Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 18-20

ಅಹಾಬನಿಗೆ ಮೀಕಾಯೆಹುವಿನ ಎಚ್ಚರ

18 ಯೆಹೋಷಾಫಾಟನಿಗೆ ಅತ್ಯಧಿಕವಾದ ಐಶ್ವರ್ಯವೂ ಘನತೆಯೂ ಇದ್ದವು. ಅವನು ಅರಸನಾದ ಅಹಾಬನೊಂದಿಗೆ ತನ್ನ ಮದುವೆಯ ಮೂಲಕ ಸಂಬಂಧ ಬೆಳೆಸಿಕೊಂಡನು. ಕೆಲವು ವರ್ಷಗಳ ನಂತರ ಯೆಹೋಷಾಫಾಟನು ಸಮಾರ್ಯ ಪಟ್ಟಣದಲ್ಲಿ ಅಹಾಬನನ್ನು ಸಂಧಿಸಲು ಹೋದನು. ಯೆಹೋಷಾಫಾಟನಿಗೂ ಅವನೊಂದಿಗೆ ಬಂದಿದ್ದ ಜನರಿಗೂ ಅಹಾಬನು ಅನೇಕ ದನಕುರಿಗಳನ್ನು ವಧಿಸಿ ಔತಣಮಾಡಿಸಿದನು. ರಾಮೋತ್‌ಗಿಲ್ಯೋದ್ ಪಟ್ಟಣದ ಮೇಲೆ ಯುದ್ಧಮಾಡಲು ಅಹಾಬನು ಯೆಹೋಷಾಫಾಟನನ್ನು ಪ್ರೇರೇಪಿಸಿದನು. ಇಸ್ರೇಲರ ಅರಸನಾದ ಅಹಾಬನು ಯೆಹೂದದ ಅರಸನಾದ ಯೆಹೋಷಾಫಾಟನಿಗೆ, “ನೀನು ನನ್ನೊಂದಿಗೆ ರಾಮೋತ್‌ಗಿಲ್ಯಾದಿಗೆ ಯುದ್ಧಮಾಡಲು ಬರುವಿಯಾ?” ಎಂದು ಕೇಳಲು, ಯೆಹೋಷಾಫಾಟನು, “ನಾನು ನಿನ್ನವನೆ, ನನ್ನ ಜನರು ನಿನ್ನ ಜನರೇ ಆಗಿದ್ದಾರೆ. ನಾವು ಯುದ್ಧಮಾಡಲು ನಿಮ್ಮೊಂದಿಗೆ ಬರುತ್ತೇವೆ” ಎಂದು ಅಹಾಬನಿಗೆ ಉತ್ತರಿಸಿದನು. ಯೆಹೋಷಾಫಾಟನು ಅಹಾಬನಿಗೆ, “ಆದರೆ ಮೊದಲು ನಾವು ಯೆಹೋವನನ್ನು ವಿಚಾರಿಸೋಣ” ಅಂದನು.

ಆಗ ಅಹಾಬನು ನಾನೂರು ಮಂದಿ ಪ್ರವಾದಿಗಳನ್ನು ಒಟ್ಟಾಗಿ ಸೇರಿಸಿ ಅವರಿಗೆ, “ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬೇಕೋ ಬೇಡವೋ?” ಎಂದು ಕೇಳಿದಾಗ

ಆ ಪ್ರವಾದಿಗಳು ಅಹಾಬನಿಗೆ, “ಹೋಗು, ದೇವರು ರಾಮೋತ್‌ಗಿಲ್ಯಾದನ್ನು ಸೋಲಿಸುವಂತೆ ಮಾಡುವನು” ಎಂದು ಹೇಳಿದರು.

ಆಗ ಯೆಹೋಷಾಫಾಟನು, “ಈ ಪ್ರವಾದಿಗಳಲ್ಲದೆ ಬೇರೆ ಪ್ರವಾದಿಗಳಿಲ್ಲವೆ? ಅವರ ಮೂಲಕ ನಾವು ಯೆಹೋವನನ್ನು ಕೇಳೋಣ” ಎಂದನು.

ಆಗ ಅರಸನಾದ ಅಹಾಬನು, “ಇನ್ನೂ ಒಬ್ಬನು ಇದ್ದಾನೆ. ನಾವು ಅವನಿಂದ ಯೆಹೋವನನ್ನು ವಿಚಾರಿಸಬಹುದು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯಾಕೆಂದರೆ ನನ್ನ ವಿಷಯವಾಗಿ ಯೆಹೋವನಿಂದ ಯಾವ ಒಳ್ಳೆಯ ಸಂದೇಶವನ್ನೂ ಅವನು ಕೊಡುವದಿಲ್ಲ. ನನ್ನ ಬಗ್ಗೆ ಯಾವಾಗಲೂ ಕೆಟ್ಟದ್ದನ್ನೇ ನುಡಿಯುತ್ತಾನೆ. ಅವನು ಇಮ್ಲನ ಮಗನಾದ ಮೀಕಾಯೆಹುವು” ಅಂದನು.

ಅದಕ್ಕೆ ಯೆಹೋಷಾಫಾಟನು, “ಅಹಾಬನೇ, ನೀನು ಹಾಗೆ ಹೇಳಬಾರದು” ಅಂದನು.

ಆಗ ಅಹಾಬನು ತನ್ನ ಸೇವಕರಲ್ಲೊಬ್ಬನನ್ನು ಕರೆದು, “ಬೇಗ ಹೋಗಿ ಇಮ್ಲನ ಮಗನಾದ ಮೀಕಾಯೆಹುವನ್ನು ಕರೆದುಕೊಂಡು ಬಾ” ಎಂದು ಆಜ್ಞಾಪಿಸಿದನು.

ಇಸ್ರೇಲರ ಅರಸನಾದ ಅಹಾಬನೂ ಯೆಹೂದ್ಯರ ಅರಸನಾದ ಯೆಹೋಷಾಫಾಟನೂ ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಅವರು ಸಮಾರ್ಯ ಪಟ್ಟಣದ ಮುಂಭಾಗದ ಬಾಗಿಲಿನೆದುರು ಸಿಂಹಾಸನಗಳ ಮೇಲೆ ಕುಳಿತಿದ್ದರು. ಆ ನಾನೂರು ಮಂದಿ ಪ್ರವಾದಿಗಳು ಅವರ ಮುಂದೆ ನಿಂತುಕೊಂಡು ಪ್ರವಾದಿಸುತ್ತಿದ್ದರು. 10 ಚಿದ್ಕೀಯನು ಕೆನಾನನ ಮಗ. ಚಿದ್ಕೀಯನು ಕಬ್ಬಿಣದ ಕೊಂಬುಗಳನ್ನು ತಯಾರಿಸಿ, “ಇದು ಯೆಹೋವನ ನುಡಿ. ಈ ಕಬ್ಬಿಣದ ಕೊಂಬುಗಳಿಂದಲೋ ಎಂಬಂತೆ ನೀನು ಅರಾಮ್ಯರನ್ನು ನಾಶಮಾಡುವೆ” ಎಂದು ಹೇಳಿದನು. 11 ಅಲ್ಲಿದ್ದ ಪ್ರವಾದಿಗಳೆಲ್ಲರೂ ಅದನ್ನೇ ನುಡಿದರು. ಅವರು, “ನೀನು ರಾಮೋತ್‌ಗಿಲ್ಯಾದಿಗೆ ಹೋಗು. ನಿನಗಲ್ಲಿ ಜಯವಾಗುವದು. ಯೆಹೋವನು ಅರಾಮ್ಯರನ್ನು ಸೋಲಿಸುವಂತೆ ನಿನಗೆ ಸಹಾಯಮಾಡುವನು” ಎಂದರು.

12 ಮೀಕಾಯೆಹುವಿನ ಬಳಿಗೆ ಹೋದ ರಾಜನ ಸೇವಕನು ಅವನಿಗೆ, “ಮೀಕಾಯೆಹುವೇ ಕೇಳು, ಎಲ್ಲಾ ಪ್ರವಾದಿಗಳೂ ರಾಜನು ಗೆಲ್ಲುವನು ಎಂದು ಪ್ರವಾದಿಸುತ್ತಿದ್ದಾರೆ. ಅದನ್ನೇ ನೀನು ಹೇಳಿ ಅರಸನಿಗೆ ಶುಭವನ್ನು ಹಾರೈಸಬೇಕು” ಅಂದನು.

13 ಆದರೆ ಮೀಕಾಯೆಹುವು, “ಯೆಹೋವನಾಣೆ, ಆತನು ಹೇಳಿದ್ದನ್ನೇ ನಾನು ಹೇಳುವೆನು” ಎಂದನು.

14 ಮೀಕಾಯೆಹುವು ಅಹಾಬನ ಬಳಿಗೆ ಬಂದಾಗ ಅರಸನು, “ಮೀಕಾಯೆಹುವೇ, ನಾವು ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಕ್ಕೆ ಹೊರಡಬಹುದೋ?” ಎಂದು ವಿಚಾರಿಸಿದಾಗ

ಮೀಕಾಯೆಹುವು, “ಹೋಗಿ, ಯುದ್ಧಮಾಡು. ದೇವರು ಅವರನ್ನು ನಿನ್ನ ಕೈಗಳಿಗೆ ಒಪ್ಪಿಸುವನು” ಎಂದು ಹೇಳಿದನು.

15 ಆಗ ಅಹಾಬನು ಮೀಕಾಯೆಹುವಿಗೆ, “ನೀನು ಯೆಹೋವನ ಹೆಸರಿನಲ್ಲಿ ನನಗೆ ಸತ್ಯವನ್ನೇ ತಿಳಿಸಬೇಕೆಂದು ಎಷ್ಟೋ ಸಲ ನಿನ್ನಿಂದ ಪ್ರಮಾಣ ಮಾಡಿಸಿರುತ್ತೇನೆ” ಎಂದು ಹೇಳಿದಾಗ ಮೀಕಾಯೆಹುವು,

16 “ಇಸ್ರೇಲಿನ ಜನರೆಲ್ಲರೂ ಬೆಟ್ಟಪ್ರದೇಶಗಳಲ್ಲಿ ಚದರಿರುವದನ್ನು ಕಂಡೆನು. ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಕರ್ತನು ಹೇಳಿದ್ದೇನೆಂದರೆ, ‘ಅವರಿಗೆ ನಾಯಕರಿಲ್ಲ, ಆದ್ದರಿಂದ ಸುರಕ್ಷಿತವಾಗಿ ಮನೆಗೆ ಹಿಂದಿರುಗಲಿ’” ಎಂದು ಹೇಳಿದನು.

17 ಇಸ್ರೇಲಿನ ರಾಜನಾದ ಅಹಾಬನು ಯೆಹೋಷಾಫಾಟನಿಗೆ, “ಮೀಕಾಯೆಹುವು ನನ್ನ ಬಗ್ಗೆ ಯೆಹೋವನಿಂದ ಒಳ್ಳೆಯ ಸಂದೇಶವನ್ನು ಕೊಡುವದೇ ಇಲ್ಲವೆಂದು ನಿನಗೆ ಹೇಳಿದೆನಲ್ಲಾ? ಅವನಲ್ಲಿ ನನ್ನ ವಿಷಯವಾಗಿ ಕೆಟ್ಟ ಸಂದೇಶವೇ ಇರುವದು” ಎಂದು ಹೇಳಿದನು.

18 ಮೀಕಾಯೆಹುವು, “ಯೆಹೋವನಿಂದ ಬಂದ ಸಂದೇಶವನ್ನು ಕೇಳು. ಯೆಹೋವನು ಸಿಂಹಾಸನದಲ್ಲಿ ಕುಳಿತಿರುವದನ್ನು ನಾನು ಕಂಡೆನು. ಅವನ ಎಡಬಲಗಳಲ್ಲಿ ಪರಲೋಕದ ಸೈನ್ಯವು ನಿಂತಿತ್ತು. 19 ‘ರಾಮೋತ್‌ಗಿಲ್ಯಾದಿನ ಮೇಲೆ ಯುದ್ಧಮಾಡಲು ಅಹಾಬನನ್ನು ಯಾರು ಮರುಳುಗೊಳಿಸುವರು? ಯಾಕೆಂದರೆ ಅಲ್ಲಿ ಅವನು ಸಾಯಬೇಕು’ ಎಂದು ಯೆಹೋವನು ಕೇಳಿದಾಗ ಅಲ್ಲಿ ನಿಂತಿದ್ದವರು ಬೇರೆಬೇರೆ ವಿಧಾನವನ್ನು ತಿಳಿಸಿದರು. 20 ಆಗ ಒಂದು ಆತ್ಮವು ದೇವರ ಮುಂದೆ ನಿಂತು, ‘ನಾನು ಅಹಾಬನನ್ನು ಮರುಳುಗೊಳಿಸುತ್ತೇನೆ’ ಎಂದು ಹೇಳಿತು. ‘ಹೇಗೆ?’ ಎಂದು ಆತನು ಕೇಳಿದನು. 21 ಅದಕ್ಕೆ ಆತ್ಮವು, ‘ನಾನು ಹೋಗಿ ಅಹಾಬನ ಪ್ರವಾದಿಗಳಿಗೆ ಸುಳ್ಳುಹೇಳುವ ಆತ್ಮವಾಗುತ್ತೇನೆ’ ಎಂದು ಹೇಳಿತು. ಅದಕ್ಕೆ ಆತನು ‘ಸರಿ, ಹಾಗೆಯೇ ಮಾಡು. ನೀನು ನಿನ್ನ ಕಾರ್ಯದಲ್ಲಿ ಸಫಲವಾಗುವೆ’ ಎಂದು ಹೇಳಿದನು.

22 “ಆದ್ದರಿಂದ ಅಹಾಬನೇ, ನಿನ್ನ ಪ್ರವಾದಿಗಳ ಬಾಯಿಯಲ್ಲಿ ಸುಳ್ಳುಹೇಳುವ ಆತ್ಮವನ್ನು ಯೆಹೋವನೇ ಇರಿಸಿದ್ದಾನೆ; ನಿನಗೆ ಕೇಡಾಗುವುದೆಂದು ಯೆಹೋವನೇ ತಿಳಿಸುತ್ತಾನೆ” ಎಂದನು.

23 ಆಗ ಚಿದ್ಕೀಯನು ಮುಂದೆ ಬಂದು ಮೀಕಾಯೆಹುವಿನ ಕೆನ್ನೆಗೆ ಹೊಡೆದು, “ಮೀಕಾಯೆಹುವೇ, ಯೆಹೋವನ ಆತ್ಮನು ನಿನ್ನೊಂದಿಗೆ ಮಾತಾಡಲು ನನ್ನ ಬಳಿಯಿಂದ ಬಂದಾಗ ಯಾವ ಕಡೆಗೆ ಹೋದನು?” ಎಂದು ಗೇಲಿಮಾಡಿದಾಗ,

24 ಮೀಕಾಯೆಹುವು, “ಚಿದ್ಕೀಯನೇ, ನೀನು ಒಳಕೋಣೆಯೊಳಗೆ ಅವಿತು ಕುಳಿತಿರುವ ದಿನದಲ್ಲಿ ನಿನಗೆ ತಿಳಿಯುವದು” ಎಂದು ಹೇಳಿದನು.

25 ಆಗ ಅರಸನಾದ ಅಹಾಬನು, ಮೀಕಾಯೆಹುವನ್ನು ತೆಗೆದುಕೊಂಡು ನಗರಪಾಲಕನಾದ ಅಮೋನನಿಗೂ ಮತ್ತು ರಾಜಕುಮಾರನಾದ ಯೋವಾಷನಿಗೂ ಕೊಟ್ಟು, 26 ಅವರಿಗೆ “ಮೀಕಾಯೆಹುವನ್ನು ಸೆರೆಮನೆಗೆ ಹಾಕಿ. ನಾನು ಯುದ್ಧದಿಂದ ಸುರಕ್ಷಿತವಾಗಿ ಹಿಂತಿರುಗುವ ತನಕ ಬರಿ ರೊಟ್ಟಿ ಮತ್ತು ನೀರನ್ನು ಮಾತ್ರ ಅವನಿಗೆ ಕೊಡಿ ಎಂದು ಅರಸನು ಆಜ್ಞಾಪಿಸುತ್ತಾನೆ ಎಂದು ಹೇಳಿ” ಎಂದನು.

27 ಆಗ ಮೀಕಾಯೆಹುವು, “ಅಹಾಬನೇ, ನೀನು ರಣರಂಗದಿಂದ ಸುರಕ್ಷಿತವಾಗಿ ಬಂದರೆ ಯೆಹೋವನು ನನ್ನ ಮೂಲಕ ಮಾತನಾಡಲಿಲ್ಲವೆಂದು ತಿಳಿದುಕೋ. ಜನರೇ, ನನ್ನ ಮಾತನ್ನು ಕೇಳಿ ನೆನಪಿನಲ್ಲಿಡಿರಿ” ಎಂದು ಉತ್ತರಕೊಟ್ಟನು.

ರಾಮೋತ್‌ಗಿಲ್ಯಾದಿನಲ್ಲಿ ಅಹಾಬನು ಕೊಲ್ಲಲ್ಪಟ್ಟದ್ದು

28 ಇಸ್ರೇಲಿನ ರಾಜನಾದ ಅಹಾಬನೂ ಯೆಹೂದದ ರಾಜನಾದ ಯೆಹೋಷಾಫಾಟನೂ ರಾಮೋತ್‌ಗಿಲ್ಯಾದ್ ಪಟ್ಟಣದ ಮೇಲೆ ಧಾಳಿ ಮಾಡಿದರು. 29 ಯೆಹೋಷಾಫಾಟನಿಗೆ ಅಹಾಬನು, “ನಾನು ಯುದ್ಧರಂಗಕ್ಕೆ ಹೋಗುವ ಮೊದಲು ವೇಷ ಬದಲಾಯಿಸುತ್ತೇನೆ. ನೀನು ರಾಜವಸ್ತ್ರದಲ್ಲಿಯೇ ಇರು” ಎಂದು ಹೇಳಿ ತನ್ನ ರೂಪವನ್ನು ಬದಲಾಯಿಸಿದನು. ಇಬ್ಬರು ರಾಜರೂ ಯುದ್ಧರಂಗಕ್ಕಿಳಿದರು.

30 ಅರಾಮ್ಯರ ರಾಜನು ತನ್ನ ರಥದ ಅಧಿಪತಿಗಳಿಗೆ, “ನೀವು ಜನರೊಂದಿಗೆ ಯುದ್ಧಮಾಡಬೇಡಿರಿ, ಅಧಿಕಾರಿಗಳ ಮತ್ತು ಸಾಮಾನ್ಯ ಸೈನಿಕರ ಗೊಡವೆಗೆ ಹೋಗಬೇಡಿರಿ. ಆದರೆ ನೀವು ಇಸ್ರೇಲಿನ ರಾಜನಾದ ಅಹಾಬನೊಂದಿಗೇ ಯುದ್ಧಮಾಡಿರಿ” ಎಂದು ಹೇಳಿದನು. 31 ರಥಾಧಿಪತಿಗಳು ಯೆಹೋಷಾಫಾಟನನ್ನು ನೋಡಿದಾಗ ಅವನೇ ಅಹಾಬನೆಂದೆಣಿಸಿ ಅವನ ಮೇಲೆ ದಾಳಿ ನಡೆಸಿದರು. ಆದರೆ ಯೆಹೋಷಾಫಾಟನು ಗಟ್ಟಿಯಾಗಿ ಕೂಗಿಕೊಂಡನು. ಆಗ ಯೆಹೋವನು ಅವನಿಗೆ ಸಹಾಯಮಾಡಿ ರಥಾಧಿಪತಿಗಳು ಅವನಿಂದ ಬೇರೆ ಕಡೆಗೆ ತಿರುಗುವಂತೆ ಮಾಡಿದನು. 32 ಯೆಹೋಷಾಫಾಟನು ಇಸ್ರೇಲಿನ ರಾಜನಲ್ಲವೆಂದು ಅವರು ತಿಳಿದು ಅವನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದರು.

33 ಆದರೆ ಒಬ್ಬ ಸಿಪಾಯಿಯು ಬಿಲ್ಲು ತೆಗೆದು ಬಾಣವನ್ನು ಹೂಡಿ ಗುರಿಯಿಲ್ಲದೆ ಹೊಡೆದಾಗ ಆ ಬಾಣವು ಬಂದು ಇಸ್ರೇಲರ ರಾಜನಾದ ಅಹಾಬನಿಗೆ ತಾಗಿತು. ಅವನ ಕವಚದ ಸಂದಿನಿಂದ ಅವನ ದೇಹದೊಳಗೆ ಹೊಕ್ಕಿತು. ಆಗ ಅವನು ತನ್ನ ರಥವನ್ನೋಡಿಸುವ ರಾಹುತನಿಗೆ, “ರಥವನ್ನು ಹಿಂದಕ್ಕೆ ತಿರುಗಿಸಿ ನನ್ನನ್ನು ರಣರಂಗದಿಂದ ಹೊರಕ್ಕೆ ಕರೆದುಕೊಂಡು ಹೋಗು. ನಾನು ಗಾಯಗೊಂಡಿದ್ದೇನೆ” ಅಂದನು.

34 ಆ ದಿವಸ ಯುದ್ಧವು ಬಲುಘೋರವಾಗಿ ನಡೆಯಿತು. ಅಹಾಬನು ರಥದ ಕಂಬಕ್ಕೆ ಒರಗಿ ಸಂಜೆಯ ತನಕ ಹಾಗೆಯೇ ಅರಾಮ್ಯರ ಎದುರು ನಿಂತುಕೊಂಡಿದ್ದನು. ಸೂರ್ಯಾಸ್ತಮಾನವಾದಾಗ ಅಹಾಬನು ಸತ್ತನು.

19 ಯೆಹೂದದ ರಾಜನಾದ ಯೆಹೋಷಾಫಾಟನು ಜೆರುಸಲೇಮಿನಲ್ಲಿದ್ದ ತನ್ನ ಮನೆಗೆ ಸುರಕ್ಷಿತವಾಗಿ ಹಿಂದಿರುಗಿದನು. ದೇವದರ್ಶಿಯಾದ ಯೇಹೂ ಅವನನ್ನು ಎದುರುಗೊಂಡನು. ಅವನು ಹನಾನೀಯನ ಮಗ. ರಾಜನಿಗೆ ಯೇಹುವು ಹೇಳಿದ್ದೇನೆಂದರೆ, “ನೀನು ದುಷ್ಟಜನರಿಗೆ ಸಹಾಯಮಾಡಿದ್ದೇಕೆ? ಯೆಹೋವನನ್ನು ದ್ವೇಷಿಸುವ ಜನರನ್ನು ನೀನು ಪ್ರೀತಿಸಿದ್ದೇಕೆ? ಆ ಕಾರಣಕ್ಕಾಗಿ ಯೆಹೋವನು ನಿನ್ನ ಮೇಲೆ ಕೋಪಗೊಂಡಿದ್ದಾನೆ. ಆದರೆ ನಿನ್ನಲ್ಲಿ ಕೆಲವಾರು ಒಳ್ಳೆಯ ವಿಷಯಗಳಿವೆ. ನೀನು ಈ ದೇಶದೊಳಗಿದ್ದ ಅಶೇರಕಂಬಗಳನ್ನು ತೆಗೆದುಹಾಕಿಸಿದೆ; ಯೆಹೋವನನ್ನು ಹಿಂಬಾಲಿಸಲು ನಿನ್ನ ಹೃದಯದಲ್ಲಿ ತೀರ್ಮಾನಿಸಿದೆ” ಅಂದನು.

ಯೆಹೋಷಾಫಾಟನು ನ್ಯಾಯಾಧಿಪತಿಗಳನ್ನು ಆರಿಸಿದ್ದು

ಯೆಹೋಷಾಫಾಟನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಅವನು ಬೇರ್ಷೆಬ ನಗರದಿಂದ ಹಿಡಿದು ಎಫ್ರಾಯೀಮ್ ಬೆಟ್ಟದ ಪ್ರದೇಶದ ಜನರನ್ನೆಲ್ಲಾ ಸಂದರ್ಶಿಸಿದನು. ಯೆಹೋಷಾಫಾಟನು ಈ ಜನರನ್ನೆಲ್ಲ ಅವರ ಪೂರ್ವಿಕರ ದೇವರಾದ ಯೆಹೋವನ ಬಳಿಗೆ ಮತ್ತೆ ಕರೆದುಕೊಂಡು ಬಂದನು. ಯೆಹೋಷಾಫಾಟನು ಯೆಹೂದ ಪ್ರಾಂತ್ಯದಲ್ಲಿ ನ್ಯಾಯಾಧಿಪತಿಗಳನ್ನು ಆರಿಸಿದನು. ಯೆಹೂದದ ಪ್ರತಿಯೊಂದು ಕೋಟೆಯ ಪಟ್ಟಣಗಳಿಗೆ ನ್ಯಾಯಾಧಿಪತಿಗಳನ್ನು ನೇಮಕ ಮಾಡಿದನು. ಅವನು ಅವರಿಗೆ, “ನೀವು ಮಾಡುವ ಕಾರ್ಯದಲ್ಲಿ ಜಾಗರೂಕರಾಗಿರಿ. ನೀವು ಯೆಹೋವನ ಪರವಾಗಿ ಜನರ ನ್ಯಾಯವನ್ನು ತೀರಿಸುವವರಾಗಿದ್ದೀರಿ. ನೀವು ನ್ಯಾಯತೀರಿಸುವಾಗ ಯೆಹೋವನು ನಿಮ್ಮ ಸಂಗಡ ಇರುವನು. ನಿಮ್ಮಲ್ಲಿ ಪ್ರತಿಯೊಬ್ಬರೂ ಯೆಹೋವನಿಗೆ ಭಯಪಡುವವರಾಗಿರಬೇಕು. ಆತನು ನ್ಯಾಯವಂತನಾಗಿದ್ದಾನೆ. ಆತನಿಗೆ ಎಲ್ಲಾ ಜನರು ಸಮಾನರೇ. ಆತನು ಲಂಚ ಸ್ವೀಕರಿಸಿ ನ್ಯಾಯವನ್ನು ಬದಲಾಯಿಸುವದಿಲ್ಲ” ಎಂದು ಹೇಳಿದನು.

ಜೆರುಸಲೇಮಿನೊಳಗೆ ಯೆಹೋಷಾಫಾಟನು ಲೇವಿಯರಲ್ಲಿ, ಯಾಜಕರಲ್ಲಿ ಮತ್ತು ಇಸ್ರೇಲರ ನಾಯಕರಲ್ಲಿ ಕೆಲವರನ್ನು ನ್ಯಾಯಾಧಿಪತಿಗಳನ್ನಾಗಿ ಆರಿಸಿದನು. ಇವರು ಜನರ ಜಗಳಗಳನ್ನು ಮತ್ತು ಸಮಸ್ಯೆಗಳನ್ನು ಯೆಹೋವನ ಕಟ್ಟಳೆಗಳ ಪ್ರಕಾರ ತೀರಿಸಬೇಕಾಗಿತ್ತು. ಯೆಹೋಷಾಫಾಟನು ಅವರಿಗೆ, “ನೀವು ಹೃದಯಪೂರ್ವಕವಾಗಿ ನಿಮ್ಮ ಕೆಲಸ ನಡಿಸಬೇಕು. ನೀವು ಯೆಹೋವನಿಗೆ ಭಯಪಡುವವರಾಗಿರಬೇಕು. 10 ನಿಮ್ಮ ಬಳಿಗೆ ಕೊಲೆಯ ಪ್ರಕರಣಗಳ ಬಗ್ಗೆ, ಕಟ್ಟಳೆಯ ಬಗ್ಗೆ, ಆಜ್ಞೆಯ ಬಗ್ಗೆ, ನಿಯಮದ ಬಗ್ಗೆ ಮತ್ತು ಬೇರೆ ಯಾವುದಾದರೂ ಕಟ್ಟಳೆಯ ಬಗ್ಗೆ ಬಗೆಹರಿಸಲು ಬರಬಹುದು. ಅವೆಲ್ಲಾ ನಿಮ್ಮ ಸಹೋದರರಿಂದಲೇ ಬರುವವು. ದೇವರಿಗೆ ವಿರುದ್ಧವಾಗಿ ಪಾಪಮಾಡಬಾರದೆಂಬುದಾಗಿ ಅವರಿಗೆಲ್ಲಾ ಎಚ್ಚರಿಸಬೇಕು. ನೀವು ನಂಬಿಗಸ್ತಿಕೆಯಿಂದ ಸೇವೆಮಾಡದಿದ್ದಲ್ಲಿ ನಿಮ್ಮ ಮೇಲೆಯೂ ನಿಮ್ಮ ಸಹೋದರರ ಮೇಲೆಯೂ ದೇವರ ಕೋಪ ಉರಿಯುವಂತೆ ಮಾಡಿಕೊಳ್ಳುವಿರಿ. ನೀವು ತಪ್ಪಿತಸ್ಥರಾಗದೆ ನಂಬಿಗಸ್ತಿಕೆಯಿಂದ ಸೇವೆಮಾಡಿರಿ.

11 “ಅಮರ್ಯನು ನಿಮ್ಮ ಪ್ರಧಾನಯಾಜಕನು. ಯೆಹೋವನ ಕಾರ್ಯಗಳಿಗೆಲ್ಲಾ ಅವನೇ ನಿಮಗೆ ಪ್ರಮುಖನು. ಯೆಹೋವನ ಕುರಿತಾದ ಸಂಗತಿಗಳ ಬಗ್ಗೆ ಜೆಬದ್ಯನು ಪ್ರಮುಖನಾಗಿರುವನು. ಅವನು ಯೆಹೂದ ಕುಲದ ಇಷ್ಮಾಯೇಲನ ಮಗ. ಲೇವಿಯರು ನಿಮಗಾಗಿ ಬರವಣಿಗೆಯ ಕೆಲಸವನ್ನು ಮಾಡುವರು. ನೀವು ಮಾಡುವ ಕಾರ್ಯಗಳಲ್ಲಿ ಧೈರ್ಯಶಾಲಿಗಳಾಗಿರಿ. ಯೆಹೋವನು ನೀತಿವಂತರೊಂದಿಗಿರುವನು” ಎಂದು ಹೇಳಿದನು.

ಯೆಹೋಷಾಫಾಟನು ಯುದ್ಧವನ್ನು ಎದುರಿಸಿದನು

20 ಕೆಲಕಾಲದನಂತರ ಮೋವಾಬ್ಯರೂ ಅಮ್ಮೋನಿಯರೂ ಮೆಗೂನ್ಯರಲ್ಲಿ ಕೆಲವರೂ ಯೆಹೋಷಾಫಾಟನೊಂದಿಗೆ ಯುದ್ಧಮಾಡಲು ಬಂದರು. ಕೆಲವು ಜನರು ಯೆಹೋಷಾಫಾಟನ ಬಳಿಗೆ ಬಂದು, “ಎದೋಮ್ಯರ ದೊಡ್ಡ ಸೈನ್ಯವು ಲವಣಸಮುದ್ರದ ಆಚೆಕಡೆಯಿಂದ ನಿನಗೆ ವಿರುದ್ಧವಾಗಿ ಬರುತ್ತಿದೆ. ಈಗಾಗಲೇ ಅವರು ಹಚೆಚೋನ್ ತಾಮಾರಿನಲ್ಲಿದ್ದಾರೆ” (ಇದನ್ನು ಏಂಗೆದಿ ಎಂತಲೂ ಕರೆಯುತ್ತಾರೆ.) ಎಂದು ಹೇಳಿದರು. ಯೆಹೋಷಾಫಾಟನು ಭಯಭೀತನಾಗಿ ಯೆಹೋವನನ್ನು ವಿಚಾರಿಸಲು ನಿರ್ಧರಿಸಿದನು. ಯೆಹೂದದ ಎಲ್ಲಾ ಜನರು ಉಪವಾಸ ಮಾಡಬೇಕೆಂದು ಆಜ್ಞೆ ಹೊರಡಿಸಿದನು. ಯೆಹೂದದ ಜನರೆಲ್ಲಾ ಯೆಹೋವನನ್ನು ವಿಚಾರಿಸಲು ಒಟ್ಟಾಗಿ ಸೇರಿದರು. ಯೆಹೋಷಾಫಾಟನು ದೇವಾಲಯದ ಹೊಸ ಅಂಗಳದಲ್ಲಿ ಕೂಡಿಬಂದ ಜನರೆದುರು ಎದ್ದುನಿಂತು,

“ನಮ್ಮ ಪಿತೃಗಳ ದೇವರಾದ ಯೆಹೋವನೇ, ನೀನು ಪರಲೋಕದಲ್ಲಿರುವ ದೇವರು. ಲೋಕದ ಎಲ್ಲಾ ದೇಶಗಳನ್ನಾಳುವವನು ನೀನೇ. ಬಲಸಾಮರ್ಥ್ಯವುಳ್ಳವನು ನೀನೇ, ಯಾರೂ ನಿನಗೆದುರಾಗಿ ನಿಲ್ಲಲಾರರು. ನೀನೇ ನಮ್ಮ ದೇವರಾಗಿರುವೆ. ನೀನು ಈ ದೇಶದಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿ ಈ ದೇಶವನ್ನು ಅಬ್ರಹಾಮನ ಸಂತತಿಯವರಾದ ಇಸ್ರೇಲರಿಗೆ ಕೊಟ್ಟೆ. ಅಬ್ರಹಾಮನು ನಿನ್ನ ಸ್ನೇಹಿತನಾಗಿದ್ದನು. ಅಬ್ರಹಾಮನ ಸಂತತಿಯವರು ಈ ದೇಶದಲ್ಲಿ ವಾಸವಾಗಿ ನಿನ್ನ ಹೆಸರನ್ನು ಸ್ಥಾಪಿಸಲು ನಿನಗೊಂದು ದೇವಾಲಯವನ್ನು ಕಟ್ಟಿದರು. ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.

10 “ಈಗ ಅಮ್ಮೋನಿಯರೂ ಮೋವಾಬಿನವರೂ ಸೇಯೀರ್ ಬೆಟ್ಟಪ್ರದೇಶದವರೂ ನಮಗೆ ವಿರೋಧವಾಗಿ ಬಂದಿದ್ದಾರೆ. ಈಜಿಪ್ಟಿನಿಂದ ಇಸ್ರೇಲರು ಹೊರಬಂದಾಗ ಅವರ ದೇಶದೊಳಗಿಂದ ಪ್ರಯಾಣ ಮಾಡಲು ನೀನು ಬಿಡಲಿಲ್ಲ. ಆದ್ದರಿಂದ ಇಸ್ರೇಲರು ಅವರನ್ನು ನಾಶಮಾಡದೆ ಬೇರೆ ಕಡೆಗೆ ತಿರುಗಿದರು.[a] 11 ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ. 12 ನಮ್ಮ ದೇವರೇ, ನೀನೇ ಅವರನ್ನು ಶಿಕ್ಷಿಸು. ನಮಗೆ ವಿರುದ್ಧವಾಗಿ ಬರುತ್ತಿರುವ ಅವರ ದೊಡ್ಡಸೈನ್ಯವನ್ನು ಎದುರಿಸಲು ನಮ್ಮಿಂದಾಗದು. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ. ನಾವು ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ” ಎಂದು ಪ್ರಾರ್ಥಿಸಿದನು.

13 ಯೆಹೂದದ ಎಲ್ಲಾ ಜನರು ತಮ್ಮ ಹೆಂಡತಿಮಕ್ಕಳೊಂದಿಗೆ ಯೆಹೋವನೆದುರು ನಿಂತಿದ್ದರು. 14 ಆಗ ಜೆಕರ್ಯನ ಮಗನಾದ ಯೆಹಜೀಯೇಲನ ಮೇಲೆ ಯೆಹೋವನ ಆತ್ಮನು ಬಂದನು. ಜೆಕರ್ಯನು ಬೆನಾಯನ ಮಗ. ಬೆನಾಯನು ಯೆಗೀಯೇಲನ ಮಗ. ಯೆಗೀಯೇಲನು ಮತ್ತನ್ಯನ ಮಗ. ಯೆಹಜೀಯೇಲನು ಲೇವಿಯನಾಗಿದ್ದನು ಮತ್ತು ಆಸಾಫನ ಸಂತತಿಯವನಾಗಿದ್ದನು. 15 ಸಭೆಯ ಮಧ್ಯದಲ್ಲಿ ನಿಂತುಕೊಂಡು ಯೆಹಜೀಯೇಲನು ಅವರಿಗೆ, “ರಾಜನಾದ ಯೆಹೋಷಾಫಾಟನೇ, ನನ್ನ ಮಾತನ್ನು ಕೇಳು. ಜೆರುಸಲೇಮಿನಲ್ಲಿಯೂ ಯೆಹೂದದ ರಾಜ್ಯದಲ್ಲಿಯೂ ವಾಸಿಸುವ ಸರ್ವಜನರೇ, ನನ್ನ ಮಾತನ್ನು ಕೇಳಿರಿ. ಯೆಹೋವನು ನಿಮಗೆ ಹೀಗೆನ್ನುತ್ತಾನೆ: ‘ಆ ದೊಡ್ಡ ಸೈನ್ಯಕ್ಕೆ ಹೆದರಿ ಚಿಂತೆಗೊಳಗಾಗಬೇಡಿ. ಯಾಕೆಂದರೆ ಯುದ್ಧವು ನಿಮ್ಮದಲ್ಲ, ಅದು ದೇವರದೇ! 16 ನಾಳೆ ಅವರ ವಿರುದ್ಧವಾಗಿ ಹೊರಟು ಅವರೊಂದಿಗೆ ಹೋರಾಡಿ. ಅವರು ಹಜ್ಜೀಜ್ ಕಣಿವೆಯಿಂದ ಬರುವರು. ನೀವು ಅವರನ್ನು ಯೆರೂವೇಲ್ ಅರಣ್ಯದ ಮುಂದಿರುವ ಕಣಿವೆಯ ತುದಿಯಲ್ಲಿ ಅವರನ್ನು ಸಂಧಿಸುವಿರಿ. 17 ನೀವು ಈ ಯುದ್ಧದಲ್ಲಿ ಹೋರಾಡುವ ಅವಶ್ಯವಿಲ್ಲ. ನಿಮ್ಮ ಸ್ಥಳಗಳಲ್ಲಿ ಸ್ಥಿರವಾಗಿ ನಿಂತುಕೊಂಡಿರಿ. ಯೆಹೋವನ ರಕ್ಷಣಾಕಾರ್ಯವನ್ನು ನೀವು ನೋಡುವಿರಿ. ಭಯಪಡಬೇಡಿರಿ; ಚಿಂತೆಗೊಳಗಾಗಬೇಡಿರಿ; ಯೆಹೋವನು ನಿಮ್ಮೊಂದಿಗಿದ್ದಾನೆ. ಆದ್ದರಿಂದ ನೀವು ನಾಳೆ ಹೋಗಿ ಆ ಸೈನ್ಯವನ್ನು ಎದುರಿಸಿರಿ’” ಎಂದು ಹೇಳಿದನು.

18 ಯೆಹೋಷಾಫಾಟನು ನೆಲದ ಮೇಲೆ ಸಾಷ್ಟಾಂಗನಮಸ್ಕಾರ ಮಾಡಿದನು. ಹಾಗೆಯೇ, ನೆರೆದಿದ್ದ ಜನರೆಲ್ಲರೂ ಯೆಹೋವನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 19 ಕೆಹಾತ್ಯನ ಕುಲದವರಾದ ಲೇವಿಯರೂ ಕೋರಹನ ವಂಶದವರೂ ಎದ್ದುನಿಂತು ಇಸ್ರೇಲ್ ದೇವರಾದ ಯೆಹೋವನಿಗೆ ಗಟ್ಟಿಯಾದ ಸ್ವರದಿಂದ ಸ್ತುತಿಗೀತೆ ಹಾಡಿದರು.

20 ಮರುದಿನ ಮುಂಜಾನೆ ಯೆಹೋಷಾಫಾಟನ ಸೈನ್ಯವು ತೆಕೋವದ ಅರಣ್ಯಕ್ಕೆ ಹೊರಟಿತು. ಅವರು ಹೊರಡುವ ಮುಂಚೆ ಯೆಹೋಷಾಫಾಟನು ಎದ್ದುನಿಂತು, “ಜೆರುಸಲೇಮಿನವರೇ, ಯೆಹೂದ ಪ್ರಾಂತ್ಯದವರೇ, ನನ್ನ ಮಾತನ್ನು ಕೇಳಿರಿ. ನಮ್ಮ ದೇವರಾದ ಯೆಹೋವನ ಮೇಲೆ ಭರವಸವಿಡಿರಿ. ಆಗ ನೀವು ಸ್ಥಿರಗೊಳ್ಳುವಿರಿ. ಯೆಹೋವನ ಪ್ರವಾದಿಗಳ ಮೇಲೆ ಭರವಸವಿಡಿರಿ; ಆಗ ನೀವು ಜಯಗಳಿಸುವಿರಿ” ಎಂದು ಹೇಳಿದನು.

21 ಯೆಹೋಷಾಫಾಟನು ಜನರ ಸಲಹೆಗಳನ್ನು ಕೇಳಿದನು; ಯೆಹೋವನನ್ನು ಸ್ತುತಿಸಲು ಗಾಯಕರನ್ನು ಆರಿಸಿದನು; ಯಾಕೆಂದರೆ ಆತನು ಪರಿಶುದ್ಧನು ಮತ್ತು ಅದ್ಭುತಸ್ವರೂಪನು. ಅವರು ಸೈನ್ಯದ ಮುಂದುಗಡೆಯಲ್ಲಿ ಹೋಗುತ್ತಾ ಆತನಿಗೆ ಸ್ತುತಿಗೀತೆಯನ್ನು ಹಾಡಿದರು. ಆ ಗಾಯಕರು,

“ಯೆಹೋವನಿಗೆ ಸ್ತೋತ್ರಮಾಡಿರಿ.
    ಆತನ ಕರುಣೆಯು ನಿರಂತರವಾದದ್ದು”

ಎಂದು ಹಾಡಿದರು. 22 ಅವರು ಹೀಗೆ ಸ್ತೋತ್ರ ಮಾಡುತ್ತಿರುವಾಗ ಅಮ್ಮೋನಿಯರ ಮೇಲೆಯೂ ಮೋವಾಬ್ಯರ ಮೇಲೆಯೂ ಸೇಯೀರ್ ಬೆಟ್ಟಪ್ರದೇಶದವರ ಮೇಲೆಯೂ ಇತರ ವೈರಿಗಳು ಹಠಾತ್ತನೆ ದಾಳಿ ಮಾಡುವಂತೆ ಯೆಹೋವನು ಮಾಡಿದನು. ಯೆಹೂದವನ್ನು ಆಕ್ರಮಣಮಾಡಲು ಬಂದಿದ್ದ ಅವರೆಲ್ಲರೂ ಸೋತುಹೋದರು. 23 ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಬೆಟ್ಟಪ್ರದೇಶದವರೊಂದಿಗೆ ಹೋರಾಡಲಾರಂಭಿಸಿ ಅವರನ್ನು ಕೊಂದು ನಾಶಪಡಿಸಿದರು. ಅವರು ಸೇಯೀರ್ ಬೆಟ್ಟಪ್ರದೇಶದವರನ್ನು ಕೊಂದ ಬಳಿಕ ತಮ್ಮಲ್ಲಿ ತಾವೇ ಒಬ್ಬರನ್ನೊಬ್ಬರು ಕೊಂದರು.

24 ಯೆಹೂದದ ಸೈನ್ಯದವರು ಅರಣ್ಯದಲ್ಲಿ ಶತ್ರು ಸೈನ್ಯವನ್ನು ವೀಕ್ಷಿಸುವ ಸ್ಥಳಕ್ಕೆ ಬಂದಾಗ ಸೈನ್ಯವನ್ನು ಕಾಣದೆ ರಾಶಿಯಾಗಿ ಬಿದ್ದಿದ್ದ ಹೆಣಗಳನ್ನೇ ಕಂಡರು; ಯಾರೂ ಜೀವದಿಂದುಳಿದಿರಲಿಲ್ಲ. 25 ಯೆಹೋಷಾಫಾಟನೂ ಅವನ ಸೈನಿಕರೂ ಬಂದು ಸತ್ತವರ ದೇಹದಿಂದ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು. ಅವರು ಅನೇಕ ಪಶುಗಳನ್ನು, ಐಶ್ವರ್ಯವನ್ನು, ಬಟ್ಟೆಬರೆಗಳನ್ನು ಮತ್ತು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು. ಯೆಹೋಷಾಫಾಟನು ಮತ್ತು ಅವನ ಜನರು ಹೊತ್ತುಕೊಂಡು ಹೋಗಲಾರದಷ್ಟು ವಸ್ತುಗಳಿದ್ದವು; ಅವುಗಳನ್ನು ಶೇಖರಿಸಲು ಮೂರು ದಿವಸಗಳು ಬೇಕಾಯಿತು. 26 ನಾಲ್ಕನೆಯ ದಿವಸದಲ್ಲಿ ಯೆಹೋಷಾಫಾಟನೂ ಅವನ ಸೈನ್ಯವೂ ಬೆರಾಕ ತಗ್ಗಿನಲ್ಲಿ ಬಂದು ಸೇರಿದರು. ಅಲ್ಲಿ ಯೆಹೋವನಿಗೆ ಸ್ತೋತ್ರ ಮಾಡಿದರು. ಆದ್ದರಿಂದ ಈ ದಿನದವರೆಗೂ ಅದಕ್ಕೆ ಬೆರಾಕ[b] ತಗ್ಗು ಎಂಬ ಹೆಸರಿದೆ.

27 ತರುವಾಯ ಯೆಹೋಷಾಫಾಟನು ತನ್ನ ಸೈನ್ಯವನ್ನು ಜೆರುಸಲೇಮಿಗೆ ನಡಿಸಿದನು. ಶತ್ರುಗಳ ಮೇಲೆ ಯೆಹೋವನು ನೀಡಿದ ಜಯಕ್ಕಾಗಿ ಅವರು ಹರ್ಷಿಸಿದರು. 28 ಅವರು ವಾದ್ಯಗಳನ್ನು ಬಾರಿಸುತ್ತಾ ದೇವಾಲಯವನ್ನು ಪ್ರವೇಶಿಸಿದರು.

29 ಯೆಹೋವನು ಇಸ್ರೇಲರ ವೈರಿಗಳಿಗೆ ವಿರುದ್ಧವಾಗಿ ಯುದ್ಧ ಮಾಡಿದನೆಂದು ಕೇಳಿ ಎಲ್ಲಾ ದೇಶಗಳವರು ಆತನಿಗೆ ಭಯಪಟ್ಟರು. 30 ಆದ್ದರಿಂದ ಯೆಹೋಷಾಫಾಟನ ರಾಜ್ಯದಲ್ಲಿ ಸಮಾಧಾನ ನೆಲೆಸಿತ್ತು. ಅವನ ಸುತ್ತಮುತ್ತಲೂ ಯೆಹೋವನು ಶಾಂತಿಯನ್ನು ಅನುಗ್ರಹಿಸಿದನು.

ಯೆಹೋಷಾಫಾಟನ ಆಳ್ವಿಕೆಯ ಅಂತ್ಯ

31 ಯೆಹೂದ ದೇಶವನ್ನು ಯೆಹೋಷಾಫಾಟನು ಆಳಿದನು. ಅವನು ಪಟ್ಟವನ್ನೇರಿದಾಗ ಮೂವತ್ತೈದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಅವನ ತಾಯಿಯ ಹೆಸರು ಅಜೂಬ. ಆಕೆ ಶಿಲ್ಹಿ ಎಂಬಾತನ ಮಗಳು. 32 ಯೆಹೋಷಾಫಾಟನು ತನ್ನ ತಂದೆ ಆಸನ ಹಾಗೆ ದೇವರ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದುಕೊಂಡನು. 33 ಆದರೆ ಅವನು ಉನ್ನತಸ್ಥಳಗಳನ್ನು ನಿರ್ಮೂಲಗೊಳಿಸಲಿಲ್ಲ. ಯೆಹೂದದ ಜನರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಮೇಲೆ ಪೂರ್ಣ ಮನಸ್ಸಿಟ್ಟಿರಲಿಲ್ಲ.

34 ಯೆಹೋಷಾಫಾಟನು ಆರಂಭದಿಂದ ಕೊನೆಯವರೆಗೂ ಮಾಡಿದ ಬೇರೆ ಕಾರ್ಯಗಳು, ಹನಾನೀಯನ ಮಗನಾದ ಯೇಹು ಬರೆದ ಇಸ್ರೇಲ್ ರಾಜರ ಗ್ರಂಥದಲ್ಲಿ ದಾಖಲಾಗಿವೆ.

35 ಕೆಲಕಾಲದ ನಂತರ ಯೆಹೋಷಾಫಾಟನು ಇಸ್ರೇಲರ ರಾಜನಾಗಿದ್ದ ಅಹಜ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಹಜ್ಯನು ದೇವರ ದೃಷ್ಟಿಯಲ್ಲಿ ಬಹು ದುಷ್ಟನಾಗಿದ್ದನು. 36 ಯೆಹೋಷಾಫಾಟನು ಅಹಜ್ಯನೊಂದಿಗೆ ಸೇರಿ ಹಡಗುಗಳನ್ನು ತಯಾರಿಸಿ ತಾರ್ಷೀಷಿಗೆ ಕಳುಹಿಸಿದನು. ಅವರು ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿದರು. 37 ಆಗ ಎಲಿಯೇಜರನು ಯೆಹೋಷಾಫಾಟನ ವಿರುದ್ಧವಾಗಿ ಪ್ರವಾದಿಸಿದನು. ಅವನು ದೋದಾವಾಹುವಿನ ಮಗನು. ಅವನು ಮಾರೇಷ ಎಂಬ ಪಟ್ಟಣದವನಾಗಿದ್ದನು. ಅವನು, “ಯೆಹೋಷಾಫಾಟನೇ, ನೀನು ಅಹಜ್ಯನೊಂದಿಗೆ ಸೇರಿಕೊಂಡಿರುವೆ. ಇದಕ್ಕಾಗಿ ಯೆಹೋವನು ನಿನ್ನ ಕೆಲಸಗಳನ್ನು ನಾಶಮಾಡುವನು” ಎಂದು ಹೇಳಿದನು. ಅವನ ಹಡಗುಗಳು ಸಮುದ್ರದಲ್ಲಿ ಒಡೆದುಹೋದದ್ದರಿಂದ ಅವುಗಳು ತಾರ್ಷೀಷಿಗೆ ಹೋಗಲಾಗಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International