Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 32-34

ಹಿಜ್ಕೀಯನಿಗೆ ತೊಂದರೆಕೊಟ್ಟ ಅಶ್ಶೂರನ ಅರಸನು

32 ಹೀಗೆ ಒಳ್ಳೆಯ ಕಾರ್ಯಗಳನ್ನು ಹಿಜ್ಕೀಯನು ಮಾಡುತ್ತಿರುವಾಗ ಅಶ್ಶೂರದ ರಾಜನಾದ ಸನ್ಹೇರೀಬನು ಯೆಹೂದದ ಮೇಲೆ ಯುದ್ಧಮಾಡಲು ಬಂದನು. ಸರಿಯಾದ ಸಮಯದಲ್ಲಿ ಪಟ್ಟಣದ ಮೇಲೆ ಧಾಳಿಮಾಡಿ ಸೋಲಿಸುವದಕ್ಕೋಸ್ಕರ ಸನ್ಹೇರೀಬನೂ ಅವನ ಸೈನಿಕರೂ ಪಟ್ಟಣಗಳ ಕೋಟೆಗಳ ಹೊರಗಡೆ ಪಾಳೆಯ ಮಾಡಿದರು. ಜೆರುಸಲೇಮಿನ ಮೇಲೆ ಧಾಳಿ ಮಾಡಲಿಕ್ಕೋಸ್ಕರ ಸನ್ಹೇರೀಬನು ಬಂದಿದ್ದಾನೆಂದು ಹಿಜ್ಕೀಯನಿಗೆ ತಿಳಿಯಿತು. ಅವನು ತನ್ನ ಅಧಿಕಾರಿಗಳನ್ನೂ ಸೇನಾಪತಿಗಳನ್ನೂ ವಿಚಾರಿಸಿದನು. ಪಟ್ಟಣದ ಹೊರಗಿರುವ ಬುಗ್ಗೆಯನ್ನು ನಿಲ್ಲಿಸಿಬಿಡಬೇಕೆಂದು ಅವರೆಲ್ಲರೂ ಆಲೋಚನೆ ಮಾಡಿದರು. ಇದನ್ನು ಮಾಡಿ ಮುಗಿಸಲು ಅಧಿಕಾರಿಗಳೂ ಸೇನಾಪತಿಗಳೂ ಸಹಾಯ ಮಾಡಿದರು. ಅನೇಕ ಜನರು ಒಟ್ಟಾಗಿ ಬಂದು ದೇಶದ ಮಧ್ಯದಲ್ಲಿ ಹರಿಯುವ ಹಳ್ಳಗಳನ್ನೂ ತೊರೆಗಳನ್ನೂ ಬುಗ್ಗೆಗಳನ್ನೂ ನಿಲ್ಲಿಸಿದರು. ಅಶ್ಶೂರದ ಅರಸನು ಬಂದಾಗ ಅವನಿಗೆ ನೀರು ಸಿಗದಂತೆ ಮಾಡಿದರು. ನಂತರ ಹಿಜ್ಕೀಯನು ಜೆರುಸಲೇಮಿನ ಬಿದ್ದುಹೋಗಿದ್ದ ಕೋಟೆಗೋಡೆಗಳನ್ನು ಕಟ್ಟಿಸಿ ಭದ್ರಪಡಿಸಿದನು, ಪೌಳಿಗೋಡೆಯ ಮೇಲೆ ಬುರುಜು ಕಟ್ಟಿಸಿದನು. ಅಲ್ಲದೆ ಪೌಳಿಗೋಡೆಯ ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿದನು. ಜೆರುಸಲೇಮಿನ ಹಳೇ ಭಾಗದ ಪೂರ್ವದ ಗೋಡೆಯನ್ನು ಭದ್ರಪಡಿಸಿದನು. ಅವನು ಅನೇಕ ಆಯುಧಗಳನ್ನು ಮತ್ತು ಗುರಾಣಿಗಳನ್ನು ಮಾಡಿಸಿದನು. 6-7 ಹಿಜ್ಕೀಯನು ಸೈನಿಕರಿಗೆಲ್ಲಾ ದಳಪತಿಗಳನ್ನು ನೇಮಿಸಿದನು. ಜೆರುಸಲೇಮಿನ ನಗರದ ಹೆಬ್ಬಾಗಿಲ ಬಳಿಯಲ್ಲಿದ್ದ ಮೈದಾನದಲ್ಲಿ ಹಿಜ್ಕೀಯನು ಸೇನಾಪತಿಗಳೊಂದಿಗೆ ಸಮಾಲೋಚನೆ ನಡಿಸಿದನು; ಅವರನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದನು. “ಧೈರ್ಯಶಾಲಿಗಳಾಗಿರಿ, ಬಲಗೊಳ್ಳಿರಿ, ಅಶ್ಶೂರದ ಅರಸನಿಗಾಗಲಿ ಅರಸನೊಂದಿಗಿರುವ ಆ ದೊಡ್ಡ ಸೈನ್ಯಕ್ಕಾಗಲಿ ಭಯಪಡಬೇಡಿರಿ. ಅವನಿಗಿಂತಲೂ ಹೆಚ್ಚಾದ ಸಾಮರ್ಥ್ಯ ನಮಗಿದೆ. ಅಶ್ಶೂರದ ರಾಜನ ಬಳಿಯಲ್ಲಿ ಮನುಷ್ಯರು ಮಾತ್ರ ಇರುವರು. ಆದರೆ ನಮ್ಮೊಂದಿಗೆ ದೇವರಾದ ಯೆಹೋವನಿದ್ದಾನೆ. ನಮ್ಮ ದೇವರು ನಮಗೆ ಸಹಾಯ ಮಾಡುತ್ತಾನೆ. ನಮ್ಮ ಯುದ್ಧದಲ್ಲಿ ಆತನು ನಮಗೋಸ್ಕರ ಕಾದಾಡುವನು” ಎಂದು ಹೇಳಿ ಹಿಜ್ಕೀಯ ಅರಸನು ತನ್ನ ಜನರನ್ನು ಪ್ರೋತ್ಸಾಹಿಸಿ ಬಲಗೊಳಿಸಿದನು.

ಅಶ್ಶೂರದ ಅರಸನಾದ ಸನ್ಹೇರೀಬನು ತನ್ನ ಸಮಸ್ತ ಸೈನ್ಯದೊಡನೆ ಲಾಕೀಷ್ ಪಟ್ಟಣದ ಸಮೀಪದಲ್ಲಿ ಪಾಳೆಯ ಮಾಡಿಕೊಂಡಿದ್ದನು. ಅಲ್ಲಿ ತನ್ನ ಸೇವಕರನ್ನು ಯೆಹೂದದ ಅರಸನಾದ ಹಿಜ್ಕೀಯನ ಬಳಿಗೂ ಮತ್ತು ಜೆರುಸಲೇಮಿನಲ್ಲಿದ್ದ ಎಲ್ಲಾ ಯೆಹೂದದ ಜನರ ಬಳಿಗೂ ಸಂದೇಶದೊಡನೆ ಕಳುಹಿಸಿದನು.

10 ಅವರು ಹೇಳಿದ್ದೇನೆಂದರೆ, “ಅಶ್ಶೂರದ ಅರಸನಾದ ಸನ್ಹೇರೀಬನು ಹೇಳುವುದೇನೆಂದರೆ, ‘ಮುತ್ತಿಗೆ ಹಾಕಲ್ಪಟ್ಟ ಜೆರುಸಲೇಮಿನಲ್ಲಿ ನಿಮ್ಮನ್ನು ಇರುವಂತೆ ಮಾಡಿರುವ ಯಾವುದರ ಮೇಲೆ ನೀವು ಭರವಸವನ್ನಿಟ್ಟದ್ದೀರಿ? 11 ಹಿಜ್ಕೀಯನು ನಿಮ್ಮನ್ನು ಮೋಸಪಡಿಸುತ್ತಿದ್ದಾನೆ. ನೀವು ಜೆರುಸಲೇಮಿನಲ್ಲಿಯೇ ಇರುವಂತೆ ಹೇಳಿ ನಿಮಗೆ ಮೋಸಮಾಡುತ್ತಿದ್ದಾನೆ. ಹಾಗೆ ಮಾಡಿದರೆ ನೀವು ಅನ್ನನೀರಿಲ್ಲದೆ ಸಾಯುವಿರಿ. ನಿಮಗೆ ಹಿಜ್ಕೀಯನು, “ನಮ್ಮ ದೇವರಾದ ಯೆಹೋವನು ಅಶ್ಶೂರದ ರಾಜನಿಂದ ಕಾಪಾಡುವನು” ಎಂದು ಹೇಳುತ್ತಾನಲ್ಲಾ? 12 ಹಿಜ್ಕೀಯನು ತಾನೇ ಪೂಜಾಸ್ಥಳಗಳನ್ನೂ ವೇದಿಕೆಗಳನ್ನೂ ತೆಗೆದುಹಾಕಿದ್ದಾನೆ. ಒಂದೇ ಒಂದು ಧೂಪವೇದಿಕೆಯಲ್ಲಿ ಧೂಪಹಾಕಿ ಆರಾಧಿಸಬೇಕೆಂದು ಅವನು ಯೆಹೂದ ಮತ್ತು ಜೆರುಸಲೇಮಿನ ಜನರಾದ ನಿಮಗೆ ಹೇಳುತ್ತಿದ್ದಾನೆ. 13 ನಮ್ಮ ಪೂರ್ವಿಕರೂ ನಾನೂ ಬೇರೆ ದೇಶಗಳಿಗೆಲ್ಲಾ ಏನು ಮಾಡಿದ್ದೇವೆಂದು ನಿಮಗೆ ತಿಳಿದದೆ. ಆ ದೇಶದ ದೇವರುಗಳು ಅವರನ್ನು ಕಾಪಾಡಲಿಲ್ಲ. ಆ ದೇವರುಗಳು ಅವರನ್ನು ನಾಶಮಾಡದಂತೆ ನನ್ನನ್ನು ತಡೆಯಲಿಲ್ಲ. 14 ನನ್ನ ಪೂರ್ವಿಕರು ಆ ದೇಶಗಳನ್ನು ನಾಶಮಾಡಿದರು. ಯಾವ ದೇವರೂ ತನ್ನ ಜನರನ್ನು ನಾನು ನಾಶಮಾಡದಂತೆ ನನ್ನನ್ನು ತಡೆಯಲು ಸಾಧ್ಯವಿಲ್ಲ. ನಿಮ್ಮ ದೇವರು ನನ್ನಿಂದ ನಿಮ್ಮನ್ನು ಕಾಪಾಡುವನು ಎಂದು ನೀವು ನೆನಸುತ್ತೀರೋ? 15 ಹಿಜ್ಕೀಯನು ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ, ಅವನನ್ನು ನಂಬಬೇಡಿರಿ. ಯಾವ ದೇಶದ ದೇವರಿಗಾಗಲಿ ಅವನ ಜನರಿಗಾಗಲಿ ನನ್ನನ್ನು ನನ್ನ ಪೂರ್ವಿಕರನ್ನು ತಡೆಯಲು ಸಾಧ್ಯವಾಗಲಿಲ್ಲ. ನಿಮ್ಮ ದೇವರೂ ನನ್ನನ್ನು ತಡೆಯಲು ಸಾಧ್ಯವಿಲ್ಲ.’”

16 ಅಶ್ಶೂರದ ಅರಸನ ಸೇವಕರು ದೇವರಾದ ಯೆಹೋವನ ವಿರುದ್ಧವಾಗಿಯೂ ದೇವರ ಸೇವಕನಾದ ಹಿಜ್ಕೀಯನ ವಿರುದ್ಧವಾಗಿಯೂ ಕೀಳಾಗಿ ಮಾತಾಡಿದರು; ಇಸ್ರೇಲಿನ ದೇವರಾದ ಯೆಹೋವನನ್ನು ಹಾಸ್ಯ ಮಾಡಿದರು. 17 ಅಶ್ಶೂರದ ಅರಸನು ಇಸ್ರೇಲಿನ ದೇವರಾದ ಯೆಹೋವನನ್ನು ಅವಮಾನ ಮಾಡಿ ಬರೆದ ಪತ್ರ ಹೀಗಿತ್ತು: “ಇತರ ದೇಶಗಳ ದೇವರುಗಳು ತಮ್ಮ ಜನರನ್ನು ನಾಶಮಾಡದಂತೆ ನನ್ನನ್ನು ತಡೆಯಲು ಸಾಧ್ಯವಾಗಲಿಲ್ಲ. ಅದೇ ರೀತಿಯಲ್ಲಿ ಹಿಜ್ಕೀಯನ ದೇವರು ತನ್ನ ಜನರನ್ನು ನಾಶಮಾಡದ ಹಾಗೆ ನನ್ನನ್ನು ತಡೆಯಲು ಸಾಧ್ಯವಿಲ್ಲ.” 18 ಜೆರುಸಲೇಮಿನ ಪೌಳಿಗೋಡೆಯ ಮೇಲಿದ್ದ ಯೆಹೂದದ ಜನರನ್ನುದ್ದೇಶಿಸಿ ಜೆರುಸಲೇಮಿನ ಜನರು ಭಯಪಡಲೆಂದು ಸನ್ಹೇರೀಬನ ಸೇವಕರು ಗಟ್ಟಿಯಾಗಿ ಇಬ್ರಿಯ ಭಾಷೆಯಲ್ಲಿ ಮಾತನಾಡಿದರು. ಜೆರುಸಲೇಮನ್ನು ವಶಪಡಿಸಿಕೊಳ್ಳಲು ಅವರು ಹೀಗೆ ಮಾಡಿದರು. 19 ಲೋಕದ ಜನರು ಆರಾಧಿಸಿದ ಮತ್ತು ಕೈಯಾರೆ ಮಾಡಿದ್ದ ದೇವರುಗಳನ್ನು ಜೆರುಸಲೇಮಿನ ದೇವರೊಂದಿಗೆ ಹೋಲಿಸಿ ಆತನ ವಿರುದ್ಧವಾಗಿ ಮಾತಾಡಿದರು.

20 ಅರಸನಾದ ಹಿಜ್ಕೀಯನೂ ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯೂ ತಮಗೆ ಬಂದೊದಗಿದ ಸಮಸ್ಯೆಗಾಗಿ ಪರಲೋಕದ ಕಡೆಗೆ ನೋಡಿ ಗಟ್ಟಿಯಾಗಿ ಪ್ರಾರ್ಥಿಸಿದರು. 21 ಆಗ ಯೆಹೋವನು ಅಶ್ಶೂರದ ಅರಸನ ಪಾಳೆಯಕ್ಕೆ ದೇವದೂತನನ್ನು ಕಳುಹಿಸಿದನು. ಆ ದೂತನು ಅಶ್ಶೂರದ ಎಲ್ಲಾ ಸೈನ್ಯದವರನ್ನೂ ಅವರ ಅಧಿಕಾರಿಗಳನ್ನೂ ಸಂಹರಿಸಿದನು. ಆಗ ಅಶ್ಶೂರದ ಅರಸನು ತನ್ನ ಸ್ವಂತ ದೇಶಕ್ಕೆ ಹಿಂತಿರುಗಿದನು. ಅವನ ಜನರು ಅವನ ವಿಷಯದಲ್ಲಿ ನಾಚಿಕೆಪಟ್ಟರು. ಅವನು ತನ್ನ ದೇವರಮಂದಿರದೊಳಕ್ಕೆ ಹೋದಾಗ ಅವನ ಸ್ವಂತ ಮಕ್ಕಳಲ್ಲಿ ಕೆಲವರು ಅವನನ್ನು ಖಡ್ಗದಿಂದ ಸಂಹರಿಸಿದರು. 22 ಈ ರೀತಿಯಾಗಿ ದೇವರಾದ ಯೆಹೋವನು ಜೆರುಸಲೇಮಿನ ಜನರನ್ನು ಅಶ್ಶೂರದ ಅರಸನಾದ ಸನ್ಹೇರೀಬನಿಂದಲೂ ಮತ್ತು ಇತರ ಎಲ್ಲಾ ಜನರಿಂದಲೂ ಪಾರುಮಾಡಿದನು; ಹಿಜ್ಕೀಯನನ್ನು ಮತ್ತು ಜೆರುಸಲೇಮಿನ ಜನರನ್ನೂ ಪರಿಪಾಲನೆ ಮಾಡಿದನು. 23 ಎಷ್ಟೋ ಜನರು ಜೆರುಸಲೇಮಿನಲ್ಲಿನ ದೇವರಾದ ಯೆಹೋವನಿಗೆ ಕಾಣಿಕೆಗಳನ್ನು ತಂದರು. ಹಾಗೆಯೇ ಅರಸನಾದ ಹಿಜ್ಕೀಯನಿಗೂ ಬೆಲೆಬಾಳುವ ವಸ್ತುಗಳನ್ನು ತಂದರು. ಅಂದಿನಿಂದ ಬೇರೆ ದೇಶದವರು ಹಿಜ್ಕೀಯನನ್ನು ಗೌರವಿಸಿದರು.

24 ಆ ಸಮಯದಲ್ಲಿ ಹಿಜ್ಕೀಯನು ಮರಣಕರವಾದ ರೋಗದಿಂದ ನರಳುತ್ತಾ ಇದ್ದದರಿಂದ ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನು ಹಿಜ್ಕೀಯನೊಂದಿಗೆ ಮಾತನಾಡಿ ಅವನಿಗೊಂದು ಗುರುತನ್ನು ಕೊಟ್ಟನು. 25 ಆದರೆ ಹಿಜ್ಕೀಯನ ಹೃದಯವು ಗರ್ವದಿಂದ ತುಂಬಿತ್ತು. ಅವನು ದೇವರ ಕರುಣೆಗಾಗಿ ಉಪಕಾರಸ್ತುತಿ ಹೇಳಲಿಲ್ಲ. ಇದರಿಂದಾಗಿ ಆತನು ಹಿಜ್ಕೀಯನ ಮೇಲೂ ಯೆಹೂದ ಮತ್ತು ಜೆರುಸಲೇಮಿನ ಜನರ ಮೇಲೂ ಕೋಪಗೊಂಡನು. 26 ಆಗ ಹಿಜ್ಕೀಯನೂ ಜೆರುಸಲೇಮಿನ ನಿವಾಸಿಗಳೂ ತಮ್ಮ ಹೃದಯವನ್ನು ಪರಿವರ್ತಿಸಿಕೊಂಡರು; ತಮ್ಮನ್ನು ಬಹಳವಾಗಿ ತಗ್ಗಿಸಿಕೊಂಡು ಗರ್ವಪಡುವದನ್ನು ನಿಲ್ಲಿಸಿದರು. ಆದ್ದರಿಂದ ಹಿಜ್ಕೀಯನು ಇದ್ದಷ್ಟು ಕಾಲ ಯೆಹೋವನ ಕೋಪ ಅವರ ಮೇಲೆ ಬರಲಿಲ್ಲ.

27 ಹಿಜ್ಕೀಯನಿಗೆ ಬೇಕಾದಷ್ಟು ಧನೈಶ್ವರ್ಯಗಳಿದ್ದವು. ಅವನು ಬೆಳ್ಳಿಬಂಗಾರಗಳನ್ನೂ ಸುಗಂಧವಸ್ತುಗಳನ್ನೂ ಗುರಾಣಿಗಳನ್ನೂ ಬೆಲೆಬಾಳುವ ಆಭರಣಗಳನ್ನೂ ಇಡಲು ಸ್ಥಳವನ್ನು ಏರ್ಪಡಿಸಿದನು. 28 ಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವಗಳನ್ನೆಲ್ಲಾ ಸಂಗ್ರಹಿಸಲು ಉಗ್ರಾಣಗಳನ್ನು ನಿರ್ಮಿಸಿದನು. ಪಶುಗಳಿಗೂ ಮಂದೆಗಳಿಗೂ ಹಟ್ಟಿಗಳನ್ನು ಕಟ್ಟಿಸಿದನು. 29 ಅವನು ನಗರಗಳನ್ನು ಕಟ್ಟಿಸಿದನು. ಅವನಿಗೆ ದನಕುರಿಗಳ ದೊಡ್ಡ ಹಿಂಡುಗಳಿದ್ದವು; ದೇವರು ಅವನಿಗೆ ಅಪರಿಮಿತವಾದ ಐಶ್ವರ್ಯವನ್ನು ಕೊಟ್ಟನು. 30 ಹಿಜ್ಕೀಯನು ಗೀಹೋನ್ ಬುಗ್ಗೆಯನ್ನು ತಡೆದು ಆ ನೀರು ಪಶ್ಚಿಮದ ಕಡೆಯಲ್ಲಿದ್ದ ದಾವೀದ ನಗರಕ್ಕೆ ನೇರವಾಗಿ ಇಳಿದು ಬರುವಂತೆ ಮಾಡಿದನು. ಅವನು ಕೈಹಾಕಿದ ಕಾರ್ಯಗಳೆಲ್ಲವೂ ಸಫಲವಾದವು.

31 ಒಂದು ಸಾರಿ ಬಾಬಿಲೋನಿನವರು ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿದರು. ಅವರು ದೇಶದಲ್ಲಿ ಆದ ಅದ್ಭುತ ವಿಷಯದ ಬಗ್ಗೆ ವಿಚಾರಿಸಿದರು. ಅವರು ಹಿಜ್ಕೀಯನ ಬಳಿಗೆ ಬಂದಾಗ ದೇವರು ಅವನನ್ನು ಪರೀಕ್ಷಿಸುವುದಕ್ಕಾಗಿಯೂ ಅವನ ಹೃದಯದಲ್ಲಿದ್ದ ಪ್ರತಿಯೊಂದು ಆಲೋಚನೆಯನ್ನು ತಿಳಿದುಕೊಳ್ಳುವುದಕ್ಕಾಗಿಯೂ ಅವನನ್ನು ತೊರೆದುಬಿಟ್ಟನು.

32 ಹಿಜ್ಕೀಯನು ಮಾಡಿದ ಇತರ ಕಾರ್ಯಗಳೂ ಅವನ ಭಕ್ತಿಕಾರ್ಯಗಳೂ ಆಮೋಚನ ಮಗನಾದ ಯೆಶಾಯನ ದರ್ಶನ ಗ್ರಂಥದಲ್ಲಿ ಬರೆದಿವೆ; ಯೆಹೂದ ಮತ್ತು ಇಸ್ರೇಲ್ ರಾಜರ ಚರಿತ್ರೆ ಪುಸ್ತಕದಲ್ಲೂ ಬರೆದಿರುತ್ತವೆ. 33 ಹಿಜ್ಕೀಯನು ಸತ್ತು ತನ್ನ ಪೂರ್ವಿಕರ ಬಳಿಗೆ ಸೇರಿದಾಗ ಅವನ ಶವವನ್ನು ದಾವೀದ ವಂಶದವರ ಕುಟುಂಬ ಸ್ಮಶಾನ ಭೂಮಿಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನು ಸತ್ತಾಗ ಎಲ್ಲಾ ಯೆಹೂದದ ಜನರೂ ಜೆರುಸಲೇಮಿನ ಜನರೂ ಅವನಿಗೆ ಹೆಚ್ಚಾದ ಗೌರವವನ್ನು ಕೊಟ್ಟರು. ಹಿಜ್ಕೀಯನ ಬದಲು ಅವನ ಮಗನಾದ ಮನಸ್ಸೆಯು ಅರಸನಾದನು.

ಯೆಹೂದದ ಅರಸನಾದ ಮನಸ್ಸೆ

33 ಮನಸ್ಸೆಯು ಪಟ್ಟಕ್ಕೆ ಬಂದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ರಾಜನಾಗಿ ಐವತ್ತೈದು ವರ್ಷ ರಾಜ್ಯಭಾರ ಮಾಡಿದನು. ಯೆಹೋವನು ದುಷ್ಟತನವೆಂದು ಪರಿಗಣಿಸಿದ್ದನ್ನೇ ಮನಸ್ಸೆ ಮಾಡಿದನು. ಇಸ್ರೇಲರು ಆ ದೇಶವನ್ನು ವಶಪಡಿಸುವದಕ್ಕಿಂತ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನರ ಪಾಪಕೃತ್ಯಗಳನ್ನು ಅನುಸರಿಸಿದನು. ಮನಸ್ಸೆಯ ತಂದೆಯಾದ ಹಿಜ್ಕೀಯನು ಕೆಡವಿದ ಉನ್ನತಸ್ಥಳಗಳನ್ನು ಅವನು ಮತ್ತೆ ಕಟ್ಟಿಸಿದನು. ಬಾಳ್ ದೇವರ ವೇದಿಕೆಯನ್ನು ಕಟ್ಟಿಸಿ ಅಶೇರಸ್ತಂಭಗಳನ್ನು ನಿಲ್ಲಿಸಿದನು. ಆಕಾಶದ ನಕ್ಷತ್ರಸಮೂಹಗಳನ್ನು ಪೂಜಿಸಿದನು. ದೇವಾಲಯದೊಳಗೆ ಮನಸ್ಸೆಯು ವಿಗ್ರಹಗಳಿಗೆ ವೇದಿಕೆಯನ್ನು ಕಟ್ಟಿಸಿದನು. ಯೆಹೋವನು ದೇವಾಲಯದ ವಿಷಯವಾಗಿ, “ನನ್ನ ಹೆಸರು ಜೆರುಸಲೇಮಿನಲ್ಲಿ ನಿರಂತರಕ್ಕೂ ಸ್ಥಾಪಿತವಾಗುವದು” ಎಂದು ಹೇಳಿದ್ದನು. ಮನಸ್ಸೆಯು ದೇವಾಲಯದ ಎರಡು ಅಂಗಳಗಳಲ್ಲಿ ಎಲ್ಲಾ ನಕ್ಷತ್ರಸಮೂಹಗಳಿಗೆ ವೇದಿಕೆಗಳನ್ನು ಕಟ್ಟಿಸಿದನು. ಬೆನ್‌ಹಿನ್ನೋಮ್ ಕಣಿವೆಯಲ್ಲಿ ಮನಸ್ಸೆಯು ತನ್ನ ಸ್ವಂತ ಮಕ್ಕಳನ್ನು ಅನ್ಯದೇವತೆಗಳಿಗೆ ಯಜ್ಞವಾಗಿ ಅರ್ಪಿಸಿದನು; ಮಾಟಮಂತ್ರಗಳನ್ನು ಮಾಡಿದನು; ಪಿಶಾಚಿಗಳೊಂದಿಗೂ ದುರಾತ್ಮಗಳೊಂದಿಗೂ ಸಂಪರ್ಕವನ್ನಿಟ್ಟುಕೊಂಡಿದ್ದನು. ಯೆಹೋವನು ಕೆಟ್ಟದ್ದು ಎಂದು ಹೇಳಿದ್ದನ್ನೆಲ್ಲಾ ಅವನು ಮಾಡಿದ್ದರಿಂದ ಆತನು ಅವನ ಮೇಲೆ ಬಹಳವಾಗಿ ಕೋಪಗೊಂಡನು. ಮನಸ್ಸೆಯು ಒಂದು ವಿಗ್ರಹವನ್ನು ಯೆಹೋವನ ಮಂದಿರದೊಳಗೆ ಪ್ರತಿಷ್ಠಾಪಿಸಿದನು. ಆ ಮಂದಿರದ ಬಗ್ಗೆ ಯೆಹೋವನು ದಾವೀದನೊಂದಿಗೂ ಸೊಲೊಮೋನನೊಂದಿಗೂ ಮಾತನಾಡಿ, “ನನ್ನ ಹೆಸರನ್ನು ಈ ಆಲಯದಲ್ಲಿಯೂ ಜೆರುಸಲೇಮಿನಲ್ಲಿಯೂ ಸ್ಥಾಪಿಸುವೆನು. ಈ ಪಟ್ಟಣವನ್ನು ಎಲ್ಲಾ ಕುಲಗಳ ಎಲ್ಲಾ ಪಟ್ಟಣಗಳಿಂದ ಆರಿಸಿಕೊಂಡಿರುತ್ತೇನೆ. ಇಲ್ಲಿ ನನ್ನ ನಾಮಸ್ಮರಣೆಯು ಸದಾಕಾಲ ನಡಿಯುವುದು. ನಾನು ಮೋಶೆಯ ಮೂಲಕ ಕೊಟ್ಟಿರುವ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ಇಸ್ರೇಲರು ವಿಧೇಯರಾಗಿರುವುದಾದರೆ, ಅವರ ಪೂರ್ವಿಕರಿಗೆ ಕೊಡಲು ನಾನು ಆರಿಸಿಕೊಂಡ ದೇಶದಿಂದ ಅವರನ್ನು ತೆಗೆದುಬಿಡುವುದೇ ಇಲ್ಲ” ಎಂದು ಹೇಳಿದನು.

ಮನಸ್ಸೆಯು ಯೆಹೂದದ ಜನರನ್ನೂ ಜೆರುಸಲೇಮಿನಲ್ಲಿದ್ದ ಜನರನ್ನೂ ಕೆಟ್ಟಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸಿದನು. ಇಸ್ರೇಲರು ಬರುವದಕ್ಕಿಂತ ಮೊದಲು ಆ ದೇಶದಲ್ಲಿದ್ದ ಜನರಿಗಿಂತಲೂ ಅತ್ಯಂತ ಕೆಟ್ಟವನಾಗಿ ವರ್ತಿಸಿದನು. ಆ ದೇಶದಲ್ಲಿದ್ದ ಜನರನ್ನು ಯೆಹೋವನು ನಾಶಮಾಡಿದ್ದನು.

10 ಯೆಹೋವನು ಮನಸ್ಸೆಯ ಮತ್ತು ಅವನ ಜನರ ಸಂಗಡ ಮಾತಾಡಿದರೂ ಅವರು ಆತನ ಮಾತನ್ನು ಕೇಳಲಿಲ್ಲ. 11 ಆದ್ದರಿಂದ ಅಶ್ಶೂರ್ ದೇಶದ ಅರಸನ ಸೇನಾಪತಿಗಳು ಬಂದು ಯೆಹೂದದ ಮೇಲೆ ಯುದ್ಧ ಮಾಡುವಂತೆ ಯೆಹೋವನು ಮಾಡಿದನು. ಆ ಸೇನಾಪತಿಗಳು ಮನಸ್ಸೆಯನ್ನು ಬಂಧಿಸಿ ಸೆರೆಯಲ್ಲಿಟ್ಟರು. ಅವನಿಗೆ ಕೊಂಡಿಗಳನ್ನು ಸಿಕ್ಕಿಸಿ ಬೇಡಿಹಾಕಿ ಬಾಬಿಲೋನಿಗೆ ಒಯ್ದರು.

12 ಈ ಸಂಕಷ್ಟಗಳು ಅವನಿಗೆ ಒದಗಿದಾಗ ಅವನು ದೇವರಾದ ಯೆಹೋವನನ್ನು ತನಗೆ ಸಹಾಯ ಮಾಡಲು ಬೇಡಿದನು. ತನ್ನ ಪೂರ್ವಿಕರ ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡನು. 13 ಯೆಹೋವನು ಮನಸ್ಸೆಯ ಬೇಡಿಕೆಗಳನ್ನು ಕೇಳಿ ಅವನಿಗೆ ಕರುಣೆ ತೋರಿದನು. ಅವನು ಜೆರುಸಲೇಮಿಗೂ ತನ್ನ ಸಿಂಹಾಸನಕ್ಕೂ ಹಿಂತಿರುಗಿ ಬರುವಂತೆ ಮಾಡಿದನು. ಆಗ ಮನಸ್ಸೆಯು ಯೆಹೋವನೇ ನಿಜ ದೇವರೆಂದು ಅರಿತನು.

14 ಇದಾದ ನಂತರ ಮನಸ್ಸೆಯು ದಾವೀದನಗರಕ್ಕೆ ಹೊರಗಿನ ಗೋಡೆಯನ್ನು ಕಟ್ಟಿಸಿದನು. ಈ ಗೋಡೆಯು ಕಿದ್ರೋನಿನಲ್ಲಿದ್ದ ಗೀಹೋನ್ ಬುಗ್ಗೆಯ ಪಶ್ಚಿಮ ದಿಕ್ಕಿನಿಂದ ಮೀನು ಬಾಗಿಲಿನ ಮುಂದೆ ಹೋಗಿ, ಅಲ್ಲಿಂದ ಓಫೆಲ್ ಗುಡ್ಡಕ್ಕೆ ಸುತ್ತುಹಾಕಿತು. ಅವನು ಗೋಡೆಯನ್ನು ಬಹು ಎತ್ತರವಾಗಿ ಕಟ್ಟಿದನು. ಆಮೇಲೆ ಯೆಹೂದದಲ್ಲಿದ್ದ ಎಲ್ಲಾ ಕೋಟೆಗಳಲ್ಲಿ ಸೇನಾಪತಿಗಳನ್ನು ನೇಮಿಸಿದನು; 15 ಅನ್ಯದೇವತೆಗಳ ವಿಗ್ರಹವನ್ನು ತೆಗಿಸಿದನು; ದೇವಾಲಯದೊಳಗಿದ್ದ ವಿಗ್ರಹವನ್ನು ತೆಗೆದುಹಾಕಿಸಿದನು. ಜೆರುಸಲೇಮಿನಲ್ಲಿಯೂ ದೇವಾಲಯದ ಗುಡ್ಡದಲ್ಲಿಯೂ ಪ್ರತಿಷ್ಠಾಪಿಸಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಕಟ್ಟಿಸಿದ ಎಲ್ಲಾ ವೇದಿಕೆಗಳನ್ನು ಜೆರುಸಲೇಮಿನಿಂದ ಹೊರಗೆ ಬಿಸಾಡಿಸಿದನು. 16 ಯೆಹೋವನ ಯಜ್ಞವೇದಿಕೆಯನ್ನು ಕಟ್ಟಿಸಿ ಅದರಲ್ಲಿ ಸಮಾಧಾನಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿದನು. ಯೆಹೂದದಲ್ಲಿದ್ದ ಎಲ್ಲಾ ಜನರೂ ದೇವರಾದ ಯೆಹೋವನ ಸೇವೆಮಾಡುವಂತೆ ಆಜ್ಞೆ ವಿಧಿಸಿದನು. 17 ಜನರು ಉನ್ನತಸ್ಥಳಗಳಲ್ಲಿ ಯಜ್ಞವನ್ನು ಮಾಡುತ್ತಿದ್ದರೂ ಅದನ್ನು ಯೆಹೋವನಿಗೋಸ್ಕರವೇ ಮಾಡುತ್ತಿದ್ದರು.

18 ಮನಸ್ಸೆ ಮಾಡಿದ ಇತರ ಕಾರ್ಯಗಳು ಮತ್ತು ಅವನು ಯೆಹೋವನಿಗೆ ಮಾಡಿದ ಪ್ರಾರ್ಥನೆ, ದೇವದರ್ಶಿಗಳು ಅವನಿಗೆ ಇಸ್ರೇಲರ ದೇವರಾದ ಯೆಹೋವನ ಸಂದೇಶವನ್ನು ಕೊಟ್ಟ ವಿಷಯವೆಲ್ಲಾ ಇಸ್ರೇಲ್ ರಾಜರ ಚರಿತ್ರೆ ಎಂಬ ಗ್ರಂಥದಲ್ಲಿ ಬರೆಯಲ್ಪಟ್ಟಿದೆ. 19 ಮನಸ್ಸೆಯ ಪ್ರಾರ್ಥನೆಯ ವಿಷಯವಾಗಿಯೂ ದೇವರ ಪ್ರತಿಕ್ರಿಯೆಯ ವಿಷಯವಾಗಿಯೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿದೆ. ಮಾತ್ರವಲ್ಲದೆ ಮನಸ್ಸೆಯು ದೇವರಿಗೆ ವಿರುದ್ಧವಾಗಿ ಮಾಡಿದ ಘೋರಕೃತ್ಯಗಳೂ ಪಶ್ಚಾತ್ತಾಪಪಡುವ ಮೊದಲು ಎಲ್ಲೆಲ್ಲಿ ಅನ್ಯದೇವತೆಗಳಿಗೆ ಪೂಜಾಸ್ಥಳಗಳನ್ನು ಮಾಡಿದ್ದನೆಂದೂ ಎಲ್ಲೆಲ್ಲಿ ಅಶೇರಸ್ತಂಭಗಳನ್ನು ನೆಡಿಸಿದ್ದನೆಂದೂ ದೇವದರ್ಶಿಗಳ ಚರಿತ್ರೆಯಲ್ಲಿ ಬರೆಯಲಾಗಿದೆ. 20 ಮನಸ್ಸೆಯು ಸತ್ತು ತನ್ನ ಪೂರ್ವಿಕರ ಬಳಿಗೆ ಸೇರಿದಾಗ ಅವನ ಶವವನ್ನು ಅವನ ಸ್ವಂತ ಅರಮನೆಯಲ್ಲಿ ಸಮಾಧಿಮಾಡಿದರು. ಮನಸ್ಸೆಯ ಮಗನಾದ ಅಮೋನನು ಅವನ ಬದಲಿಗೆ ಅರಸನಾದನು.

ಯೆಹೂದದ ಅರಸನಾದ ಅಮೋನ

21 ಅಮೋನನು ಪಟ್ಟಕ್ಕೆ ಬರುವಾಗ ಇಪ್ಪತ್ತೆರಡು ವರ್ಷ ಪ್ರಾಯದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಎರಡು ವರ್ಷ ರಾಜ್ಯವನ್ನಾಳಿದನು. 22 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು. ಮನಸ್ಸೆಯು ಯೆಹೋವನಿಗೆ ಇಷ್ಟವಾದುದ್ದನ್ನು ಮಾಡಿದಂತೆ ಅವನು ಮಾಡಲಿಲ್ಲ. ಅವನ ತಂದೆಯಾದ ಮನಸ್ಸೆಯು ಮಾಡಿದ ಎರಕದ ಬೊಂಬೆಗಳಿಗೂ ಕೆತ್ತನೆ ಕೆಲಸದ ವಿಗ್ರಹಗಳಿಗೂ ಅಡ್ಡಬಿದ್ದನು. 23 ಮನಸ್ಸೆಯು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡಂತೆ ಅಮೋನನು ತಗ್ಗಿಸಿಕೊಳ್ಳಲಿಲ್ಲ. ಅಮೋನನು ಹೆಚ್ಚೆಚ್ಚಾಗಿ ಪಾಪಗಳನ್ನು ಮಾಡಿದನು. 24 ಅಮೋನನ ಸೇವಕರು ಸಂಚುಮಾಡಿ ಅವನ ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. 25 ಆದರೆ ಅರಸನಾದ ಅಮೋನನಿಗೆ ವಿರೋಧವಾಗಿ ಎದ್ದ ಸೇವಕರನ್ನೆಲ್ಲಾ ಯೆಹೂದದ ಜನರು ಸಂಹರಿಸಿದರು. ಅನಂತರ ಅಮೋನನ ಮಗನಾದ ಯೋಷೀಯನನ್ನು ತಮ್ಮ ಅರಸನನ್ನಾಗಿ ಆರಿಸಿದರು.

ಯೆಹೂದದ ಅರಸಾನದ ಯೋಷೀಯ

34 ಯೋಷೀಯನು ಅರಸನಾದಾಗ ಎಂಟು ವರ್ಷ ಪ್ರಾಯದವನಾಗಿದ್ದನು. ಅವನು ಮೂವತ್ತೊಂದು ವರ್ಷದ ತನಕ ಜೆರುಸಲೇಮಿನಲ್ಲಿ ರಾಜ್ಯಭಾರವನ್ನು ಮಾಡಿದನು. ಯೋಷೀಯನು ಯೆಹೋವನಿಗೆ ಮೆಚ್ಚಿಕೆಯಾದ ಕಾರ್ಯಗಳನ್ನೇ ಮಾಡಿದನು. ಅವನು ತನ್ನ ಪೂರ್ವಿಕನಾದ ದಾವೀದನಂತೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. ಅವನು ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ಬಿಟ್ಟುಬಿಡಲಿಲ್ಲ. ಅವನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ತನ್ನ ಪಿತೃವಾದ ದಾವೀದನು ಅನುಸರಿಸಿದ್ದ ದೇವರನ್ನು ಅನುಸರಿಸಿದನು. ಆಗ ಅವನು ಇನ್ನೂ ಎಳೆಯ ಪ್ರಾಯದವನಾಗಿದ್ದನು. ಅವನು ಪಟ್ಟಕ್ಕೆ ಬಂದ ಹನ್ನೆರಡನೆಯ ವರ್ಷದಲ್ಲಿ, ಜೆರುಸಲೇಮಿನಲ್ಲಿ ಮತ್ತು ಯೆಹೂದದಲ್ಲಿದ್ದ ಎತ್ತರವಾದ ಸ್ಥಳಗಳನ್ನೂ ಅಶೇರಸ್ತಂಭಗಳನ್ನೂ ಎರಕದ ಮತ್ತು ಕೆತ್ತನೆಯ ವಿಗ್ರಹಗಳನ್ನೂ ನಾಶಮಾಡಿದನು. ಜನರು ಬಾಳ್ ದೇವರ ವಿಗ್ರಹಗಳನ್ನೂ ಯಜ್ಞವೇದಿಕೆಗಳನ್ನೂ ಯೋಷೀಯನ ಮುಂದೆಯೇ ಕೆಡವಿಹಾಕಿದರು. ಆಮೇಲೆ ಯೋಷೀಯನು ಉನ್ನತಸ್ಥಳದಲ್ಲಿದ್ದ ಧೂಪವೇದಿಕೆಯನ್ನು ಕೆಡವಿ ಹಾಕಿ, ವಿಗ್ರಹಗಳನ್ನೆಲ್ಲಾ ಒಡೆದು ಪುಡಿಮಾಡಿ ಬಾಳ್ ದೇವರ ಪೂಜಾರಿಗಳ ಸಮಾಧಿಯ ಮೇಲೆ ಚೆಲ್ಲಿದನು. ಯೋಷೀಯನು ಬಾಳ್ ದೇವರ ವಿಗ್ರಹಗಳನ್ನೂ ಪೂಜಾರಿಯವರ ಎಲುಬುಗಳನ್ನೂ ಅವರ ವೇದಿಕೆಗಳ ಮೇಲೆಯೇ ಸುಟ್ಟುಬಿಟ್ಟನು. ಹೀಗೆ ಅವನು ಯೆಹೂದವನ್ನು ಮತ್ತು ಜೆರುಸಲೇಮನ್ನು ಶುಚಿಗೊಳಿಸಿದನು ಮತ್ತು ಶುದ್ಧೀಕರಿಸಿದನು. ಅದೇ ಪ್ರಕಾರ ಎಫ್ರಾಯೀಮ್, ಮನಸ್ಸೆ, ಸಿಮೆಯೋನ್ ಮತ್ತು ನಫ್ತಾಲಿ ಪ್ರಾಂತ್ಯಗಳ ಉದ್ದಕ್ಕೂ ಮಾಡಿದನು. ಆ ಪಟ್ಟಣಗಳ ಸಮೀಪದಲ್ಲಿದ್ದ ಹಾಳುಬಿದ್ದವುಗಳಿಗೂ ಅವನು ಹಾಗೆಯೇ ಮಾಡಿದನು. ಅಲ್ಲಿಂದ ಮುಂದೆ ಇಸ್ರೇಲ್ ದೇಶದಲ್ಲೂ ಪೂಜಾಸ್ಥಳಗಳನ್ನು ಕೆಡವಿ, ಅಶೇರಸ್ತಂಭಗಳನ್ನು ತುಂಡರಿಸಿ ಎರಕದ ಕೆತ್ತನೆಯ ವಿಗ್ರಹಗಳನ್ನು ಪುಡಿಮಾಡಿ, ಧೂಪವೇದಿಕೆಗಳನ್ನೆಲ್ಲಾ ನಾಶಮಾಡಿ ಜೆರುಸಲೇಮಿಗೆ ಹಿಂತಿರುಗಿದನು.

ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೋಷೀಯನು ಶಾಫಾನ್, ಮಾಸೇಯ ಮತ್ತು ಯೋವಾಹ ಇವರನ್ನು ತನ್ನ ದೇವರಾದ ಯೆಹೋವನ ಆಲಯವನ್ನು ಸರಿಪಡಿಸಲು ಕಳುಹಿಸಿದನು. ಶಾಫಾನನ ತಂದೆಯ ಹೆಸರು ಅಚಲ್ಯ. ಮಾಸೇಯನು ನಗರದ ನಾಯಕನಾಗಿದ್ದನು. ಯೋವಾಹನ ತಂದೆಯ ಹೆಸರು ಯೆಹೋವಾಹಾಜ್. ಯೋವಾಹನು ರಾಜಲೇಖಕನೂ ಆಗಿದ್ದನು.

ಯೆಹೂದವನ್ನು ಮತ್ತು ದೇವಾಲಯವನ್ನು ಶುಚಿಮಾಡುವ ಉದ್ದೇಶದಿಂದ ಯೋಷೀಯನು ದೇವಾಲಯದ ದುರಸ್ತಿಕಾರ್ಯಕ್ಕೆ ಕೈ ಹಾಕಿದನು. ಜನರು ದೇವಾಲಯದ ದುರಸ್ತಿಗಾಗಿ ಅರ್ಪಿಸಿದ್ದ ಕಾಣಿಕೆಯನ್ನು ಅವರು ಮಹಾಯಾಜಕನಾದ ಹಿಲ್ಕೀಯನಿಗೆ ತಂದುಕೊಟ್ಟರು. ಮನಸ್ಸೆ, ಎಫ್ರಾಯೀಮ್ ಮತ್ತು ಇಸ್ರೇಲ್ ರಾಜ್ಯದ ಜನರು ಕೊಟ್ಟ ಕಾಣಿಕೆಯನ್ನು ದ್ವಾರಪಾಲಕರಾದ ಲೇವಿಯರು ಒಟ್ಟುಗೂಡಿಸಿದರು. ಯೆಹೂದ, ಬೆನ್ಯಾಮೀನ್ ಕುಲದವರೂ ಜೆರುಸಲೇಮಿನಲ್ಲಿ ವಾಸಿಸುವರೂ ಕೊಟ್ಟ ಕಾಣಿಕೆಗಳನ್ನು ಅವರು ತೆಗೆದುಕೊಂಡರು. 10 ದೇವಾಲಯದ ಕೆಲಸ ಮಾಡಿದವರಿಗೆ ಲೇವಿಯರು ಹಣವನ್ನು ಕೊಟ್ಟರು. 11 ಬಡಗಿಗಳಿಗೂ ಮೇಸ್ತ್ರಿಗಳಿಗೂ ಈ ಹಣದಿಂದ ಸಂಬಳ ಕೊಟ್ಟರು; ಬೇಕಾಗಿದ್ದ ಕಲ್ಲುಗಳನ್ನೂ ಮರದ ತೊಲೆಗಳನ್ನೂ ಇತರ ವಸ್ತುಗಳನ್ನೂ ಕೊಂಡುಕೊಂಡರು. ಹಿಂದಿನ ಕಾಲದಲ್ಲಿ ಯೆಹೂದದ ಅರಸರು ಯೆಹೋವನ ದೇವಾಲಯವನ್ನು ಸರಿಪಡಿಸುವುದರ ಬಗ್ಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಆದ್ದರಿಂದ ಕಟ್ಟಡವು ಹಳೆಯದಾಗಿ ಬೀಳುವ ಸ್ಥಿತಿಯಲ್ಲಿತ್ತು. 12-13 ಕೆಲಸಗಾರರು ನಂಬಿಗಸ್ತಿಕೆಯಿಂದ ಕೆಲಸ ಮಾಡಿದರು. ಅವರು ಮೇಲ್ವಿಚಾರಕರು ಯಹತ್ ಮತ್ತು ಓಬದ್ಯ. ಇವರು ಲೇವಿಯರಾಗಿದ್ದರು ಮತ್ತು ಮೆರಾರೀಯ ಸಂತತಿಯವರಾಗಿದ್ದರು. ಇತರ ಮೇಲ್ವಿಚಾರಕರು ಯಾರೆಂದರೆ: ಜೆಕರ್ಯ ಮತ್ತು ಮೆಷುಲ್ಲಾಮ್. ಇವರು ಕೆಹಾತ್ಯನ ಸಂತತಿಯವರಾಗಿದ್ದರು. ವಾದ್ಯಗಳನ್ನು ಬಾರಿಸುವುದರಲ್ಲಿ ನಿಪುಣರಾದ ಲೇವಿಯರೂ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು. ಇತರ ಕೆಲವು ಲೇವಿಯರು, ಆ ಯೋಜನೆಯ ಅಧಿಕಾರಿಗಳಾಗಿಯೂ ಕಾರ್ಯದರ್ಶಿಗಳಾಗಿಯೂ ದ್ವಾರಪಾಲಕರಾಗಿಯೂ ನೇಮಕ ಮಾಡಲ್ಪಟ್ಟವರಾಗಿದ್ದರು.

ಧರ್ಮಶಾಸ್ತ್ರವು ದೊರೆತದ್ದು

14 ದೇವಾಲಯದೊಳಗೆ ಶೇಖರಿಸಿಟ್ಟಿದ್ದ ಹಣವನ್ನು ಲೇವಿಯರು ತಂದುಕೊಟ್ಟರು. ಅದೇ ಸಮಯದಲ್ಲಿ ಮಹಾಯಾಜಕನಾದ ಹಿಲ್ಕೀಯನು ಮೋಶೆಯ ಧರ್ಮಶಾಸ್ತ್ರದ ಪ್ರತಿಯೊಂದನ್ನು ದೇವಾಲಯದಲ್ಲಿ ಕಂಡನು. 15 ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಯೆಹೋವನ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿ ಅದನ್ನು ಕೊಟ್ಟನು. 16 ಶಾಫಾನನು ಅದನ್ನು ಅರಸನಾದ ಯೋಷೀಯನಿಗೆ ತಂದು ಅದು ದೊರೆತ ವಿಷಯವನ್ನು ತಿಳಿಸಿದನು. “ನೀನು ಹೇಳಿದ ಪ್ರಕಾರವೇ ನಿನ್ನ ಸೇವಕರು ಮಾಡುತ್ತಿದ್ದಾರೆ. 17 ದೇವಾಲಯದೊಳಗಿದ್ದ ಹಣವನ್ನು ಅವರು ತೆಗೆದು ಅದನ್ನು ಕೆಲಸಗಾರರಿಗೂ ಮೇಲ್ವಿಚಾರಕರಿಗೂ ಕೊಡುತ್ತಿದ್ದಾರೆ. ಯಾಜಕನಾದ ಹಿಲ್ಕೀಯನು ಈ ಪುಸ್ತಕವನ್ನು ನನಗೆ ಕೊಟ್ಟನು” 18 ಎಂದು ಹೇಳಿ ಆ ಪುಸ್ತಕವನ್ನು ಓದತೊಡಗಿದನು. ಅವನು ಅರಸನ ಮುಂದೆ ನಿಂತುಕೊಂಡು ಓದುತ್ತಿರಲು 19 ಅರಸನಾದ ಯೋಷೀಯನು ಧರ್ಮಶಾಸ್ತ್ರದ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡನು. 20 ಆಗ ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಕಾರ್ಯದರ್ಶಿಯಾದ ಶಾಫಾನ್ ಮತ್ತು ಸೇವಕನಾದ ಅಸಾಯ ಇವರಿಗೆ ಹೇಳಿದ್ದೇನೆಂದರೆ, 21 “ಹೋಗಿ ನನ್ನ ವಿಷಯವಾಗಿಯೂ ಇಸ್ರೇಲ್ ಮತ್ತು ಯೆಹೂದದಲ್ಲಿರುವ ಜನರಿಗೋಸ್ಕರವಾಗಿಯೂ ಯೆಹೋವನಲ್ಲಿ ವಿಚಾರಿಸಿರಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಯಾಕೆಂದರೆ ನಮ್ಮ ಪೂರ್ವಿಕರು ಆತನ ಧರ್ಮಶಾಸ್ತ್ರದ ಪ್ರಕಾರ ನಡೆದುಕೊಂಡಿಲ್ಲ. ಈ ಪುಸ್ತಕದಲ್ಲಿ ಮಾಡಬೇಕೆಂದು ಹೇಳಿದ್ದನ್ನು ಅವರು ಮಾಡದೆ ಹೋಗಿದ್ದಾರೆ” ಎಂದು ಹೇಳಿದನು.

22 ಹಿಲ್ಕೀಯನೂ ಅರಸನ ಸೇವಕರೂ ಪ್ರವಾದಿನಿಯಾಗಿದ್ದ ಹುಲ್ದಳ ಬಳಿಗೆ ಹೋದರು. ಆಕೆ ತೊಕ್ಹತನ ಮಗನಾದ ಶಲ್ಲೂಮನ ಹೆಂಡತಿಯಾಗಿದ್ದಳು. ತೊಕ್ಹತನು ಹಸ್ರನ ಮಗ. ಇವನು ಅರಸನ ಬಟ್ಟೆಬರೆಗಳ ಮುಖ್ಯಸ್ತನಾಗಿದ್ದನು. ಹುಲ್ದಳು ಜೆರುಸಲೇಮಿನ ಹೊಸ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಳು. ಅರಸನು ಹೇಳಿದ್ದನ್ನೆಲ್ಲಾ ಸೇವಕರು ಆಕೆಗೆ ತಿಳಿಸಿದರು. 23 ಹುಲ್ದಳು ಅವರಿಗೆ, “ಅರಸನಾದ ಯೋಷೀಯನಿಗೆ ಹೋಗಿ ತಿಳಿಸಿರಿ. 24 ಯೆಹೋವನು ಹೇಳುವುದೇನೆಂದರೆ, ‘ನಾನು ಈ ಸ್ಥಳಕ್ಕೂ ಇಲ್ಲಿ ವಾಸಿಸುವವರಿಗೂ ಸಂಕಟವನ್ನು ಬರಮಾಡುವೆನು. ಯೆಹೂದ ದೇಶದ ಅರಸನ ಮುಂದೆ ಓದಿದಂಥ ಪುಸ್ತಕದಲ್ಲಿ ಬರೆಯಿಸಿದ ಎಲ್ಲಾ ಶಾಪಗಳನ್ನು ನಾನು ಬರಮಾಡುವೆನು. 25 ಯಾಕೆಂದರೆ ಜನರು ನನ್ನನ್ನು ತೊರೆದು ಸುಳ್ಳುದೇವರುಗಳಿಗೆ ಧೂಪಹಾಕಿದರು. ಅವರು ತಮ್ಮ ಕೆಟ್ಟಕಾರ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿಯನ್ನು ಈ ಸ್ಥಳದ ಮೇಲೆ ಸುರಿಸುವೆನು. ಉರಿಯುವ ಬೆಂಕಿಯಂತಿರುವ ನನ್ನ ಕೋಪಾಗ್ನಿಯನ್ನು ಆರಿಸಲು ಸಾಧ್ಯವಿಲ್ಲ.’

26 “ಆದರೆ ಯೆಹೋವನನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಾದ ಯೋಷೀಯನಿಗೆ ಹೀಗೆ ಹೇಳಿರಿ: ‘ನೀನು ಸ್ವಲ್ಪಕಾಲದ ಹಿಂದೆ ಕೇಳಿದ ವಿಷಯಗಳ ಬಗ್ಗೆ ಇಸ್ರೇಲಿನ ಯೆಹೋವನು ಹೇಳುವುದೇನೆಂದರೆ, 27 ಯೋಷೀಯನೇ, ನೀನು ನನ್ನ ಮಾತುಗಳನ್ನು ಕೇಳಿದಾಗ ನನ್ನ ಮುಂದೆ ತಗ್ಗಿಸಿಕೊಂಡು ಪಶ್ಚಾತ್ತಾಪಪಟ್ಟು ನಿನ್ನ ಬಟ್ಟೆಗಳನ್ನು ಹರಿದುಕೊಂಡೆ. ನನ್ನ ಮುಂದೆ ನೀನು ಗೋಳಾಡಿದೆ. ನಿನ್ನ ಹೃದಯವು ಮೃದುವಾದದ್ದರಿಂದ, ನಿನ್ನನ್ನು ಲಕ್ಷಿಸಿದೆನು. 28 ನಿನ್ನನ್ನು ನಿನ್ನ ಪೂರ್ವಿಕರ ಬಳಿಗೆ ತೆಗೆದುಕೊಳ್ಳುತ್ತೇನೆ. ನಿನ್ನ ಪ್ರಾರ್ಥನೆಯನ್ನು ನಾನು ಕೇಳಿದೆ. ನೀನು ನಿನ್ನ ಸಮಾಧಿಗೆ ಸಮಾಧಾನದಿಂದ ಸೇರುವೆ. ನಾನು ಈ ಸ್ಥಳದ ಮೇಲೂ ಈ ಸ್ಥಳದಲ್ಲಿ ವಾಸಿಸುವವರ ಮೇಲೂ ತರುವ ಸಂಕಟಗಳಲ್ಲಿ ನೀನು ಒಂದಾನ್ನಾದರೂ ಅನುಭವಿಸುವದಿಲ್ಲ.’” ಹಿಲ್ಕೀಯನೂ ಅರಸನ ಸೇವಕರೂ ಈ ಸಂದೇಶವನ್ನು ಅರಸನಾದ ಯೋಷೀಯನಿಗೆ ತಂದರು.

29 ಅರಸನಾದ ಯೋಷೀಯನು ಯೆಹೂದದ ಮತ್ತು ಜೆರುಸಲೇಮಿನ ಪ್ರಧಾನರನ್ನು ತನ್ನ ಬಳಿಗೆ ಕರೆಯಿಸಿದನು. 30 ಅರಸನೂ ಯೆಹೂದದಲ್ಲಿ ವಾಸಿಸುವ ಜನರೂ ಜೆರುಸಲೇಮಿನಲ್ಲಿ ವಾಸಿಸುವ ಜನರೂ ಯಾಜಕರೂ ಲೇವಿಯರೂ ದೊಡ್ಡವರು ಸಣ್ಣವರು ಎಂಬ ವ್ಯತ್ಯಾಸವಿಲ್ಲದೆ ತಮ್ಮ ಅರಸನೊಂದಿಗೆ ಇದ್ದರು. ಯೋಷೀಯನು ಧರ್ಮಶಾಸ್ತ್ರವನ್ನು ಜನರಿಗೆ ಓದಿ ತಿಳಿಸಿದನು. ಆ ಪುಸ್ತಕವು ದೇವಾಲಯದಲ್ಲಿ ಸಿಕ್ಕಿತ್ತು. 31 ಆಮೇಲೆ ಅರಸನು ತನ್ನ ಸ್ಥಳದಲ್ಲಿ ಎದ್ದುನಿಂತು, ಯೆಹೋವನ ಎಲ್ಲಾ ಕಟ್ಟಳೆಗಳಿಗೆ ವಿಧೇಯನಾಗಿ ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ಅನುಸರಿಸುವುದಾಗಿ ಪ್ರಮಾಣಮಾಡಿದನು. 32 ಆಮೇಲೆ ಎಲ್ಲಾ ಜೆರುಸಲೇಮಿನವರಿಂದಲೂ ಮತ್ತು ಬೆನ್ಯಾಮೀನ್ಯರಿಂದಲೂ ಪ್ರಮಾಣ ಮಾಡಿಸಿದನು. ತಮ್ಮ ಪೂರ್ವಿಕರು ವಿಧೇಯರಾಗಿದ್ದ ದೇವರಿಗೆ ತಾವೂ ವಿಧೇಯರಾಗಿರುವುದಾಗಿ ಅವರು ಪ್ರಮಾಣ ಮಾಡಿದರು. 33 ಇಸ್ರೇಲ್ ಜನರ ಬಳಿ ನಾನಾ ಜನಾಂಗದವರ ವಿಗ್ರಹಗಳಿದ್ದವು. ಆದರೆ ಯೋಷೀಯನು ಆ ವಿಗ್ರಹಗಳನ್ನೆಲ್ಲಾ ನಾಶಮಾಡಿದನು. ಇಸ್ರೇಲರು ದೇವರಾದ ಯೆಹೋವನ ಸೇವೆಮಾಡುವಂತೆ ಯೋಷೀಯನು ಮಾಡಿದನು. ಯೋಷೀಯನು ಬದುಕಿದ್ದಷ್ಟು ಕಾಲ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಸೇವೆಮಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International