Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 13-17

ಯೆಹೂದ ರಾಜ್ಯದ ರಾಜನಾದ ಅಬೀಯನು

13 ಇಸ್ರೇಲ್ ರಾಜ್ಯದ ರಾಜನಾದ ಯಾರೊಬ್ಬಾಮನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಯೆಹೂದದ ರಾಜನಾಗಿ ಆಳತೊಡಗಿದನು. ಅವನು ಜೆರುಸಲೇಮಿನಲ್ಲಿ ಮೂರು ವರ್ಷ ಆಳಿದನು. ಊರೀಯೇಲನ ಮಗಳಾದ ಮೀಕಾಯಳು ಅಬೀಯನ ತಾಯಿ. ಊರೀಯೇಲನು ಗಿಬೆಯ ಊರಿನವನು. ಅಬೀಯನಿಗೂ ಯಾರೊಬ್ಬಾಮನಿಗೂ ಯುದ್ಧವಾಗುತ್ತಿತ್ತು. ಅಬೀಯನ ಬಳಿ ನಾಲ್ಕು ಲಕ್ಷ ಮಂದಿ ವೀರ ಸೈನಿಕರಿದ್ದರು. ಅವನು ಸೈನ್ಯವನ್ನು ಯುದ್ಧದಲ್ಲಿ ಮುನ್ನಡೆಸಿದನು. ಯಾರೊಬ್ಬಾಮನ ಬಳಿಯಲ್ಲಿ ಎಂಟು ಲಕ್ಷ ಮಂದಿ ಸೈನಿಕರು ಇದ್ದರು. ಯಾರೊಬ್ಬಾಮನು ಅಬೀಯನ ಮೇಲೆ ಯುದ್ಧಕ್ಕೆ ತಯಾರಾದನು.

ಆಗ ಅಬೀಯನು ಎಫ್ರಾಯೀಮ್ ಬೆಟ್ಟಪ್ರಾಂತ್ಯದ ಚೆಮಾರೈ ಬೆಟ್ಟದ ಮೇಲೆ ನಿಂತು, “ಯಾರೊಬ್ಬಾಮನೇ, ಸಮಸ್ತ ಇಸ್ರೇಲರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಇಸ್ರೇಲರ ದೇವರಾದ ಯೆಹೋವನು ದಾವೀದನಿಗೂ ಅವನ ಗಂಡುಮಕ್ಕಳಿಗೂ ನಿರಂತರವಾಗಿ ಇಸ್ರೇಲನ್ನು ಆಳಲು ಉಪ್ಪಿನ ಒಡಂಬಡಿಕೆಯ ಮೂಲಕ ಅಧಿಕಾರ ಕೊಟ್ಟಿದ್ದಾನೆಂದು ನಿಮಗೆ ತಿಳಿದಿರಬೇಕು. ಆದರೆ ಯಾರೊಬ್ಬಾಮನು ತನ್ನ ಒಡೆಯನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬಾಟನ ಮಗನಾದ ಯಾರೊಬ್ಬಾಮನು ಸೊಲೊಮೋನನ ಸೇವಕರಲ್ಲಿ ಒಬ್ಬನಾಗಿದ್ದನು. ಆಗ ಕೆಲಸಕ್ಕೆ ಬಾರದ ದುಷ್ಟಜನರು ಯಾರೊಬ್ಬಾಮನ ಸ್ನೇಹಿತರಾಗಿ ಅವನನ್ನು ಹಿಂಬಾಲಿಸಿ ರೆಹಬ್ಬಾಮನಿಗೆ ವಿರುದ್ಧವಾಗಿ ದಂಗೆ ಎದ್ದರು. ಸೊಲೊಮೋನನ ಮಗನಾದ ರೆಹಬ್ಬಾಮನು ಆಗ ಸಣ್ಣ ಪ್ರಾಯದವನಾಗಿ ಅನುಭವವಿಲ್ಲದವನಾಗಿದ್ದನು. ಆದ್ದರಿಂದ ಯಾರೊಬ್ಬಾಮನನ್ನೂ ಅವನ ದುಷ್ಟ ಹಿಂಬಾಲಕರನ್ನೂ ತಡೆಯಲು ಅವನಿಗೆ ಆಗಲಿಲ್ಲ.

“ದಾವೀದನ ಮಕ್ಕಳು ಆಳುತ್ತಿರುವ ಯೆಹೋವನ ರಾಜ್ಯವನ್ನು ಸೋಲಿಸಲು ಈಗ ನೀವು ನಿರ್ಧರಿಸಿದ್ದೀರಿ. ನಿಮ್ಮಲ್ಲಿ ಅಧಿಕ ಸಂಖ್ಯೆಯ ಸೈನ್ಯವಿರಬಹುದು. ಯಾರೊಬ್ಬಾಮನು ನಿಮ್ಮ ದೇವರುಗಳಾಗಿ ಮಾಡಿಸಿದ ಬಂಗಾರದ ಬಸವ ಮೂರ್ತಿಗಳು ನಿಮ್ಮಲ್ಲಿವೆ. ನೀವು ಆರೋನನ ಸಂತತಿಯವರಾದ ಯೆಹೋವನ ಯಾಜಕರನ್ನು ಹೊರಡಿಸಿಬಿಟ್ಟರಿ. ನೀವು ಲೇವಿಯರನ್ನೂ ಹೊರಡಿಸಿಬಿಟ್ಟಿರಿ. ಅನ್ಯಜನಾಂಗದವರಂತೆ ನೀವು ನಿಮ್ಮಲ್ಲಿಂದಲೇ ಯಾಜಕರನ್ನು ಆರಿಸಿಕೊಂಡಿರಿ. ಯಾವನಾದರೂ ಏಳು ಟಗರುಗಳನ್ನೂ ಒಂದು ಎಳೇ ಹೋರಿಯನ್ನೂ ತಂದರೆ ನೀವು ಅವನನ್ನು ‘ದೇವರಲ್ಲದವುಗಳ’ ಸೇವೆಮಾಡಲು ಯಾಜಕನನ್ನಾಗಿ ಮಾಡುವಿರಿ.

10 “ನಮಗಾದರೋ ಯೆಹೋವನೇ ದೇವರು. ಯೆಹೂದ್ಯ ಪ್ರಾಂತ್ಯದವರಾದ ನಾವು ದೇವರ ಕಟ್ಟಳೆಗೆ ವಿಧೇಯರಾಗಲು ನಿರಾಕರಿಸಲಿಲ್ಲ. ನಾವು ಆತನನ್ನು ತೊರೆಯಲಿಲ್ಲ. ಆತನ ಸೇವೆಮಾಡಲು ಲೇವಿಯರು ಮತ್ತು ಆರೋನನ ಸಂತತಿಯವರಾದ ಯಾಜಕರು ಸಹಾಯ ಮಾಡುವರು. 11 ಅವರು ಪ್ರತಿದಿನವೂ ಮುಂಜಾನೆ ಸಾಯಂಕಾಲಗಳಲ್ಲಿ ಸರ್ವಾಂಗಹೋಮಗಳನ್ನೂ ಧೂಪಗಳನ್ನೂ ಅರ್ಪಿಸುವರು; ಮೇಜಿನ ಮೇಲೆ ನೈವೇದ್ಯದ ರೊಟ್ಟಿಗಳನ್ನಿಡುವರು. ಅವರು ಬಂಗಾರದ ದೀಪಸ್ತಂಭಗಳ ಮೇಲಿನ ಆರತಿಗಳನ್ನು ಸರಿಯಾಗಿ ನೋಡಿಕೊಳ್ಳುವುದರಿಂದ ಅವು ಹಗಲಿನಲ್ಲಿಯೂ ಸಾಯಂಕಾಲದಲ್ಲಿಯೂ ಪ್ರಕಾಶಮಾನವಾಗಿ ಉರಿಯುವವು. ನಾವು ಬಹಳ ಎಚ್ಚರಿಕೆಯಿಂದ ನಮ್ಮ ದೇವರ ಸೇವೆಮಾಡುತ್ತೇವೆ. ಆದರೆ ನೀವು ಆತನನ್ನು ತೊರೆದುಬಿಟ್ಟಿದ್ದೀರಿ. 12 ದೇವರು ನಮ್ಮೊಂದಿಗಿದ್ದಾನೆ. ನಮ್ಮನ್ನು ಆಳುವವನು ಆತನೇ. ಅವನ ಯಾಜಕರು ನಮ್ಮೊಂದಿಗಿದ್ದಾರೆ. ದೇವರ ಯಾಜಕರು ತುತ್ತೂರಿಯನ್ನೂದಿ ನಿಮ್ಮನ್ನು ಆತನ ಬಳಿಗೆ ಬರಲು ಎಚ್ಚರಿಸುತ್ತಾರೆ. ಇಸ್ರೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನ ಜನರೊಂದಿಗೆ ಕಾದಾಡಬೇಡಿರಿ. ನೀವು ಜಯಹೊಂದುವದಿಲ್ಲ” ಎಂದು ಹೇಳಿದನು.

13 ಆದರೆ ಯಾರೊಬ್ಬಾಮನು ತನ್ನ ಸೈನ್ಯದ ಒಂದು ಭಾಗವನ್ನು ಅಬೀಯನ ಸೈನ್ಯದ ಹಿಂಭಾಗಕ್ಕೆ ಅವನಿಗೆ ಗೊತ್ತಿಲ್ಲದಂತೆ ಕಳುಹಿಸಿದನು. ಯಾರೊಬ್ಬಾಮನ ಸೈನ್ಯವು ಅಬೀಯನ ಸೈನ್ಯಕ್ಕೆ ಎದುರಾಗಿತ್ತು. ಅಬೀಯನ ಹಿಂದೆ ಯಾರೊಬ್ಬಾಮನ ಸೈನ್ಯವು ಅಡಗಿಕೊಂಡಿತ್ತು. 14 ಅಬೀಯನ ಸೈನ್ಯವು ಸುತ್ತಲೂ ನೋಡಿದಾಗ ವೈರಿಗಳ ಸೈನ್ಯವು ಮುಂದೆಯೂ ಹಿಂದೆಯೂ ಯುದ್ಧಮಾಡುತ್ತಿರುವದನ್ನು ನೋಡಿ ಯೆಹೋವನನ್ನು ಕೂಗಿದರು. ಯಾಜಕರು ತುತ್ತೂರಿಯನ್ನೂದಿದರು. 15 ಆಗ ಅಬೀಯನ ಸೈನ್ಯದವರು ದೊಡ್ಡ ಆರ್ಭಟ ಮಾಡಿದರು. ಆರ್ಭಟಿಸುತ್ತಾ ಮುಂದೆ ಸಾಗಿದರು. ಯಾರೊಬ್ಬಾಮನ ಸೈನ್ಯವನ್ನು ಮತ್ತು ಎಲ್ಲಾ ಇಸ್ರೇಲರನ್ನು ಯೆಹೂದದ ಅಬೀಯನ ಸೈನ್ಯವು ಸೋಲಿಸುವಂತೆ ದೇವರು ಮಾಡಿದನು. 16 ಯೆಹೂದದ ಸೈನ್ಯದ ಮುಂದೆ ಇಸ್ರೇಲರ ಸೈನ್ಯವು ಬೆನ್ನುಕೊಟ್ಟು ಓಡಿಹೋಗುವಂತೆ ದೇವರು ಮಾಡಿದನು. 17 ಅಬೀಯನ ಸೈನ್ಯವು ಇಸ್ರೇಲಿನ ಸೈನ್ಯದ ಮೇಲೆ ಮಹಾಜಯವನ್ನು ಗಳಿಸಿತು. ಯಾರೊಬ್ಬಾಮನ ಐದು ಲಕ್ಷ ಪಳಗಿದ ಸೈನಿಕರು ಕೊಲ್ಲಲ್ಪಟ್ಟರು. 18 ಇಸ್ರೇಲಿನ ಜನರು ಸೋತುಹೋದರು. ಯೆಹೂದದ ಜನರಿಗೆ ಜಯ ದೊರಕಿತು. ಯಾಕೆಂದರೆ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಮೇಲೆ ಭರವಸವನ್ನಿಟ್ಟಿದರು.

19 ಅಬೀಯನ ಸೈನಿಕರು ಯಾರೊಬ್ಬಾಮನ ಸೈನಿಕರನ್ನು ಓಡಿಸಿದರು. ಮತ್ತು ಅವರ ಪಟ್ಟಣಗಳಾದ ಬೇತೇಲ್, ಯೆಷಾನಾ ಮತ್ತು ಎಪ್ರೋನ್‌ಗಳನ್ನು ವಶಪಡಿಸಿಕೊಂಡರು. ಈ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿದ್ದ ಹಳ್ಳಿಗಳನ್ನೂ ವಶಪಡಿಸಿಕೊಂಡರು.

20 ಅಬೀಯನಿರುವಷ್ಟು ಕಾಲ ಯಾರೊಬ್ಬಾಮನು ಮತ್ತೆ ಬಲಗೊಳ್ಳಲೇ ಇಲ್ಲ. ಯೆಹೋವನು ಯಾರೊಬ್ಬಾಮನನ್ನು ಸಾಯಿಸಿದನು. 21 ಅಬೀಯನು ಬಲಗೊಂಡನು. ಅವನು ಹದಿನಾಲ್ಕು ಮಂದಿ ಸ್ತ್ರೀಯರನ್ನು ಮದುವೆ ಮಾಡಿಕೊಂಡು ಅವರಿಂದ ಇಪ್ಪತ್ತೆರಡು ಗಂಡುಮಕ್ಕಳನ್ನೂ ಹದಿನಾರು ಹೆಣ್ಣುಮಕ್ಕಳನ್ನೂ ಪಡೆದನು. 22 ಅಬೀಯನು ಮಾಡಿದ ಎಲ್ಲಾ ಕಾರ್ಯಗಳ ಕುರಿತು ಪ್ರವಾದಿ ಇದ್ದೋ ಬರೆದ ಪುಸ್ತಕದಲ್ಲಿ ದಾಖಲಾಗಿವೆ.

14 ಅಬೀಯನು ತನ್ನ ಪೂರ್ವಿಕರೊಂದಿಗೆ ವಿಶ್ರಾಂತಿಗೆ ಸೇರಿದನು. ಜನರು ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯನ ನಂತರ ಅವನ ಮಗನಾದ ಆಸನು ಪಟ್ಟಕ್ಕೆ ಬಂದನು. ಆಸನ ಆಳ್ವಿಕೆಯ ಹತ್ತು ವರ್ಷ ದೇಶದಲ್ಲಿ ಸಮಾಧಾನ ನೆಲೆಸಿತ್ತು.

ಯೆಹೂದದ ಅರಸನಾದ ಆಸ

ಆಸನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ಇದ್ದನು. ಮೂರ್ತಿಪೂಜೆಗಾಗಿ ಮಾಡಿದ ಯಜ್ಞವೇದಿಕೆಗಳನ್ನು ತೆಗೆದುಹಾಕಿಸಿದನು. ವಿಗ್ರಹಾರಾಧಕರ ಪೂಜಾಸ್ಥಳಗಳನ್ನು, ಸ್ಮಾರಕಕಲ್ಲುಗಳನ್ನು ಒಡೆದು ಹಾಳುಮಾಡಿಸಿದನು. ಅಶೇರಸ್ತಂಭಗಳನ್ನು ತುಂಡು ಮಾಡಿಸಿದನು. “ನಿಮ್ಮ ಪೂರ್ವಿಕರ ದೇವರಾದ ಯೆಹೋವನನ್ನೇ ಅನುಸರಿಸಿ ಆತನ ಆಜ್ಞೆಗಳಿಗೂ ಕಟ್ಟಳೆಗಳಿಗೂ ವಿಧೇಯರಾಗಿರಿ” ಎಂದು ಆಸನು ಆಜ್ಞಾಪಿಸಿದನು. ಯೆಹೂದ ದೇಶದ ಪಟ್ಟಣಗಳಲ್ಲಿದ್ದ ಎಲ್ಲಾ ವಿಗ್ರಹಗಳನ್ನೂ ಪೂಜಾಸ್ಥಳಗಳನ್ನೂ ಕಿತ್ತುಹಾಕಿಸಿದನು. ಆತನ ಆಳ್ವಿಕೆಯಲ್ಲಿ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. ಆ ಕಾಲದಲ್ಲಿ ಆಸನು ಯೆಹೂದ ಪ್ರಾಂತ್ಯದಲ್ಲಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ಆಸನ ಆಳ್ವಿಕೆಯಲ್ಲಿ ಯುದ್ಧವೇ ಇರಲಿಲ್ಲ. ಯಾಕೆಂದರೆ ಯೆಹೋವನು ಅವನಿಗೆ ಸಮಾಧಾನವನ್ನು ಅನುಗ್ರಹಿಸಿದ್ದನು.

ಆಸನು ಜನರಿಗೆ, “ನಾವು ಈ ಪಟ್ಟಣಗಳ ಸುತ್ತಲೂ ಕೋಟೆಯನ್ನು ಕಟ್ಟೋಣ; ಬುರುಜುಗಳನ್ನೂ ಕದಗಳನ್ನೂ ಭದ್ರಪಡಿಸೋಣ. ನಾವು ನಮ್ಮ ದೇವರಾದ ಯೆಹೋವನನ್ನು ಅನುಸರಿಸುವದರಿಂದ ಈ ದೇಶವು ನಮ್ಮದಾಗಿರುತ್ತದೆ. ಆದ್ದರಿಂದ ನಾವು ಹೀಗೆ ಮಾಡೋಣ. ಆತನು ನಮ್ಮ ಸುತ್ತಲೂ ಸಮಾಧಾನವನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿದನು. ಅಂತೆಯೇ ಅವರು ಕಟ್ಟಿ ಪೂರೈಸಿದರು.

ಆಸನ ಬಳಿ ಮೂರು ಲಕ್ಷ ಸೈನಿಕರಿದ್ದರು, ಯೆಹೂದಕುಲದ ಇವರು ಗುರಾಣಿಗಳನ್ನೂ ಬರ್ಜಿಗಳನ್ನೂ ಬಳಸಬಲ್ಲವರಾಗಿದ್ದರು. ಇವರಲ್ಲದೆ ಬೆನ್ಯಾಮೀನ್ ಕುಲದಿಂದ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಸೈನಿಕರಿದ್ದರು. ಇವರು ಸಣ್ಣ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಬಳಸಬಲ್ಲವರಾಗಿದ್ದರು. ಇವರೆಲ್ಲರೂ ರಣವೀರರಾಗಿದ್ದರು.

ಇಥಿಯೋಪಿಯಾ ದೇಶದ ಜೆರಹನು ಆಸನ ಮೇಲೆ ಯುದ್ಧಮಾಡಲು ಬಂದನು. ಅವನೊಡನೆ ಹತ್ತು ಲಕ್ಷ ಸೈನಿಕರಿದ್ದರು; ಮೂನ್ನೂರು ರಥಗಳಿದ್ದವು. ಅವನ ಸೈನ್ಯವು ಮಾರೇಷದ ತನಕ ಬಂದಿತ್ತು. 10 ಆಸನು ಜೆರಹನ ವಿರುದ್ಧ ಯುದ್ಧಮಾಡಲು ಹೊರಟನು. ಮಾರೇಷದ ಚೆಫಾತ ಎಂಬ ಕಣಿವೆಯಲ್ಲಿ ವ್ಯೂಹ ಕಟ್ಟಿದರು.

11 ಆಸನು ದೇವರಾದ ಯೆಹೋವನನ್ನು ಪ್ರಾರ್ಥಿಸಿ, “ಯೆಹೋವನೇ, ಬಲಹೀನರಾದವರು ಬಲಿಷ್ಠರಾದವರನ್ನು ಸೋಲಿಸಲು ನೀನೇ ಸಹಾಯಿಸಬೇಕು. ದೇವರಾದ ಯೆಹೋವನೇ, ನಮಗೆ ಸಹಾಯಮಾಡು. ನೀನೇ ನಮ್ಮ ರಕ್ಷಕನು. ನಾವು ನಿನ್ನ ಮೇಲೆ ಭರವಸವಿಟ್ಟಿರುತ್ತೇವೆ. ನಿನ್ನ ಹೆಸರಿನಲ್ಲಿ ನಾವು ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಿರುತ್ತೇವೆ. ಯೆಹೋವನೇ, ನೀನೇ ನಮ್ಮ ದೇವರು. ನಿನ್ನನ್ನು ಸೋಲಿಸಲು ಯಾರಿಗೂ ಅವಕಾಶಕೊಡಬೇಡ” ಎಂದು ಬೇಡಿಕೊಂಡನು.

12 ಆಗ ಯೆಹೂದ ದೇಶದ ಆಸನ ಸೈನ್ಯವು ಇಥಿಯೋಪಿಯಾದ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡಿದನು. 13 ಆಸನ ಸೈನಿಕರು ಇಥಿಯೋಪಿಯಾದ ಸೈನ್ಯವನ್ನು ಗೆರಾರಿನ ತನಕ ಹಿಂದಟ್ಟಿಕೊಂಡು ಹೋದರು. ಅವರು ಮತ್ತೆ ಸೈನ್ಯವನ್ನು ಕಟ್ಟಿ ಯುದ್ಧಮಾಡಲು ಸಾಧ್ಯವಾಗದಷ್ಟು ಸೈನಿಕರು ಸತ್ತರು. ಅವರ ಬಲವನ್ನು ಮುರಿಯಲು ಯೆಹೋವನು ತನ್ನ ಸೈನ್ಯವನ್ನು ಬಳಸಿಕೊಂಡನು. 14 ಆಸನು ತನ್ನ ಸೈನ್ಯದೊಡನೆ ಗೆರಾರಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿಬಿಟ್ಟನು. ಅವುಗಳಲ್ಲಿ ವಾಸಿಸುವ ಜನರು ಯೆಹೋವನಿಗೆ ಭಯಪಟ್ಟರು. ಆ ಪಟ್ಟಣಗಳಲ್ಲಿ ಇದ್ದ ನಿಕ್ಷೇಪಗಳನ್ನು ಆಸನ ಸೈನಿಕರು ದೋಚಿದರು. 15 ಆಸನ ಸೈನಿಕರು ಕುರುಬರ ಪಾಳೆಯವನ್ನು ಧ್ವಂಸಮಾಡಿ ಅನೇಕಾನೇಕ ಕುರಿಗಳನ್ನೂ ಒಂಟೆಗಳನ್ನೂ ಸೂರೆಮಾಡಿ ಜೆರುಸಲೇಮಿಗೆ ತಂದರು.

ಆಸನ ಪರಿವರ್ತನೆ

15 1-2 ಓಬೇದನ ಮಗನಾದ ಅಜರ್ಯನ ಮೇಲೆ ದೇವರಾತ್ಮವು ಬಂದಿತು. ಅಜರ್ಯನು ಆಸನನ್ನು ಸಂಧಿಸಿ ಹೀಗೆ ಹೇಳಿದನು: “ಆಸನೇ, ನನ್ನ ಮಾತನ್ನು ಕೇಳು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನನ್ನ ಮಾತನ್ನು ಕೇಳಿರಿ. ನೀವು ಯೆಹೋವನೊಡನೆ ಇದ್ದರೆ ಆತನು ನಿಮ್ಮ ಸಂಗಡ ಇರುವನು. ನೀವು ಆತನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು. ಆದರೆ ನೀವು ಆತನನ್ನು ತೊರೆದರೆ ಆತನು ನಿಮ್ಮನ್ನೂ ತೊರೆಯುವನು. ಬಹಳಕಾಲದ ತನಕ ಇಸ್ರೇಲರಲ್ಲಿ ನಿಜವಾದ ದೇವರಿರಲಿಲ್ಲ; ಬೋಧಕನಿರಲಿಲ್ಲ; ಧರ್ಮಶಾಸ್ತ್ರವೂ ಇರಲಿಲ್ಲ. ಆದರೆ ಇಸ್ರೇಲರು ತಮಗೆ ಕಷ್ಟಬಂದಾಗ ದೇವರ ಕಡೆಗೆ ತಿರುಗಿದರು. ಆತನೇ ಇಸ್ರೇಲಿನ ದೇವರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಸಿಕ್ಕಿದನು. ಆ ಕಷ್ಟದ ಸಮಯದಲ್ಲಿ ಯಾರೂ ಸುರಕ್ಷಿತವಾಗಿ ಪ್ರಯಾಣ ಮಾಡುವಂತಿರಲಿಲ್ಲ. ಎಲ್ಲಾ ದೇಶಗಳಲ್ಲಿಯೂ ಕಷ್ಟ ತೊಂದರೆಗಳು ತುಂಬಿದ್ದವು. ಒಂದು ದೇಶವು ಇನ್ನೊಂದು ದೇಶವನ್ನು ನಾಶಮಾಡುತ್ತಿತ್ತು; ಒಂದು ಪಟ್ಟಣವು ಇನ್ನೊಂದು ಪಟ್ಟಣವನ್ನು ಸೂರೆಮಾಡುತ್ತಿತ್ತು. ಹೀಗೆ ದೇವರು ಎಲ್ಲಾ ಬಗೆಯ ತೊಂದರೆಗಳಿಂದ ಅವರನ್ನು ತಳಮಳಗೊಳಿಸಿದನು. ಯೆಹೂದದ ಜನರೇ, ಬೆನ್ಯಾಮೀನ್ ಜನರೇ, ನೀವು ಶಕ್ತರಾಗಿರಿ, ನಿರಾಶರಾಗಬೇಡಿರಿ; ಯಾಕೆಂದರೆ ನಿಮ್ಮ ಒಳ್ಳೆಯ ಕೆಲಸಕ್ಕೆ ನಿಮಗೆ ಪ್ರತಿಫಲ ದೊರೆಯುವುದು.”

ಪ್ರವಾದಿಯಾದ ಓಬೇದನು ತಂದ ಸಂದೇಶವನ್ನು ಆಸನು ಕೇಳಿ ತುಂಬಾ ಪ್ರೋತ್ಸಾಹಗೊಂಡನು. ಅನಂತರ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದಲ್ಲಿದ್ದ ಎಲ್ಲಾ ವಿಗ್ರಹಗಳನ್ನು ತೆಗೆದುಹಾಕಿಸಿದನು. ಗೆದ್ದಿದ್ದ ಎಫ್ರಾಯೀಮ್ ಬೆಟ್ಟಪ್ರದೇಶಗಳಲ್ಲಿದ್ದ ವಿಗ್ರಹಗಳನ್ನು ತೆಗೆದುಹಾಕಿಸಿದನು. ದೇವಾಲಯದ ಮಂಟಪದೆದುರು ಇದ್ದ ಯೆಹೋವನ ಯಜ್ಞವೇದಿಕೆಯನ್ನು ಸರಿಪಡಿಸಿದನು.

ಆಮೇಲೆ ಆಸನು ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯದ ಜನರನ್ನೆಲ್ಲಾ ಒಟ್ಟಾಗಿ ಸೇರಿಸಿದನು. ಅದೇ ಪ್ರಕಾರ ಅವನು ಇಸ್ರೇಲನ್ನು ಬಿಟ್ಟು ಯೆಹೂದದಲ್ಲಿ ನೆಲೆಸಲು ಬಂದಿದ್ದ ಎಫ್ರಾಯೀಮ್, ಮನಸ್ಸೆ ಮತ್ತು ಸಿಮೆಯೋನ್ ಪ್ರಾಂತ್ಯಗಳವರನ್ನೂ ಒಟ್ಟಾಗಿ ಸೇರಿಸಿದನು. ದೇವರಾದ ಯೆಹೋವನು ಆಸನ ಕೂಡ ಇರುವದನ್ನು ನೋಡಿ ಅವನೊಂದಿಗೆ ಸೇರಲು ಅನೇಕ ಜನರು ಬಂದಿದ್ದರು.

10 ಅವರೆಲ್ಲರೂ ಆಸನ ಆಳ್ವಿಕೆಯ ಹದಿನೈದನೆಯ ವರ್ಷದ ಮೂರನೆಯ ತಿಂಗಳಲ್ಲಿ ಜೆರುಸಲೇಮಿನಲ್ಲಿ ಸೇರಿಬಂದರು. 11 ಆ ಸಮಯದಲ್ಲಿ ಅವರು ಏಳುನೂರು ಹೋರಿಗಳನ್ನೂ ಏಳುಸಾವಿರ ಆಡುಕುರಿಗಳನ್ನೂ, ಯೆಹೋವನಿಗೆ ಸಮರ್ಪಿಸಿದರು. ಇವುಗಳನ್ನು ಆಸನ ಸೈನ್ಯವು ಶತ್ರುಗಳಿಂದ ಸುಲಿದುಕೊಂಡಿದ್ದರು. 12 ತಮ್ಮ ಪೂರ್ವಿಕರು ಸೇವೆಮಾಡಿದ ದೇವರೊಂದಿಗೆ ಅಲ್ಲಿ ಅವರು ಒಡಂಬಡಿಕೆ ಮಾಡಿಕೊಂಡು ತಾವು ಪೂರ್ಣ ಹೃದಯದಿಂದಲೂ ಪೂರ್ಣ ಆತ್ಮದಿಂದಲೂ ಆತನ ಸೇವೆ ಮಾಡುವುದಾಗಿ ಪ್ರಮಾಣಮಾಡಿದರು. 13 ಯಾವನಾದರೂ ದೇವರಾದ ಯೆಹೋವನ ಸೇವೆಮಾಡಲು ನಿರಾಕರಿಸುವದಾದರೆ ಆ ವ್ಯಕ್ತಿಯು ಗಂಡಸಾಗಿದ್ದರೂ ಹೆಂಗಸಾಗಿದ್ದರೂ ಮುಖ್ಯವಾದವನಾಗಿದ್ದರೂ ಮುಖ್ಯವಲ್ಲದವನಾಗಿದ್ದರೂ ಕೊಲ್ಲಲ್ಪಡಬೇಕು ಎಂಬುದಾಗಿ ಹೇಳಿದರು. 14 ಆಮೇಲೆ ಆಸನೂ ಅವನ ಜನರೂ ದೇವರಿಗೆ ಪ್ರಮಾಣಮಾಡಿ ಸಂತೋಷದಿಂದ ಹರ್ಷಧ್ವನಿ ಮಾಡಿದರು. ಅಲ್ಲದೆ ತುತ್ತೂರಿಗಳನ್ನೂ ಕೊಂಬುಗಳನ್ನೂ ಊದಿದರು. 15 ಯೆಹೂದದ ಎಲ್ಲಾ ಜನರು ತಾವು ಯೆಹೋವನಿಗೆ ಮಾಡಿದ ಪ್ರಮಾಣದ ನಿಮಿತ್ತ ಸಂತೋಷಪಟ್ಟರು. ಯಾಕೆಂದರೆ ಅವರು ತಮ್ಮ ಪೂರ್ಣ ಹೃದಯದಿಂದ ಪ್ರಮಾಣಮಾಡಿದ್ದರು. ಅವರು ಯೆಹೋವನನ್ನು ಪೂರ್ಣ ಮನಸ್ಸಿನಿಂದ ಹಿಂಬಾಲಿಸಿದರು. ಅವರು ಆತನನ್ನು ಹುಡುಕಿದಾಗ ಆತನು ಅವರಿಗೆ ಪ್ರಸನ್ನನಾಗಿ ಅವರಿಗೆ ಸಮಾಧಾನವನ್ನು ಕೊಟ್ಟನು.

16 ಆಸನು ತನ್ನ ತಾಯಿಯಾದ ಮಾಕಳನ್ನು ರಾಜಮಾತೆ ಎಂಬ ಪದವಿಯಿಂದ ತಳ್ಳಿಬಿಟ್ಟನು. ಯಾಕೆಂದರೆ ಆಕೆಯು ಅಶೇರ್ ದೇವತೆಯ ಅಸಹ್ಯವಾದ ಕಂಬವನ್ನು ಮಾಡಿಸಿದ್ದಳು. ಆಸನು ಅದನ್ನು ಕಡಿದು ಚೂರುಚೂರಾಗಿ ಮಾಡಿಸಿದನು. ನಂತರ ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಬಿಟ್ಟನು. 17 ಆದರೂ ಯೆಹೂದದ ಎಲ್ಲಾ ಉನ್ನತಸ್ಥಳಗಳು ತೆಗೆಯಲ್ಪಡಲಿಲ್ಲ, ಆದರೆ ಆಸನು ತನ್ನ ಜೀವಮಾನದಲ್ಲೆಲ್ಲಾ ಯೆಹೋವನಿಗೆ ನಂಬಿಗಸ್ತನಾಗಿದ್ದನು.

18 ಆಸನು ತನ್ನ ತಂದೆಯು ಕೊಟ್ಟ ಪರಿಶುದ್ಧ ಕಾಣಿಕೆಗಳನ್ನು ದೇವಾಲಯದಲ್ಲಿ ಇಡಿಸಿದನು. ಅವು ಬೆಳ್ಳಿಬಂಗಾರಗಳ ವಸ್ತುಗಳಾಗಿದ್ದವು. 19 ಆಸನ ಆಳ್ವಿಕೆಯ ಮೂವತ್ತೈದನೆಯ ವರ್ಷದ ತನಕ ದೇಶದಲ್ಲಿ ಯುದ್ಧವೇ ಇರಲಿಲ್ಲ.

ಆಸನ ಕೊನೆಯ ವರ್ಷಗಳು

16 ಆಸನ ಆಳ್ವಿಕೆಯ ಮೂವತ್ತಾರನೆಯ ವರ್ಷದಲ್ಲಿ ಇಸ್ರೇಲಿನ ರಾಜನಾದ ಬಾಷನು ಆಸನ ಸಂಗಡ ಯುದ್ಧಕ್ಕೆ ಹೊರಟನು. ಅವನು ರಾಮ ಎಂಬ ಪಟ್ಟಣವನ್ನು ಕೋಟೆಯನ್ನಾಗಿ ಪರಿವರ್ತಿಸಿ, ಯೆಹೂದದ ರಾಜನಾದ ಆಸನ ಬಳಿಗೆ ಹೋಗುವುದಕ್ಕಾಗಲಿ ಬರುವುದಕ್ಕಾಗಲಿ ಯಾರಿಗೂ ಆಗದಂತೆ ಮಾಡಿದನು. ಆಗ ಆಸನು ದೇವಾಲಯದಲ್ಲಿಯೂ ಅರಮನೆಯಲ್ಲಿಯೂ ಶೇಖರಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ದಮಸ್ಕದಲ್ಲಿದ್ದ ಅರಾಮ್ಯರ ಅರಸನಾದ ಬೆನ್ಹದದನಿಗೆ ಈ ಸಂದೇಶದೊಡನೆ ಕಳುಹಿಸಿದನು, “ಬೆನ್ಹದದನೇ, ನಮ್ಮೊಂದಿಗೆ ಒಂದು ಒಪ್ಪಂದವಿರಲಿ. ನನ್ನ ತಂದೆಯೂ ನಿನ್ನ ತಂದೆಯೂ ಮಾಡಿದ್ದ ಒಪ್ಪಂದವನ್ನು ನಾವು ಮುಂದುವರಿಸೋಣ. ನೋಡು, ನಾನೀಗ ನಿನಗೆ ಬೆಳ್ಳಿಬಂಗಾರಗಳನ್ನು ಕಳುಹಿಸುತ್ತಿದ್ದೇನೆ. ನೀನೀಗ ಇಸ್ರೇಲಿನ ರಾಜನಾದ ಬಾಷನೊಡನೆ ಮಾಡಿದ್ದ ಒಪ್ಪಂದವನ್ನು ಮುರಿದುಹಾಕು. ಆಗ ಅವನು ನನಗೆ ತೊಂದರೆ ಕೊಡುವುದನ್ನು ನಿಲ್ಲಿಸುವನು.”

ಇದಕ್ಕೆ ಬೆನ್ಹದದನು ಒಪ್ಪಿ ತನ್ನ ಸೇನಾಪತಿಗಳನ್ನು ಇಸ್ರೇಲಿನ ಪಟ್ಟಣಗಳ ಮೇಲೆ ಆಕ್ರಮಣಮಾಡಲು ಕಳುಹಿಸಿದನು. ಅವರು ಹೋಗಿ ಇಯ್ಯೋನ್, ದಾನ್, ಅಬೇಲ್ಮಯಿಮ್ ಎಂಬ ಪಟ್ಟಣಗಳ ಮೇಲೆಯೂ ಭಂಡಾರಗಳನ್ನು ಇಟ್ಟಿದ ನಫ್ತಾಲಿ ಪ್ರಾಂತ್ಯದ ಎಲ್ಲಾ ಪಟ್ಟಣಗಳ ಮೇಲೆಯೂ ಆಕ್ರಮಣ ಮಾಡಿದರು. ಇದನ್ನು ಕೇಳಿದ ಬಾಷನು ರಾಮ ಪಟ್ಟಣವನ್ನು ಕೋಟೆಯಾಗಿ ಕಟ್ಟುವ ಕೆಲಸವನ್ನು ಬಿಟ್ಟುಬಿಟ್ಟನು. ಆಗ ಆಸನೂ ಇಸ್ರೇಲಿನ ಎಲ್ಲಾ ಜನರೂ ಒಟ್ಟಿಗೆ ರಾಮಕ್ಕೆ ಹೋಗಿ ಅಲ್ಲಿ ಬಾಷನು ಕೋಟೆಕಟ್ಟಲು ತಂದಿಟ್ಟಿದ್ದ ಕಲ್ಲುಮರಗಳನ್ನೆಲ್ಲಾ ತೆಗೆದು ಮಿಚ್ಪ ಮತ್ತು ಗೆಬ ಪಟ್ಟಣಗಳನ್ನು ಭದ್ರಪಡಿಸಿದರು.

ಆಗ ದೇವದರ್ಶಿಯಾದ ಹನಾನಿಯು ಯೆಹೂದದ ರಾಜನಾದ ಆಸನ ಬಳಿಗೆ ಬಂದು, “ಆಸನೇ, ನೀನು ದೇವರಾದ ಯೆಹೋವನ ಮೇಲೆ ಭರವಸವನ್ನಿಡುವ ಬದಲು ಅರಾಮ್ಯರ ಅರಸನ ಮೇಲೆ ಭರವಸವನ್ನಿಟ್ಟಿದ್ದರಿಂದ ಅರಾಮ್ಯರ ಸೈನ್ಯವು ನಿನ್ನ ಕೈಗೆ ಬೀಳದಂತೆ ತಪ್ಪಿಸಿಕೊಂಡಿತು. ಇಥಿಯೋಪಿಯಾದವರಿಗೆ ಮತ್ತು ಲಿಬ್ಯದವರಿಗೆ ಮಹಾದೊಡ್ಡ ಸೈನ್ಯವಿತ್ತು. ಅಪರಿಮಿತವಾದ ರಥಾಶ್ವಗಳಿದ್ದವು. ಆದರೆ ಅವರನ್ನು ಸೋಲಿಸುವಂತೆ ಯೆಹೋವನು ನಿನಗೆ ಸಹಾಯಿಸಿದನು. ದೇವರು ಲೋಕವನ್ನೆಲ್ಲಾ ದೃಷ್ಟಿಸಿ ನೋಡಿ ತನ್ನ ನಂಬಿಗಸ್ತರನ್ನು ಕಂಡುಕೊಂಡು ಅವರನ್ನು ಬಲಿಷ್ಠರನ್ನಾಗಿ ಮಾಡುವನು. ಆಸನೇ, ನೀನು ಮೂರ್ಖ ಕೆಲಸ ಮಾಡಿದೆ. ಇಂದಿನಿಂದ ಯಾವಾಗಲೂ ನಿನಗೆ ಯುದ್ಧಗಳಿರುತ್ತವೆ.”

10 ಇದನ್ನು ಕೇಳಿದ ಆಸನು ಹನಾನಿಯ ಮೇಲೆ ಬಹುಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಆಸನು ಅದೇ ಸಮಯದಲ್ಲಿ ದೇವಜನರಾದ ಕೆಲವರೊಂದಿಗೆ ಕ್ರೂರವಾಗಿ ವರ್ತಿಸಿದನು.

11 ಆಸನು ಪ್ರಾರಂಭದಿಂದ ಕೊನೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಯೆಹೂದ ಮತ್ತು ಇಸ್ರೇಲ್ ರಾಜರ ಗ್ರಂಥದಲ್ಲಿ ಬರೆಯಲ್ಪಟ್ಟಿವೆ. 12 ಆಸನ ಆಳ್ವಿಕೆಯ ಮೂವತ್ತೊಂಭತ್ತನೆಯ ವರ್ಷದಲ್ಲಿ ಅವನ ಕಾಲಿಗೆ ರೋಗ ಬಂದಿತು. ಅದು ಅಧಿಕವಾಗಿ ಹೆಚ್ಚಿದ್ದರಿಂದ ಅವನು ಯೆಹೋವನ ಸಹಾಯವನ್ನು ಕೇಳದೆ ವೈದ್ಯರ ನೆರವನ್ನೇ ಪಡೆದನು. 13 ಆಸನು ತನ್ನ ಆಳ್ವಿಕೆಯ ನಲವತ್ತೊಂದನೆಯ ವರ್ಷದಲ್ಲಿ ತನ್ನ ಪೂರ್ವಿಕರ ಬಳಿ ಸೇರಿದನು. 14 ಅವನು ತನಗಾಗಿ ದಾವೀದನಗರದಲ್ಲಿ ಮಾಡಿಸಿದ್ದ ಸಮಾಧಿಯಲ್ಲಿಯೇ ಅವನಿಗೆ ಸಮಾಧಿಮಾಡಿದರು. ನಾನಾತರದ ಪರಿಮಳದ್ರವ್ಯಗಳಿಂದ ತುಂಬಿದ್ದ ಹಾಸಿಗೆಯ ಮೇಲೆ ಮಲಗಿಸಿದ್ದರು. ಆಮೇಲೆ ಅವನ ಗೌರವಾರ್ಥವಾಗಿ ಒಂದು ದೊಡ್ಡ ಬೆಂಕಿಕೊಂಡವನ್ನು ಮಾಡಿ ಪರಿಮಳಧೂಪವನ್ನು ಸುಟ್ಟರು.

ಯೆಹೂದದ ಅರಸನಾದ ಯೆಹೋಷಾಫಾಟನು

17 ಆಸನ ಮಗನಾದ ಯೆಹೋಷಾಫಾಟನು ಪಟ್ಟಕ್ಕೆ ಬಂದನು. ಅವನು ತನ್ನ ರಾಜ್ಯವನ್ನು ಬಲಪಡಿಸಿ ಇಸ್ರೇಲರಿಂದ ತನಗೆ ಅಪಾಯವಾಗದಂತೆ ಸುರಕ್ಷೆಯ ವ್ಯವಸ್ಥೆ ಮಾಡಿಕೊಂಡನು. ಯೆಹೂದದ ಎಲ್ಲಾ ಕೋಟೆಗಳುಳ್ಳ ಪಟ್ಟಣಗಳಲ್ಲಿಯೂ ತನ್ನ ತಂದೆಯು ವಶಪಡಿಸಿಕೊಂಡಿದ್ದ ಎಫ್ರಾಯೀಮ್ ಪ್ರಾಂತ್ಯದ ಪಟ್ಟಣಗಳಲ್ಲಿಯೂ ಸೈನ್ಯವನ್ನಿಟ್ಟನು.

ಯೆಹೋವನು ಯೆಹೋಷಾಫಾಟನೊಂದಿಗೆ ಇದ್ದನು; ಯಾಕೆಂದರೆ ಯೆಹೋಷಾಫಾಟನು ತನ್ನ ಯೌವನ ಕಾಲದಲ್ಲಿಯೇ ತನ್ನ ಪೂರ್ವಿಕನಾದ ದಾವೀದನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ಜೀವಿಸಿದನು. ಅವನು ಬಾಳನ ಪೂಜೆಯನ್ನು ಮಾಡಲಿಲ್ಲ. ತನ್ನ ಪೂರ್ವಿಕರು ಅನುಸರಿಸಿದ ದೇವರನ್ನು ನಿರೀಕ್ಷಿಸಿದನು. ಆತನ ಆಜ್ಞೆಗಳನ್ನು ಅನುಸರಿಸಿದನು. ಇಸ್ರೇಲಿ ಅರಸರು ನಡೆದಂತೆ ಇವನು ನಡೆಯಲಿಲ್ಲ. ಯೆಹೋವನು ಯೆಹೋಷಾಫಾಟನಿಗಾಗಿ ರಾಜ್ಯದ ಅಧಿಕಾರವನ್ನು ಸ್ಥಿರಪಡಿಸಿದನು. ಯೆಹೂದದ ಜನರೆಲ್ಲರು ಅವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಆದ್ದರಿಂದ ಅವನಿಗೆ ಐಶ್ವರ್ಯವೂ ಘನತೆಯೂ ದೊರಕಿತು. ಅವನ ಹೃದಯವು ಯೆಹೋವನ ಮಾರ್ಗಗಳಲ್ಲಿ ಆನಂದವನ್ನು ಕಂಡುಕೊಂಡಿತು.[a] ಯೆಹೂದ ಪ್ರಾಂತ್ಯದಲ್ಲಿ ವಿಗ್ರಹಗಳ ಪೂಜಾಸ್ಥಳಗಳನ್ನೆಲ್ಲಾ ತೆಗೆದುಹಾಕಿಸಿ ಅಶೇರಸ್ತಂಭಗಳನ್ನು ಕಡಿದುಹಾಕಿಸಿ ಅವುಗಳನ್ನು ನಿರ್ಮೂಲ ಮಾಡಿದನು.

ತನ್ನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಯೆಹೂದದ ಎಲ್ಲಾ ಪಟ್ಟಣಗಳಿಗೆ ನಾಯಕರನ್ನು ಕಳುಹಿಸಿ ಜನರಿಗೆ ದೇವರ ವಿಧಿನಿಯಮಗಳು ಬೋಧಿಸಲ್ಪಡುವಂತೆ ಮಾಡಿದನು. ಆ ನಾಯಕರು ಯಾರೆಂದರೆ: ಬೆನ್ಹೈಲ್, ಓಬದ್ಯ, ಜೆಕರ್ಯನೆತನೇಲ್ ಮತ್ತು ಮೀಕಾಯ. ಯೆಹೋಷಾಫಾಟನು ಅವರೊಂದಿಗೆ ಲೇವಿಯರನ್ನೂ ಕಳುಹಿಸಿದನು. ಅವರು ಯಾರೆಂದರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ ಮತ್ತು ಟೋಬೀಯ. ಅವರೊಂದಿಗೆ ಕಳುಹಿಸಲ್ಪಟ್ಟ ಯಾಜಕರು ಯಾರೆಂದರೆ: ಎಲೀಷಾಮಾ ಮತ್ತು ಯೆಹೋರಾಮ. ಇವರೆಲ್ಲಾ ಯೆಹೂದದ ಜನರಿಗೆ ಯೆಹೋವನ ಧರ್ಮೋಪದೇಶ ಪುಸ್ತಕದಿಂದ ಆತನ ಕಟ್ಟಳೆ ವಿಧಿನಿಯಮಗಳನ್ನು ಯೆಹೂದದ ಪಟ್ಟಣಗಳಲ್ಲೆಲ್ಲಾ ಸಂಚರಿಸಿ ಕಲಿಸಿದರು.

10 ಯೆಹೂದದ ಸುತ್ತಮುತ್ತಲಿನ ದೇಶಗಳ ಜನಾಂಗಗಳು ಯೆಹೋವನಿಗೆ ಭಯಪಟ್ಟರು. ಆದ್ದರಿಂದ ಅವರು ಯೆಹೋಷಾಫಾಟನ ಮೇಲೆ ಯುದ್ಧಕ್ಕೆ ಹೋಗಲಿಲ್ಲ. 11 ಫಿಲಿಷ್ಟಿಯರಲ್ಲಿ ಕೆಲವರು ಅವನಿಗೆ ಬೆಳ್ಳಿಬಂಗಾರಗಳ ಕಾಣಿಕೆಗಳನ್ನು ತಂದುಕೊಟ್ಟರು; ಅವನೊಬ್ಬ ಬಲಿಷ್ಠನಾದ ರಾಜನೆಂದು ಅವರು ತಿಳಿದುಕೊಂಡಿದ್ದರು. ಅರಬಿಯದ ಜನರು ಯೆಹೋಷಾಫಾಟನಿಗೆ ಪಶುಗಳ ಹಿಂಡುಗಳನ್ನು ತಂದುಕೊಟ್ಟರು. ಅವುಗಳಲ್ಲಿ ಏಳು ಸಾವಿರದ ಏಳುನೂರು ಟಗರುಗಳು ಮತ್ತು ಏಳು ಸಾವಿರದ ಏಳುನೂರು ಹೋತಗಳು ಇದ್ದವು.

12 ಯೆಹೋಷಾಫಾಟನು ಅತ್ಯಧಿಕವಾಗಿ ಅಭಿವೃದ್ಧಿಹೊಂದಿ ದೊಡ್ಡ ಅರಸನಾದನು. ಅವನು ಯೆಹೂದ ದೇಶದಲ್ಲೆಲ್ಲಾ ಕೋಟೆಗಳನ್ನು ಕಟ್ಟಿಸಿದನು. ಉಗ್ರಾಣ ನಗರಗಳನ್ನು ಕಟ್ಟಿಸಿದನು. 13 ಅವುಗಳಲ್ಲಿ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟನು. ಜೆರುಸಲೇಮಿನಲ್ಲಿ ನುರಿತ ಸೈನ್ಯವನ್ನು ಇರಿಸಿದನು. 14 ಅವರು ಬೇರೆಬೇರೆ ಕುಲಗಳಿಂದ ಬಂದವರಾಗಿದ್ದರು.

ಯೆಹೂದಕುಲದ ಅದ್ನನು ಮೂರುಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು.

15 ಯೆಹೋಹಾನಾನನು ಎರಡು ಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.

16 ಅಮಸ್ಯನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಅಮಸ್ಯನು ಜಿಕ್ರಿಯ ಮಗ. ಯೆಹೋವನ ಸೇವೆಮಾಡುವದಕ್ಕೆ ಅವನು ತನ್ನನ್ನು ಒಪ್ಪಿಸಿಕೊಟ್ಟಿದ್ದನು.

17 ಬೆನ್ಯಾಮೀನನ ಕುಲದ ಎಲ್ಯಾದನು ಎರಡು ಲಕ್ಷ ಸೈನಿಕರಿಗೆ ಸೇನಾಪತಿಯಾಗಿದ್ದನು. ಇವರು ಬಿಲ್ಲು, ಬಾಣ, ಗುರಾಣಿಗಳನ್ನು ಬಳಸಬಲ್ಲವರಾಗಿದ್ದರು. ಎಲ್ಯಾದನು ಶೂರನಾದ ಸೇನಾಪತಿ.

18 ಯೆಹೋಜಾಬಾದನು ಒಂದುಲಕ್ಷ ಎಂಭತ್ತು ಸಾವಿರ ಸೈನಿಕರಿಗೆ ಸೇನಾಪತಿಯಾಗಿದ್ದನು.

19 ಈ ಸೈನಿಕರೆಲ್ಲಾ ಯೆಹೋಷಾಫಾಟನ ಸೇವೆಮಾಡಿದರು. ಇವರಲ್ಲದೆ ಯೆಹೂದ ದೇಶದಲ್ಲೆಲ್ಲಾ ಇದ್ದ ಕೋಟೆಗಳಲ್ಲಿಯೂ ಸೈನಿಕರಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International