Beginning
ಯೇಹುವನ್ನು ಅಭಿಷೇಕಿಸುವಂತೆ ಒಬ್ಬ ಯುವಪ್ರವಾದಿಗೆ ಎಲೀಷನು ತಿಳಿಸಿದನು
9 ಪ್ರವಾದಿಯಾದ ಎಲೀಷನು ಪ್ರವಾದಿಗಳ ಗುಂಪಿನಿಂದ ಒಬ್ಬನನ್ನು ಕರೆದು ಅವನಿಗೆ, “ಎಣ್ಣೆಯಿರುವ ಈ ಸಣ್ಣ ಸೀಸೆಯನ್ನು ನಿನ್ನ ಕೈಗಳಲ್ಲಿ ತೆಗೆದುಕೊಂಡು ರಾಮೋತ್‌ಗಿಲ್ಯಾದಿಗೆ ಹೋಗು. 2 ನೀನು ಅಲ್ಲಿಗೆ ಹೋದಾಗ ಯೆಹೋಷಾಫಾಟನ ಮಗನಾದ ಯೇಹುವನ್ನು ಕಂಡುಹಿಡಿ. ಯೆಹೋಷಾಫಾಟನು ನಿಂಷಿಯ ಮಗ. ಅಲ್ಲಿಗೆ ಹೋಗಿ ಅವನನ್ನು ಅವನ ಸೋದರರ ಮಧ್ಯದಿಂದ ಮೇಲಕ್ಕೆಬ್ಬಿಸಿ ಒಂದು ಒಳಕೋಣೆಗೆ ಕರೆದುಕೊಂಡು ಹೋಗು. 3 ಯೇಹುವಿನ ತಲೆಯ ಮೇಲೆ ಈ ಸಣ್ಣ ಸೀಸೆಯಲ್ಲಿರುವ ಎಣ್ಣೆಯನ್ನು ಸುರಿದುಬಿಡು. ನಂತರ ಅವನಿಗೆ, ‘ಯೆಹೋವನು ಹೀಗೆನ್ನುತ್ತಾನೆ: ನಾನು ನಿನ್ನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಿದ್ದೇನೆ!’ ಎಂದು ಹೇಳು. ಆ ಬಳಿಕ ಬಾಗಿಲನ್ನು ತೆಗೆದು ಓಡಿಬಿಡು. ಅಲ್ಲಿ ಇರಬೇಡ!” ಎಂದು ಹೇಳಿದನು.
4 ತರುಣ ಪ್ರವಾದಿಯು ರಾಮೋತ್‌ಗಿಲ್ಯಾದಿಗೆ ಹೋದನು. 5 ಆ ತರುಣನು ಅಲ್ಲಿಗೆ ಬಂದಾಗ ಸೇನಾಧಿಪತಿಗಳು ಕುಳಿತಿರುವುದನ್ನು ನೋಡಿ, “ಸೇನಾಧಿಪತಿಯೇ, ನಿನಗೆ ಒಂದು ಸಂದೇಶವಿದೆ” ಎಂದು ಹೇಳಿದನು.
ಯೇಹುವು, “ನಾವೆಲ್ಲರೂ ಇಲ್ಲಿದ್ದೇವೆ. ನಮ್ಮಲ್ಲಿ ಸಂದೇಶವಿರುವುದು ಯಾರಿಗೆ?” ಎಂದು ಕೇಳಿದನು.
ಆ ತರುಣನು, “ಸಂದೇಶವು ಸೇನಾಧಿಪತಿಯಾದ ನಿನಗೆ” ಎಂದು ಹೇಳಿದನು.
6 ಯೇಹು ಮೇಲೆದ್ದು ಮನೆಯೊಳಕ್ಕೆ ಹೋದನು. ಆಗ ಆ ತರುಣ ಪ್ರವಾದಿಯು ಯೇಹುವಿನ ತಲೆಯ ಮೇಲೆ ಎಣ್ಣೆಯನ್ನು ಸುರಿದು ಯೇಹುವಿಗೆ, “ಇಸ್ರೇಲಿನ ದೇವರಾದ ಯೆಹೋವನು ಹೀಗೆನ್ನುವನು: ‘ಯೆಹೋವನ ಜನರಾದ ಇಸ್ರೇಲರಿಗೆ ನೂತನ ರಾಜನನ್ನಾಗಿ ನಾನು ನಿನ್ನನ್ನು ಅಭಿಷೇಕಿಸುತ್ತಿದ್ದೇನೆ. 7 ನೀನು ನಿನ್ನ ರಾಜನಾದ ಅಹಾಬನ ಕುಟುಂಬವನ್ನು ನಾಶಗೊಳಿಸಲೇಬೇಕು. ನನ್ನ ಸೇವಕರಾದ ಪ್ರವಾದಿಗಳ ಸಾವಿಗೆ ಮತ್ತು ಯೆಹೋವನ ಸೇವಕರನ್ನು ಕೊಲ್ಲಿಸಿದುದಕ್ಕೆ ಈಜೆಬೆಲಳನ್ನು ನಾನು ಈ ರೀತಿ ಶಿಕ್ಷಿಸುತ್ತೇನೆ. 8 ಅಹಾಬನ ಕುಟುಂಬವೆಲ್ಲ ಸಾಯುತ್ತದೆ. ಅಹಾಬನ ಕುಟುಂಬದಲ್ಲಿ ಒಬ್ಬ ಗಂಡಸಾದರೂ ಜೀವಿಸಿರಲು ನಾನು ಬಿಡುವುದಿಲ್ಲ. ಆ ಗಂಡಸು ಇಸ್ರೇಲಿನಲ್ಲಿ ಸ್ವತಂತ್ರವಾಗಿರಲಿ ಇಲ್ಲವೆ ಗುಲಾಮನಾಗಿರಲಿ ಅದು ನನಗೆ ಮುಖ್ಯವಲ್ಲ. 9 ನೆಬಾಟನ ಮಗನಾದ ಯಾರೊಬ್ಬಾಮನ ಕುಟುಂಬದಂತೆ ಮತ್ತು ಅಹೀಯನ ಮಗನಾದ ಬಾಷನ ಕುಟುಂಬದಂತೆ ಅಹಾಬನ ಕುಟುಂಬವನ್ನು ನಾಶಮಾಡುತ್ತೇನೆ. 10 ಇಜ್ರೇಲಿನ ಪ್ರದೇಶದಲ್ಲಿ ಈಜೆಬೆಲಳನ್ನು ನಾಯಿಗಳು ಕಿತ್ತುತಿನ್ನುತ್ತವೆ. ಈಜೆಬೆಲಳನ್ನು ಸಮಾಧಿಮಾಡುವುದಿಲ್ಲ’” ಎಂದು ಹೇಳಿದನು.
ಬಳಿಕ ಯುವ ಪ್ರವಾದಿಯು ಬಾಗಿಲನ್ನು ತೆರೆದು ಓಡಿಹೋದನು.
ಯೇಹುವು ರಾಜನೆಂದು ಸೇವಕರು ಘೋಷಿಸುವರು
11 ಯೇಹುವು ತನ್ನ ರಾಜನ ಅಧಿಕಾರಿಗಳ ಬಳಿಗೆ ಹಿಂದಿರುಗಿದನು. ಒಬ್ಬ ಅಧಿಕಾರಿಯು ಯೇಹುವಿಗೆ, “ಶುಭವಾರ್ತೆಯೇ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ?” ಎಂದು ಕೇಳಿದರು.
ಯೇಹುವು ಸೇವಕರಿಗೆ, “ನೀವು ಆ ಮನುಷ್ಯನನ್ನು ಬಲ್ಲವರಾಗಿದ್ದೀರಿ; ಅವನ ಹುಚ್ಚಾಟದ ಮಾತುಗಳೂ ನಿಮಗೆ ತಿಳಿದಿವೆ” ಎಂದು ಉತ್ತರಿಸಿದನು.
12 ಆ ಅಧಿಕಾರಿಗಳು, “ಇಲ್ಲ! ನಮಗೆ ನಿಜವನ್ನು ಹೇಳು. ಅವನು ಹೇಳಿದುದೇನು?” ಎಂದು ಕೇಳಿದರು. ಆ ತರುಣ ಪ್ರವಾದಿಯು ತಿಳಿಸಿದ್ದ ಸಂಗತಿಗಳನ್ನು ಯೇಹುವು ಆ ಅಧಿಕಾರಿಗಳಿಗೆ ಹೇಳಿದನು. ಯೇಹುವು ಅವರಿಗೆ, “ಅವನು ಹೇಳಿದ್ದೇನೆಂದರೆ, ಯೆಹೋವನು ಹೀಗೆನ್ನುವನು: ಇಸ್ರೇಲಿನ ನೂತನ ರಾಜನನ್ನಾಗಿ ನಿನ್ನನ್ನು ನಾನು ಅಭಿಷೇಕಿಸಿದ್ದೇನೆ” ಎಂದು ಹೇಳಿದನು.
13 ಆಗ ಪ್ರತಿಯೊಬ್ಬ ಅಧಿಕಾರಿಯೂ ತಮ್ಮತಮ್ಮ ನಿಲುವಂಗಿಗಳನ್ನು ತೆಗೆದು, ಅವುಗಳನ್ನು ಮೆಟ್ಟಿಲುಗಳ ಮೇಲೆ, ಯೇಹುವಿನ ಮುಂದೆ ಇಟ್ಟರು. ಅನಂತರ ಅವರು ತುತ್ತೂರಿಯನ್ನೂದಿ, “ಯೇಹು ರಾಜನು!” ಎಂದು ಘೋಷಿಸಿದರು.
ಯೇಹು ಇಜ್ರೇಲಿಗೆ ಹೋಗುವನು
14 ಯೆಹೋಷಾಫಾಟನ ಮಗನೂ ನಿಂಷಿಯ ಮೊಮ್ಮಗನೂ ಆದ ಯೇಹುವು ಯೋರಾಮನ ವಿರುದ್ಧ ಒಳಸಂಚುಮಾಡಿದನು.
ಆ ಸಮಯದಲ್ಲಿ ರಾಮೋತ್‌ಗಿಲ್ಯಾದನ್ನು ಅರಾಮ್ಯರ ರಾಜನಾದ ಹಜಾಯೇಲನಿಂದ ರಕ್ಷಿಸಲು, ಯೋರಾಮನೂ ಇಸ್ರೇಲರೂ ಪ್ರಯತ್ನಿಸಿದ್ದರು. 15 ಆದರೆ ರಾಜನಾದ ಯೋರಾಮನಿಗೆ ಅರಾಮ್ಯರು ಗಾಯಗೊಳಿಸಿದ್ದರಿಂದ ಅವನು ವಾಸಿಮಾಡಿಕೊಳ್ಳಲು ಇಜ್ರೇಲಿಗೆ ಹಿಂದಿರುಗಿ ಬಂದಿದ್ದನು. (ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯೋರಾಮನು ಹೋರಾಟ ಮಾಡಿದಾಗ ಅರಾಮ್ಯರು ಅವನನ್ನು ಗಾಯಗೊಳಿಸಿದ್ದರು.)
ಯೇಹು ಅಧಿಕಾರಿಗಳಿಗೆ, “ನಾನು ನೂತನ ರಾಜನೆಂದು ನೀವು ಒಪ್ಪಿಕೊಂಡರೆ, ಈ ಸುದ್ದಿಯನ್ನು ಇಜ್ರೇಲಿನಲ್ಲಿ ಹೇಳಲು ಯಾರೂ ನಗರದಿಂದ ತಪ್ಪಿಸಿಕೊಂಡು ಹೋಗಲು ಅವಕಾಶ ಕೊಡದಿರಿ” ಎಂದು ಹೇಳಿದನು.
16 ಯೋರಾಮನು ಇಜ್ರೇಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು. ಯೇಹು ರಥದಲ್ಲಿ ಇಜ್ರೇಲಿಗೆ ಹೋದನು. ಯೆಹೂದದ ಅರಸನಾದ ಅಹಜ್ಯನೂ ಯೋರಾಮನನ್ನು ನೋಡಲು ಇಜ್ರೇಲಿಗೆ ಬಂದಿದ್ದನು.
17 ಇಜ್ರೇಲಿನ ಬುರುಜಿನಲ್ಲಿ ಒಬ್ಬ ಕಾವಲುಗಾರನು ನಿಂತಿದ್ದನು. ಅವನು ಯೇಹುವಿನ ದೊಡ್ಡಗುಂಪು ಬರುತ್ತಿರುವುದನ್ನು ನೋಡಿದನು. ಅವನು, “ನಾನು ಜನರ ದೊಡ್ಡ ಗುಂಪನ್ನು ನೋಡುತ್ತಿರುವೆನು” ಎಂದು ಹೇಳಿದನು.
ಯೋರಾಮನು, “ಅವರನ್ನು ಸಂಧಿಸಲು ಯಾರನ್ನಾದರೂ ಕುದುರೆಯ ಮೇಲೆ ಕಳುಹಿಸಿ, ‘ಶುಭವಾರ್ತೆಯುಂಟೋ?’ ಎಂದು ಅವನು ಅವರನ್ನು ಕೇಳಲಿ” ಎಂದು ಹೇಳಿದನು.
18 ಯೇಹುವನ್ನು ಸಂಧಿಸಲು ಒಬ್ಬನು ಕುದುರೆಯ ಮೇಲೆ ಹೋಗಿ, “ರಾಜನಾದ ಯೋರಾಮನು ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಾನೆ” ಅಂದನು.
ಯೇಹುವು, “ನಮ್ಮ ಶುಭವಾರ್ತೆಯಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
ಕಾವಲುಗಾರನು ಯೋರಾಮನಿಗೆ, “ಆ ಗುಂಪಿನ ಬಳಿಗೆ ಹೋದ ಸಂದೇಶಕನು, ಈವರೆವಿಗೂ ಹಿಂದಿರುಗಿ ಬರಲೇ ಇಲ್ಲ” ಎಂದು ಹೇಳಿದನು.
19 ಆಗ ಯೋರಾಮನು ಎರಡನೆಯವನನ್ನು ಕುದುರೆಯ ಮೇಲೆ ಕಳುಹಿಸಿದನು. ಅವನು ಯೇಹುವಿನ ಗುಂಪಿನ ಬಳಿಗೆ ಬಂದು, “ರಾಜನಾದ ಯೋರಾಮನು, ‘ಶುಭವಾರ್ತೆಯುಂಟೋ?’ ಎಂದು ಕೇಳುತ್ತಿರುವನು” ಎಂದು ಹೇಳಿದನು.
ಯೇಹುವು, “ನಮ್ಮ ಶುಭವಾರ್ತೆಯಿಂದ ನೀನು ಮಾಡುವುದೇನಿದೆ! ಬಾ, ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
20 ಕಾವಲುಗಾರನು ಯೋರಾಮನಿಗೆ, “ಆ ಗುಂಪಿನ ಬಳಿಗೆ ಹೋದ ಎರಡನೆಯವನೂ ಈವರೆವಿಗೂ ಹಿಂದುರುಗಿ ಬರಲೇ ಇಲ್ಲ. ರಥವನ್ನು ಓಡಿಸುತ್ತಿರುವವನು ಹುಚ್ಚನಂತೆ ರಥವನ್ನು ಓಡಿಸುತ್ತಿರುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವಿರಬೇಕು!” ಎಂದು ಹೇಳಿದನು.
21 ಯೋರಾಮನು, “ನನ್ನ ರಥವನ್ನು ಸಿದ್ಧಗೊಳಿಸು!” ಎಂದು ಹೇಳಿದನು.
ಯೋರಾಮನ ಸೇವಕನು ರಥವನ್ನು ಸಿದ್ಧಗೊಳಿಸಿದನು. ಇಸ್ರೇಲಿನ ರಾಜನಾದ ಯೋರಾಮನು ಮತ್ತು ಯೆಹೂದದ ರಾಜನಾದ ಅಹಜ್ಯನು ಯೇಹುವನ್ನು ಭೇಟಿಮಾಡಲು ತಮ್ಮ ರಥಗಳಲ್ಲಿ ಹೋದರು. ಅವರು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಯೇಹುವನ್ನು ಸಂಧಿಸಿದರು.
22 ಯೋರಾಮನು ಯೇಹುವನ್ನು, “ಶುಭವಾರ್ತೆಯುಂಟೋ?” ಎಂದು ಕೇಳಿದನು.
ಯೇಹುವು, “ನಿನ್ನ ತಾಯಿಯಾದ ಈಜೆಬೆಲಳು ಅನೇಕ ಅನೈತಿಕ ಮತ್ತು ಮಾಂತ್ರಿಕ ಕಾರ್ಯಗಳನ್ನು ಮಾಡುತ್ತಿರುವ ತನಕ ಶುಭವಿರುವುದಿಲ್ಲ” ಎಂದು ಉತ್ತರಿಸಿದನು.
23 ಯೋರಾಮನು ಓಡಿಹೋಗಲು ತನ್ನ ಕುದುರೆಗಳನ್ನು ತಿರುಗಿಸಿಕೊಂಡನು. ಯೋರಾಮನು ಅಹಜ್ಯನಿಗೆ, “ಅಹಜ್ಯನೇ, ಇದು ಒಂದು ತಂತ್ರ!” ಎಂದು ಹೇಳಿದನು.
24 ಆದರೆ ಯೇಹು ತನ್ನ ಬಿಲ್ಲನ್ನು ಸೆಳೆದು, ಶಕ್ತಿಯನ್ನೆಲ್ಲ ಒಗ್ಗೂಡಿಸಿ ಯೋರಾಮನ ಬೆನ್ನಿಗೆ ಬಾಣದಿಂದ ಹೊಡೆದನು. ಬಾಣವು ಯೋರಾಮನ ಹೃದಯವನ್ನು ಛೇದಿಸಿತು. ಯೋರಾಮನು ತನ್ನ ರಥದಲ್ಲಿಯೇ ಸತ್ತುಬಿದ್ದನು.
25 ಯೇಹು ತನ್ನ ರಥದ ಸಾರಥಿಯಾದ ಬಿದ್ಕರನಿಗೆ, “ಯೋರಾಮನ ದೇಹವನ್ನು ಎತ್ತಿ ಇಜ್ರೇಲಿಯನಾದ ನಾಬೋತನ ಹೊಲದಲ್ಲಿ ಎಸೆದುಬಿಡು. ನಾನು ಮತ್ತು ನೀನು ಯೋರಾಮನ ತಂದೆಯಾದ ಅಹಾಬನ ಸಂಗಡ ಹೋಗುತ್ತಿರುವಾಗ 26 ಯೆಹೋವನು, ‘ನೀನು ನಿನ್ನೆ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ಯಾವ ಹೊಲದಲ್ಲಿ ಸುರಿಸಿದೆಯೋ ಅದೇ ಹೊಲದಲ್ಲಿ ನಿನಗೆ ಮುಯ್ಯಿ ತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುವುದಲ್ಲವೇ? ಯೆಹೋವನ ಮಾತು ನೆರವೇರುವಂತೆ ಯೋರಾಮನ ದೇಹವನ್ನು ತೆಗೆದು ಅದೇ ಹೊಲದಲ್ಲಿ ಎಸೆದುಬಿಡು!” ಎಂದು ಹೇಳಿದನು.
27 ಯೆಹೂದದ ರಾಜನಾದ ಅಹಜ್ಯನು ಇದನ್ನು ಕಂಡು ತೋಟದ ಮನೆಯ ಮೂಲಕ ಓಡಿಹೋದನು. ಯೇಹು ಅವನನ್ನು ಹಿಂಬಾಲಿಸಿಕೊಂಡು ಹೋಗಿ, “ಅಹಜ್ಯನನ್ನೂ ಅವನ ರಥದಲ್ಲಿಯೇ ಹೊಡೆಯಿರಿ!” ಎಂದು ಹೇಳಿದನು.
ಯೇಹುವಿನ ಜನರು ಅಹಜ್ಯನನ್ನು ಇಬ್ಲೆಯಾಮಿನ ಬಳಿಯಿರುವ ಗೂರ್‌ನಲ್ಲಿ ಹೊಡೆದುಹಾಕಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋದರೂ ಅಲ್ಲಿ ಸತ್ತುಹೋದನು. 28 ಅಹಜ್ಯನ ಸೇವಕರು ಅವನ ದೇಹವನ್ನು ಜೆರುಸಲೇಮಿಗೆ ತಂದರು. ಅವನನ್ನು ದಾವೀದ ನಗರದಲ್ಲಿ ಅವನ ಪೂರ್ವಿಕರ ಬಳಿಯಲ್ಲಿ ಸಮಾಧಿ ಮಾಡಿದರು.
29 ಯೋರಾಮನು ಇಸ್ರೇಲಿನ ರಾಜನಾಗಿದ್ದ ಹನ್ನೊಂದನೆಯ ವರ್ಷದಲ್ಲಿ ಅಹಜ್ಯನು ಯೆಹೂದದ ರಾಜನಾದನು.
ಈಜೆಬೆಲಳ ಭೀಕರ ಸಾವು
30 ಯೇಹುವು ಇಜ್ರೇಲಿಗೆ ಹೋದನು. ಈಜೆಬೆಲಳಿಗೆ ಈ ಸುದ್ದಿಯು ತಿಳಿಯಿತು. ಅವಳು ತಲೆಕೂದಲನ್ನು ಸುಂದರವಾಗಿ ಕಟ್ಟಿಕೊಂಡು, ಅಲಂಕರಿಸಿಕೊಂಡಳು. ನಂತರ ಅವಳು ಹೊರಗೆ ನೋಡುತ್ತಾ ಕಿಟಕಿಯ ಹತ್ತಿರ ನಿಂತುಕೊಂಡಳು. 31 ಯೇಹು ನಗರದೊಳಕ್ಕೆ ಪ್ರವೇಶಿಸಿದನು. ಈಜೆಬೆಲಳು, “ಜಿಮ್ರಿ, ಕ್ಷೇಮವೇ! ಅವನಂತೆಯೇ ನೀನೂ ನಿನ್ನ ಒಡೆಯನನ್ನು ಕೊಂದುಹಾಕಿದೆ!” ಎಂದಳು.
32 ಯೇಹು ಕಿಟಕಿಯ ಕಡೆ ಮೇಲೆ ನೋಡಿದನು. ಅವನು, “ನನ್ನ ಪಕ್ಷದಲ್ಲಿರುವವರು ಯಾರು? ಯಾರಿದ್ದೀರಿ?” ಎಂದನು.
ಆ ಕಿಟಕಿಯಿಂದ ಇಬ್ಬರು ಮೂವರು ಕಂಚುಕಿಗಳು ಯೇಹುವಿನತ್ತ ನೋಡಿದರು. 33 ಯೇಹುವು “ಈಜೆಬೆಲಳನ್ನು ಹೊರಕ್ಕೆ ಎಸೆಯಿರಿ!” ಎಂದು ಅವರಿಗೆ ಹೇಳಿದನು.
ಆಗ ಕಂಚುಕಿಗಳು ಈಜೆಬೆಲಳನ್ನು ಕೆಳಕ್ಕೆ ಎಸೆದರು. ಈಜೆಬೆಲಳ ರಕ್ತವು ಗೋಡೆಗಳ ಮೇಲೆ ಮತ್ತು ಕುದುರೆಗಳ ಮೇಲೆ ಚಿಮ್ಮಿತು. ಕುದುರೆಗಳು ಈಜೆಬೆಲಳ ದೇಹದ ಮೇಲೆ ತುಳಿದಾಡಿದವು. 34 ಯೇಹುವು ಮನೆಯೊಳಕ್ಕೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡನು. ನಂತರ ಅವನು, “ಈಗ ಶಾಪಗ್ರಸ್ತಳಾದ ಆ ಸ್ತ್ರೀಯನ್ನು ನೋಡಿ. ಅವಳು ರಾಜನ ಮಗಳಾದ್ದರಿಂದ ಸಮಾಧಿ ಮಾಡಿ” ಎಂದು ಹೇಳಿದನು.
35 ಈಜೆಬೆಲಳನ್ನು ಸಮಾಧಿಮಾಡಲು ಜನರು ಹೋದರು. ಆದರೆ ಅವರಿಗೆ ಅವಳ ದೇಹವು ಸಿಗಲಿಲ್ಲ. ಅವರಿಗೆ ಅವಳ ತಲೆಬುರುಡೆ, ಕೈಕಾಲುಗಳು ಮಾತ್ರ ಸಿಕ್ಕಿದವು. 36 ಜನರು ಹಿಂದಿರುಗಿ ಬಂದು ಯೇಹುವಿಗೆ ಅದನ್ನು ಹೇಳಿದರು. ಯೇಹುವು, “ಯೆಹೋವನು ತನ್ನ ಸೇವಕನೂ ತಿಷ್ಬೀಯನೂ ಆದ ಎಲೀಯನಿಗೆ ಈ ರೀತಿ ಸಂದೇಶ ನೀಡಲು ಹೇಳಿದ್ದನು. ಎಲೀಯನು ಹೇಳಿದ್ದೇನೆಂದರೆ: ಇಜ್ರೇಲ್ ಪ್ರದೇಶದಲ್ಲಿ ಈಜೆಬೆಲಳ ದೇಹವನ್ನು ನಾಯಿಗಳು ತಿನ್ನುತ್ತವೆ. 37 ಇಜ್ರೇಲ್ ಪ್ರದೇಶದ ಹೊಲದಲ್ಲಿ ಈಜೆಬೆಲಳ ದೇಹವು ಸಗಣಿಯಂತಿರುತ್ತದೆ. ಈಜೆಬೆಲಳ ದೇಹವನ್ನು ಜನರು ಗುರುತಿಸಲಾಗುವುದಿಲ್ಲ!” ಎಂದು ಹೇಳಿದ್ದನು.
ಸಮಾರ್ಯದ ನಾಯಕರಿಗೆ ಯೇಹು ಬರೆಯುವನು
10 ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಯೇಹುವು ಇಜ್ರೇಲಿನ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಪತ್ರಗಳನ್ನು ಬರೆದು ಸಮಾರ್ಯಕ್ಕೆ ಕಳುಹಿಸಿದನು. ಅಹಾಬನ ಮಕ್ಕಳನ್ನು ಬೆಳೆಸಿದ ಪಾಲಕರಿಗೂ ಅವನು ಪತ್ರಗಳನ್ನು ಕಳುಹಿಸಿದನು. ಯೇಹುವು ಪತ್ರಗಳಲ್ಲಿ, 2-3 “ನಿಮ್ಮ ಕೈಗೆ ಈ ಪತ್ರವು ತಲುಪಿದ ತಕ್ಷಣ, ನಿಮ್ಮ ಒಡೆಯನ ಕುಟುಂಬದಲ್ಲಿ ಬಹಳ ಉತ್ತಮನಾದ ಮತ್ತು ಸಮರ್ಥನಾದ ಒಬ್ಬ ವ್ಯಕ್ತಿಯನ್ನು ಆರಿಸಿರಿ. ನಿಮ್ಮ ಬಳಿ ರಥಗಳೂ ಕುದುರೆಗಳೂ ಇವೆ. ನೀವು ಬಲಾಢ್ಯವಾದ ನಗರದಲ್ಲಿ ವಾಸಿಸುತ್ತಿರುವಿರಿ. ನಿಮ್ಮ ಬಳಿ ಆಯುಧಗಳಿವೆ. ನೀವು ಆರಿಸಿದವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕುಳ್ಳಿರಿಸಿರಿ. ನಂತರ ನಿಮ್ಮ ಯಜಮಾನನ ಕುಟುಂಬಕ್ಕಾಗಿ ಹೋರಾಡಿ” ಎಂದು ಬರೆದಿದ್ದನು.
4 ಆದರೆ ಇಜ್ರೇಲಿನ ಅಧಿಕಾರಿಗಳು ಮತ್ತು ನಾಯಕರು ಬಹಳ ಭಯಗೊಂಡಿದ್ದರು. ಅವರು, “ಇಬ್ಬರು ರಾಜರು (ಯೋರಾವ್ ಮತ್ತು ಅಹಜ್ಯ) ಯೇಹುವನ್ನು ತಡೆಯಲಾಗಲಿಲ್ಲ. ನಾವು ಅವನನ್ನು ತಡೆಯಲಾಗುವುದಿಲ್ಲ” ಎಂದು ಹೇಳಿದರು.
5 ಅಹಾಬನ ಮನೆಯನ್ನು ನೋಡಿಕೊಳ್ಳುವ ಗೃಹಾಧಿಕಾರಿ, ನಗರವನ್ನು ನಿಯಂತ್ರಿಸುವ ನಗರಾಧಿಕಾರಿ, ಹಿರಿಯರು ಮತ್ತು ಅಹಾಬನ ಮಕ್ಕಳ ಪಾಲಕರಾದ ಜನರೆಲ್ಲರೂ ಯೇಹುವಿಗೆ ಈ ಸಂದೇಶವನ್ನು ಕಳುಹಿಸಿದರು: “ನಾವು ನಿನ್ನ ಸೇವಕರು. ನೀನು ನಮಗೆ ಹೇಳುವುದನ್ನೆಲ್ಲಾ ನಾವು ಮಾಡುತ್ತೇವೆ. ನಾವು ಯಾರನ್ನೂ ರಾಜನನ್ನಾಗಿ ಮಾಡುವುದಿಲ್ಲ. ನಿನಗೆ ಒಳ್ಳೆಯದೆಂದು ತೋಚಿದ್ದನ್ನು ಮಾಡು.”
ಸಮಾರ್ಯದ ನಾಯಕರು ಅಹಾಬನ ಮಕ್ಕಳನ್ನು ಕೊಂದುಹಾಕುವರು
6 ನಂತರ ಯೇಹು ಈ ನಾಯಕರಿಗೆ ಎರಡನೆಯ ಪತ್ರವನ್ನು ಬರೆದನು. ಯೇಹುವು, “ನೀವು ನನಗೆ ಬೆಂಬಲ ಕೊಡುವುದಾದರೆ ಮತ್ತು ವಿಧೇಯರಾಗಿರುವುದಾದರೆ ಅಹಾಬನ ಮಕ್ಕಳ ತಲೆಗಳನ್ನು ಕತ್ತರಿಸಿ ಹಾಕಿ. ನಾಳೆ ಇದೇ ಸಮಯಕ್ಕೆ ಇಜ್ರೇಲಿಗೆ ನನ್ನ ಬಳಿಗೆ ಅವುಗಳನ್ನು ತನ್ನಿ.”
ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳಿದ್ದರು. ಅವರು ತಮ್ಮ ಪಾಲಕರಾದ ನಗರದ ನಾಯಕರ ಬಳಿಯಲ್ಲಿದ್ದರು. 7 ನಗರದ ನಾಯಕರಿಗೆ ಈ ಪತ್ರವು ಬಂದು ತಲುಪಿದಾಗ, ಅವರು ರಾಜನ ಎಪ್ಪತ್ತುಮಂದಿ ಮಕ್ಕಳನ್ನು ಕರೆದುಕೊಂಡು ಹೋಗಿ ಕೊಂದುಹಾಕಿದರು. ನಂತರ ಆ ನಾಯಕರು ರಾಜನ ಮಕ್ಕಳ ತಲೆಗಳನ್ನು ಬುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು. 8 ಸಂದೇಶಕನೊಬ್ಬನು ಯೇಹುವಿನ ಬಳಿಗೆ ಬಂದು ಅವನಿಗೆ, “ಅವರು ರಾಜನ ಮಕ್ಕಳ ತಲೆಗಳನ್ನು ತಂದಿದ್ದಾರೆ!” ಎಂದು ಹೇಳಿದನು.
ಆಗ ಯೇಹು, “ನಗರದ ಬಾಗಿಲಿನ ಬಳಿ ನಾಳೆ ಮುಂಜಾನೆಯ ತನಕ ಆ ತಲೆಗಳನ್ನು ಎರಡು ರಾಶಿಗಳನ್ನಾಗಿ ಹಾಕಿ” ಎಂದು ಹೇಳಿದನು.
9 ಮುಂಜಾನೆ, ಯೇಹು ಹೊರಗೆ ಬಂದು ಜನರ ಮುಂದೆ ನಿಂತು ಅವರಿಗೆ, “ನೀವು ನಿರಪರಾಧಿಗಳು. ನಾನಾದರೋ ನನ್ನ ಒಡೆಯನ ಮೇಲೆ ಒಳಸಂಚು ಮಾಡಿದವನು. ನಾನು ಅವನನ್ನು ಕೊಂದೆನು. ಆದರೆ ಅಹಾಬನ ಮಕ್ಕಳನ್ನೆಲ್ಲ ಕೊಂದವರು ಯಾರು? ನೀವು ಅವರನ್ನು ಕೊಂದಿದ್ದೀರಿ! 10 ಯೆಹೋವನು ಹೇಳಿದ್ದೆಲ್ಲವೂ ಸಂಭವಿಸುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ಅಹಾಬನ ಕುಟುಂಬಕ್ಕೆ ಇವುಗಳು ಸಂಭವಿಸುತ್ತವೆಯೆಂದು ಯೆಹೋವನು ಎಲೀಯನ ಮೂಲಕ ತಿಳಿಸಿದ್ದನು. ಅಂತೆಯೇ ಆತನು ಮಾಡಿದ್ದಾನೆ” ಅಂದನು.
11 ಇಜ್ರೇಲಿನಲ್ಲಿ ವಾಸಿಸುತ್ತಿದ್ದ ಅಹಾಬನ ಕುಟುಂಬದ ಉಳಿದವರನ್ನೆಲ್ಲ ಯೇಹು ಕೊಂದುಹಾಕಿದನು. ಅಹಾಬನ ಆಪ್ತಮಿತ್ರರು, ಯಾಜಕರು ಮತ್ತು ಪ್ರಮುಖರನ್ನೆಲ್ಲ ಯೇಹುವು ಕೊಂದುಹಾಕಿದನು. ಅಹಾಬನ ಜನರಲ್ಲಿ ಯಾರನ್ನೂ ಉಳಿಸಲಿಲ್ಲ.
ಅಹಜ್ಯನ ಬಂಧುಗಳನ್ನು ಯೇಹು ಕೊಂದುಹಾಕುವನು
12 ಯೇಹು ಇಜ್ರೇಲನ್ನು ಬಿಟ್ಟು ಸಮಾರ್ಯಕ್ಕೆ ಹೋದನು. ಯೇಹುವು ದಾರಿಯಲ್ಲಿ ಕುರುಬರ ಪಾಳ್ಯವೆಂದು ಕರೆಯುವ ಸ್ಥಳದಲ್ಲಿ ತಂಗಿದನು. ಅವನು ಬೆತ್‌ಎಕೇಡ್‌ನ ರಸ್ತೆಯಲ್ಲಿ, ಕುರುಬರು ಕುರಿಗಳಿಂದ ತುಪ್ಪಟವನ್ನು ಕತ್ತರಿಸುವ ಒಂದು ಮನೆಗೆ ಹೋದನು. 13 ಯೇಹು ಯೆಹೂದದ ರಾಜನಾದ ಅಹಜ್ಯನ ಬಂಧುಗಳನ್ನು ಭೇಟಿಮಾಡಿ ಅವರಿಗೆ, “ನೀವು ಯಾರು?” ಎಂದು ಕೇಳಿದನು.
ಅವರು, “ನಾವು ಯೆಹೂದದ ರಾಜನಾದ ಅಹಜ್ಯನ ಬಂಧುಗಳು. ನಾವು ರಾಜನ ಮಕ್ಕಳನ್ನು ಮತ್ತು ರಾಜಮಾತೆಯ ಮಕ್ಕಳನ್ನು ನೋಡಲು ಬಂದಿದ್ದೇವೆ” ಎಂದರು.
14 ಆಗ ಯೇಹುವು ತನ್ನ ಜನರಿಗೆ, “ಅವರನ್ನು ಜೀವಸಹಿತ ಹಿಡಿದು ತನ್ನಿ!” ಎಂದು ಹೇಳಿದನು.
ಯೇಹುವಿನ ಜನರು ಅಹಜ್ಯನ ಬಂಧುಗಳನ್ನು ಜೀವಸಹಿತ ಹಿಡಿದು ತಂದರು. ಅಲ್ಲಿ ನಲವತ್ತೆರಡು ಮಂದಿ ಜನರಿದ್ದರು. ಯೇಹು ಬೆತ್‌ಎಕೇಡ್‌ನ ಬಾವಿಯ ಹತ್ತಿರ ಅವರನ್ನು ಕೊಂದುಹಾಕಿದನು. ಯೇಹುವು ಯಾರನ್ನೂ ಜೀವಸಹಿತ ಉಳಿಸಲಿಲ್ಲ.
ಯೇಹು ಯೆಹೋನಾದಾಬನನ್ನು ಸಂಧಿಸಿದನು
15 ಯೇಹುವು ಅಲ್ಲಿಂದ ಹೋದ ಮೇಲೆ, ರೇಕಾಬನ ಮಗನಾದ ಯೆಹೋನಾದಾಬನನ್ನು ಸಂಧಿಸಿದನು. ಯೆಹೋನಾದಾಬನು ಯೇಹುವನ್ನು ಸಂಧಿಸಲು ಬರುತ್ತಿದ್ದನು. ಯೇಹು ಯೆಹೋನಾದಾಬನನ್ನು ಅಭಿನಂದಿಸಿ ಅವನಿಗೆ, “ನಾನು ನಿನಗೆ ನಂಬಿಗಸ್ತನಾಗಿರುವಂತೆ ನೀನು ನನಗೆ ನಂಬಿಗಸ್ಥನಾದ ಸ್ನೇಹಿತನಾಗಿರುವಿಯಾ?” ಎಂದು ಕೇಳಿದನು.
ಯೆಹೋನಾದಾಬನು, “ಹೌದು, ನಾನು ನಿನಗೆ ನಂಬಿಗಸ್ಥನಾದ ಸ್ನೇಹಿತನು” ಎಂದು ಉತ್ತರಿಸಿದನು.
ಯೇಹು, “ನೀನು ನಂಬಿಗಸ್ಥನಾದರೆ, ನಿನ್ನ ಕೈಯನ್ನು ಕೊಡು” ಎಂದನು.
ನಂತರ ಯೇಹು ಹೊರಬಂದು, ಯೆಹೋನಾದಾಬನನ್ನು ರಥದೊಳಕ್ಕೆ ಎಳೆದುಕೊಂಡನು.
16 ಯೇಹು, “ನನ್ನ ಸಂಗಡ ಬಾ. ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೀನು ನೋಡುವಿಯಂತೆ” ಎಂದು ಹೇಳಿದನು.
ಯೇಹುವಿನ ರಥದಲ್ಲಿ ಯೆಹೋನಾದಾಬನೂ ಹೋದನು. 17 ಯೇಹು ಸಮಾರ್ಯಕ್ಕೆ ಬಂದು, ಅಹಾಬನ ಕುಟುಂಬದಲ್ಲಿ ಜೀವಸಹಿತರಾಗಿ ಸಮಾರ್ಯದಲ್ಲಿ ಉಳಿದಿದ್ದವರನ್ನೆಲ್ಲಾ ಕೊಂದುಹಾಕಿದನು. ಯೆಹೋವನು ಎಲೀಯನಿಗೆ ಹೇಳಿದ್ದಂತೆಯೇ ಯೇಹು ಮಾಡಿದನು.
ಯೇಹು ಬಾಳನ ಭಕ್ತರನ್ನು ಕರೆದನು
18 ಯೇಹು ಜನರನ್ನೆಲ್ಲ ಒಟ್ಟಾಗಿ ಸೇರಿಸಿ, “ಅಹಾಬನು ಬಾಳನನ್ನು ಸ್ವಲ್ಪ ಮಾತ್ರ ಸೇವಿಸಿದನು. ಆದರೆ ಯೇಹು ಬಾಳನನ್ನು ಅಧಿಕವಾಗಿ ಸೇವಿಸುತ್ತಾನೆ! 19 ಬಾಳನ ಎಲ್ಲಾ ಯಾಜಕರನ್ನೂ ಪ್ರವಾದಿಗಳನ್ನೂ ಕರೆಯಿರಿ. ಬಾಳನನ್ನು ಆರಾಧಿಸುವ ಜನರೆಲ್ಲರನ್ನೂ ಒಟ್ಟಾಗಿ ಕರೆಯಿರಿ. ಯಾರೂ ಈ ಸಭೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ. ನಾನು ಬಾಳನಿಗೆ ಮಹಾಯಜ್ಞವನ್ನು ಅರ್ಪಿಸಬೇಕೆಂದಿದ್ದೇನೆ. ಈ ಸಭೆಗೆ ಯಾರಾದರೂ ಬಾರದೆ ಇದ್ದರೆ ಅವರನ್ನು ನಾನು ಕೊಂದುಹಾಕುತ್ತೇನೆ!” ಎಂದು ಹೇಳಿದನು.
ಆದರೆ ಅದು ಯೇಹುವಿನ ತಂತ್ರವಾಗಿತ್ತು. ಬಾಳನ ಭಕ್ತರನ್ನು ನಾಶಪಡಿಸಬೇಕೆಂಬುದೇ ಅವನ ಅಪೇಕ್ಷೆಯಾಗಿತ್ತು. 20 ಯೇಹುವು, “ಬಾಳನಿಗೆ ಒಂದು ಪವಿತ್ರ ಸಭೆಯನ್ನು ಸೇರಿಸಿರಿ” ಎಂದು ಹೇಳಿದನು. 21 ಬಳಿಕ ಅವನು ಇಸ್ರೇಲಿನ ಪ್ರದೇಶದಲ್ಲೆಲ್ಲಾ ಒಂದು ಸಂದೇಶವನ್ನು ಕಳುಹಿಸಿದನು. ಬಾಳನ ಆರಾಧಕರೆಲ್ಲರೂ ಬಂದರು. ಮನೆಯಲ್ಲಿ ಯಾರೂ ಉಳಿಯಲಿಲ್ಲ. ಬಾಳನ ಆರಾಧಕರೆಲ್ಲ ಬಾಳನ ಆಲಯಕ್ಕೆ ಬಂದರು. ಜನರಿಂದ ಆಲಯವು ತುಂಬಿಹೋಯಿತು.
22 ಯೇಹು ನಿಲುವಂಗಿಗಳ ಮೇಲ್ವಿಚಾರಕನಿಗೆ, “ಬಾಳನ ಭಕ್ತರಿಗೆಲ್ಲ ನಿಲುವಂಗಿಗಳನ್ನು ತಂದುಕೊಡು” ಎಂದು ಹೇಳಿದನು. ಅವನು ಬಾಳನ ಭಕ್ತರಿಗೆ ನಿಲುವಂಗಿಗಳನ್ನು ತಂದುಕೊಟ್ಟನು.
23 ಆಗ ಯೇಹು ಮತ್ತು ರೇಕಾಬನ ಮಗನಾದ ಯೆಹೋನಾದಾಬನು ಬಾಳನ ಆಲಯದೊಳಕ್ಕೆ ಹೋದರು. ಯೇಹು ಬಾಳನ ಭಕ್ತರಿಗೆ, “ಯೆಹೋವನ ಸೇವಕರು ಯಾರೂ ನಿಮ್ಮೊಡನೆ ಇಲ್ಲವೆಂಬುದನ್ನು ಸುತ್ತಲೂ ನೋಡಿ ಖಚಿತಪಡಿಸಿಕೊಳ್ಳಿ. ಬಾಳನ ಭಕ್ತರಾದ ಜನರು ಮಾತ್ರ ಇಲ್ಲಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ” ಎಂದು ಹೇಳಿದನು. 24 ಬಾಳನ ಆರಾಧಕರು ಯಜ್ಞಗಳನ್ನು ಮತ್ತು ಸರ್ವಾಂಗಹೋಮಗಳನ್ನು ಅರ್ಪಿಸಲು ಬಾಳನ ಆಲಯದೊಳಕ್ಕೆ ಹೋದರು.
ಆದರೆ ಹೊರಗಡೆ ಯೇಹುವಿನ ಎಂಭತ್ತು ಜನರು ಕಾಯುತ್ತಿದ್ದರು. ಯೇಹು ಅವರಿಗೆ, “ಯಾರೂ ತಪ್ಪಿಸಿಕೊಂಡು ಹೋಗಲು ಬಿಡಬೇಡಿ. ಯಾರಾದರೂ ಒಬ್ಬ ಮನುಷ್ಯನನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟರೆ, ಅವನು ತನ್ನ ಜೀವವನ್ನು ಬೆಲೆಯಾಗಿ ಕೊಡಬೇಕಾಗುತ್ತದೆ” ಎಂದು ಹೇಳಿದನು.
25 ಯೇಹುವು ಸರ್ವಾಂಗಹೋಮಗಳನ್ನು ಅರ್ಪಿಸಿದ ತಕ್ಷಣ, ಕಾವಲುಗಾರರಿಗೂ ಸೇನಾಧಿಪತಿಗಳಿಗೂ, “ಒಳಕೋಣೆಗೆ[a] ಹೋಗಿ ಬಾಳನ ಆರಾಧಕರನ್ನೆಲ್ಲ ಕೊಂದುಹಾಕಿ! ಜೀವಸಹಿತ ಯಾರೂ ಆಲಯದಿಂದ ಹೊರಕ್ಕೆ ಬರಲು ಬಿಡಬೇಡಿ!” ಎಂದು ಹೇಳಿದನು.
ಸೇನಾಧಿಪತಿಗಳು ಚೂಪಾದ ಖಡ್ಗದಿಂದ ಬಾಳನ ಭಕ್ತರನ್ನೆಲ್ಲ ಕೊಂದುಹಾಕಿದರು. ಬಾಳನ ಭಕ್ತರ ದೇಹಗಳನ್ನು ಕಾವಲುಗಾರರು ಮತ್ತು ಸೇನಾಧಿಪತಿಗಳು ಹೊರಕ್ಕೆ ಎಸೆದರು. ನಂತರ ಆ ಕಾವಲುಗಾರರು ಮತ್ತು ಸೇನಾಧಿಪತಿಗಳು ಬಾಳನ ಆಲಯದ ಒಳಕೋಣೆಯನ್ನು ಪ್ರವೇಶಿಸಿದರು. 26 ಅವರು ಬಾಳನ ಆಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ಹೊರತಂದು, ಆಲಯವನ್ನು ಸುಟ್ಟುಹಾಕಿದರು. ನಂತರ ಅವರು ಬಾಳನ ಸ್ಮಾರಕಸ್ತಂಭಗಳನ್ನು ಚೂರುಚೂರು ಮಾಡಿದರು. 27 ಬಾಳನ ಆಲಯವನ್ನೂ ಅವರು ಹಾಳುಗೆಡವಿದರು. ಅವರು ಬಾಳನ ಆಲಯವನ್ನು ಶೌಚಗೃಹವನ್ನಾಗಿ ಮಾಡಿದರು. ಇಂದೂ ಸಹ ಅದನ್ನು ಶೌಚಗೃಹವಾಗಿ ಬಳಸುತ್ತಾರೆ.
28 ಯೇಹುವು ಇಸ್ರೇಲಿನಲ್ಲಿ ಬಾಳನ ಪೂಜೆಯನ್ನು ನಿಲ್ಲಿಸಿದನು. 29 ಆದರೂ ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ, ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಂದ ಯೇಹುವು ಸಂಪೂರ್ಣವಾಗಿ ವಿಮುಖನಾಗಲಿಲ್ಲ. ಬೇತೇಲ್ ಮತ್ತು ದಾನ್‌ಗಳಲ್ಲಿದ್ದ ಬಂಗಾರದ ಕರುಗಳನ್ನು ಯೇಹುವು ನಾಶಗೊಳಿಸಲಿಲ್ಲ.
ಇಸ್ರೇಲನ್ನು ಯೇಹು ಆಳುವನು
30 ಯೆಹೋವನು ಯೇಹುವಿಗೆ, “ನೀನು ಒಳ್ಳೆಯದನ್ನು ಮಾಡಿದೆ. ನಾನು ಒಳ್ಳೆಯದೆಂದು ಹೇಳಿದ್ದನ್ನೇ ನೀನು ಮಾಡಿದೆ. ನನ್ನ ಅಪೇಕ್ಷೆಯಂತೆ ನೀನು ಅಹಾಬನ ಕುಟುಂಬವನ್ನು ನಾಶಗೊಳಿಸಿದೆ. ಆದ್ದರಿಂದ ನಿನ್ನ ಸಂತತಿಯವರು ಇಸ್ರೇಲನ್ನು ನಾಲ್ಕು ತಲೆಮಾರುಗಳವರೆಗೆ ಆಳುತ್ತಾರೆ” ಎಂದು ಹೇಳಿದನು.
31 ಆದರೆ ಯೇಹು ಇಸ್ರೇಲಿನ ದೇವರಾದ ಯೆಹೋವನ ನಿಯಮಗಳನ್ನು ಪೂರ್ಣಮನಸ್ಸಿನಿಂದಲೂ ಎಚ್ಚರಿಕೆಯಿಂದಲೂ ಪಾಲಿಸಲಿಲ್ಲ. ಇಸ್ರೇಲಿನ ಪಾಪಗಳಿಗೆ ಪ್ರೇರಕನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ಮಾಡುವುದನ್ನು ನಿಲ್ಲಿಸಲೇ ಇಲ್ಲ.
ಹಜಾಯೇಲನು ಇಸ್ರೇಲನ್ನು ಸೋಲಿಸಿದನು
32 ಆ ಸಮಯದಲ್ಲಿ, ಯೆಹೋವನು ಇಸ್ರೇಲಿನ ಭಾಗಗಳನ್ನು ಕುಗ್ಗಿಸತೊಡಗಿದನು. ಅರಾಮ್ಯರ ರಾಜನಾದ ಹಜಾಯೇಲನು ಇಸ್ರೇಲಿನ ಪ್ರತಿಯೊಂದು ಗಡಿಯಲ್ಲಿಯೂ ಇಸ್ರೇಲರನ್ನು ಸೋಲಿಸುತ್ತಿದ್ದನು. 33 ಹಜಾಯೇಲನು ಜೋರ್ಡನ್ ನದಿಯ ಪೂರ್ವಕ್ಕಿರುವ ಪ್ರದೇಶವನ್ನೆಲ್ಲ ಗೆದ್ದುಕೊಂಡನು. ಅವನು ಗಾದ್, ರೂಬೇನ್ ಮತ್ತು ಮನಸ್ಸೆ ಕುಲಗಳಿಗೆ ಸೇರಿದ ಎಲ್ಲಾ ಪ್ರದೇಶವನ್ನು, ಗಿಲ್ಯಾದ್‌ನ ಎಲ್ಲಾ ಪ್ರದೇಶವನ್ನು ಗೆದ್ದನು. ಹಜಾಯೇಲನು ಆರ್ನೋನ್ ಕಣಿವೆಯಿಂದ ಗಿಲ್ಯಾದ್, ಬಾಷಾನ್‌ವರೆಗಿನ ಅರೋಯೇರ್ ಪ್ರದೇಶವನ್ನೆಲ್ಲ ಗೆದ್ದುಕೊಂಡನು.
ಯೇಹುವಿನ ಸಾವು
34 “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಯೇಹು ಮಾಡಿದ ಇತರ ಉತ್ತಮಕಾರ್ಯಗಳನ್ನೆಲ್ಲ ಬರೆಯಲಾಗಿದೆ. 35 ಯೇಹು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ಸಮಾರ್ಯದಲ್ಲಿ ಸಮಾಧಿಮಾಡಿದರು. ಯೇಹುವಿನ ನಂತರ ಅವನ ಮಗನಾದ ಯೇಹೋವಾಹಾಜನು ಇಸ್ರೇಲಿನ ನೂತನ ರಾಜನಾದನು. 36 ಯೇಹುವು ಸಮಾರ್ಯದಲ್ಲಿ ಇಸ್ರೇಲನ್ನು ಇಪ್ಪತ್ತೆಂಟು ವರ್ಷ ಆಳಿದನು.
ಯೆಹೂದದಲ್ಲಿ ರಾಜನ ಮಕ್ಕಳನ್ನೆಲ್ಲ ಅತಲ್ಯಳು ನಾಶಗೊಳಿಸಿದಳು
11 ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗ ಸತ್ತದ್ದನ್ನು ನೋಡಿದಳು. ಅವಳು ಮೇಲೆದ್ದು ರಾಜನ ಕುಟುಂಬವನ್ನೆಲ್ಲ ಕೊಂದುಬಿಟ್ಟಳು.
2 ಯೆಹೋಷೆಬಳು ರಾಜನಾದ ಯೋರಾಮನ ಮಗಳಾಗಿದ್ದಳು ಮತ್ತು ಅಹಜ್ಯನ ಸೋದರಿಯಾಗಿದ್ದಳು. ಯೆಹೋವಾಷನು ರಾಜನ ಮಕ್ಕಳಲ್ಲಿ ಒಬ್ಬನಾಗಿದ್ದನು. ಅತಲ್ಯಳು ಇತರ ಮಕ್ಕಳನ್ನು ಕೊಲ್ಲುವಾಗ ಯೆಹೋಷೆಬಳು ಯೆಹೋವಾಷನನ್ನು ತೆಗೆದುಕೊಂಡು ಹೋದಳು. ಅವಳು ಯೆಹೋವಾಷನನ್ನು ಮತ್ತು ಅವನ ದಾದಿಯನ್ನು ತನ್ನ ಮಲಗುವ ಕೊಠಡಿಯಲ್ಲಿ ಅಡಗಿಸಿದಳು. ಯೆಹೋವಾಷನನ್ನು ಅವನ ದಾದಿಯು ಮತ್ತು ಯೆಹೋಷೆಬಳು ಅತಲ್ಯಳಿಂದ ತಪ್ಪಿಸಿ ಅಡಗಿಸಿಟ್ಟರು. ಈ ರೀತಿ ಯೆಹೋವಾಷನನ್ನು ಕೊಲ್ಲಲಾಗಲಿಲ್ಲ.
3 ನಂತರ ಯೆಹೋವಾಷ ಮತ್ತು ಯೆಹೋಷೆಬಳು ಯೆಹೋವನ ಆಲಯದಲ್ಲಿ ಅಡಗಿಕೊಂಡರು. ಯೆಹೋವಾಷನು ಆರು ವರ್ಷಗಳ ಕಾಲ ಅಡಗಿಕೊಂಡಿದ್ದನು. ಅತಲ್ಯಳು ಯೆಹೂದ ದೇಶವನ್ನು ಆಳಿದಳು.
4 ಏಳನೆ ವರ್ಷದಲ್ಲಿ, ಪ್ರಧಾನ ಯಾಜಕನಾದ ಯೆಹೋಯಾದಾವನು ಕೆರೇತ್ಯರ ಸೇನಾಧಿಪತಿಗಳನ್ನು ಮತ್ತು ಕಾವಲುಗಾರರನ್ನು ಕರೆಸಿಕೊಂಡನು. ಯೆಹೋಯಾದಾವನು ಅವರನ್ನೆಲ್ಲ ಯೆಹೋವನ ಆಲಯದಲ್ಲಿ ಒಟ್ಟಾಗಿ ಸೇರಿಸಿದನು. ನಂತರ ಯೆಹೋಯಾದಾವನು ಅವರೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಯೆಹೋಯಾದಾವನು ಆಲಯದಲ್ಲಿ ಅವರು ವಾಗ್ದಾನ ಮಾಡುವಂತೆ ಬಲತ್ಕಾರಗೊಳಿಸಿದನು. ನಂತರ ಅವನು ಅವರಿಗೆ ರಾಜನ ಮಗನನ್ನು (ಯೆಹೋವಾಷನನ್ನು) ತೋರಿಸಿದನು.
5 ಯೆಹೋಯಾದಾವನು ಅವರಿಗೆ, “ನೀವು ಈ ಕಾರ್ಯವನ್ನು ಮಾಡಲೇಬೇಕು. ನಿಮ್ಮಲ್ಲಿ ಸಬ್ಬತ್‌ದಿನದಂದು ಬರುವ ಮೂರನೆ ಒಂದು ಭಾಗದ ಜನರು ರಾಜನನ್ನು ಅವನ ಅರಮನೆಯಲ್ಲಿ ರಕ್ಷಿಸಬೇಕು. 6 ಇನ್ನೊಂದು ಮೂರನೆಯ ಒಂದು ಭಾಗವು ಸೂರ್ ಬಾಗಿಲಿನಲ್ಲಿರಬೇಕು. ಮತ್ತೊಂದು ಮೂರನೆಯ ಒಂದು ಭಾಗವು ಕಾವಲುಗಾರನ ಹಿಂದೆ ಬಾಗಿಲಿನಲ್ಲಿರಬೇಕು. ಈ ರೀತಿ ನೀವು ಗೋಡೆಯಂತೆ ನಿಂತು ಯೆಹೋವಾಷನನ್ನು ರಕ್ಷಿಸುತ್ತಿರಬೇಕು. 7 ಸಬ್ಬತ್‌ದಿನದಂದು ಕಾಯಲು ಬರುವ ನಿಮ್ಮೆಲ್ಲರ ಎರಡು ಪಡೆಗಳು ಯೆಹೋವನ ಆಲಯವನ್ನು ಕಾಯುತ್ತಾ ರಾಜನಾದ ಯೆಹೋವಾಷನನ್ನು ಕಾಯಬೇಕು. 8 ರಾಜನಾದ ಯೆಹೋವಾಷನು ಎಲ್ಲಿಗಾದರೂ ಯಾವಾಗಲಾದರೂ ಹೋದರೆ ಅವನೊಂದಿಗೆ ನೀವು ಇರಲೇಬೇಕು. ನೀವೆಲ್ಲರೂ ರಾಜನನ್ನು ಸುತ್ತುವರಿದಿರಬೇಕು. ಪ್ರತಿಯೊಬ್ಬ ಕಾವಲುಗಾರನೂ ಆಯುಧವನ್ನು ತನ್ನ ಕೈಯಲ್ಲಿ ಹಿಡಿದಿರಲೇಬೇಕು. ನಿಮ್ಮ ಸಮೀಪಕ್ಕೆ ಯಾರಾದರೂ ಬಂದರೆ ಅವರನ್ನು ಕೊಲ್ಲಬೇಕು” ಎಂದನು.
9 ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಸಂಗತಿಗಳಿಗೆಲ್ಲ ಸೇನಾಧಿಪತಿಗಳು ವಿಧೇಯರಾಗಿದ್ದರು. ಪ್ರತಿಯೊಬ್ಬ ಸೇನಾಧಿಪತಿಯೂ ತನ್ನ ಕಾವಲುಗಾರರನ್ನು ಅಂದರೆ ಸಬ್ಬತ್‌ದಿನದಂದು ಕಾಯಲು ಬರಬೇಕಾಗಿದ್ದ ಮತ್ತು ಸಬ್ಬತ್‌ದಿನದಂದು ಕೆಲಸದಿಂದ ಹೋಗಬೇಕಾಗಿದ್ದ ಸಿಪಾಯಿಗಳನ್ನು ಕರೆದೊಯ್ದನು. ಅವರೆಲ್ಲರೂ ಯಾಜಕನಾದ ಯೆಹೋಯಾದಾವನ ಹತ್ತಿರಕ್ಕೆ ಹೋದರು. 10 ಸೇನಾಧಿಪತಿಗಳಿಗೆ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಯಾಜಕನು ಕೊಟ್ಟನು. ರಾಜನಾದ ದಾವೀದನು ಯೆಹೋವನ ಆಲಯದಲ್ಲಿ ಈ ಬರ್ಜಿಗಳನ್ನು ಮತ್ತು ಗುರಾಣಿಗಳನ್ನು ಇಟ್ಟಿದ್ದನು. 11 ಈ ಕಾವಲುಗಾರರು ಆಲಯದ ಬಲಗಡೆಯ ಮೂಲೆಯಿಂದ ಎಡಗಡೆಯ ಮೂಲೆಯವರೆಗೆ ತಮ್ಮ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತರು. ರಾಜನು ಆಲಯದೊಳಕ್ಕೆ ಹೋದಾಗ ಅವರು ಅವನ ಸುತ್ತಲೂ, ಯಜ್ಞವೇದಿಕೆಯ ಮತ್ತು ಆಲಯದ ಸುತ್ತಲೂ ನಿಂತುಕೊಂಡರು. 12 ಈ ಜನರು ಯೆಹೋವಾಷಾನನ್ನು ಹೊರಗೆ ತಂದರು. ಅವರು ಯೆಹೋವಾಷನ ಮೇಲೆ ಕಿರೀಟವನ್ನಿಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟರು. ನಂತರ ಅವರು ಅವನನ್ನು ಅಭಿಷೇಕಿಸಿ, ನೂತನ ರಾಜನನ್ನಾಗಿ ಮಾಡಿದರು. ಅವರು ಚಪ್ಪಾಳೆ ತಟ್ಟುತ್ತಾ “ರಾಜನು ಚಿರಂಜೀವಿಯಾಗಿರಲಿ!” ಎಂದು ಆರ್ಭಟಿಸಿದರು.
13 ಕಾವಲುಗಾರರ ಮತ್ತು ಜನರ ಗದ್ದಲವು ರಾಣಿಯಾದ ಅತಲ್ಯಳಿಗೆ ಕೇಳಿಸಿತು. ಅವಳು ಯೆಹೋವನ ಆಲಯದಲ್ಲಿದ್ದ ಜನರ ಬಳಿಗೆ ಹೋದಳು. 14 ರಾಜನು ಪದ್ಧತಿಯಂತೆ ಸ್ತಂಭದ ಬಳಿ ನಿಂತಿರುವುದನ್ನೂ ಜನರು ಮತ್ತು ನಾಯಕರು ರಾಜನಿಗಾಗಿ ತುತ್ತೂರಿ ಊದುತ್ತಿರುವುದನ್ನೂ ಜನರೆಲ್ಲರೂ ಬಹಳ ಸಂತೋಷದಿಂದಿರುವುದನ್ನೂ ಅವಳು ನೋಡಿ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು “ದ್ರೋಹ, ದ್ರೋಹ!” ಎಂದು ಕೂಗಿಕೊಂಡಳು.
15 ಯಾಜಕನಾದ ಯೆಹೋಯಾದಾವನು ಸೈನಿಕರ ಮೇಲ್ವಿಚಾರಕರಾದ ಸೇನಾಧಿಪತಿಗಳಿಗೆ ಆಜ್ಞಾಪಿಸಿದನು. ಯೆಹೋಯಾದಾವನು ಅವರಿಗೆ, “ಅತಲ್ಯಳನ್ನು ಆಲಯದ ಆವರಣದಿಂದ ಹೊರಗೆ ತೆಗೆದುಕೊಂಡು ಹೋಗಿ. ಅವಳ ಹಿಂಬಾಲಕರು ಯಾರೇ ಆಗಿದ್ದರೂ ಕೊಂದುಬಿಡಿ. ಆದರೆ ಅವರನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿ” ಎಂದು ಹೇಳಿದನು.
16 ಆದ್ದರಿಂದ ಸೈನಿಕರು ಅವಳನ್ನು ಹಿಡಿದುಕೊಂಡು ಹೊರಗೆ ಕರೆದೊಯ್ದರು, ಆಕೆಯು ಕುದುರೆಗಳ ಪ್ರವೇಶದ್ವಾರದ ಮೂಲಕ ಅರಮನೆಗೆ ಹೋದಳು. ಸೈನಿಕರು ಅತಲ್ಯಳನ್ನು ಅಲ್ಲಿ ಕೊಂದುಹಾಕಿದರು.
17 ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಆತನಿಗೆ ಪ್ರಮಾಣಮಾಡಿದರು.
18 ಆಗ ಜನರೆಲ್ಲರೂ ಸುಳ್ಳುದೇವರಾದ ಬಾಳನ ಗುಡಿಗೆ ಹೋಗಿ ಬಾಳನ ವಿಗ್ರಹವನ್ನೂ ಮತ್ತು ಅವನ ಯಜ್ಞವೇದಿಕೆಯನ್ನೂ ಚೂರುಚೂರು ಮಾಡಿದರು. ಬಾಳನ ಯಾಜಕನಾದ ಮತ್ತಾನನನ್ನು ಜನರು ಯಜ್ಞವೇದಿಕೆಯ ಎದುರಿನಲ್ಲಿಯೇ ಕೊಂದುಹಾಕಿದರು.
ಯಾಜಕನಾದ ಯೆಹೋಯಾದಾವನು ಯೆಹೋವನ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು. 19 ಯಾಜಕನು ಜನರನ್ನೆಲ್ಲ ಕರೆದುಕೊಂಡು ಹೋದನು. ಅವರು ಸಿಪಾಯಿಗಳ ದ್ವಾರದ ಮೂಲಕ ಅರಮನೆಗೆ ಹೋದರು. ರಾಜನ ವಿಶೇಷ ಅಂಗರಕ್ಷಕರು ಮತ್ತು ಸೇನಾಧಿಪತಿಗಳು ರಾಜನ ಜೊತೆಯಲ್ಲಿ ಹೋದರು. ಅವರನ್ನು ಇತರ ಜನರೆಲ್ಲರೂ ಹಿಂಬಾಲಿಸಿದರು. ಅವರು ರಾಜನ ಅರಮನೆಯ ಬಾಗಿಲಿಗೆ ಹೋದರು. ನಂತರ ರಾಜನಾದ ಯೆಹೋವಾಷನು ಸಿಂಹಾಸನದ ಮೇಲೆ ಕುಳಿತುಕೊಂಡನು. 20 ಜನರೆಲ್ಲರೂ ಬಹಳ ಹರ್ಷಗೊಂಡರು. ನಗರದಲ್ಲಿ ಸಮಾಧಾನವಿತ್ತು. ರಾಜನ ಅರಮನೆಯ ಹತ್ತಿರ ರಾಣಿಯಾದ ಅತಲ್ಯಳನ್ನು ಖಡ್ಗದಿಂದ ಕೊಂದಿದ್ದರು.
21 ಯೆಹೋವಾಷನು ರಾಜನಾದಾಗ ಅವನಿಗೆ ಏಳು ವರ್ಷ ವಯಸ್ಸಾಗಿತ್ತು.
Kannada Holy Bible: Easy-to-Read Version. All rights reserved. © 1997 Bible League International