Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 9-12

ಶೆಬದ ರಾಣಿಯು ಸೊಲೊಮೋನನನ್ನು ಸಂದರ್ಶಿಸಿದ್ದು

ಸೊಲೊಮೋನನ ಪ್ರಖ್ಯಾತಿಯನ್ನು ಶೆಬದ ರಾಣಿಯು ಕೇಳಿ ಅವನನ್ನು ಕಠಿಣವಾದ ಪ್ರಶ್ನೆಗಳಿಂದ ಪರೀಕ್ಷಿಸುವದಕ್ಕಾಗಿ ಜೆರುಸಲೇಮಿಗೆ ಬಂದಳು. ಆಕೆಯು ದೊಡ್ಡ ಪರಿವಾರದೊಂದಿಗೆ ಬಂದಳು. ಜೊತೆಗೆ ಒಂಟೆಗಳ ಮೇಲೆ ಸುಗಂಧದ್ರವ್ಯವನ್ನೂ ಅಪರಿಮಿತವಾದ ಬಂಗಾರವನ್ನೂ ವಜ್ರವೈಢೂರ್ಯಗಳನ್ನೂ ಹೇರಿಕೊಂಡು ಬಂದಳು. ಅಲ್ಲಿ ಆಕೆ ಸೊಲೊಮೋನನ ಸಂಗಡ ಮಾತನಾಡಿ ತನ್ನಲ್ಲಿದ್ದ ಎಷ್ಟೋ ಪ್ರಶ್ನೆಗಳನ್ನು ಕೇಳಿದಳು. ಅವನು ಆಕೆಯ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಆಕೆಯ ಯಾವ ಪ್ರಶ್ನೆಯೂ ಅವನಿಗೆ ಕಷ್ಟಕರವೆನಿಸಲಿಲ್ಲ. ಶೆಬದ ರಾಣಿಯು ಅವನ ಜ್ಞಾನವನ್ನೂ ಅವನು ಕಟ್ಟಿಸಿದ ಮನೆಯನ್ನೂ ನೋಡಿದಳು. ಸೊಲೊಮೋನನ ಮೇಜಿನ ಮೇಲೆ ಇಟ್ಟಿರುವ ಆಹಾರವನ್ನು ನೋಡಿದಳು. ಅವನ ಸೇವಕರು ಮಾಡುವ ಸೇವೆಯ ರೀತಿಯನ್ನು ಪರಿಶೀಲಿಸಿದಳು. ಅವರು ಧರಿಸುವ ಉಡುಪು, ಸಮವಸ್ತ್ರಗಳು, ದೇವಾಲಯಕ್ಕೆ ಹೋಗುವಾಗ ಮಾಡುವ ಮೆರವಣಿಗೆಗಳನ್ನು ಮತ್ತು ಯಜ್ಞಗಳನ್ನು ನೋಡಿದಳು. ಪ್ರತಿಯೊಂದು ವಿಷಯವನ್ನು ಆಕೆ ಗಮನಿಸಿದಾಗ ಅಚ್ಚರಿಗೊಂಡಳು.

ಆಕೆ ಅರಸನಾದ ಸೊಲೊಮೋನನಿಗೆ, “ನನ್ನ ದೇಶದಲ್ಲಿ ನಾನು ನಿನ್ನ ವಿಷಯವಾಗಿ ಕೇಳಿದ ಸಂಗತಿಗಳು, ನಿನ್ನ ಜ್ಞಾನ, ನಿನ್ನ ಕೆಲಸಕಾರ್ಯಗಳು ಎಲ್ಲವೂ ಸತ್ಯವಾಗಿವೆ. ನಾನು ಇಲ್ಲಿಗೆ ಬಂದು ಅವುಗಳನ್ನೆಲ್ಲಾ ಕಣ್ಣಾರೆ ನೋಡುವ ತನಕ ನಾನು ಅವುಗಳನ್ನು ನಂಬಿರಲಿಲ್ಲ. ಆದರೆ ನಾನು ಕೇಳಿದ್ದು ನಿನ್ನ ಜ್ಞಾನದ ಅರ್ಧದಷ್ಟೂ ಇಲ್ಲವೆಂದು ಈಗ ನನಗೆ ತಿಳಿಯಿತು. ನಾನು ಕೇಳಿದ್ದಕ್ಕಿಂತಲೂ ನೀನು ಮಹಾಜ್ಞಾನಿಯಾಗಿರುವೆ. ನಿನ್ನ ಹೆಂಡತಿಯರೂ ನಿನ್ನ ಅಧಿಕಾರಿಗಳೂ ಧನ್ಯರು. ನಿನ್ನ ಸೇವೆಮಾಡುವ ಇವರು ನಿನ್ನ ಜ್ಞಾನೋಪದೇಶವನ್ನು ಯಾವಾಗಲೂ ಕೇಳುವರು. ನಿನ್ನ ದೇವರಿಗೆ ಸ್ತೋತ್ರವಾಗಲಿ. ಆತನು ನಿನ್ನಲ್ಲಿ ಸಂತೋಷಿಸಿ ತನ್ನ ಸಿಂಹಾಸನದಲ್ಲಿ ನಿನ್ನನ್ನು ಕುಳ್ಳಿರಿಸಿದ್ದಾನೆ. ನಿನ್ನ ದೇವರು ಇಸ್ರೇಲನ್ನು ಪ್ರೀತಿಸುತ್ತಾನೆ ಮತ್ತು ಶಾಶ್ವತವಾಗಿ ಪೋಷಿಸುತ್ತಾನೆ. ಅದಕ್ಕಾಗಿಯೇ ನ್ಯಾಯವಾದದ್ದನ್ನೂ ಸರಿಯಾದದ್ದನ್ನೂ ಮಾಡುವುದಕ್ಕಾಗಿ ನಿನ್ನನ್ನು ಇಸ್ರೇಲಿನ ಅರಸನನ್ನಾಗಿ ಮಾಡಿದ್ದಾನೆ” ಎಂದು ಹೇಳಿದಳು.

ಆ ಬಳಿಕ ಶೆಬದ ರಾಣಿಯು ಸೊಲೊಮೋನ್ ಅರಸನಿಗೆ ನಾಲ್ಕು ಸಾವಿರದ ನೂರ ನಲವತ್ತು ಕಿಲೋಗ್ರಾಂ ಬಂಗಾರ, ಲೆಕ್ಕವಿಲ್ಲದಷ್ಟು ಸುಗಂಧದ್ರವ್ಯಗಳು ಮತ್ತು ಬೆಲೆಬಾಳುವ ವಜ್ರಗಳನ್ನು ಕೊಟ್ಟಳು. ಅಷ್ಟು ಅತ್ಯುತ್ತಮವಾದ ಸುಗಂಧದ್ರವ್ಯಗಳನ್ನು ಯಾರೂ ಸೊಲೊಮೋನನಿಗೆ ಕೊಟ್ಟಿರಲಿಲ್ಲ.

10 ಹೂರಾಮನ ಮತ್ತು ಸೊಲೊಮೋನನ ಸೇವಕರು ಓಫೀರಿನಿಂದ ಬಂಗಾರವನ್ನು ತಂದರು; ಅಲ್ಲದೆ ಸುಗಂಧದ ಮರಗಳನ್ನೂ ವಜ್ರವೈಢೂರ್ಯಗಳನ್ನೂ ತಂದರು. 11 ಸುಗಂಧದ ಮರಗಳಿಂದ ಸೊಲೊಮೋನನು ದೇವಾಲಯದ ಮತ್ತು ಅರಮನೆಯ ಮೆಟ್ಟಲುಗಳನ್ನು ಮಾಡಿಸಿದನು; ಅಲ್ಲದೆ ಗಾಯಕರಿಗಾಗಿ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನೂ ಅದರಿಂದ ತಯಾರಿಸಿದನು. ಯೆಹೂದ ಪ್ರಾಂತ್ಯದಲ್ಲಿ ಯಾರೂ ಅಂತಹ ಸುಂದರವಾದ ಸುಗಂಧವಸ್ತುಗಳನ್ನು ನೋಡಿರಲಿಲ್ಲ.

12 ಶೆಬದ ರಾಣಿಯು ಕೇಳಿದ್ದನ್ನೆಲ್ಲಾ ಸೊಲೊಮೋನನು ಕೊಟ್ಟನು. ಆಕೆಯು ಅವನಿಗೆ ತಂದದ್ದಕ್ಕಿಂತ ಹೆಚ್ಚಾಗಿ ಆಕೆಗೆ ಕೊಟ್ಟನು. ಅನಂತರ ಶೆಬದ ರಾಣಿಯೂ ಆಕೆಯ ಪರಿವಾರವೂ ತಮ್ಮ ದೇಶಕ್ಕೆ ತೆರಳಿದರು.

ಸೊಲೊಮೋನನ ಅಪರಿಮಿತವಾದ ಐಶ್ವರ್ಯ

13 ಸೊಲೊಮೋನನು ಒಂದು ವರ್ಷದಲ್ಲಿ ಇಪ್ಪತ್ತೆರಡು ಸಾವಿರದ ಒಂಭೈನೂರ ಎಪ್ಪತ್ತೇಳು ಕಿಲೋಗ್ರಾಂ ಬಂಗಾರವನ್ನು ಸಂಗ್ರಹಿಸಿದನು. 14 ಇತರ ದೇಶಗಳ ವ್ಯಾಪಾರಸ್ಥರು, ಅರೇಬಿಯದ ಎಲ್ಲಾ ರಾಜರುಗಳು ಮತ್ತು ದೇಶಾಧಿಪತಿಗಳು ಸೊಲೊಮೋನನಿಗೆ ಬೆಳ್ಳಿಬಂಗಾರಗಳನ್ನು ತಂದುಕೊಡುತ್ತಿದ್ದರು.

15 ಸೊಲೊಮೋನನು ಇನ್ನೂರು ದೊಡ್ಡ ಗಾತ್ರದ ಗುರಾಣಿಗಳನ್ನು ಚಿನ್ನದ ತಗಡಿನಿಂದ ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಸುಮಾರು ಎಳು ಕಿಲೋಗ್ರಾಂಗಳಷ್ಟು ಚಿನ್ನವು ಹಿಡಿಯಿತು. 16 ಇದಲ್ಲದೆ ಮುನ್ನೂರು ಸಣ್ಣ ಗುರಾಣಿಗಳನ್ನೂ ಸೊಲೊಮೋನನು ಚಿನ್ನದ ತಗಡಿನಿಂದ ಮಾಡಿಸಿದನು; ಒಂದೊಂದು ಗುರಾಣಿಗೆ ಸುಮಾರು ನಾಲ್ಕು ಪೌಂಡ್ ಬಂಗಾರ ಹಿಡಿಯಿತು. ಈ ಗುರಾಣಿಗಳನ್ನೆಲ್ಲಾ ಸೊಲೊಮೋನನು “ಲೆಬನೋನಿನ ತೋಪು” ಎಂಬ ಅರಮನೆಯಲ್ಲಿ ಶೇಖರಿಸಿಟ್ಟನು.

17 ರಾಜನಾದ ಸೊಲೊಮೋನನು ದಂತದಿಂದ ಒಂದು ದೊಡ್ಡ ಸಿಂಹಾಸನವನ್ನು ಮಾಡಿಸಿದನು. ಸಿಂಹಾಸನವನ್ನು ಅಪ್ಪಟ ಬಂಗಾರದ ತಗಡಿನಿಂದ ಹೊದಿಸಿದನು. 18 ಸಿಂಹಾಸನವನ್ನು ಹತ್ತಲು ಆರು ಮೆಟ್ಟಲುಗಳಿದ್ದವು. ಅದಕ್ಕೆ ಬಂಗಾರದಿಂದ ಮಾಡಿದ ಪಾದಪೀಠವಿತ್ತು. ಸಿಂಹಾಸನದ ಎರಡು ಕಡೆಗಳಲ್ಲೂ ಕೈಗಳನ್ನಿಡಲು ಏರ್ಪಾಟು ಮಾಡಲಾಗಿತ್ತು; ಅವುಗಳ ಸಮೀಪದಲ್ಲಿ ಎರಡು ಸಿಂಹಗಳ ಆಕೃತಿಯನ್ನು ಮಾಡಿಟ್ಟಿದ್ದರು. 19 ಆರು ಮೆಟ್ಟಲುಗಳ ಮೇಲೆ ಹನ್ನೆರಡು ಸಿಂಹಗಳ ಆಕೃತಿಯನ್ನು ಇಟ್ಟಿದ್ದರು. ಪ್ರತಿಯೊಂದು ಮೆಟ್ಟಲಿನ ಎರಡೂ ಕಡೆಗಳಲ್ಲಿ ಒಂದೊಂದು ಸಿಂಹದ ಆಕೃತಿಯಿತ್ತು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ.

20 ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳೇ. “ಲೆಬನೋನಿನ ತೋಪು” ಎಂಬ ಅರಮನೆಯಲ್ಲಿ ಇಟ್ಟಿದ್ದ ಎಲ್ಲಾ ವಸ್ತುಗಳು ಅಪ್ಪಟ ಬಂಗಾರದಿಂದಲೇ ಮಾಡಿದವುಗಳಾಗಿದ್ದವು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ.

21 ರಾಜನಾದ ಸೊಲೊಮೋನನ ಬಳಿಯಲ್ಲಿ ತಾರ್ಷೀಷಿಗೆ ಹೋಗಲು ಹಡಗುಗಳಿದ್ದವು. ಹೂರಾಮನ ನಾವಿಕರು ಅವುಗಳನ್ನು ನಡಿಸಿದರು. ಮೂರು ವರ್ಷಕ್ಕೊಮ್ಮೆ ಹಡಗುಗಳು ತಾರ್ಷೀಷಿನಿಂದ ಹಿಂದಿರುಗುತ್ತಿದ್ದವು. ಅವು ಚಿನ್ನ, ಬೆಳ್ಳಿ, ದಂತ, ಕೋತಿ ಮತ್ತು ನವಿಲುಗಳನ್ನು ಸೊಲೊಮೋನನಿಗೆ ತರುತ್ತಿದ್ದವು.

22 ರಾಜನಾದ ಸೊಲೊಮೋನನು ಭೂಲೋಕದ ಎಲ್ಲಾ ರಾಜರುಗಳಿಗಿಂತ ಜ್ಞಾನದಲ್ಲಿಯೂ ಐಶ್ವರ್ಯದಲ್ಲಿಯೂ ಹೆಚ್ಚು ಪ್ರಸಿದ್ಧನಾದನು. 23 ದೇವರು ಅವನಿಗೆ ದಯಪಾಲಿಸಿದ ಜ್ಞಾನವನ್ನು ನೋಡಿ ಅವನಿಂದ ಜ್ಞಾನವಾಕ್ಯಗಳನ್ನು ಕೇಳಲು ಲೋಕದ ರಾಜರುಗಳು ಅವನ ಬಳಿಗೆ ಬರುತ್ತಿದ್ದರು. 24 ಪ್ರತಿ ವರ್ಷವೂ ಆ ರಾಜರುಗಳು ಸೊಲೊಮೋನನಿಗೆ ಬಹುಮಾನಗಳನ್ನು ತರುತ್ತಿದ್ದರು. ಬೆಳ್ಳಿಬಂಗಾರದ ವಸ್ತುಗಳನ್ನು, ಬಟ್ಟೆಗಳನ್ನು, ಆಯುಧಗಳನ್ನು, ಸುಗಂಧವಸ್ತುಗಳನ್ನು, ಕುದುರೆಗಳನ್ನು ಮತ್ತು ಹೇಸರಕತ್ತೆಗಳನ್ನು ಕಾಣಿಕೆಯಾಗಿ ಅವನಿಗೆ ಕೊಡುತ್ತಿದ್ದರು.

25 ಸೊಲೊಮೋನನ ರಥಗಳಿಗೂ ರಥಾಶ್ವಗಳಿಗೂ ನಾಲ್ಕು ಸಾವಿರ ಲಾಯಗಳಿದ್ದವು. ಅವನ ಬಳಿಯಲ್ಲಿ ಹನ್ನೆರಡು ಸಾವಿರ ರಾಹುತರು ಇದ್ದರು. ಅವರನ್ನು ಪ್ರತ್ಯೇಕವಾದ ಪಟ್ಟಣಗಳಲ್ಲಿಯೂ ಜೆರುಸಲೇಮಿನಲ್ಲಿಯೂ ಇರಿಸಿದನು. 26 ಯೂಫ್ರೇಟೀಸ್ ನದಿಯಿಂದ ಹಿಡಿದು ಫಿಲಿಷ್ಟಿಯರ ರಾಜ್ಯ ಮತ್ತು ಈಜಿಪ್ಟಿನ ಮೇರೆಯ ತನಕವಿದ್ದ ಎಲ್ಲಾ ಅರಸರುಗಳಿಗೆ ಸೊಲೊಮೋನನೇ ರಾಜನಾಗಿದ್ದನು. 27 ಸೊಲೊಮೋನನಿಂದಾಗಿ ಜೆರುಸಲೇಮಿನಲ್ಲಿ ಬೆಳ್ಳಿಯು ಹೆಚ್ಚಾಗಿ, ಕಲ್ಲುಗಳಷ್ಟು ಸಾಮಾನ್ಯವಾಗಿತ್ತು. ಮಾತ್ರವಲ್ಲದೆ ದೇವದಾರು ಮರಗಳು ಬೆಟ್ಟಪ್ರದೇಶದಲ್ಲಿ ಬೆಳೆಯುವ ಸಿಕಮೋರ್ ಮರಗಳಂತೆ ಧಾರಾಳವಾಗಿದ್ದವು. 28 ಜನರು ಸೊಲೊಮೋನನಿಗೋಸ್ಕರ ಈಜಿಪ್ಟ್ ಮತ್ತು ಬೇರೆ ದೇಶಗಳಿಂದ ಕುದುರೆಗಳನ್ನು ತಂದು ಕೊಡುತ್ತಿದ್ದರು.

ಸೊಲೊಮೋನನ ಮರಣ

29 ಸೊಲೊಮೋನನು ಪ್ರಾರಂಭದಿಂದ ಅಂತ್ಯದ ತನಕ ಮಾಡಿದ ಎಲ್ಲಾ ವಿಷಯಗಳನ್ನು ಪ್ರವಾದಿಯಾದ ನಾತಾನನು ಬರೆದ ಲೇಖನಗಳಲ್ಲಿಯೂ, ಶೀಲೋವದ ಅಹೀಯನ ಪ್ರವಾದನೆಯಲ್ಲಿಯೂ ಮತ್ತು ದೇವದರ್ಶಿಯಾದ ಇದ್ದೋವಿನ ದರ್ಶನಗಳ ಪುಸ್ತಕದಲ್ಲಿಯೂ ಬರೆಯಲಾಗಿದೆ. ದೇವದರ್ಶಿಯಾದ ಇದ್ದೋ, ನೆಬಾಟನ ಮಗನಾದ ಯಾರೊಬ್ಬಾಮನ ವಿಷಯವಾಗಿಯೂ ಬರೆದಿದ್ದಾನೆ. 30 ಜೆರುಸಲೇಮಿನಲ್ಲಿ ಸೊಲೊಮೋನನು ನಲವತ್ತು ವರ್ಷಗಳ ಕಾಲ ಇಸ್ರೇಲರನ್ನು ಆಳಿದನು. 31 ಆ ಬಳಿಕ ಸೊಲೊಮೋನನು ತನ್ನ ಪೂರ್ವಿಕರೊಂದಿಗೆ ಸೇರಿದನು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಸೊಲೊಮೋನನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.

ರೆಹಬ್ಬಾಮನ ಅವಿವೇಕತನ

10 ರೆಹಬ್ಬಾಮನು ಶೆಕೆಮಿಗೆ ಹೋದನು. ಯಾಕೆಂದರೆ ಅಲ್ಲಿ ಇಸ್ರೇಲ್ ಜನರೆಲ್ಲಾ ಅವನನ್ನು ಅರಸನನ್ನಾಗಿ ಮಾಡಲು ಕೂಡಿ ಬಂದಿದ್ದರು. ಯಾರೊಬ್ಬಾಮನು ರಾಜನಾದ ಸೊಲೊಮೋನನ ಬಳಿಯಿಂದ ಓಡಿಹೋಗಿ ಈಜಿಪ್ಟಿನಲ್ಲಿ ವಾಸಿಸುತ್ತಿದ್ದನು. ಅವನು ನೆಬಾಟನ ಮಗನು. ರೆಹಬ್ಬಾಮನು ರಾಜನಾದನೆಂಬ ಸುದ್ದಿ ತಿಳಿದಕೂಡಲೇ ಅವನು ಈಜಿಪ್ಟಿನಿಂದ ಹಿಂತಿರುಗಿ ಬಂದನು.

ಇಸ್ರೇಲರು ಯಾರೊಬ್ಬಾಮನನ್ನು ತಮ್ಮ ಬಳಿಗೆ ಕರೆಯಿಸಿದರು. ಆಗ ಯಾರೊಬ್ಬಾಮನೂ ಇಸ್ರೇಲರೂ ರೆಹಬ್ಬಾಮನ ಬಳಿಗೆ ಹೋಗಿ, “ರೆಹಬ್ಬಾಮನೇ, ನಿನ್ನ ತಂದೆಯು ನಮ್ಮ ಮೇಲೆ ತುಂಬ ಭಾರವಾದ ನೊಗವನ್ನು ಹೊರಿಸಿದ್ದನು. ಆ ಭಾರವನ್ನು ನೀನು ಕಡಿಮೆ ಮಾಡಬೇಕು. ಆಗ ನಾವು ನಿನ್ನ ಸೇವೆಮಾಡುವೆವು” ಅಂದರು.

ಅದಕ್ಕೆ ರೆಹಬ್ಬಾಮನು, “ನೀವು ಮೂರು ದಿನಗಳ ನಂತರ ನನ್ನ ಬಳಿಗೆ ಬನ್ನಿರಿ” ಎಂದು ಹೇಳಿ ಅವರನ್ನು ಕಳುಹಿಸಿಬಿಟ್ಟನು.

ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಾಲೋಚಕರಾಗಿದ್ದ ಹಿರಿಯರೊಡನೆ ಮಾತಾಡಿ, “ಇವರಿಗೆ ನಾನು ಏನು ಉತ್ತರಕೊಡಬೇಕು?” ಎಂದು ವಿಚಾರಿಸಿದನು.

ಹಿರಿಯರು ಅವನಿಗೆ, “ನೀನು ಅವರಿಗೆ ಕರುಣೆಯನ್ನು ತೋರಿ, ಅವರನ್ನು ಮೆಚ್ಚಿಸಿ, ಅವರಿಗೆ ಒಳ್ಳೆಯ ಮಾತುಗಳನ್ನಾಡಿದರೆ ಅವರು ನಿರಂತರವಾಗಿ ನಿನ್ನ ಸೇವೆಮಾಡುವರು” ಎಂದು ಹೇಳಿದರು.

ಆದರೆ ರೆಹಬ್ಬಾಮನು ಹಿರಿಯರ ಸಲಹೆಯನ್ನು ಕೇಳಲಿಲ್ಲ. ಅವನೊಂದಿಗೆ ಬೆಳೆದ ಅವನ ಸಮಪ್ರಾಯದ ಯೌವನಸ್ಥರನ್ನು ವಿಚಾರಿಸಿ, “ನನ್ನ ತಂದೆಯು ಅವರಿಗೆ ಕೊಟ್ಟ ಭಾರವನ್ನು ಹಗುರ ಮಾಡಲು ಜನರು ಕೇಳುತ್ತಿದ್ದಾರೆ. ನಾನು ಅವರಿಗೆ ಏನು ಉತ್ತರಕೊಡಬೇಕು?” ಎಂದು ಕೇಳಿದನು.

10 ಆ ಯೌವನಸ್ಥರು, “ನೀನು ಅವರಿಗೆ, ‘ನನ್ನ ತಂದೆಯ ಸೊಂಟಕ್ಕಿಂತ ನನ್ನ ಕಿರಿಬೆರಳು ದಪ್ಪವಾಗಿದೆ. 11 ನನ್ನ ತಂದೆಯು ಭಾರವಾದ ನೊಗವನ್ನು ನಿಮ್ಮ ಮೇಲೆ ಹೊರಿಸಿದನು. ನಾನಾದರೋ ಅದನ್ನು ಅಧಿಕಗೊಳಿಸುವೆನು. ನನ್ನ ತಂದೆಯು ಚಾಟಿಯಿಂದ ನಿಮ್ಮನ್ನು ಶಿಕ್ಷಿಸಿದನು. ನಾನಾದರೋ ಮುಳ್ಳುಕೊರಡೆಗಳಿಂದ ನಿಮ್ಮನ್ನು ಶಿಕ್ಷಿಸುವೆನು’ ಎಂದು ಹೇಳು” ಎಂಬುದಾಗಿ ಸಲಹೆ ನೀಡಿದರು.

12 ಮೂರು ದಿವಸಗಳ ಬಳಿಕ ಯಾರೊಬ್ಬಾಮನೂ ಎಲ್ಲಾ ಇಸ್ರೇಲರು ರೆಹಬ್ಬಾಮನ ಬಳಿಗೆ ಬಂದರು. “ಮೂರು ದಿನಗಳ ನಂತರ ಬನ್ನಿ” ಎಂದು ರೆಹಬ್ಬಾಮನೇ ಅವರಿಗೆ ಹೇಳಿದ್ದನು. 13 ಆಗ ಅರಸನಾದ ರೆಹಬ್ಬಾಮನು ಹಿರಿಯರ ಸಲಹೆಯನ್ನು ತಿರಸ್ಕರಿಸಿ ಜನರೊಂದಿಗೆ ಬಹಳ ಕೀಳಾಗಿ ಮಾತನಾಡಿದನು. 14 ಯೌವನಸ್ಥರು ಹೇಳಿದ ಪ್ರಕಾರ ರೆಹಬ್ಬಾಮನು ಅವರಿಗೆ, “ನನ್ನ ತಂದೆಯು ನಿಮಗೆ ಭಾರವಾದ ನೊಗವನ್ನು ಹೊರಿಸಿದನು. ನಾನಾದರೋ ಅದನ್ನು ಇನ್ನೂ ಅಧಿಕಗೊಳಿಸುವೆನು. ನನ್ನ ತಂದೆಯು ಚಾಟಿಯಿಂದ ನಿಮ್ಮನ್ನು ಹೊಡೆದನು. ನಾನಾದರೋ ಮುಳ್ಳುಕೊರಡೆಗಳಿಂದ ನಿಮ್ಮನ್ನು ಹೊಡೆಯುವೆನು” ಅಂದನು. 15 ಹೀಗೆ ರೆಹಬ್ಬಾಮನು ಜನರ ಬೇಡಿಕೆಯನ್ನು ಕೇಳಲಿಲ್ಲ. ಯಾಕೆಂದರೆ ಇದು ದೇವರ ಚಿತ್ತವಾಗಿತ್ತು. ದೇವರು ಅಹೀಯನ ಮುಖಾಂತರ ಯಾರೊಬ್ಬಾಮನಿಗೆ ಹೇಳಿದ ಮಾತು ನೆರವೇರುವಂತೆ ಹೀಗಾಯಿತು. ಅಹೀಯನು ಶೀಲೋವಿನವನಾಗಿದ್ದನು. ಯಾರೊಬ್ಬಾಮನು ನೆಬಾಟನ ಮಗನಾಗಿದ್ದನು.

16 ರಾಜನಾದ ರೆಹಬ್ಬಾಮನು ತಮ್ಮ ಮಾತನ್ನು ಕೇಳದೆ ಹೋದದ್ದನ್ನು ಇಸ್ರೇಲರು ನೋಡಿ ಅವನಿಗೆ,

“ನಾವು ದಾವೀದನ ಕುಟುಂಬದ ಭಾಗವಾಗಿದ್ದೇವೋ? ಇಲ್ಲ.
    ನಮಗೆ ಇಷಯನ ಆಸ್ತಿಯಲ್ಲಿ ಪಾಲಿದೆಯೋ? ಇಲ್ಲ.
ಆದ್ದರಿಂದ ಇಸ್ರೇಲರೇ, ನಾವು ನಮ್ಮನಮ್ಮ ಮನೆಗಳಿಗೆ ಹೋಗೋಣ.
    ದಾವೀದನ ಮಗನು ಅವನ ವಂಶದವರನ್ನೇ ಆಳಲಿ”

ಎಂದು ಹೇಳಿ ಸೇರಿಬಂದವರನ್ನೆಲ್ಲಾ ತಮ್ಮತಮ್ಮ ಮನೆಗಳಿಗೆ ಹಿಂದಕ್ಕೆ ಕಳುಹಿಸಿದರು. 17 ಆದರೆ ಇಸ್ರೇಲರಲ್ಲಿ ಕೆಲವರು ಯೆಹೂದದ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು. ಇವರಿಗೆ ರೆಹಬ್ಬಾಮನೇ ರಾಜನಾದನು.

18 ಹದೋರಾಮನು ಬಿಟ್ಟೀಕೆಲಸ ಮಾಡುತ್ತಿದ್ದವರ ಅಧಿಕಾರಿ. ಅವನನ್ನು ರೆಹಬ್ಬಾಮನು ಇಸ್ರೇಲರ ಬಳಿಗೆ ಕಳುಹಿಸಿದನು. ಆದರೆ ಇಸ್ರೇಲರು ಅವನ ಮೇಲೆ ಕಲ್ಲೆಸೆದು ಕೊಂದರು. ಇದನ್ನು ನೋಡಿದ ರೆಹಬ್ಬಾಮನು ಓಡಿಹೋಗಿ ತನ್ನ ರಥವನ್ನು ಏರಿ ಅಲ್ಲಿಂದ ತಪ್ಪಿಸಿಕೊಂಡು ಜೆರುಸಲೇಮಿಗೆ ಬಂದನು. 19 ಅಂದಿನಿಂದ ಇಂದಿನವರೆಗೆ ಇಸ್ರೇಲರು ದಾವೀದನ ಕುಟುಂಬಕ್ಕೆ ವಿರುದ್ಧವಾದರು.

11 ರೆಹಬ್ಬಾಮನು ಜೆರುಸಲೇಮಿಗೆ ಬಂದು ಯೆಹೂದ ಮತ್ತು ಬೆನ್ಯಾಮೀನ್ ಕುಲದ ಒಂದು ಲಕ್ಷ ಎಂಭತ್ತುಸಾವಿರ ಮಂದಿ ನುರಿತ ಸೈನಿಕರನ್ನು ಒಟ್ಟು ಸೇರಿಸಿದನು. ಇಸ್ರೇಲರೊಂದಿಗೆ ಯುದ್ಧಮಾಡಿ ಅವರ ರಾಜ್ಯವನ್ನು ಮತ್ತೆ ಪಡೆದುಕೊಳ್ಳಬೇಕೆಂಬುದೇ ಅವನ ಉದ್ದೇಶವಾಗಿತ್ತು. ಆದರೆ ಯೆಹೋವನ ಮನುಷ್ಯನಾದ ಶೆಮಾಯನಿಗೆ ಯೆಹೋವನ ಸಂದೇಶವು ಬಂತು, “ಶೆಮಾಯನೇ, ನೀನು ಹೋಗಿ ಯೆಹೂದದ ರಾಜನಾದ ರೆಹಬ್ಬಾಮನೊಡನೆ ಮಾತನಾಡು. ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತ್ಯಗಳಲ್ಲಿ ವಾಸವಾಗಿರುವ ಎಲ್ಲಾ ಇಸ್ರೇಲರೊಂದಿಗೆ ಮಾತನಾಡು. ಅವರಿಗೆ ಹೀಗೆ ಹೇಳು: ಯೆಹೋವನು ಹೀಗೆನ್ನುತ್ತಾನೆ: ನಿಮ್ಮ ಸಹೋದರರೊಂದಿಗೆ ನೀವು ಯುದ್ಧಮಾಡಬಾರದು. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಲಿ. ಯಾಕೆಂದರೆ ಇದನ್ನು ನಾನೇ ಮಾಡಿದ್ದೇನೆ.” ರೆಹಬ್ಬಾಮನೂ ಅವನೊಂದಿಗಿದ್ದ ಸೈನಿಕರೂ ಯೆಹೋವನ ಸಂದೇಶವನ್ನು ಕೇಳಿ ಹಿಂತಿರುಗಿದರು. ಅವರು ಯಾರೊಬ್ಬಾಮನೊಂದಿಗೆ ಯುದ್ಧಮಾಡಲಿಲ್ಲ.

ಯೆಹೂದವನ್ನು ರೆಹಬ್ಬಾಮನು ಬಲಗೊಳಿಸಿದ್ದು

ರೆಹಬ್ಬಾಮನು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದನು. ಯುದ್ಧದಲ್ಲಿ ರಕ್ಷಿಸಿಕೊಳ್ಳಲು ಅವನು ಯೆಹೂದದಲ್ಲಿ ಭದ್ರವಾದ ಪಟ್ಟಣಗಳನ್ನು ಕಟ್ಟಿದನು. ಬೆತ್ಲೆಹೇಮ್, ಏತಾಮ್, ತೆಕೋವ, ಬೇತ್ಚೂರ್, ಸೋಕೋ, ಅದುಲ್ಲಾಮ್, ಗತ್, ಮಾರೇಷ, ಜೀಫ್, ಅದೋರೈಮ್, ಲಾಕೀಷ್, ಅಜೇಕ. 10 ಚೊರ್ಗ, ಅಯ್ಯಾಲೋನ್ ಮತ್ತು ಹೆಬ್ರೋನ್ ಎಂಬ ಯೆಹೂದ ಮತ್ತು ಬೆನ್ಯಾಮೀನ್ ಪ್ರಾಂತದ ಪಟ್ಟಣಗಳನ್ನು ದುರಸ್ತಿಪಡಿಸಿ ಭದ್ರಪಡಿಸಲಾಯಿತು. 11 ರೆಹಬ್ಬಾಮನು ಈ ಪಟ್ಟಣಗಳಿಗೆ ಅಧಿಪತಿಗಳನ್ನು ನೇಮಿಸಿದನು; ಆಹಾರಸಾಮಾಗ್ರಿ, ಎಣ್ಣೆ, ದ್ರಾಕ್ಷಾರಸ ಮುಂತಾದವುಗಳನ್ನು ಸಂಗ್ರಹಿಸಿಟ್ಟನು. 12 ಪ್ರತಿಯೊಂದು ಪಟ್ಟಣದಲ್ಲಿಯೂ ಈಟಿಗಳನ್ನು ಮತ್ತು ಗುರಾಣಿಗಳನ್ನು ಸಂಗ್ರಹಿಸಿಟ್ಟನು; ಹೀಗೆ ಈ ಎಲ್ಲಾ ಪಟ್ಟಣಗಳನ್ನು ಭದ್ರಪಡಿಸಿದನು. ರೆಹಬ್ಬಾಮನು ಯೆಹೂದದ ಮತ್ತು ಬೆನ್ಯಾಮೀನನ ಜನರನ್ನು ಮತ್ತು ಪಟ್ಟಣಗಳನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡನು.

13 ಇಸ್ರೇಲ್ ಪ್ರಾಂತ್ಯದಲ್ಲಿದ್ದ ಯಾಜಕರೂ ಲೇವಿಯರೂ ರೆಹಬ್ಬಾಮನನ್ನು ಸೇರಿಕೊಂಡರು. 14 ಲೇವಿಯರು ತಮಗಿದ್ದ ಗೊಮಾಳಗಳನ್ನೂ ಹೊಲಗದ್ದೆಗಳನ್ನೂ ಬಿಟ್ಟು ಯೆಹೂದಕ್ಕೂ ಮತ್ತು ಜೆರುಸಲೇಮಿಗೂ ಬಂದರು. ಯಾಜಕರಾಗಿ ಸೇವೆಮಾಡಲು ಯಾರೊಬ್ಬಾಮನು ಮತ್ತು ಅವನ ಮಕ್ಕಳು ಲೇವಿಯರಿಗೆ ಅನುಮತಿ ಕೊಡಲಿಲ್ಲವಾದ್ದರಿಂದ ಲೇವಿಯರು ಹೀಗೆ ಮಾಡಿದರು.

15 ಯಾರೊಬ್ಬಾಮನು ತನಗೆ ಬೇಕಾದ ಯಾಜಕರನ್ನು ಆರಿಸಿ ತಾನು ಮಾಡಿಸಿದ ಬಸವನ ಮತ್ತು ಆಡುಗಳ ಪ್ರತಿಮೆಗಳನ್ನು ಉನ್ನತಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲು ನೇಮಿಸಿದನು. 16 ಲೇವಿಯರು ಇಸ್ರೇಲನ್ನು ಬಿಟ್ಟುಬಂದ ಬಳಿಕ ಇಸ್ರೇಲರಲ್ಲಿ ದೇವರಾದ ಯೆಹೋವನಿಗೆ ನಂಬಿಗಸ್ತರಾಗಿ ಸೇವಿಸುವವರು ಜೆರುಸಲೇಮ್ ನಗರಕ್ಕೆ ಬಂದು ದೇವರಿಗೆ ಯಜ್ಞಗಳನ್ನು ಅರ್ಪಿಸಿ ಆರಾಧಿಸಿದರು. 17 ಅವರೆಲ್ಲ ಯೆಹೂದ ರಾಜ್ಯವನ್ನು ಬಲಗೊಳಿಸಿದರು ಮತ್ತು ಸೊಲೊಮೋನನ ಮಗನಾದ ರೆಹಬ್ಬಾಮನೊಂದಿಗೆ ಮೂರು ವರ್ಷವಿದ್ದರು. ಯಾಕೆಂದರೆ ಅವರು ಈ ವರ್ಷಗಳಲ್ಲಿ ದಾವೀದನಂತೆ ಮತ್ತು ಸೊಲೊಮೋನನಂತೆ ದೇವರ ಮಾರ್ಗದಲ್ಲಿ ನಡೆಯುತ್ತಿದ್ದರು.

ರೆಹಬ್ಬಾಮನ ಕುಟುಂಬ

18 ರೆಹಬ್ಬಾಮನು ಯೆರೀಮೋತನ ಮಗಳಾದ ಮಹ್ಲತ್ ಎಂಬಾಕೆಯನ್ನು ಮದುವೆಯಾದನು. ಆಕೆಯ ತಾಯಿಯ ಹೆಸರು ಅಬೀಹೈಲ್. ಯೆರೀಮೋತನು ದಾವೀದನ ಮಗನಾಗಿದ್ದನು. ಅಬೀಹೈಲಳು ಇಷಯನ ಮಗನಾದ ಎಲೀಯಾಬನ ಮಗಳು. 19 ರೆಹಬ್ಬಾಮನಿಂದ ಮಹ್ಲತಳು ಈ ಮೂರು ಗಂಡುಮಕ್ಕಳನ್ನು ಪಡೆದಳು: ಯೆಗೂಷ್, ಶೆಮರ್ಯ ಮತ್ತು ಜಾಹಮ್. 20 ಆಮೇಲೆ ರೆಹಬ್ಬಾಮನು ಅಬ್ಷಾಲೋಮನ ಮಗಳಾದ ಮಾಕಳನ್ನು ಮದುವೆಯಾದನು. ಆಕೆಯು ಅವನಿಂದ ಅಬೀಯ, ಅತ್ತ್ಯೆ, ಜೀಜ ಮತ್ತು ಶೆಲೋಮೀತ್ ಎಂಬ ಮಕ್ಕಳನ್ನು ಹೆತ್ತಳು. 21 ರೆಹಬ್ಬಾಮನು ತನ್ನ ಬೇರೆ ಪತ್ನಿಯರಿಗಿಂತಲೂ ಉಪಪತ್ನಿಯರಿಗಿಂತಲೂ ಮಾಕಳನ್ನು ಹೆಚ್ಚಾಗಿ ಪ್ರೀತಿಸಿದನು. ಮಾಕಳು ಅಬ್ಷಾಲೋಮನ ಮಗಳಾಗಿದ್ದಳು. ರೆಹಬ್ಬಾಮನಿಗೆ ಹದಿನೆಂಟು ಮಂದಿ ಪತ್ನಿಯರೂ ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಅವನಿಗೆ ಇಪ್ಪತ್ತೆಂಟು ಗಂಡುಮಕ್ಕಳೂ ಅರವತ್ತು ಹೆಣ್ಣುಮಕ್ಕಳೂ ಇದ್ದರು.

22 ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅವನ ಸಹೋದರರೊಳಗಿಂದ ನಾಯಕನನ್ನಾಗಿ ಆರಿಸಿದನು. ರೆಹಬ್ಬಾಮನು ಅವನನ್ನು ಅರಸನನ್ನಾಗಿ ಮಾಡಬೇಕೆಂಬುದೇ ಅವನ ಉದ್ದೇಶವಾಗಿತ್ತು. 23 ರೆಹಬ್ಬಾಮನು ವಿವೇಕದಿಂದ ತನ್ನ ಗಂಡುಮಕ್ಕಳನ್ನು ಯೆಹೂದ ಮತ್ತು ಬೆನ್ಯಾಮೀನ್ ಪ್ರದೇಶಗಳಲ್ಲಿದ್ದ ಕೋಟೆಗಳುಳ್ಳ ಪಟ್ಟಣಗಳಲ್ಲಿರಿಸಿ ಅವರಿಗೆ ಬೇಕಾದಷ್ಟು ಆಹಾರವನ್ನು ಸರಬರಾಜು ಮಾಡಿಸಿದನು. ಅವರಿಗೆ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಒದಗಿಸಿಕೊಟ್ಟನು.

ಈಜಿಪ್ಟಿನ ರಾಜನಾದ ಶೀಶಕನು ಜೆರುಸಲೇಮಿನ ಮೇಲೆ ಧಾಳಿಮಾಡಿದ್ದು

12 ರೆಹಬ್ಬಾಮನು ಬಲಾಢ್ಯನಾದ ರಾಜನಾಗಿ ತನ್ನ ರಾಜ್ಯವನ್ನು ಬಲಗೊಳಿಸಿದ ನಂತರ ಅವನೂ ಯೆಹೂದದ ಜನರೂ ದೇವರಾದ ಯೆಹೋವನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದರು.

ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಶೀಶಕನು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಶೀಶಕನು ಈಜಿಪ್ಟಿನ ರಾಜ. ರೆಹಬ್ಬಾಮನೂ ಯೆಹೂದ ಪ್ರಾಂತ್ಯದ ಜನರೂ ಯೆಹೋವನಿಗೆ ಅವಿಧೇಯರಾದದ್ದೇ ಈ ಮುತ್ತಿಗೆಗೆ ಕಾರಣ. ಶೀಶಕನ ಬಳಿಯಲ್ಲಿ ಹನ್ನೆರಡು ಸಾವಿರ ರಥಗಳು, ಅರವತ್ತುಸಾವಿರ ರಾಹುತರು ಮತ್ತು ಲೆಕ್ಕಿಸಲಾರದಷ್ಟು ಸೈನಿಕರು ಇದ್ದರು. ಅವನ ಆ ದೊಡ್ಡ ಸೈನ್ಯದಲ್ಲಿ ಲಿಬ್ಯ, ಇಥಿಯೋಪ್ಯ ಮತ್ತು ಸುಕ್ಕೀಯ ದೇಶದ ಸಿಪಾಯಿಗಳಿದ್ದರು. ಶೀಶಕನು ಯೆಹೂದ ಪ್ರಾಂತ್ಯದ ಪಟ್ಟಣಗಳನ್ನು ವಶಪಡಿಸಿಕೊಂಡು ಜೆರುಸಲೇಮಿನತ್ತ ನಡೆದನು.

ಆಗ ಪ್ರವಾದಿಯಾದ ಶೆಮಾಯನು, ಶೀಶಕನಿಗೆ ಹೆದರಿಕೊಂಡು ಜೆರುಸಲೇಮಿನಲ್ಲಿ ಒಟ್ಟಾಗಿ ಸೇರಿ ಬಂದಿದ್ದ ರೆಹಬ್ಬಾಮನ ಮತ್ತು ಇಸ್ರೇಲಿನ ಪ್ರಧಾನರ ಬಳಿಗೆ ಬಂದು, “ಯೆಹೋವನು ಹೇಳುವುದೇನೆಂದರೆ, ರೆಹಬ್ಬಾಮನೇ, ನೀನು ಮತ್ತು ಯೆಹೂದದ ಜನರು ನನ್ನನ್ನು ತೊರೆದಿದ್ದೀರಿ. ನನ್ನ ಕಟ್ಟಳೆಗಳನ್ನು ಅನುಸರಿಸಲು ನಿರಾಕರಿಸಿದ್ದೀರಿ. ಈಗ ನಾನು ನಿಮಗೆ ಸಹಾಯ ಮಾಡದೆ ಶೀಶಕನನ್ನು ಎದುರಿಸಲು ನಿಮ್ಮನ್ನು ಬಿಟ್ಟುಬಿಡುವೆನು” ಎಂದು ಹೇಳಿದನು.

ಆಗ ಯೆಹೂದ ಪ್ರಾಂತ್ಯದ ನಾಯಕರುಗಳೂ ರೆಹಬ್ಬಾಮನೂ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ತಮ್ಮನ್ನು ದೇವರ ಮುಂದೆ ತಗ್ಗಿಸಿಕೊಂಡರು. “ಯೆಹೋವನು ನೀತಿವಂತನೇ ಸರಿ” ಎಂದರು.

ಅರಸನೂ ಯೆಹೂದದ ನಾಯಕರೂ ತನ್ನೆದುರಿನಲ್ಲಿ ತಗ್ಗಿಸಿಕೊಂಡದ್ದನ್ನು ಯೆಹೋವನು ನೋಡಿ ಶೆಮಾಯನ ಮೂಲಕ ಈ ಸಂದೇಶವನ್ನು ಕಳುಹಿಸಿದನು. “ಅರಸನೂ ನಾಯಕರೂ ತಮ್ಮನ್ನು ತಗ್ಗಿಸಿಕೊಂಡದ್ದರಿಂದ ನಾನು ಅವರನ್ನು ನಾಶಪಡಿಸದೆ ಬೇಗನೆ ರಕ್ಷಿಸುವೆನು. ಜೆರುಸಲೇಮಿನ ಮೇಲೆ ನನ್ನ ಕೋಪವು ಸುರಿಯುವಂತೆ ನಾನು ಶೀಶಕನನ್ನು ಉಪಯೋಗಿಸುವದಿಲ್ಲ. ಆದರೆ ಜೆರುಸಲೇಮಿನ ಜನರು ಶೀಶಕನ ಸೇವಕರಾಗುವರು. ಯಾಕೆಂದರೆ ನನ್ನ ಸೇವೆಮಾಡುವುದಕ್ಕೂ ಇತರ ರಾಜರುಗಳ ಸೇವೆಮಾಡುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನು ಅವರು ಅರಿತುಕೊಳ್ಳಬೇಕಾಗಿದೆ.”

ಶೀಶಕನು ಜೆರುಸಲೇಮಿನೊಳಗೆ ನುಗ್ಗಿ ದೇವಾಲಯದಲ್ಲಿಟ್ಟಿದ್ದ ಭಂಡಾರಗಳನ್ನೆಲ್ಲಾ ಸೂರೆಮಾಡಿದನು. ರಾಜನ ಅರಮನೆಯದಲ್ಲಿದ್ದ ವಸ್ತುಗಳನ್ನೂ ಸೊಲೊಮೋನನು ಮಾಡಿಸಿದ್ದ ಬಂಗಾರದ ಗುರಾಣಿಗಳನ್ನೂ ಸೂರೆಮಾಡಿ ತನ್ನ ದೇಶಕ್ಕೆ ಒಯ್ದನು. 10 ರೆಹಬ್ಬಾಮನು ಬಂಗಾರದ ಗುರಾಣಿಗಳ ಬದಲಾಗಿ ಕಂಚಿನ ಗುರಾಣಿಗಳನ್ನು ಮಾಡಿಸಿ ರಾಜನ ಅರಮನೆಯನ್ನು ಕಾಯುವ ಕಾವಲುಗಾರರ ವಶಕ್ಕೆ ಅವುಗಳನ್ನು ಕೊಟ್ಟನು. 11 ರಾಜನು ದೇವಾಲಯವನ್ನು ಪ್ರವೇಶಿಸುವಾಗ, ಕಾವಲುಗಾರರು ಆ ಗುರಾಣಿಗಳನ್ನು ಹೊರತರುವರು. ತರುವಾಯ ಅವುಗಳನ್ನು ಮೊದಲಿದ್ದ ಸ್ಥಳದಲ್ಲಿಯೇ ಇಡುವರು.

12 ರೆಹಬ್ಬಾಮನು ಯೆಹೋವನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಮೇಲಿದ್ದ ದೇವರ ಕೋಪವು ಶಾಂತವಾಯಿತು. ಹೀಗೆ ಯೆಹೋವನು ಅವನನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. ಯಾಕೆಂದರೆ ಯೆಹೂದದಲ್ಲಿ ಇನ್ನೂ ಕೆಲವು ನೀತಿವಂತರಿದ್ದರು.[a]

13 ರಾಜನಾದ ರೆಹಬ್ಬಾಮನು ತನ್ನ ರಾಜ್ಯವನ್ನು ಸ್ಥಿರಪಡಿಸಿಕೊಂಡು ಬಲಗೊಂಡನು. ಅವನು ಪಟ್ಟಕ್ಕೆ ಬಂದಾಗ ನಲವತ್ತೊಂದು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಹದಿನೇಳು ವರ್ಷ ಆಳಿದನು. ಯೆಹೋವನು ತಾನೇ ತನ್ನ ಹೆಸರನ್ನು ಸ್ಥಾಪಿಸುವದಕ್ಕೋಸ್ಕರ ಇಸ್ರೇಲಿನ ಎಲ್ಲಾ ಕುಲಗಳಲ್ಲಿ ಜೆರುಸಲೇಮನ್ನು ಆರಿಸಿಕೊಂಡಿದ್ದನು. ರೆಹಬ್ಬಾಮನ ತಾಯಿಯ ಹೆಸರು ನಯಮಾ. ಆಕೆ ಅಮ್ಮೋನ್ ದೇಶದವಳು. 14 ರೆಹಬ್ಬಾಮನು ಯೆಹೋವನನ್ನು ಅನುಸರಿಸದೆ ಅವಿಧೇಯನಾಗಿ ಕೆಟ್ಟಕಾರ್ಯಗಳನ್ನು ಮಾಡಿದನು.

15 ಪ್ರವಾದಿಯಾದ ಶೆಮಾಯ ಮತ್ತು ದರ್ಶಿಯಾದ ಇದ್ದೋ ಬರೆದ ಚರಿತ್ರೆಗಳ ವಂಶಾವಳಿಗಳಲ್ಲಿ ರೆಹಬ್ಬಾಮನು ತಾನು ರಾಜನಾಗಿದ್ದಾಗ ತನ್ನ ಆಳ್ವಿಕೆಯ ಮೊದಲಿನಿಂದ ಕಡೆಯವರೆಗೆ ಮಾಡಿದ ಎಲ್ಲಾ ವಿಷಯಗಳು ಬರೆಯಲ್ಪಟ್ಟಿವೆ. ಅವನ ಆಳ್ವಿಕೆಯ ಕಾಲದಲ್ಲೆಲ್ಲಾ ಅವನಿಗೂ ಯಾರೊಬ್ಬಾಮನಿಗೂ ಯುದ್ಧಗಳು ನಡೆಯುತ್ತಲೇ ಇದ್ದವು. 16 ರೆಹಬ್ಬಾಮನು ತೀರಿಕೊಂಡಾಗ ಅವನ ದೇಹವನ್ನು ದಾವೀದನಗರದಲ್ಲಿ ಹೂಳಿಟ್ಟರು. ಅವನ ನಂತರ ಅವನ ಮಗನಾದ ಅಬೀಯನು ಹೊಸ ರಾಜನಾಗಿ ಆಳಲು ಪ್ರಾರಂಭಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International