Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
2 ರಾಜರುಗಳು 15-17

ಯೆಹೂದದಲ್ಲಿ ಅಜರ್ಯನ ಆಳ್ವಿಕೆ

15 ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ರಾಜನಾದನು. ಅಜರ್ಯನು ಆಳಲಾರಂಭಿಸಿದಾಗ ಅವನಿಗೆ ಹದಿನಾರು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಜೆರುಸಲೇಮಿನ ಯೆಕೊಲ್ಯ ಎಂಬ ಹೆಸರಿನವಳು ಅಜರ್ಯನ ತಾಯಿ. ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಗೆ ಯೋಗ್ಯವಾದ ಕಾರ್ಯಗಳನ್ನು ಮಾಡಿದನು. ಅಜರ್ಯನು ತನ್ನ ತಂದೆಯಾದ ಅಮಚ್ಯನು ಮಾಡಿದ ಕಾರ್ಯಗಳನ್ನೇ ಅನುಸರಿಸಿದನು. ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಇನ್ನೂ ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು.

ರಾಜನಾದ ಅಜರ್ಯನು ಕುಷ್ಠರೋಗ ಪೀಡಿತನಾಗುವಂತೆ ಯೆಹೋವನು ಮಾಡಿದನು. ಅವನು ಸಾಯುವವರೆಗೂ ಕುಷ್ಠರೋಗಿಯಾಗಿಯೇ ಇದ್ದನು. ಅಜರ್ಯನು ಪ್ರತ್ಯೇಕವಾದ ಮನೆಯಲ್ಲಿ ವಾಸಿಸುತ್ತಿದ್ದನು. ರಾಜನ ಮಗನಾದ ಯೋತಾಮನು ರಾಜನ ಅರಮನೆಯನ್ನು ನೋಡಿಕೊಳ್ಳುತ್ತಿದ್ದನು ಮತ್ತು ಜನರನ್ನು ಪಾಲಿಸುತ್ತಿದ್ದನು.

“ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಜರ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ. ಅಜರ್ಯನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ, ದಾವೀದ ನಗರದಲ್ಲಿ ಸಮಾಧಿಮಾಡಲಾಯಿತು. ಅಜರ್ಯನ ನಂತರ ಅವನ ಮಗನಾದ ಯೋತಾಮನು ಹೊಸ ರಾಜನಾದನು.

ಜೆಕರ್ಯನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು

ಯಾರೊಬ್ಬಾಮನ ಮಗನಾದ ಜೆಕರ್ಯನು ಇಸ್ರೇಲಿನ ಸಮಾರ್ಯದಲ್ಲಿ ಆರು ತಿಂಗಳ ಕಾಲ ಆಳಿದನು. ಅದು ಯೆಹೂದದ ರಾಜನಾಗಿದ್ದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷವಾಗಿತ್ತು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಜೆಕರ್ಯನು ಮಾಡಿದನು. ಅವನ ಪೂರ್ವಿಕರು ಮಾಡಿದಂತೆಯೇ ಅವನೂ ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಕೃತ್ಯಗಳನ್ನು ಅವನು ನಿಲ್ಲಿಸಲಿಲ್ಲ.

10 ಯಾಬೇಷನ ಮಗನಾದ ಶಲ್ಲೂಮನು ಜೆಕರ್ಯನ ವಿರುದ್ಧವಾಗಿ ಸಂಚುಗಳನ್ನು ಮಾಡಿದನು. ಶಲ್ಲೂಮನು ಜೆಕರ್ಯನನ್ನು ಜನರ ಮುಂದೆ ಕೊಂದುಹಾಕಿ ಹೊಸ ರಾಜನಾದನು. 11 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಜೆಕರ್ಯನು ಮಾಡಿದ ಇತರ ಕಾರ್ಯಗಳನ್ನೆಲ್ಲ ಬರೆಯಲಾಗಿದೆ. 12 ಹೀಗೆ ಯೆಹೋವನ ವಾಕ್ಯವು ನೆರವೇರಿತು. ಯೇಹುವಿನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೆ ಇಸ್ರೇಲಿನ ರಾಜರಾಗಿರುತ್ತಾರೆ ಎಂದು ಯೆಹೋವನು ಅವನಿಗೆ ಮೊದಲೇ ತಿಳಿಸಿದ್ದನು.

ಶಲ್ಲೂಮನು ಇಸ್ರೇಲನ್ನು ಸ್ವಲ್ಪ ಕಾಲ ಆಳುವನು

13 ಯೆಹೂದದ ರಾಜನಾದ ಉಜ್ಜೀಯನ ಮೂವತ್ತೊಂಭತ್ತನೆಯ ವರ್ಷದ ಆಳ್ವಿಕೆಯಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರೇಲಿನ ರಾಜನಾದನು. ಶಲ್ಲೂಮನು ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.

14 ಗಾದಿಯ ಮಗನಾದ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದನು. ಮೆನಹೇಮನು ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದುಹಾಕಿದನು. ನಂತರ ಮೆನಹೇಮನು ಅವನ ನಂತರ ಹೊಸ ರಾಜನಾದನು.

15 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಶಲ್ಲೂಮನು ಮಾಡಿದ ಕಾರ್ಯಗಳನ್ನೂ ಜೆಕರ್ಯನ ವಿರುದ್ಧವಾಗಿ ಅವನು ಯೋಜಿಸಿದ ಉಪಾಯಗಳನ್ನೂ ಬರೆಯಲಾಗಿದೆ.

ಇಸ್ರೇಲಿನಲ್ಲಿ ಮೆನಹೇಮನ ಆಳ್ವಿಕೆ

16 ಶಲ್ಲೂಮನು ಸತ್ತನಂತರ, ಮೆನಹೇಮನು ತಿಪ್ಸಹುವನ್ನು ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸೋಲಿಸಿದನು. ಜನರು ನಗರದ ಬಾಗಿಲನ್ನು ಅವನಿಗೆ ತೆರೆಯಲು ನಿರಾಕರಿಸಿದರು. ಆದ್ದರಿಂದ ಮೆನಹೇಮನು ಅವರನ್ನು ಸೋಲಿಸಿ ಆ ನಗರದಲ್ಲಿದ್ದ ಗರ್ಭಿಣಿ ಸ್ತ್ರೀಯರ ಹೊಟ್ಟೆಗಳನ್ನು ಸೀಳಿಸಿದನು.

17 ಅಜರ್ಯನು ಯೆಹೂದದ ರಾಜನಾಗಿದ್ದ ಮೂವತ್ತೊಂಭತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರೇಲಿನ ರಾಜನಾದನು. ಮೆನಹೇಮನು ಸಮಾರ್ಯದಲ್ಲಿ ಹತ್ತು ವರ್ಷಗಳ ಕಾಲ ಆಳಿದನು. 18 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಮೆನಹೇಮನು ಮಾಡಿದನು. ಇಸ್ರೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಮೆನಹೇಮನು ಮುಂದುವರಿಸಿದನು.

19 ಅಶ್ಶೂರ್ ದೇಶದ ರಾಜನಾದ ಪೂಲನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಮೆನಹೇಮನು ಪೂಲನಿಗೆ ಮೂವತ್ನಾಲ್ಕು ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. ಪೂಲನು ಮೆನಹೇಮನಿಗೆ ಬೆಂಬಲವನ್ನು ನೀಡಲು ಮತ್ತು ಮೆನಹೇಮನ ರಾಜ್ಯವನ್ನು ಬಲಪಡಿಸಲು ಹೀಗೆ ಮಾಡಿದನು: 20 ಶ್ರೀಮಂತರು ಮತ್ತು ಅಧಿಕಾರವುಳ್ಳ ಜನರು ತೆರಿಗೆಯನ್ನು ನೀಡುವಂತೆ ಮಾಡಿ, ಮೆನಹೇಮನು ಈ ಹಣವನ್ನು ಸಂಗ್ರಹಿಸಿದನು. ಮೆನಹೇಮನು ಪ್ರತಿಯೊಬ್ಬ ಮನುಷ್ಯನಿಗೂ ಆರುನೂರು ಗ್ರಾಂ ಬೆಳ್ಳಿಯ ತೆರಿಗೆಯನ್ನು ವಿಧಿಸಿದನು. ನಂತರ ಮೆನಹೇಮನು ಅಶ್ಶೂರದ ರಾಜನಿಗೆ ಹಣವನ್ನು ಕೊಟ್ಟನು. ಆದ್ದರಿಂದ ಅಶ್ಶೂರದ ರಾಜನು ಬಿಟ್ಟುಹೋದನು; ಅವನು ಇಸ್ರೇಲಿನಲ್ಲೇ ನೆಲೆಸಲಿಲ್ಲ.

21 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಮೆನಹೇಮನು ಮಾಡಿದ ಉಳಿದ ಮಹಾಕಾರ್ಯಗಳನ್ನು ಬರೆಯಲಾಗಿದೆ. 22 ಮೆನಹೇಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ಸಮಾಧಿಮಾಡಿದರು. ಮೆನಹೇಮನ ನಂತರ ಅವನ ಮಗನಾದ ಪೆಕಹ್ಯನು ಹೊಸ ರಾಜನಾದನು.

ಇಸ್ರೇಲನ್ನು ಪೆಕಹ್ಯನು ಆಳಿದನು

23 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯನು ಸಮಾರ್ಯದಲ್ಲಿ ಇಸ್ರೇಲಿನ ರಾಜನಾದನು. ಪೆಕಹ್ಯನು ಎರಡು ವರ್ಷ ಆಳಿದನು. 24 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಪೆಕಹ್ಯನು ಮಾಡಿದನು. ಇಸ್ರೇಲರನ್ನು ಪಾಪಕೃತ್ಯಗಳಿಗೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನೇ ಪೆಕಹ್ಯನು ಮುಂದುವರಿಸಿದನು.

25 ಪೆಕಹ್ಯನ ಸೇನೆಗೆ ರೆಮಲ್ಯನ ಮಗನಾದ ಪೆಕಹನು ಸೇನಾಧಿಪತಿಯಾಗಿದ್ದನು. ಅವನು ಪೆಕಹ್ಯನನ್ನು ಕೊಂದುಹಾಕಿದನು. ಅವನು ಸಮಾರ್ಯದಲ್ಲಿರುವ ರಾಜನ ಅರಮನೆಯಲ್ಲಿ ಪೆಕಹ್ಯನು ಅರ್ಗೋಬ್ ಮತ್ತು ಅರ್ಯೇ ಎಂಬವರನ್ನು ಸಹ ಕೊಂದುಹಾಕಿದನು. ಪೆಕಹ್ಯನನ್ನು ಪೆಕಹನು ಕೊಂದುಹಾಕಿದಾಗ ಅವನ ಸಂಗಡ ಗಿಲ್ಯಾದಿನ ಐವತ್ತು ಜನರಿದ್ದರು. ಪೆಕಹ್ಯನ ನಂತರ ಪೆಕಹನು ಹೊಸ ರಾಜನಾದನು.

26 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹ್ಯನು ಮಾಡಿದ ಇತರ ಮಹಾಕಾರ್ಯಗಳನ್ನು ಕುರಿತು ಬರೆಯಲಾಗಿದೆ.

ಇಸ್ರೇಲನ್ನು ಪೆಕಹನು ಆಳುವನು

27 ಅಜರ್ಯನು ಯೆಹೂದದ ರಾಜನಾಗಿದ್ದ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಪೆಕಹನು ಇಪ್ಪತ್ತು ವರ್ಷ ಆಳಿದನು. 28 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನೇ ಪೆಕಹನು ಮಾಡಿದನು. ಇಸ್ರೇಲರನ್ನು ಪಾಪಮಾಡುವಂತೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಕೃತ್ಯಗಳನ್ನು ಪೆಕಹನು ಮುಂದುವರಿಸಿದನು.

29 ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನೆಂಬವನು ಇಸ್ರೇಲಿನ ವಿರುದ್ಧ ಯುದ್ಧಕ್ಕೆ ಬಂದನು. ಪೆಕಹನು ಇಸ್ರೇಲಿನ ರಾಜನಾಗಿದ್ದ ಸಂದರ್ಭದಲ್ಲಿ ಇದು ಸಂಭವಿಸಿತು. ತಿಗ್ಲತ್ಪಿಲೆಸರನು ಇಯ್ಯೋನ್, ಅಬೇಲ್ಬೇತ್ಮಾಕಾ, ಯಾನೋಹ, ಕದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಪ್ರಾಂತ್ಯಗಳನ್ನೆಲ್ಲ ಸ್ವಾಧೀನಪಡಿಸಿಕೊಂಡನು. ತಿಗ್ಲತ್ಪಿಲೆಸರನು ಈ ಸ್ಥಳಗಳಲ್ಲಿದ್ದ ಜನರನ್ನು ಸೆರೆಯಾಳುಗಳನ್ನಾಗಿಸಿ ಅಶ್ಶೂರಿಗೆ ಕೊಂಡೊಯ್ದನು.

30 ಏಲನ ಮಗನಾದ ಹೋಶೇಯನು ರೆಮಲ್ಯನ ಮಗನಾದ ಪೆಕಹನ ವಿರುದ್ಧ ಸಂಚುಗಳನ್ನು ಮಾಡಿ ಪೆಕಹನನ್ನು ಕೊಂದುಹಾಕಿದನು. ಪೆಕಹನ ನಂತರ ಹೋಶೇಯನು ಹೊಸ ರಾಜನಾದನು. ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಹೀಗಾಯಿತು.

31 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಪೆಕಹನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.

ಯೆಹೂದವನ್ನು ಯೋತಾಮನು ಆಳುವನು

32 ಉಜ್ಜೀಯನ ಮಗನಾದ ಯೋತಾಮನು ಯೆಹೂದದ ರಾಜನಾದನು. ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾದ ಎರಡನೆಯ ವರ್ಷದಲ್ಲಿ ಹೀಗಾಯಿತು. 33 ಯೋತಾಮನು ರಾಜನಾದಾಗ ಅವನಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು. ಯೋತಾಮನು ಜೆರುಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಯೋತಾಮನ ತಾಯಿಯು ಚಾದೋಕನ ಮಗಳಾದ ಯೆರೂಷಾ ಎಂಬ ಹೆಸರಿನವಳು. 34 ಯೋತಾಮನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನು ಯೋಗ್ಯವೆಂದು ಹೇಳಿದ ಕಾರ್ಯಗಳನ್ನು ಮಾಡಿದನು. 35 ಆದರೆ ಅವನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಈ ಪೂಜಾಸ್ಥಳಗಳಲ್ಲಿ ಜನರು ಯಜ್ಞಗಳನ್ನು ಅರ್ಪಿಸುತ್ತಿದ್ದರು ಮತ್ತು ಧೂಪವನ್ನು ಸುಡುತ್ತಿದ್ದರು. ಯೋತಾಮನು ಯೆಹೋವನ ಆಲಯಕ್ಕೆ ಮೇಲ್ಬಾಗಿಲನ್ನು ನಿರ್ಮಿಸಿದನು. 36 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೋತಾಮನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ.

37 ಆ ಕಾಲದಲ್ಲಿ, ಅರಾಮ್ಯರ ರಾಜನಾದ ರೆಚೀನನನ್ನು ಮತ್ತು ರೆಮಲ್ಯನ ಮಗನಾದ ಪೆಕಹನನ್ನು ಯೆಹೂದದ ವಿರುದ್ಧ ಹೋರಾಡಲು ಯೆಹೋವನು ಕಳುಹಿಸಲಾರಂಭಿಸಿದನು.

38 ಯೋತಾಮನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಿದರು. ಯೋತಾಮನನ್ನು ಅವನ ಪೂರ್ವಿಕನಾದ ದಾವೀದನ ನಗರದಲ್ಲಿ ಸಮಾಧಿಮಾಡಿದರು. ಯೋತಾಮನ ನಂತರ ಅವನ ಮಗನಾದ ಅಹಾಜನು ಹೊಸ ರಾಜನಾದನು.

ಅಹಾಜನು ಯೆಹೂದದ ರಾಜನಾದನು

16 ರೆಮಲ್ಯನ ಮಗನಾದ ಪೆಕಹನು ಇಸ್ರೇಲಿನ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಯೋತಾಮನ ಮಗನಾದ ಅಹಾಜನು ಯೆಹೂದದ ರಾಜನಾದನು. ಅಹಾಜನು ರಾಜನಾದಾಗ ಅವನಿಗೆ ಇಪ್ಪತ್ತು ವರ್ಷ ವಯಸ್ಸಾಗಿತ್ತು. ಅಹಾಜನು ಜೆರುಸಲೇಮನ್ನು ಹದಿನಾರು ವರ್ಷ ಆಳಿದನು. ಯೆಹೋವನ ದೃಷ್ಟಿಯಲ್ಲಿ ಒಳ್ಳೆಯದಾಗಿದ್ದ ಕಾರ್ಯಗಳನ್ನು ಅಹಾಜನು ಮಾಡಲಿಲ್ಲ. ಅವನ ಪೂರ್ವಿಕನಾದ ದಾವೀದನು ದೇವರಿಗೆ ವಿಧೇಯನಾಗಿದ್ದನು; ಆದರೆ ಅಹಾಜನು ವಿಧೇಯನಾಗಲಿಲ್ಲ. ಅಹಾಜನು ಇಸ್ರೇಲಿನ ರಾಜರುಗಳಂತೆ ಜೀವಿಸಿದನು. ಅವನು ತನ್ನ ಮಗನನ್ನೇ ಬೆಂಕಿಯಲ್ಲಿ ಆಹುತಿಕೊಟ್ಟನು. ಇಸ್ರೇಲರು ದೇಶಕ್ಕೆ ಬಂದ ಕಾಲದಲ್ಲಿ ಯೆಹೋವನು ಬಲಾತ್ಕಾರದಿಂದ ಓಡಿಸಿದ ಜನಾಂಗಗಳ ಅಸಹ್ಯ ಪಾಪಗಳನ್ನು ಅವನು ಅನುಸರಿಸಿದನು. ಅಹಾಜನು ಉನ್ನತಸ್ಥಳಗಳಲ್ಲಿ ಮತ್ತು ಬೆಟ್ಟಗಳ ಮೇಲೆ ಮತ್ತು ಹಸಿರು ಮರಗಳ ಕೆಳಗೆ ಯಜ್ಞಗಳನ್ನು ಅರ್ಪಿಸಿದನು ಮತ್ತು ಧೂಪವನ್ನು ಸುಟ್ಟನು.

ಅರಾಮ್ಯರ ರಾಜನಾದ ರೆಚೀನನು ಮತ್ತು ರೆಮಲ್ಯನ ಮಗನೂ ಇಸ್ರೇಲಿನ ರಾಜನೂ ಆದ ಪೆಕಹನು ಜೆರುಸಲೇಮಿನ ವಿರುದ್ಧ ಯುದ್ಧಕ್ಕೆ ಬಂದರು. ರೆಚೀನ ಮತ್ತು ಪೆಕಹ ಅಹಾಜನಿಗೆ ಮುತ್ತಿಗೆ ಹಾಕಿದರು. ಆದರೆ ಅವನನ್ನು ಸೋಲಿಸಲಾಗಲಿಲ್ಲ. ಆ ಸಮಯಲ್ಲಿ ಅರಾಮ್ಯರ ರಾಜನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ಯಕ್ಕೆ ಸೇರಿಸಿಕೊಂಡನು. ರೆಚೀನನು ಏಲತ್ ಪಟ್ಟಣದಲ್ಲಿ ವಾಸಿಸುತ್ತಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಅರಾಮ್ಯರು ಬಂದು ಏಲತ್ ಪಟ್ಟಣದಲ್ಲಿ ನೆಲೆಸಿದರು; ಅವರು ಇಂದಿನವರೆಗೂ ಅಲ್ಲಿಯೇ ವಾಸಿಸುತ್ತಿದ್ದಾರೆ.

ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಆ ಸಂದೇಶವೇನೆಂದರೆ: “ನಾನು ನಿನ್ನ ಸೇವಕ. ನಾನು ನಿನಗೆ ಮಗನಂತಿದ್ದೇನೆ. ನೀನು ಬಂದು, ಅರಾಮ್ಯರ ರಾಜನಿಂದ ಮತ್ತು ಇಸ್ರೇಲಿನ ರಾಜನಿಂದ ನನ್ನನ್ನು ರಕ್ಷಿಸು. ಅವರು ನನ್ನ ವಿರುದ್ಧ ಯುದ್ಧಕ್ಕೆ ಬಂದಿದ್ದಾರೆ.” ಅಹಾಜನು ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯಲ್ಲಿದ್ದ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಅಶ್ಶೂರದ ರಾಜನಿಗೆ ಕಾಣಿಕೆಯಾಗಿ ಕಳುಹಿಸಿದನು. ಅಶ್ಶೂರದ ರಾಜನು ಅಹಾಜನ ಮಾತುಗಳನ್ನು ಕೇಳಿ ದಮಸ್ಕದ ವಿರುದ್ಧ ಯುದ್ಧಕ್ಕೆ ಹೊರಟು ಆ ನಗರಕ್ಕೆ ಮುತ್ತಿಗೆಹಾಕಿ, ದಮಸ್ಕದ ಜನರನ್ನು ಸೆರೆಹಿಡಿದುಕೊಂಡು ಕೀರ್‌ಗೆ ಒಯ್ದನು. ಅವನು ರೆಚೀನನನ್ನು ಕೊಂದುಹಾಕಿದನು.

10 ರಾಜನಾದ ಅಹಾಜನು ಅಶ್ಶೂರದ ರಾಜನಾದ ತಿಗ್ಲತ್ಪಿಲೆಸರನನ್ನು ಭೇಟಿಮಾಡಲು ದಮಸ್ಕಕ್ಕೆ ಹೋದನು. ಅಹಾಜನು ದಮಸ್ಕದಲ್ಲಿದ್ದ ಯಜ್ಞವೇದಿಕೆಯನ್ನು ನೋಡಿದನು. ರಾಜನಾದ ಅಹಾಜನು ಯಜ್ಞವೇದಿಕೆಯ ವಿನ್ಯಾಸವನ್ನು ಮತ್ತು ಮಾದರಿಯನ್ನು ಯಾಜಕನಾದ ಊರೀಯನಿಗೆ ಕಳುಹಿಸಿದನು. 11 ಆಗ ಯಾಜಕನಾದ ಊರೀಯನು, ದಮಸ್ಕದಿಂದ ರಾಜನಾದ ಅಹಾಜನು ತನಗೆ ಕಳುಹಿಸಿದ ಯಜ್ಞವೇದಿಕೆಯ ಮಾದರಿಯಲ್ಲೇ ಮತ್ತೊಂದು ಯಜ್ಞವೇದಿಕೆಯೊಂದನ್ನು ನಿರ್ಮಿಸಿದನು. ಹೀಗೆ ರಾಜನಾದ ಅಹಾಜನು ದಮಸ್ಕದಿಂದ ಹಿಂತಿರುಗುವುದಕ್ಕೆ ಮೊದಲೇ ಊರೀಯನು ಯಜ್ಞವೇದಿಕೆಯೊಂದನ್ನು ನಿರ್ಮಿಸಿದ್ದನು.

12 ರಾಜನು ದಮಸ್ಕದಿಂದ ಹಿಂದಿರುಗಿಬಂದು ಯಜ್ಞವೇದಿಕೆಯನ್ನು ನೋಡಿದನು. ಅವನು ಯಜ್ಞಗಳನ್ನು ಅದರ ಮೇಲೆ ಅರ್ಪಿಸಿದನು. 13 ಅಹಾಜನು ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯನೈವೇದ್ಯವನ್ನು ಅರ್ಪಿಸಿದನು; ಪಾನನೈವೇದ್ಯವನ್ನು ಸುರಿಸಿದನು; ಸಮಾಧಾನಯಜ್ಞಕ್ಕಾಗಿ ವಧಿಸಿದ ಪಶುಗಳ ರಕ್ತವನ್ನು ಯಜ್ಞವೇದಿಕೆಯ ಮೇಲೆ ಚಿಮಿಕಿಸಿದನು.

14 ಅಹಾಜನು ದೇವಾಲಯದ ಎದುರಿನಲ್ಲಿ ಯೆಹೋವನ ಸನ್ನಿಧಿಯಲ್ಲಿದ್ದ ತಾಮ್ರದ ಯಜ್ಞವೇದಿಕೆಯನ್ನು ತೆಗೆಸಿದನು. ಈ ತಾಮ್ರದ ಯಜ್ಞವೇದಿಕೆಯು ಅಹಾಜನ ಯಜ್ಞವೇದಿಕೆ ಮತ್ತು ದೇವಾಲಯದ ನಡುವೆ ಇದ್ದಿತು. ಅಹಾಜನು ತಾಮ್ರದ ಯಜ್ಞವೇದಿಕೆಯನ್ನು ತನ್ನ ಸ್ವಂತ ಯಜ್ಞವೇದಿಕೆಯ ಉತ್ತರದಿಕ್ಕಿನಲ್ಲಿಡಿಸಿದನು. 15 ಅಹಾಜನು ಯಾಜಕನಾದ ಊರೀಯನಿಗೆ, “ಈ ದೇಶದ ಜನರೆಲ್ಲರೂ ಪ್ರಾತಃಕಾಲದಲ್ಲಿ ಸರ್ವಾಂಗಹೋಮವನ್ನೂ ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ ಮತ್ತು ಪಾನದ್ರವ್ಯಗಳನ್ನೂ ಸಮರ್ಪಿಸಲು ಮಹಾವೇದಿಕೆಯನ್ನು ಬಳಸಬೇಕು; ಸರ್ವಾಂಗಹೋಮಕ್ಕಾಗಿ ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸುವ ಪಶುಗಳ ರಕ್ತವನ್ನು ಈ ಮಹಾವೇದಿಕೆಯ ಮೇಲೆ ಚಿಮುಕಿಸಿ. ಆದರೆ ನಾನು ದೇವರಿಂದ ದೈವೋತ್ತರಗಳನ್ನು ಕೇಳಲು ತಾಮ್ರವೇದಿಕೆಯನ್ನು ಉಪಯೋಗಿಸುತ್ತೇನೆ” ಎಂದು ಹೇಳಿದನು. 16 ರಾಜನಾದ ಅಹಾಜನು ಆಜ್ಞಾಪಿಸಿದಂತೆಯೇ ಯಾಜಕನಾದ ಊರೀಯನು ಮಾಡಿದನು.

17 ನಂತರ ರಾಜನಾದ ಅಹಾಜನು ಪೀಠಗಳ ಪಟ್ಟಿಗಳನ್ನು ಕತ್ತರಿಸಿದನು. ಅವುಗಳ ಮೇಲಿದ್ದ ಗಂಗಾಳಗಳನ್ನು ತೆಗೆದಿಟ್ಟನು; ಸಮುದ್ರವೆಂಬ ತೊಟ್ಟಿಯನ್ನು ತಾಮ್ರದ ಹೋರಿಗಳಿಂದ ಕೆಳಗಿಳಿಸಿ ಕಲ್ಲುಕಟ್ಟೆಯ ಮೇಲಿಟ್ಟನು. 18 ಅಹಾಜನು ಸಬ್ಬತ್ ದಿನಕ್ಕಾಗಿ ಕಟ್ಟಿದ ಮಂಟಪವನ್ನು ಬದಲಾಯಿಸಿದನು. ಕೆಲಸಗಾರರು ಆಲಯದ ಒಳಗೆ ಇದನ್ನು ನಿರ್ಮಿಸಿದ್ದರು. ಅಹಾಜನು ರಾಜನಿಗಾಗಿ ಇದ್ದ ಹೊರಭಾಗದ ಬಾಗಿಲನ್ನು ಬದಲಾಯಿಸಿದನು. ಅಹಾಜನು ದೇವಾಲಯದಿಂದ ಇವುಗಳನ್ನೆಲ್ಲಾ ಅಶ್ಶೂರದ ರಾಜನ[a] ದೆಸೆಯಿಂದ ಬದಲಾಯಿಸಿದನು.

19 “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅಹಾಜನು ಮಾಡಿದ ಇತರ ಮಹಾಕಾರ್ಯಗಳನ್ನು ಬರೆಯಲಾಗಿದೆ. 20 ಅಹಾಜನು ಸತ್ತಮೇಲೆ ಅವನನ್ನು ಅವನ ಪೂರ್ವಿಕರ ಬಳಿ ದಾವೀದನಗರದಲ್ಲಿ ಸಮಾಧಿಮಾಡಿದರು. ಅಹಾಜನ ಮಗನಾದ ಹಿಜ್ಕೀಯನು ಅವನ ನಂತರ ಹೊಸ ರಾಜನಾದನು.

ಹೋಶೇಯನು ಇಸ್ರೇಲಿನಲ್ಲಿ ತನ್ನ ಆಳ್ವಿಕೆಯನ್ನು ಆರಂಭಿಸಿದನು

17 ಏಲನ ಮಗನಾದ ಹೋಶೇಯನು ಸಮಾರ್ಯದಲ್ಲಿ ಇಸ್ರೇಲನ್ನು ಆಳಲಾರಂಭಿಸಿದನು. ಇದು ಅಹಾಜನು ಯೆಹೂದದ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಾಯಿತು. ಹೋಶೇಯನು ಒಂಭತ್ತು ವರ್ಷ ಆಳಿದನು. ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಹೋಶೇಯನು ಮಾಡಿದನು. ಆದರೆ ಹೋಶೇಯನು ಅವನಿಗಿಂತ ಮೊದಲು ಇಸ್ರೇಲನ್ನು ಆಳಿದ ರಾಜರುಗಳಷ್ಟು ಕೆಟ್ಟವನಲ್ಲ.

ಅಶ್ಶೂರದ ರಾಜನಾದ ಶಲ್ಮನೆಸರನು ಹೋಶೇಯನ ವಿರುದ್ಧ ಯುದ್ಧಕ್ಕೆ ಬಂದನು. ಶಲ್ಮನೆಸರನು ಹೋಶೇಯನನ್ನು ಸೋಲಿಸಿದನು. ಆದ್ದರಿಂದ ಹೋಶೇಯನು ಶಲ್ಮನೆಸರನಿಗೆ ಸೇವಕನಾಗಿ ಕಪ್ಪಕಾಣಿಕೆಯನ್ನು ಕೊಟ್ಟನು.

ಹೋಶೇಯನು ಈಜಿಪ್ಟಿನ ರಾಜನಲ್ಲಿಗೆ ಸಂದೇಶಕರನ್ನು ಕಳುಹಿಸಿದ್ದನು. ಈಜಿಪ್ಟಿನ ರಾಜನಿಗೆ ಸೋ ಎಂಬ ಹೆಸರಿತ್ತು. ಹೋಶೇಯನು ಅಶ್ಶೂರದ ರಾಜನಿಗೆ ಪ್ರತಿವರ್ಷ ಕಪ್ಪಕಾಣಿಕಯನ್ನು ಕೊಡುತ್ತಿದ್ದನು, ಆದರೆ ಆ ವರ್ಷ ಕೊಡಲಿಲ್ಲ. ಆದರೆ ಅಶ್ಶೂರದ ರಾಜನಿಗೆ ಹೋಶೇಯನು ತನ್ನ ವಿರುದ್ಧ ಮಾಡಿರುವ ಒಳಸಂಚು ತಿಳಿದುಬಂದಿತು. ಆದ್ದರಿಂದ ಅಶ್ಶೂರದ ರಾಜನು ಹೋಶೇಯನನ್ನು ಬಂಧಿಸಿ, ಸೆರೆಯಲ್ಲಿಟ್ಟನು.

ನಂತರ ಅಶ್ಶೂರದ ರಾಜನು ಇಸ್ರೇಲಿನಲ್ಲೆಲ್ಲಾ ಸಂಚರಿಸಿ ಸಮಾರ್ಯಕ್ಕೆ ಬಂದನು. ಅವನು ಸಮಾರ್ಯವನ್ನು ಮೂರು ವರ್ಷ ಮುತ್ತಿಗೆ ಹಾಕಿದನು. ಹೋಶೇಯನು ಇಸ್ರೇಲಿನ ರಾಜನಾಗಿದ್ದ ಒಂಭತ್ತನೆಯ ವರ್ಷದಲ್ಲಿ ಅಶ್ಶೂರದ ರಾಜನು ಸಮಾರ್ಯವನ್ನು ಸ್ವಾಧೀನಪಡಿಸಿಕೊಂಡನು. ಅಶ್ಶೂರದ ರಾಜನು ಇಸ್ರೇಲರನ್ನು ಸೆರೆಯಾಳುಗಳನ್ನಾಗಿ ಒಯ್ದು ಹಲಹು ಪ್ರಾಂತ್ಯದಲ್ಲಿಯೂ ಹಾಬೋರ್ ಹೊಳೆಯಿರುವ ಗೋಜಾನ್ ಪ್ರಾಂತ್ಯದಲ್ಲಿಯೂ ಮೇದ್ಯರ ನಗರಗಳಲ್ಲಿಯೂ ಇರಿಸಿದನು.

ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ಪಾಪಗಳನ್ನು ಮಾಡಿದ್ದರಿಂದ ಇವೆಲ್ಲವೂ ಸಂಭವಿಸಿದವು. ಈಜಿಪ್ಟಿನ ರಾಜನಾದ ಫರೋಹನ ಆಳ್ವಿಕೆಯಿಂದ ಇಸ್ರೇಲರನ್ನು ತಪ್ಪಿಸಿ ಯೆಹೋವನು ಅವರನ್ನು ಈಜಿಪ್ಟ್ ದೇಶದಿಂದ ಹೊರತಂದಿದ್ದನು. ಆದರೆ ಇಸ್ರೇಲರು ಬೇರೆ ದೇವರುಗಳನ್ನು ಪೂಜಿಸಲು ಆರಂಭಿಸಿ ಅನ್ಯರು ಮಾಡುವಂತಹ ಕಾರ್ಯಗಳನ್ನೇ ಮಾಡತೊಡಗಿದರು. ಇಸ್ರೇಲರು ಈಜಿಪ್ಟಿನಿಂದ ತಮ್ಮ ದೇಶಕ್ಕೆ ಬಂದಾಗ ಯೆಹೋವನು ಅಲ್ಲಿಯ ನಿವಾಸಿಗಳನ್ನು ಬಲವಂತವಾಗಿ ಹೊರಗಟ್ಟಿದ್ದನು. ಆದರೆ ಇಸ್ರೇಲರು ತಮ್ಮನ್ನು ಆಳುವುದಕ್ಕಾಗಿ ದೇವರನ್ನು ತೊರೆದು ರಾಜರನ್ನು ಆರಿಸಿಕೊಂಡರು. ಇಸ್ರೇಲರು ತಮ್ಮ ದೇವರಾದ ಯೆಹೋವನ ವಿರುದ್ಧ ರಹಸ್ಯವಾದ ಕೆಟ್ಟಕಾರ್ಯಗಳನ್ನು ಮಾಡಿದರು.

ಇಸ್ರೇಲರು ಚಿಕ್ಕ ಊರಿನಿಂದಿಡಿದು ದೊಡ್ಡ ನಗರದವರೆಗೂ ತಮ್ಮ ಎಲ್ಲಾ ನಗರಗಳಲ್ಲಿ ಉನ್ನತಸ್ಥಳಗಳನ್ನು ನಿರ್ಮಿಸಿದರು. 10 ಇಸ್ರೇಲರು ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಗಿಡಗಳ ಅಡಿಯಲ್ಲೂ ಸ್ಮಾರಕಕಲ್ಲುಗಳನ್ನು ಮತ್ತು ಅಶೇರ್ ವಿಗ್ರಹಕಲ್ಲುಗಳನ್ನು ನಿಲ್ಲಿಸಿದರು. 11 ಇಸ್ರೇಲರು ಪೂಜಾಸ್ಥಳಗಳಲ್ಲೆಲ್ಲಾ ಧೂಪವನ್ನು ಸುಡುತ್ತಿದ್ದರು. ಯೆಹೋವನು ಆ ದೇಶದಿಂದ ಬಲವಂತವಾಗಿ ಹೊರಗಟ್ಟಿದ ಆ ಮೊದಲಿನ ಜನಾಂಗಗಳಂತೆ ಇಸ್ರೇಲರು ಮಾಡಿದರು. ಇಸ್ರೇಲರು ಮಾಡಿದ ದುಷ್ಕೃತ್ಯಗಳಿಂದ ಯೆಹೋವನು ಕೋಪಗೊಂಡನು. 12 ಅವರು ವಿಗ್ರಹಗಳ ಸೇವೆಮಾಡಿದರು. ಯೆಹೋವನು ಇಸ್ರೇಲರಿಗೆ, “ನೀವು ವಿಗ್ರಹಗಳನ್ನು ಪೂಜಿಸಲೇಬಾರದು” ಎಂದು ಹೇಳಿದ್ದನು.

13 ಇಸ್ರೇಲ್ ಮತ್ತು ಯೆಹೂದಗಳನ್ನು ಎಚ್ಚರಿಸಲು ಯೆಹೋವನು ಪ್ರತಿಯೊಬ್ಬ ಪ್ರವಾದಿಯನ್ನು ಮತ್ತು ದೇವದರ್ಶಿಯನ್ನು ಬಳಸಿಕೊಂಡನು. ಯೆಹೋವನು, “ನಿಮ್ಮ ಕೆಟ್ಟಕಾರ್ಯಗಳಿಂದ ದೂರವಾಗಿ! ನನ್ನ ಆಜ್ಞೆಗಳಿಗೆ ಮತ್ತು ಧರ್ಮಶಾಸ್ತ್ರಗಳಿಗೆ ವಿಧೇಯತೆಯಿಂದಿರಿ. ನಿಮ್ಮ ಪೂರ್ವಿಕರಿಗೆ ನಾನು ನೀಡಿದ ಕಟ್ಟಳೆಗಳನ್ನೆಲ್ಲಾ ಅನುಸರಿಸಿ. ನಾನು ನನ್ನ ಸೇವಕರಾದ ಪ್ರವಾದಿಗಳ ಮೂಲಕ ಇವುಗಳನ್ನು ನೀಡಿದ್ದೇನೆ” ಎಂದು ಹೇಳಿದ್ದನು.

14 ಆದರೆ ಅವರು ಯೆಹೋವನ ಮಾತುಗಳಿಗೆ ಕಿವಿಗೊಡಲಿಲ್ಲ; ತಮ್ಮ ದೇವರಾದ ಯೆಹೋವನನ್ನು ನಂಬದೆಹೋದ ತಮ್ಮ ಪೂರ್ವಿಕರನ್ನೇ ಅನುಸರಿಸಿದರು. 15 ಯೆಹೋವನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮತ್ತು ಆತನ ನಿಯಮಗಳನ್ನು ಅವರು ಒಪ್ಪಲಿಲ್ಲ. ಅವರು ಯೆಹೋವನ ಎಚ್ಚರಿಕೆಗೆ ಗಮನವನ್ನೂ ನೀಡಲಿಲ್ಲ. ಅವರು ನಿರರ್ಥಕವಾದ ವಿಗ್ರಹಗಳನ್ನು ಅನುಸರಿಸಿ ನಿಷ್ಪ್ರಯೋಜಕರಾದರು, ಅವರು ತಮ್ಮ ಸುತ್ತಮುತ್ತಲಿನ ಜನಾಂಗಗಳನ್ನು ಅನುಸರಿಸಿದರು. ಯೆಹೋವನು ಇಸ್ರೇಲಿನ ಜನರಿಗೆ ಮಾಡಬಾರದೆಂದು ಎಚ್ಚರಿಸಿ ಹೇಳಿದ್ದನ್ನು ಈ ಜನಾಂಗಗಳು ಮಾಡಿದವು.

16 ಜನರು ತಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸುವುದನ್ನು ನಿಲ್ಲಿಸಿದರು. ಅವರು ಚಿನ್ನದ ಎರಡು ಬಸವನ ಮೂರ್ತಿಗಳನ್ನು ನಿರ್ಮಿಸಿದರು. ಅವರು ಅಶೇರ ಸ್ತಂಭಗಳನ್ನು ನಿರ್ಮಿಸಿದರು. ಅವರು ಪರಲೋಕದ ಎಲ್ಲಾ ನಕ್ಷತ್ರಗಳನ್ನು ಮತ್ತು ಬಾಳ್ ದೇವರನ್ನು ಪೂಜಿಸಿದರು. 17 ಅವರು ತಮ್ಮ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು. ಅವರು ಭವಿಷ್ಯವನ್ನು ತಿಳಿಯಲು ಮಾಂತ್ರಿಕ ವಿದ್ಯೆಯನ್ನು ಮತ್ತು ಕಣಿಹೇಳುವುದನ್ನು ಕಲಿತರು. ಯೆಹೋವನು ಕೆಟ್ಟದ್ದೆಂದು ಹೇಳಿದ್ದಕ್ಕೆ ತಮ್ಮನ್ನು ತಾವು ಮಾರಿಕೊಂಡು ಯೆಹೋವನಿಗೆ ಕೋಪವನ್ನು ಉಂಟುಮಾಡಿದರು. 18 ಆದ್ದರಿಂದ ಯೆಹೋವನು ಇಸ್ರೇಲಿನ ಬಗ್ಗೆ ಉಗ್ರಕೋಪಿಯಾಗಿ, ಅವರನ್ನು ತನ್ನ ದೃಷ್ಟಿಯಿಂದ ದೂರಮಾಡಿದನು. ಯೆಹೂದಕುಲದವರ ಹೊರತಾಗಿ ಇಸ್ರೇಲರಲ್ಲಿ ಯಾರೂ ಉಳಿಯಲಿಲ್ಲ!

ಯೆಹೂದದ ಜನರೂ ಸಹ ತಪ್ಪಿತಸ್ಥರಾದರು

19 ಆದರೆ ಯೆಹೂದದ ಜನರೂ ಸಹ ತಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಲಿಲ್ಲ. ಯೆಹೂದದ ಜನರು ಇಸ್ರೇಲಿನ ಜನರಂತೆಯೇ ಜೀವಿಸುತ್ತಿದ್ದರು.

20 ಯೆಹೋವನು ಇಸ್ರೇಲಿನ ಜನರೆಲ್ಲರನ್ನೂ ತಿರಸ್ಕರಿಸಿದನು. ಅವನು ಅವರಿಗೆ ಅನೇಕ ತೊಂದರೆಗಳನ್ನು ಉಂಟುಮಾಡಿದನು. ಅವರನ್ನು ನಾಶಗೊಳಿಸಲು ನಾಶಕರಿಗೆ ಆತನು ಅವಕಾಶ ನೀಡಿದನು. ಕೊನೆಗೆ, ಆತನು ಅವರನ್ನು ದೂರತಳ್ಳಿ, ತನ್ನ ದೃಷ್ಟಿಯಿಂದ ಅವರನ್ನೂ ದೂರಮಾಡಿದನು. 21 ಯೆಹೋವನು ಇಸ್ರೇಲನ್ನು ದಾವೀದನ ವಂಶಾವಳಿಯಿಂದ ಕಿತ್ತುಹಾಕಿದನು. ಇಸ್ರೇಲರು ನೆಬಾಟನ ಮಗನಾದ ಯಾರೊಬ್ಬಾಮನನ್ನು ತಮ್ಮ ರಾಜನನ್ನಾಗಿಸಿಕೊಂಡರು. ಯಾರೊಬ್ಬಾಮನು ಇಸ್ರೇಲರನ್ನು ಯೆಹೋವನಿಂದ ದೂರಮಾಡಿದನು. ಇಸ್ರೇಲರು ಮಹಾಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದನು. 22 ಆದ್ದರಿಂದ ಇಸ್ರೇಲರು ಯಾರೊಬ್ಬಾಮನು ಮಾಡಿದ ಪಾಪಗಳನ್ನೆಲ್ಲ ಅನುಸರಿಸಿದರು. 23 ಯೆಹೋವನು ಇಸ್ರೇಲನ್ನು ತನ್ನ ದೃಷ್ಟಿಯಿಂದ ದೂರ ತಳ್ಳುವವರೆಗೆ, ಅವರು ಈ ಪಾಪಗಳನ್ನು ಮಾಡುವುದನ್ನು ನಿಲ್ಲಿಸಲೇ ಇಲ್ಲ. ಇದು ಸಂಭವಿಸುತ್ತದೆಂದು ಯೆಹೋವನು ಹೇಳಿದ್ದನು! ಆತನು ಜನರಿಗೆ ಇದನ್ನು ಮುಂಚೆಯೇ ತಿಳಿಸಲು ತನ್ನ ಪ್ರವಾದಿಗಳನ್ನು ಕಳುಹಿಸಿದ್ದನು. ಆದ್ದರಿಂದಲೇ ಇಸ್ರೇಲರನ್ನು ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಹಿಡಿದು ಒಯ್ದರು. ಅವರು ಇಂದಿಗೂ ಅಲ್ಲಿಯೇ ಇದ್ದಾರೆ.

ಸಮಾರ್ಯದ ಜನರ ಆರಂಭ ಕಾಲ

24 ಇಸ್ರೇಲರನ್ನು ಸಮಾರ್ಯದಿಂದ ಅಶ್ಶೂರದ ರಾಜನು ಒಯ್ದನು. ನಂತರ ಅಶ್ಶೂರದ ರಾಜನು ಬಾಬಿಲೋನ್, ಕೂತಾ, ಅವ್ವಾ, ಹಮಾತ್ ಮತ್ತು ಸೆಫರ್ವಯಿಮ್‌ಗಳಿಂದ ಜನರನ್ನು ಕರೆತಂದು ಇಸ್ರೇಲರ ಬದಲಾಗಿ ಅವರನ್ನು ಸಮಾರ್ಯದಲ್ಲಿ ನೆಲೆಗೊಳಿಸಿದನು. ಅವರು ಸಮಾರ್ಯವನ್ನು ಹೊಂದಿಕೊಂಡು ಅವರ ಸುತ್ತಲಿನ ನಗರಗಳಲ್ಲಿ ವಾಸಿಸಿದರು. 25 ಆದರೆ ಅವರು ಯೆಹೋವನನ್ನು ಗೌರವಿಸಲಿಲ್ಲ. ಆದ್ದರಿಂದ ಅವರ ಮೇಲೆ ಆಕ್ರಮಣಮಾಡಲು ಯೆಹೋವನು ಸಿಂಹಗಳನ್ನು ಕಳುಹಿಸಿದನು. ಈ ಸಿಂಹಗಳು ಆ ಜನರಲ್ಲಿ ಕೆಲವರನ್ನು ಕೊಂದುಹಾಕಿದವು. 26 ಅಶ್ಶೂರದ ರಾಜನಿಗೆ ಕೆಲವು ಜನರು, “ನೀನು ಕೆಲವು ಜನರನ್ನು ಒಯ್ದು ಸಮಾರ್ಯ ನಗರಗಳಲ್ಲಿ ಇರಿಸಿದೆ. ಅವರು ಆ ದೇಶದ ದೇವರ ನಿಯಮಗಳ ಬಗ್ಗೆ ತಿಳಿದುಕೊಂಡಿಲ್ಲ. ಆದ್ದರಿಂದ ಅವರನ್ನು ಆಕ್ರಮಣಮಾಡಲು ದೇವರು ಸಿಂಹಗಳನ್ನು ಕಳುಹಿಸಿದನು. ಆ ದೇಶದ ದೇವರ ನಿಯಮಗಳನ್ನು ಅವರು ತಿಳಿದಿಲ್ಲದಿರುವುದರಿಂದ ಅವರನ್ನು ಸಿಂಹಗಳು ಕೊಂದುಹಾಕಿದವು” ಎಂದು ಹೇಳಿದರು.

27 ಆದ್ದರಿಂದ ಅಶ್ಶೂರದ ರಾಜನು, “ನೀವು ಸಮಾರ್ಯದಿಂದ ಕೆಲವು ಯಾಜಕರನ್ನು ಕರೆದೊಯ್ದಿರುವಿರಿ. ನಾನು ಸಮಾರ್ಯದಿಂದ ಸೆರೆಹಿಡಿದು ತಂದಿರುವ ಯಾಜಕರಲ್ಲೊಬ್ಬನನ್ನು ಅಲ್ಲಿಗೆ ಕಳುಹಿಸಿ. ಆ ಯಾಜಕನು ಹೋಗಿ ಅಲ್ಲಿಯೇ ನೆಲೆಸಲಿ. ನಂತರ ಆ ಯಾಜಕನ ಆ ದೇಶದ ದೇವರ ಕಟ್ಟಳೆಗಳನ್ನು ಜನರಿಗೆ ಬೋಧಿಸಲಿ” ಎಂದು ಆಜ್ಞಾಪಿಸಿದನು.

28 ಹೀಗೆ ಅಶ್ಶೂರದವರು ಸಮಾರ್ಯದಿಂದ ಕರೆದೊಯ್ದಿದ್ದ ಯಾಜಕರಲ್ಲೊಬ್ಬನು ಬೇತೇಲಿನಲ್ಲಿ ವಾಸಿಸಲು ಬಂದನು. ಈ ಯಾಜಕನು ಜನರಿಗೆ, ಯೆಹೋವ ಭಕ್ತಿಯನ್ನು ಬೋಧಿಸಿದನು.

29 ಆದರೆ ಅವರೆಲ್ಲರೂ ತಮ್ಮ ಸ್ವಂತ ದೇವರುಗಳನ್ನು ನಿರ್ಮಿಸಿ, ಅವುಗಳನ್ನು ಸಮಾರ್ಯದವರು ನಿರ್ಮಿಸಿದ್ದ ಉನ್ನತಸ್ಥಳಗಳಲ್ಲಿನ ಆಲಯಗಳಲ್ಲಿ ಇರಿಸಿದರು. ಅವರು ಎಲ್ಲೆಲ್ಲಿ ವಾಸಿಸುತ್ತಿದ್ದರೋ ಅಲ್ಲೆಲ್ಲಾ ಹೀಗೆಯೇ ಮಾಡಿದರು. 30 ಬಾಬಿಲೋನಿನ ಜನರು ಸುಳ್ಳುದೇವತೆಯಾದ ಸುಕ್ಕೋತ್ಬೆನೋತನ್ನು ನಿರ್ಮಿಸಿದರು. ಕೂತದ ಜನರು ಸುಳ್ಳುದೇವತೆಯಾದ ನೇರ್ಗಲ್‌ಯನ್ನು ಮಾಡಿದರು. ಹಮಾತಿನ ಜನರು ಸುಳ್ಳುದೇವತೆಯಾದ ಅಷೀಮಾವನ್ನು ಮಾಡಿದರು. 31 ಅವ್ವೀಯರು ಸುಳ್ಳುದೇವತೆಯಾದ ನಿಭಜ್ ಮತ್ತು ತರ್ತಕ್‌ಗಳನ್ನು ಮಾಡಿದರು. ಸೆಫರ್ವಯಿಮಿನವರು ತಮ್ಮ ದೇವರುಗಳಾದ ಅದ್ರಮ್ಮೆಲೆಕ್ ಮತ್ತು ಅನ್ನಮ್ಮೆಲೆಕ್‌ಗಳನ್ನು ಗೌರವಿಸಲು ತಮ್ಮ ಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು.

32 ಆದರೆ ಅವರು ಯೆಹೋವನಲ್ಲಿಯೂ ಭಕ್ತಿಯನ್ನಿಟ್ಟಿದ್ದರು. ಅವರು ಉನ್ನತಸ್ಥಳಗಳಿಗೆ ಯಾಜಕರನ್ನು ಜನರಲ್ಲಿಯೇ ಆಯ್ಕೆ ಮಾಡಿಕೊಂಡರು. ಆ ಯಾಜಕರು ಜನರಿಗಾಗಿ ಉನ್ನತಸ್ಥಳಗಳಲ್ಲಿನ ದೇವಾಲಯಗಳಲ್ಲಿ ಯಜ್ಞವನ್ನು ಅರ್ಪಿಸಿದರು. 33 ಅವರು ಯೆಹೋವನಲ್ಲಿ ಭಕ್ತಿಯಿಟ್ಟಿದ್ದರು, ಆದರೆ ತಮ್ಮ ಸ್ವಂತ ದೇವರುಗಳ ಸೇವೆಯನ್ನೂ ಮಾಡಿದರು. ಅವರು ತಮ್ಮನ್ನು ತೆಗೆದುಕೊಂಡುಬಂದ ದೇಶಗಳಲ್ಲಿ ಮಾಡುತ್ತಿದ್ದಂತೆ ತಮ್ಮ ದೇವರುಗಳ ಸೇವೆಯನ್ನು ಮಾಡಿದರು.

34 ಇಂದಿಗೂ ಸಹ ಅವರು ಪೂರ್ವಕಾಲದಲ್ಲಿ ಮಾಡುತ್ತಿದ್ದಂತೆಯೇ ಜೀವಿಸುತ್ತಿದ್ದಾರೆ. ಅವರಿಗೆ ಯೆಹೋವನಲ್ಲಿ ಭಕ್ತಿಯಿಲ್ಲ. ಅವರು ಇಸ್ರೇಲರ ನಿಯಮಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗುವುದಿಲ್ಲ. ಯೆಹೋವನು ಯಾಕೋಬನ ಸಂತತಿಗೆ ನೀಡಿದ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸುವುದಿಲ್ಲ. 35 ಯೆಹೋವನು ಇಸ್ರೇಲಿನ ಜನರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ, “ನೀವು ಅನ್ಯದೇವತೆಗಳನ್ನು ಪೂಜಿಸಬಾರದು; ನೀವು ಅವುಗಳಿಗೆ ಕೈಮುಗಿಯಬಾರದು; ಅವುಗಳ ಸೇವೆಯನ್ನು ಮಾಡಬಾರದು; ಅವುಗಳಿಗೆ ಯಜ್ಞಗಳನ್ನು ಅರ್ಪಿಸಬಾರದು. 36 ಆದರೆ ನೀವು ಯೆಹೋವನನ್ನು ಅನುಸರಿಸಲೇಬೇಕು. ನಿಮ್ಮನ್ನು ಈಜಿಪ್ಟಿನಿಂದ ಹೊರಗೆತಂದ ದೇವರೇ ನಿಮ್ಮ ಯೆಹೋವ. ಯೆಹೋವನು ನಿಮ್ಮನ್ನು ರಕ್ಷಿಸಲು ತನ್ನ ಮಹಾಶಕ್ತಿಯನ್ನು ಬಳಸಿದನು. ನೀವು ಯೆಹೋವನನ್ನು ಗೌರವಿಸಿ ಆರಾಧಿಸಬೇಕು ಮತ್ತು ಆತನಿಗೆ ಯಜ್ಞಗಳನ್ನು ಅರ್ಪಿಸಬೇಕು. 37 ಆತನು ನಿಮಗೆ ಬರೆಯಿಸಿಕೊಟ್ಟ ನಿಯಮಗಳಿಗೆ, ಶಾಸ್ತ್ರಗಳಿಗೆ, ಉಪದೇಶಗಳಿಗೆ ಮತ್ತು ಆಜ್ಞೆಗಳಿಗೆ ನೀವು ವಿಧೇಯರಾಗಿರಬೇಕು. ನೀವು ಎಲ್ಲಾ ಕಾಲದಲ್ಲೂ ಇವುಗಳಿಗೆ ವಿಧೇಯತೆಯಿಂದಿರಬೇಕು. ನೀವು ಅನ್ಯದೇವತೆಗಳನ್ನು ಪೂಜಿಸಲೇಬಾರದು. 38 ನಾನು ನಿಮ್ಮೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ನೀವು ಮರೆಯಲೇಬಾರದು. ನೀವು ಅನ್ಯದೇವರುಗಳನ್ನು ಪೂಜಿಸಬಾರದು. 39 ನೀವು ನಿಮ್ಮ ದೇವರಾದ ಯೆಹೋವನನ್ನು ಮಾತ್ರ ಆರಾಧಿಸಬೇಕು. ಆಗ ಆತನು ನಿಮ್ಮನ್ನು ನಿಮ್ಮ ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಆಜ್ಞಾಪಿಸಿದನು.

40 ಆದರೆ ಇಸ್ರೇಲರು ಆತನ ಮಾತಿಗೆ ಕಿವಿಗೊಡದೆ ತಮ್ಮ ಮೊದಲಿನ ಕಾರ್ಯಗಳನ್ನೇ ಮುಂದುವರಿಸಿದರು. 41 ಅನ್ಯಜನಾಂಗಗಳು ಯೆಹೋವನಲ್ಲಿ ಭಕ್ತಿಯಿಂದಿದ್ದರೂ ತಮ್ಮ ಸ್ವಂತ ವಿಗ್ರಹಗಳನ್ನು ಪೂಜಿಸುತ್ತಿದ್ದರು. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ತಮ್ಮ ಪೂರ್ವಿಕರು ಮಾಡಿದಂತಹ ಕಾರ್ಯಗಳನ್ನು ಮಾಡುತ್ತಿದ್ದರು. ಅವರು ಇಂದಿಗೂ ಇಂತಹ ಕಾರ್ಯಗಳನ್ನು ಮಾಡುತ್ತಿದ್ದಾರೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International