Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 15-17

ಜೆರುಸಲೇಮಿನಲ್ಲಿ ಒಡಂಬಡಿಕೆಯ ಮಂಜೂಷ

15 ದಾವೀದನಗರದಲ್ಲಿ ದಾವೀದನು ತನಗಾಗಿ ಮನೆಗಳನ್ನು ಕಟ್ಟಿಸಿದನು. ಆಮೇಲೆ ಅವನು ಒಡಂಬಡಿಕೆಯ ಪೆಟ್ಟಿಗೆಯನ್ನು ಇಡಲು ಒಂದು ಸ್ಥಳವನ್ನು ಏರ್ಪಡಿಸಿ ಗುಡಾರವನ್ನು ನಿರ್ಮಿಸಿದನು. “ಲೇವಿಯರು ಮಾತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಬೇಕು. ಯೆಹೋವನು ಅವರನ್ನೇ ತನ್ನ ನಿರಂತರವಾದ ಸೇವೆಗಾಗಿ ನೇಮಿಸಿದ್ದಾನೆ” ಎಂದು ದಾವೀದನು ಹೇಳಿದನು.

ಎಲ್ಲಾ ಇಸ್ರೇಲರು ಜೆರುಸಲೇಮಿಗೆ ಬರಬೇಕೆಂದು ದಾವೀದನು ಪ್ರಕಟಿಸಿದನು. ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ದಾವೀದನು ಸಿದ್ಧಪಡಿಸಿದ್ದ ಸ್ಥಳಕ್ಕೆ ತಂದರು. ದಾವೀದನು ಆರೋನನ ಸಂತತಿಯವರನ್ನೂ ಲೇವಿಯರನ್ನೂ ಕರೆದನು.

ಕೆಹಾತ್ಯನ ಕುಲದವರಲ್ಲಿ ನೂರಿಪ್ಪತ್ತು ಮಂದಿ; ಊರಿಯೇಲ್ ಇವರ ಮುಖ್ಯಸ್ಥನು.

ಮೆರಾರೀಯ ಕುಲದವರಲ್ಲಿ ಇನ್ನೂರಿಪ್ಪತ್ತು ಮಂದಿ; ಇವರ ಮುಖ್ಯಸ್ಥನು ಅಸಾಯನು.

ಗೇರ್ಷೋಮನ ಕುಲದವರಲ್ಲಿ ನೂರಮೂವತ್ತು ಮಂದಿ; ಅವರ ನಾಯಕನು ಯೋವೇಲ್.

ಎಲೀಚಾಫಾನನ ಕುಲದವರಲ್ಲಿ ಇನ್ನೂರು ಮಂದಿ; ಅವರ ನಾಯಕನು ಶೆಮಾಯ.

ಹೆಬ್ರೋನಿನ ಕುಲದವರಲ್ಲಿ ಎಂಭತ್ತು ಮಂದಿ; ಎಲೀಯೇಲನು ಅವರ ನಾಯಕನು.

10 ಉಜ್ಜೀಯೇಲನ ಕುಲದವರಲ್ಲಿ ನೂರಹನ್ನೆರಡು ಮಂದಿ; ಅಮ್ಮೀನಾದಾಬನು ಅವರ ನಾಯಕ.

ದಾವೀದನು ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ಮಾತಾಡಿದ್ದು

11 ನಂತರ ದಾವೀದನು ಯಾಜಕರಾದ ಚಾದೋಕನನ್ನು ಮತ್ತು ಎಬ್ಯಾತಾರನನ್ನು ಮತ್ತು ಕೆಳಕಂಡ ಲೇವಿಯರನ್ನು ಸಹ ಕರೆಸಿದನು: ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್. 12 ದಾವೀದನು ಅವರಿಗೆ, “ನೀವು ಲೇವಿಕುಲದ ನಾಯಕರು. ನೀವೂ ಉಳಿದ ಲೇವಿಯರೂ ನಿಮ್ಮನ್ನು ಶುದ್ಧಪಡಿಸಿಕೊಳ್ಳಬೇಕು. ಅನಂತರ ಇಸ್ರೇಲಿನ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನಾನು ಅದಕ್ಕಾಗಿ ಸಿದ್ಧಮಾಡಿರುವ ಸ್ಥಳಕ್ಕೆ ತರಬೇಕು. 13 ಕಳೆದ ಸಲ, ನಾವು ಒಡಂಬಡಿಕೆಯ ಪೆಟ್ಟಿಗೆಯನ್ನು ಹೇಗೆ ತೆಗೆದುಕೊಂಡು ಹೋಗಬೇಕೆಂದು ಯೆಹೋವನಲ್ಲಿ ವಿಚಾರಿಸಲಿಲ್ಲ. ಲೇವಿಯರಾದ ನೀವು ಅದನ್ನು ಹೊರಲಿಲ್ಲ. ಆದ್ದರಿಂದಲೇ ನಮ್ಮ ದೇವರಾದ ಯೆಹೋವನು ನಮ್ಮನ್ನು ಶಿಕ್ಷಿಸಿದನು” ಎಂದು ಹೇಳಿದನು.

14 ಆಗ ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಮಾಡಿಕೊಂಡರು. ಇಸ್ರೇಲರ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ತಮ್ಮನ್ನು ಸಿದ್ಧಪಡಿಸಿಕೊಂಡರು. 15 ಮೋಶೆಯು ಆಜ್ಞಾಪಿಸಿದ್ದ ಪ್ರಕಾರವೇ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಬೇಕಾದ ಕೋಲುಗಳನ್ನು ಲೇವಿಯರು ಸಿದ್ಧಪಡಿಸಿದರು. ಯೆಹೋವನು ಹೇಳಿದಂತೆಯೇ ಅವರು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋದರು.

ಗಾಯಕರು

16 ದಾವೀದನು ಲೇವಿಯರಿಗೆ ತಮ್ಮ ಸಹೋದರರಾದ ಗಾಯಕರನ್ನು ಕರೆದುಕೊಂಡು ಬರಲು ಹೇಳಿದನು. ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ತಂದು ಆನಂದಗೀತೆಗಳನ್ನು ಹಾಡುವಂತೆ ಅವರಿಗೆ ತಿಳಿಸಿದನು.

17 ಲೇವಿಯರು ಹೋಗಿ ಹೇಮಾನನನ್ನೂ ಅವನ ಸಹೋದರರನ್ನೂ ಆಸಾಫನನ್ನೂ ಏತಾನನನ್ನೂ ಕರೆತಂದರು. ಹೇಮಾನನು ಯೋವೇಲನ ಮಗ. ಆಸಾಫನು ಬೆರೆಕ್ಯನ ಮಗ. ಏತಾನನು ಕೂಷಾಯನ ಮಗ. ಇವರೆಲ್ಲಾ ಮೆರಾರೀಯ ಸಂತತಿಯವರು. 18 ಲೇವಿಯರ ಇನ್ನೊಂದು ಗುಂಪು ಇತ್ತು. ಅವರು ಯಾರೆಂದರೆ: ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರೆಲ್ಲಾ ಲೇವಿಯರ ಕಾವಲುಗಾರರಾಗಿದ್ದರು.

19 ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನ್ ಕಂಚಿನ ತಾಳವನ್ನು ಬಾರಿಸಿದರು. 20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಇವರುಗಳು ಅಲಾಮೋತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. 21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್, ಯೆಗೀಯೇಲ್ ಮತ್ತು ಅಜಜ್ಯ ಇವರುಗಳು ಶೆಮೀನೀತ್ ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಇದು ಇವರ ಖಾಯಂ ಕೆಲಸವಾಗಿತ್ತು. 22 ಲೇವಿಯರ ನಾಯಕನಾದ ಕೆನನ್ಯನು ಗಾಯಕರ ಮುಖಂಡನಾಗಿದ್ದನು. ಇವನು ತುಂಬಾ ಅನುಭವಶಾಲಿಯಾಗಿದ್ದನು.

23 ಬೆರಕ್ಯನು ಮತ್ತು ಎಲ್ಕಾನನು ಒಡಂಬಡಿಕೆ ಪೆಟ್ಟಿಗೆಯ ಕಾವಲುಗಾರರಾಗಿದ್ದರು. 24 ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಮತ್ತು ಎಲೀಯೆಜೆರ್ ಇವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವಾಗ ತುತ್ತೂರಿ ಊದುವ ಕೆಲಸವನ್ನು ಕೊಟ್ಟನು. ಓಬೇದೆದೋಮ್ ಮತ್ತು ಯೆಹೀಯ ಒಡಂಬಡಿಕೆಯ ಪೆಟ್ಟಿಗೆಗೆ ಕಾವಲುಗಾರರಾದರು.

25 ದಾವೀದನೂ ಇಸ್ರೇಲಿನ ಹಿರಿಯರೂ ಮುಖಂಡರೂ ಒಡಂಬಡಿಕೆಯ ಪೆಟ್ಟಿಗೆಯನ್ನು ತರಲು ಹೋದರು. ಅವರು ಅದನ್ನು ಓಬೇದೆದೋಮನ ಮನೆಯಿಂದ ಹೊರತಂದರು. ಎಲ್ಲರಿಗೂ ಸಂತೋಷವಾಯಿತು. 26 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದನು. ಅಲ್ಲಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞ ಮಾಡಿದರು. 27 ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತ ಯಾಜಕರು ಉತ್ತಮವಾದ ನಾರಿನ ನಿಲುವಂಗಿಗಳನ್ನು ಧರಿಸಿದ್ದರು. ಕೆನನ್ಯನೂ ಅವನ ಜೊತೆಯಲ್ಲಿದ್ದ ಗಾಯಕರೆಲ್ಲರೂ ಉತ್ತಮವಾದ ನಾರಿನ ಬಟ್ಟೆಗಳನ್ನು ಧರಿಸಿದ್ದರು. ದಾವೀದನೂ ಉತ್ತಮವಾದ ನಾರಿನ ಬಟ್ಟೆ ಧರಿಸಿ, ಉತ್ತಮವಾದ ನಾರಿನಿಂದ ಮಾಡಿದ ಏಫೋದನ್ನು ಅದರ ಮೇಲೆ ಧರಿಸಿಕೊಂಡಿದ್ದನು.

28 ಹೀಗೆ ಎಲ್ಲಾ ಇಸ್ರೇಲರು ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಬಂದರು. ಅವರು ಕೊಂಬುಗಳನ್ನೂ ತುತ್ತೂರಿಗಳನ್ನೂ ಊದಿದರು; ಹಾರ್ಪ್ ವಾದ್ಯಗಳನ್ನು, ಲೈರ್ ವಾದ್ಯಗಳನ್ನು ಮತ್ತು ತಾಳಗಳನ್ನು ಬಾರಿಸಿದರು; ಆನಂದದಿಂದ ಆರ್ಭಟಿಸಿದರು.

29 ದಾವೀದನ ನಗರದಲ್ಲಿ ಮೆರವಣಿಗೆಯು ಬಂದಾಗ ದಾವೀದನ ಹೆಂಡತಿಯಾದ ಮೀಕಲಳು ಕಿಟಿಕಿಯಿಂದ ನೋಡಿದಳು. (ಇವಳು ಸೌಲನ ಮಗಳು.) ದಾವೀದನು ಕುಣಿಯುತ್ತಾ ಹಾಡುವದನ್ನು ಆಕೆ ಕಂಡಳು. ತನ್ನ ಗಂಡನ ಮೇಲೆ ಆಕೆಗಿದ್ದ ಗೌರವವು ಕಡಿಮೆಯಾಯಿತು. ಯಾಕೆಂದರೆ ದಾವೀದನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವನೆಂದು ಆಕೆಯು ಅಂದುಕೊಂಡಳು.

16 ಲೇವಿಯರು ಒಡಂಬಡಿಕೆಯ ಪೆಟ್ಟಿಗೆಯನ್ನು ತಂದು ಅದಕ್ಕಾಗಿ ದಾವೀದನು ನಿರ್ಮಿಸಿದ್ದ ಗುಡಾರದೊಳಗೆ ಇಟ್ಟರು. ಅನಂತರ ಸರ್ವಾಂಗಹೋಮ ಮತ್ತು ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸಿದರು. ದಾವೀದನು ಯಜ್ಞಗಳನ್ನು ಸಮರ್ಪಿಸಿದ ಬಳಿಕ ಯೆಹೋವನ ಹೆಸರಿನಲ್ಲಿ ಇಸ್ರೇಲರನ್ನು ಆಶೀರ್ವದಿಸಿದನು. ಅನಂತರ ಅಲ್ಲಿ ನೆರೆದಿದ್ದ ಪ್ರತಿಯೊಬ್ಬ ಇಸ್ರೇಲಿನ ಗಂಡಸಿಗೆ ಮತ್ತು ಹೆಂಗಸಿಗೆ ಒಂದು ರೊಟ್ಟಿಯನ್ನೂ ಸ್ವಲ್ಪ ಖರ್ಜೂರವನ್ನೂ ಒಣದ್ರಾಕ್ಷಿಯನ್ನೂ ಕೊಟ್ಟನು.

ದಾವೀದನು ಕೆಲವು ಮಂದಿ ಯಾಜಕರನ್ನು ಒಡಂಬಡಿಕೆಯ ಪೆಟ್ಟಿಗೆಯ ಸೇವೆಮಾಡುವುದಕ್ಕಾಗಿ ನೇಮಿಸಿದನು. ಇಸ್ರೇಲರ ದೇವರಾದ ಯೆಹೋವನಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಆತನನ್ನು ಕೊಂಡಾಡುವುದೇ ಇವರ ಕೆಲಸವಾಗಿತ್ತು. ಮೊದಲನೇ ಗುಂಪಿನ ಗಾಯಕರಿಗೆ ಆಸಾಫನು ಮುಖಂಡನಾಗಿದ್ದನು. ಆಸಾಫನ ಗುಂಪಿನವರು ತಾಳ ಬಾರಿಸಿದರು. ಜೆಕರ್ಯನು ಎರಡನೇ ಗುಂಪಿನ ನಾಯಕನು. ಬೇರೆ ಲೇವಿಯರು ಯಾರೆಂದರೆ: ಉಜ್ಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಮತ್ತಿತ್ಯ, ಎಲೀಯಾಬ್, ಬೆನಾಯ, ಓಬೇದೆದೋಮ್ ಮತ್ತು ಯೆಗೀಯೇಲ್. ಇವರು ಲೈರ್ ಮತ್ತು ಹಾರ್ಪ್ ವಾದ್ಯಗಳನ್ನು ಬಾರಿಸಿದರು. ಬೆನಾಯನೂ ಯೆಹಜೀಯೇಲನೂ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಬಳಿಯಲ್ಲಿ ತುತ್ತೂರಿಗಳನ್ನು ಯಾವಾಗಲೂ ಊದುವ ಯಾಜಕರಾಗಿದ್ದರು. ಈ ವ್ಯವಸ್ಥೆಯನ್ನು ದಾವೀದನು ಪ್ರಥಮ ಬಾರಿಗೆ ಆಸಾಫನಿಗೂ ಅವನ ಸೋದರರಿಗೂ ಯೆಹೋವನ ಸ್ತೋತ್ರವನ್ನು ಹಾಡುವ ಕೆಲಸಕ್ಕಾಗಿ ನೇಮಿಸಿದನು.

ದಾವೀದನ ಕೃತಜ್ಞತಾಸ್ತುತಿ

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಆತನ ನಾಮದ ಮಹತ್ವವನ್ನು ವರ್ಣಿಸಿರಿ,
    ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
ಯೆಹೋವನಿಗೆ ಗಾನ ಮಾಡಿರಿ, ಆತನಿಗೆ ಸ್ತುತಿಗೀತೆ ಹಾಡಿರಿ.
    ಆತನ ಅದ್ಭುತಕಾರ್ಯಗಳನ್ನು ಧ್ಯಾನಿಸಿರಿ.
10 ಯೆಹೋವನ ಪರಿಶುದ್ಧನಾಮದಲ್ಲಿ ಹಿಗ್ಗಿರಿ;
    ಆತನ ದರ್ಶನಕ್ಕಾಗಿ ಬರುವವರೇ, ಸಂತೋಷಪಡಿರಿ.
11 ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ;
    ಯಾವಾಗಲೂ ಆತನ ದರ್ಶನವನ್ನು ಅಪೇಕ್ಷಿಸಿರಿ.
12 ಆತನ ಸೇವಕನಾದ ಇಸ್ರೇಲನ ಸಂತತಿಯವರೇ,
    ಆತನು ಆರಿಸಿಕೊಂಡ ಯಾಕೋಬನ ಸಂತತಿಯವರೇ,
13 ಆತನ ಅದ್ಭುತಕಾರ್ಯಗಳನ್ನೂ ಮಹತ್ಕಾರ್ಯಗಳನ್ನೂ
    ನ್ಯಾಯನಿರ್ಣಯಗಳನ್ನೂ ಜ್ಞಾಪಿಸಿಕೊಳ್ಳಿರಿ.
14 ಯೆಹೋವನೇ ನಮ್ಮ ದೇವರು.
    ಆತನ ನ್ಯಾಯವಿಧಿಗಳು ಭೂಲೋಕದಲ್ಲೆಲ್ಲಾ ಇವೆ.
15 ಯೆಹೋವನ ಒಡಂಬಡಿಕೆಯನ್ನು ಸದಾಕಾಲ ನೆನಪಿನಲ್ಲಿಡಿರಿ.
    ಆತನು ಆ ಆಜ್ಞೆಗಳನ್ನು ಸಾವಿರ ತಲೆಮಾರುಗಳಿಗೆ ಕೊಟ್ಟನು.
16 ಯೆಹೋವನು ಅಬ್ರಹಾಮನೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿರಿ.
    ಆತನು ಇಸಾಕನಿಗೆ ಮಾಡಿದ ವಾಗ್ದಾನವನ್ನು ಜ್ಞಾಪಕಕ್ಕೆ ತನ್ನಿರಿ.
17 ಯೆಹೋವನು ಯಾಕೋಬನಿಗೆ ಕಟ್ಟಳೆಗಳನ್ನು ಅನುಗ್ರಹಿಸಿದನು.
    ಅದು ಇಸ್ರೇಲರೊಂದಿಗಿನ ನಿರಂತರವಾದ ಒಡಂಬಡಿಕೆ.
18 ಯೆಹೋವನು ಇಸ್ರೇಲರಿಗೆ, “ನಾನು ನಿಮಗೆ ಕಾನಾನ್ ದೇಶವನ್ನು ಕೊಡುವೆನು.
    ಆ ವಾಗ್ದತ್ತ ದೇಶವು ನಿಮ್ಮದಾಗುವುದು” ಎಂದು ಹೇಳಿದನು.

19 ಆತನು, “ನಿಮಗೆ ಈ ದೇಶವನ್ನು ಕೊಡುವೆನು;
    ಅದು ನಿಮ್ಮ ಸಂತತಿಯವರಿಗೆ ಸ್ವಾಸ್ತ್ಯವಾಗಿರುವುದು” ಎಂದು ಹೇಳಿದನು.
20 ಅವರು ಒಂದು ದೇಶದಿಂದ ಇನ್ನೊಂದಕ್ಕೂ
    ಒಂದು ರಾಜ್ಯದಿಂದ ಇನ್ನೊಂದಕ್ಕೂ ಹೋದರು.
21 ಆದರೆ ಅವರಿಗೆ ಕೇಡುಮಾಡಲು ಯೆಹೋವನು ಯಾರಿಗೂ ಅವಕಾಶಕೊಡಲಿಲ್ಲ.
    ಅವರನ್ನು ಬಾಧಿಸದಂತೆ ಆತನು ಅರಸರುಗಳಿಗೆ ಎಚ್ಚರಿಕೆ ಕೊಟ್ಟನು.
22 ಯೆಹೋವನು ಆ ರಾಜರಿಗೆ, “ನಾನು ಆರಿಸಿಕೊಂಡ ಜನಾಂಗಕ್ಕೆ ಉಪದ್ರವ ಕೊಡಬೇಡಿ;
    ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” ಎಂದು ಹೇಳಿದನು.
23 ಭೂನಿವಾಸಿಗಳೇ, ಯೆಹೋವನಿಗೆ ಕೀರ್ತನೆಯನ್ನು ಹಾಡಿರಿ;
    ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿ ಹೇಳಿರಿ.
24 ಯೆಹೋವನ ಮಹಿಮೆಯನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
    ಸರ್ವಜನರಲ್ಲಿ ಆತನ ಅದ್ಭುತಕಾರ್ಯಗಳನ್ನು ಪ್ರಸಿದ್ಧಪಡಿಸಿರಿ.
25 ಯೆಹೋವನು ದೊಡ್ಡವನೂ ಸ್ತುತಿಗೆ ಪಾತ್ರನೂ ಆಗಿದ್ದಾನೆ.
    ಎಲ್ಲಾ ದೇವರುಗಳಲ್ಲಿ ಯೆಹೋವನೇ ಭಯಂಕರನು.
26 ಯಾಕೆಂದರೆ ಜನಾಂಗಗಳಲ್ಲಿರುವ ಬೇರೆ ದೇವರುಗಳೆಲ್ಲಾ ಜಡಮೂರ್ತಿಗಳೇ.
    ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
27 ಆತನ ಸಾನ್ನಿಧ್ಯದಲ್ಲಿ ಮಾನಮಹಿಮೆಗಳೂ
    ಆತನ ಪವಿತ್ರಾಲಯದಲ್ಲಿ ಬಲವೂ ಸಂತೋಷವೂ ಇವೆ.
28 ಭೂಜನಾಂಗಗಳೇ, ಬಲಪ್ರಭಾವಗಳು ಯೆಹೋವನವೇ ಯೆಹೋವನವೇ
    ಎಂದು ಹೇಳಿ ಆತನನ್ನು ಘನಪಡಿಸಿರಿ.
29 ಯೆಹೋವನ ಮಹಿಮೆಯನ್ನು ಕೊಂಡಾಡಿರಿ; ಆತನ ಹೆಸರಿಗೆ ಘನತೆಯನ್ನು ಸಲ್ಲಿಸಿರಿ.
    ನಿಮ್ಮ ಕಾಣಿಕೆಗಳನ್ನು ಆತನ ಬಳಿಗೆ ತನ್ನಿರಿ;
    ಆತನ ಪರಿಶುದ್ಧ ನಾಮವನ್ನು ಆರಾಧಿಸಿರಿ.
30 ಯೆಹೋವನ ಮುಂದೆ ಭೂಲೋಕವೆಲ್ಲಾ ಭಯದಿಂದ ನಡುಗುವುದು!
    ಆದರೆ ಆತನು ಅದನ್ನು ಬಲವಾದ ಅಸ್ತಿವಾರಗಳಲ್ಲಿ ನಿರ್ಮಿಸಿದ್ದರಿಂದ ಅದು ಕದಲದು.
31 ಭೂಮ್ಯಾಕಾಶಗಳು ಹರ್ಷಿಸಲಿ! “ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ”
    ಎಂದು ಜನಾಂಗಗಳಲ್ಲಿ ಪ್ರಸಿದ್ಧಪಡಿಸಿರಿ.
32 ಸಮುದ್ರವೂ ಅದರೊಳಗಿರುವದೆಲ್ಲವೂ ಆರ್ಭಟಿಸಲಿ,
    ಹೊಲಗದ್ದೆಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಲಿ.
33 ಯೆಹೋವನ ಸನ್ನಿಧಿಯಲ್ಲಿ ಅಡವಿಯ ಮರಗಳು ಸಂತೋಷದಿಂದ ಗಾನಮಾಡಲಿ.
    ಯಾಕೆಂದರೆ ಆತನು ಬರುತ್ತಿದ್ದಾನೆ. ಲೋಕಕ್ಕೆ ನ್ಯಾಯತೀರಿಸಲು ಬರುತ್ತಿದ್ದಾನೆ.
34 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನು ಒಳ್ಳೆಯವನು. ಆತನ ಪ್ರೀತಿಯು ಸದಾಕಾಲಕ್ಕೂ ಇರುವದು.
35 “ರಕ್ಷಕನಾದ ಯೆಹೋವನೇ,
    ನಮ್ಮನ್ನು ರಕ್ಷಿಸು;
ನಮ್ಮನ್ನು ಒಂದುಗೂಡಿಸು;
    ಅನ್ಯಜನಾಂಗಗಳಿಂದ ನಮ್ಮನ್ನು ರಕ್ಷಿಸು.
ಆಗ ನಾವು ನಿನ್ನ ಪರಿಶುದ್ಧ ನಾಮವನ್ನು ಕೀರ್ತಿಸುವೆವು.
    ನಮ್ಮ ಹಾಡುಗಳಿಂದ ನಿನ್ನನ್ನು ಘನಪಡಿಸುವೆವು” ಎಂದು ಆತನಿಗೆ ಹೇಳಿರಿ.
36 ಇಸ್ರೇಲರ ದೇವರಾದ ಯೆಹೋವನು ಸದಾಕಾಲವೂ ಘನಹೊಂದಲಿ;
    ನಿರಂತರವೂ ಕೊಂಡಾಡಲ್ಪಡಲಿ!

ಇಸ್ರೇಲರೆಲ್ಲರೂ ಯೆಹೋವನನ್ನು ಸ್ತುತಿಸಿ “ಆಮೆನ್” ಅಂದರು.

37 ಆಗ ದಾವೀದನು ಆಸಾಫನನ್ನೂ ಅವನ ಸಹೋದರರನ್ನೂ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ಪ್ರತಿನಿತ್ಯ ಸೇವೆಮಾಡಲು ಅಲ್ಲಿರಿಸಿದನು. 38 ಅವರೊಂದಿಗೆ ಸೇವೆಮಾಡಲು ಓಬೇದೆದೋಮನನ್ನೂ ಇತರ ಅರವತ್ತೆಂಟು ಮಂದಿ ಲೇವಿಯರನ್ನೂ ಅಲ್ಲಿರಿಸಿದನು. ಓಬೇದೆದೋಮ್ ಮತ್ತು ಹೋಸ ಎಂಬವರು ಕಾವಲುಗಾರರಾಗಿದ್ದರು. ಓಬೇದೆದೋಮನು ಯೆದುತೂನನ ಮಗನಾಗಿದ್ದನು.

39 ಗಿಬ್ಯೋನಿನ ಉನ್ನತಸ್ಥಳದಲ್ಲಿದ್ದ ದೇವದರ್ಶನ ಗುಡಾರದಲ್ಲಿ ಸೇವೆಮಾಡಲು ದಾವೀದನು ಚಾದೋಕನನ್ನು ಮತ್ತು ಇತರ ಯಾಜಕರನ್ನು ನೇಮಿಸಿದನು. 40 ಪ್ರತಿ ಮುಂಜಾನೆ ಮತ್ತು ಸಂಧ್ಯಾಕಾಲಗಳಲ್ಲಿ ಚಾದೋಕನು ಮತ್ತು ಇತರ ಯಾಜಕರು ಸರ್ವಾಂಗಹೋಮವನ್ನು ಯಜ್ಞವೇದಿಕೆಯ ಮೇಲೆ ಸಮರ್ಪಿಸುತ್ತಿದ್ದರು. ಇಸ್ರೇಲರಿಗೆ ಕೊಡಲ್ಪಟ್ಟಿದ್ದ ಕಟ್ಟಳೆಗಳಿಗನುಸಾರವಾಗಿ ಅವರು ಮಾಡಿದರು. 41-42 ಹೇಮಾನ್ ಮತ್ತು ಯೆದುತೂನ್ ಅವರೊಂದಿಗಿದ್ದು ತುತ್ತೂರಿಯನ್ನೂದುತ್ತಾ ತಾಳ ಬಾರಿಸುತ್ತಾ ಇತರ ವಾದ್ಯಗಳನ್ನು ನುಡಿಸುತ್ತಾ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿದರು. ಯೆದುತೂನನ ಮಕ್ಕಳು ದ್ವಾರಪಾಲಕರಾಗಿದ್ದರು.

43 ಆ ಕಾರ್ಯವು ಮುಗಿದ ಬಳಿಕ ಎಲ್ಲಾ ಇಸ್ರೇಲರು ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸಲು ತನ್ನ ಮನೆಗೆ ಹೋದನು.

ದಾವೀದನಿಗೆ ದೇವರ ವಾಗ್ದಾನ

17 ದಾವೀದನು ತನ್ನ ಮನೆಗೆ ಹಿಂತಿರುಗಿದ ಬಳಿಕ ಪ್ರವಾದಿಯಾದ ನಾತಾನನಿಗೆ, “ನಾನು ದೇವದಾರು ಮರಗಳಿಂದ ಮಾಡಿದ ಮನೆಯಲ್ಲಿ ವಾಸಮಾಡುತ್ತಿರುವಾಗ ದೇವರ ಒಡಂಬಡಿಕೆಯ ಪೆಟ್ಟಿಗೆಯು ಗುಡಾರದೊಳಗೆ ಇಡಲ್ಪಟ್ಟಿದೆ. ದೇವರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದಿರುವೆ” ಎಂದನು.

ಅದಕ್ಕೆ ನಾತಾನನು, “ನಿನ್ನ ಮನಸ್ಸಿಗೆ ಬಂದಂತೆ ಮಾಡು. ದೇವರು ನಿನ್ನೊಂದಿಗಿದ್ದಾನೆ” ಎಂದನು.

ಆದರೆ ಆ ರಾತ್ರಿ ದೇವರ ಮಾತು ನಾತಾನನಿಗೆ ಬಂತು. ದೇವರು ಅವನಿಗೆ,

“ನನ್ನ ಸೇವಕನಾದ ದಾವೀದನಿಗೆ ಹೀಗೆ ಹೇಳು: ‘ನನಗೋಸ್ಕರ ಆಲಯವನ್ನು ಕಟ್ಟುವವನು ನೀನಲ್ಲ. 5-6 ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿದಂದಿನಿಂದ ಈ ದಿವಸದ ತನಕ ನಾನು ಮನೆಯಲ್ಲಿ ವಾಸವಾಗಿರಲಿಲ್ಲ. ನಾನು ಗುಡಾರದಲ್ಲಿಯೇ ಇದ್ದುಕೊಂಡು ಸಂಚರಿಸುತ್ತಿದ್ದೆನು. ಇಸ್ರೇಲರ ನಾಯಕರಾಗುವದಕ್ಕೆ ನಾನು ಕೆಲವರನ್ನು ಆರಿಸಿಕೊಂಡಿದ್ದೇನೆ. ಆ ನಾಯಕರು ನನ್ನ ಜನರಿಗೆ ಕುರುಬರಂತಿದ್ದಾರೆ. ಅವರೊಂದಿಗೆ ನಾನು ಬೇರೆಬೇರೆ ಸ್ಥಳಗಳಿಗೆ ಸಂಚರಿಸುತ್ತಿದ್ದಾಗ ನಾನೆಂದೂ ನನಗೊಂದು ಆಲಯವನ್ನು ದೇವದಾರು ಮರದಿಂದ ಕಟ್ಟಲು ಕೇಳಿಕೊಂಡಿರಲಿಲ್ಲ.’

“ನನ್ನ ಸೇವಕನಾದ ದಾವೀದನಿಗೆ ಹೇಳು: ಸರ್ವಶಕ್ತನಾದ ದೇವರು ಹೀಗೆನ್ನುತ್ತಾನೆ: ‘ಕುರಿಗಳನ್ನು ಮೇಯಿಸುತ್ತಿದ್ದ ನಿನ್ನನ್ನು ನಾನು ಆರಿಸಿಕೊಂಡೆನು; ನನ್ನ ಜನರಾದ ಇಸ್ರೇಲರ ಮೇಲೆ ನಿನ್ನನ್ನು ಅರಸನನ್ನಾಗಿ ಮಾಡಿದೆನು. ನೀನು ಹೋದಲ್ಲೆಲ್ಲಾ ನಿನ್ನೊಂದಿಗೆ ನಾನಿದ್ದೆನು; ನಿನ್ನ ಮುಂದೆ ಹೋಗಿ ನಿನ್ನ ವೈರಿಗಳನ್ನು ಸಾಯಿಸಿದೆನು. ಈಗ ನಾನು ನಿನ್ನನ್ನು ಲೋಕದಲ್ಲಿ ಎಲ್ಲರಿಗಿಂತಲೂ ಪ್ರಸಿದ್ಧಿ ಹೊಂದುವಂತೆ ಮಾಡುವೆನು. ನಾನು ಈ ದೇಶವನ್ನು ನನ್ನ ಜನರಾದ ಇಸ್ರೇಲರಿಗೆ ಕೊಡುವೆನು; ಅವರು ಮರಗಳನ್ನು ನೆಟ್ಟು ಅದರ ನೆರಳಡಿಯಲ್ಲಿ ಸಮಾಧಾನದಿಂದ ವಾಸಿಸುವರು; ಅವರನ್ನು ಯಾರೂ ಬಾಧಿಸರು. ದುಷ್ಟರು ಮುಂಚಿನಂತೆ ಅವರಿಗೆ ಕೇಡುಮಾಡರು. 10 ಅವರನ್ನು ಸಂರಕ್ಷಿಸಲು ನಾನು ನಾಯಕರನ್ನು ಎಬ್ಬಿಸುವೆನು; ನಾನು ನಿನ್ನ ವೈರಿಗಳನ್ನೆಲ್ಲಾ ಸೋಲಿಸಿಬಿಡುವೆನು.

“‘ನಿನ್ನ ಮನೆತನವನ್ನು ನಾನು ಕಟ್ಟುವೆನು. 11 ನೀನು ಸತ್ತು ನಿನ್ನ ಪೂರ್ವಿಕರ ಬಳಿ ಸೇರಿದಾಗ ನಾನು ನಿನ್ನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಮಾಡುವೆನು. ನಾನು ಅವನ ರಾಜ್ಯವನ್ನು ಸ್ಥಿರಪಡಿಸುವೆನು. 12 ನಿನ್ನ ಮಗನು ನನಗೆ ಆಲಯವನ್ನು ಕಟ್ಟುವನು. ನಿನ್ನ ಮಗನ ವಂಶವು ಸದಾಕಾಲಕ್ಕೂ ಇಸ್ರೇಲ್ ಜನಾಂಗವನ್ನು ಆಳುವದು. 13 ನಾನು ಅವನಿಗೆ ತಂದೆಯಾಗಿರುವೆನು; ಅವನು ನನಗೆ ಮಗನಾಗಿರುವನು. ನಿನಗಿಂತ ಮುಂಚೆ ಸೌಲನು ರಾಜನಾಗಿದ್ದನು. ಆದರೆ ನಾನು ಅವನನ್ನು ತೆಗೆದುಹಾಕಿದೆನು. ಆದರೆ ನನ್ನ ಕೃಪೆ ನಿನ್ನ ಮಗನಿಂದ ತೊಲಗಿಹೋಗುವದಿಲ್ಲ. 14 ನನ್ನ ಮನೆಗೂ ನನ್ನ ರಾಜ್ಯಕ್ಕೂ ಅವನನ್ನು ನಿತ್ಯದ ರಾಜನನ್ನಾಗಿ ಮಾಡುವೆನು; ಅವನ ಆಳ್ವಿಕೆಯು ನಿರಂತರವಾಗಿರುವುದು.’”

15 ನಾತಾನನು ದಾವೀದನಿಗೆ ತನಗೆ ದೊರೆತ ದರ್ಶನವನ್ನು ಮತ್ತು ದೇವರು ತನಗೆ ತಿಳಿಸಿದ ಎಲ್ಲಾ ಮಾತುಗಳನ್ನು ತಿಳಿಸಿದನು.

ದಾವೀದನ ಪ್ರಾರ್ಥನೆ

16 ಆಗ ದಾವೀದನು ಪವಿತ್ರಗುಡಾರಕ್ಕೆ ಹೋಗಿ ದೇವರ ಸನ್ನಿಧಿಯಲ್ಲಿ ಕುಳಿತುಕೊಂಡು,

“ದೇವರಾದ ಯೆಹೋವನೇ, ನೀನು ನನ್ನನ್ನೂ ನನ್ನ ಕುಟುಂಬವನ್ನೂ ಎಷ್ಟೋ ಆಶೀರ್ವದಿಸಿರುವೆ. ನೀನು ಯಾಕೆ ಹೀಗೆ ಮಾಡಿದಿಯೊ ನನಗೆ ತಿಳಿಯುತ್ತಿಲ್ಲ. 17 ನನ್ನ ವಂಶದವರ ವಿಷಯದಲ್ಲಿಯೂ ನೀನು ವಾಗ್ದಾನ ಮಾಡಿರುವೆ. ದೇವರೇ, ಯೆಹೋವನೇ, ನೀನು ನನ್ನನ್ನು ಒಬ್ಬ ಮಹಾವ್ಯಕ್ತಿಯೋ ಎಂಬಂತೆ ಪರಿಗಣಿಸಿರುವೆ. 18 ನೀನು ನನಗೆಷ್ಟೋ ಸಹಾಯ ಮಾಡಿರುವೆ. ನಾನು ಕೇವಲ ನಿನ್ನ ಸೇವಕನಷ್ಟೇ. 19 ಯೆಹೋವನೇ, ನಿನ್ನ ಚಿತ್ತಕ್ಕನುಸಾರವಾಗಿ ಇಂಥ ಮಹತ್ಕಾರ್ಯವನ್ನು ನೀನು ನನಗೋಸ್ಕರ ಮಾಡಿರುವೆ. 20 ಯೆಹೋವನೇ, ನಿನಗೆ ಸಮಾನರು ಬೇರೆ ಯಾರೂ ಇಲ್ಲ. ನಿನ್ನ ಹೊರತು ಬೇರೆ ದೇವರಿಲ್ಲ. ಇಂಥ ಮಹತ್ಕಾರ್ಯ ಮಾಡುವ ದೇವರ ಬಗ್ಗೆ ನಾವು ಕೇಳಿಯೇ ಇಲ್ಲ. 21 ಇಸ್ರೇಲಿಗೆ ಸಮಾನವಾದ ಜನಾಂಗ ಭೂಲೋಕದಲ್ಲಿ ಎಲ್ಲಿದೆ? ನೀನು ಇಂಥ ಅದ್ಭುತಕಾರ್ಯಗಳನ್ನು ಮಾಡಿರುವುದು ಇಸ್ರೇಲ್ ಜನಾಂಗಕ್ಕಾಗಿಯೇ. ನೀನು ನಮ್ಮನ್ನು ಈಜಿಪ್ಟಿನಿಂದ ಹೊರತಂದು ಸ್ವತಂತ್ರರನ್ನಾಗಿ ಮಾಡಿದೆ. ಹೀಗೆ ನೀನು ನಿನ್ನ ಹೆಸರನ್ನು ಪ್ರಖ್ಯಾತಿಮಾಡಿದೆ. ನೀನು ನಿನ್ನ ಜನರ ಮುಂದೆ ಹೋಗುತ್ತಾ, ಅನ್ಯಜನರು ತಮ್ಮ ದೇಶವನ್ನು ಬಿಟ್ಟುಹೋಗುವಂತೆ ಮಾಡಿದೆ. 22 ಇಸ್ರೇಲರನ್ನು ಸದಾಕಾಲಕ್ಕೂ ನಿನ್ನ ಜನರನ್ನಾಗಿ ಮಾಡಿಕೊಂಡೆ. ಯೆಹೋವನೇ, ನೀನೇ ಅವರಿಗೆ ದೇವರಾದೆ!

23 “ಯೆಹೋವನೇ, ಈಗ ನೀನು ನನಗೂ ನನ್ನ ಸಂತತಿಗೂ ಈ ವಾಗ್ದಾನವನ್ನು ಮಾಡಿರುವೆ. ಆ ವಾಗ್ದಾನವನ್ನು ಶಾಶ್ವತಗೊಳಿಸು; ಅದು ಸದಾಕಾಲಕ್ಕೂ ಸ್ಥಿರವಾಗಿರಲಿ. 24 ನಿನ್ನ ವಾಗ್ದಾನವನ್ನು ನೆರವೇರಿಸು. ಆಗ ಜನರು, ‘ಸರ್ವಶಕ್ತನಾದ ಯೆಹೋವನು ಇಸ್ರೇಲರ ದೇವರೂ ರಕ್ಷಕನೂ ಆಗಿದ್ದಾನೆ’ ಎಂದು ಹೇಳುವರು. ನಾನು ನಿನ್ನ ಸೇವಕನಾಗಿದ್ದೇನೆ. ನನ್ನ ಕುಟುಂಬವು ಬಲಿಷ್ಠವಾಗಿದ್ದು ನಿನ್ನ ಸೇವೆಯನ್ನು ಮುಂದುವರಿಸುವಂತೆ ಕೃಪೆಯನ್ನು ಅನುಗ್ರಹಿಸು.

25 “ನನ್ನ ದೇವರೇ, ನಿನ್ನ ಸೇವಕನಾದ ನನ್ನೊಂದಿಗೆ ನೀನು ಮಾತನಾಡಿದೆ. ನೀನು ನನ್ನ ಕುಟುಂಬವನ್ನು ಸ್ಥಿರವಾಗಿ ಕಟ್ಟುವೆನೆಂದು ವಾಗ್ದಾನ ಮಾಡಿದೆ. ಆದ್ದರಿಂದ ನಾನು ಧೈರ್ಯದಿಂದ ನಿನ್ನ ಸಂಗಡ ಮಾತನಾಡುತ್ತಿದ್ದೇನೆ; ನಿನ್ನ ವಾಗ್ದಾನವನ್ನು ನೆರವೇರಿಸು ಎಂದು ಕೇಳಿಕೊಳ್ಳುತ್ತಿದ್ದೇನೆ. 26 ಯೆಹೋವನೇ, ನೀನೇ ದೇವರು. ಸ್ವತಃ ನೀನಾಗಿಯೇ ನನಗೆ ಇಂಥಾ ಒಳ್ಳೆಯ ವಾಗ್ದಾನಗಳನ್ನು ಮಾಡಿರುವೆ. 27 ನನ್ನ ಸಂತತಿಯವರನ್ನು ಆಶೀರ್ವದಿಸಿ ನಿನ್ನ ಕರುಣೆಯನ್ನು ತೋರಿಸಿದೆ. ನನ್ನ ಸಂತತಿಯವರು ಸದಾಕಾಲ ನಿನ್ನ ಸೇವೆಮಾಡುತ್ತಾರೆಂದು ನೀನು ವಾಗ್ದಾನ ಮಾಡಿರುವೆ. ಯೆಹೋವನೇ, ನೀನಾಗಿಯೇ ನನ್ನ ಸಂತತಿಯವರನ್ನು ಆಶೀರ್ವದಿಸಿದ್ದರಿಂದ ನನ್ನ ಸಂತತಿಯವರು ಸದಾಕಾಲಕ್ಕೂ ಆಶೀರ್ವಾದ ಹೊಂದಿಕೊಳ್ಳುವರು!” ಎಂದು ಪ್ರಾರ್ಥಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International