜೆರುಸಲೇಮಿಗೆ ನನ್ನೊಂದಿಗೆ (ಎಜ್ರ) ಹೊರಟ ಇಸ್ರೇಲರ ಕುಲಪ್ರಧಾನರ ಮತ್ತು ಇತರ ಜನರ ವಿವರಗಳು ಹೀಗಿದೆ. ಅರಸನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ನಾವು ಜೆರುಸಲೇಮಿಗೆ ಬಂದು ಸೇರಿದೆವು. ಬಂದವರ ಹೆಸರುಗಳು ಹೀಗಿವೆ:
2 ಫೀನೆಹಾಸನ ಸಂತತಿಯವರಲ್ಲಿ ಗೇರ್ಷೋಮ್; ಈತಾಮಾರನ ಸಂತತಿಯವರಲ್ಲಿ ದಾನಿಯೇಲನು; ದಾವೀದನ ಸಂತತಿಯವರಲ್ಲಿ ಹಟ್ಟೂಷ್;
3 ಶೆಕನ್ಯನ ಸಂತತಿಯವರಲ್ಲಿ ಪರೋಷ್, ಜೆಕರ್ಯ ಮತ್ತು ಬೇರೆ ನೂರೈವತ್ತು ಮಂದಿ ಗಂಡಸರು;
4 ಪಹತ್‌ಮೋವಾಬ್ ಸಂತತಿಯವರಲ್ಲಿ ಜೆರಹ್ಯನ ಮಗನಾದ ಎಲ್ಯೆಹೊವೇನೈ ಮತ್ತು ಇತರ ಇನ್ನೂರು ಮಂದಿ ಗಂಡಸರು;
5 ಜತ್ತೂವಿನ ಸಂತತಿಯವರಲ್ಲಿ ಯಹಜೀಯೇಲನ ಮಗನಾದ ಶೆಕನ್ಯ ಮತ್ತು ಇತರ ಮುನ್ನೂರು ಮಂದಿ ಗಂಡಸರು;
6 ಆದೀನನ ಸಂತತಿಯವರಲ್ಲಿ ಯೋನಾತಾನನ ಮಗನಾದ ಎಬೆದ್ ಮತ್ತು ಇತರ ಐವತ್ತು ಮಂದಿ ಗಂಡಸರು;
7 ಏಲಾಮಿನ ಸಂತತಿಯವರಲ್ಲಿ ಅತಲ್ಯನ ಮಗನಾದ ಯೆಶಾಯ ಮತ್ತು ಬೇರೆ ಎಪ್ಪತ್ತು ಮಂದಿ ಗಂಡಸರು;
8 ಶೆಫಟ್ಯನ ಸಂತತಿಯವರಲ್ಲಿ ಮೀಕಾಯೇಲನ ಮಗನಾದ ಜೆಬದ್ಯ ಮತ್ತು ಬೇರೆ ಎಂಭತ್ತು ಮಂದಿ ಗಂಡಸರು;
9 ಯೋವಾಬನ ಸಂತತಿಯವರಲ್ಲಿ ಯೆಹೀಯೇಲನ ಮಗನಾದ ಓಬದ್ಯ ಮತ್ತು ಇನ್ನೂರ ಹದಿನೆಂಟು ಮಂದಿ ಬೇರೆ ಗಂಡಸರು;
10 ಬಾನೀಯ ಸಂತತಿಯವರಲ್ಲಿ ಯೋಸಿಫ್ಯನ ಮಗನಾದ ಶೆಲೋಮೀತ್ ಮತ್ತು ನೂರ ಅರವತ್ತು ಮಂದಿ ಇತರ ಗಂಡಸರು;
11 ಬೇಬೈಯ ಸಂತತಿಯವರಿಂದ ಬೇಬೈಯ ಮಗನಾದ ಜೆಕರ್ಯ ಮತ್ತು ಇಪ್ಪತ್ತೆಂಟು ಮಂದಿ ಇತರರು;
12 ಅಜ್ಗಾದನ ಸಂತತಿಯವರಿಂದ ಹಕ್ಕಾಟಾನನ ಮಗನಾದ ಯೋಹಾನಾನ್ ಮತ್ತು ಇತರ ನೂರಹತ್ತು ಮಂದಿ ಗಂಡಸರು;
13 ಅದೋನೀಕಾಮಾನ ಕೊನೆಯ ಸಂತತಿಯವರಿಂದ ಎಲೀಫೆಲೆಟ್, ಎಮೀಯೇಲ್, ಶೆಮಾಯ ಮತ್ತು ಬೇರೆ ಅರವತ್ತು ಮಂದಿ ಗಂಡಸರು;
14 ಬಿಗ್ವೈಯ ಸಂತಿಯವರಲ್ಲಿ ಊತೈ, ಜಕ್ಕೂರ ಮತ್ತು ಎಪ್ಪತ್ತು ಮಂದಿ ಇತರ ಗಂಡಸರು.
ಮರಳಿ ಜೆರುಸಲೇಮಿಗೆ
15 ಎಜ್ರನಾದ ನಾನು ಅಹವಾ ಕಡೆಗೆ ಹರಿಯುವ ನದಿಯ ಬಳಿಗೆ ಬರುವಂತೆ ಮೇಲಿನ ಎಲ್ಲಾ ಜನರಿಗೆ ಹೇಳಿದೆ. ಆ ಸ್ಥಳದಲ್ಲಿ ನಾವು ಮೂರು ದಿನ ಇದ್ದೆವು. ಆ ಗುಂಪಿನಲ್ಲಿ ಯಾಜಕರೂ ಇದ್ದರು ಎಂದು ನಮಗೆ ತಿಳಿದುಬಂತು. ಆದರೆ ಲೇವಿಯರು ಅವರಲ್ಲಿ ಇರಲಿಲ್ಲ. 16 ಆಗ ನಾನು ಎಲಿಯೆಜರ್, ಅರೀಯೇಲ್, ಶೆಮಾಯ, ಎಲ್ನಾತಾನ್, ಯಾರೀಬ್, ಎಲ್ನಾತಾನ್, ನಾತಾನ್, ಜೆಕರ್ಯ ಮತ್ತು ಮೆಷುಲ್ಲಾಮ್ ಎಂಬ ನಾಯಕರನ್ನು ಕರೆದೆನು. ಅಲ್ಲದೆ (ಬೋಧಕರುಗಳಾದ) ಯೋಯಾರೀಬ್ ಮತ್ತು ಎಲ್ನಾತಾನ್ ಎಂಬವರನ್ನು ಕರೆದು 17 ಕಾಸಿಫ್ಯದ ಇದ್ದೋ ಎಂಬವರಲ್ಲಿಗೆ ಕಳುಹಿಸಿದೆನು. ಇವನು ಕಾಸಿಫ್ಯದ ನಿವಾಸಿಗಳ ನಾಯಕನಾಗಿದ್ದನು. ಇವನ ಸಂಬಂಧಿಕರು ಕಾಸಿಫ್ಯದ ದೇವಾಲಯದ ಸೇವಕರಾಗಿದ್ದಾರೆ. ನಾವು ಕಟ್ಟುವ ದೇವಾಲಯದಲ್ಲಿ ಸೇವೆ ಮಾಡುವವರನ್ನು ಇದ್ದೋ ಕಳುಹಿಸಬೇಕೆಂಬ ಉದ್ದೇಶದಿಂದಲೇ ನಾನು ಅವರನ್ನು ಅವರ ಬಳಿಗೆ ಕಳುಹಿಸಿದೆನು. 18 ದೇವರು ನಮ್ಮ ಸಂಗಡವಿದ್ದ ಕಾರಣ, ಇದ್ದೋವಿನ ಸಂಬಂಧಿಕರು ಇವರನ್ನು ಕಳುಹಿಸಿಕೊಟ್ಟರು: ಮಹ್ಲೀಯ ಸಂತತಿಯವರಲ್ಲಿ ಜಾಣನಾದ ಶೇರೇಬ್ಯ, ಮಹ್ಲೀಯು ಲೇವಿಯ ವಂಶದವನಾಗಿದ್ದನು. ಲೇವಿಯು ಇಸ್ರೇಲನ ಒಬ್ಬ ಮಗನಾಗಿದ್ದನು. ಅವರು ಸಹ ತಮ್ಮ ಗಂಡುಮಕ್ಕಳನ್ನು ಮತ್ತು ಸಹೋದರರನ್ನು ಕಳುಹಿಸಿದರು. ಒಟ್ಟಿನಲ್ಲಿ ಆ ಕುಟುಂಬದಿಂದ 18 ಮಂದಿ ಗಂಡಸರಿದ್ದರು. 19 ಅಲ್ಲದೆ ಮೆರಾರೀ ಸಂತತಿಯವರಾದ ಹಷಬ್ಯ ಮತ್ತು ಯೆಶಾಯ; ಇವರು ಸಹ ತಮ್ಮ ಸಹೋದರರನ್ನು ಮತ್ತು ಸಂಬಂಧಿಕರನ್ನು ಕಳುಹಿಸಿದರು. ಒಟ್ಟಿನಲ್ಲಿ ಆ ಕುಟುಂಬದಿಂದ ಇಪ್ಪತ್ತು ಮಂದಿ ಗಂಡಸರಿದ್ದರು. 20 ಇನ್ನೂರಿಪ್ಪತ್ತು ಮಂದಿ ದೇವಾಲಯದ ಸೇವಕರು; (ಇವರ ಪೂರ್ವಿಕರು ದಾವೀದನ ಕಾಲದಲ್ಲಿ ಲೇವಿಯರಿಗೆ ಸಹಾಯಕರಾಗಿ ಆರಿಸಲ್ಪಟ್ಟವರಾಗಿದ್ದರು. ಅವರೆಲ್ಲರ ಹೆಸರುಗಳನ್ನು ಪಟ್ಟಿಮಾಡಲಾಗಿದೆ.)
21 ಅಹವಾ ನದಿಯ ದಡದಲ್ಲಿದ್ದಾಗ ನಮಗೆ ಸುಖ ಪ್ರಯಾಣ ದೊರೆಯುವಂತೆ ಎಲ್ಲಾ ತರದ ತೊಂದರೆಗಳಿಂದ ಪಾರು ಮಾಡುವಂತೆ ಮತ್ತು ನಮ್ಮಲ್ಲಿರುವ ಸ್ವತ್ತುಗಳನ್ನು ಕಾಪಾಡುವಂತೆ ನಮ್ಮ ದೇವರಲ್ಲಿ ದೀನತೆಯಿಂದ ಉಪವಾಸ ಪ್ರಾರ್ಥನೆ ಮಾಡಬೇಕೆಂದು ನೆರೆದುಬಂದ ಜನರಿಗೆ ಪ್ರಕಟಿಸಿದೆನು. 22 ನಾವು ಪ್ರಯಾಣ ಮಾಡುವಾಗ ದಾರಿಯಲ್ಲಿ ಶತ್ರುಗಳಿದ್ದುದರಿಂದ ನಮ್ಮ ಸಂರಕ್ಷಣೆಗಾಗಿ ಸಿಪಾಯಿಗಳನ್ನು ಮತ್ತು ರಾಹುತರನ್ನು ಅರಸನಿಂದ ಕೇಳಲು ನನಗೆ ಸಂಕೋಚವಾಯಿತು. ಯಾಕೆಂದರೆ, “ನಮ್ಮ ದೇವರು ತನ್ನನ್ನು ನಂಬಿದವರೊಂದಿಗಿದ್ದಾನೆ; ಆತನಿಂದ ದೂರಹೋಗುವವರ ಮೇಲೆ ಆತನು ಕೋಪವುಳ್ಳವನಾಗಿದ್ದಾನೆ” ಎಂದು ರಾಜನಾದ ಅರ್ತಷಸ್ತನಿಗೆ ನಾವು ಹೇಳಿದ್ದೆವು. 23 ಹಾಗೆ ನಾವು ನಮ್ಮ ಪ್ರಯಾಣದ ಕುರಿತು ದೇವರಿಗೆ ಉಪವಾಸ ಪ್ರಾರ್ಥನೆ ಮಾಡಿದೆವು. ಆತನು ಅದನ್ನು ಅನುಗ್ರಹಿಸಿದನು.
24 ಆಮೇಲೆ ನಾನು ಯಾಜಕರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡೆನು. ಅವರು ಶೇರೇಬ್ಯ, ಹಷಬ್ಯ ಮತ್ತು ಅವರ ಹತ್ತು ಮಂದಿ ಸಹೋದರರು. 25 ದೇವಾಲಯಕ್ಕೆ ಕೊಟ್ಟಿರುವ ಬೆಳ್ಳಿಬಂಗಾರಗಳನ್ನು ಮತ್ತು ಇತರ ವಸ್ತುಗಳನ್ನು ನಾನು ತೂಗಿ ಆರಿಸಲ್ಪಟ್ಟಿದ್ದ ಹನ್ನೆರಡು ಮಂದಿಗೆ ಕೊಟ್ಟೆನು. ಅವುಗಳನ್ನು ಅರ್ತಷಸ್ತ ರಾಜನೂ ಅವನ ಸಲಹೆಗಾರರೂ ಉನ್ನತಾಧಿಕಾರಿಗಳೂ ಅಲ್ಲದೆ ಬಾಬಿಲೋನಿನಲ್ಲಿದ್ದ ಎಲ್ಲಾ ಇಸ್ರೇಲರು ದೇವಾಲಯಕ್ಕಾಗಿ ಕೊಟ್ಟಿದ್ದರು. 26 ನಾನು ಅವುಗಳನ್ನು ತೂಗಿದಾಗ ಇಪ್ಪತ್ತೆರಡು ಸಾವಿರದ ನೂರು ಕಿಲೋಗ್ರಾಂ ಬೆಳ್ಳಿಯೂ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬೆಳ್ಳಿಪಾತ್ರೆಗಳೂ ಮೂರು ಸಾವಿರದ ನಾನೂರು ಕಿಲೋಗ್ರಾಂ ತೂಕದ ಬಂಗಾರವೂ ಇದ್ದವು. 27 ನಾನು ಇಪ್ಪತ್ತು ಬಂಗಾರದ ಬೋಗುಣಿಗಳನ್ನು ಕೊಟ್ಟಿದ್ದೆನು. ಅವುಗಳ ಒಟ್ಟು ತೂಕ ಎಂಟುವರೆ ಕಿಲೋಗ್ರಾಂ ಆಮೇಲೆ ಎರಡು ಶ್ರೇಷ್ಠವಾದ ಶುದ್ಧ ತಾಮ್ರದ ಎರಡು ಪಾತ್ರೆಗಳನ್ನೂ ಕೊಟ್ಟೆನು. ಇವು ಬಂಗಾರದಷ್ಟೇ ಬೆಲೆ ಬಾಳುವಂತಹದ್ದಾಗಿದ್ದವು. 28 ಆ ಹನ್ನೆರಡು ಮಂದಿ ಯಾಜಕರಿಗೆ ನಾನು ಹೇಳಿದ್ದೇನೆಂದರೆ, “ನೀವು ಮತ್ತು ಈ ವಸ್ತುಗಳು ಯೆಹೋವನಿಗೆ ಪರಿಶುದ್ಧವಾದವುಗಳಾಗಿವೆ. ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಜನರು ಕಾಣಿಕೆ ಕೊಟ್ಟರು. 29 ಆದ್ದರಿಂದ ಭದ್ರವಾಗಿ ಇಟ್ಟುಕೊಳ್ಳಿರಿ. ಜೆರುಸಲೇಮಿನಲ್ಲಿರುವ ದೇವಾಲಯದ ಅಧಿಕಾರಿಗಳಿಗೆ, ಲೇವಿಯರಿಗೆ ಮತ್ತು ಇಸ್ರೇಲ್ ಕುಲಪ್ರಧಾನರಿಗೆ ಇವುಗಳನ್ನು ತಲುಪಿಸುವ ತನಕ ನೀವು ಇದಕ್ಕೆ ಜವಾಬ್ದಾರರಾಗಿದ್ದೀರಿ. ಅವರು ಇವುಗಳನ್ನು ತೂಗಿ ದೇವಾಲಯದ ಕೋಣೆಯಲ್ಲಿ ಭದ್ರವಾಗಿಡುವರು.”
30 ಎಜ್ರನು ತೂಕಮಾಡಿ ಕೊಟ್ಟ ಬೆಳ್ಳಿಬಂಗಾರಗಳನ್ನು ಮತ್ತು ಇತರ ವಿಶೇಷ ವಸ್ತುಗಳನ್ನು ಯಾಜಕರು ಮತ್ತು ಲೇವಿಯರು ಸ್ವೀಕರಿಸಿ ಜೆರುಸಲೇಮಿನಲ್ಲಿರುವ ದೇವಾಲಯಕ್ಕೆ ತಲುಪಿಸುವ ಜವಾಬ್ದಾರಿಕೆ ಹೊತ್ತರು.
31 ಮೊದಲನೆಯ ತಿಂಗಳಿನ ಹನ್ನೆರಡನೆಯ ದಿನ ನಾವು ಅಹವಾ ನದಿಯ ದಡವನ್ನು ಬಿಟ್ಟು ಜೆರುಸಲೇಮಿಗೆ ಹೊರಟೆವು. ದೇವರು ನಮ್ಮೊಂದಿಗಿದ್ದು ಶತ್ರುಗಳಿಂದಲೂ ಕಳ್ಳರಿಂದಲೂ ನಮ್ಮನ್ನು ಸಂರಕ್ಷಿಸಿ ಕಾಪಾಡಿದನು. 32 ಜೆರುಸಲೇಮಿಗೆ ಬಂದು ಮೂರು ದಿನ ವಿಶ್ರಾಂತಿ ತೆಗೆದುಕೊಂಡೆವು. 33 ನಾಲ್ಕನೆಯ ದಿನ ನಾವು ದೇವಾಲಯಕ್ಕೆ ಹೋಗಿ ಅಲ್ಲಿ ಬೆಳ್ಳಿ, ಚಿನ್ನ ಮತ್ತು ಇತರ ಶ್ರೇಷ್ಠವಸ್ತುಗಳನ್ನು ತೂಗಿ ಯಾಜಕನಾದ ಊರೀಯನ ಮಗನಾದ ಮೆರೇಮೋತನಿಗೆ ಒಪ್ಪಿಸಿದೆವು. ಫೀನೆಹಾಸನ ಮಗನಾದ ಎಲ್ಲಾಜಾರನು ಮೆರೇಮೋತನ ಸಂಗಡವಿದ್ದನು. ಲೇವಿಯರಾದ ಯೇಷೂವನ ಮಗನಾದ ಯೋಜಾಬಾದನು ಮತ್ತು ಬಿನ್ನೂಯನ ಮಗನಾದ ನೋವದ್ಯನು ಅವರ ಸಂಗಡ ಇದ್ದರು. 34 ನಾವು ಎಲ್ಲಾ ವಸ್ತುಗಳನ್ನು ತೂಗಿ ಪಟ್ಟಿಯಲ್ಲಿ ಬರೆದಿಟ್ಟೆವು.
35 ಆಮೇಲೆ ಸೆರೆಯಿಂದ ಹಿಂತಿರುಗಿಬಂದ ಯೆಹೂದ್ಯರು ಇಸ್ರೇಲ್ ದೇವರಿಗೆ ಇಸ್ರೇಲರ ಎಲ್ಲಾ ಕುಲಗಳವರಿಗಾಗಿ ಹನ್ನೆರಡು ಹೋರಿಗಳನ್ನು, ತೊಂಭತ್ತಾರು ಟಗರುಗಳನ್ನು, ಎಪ್ಪತ್ತೇಳು ಗಂಡು ಕುರಿಗಳನ್ನು ಮತ್ತು ಹನ್ನೆರಡು ಗಂಡು ಆಡುಗಳನ್ನು ಸರ್ವಾಂಗಹೋಮ ಯಜ್ಞವನ್ನಾಗಿಯೂ ಮತ್ತು ಪಾಪಪರಿಹಾರಕ ಯಜ್ಞವನ್ನಾಗಿಯೂ ಸಮರ್ಪಿಸಿದರು.
36 ಅರಸನಾದ ಅರ್ತಷಸ್ತನು ಕೊಟ್ಟಿದ್ದ ರಾಜಾಜ್ಞೆಯ ಪತ್ರವನ್ನು ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರಿಗೂ ಸಂಸ್ಥಾನಾಧಿಕಾರಿಗಳಿಗೂ ಕೊಟ್ಟಾಗ ಅವರು ಇಸ್ರೇಲ್ ಜನರಿಗೂ ಅವರ ದೇವಾಲಯಕ್ಕೂ ಸಂಪೂರ್ಣ ಸಹಕಾರವನ್ನೂ ಬೆಂಬಲವನ್ನೂ ಕೊಟ್ಟರು.
ಯೆಹೂದ್ಯರಲ್ಲದ ಅನ್ಯರೊಂದಿಗೆ ಮದುವೆ
9 ಇವೆಲ್ಲಾ ಆದ ಬಳಿಕ ಇಸ್ರೇಲರ ಪ್ರಧಾನರು ನನ್ನ ಬಳಿಗೆ ಬಂದು, “ಎಜ್ರನೇ, ಇಸ್ರೇಲ್ ಜನರು ಸುತ್ತಲೂ ವಾಸಿಸುವ ಅನ್ಯಜನರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ಯಾಜಕರಾಗಲಿ ಲೇವಿಯರಾಗಲಿ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಲ್ಲ. ದೇಶದಲ್ಲಿ ವಾಸವಾಗಿರುವ ಕಾನಾನ್ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ, ಅಮ್ಮೋನಿಯರ, ಮೋವಾಬ್ಯರ, ಅಮೋರಿಯರ, ಈಜಿಪ್ಟಿನವರ ಕೆಟ್ಟ ಜೀವಿತವು ಇಸ್ರೇಲರ ಮೇಲೆ ಪ್ರಭಾವಬೀರಿದೆ. 2 ಇಸ್ರೇಲ್ ಜನರು ತಮ್ಮ ಸುತ್ತಲು ವಾಸಿಸುವ ಜನರೊಂದಿಗೆ ಮದುವೆಯಾಗಿದ್ದಾರೆ. ಇಸ್ರೇಲ್ ಜನರು ದೇವರ ವಿಶೇಷ ಜನರಾಗಿದ್ದಾರೆ. ಆದರೆ ಈಗ ಅನ್ಯರೊಂದಿಗೆ ಬೆರೆತು ಹೋಗಿದ್ದಾರೆ. ಇಸ್ರೇಲರ ಪ್ರಧಾನರು, ಮುಖ್ಯಾಧಿಕಾರಿಗಳು ಈ ರೀತಿಯಾಗಿ ಮಾಡಿ ಜನರಿಗೆ ಕೆಟ್ಟ ಮಾದರಿಯಾಗಿ ಜೀವಿಸುತ್ತಿದ್ದಾರೆ” ಎಂದು ಹೇಳಿದರು. 3 ಇದನ್ನು ಕೇಳಿದೊಡನೆ ನನ್ನ ಮನಸ್ಸಿನ ದುಃಖವನ್ನು ತೋರಿಸುವಂತೆ ನನ್ನ ಬಟ್ಟೆಯನ್ನು ಹರಿದು ಹಾಕಿದೆನು. ನನ್ನ ತಲೆಯ ಮತ್ತು ಗಡ್ಡದ ಕೂದಲನ್ನು ಕೆದರಿಕೊಂಡು ದಿಗ್ಭ್ರಮೆಗೊಂಡವನಾಗಿಯೂ ಬೇಸರಗೊಂಡವನಾಗಿಯೂ ಕುಳಿತುಕೊಂಡೆನು. 4 ಇದನ್ನು ನೋಡಿ ದೇವರ ಕಟ್ಟಳೆಗಳನ್ನು ಗೌರವಿಸುವ ಪ್ರತಿಯೊಬ್ಬನು ಭಯಪಟ್ಟನು; ನಡುಗಿದನು. ಯಾಕೆಂದರೆ ಸೆರೆವಾಸದಿಂದ ಹಿಂದಿರುಗಿ ಬಂದ ಇಸ್ರೇಲರು ದೇವರಿಗೆ ನಂಬಿಗಸ್ತರಾಗಿರಲಿಲ್ಲ. ನಾನೂ ನನ್ನೊಂದಿಗಿದ್ದ ಜನರೂ ಸಾಯಂಕಾಲದ ಯಜ್ಞವನ್ನರ್ಪಿಸುವ ಸಮಯದ ತನಕ ಹಾಗೆಯೇ ಕುಳಿತಿದ್ದೆವು.
5 ಸಾಯಂಕಾಲದ ನೈವೇದ್ಯ ಸಮರ್ಪಣೆಯ ಸಮಯದಲ್ಲಿ ನಾನು ಕುಳಿತಲ್ಲಿಂದ ಎದ್ದೆನು. ನನ್ನ ಬಟ್ಟೆಗಳು ಹರಿದಿದ್ದವು. ನಾನು ಮೊಣಕಾಲೂರಿ ಕೈಗಳನ್ನು ದೇವರಾದ ಯೆಹೋವನ ಕಡೆಗೆ 6 ಚಾಚಿ ಹೀಗೆ ಪ್ರಾರ್ಥಿಸಿದೆನು:
“ನನ್ನ ದೇವರೇ, ನಿನ್ನ ಕಡೆಗೆ ಮುಖವೆತ್ತಲು ನನಗೆ ನಾಚಿಕೆಯಾಗುತ್ತದೆ; ಯಾಕೆಂದರೆ ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿದೆ. ನಮ್ಮ ಅಪರಾಧಗಳ ರಾಶಿಯು ಪರಲೋಕದವರೆಗೂ ಏರಿಹೋಗಿದೆ. 7 ನಮ್ಮ ಪೂರ್ವಿಕರ ಕಾಲದಿಂದ ಈ ತನಕ ನಾವು ಮಹಾಪರಾಧಗಳನ್ನು ಮಾಡಿದ್ದೇವೆ. ನಮ್ಮ ಪಾಪಗಳಿಗಾಗಿ ನಮಗೂ ನಮ್ಮ ರಾಜರುಗಳಿಗೂ ನಮ್ಮ ಯಾಜಕರುಗಳಿಗೂ ಶಿಕ್ಷೆಯಾಯಿತು. ಅನ್ಯದೇಶದ ರಾಜರುಗಳು ನಮ್ಮ ದೇಶವನ್ನು ಆಕ್ರಮಿಸಿ ನಮ್ಮ ಜನರನ್ನು ಸೆರೆಯಾಳುಗಳಾಗಿ ಒಯ್ದರು; ನಮ್ಮ ಐಶ್ವರ್ಯವನ್ನು ಸೂರೆಗೈದು ನಮ್ಮನ್ನು ನಾಚಿಕೆಗೆ ಒಳಪಡಿಸಿದರು. ಈಗಲೂ ಅದೇ ಅನುಭವ ನಮಗಾಗಿದೆ!
8 “ಈಗಲಾದರೋ ನೀನು ನಮ್ಮ ಮೇಲೆ ದಯೆ ತೋರಿಸಿರುವೆ. ಸೆರೆಯಲ್ಲಿದ್ದ ನಿನ್ನ ಜನರಲ್ಲಿ ಕೆಲವರು ಅಲ್ಲಿಂದ ತಪ್ಪಿಸಿಕೊಂಡು ನಿನ್ನ ಪರಿಶುದ್ಧ ದೇಶದಲ್ಲಿ ವಾಸಿಸುವಂತೆ ಮಾಡಿರುವೆ; ಗುಲಾಮತನದಿಂದ ನಮ್ಮನ್ನು ಬಿಡುಗಡೆ ಮಾಡಿ ಹೊಸಜೀವ ಕೊಟ್ಟಿರುವೆ. 9 ಹೌದು, ನಾವು ಗುಲಾಮರಾಗಿದ್ದೆವು. ಆದರೆ ಸದಾಕಾಲ ಗುಲಾಮರಾಗಲು ನೀನು ನಮ್ಮನ್ನು ಬಿಡಲಿಲ್ಲ. ನಮ್ಮ ಮೇಲೆ ನೀನು ದಯೆ ತೋರಿಸಿರುವೆ. ಪರ್ಶಿಯ ರಾಜರು ನಮಗೆ ಕರುಣೆತೋರುವಂತೆ ಮಾಡಿದೆ. ನಿನ್ನ ಆಲಯವು ಹಾಳಾಗಿತ್ತು. ನಿನ್ನ ಆ ಆಲಯವನ್ನು ಮತ್ತೆ ಹೊಸದಾಗಿ ಕಟ್ಟಲು ನೀನು ನಮಗೆ ಹೊಸ ಜೀವವನ್ನು ಕೊಟ್ಟಿರುವೆ. ದೇವರೇ, ಯೆಹೂದ ಮತ್ತು ಜೆರುಸಲೇಮ್‌ಗಳ ಸಂರಕ್ಷಣೆಗಾಗಿ ಗೋಡೆಯನ್ನು ಕಟ್ಟಲು ನೀನು ನಮಗೆ ಸಹಾಯಮಾಡಿದೆ.
10 “ದೇವರೇ, ಈಗ ನಾವು ನಿನಗೆ ಏನು ಹೇಳೋಣ? ನಾವು ನಿನಗೆ ವಿಧೇಯರಾಗುವುದನ್ನು ನಿಲ್ಲಿಸಿದ್ದೇವೆ. 11 ದೇವರೇ, ನೀನು ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ಆ ಆಜ್ಞೆಗಳನ್ನು ಕೊಟ್ಟಿರುವೆ. ನೀನು ಹೀಗೆ ಹೇಳಿದೆ: ‘ನೀವು ವಾಸಿಸಲಿರುವ ಮತ್ತು ನಿಮ್ಮದನ್ನಾಗಿಸಿಕೊಳ್ಳುವ ನಾಡು ಪಾಳಾಗಿರುವ ನಾಡಾಗಿದೆ. ಅಲ್ಲಿಯ ಜನರು ಎಲ್ಲೆಲ್ಲಿಯೂ ಮಾಡಿರುವ ಕೆಟ್ಟಕೃತ್ಯಗಳಿಂದ ಅದು ಹಾಳಾಗಿದೆ; ಅವರು ತಮ್ಮ ಪಾಪಗಳಿಂದ ಆ ನಾಡನ್ನು ಹೊಲಸು ಮಾಡಿದ್ದಾರೆ. 12 ಆದ್ದರಿಂದ ಇಸ್ರೇಲ್ ಜನರೇ, ನಿಮ್ಮ ಮಕ್ಕಳು ಅವರ ಮಕ್ಕಳನ್ನು ಮದುವೆಯಾಗಲು ಬಿಡಬೇಡಿ. ಅವರ ಸಹವಾಸ ಮಾಡಬೇಡಿರಿ. ಅವರ ವಸ್ತುಗಳನ್ನು ಆಶಿಸಬೇಡಿರಿ. ನನ್ನ ಕಟ್ಟಳೆಗಳನ್ನು ಪಾಲಿಸಿರಿ; ಆಗ ನೀವು ಬಲಶಾಲಿಗಳಾಗಿ ಈ ದೇಶವನ್ನು ಅನುಭವಿಸುವಿರಿ. ಈ ದೇಶವನ್ನು ನೀನು ಇಟ್ಟುಕೊಂಡವರಾಗಿ ನಿಮ್ಮ ಮಕ್ಕಳಿಗೆ ಸ್ವಾಸ್ತ್ಯವಾಗಿ ಕೊಡುವಿರಿ.’
13 “ನಮಗೆ ಒದಗಿದ ಕೆಡುಕು, ಸಂಕಟಗಳಿಗೆ ನಾವೇ ಕಾರಣರು. ನಾವು ಅನೀತಿ ಕೆಲಸಗಳನ್ನು ಮಾಡಿದ್ದೆವು. ಅದಕ್ಕೆ ಅನುಭವಿಸಬೇಕಾಗಿದ್ದ ಶಿಕ್ಷೆಯನ್ನು ನೀನು ನಮಗೆ ವಿಧಿಸಲಿಲ್ಲ. ನಾವು ಅತಿಘೋರವಾದ ಪಾಪಗಳನ್ನು ಮಾಡಿದ್ದಕ್ಕೆ ಅತ್ಯಂತ ಘೋರ ಶಿಕ್ಷೆಯು ನಮಗೆ ದೊರಕ ಬೇಕಿತ್ತು. ಆದರೂ ನೀನು ನಮ್ಮವರಲ್ಲಿ ಕೆಲವರನ್ನು ಸೆರೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ. 14 ನಿನ್ನ ಆಜ್ಞೆಗಳಿಗೆ ಅವಿಧೇಯರಾಗಬಾರದೆಂದು ಈಗ ನಮಗೆ ತಿಳಿಯುತ್ತದೆ. ಅನ್ಯಜನರನ್ನು ಮದುವೆ ಮಾಡಿಕೊಳ್ಳಬಾರದು. ಅವರು ಘೋರ ಪಾಪಿಗಳು. ನಾವು ಹೀಗೆಯೇ ಅವರೊಂದಿಗೆ ಮದುವೆಯಾದರೆ ನೀನು ನಮ್ಮನ್ನು ನಾಶಮಾಡುವೆ ಎಂದು ನಾವು ತಿಳಿದಿದ್ದೇವೆ. ಹೀಗಿರುವಲ್ಲಿ ಇಸ್ರೇಲ್ ಜನಾಂಗದಲ್ಲಿ ಯಾರೂ ಉಳಿಯಲಾರರು.
15 “ಇಸ್ರೇಲಿನ ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ನಮ್ಮ ಜನಾಂಗದ ಕೆಲವರನ್ನಾದರೂ ಉಳಿದುಕೊಳ್ಳುವಂತೆ ಮಾಡಿರುವೆ. ಹೌದು, ನಾವು ಪಾಪಿಗಳು. ನಮ್ಮ ಅಪರಾಧಗಳ ದೆಸೆಯಿಂದ ಯಾರೂ ನಿನ್ನ ಮುಂದೆ ನಿಲ್ಲಲು ಸಾಧ್ಯವಿಲ್ಲ.”
ಜನರು ಪಾಪವನ್ನು ಅರಿಕೆ ಮಾಡಿದ್ದು
10 ದೇವಾಲಯದೆದುರು ಎಜ್ರನು ರೋಧಿಸುತ್ತಾ, ದೇವರಿಗೆ ಅಡ್ಡಬಿದ್ದು ಪ್ರಾರ್ಥಿಸುತ್ತಾ ಪಾಪದರಿಕೆ ಮಾಡುತ್ತಾ ಇರುವಾಗ ಅವನ ಸುತ್ತಲೂ ಅನೇಕ ಮಂದಿ ಇಸ್ರೇಲರ ಗಂಡಸರು, ಹೆಂಗಸರು, ಮಕ್ಕಳು ಸೇರಿಬಂದರು. ಅವರೂ ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. 2 ಆಗ ಏಲಾಮನ ಸಂತತಿಯವನಾದ ಯೆಹೀಯೇಲನ ಮಗನಾದ ಶೆಕನ್ಯನು ಎಜ್ರನಿಗೆ ಹೀಗೆಂದನು: “ನಾವು ದೇವರಿಗೆ ನಂಬಿಗಸ್ತರಾಗಿರಲಿಲ್ಲ. ನಾವು ಅನ್ಯಜನರೊಂದಿಗೆ ಮದುವೆಯಾಗಿದ್ದೇವೆ. ಹಾಗಿದ್ದರೂ ಇಸ್ರೇಲರಿಗೆ ಒಂದು ನಿರೀಕ್ಷೆ ಇದೆ. 3 ಈಗ ನಾವು ದೇವರ ಮುಂದೆ ಅನ್ಯರಾದ ಹೆಂಡತಿಯರನ್ನೂ ಅವರ ಮಕ್ಕಳನ್ನೂ ತೊರೆದುಬಿಡುತ್ತೇವೆಂದು ಒಡಂಬಡಿಕೆ ಮಾಡೋಣ. ಹೀಗೆ ಮಾಡುವುದರಿಂದ ಎಜ್ರನ ಮತ್ತು ದೇವರ ಕಟ್ಟಳೆಗಳನ್ನು ಗೌರವಿಸುವವರ ಸಲಹೆಯನ್ನು ನಾವು ಅನುಸರಿಸುವವರಾಗಿರುತ್ತೇವೆ; ನಾವು ದೇವರ ಕಟ್ಟಳೆಗೆ ವಿಧೇಯರಾಗುತ್ತೇವೆ. 4 ಎಜ್ರನೇ, ಎದ್ದೇಳು, ಇದು ನಿನ್ನ ಜವಾಬ್ದಾರಿಕೆ. ನಾವು ನಿನ್ನನ್ನು ಬೆಂಬಲಿಸುತ್ತೇವೆ; ಧೈರ್ಯದಿಂದ ಈ ಕೆಲಸವನ್ನು ಪ್ರಾರಂಭಿಸು.”
5 ಎಜ್ರನು ಎದ್ದುನಿಂತು ಮಹಾಯಾಜಕರೂ, ಲೇವಿಯರೂ ಮತ್ತು ಇಸ್ರೇಲಿನ ಜನರೂ ಅವನು ಹೇಳಿದ ಪ್ರಕಾರ ಮಾಡುತ್ತೇವೆ ಎಂಬ ಪ್ರತಿಜ್ಞೆಯನ್ನು ಅವರಿಂದ ತೆಗೆದುಕೊಂಡನು. 6 ಎಜ್ರನು ಅಲ್ಲಿಂದೆದ್ದು ಎಲ್ಯಾಷೀಬನ ಮಗನಾದ ಯೆಹೋಹಾನನ ಕೋಣೆಗೆ ಹೋಗಿ ಅಲ್ಲಿ ಅನ್ನನೀರಿಲ್ಲದೆ ದುಃಖತಪ್ತನಾಗಿದ್ದನು. ಯಾಕೆಂದರೆ ಸೆರೆಯಿಂದ ಜೆರುಸಲೇಮಿಗೆ ಬಂದಿದ್ದ ಯೆಹೂದ್ಯರ ದ್ರೋಹದ[a] ಬಗ್ಗೆ ಅವನು ತುಂಬಾ ದುಃಖಿತನಾಗಿದ್ದನು. 7 ಆಮೇಲೆ ಅವನು ಯೆಹೂದಪ್ರಾಂತ್ಯ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರಿಗೆ ಸಂದೇಶ ಕಳುಹಿಸಿದನು. ಅದರಲ್ಲಿ, ಸೆರೆಯಿಂದ ಹಿಂದಿರುಗಿದ್ದ ಯೆಹೂದ್ಯರೆಲ್ಲರೂ ಜೆರುಸಲೇಮಿನಲ್ಲಿ ಬಂದು ಸೇರಬೇಕು. 8 ಮೂರು ದಿನಗಳೊಳಗೆ ಯಾರಾದರೂ ಬಾರದೆ ಹೋದಲ್ಲಿ ಅವರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವರು. ಈ ತೀರ್ಮಾನವನ್ನು ಪ್ರಮುಖರೂ ಅಧಿಕಾರಿಗಳೂ ಮಾಡಿದ್ದಾರೆ; ಆ ಮನುಷ್ಯನು ತಾನು ವಾಸಮಾಡುವ ಜನರ ಅನ್ಯೋನ್ಯತೆಯಿಂದ ತೆಗೆಯಲ್ಪಡುವನು.
9 ಮೂರು ದಿನಗಳೊಳಗೆ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳವರಿಂದ ಎಲ್ಲಾ ಗಂಡಸರು ಒಂಭತ್ತನೆಯ ತಿಂಗಳಿನ ಇಪ್ಪತ್ತನೆಯ ದಿವಸದಲ್ಲಿ ಜೆರುಸಲೇಮಿನ ದೇವಾಲಯದ ಅಂಗಳಕ್ಕೆ ಬಂದು ಸೇರಿದರು. ನಡೆಯಲಿಕ್ಕಿರುವ ಕೂಟದ ಉದ್ದೇಶದಿಂದಲೂ ಆ ದಿವಸ ಬಂದಿದ್ದ ಮಳೆಯ ದೆಸೆಯಿಂದಲೂ ನೆರೆದಿದ್ದ ಜನರು ನಡುಗುತ್ತಿದ್ದರು. 10 ಆಗ ಎಜ್ರನು ಎದ್ದುನಿಂತು ಜನರನ್ನುದ್ದೇಶಿಸಿ ಹೇಳಿದ್ದೇನೆಂದರೆ: “ನೀವು ದೇವರಿಗೆ ವಿಧೇಯರಾಗಿರಲಿಲ್ಲ. ಅನ್ಯಮತದ ಹೆಂಗಸರನ್ನು ನೀವು ಮದುವೆಯಾಗಿರುತ್ತೀರಿ. ಹೀಗೆ ಇಸ್ರೇಲಿನ ಪಾಪವು ಹೆಚ್ಚುವಂತೆ ನೀವು ಮಾಡಿದಿರಿ. 11 ಈಗ ನೀವು ಯೆಹೋವನಿಗೆ ವಿರೋಧವಾಗಿ ಪಾಪ ಮಾಡಿರುವುದಾಗಿ ಅರಿಕೆ ಮಾಡಬೇಕು. ಆತನೇ ನಮ್ಮ ಪೂರ್ವಿಕರ ದೇವರಾದ ಯೆಹೋವನು. ಆತನ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು. ನಿಮ್ಮ ಅನ್ಯಜಾತಿಯ ಹೆಂಡತಿಯರಿಂದಲೂ ನಿಮ್ಮ ಸುತ್ತಲು ವಾಸಿಸುವ ಅನ್ಯ ಜನಾಂಗದವರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ.”
12 ಆಗ ಅಲ್ಲಿ ನೆರೆದುಬಂದವರೆಲ್ಲರೂ ಗಟ್ಟಿಯಾಗಿ ಎಜ್ರನಿಗೆ ಉತ್ತರಿಸುತ್ತಾ, “ಎಜ್ರನೇ, ನೀನು ಸರಿಯಾಗಿ ಹೇಳಿರುವೆ! ನೀನು ಹೇಳಿದಂತೆಯೇ ನಾವು ಮಾಡಬೇಕು. 13 ಆದರೆ ಇಲ್ಲಿ ಹೆಚ್ಚು ಜನರು ಸೇರಿಬಂದಿದ್ದಾರೆ. ಮಳೆ ಸುರಿಯುತ್ತಲಿದೆ. ನಾವು ಹೆಚ್ಚು ಸಮಯ ಮಳೆಯಲ್ಲಿರಲು ಸಾಧ್ಯವಿಲ್ಲ. ನಾವು ಬಹಳ ಘೋರವಾದ ಪಾಪಮಾಡಿರುವುದರಿಂದ ಈ ಸಮಸ್ಯೆಯು ಒಂದೆರಡು ದಿನಗಳಲ್ಲಿ ಮುಗಿಯುವಂಥದಲ್ಲ. 14 ಈ ಕೂಟದಲ್ಲಿ ನಮ್ಮ ಹಿರಿಯರು, ಪ್ರಧಾನರು ಒಂದು ತೀರ್ಮಾನಕ್ಕೆ ಬರಲಿ. ಆಮೇಲೆ ನಮ್ಮನಮ್ಮ ಊರಿನಲ್ಲಿ ಅನ್ಯಸ್ತ್ರೀಯರನ್ನು ಮದುವೆ ಆದವರು ತಮ್ಮ ಪ್ರಧಾನರೊಂದಿಗೆ ಒಂದು ನೇಮಿತ ಸಮಯದಲ್ಲಿ ಇಲ್ಲಿಗೆ ಬರಲಿ. ಆಗ ದೇವರು ನಮ್ಮ ಮೇಲಿರುವ ತನ್ನ ಕೋಪವನ್ನು ನಿವಾರಿಸುವನು” ಎಂದು ಹೇಳಿದರು.
15 ಕೆಲವೇ ಮಂದಿ ಈ ಯೋಜನೆಗೆ ಒಪ್ಪಲಿಲ್ಲ. ಅವರಲ್ಲಿ ಅಸಾಹೇಲನ ಮಗನಾದ ಯೋನಾತಾನನೂ, ತಿಕ್ವನ ಮಗನಾದ ಯೆಹ್ಜೆಯನೂ ಇದ್ದರು. ಮೆಷುಲ್ಲಾಮ್ ಮತ್ತು ಲೇವಿಯನಾದ ಶಬ್ಚೆತೈ ಸಹ ಈ ಯೋಜನೆಗೆ ವಿರುದ್ಧವಾಗಿದ್ದರು.
16 ಜೆರುಸಲೇಮಿಗೆ ಹಿಂತಿರುಗಿಬಂದ ಇಸ್ರೇಲರು ಈ ಯೋಜನೆಯನ್ನು ಒಪ್ಪಿದ ಬಳಿಕ ಎಜ್ರನು ಅವರವರ ವಂಶದ ನಾಯಕರನ್ನು ಆರಿಸಿದನು. ಒಂದೊಂದು ವಂಶಕ್ಕೆ ಒಬ್ಬೊಬ್ಬ ನಾಯಕನನ್ನು ಆರಿಸಿಕೊಂಡನು. ಪ್ರತಿಯೊಬ್ಬನು ಹೆಸರಿಗನುಸಾರವಾಗಿ ಆರಿಸಲ್ಪಟ್ಟನು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆ ನಾಯಕರೆಲ್ಲಾ ಒಟ್ಟಾಗಿಸೇರಿ ಒಂದೊಂದೇ ಪ್ರಕರಣಗಳನ್ನು ವಿಚಾರಿಸಿದರು. 17 ಮೊದಲನೇ ತಿಂಗಳಿನ ಮೊದಲನೆಯ ದಿನದಲ್ಲಿ ಎಲ್ಲಾ ಅನ್ಯಸ್ತ್ರೀಯರನ್ನು ಮದುವೆಯಾದವರ ವಿಷಯವನ್ನು ಪರಿಶೀಲಿಸುವ ಕಾರ್ಯವನ್ನು ಮುಗಿಸಿದರು.
ಅನ್ಯಸ್ತ್ರೀಯರನ್ನು ಮದುವೆ ಆದವರ ಪಟ್ಟಿ
18 ಯಾಜಕ ಸಂತತಿಯವರಲ್ಲಿ ಅನ್ಯಸ್ತ್ರೀಯರನ್ನು ಮದುವೆಯಾದವರು:
ಯೋಚಾದಾಕನ ಮಗನಾದ ಯೇಷೂವ ಮತ್ತು ಅವನ ಸಹೋದರರಾದ ಮಾಸೇಯ, ಎಲೀಯೆಜರ್, ಯಾರೀಬ್ ಮತ್ತು ಗೆದಲ್ಯ. 19 ಇವರೆಲ್ಲಾ ತಮ್ಮ ಹೆಂಡತಿಯರನ್ನು ಬಿಟ್ಟುಬಿಡಬೇಕೆಂದು ತೀರ್ಮಾನಿಸಿದರು. ಇವರಲ್ಲಿ ಪ್ರತಿಯೊಬ್ಬರು ದೋಷಪರಿಹಾರಕ್ಕಾಗಿ ಹಿಂಡಿನ ಟಗರನ್ನು ಯಜ್ಞ ಮಾಡಿದರು.
20 ಇಮ್ಮೇರನ ಸಂತತಿಯವರಲ್ಲಿ ಹನಾನೀ, ಜೆಬದ.
21 ಹಾರೀಮನ ಸಂತತಿಯವರಲ್ಲಿ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್ ಮತ್ತು ಉಜ್ಜೀಯ.
22 ಪಷ್ಹೂರನ ಸಂತತಿಯವರಲ್ಲಿ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್ ಮತ್ತು ಎಲ್ಲಾಸ.
23 ಲೇವಿಯವರಲ್ಲಿ
ಯೋಜಾಬಾದ್, ಶಿಮ್ಮೀ, ಕೆಲೀಟ, ಪೆತಹ್ಯ, ಯೆಹೂದ ಮತ್ತು ಎಲೀಯೆಜೆರ್.
ಇವರೆಲ್ಲಾ ಅನ್ಯಸ್ತ್ರೀಯರನ್ನು ವಿವಾಹ ಮಾಡಿಕೊಂಡಿದ್ದರು.
24 ಗಾಯಕರಲ್ಲಿ ಎಲ್ಯಾಷೀಬ್ ಎಂಬವನು ಅನ್ಯಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ದ್ವಾರಪಾಲಕರಲ್ಲಿ ಶಲ್ಲೂಮ್, ಟೆಲೆಮ್ ಮತ್ತು ಊರೀ.
25 ಇಸ್ರೇಲ್ ಜನಾಂಗದವರಿಂದ
ಪರೋಷನ ಸಂತಾನದಲ್ಲಿ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ ಮತ್ತು ಬೆನಾಯ.
26 ಏಲಾಮನ ಸಂತತಿಯವರಲ್ಲಿ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್ ಮತ್ತು ಏಲೀಯ.
27 ಜತ್ತೂವಿನ ಸಂತತಿಯವರಲ್ಲಿ ಎಲ್ಯೋವೇನೈ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬಾದ್ ಮತ್ತು ಅಜೀಚಾ.
28 ಬೇಬೈಯ ಸಂತತಿಯಿಂದ ಯೆಹೋಹಾನಾನ್, ಹನನ್ಯ, ಜಬ್ಬೈ ಮತ್ತು ಅತ್ಲೈ.
29 ಬಾನೀ ಸಂತತಿಯಿಂದ ಮೆಷುಲ್ಲಾಮ್, ಮಲ್ಲೂಕ್, ಆದಾಯ, ಯಾಷೂಬ್, ಶೆಯಾಲ್ ಮತ್ತು ರಾಮೋತ್.
30 ಪಹತ್ ಮೋವಾಬನ ಸಂತತಿಯಿಂದ ಆದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್ ಮತ್ತು ಮನಸ್ಸೆ.
31 ಹಾರೀಮ್‌ನ ಸಂತತಿಯಿಂದ ಎಲೀಯೆಜೆರ್, ಇಷ್ಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್, 32 ಬೆನ್ಯಾಮೀನ್, ಮಲ್ಲೂಕ್ ಮತ್ತು ಶೆಮರ್ಯ.
33 ಹಾಷುಮನ ಸಂತತಿಯಿಂದ ಮತ್ತೆನೈ, ಮತ್ತತ್ತ, ಜಾಬಾದ್, ಎಲಿಫೆಲೆಟ್, ಯೆರೇಮೈ, ಮನಸ್ಸೆ ಮತ್ತು ಶಿಮ್ಮೀ.
34 ಬಾನೀಯ ಸಂತತಿಯಿಂದ ಮಾದೈ, ಅಮ್ರಾಮ್, ಊವೇಲ್, 35 ಬೆನಾಯ, ಬೇದೆಯ, ಕೆಲೂಹು, 36 ವನ್ಯಾಹ, ಮೆರೇಮೊತ್, ಎಲ್ಯಾಷೀಬ್, 37 ಮತ್ತನ್ಯ, ಮತ್ತನೈ ಮತ್ತು ಯಾಸೈ.
38 ಬಿನ್ನೂಯಿಯ ಸಂತತಿಯವರಿಂದ ಯಾರೆಂದರೆ: ಶಿಮ್ಮೀ, 39 ಶೆಲೆಮ್ಯ, ನಾತಾನ್, ಆದಾಯ, 40 ಮಕ್ನದೆಬೈ, ಶಾಷೈ, ಶಾರೈ, 41 ಅಜರೇಲ್, ಶೆಲೆಮ್ಯ, ಶೆಮರ್ಯ, 42 ಶಲ್ಲೂಮ್, ಅಮರ್ಯ ಮತ್ತು ಯೋಸೇಫ್.
43 ನೆಬೋನ ಸಂತತಿಯಿಂದ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್ ಮತ್ತು ಬೆನಾಯ.
44 ಇವರೆಲ್ಲಾ ಅನ್ಯಸ್ತ್ರೀಯರನ್ನು ಮದುವೆಯಾದವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳೂ ಹುಟ್ಟಿದ್ದರು.
Kannada Holy Bible: Easy-to-Read Version. All rights reserved. © 1997 Bible League International