Beginning
ಯೆಹೂದ್ಯ ಸೆರೆಯಾಳುಗಳು ಹಿಂತಿರುಗಿ ಹೋಗಲು ಸೈರಸನ ಸಹಾಯ
1 ಪರ್ಶಿಯಾದ ರಾಜನಾದ ಸೈರಸನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ[a] ಒಂದು ಪ್ರಕಟನೆಯನ್ನು ಹೊರಡಿಸಲು ಯೆಹೋವನು ಅವನನ್ನು ಪ್ರೇರೇಪಿಸಿದನು. ಆ ಪ್ರಕಟನೆಯನ್ನು ಬರೆಯಿಸಿ ತನ್ನ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಅವನು ಅದನ್ನು ಓದಿಸಿದನು. ಯೆರೆಮೀಯನ ಮೂಲಕ ಯೆಹೋವನು ಹೇಳಿದ ವಿಷಯಗಳು ನೆರವೇರುವಂತೆ ಇದಾಯಿತು. ಆ ಪ್ರಕಟನೆ ಇಂತಿದೆ:
2 “ಪರ್ಶಿಯಾದ ರಾಜನಾದ ಸೈರಸನ ಪ್ರಕಟನೆ:
“ಪರಲೋಕದ ದೇವರಾದ ಯೆಹೋವನು ಭೂಲೋಕದಲ್ಲಿರುವ ಎಲ್ಲಾ ದೇಶಗಳನ್ನು ನನ್ನ ವಶಕ್ಕೆ ಕೊಟ್ಟಿದ್ದಾನೆ. ಯೆಹೂದ ದೇಶದ ಜೆರುಸಲೇಮ್‌ನಲ್ಲಿ ತನಗೊಂದು ಆಲಯವನ್ನು ಕಟ್ಟಲು ಆತನು ನನ್ನನ್ನು ಆರಿಸಿಕೊಂಡಿದ್ದಾನೆ. 3 ಆತನು ಜೆರುಸಲೇಮ್‌ನಲ್ಲಿರುವಾತನೂ ಇಸ್ರೇಲರ ದೇವರೂ ಆಗಿದ್ದಾನೆ. ದೇವಜನರಲ್ಲಿ ಯಾರಾದರೂ ನಿಮ್ಮೊಂದಿಗೆ ವಾಸಿಸುತ್ತಿದ್ದರೆ ದೇವರ ಆಶೀರ್ವಾದವು ಅವರ ಮೇಲಿರಲಿ. ಯೆಹೂದ ಪ್ರಾಂತ್ಯದಲ್ಲಿರುವ ಜೆರುಸಲೇಮಿಗೆ ಹೋಗಲು ಅವರಿಗೆ ಅವಕಾಶಕೊಡಿರಿ. ಅವರು ಹೋಗಿ ಯೆಹೋವನಿಗಾಗಿ ದೇವಾಲಯವನ್ನು ಕಟ್ಟಲಿ. 4 ಆದ್ದರಿಂದ ಯಾವ ಸ್ಥಳದಲ್ಲಿಯಾದರೂ ಇಸ್ರೇಲರಲ್ಲಿ ಉಳಿದವರು ಇದ್ದಲ್ಲಿ ಅಂಥವರಿಗೆ ಆ ಸ್ಥಳದವರು ಸಹಾಯ ಮಾಡಬೇಕು. ಅವರಿಗೆ ಬೆಳ್ಳಿ, ಬಂಗಾರ, ಪಶುಗಳನ್ನು ಮತ್ತು ಇತರ ವಸ್ತುಗಳನ್ನು ಕೊಡಲಿ. ಜೆರುಸಲೇಮಿನಲ್ಲಿನ ದೇವಾಲಯಕ್ಕೆ ಕಾಣಿಕೆಗಳನ್ನು ಕೊಡಲಿ.”
5 ಆಗ ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ಪ್ರಧಾನರೂ ನಾಯಕರೂ ಜೆರುಸಲೇಮಿಗೆ ಹೊರಟರು. ದೇವಾಲಯವನ್ನು ಕಟ್ಟಲು ಅವರು ಹೊರಟಾಗ ದೇವರಿಂದ ಪ್ರೋತ್ಸಾಹಿಸಲ್ಪಟ್ಟ ಇತರ ಜನರೂ ಅವರೊಂದಿಗೆ ಜೆರುಸಲೇಮಿಗೆ ಹೊರಟರು. 6 ಅವರ ನೆರೆಹೊರೆಯವರು ಅವರಿಗೆ ತುಂಬಾ ಕಾಣಿಕೆಗಳನ್ನು ಕೊಟ್ಟರು. ಅವರಿಗೆ ಬೆಳ್ಳಿಬಂಗಾರಗಳನ್ನು, ಪಶುಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಧಾರಾಳವಾಗಿ ಕೊಟ್ಟರು. 7 ಅಲ್ಲದೆ ಸೈರಸ್ ರಾಜನು ದೇವಾಲಯಕ್ಕೆ ಸಂಬಂಧಿಸಿದ ವಸ್ತುಗಳನ್ನೆಲ್ಲಾ ಹೊರತೆಗೆದನು. ನೆಬೂಕದ್ನೆಚ್ಚರ ಅರಸನು ಜೆರುಸಲೇಮ್ ದೇವಾಲಯದಿಂದ ಸೂರೆಮಾಡಿ ತಂದ ಸಾಮಾಗ್ರಿಗಳನ್ನು ತನ್ನ ವಿಗ್ರಹಗಳನ್ನಿಡುವ ಕೋಣೆಯಲ್ಲಿ ಇಟ್ಟಿದ್ದನು. 8 ಪರ್ಶಿಯಾದ ರಾಜನಾದ ಸೈರಸ್ ತನ್ನ ಖಜಾನೆಯ ಮೇಲ್ವಿಚಾರಕನಾದ ಮಿತ್ರದಾತನಿಗೆ ಆ ವಸ್ತುಗಳನ್ನು ಹೊರತರಲು ಹೇಳಿದನು. ಮಿತ್ರದಾತನು ಯೆಹೂದ ನಾಯಕನಾದ ಶೆಷ್ಬಚ್ಚರನಿಗೆ ಆ ವಸ್ತುಗಳನ್ನು ಕೊಟ್ಟನು.
9 ಅವು ಯಾವುವೆಂದರೆ: ಬಂಗಾರದ ಬೋಗುಣಿಗಳು 30 ಬೆಳ್ಳಿ ಬೋಗುಣಿಗಳು 1,000 ಕತ್ತಿಗಳು ಮತ್ತು ಪಾತ್ರೆಗಳು 29 10 ಚಿನ್ನದ ಬಟ್ಟಲುಗಳು 30 ಬೆಳ್ಳಿಯ ಬಟ್ಟಲುಗಳು 410 ಇತರ ಪಾತ್ರೆಗಳು 1,000.
11 ಒಟ್ಟು ಬೆಳ್ಳಿಬಂಗಾರದ ಪಾತ್ರೆಗಳು ಐದು ಸಾವಿರದ ನಾನೂರು. ಸೆರೆಯವರು ಬಾಬಿಲೋನ್ ನಗರವನ್ನು ಬಿಟ್ಟು ಜೆರುಸಲೇಮಿಗೆ ಹೊರಟಾಗ ಈ ವಸ್ತುಗಳೆಲ್ಲಾ ಶೆಷ್ಬಚ್ಚರನ ವಶದಲ್ಲಿದ್ದವು.
ಹಿಂತಿರುಗಿಹೋದ ಸೆರೆಯವರು
2 ಸೆರೆಯಿಂದ ಮರಳಿಬಂದ ಸಂಸ್ಥಾನದವರ ವಿವರ, ಬಹಳ ವರ್ಷಗಳ ಹಿಂದೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಇವರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದಿದ್ದನು. ಇವರು ಜೆರುಸಲೇಮಿಗೆ ಹಿಂತಿರುಗಿ ಬಂದು ಎಲ್ಲರೂ ತಮ್ಮತಮ್ಮ ಸ್ವಂತ ಊರುಗಳಿಗೆ ಹೊರಟು ಹೋದರು. 2 ಜೆರುಬ್ಬಾಬೆಲನೊಂದಿಗೆ ಹಿಂತಿರುಗಿದವರು ಯಾರೆಂದರೆ: ಯೇಷೂವ, ನೆಹೆಮೀಯ, ಸೆರಾಯ, ರೆಗೇಲಾಯ, ಮೊರ್ದೆಕೈ, ಬಿಲ್ಷಾನ್, ಮಿಸ್ಪಾರ್, ಬಿಗ್ವೈ, ರೆಹೂಮ್ ಮತ್ತು ಬಾಣ. ಇಸ್ರೇಲರಲ್ಲಿ ಹಿಂತಿರುಗಿ ಬಂದವರ ಹೆಸರು ಮತ್ತು ಸಂಖ್ಯೆ:
3 ಪರೋಷಿನ ಸಂತತಿಯವರು | 2,172 |
4 ಶೆಫಟ್ಯನ ಸಂತತಿಯವರು | 372 |
5 ಅರಹನ ಸಂತತಿಯವರು | 775 |
6 ಯೇಷೂವ ಮತ್ತು ಯೋವಾಬನ ಕುಟುಂಬದ ಪಹತ್ ಮೋವಾಬಿನ ಸಂತತಿಯವರು | 2,812 |
7 ಏಲಾಮಿನ ಸಂತತಿಯವರು | 1,254 |
8 ಜತ್ತೂವಿನ ಸಂತತಿಯವರು | 945 |
9 ಜಕ್ಕೈಯ ಸಂತತಿಯವರು | 760 |
10 ಬಾನೀಯ ಸಂತತಿಯವರು | 642 |
11 ಬೇಬೈಯ ಸಂತತಿಯವರು | 623 |
12 ಅಜ್ಗಾದಿನ ಸಂತತಿಯವರು | 1,222 |
13 ಅದೋನೀಕಾಮನ ಸಂತತಿಯವರು | 666 |
14 ಬಿಗ್ವೈಯ ಸಂತತಿಯವರು | 2,056 |
15 ಆದೀನನ ಸಂತತಿಯವರು | 454 |
16 ಆಟೇರಿನವರಾದ ಹಿಜ್ಕೀಯನ ಸಂತತಿಯವರು | 98 |
17 ಬೇಚೈಯ ಸಂತತಿಯವರು | 323 |
18 ಯೋರನ ಸಂತತಿಯವರು | 112 |
19 ಹಾಷುಮಿನ ಸಂತತಿಯವರು | 223 |
20 ಗಿಬ್ಬಾರಿನ ಸಂತತಿಯವರು | 95 |
21 ಬೆತ್ಲೆಹೇಮಿನ ಊರಿನವರು | 123 |
22 ನೆಟೋಫ ಊರಿನವರು | 56 |
23 ಅನಾತೋತ್ ಊರಿನವರು | 128 |
24 ಅಜ್ಮಾವೆತ್ ಊರಿನವರು | 42 |
25 ಕಿರ್ಯತ್ಯಾರೀಮ್, ಕೆಫೀರ ಮತ್ತು ಬೇರೋತ್ ಊರುಗಳವರು | 743 |
26 ರಾಮಾ ಮತ್ತು ಗೆಬ ಊರುಗಳವರು | 621 |
27 ಮಿಕ್ಮಾಸಿನವರು | 122 |
28 ಬೇತೇಲ್ ಮತ್ತು ಆಯಿ ಎಂಬ ಊರುಗಳವರು | 223 |
29 ನೆಬೋ ಊರಿನವರು | 52 |
30 ಮಗ್ಬೀಷ್ ಊರಿನವರು | 156 |
31 ಏಲಾಮ್ ಎಂಬ ಮತ್ತೊಂದು ಊರಿನವರು | 1,254 |
32 ಹಾರಿಮ್ ಊರಿನವರು | 320 |
33 ಲೋದ್, ಹಾದೀದ್, ಓನೋ ಊರುಗಳವರು | 725 |
34 ಜೆರಿಕೊ ಊರಿನವರು | 345 |
35 ಸೆನಾಹ ಊರಿನವರು | 3,630 |
36 ಯಾಜಕರು ಯಾರೆಂದರೆ:
ಯೇಷೂವನ ಕುಟುಂಬಕ್ಕೆ ಸೇರಿದ ಯೆದಾಯನ ಸಂತತಿಯವರು | 973 |
37 ಇಮ್ಮೇರನ ಸಂತತಿಯವರು | 1,052 |
38 ಪಷ್ಹೂರನ ಸಂತತಿಯವರು | 1,247 |
39 ಹಾರಿಮನ ಸಂತತಿಯವರು | 1,017 |
40 ಲೇವಿ ಕುಲದವರು ಯಾರೆಂದರೆ:
ಹೋದವ್ಯನ ಕುಟುಂಬಕ್ಕೆ ಸೇರಿದ ಯೇಷೂವ ಮತ್ತು ಕದ್ಮೀಯೇಲರ ಸಂತತಿಯವರು | 74 |
41 ಗಾಯಕರು ಯಾರೆಂದರೆ:
ಆಸಾಫನ ಸಂತತಿಯವರು | 128 |
42 ದ್ವಾರಪಾಲಕರು ಯಾರೆಂದರೆ:
ಶಲ್ಲೂಮ್, ಅಟೇರ್, ಟಲ್ಮೋನ್, ಅಕ್ಕೂಬ್, ಹಟೀಟ್ ಮತ್ತು ಶೋಬೈ. ಇವರ ಸಂತತಿಯರು ಒಟ್ಟು | 139 |
43 ದೇವಾಲಯದ ವಿಶೇಷ ಸೇವಕರು ಯಾರೆಂದರೆ:
ಜೀಹ, ಹಸೂಫ, ಟಬ್ಬಾವೋತ್,
44 ಕೇರೋಸ್, ಸೀಯಹಾ, ಪಾದೋನ್,
45 ಲೆಬಾನ, ಹಗಾಬ, ಅಕ್ಕೂಬ್,
46 ಹಾಗಾಬ್, ಶೆಮ್ಲೈ, ಹಾನಾನ್,
47 ಗಿದ್ದೇಲ್, ಗಹರ್, ರೆವಾಯ,
48 ರೆಚೀನ್, ನೆಕೋದ, ಗಜ್ಜಾಮ್,
49 ಉಜ್ಜ, ಪಾಸೇಹ, ಬೇಸೈ,
50 ಅಸ್ನ, ಮೆಗೂನೀಮ್, ನೆಫೀಸೀಮ್,
51 ಬಕ್ಬೂಕ್, ಹಕ್ಕೂಫ, ಹರ್ಹೂರ್,
52 ಬಚ್ಲೂತ್, ಮೆಹೀದ, ಹರ್ಷ,
53 ಬರ್ಕೋಸ್, ಸೀಸೆರ, ತೆಮಹ,
54 ನೆಚೀಹ, ಹಟೀಫ ಇವರ ಸಂತತಿಯವರು.
55 ಸೊಲೊಮೋನನ ಸೇವಕರ ಸಂತತಿಯವರು:
ಸೋಟೈ, ಹಸ್ಸೋಫೆರೆತ್, ಪೆರೂಧ,
56 ಯಾಲ, ದರ್ಕೋನ್, ಗಿದ್ದೇಲ್,
57 ಶೆಫಟ್ಯ, ಹಟ್ಟೀಲ್, ಪೋಕೆರೆತ್ ಹಚ್ಚೆಬಾಯೀಮ್, ಆಮೀ ಇವರ ಸಂತತಿಯವರು.
58 ದೇವಾಲಯದ ಎಲ್ಲಾ ಸೇವಕರೂ ಸೊಲೊಮೋನನ ಸೇವಕರೂ ಒಟ್ಟು ಸೇರಿ | 392 |
59-60 ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದಾನ್ ಮತ್ತು ಇಮ್ಮೇರ್ ಎಂಬ ಊರುಗಳಿಂದ ಕೆಲವರು ಬಂದರು. ಇವರ ಕುಟುಂಬಗಳು ಇಸ್ರೇಲ್ ಕುಟುಂಬಕ್ಕೆ ಸೇರಿದವುಗಳಾಗಿವೆ ಎಂದು ರುಜುವಾತುಪಡಿಸಲು ಇವರಿಗೆ ಸಾಧ್ಯವಾಗಲಿಲ್ಲ. ಅವರು ಯಾರೆಂದರೆ:
ದೆಲಾಯ, ಟೋಬೀಯ ಮತ್ತು ನೆಕೋದನ ಸಂತತಿಯವರು | 652 |
61 ಯಾಜಕರಾದ ಹಬಯ್ಯ, ಹಕ್ಕೋಜ್, ಬರ್ಜಿಲ್ಲೈ ಇವರ ಸಂತತಿಯವರು. (ಈ ಬರ್ಜಿಲ್ಲೈ ಎಂಬವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನೂ ಇಟ್ಟುಕೊಂಡಿದ್ದನು.)
62 ಇವರು ಹುಡುಕಿದರೂ ತಮ್ಮ ವಂಶಾವಳಿ ಪತ್ರವನ್ನು ಕಂಡುಕೊಳ್ಳಲಾಗಲಿಲ್ಲ. ಆದ್ದರಿಂದ ಇವರು ಅಶುದ್ಧರೆಂದು ಪರಿಗಣಿಸಲ್ಪಟ್ಟು ಯಾಜಕತ್ವದಿಂದ ತಳ್ಳಲ್ಪಟ್ಟರು. 63 ಊರೀಮ್ ತುಮ್ಮೀಮ್‌ಗಳ ಮೂಲಕ ದೇವರ ಚಿತ್ತವನ್ನು ತಿಳಿಯಲು ಶಕ್ತನಾದ ಯಾಜಕನು ದೊರಕುವ ತನಕ ಇವರು ದೇವರಿಗೆ ಅರ್ಪಿಸಿದ್ದ ಪರಿಶುದ್ಧ ಆಹಾರವನ್ನು ತಿನ್ನಬಾರದೆಂದು ದೇಶಾಧಿಪತಿಯು ಆಜ್ಞಾಪಿಸಿದನು.
64-65 ಹೀಗೆ ಒಟ್ಟು ನಲವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿ ತಮ್ಮ ಸ್ವದೇಶಕ್ಕೆ ಹಿಂದಿರುಗಿದರು. ಇವರಲ್ಲಿನ ಅವರ ಏಳು ಸಾವಿರದ ಮುನ್ನೂರ ಮೂವತ್ತೇಳು ಸೇವಕಸೇವಕಿಯರನ್ನು ಸೇರಿಸಲಿಲ್ಲ. ಇವರೊಂದಿಗೆ ಇನ್ನೂರು ಮಂದಿ ಗಾಯಕಗಾಯಕಿಯರೂ ಇದ್ದರು. 66-67 ಅವರ ಬಳಿಯಲ್ಲಿ ಏಳುನೂರ ಮೂವತ್ತಾರು ಕುದುರೆಗಳು, ಇನ್ನೂರ ನಲವತ್ತೈದು ಹೇಸರಕತ್ತೆಗಳು, ನಾನೂರ ಮೂವತ್ತೈದು ಒಂಟೆಗಳು ಮತ್ತು ಆರು ಸಾವಿರದ ಏಳುನೂರ ಇಪ್ಪತ್ತು ಕತ್ತೆಗಳೂ ಇದ್ದವು.
68 ಈ ಗುಂಪು ಜೆರುಸಲೇಮಿನಲ್ಲಿದ್ದ ದೇವಾಲಯದ ಬಳಿ ಬಂದಾಗ ಆ ದೇವಾಲಯವನ್ನು ಮತ್ತೆ ನಿರ್ಮಿಸಲು ಕುಟುಂಬದ ನಾಯಕರುಗಳು ತಮ್ಮತಮ್ಮ ಕಾಣಿಕೆಗಳನ್ನು ಕೊಟ್ಟರು. ಕೆಡವಲ್ಪಟ್ಟಿದ್ದ ದೇವಾಲಯದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ಕಟ್ಟಲು ಪ್ರಾರಂಭಿಸುವರು. 69 ದೇವಾಲಯ ಕಟ್ಟಲು ಅವರು ತಮ್ಮಿಂದ ಸಾಧ್ಯವಾದಷ್ಟು ಕಾಣಿಕೆಗಳನ್ನು ಕೊಟ್ಟರು. ಒಟ್ಟು ಐನೂರು ಕಿಲೋಗ್ರಾಂ ಬಂಗಾರ, ಮೂರು ಸಾವಿರ ಕಿಲೋಗ್ರಾಂ ಬೆಳ್ಳಿ, ನೂರು ಯಾಜಕರು ಧರಿಸಬೇಕಾದ ಬಟ್ಟೆಗಳನ್ನು ದಾನ ಮಾಡಿದರು.
70 ಅವರಲ್ಲಿದ್ದ ಯಾಜಕರು, ಲೇವಿಯರು ಮತ್ತು ಇನ್ನಿತರರು ಜೆರುಸಲೇಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದರು. ಇವರೊಳಗೆ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಉಳಿದ ಇಸ್ರೇಲ್ ಜನರು ತಮ್ಮತಮ್ಮ ಊರುಗಳಲ್ಲಿ ವಾಸಿಸಿದರು.
ಯಜ್ಞವೇದಿಕೆಯನ್ನು ತಿರುಗಿ ಕಟ್ಟಿದ್ದು
3 ತಮ್ಮತಮ್ಮ ಸ್ವಂತ ಊರುಗಳಲ್ಲಿ ಹೋಗಿ ನೆಲೆಸಿದ್ದ ಇಸ್ರೇಲರು ಏಳನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಒಂದೇ ಮನಸ್ಸಿನಿಂದ ಬಂದು ಸೇರಿದರು. 2 ಆಗ ಯೋಚಾದಾಕನ ಮಗನಾದ ಯೇಷೂವನೂ ಅವನೊಂದಿಗೆ ಇದ್ದ ಯಾಜಕರೂ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಅವನೊಂದಿಗಿದ್ದ ಜನರೊಂದಿಗೆ ಇಸ್ರೇಲ್ ದೇವರಿಗೆ ಯಜ್ಞವೇದಿಕೆಯನ್ನು ಕಟ್ಟಿದರು. ದೇವರ ಸೇವಕನಾದ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ದೇವರಿಗೆ ಯಜ್ಞವನ್ನು ಸಮರ್ಪಿಸಲು ಇವರು ವೇದಿಕೆಯನ್ನು ಕಟ್ಟಿದರು.
3 ತಮ್ಮ ಸುತ್ತಲು ವಾಸಿಸುವ ಅನ್ಯಜನರಿಗೆ ಅವರು ಭಯಪಟ್ಟರೂ ಹಳೆಯ ಅಸ್ತಿವಾರದ ಮೇಲೆ ವೇದಿಕೆಯನ್ನು ಕಟ್ಟಿದರು. ಅವರು ಹಾಗೆ ಮಾಡುವುದನ್ನು ನಿಲ್ಲಿಸಲಿಲ್ಲ. ಕಟ್ಟಿ ಮುಗಿಸಿದ ಬಳಿಕ ಬೆಳಿಗ್ಗೆ, ಸಾಯಂಕಾಲ ಹೋಮಯಜ್ಞಾದಿಗಳನ್ನು ಸಮರ್ಪಿಸಿದರು. 4 ಇದಲ್ಲದೆ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಹಬ್ಬದ ಪ್ರತಿ ದಿವಸಗಳಲ್ಲಿ ನೇಮಿತ ಸರ್ವಾಂಗಹೋಮಗಳನ್ನು ಅರ್ಪಿಸಿದರು. 5 ಇದಾದ ಬಳಿಕ ಅವರು ನಿತ್ಯ ಸರ್ವಾಂಗಹೋಮವನ್ನೂ ಅಮಾವಾಸ್ಯೆ ಮತ್ತು ಇತರ ಹಬ್ಬದ ದಿನಗಳಲ್ಲಿ ಧರ್ಮಶಾಸ್ತ್ರದ ಪ್ರಕಾರ ಅರ್ಪಿಸಬೇಕಾದ ಯಜ್ಞಹೋಮಗಳನ್ನೂ ಸಮರ್ಪಿಸಿದರು. ಜನರು ತಾವು ಯೆಹೋವನಿಗೆ ಕೊಡಬೇಕೆಂದಿದ್ದ ಇತರ ಕಾಣಿಕೆಗಳನ್ನು ಸಹ ತಂದು ಕೊಡಲಾರಂಭಿಸಿದರು. 6 ದೇವಾಲಯವು ತಿರಿಗಿ ಕಟ್ಟಲ್ಪಡದಿದ್ದರೂ ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಇಸ್ರೇಲರು ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಲು ಪ್ರಾರಂಭಿಸಿದರು.
ದೇವಾಲಯದ ಪುನರ್ನಿರ್ಮಾಣ
7 ಸೆರೆಯಿಂದ ಹಿಂತಿರುಗಿಬಂದ ಜನರು ಬಡಗಿಗಳಿಗೂ ಕಲ್ಲುಕುಟಿಗರಿಗೂ ಹಣ ಕೊಟ್ಟರು. ಲೆಬನೋನಿನಿಂದ ದೇವದಾರು ಮರಗಳನ್ನು ಸಾಗಿಸುವ ತೂರ್ಯರಿಗೆ ಮತ್ತು ಚೀದೋನ್ಯರಿಗೆ ಆಹಾರಪದಾರ್ಥಗಳನ್ನು, ಆಲಿವ್ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಸಂಬಳವಾಗಿ ಕೊಟ್ಟರು. ಸೊಲೊಮೋನನು ಮೊದಲನೆಯ ದೇವಾಲಯವನ್ನು ಕಟ್ಟುವಾಗ ಅದಕ್ಕೆ ಬೇಕಾದ ಮರಗಳನ್ನು ಸಮುದ್ರಮಾರ್ಗವಾಗಿ ತಂದಂತೆಯೇ ಇವರೂ ಜೆರುಸಲೇಮಿಗೆ ಸಮೀಪವಿರುವ ಯೊಪ್ಪಕ್ಕೆ ಸಮುದ್ರಮಾರ್ಗವಾಗಿ ತಂದರು. ಪರ್ಶಿಯಾದ ಅರಸನಾದ ಸೈರಸನ ಆಜ್ಞೆಗನುಸಾರವಾಗಿ ಇವೆಲ್ಲವೂ ಮಾಡಲ್ಪಟ್ಟವು.
8 ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೋಚಾದಾಕನ ಮಗನಾದ ಯೇಷೂವನು ಕೆಲಸವನ್ನು ಪ್ರಾರಂಭಿಸಿದರು. ಅವರ ಸಹೋದರರು, ಯಾಜಕರು, ಲೇವಿಯರು ಮತ್ತು ಅವರೊಂದಿಗೆ ಸೆರೆಯಿಂದ ಬಂದವರೆಲ್ಲರೂ ಕೆಲಸ ಮಾಡಿದರು. ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಲೇವಿಯವರನ್ನು ಮೇಲ್ವಿಚಾರಕರನ್ನಾಗಿ ಅವರು ನೇಮಿಸಿದರು. 9 ದೇವಾಲಯವನ್ನು ಕಟ್ಟುವ ಕೆಲಸವನ್ನು ಮೇಲ್ವಿಚಾರಣೆ ಮಾಡಿದವರು ಕೆಳಕಂಡಂತಿರುವರು. ಯೇಷೂವನೂ ಅವನ ಮಕ್ಕಳೂ; ಕದ್ಮೀಯೇಲನು ಮತ್ತು ಅವನ ಮಕ್ಕಳು (ಇವರು ಯೆಹೂದ ಸಂತತಿಯವರು.); ಲೇವಿಯನಾದ ಹೇನಾದಾದನ ಗಂಡುಮಕ್ಕಳು ಮತ್ತು ಅವನ ಅಣ್ಣತಮ್ಮಂದಿರು. 10 ಕಟ್ಟುವವರು ದೇವಾಲಯದ ಅಸ್ತಿವಾರವನ್ನು ಕಟ್ಟಿ ಮುಗಿಸಿದಾಗ ಯಾಜಕರು ತಮ್ಮ ಯಾಜಕ ಬಟ್ಟೆಗಳನ್ನು ಧರಿಸಿ ತುತ್ತೂರಿಗಳನ್ನು ತೆಗೆದುಕೊಂಡರು; ಆಸಾಫನ ಮಕ್ಕಳು ತಾಳಗಳನ್ನು ತೆಗೆದುಕೊಂಡರು; ಅಲ್ಲದೆ ಇಸ್ರೇಲಿನ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ತಮ್ಮತಮ್ಮ ಸ್ಥಳಗಳಲ್ಲಿ ನಿಂತುಕೊಂಡು ಯೆಹೋವನನ್ನು ಸ್ತುತಿಸಿದರು.
11 ಯೆಹೋವನು ಒಳ್ಳೆಯವನು; ಆತನಿಗೆ ಕೃತಜ್ಞತಾಸ್ತುತಿ ಮಾಡಿರಿ.
ಆತನ ಕರುಣೆ ಮತ್ತು ನಿಜಪ್ರೀತಿ ಇಸ್ರೇಲರಿಗೆ ಶಾಶ್ವತವಾಗಿದೆ
ಎಂದು ಹಾಡಿದರು. ಆಗ ಉಳಿದವರು ಸಂತೋಷದಿಂದ ಆರ್ಭಟಿಸಿದರು; ದೇವಾಲಯದ ಅಸ್ತಿವಾರ ಹಾಕಿದ್ದಕ್ಕೆ ಯೆಹೋವನನ್ನು ಸ್ತುತಿಸಿದರು.
12 ಆದರೆ ಮೊದಲಿನ ದೇವಾಲಯವನ್ನೂ ಅದರ ವೈಭವವನ್ನೂ ನೋಡಿದ್ದ ಕುಲಪ್ರಧಾನರು, ಯಾಜಕರು ಮತ್ತು ಲೇವಿಯರು ಗಟ್ಟಿಯಾಗಿ ಅತ್ತರು. ಇತರರು ಗಟ್ಟಿಯಾಗಿ ಹರ್ಷಧ್ವನಿ ಮಾಡಿದರು. 13 ಅವರ ಉತ್ಸಾಹಧ್ವನಿಯಲ್ಲಿ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಎಂದು ತಿಳಿಯುತ್ತಿರಲಿಲ್ಲ. ಆದರೆ ಆ ಧ್ವನಿಯು ಬಹುದೂರದವರೆಗೂ ಕೇಳಿಸಿತು.
Kannada Holy Bible: Easy-to-Read Version. All rights reserved. © 1997 Bible League International