Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 20-22

ಹಿಜ್ಕೀಯನಿಗೆ ಕಾಯಿಲೆ

20 ಆ ಸಮಯದಲ್ಲಿ ಹಿಜ್ಕೀಯನಿಗೆ ಕಾಯಿಲೆಯಾಗಿ ಸತ್ತಂತಾದನು. ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಹಿಜ್ಕೀಯನ ಬಳಿಗೆ ಹೋಗಿ, “ಯೆಹೋವನು ಹೀಗೆನ್ನುತ್ತಾನೆ. ‘ನಿನ್ನ ಮನೆಯನ್ನು ವ್ಯವಸ್ಥೆಗೊಳಿಸು; ಏಕೆಂದರೆ ನೀನು ಸಾಯುವೆ, ಬದುಕುವುದಿಲ್ಲ!’” ಎಂದು ಹೇಳಿದನು.

ಹಿಜ್ಕೀಯನು ತನ್ನ ಮುಖವನ್ನು ಗೋಡೆಯ ಕಡೆಗೆ ತಿರುಗಿಸಿ ಯೆಹೋವನಲ್ಲಿ ಪ್ರಾರ್ಥಿಸುತ್ತಾ, “ಯೆಹೋವನೇ, ನಾನು ಪೂರ್ಣಮನಸ್ಸಿನಿಂದ ನಿಜವಾಗಿಯೂ ನಿನ್ನ ಸೇವೆಮಾಡಿದ್ದೇನೆಂಬುದನ್ನು ನೆನಪುಮಾಡಿಕೊ. ನೀನು ಯೋಗ್ಯವೆಂದು ಹೇಳಿದವುಗಳನ್ನು ನಾನು ಮಾಡಿದೆನು” ಎಂದು ಹೇಳಿದನು. ನಂತರ ಹಿಜ್ಕೀಯನು ಬಹಳ ಜೋರಾಗಿ ಗೋಳಾಡಿದನು.

ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ಬಿಡುವುದಕ್ಕೆ ಮುಂಚೆಯೇ, ಯೆಹೋವನ ವಾಕ್ಯವು ಅವನಿಗೆ ಬಂದಿತು. ಯೆಹೋವನು “ಹಿಂದಿರುಗಿ ಹೋಗಿ, ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಇದನ್ನು ಹೇಳು: ‘ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದೆನು; ನಿನ್ನ ಕಣ್ಣೀರನ್ನು ನೋಡಿದೆನು. ಆದ್ದರಿಂದ ನಾನು ನಿನ್ನನ್ನು ಗುಣಪಡಿಸುತ್ತೇನೆ. ಮೂರನೆಯ ದಿನ, ನೀನು ದೇವಾಲಯಕ್ಕೆ ಹೋಗುವೆ. ನಾನು ನಿನ್ನ ಜೀವಕ್ಕೆ ಹದಿನೈದು ವರ್ಷಗಳನ್ನು ಕೂಡಿಸುತ್ತೇನೆ. ನಾನು ನಿನ್ನನ್ನು ಮತ್ತು ಈ ನಗರವನ್ನು ಅಶ್ಶೂರದ ರಾಜನ ಅಧಿಕಾರದಿಂದ ರಕ್ಷಿಸುತ್ತೇನೆ. ನಾನು ಈ ನಗರವನ್ನು ಸಂರಕ್ಷಿಸುತ್ತೇನೆ. ನಾನು ನನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದಕ್ಕಾಗಿಯೂ ನನಗಾಗಿಯೂ ಇದನ್ನು ಮಾಡುತ್ತೇನೆ’” ಎಂದು ಹೇಳಿದನು.

ಆಗ ಯೆಶಾಯನು, “ಅಂಜೂರದ ಹಣ್ಣಿನಿಂದ ಒಂದು ಉಂಡೆಯನ್ನು ಮಾಡಿಸಿ ಅದನ್ನು ಕುರುವಿನ ಮೇಲೆ ಇಡು” ಎಂದು ಹೇಳಿದನು.

ಅಂತೆಯೇ ಅವರು ಅಂಜೂರಹಣ್ಣಿನ ಒಂದು ಉಂಡೆಯನ್ನು ಹಿಜ್ಕೀಯನ ಕುರುವಿನ ಮೇಲೆ ಇಟ್ಟರು. ಆಗ ಹಿಜ್ಕೀಯನಿಗೆ ಗುಣವಾಯಿತು.

ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುತ್ತಾನೆಂಬುದಕ್ಕೆ ಮತ್ತು ಮೂರನೆಯ ದಿನ ನಾನು ದೇವಾಲಯದವರೆಗೆ ಹೋಗುವೆನೆಂಬುದಕ್ಕೆ ಏನು ಗುರುತು?” ಎಂದು ಕೇಳಿದನು.

ಯೆಶಾಯನು, “ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ ಅಥವಾ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ?[a] ನಿನಗೆ ಯಾವುದು ಬೇಕಾಗಿದೆ? ಯೆಹೋವನು ತಾನು ಹೇಳಿದ್ದನ್ನು ಮಾಡುತ್ತಾನೆಂಬುದಕ್ಕೆ ಇದೇ ನಿನಗೆ ಗುರುತು” ಎಂದು ಹೇಳಿದನು.

10 ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದ್ದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಉತ್ತರಿಸಿದನು.

11 ಆಗ ಯೆಶಾಯನು ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಈಗಾಗಲೇ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದಕ್ಕೆ ಬರುವಂತೆ ಮಾಡಿದನು.

ಹಿಜ್ಕೀಯನು ತನ್ನ ಭಂಡಾರವನ್ನು ಬಾಬಿಲೋನಿನ ಜನರಿಗೆ ತೋರಿಸಿದನು

12 ಆ ಸಮಯದಲ್ಲಿ, ಬಲದಾನನ ಮಗನಾದ ಬೆರೋದಕ ಬಲದಾನ ಎಂಬುವನು ಬಾಬಿಲೋನಿನ ರಾಜನಾಗಿದ್ದನು. ಅವನು ಹಿಜ್ಕೀಯನಿಗೆ ಪತ್ರಗಳನ್ನು ಮತ್ತು ಕಾಣಿಕೆಯನ್ನು ಕಳುಹಿಸಿದನು. ಹಿಜ್ಕೀಯನು ಅಸ್ವಸ್ಥನಾಗಿದ್ದಾನೆ ಎಂಬುದನ್ನು ಬೆರೋದಕ ಬಲದಾನನು ತಿಳಿದುಕೊಂಡದ್ದರಿಂದ ಹೀಗೆ ಮಾಡಿದನು. 13 ಹಿಜ್ಕೀಯನು ಬಾಬಿಲೋನಿನ ಜನರನ್ನು ಸ್ವಾಗತಿಸಿ, ಅವರಿಗೆ ತನ್ನ ಮನೆಯಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ತೋರಿಸಿದನು. ಅವನು ತನ್ನ ಭಂಡಾರದಲ್ಲಿದ್ದ ಬೆಳ್ಳಿಬಂಗಾರಗಳನ್ನು, ಸುಗಂಧದ್ರವ್ಯಗಳನ್ನು, ಪರಿಮಳಭರಿತ ತೈಲವನ್ನು, ಆಯುಧಗಳನ್ನು ತೋರಿಸಿದನು. ಹಿಜ್ಕೀಯನ ಮನೆಯಲ್ಲಿ ಮತ್ತು ಅವನ ರಾಜ್ಯದಲ್ಲಿ ಅವರಿಗೆ ತೋರಿಸದೆ ಉಳಿದದ್ದು ಏನೂ ಇರಲಿಲ್ಲ.

14 ನಂತರ ಪ್ರವಾದಿಯಾದ ಯೆಶಾಯನು ರಾಜನಾದ ಹಿಜ್ಕೀಯನ ಬಳಿಗೆ ಬಂದು, “ಈ ಜನರು ಹೇಳುವುದೇನು? ಇವರು ಎಲ್ಲಿಂದ ಬಂದರು?” ಎಂದು ಕೇಳಿದನು.

ಹಿಜ್ಕೀಯನು, “ಅವರು ಬಹಳ ದೂರದೇಶದಿಂದ, ಬಾಬಿಲೋನಿನಿಂದ ಬಂದಿದ್ದಾರೆ” ಎಂದನು.

15 ಯೆಶಾಯನು, “ಅವರು ನಿನ್ನ ಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು.

ಹಿಜ್ಕೀಯನು, “ಅವರು ನನ್ನ ಮನೆಯಲ್ಲಿರುವುದನ್ನೆಲ್ಲಾ ನೋಡಿದರು. ಅವರಿಗೆ ತೋರಿಸದೆ ಉಳಿದಿರುವುದು ನನ್ನ ಭಂಡಾರದಲ್ಲಿ ಏನೂ ಇಲ್ಲ” ಎಂದು ಉತ್ತರಿಸಿದನು.

16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನಿಂದ ಬಂದ ಈ ಸಂದೇಶವನ್ನು ಆಲಿಸು. 17 ನಿನ್ನ ಮನೆಯಲ್ಲಿರುವ ವಸ್ತುಗಳೆಲ್ಲವನ್ನು ನಿನ್ನ ಮನೆಯಿಂದ ಬಾಬಿಲೋನಿಗೆ ಕೊಂಡೊಯ್ಯುವ ಕಾಲವು ಬರುತ್ತಿದೆ; ನಿನ್ನ ಪೂರ್ವಿಕರು ಇಂದಿನವರೆಗೆ ರಕ್ಷಿಸಿದ ವಸ್ತುಗಳೆಲ್ಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗುವ ಸಮಯವು ಬರುತ್ತಿದೆ. ಏನನ್ನೂ ಬಿಡುವುದಿಲ್ಲ! ಯೆಹೋವನೇ ಇದನ್ನು ನುಡಿದಿದ್ದಾನೆ. 18 ಬಾಬಿಲೋನಿನವರು ನಿನ್ನ ಮಕ್ಕಳನ್ನೂ ತೆಗೆದುಕೊಂಡು ಹೋಗುವರು. ನಿನ್ನ ಮಕ್ಕಳು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗುತ್ತಾರೆ” ಎಂದು ಹೇಳಿದನು.

19 ಹಿಜ್ಕೀಯನು ತನ್ನ ಜೀವಮಾನದಲ್ಲಿ ಹೇಗೂ ಶಾಂತಿಯಿರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ಯೆಹೋವನ ಈ ಸಂದೇಶವು ಒಳ್ಳೆಯದಾಗಿದೆ” ಎಂದು ಹೇಳಿದನು.

20 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಹಿಜ್ಕೀಯನು ಮಾಡಿದ ಇತರ ಎಲ್ಲಾ ಮಹಾಕಾರ್ಯಗಳನ್ನೂ ಅವನು ನಗರಕ್ಕೆ ಕೆರೆಯಿಂದ ಕೊಳವೆಗಳ ಮೂಲಕ ನೀರಿನ ವ್ಯವಸ್ಥೆಮಾಡಿದ್ದನ್ನೂ ಬರೆಯಲಾಗಿದೆ. 21 ಹಿಜ್ಕೀಯನು ತೀರಿಕೊಂಡಾಗ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಲಾಯಿತು. ಹಿಜ್ಕೀಯನ ನಂತರ ಅವನ ಮಗನಾದ ಮನಸ್ಸೆಯು ಹೊಸ ರಾಜನಾದನು.

ಮನಸ್ಸೆಯು ತನ್ನ ಕೆಟ್ಟ ಆಳ್ವಿಕೆಯನ್ನು ಯೆಹೂದದಲ್ಲಿ ಆರಂಭಿಸಿದನು

21 ಮನಸ್ಸೆಯು ಆಳಲಾರಂಭಿಸಿದಾಗ ಅವನಿಗೆ ಹನ್ನೆರಡು ವರ್ಷ ವಯಸ್ಸಾಗಿತ್ತು. ಅವನು ಐವತ್ತೈದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಜೆಬಾ.

ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಇಸ್ರೇಲರು ತಮ್ಮ ದೇಶಕ್ಕೆ ಬಂದಾಗ ಯೆಹೋವನು ಹೊರಗಟ್ಟಿದ ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಮನಸ್ಸೆಯು ಮಾಡಿದನು. ಮನಸ್ಸೆಯು ತನ್ನ ತಂದೆಯಾದ ಹಿಜ್ಕೀಯನು ನಾಶಪಡಿಸಿದ್ದ ಉನ್ನತಸ್ಥಳಗಳನ್ನು ಮತ್ತೆ ನಿರ್ಮಿಸಿದನು. ಮನಸ್ಸೆಯು ಇಸ್ರೇಲಿನ ರಾಜನಾದ ಅಹಾಬನಂತೆ ಬಾಳನಿಗಾಗಿ ಯಜ್ಞವೇದಿಕೆಯನ್ನು ಮತ್ತು ಅಶೇರಸ್ತಂಭಗಳನ್ನು ನಿರ್ಮಿಸಿದನು. ಮನಸ್ಸೆಯು ಪರಲೋಕದ ನಕ್ಷತ್ರಗಳನ್ನು ಆರಾಧಿಸಿ ಅವುಗಳ ಸೇವೆಮಾಡಿದನು. ಮನಸ್ಸೆಯು ಸುಳ್ಳುದೇವತೆಗಳನ್ನು ಗೌರವಿಸಲು ದೇವಾಲಯದಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. (“ನಾನು ನನ್ನ ಹೆಸರನ್ನು ಜೆರುಸಲೇಮಿನಲ್ಲಿ ಸ್ಥಾಪಿಸುತ್ತೇನೆ” ಎಂದು ಯೆಹೋವನು ಮಾತನಾಡುವಾಗ ಹೇಳುತ್ತಿದ್ದ ಸ್ಥಳವು ಇದೇ ಆಗಿತ್ತು.) ಮನಸ್ಸೆಯು ಪರಲೋಕದ ನಕ್ಷತ್ರಗಳಿಗಾಗಿ ದೇವಾಲಯದ ಎರಡು ಪ್ರಾಕಾರಗಳಲ್ಲಿ ಯಜ್ಞವೇದಿಕೆಗಳನ್ನು ನಿರ್ಮಿಸಿದನು. ಮನಸ್ಸೆಯು ತನ್ನ ಮಗನನ್ನು ಆಹುತಿಕೊಟ್ಟು ಅವನನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡಿದನು. ಮನಸ್ಸೆಯು ಭವಿಷ್ಯತ್ಕಾಲವನ್ನು ಅರಿಯಲು ಅನೇಕ ಮಾರ್ಗಗಳಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಪ್ರೇತಾತ್ಮಗಳನ್ನು ವಶಪಡಿಸಿಕೊಂಡಿರುವ ಮಾಂತ್ರಿಕರನ್ನು ಮತ್ತು ತಾಂತ್ರಿಕರನ್ನು ಭೇಟಿಮಾಡಿದನು.

ಯೆಹೋವನು ಕೆಟ್ಟದ್ದೆಂದು ಹೇಳಿದ ಅನೇಕಾನೇಕ ಕಾರ್ಯಗಳನ್ನು ಮನಸ್ಸೆಯು ಮಾಡಿದನು. ಯೆಹೋವನು ಕೋಪಗೊಳ್ಳಲು ಇದು ಕಾರಣವಾಯಿತು. ಮನಸ್ಸೆಯು ಅಶೇರ ವಿಗ್ರಹಗಳನ್ನು ಕೆತ್ತಿಸಿದನು. ಅವನು ಈ ವಿಗ್ರಹಗಳನ್ನು ಆಲಯದಲ್ಲಿ ಇರಿಸಿದನು. ಯೆಹೋವನು ದಾವೀದನಿಗೆ ಮತ್ತು ದಾವೀದನ ಮಗನಾದ ಸೊಲೊಮೋನನಿಗೆ ಈ ಆಲಯವನ್ನು ಕುರಿತು ಹೀಗೆ ಹೇಳಿದ್ದನು: “ಇಸ್ರೇಲಿನಲ್ಲಿರುವ ಎಲ್ಲಾ ನಗರಗಳಿಂದ ನಾನು ಜೆರುಸಲೇಮನ್ನು ಆರಿಸಿದ್ದೇನೆ. ನಾನು ನನ್ನ ಹೆಸರನ್ನು ಜೆರುಸಲೇಮಿನ ಆಲಯದಲ್ಲಿ ಎಂದೆಂದಿಗೂ ಇರಿಸುತ್ತೇನೆ. ಇಸ್ರೇಲಿನ ಜನರು ತಮ್ಮ ದೇಶವನ್ನು ತೊರೆದು ಅಲೆದಾಡದೆ ತಮ್ಮ ಪೂರ್ವಿಕರಿಗೆ ಕೊಡಲ್ಪಟ್ಟ ದೇಶದಲ್ಲಿಯೇ ನೆಲೆಸುವಂತೆ ನಾನು ಮಾಡುತ್ತೇನೆ. ನಾನು ನನ್ನ ಸೇವಕನಾದ ಮೋಶೆಯ ಮೂಲಕ ಅವರಿಗೆ ಬೋಧಿಸಿದ ಆಜ್ಞೆಗಳಿಗೆಲ್ಲಾ ಅವರು ವಿಧೇಯರಾಗಿದ್ದರೆ, ನಾನು ಅವರನ್ನು ಅವರ ದೇಶದಲ್ಲಿ ನೆಲೆಗೊಳಿಸುವೆನು.” ಆದರೆ ಜನರು ದೇವರ ಮಾತನ್ನು ಆಲಿಸಲಿಲ್ಲ. ಇಸ್ರೇಲರು ಕಾನಾನಿಗೆ ಬರುವುದಕ್ಕೆ ಮುಂಚೆ ಅಲ್ಲಿ ವಾಸಿಸುತ್ತಿದ್ದ ಜನಾಂಗಗಳು ಮಾಡಿದ್ದಕ್ಕಿಂತ ಹೆಚ್ಚು ಕೆಟ್ಟಕಾರ್ಯಗಳನ್ನು ಮನಸ್ಸೆಯಿಂದ ಪ್ರೇರಿತರಾಗಿ ಮಾಡಿದರು. ಇಸ್ರೇಲರು ಅವರ ದೇಶಗಳನ್ನು ವಶಪಡಿಸಿಕೊಳ್ಳಲು ಬಂದಾಗ ಯೆಹೋವನು ಆ ಜನಾಂಗಗಳನ್ನು ನಾಶಪಡಿಸಿದನು.

10 ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಂದ ಈ ಸಂಗತಿಗಳನ್ನು ತಿಳಿಸಿದನು. 11 “ಯೆಹೂದದ ರಾಜನಾದ ಮನಸ್ಸೆಯು ತನಗಿಂತಲೂ ಮುಂಚೆ ಇದ್ದ ಅಮೋರಿಯರಿಗಿಂತ ಹೆಚ್ಚು ಅಸಹ್ಯವಾದ ಕೃತ್ಯಗಳನ್ನು ಮಾಡಿದನು. ಮನಸ್ಸೆಯು ತನ್ನ ವಿಗ್ರಹಗಳಿಂದ ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದನು. 12 ಆದ್ದರಿಂದ ಇಸ್ರೇಲಿನ ದೇವರು ಹೀಗೆನ್ನುತ್ತಾನೆ: ‘ಇಗೋ, ಜೆರುಸಲೇಮಿಗೂ ಯೆಹೂದಕ್ಕೂ ಎಷ್ಟು ತೊಂದರೆಯನ್ನು ತರುತ್ತೇನೆಂದರೆ, ಅದನ್ನು ಕೇಳಿದ ಯಾರಾದರೂ ನಡುಗಿಬಿಡಬೇಕು. 13 ನಾನು ಸಮಾರ್ಯದ ಮೇಲೆ ಚಾಚಿದ ಮಟ್ಟಗೋಲನ್ನೂ ಅಹಾಬನ ಕುಟುಂಬದ ಮೇಲಿಟ್ಟ ತೂಕದ ಗುಂಡನ್ನೂ ಜೆರುಸಲೇಮಿನ ಮೇಲೆ ಚಾಚುತ್ತೇನೆ. ಒಬ್ಬನು ಒಂದು ಪಾತ್ರೆಯನ್ನು ಒರೆಸಿ, ಅದನ್ನು ಕೆಳಮುಖವಾಗಿ ತಿರುಗಿಸುವಂತೆ ನಾನು ಜೆರುಸಲೇಮಿಗೆ ಮಾಡುತ್ತೇನೆ. 14 ಆದರೂ ಅಲ್ಲಿ ನನ್ನ ಕೆಲವು ಜನರು ಉಳಿದುಕೊಳ್ಳುತ್ತಾರೆ. ನಾನು ಅವರನ್ನು ಬಿಟ್ಟುಬಿಡುತ್ತೇನೆ. ನಾನು ಅವರನ್ನು ಅವರ ಶತ್ರುಗಳಿಗೆ ಒಪ್ಪಿಸುತ್ತೇನೆ. ಅವರ ಶತ್ರುಗಳು ಅವರನ್ನು ಸೆರೆಯಾಳುಗಳನ್ನಾಗಿ ಇಟ್ಟುಕೊಳ್ಳುವರು; ಯುದ್ಧಗಳಲ್ಲಿ ಸೈನಿಕರು ವಶಪಡಿಸಿಕೊಳ್ಳುವ ಬೆಲೆಯುಳ್ಳ ವಸ್ತುಗಳಂತೆ ಅವರಿರುವರು. 15 ಏಕೆಂದರೆ ನಾನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ನನ್ನ ಜನರು ಮಾಡಿದರು. ಅವರ ಪೂರ್ವಿಕರು ಈಜಿಪ್ಟಿನಿಂದ ಹೊರಬಂದ ದಿನದಿಂದ ಅವರು ನನ್ನನ್ನು ರೇಗಿಸಿದರು. 16 ಮನಸ್ಸೆಯು ಅನೇಕ ನಿರಪರಾಧಿಗಳನ್ನು ಕೊಂದುಹಾಕಿದನು; ಜೆರುಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ರಕ್ತದಿಂದ ತುಂಬಿಸಿದನು. ಯೆಹೂದವನ್ನು ಪಾಪಕ್ಕೆ ಪ್ರೇರೇಪಿಸಿದ್ದರ ಜೊತೆಗೆ ಅವನ ಈ ಪಾಪಗಳು ಕೂಡಿಕೊಂಡವು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಯೆಹೂದವು ಮಾಡುವಂತೆ ಮನಸ್ಸೆಯು ಪ್ರೇರೇಪಿಸಿದನು.’”

17 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮನಸ್ಸೆಯು ಮಾಡಿದ ಎಲ್ಲಾ ಕಾರ್ಯಗಳನ್ನೂ ಅವನು ಮಾಡಿದ ಪಾಪಕೃತ್ಯಗಳನ್ನೂ ಬರೆಯಲಾಗಿದೆ. 18 ಮನಸ್ಸೆಯು ಸತ್ತುಹೋದನು ಮತ್ತು ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮನಸ್ಸೆಯನ್ನು “ಉಜ್ಜನ ವನ”ದಲ್ಲಿ ಸಮಾಧಿಮಾಡಿದರು. ಈ ವನವು ಅವನ ಸ್ವಂತ ಮನೆಯಲ್ಲಿತ್ತು. ಮನಸ್ಸೆಯ ನಂತರ ಅವನ ಮಗನಾದ ಆಮೋನನು ಹೊಸ ರಾಜನಾದನು.

ಆಮೋನನ ಸ್ವಲ್ಪಕಾಲದ ಆಳ್ವಿಕೆ

19 ಆಮೋನನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಎರಡು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮೆಷುಲ್ಲೆಮೆತ್. ಅವಳು ಯೊಟ್ಟಾ ಊರಿನ ಹಾರೂಚನ ಮಗಳು.

20 ಆಮೋನನು ಅವನ ತಂದೆಯಾದ ಮನಸ್ಸೆಯಂತೆ ಯೆಹೋವನು ಕೆಟ್ಟದ್ದೆಂದು ಹೇಳಿದವುಗಳನ್ನೆಲ್ಲಾ ಮಾಡಿದನು. 21 ಆಮೋನನು ತನ್ನ ತಂದೆಯಂತೆ ಜೀವಿಸಿದ್ದನು. ತನ್ನ ತಂದೆಯು ಪೂಜಿಸಿದ ವಿಗ್ರಹಗಳನ್ನು ಆಮೋನನು ಪೂಜಿಸಿದನು. 22 ಆಮೋನನು ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ತ್ಯಜಿಸಿದನು ಮತ್ತು ಯೆಹೋವನಿಗೆ ಮೆಚ್ಚಿಗೆಯಾದ ಮಾರ್ಗದಲ್ಲಿ ಜೀವಿಸಲಿಲ್ಲ.

23 ಆಮೋನನ ಸೇವಕರು ಅವನ ವಿರುದ್ಧ ಒಳಸಂಚು ಮಾಡಿದರು ಮತ್ತು ಅವನ ಸ್ವಂತ ಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು. 24 ರಾಜನಾದ ಆಮೋನನ ವಿರುದ್ಧ ಒಳಸಂಚು ಮಾಡಿದ ಅವನ ಅಧಿಕಾರಿಗಳನ್ನು ಆ ದೇಶದ ಜನಸಾಮಾನ್ಯರು ಕೊಂದುಹಾಕಿದರು. ಆಮೋನನ ಮಗನಾದ ಯೋಷೀಯನನ್ನು ಜನರು ಅವನ ನಂತರ ಹೊಸ ರಾಜನನ್ನಾಗಿ ಮಾಡಿದರು.

25 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಆಮೋನನು ಮಾಡಿದ ಇತರ ಕಾರ್ಯಗಳನ್ನು ಕುರಿತು ಬರೆಯಲಾಗಿದೆ. 26 ಆಮೋನನನ್ನು ಉಜ್ಜನವನದಲ್ಲಿ ಅವನ ಸ್ಮಶಾನದಲ್ಲಿ ಸಮಾಧಿಮಾಡಿದರು. ಆಮೋನನ ಮಗನಾದ ಯೋಷೀಯನು ಹೊಸ ರಾಜನಾದನು.

ಯೋಷೀಯನು ಯೆಹೂದದಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸುವನು

22 ಯೋಷೀಯನು ಆಳಲಾರಂಭಿಸಿದಾಗ ಅವನಿಗೆ ಎಂಟು ವರ್ಷ ವಯಸ್ಸಾಗಿತ್ತು. ಅವನು ಮೂವತ್ತೊಂದು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಯದೀದಾ. ಇವಳು ಬೊಚ್ಕತ್ ಎಂಬ ಸ್ಥಳದ ಅದಾಯ ಎಂಬವನ ಮಗಳು. ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಯೋಷೀಯನು ಮಾಡಿದನು. ಯೋಷೀಯನು ತನ್ನ ಪೂರ್ವಿಕನಾದ ದಾವೀದನಂತೆ ದೇವರನ್ನು ಅನುಸರಿಸಿದನು. ಯೋಷೀಯನು ದೇವರ ಬೋಧನೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಅವುಗಳನ್ನು ಅನುಸರಿಸಿದನು.

ಯೋಷೀಯನು ದೇವಾಲಯದ ದುರಸ್ತಿಗೆ ಆಜ್ಞಾಪಿಸುವನು

ಯೋಷೀಯನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಚೆಲ್ಯನ ಮಗನೂ ಮೆಷುಲ್ಲಾಮನ ಮೊಮ್ಮಗನೂ ಕಾರ್ಯದರ್ಶಿಯೂ ಆದ ಶಾಫಾನನನ್ನು ದೇವಾಲಯಕ್ಕೆ ಕಳುಹಿಸಿದನು. ಯೋಷೀಯನು, “ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ದ್ವಾರಪಾಲಕರು ಜನರಿಂದ ಒಟ್ಟುಗೂಡಿಸಿರುವ ಹಣವನ್ನು ಅವನು ಲೆಕ್ಕಿಸಲಿ. ಜನರು ದೇವಾಲಯಕ್ಕೆ ತೆಗೆದುಕೊಂಡು ಬಂದು ಕೊಟ್ಟ ಹಣವೇ ಇದು. ನಂತರ ಯಾಜಕರು ದೇವಾಲಯದಲ್ಲಿ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುವ ಮುಖ್ಯಸ್ಥರಿಗೆ ಕೊಡಲಿ. ಯಾಜಕರು ದೇವಾಲಯವನ್ನು ದುರಸ್ತಿ ಮಾಡುವ ಕೆಲಸಗಾರರಿಗೆ ಈ ಹಣವನ್ನು ವಿನಿಯೋಗಿಸಲಿ. ಅಲ್ಲಿ ಬಡಗಿಗಳು, ಶಿಲ್ಪಿಗಳು ಮತ್ತು ಕಲ್ಲುಕುಟಿಕರಿದ್ದಾರೆ. ಮರವನ್ನು ಕೊಳ್ಳಲು ಮತ್ತು ಕಲ್ಲುಗಳನ್ನು ಕೆತ್ತಿಸಲು ಈ ಹಣವನ್ನು ಬಳಸಿ. ನೀವು ಕೆಲಸಗಾರರಿಗೆ ಕೊಡುವ ಹಣವನ್ನು ಲೆಕ್ಕಹಾಕಬೇಡಿ. ಯಾಕೆಂದರೆ ಆ ಕೆಲಸಗಾರರು ನಂಬಿಗಸ್ತರಾಗಿದ್ದಾರೆ” ಎಂದು ಹೇಳಿದನು.

ದೇವಾಲಯದಲ್ಲಿ ಧರ್ಮಶಾಸ್ತ್ರವು ಸಿಕ್ಕಿತು

ಪ್ರಧಾನಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ದೇವಾಲಯದಲ್ಲಿ ನನಗೆ ಧರ್ಮಶಾಸ್ತ್ರವು ಸಿಕ್ಕಿತು” ಎಂದು ಹೇಳಿದನು. ಹಿಲ್ಕೀಯನು ಅದನ್ನು ಶಾಫಾನನಿಗೆ ನೀಡಿದನು. ಶಾಫಾನನು ಅದನ್ನು ಓದಿದನು.

ಕಾರ್ಯದರ್ಶಿಯಾದ ಶಾಫಾನನು ರಾಜನಾದ ಯೋಷಿಯನ ಬಳಿಗೆ ಬಂದು ಅವನಿಗೆ, “ನಿನ್ನ ಸೇವಕರು ದೇವಾಲಯದಲ್ಲಿದ್ದ ಹಣವನ್ನು ವ್ಯಯಮಾಡಿದರು. ಅವರು ಆ ಹಣವನ್ನು ದೇವಾಲಯದಲ್ಲಿ ಕೆಲಸ ಮಾಡಿಸುವ ಮೇಲ್ವಿಚಾರಕರಿಗೆ ಒಪ್ಪಿಸಿದರು” ಎಂದು ಹೇಳಿದನು. 10 ನಂತರ ಕಾರ್ಯದರ್ಶಿಯಾದ ಶಾಫಾನನು ರಾಜನಿಗೆ, “ಯಾಜಕನಾದ ಹಿಲ್ಕೀಯನು ನನಗೆ ಒಂದು ಗ್ರಂಥವನ್ನು ಕೊಟ್ಟನು” ಎಂದು ಹೇಳಿದನು. ಶಾಫಾನನು ರಾಜನಿಗೆ ಆ ಗ್ರಂಥವನ್ನು ಓದಿದನು.

11 ರಾಜನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ, ಗಲಿಬಿಲಿಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು. 12 ಅನಂತರ ರಾಜನು ಯಾಜಕನಾದ ಹಿಲ್ಕೀಯನಿಗೆ, ಶಾಫಾನನ ಮಗನಾದ ಅಹೀಕಾಮನಿಗೆ, ಮೀಕಾಯನ ಮಗನಾದ ಅಕ್ಬೋರನಿಗೆ, ಕಾರ್ಯದರ್ಶಿಯಾದ ಶಾಫಾನನಿಗೆ ಮತ್ತು ರಾಜಸೇವಕನಾದ ಅಸಾಯನಿಗೆ ಒಂದು ಆಜ್ಞೆಯನ್ನು ನೀಡಿದನು. 13 ರಾಜನಾದ ಯೋಷೀಯನು, “ಈಗ ನಾವು ಏನು ಮಾಡಬೇಕೆಂದು ಯೆಹೋವನನ್ನು ಕೇಳಿ. ನನಗಾಗಿ, ಜನರಿಗಾಗಿ ಮತ್ತು ಎಲ್ಲಾ ಯೆಹೂದಕ್ಕಾಗಿ ಯೆಹೋವನನ್ನು ಕೇಳಿ. ಈಗ ಸಿಕ್ಕಿರುವ ಈ ಗ್ರಂಥದ ವಾಕ್ಯಗಳನ್ನು ಕುರಿತಾಗಿಯೂ ಕೇಳಿ. ಯೆಹೋವನು ನಮ್ಮ ಮೇಲೆ ಕೋಪಗೊಂಡಿದ್ದಾನೆ. ಏಕೆಂದರೆ ನಮ್ಮ ಪೂರ್ವಿಕರು ಈ ಗ್ರಂಥದ ವಾಕ್ಯಗಳಿಗೆ ಕಿವಿಗೊಡಲಿಲ್ಲ; ಅವುಗಳನ್ನು ಕೈಕೊಂಡು ನಡೆಯಲಿಲ್ಲ” ಎಂದು ಹೇಳಿದನು.

ಯೋಷೀಯನು ತನ್ನ ಜನರನ್ನು ಪ್ರವಾದಿಯಾದ ಹುಲ್ದಳ ಬಳಿಗೆ ಕಳುಹಿಸಿದನು

14 ಆದ್ದರಿಂದ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಎಂಬವರು ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋದರು. ಹುಲ್ದಳು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ಶಲ್ಲೂಮನ ಹೆಂಡತಿ. ಅವನು ಯಾಜಕರ ವಸ್ತ್ರಗಳಿಗೆ ಮೇಲ್ವಿಚಾರಕನಾಗಿದ್ದನು. ಹುಲ್ದಳು ಜೆರುಸಲೇಮಿನ ಎರಡನೆಯ ಭಾಗದಲ್ಲಿ[b] ವಾಸಿಸುತ್ತಿದ್ದಳು. ಅವರು ಹೋಗಿ ಹುಲ್ದಳ ಜೊತೆಯಲ್ಲಿ ಮಾತನಾಡಿದರು.

15 ಆಗ ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನ ಬಳಿಗೆ ಹೋಗಿ 16 ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ಈ ದೇಶದ ಮೇಲೆ ಮತ್ತು ಇಲ್ಲಿ ವಾಸಮಾಡುತ್ತಿರುವ ಜನರ ಮೇಲೆ ನಾನು ಕೇಡುಗಳನ್ನು ಬರಮಾಡುವೆನು. ಯೆಹೂದದ ರಾಜನು ಓದಿದ ಗ್ರಂಥದಲ್ಲಿ ಈ ಕೇಡುಗಳನ್ನು ತಿಳಿಸಲಾಗಿದೆ. 17 ಯೆಹೂದದ ರಾಜರು ನನ್ನನ್ನು ತ್ಯಜಿಸಿದರು ಮತ್ತು ಇತರ ದೇವರುಗಳಿಗೆ ಧೂಪವನ್ನು ಸುಟ್ಟರು. ಅವರು ನನ್ನಲ್ಲಿ ಹೆಚ್ಚು ಕೋಪವನ್ನು ಉಂಟುಮಾಡಿದರು. ಅವರು ಅನೇಕ ವಿಗ್ರಹಗಳನ್ನು ನಿರ್ಮಿಸಿದರು. ಆದಕಾರಣವೇ ನಾನು ನನ್ನ ಕೋಪವನ್ನು ಈ ಸ್ಥಳದ ವಿರುದ್ಧ ತೋರ್ಪಡಿಸುತ್ತೇನೆ. ನನ್ನ ಕೋಪವು ಆರಿಹೋಗದ ಬೆಂಕಿಯಂತಿರುತ್ತದೆ!’

18-19 “ಯೆಹೂದದ ರಾಜನಾದ ಯೋಷೀಯನು ಯೆಹೋವನ ಸಲಹೆಯನ್ನು ಕೇಳಲು ನಿಮ್ಮನ್ನು ಕಳುಹಿಸಿದನು. ಯೋಷೀಯನಿಗೆ ಈ ಸಂಗತಿಗಳನ್ನು ಹೇಳಿ: ‘ನೀನು ಕೇಳುವ ಈ ಮಾತುಗಳನ್ನು ಇಸ್ರೇಲರ ದೇವರಾದ ಯೆಹೋವನು ಹೇಳಿದನು. ಈ ದೇಶವನ್ನು ಮತ್ತು ಇಲ್ಲಿ ವಾಸಿಸುವ ಜನರನ್ನು ಕುರಿತು ನಾನು ಹೇಳಿದ ಸಂಗತಿಗಳನ್ನು ನೀನು ಕೇಳಿರುವೆ. ನಿನ್ನ ಹೃದಯವು ಮೃದುವಾಗಿರುವುದರಿಂದ, ನೀನು ಅವುಗಳನ್ನು ಕೇಳಿದಾಗ ದೈನ್ಯತೆಯುಳ್ಳವನಾದೆ. ಈ ಸ್ಥಳಕ್ಕೆ (ಜೆರುಸಲೇಮಿಗೆ) ಆ ಭೀಕರ ಸಂಗತಿಗಳಾಗುತ್ತವೆಯೆಂದು ನಾನು ಹೇಳಿದೆ. ಆಗ ನೀನು ದುಃಖದಿಂದ ನಿನ್ನ ಬಟ್ಟೆಗಳನ್ನು ಹರಿದುಕೊಂಡು ಅಳಲಾರಂಭಿಸಿದೆ. ಆದಕಾರಣವೇ ನಾನು ನಿನಗೆ ಕಿವಿಗೊಟ್ಟೆನು.’ ಯೆಹೋವನು ಹೇಳುವುದೇನೆಂದರೆ: 20 ‘ನೀನು ನಿನ್ನ ಪೂರ್ವಿಕರ ಜೊತೆ ಸೇರುವಂತೆ ನಾನು ಮಾಡುತ್ತೇನೆ. ನೀನು ಶಾಂತಿಯಿಂದ ಸತ್ತು ನಿನ್ನ ಸಮಾಧಿಯನ್ನು ಸೇರುವೆ. ಈ ದೇಶದ (ಜೆರುಸಲೇಮಿನ) ಮೇಲೆ ನಾನು ತರಲಿರುವ ಕೇಡುಗಳನ್ನು ನಿನ್ನ ಕಣ್ಣುಗಳು ನೋಡುವುದಿಲ್ಲ’ ಎಂಬುದೇ” ಎಂದು ಹೇಳಿದಳು.

ನಂತರ ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಮತ್ತು ಅಸಾಯ ಹಿಂತಿರುಗಿ ಬಂದು ರಾಜನಿಗೆ ತಿಳಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International