Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 28-31

ಯೆಹೂದದ ಅರಸನಾದ ಆಹಾಜ

28 ಆಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿದ್ದು ಹದಿನಾರು ವರ್ಷ ರಾಜ್ಯಭಾರ ಮಾಡಿದನು. ಆಹಾಜನು ತನ್ನ ಪೂರ್ವಿಕನಾದ ದಾವೀದನಂತೆ ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ದೇವರ ಚಿತ್ತದ ಪ್ರಕಾರ ಜೀವಿಸಲಿಲ್ಲ. ಅವನು ಇಸ್ರೇಲರ ಅರಸರಂತೆ ಕೆಟ್ಟದಾರಿಯಲ್ಲಿ ನಡೆದನು. ಅವನು ಎರಕದ ಬೊಂಬೆಗಳನ್ನು ಮಾಡಿಸಿ ಬಾಳ್ ದೇವರ ವಿಗ್ರಹಗಳನ್ನು ಪೂಜಿಸಿದನು. ಬೆನ್‌ಹಿನ್ನೋಮ್ ಕಣಿವೆಯಲ್ಲಿ ಧೂಪಹಾಕಿದನು. ತನ್ನ ಸ್ವಂತ ಮಕ್ಕಳನ್ನು ಬೆಂಕಿಯಲ್ಲಿ ಸುಟ್ಟು ವಿಗ್ರಹಗಳಿಗೆ ಆಹುತಿಕೊಟ್ಟನು. ಆ ದೇಶದ ಜನರು ಮಾಡಿದ ಭಯಂಕರ ಪಾಪಗಳನ್ನು ತಾನೂ ಮಾಡಿದನು. ಇಸ್ರೇಲ್ ಜನರು ಆ ದೇಶವನ್ನು ಪ್ರವೇಶಿಸಿದಾಗ ದೇವರು ಅವರನ್ನು ಹೊರಗೆ ಹೊರಡಿಸಿದ್ದನು. ಆಹಾಜನು ಬೆಟ್ಟದ ಮೇಲೆ ಪ್ರತಿಯೊಂದು ಹಸಿರು ಮರದಡಿಯಲ್ಲಿದ್ದ ಉನ್ನತಸ್ಥಳಗಳಲ್ಲಿ ಧೂಪಹಾಕಿ ಯಜ್ಞಗಳನ್ನರ್ಪಿಸುತ್ತಿದ್ದನು.

5-6 ಆಹಾಜನು ಪಾಪಮಾಡಿದ್ದರಿಂದ ದೇವರು ಅರಾಮ್ಯರನ್ನು ಅವನ ವಿರುದ್ಧವಾಗಿ ಕಳುಹಿಸಿ ಅವನು ಸೋತು ಹೋಗುವಂತೆ ಮಾಡಿದನು. ಅವರಲ್ಲಿ ಬಹುಮಂದಿ ಸೆರೆಹಿಡಿಯಲ್ಪಟ್ಟರು. ಅರಾಮ್ಯರ ಅರಸನು ಅವರನ್ನೆಲ್ಲಾ ದಮಸ್ಕಕ್ಕೆ ಒಯ್ದನು. ಇಸ್ರೇಲರ ಅರಸನಾದ ಪೆಕಹನು ಬಂದು ಆಹಾಜನನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಪೆಕಹನ ತಂದೆಯ ಹೆಸರು ರೆಮಲ್ಯ. ಪೆಕಹನೂ ಅವನ ಸೈನ್ಯವೂ ಯೆಹೂದ ಸೈನಿಕರಲ್ಲಿ ಒಂದೇ ದಿವಸದಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಧೈರ್ಯಶಾಲಿ ಸೈನಿಕರನ್ನು ಕೊಂದರು. ಯೆಹೂದದ ಜನರನ್ನು ಪೆಕಹನು ಸೋಲಿಸಿದನು. ಯಾಕೆಂದರೆ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ವಿಧೇಯರಾಗಲು ನಿರಾಕರಿಸಿದರು. ಎಫ್ರಾಯೀಮಿನ ಜಿಕ್ರಿಯು ಧೈರ್ಯಶಾಲಿಯಾದ ಸಿಪಾಯಿ. ಅವನು ಅರಸನಾದ ಆಹಾಜನ ಮಗನಾದ ಮಾಸೇಯನನ್ನು, ಅರಮನೆಯ ಅಧಿಕಾರಿಯಾದ ಅಜ್ರೀಕಾಮನನ್ನು ಮತ್ತು ಅಧಿಕಾರದಲ್ಲಿ ಅರಸನಿಗೆ ಎರಡನೆಯವನಾಗಿದ್ದ ಎಲ್ಕಾನನನ್ನು ಕೊಂದನು.

ಇಸ್ರೇಲರ ಸೈನ್ಯದವರು ಯೆಹೂದದಲ್ಲಿ ವಾಸಿಸುವ ಅವರ ಸ್ವಂತ ಕುಟುಂಬದವರಲ್ಲಿ ಎರಡು ಲಕ್ಷ ಮಂದಿಯನ್ನು ಸೆರೆಹಿಡಿದರು. ಅವರ ಹೆಂಗಸರು, ಮಕ್ಕಳು ಮತ್ತು ಅಧಿಕವಾದ ಬೆಲೆಬಾಳುವ ವಸ್ತುಗಳನ್ನು ಸೂರೆಮಾಡಿದರು. ಇಸ್ರೇಲರು ಇವರೆಲ್ಲರನ್ನೂ, ಅಮೂಲ್ಯ ವಸ್ತುಗಳನ್ನೂ ಸಮಾರ್ಯಕ್ಕೆ ತಂದರು. ಆಗ ಯೆಹೋವನ ಪ್ರವಾದಿಯವರಲ್ಲೊಬ್ಬನು ಅಲ್ಲಿದ್ದನು. ಅವನ ಹೆಸರು ಓದೇದ್. ಓದೇದನು ಸಮಾರ್ಯಕ್ಕೆ ಬರುತ್ತಿದ್ದ ಇಸ್ರೇಲ್ ಸೈನ್ಯದವರನ್ನು ಎದುರುಗೊಂಡು ಅವರಿಗೆ, “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಯೆಹೂದದ ಜನರು ಸೋತುಹೋಗುವಂತೆ ಮಾಡಿದನು. ಯಾಕೆಂದರೆ ಆತನು ಅವರ ಮೇಲೆ ಸಿಟ್ಟಿಗೆದ್ದಿದ್ದನು. ನೀವು ಯೆಹೂದದ ಜನರನ್ನು ನಿಷ್ಕರುಣೆಯಿಂದ ಕೊಂದುಹಾಕಿದಿರಿ. ಈಗ ದೇವರು ನಿಮ್ಮ ಮೇಲೆ ಕೋಪಗೊಂಡಿದ್ದಾನೆ. 10 ನೀವು ಯೆಹೂದದ ಮತ್ತು ಜೆರುಸಲೇಮಿನ ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಯೋಚಿಸುತ್ತಿದ್ದೀರಿ. ನೀವು ಕೂಡ ಯೆಹೋವನಿಗೆ ವಿರೋಧವಾಗಿ ಪಾಪಮಾಡಲಿಲ್ಲವೇ? ಹೀಗೆ ಮಾಡುವದರಿಂದ ನೀವು ಸಹ ದೇವರ ದೃಷ್ಟಿಯಲ್ಲಿ ಪಾಪಮಾಡುತ್ತಿದ್ದೀರಿ. 11 ಈಗ ನೀವು ನನ್ನ ಮಾತನ್ನು ಕೇಳಿರಿ, ನೀವು ಸೆರೆಹಿಡಿದ ನಿಮ್ಮ ಸಹೋದರ ಸಹೋದರಿಯರನ್ನು ಹಿಂದಕ್ಕೆ ಕಳುಹಿಸಿರಿ. ಯಾಕೆಂದರೆ ಯೆಹೋವನು ನಿಮ್ಮ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ” ಎಂದು ಹೇಳಿದನು.

12 ಆಗ ಇಸ್ರೇಲರ ಸೈನಿಕರು ತಮ್ಮ ಮನೆಗೆ ಯುದ್ಧದಿಂದ ಹಿಂತಿರುಗುವುದನ್ನು ಎಫ್ರಾಯೀಮಿನ ಕೆಲವು ನಾಯಕರು ನೋಡಿದರು. ಆ ನಾಯಕರು ಅವರನ್ನು ಎಚ್ಚರಿಸಿದರು. ಆ ನಾಯಕರುಗಳು ಯಾರೆಂದರೆ: ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರೆಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ ಮತ್ತು ಹೆದ್ಲ್ಯೆಯನ ಮಗನಾದ ಅಮಾಸ. 13 ಈ ನಾಯಕರುಗಳು ಇಸ್ರೇಲರ ಸೈನಿಕರಿಗೆ, “ಯೆಹೂದದೇಶದಿಂದ ಸೆರೆಯವರನ್ನು ಇಲ್ಲಿಗೆ ತರಬೇಡಿ. ನೀವು ಹಾಗೆ ಮಾಡಿದರೆ ಅದು ನಿಮ್ಮ ಪಾಪವನ್ನೂ ದೋಷವನ್ನೂ ಮತ್ತಷ್ಟು ಹೆಚ್ಚಿಸುತ್ತದೆ. ಯೆಹೋವನು ಇಸ್ರೇಲರ ಮೇಲೆ ತುಂಬಾ ಸಿಟ್ಟುಗೊಳ್ಳುವನು” ಎಂದು ಹೇಳಿದರು.

14 ಆಗ ಆ ಸೈನಿಕರು ತಮ್ಮ ಬಳಿಯಲ್ಲಿದ್ದ ಸೆರೆಯವರನ್ನು, ಬೆಲೆಬಾಳುವ ವಸ್ತುಗಳನ್ನು ಆ ನಾಯಕರ ಮತ್ತು ಇಸ್ರೇಲರ ಕೈಯಲ್ಲಿ ಕೊಟ್ಟುಬಿಟ್ಟರು. 15 ಆ ನಾಯಕರುಗಳು ಎದ್ದು ಸೆರೆಯವರಿಗೆ ಸಹಾಯ ಮಾಡಿದರು. ಇಸ್ರೇಲ್ ಸೈನಿಕರು ಸೂರೆಮಾಡಿದ ಬಟ್ಟೆಬರೆಗಳನ್ನು ಈ ನಾಯಕರು ಪಡೆದುಕೊಂಡು ಬೆತ್ತಲೆಯಾಗಿದ್ದ ಸೆರೆಯವರಿಗೆ ಕೊಟ್ಟರು. ಅವರ ಕಾಲಿಗೆ ಕೆರಗಳನ್ನು ಕೊಟ್ಟು, ಊಟೋಪಚಾರಗಳಿಂದ ಸತ್ಕರಿಸಿದರು. ಗಾಯಗೊಂಡವರಿಗೆ ಎಣ್ಣೆ ಹಚ್ಚಿ ಅವರಲ್ಲಿದ್ದ ಬಲಹೀನರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಜೆರಿಕೊವಿನಲ್ಲಿದ್ದ ಅವರವರ ಮನೆಗಳಿಗೆ ಕರೆದುಕೊಂಡು ಹೋದರು. ಜೆರಿಕೊವಿಗೆ “ಖರ್ಜೂರ ಮರಗಳ ಊರು” ಎಂಬ ಹೆಸರಿದೆ. ಅನಂತರ ಆ ನಾಲ್ಕು ಮಂದಿ ನಾಯಕರು ಸಮಾರ್ಯದಲ್ಲಿದ್ದ ತಮ್ಮ ಮನೆಗೆ ಹೋದರು.

16-17 ಅದೇ ಸಮಯದಲ್ಲಿ ಎದೋಮ್ಯರು ಬಂದು ಯೆಹೂದ ಜನರ ಮೇಲೆ ಧಾಳಿಮಾಡಿ ಅವರನ್ನು ಸೋಲಿಸಿದರು. ಯೆಹೂದ ಜನರನ್ನು ಸೆರೆಹಿಡಿದು ತಮ್ಮ ದೇಶಕ್ಕೊಯ್ದರು. ಆಗ ಅರಸನಾದ ಆಹಾಜನು ಅಶ್ಶೂರದ ಅರಸನ ಸಹಾಯ ಕೇಳಿದನು. 18 ಫಿಲಿಷ್ಟಿಯರು ಸಹ ಬೆಟ್ಟಪ್ರದೇಶಗಳ ಪಟ್ಟಣಗಳ ಮೇಲೆಯೂ ಧಾಳಿ ಮಾಡಿದರು. ಬೇತ್ಷಮೆಷ್, ಅಯ್ಯಾಲೋನ್, ಗೆದೇರೋತ್, ಸೋಕೋ, ತಿಮ್ನಾ ಮತ್ತು ಗಿಮ್ಜೋ ಪಟ್ಟಣಗಳನ್ನು ಅವರು ವಶಪಡಿಸಿಕೊಂಡರು. ಅಲ್ಲದೆ ಆ ಪಟ್ಟಣಗಳ ಸುತ್ತಮುತ್ತಲಿನ ಊರುಗಳನ್ನೂ ವಶಪಡಿಸಿಕೊಂಡರು. ಫಿಲಿಷ್ಟಿಯರು ಆ ಪಟ್ಟಣಗಳಲ್ಲಿ ವಾಸ ಮಾಡತೊಡಗಿದರು. 19 ಅರಸನಾದ ಆಹಾಜನು ತನ್ನ ಜನರನ್ನು ಪಾಪಮಾಡಲು ಪ್ರೋತ್ಸಾಹಿಸಿದ್ದಕ್ಕಾಗಿ ಯೆಹೋವನು ಯೆಹೂದ ದೇಶಕ್ಕೆ ಕಷ್ಟವನ್ನು ಕೊಟ್ಟನು. ಆಹಾಜನು ದೇವರಿಗೆ ದ್ರೋಹಮಾಡಿದನು. 20 ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಆಹಾಜನಿಗೆ ಸಹಾಯ ಕೊಡುವ ಬದಲು ಅವನಿಗೇ ಕಷ್ಟಕೊಡಲು ಯೆಹೂದಕ್ಕೆ ಬಂದನು. 21 ಆಹಾಜನು ದೇವರ ಆಲಯದಿಂದಲೂ ರಾಜ ನಿವಾಸದಿಂದಲೂ ಮತ್ತು ರಾಜಕುಮಾರರ ಮನೆಯಿಂದಲೂ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದು ಅಶ್ಶೂರದ ಅರಸನಿಗೆ ಕೊಟ್ಟರೂ ಅಶ್ಶೂರದ ಅರಸನು ಆಹಾಜನಿಗೆ ಸಹಾಯ ಮಾಡದೆ ಹೋದನು.

22 ಆಹಾಜನಿಗೆ ಸಂಕಟ ಬಂದಾಗಲೂ ಇನ್ನೂ ಹೆಚ್ಚಾಗಿ ಪಾಪ ಮಾಡುತ್ತಾ ಯೆಹೋವನಿಗೆ ಇನ್ನೂ ಹೆಚ್ಚಾಗಿ ದ್ರೋಹಿಯಾದನು. 23 ದಮಸ್ಕದ ಜನರು ಆರಾಧಿಸುವ ಆ ದೇವರುಗಳಿಗೆ ಆಹಾಜನು ಯಜ್ಞಗಳನ್ನರ್ಪಿಸಿದನು. ದಮಸ್ಕದ ಜನರು ಆಹಾಜನನ್ನು ಸೋಲಿಸಿದ್ದರು. ಆಗ ಆಹಾಜನು, “ಅರಾಮ್ಯರು ಪೂಜಿಸುವ ದೇವರು ಅವರಿಗೆ ಸಹಾಯ ಮಾಡಿದನು. ಆದ್ದರಿಂದ ನಾನು ಆ ದೇವರಿಗೆ ಯಜ್ಞವನ್ನರ್ಪಿಸಿ ಆರಾಧಿಸಿದರೆ ಆ ದೇವರು ನನಗೂ ಸಹಾಯ ಮಾಡುವನು” ಎಂದುಕೊಂಡನು. ಆಹಾಜನು ಆ ದೇವರುಗಳನ್ನು ಪೂಜಿಸುವುದರ ಮೂಲಕ ತಾನೂ ಪಾಪಮಾಡಿ ತನ್ನ ಪ್ರಜೆಗಳನ್ನೂ ಪಾಪಮಾಡುವದಕ್ಕೆ ಪ್ರೋತ್ಸಾಹಿಸಿದನು.

24 ಇದಲ್ಲದೆ ದೇವಾಲಯದಿಂದ ಉಪಕರಣಗಳನ್ನೆಲ್ಲಾ ಆಹಾಜನು ಹೊರತೆಗೆದು ಅವುಗಳನ್ನು ಒಡೆದು ಚೂರುಚೂರು ಮಾಡಿದನು; ದೇವಾಲಯದ ಬಾಗಿಲನ್ನು ಮುಚ್ಚಿಸಿದನು. ಅವನು ವೇದಿಕೆಗಳನ್ನು ಮಾಡಿಸಿ ಜೆರುಸಲೇಮಿನ ರಸ್ತೆಗಳ ಮೂಲೆ ಮೂಲೆಗಳಲ್ಲಿ ಕಟ್ಟಿಸಿದನು. 25 ಯೆಹೂದದ ಪ್ರತಿಯೊಂದು ಪಟ್ಟಣಗಳಲ್ಲಿ ಆಹಾಜನು ಧೂಪಹಾಕಲು ಮತ್ತು ಬೇರೆ ದೇವರುಗಳನ್ನು ಪೂಜಿಸಲು ಉನ್ನತಸ್ಥಳಗಳನ್ನು ಮಾಡಿಸಿದನು; ಅನ್ಯ ದೇವರುಗಳಿಗೆ ಧೂಪಹಾಕಲು ಜನರನ್ನು ಪ್ರೋತ್ಸಾಹಿಸಿದನು. ಈ ರೀತಿಯಾಗಿ ತನ್ನ ಪೂರ್ವಿಕರು ಆರಾಧಿಸಿದ ದೇವರಾದ ಯೆಹೋವನನ್ನು ಆಹಾಜನು ರೇಗಿಸಿದನು.

26 ಆರಂಭದಿಂದ ಕೊನೆಯ ತನಕ ಆಹಾಜನು ಮಾಡಿದ ಇತರ ಕಾರ್ಯಗಳೆಲ್ಲವನ್ನು ಕುರಿತು ಯೆಹೂದದ ಮತ್ತು ಇಸ್ರೇಲರ ಅರಸರ ಗ್ರಂಥದಲ್ಲಿ ಬರೆದಿರುತ್ತವೆ. 27 ಆಹಾಜನು ಸತ್ತಾಗ ಅವನನ್ನು ಪೂರ್ವಿಕರೊಂದಿಗೆ ಜೆರುಸಲೇಮಿನಲ್ಲಿ ಸಮಾಧಿಮಾಡಿದರು; ಅವನನ್ನು ಇಸ್ರೇಲ್ ರಾಜರುಗಳ ಸ್ಮಶಾನದಲ್ಲಿ ಸಮಾಧಿಮಾಡಲಿಲ್ಲ. ಆಹಾಜನ ಬದಲಿಗೆ ಅವನ ಮಗನಾದ ಹಿಜ್ಕೀಯನು ಅರಸನಾದನು.

ಯೆಹೂದದ ಅರಸನಾದ ಹಿಜ್ಕೀಯ

29 ಹಿಜ್ಕೀಯನು ತನ್ನ ಇಪ್ಪತ್ತೈದನೆಯ ವರ್ಷದಲ್ಲಿ ಪಟ್ಟಕ್ಕೆ ಬಂದನು. ಅವನು ಜೆರುಸಲೇಮಿನಲ್ಲಿದ್ದುಕೊಂಡು ಇಪ್ಪತ್ತೊಂಭತ್ತು ವರ್ಷ ರಾಜ್ಯಭಾರ ಮಾಡಿದನು. ಅವನ ತಾಯಿ ಜೆಕರ್ಯನ ಮಗಳಾದ ಅಬೀಯಳು. ಹಿಜ್ಕೀಯನು ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನಿಗೆ ಸರಿಯಾಗಿ ನಡೆದುಕೊಂಡನು. ಅವನು ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು.

ಹಿಜ್ಕೀಯನು ದೇವಾಲಯದ ಬಾಗಿಲುಗಳನ್ನು ದುರಸ್ತಿಮಾಡಿ ಭದ್ರಪಡಿಸಿದನು; ತನ್ನ ಆಳ್ವಿಕೆಯ ಮೊದಲನೇ ವರ್ಷದ ಮೊದಲಿನ ತಿಂಗಳಿನಲ್ಲಿಯೇ ದೇವಾಲಯವನ್ನು ಮತ್ತೆ ತೆರೆಯಿಸಿದನು. 4-5 ಹಿಜ್ಕೀಯನು ಎಲ್ಲಾ ಯಾಜಕರನ್ನೂ ಲೇವಿಯರನ್ನೂ ಕರೆದು ದೇವಾಲಯದ ಪೂರ್ವದಿಕ್ಕಿನಲ್ಲಿದ್ದ ಅಂಗಳದಲ್ಲಿ ಒಟ್ಟುಗೂಡಿಸಿ ಅವರಿಗೆ, “ನನ್ನ ಮಾತುಗಳನ್ನು ಕೇಳಿರಿ. ಲೇವಿಯರೇ, ನೀವು ನಿಮ್ಮನ್ನು ಪವಿತ್ರ ಸೇವೆಗೆ ಸಿದ್ಧಮಾಡಿಕೊಳ್ಳಿರಿ. ಯೆಹೋವ ದೇವರ ಆಲಯವನ್ನು ಪವಿತ್ರ ಸೇವೆಗಾಗಿ ಶುದ್ಧಮಾಡಿರಿ. ನಮ್ಮ ಪೂರ್ವಿಕರು ಸೇವೆಮಾಡಿದ ದೇವರು ಆತನೇ. ದೇವಾಲಯದೊಳಗೆ ಇರಬಾರದ ವಸ್ತುಗಳನ್ನು ತೆಗೆದು ಹೊರಗೆಹಾಕಿರಿ. ಅವು ದೇವರ ಆಲಯವನ್ನು ಹೊಲಸು ಮಾಡುತ್ತವೆ. ನಮ್ಮ ಪೂರ್ವಿಕರು ಯೆಹೋವನನ್ನು ತೊರೆದು ಆತನ ದೃಷ್ಟಿಯಲ್ಲಿ ಪಾಪಮಾಡಿದರು; ಆತನ ಆಲಯಕ್ಕೆ ವಿಮುಖರಾದರು. ಅವರು ದೇವಾಲಯದ ಮಂಟಪದ ಬಾಗಿಲನ್ನು ಮುಚ್ಚಿ ಉರಿಯುತ್ತಿದ್ದ ದೀಪಗಳನ್ನು ನಂದಿಸಿಬಿಟ್ಟರು. ಇಸ್ರೇಲ್ ದೇವರಾದ ಯೆಹೋವನಿಗೆ ಪವಿತ್ರ ಸ್ಥಳದಲ್ಲಿ ಧೂಪಸುಡುವದನ್ನೂ ಸರ್ವಾಂಗಹೋಮಗಳನ್ನು ಅರ್ಪಿಸುವದನ್ನೂ ನಿಲ್ಲಿಸಿದರು. ಆದ್ದರಿಂದ ಯೆಹೋವನು ಯೆಹೂದದ ಮತ್ತು ಜೆರುಸಲೇಮಿನ ಜನರ ಮೇಲೆ ಬಹು ಕೋಪಗೊಂಡು ಅವರನ್ನು ಶಿಕ್ಷಿಸಿದನು. ಯೆಹೋವನು ಯೆಹೂದ ಮತ್ತು ಜೆರುಸಲೇಮಿನ ಜನರಿಗೆ ಮಾಡಿದ್ದ ಸಂಗತಿಗಳನ್ನು ನೋಡಿದ ಅನ್ಯರು ಗೇಲಿ ಮಾಡುತ್ತ ವೈರತ್ವದಿಂದ ತಲೆಯಾಡಿಸಿದರು. ಇವೆಲ್ಲಾ ಸತ್ಯವೆಂದು ನಿಮಗೆ ತಿಳಿದದೆ. ಇದನ್ನು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ. ನಮ್ಮ ಜನರು ರಣರಂಗದಲ್ಲಿ ಕೊಲ್ಲಲ್ಪಟ್ಟರು; ನಮ್ಮ ಹೆಂಡತಿಮಕ್ಕಳು ಸೆರೆಹಿಡಿಯಲ್ಪಟ್ಟರು. 10 ಆದ್ದರಿಂದ ಹಿಜ್ಕೀಯನಾದ ನಾನು ಇಸ್ರೇಲರ ದೇವರಾದ ಯೆಹೋವನೊಂದಿಗೆ ಒಡಂಬಡಿಕೆ ಮಾಡುತ್ತೇನೆ. ಆತನು ಇನ್ನು ಮುಂದೆ ನಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. 11 ಆದ್ದರಿಂದ ನನ್ನ ಪ್ರಿಯ ಮಕ್ಕಳೇ, ಉದಾಸೀನ ಮಾಡಬೇಡಿರಿ; ಸಮಯವನ್ನು ಹಾಳುಮಾಡಬೇಡಿ. ತನ್ನ ಸೇವೆಮಾಡುವದಕ್ಕಾಗಿ ಆತನು ನಿಮ್ಮನ್ನು ಆರಿಸಿರುತ್ತಾನೆ. ತನ್ನ ಆಲಯದಲ್ಲಿ ಸೇವೆಮಾಡುವುದಕ್ಕೂ ಧೂಪವನ್ನು ಆತನ ಮುಂದೆ ಸುಡುವದಕ್ಕೂ ನಿಮ್ಮನ್ನು ನೇಮಿಸಿರುತ್ತಾನೆ” ಎಂದು ಹೇಳಿದನು.

12-14 ದೇವಾಲಯದಲ್ಲಿ ಸೇವೆಮಾಡಲು ಪ್ರಾರಂಭಿಸಿದ ಲೇವಿಯರ ಪಟ್ಟಿ:

ಕೆಹಾತ್ಯನ ಕುಟುಂಬದ ಅಮಾಸೈಯ ಮಗನಾದ ಮಹತ್ ಮತ್ತು ಅಜರ್ಯನ ಮಗನಾದ ಯೋವೇಲ್;

ಮೆರಾರೀಯ ಸಂತತಿಯಲ್ಲಿ ಅಬ್ದೀಯ ಮಗನಾದ ಕೀಷ, ಯೆಹಲ್ಲೆಲೇಲನ ಮಗನಾದ ಅಜರ್ಯ;

ಗೆರ್ಷೋನ್ಯನ ಸಂತತಿಯಲ್ಲಿ ಜಿಮ್ಮನ ಮಗನಾದ ಯೋವಾಹ,

ಯೋವಾಹನ ಮಗನಾದ ಏದೆನ್; ಎಲೀಚಾಫಾನ್ಯನ ಸಂತತಿಯಲ್ಲಿ ಶಿಮ್ರಿ ಮತ್ತು ಯೆಗೀಯೇಲ್;

ಆಸಾಫಾನ ಸಂತತಿಯವರಿಂದ ಜೆಕರ್ಯ ಮತ್ತು ಮತ್ತನ್ಯ;

ಹೇಮಾನನ ಸಂತತಿಯಿಂದ ಯೆಹೀಯೇಲ್ ಮತ್ತು ಶಿಮ್ಮೀ;

ಯೆದೂತೂನನ ಸಂತತಿಯಲ್ಲಿ ಶೆಮಾಯ ಮತ್ತು ಉಜ್ಜೀಯೇಲ್.

15 ಈ ಲೇವಿಯರೆಲ್ಲಾ ಒಟ್ಟಾಗಿ ಸೇರಿ ತಮ್ಮ ಸಹೋದರರೊಂದಿಗೆ ದೇವಾಲಯದ ಪವಿತ್ರ ಸೇವೆಯನ್ನು ಆರಂಭಿಸಲು ಸಿದ್ಧರಾದರು; ಅರಸನ ಮೂಲಕವಾಗಿ ಬಂದ ದೇವರ ಆಜ್ಞೆಗೆ ವಿಧೇಯರಾದರು; ದೇವಾಲಯವನ್ನು ಶುದ್ಧೀಕರಿಸಲು ಪ್ರಾರಂಭಿಸಿದರು. 16 ಯಾಜಕರು ದೇವಾಲಯದ ಒಳಭಾಗವನ್ನು ಪ್ರವೇಶಿಸಿ ಶುಚಿಮಾಡಿದರು. ದೇವಾಲಯದೊಳಗೆ ಇದ್ದ ಎಲ್ಲಾ ಹೊಲಸು ವಸ್ತುಗಳನ್ನು ಹೊರತೆಗೆದರು. ದೇವಾಲಯದ ಅಂಗಳಕ್ಕೆ ತಂದು ಅಲ್ಲಿಂದ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಬಿಸಾಡಿದರು. 17 ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಲೇವಿಯರು ಪವಿತ್ರ ಸೇವೆಯನ್ನು ಮಾಡಲು ಸಿದ್ಧರಾದರು. ತಿಂಗಳಿನ ಎಂಟನೆಯ ದಿನದಲ್ಲಿ ದೇವಾಲಯದ ಮಂಟಪಕ್ಕೆ ಲೇವಿಯರು ಬಂದರು. ಎಂಟು ದಿನಗಳಲ್ಲಿ ಅವರು ದೇವಾಲಯವನ್ನೆಲ್ಲಾ ಶುಚಿಮಾಡಿದರು. ಮೊದಲನೆಯ ತಿಂಗಳಿನ ಹದಿನಾರನೆಯ ದಿನದಲ್ಲಿ ಅವರು ಶುಚಿಮಾಡುವ ಕಾರ್ಯವನ್ನು ಮುಗಿಸಿದರು.

18 ಅನಂತರ ಅವರು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ಅರಸನಾದ ಹಿಜ್ಕೀಯನೇ, ನಾವು ದೇವಾಲಯವನ್ನೂ ಯಜ್ಞವೇದಿಕೆಯನ್ನೂ ದೇವಾಲಯದ ಸಾಮಾಗ್ರಿಗಳನ್ನೂ ಶುದ್ಧ ಮಾಡಿದೆವು. ರೊಟ್ಟಿಯನ್ನಿಡುವ ಮೇಜನ್ನೂ ಶುದ್ಧ ಮಾಡಿದೆವು. 19 ಆಹಾಜನು ಅರಸನಾಗಿದ್ದ ಕಾಲದಲ್ಲಿ ಅವನು ದೇವರಿಗೆ ವಿರುದ್ಧವಾಗಿ ಎದ್ದನು. ದೇವಾಲಯದೊಳಗಿದ್ದ ಅನೇಕ ವಸ್ತುಗಳನ್ನು ಎತ್ತಿ ಬಿಸಾಡಿದನು. ಆದರೆ ನಾವು ಅವುಗಳನ್ನೆಲ್ಲಾ ಮತ್ತೆ ಯಥಾಸ್ಥಾನದಲ್ಲಿರಿಸಿ ಅದರ ವಿಶೇಷ ಉಪಯೋಗಕ್ಕಾಗಿ ಸಿದ್ಧಪಡಿಸಿದೆವು. ಈಗ ಅವು ಯೆಹೋವನ ವೇದಿಕೆಯ ಮುಂದೆ ಇಡಲ್ಪಟ್ಟಿವೆ” ಎಂದು ಹೇಳಿದರು.

20 ಹಿಜ್ಕೀಯ ಅರಸನು ಪಟ್ಟಣದ ಅಧಿಕಾರಿಗಳನ್ನು ಮುಂಜಾನೆ ಕರೆಯಿಸಿ ಅವರೊಡನೆ ಯೆಹೋವನ ಆಲಯಕ್ಕೆ ಹೋದನು. 21 ಅವರು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಆಡುಗಳನ್ನೂ ತಂದರು. ಈ ಪ್ರಾಣಿಗಳನ್ನೆಲ್ಲಾ ಇಡೀ ಯೆಹೂದ ಪ್ರಾಂತ್ಯದಲ್ಲಿರುವ ಪ್ರಜೆಯವರಿಗಾಗಿ, ದೇವಾಲಯದ ಶುದ್ಧೀಕರಣಕ್ಕಾಗಿ ಮತ್ತು ಯೆಹೂದ ರಾಜ್ಯಕ್ಕಾಗಿ ಪಾಪಪರಿಹಾರ ಯಜ್ಞವಾಗಿ ಅರ್ಪಿಸಿದರು. ಅರಸನಾದ ಹಿಜ್ಕೀಯನು ಆರೋನನ ಸಂತತಿಯವರಾದ ಯಾಜಕರಿಗೆ ಆ ಪಶುಗಳನ್ನು ಯೆಹೋವನ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮಮಾಡಲು ಆಜ್ಞಾಪಿಸಿದನು. 22 ಯಾಜಕರು ಹೋರಿಗಳನ್ನು ವಧಿಸಿ ಅದರ ರಕ್ತವನ್ನು ಯಜ್ಞವೇದಿಕೆಯ ಮೇಲೆ ಚಿಮಿಕಿಸಿದರು. ಅನಂತರ ಕುರಿಮರಿಗಳನ್ನು ವಧಿಸಿ ಅದರ ರಕ್ತವನ್ನೂ ಯಜ್ಞವೇದಿಕೆಯ ಮೇಲೆ ಚಿಮಿಕಿಸಿದರು. 23-24 ಆ ಬಳಿಕ ಯಾಜಕರು ಹೋತಗಳನ್ನು ಅರಸನ ಮತ್ತು ಸೇರಿಬಂದ ಜನಗಳ ಮುಂದೆ ಪಾಪಪರಿಹಾರಕ ಯಜ್ಞಕ್ಕಾಗಿ ತಂದರು. ಯಾಜಕರು ಅವುಗಳ ಮೇಲೆ ಕೈಯಿಟ್ಟು ವಧಿಸಿದರು. ಅದರ ರಕ್ತವನ್ನು ಯಜ್ಞವೇದಿಕೆಯ ಮೇಲೆ ಪಾಪಪರಿಹಾರಕ ಯಜ್ಞವಾಗಿ ಸಮರ್ಪಿಸಿದರು. ದೇವರು ಇಸ್ರೇಲರ ಪಾಪಗಳನ್ನು ಕ್ಷಮಿಸುವಂತೆ ಅವರು ಹೀಗೆ ಮಾಡಿದರು. ಸರ್ವಾಂಗಹೋಮಗಳನ್ನೂ ಪಾಪಪರಿಹಾರಕ ಯಜ್ಞಗಳನ್ನೂ ಇಸ್ರೇಲಿನ ಸಮಸ್ತ ಜನರಿಗಾಗಿ ಅರ್ಪಿಸಬೇಕೆಂದು ರಾಜನು ಆಜ್ಞಾಪಿಸಿದ್ದನು.

25 ದಾವೀದನೂ ಅರಸನ ದರ್ಶಿಯಾಗಿದ್ದ ಗಾದನೂ ಮತ್ತು ಪ್ರವಾದಿಯಾಗಿದ್ದ ನಾತಾನನೂ ಆಜ್ಞಾಪಿಸಿದಂತೆ, ಅರಸನಾದ ಹಿಜ್ಕೀಯನು ಲೇವಿಯರನ್ನು ತಾಳ, ತಂತಿವಾದ್ಯ ಮತ್ತು ಕಿನ್ನರಿಗಳೊಂದಿಗೆ ದೇವಾಲಯದಲ್ಲಿ ಇರಿಸಿದನು. ಈ ಆಜ್ಞೆಯು ಯೆಹೋವನಿಂದ ಪ್ರವಾದಿಗಳ ಮೂಲಕ ಬಂದಿತ್ತು. 26 ಹೀಗೆ ಲೇವಿಯರು ದಾವೀದನ ಸಂಗೀತ ವಾದ್ಯಗಳೊಡನೆ ತಯಾರಾಗಿ ನಿಂತರು ಮತ್ತು ಯಾಜಕರು ತುತ್ತೂರಿಗಳೊಂದಿಗೆ ತಯಾರಾಗಿ ನಿಂತರು. 27 ಆ ಬಳಿಕ ಹಿಜ್ಕೀಯನು ಸರ್ವಾಂಗಹೋಮವನ್ನು ಅರ್ಪಿಸಲು ಆಜ್ಞಾಪಿಸಿದನು. ಸರ್ವಾಂಗಹೋಮ ಆರಂಭವಾದ ಕೂಡಲೇ ದೇವರಿಗೆ ಸ್ತೋತ್ರಗಾನ ಹಾಡುವದೂ ಪ್ರಾರಂಭವಾಯಿತು. ತುತ್ತೂರಿಯನ್ನು ಊದಿ ದಾವೀದನ ವಾದ್ಯಗಳನ್ನು ಬಾರಿಸಿದರು. 28 ಸೇರಿ ಬಂದಿದ್ದ ಜನಸಮೂಹದವರು ಸಾಷ್ಟಾಂಗನಮಸ್ಕಾರ ಮಾಡಿದರು. ಯಜ್ಞವು ಮುಗಿಯುವ ತನಕ ದೇವರ ಸ್ತೋತ್ರಗಾನ ಮುಂದುವರಿಯಿತು.

29 ಯಜ್ಞಸಮರ್ಪಣೆ ಮುಗಿದ ಬಳಿಕ ಅರಸನಾದ ಹಿಜ್ಕೀಯನೂ ಪ್ರಜೆಗಳೂ ಯೆಹೋವನಿಗೆ ಸಾಷ್ಟಾಂಗನಮಸ್ಕಾರ ಮಾಡಿದರು. 30 ರಾಜನಾದ ಹಿಜ್ಕೀಯನು ಮತ್ತು ಅವನ ಅಧಿಕಾರಿಗಳು ಯೆಹೋವನಿಗೆ ಸ್ತೋತ್ರ ಮಾಡಬೇಕೆಂದು ಲೇವಿಯರಿಗೆ ಆಜ್ಞಾಪಿಸಿದರು. ಆಸಾಫ ಮತ್ತು ಅರಸನಾಗಿದ್ದ ದಾವೀದನು ರಚಿಸಿದ್ದ ಹಾಡುಗಳನ್ನು ಗಾಯಕರು ಹಾಡಿ ದೇವರನ್ನು ಸ್ತುತಿಸಿದರು. ಹೀಗೆ ಜನರೆಲ್ಲಾ ಸಂತೋಷಪಟ್ಟರು. ಅವರೆಲ್ಲರು ಅಡ್ಡಬಿದ್ದು ದೇವರನ್ನು ಆರಾಧಿಸಿದರು. 31 ಹಿಜ್ಕೀಯನು ಜನರಿಗೆ, “ಯೆಹೂದದ ಜನರೇ, ನೀವೀಗ ನಿಮ್ಮನ್ನು ಯೆಹೋವನಿಗೆ ಒಪ್ಪಿಸಿದ್ದೀರಿ. ನೀವೀಗ ಬಂದು ದೇವಾಲಯದಲ್ಲಿ ನಿಮ್ಮನಿಮ್ಮ ಯಜ್ಞಗಳನ್ನೂ ಕೃತಜ್ಞತಾಯಜ್ಞಗಳನ್ನೂ ಸಮರ್ಪಿಸಿರಿ” ಎಂದು ಹೇಳಲು ಜನರು ತಮ್ಮ ಯಜ್ಞಗಳನ್ನು ಸಮರ್ಪಿಸಲು ಮುಂದೆ ಬಂದರು. ಸರ್ವಾಂಗಹೋಮ ಅರ್ಪಿಸಬೇಕೆಂದಿದ್ದವರು ಸರ್ವಾಂಗಹೋಮಗಳನ್ನು ಅರ್ಪಿಸಿದರು. 32 ಹೀಗೆ ಒಟ್ಟು ಎಪ್ಪತ್ತು ಹೋರಿಗಳನ್ನೂ ನೂರು ಟಗರುಗಳನ್ನೂ ಇನ್ನೂರು ಕುರಿಗಳನ್ನೂ ಯೆಹೋವನಿಗೆ ಸರ್ವಾಂಗಹೋಮವಾಗಿ ಸಮರ್ಪಿಸಿದರು. 33 ಪವಿತ್ರ ಯಜ್ಞಕ್ಕಾಗಿ ಆರುನೂರು ಹೋರಿಗಳನ್ನೂ ಮೂರುಸಾವಿರ ಆಡುಕುರಿಗಳನ್ನೂ ಸಮರ್ಪಿಸಿದರು. 34 ಅಲ್ಲಿ ಪಶುಗಳನ್ನು ವಧಿಸಿ ಅದರ ಚರ್ಮಸುಲಿದು ಯಜ್ಞಕ್ಕಾಗಿ ಸಿದ್ಧಪಡಿಸಲು ಸಾಕಷ್ಟು ಯಾಜಕರು ಇರಲಿಲ್ಲ. ಆಗ ಅವರ ಬಂಧುಗಳಾದ ಲೇವಿಯರು ಬಂದು ಆ ಕೆಲಸ ಮುಗಿಯುವ ತನಕ ಅವರಿಗೆ ಸಹಾಯಮಾಡಿದರು. ಯೆಹೋವನ ಸೇವೆಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳಲು ಲೇವಿಯರು ಯಾಜಕರಿಗಿಂತ ಹೆಚ್ಚು ಉತ್ಸುಕತೆಯಲ್ಲಿದ್ದರು. 35 ಆ ದಿವಸ ಎಷ್ಟೋ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಪಾನದ್ರವ್ಯದ ಹೋಮಗಳನ್ನೂ ಸಮರ್ಪಿಸಿದರು. ಹೀಗೆ ದೇವಾಲಯದಲ್ಲಿ ಆರಾಧನೆಯು ಮತ್ತೆ ಪ್ರಾರಂಭವಾಯಿತು. 36 ದೇವರು ಅವುಗಳನ್ನು ತನ್ನ ಜನರಿಗಾಗಿ ಸಿದ್ಧಪಡಿಸಿದ್ದಕ್ಕಾಗಿಯೂ ಅದನ್ನು ಅಲ್ಪಕಾಲಾವಧಿಯಲ್ಲಿ ಮಾಡಿದ್ದಕ್ಕಾಗಿಯೂ ಹಿಜ್ಕೀಯನು ಮತ್ತು ಯೆಹೂದದ ಜನರು ಸಂತೋಷಪಟ್ಟರು.

ಹಿಜ್ಕೀಯನು ಪಸ್ಕಹಬ್ಬವನ್ನು ಆಚರಿಸಿದ್ದು

30 ಅರಸನಾದ ಹಿಜ್ಕೀಯನು ಯೆಹೂದದವರಿಗೂ ಇಸ್ರೇಲರಿಗೂ ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳವರಿಗೂ ಸಂದೇಶ ಕಳುಹಿಸಿ, ಯೆಹೋವನ ಆಲಯಕ್ಕೆ ಬಂದು ಇಸ್ರೇಲಿನ ಯೆಹೋವ ದೇವರಿಗೆ ಪಸ್ಕಹಬ್ಬವನ್ನು ಆಚರಿಸುವಂತೆ ಅವರನ್ನೆಲ್ಲಾ ಆಮಂತ್ರಿಸಿದನು. ಹಿಜ್ಕೀಯ ಅರಸನೂ ಅಧಿಕಾರಿಗಳೂ ಜೆರುಸಲೇಮಿನ ಸಭೆಯವರೆಲ್ಲರೂ ಎರಡನೆಯ ತಿಂಗಳಲ್ಲಿ ಹಬ್ಬವನ್ನು ಆಚರಿಸಲು ನಿರ್ಧರಿಸಿದರು. ಅದಕ್ಕೆ ಕಾರಣವೇನೆಂದರೆ, ನಿಯಮಿತ ದಿವಸದಲ್ಲಿ ಹಬ್ಬ ನಡೆಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಬೇಕಾದಷ್ಟು ಯಾಜಕರು ಆ ಪರಿಶುದ್ಧ ಸೇವೆಗಾಗಿ ತಮ್ಮನ್ನು ಸಿದ್ಧಪಡಿಸಿಕೊಂಡಿರಲಿಲ್ಲ. ಅಲ್ಲದೆ ಜೆರುಸಲೇಮಿನಲ್ಲಿಯೂ ಜನ ಸೇರಿ ಬರಲಿಲ್ಲ. ಈ ನಿರ್ಧಾರವು ಅರಸನಾದ ಹಿಜ್ಕೀಯನಿಗೂ ಜನರಿಗೂ ಸರಿಕಂಡಿತು. ಇದನ್ನು ಬೇರ್ಷೆಬದಿಂದ ಹಿಡಿದು ದಾನ್ ಪಟ್ಟಣದವರೆಗಿನ ಜನರಿಗೆಲ್ಲಾ ಪ್ರಕಟಿಸಿದರು. ಇಸ್ರೇಲಿನ ದೇವರಾದ ಯೆಹೋವನಿಗೆ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಜೆರುಸಲೇಮಿಗೆ ಬರಲು ಎಲ್ಲರಿಗೂ ಆಹ್ವಾನಿಸಿದರು. ಮೋಶೆಯು ಹೇಳಿದ್ದ ನಿಯಮಕ್ಕನುಸಾರವಾಗಿ ಪಸ್ಕಹಬ್ಬವನ್ನು ಎಷ್ಟೋ ಜನರು ಅನೇಕ ವರ್ಷಗಳಿಂದ ಆಚರಿಸಿರಲಿಲ್ಲ. ಅದಕ್ಕಾಗಿ ಸಂದೇಶಕರು ರಾಜನ ಪತ್ರವನ್ನು ಇಡೀ ಇಸ್ರೇಲ್ ಮತ್ತು ಯೆಹೂದ ಪ್ರಾಂತ್ಯದ ಜನರಿಗೆ ಕೊಟ್ಟರು. ಅದರಲ್ಲಿ ಹೀಗೆ ಬರೆದಿದ್ದನು:

“ಇಸ್ರೇಲಿನ ಮಕ್ಕಳೇ, ಅಬ್ರಹಾಮನೂ ಇಸಾಕನೂ ಯಾಕೋಬನೂ ಆರಾಧಿಸಿದ ದೇವರಾದ ಯೆಹೋವನ ಕಡೆಗೆ ತಿರುಗಿರಿ. ಆಗ ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದವರ ಕಡೆಗೆ ಆತನು ತಿರುಗಿಕೊಳ್ಳುವನು. ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವನಿಗೆ ವಿರೋಧವಾಗಿ ನಡೆದ ಕಾರಣ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಇದಕ್ಕೆ ನೀವೇ ಸಾಕ್ಷಿಗಳು. ನಿಮ್ಮ ಪೂರ್ವಿಕರ ಹಾಗೆ ಮೊಂಡರಾಗಿರಬೇಡಿ. ನೀವು ಪೂರ್ಣಮನಸ್ಸಿನಿಂದ ದೇವರಿಗೆ ವಿಧೇಯರಾಗಿರಿ. ಆತನ ಶಾಶ್ವತವಾದ ಮಹಾಪವಿತ್ರಸ್ಥಳಕ್ಕೆ ಬನ್ನಿರಿ. ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ ಮತ್ತು ಆತನ ಸೇವೆಮಾಡಿರಿ. ಆಗ ನಿಮ್ಮ ಮೇಲಿರುವ ಆತನ ಕೋಪವು ಶಮನವಾಗುವುದು. ನೀವು ಯೆಹೋವನಿಗೆ ವಿಧೇಯರಾದರೆ ನಿಮ್ಮ ಮಕ್ಕಳೂ ಬಂಧುಗಳೂ ತಮ್ಮನ್ನು ಸೆರೆಹಿಡಿದವರಿಂದ ಕರುಣೆಯನ್ನು ಹೊಂದಿ ಮತ್ತೆ ಈ ದೇಶಕ್ಕೆ ಬರುವರು. ದೇವರಾದ ಯೆಹೋವನು ದಯೆಯೂ ಕರುಣೆಯೂ ಉಳ್ಳವನಾಗಿದ್ದಾನೆ. ನೀವು ಆತನ ಕಡೆಗೆ ತಿರುಗಿದರೆ ಆತನು ನಿಮ್ಮನ್ನು ತಳ್ಳಿಬಿಡುವುದಿಲ್ಲ.”

10 ಸಂದೇಶಕಾರರು ಎಫ್ರಾಯೀಮ್ ಮತ್ತು ಮನಸ್ಸೆ ಪ್ರಾಂತ್ಯಗಳ ಪ್ರತಿಯೊಂದು ಪಟ್ಟಣಗಳಿಗೆ ಹೋದರು. ಜೆಬುಲೂನ್ ಪ್ರಾಂತ್ಯಕ್ಕೂ ಹೋದರು. ಆದರೆ ಜನರು ಸಂದೇಶಕರನ್ನು ಗೇಲಿ ಮಾಡಿದರು. 11 ಆದರೆ ಆಶೇರ್, ಮನಸ್ಸೆ ಮತ್ತು ಜೆಬುಲೂನ್ ಪ್ರಾಂತ್ಯಗಳ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಜೆರುಸಲೇಮಿಗೆ ಹೋದರು. 12 ಇದಲ್ಲದೆ, ದೇವರ ಶಕ್ತಿಯು ಯೆಹೂದದ ಜನರನ್ನು ಒಂದಾಗಿ ಮಾಡಿತು. ಆದ್ದರಿಂದ ಅವರು ಅರಸನಿಗೆ ಮತ್ತು ಅಧಿಕಾರಿಗಳಿಗೆ ವಿಧೇಯರಾದರು. ಹೀಗೆ ಜನರು ಯೆಹೋವನ ಕಟ್ಟಳೆಗಳಿಗೆ ವಿಧೇಯರಾದರು.

13 ಜೆರುಸಲೇಮಿನಲ್ಲಿ ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲು ಎಷ್ಟೋ ಮಂದಿ ಜೆರುಸಲೇಮಿಗೆ ಎರಡನೆಯ ತಿಂಗಳಲ್ಲಿ ಬಂದರು. ಅದು ಮಹಾ ಜನಸಮೂಹವಾಗಿತ್ತು. 14 ಆ ಜನರು ಜೆರುಸಲೇಮಿನೊಳಗಿದ್ದ ಅನ್ಯ ದೇವರುಗಳಿಗಾಗಿ ಮಾಡಿದ್ದ ಯಜ್ಞವೇದಿಕೆಗಳನ್ನು ಕೆಡವಿಹಾಕಿದರು; ವಿಗ್ರಹಗಳಿಗೆ ಧೂಪಸಮರ್ಪಣೆಗಾಗಿ ಮಾಡಿದ ವೇದಿಕೆಗಳನ್ನೂ ಹಾಳುಗೆಡವಿದರು. ಅವುಗಳನ್ನೆಲ್ಲಾ ಕಿದ್ರೋನ್ ಕಣಿವೆಯಲ್ಲಿ ಬಿಸಾಡಿದರು. 15 ಆ ಬಳಿಕ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ದರು. ಯಾಜಕರೂ ಲೇವಿಯರೂ ನಾಚಿಕೆಯಿಂದ[a] ತಮ್ಮನ್ನು ಸೇವೆಗಾಗಿ ಸಿದ್ಧಪಡಿಸಿಕೊಂಡು ಸರ್ವಾಂಗಹೋಮಕ್ಕಾಗಿ ಕಾಣಿಕೆಗಳನ್ನು ಯೆಹೋವನ ಮಂದಿರಕ್ಕೆ ತಂದರು. 16 ಮೋಶೆಯ ಕಟ್ಟಳೆಯ ಪ್ರಕಾರವಾಗಿ ಅವರು ತಮ್ಮತಮ್ಮ ಸ್ಥಾನಗಳಲ್ಲಿ ನಿಂತುಕೊಂಡು ಸೇವೆ ನಡಿಸಿದರು. ಲೇವಿಯರು ರಕ್ತವನ್ನು ಯಾಜಕರಿಗೆ ಕೊಟ್ಟರು. ಯಾಜಕರು ಆ ರಕ್ತವನ್ನು ವೇದಿಕೆಯ ಮೇಲೆ ಚಿಮಿಕಿಸಿದರು. 17 ಜನಸಮೂಹದವರಲ್ಲಿ ಎಷ್ಟೋ ಮಂದಿ ಪವಿತ್ರ ಸೇವೆಗಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಆದ್ದರಿಂದ ಪಸ್ಕದ ಕುರಿಯನ್ನು ಅವರು ವಧಿಸಲಾಗಲಿಲ್ಲ. ಲೇವಿಯರೇ ಅವರ ಬದಲಾಗಿ ಪಸ್ಕದ ಕುರಿಯನ್ನು ವಧಿಸಿದರು. ಹೀಗೆ ಲೇವಿಯರು ಪ್ರತಿಯೊಂದು ಕುರಿಯನ್ನು ದೇವರಿಗಾಗಿ ಪರಿಶುದ್ಧಗೊಳಿಸಿ ಸಮರ್ಪಿಸಿದರು.

18-19 ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್ ಮತ್ತು ಜೆಬುಲೂನಿನಿಂದ ಬಂದಿದ್ದ ಎಷ್ಟೋ ಮಂದಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಅವರು ಪಸ್ಕದ ಕುರಿಮರಿಯನ್ನು ಯೋಗ್ಯವಾದ ರೀತಿಯಲ್ಲಿ ತಿನ್ನಲಿಲ್ಲ. ಆದರೆ ಹಿಜ್ಕೀಯನು ಅಂಥವರಿಗೋಸ್ಕರವಾಗಿ, “ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ಇವರು ಯೋಗ್ಯವಾದ ರೀತಿಯಲ್ಲಿ ನಿನ್ನನ್ನು ಆರಾಧಿಸಲು ಬಂದಿದ್ದಾರೆ. ಆದರೆ ಧರ್ಮಶಾಸ್ತ್ರದ ಪ್ರಕಾರ ಅವರು ತಮ್ಮನ್ನು ಶುದ್ಧ ಮಾಡಿಕೊಳ್ಳಲಿಲ್ಲ. ದಯಮಾಡಿ ಅವರನ್ನು ಕ್ಷಮಿಸು. ನಮ್ಮ ಪಿತೃಗಳು ವಿಧೇಯರಾಗಿದ್ದ ದೇವರೇ, ಜನರು ಮೋಶೆಯ ನಿಯಮಕ್ಕನುಸಾರವಾಗಿ ತಮ್ಮನ್ನು ಶುದ್ಧಿ ಮಾಡಿಕೊಂಡಿಲ್ಲದಿದ್ದರೂ ನೀನು ಅವರನ್ನು ದಯವಿಟ್ಟು ಕ್ಷಮಿಸು” ಎಂದು ಪ್ರಾರ್ಥಿಸಿದನು. 20 ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸಿದನು. 21 ಇಸ್ರೇಲರು ಜೆರುಸಲೇಮಿನಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸಗಳ ತನಕ ಆಚರಿಸಿದರು. ಅವರೆಲ್ಲಾ ಹರ್ಷದಿಂದ ತುಂಬಿ ಹಬ್ಬವನ್ನು ಆಚರಿಸಿದರು. ಯಾಜಕರೂ ಲೇವಿಯರೂ ಪ್ರತಿದಿನ ಗಟ್ಟಿಯಾಗಿ ಸ್ತುತಿಗೀತೆಗಳನ್ನು ಹಾಡಿದರು. 22 ದೇವರ ಸೇವೆ ಮಾಡುವದನ್ನು ತಿಳಿದಿದ್ದ ಲೇವಿಯರನ್ನು ಹಿಜ್ಕೀಯನು ಪ್ರೋತ್ಸಾಹಿಸಿದನು. ಜನರು ಏಳು ದಿವಸ ಹಬ್ಬವನ್ನು ಆಚರಿಸಿ ಸಮಾಧಾನಯಜ್ಞವನ್ನು ಸಮರ್ಪಿಸಿದರು; ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿದರು.

23 ಬಂದವರೆಲ್ಲರೂ ಇನ್ನೂ ಏಳು ದಿವಸ ಅಲ್ಲಿಯೇ ಇರಲು ಒಪ್ಪಿಕೊಂಡರು. ಇನ್ನೂ ಏಳು ದಿವಸ ಪಸ್ಕಹಬ್ಬ ಆಚರಿಸಲು ಅವರು ಸಂತೋಷಪಟ್ಟರು. 24 ಯೆಹೂದದ ಅರಸನಾದ ಹಿಜ್ಕೀಯನು ಸೇರಿಬಂದ ಜನರಿಗೆ ಒಂದು ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ವಧಿಸಿ ತಿನ್ನಲು ಕೊಟ್ಟನು. ಪ್ರಧಾನರು ಒಂದು ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಸೇರಿಬಂದ ಜನರಿಗೆ ಕೊಟ್ಟರು. ಎಷ್ಟೋ ಮಂದಿ ಯಾಜಕರು ಪವಿತ್ರ ಸೇವೆಗೆ ತಮ್ಮನ್ನು ಶುದ್ಧಪಡಿಸಿಕೊಂಡರು. 25 ಯೆಹೂದದ ಜನರೆಲ್ಲರೂ ಲೇವಿಯರೂ ಇಸ್ರೇಲಿನಿಂದ ಬಂದ ಜನರೂ ಮತ್ತು ಇಸ್ರೇಲಿನಿಂದ ಬಂದು ಯೆಹೂದದಲ್ಲಿ ನೆಲೆಸಿದ್ದ ವಿದೇಶಿಯರೂ ಹಬ್ಬವನ್ನು ಆಚರಿಸಿ ಬಹಳವಾಗಿ ಸಂತೋಷಿಸಿದರು. 26 ಜೆರುಸಲೇಮಿನಲ್ಲಿ ಸಂತಸವು ತುಂಬಿತ್ತು. ಸೊಲೊಮೋನ್ ಅರಸನ ಸಮಯದಿಂದ ಅಂದಿನ ತನಕ ಅಂಥಾ ಹಬ್ಬವು ಆಚರಿಸಲ್ಪಟ್ಟಿರಲಿಲ್ಲ. 27 ಯಾಜಕರು ಮತ್ತು ಲೇವಿಯರು ಎದ್ದುನಿಂತು ಜನರನ್ನು ಯೆಹೋವನು ಆಶೀರ್ವದಿಸುವಂತೆ ಕೇಳಿಕೊಂಡರು. ದೇವರು ಪರಲೋಕದ ತನ್ನ ಪವಿತ್ರ ನಿವಾಸಕ್ಕೆ ಬಂದ ಆ ಪ್ರಾರ್ಥನೆಗೆ ಕಿವಿಗೊಟ್ಟನು.

ಅರಸನಾದ ಹಿಜ್ಕೀಯನ ಅಭಿವೃದ್ಧಿಕಾರ್ಯಗಳು

31 ಪಸ್ಕಹಬ್ಬದ ಆಚರಣೆಯು ಮುಕ್ತಾಯವಾಯಿತು. ಇಸ್ರೇಲಿನಿಂದ ಜೆರುಸಲೇಮಿಗೆ ಬಂದಿದ್ದವರು ಯೆಹೂದದ ಪಟ್ಟಣಗಳಿಗೆ ಹೋದರು. ಅಲ್ಲಿದ್ದ ಕಲ್ಲಿನ ವಿಗ್ರಹಗಳನ್ನು ಒಡೆದು ನಾಶಮಾಡಿದರು; ಅಶೇರಸ್ತಂಭಗಳನ್ನು ಮತ್ತು ಪೂಜಾಸ್ಥಳಗಳನ್ನು ಕೆಡವಿಹಾಕಿದರು. ಹೀಗೆ ಅವರು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲೆಲ್ಲಾ ಸಂಚಾರ ಮಾಡಿದರು. ಆ ಜನರು ಎಫ್ರಾಯೀಮ್ ಮನಸ್ಸೆ ಪ್ರಾಂತ್ಯಗಳಲ್ಲಿಯೂ ಹಾಗೆಯೇ ಮಾಡಿದರು. ವಿಗ್ರಹಗಳನ್ನು ಪೂಜಿಸಲು ಮಾಡಿದ ಎಲ್ಲಾ ವಸ್ತುಗಳನ್ನು ನಾಶಮಾಡಿದರು. ಬಳಿಕ ಆ ಇಸ್ರೇಲರೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಿರುಗಿದರು.

ಯಾಜಕರೂ ಲೇವಿಯರೂ ಬೇರೆಬೇರೆ ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದರು. ಪ್ರತಿಯೊಂದು ಗುಂಪಿನವರಿಗೂ ಪ್ರತ್ಯೇಕವಾದ ಸೇವಾಕಾರ್ಯವು ಕೊಡಲ್ಪಟ್ಟಿತ್ತು. ಅರಸನಾದ ಹಿಜ್ಕೀಯನು ಅವರ ಕೆಲಸಗಳನ್ನು ಮತ್ತೆ ಪ್ರಾರಂಭಿಸಲು ಈ ಗುಂಪಿನವರಿಗೆ ಹೇಳಿದನು. ಹೀಗೆ ಯಾಜಕರೂ ಲೇವಿಯರೂ ಮತ್ತೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುತ್ತಿದ್ದರು. ಅಲ್ಲದೆ ದೇವಾಲಯದೊಳಗೆ ದೇವರಿಗೆ ಸ್ತುತಿಗೀತೆ ಹಾಡುವ ಕೆಲಸವೂ ಅವರದೇ ಆಗಿತ್ತು. ಹಿಜ್ಕೀಯನು ತನ್ನ ಪಶುಗಳಲ್ಲಿ ಕೆಲವನ್ನು ಸರ್ವಾಂಗಹೋಮಕ್ಕಾಗಿ ಕೊಟ್ಟನು. ಇವುಗಳನ್ನು ಪ್ರತಿನಿತ್ಯದ ಬೆಳಿಗ್ಗೆ ಮತ್ತು ಸಂಜೆ ಸಮರ್ಪಿಸುವ ಸರ್ವಾಂಗಹೋಮಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತು; ಅಲ್ಲದೆ ಸಬ್ಬತ್ ದಿನದಂದೂ ಅಮವಾಸ್ಯೆ ದಿನದಂದೂ ಅವುಗಳನ್ನು ಅರ್ಪಿಸಿದರು. ಇವೆಲ್ಲಾ ದೇವರ ಕಟ್ಟಳೆಗಳಿಗನುಸಾರವಾಗಿದ್ದವು.

ದೇಶದ ಜನರು ಯಾಜಕರಿಗೂ ಲೇವಿಯರಿಗೂ ತಮ್ಮ ಬೆಳೆಯ ಒಂದು ಪಾಲನ್ನು ಕೊಡಬೇಕಾಗಿತ್ತು. ಹಿಜ್ಕೀಯನು ಯಾಜಕರಿಗೂ ಲೇವಿಯರಿಗೂ ಅವರು ಕೊಡಬೇಕಾಗಿದ್ದ ಪಾಲನ್ನು ಕೊಡಬೇಕೆಂದು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಜನರಿಗೆ ಆಜ್ಞಾಪಿಸಿದನು. ಹೀಗಿರುವಾಗ ಯಾಜಕರೂ ಲೇವಿಯರೂ ತಮ್ಮ ಸಮಯವನ್ನೆಲ್ಲಾ ದೇವರ ಸೇವೆಯಲ್ಲಿ ಕಳೆಯಬಹುದು. ದೇಶದ ಜನರೆಲ್ಲಾ ಅರಸನ ಈ ಆಜ್ಞೆಯನ್ನು ಕೇಳಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನುತುಪ್ಪ ಮುಂತಾದ ಎಲ್ಲವುಗಳಲ್ಲಿ ಮತ್ತು ಪ್ರಥಮ ಫಲಗಳಲ್ಲಿ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಕೊಟ್ಟರು. ಇಸ್ರೇಲಿನ ಮತ್ತು ಯೆಹೂದದ ಊರುಗಳಲ್ಲಿ ವಾಸವಾಗಿದ್ದ ಜನರು ತಮ್ಮ ದನಕರುಗಳಲ್ಲಿ ಮತ್ತು ಕುರಿಗಳಲ್ಲಿ ದಶಾಂಶವನ್ನು ತಂದುಕೊಟ್ಟರು. ಯೆಹೋವನಿಗೆ ಮೀಸಲಾಗಿ ವಿಶೇಷ ಸ್ಥಳದಲ್ಲಿ ಇಡತಕ್ಕ ಪವಿತ್ರ ವಸ್ತುಗಳಲ್ಲಿಯೂ ದಶಾಂಶವನ್ನು ತಂದುಕೊಟ್ಟರು. ಇವುಗಳನ್ನೆಲ್ಲ ಅವರು ತಮ್ಮ ದೇವರಾದ ಯೆಹೋವನಿಗೆ ತಂದು ರಾಶಿ ಹಾಕಿದರು.

ವರ್ಷದ ಮೂರನೆಯ ತಿಂಗಳಿನಲ್ಲಿ ಜನರು ತಮ್ಮ ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದರೆ ಅದು ಏಳನೆಯ ತಿಂಗಳಲ್ಲಿ ಮುಗಿಯುತ್ತಿತ್ತು. ಹಿಜ್ಕೀಯನೂ ಪ್ರಧಾನರೂ ಜನರ ಕಾಣಿಕೆಯ ರಾಶಿಯನ್ನು ನೋಡಿ ಯೆಹೋವನಿಗೆ ಸ್ತೋತ್ರ ಮಾಡಿದರು ಮತ್ತು ಅದನ್ನು ಅರ್ಪಿಸಿದ ಜನರಿಗಾಗಿ ಸ್ತೋತ್ರ ಮಾಡಿದರು.

ಹಿಜ್ಕೀಯನು ಕಾಣಿಕೆಯ ರಾಶಿಯ ವಿಷಯವಾಗಿ ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತನಾಡಿದಾಗ 10 ಚಾದೋಕನ ಕುಲದ ಮಹಾಯಾಜಕನಾದ ಅಜರ್ಯನು ಹಿಜ್ಕೀಯನಿಗೆ, “ದೇವಾಲಯಕ್ಕೆ ಜನರು ಕಾಣಿಕೆಗಳನ್ನು ತರಲು ಪ್ರಾರಂಭ ಮಾಡಿದಂದಿನಿಂದ ನಮಗೆ ಊಟಕ್ಕೆ ಯಾವ ಕೊರತೆಯೂ ಇಲ್ಲವಾಗಿದೆ. ನಾವು ತೃಪ್ತಿಯಾಗುವಷ್ಟು ಊಟಮಾಡಿದರೂ ಇನ್ನೂ ಉಳಿದಿರುತ್ತದೆ. ದೇವರು ನಿಜವಾಗಲೂ ತನ್ನ ಜನರನ್ನು ಆಶೀರ್ವದಿಸಿರುತ್ತಾನೆ. ಆದ್ದರಿಂದಲೇ ನಮಗೆ ಹೇರಳವಾಗಿ ಉಳಿದಿದೆ” ಎಂದು ಹೇಳಿದನು.

11 ಆಗ ಹಿಜ್ಕೀಯನು ದೇವಾಲಯದಲ್ಲಿ ಉಗ್ರಾಣದ ಕೋಣೆಗಳನ್ನು ಕಟ್ಟಲು ಯಾಜಕರಿಗೆ ಆಜ್ಞಾಪಿಸಿದನು. ಅಂತೆಯೇ ಅವುಗಳನ್ನು ಕಟ್ಟಲಾಯಿತು. 12 ಆ ಬಳಿಕ ದೇವರಿಗೆ ಕೊಟ್ಟಿದ್ದ ದಶಮಾಂಶ ಮತ್ತು ಬೇರೆ ಕಾಣಿಕೆಗಳನ್ನು ಆ ಉಗ್ರಾಣದ ಕೋಣೆಗಳಲ್ಲಿ ಕೂಡಿಸಿಟ್ಟರು. ಲೇವಿಯನಾದ ಕೋನನ್ಯನು ಇದರ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟನು. ಇವನಿಗೆ ಸಹಾಯಕನಾಗಿ ಕೋನನ್ಯನ ಸೋದರನಾದ ಶಿಮ್ಮಿಯು ನೇಮಿಸಲ್ಪಟ್ಟನು. 13 ಕೋನನ್ಯ ಮತ್ತು ಶಿಮ್ಮಿಯು ಈ ಜನರ ಮೇಲ್ವಿಚಾರಕರಾಗಿದ್ದರು; ಯೆಹೀಯೇಲ್, ಅಜಜ್ಯ, ನಹತ್, ಅಸಾಹೇಲ್, ಯೆರೀಮೋತ್, ಯೋಜಾಬಾದ್, ಎಲೀಯೇಲ್, ಇಸ್ಮಾಕ್ಯ, ಮಹತ್ ಮತ್ತು ಬೆನಾಯ ಇವರನ್ನು ಸಹಾಯಕರಾಗಿ ಅರಸನಾದ ಹಿಜ್ಕೀಯನೂ ದೇವಾಲಯದ ಮೇಲ್ವಿಚಾರಕನಾದ ಅಜರ್ಯನೂ ಆರಿಸಿದರು.

14 ಕೋರೆ ಎಂಬ ಲೇವಿಯು ಜನರು ದೇವರಿಗೆ ಸ್ವ ಇಚ್ಛೆಯಿಂದ ಸಮರ್ಪಿಸಿದ ಕಾಣಿಕೆಗೆ ಮುಖ್ಯಸ್ತನಾಗಿದ್ದನು. ಅವನು ಅದರ ಲೆಕ್ಕವನ್ನು ಒಪ್ಪಿಸುತ್ತಿದ್ದನು. ಅಲ್ಲದೆ ಯೆಹೋವನಿಗೆ ಕೊಟ್ಟವುಗಳನ್ನು ಮತ್ತು ಯೆಹೋವನಿಗೆ ಮೀಸಲಾಗಿಟ್ಟ ಕಾಣಿಕೆಗಳನ್ನು ಹಂಚಿಕೊಡುವುದು ಅವನ ಜವಾಬ್ದಾರಿಕೆಯಾಗಿತ್ತು. ಅಲ್ಲದೆ ಅವನು ಪೂರ್ವದ ಬಾಗಿಲಿನ ದ್ವಾರಪಾಲಕನಾಗಿದ್ದನು. ಅವನು ಲೇವಿಯನಾದ ಇಮ್ನನ ಮಗನು. 15 ಏದೆನ್, ಮಿನ್ಯಾಮಿನ್, ಯೇಷೂವ, ಶೆಮಾಯ, ಅಮರ್ಯ ಮತ್ತು ಶೆಕನ್ಯ ಇವರು ಕೋರೆಯ ಸಹಾಯಕರು. ಇವರು ಯಾಜಕರು ವಾಸಿಸುವ ಪಟ್ಟಣಗಳಲ್ಲಿದ್ದು ನಂಬಿಗಸ್ತಿಕೆಯಿಂದ ಸೇವೆ ಮಾಡಿದರು. ಕೂಡಿಸಿದ ಕಾಣಿಕೆಗಳನ್ನು ನಂಬಿಗಸ್ತಿಕೆಯಿಂದ ಯಾಜಕರ ಕುಟುಂಬದವರಿಗೆ ಪಕ್ಷಪಾತವಿಲ್ಲದೆ ಹಂಚಿದರು.

16 ಮೂರು ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ಗಂಡುಮಕ್ಕಳಿಗೂ ಲೇವಿಯರ ವಂಶಾವಳಿ ಪಟ್ಟಿಯಲ್ಲಿ ಹೆಸರು ದಾಖಲಾದವರೆಲ್ಲರಿಗೂ ಹಂಚಿದರು. ಗಂಡಸರು ದೇವಾಲಯದಲ್ಲಿ ತಮಗೆ ಒಪ್ಪಿಸಿರುವ ಕೆಲಸಗಳನ್ನು ಮಾಡಿದರು. 17 ಒಟ್ಟುಗೂಡಿಸಿದ ಕಾಣಿಕೆಯಲ್ಲಿ ಯಾಜಕರೂ ತಮ್ಮ ಪಾಲನ್ನು ತೆಗೆದುಕೊಂಡರು. ಇದನ್ನು ವಂಶಾವಳಿಗನುಸಾರವಾಗಿ ಮಾಡಲಾಯಿತು. ಲೇವಿಯರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕಿಂತ ಹೆಚ್ಚು ವಯಸ್ಸಾದವರೂ ತಮ್ಮ ಪಾಲನ್ನು ಜವಾಬ್ದಾರಿಗಳಿಗನುಸಾರವಾಗಿಯೂ ತಮ್ಮ ಗುಂಪುಗಳಿಗನುಸಾರವಾಗಿಯೂ ಪಡೆದುಕೊಂಡರು. 18 ಲೇವಿಯರ ಹೆಂಡತಿಯರಿಗೂ ಮಕ್ಕಳಿಗೂ ಎಲ್ಲರಿಗೂ ಅದರಲ್ಲಿ ಪಾಲು ದೊರೆಯಿತು. ಯಾರ್ಯಾರ ಹೆಸರುಗಳು ಲೇವಿಯರ ಕುಟುಂಬದ ಪಟ್ಟಿಯಲ್ಲಿ ಬರೆಯಲ್ಪಟ್ಟಿತ್ತೊ ಅವರೆಲ್ಲರಿಗೆ ಪಾಲು ದೊರೆಯಿತು. ಯಾಕೆಂದರೆ ಲೇವಿಯರು ತಮ್ಮನ್ನು ದೇವಾಲಯದ ಸೇವೆಗೆ ಯಾವಾಗಲೂ ಸಿದ್ಧಪಡಿಸಿಕೊಳ್ಳುತ್ತಿದ್ದರು.

19 ಆರೋನನ ಸಂತತಿಯ ಕೆಲವು ಯಾಜಕರಿಗೆ ಲೇವಿಯರು ವಾಸಿಸುತ್ತಿದ್ದ ಪಟ್ಟಣಗಳ ಹತ್ತಿರ ಹೊಲಗಳಿದ್ದವು. ಆರೋನನ ಸಂತತಿಯವರಲ್ಲಿ ಕೆಲವರು ಲೇವಿಯರ ಪಟ್ಟಣಗಳಲ್ಲಿಯೂ ವಾಸಮಾಡುತ್ತಿದ್ದರು. ಈ ಆರೋನನ ಸಂತತಿಯವರಿಗೆ ಪಾಲು ಕೊಡಲು ಕೆಲವರನ್ನು ನೇಮಿಸಲಾಯಿತು. ಗಂಡಸರಿಗೆ ಮತ್ತು ವಂಶಾವಳಿಯಲ್ಲಿ ಹೆಸರನ್ನು ಹೊಂದಿದ್ದ ಎಲ್ಲಾ ಲೇವಿಯರಿಗೆ ಸಂಗ್ರಹಿಸಲ್ಪಟ್ಟಿದ್ದರಲ್ಲಿ ಅವರವರ ಪಾಲು ದೊರೆಯಿತು.

20 ಹೀಗೆ ಅರಸನಾದ ಹಿಜ್ಕೀಯನು ಯೆಹೂದ ದೇಶದಲ್ಲಿ ಈ ಒಳ್ಳೆಯ ಕಾರ್ಯವನ್ನು ಮಾಡಿದನು. ದೇವರಾದ ಯೆಹೋವನ ದೃಷ್ಟಿಯಲ್ಲಿ ಯೋಗ್ಯವಾದದ್ದನ್ನು ನಂಬಿಗಸ್ತಿಕೆಯಿಂದ ಮಾಡಿದನು. 21 ಹಿಜ್ಕೀಯನು ತಾನು ಪ್ರಾರಂಭಿಸಿದ ಪ್ರತಿಯೊಂದು ಕಾರ್ಯಗಳನ್ನೂ ದೇವಾಲಯದ ಕಾರ್ಯಗಳನ್ನೂ ದೇವರ ಕಟ್ಟಳೆಗಳನ್ನೂ ಅನುಸರಿಸುವದನ್ನು ಪೂರ್ಣಹೃದಯದಿಂದ ಮಾಡಿ ಯಶಸ್ವಿಯಾದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International